ಈ ಲೇಖನದ ಮುಖ್ಯ ಉದ್ದೇಶ ಜಾಗತೀಕರಣ ಮತ್ತು ಅದನ್ನು ಸಾಧ್ಯವಾಗಿಸಿದ ವೈಚಾರಿಕತೆಯ ಹುಟ್ಟು ಮತ್ತು ಬೆಳವಣಿಗೆಯ ಹಾದಿಯನ್ನು ಗುರುತಿಸುವುದಾಗಿದೆ. ಜಾಗತೀಕರಣ ಮತ್ತು ಇದಕ್ಕೆ ಸಂಬಂಧಿಸಿದ ಇತರ ಪದಗಳನ್ನು ಯಾವ ಅರ್ಥದಲ್ಲಿ ಬಳಸಲಾಗಿದೆ ಎನ್ನುವುದನ್ನು ಲೇಖನದ ಮೊದಲ ಭಾಗದಲ್ಲಿ ವಿವರಿಸಲಾಗಿದೆ. ಪ್ರಚಲಿತದಲ್ಲಿರುವ ಜಾಗತೀಕರಣ ತೊಂಬತ್ತರ ದಶಕದಲ್ಲಿ ಹುಟ್ಟಿಕೊಂಡ ಅಂಶವಲ್ಲ. ಬದಲಾಗಿ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ರೂಪುಗೊಂಡ ಬಂಡವಾಳ ಆಧಾರಿತ ಉತ್ಪಾದನಾ ಘಟಕಗಳೇ ಇಂದಿನ ಜಾಗತೀಕರಣವನ್ನು ಸಾಧ್ಯವಾಗಿಸಿದ ಸಾಂಘಿಕ ರಚನೆ ಬಹುರಾಷ್ಟ್ರೀಯ ಕಂಪನಿಗಳ ಮೂಲಗಳಾಗಿವೆ. ಇಂದು ಹೇಗಾಯಿತೆಂಬುದನ್ನು ಲೇಖನದ ಎರಡನೆಯ ಭಾಗದಲ್ಲಿ ವಿವರಿಸಲಾಗಿದೆ. ಇಲ್ಲಿ ಕೈಗಾರಿಕಾ ಕ್ರಾಂತಿ ಊಳಿಗ ಮಾನ್ಯ ವ್ಯವಸ್ಥೆಯಿಂದ ಬಂಡವಾಳಶಾಹಿ ವ್ಯವಸ್ಥೆಗೆ ಪರಿವರ್ತನೆಗೊಂಡ ಚಾರಿತ್ರಿಕ ಘಟ್ಟದ ವಿವರಣೆ ಇದೆ. ಈ ಚಾರಿತ್ರಿಕ ಘಟ್ಟಕ್ಕ ಮಹತ್ವ ಕೊಡಲು ಮುಖ್ಯ ಕಾರಣ- ೧. ಕೈಗಾರಿಕಾ ಕ್ರಾಂತಿಯ ಒಂದು ವಿವರಣೆ ಆಧುನೀಕರಣ ಥಿಯರಿಗಳ ಅಡಿಪಾಯವಾಗಿದೆ; ೨. ಆಧುನೀಕರಣ ಥಿಯರಿಗಳು ಬಂಡವಾಳದ ವೃದ್ದಿಯನ್ನು ಅಭಿವೃದ್ದಿಯೆಂದು ವ್ಯಾಖ್ಯಾನಿಸುವುದರ ಮೂಲಕ ಪ್ರಚಲಿತದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳ ಮೂಲರೂಪಗಳನ್ನು ಅಭಿವೃದ್ದಿಯ ಹೆಸರಿನಲ್ಲಿ ೧೯೪೫ರ ಹೊತ್ತಿಗೆ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಹುಟ್ಟುಹಾಕಿವೆ. ಬಂಡವಾಳ ಅದರಷ್ಟಕ್ಕೆ ಅದು ಬೆಳೆಯುವುದಿಲ್ಲ. ಅದರ ಬೆಳವಣಿಗೆಗೆ ಪೂರಕವಾದ ವಾತಾವರಣ ಕೂಡ ಅಗತ್ಯ. ಅಂತಹ ವಾತಾವರಣ ಯಾವುದೆಂದರೆ ಬಂಡವಾಳದ ಬೆಳವಣಿಗೆಯೇ ಇಡೀ ಸಮಾಜದ ಬೆಳವಣಿಗೆಯೆಂಬ ಮೌಲ್ಯ ನಿರ್ಮಾಣವಾಗುವುದು ಮತ್ತು ಈ ರೀತಿಯ ವಾತಾವರಣದ ನಿರ್ಮಾಣದ ವಿಚಾರದಲ್ಲಿ ಬಹುತೇಕ ಸಂದರ್ಭದಲ್ಲಿ ರಾಜಕೀಯ ಗಡಿಗಳು ಕೇವಲ ಕಾಲ್ಪನಿಕ ರೇಖೆಗಳಾಗಿಬಿಡುತ್ತವೆ ಎನ್ನುವುದನ್ನು ಕೂಡ ಈ ಭಾಗದಲ್ಲಿ ಚರ್ಚಿಸಲಾಗಿದೆ. ಈ ಚರ್ಚೆಯ ಮೂಲಕ ಯಾವ ರೀತಿಯಲ್ಲಿ ಅಭಿವೃದ್ದಿಯ ವ್ಯಾಖ್ಯಾನದಲ್ಲಿ ಮತ್ತು ಆರ್ಥಿಕ ನೀತಿಗಳ ನಿರ್ಧಾರದಲ್ಲಿ ಅಂತಾರಾಷ್ಟ್ರೀಯ ರಾಜಕೀಯ ಹಾಗೂ ಆರ್ಥಿಕ ಏರುಪೇರುಗಳು ಆಂತರಿಕ ನಿರ್ಧಾರಗಳ ಮೇಲೆ ಖಚಿತವಾದ ಪ್ರಭಾವ ಬೀರುತ್ತವೆ ಎನ್ನುವುದರ ಮೇಲೆ ವಿಶೇಷ ಒತ್ತು ಕೊಡಲಾಗಿದೆ.

ಲೇಖನದ ಮೂರನೆಯ ಭಾಗದಲ್ಲಿ ವರ್ತಮಾನದಲ್ಲಿ ಚಾಲ್ತಿಯಲ್ಲಿರುವ ಜಾಗತೀಕರಣ ಚರಿತ್ರೆಯ ಯಾವ ಘಟ್ಟದಲ್ಲಿ ಮತ್ತು ಯಾವ ಕಾರಣಕ್ಕಾಗಿ ಹುಟ್ಟಿಕೊಂಡಿತ್ತು ಎನ್ನುವುದನ್ನು ವಿವರಿಸಲಾಗಿದೆ. ಇಲ್ಲಿ ಸಂದಾಯ ಶಿಲ್ಕು(ಬ್ಯಾಲೆನ್ಸ್ ಆಫ್ ಪೇಮೆಂಟ್) ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರವಾಗಿ ಬಂದ ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮಗಳು(ಇದು ಇಂಗ್ಲಿಷಿನಲ್ಲಿ ಸ್ಪ್ರಕ್ಚರಲ್ ಅಜ್ಜೆಷ್ಟ್‌ಮೆಂಟ್ ಪ್ರೋ- ಎಸ್.ಎ.ಪಿ. ಎಂದು ಪ್ರಚಾರ ಪಡೆದಿದೆ) ಯಾವ ರೀತಿಯಲ್ಲಿ ಅಭಿವೃದ್ದಿ ಹೊಂದಿದ ಅದರಲ್ಲೂ ಅಮೆರಿಕಾದ ಸಮಸ್ಯೆಯಾಗಿದ್ದು, ಆದಾಗ್ಯೂ ಈ ಸಮಸ್ಯೆಯನ್ನು ಇಡೀ ಜಗತ್ತಿನ ಸಮಸ್ಯೆಯೆಂದು ವ್ಯಾಖ್ಯಾನಿಸುವುದರ ಮೂಲಕ ಎಸ್.ಎ.ಪಿ.ಯನ್ನು ಹೇಗೆ ಪ್ರಪಂಚದ ಎಲ್ಲಾ ದೇಶಗಳ ಮೇಲೆ ಅದರಲ್ಲೂ ಅಭಿವೃದ್ದಿಶೀಲ ದೇಶಗಳ ಮೇಲೆ ಹೇರಲಾಯಿತು. ಇದಕ್ಕಾಗಿ ಈ ದೇಶಗಳು ತಮ್ಮ ಆರ್ಥಿಕ ನೀತಿಯಲ್ಲಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು ಎಂಬುದನ್ನು ವಿವರಿಸಲಾಗಿದೆ.

ಭಾಗ ೧

ಬಂಡವಾಳ ಎಂದರೇನು? ಚಾಗತೀಕರಣದ ಪ್ರಶ್ನೆ ಯಾಕೆ ಬಂಡವಾಳದ ಜಾಗತೀಕರಣಕ್ಕೆ ಸೀಮಿತಗೊಂಡಂತೆ ಪ್ರಚಾರ ಪಡೆಯುತ್ತಿದೆ? ಈ ಹಿಂದೆ ಬಂಡವಾಳ ಜಾಗತೀಕರಣ ಗೊಂಡಿರಲಿಲ್ಲವೆ?  ಇವೇ ಮುಂತಾದ ಪ್ರಶ್ನೆಗಳು ಜಾಗತೀಕರಣ ಚರ್ಚೆಯಲ್ಲಿ ಸಹಜವಾಗುತ್ತವೆ. ಲೇಖನದ ಈ ಭಾಗದಲ್ಲಿ ಈ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಲು ಪ್ರಯತ್ನಿಸಲಾಗಿದೆ. ಈ ಉತ್ತರಗಳು ಮುಂದೆ ಬಳಸಲಿರುವ ಕೆಲವೊಂದು ಪದಗಳ ವ್ಯಾಖ್ಯಾನ ಕೂಡ ಆಗಿರುತ್ತವೆ. ಮೊದಲಿಗೆ ಬಂಡವಾಳ ಪ್ರಶ್ನೆಯನ್ನೇ ಎತ್ತಿಕೊಳ್ಳೋಣ. ಬಹು ಪ್ರಚಲಿತ ಮತ್ತು ಜನಸಾಮಾನ್ಯರು ಕೂಡ ಅರ್ಥಮಾಡಿಕೊಳ್ಳುವ ಬಂಡವಾಳದ ಕಲ್ಪನೆಯೆಂದರೆ ವ್ಯಾಪಾರದಲ್ಲಿ ಹೂಡಿದ ಅಥವಾ ವಿನಿಯೋಗಿಸಿದ ಹಣ. ಆದರೆ ಬಹುತೇಕ ಸಂದರ್ಭದಲ್ಲಿ ವ್ಯಾಪಾರವೆಂಬ ಪದವನ್ನು ನಾವು ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಸೀಮಿತಗೊಳಿಸುತ್ತೇವೆ, ಇದು ಸರಿಯಲ್ಲ. ಇಂಗ್ಲೀಷಿನ ಬಿಸಿನೆಸ್ ಎಂಬ ಪದದ ಕನ್ನಡ ಅರ್ಥ ವ್ಯಾಪಾರವೆಂದಾದರೆ ಇದು ವಾಣಿಜ್ಯ ಮತ್ತು ಸರಕು/ಸೇವೆಗಳ ಉತ್ಪಾದನಾ ಚಟುವಟಿಕೆಗಳನ್ನು ಕೂಡ ಒಳಗೊಂಡಿದೆ. ಈ ದೃಷ್ಟಿಯಿಂದ ಬಂಡವಾಳವನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ವ್ಯಾಪಾರಿ ಬಂಡವಾಳ ಮತ್ತು ಕೈಗಾರಿಕಾ ಬಂಡವಾಳ. ಸದ್ಯಕ್ಕೆ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಂಡವಾಳ ವನ್ನು ವ್ಯಾಪಾರಿ ಬಂಡವಾಳವೆಂದು ಮತ್ತು ಸರಕು/ಸೇವೆಗಳ ಉತ್ಪಾದನೆಯಲ್ಲಿ ವಿನಿಯೋಜಿಸಿದ ಬಂಡವಾಳವನ್ನು ಕೈಗಾರಿಕಾ ಬಂಡವಾಳವೆಂದು ಗುರುತಿಸಿಕೊಳ್ಳಬಹುದು. ಈ ಎರಡರ ಅಂದರೆ ವ್ಯಾಪಾರಿ ಮತ್ತು ಕೈಗಾರಿಕಾ ಬಂಡವಾಳದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕಾದರೆ ವ್ಯಾಪಾರಿ ಬಂಡವಾಳ ಕೈಗಾರಿಕಾ ಬಂಡವಾಳವಾಗಿ ಪರಿವರ್ತಿತ ಗೊಂಡ ಚಾರಿತ್ರಿಕ ಸಾಮಾಜಿಕ ಹಾಗೂ ಆರ್ಥಿಕ ಸಂದರ್ಭವನ್ನು ಅರ್ಥಮಾಡಿಕೊಳ್ಳ ಬೇಕಾಗುತ್ತದೆ.

ಮನುಷ್ಯ ಮನುಷ್ಯರ ಮಧ್ಯೆ ಕೊಟ್ಟು ಕೊಂಡುಕೊಳ್ಳುವ ವ್ಯವಹಾರ ಶತಮಾನಗಳಿಂದ ಇದೆ. ಹಣದ ಬಳಕೆಯಾಗುವ ಮುನ್ನ ಒಂದು ವಸ್ತುವನ್ನು ಮತ್ತೊಂದು ವಸ್ತುವಿನೊಂದಿಗೆ ವಿನಿಮಯ ಮಾಡಿಕೊಳ್ಳುವ ಪದ್ಧತಿ ಇತ್ತು ಮತ್ತು ಅದನ್ನು ವಸ್ತು ವಿನಿಮಯ ಪದ್ಧತಿ ಯೆಂದು(ಬಾರ್‌ಟರ್) ಕರೆಯುತ್ತಿದ್ದರು. ಈ ಪದ್ಧತಿಯಲ್ಲಿ ಹಲವಾರು ನ್ಯೂನತೆಗಳಿದ್ದವು. ಉದಾಹರಣೆಗೆ, ವಿನಿಮಯ ಸಾಧ್ಯವಾಗಬೇಕಾದರೆ ಎರಡೂ ಪಕ್ಷಗಳ ಬೇಡಿಕೆಗಳಲ್ಲಿ ಸಹಮತ ಅಗತ್ಯವಿತ್ತು. ಅಂದರೆ ಮಾರುವವನ ಸರಕು ವಿಕ್ರಯಿಸುವವನಿಗೆ ಮತ್ತು ವಿಕ್ರಯಿಸುವವನ ಸರಕು ಮಾರುವವನ ಬೇಡಿಕೆಗೆ ಪೂರಕವಾಗಿರಬೇಕಿತ್ತು. ಆದರೆ ಈ ರೀತಿಯ ಬೇಡಿಕೆಯಲ್ಲಿನ ಸಹಮತ ಅದೆಷ್ಟೋ ಸಂದರ್ಭಗಳಲ್ಲಿ ಸಾಧ್ಯವಾಗುತ್ತಿರಲಿಲ್ಲ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಣದ ಬಳಕೆ ಆರಂಭವಾಯಿತು. ಆರಂಭದ ದಿನಗಳಲ್ಲಿ ಹಣವಾಗಿ ಅಥವಾ ವಿನಿಮಯದ ಮಾಧ್ಯಮವಾಗಿ ಕೆಲಸ ಮಾಡುಲು ಮರದ ತೊಗಟೆ, ಚರ್ಮ, ತಾಮ್ರ, ಹಿತ್ತಾಳೆ ಮುಂತಾದ ಪದಾರ್ಥಗಳನ್ನು ಬಳಸಲಾಗುತ್ತಿತ್ತು. ಕಾಲಕ್ರಮೇಣ ನಾವು ಇಂದು ಬಳಸುತ್ತಿರುವ ಪೇಪರ್ ನೋಟುಗಳು ವಿನಿಮಯದ ಮಾಧ್ಯಮವಾಗಿ ಬಂದವು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹಣದ ಬಳಕೆ ವ್ಯಾಪಾರವನ್ನು ಅಂದರೆ ಸರಕಿನ ವಿನಿಮಯವನ್ನು ವೃದ್ದಿಗೊಳಿಸಿತೆಂಬ ವಿಚಾರ. ಇದರ ಜೊತೆಗೆ ಶ್ರಮದ ವಿಭಜನೆ, ವರ್ಗೀಕೃತ ಸಮಾಜ, ತಕ್ಕಮಟ್ಟಿಗೆ ಸಾಧ್ಯವಾದ ಸಾರಿಗೆ ಮತ್ತು ಸಂಪರ್ಕ, ಇವೇ ಮುಂತಾದ ಅಂಶಗಳು ವ್ಯಾಪಾರವನ್ನು ವೃದ್ದಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಗ್ರಾಮ ಅಥವಾ ಪೇಟೆಗಳಿಗೆ ಸೀಮಿತವಾಗಿದ್ದ ಸರಕು ವಿನಿಮಯ, ಕಾಲ ಕ್ರಮೇಣ ಸ್ಥಳೀಯ ಕ್ಷೇತ್ರವನ್ನು ಮೀರಿ ಬೆಳೆಯಿತು. ದಿಕ್ಸೂಚಿಯ ಆವಿಷ್ಕಾರದೊಂದಿಗೆ ಸಮುದ್ರ ಪ್ರಯಾಣ ದೇಶ ದೇಶಗಳ ನಡುವಿನ ಕೊಂಡಿಯಾಯಿತು ಮತ್ತು ಈ ಕೊಂಡಿ ವ್ಯಾಪಾರ ಅಂತರಾಷ್ಟ್ರೀಯಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಚರಿತ್ರೆಯ ಈ ಸಂದರ್ಭದಲ್ಲಿ ನಡೆಯುತ್ತಿದ್ದ ವ್ಯಾಪಾರವನ್ನು ಕೇವಲ ಸರಕು ಮತ್ತು ಹಣದ ವಿನಿಮಯಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅಂದು ವ್ಯಾಪಾರದ ಹಿಂದೆ ವೈಯಕ್ತಿಕ ಬೇಕು ಬೇಡಗಳ ಜೊತೆಗೆ ಬಲತ್ಕಾರದ ಅಂಶವು ಧಾರಾಳವಾಗಿತ್ತು. ಅದರಲ್ಲೂ ಅಂತಾರಾಷ್ಟ್ರೀಯ ವ್ಯಾಪಾರಗಳಲ್ಲಿ ರಾಜಕೀಯ ಹೇರುವಿಕೆಯ ಅಂಶ ಗಣನೀಯವಾಗಿತ್ತು. ಉದಾಹರಣೆಗೆ ಅಂದಿನ ಕಾಲದಲ್ಲಿ ನಮ್ಮಲ್ಲಿ ಮತ್ತು ಪ್ರಪಂಚದ ಇತರ ದೇಶಗಳಲ್ಲಿ ಕಾರುಬಾರು ಮಾಡಿದ ಬ್ರಿಟನ್ನಿನ ಈಸ್ಟ್ ಇಂಡಿಯಾ ಕಂಪನಿ, ಅಮೆರಿಕಾದಲ್ಲಿ ದಿ ಅಡಸನ್ ಬೇ ಕಂಪನಿ, ಆಫ್ರಿಕಾದಲ್ಲಿ ದಿ ರಾಯಲ್ ಆಫ್ರಿಕನ್ ಕಂಪನಿ ಮತ್ತು ಇತರ ಹಲವಾರು ತೋಟಗಾರಿಕೆ ಮತ್ತು ಗಣಿಗಾರಿಕೆಗಳಲ್ಲಿ ತೊಡಗಿಸಿಕೊಂಡ ಕಂಪನಿಗಳು ವ್ಯಾಪಾರಿ ಬಂಡವಾಳದ ಅಂತರ್‌ರಾಷ್ಟ್ರೀಯ ರೂಪಗಳೇ ಆಗಿದ್ದವು. ಆದಾಗ್ಯೂ ಅವುಗಳ ಅಸ್ತಿತ್ವಕ್ಕೆ ಬಹುತೇಕ ಸಂದರ್ಭಗಳಲ್ಲಿ ವಸಾಹತುಶಾಹಿ ಸರಕಾರದ ಅಸ್ತಿತ್ವ ಅಡಿಪಾಯವಾಗಿತ್ತು. ವಸಾಹತುಶಾಹಿ ಸರಕಾರ ಪತನದೊಂದಿಗೆ ಈ ಬೃಹತ್ ಕಂಪನಿಗಳು ಕೂಡ ತಮ್ಮ ಅಸ್ತಿತ್ವವನ್ನು ಕಳಕೊಂಡವು. ಒಂದು ರೀತಿಯಲ್ಲಿ ಇವುಗಳನ್ನು ಡಿನೋಸರಸ್‌ಗಳಿಗೆ ಹೋಲಿಸಬಹುದು. ಗಾತ್ರದಲ್ಲಿ ಹಿರಿದಾಗಿದ್ದು ಬುದ್ದಿಯಲ್ಲಿ ಕಿರಿದಾಗಿದ್ದ ಈ ಕಂಪನಿಗಳು ಪೈಪೋಟಿಯಿಲ್ಲದ ಮತ್ತು ಸರಕಾರದ ಸಹಕಾರದೊಂದಿಗೆ ವ್ಯಾಪಾರದ ನೀತಿ ನಿಯಮದ ಪರಿಚಯವಿಲ್ಲದ ಜನರೊಂದಿಗೆ ವ್ಯವಹರಿಸುವುದರ ಮೂಲಕ ಬಂಡವಾಳ ಶೇಖರಣೆಯನ್ನು ಸಾಧ್ಯವಾಗಿಸಿವೆ. ಇಂತಹ ಬಂಡವಾಳವನ್ನು ಮಾರ್ಕ್ಸ್, ವ್ಯಾಪಾರಿ ಬಂಡವಾಳ ಎಂದು ಗುರುತಿಸಿದ್ದಾನೆ. ಈ ಬಂಡವಾಳ ಉತ್ಪಾದಕರ ಮತ್ತು ಗ್ರಾಹಕರ ಕೊಂಡಿಯಾಗಿದ್ದುಕೊಂಡು ಎರಡೂ ಕಡೆಯವರ ಮಿಗತೆ ಮೌಲ್ಯದಲ್ಲಿ ಪಾಲು ಪಡೆಯುವುದರ ಮೂಲಕ ಬಂಡವಾಳದ ಸಂಗ್ರಹಕ್ಕೆ ಎಡೆಮಾಡಿಕೊಡುತ್ತದೆ. ಈ ರೀತಿಯ ಬಂಡವಾಳದ ಸಂಗ್ರಹ ಉತ್ಪಾದನಾ ಕ್ರಮದಲ್ಲಿ ಮೂಲಭೂತ ಬದಲಾವಣೆ ಯಿಲ್ಲದೆಯೂ ಸಾಧ್ಯವಾಗುತ್ತದೆ.

ಇಂದು ಪ್ರಚಲಿತದಲ್ಲಿರುವ ಕೈಗಾರಿಕಾ ಬಂಡವಾಳಕ್ಕೂ ಈ ವ್ಯಾಪಾರಿ ಬಂಡವಾಳಕ್ಕೂ ಯಾವುದೇ ಸಂಬಂಧವಿರಲಿಲ್ಲ ಎನ್ನುವಂತಿಲ್ಲ. ಅಂತಾರಾಷ್ಟ್ರೀಯ ವ್ಯಾಪಾರಿ ಸಂಸ್ಥೆಗಳು ಮತ್ತು ಅವುಗಳು ಶೇಖರಿಸಿದ ಬಂಡವಾಳ ಕೈಗಾರಿಕಾ ಬಂಡವಾಳ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿದೆ. ಇವುಗಳು ಕೈಗಾರಿಕಾ ಬಂಡವಾಳದ ಹುಟ್ಟಿಗೆ ಅಗತ್ಯವಾದ ಮೂಲಧನವನ್ನು ಶೇಖರಿಸಿಕೊಟ್ಟಿವೆ. ಈ ಮೂಲಧನ ಶೇಖರಣಾ ಪ್ರಕ್ರಿಯೆಯನ್ನು ಎಡಪಂಥೀಯರು ಅದರಲ್ಲೂ ಏ.ಜಿ.ಫ್ರಾಂಕ್ ತನ್ನ ಡಿಪೆಂಡೆಂಟ್ ಅಕ್ಯೂಮಿಲೇಷನ್ ಪುಸ್ತಕದಲ್ಲಿ ಪ್ರಿಮಿಟಿವ್ ಆಕ್ಯುಮಿಲೇಷನ್ ಎಂದು ಕರೆದಿದ್ದಾನೆ. ಈ ಮೂಲಧನ ಸಂಗ್ರಹ ಕೇವಲ ವ್ಯಾಪಾರದಿಂದ ನಡೆದುದಲ್ಲ, ಬದಲಿಗೆ ವ್ಯಾಪಾರದ ಹೆಸರಿನಲ್ಲಿ ನಡೆದ ಕೊಲೆ, ಸುಲಿಗೆ, ದರೋಡೆ, ವಂಚನೆ, ಮುಂತಾದವುಗಳ ಪಾತ್ರ ಕೂಡ ಇದರಲ್ಲಿ ಧಾರಾಳವಾಗಿತ್ತೆಂಬುದನ್ನು ಸೂಚಿಸಲು ಪ್ರಿಮಿಟಿವ್ ಅಕ್ಯೂಮಿಲೇಷನ್ ಎಂಬ ಪದ ಬಳಕೆಯಾಗಿದೆ. ಕೈಗಾರಿಕಾ ಬಂಡವಾಳ ರೂಪುಗೊಳ್ಳುವಲ್ಲಿ ಈ ಮೂಲಧನದ ಪಾತ್ರದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಪಶ್ಚಿಮದ ಅದರಲ್ಲೂ ಸ್ವಯಂ ತಂತ್ರವಾದಿ ನಿಲುವನ್ನು ಪ್ರತಿಪಾದಿಸುವವರು ಇದನ್ನು ವಿರೋಧಿಸಿದರೆ, ಎಡಪಂಥಿಯರು ಮತ್ತು ತೃತೀಯ ಜಗತ್ತಿನ ಚರಿತ್ರೆಕಾರರು ಇದನ್ನು ಪ್ರತಿಪಾದಿಸುತ್ತಾರೆ. ಆದುದರಿಂದಲೇ ವ್ಯಾಪಾರಿ ಬಂಡವಾಳ ಹೊಸ ಹೊಸ ತಾಂತ್ರಿಕ ಆವಿಷ್ಕಾರಕ್ಕೆ ಎಡೆಮಾಡಿಕೊಟ್ಟಿತು ಮತ್ತು ಈ ತಾಂತ್ರಿಕ ಆವಿಷ್ಕಾರಗಳು ಕೈಗಾರಿಕಾ ಕ್ರಾಂತಿಯನ್ನು ಸಾಧ್ಯವಾಗಿಸಿದವು ಎನ್ನುವ ವಿವರಣೆ ಇದೆ. ಕೈಗಾರಿಕಾ ಕ್ರಾಂತಿ ಈ ಕ್ರಮದಿಂದಲೇ ಆಯಿತೆ ಅಥವಾ ಇತರ ಕಾರಣದಿಂದ ಆಯಿತೇ ಎನ್ನುವ ವಿಚಾರವನ್ನು ಮುಂದೆ ಚರ್ಚಿಸಲಾಗಿದೆ. ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಹುಟ್ಟಿಕೊಂಡ ಉತ್ಪಾದನಾ ಘಟಕಗಳೇ ಕೈಗಾರಿಕಾ ಬಂಡವಾಳದ ಕಲ್ಪನೆಗೆ ಅವಕಾಶ ಮಾಡಿಕೊಟ್ಟಿವೆ. ಇದು ಹೇಗೆ ಸಾಧ್ಯವಾಯಿತು ಅಥವಾ ವ್ಯಾಪಾರಿ ಬಂಡವಾಳ ಕ್ಕಿಲ್ಲದ ಹೆಚ್ಚುಗಾರಿಕೆ ಕೈಗಾರಿಕಾ ಬಂಡವಾಳಕ್ಕೆ ಯಾಕೆ ಇದೆ ಎಂದರೆ ಇಲ್ಲಿ ಬಂಡವಾಳ ಕೇವಲ ಚಲನೆ ಅಥವಾ ಸಂಗ್ರಹ ರೂಪದಲ್ಲಿ ಉಳಿಯುವುದಿಲ್ಲ. ಬದಲಿಗೆ ಉತ್ಸಾದನಾ ಮೂಲಗಳ ಸ್ವಾಧೀನತೆಯೊಂದಿಗೆ ಗುಣಾತ್ಮಕವಾಗಿ ಬೇರೆಯದ್ದೇ ಆದ ಒಂದು ಸಮಾಜದ ರೂಪುಗೊಳ್ಳುವಿಕೆಯ ಮೇಲೆ ಪ್ರಭಾವ ಬೀರುತ್ತದೆ. ಇಂತಹ ವಿವರಣೆ ಕೊಡುವಾಗ ಅದು ಒಂದು ಹಂತದಲ್ಲಿ ತುಂಬಾ ಸರಳೀಕೃತ ನಿರೂಪಣೆಗಳೇ ಆಗಿರಬಹುದು. ಯಾಕೆಂದರೆ ಇಲ್ಲಿ ಕೈಗಾರಿಕಾ ಬಂಡವಾಳ ಸಾಧ್ಯವಾಗಿಸಿದ ಹೊಸ ಸಮಾಜ ಅದು ಕೇವಲ ತಂತ್ರಜ್ಞಾನದ ಫಲಶ್ರುತಿಯಲ್ಲ. ಇಲ್ಲಿ ಇತರ ಹಲವಾರು ವಿಚಾರಗಳು ಮುಖ್ಯವಾಗಿ ಉತ್ಪಾದನಾ ಪರಿಕರಗಳ ಸ್ವಾಧೀನತೆ ಇಲ್ಲದ ಶ್ರಮಿಕ ವರ್ಗ, ಮಿಗತೆ ಮೌಲ್ಯವನ್ನು ಸ್ವಂತಕ್ಕೆ ಬಳಸಲು ಅನುಕೂಲವಾಗುವ ಮಾರುಕಟ್ಟೆಯ ವ್ಯವಸ್ಥೆ, ಮಿಗತೆ ಮೌಲ್ಯದ ಶೇಖರಣೆ ಮತ್ತೆ ಪುನರ್ ವಿನಿಯೋಜನೆ ಮಾಡುವ ಉದ್ಯಮಿಗಳ ವರ್ಗ ಇವೇ ಮುಂತಾದವುಗಳ ಪಾತ್ರ ಕೂಡ ಮುಖ್ಯವಾಗುತ್ತವೆ.

ಎರಡನೆಯದಾಗಿ ಜಾಗತೀಕರಣದ ಪ್ರಶ್ನೆ ಯಾಕೆ ಬಂಡವಾಳದ ಜಾಗತೀಕರಣಕ್ಕೆ ಸೀಮಿತಗೊಳ್ಳಬೇಕು ಎನ್ನುವುದು. ಒಂದು ವಿಧದಲ್ಲಿ ಜಾಗತೀಕರಣ ಯಾವುದೇ ವಿಚಾರ ದಲ್ಲಿ ಕಂಡುಬರಬಹುದಾದ ಅಂಶ. ಈ ದೃಷ್ಟಿಯಿಂದ ಅದನ್ನು ಬಂಡವಾಳದ ಜಾಗತೀಕರಣಕ್ಕೆ ಸೀಮಿತಗೊಳಿಸುವುದು ಸರಿಯಾಗಿರಲಿಕ್ಕಿಲ್ಲ. ಆದಾಗ್ಯೂ ಈಗ ಪ್ರಚಲಿತ ದಲ್ಲಿರುವ ಜಾಗತೀಕರಣದ ಹಿಂದೆ ಅಂತಾರಾಷ್ಟ್ರೀಯ ರಾಜಕೀಯ ಅಥವಾ ಸಾಂಸ್ಕೃತಿಕ ವಿಚಾರಗಳು ಕೇಂದ್ರಬಿಂದುಗಳಾಗಿರಲಿಲ್ಲ. ಅಂದರೆ ಆರ್ಥಿಕ ವಿಚಾರಗಳು ಈ ರೀತಿ ಅದರ ಪರಿಸರದಿಂದ ಬೇರ್ಪಟ್ಟು ಅದರಷ್ಟಕ್ಕೆ ಅದು ಪ್ರಕಟಗೊಳ್ಳುತ್ತದೆ ಎನ್ನುವುದು ಕೂಡ ನನ್ನ ವಿಚಾರವಲ್ಲ. ಇದನ್ನು ಇಂದು ಜಾಗತೀಕರಣದ ಪ್ರಶ್ನೆ ಚರ್ಚೆಯಾಗುವ ರೀತಿಯಿಂದ ಅರ್ಥಮಾಡಿಕೊಳ್ಳಬಹುದು. ಸರಕು ಮತ್ತು ಸೇವೆಗಳ ಅಂತರ್‌ರಾಷ್ಟ್ರೀಯ ವ್ಯಾಪಾರ, ಸಾರಿಗೆ ಮತ್ತು ಸಂಪರ್ಕ ಸಾಧನಗಳಿಂದಾಗಿ ಕಿರಿದಾಗುವ ಪ್ರಪಂಚ, ಎಲೆಕ್ಟ್ರಾನಿಕ್ ಮಾಧ್ಯಮಗಳಿಂದಾಗಿ ಮಾಹಿತಿ ಮತ್ತು ಮನೋರಂಜನೆಗಳು ಜಾಗತೀಕರಣಗೊಳ್ಳುವ ವಿಚಾರ ಇವೆಲ್ಲ ಒಟ್ಟಾಗಿಯೇ ಚರ್ಚೆಯಾಗುತ್ತಿವೆ. ಇವುಗಳಲ್ಲಿ ಯಾವುದರ ಪಾಲು ಎಷ್ಟು ಎಂಬುದು ಅಥವಾ ಯಾವುದನ್ನು ಯಾವುದು ನಿರ್ಧರಿಸುತ್ತವೆ ಎನ್ನುವ ವಿಚಾರ ಇಲ್ಲಿ ಪ್ರಸ್ತುತವಲ್ಲ. ಇವೆಲ್ಲವು ಬಂಡವಾಳದ ಅನಿಯಂತ್ರಿತ ಚಲನೆಯತ್ತ ಬೊಟ್ಟು ಮಾಡಿ ತೋರಿಸುತ್ತವೆ. ಭಾರತದ ಮಟ್ಟಿಗಂತು ಈ ಜಾಗತೀಕರಣದ ಪ್ರಶ್ನೆ ಹುಟ್ಟಿಕೊಂಡದ್ದು ಬಂಡವಾಳದ ಪ್ರಶ್ನೆಯೊಂದಿಗೆ. ೧೯೮೦ರ ನಂತರ ನಮ್ಮ ವಿದೇಶಿ ವಿನಿಮಯ ಕೊರತೆಯೊಂದಿಗೆ ಮತ್ತು ವಿದೇಶಿ ಸಾಲದ ಪ್ರಶ್ನೆಯೊಂದಿಗೆ ಜಾಗತೀಕರಣಕ್ಕೆ ಬಂಡವಾಳದ ಚಿತ್ರಣ ಇದೆ. ಇದರ ಜೊತೆಗೆ ನಾವು ಅನುಸರಿಸುತ್ತಿರುವ ಅಭಿವೃದ್ದಿ ಮಾದರಿ ಬಂಡವಾಳ ವೃದ್ದಿಯನ್ನು ಅಭಿವೃದ್ದಿಗೆ ಸಮೀಕರಿಸಿದೆ. ಆರಂಭದ ದಿನಗಳಲ್ಲಿ ಆಮದು ಕಡಿಮೆಗೊಳಿಸಿ ರಫ್ತು ಹೆಚ್ಚಿಸುವ ನಮ್ಮ ಆರ್ಥಿಕ ನೀತಿಗಳು ಅಂದಿನ ಅಂತಾರಾಷ್ಟ್ರೀಯ ರಾಜಕೀಯ ಹಾಗೂ ಆರ್ಥಿಕ ಸ್ಥಿತಿಯಿಂದಾಗಿ (ಅದೇನೆಂದು ಮುಂದೆ ವಿಸ್ತಾರವಾಗಿ ವಿವರಿಸಲಾಗಿದೆ), ತಕ್ಕಮಟ್ಟಿನ ಸಾಧನೆ ಮಾಡಿವೆ. ಆದರೆ ಬರಬರುತ್ತ ಆಂತರಿಕ ಹಾಗು ಅಂತಾರಾಷ್ಟ್ರೀಯ ಆರ್ಥಿಕ ಕ್ಷೇತ್ರಗಳಲ್ಲಾದ ಏರುಪೇರುಗಳಿಂದ ಸ್ಥಳೀಯ ಮಾರುಕಟ್ಟೆಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಸೇರಿಸುವುದು ಅನಿವಾರ್ಯವಾಯಿತು. ಮಾರುಕಟ್ಟೆಯ ಜಾಗತೀಕರಣ ತಾತ್ವಿಕವಾಗಿ ಎಲ್ಲ ಉತ್ಪಾದನಾ ಮೂಲಗಳಿಗೂ ಸಂಬಂಧಿಸಿದ್ದರೂ ವಾಸ್ತವದಲ್ಲಿ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬಂದಿರುವುದು ಬಂಡವಾಳ, ಸರಕು ಮತ್ತು ಸೇವೆಗಳ ಮಾರುಕಟ್ಟೆ ಕುರಿತಂತೆ ಮಾತ್ರ. ಬಹುತೇಕ ಸಂದರ್ಭಗಳಲ್ಲಿ ಬಂಡವಾಳದ ಅಡ್ಡಿ ಆತಂಕವಿಲ್ಲದೆ ಚಲನೆಯೇ ಆರ್ಥಿಕ ನೀತಿಗಳಲ್ಲಿನ ಪರಿವರ್ತನೆಯ ಉದ್ದೇಶವಾಗಿರುವ ದೃಷ್ಟಿಯಿಂದ ಜಾಗತೀಕರಣವನ್ನು ಬಂಡವಾಳದ ಜಾಗತೀಕರಣಕ್ಕೆ ಸೀಮಿತಗೊಂಡಂತೆ ಚರ್ಚಿಸುವುದು ತಪ್ಪಾಗುವುದಿಲ್ಲ.

ಕೊನೆಯದಾಗಿ ಬಂಡವಾಳ ಈಗ ಹಬ್ಬುತ್ತಿದೆ ಎಂದಾದರೆ ಈ ಹಿಂದೆ ಬಂಡವಾಳ ಜಾಗತೀಕರಣಗೊಂಡಿರಲಿಲ್ಲವೆ ಎನ್ನುವ ಪ್ರಶ್ನೆ ಕೂಡ ಸಹಜವಾಗುತ್ತದೆ. ಬಂಡವಾಳದ ಕಲ್ಪನೆ ಮತ್ತು ವಿವಿಧ ರೂಪದ ಬಂಡವಾಳದ ಚರ್ಚೆಯಲ್ಲಿ ಯಾವ ರೀತಿಯಲ್ಲಿ ವ್ಯಾಪಾರಿ ಬಂಡವಾಳ ಕೂಡ ಜಾಗತೀಕರಣಗೊಂಡಿತು ಎಂದು ವಿವರಿಸಲಾಗಿದೆ. ಆದಾಗ್ಯೂ ಈಗ ಜಾಗತೀಕರಣಕ್ಕೆ ಯಾಕೆ ಇಷ್ಟು ಅಬ್ಬರದ ಪ್ರಚಾರವಿದೆ ಎನ್ನುವುದು ಕೂಡ ಮುಖ್ಯ ವಾಗುತ್ತದೆ. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಜಾಗತೀಕರಣವನ್ನು ವಿಶೇಷಗೊಳಿಸುವ ಇತರ ಹಲವು ಪದಗಳನ್ನು ನಾವು ಗಮನಿಸಬೇಕಾಗಿದೆ. ವಿಶೇಷಣ ದೊಂದಿಗೆ ಕೇಳಿಬಂದ ಇತರ ಪದಗಳ ಕೆಲವು ಉದಾಹರಣೆ ಇಂತಿವೆ. ‘ಹೊಸ ಅರ್ಥವ್ಯವಸ್ಥೆ’ ‘ಹೊಸ ಪ್ರಪಂಚ ವ್ಯವಸ್ಥೆ’, ‘ಚರಿತ್ರೆಯ ಕೊನೆ’, ‘ಶೀತಲ ಸಮರದ ಕೊನೆ’ ಇವೇ ಮುಂತಾದವುಗಳು ಒಂದೇ ಚಾರಿತ್ರಿಕ ಬೆಳವಣಿಗೆಯನ್ನು ವಿವರಿಸುವ ಹಲವಾರು ಪದಗಳು. ಈ ಎಲ್ಲದರ ಅರ್ಥ ಹೆಚ್ಚು ಕಡಿಮೆ ಒಂದೇ – ‘‘ರಷ್ಯಾದ ಸಮಾಜವಾದಿ ಸರ್ಕಾರದ ಪತನದೊಂದಿಗೆ ಮಾರುಕಟ್ಟೆ ನಿಯಂತ್ರಿತ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆ ಪ್ರಪಂಚದ ಹೊಸ ಅರ್ಥವ್ಯವಸ್ಥೆ ಆಗಿದೆ’’ ಎನ್ನುವುದೇ ಆಗಿದೆ. ಅಂದರೆ ಇದಕ್ಕೆ ಮುನ್ನ ರಷ್ಯಾ ತನ್ನ ಸರ್ಕಾರಿ ನಿಯಂತ್ರಿತ ಅಭಿವೃದ್ದಿ ಮಾದರಿಯೊಂದನ್ನು ತೃತೀಯ ಜಗತ್ತಿಗೆ ನೀಡಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಅಲ್ಲಿ ಬಂಡವಾಳ ಮುಕ್ತವಾಗಿರಲಿಲ್ಲ. ಸಮುದಾಯದ ಸಂಪನ್ಮೂಲ ವಿಲೇವಾರಿಯಲ್ಲಿ ಮಾರುಕಟ್ಟೆಯ ನಿಯಂತ್ರಣವಿರಲಿಲ್ಲ ಇವೇ ಮುಂತಾದ ಕಾರಣದಿಂದಾಗಿ ಅದು ಸೋತಿತು. ಅದಕ್ಕೆ ವಿರುದ್ಧವಾಗಿ ಮುಕ್ತಮಾರುಕಟ್ಟೆಯ ಮಾದರಿ ಇಂದು ಏಕಮೇವ ಆರ್ಥಿಕ ನೀತಿಯಾಗಿದೆ. ಈ ರೀತಿ ಹೇಳುವ ಮೂಲಕ ಬಂಡವಾಳದ ಆನಿಯಂತ್ರಿತ ಚಲನೆಗೆ ಇಂದು ಹಿಂದಿಗಿಂತ ಹೆಚ್ಚು ಅವಕಾಶ ಸಿಕ್ಕಿದೆ.

ಭಾಗ ೨

ಭಾಗ ಒಂದರಲ್ಲಿ ವ್ಯಾಪಾರಿ ಬಂಡವಾಳ ಕೈಗಾರಿಕಾ ಬಂಡವಾಳದ ಹುಟ್ಟಿಗೆ ಅನುಕೂಲವಾದ ಪರಿಸರ ನಿರ್ಮಿಸುವಲ್ಲಿ ಮಹತ್ತರವಾದ ಪಾತ್ರವಹಿಸಿದೆ ಎಂದು ವಿವರಿಸಲಾಗಿದೆ. ಇಲ್ಲಿ ಈ ವಿಚಾರವನ್ನು ಇನ್ನು ವಿಸ್ತಾರವಾಗಿ ಪರೀಕ್ಷಿಸಲಾಗಿದೆ. ಅಂದರೆ ವ್ಯಾಪಾರಿ ಬಂಡವಾಳದ ಜತೆಗೆ ಇತರ ಯಾವ ವಿಚಾರಗಳು ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳಶಾಹಿ ವ್ಯವಸ್ಥೆಯ ಪರಿವರ್ತನೆಗೆ ಕಾರಣವಾಗಿವೆ ಮತ್ತು ಈ ಪರಿವರ್ತನೆ ಯಾವ ರೀತಿಯಲ್ಲಿ ವ್ಯಾಖ್ಯಾನಿಸಲ್ಪಟ್ಟಿದೆ ಎನ್ನುವುದಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಈ ಹಿಂದೆ ಸೂಚಿಸಿದಂತೆ ಕೈಗಾರಿಕಾ ಕ್ರಾಂತಿಯ ಒಂದು ವಿವರಣೆ ಆಧುನೀಕರಣ ಥಿಯರಿಗಳ ಅಡಿಪಾಯವಾಗಿದೆ; ಮತ್ತು ಅಧುನೀಕರಣ ಥಿಯರಿಗಳು ಬಂಡವಾಳದ ವೃದ್ದಿಯನ್ನು ಅಭಿವೃದ್ದಿಯೆಂದು ವ್ಯಾಖ್ಯಾನಿಸುವುದರ ಮೂಲಕ ಬಂಡವಾಳಶಾಹಿ ಉತ್ಪಾದನಾ ಕ್ರಮವನ್ನು ಮಹಾಯುದ್ಧದ ನಂತರ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಅದರಲ್ಲೂ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಅಳವಡಿಸಿವೆ. ಅಭಿವೃದ್ದಿಯ ಹೆಸರಿನಲ್ಲಿ ಪ್ರಾರಂಭವಾದ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯ ಅಳವಡಿಸುವಿಕೆ ಬಂಡವಾಳದ ಇಂದಿನ ಜಾಗತೀಕರಣಕ್ಕೆ ಅಗತ್ಯವಾದ ಪರಿಸರವನ್ನು ನಿರ್ಮಿಸಿದೆ. ಈ ಭಾಗದಲ್ಲಿ ಬಂಡವಾಳದ ವೃದ್ದಿ ಯಾವ ರೀತಿಯಲ್ಲಿ ಅಭಿವೃದ್ದಿಯೆಂದು ನಿರ್ವಚಿಸಲ್ಪಟ್ಟಿದೆ, ಬಂಡವಾಳದ ಬೆಳವಣಿಗೆ ಇಡೀ ಸಮಾಜದ ಬೆಳವಣಿಗೆಯೆಂಬ ಮೌಲ್ಯ ನಿರ್ಮಾಣ ಮಾಡಿಕೊಳ್ಳುವುದು ಸರಕಾರದ ನಿಯಂತ್ರಣದ ಮುಕ್ತತೆಯ ಜತೆಜತೆಗೆ ಸರಕಾರ ಯಾವ ರೀತಿಯಲ್ಲಿ ಬಂಡವಾಳದ ವೃದ್ದಿಗೆ ಸಹಕಾರಿಯಾಗಬೇಕಾಗುತ್ತದೆ, ಈ ಪ್ರಕ್ರಿಯೆಯಲ್ಲಿ ಅಂತರ್‌ರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ಸ್ಥಿತಿಗತಿಗಳು ಪ್ರತಿ ದೇಶದ ಆಂತರಿಕ ಆರ್ಥಿಕ ನೀತಿಗಳ ನಿರ್ಧಾರದಲ್ಲಿ ಯಾವ ರೀತಿಯ ಪ್ರಭಾವ ಬೀರುತ್ತವೆ. ಇವೇ ಮುಂತಾದ ವಿಚಾರಗಳನ್ನು ಚರ್ಚಿಸಲಾಗಿದೆ.

ಇಲ್ಲಿನ ವಿವರಣೆಯನ್ನು ಕೈಗಾರಿಕಾ ಕ್ರಾಂತಿಯ ವಿವರಣೆಯೊಂದಿಗೆ ಪ್ರಾರಂಭಿಸಲಾಗಿದೆ. ಕ್ರಾಂತಿಯ ಕಾರಣಗಳು ಮತ್ತು ಪರಿಣಾಮಗಳನ್ನು ವಿವರಿಸುವ ಮೂಲಕ ಪ್ರಚಲಿತದಲ್ಲಿರುವ ಅಭಿವೃದ್ದಿಯ ವ್ಯಾಖ್ಯಾನಗಳ ಮೂಲರೂಪವನ್ನು ಮತ್ತು ಅದು ಹುಟ್ಟುಹಾಕಬಹುದಾದ ಸಮಾಜದ ಗುಣಲಕ್ಷಣಗಳ ವಿವರಣೆಯನ್ನು ಕಂಡುಕೊಳ್ಳಬಹುದು. ಕೈಗಾರಿಕಾ ಕ್ರಾಂತಿ ಹಲವಾರು ರೀತಿಗಳಲ್ಲಿ ವಿವರಿಸಲ್ಪಟ್ಟಿದೆ. ಅವುಗಳೆಲ್ಲವನ್ನು ವಿಸ್ತಾರವಾಗಿ ಪರೀಕ್ಷಿಸುವುದು ಈ ಕಿರುಲೇಖನದ ವ್ಯಾಪ್ತಿಯೊಳಗೆ ಸಾಧ್ಯವಾಗದ ಕೆಲಸ, ಆದುದರಿಂದ ಎಲ್ಲಾ ರೀತಿಯ ವಿವರಣೆಗಳನ್ನು ತಕ್ಕಮಟ್ಟಿಗೆ ಒಳಗೊಳ್ಳಬಹುದಾದ ಎರಡು ಆಲೋಚನಾ ವಿಧಾನಗಳನ್ನು ಗಮನದಲ್ಲಿಟ್ಟುಕೊಂಡು ಈ ವಿವರಣೆಯನ್ನು ಕೊಡಲು ಪ್ರಯತ್ನಿಸಲಾಗಿದೆ. ಈ ವಿವರಣೆ ಗಳನ್ನು ಕೊಡುವ ಮುನ್ನ ಕೆಲವೊಂದು ವಿಚಾರದತ್ತ ಓದುಗರ ಗಮನ ಸೆಳೆಯುವುದು ಅಗತ್ಯವೆಂದು ತೋರುತ್ತದೆ.

ಒಂದನೆಯದಾಗಿ ಈ ಮುಂದೆ ವಿವರಿಸಲಿರುವ ಪರಿವರ್ತನೆಗಳು ತ್ವರಿತಗತಿಯಲ್ಲಿ ಅಥವಾ ಒಂದು ವ್ಯವಸ್ಥಿತ ರೂಪದಲ್ಲಿ ಆಗಿರುವುದಿಲ್ಲ. ಅದೇ ರೀತಿಯಲ್ಲಿ ಒಂದು ವ್ಯವಸ್ಥೆ ಮತ್ತೊಂದು ವ್ಯವಸ್ಥೆಗೆ ಪರಿವರ್ತನೆಗೊಳ್ಳುವ ಪ್ರಕ್ರಿಯೆಯ ಕಾರಣವನ್ನು ಯಾವುದೋ ಒಂದು ಅಂಶಕ್ಕೆ ಸೀಮಿತಗೊಳಿಸುವುದು, ಪರಿವರ್ತನೆಯನ್ನು ಅರ್ಥೈಸಿ ಕೊಳ್ಳುವಲ್ಲಿ ಸಹಾಯಕವಾಗುವುದಿಲ್ಲ. ಎರಡನೆಯದಾಗಿ ಪರಿವರ್ತನೆ ಒಂದು ನಿರ್ದಿಷ್ಟ ಹಂತದಲ್ಲಿ ಹುಟ್ಟಿ ಮತ್ತೊಂದು ನಿರ್ದಿಷ್ಟ ಹಂತದಲ್ಲಿ ಮುಕ್ತಾಯಗೊಂಡಿದೆ ಎನ್ನುವುದು ಕೂಡ ಹಾಸ್ಯಾಸ್ಪದವಾಗುತ್ತದೆ. ಆರಂಭದಲ್ಲಿ ಎರಡೂ ವ್ಯವಸ್ಥೆಯ ಲಕ್ಷಣಗಳು ಕಂಡು ಬಂದು ಕಾಲಕ್ರಮೇಣ ಹೊಸ ವ್ಯವಸ್ಥೆಯ ಲಕ್ಷಣಗಳು ಸ್ಫುಟವಾಗಿ ಗೋಚರಿಸಬಹುದು. ಇದರ ಅರ್ಥ ಹಿಂದಿನ ವ್ಯವಸ್ಥೆಯ ಎಲ್ಲಾ ಮೌಲ್ಯಗಳು ಸಂಪೂರ್ಣ ನಾಶಹೊಂದಿವೆ ಎಂದಲ್ಲ. ಕೆಲವೊಂದು ಬಾರಿ ಹಿಂದಿನ ವ್ಯವಸ್ಥೆಯ ಹಲವಾರು ಲಕ್ಷಣಗಳು ಬೇರೆ ರೂಪದಲ್ಲಿ ಕಂಡುಬರಬಹುದು. ಈ ಹಿನ್ನೆಲೆಯಲ್ಲಿ ನಾವು ಊಳಿಗಮಾನ್ಯ ವ್ಯವಸ್ಥೆಯಿಂದ ಉಗಮಗೊಂಡ ಬಂಡವಾಳಶಾಹಿ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ.

ಊಳಿಗಮಾನ್ಯ ವ್ಯವಸ್ಥೆಯ ಅವನತಿಗೆ ಮುಖ್ಯ ಕಾರಣವನ್ನು ಗುರುತಿಸುವ ವಿಚಾರದಲ್ಲಿ ಬಹು ದೊಡ್ಡ ಚರ್ಚೆ ನಡೆದಿದೆ ಮತ್ತು ಇದು ಹಲವಾರು ಪ್ರಮುಖ ವಿಚಾರ ಧಾರೆಗಳ ಹುಟ್ಟಿಗೆ ಕಾರಣವಾಗಿದೆ. ಈ ವ್ಯವಸ್ಥೆಯ ಅವನತಿಯಲ್ಲಿ ವ್ಯಾಪಾರದ ಪಾತ್ರ ಕುರಿತು ಎಡಪಂಥೀಯರಲ್ಲಿ ವಿಭಿನ್ನ ಧೋರಣೆಗಳಿವೆ. ಕಟ್ಟಾ ಮಾರ್ಕ್ಸ್‌ವಾದಿಗಳೆಂದು ಗುರುತಿಸಬಹುದಾದ ಕಾರ್ಲ್‌ಪೋಲಾಯಿನಿಯಿಂದ ಹಿಡಿದು ಮೌರಿಸ್ ಡಾಬ್ ವರೆಗೆ ಊಳಿಗಮಾನ್ಯ ವ್ಯವಸ್ಥೆಯಲ್ಲಿ ವ್ಯಾಪಾರದ ಪಾತ್ರವನ್ನು ಅಲ್ಲಗಳೆಯುವುದಿಲ್ಲ. ಆದರೆ ಅದೇ ಪ್ರಮುಖ ಪಾತ್ರವಹಿಸಿದೆ ಎಂಬ ವಾದವನ್ನು ಅವರು ಬಲವಾಗಿ ವಿರೋಧಿಸುತ್ತಾರೆ. ಯಾಕೆಂದರೆ ವ್ಯಾಪಾರ ಯುರೋಪಿನ ಹಲವಾರು ದೇಶಗಳಲ್ಲಿ ಪಶ್ಚಿಮ ಯುರೋಪಿನಲ್ಲಿ ಇದ್ದುದಕ್ಕಿಂತ ಬಲವಾಗಿಯೇ ಇತ್ತು. ಆದರೆ ಈ ದೇಶಗಳಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಅವನತಿಯೂ ಆಗಲಿಲ್ಲ. ಬಂಡವಾಳಶಾಹಿ ವ್ಯವಸ್ಥೆ ಹುಟ್ಟಿಕೊಳ್ಳಲೂ ಇಲ್ಲ. ಜತೆಗೆ ವ್ಯಾಪಾರ ಹಣದ ಉಪಯೋಗವನ್ನು ಜಾರಿಗೆ ತಂದು ಊಳಿಗದ ಬದಲಿಗೆ ಹಣ ಸಂದಾಯ ಮಾಡುವುದರ ಮೂಲಕ ಆ ವ್ಯವಸ್ಥೆಯ ಬಂಧನವನ್ನು ಹಂತಹಂತವಾಗಿ ಸಡಿಲಗೊಳಿಸಿತು ಎನ್ನುವ ವಾದವನ್ನು ಕೂಡ ಅವರು ವಿರೋಧಿಸುತ್ತಾರೆ. ಅವರ ಪ್ರಕಾರ ಯಾವುದೇ ವ್ಯವಸ್ಥೆಯ ಪರಿವರ್ತನೆಯಲ್ಲಿ ಆ ವ್ಯವಸ್ಥೆಯ ಹೊರಗಿನ ಪ್ರಭಾವ ಇಲ್ಲವೆಂದಲ್ಲ. ಬದಲಿಗೆ ವ್ಯವಸ್ಥೆಯ ಒಳಗಿನ ವೈರುದ್ಯಗಳೇ ಅತಿ ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದಾಗಿದೆ. ಊಳಿಗಮಾನ್ಯ ವ್ಯವಸ್ಥೆ ಅದರ ಪುನರುತ್ಪತ್ತಿಗೆ ಅವಶ್ಯವಾದ ಉತ್ಪಾದನೆ ಯನ್ನು ಪೂರೈಸಲು ವಿಫಲವಾಗುವುದರೊಂದಿಗೆ ಅವರ ಅವನತಿಗೆ ನಾಂದಿಯಾಯಿತು ಎನ್ನುವುದು ಅದರ ವಾದ. ಆದರೆ ಈ ವಿವರಣೆಯನ್ನು ಸ್ವಯಂ ತಂತ್ರವಾದಿಗಳೆಂದು ಗುರುತಿಸಬಹುದಾದ ಸಮಾಜ ಮತ್ತು ಅರ್ಥಶಾಸ್ತ್ರಜ್ಞರು ಒಪ್ಪುವುದಿಲ್ಲ. ಈ ಬಗ್ಗೆ ಅವರ ಪ್ರಮುಖ ಟೀಕೆಯೆಂದರೆ ಎಡಪಂಥೀಯರು ಇಡೀ ಪರಿವರ್ತನೆಯನ್ನು ಉತ್ಪಾದನಾ ಸಂಬಂಧಗಳ ಮೂಲಕ ನೋಡಲು ಪ್ರಯತ್ನಿಸುತ್ತಾರೆ ಎನ್ನಲಾಗಿದೆ. ಉತ್ಪಾದನಾ ಸಂಬಂಧಗಳ ಮೂಲಕ ಪರಿವರ್ತನೆಯನ್ನು ಅರ್ಥಮಾಡಿಕೊಳ್ಳುವುದು ತಪ್ಪಲ್ಲ. ಆದರೆ ಅದುವೇ ಸಂಪೂರ್ಣ ವಿವರಣೆ ಎನ್ನುವುದನ್ನು ಸ್ವಯಂ ತಂತ್ರವಾದಿಗಳು ವಿರೋಧಿಸುತ್ತಾರೆ. ಅವರ ಪ್ರಕಾರ ಈ ಪರಿವರ್ತನೆಯಲ್ಲಿ ಮೇಲ್‌ರಚನೆಗಳ ಪಾತ್ರ ಕೂಡ ಮಹತ್ವದ್ದಾಗಿದೆ. ಈ ರೀತಿಯ ವಾದವನ್ನು ಮುಂದೂಡುವರಲ್ಲಿ ಮ್ಯಾಕ್ಸ್‌ವೇಬರ್ ಅಗ್ರಗಣ್ಯ. ಈತ ಇತರ ಹಲವಾರು ಬೆಳವಣಿಗೆಗಳ ಜೊತೆಗೆ ಧಾರ್ಮಿಕ ವಿಚಾರಗಳೂ ಕೂಡ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆ ಉಗಮಕ್ಕೆ ಕಾರಣವಾಗಿದೆ ಎನ್ನುತ್ತಾನೆ. ಮುಖ್ಯವಾಗಿ ಲೆಕ್ಕ ಶಾಸ್ತ್ರದ ಬೆಳವಣಿಗೆ, ಶ್ರಮಿಕವರ್ಗದ ರೂಪುಗೊಳ್ಳುವಿಕೆ, ಅಡಳಿತ ಶಾಹಿಯ ಉಪಯೋಗ ಇವೆ ಮುಂತಾದ ವಿಚಾರಗಳು ಕೂಡ ಹೊಸ ವ್ಯವಸ್ಥೆಯ ರೂಪುಗೊಳ್ಳುವಿಕೆಯಲ್ಲಿ ನಿರ್ಣಾಯಕ ಪಾತ್ರವಹಿಸಿವೆ ಎಂಬುದು ಈತನ ಅಭಿಪ್ರಾಯ.

ಇಲ್ಲಿರುವ ಮುಖ್ಯ ಉದ್ದೇಶ ಈ ಪರಿವರ್ತನೆ ಮುಖ್ಯ ಕಾರಣವನ್ನು ಗುರುತಿಸುವುದಕ್ಕಿಂತ ಹೆಚ್ಚಾಗಿ ಪರಿವರ್ತನೆಗೊಂಡ ಸಮಾಜ ಮತ್ತು ಅದು ಯಾವ ರೀತಿಯಲ್ಲಿ ಅದರ ಹಿಂದಿನ ಊಳಿಗಮಾನ್ಯ ವ್ಯವಸ್ಥೆಗಿಂತ ಭಿನ್ನ ಎಂದು ಸಮಾಜಶಾಸ್ತ್ರಜ್ಞರು ತೋರಿಸಿದ್ದಾರೆ ಎನ್ನುವುದರ ಮೇಲೆ ಗಮನ ಹರಿಸುವುದು. ಮ್ಯಾಕ್ಸ್‌ವೇಬರ್ ಗುರುತಿಸಿದ ಮೇಲ್ ರಚನೆಯ ಅಂಶಗಳನ್ನು ಹಿಡಿದು ಪರಿವರ್ತಿತ ಸಮಾಜ ಗುಣಗಳನ್ನು ಅದರ ಹಿಂದಿನ ಸಮಾಜದ ಗುಣಗಳಿಗೆ ಹೋಲಿಸಿ ಪರಿವರ್ತನೆಯ ಥಿಯರಿಯನ್ನು ಪ್ರಾರಂಭಿಸಿದವರಲ್ಲಿ ಮುಖ್ಯವಾಗಿ ಟಾಲ್‌ಕಾಟ್ ಪಾರ್ಸನ್ ನನ್ನು ಗುರುತಿಸಬಹುದು. ಈತ ಆಧುನೀಕರಣ ಥಿಯರಿಗಳ ಪ್ರವರ್ತಕನೆಂದೇ ಗುರುತಿಸಲ್ಪಟ್ಟಿ ದ್ದಾನೆ. ಈತನ ಪ್ರಕಾರ ಸಾಂಪ್ರದಾಯಿಕ ಸಮಾಜವೊಂದು ಸಂಬಂಧ ಆಧಾರಿತ ವ್ಯವಹಾರ ಬದಲು ಒಪ್ಪಂದ ಆಧರಿತ ವ್ಯವಹಾರ, ವ್ಯವಹಾರದಲ್ಲಿ ಹಣದ ಬಳಕೆ, ಅವಿಭಕ್ತ ಕುಟುಂಬ ಗಳು ಸಡಿಲಗೊಂಡು ವಿಭಕ್ತ ಕುಟುಂಬಗಳ ರಚನೆ, ಸಹಬಾಳ್ವೆಗಿಂತ ಸ್ಪರ್ಧಾತ್ಮಕ ಬದುಕಿಗೆ ಒತ್ತು, ಸಮುದಾಯಕ್ಕಿಂತ ವ್ಯಕ್ತಿ ಪ್ರಧಾನ ವ್ಯವಸ್ಥೆಗೆ ಪ್ರಾಧಾನ್ಯತೆ ಈ ಮುಂತಾದ ಪರಿವರ್ತನೆಗಳೊಂದಿಗೆ ಆಧುನಿಕಗೊಳ್ಳುತ್ತದೆ. ಈ ರೀತಿಯ ಪರಿವರ್ತನೆಗೆ ಮುಖ್ಯ ಕಾರಣವನ್ನು ಕೈಗಾರಿಕೀಕರಣದಲ್ಲಿ ಹುಡುಕುತ್ತಾನೆ. ಕೈಗಾರಿಕಾ ಕ್ರಾಂತಿಯಲ್ಲಿ ಉತ್ಪಾದನಾ ವಿಧಾನದಲ್ಲಿ ಆದ ಹಲವಾರು ತಾಂತ್ರಿಕ ಆವಿಷ್ಕಾರಗಳ ಪಾತ್ರ ಮಹತ್ತರವಾದುದು. ಈ ತಾಂತ್ರಿಕ ಆವಿಷ್ಕಾರಗಳು ಆರಂಭದಲ್ಲಿ ಉತ್ಪಾದನಾ ವಿಧಾನದಲ್ಲಿ ಬದಲಾವಣೆ ತಂದರೆ ಬದಲಾದ ಉತ್ಪಾದನಾ ವಿಧಾನಗಳು ಉತ್ಪಾದನಾ ಸಂಬಂಧದಲ್ಲಿ ಬದಲಾವಣೆ ತಂದವು. ಆದ್ದರಿಂದ ಬಂಡವಾಳಶಾಹಿಯ ಉತ್ಪಾದನಾ ವ್ಯವಸ್ಥೆಯನ್ನು ಅಳವಡಿಸುವುದರಿಂದ ಯಾವುದೇ ರೀತಿಯ ಸಮಾಜ ಕೂಡ ಆಧುನೀಕರಣಗೊಳ್ಳುತ್ತದೆ ಎನ್ನುವುದೇ ಆಧುನೀಕರಣ ಥಿಯರಿಯ ಮುಖ್ಯ ಅಂಶವಾಗಿದೆ. ಇದರ ಜೊತೆಗೆ ಆಧುನಿಕ ವ್ಯವಸ್ಥೆಯನ್ನು ‘‘ಮುಂದುವರಿದ’’ ಎಂದು ಇತರ ಅಂದರೆ ಬಂಡವಾಳಶಾಹಿ ಅಲ್ಲದ ಇತರ ವ್ಯವಸ್ಥೆಯನ್ನು ಸಾಂಪ್ರದಾಯಿಕ ಅಥವಾ ‘‘ಹಿಂದುಳಿದ’’ ಎಂದು ವರ್ಗೀಕರಿಸುವುದರೊಂದಿಗೆ ಈ ವಿವರಣೆಗೆ ಗುಣಾತ್ಮಕ ತೀರ್ಮಾನದ ಬಣ್ಣಕೊಡಲಾಯಿತು. ಈ ರೀತಿಯ ವಿಂಗಡಣೆ ಇತರರಿಗೆ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯನ್ನು ಒಂದು ಮಾದರಿಯಾಗಿ ತೋರಿಸಿದೆ ಮತ್ತು ಇತರರನ್ನು ಮುಂದುವರಿಯಬೇಕಾದರೆ ಈ ದಾರಿಯನ್ನು ತುಳಿಯಬೇಕೆಂದು ಪರೋಕ್ಷವಾಗಿ ಸೂಚಿಸಿದಂತಾಗುತ್ತದೆ.

ಬಂಡವಾಳದ ವೃದ್ದಿಯನ್ನು ಅಭಿವೃದ್ದಿ ಎಂದು ವ್ಯಾಖ್ಯಾನಿಸಿದೊಡನೆ ಪ್ರಪಂಚದ ಎಲ್ಲಾ ದೇಶಗಳು ಈ ಮಾದರಿಯನ್ನು ಅನುಸರಿಸಲು ಆರಂಭಿಸಲಿಲ್ಲ. ಯಾಕೆಂದರೆ ಇದೇ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಗೆ ವಿರುದ್ಧವಾದ ಸರಕಾರ ನಿಯಂತ್ರಿತ ಅಭಿವೃದ್ದಿಯ ಮಾದರಿ ಕೂಡ ಕಾರ್ಯರೂಪದಲ್ಲಿತ್ತು. ಆದಾಗ್ಯೂ ಬಂಡವಾಳದ ವೃದ್ದಿಯೇ ಅಭಿವೃದ್ದಿ ಹೇಗಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದರೆ ಅಂದಿನ ಆರ್ಥಿಕ ಮತ್ತು ರಾಜಕೀಯ ಸ್ಥಿತಿಗಳನ್ನು ತಿಳಿದುಕೊಳ್ಳಬೇಕಾಗಿದೆ. ಮುಂದಿನ ಪುಟಗಳಲ್ಲಿ ಆ ಸಂದರ್ಭದ ಅಂತರ್‌ರಾಷ್ಟ್ರೀಯ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳನ್ನು ಗುರುತಿಸಲಾಗಿದೆ. ಮಾರುಕಟ್ಟೆ ಬಲಗಳು ಬೇಡಿಕೆ ಮತ್ತು ಪೂರೈಕೆ-ಮಾರುಕಟ್ಟೆ ತನ್ನಿಂದ ತಾನೇ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತದೆ ಎಂದು ಕ್ಲಾಸಿಕಲ್ ಅರ್ಥಶಾಸ್ತ್ರಜ್ಞರು ಬಲವಾಗಿ ನಂಬಿದ್ದರು. ಅವರ ಪ್ರಕಾರ ಮಾರುಕಟ್ಟೆಯ ವ್ಯವಹಾರದಲ್ಲಿ ಮೂಗು ತೂರಿಸುವುದು ಅನಗತ್ಯವಾಗಿತ್ತು. ಆದರೆ ಕೇನ್ಸ್ ಈ ವಾದವನ್ನು ಒಪ್ಪಿರಲಿಲ್ಲ. ಆತನ ಪ್ರಕಾರ ೧೮೩೦ ಮತ್ತು ೧೯೨೦ರ ನಡುವೆ ಕಾರ್ಮಿಕ ಸಂಘಟನೆಗಳು ಬಲಯುತಗೊಂಡು ಮಾರುಕಟ್ಟೆಯನ್ನು ನಿಷ್ಕ್ರಿಯಗೊಳಿಸಿವೆ. ಅಂದರೆ ಕಾರ್ಮಿಕರ ಸಂಬಳ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಆಗುವ ಬದಲು ಈ ಸಂಘಟನೆಗಳ ಪ್ರಭಾವದಿಂದ ನಿರ್ಧಾರವಾಗತೊಡಗಿತ್ತು ಮತ್ತು ಇದುವೇ ಮಹಾಯುದ್ಧದ ಸಂದರ್ಭದಲ್ಲಿ ಕಂಡು ಬಂದ ತೀವ್ರ ಕುಸಿತಕ್ಕೆ (ಗ್ರೇಟ್ ಡಿಪ್ರೆಷನ್) ಕಾರಣವಾಗಿದೆ ಎನ್ನುತ್ತಾನೆ. ತೀವ್ರ ಕುಸಿತ ಅಂದರೆ ಏನು ಎಂದು ವಿವರಿಸಿ ಇದಕ್ಕೆ ಸಂಬಂಧಿಸಿದ ಇತರ ವಿಚಾರಗಳನ್ನು ಮುಂದೆ ವಿವರಿಸಲಾಗಿದೆ. ಪ್ರಥಮ ಜಾಗತಿಕ ಯುದ್ಧದ ಬಳಿಕ ಕಾಣಿಸಿಕೊಂಡ ತೀವ್ರ ಮಾರುಕಟ್ಟೆ ಕುಸಿತವೆ ಗ್ರೇಟ್ ಡಿಪ್ರೆಷನ್. ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯಲ್ಲಿನ ಆಂತರಿಕ ವೈವಿಧ್ಯಗಳೇ ಇದರ ಮೂಲಕಾರಣವೆಂದು ಹೆನ್ರಿಮ್ಯಾಗ್ ಡೋಪ್‌ನ ಅಭಿಪ್ರಾಯ. ಈತನ ಪ್ರಕಾರ ಬಂಡವಾಳಶಾಹಿ ವ್ಯವಸ್ಥೆ ಬೇಡಿಕೆಯನ್ನು ಮೊದಲೇ ಊಹಿಸಿಕೊಂಡು ಉತ್ಪಾದನೆಯಲ್ಲಿ ತೊಡಗುತ್ತದೆ ಮತ್ತು ಅದರ ಊಹೆಗೆ ಅನುಗುಣವಾದ ಮಾರುಕಟ್ಟೆ ವಿಸ್ತರಣೆ ಸಾಧ್ಯವಿಲ್ಲದಾಗ ಪೂರೈಕೆ ಬೇಡಿಕೆಯನ್ನು ಮೀರುತ್ತದೆ ಮತ್ತು ಇದೇ ಅಂತಿಮವಾಗಿ ಮಾರುಕಟ್ಟೆ ಕುಸಿತಕ್ಕೂ ಆ ಮೂಲಕ ಆರ್ಥಿಕ ಬಿಕ್ಕಟ್ಟಿಗೂ ಎಡೆಮಾಡಿಕೊಡುತ್ತದೆ. ಕಾರ್ಮಿಕ ಸಂಘಟನೆ ಮತ್ತು ಅದು ಮಾರುಕಟ್ಟೆ ವ್ಯವಸ್ಥೆ ಮೇಲೆ ಬೀರಿದ ಪ್ರಭಾವ ಗ್ರೇಟ್ ಡಿಪ್ರೆಷನ್‌ಗೆ ಕಾರಣವಾಗಿದೆ ಎನ್ನುವುದನ್ನು ಕಾರ್ಲ್ ಪೊಲಯಾನಿ ಕೂಡ ಒಪ್ಪುತ್ತಾನೆ ಮತ್ತು ಆತ ಶ್ರಮಿ ಸಂಘಟನೆಯ ಜೊತೆ ಮುಕ್ತ ಮಾರುಕಟ್ಟೆ ನಿಯಮಕ್ಕೆ ಭೂಮಿ ಮತ್ತು ಬಂಡವಾಳ ಕೂಡ ಬದ್ಧವಾಗಿರಲಿಲ್ಲ ಎಂದು ಅಭಿಪ್ರಾಯ ಪಡುತ್ತಾನೆ. ಜರ್ಮನಿಯ ಅನುಭವದ ಆಧಾರದ ಮೇಲೆ ಆತ ಈ ಎರಡೂ ಉತ್ಪಾದನಾ ಮೂಲಗಳು ಭೂಮಿ ಮತ್ತು ಬಂಡವಾಳ-ಯಾವ ರೀತಿಯಲ್ಲಿ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ ಎಂದು ವಿವರಿಸಿದ್ದಾನೆ. ಸಾಂಪ್ರದಾಯಿಕ ಯಜಮಾನಿಕೆಯ ವರ್ಗ- ಭೂಮಾಲಿಕರು, ಚರ್ಚು ಮತ್ತು ಸೇನೆ- ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯ ಮಾರುಕಟ್ಟೆ ಬಲಗಳಿಗೆ ಒಡ್ಡಿಕೊಳ್ಳುವುದು ಅವರುಗಳ ಪಾರಂಪಾರಿಕ ರಾಜಕೀಯ ಶಕ್ತಿಯನ್ನು ಕುಂದಿಸುತ್ತಿತ್ತು. ಅದಕ್ಕಾಗಿ ಕೃಷಿ ಉತ್ಪನ್ನಗಳ ಆಮದಿನ ಮೇಲೆ ನಿರ್ಬಂಧ ಹೇರುವ ಮೂಲಕ ಅವರುಗಳು ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದರ ಜೊತೆಗೆ ಅಂದು ಚಾಲ್ತಿಯಲ್ಲಿದ್ದ ಸ್ವರ್ಣ ಪರಿಮಾಣ (ಗೋಲ್ಡ್ ಸ್ಟ್ಯಾಂಡರ್ಡ್) ಕೂಡ ಮಹತ್ತರವಾದ ಪಾತ್ರ ವಹಿಸಿದೆ. ಸ್ವರ್ಣ ಪರಿಮಾಣವೆಂದರೆ, ವಿನಿಯಮ ದರ ಪದ್ಧತಿ. ಈ ಪದ್ಧತಿಯಲ್ಲಿ ಹಣದ ಪರಿವರ್ತನೆಯ ದರ ಚಿನ್ನದಲ್ಲೇ ನಡೆಯುತ್ತಿತ್ತು. ಒಂದು ದೇಶದ ಆಂತರಿಕ ಮಾರುಕಟ್ಟೆಯಲ್ಲಿ ಹಣವನ್ನು ಬಿಡುಗಡೆ ಮಾಡುವಾಗಲೂ ಅದಕ್ಕೆ ಸರಿಸಮಾನವಾದ ಚಿನ್ನವನ್ನು ಹೊಂದಿರಬೇಕಿತ್ತು. ಈ ದೃಷ್ಟಿಯಿಂದ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ಹಿಡಿತದಲ್ಲಿಡುವಲ್ಲಿ ಸ್ವರ್ಣ ಪರಿಮಾಣ ಒಂದು ಉತ್ತಮ ಸಾಧನವಾಗಿತ್ತು. ಒಂದು ದೇಶದ ಖರ್ಚು ಅದರ ಆದಾಯಕ್ಕಿಂತ ಹೆಚ್ಚಾದಾಗ ಚಿನ್ನ ದೇಶದಿಂದ ಹೊರಕ್ಕೆ ಹರಿಯುತ್ತಿತ್ತು ಮತ್ತು ಹಣದ ಪೂರೈಕೆ ಹಾಗೂ ಆರ್ಥಿಕ ಚಟುವಟಿಕೆಗಳು ಇಳಿಮುಖ ವಾಗುತ್ತಿದ್ದವು. ಈ ಸಂದಿಗ್ಧತೆಯಿಂದ ಪಾರಾಗಿ ಪುನಃ ಹಿಂದಿನ ಸ್ಥಿತಿ ಸ್ಥಾಪಿಸುವ ಸಾಧ್ಯತೆಗೆ ಇದ್ದ ಒಂದೇ ಒಂದು ದಾರಿಯೆಂದರೆ ಹಣಕಾಸು ಮತ್ತು ಬೇಡಿಕೆಯ ಮೇಲಿನ ಹತೋಟಿ ಮತ್ತು ಆ ಮೂಲಕ ಆಮದು ಕಡಿಮೆಗೊಳಿಸಿ ರಫ್ತನ್ನು ಹೆಚ್ಚಿಸುವುದು. ಅಂತರ್ ರಾಷ್ಟ್ರೀಯ ಮಾರುಕಟ್ಟೆಯನ್ನು ವ್ಯವಸ್ಥಿತಗೊಳಿಸಲು ಉಪಯೋಗವಾಗುತ್ತಿದ್ದ ಸ್ವರ್ಣ ಪರಿಮಾಣ ಅಂದಿನ ಶ್ರೀಮಂತ ರಾಷ್ಟ್ರಗಳ ಸ್ವೇಚ್ಛಾಚಾರದ ವ್ಯವಹಾರಗಳಿಗೆ ಒಂದು ದೊಡ್ಡ ತಡೆಯಾಗಿತ್ತು.

ಈ ರೀತಿಯಲ್ಲಿ ಕಾರ್ಮಿಕ ವರ್ಗ ನಿರುದ್ಯೋಗ ಮತ್ತು ಇಳಿಮುಖವಾಗುತ್ತಿದ್ದ ಕೂಲಿಯ ವಿರುದ್ಧ, ಬಂಡವಾಳ ಸ್ಥಿರತೆಯಿಲ್ಲದ ಬ್ಯಾಂಕಿಂಗ್ ವ್ಯವಸ್ಥೆ ವಿರುದ್ಧ ಮತ್ತು ಕೃಷಿಕರು ಸತತವಾಗಿ ಕುಸಿಯುತ್ತಿರುವ ಬೆಲೆಗಳ ವಿರುದ್ಧ ಪ್ರತಿಭಟಿಸುತ್ತಿದ್ದರು. ಈ ಎಲ್ಲದರ ಫಲಶ್ರುತಿ ಯೆಂದರೆ ರಾಷ್ಟ್ರೀಯ ಆರ್ಥಿಕ ಚಟುವಟಿಕೆಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಂದ ರಕ್ಷಿಸಿಕೊಳ್ಳುವ ಪ್ರಯತ್ನ ೧೮೭೦ರ ನಂತರ ಎಗ್ಗಿಲ್ಲದೆ ನಡೆಯಿತು. ದೇಶೀ ಉತ್ಪನ್ನಗಳ ಮಾರುಕಟ್ಟೆಯನ್ನು ರಕ್ಷಿಸುವ ನೆವದಲ್ಲಿ ಪರದೇಶಿ ಸರಕುಗಳ ಮೇಲಿನ ನಿರ್ಬಂಧ ಹೆಚ್ಚಾಯಿತು. ಪರಿಣಾಮವಾಗಿ ಅಂತರ್‌ರಾಷ್ಟ್ರೀಯ ವ್ಯಾಪಾರದಿಂದ ರಾಷ್ಟ್ರೀಯ ಸಂಪತ್ತನ್ನು ವೃದ್ದಿಗೊಳಿಸುವ ಸಾಧ್ಯತೆಯನ್ನು ರಾಜಕೀಯಗೊಳಿಸಬೇಕಾಯಿತು. ಅಂದರೆ ಅಂತರ್ ರಾಷ್ಟ್ರೀಯ ವ್ಯಾಪಾರ ವಸಾಹತುಶಾಹಿ ಧೋರಣೆಯಡಿಯಲ್ಲಿ ಮಾತ್ರ ಸಾಧ್ಯವಾಗಬಹುದಾದ ಸ್ಥಿತಿ ನಿರ್ಮಾಣವಾಯಿತು. ಯುರೋಪಿನ ಪ್ರತಿ ರಾಷ್ಟ್ರ ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಸಾಹತುಗಳನ್ನು ಹೊಂದಲು ಈ ಸಂದರ್ಭದಲ್ಲೇ ಪ್ರಯತ್ನಿಸಿದೆ. ಅಂತರ್‌ರಾಷ್ಟ್ರೀಯ ವ್ಯಾಪಾರ ಇಂತಹ ರಕ್ಷಣೆಯೇ ಇಲ್ಲದ ಮಾರುಕಟ್ಟೆಗಳನ್ನು ಕೊಳ್ಳೆ ಹೊಡೆಯುವುದಕ್ಕೆ ಸೀಮಿತಗೊಂಡಾಗ ಯುರೋಪಿನ ರಾಷ್ಟ್ರಗಳ ಮಧ್ಯೆ ವೈರತ್ವ ಮತ್ತು ನಂತರದ ಮಹಾ ಯುದ್ಧಗಳಿಗೆ ಕಾರಣವಾಗಿದೆ. ಒಂದನೆಯ ಮಹಾಯುದ್ಧ ಮತ್ತು ಸ್ವಯಂನಿಯಂತ್ರಿ ಸಲ್ಪಡುವ ಮಾರುಕಟ್ಟೆಯ ವಿಫಲತೆಗಳ ಸಂಬಂಧವನ್ನು ಅರಿಯಲು ಅಸಮರ್ಥರಾದ ಕಾರಣದಿಂದಾಗಿ ಈ ಹಿಂದೆ ಸ್ಥಿರತೆಯನ್ನು ಸಾಧ್ಯಗೊಳಿಸಿದ ಹಣಕಾಸು ಸಂಸ್ಥೆಗಳನ್ನು ಪುನರ್‌ಸ್ಥಾಪಿಸಲು ಪ್ರಯತ್ನಿಸಲಾಯಿತು. ಅದರಲ್ಲೂ ಸ್ವರ್ಣ ಪರಿಮಾಣದ ಅನಿವಾರ್ಯ ತೆಯ ಬಗ್ಗೆ ಸ್ವಯಂ ತಂತ್ರವಾದಿಗಳು ಮಾತ್ರವಲ್ಲ ಎಡಪಂಥೀಯರಿಗೂ ಬಲವಾದ ನಂಬಿಕೆಯಿತ್ತು. ಆದರೆ ಸ್ವರ್ಣ ಪರಿಮಾಣವನ್ನು ಪುನರ್‌ಸ್ಥಾಪಿಸುವ ಪ್ರಯತ್ನ ಅಂದಿನ ರಾಜಕೀಯ ಸಂದರ್ಭದಲ್ಲಿ ಕಷ್ಟ ಸಾಧ್ಯವಾಗಿತ್ತು. ಪಾರ್ಲಿಮೆಂಟ್ ಮಾದರಿಯ ಸರ್ಕಾರ ಕಾರ್ಮಿಕ ಸಂಘಟನೆಗಳಿಗೆ ತಮ್ಮ ಹಿತಾಸಕ್ತಿಗಳನ್ನು ಪೂರೈಸಲು ಒಂದು ಒಳ್ಳೆಯ ಮಾಧ್ಯಮವಾಗಿದ್ದು ಅನೇಕ ಕಾರ್ಮಿಕ ಕಲ್ಯಾಣ ಕಾನೂನುಗಳು ಜಾರಿ ಬಂದವು. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸ್ಪರ್ಧೆಯ ದೃಷ್ಟಿಯಿಂದ ಈ ರಕ್ಷಿತ ಶ್ರಮಿಕ ಮಾರುಕಟ್ಟೆ ದೊಡ್ಡ ತೊಡಕಾಯಿತು. ಇದರ ಜೊತೆಗೆ ಈ ಹಿಂದೆ ವಿವರಿಸಿದ ಭೂಮಿ ಮತ್ತು ಬಂಡವಾಳದ ಮಾರುಕಟ್ಟೆಯಲ್ಲಿನ ಅಡ್ಡಿಗಳು, ಅಂತರ್‌ರಾಷ್ಟ್ರೀಯ ವ್ಯಾಪಾರದ ಮೇಲಿನ ನಿರ್ಬಂಧಗಳು, ವಸಾಹತುಗಳನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಯುರೋಪಿನ ರಾಷ್ಟ್ರಗಳ ಮಧ್ಯೆ ನಡೆದ ಪೈಪೋಟಿ ಇವೇ ಮುಂತಾದವುಗಳು ಎರಡನೆಯ ಮಹಾಯುದ್ದದಲ್ಲಿ ಕೊನೆಗೊಂಡವು.