ಇತ್ತೀಚಿನ ದಿನಗಳಲ್ಲಿ ಬಹುಚರ್ಚೆಗೆ ಒಳಗಾಗುತ್ತಿರುವ ಮತ್ತು ಜಗತ್ತಿನಾದ್ಯಂತ ಕಂಡುಬರುವ ಹಲವಾರು ಸಾಮಾಜಿಕ ರಾಜಕೀಯ ಮತ್ತು ಸಾಂಸ್ಕೃತಿಕ ಪಲ್ಲಟಗಳಿಗೆ ಮೂಲವೆಂದು ತಿಳಿಯಲಾಗಿರುವ ಸಂಗತಿಗಳಲ್ಲಿ ಜಾಗತೀಕರಣ ಬಹುಮುಖ್ಯವಾದುದು. ಹಾಗೆಂದು ಜಾಗತೀಕರಣವೆಂದರೆ ಏನು, ಇದನ್ನು ಯಾವ ರೀತಿಯಲ್ಲಿ ವ್ಯಾಖ್ಯಾನಿಸಬಹುದು, ಇಂತಹ ಒಂದು ಬದಲಾವಣೆ ಅಥವಾ ಬೆಳವಣಿಗೆಗೆ ಏನು ಕಾರಣವೆಂದು ಕೇಳಿದರೆ ಅದಕ್ಕೆ ನಿಖರವಾಗಿ, ಗೊಂದಲಗಳಿಗೆ ಎಡೆ ಮಾಡಿಕೊಡದೆ ಉತ್ತರಿಸಬಹುದಾದ ಪಂಡಿತರು ಸಿಗುವುದಿಲ್ಲ. ಹಲವಾರು ಗುಂಪಿನ, ಹಲವಾರು ತತ್ವಸಿದ್ಧಾಂತಗಳ ಪ್ರತಿಪಾದಕರು ತಮ್ಮ ಸಿದ್ಧಾಂತ ನಿಲುವುಗಳಿಗೆ ಅನುಸಾರವಾಗಿ ತಮ್ಮ ಮೂಗಿನ ನೇರಕ್ಕೆ ಸರಿಯಾಗಿ ಜಾಗತೀಕರಣವನ್ನು ವ್ಯಾಖ್ಯಾನಿಸುವ ಸ್ಥಿತಿಯನ್ನು ಕಾಣಬಹುದಾಗಿದೆ. ಆದರೆ ಸಮಗ್ರವಾಗಿ ‘ಜಾಗತೀಕರಣ’ ಎನ್ನುವ ವಿದ್ಯಮಾನ ಯಾವ ಕಾರಣದಿಂದ ಈ ರೀತಿಯಲ್ಲಿ ಅನಾವರಣಗೊಳ್ಳುತ್ತಿದೆ? ಇದರ ಹಿಂದಿರುವ ಚಾಲಕ ಶಕ್ತಿ ಯಾವುದು? ಇದೊಂದು ಪೂರ್ವಚರಿತ್ರೆ ಇಲ್ಲದ ಅನಿರೀಕ್ಷಿತ ಬೆಳವಣಿಗೆಯೇ? ಅಥವಾ ಅಭಿವೃದ್ದಿಯ ಪಥದಲ್ಲಿ ವಿಶ್ವ ಹಾದು ಹೋಗಲೇಬೇಕಿರುವ ಒಂದು ಸ್ಥಿತಿಯಾಗಿ ಜಾಗತೀಕರಣವನ್ನು ಅರ್ಥಮಾಡಿ ಕೊಳ್ಳಬೇಕೇ? ಜಾಗತೀಕರಣ ಬೇರೆ ಬೇರೆ ದೇಶ, ಖಂಡಗಳ ಜನರ ಬದುಕಿನ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಉಂಟು ಮಾಡಬಹುದು? ಇಂತಹ ಒಂದು ಸ್ಥಿತಿಯನ್ನು ಯಾವ ರೀತಿಯಲ್ಲಿ ಸ್ವೀಕರಿಸಬೇಕು? ಇದರಿಂದ ನಮಗೆ ಒಳಿತಾಗಲಿದೆಯೇ ಅಥವಾ ನಷ್ಟವೇನಾದರೂ ಇದೆಯೇ? ದಿನ ನಿತ್ಯದ ಬದುಕಿನ ಮೇಲೆ ಜಾಗತೀಕರಣದ ಪರಿಣಾಮ ಯಾವ ರೀತಿಯಲ್ಲಿ ಆಗುತ್ತದೆ. ಇತ್ಯಾದಿ… ಇತ್ಯಾದಿ… ಪ್ರಶ್ನೆಗಳ ಬಗ್ಗೆ ಒಂದು ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಆದರೆ ಈ ಲೇಖನದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಜಾಗತೀಕರಣದ ಬಗ್ಗೆ ವ್ಯಕ್ತವಾದ, ಅಭಿಪ್ರಾಯಗಳು ಮತ್ತು ವಿವಿಧ ಕೋನದಿಂದ ನಡೆಸಲಾದ ಚರ್ಚೆ ಮತ್ತು ಅಧ್ಯಯನಗಳನ್ನು ಅವಲಂಬಿಸಿ ಈ ಮೊದಲು ಎತ್ತಲಾದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಲಾಗಿದೆ. ಜಾಗತೀಕರಣದ ಬಗ್ಗೆ ಬಹಳಷ್ಟು ಅಧ್ಯಯನಗಳು, ಚರ್ಚೆಗಳು ಈಗಾಲೂ ಮುಂದುವರಿದಿದ್ದು ಒಂದು ನಿರ್ದಿಷ್ಟವಾದ ನಿಲುವಿಗೆ ಅಥವಾ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಮತ್ತು ಅದು ಸಾಧುವೂ ಅಲ್ಲ.

ಜಾಗತೀಕರಣವೆನ್ನುವುದು ಸದ್ಯದ ಪರಿಸ್ಥಿತಿಯಲ್ಲಿ ಜಾಲ್ತಿಯಲ್ಲಿರುವ ವಿಷಯವಾದರೂ ಅದಕ್ಕೆ ಪೂರ್ವಚರಿತ್ರೆ ಇದೆ. ಈಗ ನಾವು ಜಾಗತೀಕರಣವೆಂದು ಯಾವ ಬೆಳವಣಿಗೆಯನ್ನು ಗುರುತಿಸುತ್ತೇವೋ ಅದು ಬಹಳ ಹಿಂದಿನಿಂದ ಆರಂಭವಾದ ಒಂದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಿದ್ಧಾಂತದ ಮುಂದುವರಿಕೆಯಾಗಿದೆ. ಬೇರೆ ಬೇರೆ ಕಾರಣಗಳಿಂದ ಇದು ಇಂದು ನಾವು ಕಾಣುತ್ತಿರುವ ಅಥವಾ ಅನುಭವಿಸುತ್ತಿರುವ ಸ್ವರೂಪವನ್ನು ಪಡೆದು ಕೊಂಡಿದೆ. ಜಗತ್ತಿನಾದ್ಯಂತ ಜನರ ಮತ್ತು ಸಂಪತ್ತಿನ ಚಲನೆ ನಿರಂತರವಾಗಿ ಅಥವಾ ಅವ್ಯಾಹತವಾಗಿ ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿರುತ್ತದೆ.