ಹೀಗೆ ‘ಶಾಂತಿಯುತವಾಗಿ’ ತಮಗೆ ಬೇಡದ ಸರ್ಕಾರವನ್ನು ಬೇಕಾದಾಗ ಬದಲಾಯಿಸುವ, ಬೇಕಾದ ಸರ್ಕಾರವನ್ನು ಸ್ಥಾಪಿಸುವ ‘ಬಣ್ಣ-ಬಣ್ಣದ ಜನತಾ ಕ್ರಾಂತಿ’ಗಳ ತಂತ್ರವನ್ನು ಅಮೆರಿಕ ಕರಗತ ಮಾಡಿದೆ. ಇದನ್ನು ಜಾರ್ಜಿಯಾದಲ್ಲಿ(ಗುಲಾಬಿ ಕ್ರಾಂತಿ) ಎಡ್ವರ್ಡ್ ಶೆವರ್‌ನಾದಝೆುಯನ್ನು ಅಧಿಕಾರದಿಂದ ಕೆಳಗಿಳಿಸಲು. ಉಕ್ರೇನ್‌ನಲ್ಲಿ ಯಶೆಂಕೊನನ್ನು ಅಧಿಕಾರಕ್ಕೆ ತರಲು(ಕಿತ್ತಳೆ ಕ್ರಾಂತಿ) ಬಳಸಲಾಯಿತು. ಕಿರ್ಝಿಗಿಸ್ತಾನ್‌ದಲ್ಲಿ(ತುಲಿಪ್ ಕ್ರಾಂತಿ) ಲಿಕಯೆವ್‌ನನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಇವರು ಹಿಂದೆ ಅಮೆರಿಕಾಕ್ಕೆ ಬೇಕಾದ ನೆಚ್ಚಿನ ನಾಯಕರಾಗಿದ್ದರು. ಆದರೆ ತಮ್ಮ ದೇಶದ ಆರ್ಥಿಕ ಅಗತ್ಯಗಳಿಂದ, ರಷ್ಯಾದ ಜತೆ ಆರ್ಥಿಕ ಸಂಬಂಧಗಳನ್ನು ಹೊಂದಲು ಪ್ರಯತ್ನಿಸಿ ಅಮೆರಿಕಾದ ‘ಹಿತಾಸಕ್ತಿ’ಗೆ ಧಕ್ಕೆ ಮಾಡಿದರು. ಪುಟಿನ್ ಅಧ್ಯಕ್ಷತೆಯಲ್ಲಿ ರಷ್ಯಾ ಸ್ವತಂತ್ರ ನೀತಿ ಅನುಸರಿಸಲು ಪ್ರಯತ್ನಿಸುತ್ತಿರುವುದರಿಂದ, ರಷ್ಯಾದ ಜತೆ ಸೇರುವವರೆಲ್ಲ ಅಮೆರಿಕಾದ ವಿರೋಧಿಗಳೂ ಅವರ ವಿರುದ್ಧ ‘ಬಣ್ಣದ ಜನತಾ ಕ್ರಾಂತಿ’ಗಳನ್ನು ಬಳಸುವುದು ‘ಅನಿವಾರ್ಯ’ವಾಯಿತು.

ಹಲವು ದೇಶಗಳಲ್ಲಿ ಹೊಸ ‘ಬಣ್ಣದ ಜನತಾ ಕ್ರಾಂತಿ’ಗಳಿಗೆ ಸಿದ್ಧತೆ ನಡೆದಿದೆ. ಇದಕ್ಕಾಗಿ ಎನ್.ಇ.ಡಿ.(ನ್ಯಾಷನಲ್ ಎನ್‌ಡೋಮೆಂಟ್ ಫಾರ್ ಡೆಮಾಕ್ರಸಿ) ಮೂಲಕ ಭಾರಿ ಮೊತ್ತವನ್ನು ತೆಗೆದಿಡಲಾಗಿದೆ. ರಷ್ಯಾದಲ್ಲೇ ಇದನ್ನು ನಡೆಸಲು ಪ್ರಯತ್ನ ನಡೆದಿದೆ. ಇದನ್ನು ತಡೆಯಲು ರಷ್ಯಾದ ಸರ್ಕಾರ ರಾಜಕೀಯ ಉದ್ದೇಶದ ವಿದೇಶಿ ಧನ ಸಹಾಯದ ವಿರುದ್ಧ ಕಾನೂನು ಮಾಡಿದಾಗ ಹಾಹಾಕಾರ ನಡೆಯಿತು. ಅಮೇರಿಕಾದಲ್ಲಿ! ಹೆಚ್ಚಿನ ಕಡೆ ಪ್ರತ್ಯೇಕತಾ ಜನಾಂಗೀಯ ಕಲಹಗಳನ್ನು ಅಮೆರಿಕ ಬಳಸಿಕೊಳ್ಳಲು ಪ್ರಯತ್ನಿಸಿದೆ. ಕೆಲವು ಕಡೆ ಅಂತಹ ಕಲಹಗಳನ್ನು ಹುಟ್ಟುಹಾಕಿದೆ. ರಷ್ಯಾದಲ್ಲಿ ಚೆಚನ್ಯಾ-ದಾಗೇಸ್ತಾನ್, ಮೊಲ್ಡೊವಾದಲ್ಲಿ ಟ್ರಾನ್ಸಿಟ್ರಿಯಾ; ಜಾರ್ಜಿಯಾದಲ್ಲಿ ಅಬ್ ಖಾಜಿಯಾ, ದಕ್ಷಿಣ ಒಸ್ಸೆಶಿಯಾ; ಅಜರ್ ಬೈಜಾನ್‌ನಲ್ಲಿ ನಾಗರ್ನೊ-ಕಾರಾಬಾಕ್; -ಇಂತಹ ಕಲಹಗಳಿಗೆ ಪ್ರಮುಖ ಉದಾಹರಣೆಗಳು. ಕೆಲವು ಸೋವಿಯೆತ್ ಅವಧಿಯವು. ಕೆಲವು ಹೊಸವು. ಸೋವಿಯತ್ ಅವಧಿಯಲ್ಲೇ ಅಮೇರಿಕಾ ಇಂತಹ ಕಲಹಗಳಿಗೆ ಹಿಂದಿನಿಂದ ಕುಮ್ಮಕ್ಕು ಕೊಡುತ್ತ ಬಂದಿತ್ತು.

ಸೋವಿಯತ್ ಒಕ್ಕೂಟದಲ್ಲಿ ಸಮಾಜವಾದಿ ವ್ಯವಸ್ಥೆ ಕಳಚಿ ಬಿದ್ದ ಮೇಲೆ, ಬಂಡವಾಳಶಾಹಿ ವ್ಯವಸ್ಥೆ ತರಲು ಪ್ರಯತ್ನ ನಡೆದಿದೆ. ಬಂಡವಾಳಶಾಹಿ ವರ್ಗವೇ ಇಲ್ಲದ ಈ ದೇಶಗಳಲ್ಲಿ, ಬಂಡವಾಳಶಾಹಿ ವರ್ಗ ಸೃಷ್ಟಿಸುವುದು ಪ್ರಮುಖ ಸಮಸ್ಯೆಯಾಯಿತು. ಸಾರ್ವಜನಿಕ ಆಸ್ತಿಗಳ (ಮುಖ್ಯವಾಗಿ ಕೈಗಾರಿಕೆಗಳ) ಖಾಸಗೀಕರಣದ ಭಾಗವಾಗಿ ಬಂಡವಾಳಶಾಹಿ ವರ್ಗ ಸೃಷ್ಟಿಯಾಯಿತು. ಹಿಂದೆ ಕಾನೂನು-ಬದ್ಧ ವ್ಯಾಪಾರ (ಸಣ್ಣ ವ್ಯಾಪಾರ ಮತ್ತು ಆಮದು-ರಫ್ತು ವ್ಯಾಪಾರದಲ್ಲಿ) ಮತ್ತು ಕಾನೂನು-ಬಾಹಿರ (ಕಾಳಸಂತೆ ಇತ್ಯಾದಿ) ವ್ಯಾಪಾರದಲ್ಲಿ ತೊಡಗಿದ್ದ ಶ್ರೀಮಂತರ ಒಂದು ಸಣ್ಣ ವಿಭಾಗ ಖಾಸಗೀಕರಣದಲ್ಲಿ ಭಾಗವಹಿಸಿ ಇನ್ನಷ್ಟು ಶ್ರೀಮಂತವಾಗಿತ್ತು. ಈ ವಿಭಾಗ ಬಂಡವಾಳಶಾಹಿ ವರ್ಗದ ಭಾಗವಾಯಿತು. ಗೋರ್ಬಜೇವ್ ಗ್ಲಾಸ್‌ನೋಸ್ತ್‌ನಲ್ಲಿ ಈ ವಿಭಾಗ ಬೆಳೆದಿತ್ತು. ಸರ್ಕಾರಿ ಕಂಪನಿಗಳ ಆಡಳಿತ ವರ್ಗ (ಮತ್ತು ಕೆಲವು ಸರ್ಕಾರಿ ಅಧಿಕಾರಿಗಳು) ಖಾಸಗೀಕರಣದ ಭಾಗವಾಗಿ ಮಾರಿದ ಕಂಪನಿ ಷೇರುಗಳ ದೊಡ್ಡ ಭಾಗ ಪಡೆದು, ಉಳಿದ ಭಾಗವನ್ನು ಕಾರ್ಮಿಕರಿಂದ, ನಾಗರಿಕರಿಂದ ಖರೀದಿಸಿ ಬೆಳೆದು ಬಂಡವಾಳಶಾಹಿ ವರ್ಗ ಭಾಗವಾಯಿತು. ಈ ಎರಡು ವಿಭಾಗಗಳು ಹೊಸ ಬಂಡವಾಳಶಾಹಿ ವರ್ಗದ ಭಾಗವಾದರೂ, ಇವುಗಳ ನೆಲೆ ಬಹಳ ಬೇರೆಯಾದ್ದರಿಂದ ಇವುಗಳ ಮಧ್ಯೆ ತಾಕಲಾಟ ಇದ್ದೇ ಇತ್ತು. ಎರಡನೆಯ ವಿಭಾಗಕ್ಕೆ ಕೈಗಾರಿಕಾ ನೆಲೆ, ಆಡಳಿತ ನಿರ್ವಹಣಾ ಕೌಶಲ್ಯ, ಆಧುನಿಕ ದೃಷ್ಟಿಕೋನ, ತಾಂತ್ರಿಕ ಪರಿಜ್ಞಾನ ಇವೆ. ಸೋವಿಯತ್ ಕಾಲದಲ್ಲಿ ಸ್ಥಾಪಿಸಲಾದ ಕೈಗಾರಿಕೆ ಸ್ಥಾವರಗಳ ಬಗ್ಗೆ ಮಮಕಾರವಿದೆ. ಅದೇ ರೀತಿ ಆಯಾ ಕೈಗಾರಿಕೆಗಳ ಕಾರ್ಮಿಕ ವರ್ಗದ ಜತೆ ದಶಕಗಳ ಸಂಬಂಧವಿದೆ. ದೇಶಪ್ರೇಮ, ರಾಷ್ಟ್ರೀಯ ಸ್ವಾಭಿಮಾನವು ಇದೆ. ತಮ್ಮ ಹೊಸದೇಶಗಳು ಆಯಾ ಕ್ಷೇತ್ರದಲ್ಲಿ (ಹಿಂದೆ ಸೋವಿಯತ್ ಒಕ್ಕೂಟಕ್ಕಿದ್ದ ಸ್ಥಾನ) ಉಳಿಸಿಕೊಳ್ಳಬೇಕು, ಇನ್ನಷ್ಟು ಬೆಳೆಯಬೇಕು ಎಂಬ ಆಕಾಂಕ್ಷೆ ಇದೆ. ಮೊದಲ (ವ್ಯಾಪಾರಿ) ವಿಭಾಗಕ್ಕೆ ಇವ್ಯಾವುವು ಇಲ್ಲ. ಹಿಂದಿನಿಂದಲೂ ಕಾನೂನು ಬಾಹಿರ, ಅರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು, ಅಂತಾರಾಷ್ಟ್ರೀಯ ಸಂಬಂಧ, ಸರ್ಕಾರಿ ಸಂಪರ್ಕ ಬಳಸಿ ಲಾಭ ಮಾಡುವ ಚಾಕಚಕ್ಯತೆ ಇತ್ತು. ಕೈಗಾರಿಕೆ ನೆಲೆ, ದೇಶಪ್ರೇಮ, ರಾಷ್ಟ್ರೀಯ ಸ್ವಾಭಿಮಾನ ಮುಂತಾದ ಲಾಭದಾಯಕವಲ್ಲದ್ದರ ಬಗ್ಗೆ ಕಾಳಜಿ ಇಲ್ಲದ ವಿಭಾಗ ಇದು.

ಹೊಸ ದೇಶಗಳು ರಚಿತವಾದ ಆರಂಭದಲ್ಲಿ ಈ ಎರಡು ವಿಭಾಗಗಳ ಅಧಿಕಾರವನ್ನು ಹಂಚಿಕೊಂಡವು. ಆದರೆ ಬರಬರುತ್ತಾ ತಿಕ್ಕಾಟವೂ ಆರಂಭವಾಯಿತು. ಅಮೆರಿಕಾ ಮತ್ತು ಇತರ ಪಾಶ್ಚಿಮಾತ್ಯ ದೇಶಗಳ ಜತೆ ಹೆಚ್ಚಿನ ಸಂಬಂಧ, ವಿದೇಶಿ ಬಂಡವಾಳ ಹೂಡಿಕೆ, ವಿದೇಶಿ ಬಂಡವಾಳ-ಕಂಪನಿಗಳ ಜತೆ ಪೂರ್ತಿ ಹೊಂದಾಣಿಕೆ, ಅಮೆರಿಕ ವಿದೇಶಿ ನೀತಿಗೆ ಒಪ್ಪಿಗೆ -ಇತ್ಯಾದಿ ಮೊದಲ ವಿಭಾಗದ ನೀತಿ. ವಿದೇಶಿ ತಂತ್ರಜ್ಞಾನ ಮತ್ತು ಬಂಡವಾಳ ಅಗತ್ಯವಿದ್ದಲ್ಲಿ ಮಾತ್ರ, ದೇಶದ ಕೈಗಾರಿಕೆಗಳ ಬೆಳವಣಿಗೆಗೆ ರಫ್ತಿಗೆ ಹೆಚ್ಚಿನ ಅವಕಾಶ ಕೊಡುವ ನೀತಿ. ದೇಶದ ಕೈಗಾರಿಕೆಗಳು ಕಂಪನಿಗಳು ಜಾಗತಿಕ ಮಾರುಕಟ್ಟೆ ಪಡೆದು ಬೆಳೆಯಲು ಬೇಕಾದ ವಿದೇಶಿ ನೀತಿ -ಇದು ಎರಡನೆಯ ವಿಭಾಗದ ನೀತಿ. ವಿದೇಶಿ ಶಕ್ತಿಗಳು ಸ್ವಾಭಾವಿಕವಾಗಿಯೇ ಮೊದಲನೆಯ ವಿಭಾಗದ ಜತೆ ಸಂಪರ್ಕವಿರಿಸಿಕೊಂಡು, ಅವರನ್ನು ಬಲಗೊಳಿಸಲು ಪ್ರಯತ್ನಿಸುತ್ತಿದ್ದರು. ಒಂದು ಮೂರನೆಯ ವಿಭಾಗವೂ ಇತ್ತು. ಇದು ಖಾಸಗೀಕರಣ ಗಮನಾರ್ಹ ಪ್ರಮಾಣದಲ್ಲಿ ನಡೆಯುವ ದೇಶಗಳಲ್ಲಿ ಪ್ರಬಲವಾಗಿದ್ದ, ಉಳಿದ ದೇಶಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದ ವಿಭಾಗ. ಸೋವಿಯತ್ ಕಾಲದಲ್ಲಿ ಪಕ್ಷದ ನಾಯಕರು, ಕಂಪನಿ ಡೈರೆಕ್ಟರ್‌ಗಳು, ವಿಜ್ಞಾನಿ-ತಂತ್ರಜ್ಞರು, ಮಿಲಿಟರಿ ನಾಯಕರು, ಬುದ್ದಿ ಜೀವಿಗಳು, ಸರ್ಕಾರಿ ಅಧಿಕಾರಿಗಳು -ಈ ವಿಭಾಗದ ಭಾಗವಾಗಿದ್ದು, ಭ್ರಷ್ಟರಾಗದೆ ಖಾಸಗೀಕರಣದಲ್ಲಿ ಭಾಗವಹಿಸದೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದರು. ಎಲ್ಲಾ ದೇಶಗಳಲ್ಲಿ ಈ ವಿಭಾಗ ದೇಶಗಳ ರಚನೆಯಾದ ಸಮಯದಲ್ಲಿ ಅಧಿಕಾರ ಹಿಡಿಯಲು ಹೋರಾಡದಿದ್ದರೂ ಸಾಕಷ್ಟು ದೊಡ್ಡ ವಿಭಾಗವಾಗಿತ್ತು. ಖಾಸಗೀಕರಣ ನಡೆಯದ ದೇಶಗಳಲ್ಲಿ ಇದೇ ಆಳುವ ವರ್ಗವಾಗಿ ಬೆಳೆಯಿತು. ಖಾಸಗೀಕರಣ ದೊಡ್ಡ ರೀತಿಯಲ್ಲಿ ನಡೆದ ದೇಶಗಳಲ್ಲಿ ಸಹ ಮೊದಲ ಎರಡು ವಿಭಾಗಗಳನ್ನು ವಿರೋಧಿಸಿ ಹಲವು ಬಾರಿ ಸರ್ಕಾರದ ಸ್ವರೂಪ, ನೀತಿಗಳಲ್ಲಿ ಬದಲಾವಣೆ ತಂದಿದೆ. ಮೊದಲನೆಯ ವಿಭಾಗದ ಪ್ರತಿನಿಧಿಗಳು ರಷ್ಯಾದ ಯೆಲ್ಸಿನ್, ಉಕ್ರೇನ್‌ನ ಯುಶೆಂಕೊ; ಎರಡನೆಯ ವಿಭಾಗದ ರಾಜಕೀಯ ಪ್ರತಿನಿಧಿಗಳು ರಷ್ಯಾದಲ್ಲಿ ಪುಟಿನ್, ಉಕ್ರೇನ್‌ನ ಕುಚ್‌ಮಾ, ಜಾರ್ಜಿಯಾದ ಶೆವರ್‌ನಾದಝೆು. ಕಳೆದ ೧೫ ವರ್ಷಗಳಲ್ಲಿ ಕೆಲವು ದೇಶಗಳಲ್ಲಿ ಭಾರಿ, ಗೊಂದಲದ ರಾಜಕೀಯ ಬದಲಾವಣೆಗಳು ಆಗಿವೆ. ಕೆಲವು ದೇಶಗಳಲ್ಲಿ ನಿಧಾನವಾಗಿಯೇ ರಾಜಕೀಯ ಬದಲಾವಣೆಗಳು ಆಗಿವೆ. ಆದರೆ ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಸಾರವೆಂದರೆ ಈ ಮೂರು ವಿಭಾಗಗಳ ನಡುವೆ ಅಧಿಕಾರಕ್ಕಾಗಿ ತಿಕ್ಕಾಟ ಅಥವಾ ಹೊಂದಾಣಿಕೆ. ಇದು ಆ ದೇಶದಲ್ಲಿ ಆ ಮೂರು ವಿಭಾಗಗಳ ಬಲಾಬಲಗಳನ್ನು ಹೊಂದಿಕೊಂಡಿದೆ. ದೇಶದ ಪ್ರಸ್ತುತ ಆರ್ಥಿಕ-ರಾಜಕೀಯ, ಅಂತಾರಾಷ್ಟ್ರೀಯ ಪ್ರಭಾವ ಇವುಗಳ ಮೇಲೂ ಹೊಂದಿಕೊಂಡಿದೆ. ಈ ರಾಜಕೀಯದಲ್ಲಿ ಜನರ ಪಾತ್ರ ಇಲ್ಲವೆನ್ನುವಷ್ಟು ತೀರಾ ಕಡಿಮೆ. ಅಷ್ಟರಮಟ್ಟಿಗೆ ಪ್ರಜಾಪ್ರಭುತ್ವದ ವಿಸ್ತರಣೆ, ನಿಜವಾದ ಪ್ರಜಾಸತ್ತಾತ್ಮಕ ನಿಯಂತ್ರಣ ಸೋವಿಯತ್ ಕಾಲಕ್ಕಿಂತಲೂ ತೀರಾ ಕಡಿಮೆ ಎನ್ನಬಹುದು. ಪ್ರಜಾಪ್ರಭುತ್ವದ ವಿಸ್ತರಣೆ, ಬಲಗೊಳಿಸುವಿಕೆಯಲ್ಲೂ ಸೋವಿಯೆತ್ ನಂತರದ ವ್ಯವಸ್ಥೆ ಸೋತಿದೆ ಎನ್ನಬಹುದು.

ಡಕಾಯಿತ ಬಂಡವಾಳಶಾಹಿ?

ಸೋವಿಯತ್ ನಂತರದ ಅವಧಿಯಲ್ಲಿ ೧೫ ಹೊಸ ದೇಶಗಳಲ್ಲಿ ಆರ್ಥಿಕವಾಗಿ ಯಾವ ವ್ಯವಸ್ಥೆಯಿದೆ? ಎಲ್ಲವೂ ಹೆಚ್ಚು ಕಡಿಮೆ ಬಂಡವಾಳಶಾಹಿ ಎನ್ನಬಹುದಾದರೂ, ಬಂಡವಾಳಶಾಹಿ ವ್ಯವಸ್ಥೆಗೆ ಬದಲಾವಣೆಯ ಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಖಾಸಗೀಕರಣದ ಮಟ್ಟ, ಒಟ್ಟು ಉತ್ಪಾದನೆಯಲ್ಲಿ ಖಾಸಗಿ ಬಂಡವಾಳದ ಭಾಗ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ೧೫ ದೇಶಗಳನ್ನು ಮೂರು ವಿಭಾಗ ಮಾಡ ಬಹುದು. ಅತ್ಯಂತ ಹೆಚ್ಚಿನ ಖಾಸಗೀಕರಣ ಕಂಡಿರುವ ದೇಶಗಳೆಂದರೆ – ಎಸ್ಟೋನಿಯಾ, ಲಿಥುವಾನಿಯಾ. ಮಧ್ಯಮ ಖಾಸಗೀಕರಣ ಆಗಿರುವ ದೇಶಗಳು- ರಷ್ಯಾ, ಅರ್ಮೆನಿಯಾ, ಲಾಟಿವಿಯಾ, ಉಕ್ರೇನ್, ಕಝೂಕಿಸ್ತಾನ, ಜಾರ್ಜಿಯಾ, ಕಿರ್ಝಿಗಿಸ್ತಾನ. ಕಡಿಮೆ ಖಾಸಗೀಕರಣವಾದ ದೇಶಗಳು- ಅಜರ್‌ಬೈಜಾನ್, ಮೊಲ್ಡೊವಾ, ತಾಜಕಿಸ್ತಾನ್, ಉಝಬೇಕಿಸ್ತಾನ್, ತುರ್ಕೆಮಾನಿಸ್ತಾನ್, ಬೆಲರಸ್. ಅತ್ಯಂತ ಹೆಚ್ಚಿನ ಖಾಸಗೀಕರಣವಾದ ದೇಶಗಳಾದ ಎಸ್ಟೋನಿಯಾ, ಲಿಥುವಾನಿಯಾ ಯುರೋಪಿನ ಆರ್ಥಿಕತೆಯೊಂದಿಗೆ ಗರಿಷ್ಟ ಸಂಬಂಧ ಹೊಂದಿದ್ದು, ಬಂಡವಾಳಶಾಹಿ ವ್ಯವಸ್ಥೆಗೆ ಬದಲಾವಣೆಯಲ್ಲಿ ಅತ್ಯಂತ ಹೆಚ್ಚಿನ ಮಟ್ಟಕ್ಕೆ ಹೋಗಿವೆ. ಕಡಿಮೆ ಖಾಸಗೀಕರಣದ ದೇಶಗಳಲ್ಲಿ ಬಂಡವಾಳಶಾಹಿ ಬೆಳವಣಿಗೆ ಅತ್ಯಂತ ಕಡಿಮೆ. ಆದರೆ ಆರ್ಥಿಕವಾಗಿ ಅಷ್ಟೇನೂ ಬಲಶಾಲಿಯಾಗಿ ಇಲ್ಲದಿದ್ದರೂ, ಮಧ್ಯಮ ಖಾಸಗೀಕರಣದ ದೇಶಗಳ ಮೇಲೆ ಅಥವಾ ಪಾಶ್ಚಿಮಾತ್ಯ ದೇಶಗಳ ಮೇಲೆ ಅವಲಂಬನೆ ಇರುವುದರಿಂದ ಇವುಗಳ ಮೇಲೂ ಬಂಡವಾಳಶಾಹಿ ದಿಕ್ಕಿನಲ್ಲಿ ಪೂರ್ತಿ ಬದಲಾವಣೆಗೆ ಒತ್ತಡವಿದೆ. ಈ ದೇಶಗಳಲ್ಲೂ ಸಮಾಜವಾದಿ ರಚನೆ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಮಧ್ಯಮ ಖಾಸಗೀಕರಣದ ದೇಶಗಳ ಮೇಲೆ ಅಮೆರಿಕ ಮತ್ತು ಪಶ್ಚಿಮ ಯುರೋಪಿನ ದೇಶಗಳು ತಮ್ಮ ಹದ್ದಿನ ದೃಷ್ಟಿ ಹಾಕಿವೆ. ಈ ದೇಶಗಳಲ್ಲೇ ಬಂಡವಾಳ ಹೂಡಿಕೆಗೆ, ಮಾರುಕಟ್ಟೆ ಕಸಿಯಲು ಹೆಚ್ಚಿನ ಅವಕಾಶವಿರುವುದು. ಆದ್ದರಿಂದಲೇ ಹಿಂದೆ ಚರ್ಚಿಸಿದಂತೆ ರಾಜಕೀಯ ಅಲ್ಲೋಲ ಕಲ್ಲೋಲಗೊಳಗಾದ ದೇಶಗಳೂ ಇವೇ.

ರಷ್ಯಾದಲ್ಲಿ ಖಾಸಗೀಕರಣವನ್ನು ‘ಬಲಾತ್ಕಾರವಾಗಿ’ ಮಾಡಿದ ರೀತಿ ಅಲ್ಲಿನ ಬಂಡವಾಳ ಶಾಹಿಯ ಸ್ವರೂಪವನ್ನು ನಿರ್ಧರಿಸಿದೆ. ರಷ್ಯಾದಲ್ಲಿ ಮೊದಲ ಸುತ್ತಿನ ಖಾಸಗೀಕರಣ ೧೯೯೨-೯೪ರಲ್ಲಿ ಆಯಿತು. ಇದಕ್ಕೆ ಸಾಮೂಹಿಕ ಅಥವಾ ವೋಚರ್ ಖಾಸಗೀಕರಣ ಎನ್ನುತ್ತಾರೆ. ಈ ಮೊದಲ ಸುತ್ತಿನಲ್ಲಿ ಅರ್ಧದಷ್ಟು ಸರ್ಕಾರಿ ಕಂಪನಿಗಳ ಖಾಸಗೀಕರಣ ಮಾಡಲಾಯಿತು. ಜನವರಿ ೯೨ರಲ್ಲಿ ಇದೇ ಅವಧಿಯಲ್ಲಿನ ‘ಶಾಕ್ ಚಿಕಿತ್ಸೆ’ ಆರಂಭವಾಯಿತು. ಆರು ತಿಂಗಳ ನಂತರ ಬೆಲೆಗಳ ಪೂರ್ಣ ಉದಾರೀಕರಣವಾಯಿತು. ಸರ್ಕಾರಿ ಬಜೆಟ್ ಮೇಲೆ ತೀವ್ರ ಕಡಿತ ತರಲಾಯಿತು. ೧೯೯೨-೯೫ರ ಅವಧಿಯಲ್ಲಿ ಸೂಪರ್ ಹಣದುಬ್ಬರ (ಹಲವು ಶೇಕಡಾ ನೂರಕ್ಕಿಂತಲೂ ಹೆಚ್ಚು. ಉದಾ : ೧೯೯೨ರಲ್ಲಿ ಶೇಕಡಾ ೨೪೫!) ಕಂಡುಬಂತು. ಹಣಕಾಸು ನಿಯಂತ್ರಣ, ವಿದೇಶಿ ವಿನಿಮಯ ನಿಯಂತ್ರಣ ಇವುಗಳನ್ನೆಲ್ಲಾ ತೆಗೆದು ಹಾಕಲಾಯಿತು. ರೂಬಲ್‌ನ ಬಂಡವಾಳ-ಪರಿವರ್ತನೀಯತೆ ತರಲಾಯಿತು. ಈ ಎಲ್ಲಾ ನೀತಿಗಳ ಒಟ್ಟು ಪರಿಣಾಮ ಬಂಡವಾಳದ ‘ಪಲಾಯನ’. ೧೯೯೨-೯೫ರ ಅವಧಿಯಲ್ಲಿ ಮೂರು ಸಾವಿರ ಕೋಟಿ ಡಾಲರು ಬಂಡವಾಳ ‘ಪಲಾಯನ’ ಮಾಡಿತು. ಅಂದರೆ ಇದನ್ನು ವಿದೇಶಿ ಬ್ಯಾಂಕುಗಳಿಗೆ, ಅಕೌಂಟುಗಳಿಗೆ ಕಳಿಸಲಾಯಿತು. ಇದು ಸಾಮಾಜಿಕ ಸಂಪತ್ತಿನ ಹಗಲು ದರೋಡೆ ಅಥವಾ ಡಕಾಯತಿ ಅಲ್ಲದೆ ಬೇರೆ ಅಲ್ಲ. ಬಂಡವಾಳಶಾಹಿ ರೂಪಗೊಂಡು ಈ ಬಗೆಯಿಂದಾಗಿ ರಷ್ಯಾದ ಬಂಡವಾಳಶಾಹಿಯನ್ನು ‘ಡಕಾಯಿತಿ ಬಂಡವಾಳಶಾಹಿ’ ಎನ್ನಲಾಗಿದೆ. ಮೊದಲನೆಯ ಹಂತದ ಖಾಸಗೀಕರಣದ ನಂತರ ಕೈಗಾರಿಕಾ ಒಡೆತನ ವ್ಯಾಪಕವಾಗಿ ಹಂಚಿಹೋಗಿತ್ತು. ಎಲ್ಲಾ ಬಂಡವಾಳವನ್ನು ‘ಉತ್ಪಾದಕ’ವಾಗಿಸಲು ಎರಡನೆಯ ಹಂತದ ಖಾಸಗೀಕರಣ ಆರಂಭವಾಯಿತು. ಎರಡನೆಯ ಹಂತದ ಖಾಸಗೀಕರಣವನ್ನು ಗುತ್ತೇದಾರಿಕರಣ ಎನ್ನುವುದು ಹೆಚ್ಚು ಸರಿಯಾದೀತು. ಯೆಲ್ಸಿನ್ ಕೆಲವು ಗುತ್ತೇದಾರಿ ಗುಂಪುಗಳನ್ನು ಸೃಷ್ಟಿಸಲು ಹಲವು ಕಾನೂನುಗಳನ್ನು ಮಾಡಿದರು. ಇದಕ್ಕಿಂತ ಮೊದಲು ಅಂದರೆ ೧೯೯೪ರ ಹೊತ್ತಿಗೆ, ಕೇವಲ ೭ ಕೈಗಾರಿಕಾ-ಹಣಕಾಸು ಗುಂಪುಗಳು ಇದ್ದವು. ಕೈಗಾರಿಕಾ-ಹಣಕಾಸು ಗುಂಪುಗಳೆಂದರೆ ಬ್ಯಾಂಕುಗಳು ಮತ್ತಿತ್ತರೆ ಹಣಕಾಸು ಕಂಪನಿಗಳು ಮತ್ತು ಕೈಗಾರಿಕೆಗಳ ಒಂದು ಗುಂಪು ಸೇರಿ ಒಂದೇ ಗುಂಪು ಆಗುವುದು. ೧೯೯೭ರ ಹೊತ್ತಿಗೆ ಇವು ೬೦ಕ್ಕೆ ಏರಿದ್ದವು. ಅವನ್ನು ಯೆಲ್ಸಿನ್ ಕ್ರೋಢೀಕರಿಸಿ ಏಳು ಗುತ್ತೇದಾರಿ ಗುಂಪುಗಳನ್ನು ಸೃಷ್ಟಿಸಿದರು. ಈ ಖಾಸಗೀಕರಣಗಳ ನಂತರ ೧೯೯೭ರಲ್ಲಿ ಕೇವಲ ಶೇಕಡಾ ೯ ಕೈಗಾರಿಕಾ ಘಟಕಗಳು ಮಾತ್ರ ಪೂರ್ಣವಾಗಿ ಸರ್ಕಾರಿ ಒಡೆತನದಲ್ಲಿದ್ದವು. ೧೯೯೪ರ ಹೊತ್ತಿಗೆ ಮೂರನೆಯ ಎರಡರಷ್ಟು ಕಾರ್ಮಿಕರು ಖಾಸಗೀಕರಣದ ಖಾಸಗಿ ಕ್ಷೇತ್ರದ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದರು.

ಖಾಸಗೀಕರಣ ಈಗಾಗಲೇ ಇದ್ದ ಕೈಗಾರಿಕಾ ಘಟಕಗಳ ಒಡೆತನ ಬದಲಾಯಿಸಿತು. ಕೈಗಾರಿಕೆಗಳಿಗೆ ಹೊಸ ಬಂಡವಾಳ ತರಲಿಲ್ಲ. ಬದಲಾಗಿ ಆರ್ಥಿಕದಲ್ಲಿ ಕೈಗಾರಿಕೆಯಲ್ಲಿ ಒಟ್ಟಾರೆ ಬಂಡವಾಳ ಹೂಡಿಕೆ ಕುಸಿಯಿತು. ರಷ್ಯಾದ ಡಕಾಯಿತ ಬಂಡವಾಳ ಹೀಗೆ ಲೂಟಿಯಲ್ಲೇ ಆಸಕ್ತಿ ಇದ್ದದ್ದು, ಬಂಡವಾಳ ಹೂಡಿಕೆಯಲ್ಲಿ ಅಲ್ಲ. ಹಲವು ಪಾಶ್ಚಿಮಾತ್ಯ ಸಮಾಜಶಾಸ್ತ್ರಜ್ಞರು ಇದನ್ನು ರಷ್ಯಾನ್ ‘ಸ್ವಭಾವ’ದ ಮೇಲೆ ಆರೋಪಿಸುತ್ತಾರೆ. ಆದರೆ ಬಂಡವಾಳಶಾಹಿಯ ಉಗಮ-ವಿಕಾಸ ಅಧ್ಯಯನ ಮಾಡಿದ ಅರ್ಥಶಾಸ್ತ್ರಜ್ಞರು ಇದೇನು ರಷ್ಯನ್ ಪ್ರಕ್ರಿಯೆ ಅಲ್ಲ. ಎಲ್ಲಾ ದೇಶಗಳಲ್ಲಿ, ಎಲ್ಲಾ ಬಂಡವಾಳಶಾಹಿಗಳ ಮೂಲ ಬಂಡವಾಳ ಶೇಖರಣೆ ಆಗಿದ್ದು ಕಡಲುಗಳ್ಳರ ವಸಾಹತುಗಳ ಲೂಯಿಟಿಂದಲೇ. ಯುರೋಪಿನ ಬಂಡವಾಳಶಾಹಿಗಳ ಮೂಲ ಬಂಡವಾಳ ಶೇಖರಣೆ ಆಗಿದ್ದು ಕಡಲುಗಳ್ಳರ ವಸಾಹತುಗಳ ಲೂಟಿ-ಇತ್ಯಾದಿಗಳಿಂದಲೇ, ಕಾನೂನು-ಬದ್ಧ ವ್ಯಾಪಾರದಿಂದ ಮಾತ್ರವಲ್ಲ ಎಂದು ಅವರು ಹೇಳುತ್ತಾರೆ. ರಷ್ಯಾದಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಸೃಷ್ಟಿಸುವಾಗಲೂ ಇದೇ ಆಗುತ್ತಿರುವುದು. ಖಾಸಗೀಕರಣದ ಪ್ರಕ್ರಿಯೆ ರಷ್ಯಾದಲ್ಲಿ ಮೂಲ ಬಂಡವಾಳ ಶೇಖರಣೆ ಮಾಡಲು ಸರ್ಕಾರದ ಕ್ರಮ. ರಷ್ಯಾದಲ್ಲಿ ರಚಿತವಾದ ಈ ‘ಡಕಾಯತಿ ಬಂಡವಾಳಶಾಹಿ’ಗೆ ಸ್ಪಷ್ಟ ಕೈಗಾರಿಕೆ ನೆಲೆಯಿಲ್ಲದ್ದು, ರಷ್ಯಾದ ಆ ಮೇಲಿನ ಬೆಳವಣಿಗೆ ಮೇಲೆ ಭಾರಿ ಪರಿಣಾಮ ಬೀರಿದೆ.

ಬಂಡವಾಳಶಾಹಿ ವ್ಯವಸ್ಥೆ ರಷ್ಯಾದಲ್ಲಿ ರೂಪಿಸಿದವರು ಹಲವು ಕನಸುಗಳನ್ನು ಜನರಿಗೆ ಉಣಬಡಿಸಿದ್ದರು. ಬಂಡವಾಳ ಹೂಡಿಕೆ ಹಲವು ಪಟ್ಟು ಹೆಚ್ಚುತ್ತದೆ. ದಕ್ಷತೆ-ಲಾಭ-ಬಂಡವಾಳ ಹೆಚ್ಚಿ ಬೆಳವಣಿಗೆ ವೇಗವಾಗಿ ಆಗುತ್ತದೆ. ಆದರೆ ಇದು ಯಾವುದು ಆಗಲಿಲ್ಲ. ಮಾತ್ರವಲ್ಲ ಇದ್ದ ಕೈಗಾರಿಕೆಗಳು ಬಲಹೀನವಾಗಿ, ಕೆಲವು ಮುಚ್ಚಿ ಹೋಗುವ ಸ್ಥಿತಿಗೆ ಬಂದಿವೆ. ೮ ವರ್ಷಗಳ ಕಾಲ ರಷ್ಯಾದಲ್ಲಿ ಒಂದೇ ಒಂದು ಹೊಸ ಕೈಗಾರಿಕೆಯೂ ಸ್ಥಾಪಿತವಾಗಿಲ್ಲ. ೧೯೬೫-೭೦ (ಎರಡನೆಯ ಪಂಚವಾರ್ಷಿಕ ಯೋಜನೆ) ಐದು ವರ್ಷದ ಅವಧಿ ಒಂದರಲ್ಲೇ ಸುಮಾರು ೧೯೦೦ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲಾಗಿತ್ತು ಎಂದು ನೆನಪಿಸಿಕೊಂಡರೆ ರಷ್ಯನ್ ಕೈಗಾರಿಕೆಯ ಹೊಸ ದುಸ್ಥಿತಿಯ ಅರಿವಾಗುತ್ತದೆ. ರಷ್ಯಾದ ಒಟ್ಟು ಉತ್ಪಾದನೆ ೯೦ರ ದಶಕದಲ್ಲಿ ಅರ್ಧದಷ್ಟಾಯಿತು (೭೦೦ ಶತಕೋಟಿ ಡಾಲರುಗಳಿಂದ ೪೦೦ ಶತಕೋಟಿ ಡಾಲರಿಗೆ ಕುಸಿಯಿತು). ಅದೇ ಸಮಯದಲ್ಲಿ ಚೀನಾದ ಒಟ್ಟು ಉತ್ಪಾದನೆ ಎರಡು ಪಟ್ಟಾಗಿತ್ತು(೩೦೦ ಶತಕೋಟಿ ಡಾಲರಿಂದ ೭೦೦ ಶತಕೋಟಿ ಡಾಲರಿಗೆ ಜಿಗಿದಿತ್ತು). ೧೯೯೮ರ ಹೊತ್ತಿಗೆ ರಷ್ಯಾ ತೀರಾ ತೀವ್ರವಾದ ಆರ್ಥಿಕ ಬಿಕ್ಕಟ್ಟು ಎದುರಿಸಿತು. ೧೯೯೯ರ ನಂತರ ಒಟ್ಟು ಉತ್ಪಾದನೆ ೧೯೯೧ ರಿಂದ ಸತತವಾಗಿ ಇಳಿಯುತ್ತಿ ದ್ದುದ್ದು ನಿಂತು ಏರಲು ಆರಂಭವಾಯಿತು. ಇದಕ್ಕೆ ಮುಖ್ಯ ಕಾರಣ ತೈಲ ಬೆಲೆ ಏರಲು ಆರಂಭಿಸಿದ್ದು.

ಒಟ್ಟಾರೆಯಾಗಿ ರಷ್ಯಾದಲ್ಲಿ ಆರ್ಥಿಕ ಸ್ಥಗಿತತೆಯೇ ಇದೆ ಎನ್ನಬಹುದು. ಈ ಒಟ್ಟಾರೆ ೧೫ ವರ್ಷಗಳ ಒಟ್ಟು ಸರಾಸರಿ ಬೆಳವಣಿಗೆ ಗಮನಿಸಿದರೆ, ಅದನ್ನು ಸ್ಥಗಿತತೆಯೇ ಎನ್ನಬೇಕಾಗುತ್ತದೆ. ರಷ್ಯಾ ಒಟ್ಟು ಇತರ ದೇಶಗಳ ಸ್ಥಿತಿಯೂ ಇದೇ ರೀತಿ ಒಟ್ಟಾರೆ ಸ್ಥಗಿತತೆಯದ್ದೇ. ೧೫ ವರ್ಷಗಳ ಬಂಡವಾಳಶಾಹಿ ವ್ಯವಸ್ಥೆ ಬೆಳವಣಿಗೆಯ ವೇಗ ಏರಿಸುವ ಬದಲು ಸ್ಥಗಿತತೆ ಕೊಟ್ಟಿದೆ. ಹಿಂದೆ ಹೇಳಿದ ಮಧ್ಯಮ-ಖಾಸಗೀಕರಣದ ದೇಶಗಳಲ್ಲಿ ಸ್ಥಿಗಿತತೆ ಡಕಾಯಿತ-ಬಂಡವಾಳಶಾಹಿ ಲೂಟಿಯಲ್ಲೇ ಮಗ್ನವಾಗಿದೆ. ಹೂಡಿಕೆ-ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕಡಿಮೆ-ಖಾಸಗೀಕರಣದ ದೇಶಗಳಲ್ಲಿ ಒಡೆತನದಲ್ಲಿ ಭಾರಿ ಬದಲಾವಣೆ ಆಗಿಲ್ಲ. ಆದರೆ ಒಕ್ಕೂಟದ ಪ್ರಯೋಜನಕಾರಿ ಪರಸ್ಪರಾವಲಂಬನೆ ನಾಶವಾಗಿರುವುದು, ಪಾಶ್ಚಿಮಾತ್ಯ ದೇಶಗಳಿಗೆ ಈ ದೇಶಗಳಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ಇಲ್ಲದಿರುವುದು, ಈ ದೇಶಗಳ (ವಿಘಟನೆ ನಂತರ) ಆರ್ಥಿಕ ಸಾಪೇಕ್ಷವಾಗಿ ಹಿಂದುಳಿದಿರುವುದು – ಇವೆಲ್ಲ ಸೇರಿ ಸ್ಥಗಿತತೆ ಉಂಟಾಗಿದೆ. ದೇಶದ ಆರ್ಥಿಕ ಮಟ್ಟದಲ್ಲಿ ಬಂಡವಾಳಶಾಹಿ ವಿಫಲವಾಗಿರುವುದು ಮಾತ್ರವಲ್ಲ. ಕಂಪನಿ ಮಟ್ಟದಲ್ಲೂ ಜಾಗತಿಕ ಕಂಪನಿಗಳಿಗೆ ಹೋಲಿಸಿದರೆ, ಖಾಸಗೀಕರಣವಾಗಿ ಬಂಡವಾಳಶಾಹಿ ವ್ಯವಸ್ಥೆ ನಂತರದಲ್ಲಿ ಅವುಗಳ ಪರಿಸ್ಥಿತಿ ಉತ್ತಮವಾಗಿಲ್ಲ. ಅತ್ಯಂತ ಹೆಚ್ಚು ಮಾರುಕಟ್ಟೆ ಬೆಲೆಯ ೫೦೦ ಕಂಪನಿಗಳಲ್ಲಿ, ರಷ್ಯಾದ ಕಂಪನಿಗಳು ಇರುವುದು ೫ ಮಾತ್ರ (ಅದೂ ಎಲ್ಲವೂ ತೈಲ-ಗ್ಯಾಸ್ ಮುಂತಾದ ಇಂಧನ ಶಕ್ತಿ ಮಾರಾಟದ ಕಂಪನಿಗಳು).

ಒಟ್ಟಾರೆಯಾಗಿ ಸೋವಿಯತ್ ಒಕ್ಕೂಟದ ದೇಶಗಳು ಮತ್ತು ಪೂರ್ವ ಯುರೋಪಿನ ಸಮಾಜವಾದಿ ದೇಶಗಳು, ಹಲವು ಆರ್ಥಿಕ ಮತ್ತು ಬೆಳವಣಿಗೆ ಸೂಚಕಗಳಲ್ಲಿ ಅಭಿವೃದ್ದಿ ಹೊಂದಿದ ಮಧ್ಯಮ ಆದಾಯದ ದೇಶಗಳೊಂದಿಗೆ (ಮುಖ್ಯವಾಗಿ ಪಶ್ಚಿಮ ಯುರೋಪಿನ ದೇಶಗಳು) ಹೋಲಿಸುವ ಮಟ್ಟದಲ್ಲಿತ್ತು. ೯೦ರ ದಶಕದಲ್ಲಿ ಈ ದೇಶಗಳಲ್ಲಿ ಸಮಾಜ ವಾದದ ವಿಘಟನೆಯ ೧೫ ವರ್ಷಗಳ ನಂತರ, ಅಭಿವೃದ್ದಿ ಹೊಂದುತ್ತಿರುವ ಮೂರನೆಯ ಜಗತ್ತಿನ ದೇಶಗಳ ಮಟ್ಟಕ್ಕೆ ಇಳಿದಿವೆ. ಸಾಮಾಜಿಕ ಸೂಚಕಗಳಲ್ಲೂ- ಶಿಕ್ಷಣ, ಉದ್ಯೋಗ, ಆರೋಗ್ಯ, ಸೇವೆ, ಸಾಮಾಜಿಕ ಭದ್ರತೆ, ಅಪರಾಧದ ದರ -ಇವೆಲ್ಲದರಲ್ಲಿಯೂ ಮಾಜಿ ಸೋವಿಯತ್ ದೇಶಗಳ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಸಾಮಾಜಿಕ ಭದ್ರತೆ, ಅಪರಾಧ ರಹಿತತೆ, ಜೀವನಮಟ್ಟಕ್ಕೆ ಹೆಸರಾಗಿದ್ದ ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ದೇಶಗಳು ಸಾಮಾಜಿಕ ಸಮಸ್ಯೆಗಳ ಕೂಪವಾಗಿವೆ.

ದಾರುಣ ಸಾಮಾಜಿಕ ಸ್ಥಿತಿ

ಸಾಮಾನ್ಯವಾಗಿ ಸಾಮಾಜಿಕ ಬೆಳವಣಿಗೆಯನ್ನು ‘ಮಾನವ ಅಭಿವೃದ್ದಿ ಸೂಚಕ’ ಎಂಬ ವಿಶ್ವಸಂಸ್ಥೆ ಅಭಿವೃದ್ದಿಪಡಿಸಿದ ಸೂಚಕದಲ್ಲಿ ಅಳೆಯಲಾಗುತ್ತದೆ. ೮೦ರ ದಶಕದಲ್ಲಿ ವಿಶ್ವಸಂಸ್ಥೆ ಈ ಸೂಚಕ ಸಿದ್ಧಪಡಿಸಿ ಬಿತ್ತರಿಸಲು ಆರಂಭಿಸಿತು. ೧೯೯೧ರ ಮೊದಲು ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಸಮಾಜವಾದಿ ದೇಶಗಳು (ರೋಮೇನಿಯಾ ಒಂದು ಬಿಟ್ಟು) ಅತ್ಯಂತ ಹೆಚ್ಚಿನ ಸೂಚಕದ ಬೆಲೆ ಇರುವ ೫೩ ದೇಶಗಳಲ್ಲಿ ಇದ್ದವು. ಹಿಂದೆ ಸೋವಿಯತ್ ಒಕ್ಕೂಟಕ್ಕೆ ೩೧ನೆಯ ಸ್ಥಾನ ಇತ್ತು. ಕಳೆದ ವರ್ಷದ ವಿಶ್ವ ಸಂಸ್ಥೆ ಬಿತ್ತರಿಸಿದ ಸೂಚಕದ ಪ್ರಕಾರ ರಷ್ಯಾ ೬೨ನೆಯ ಸ್ಥಾನಕ್ಕೆ ಇಳಿದಿದೆ. ಬೆಲರಸ್ ೬೭ನೆಯ, ಉಕ್ರೇನ್ ೭೮ನೆಯ, ಕಝಾಕಿಸ್ತಾನ ೮೦ನೆಯ ಸ್ಥಾನಕ್ಕೆ ಇಳಿದಿವೆ. ಅಂದರೆ ಮಾನವ ಅಭಿವೃದ್ದಿಯ ಮಟ್ಟ ಕಳೆದ ೧೫ ವರ್ಷಗಳಲ್ಲಿ ಕುಸಿದಿದೆ. ಇಲ್ಲಿಯೂ ಸರಾಸರಿ ಅಭಿವೃದ್ದಿಶೀಲ ದೇಶಗಳ ಮಟ್ಟಕ್ಕೆ ಇಳಿದಿದೆ.

ರಷ್ಯಾ ಮತ್ತು ಇತರೆಡೆ ಖಾಸಗೀಕರಣ ತೀವ್ರವಾಗಿ ಆದ ದೇಶಗಳಲ್ಲಿ ಭ್ರಷ್ಟಾಚಾರ ಮತ್ತು ಅಪರಾಧೀಕರಣ ಗಗನಕ್ಕೇರಿದೆ. ಇವೆರಡೂ ರಷ್ಯಾದ ಅತ್ಯಂತ ತೀವ್ರವಾದ ಸಮಸ್ಯೆಗಳು ಎಂದು ಅಧ್ಯಕ್ಷ ಯೆಲ್ಸಿನ್‌ರೇ ಒಪ್ಪಿಕೊಂಡಿದ್ದರು. ಇವೆರಡರ ಮೂಲವೂ ರಷ್ಯಾದಲ್ಲಿ ಮಾಡಲಾದ ವಿಶಿಷ್ಟ ಖಾಸಗೀಕರಣದ ಕಾರ್ಯಕ್ರಮಗಳೇ ಎಂದು ಈಗ ಸರ್ವ ಸಮ್ಮತ ಅಭಿಪ್ರಾಯ. ಐದು ವರ್ಷಗಳಲ್ಲಿ ೧೨೦ ಶತಕೋಟಿ ಡಾಲರುಗಳನ್ನು ಹಣ ಲೂಟಿ ಮಾಡಿ ವಿದೇಶಕ್ಕೆ ಸಾಗಿಸಲಾಯಿತು. ಇದು ರಷ್ಯಾದಲ್ಲಿ ಮಾತ್ರವಲ್ಲ.  ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರಿ ಅಪರಾಧಿ-ಸಿಂಡಿಕೇಟ್‌ಗಳನ್ನು ಬೆಳೆಸಿ, ಕೊಬ್ಬಿಸಲು ಅವಕಾಶ ಮಾಡಿದೆ. ರಷ್ಯಾದಲ್ಲಿ ಭೂಗತವಾಗಿ ಅಲ್ಪ ಪ್ರಮಾಣದಲ್ಲಿದ್ದ ಅಪರಾಧ-ಭ್ರಷ್ಟಾಚಾರಗಳ ಉಭಯ ಕಂಟಕಗಳು ಈಗ ರಾಜಾರೋಷವಾಗಿ ವಿಜೃಂಭಿಸುತ್ತಿವೆ. ಸರ್ಕಾರದ ಚಟುವಟಿಕೆಗಳಿಗೂ ಸಂಘಟಿತ ಅಪರಾಧಕ್ಕೂ ವ್ಯತ್ಯಾಸವೇ ಇಲ್ಲವೆನ್ನುವಷ್ಟು ಅವು ಹಾಸುಹೊಕ್ಕಾಗಿವೆ ಎಂದು ಹಲವು ಸಮಾಜಶಾಸ್ತ್ರಜ್ಙರ ಅಭಿಪ್ರಾಯ. ೧೯೯೬ರಲ್ಲಿ ಯೆಲ್ಸಿನ್ ಪುನರಾಯ್ಕೆಗೆ ಏಳು ದೊಡ್ಡ ಬ್ಯಾಂಕುಗಳು ನೆಯರವಾಗಿ ವಂತಿಗೆ ಕೊಟ್ಟವು. ಯೆಲ್ಸಿನ್ ಪ್ರತಿವರ್ಷ ಭ್ರಷ್ಟಾಚಾರದ ವಿರುದ್ಧ ತನಿಖೆಯ ಸಮರ ಹೂಡುತ್ತಿದ್ದರು. ಆದರೆ ತನಿಖೆ ವರದಿ ತೆಗೆದುಕೊಂಡು ಶಿಕ್ಷೆಯಾದದ್ದು ಬೆರಳೆಣಿಕೆಯವರಿಗೆ ಮಾತ್ರ. ೧೯೯೭ರಲ್ಲಿ ೨೫೦೦ ಉನ್ನತ ಅಧಿಕಾರಿಗಳ ಮೇಲೆ ತನಿಖೆಗೆ ಆಜ್ಞೆ ಮಾಡಲಾಯಿತು. ತನಿಖೆ ಏನಾಯಿತು ಅಂತ ಯಾರಿಗೂ ಗೊತ್ತಿಲ್ಲ. ರಷ್ಯಾ-ಉಕ್ರೇನ್‌ಗಳಲ್ಲಿ ಒಟ್ಟು ಉತ್ಪಾದನೆಯ ಶೇಕಡಾ ೫೦ರಷ್ಟು ಕಾಳಸಂತೆಯಿದೆ ಎನ್ನಲಾಗಿದೆ. ಸಿಝಿಇನ್ವೆಸ್ಟ್ ಎಂಬ ದೊಡ್ಡ ಟೆಲಿಕಾಂ ಕಂಪನಿಯ ಖಾಸಗೀಕರಣದ ಸಂದರ್ಭದಲ್ಲಿ ನಾಲ್ಕು ತಿಂಗಳ ಕಾಲ ರಷ್ಯಾದಲ್ಲಿ ಮಾಫಿಯಾ ಯುದ್ಧ ನಡೆಯಿತು. ಆಮೇಲೆ ಯೆಲ್ಸಿನ್ ಇದರಲ್ಲಿ ಭಾಗವಹಿಸಿದ್ದ ಎಲ್ಲಾ ಕಂಪನಿಗಳನ್ನು ಕರೆದು ಶಾಂತಿ ಮಾತುಕತೆ ಮಾಡಬೇಕಾಯಿತಂತೆ. ೮೦ಕ್ಕೂ ಹೆಚ್ಚು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು, ಅವರು ಬ್ಯಾಂಕ್‌ಗೆ ಮಾಡಿದ ಮೋಸದ ಬಗ್ಗೆ ತೀವ್ರ ತನಿಖೆ ಆರಂಭಿಸಿದ ಕೂಡಲೇ ಕೊಲ್ಲಲ್ಪಟ್ಟಿದ್ದಾರೆ.

ಬಂಡವಾಳಶಾಹಿ ವ್ಯವಸ್ಥೆ ರಷ್ಯಾ ಮತ್ತು ಇತರ ಮಾಜಿ-ಸೋವಿಯತ್ ದೇಶಗಳ ಸಮಾಜವನ್ನು ಹಿಡಿದಿಟ್ಟಿದ್ದ ಎಳೆಗಳನ್ನು ಕಡಿದು ಹಾಕಿದೆ. ಆರ್ಥಿಕ ಸ್ಥಗಿತತೆ, ಬಂಡವಾಳ ಶಾಹಿ ವ್ಯವಸ್ಥೆ ಸ್ಥಾಪನೆ, ಸಾಮಾಜಿಕ ಕಲ್ಯಾಣದ ಮೇಲೆ ವೆಚ್ಚದಲ್ಲಿ ತೀವ್ರ ಕಡಿತ, ಸಾಮಾಜಿಕ ಭದ್ರತೆಯ ನಾಶ -ಇವೆಲ್ಲಾ ತೀವ್ರವಾಗಿ ಕೆಟ್ಟ ಪರಿಣಾಮ ಬೀರಿದ್ದು ಮಹಿಳೆಯ ಪರಿಸ್ಥಿತಿ ಮೇಲೆ. ಮಹಿಳೆಯರ ಸ್ಥಿತಿ ಅತ್ಯಂತ ದಾರುಣವಾಗಿದೆ. ಸೋವಿಯೆತ್ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಸಮಾನತೆ, ಉದ್ಯೋಗ ಭದ್ರತೆ, ಸಮಗ್ರ ಬೆಳವಣಿಗೆಗೆ ಅವಕಾಶ ಪಡೆದಿದ್ದ ಮಹಿಳೆ, ಸೋವಿಯೆತ್ ವಿಘಟನೆ ನಂತರ ಡಕಾಯಿತ ಬಂಡವಾಳಶಾಹಿಯ ಅತಿ ದೊಡ್ಡ ಬಲಿಪಶು ಆಗಿದ್ದಾಳೆ. ಭ್ರಷ್ಟಾಚಾರ-ಅಪರಾಧ ಎಲ್ಲದಕ್ಕೂ ಬಲಿಪಶುವಾಗಿದ್ದಾಳೆ. ಮಹಿಳೆಯರ ದೇಹವೇ ಈ ಡಕಾಯಿತರಿಗೆ ಅತಿ ದೊಡ್ಡ ಸರಕು ಆಗಿದೆ. ದೊಡ್ಡ ಪ್ರಮಾಣದಲ್ಲಿ ವೇಶ್ಯಾಚಾರ ಬೆಳೆದಿದೆ ಮಾತ್ರವಲ್ಲ. ಅದು ಹೊಸ ‘ಗೌರವ’ವನ್ನು ಪಡೆದಿದೆ. ಹೈಸ್ಕೂಲು ಹೆಣ್ಣುಮಕ್ಕಳ ಸರ್ವೇಯಲ್ಲಿ ‘ಅತ್ಯಂತ ಉತ್ತಮ ವೃತ್ತಿ ವೇಶ್ಯಾವೃತ್ತಿ’ ಎಂದು ವ್ಯಕ್ತವಾಯಿತಂತೆ. ದೇಶದೊಳಗೆ ಮಾತ್ರವಲ್ಲ ಸೋವಿಯತ್ ಮಹಿಳೆ ವಿದೇಶಗಳಿಗೆ ರಫ್ತಾಗುವ ಅತಿ ಅಮೂಲ್ಯ ಸರಕು ಆಗಿದ್ದಾಳೆ. ಹತ್ತು ವರ್ಷಗಳಲ್ಲಿ ಸುಮಾರು ೨ ಲಕ್ಷ ಮಹಿಳೆಯರನ್ನು ಹೊರ ದೇಶಗಳಿಗೆ ವೇಶ್ಯಾವೃತ್ತಿ, ಗುಲಾಮಗಿರಿ ಬದುಕಿಗೆ ರಫ್ತು ಮಾಡಲಾಗಿದೆ.

ಹೀಗೆ ಕಳೆದ ಸುಮಾರು ೧೫ ವರ್ಷಗಳ ಸೋವಿಯತ್ ನಂತರದ ಒಟ್ಟಾರೆ ಜಮಾ-ಖರ್ಚು ಹೇಳಬೇಕೆಂದರೆ ಯಾವುದೇ ಕ್ಷೇತ್ರದಲ್ಲಿ – ಆರ್ಥಿಕ ಬೆಳವಣಿಗೆ, ಪ್ರಜಾಪ್ರಭುತ್ವ, ಸಾಮಾಜಿಕ ಭದ್ರತೆ, ಮಾನವ ಅಭಿವೃದ್ದಿ ಸೂಚಕ, ಸ್ವಚ್ಛ ಸಾಮಾಜಿಕ ಜೀವನ, ಮಹಿಳೆಯರ ಸ್ಥಾನ-ಮಾನ-ಹೀಗೆ ಯಾವುದೇ ರೀತಿಯಲ್ಲಿ ನೋಡಿದರೂ ಈ ೧೫ ದೇಶಗಳ ಸ್ಥಿತಿ ತೀರಾ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಇತ್ತೀಚೆಗೆ ರಷ್ಯಾ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದು ಸಾರ್ವಭೌಮ ದೇಶದಂತೆ ಸ್ವತಂತ್ರವಾಗಿ ವರ್ತಿಸುತ್ತಿದೆ. ಆದರೆ ಒಟ್ಟಾರೆಯಾಗಿ ತಮ್ಮ ಹಿಂದಿನ ಪ್ರತಿಷ್ಟೆ, ಸ್ಥಾನಮಾನ ಕಳೆದುಕೊಂಡು ಹಲವು ಬಾರಿ ಅಪಹಾಸ್ಯಕ್ಕೆ ಈಡಾಗಿವೆ.

ಸೋವಿಯತ್ ಒಕ್ಕೂಟದ ವಿಘಟನೆ ಮತ್ತು ೧೫ ವರ್ಷಗಳ ನಂತರದ ಬಂಡವಾಳಶಾಹಿ ವ್ಯವಸ್ಥೆಯ ಒಟ್ಟು ಪರಿಣಾಮ ಆ ದೇಶಗಳ ನಾಗರಿಕರಿಗೆ ಮಾತ್ರ ನಕಾರಾತ್ಮಕವಾಗಿ ತಟ್ಟಿಲ್ಲ. ಮೂರನೆಯ ಜಗತ್ತಿನ ಮತ್ತು ಅಭಿವೃದ್ದಿ ಹೊಂದಿದ ಅಮೆರಿಕಾ, ಪಶ್ಚಿಮ ಯುರೋಪಿನ ಎಲ್ಲಾ ದೇಶಗಳ ಜನತೆ ಮೇಲೆ ಪರಿಣಾಮ ಬೀರಿದೆ. ಮೂರನೆಯ ಜಗತ್ತಿನ ದೇಶಗಳಿಗೆ ಇದು ದೊಡ್ಡ ಆಪತ್ತಾಗಿದೆ. ಹಿಂದೆ ಇದ್ದ ಎರಡು ಬಣ (ಸಮಾಜವಾದ ಮತ್ತು ಬಂಡವಾಳಶಾಹಿ) ಈ ದೇಶಗಳಿಗೆ ಹೂಡಿಕೆ-ತಂತ್ರಜ್ಞಾನ ರಫ್ತು ಆಮದುಗಳ ಚೌಕಾಶಿಗೆ ಉತ್ತಮ ಅವಕಾಶ ಮಾಡಿಕೊಟ್ಟಿತು. ಮೂರನೆಯ ಜಗತ್ತಿನ ದೇಶಗಳಿಗೆ ಆರ್ಥಿಕ-ರಾಜಕೀಯ ಬೆಳವಣಿಗೆಗೆ ಸ್ವತಂತ್ರ ತಮ್ಮದೇ ಆದ ಹಾದಿಗೆ ಅವಕಾಶ ಇಲ್ಲವಾಗಿದೆ. ಅಂತಾರಾಷ್ಟ್ರೀಯವಾಗಿ ಅಮೆರಿಕ ಏಕಮಾತ್ರ ಸೂಪರ್ ಪವರ್ ಆಗಿ ಉಳಿದಿದ್ದು, ಎಲ್ಲಾ ಅದರ ಆಕ್ರಾಮಕ ವಿದೇಶ ನೀತಿ ಅಂತಾರಾಷ್ಟ್ರೀಯ ಕಾನೂನನ್ನು ಗಾಳಿಗೆ ತೂರಿ ಜಗತ್ತಿನಲ್ಲಿ ಅಪಾಯಕಾರಿ ಅರಾಜಕತೆ ಹರಡಿದೆ. ಇರಾಕ್ ಯುದ್ಧ ನಡೆದ ಹಲವು ವರ್ಷಗಳ ನಂತರವೂ ಇನ್ನೂ ಇರಾಕ್ ಹತ್ತಿ ಉರಿಯುತ್ತಿರುವುದು ಇದಕ್ಕೆ ಅತ್ಯಂತ ದಾರುಣ ಉದಾಹರಣೆ. ಎರಡು-ಬಣಗಳ ತಿಕ್ಕಾಟ (ಶೀತಲ ಸಮರ) ಒಂದು ಬಣ ಮಾಯವಾಗುವುದರಲ್ಲಿ ಕೊನೆಗೊಂಡಿದೆ. ಆದರೂ ಶಸ್ತ್ರಾಸ್ತ್ರದ ಮೇಲೆ ಖರ್ಚು (ಎಲ್ಲಾ ದೇಶಗಳಲ್ಲೂ) ವಿಪರೀತ ಹೆಚ್ಚಾಗಿ, ಒಟ್ಟಾರೆ ಭದ್ರತೆ ಶಾಂತಿಯ ಸಾಧ್ಯತೆ ಇನ್ನಷ್ಟು ಕಡಿಮೆಯಾಗಿದೆ. ಅಣು ಶಸ್ತ್ರಗಳ ಬಳಕೆಯ ಅಪಾಯ ಸಣ್ಣ ವಿವಾದ-ತಿಕ್ಕಾಟಗಳಲ್ಲೂ ಇನ್ನಷ್ಟು ಹೆಚ್ಚಿದೆ. ಭಾರತ, ಪಾಕಿಸ್ತಾನ, ಇರಾನ್ -ಹೀಗೆ ಒಂದೊಂದಾಗಿ ದೇಶಗಳು ಅಣ್ವಸ್ತ್ರ ಹೊಂದಲು ತರಾತುರಿಯಲ್ಲಿ ಮುಂದಾಗುತ್ತಿರುವುದು ಈ ಪರಿಸ್ಥಿತಿಯ ಫಲವೇ. ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಸಮಾಜವಾದಿ ವ್ಯವಸ್ಥೆಯ (ಅಥವಾ ಸೋವಿಯತ್ ಅಪಾಯ) ಬೆದರಿಕೆಯಿಂದ ಸಾಕಷ್ಟು ಸಮಗ್ರ ‘ಕಲ್ಯಾಣ ರಾಜ್ಯ’ವನ್ನು ಬಂಡವಾಳ ದೇಶಗಳಲ್ಲಿ ಸ್ಥಾಪಿಸಲಾಗಿತ್ತು. ‘ಸೋವಿಯತ್ ಬೆದರಿಕೆ’ ಮಾಯವಾಗುತ್ತಲೇ ಈ ‘ಕಲ್ಯಾಣ ರಾಜ್ಯ’ದ ಕ್ರಮಗಳನ್ನು ಒಂದೊಂದಾಗಿ ಹಿಂತೆಗೆಯಲಾಗುತ್ತಿದೆ. ಹೀಗೆ ಒಟ್ಟಾರೆಯಾಗಿ ಸೋವಿಯತ್ ವಿಘಟನೆಯ ಪರಿಣಾಮ – ನಂತರದ ೧೫ ವರ್ಷಗಳ ಅನುಭವದ ಆಧಾರದ ಮೇಲೆ ನೋಡಿದರೆ – ಇಡೀ ಮನುಕುಲಕ್ಕೆ ಹಾನಿಕಾರಕವಾಗಿ ಇರುವಂತೆ ಕಾಣುತ್ತದೆ.

 

ಪರಾಮರ್ಶನ ಗ್ರಂಥಗಳು

೧. ಬರ್ಕಿನ್ ಐ., ೧೯೮೪. ಎ ಶಾರ್ಟ್ ಹಿಸ್ಟರಿ ಆಫ್ ದಿ ಯುಎಸ್‌ಎಸ್‌ಆರ್, ಮಾಸ್ಕೊ: ಪ್ರೋ ಪಬ್ಲಿಷರ್ಸ್‌.

೨. ಕುಮಾರ್ ಬಾಗ್ಚ್. ೧೯೮೮. ಹಿಸ್ಟಾರಿಸೈಜಿಂಗ್ ದಿ ಪ್ರಾಬ್ಲಮ್ಸ್ ಆಫ್ ಸೋಶ್ಯಲಿಸಂ, ಸೋಶ್ಯಲ್ ಸೈಂಟಿಸ್ಟ್, ಸಂ.೧೬, ನಂ.೧೮೫, ಪು.೬೩-೬೮.

೩. ಪ್ರಭಾತ್ ಪಟ್ನಾಯಕ್, ೧೯೯೭, ದಿ ಫಾಸ್ಟ್ ಆ್ಯಂಡ್ ಪ್ಯೂಚರ್ ಆಫ್ ದಿ ಸೋಶ್ಯಲಿಸ್ಟ್ ಪ್ರಾಜೆಕ್ಟ್, ಸೋಶ್ಯಲ್ ಸೈಂಟಿಸ್ಟ್, ಸಂ.೨೫, ನಂ.೨೮೬-೨೮೬, ಪು.೬೩-೬೮.

೪. ಜೋಸೆಫ್ ಸ್ಟಿಗ್ಲ್‌ಟ್ಜ್. ೨೦೦೬. ದಿ ಟ್ರಾನ್ಸ್‌ಶಿನ್ ಫ್ರಮ್ ಕಮ್ಯೂನಿಸಂ ಟು ದಿ ಮಾರ್ಕೆಟ್, ಲಂಡನ್: ಲೆಕ್ಚರ್ ಎಟ್ಟ್ ಆನ್ಯುವಲ್ ಮೀಟಿಂಗ್ ಆಫ್ ಯುರೋಪಿಯನ್ ಬ್ಯಾಂಕ್ ಫಾರ್ ರಿಕನಸ್ಟ್ರಕ್ಷನ್ ಆ್ಯಂಡ್ ಡೆವಲಪ್‌ಮೆಂಟ್.