ಪ್ರಮುಖವಾಗಿ ಇಂತಹ ಒಂದು ಬೆಳವಣಿಗೆಯನ್ನು ಐದು ಪ್ರಮುಖ ಹಂತಗಳಲ್ಲಿ ಕಾಣಬಹುದು. ಆ ಐದು ಹಂತಗಳೆಂದರೆ :

೧. ಚರಿತ್ರ ಪೂರ್ವಕಾಲ ಅಂದರೆ ಕ್ರಿ.ಪೂ.೧೦೦೦ ರಿಂದ ಕ್ರಿ.ಪೂ.೩೫೦೦ರ ನಡುವಿನ ಅವಧಿ.

೨. ಆಧುನಿಕ ಪೂರ್ವಕಾಲ ಅಂದರೆ ಕ್ರಿ.ಪೂ.೩೫೦೦ ರಿಂದ ಕ್ರಿ.ಶ.೧೫೦೦ರ ನಡುವಿನ ಅವಧಿ.

೩. ಆಧುನಿಕ ಕಾಲದ ಆರಂಭಿಕ ಹಂತ ಕ್ರಿ.ಶ.೧೫೦೦-೧೭೫೦ರ ನಡುವಿನ ಅವಧಿ

೪. ಆಧುನಿಕ ಯುಗ ಕ್ರಿ.ಶ.೧೭೫೦ ರಿಂದ ಕ್ರಿ.ಶ.೧೯೭೦ರವರೆಗಿನ ಕಾಲಾವಧಿ, ಮತ್ತು

೫. ವರ್ತಮಾನ ಕಾಲಾವಧಿ. ಕ್ರಿ.ಶ.೧೯೭೦ರ ನಂತರದ ಬೆಳವಣಿಗೆಗಳು.

ಹಾಗಾಗಿ ದೇಶ ದೇಶಗಳ ನಡುವೆ ನಡೆಯುವ ವ್ಯಾಪಾರ-ವಹಿವಾಟುಗಳು ಜನ ಮತ್ತು ಸಂಪತ್ತಿನ ದ್ವಿಮುಖ ಅಥವಾ ಬಹುಮುಖ ಹರಿಯುವಿಕೆ ಎನ್ನುವುದು ಹೊಸತಾದ ವಿಚಾರ ವೇನು ಅಲ್ಲ. ಆದರೆ ವಿವಿಧ ಹಂತಗಳಲ್ಲಿ ಇದ್ದಂತಹ ಸಂಬಂಧಗಳು ಮತ್ತು ಅಂತಹ ಸಂಬಂಧದ ಪರಿಣಾಮಗಳು ಒಂದೇ ಆಗಿಲ್ಲ ಎನ್ನುವುದನ್ನು ‘ನಾವು’ ಮುಖ್ಯವಾಗಿ ಗಮನಿಸಬೇಕು. ಒಂದು ಹಂತದಲ್ಲಿ ಅಲೆಮಾರಿಯಾಗಿದ್ದ ಮನುಷ್ಯ ಪ್ರಕೃತಿಯನ್ನು ಅವಲಂಬಿಸಿ, ಜೀವನ ನಿರ್ವಹಣೆ ಮಾಡುವ ಕಾಲದಲ್ಲಿ ಒಂದು ಭೂಭಾಗದಿಂದ ಇನ್ನೊಂದು ಭೂಭಾಗಕ್ಕೆ ಸಂಚರಿಸುತ್ತಿದ್ದ ಇಲ್ಲವೆ ವಲಸೆ ಹೋಗುತ್ತಿದ್ದ. ಆ ನಂತರದ ಕಾಲದಲ್ಲಿ ಒಂದೆಡೆ ನೆಲೆ ನಿಂತರೂ ಕುತೂಹಲ, ಹೊಸತನದ ಹಂಬಲ ವ್ಯಾಪಾರವೇ ಮುಂತಾದ ಕಾರಣಗಳಿಂದ ಸದಾ ಸಂಚಾರಿಯಾಗತೊಡಗಿದ. ಆನಂತರದ ಕಾಲದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳು ಒಂದು ಸಾಂಸ್ಥಿಕ ರೂಪ ಪಡೆದ ಸಮುದಾಯಗಳು ಸ್ನೇಹ ಮತ್ತು ಕದನ ಕಾರಣದಿಂದಲೂ ಸಂಚಾರ ಮಗ್ನರಾದದ್ದನ್ನು ಕಾಣಬಹುದು. ಈ ಹಂತದಲ್ಲಿ ಇವತ್ತು ನಾವು ಅಭಿವೃದ್ದಿ ಶೀಲದೇಶಗಳು ಅಥವಾ ದಕ್ಷಿಣಾರ್ಧದ ದೇಶಗಳೆಂದು ಗುರುತಿಸುವ ಚೀನಾ, ಭಾರತ ಮತ್ತು ಆಸುಪಾಸಿನ ದೇಶಗಳಿಂದ ವಸ್ತುಗಳು, ಬೌದ್ದಿಕ ಸಂಪತ್ತು ಪಶ್ಚಿಮದ ದೇಶಗಳೆಡೆಗೆ ವರ್ಗಾವಣೆ ಯಾಗುತ್ತಿತ್ತು. ಭಾರತ ಮತ್ತು ಚೀನಾಗಳಲ್ಲಿ ಅಸ್ತಿತ್ವದಲ್ಲಿದ್ದ ಉತ್ಪಾದನಾ ವ್ಯವಸ್ಥೆ, ಶೈಕ್ಷಣಿಕ ವಾತಾವರಣ, ವ್ಯಾಪಾರ ಜಗತ್ತಿನ ಇತರ ದೇಶಗಳಿಗೆ ಪ್ರಮುಖ ಆಕರ್ಷಣೆ ಯಾಗಿರುವುದನ್ನು ನಾವು ತಿಳಿಯಬಹುದಾಗಿದೆ. ಆದರೆ ಯುರೋಪ್‌ನಲ್ಲಿ ಆರಂಭವಾದ ಆಧುನಿಕತೆಯ ಪ್ರಭಾವ ಹೊಸ ರೀತಿಯ ಬೆಳವಣಿಗೆಗಳಿಗೆ ದಾರಿ ಮಾಡಿಕೊಟ್ಟಿತು. ಜ್ಞಾನಪರ್ವದ ಪರಿಣಾಮವಾಗಿ ಬೆಳಕು ಕಂಡು ಹೊಸ ಹೊಸ ಅನ್ವೇಷಣೆಗಳು ಯುರೋಪ್‌ನ ದೇಶಗಳಲ್ಲಿನ ಉತ್ಪಾದನಾ ವಿಧಾನದಲ್ಲಿ ಬದಲಾವಣೆಗಳನ್ನು ತಂದುವು. ಇದರ ಪರಿಣಾಮವಾಗಿ ತದನಂತರ ವಸಾಹತುಗಳು ಹುಟ್ಟಿಕೊಂಡವು. ವಸಾಹತೀಕರಣದ ಫಲವಾಗಿ ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಪೂರ್ವದ ದೇಶಗಳ ಸಂಪತ್ತು ಪಶ್ಚಿಮದ ದೇಶಗಳಿಗೆ ಹರಿದು ಹೋಗಿ, ಇಡೀ ಅರ್ಥವ್ಯವಸ್ಥೆ ಮಾತ್ರವಲ್ಲ ಸಾಮಾಜಿಕ ಪರಿಸ್ಥಿತಿಯೂ ನಿಸ್ತೇಜವಾಯಿತು. ಈ ಹಿಂದೆ ಇದ್ದ ಪರಿಸ್ಥಿತಿಗೆ ವಿರುದ್ಧವಾದಂತಹ ಒಂದು ಸ್ಥಿತಿ ನಿರ್ಮಾಣವಾಗತೊಡಗಿತು. ಈ ಕಾರಣದಿಂದ ಯುರೋಪಿನ ದೇಶಗಳ ಉತ್ಪನ್ನಗಳು ಪೂರ್ವದ ದೇಶಗಳ ಮಾರುಕಟ್ಟೆಗೆ ಪ್ರವೇಶ ಪಡೆಯತೊಡಗಿದುವು. ಇದರ ಪರಿಣಾಮವಾಗಿ ದೇಶಿಯ ಉದ್ಯಮಗಳು ನೆಲಕಚ್ಚ ತೊಡಗಿದವು. ಉತ್ಪಾದನಾ ವ್ಯವಸ್ಥೆ ಶಿಥಿಲವಾದ ಪರಿಣಾಮ ಇಲ್ಲಿಯ ಇತರ ವ್ಯವಸ್ಥೆಗಳೂ ಸಡಿಲಗೊಂಡುವು. ಆದರೆ ಎಲ್ಲಿ ಇಂತಹ ಮಾರುಕಟ್ಟೆಯ ವಿಸ್ತರಣೆ ಪರಿಪೂರ್ಣವಾಗಿ ಆಗಿಲ್ಲವೋ ಅಂತಹ ಕ್ಷೇತ್ರಗಳಲ್ಲಿ ಈ ಹಿಂದಿದ್ದ ಪಾರಂಪರಿಕ ವ್ಯವಸ್ಥೆಯೇ ಮುಂದುವರಿದುಕೊಂಡು ಹೋಯಿತು. ಇದರ ಪರಿಣಾಮವಾಗಿ ಪೂರ್ವದ ದೇಶಗಳಲ್ಲಿ ಆಧುನಿಕತೆ ಮತ್ತು ಪಾರಂಪರಿಕತೆ ಜೊತೆ ಜೊತೆಯಾಗಿ ಅಸ್ತಿತ್ವದಲ್ಲಿರುವ ಒಂದು ವಿಚಿತ್ರ ಸನ್ನಿವೇಶ ನಿರ್ಮಾಣವಾಯಿತು. ಇಂತಹ ದ್ವಿಮುಖತೆ ಕೆಲವೊಮ್ಮೆ ಸಹಮತದಂತೆ ಕಂಡುಬಂದರೂ ಅದೊಂದು ಸಣ್ಣ ವಿರಾಮವಾಗಿ ನಂತರ ಕ್ಷಣದಲ್ಲಿಯೇ ಆಧುನಿಕತೆ ಮತ್ತು ಪಾರಂಪರಿಕ ಮನೋದರ್ಮ ಸಂಘರ್ಷ ಕ್ಕಿಳಿಯುವ ಸ್ಥಿತಿ ನಿರಂತರವಾಗಿ ಮುಂದುವರೆದುಕೊಂಡೇ ಬಂತು.

ಯುರೋಪ್‌ಕೇಂದ್ರಿತ ಆಧುನಿಕತೆಯ ಮಾದರಿಯು ಜಗತ್ತಿನಾದ್ಯಂತ ವಸಾಹತೀಕರಣದ ಮೂಲಕ ಪ್ರಸರಿಸಿ ಎಲ್ಲ ಖಂಡಗಳಲ್ಲಿಯೂ ಬಹಳ ಸಮರ್ಥವಾಗಿ ಬೇರೂರಿತು. ಈ ಬೆಳವಣಿಗೆಗೆ ಸೋವಿಯತ್ ಒಕ್ಕೂಟದಲ್ಲಿದ್ದ ಸಮಾಜವಾದಿ ಉತ್ಪಾದನಾ ವ್ಯವಸ್ಥೆ ಒಂದು ಪರ್ಯಾಯವನ್ನು ನಿರ್ಮಿಸಿತು. ಮತ್ತು ಬಹಳ ದೀರ್ಘಕಾಲ ಈ ಪರ್ಯಾಯವನ್ನು ನಿರ್ಮಿಸಿತು. ಬಹಳ ದೀರ್ಘಕಾಲ ಈ ಪರ್ಯಾಯ ವ್ಯವಸ್ಥೆ ಯುರೋಪ್ ಕೇಂದ್ರಿತ ಬಂಡವಾಳ ಕೇಂದ್ರಿತ ಆಧುನಿಕತೆಯನ್ನು ಎದುರಿಸಿತು ಎಂದೇ ಹೇಳಬಹುದು. ಆದರೆ ದ್ವಿತೀಯ ಮಹಾಯುದ್ಧದ ನಂತರ ಅಮೆರಿಕ ಬ್ರಿಟನ್‌ನ ಸಾರ್ವಭೌಮತ್ವವನ್ನು ಹಿಂದಿಕ್ಕಿ ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತು. ದ್ವಿತೀಯ ಯುದ್ಧಾನಂತರದಲ್ಲಿ ಯುದ್ಧದ ಕಾರಣದಿಂದಾಗಿ ಜರ್ಝರಿತವಾಗಿದ್ದ ಆರ್ಥಿಕ ವ್ಯವಸ್ಥೆಗಳನ್ನು ಮರು ನಿರ್ಮಿಸುವ ಉದ್ದೇಶದಿಂದ ಎರಡು ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು ಹುಟ್ಟಿಕೊಂಡವು. ಅವುಗಳೆಂದರೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು  ವಿಶ್ವಬ್ಯಾಂಕು.

ಈ ಎರಡು ಸಂಸ್ಥೆಗಳಲ್ಲದೆ ವಿಶ್ವವ್ಯಾಪಾರವನ್ನು ನಿಯಂತ್ರಿಸುವ ವ್ಯಾಪಾರಿ ಒಪ್ಪಂದವೂ ಅಸ್ತಿತ್ವಕ್ಕೆ ಬಂತು. ಎರಡನೇ ಮಹಾಯುದ್ಧದ ನಂತರ ಬಹಳಷ್ಟು ವಸಾಹತುಗಳು ಮೇಲ್ನೋಟಕ್ಕೆ ಸ್ವಾತಂತ್ರ್ಯ ಗಳಿಸಿಕೊಂಡವು. ಆದರೆ ವಾಸ್ತವಿಕವಾಗಿ ಪ್ರತ್ಯಕ್ಷವಾಗಿ ರಾಜಕೀಯ ಸ್ವಾತಂತ್ರ್ಯ ಪಡೆದರೂ ಅಪ್ರತ್ಯಕ್ಷವಾಗಿ ಯೂರೋಕೇಂದ್ರಿತ, ಅಮೆರಿಕ ನಿಯಂತ್ರಿತ ಅಭಿವೃದ್ದಿ ಮಾದರಿಯನ್ನು ಅನುಸರಿಸುವ ಮೂಲಕ ಅಪರೋಕ್ಷ ಆಳ್ವಿಕೆಗೆ ಒಳಗಾದವು. ದ್ವಿತೀಯ ಯುದ್ಧಾನಂತರದಲ್ಲಿ ಅಮೆರಿಕ ನಿಯಂತ್ರಿತ ಬಂಡವಾಳ ಕೇಂದ್ರಿತ ಉತ್ಪಾದನಾ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಬ್ಯಾಂಕ್, ವ್ಯಾಪಾರ ಒಡಂಬಡಿಕೆ ಮತ್ತು ವಿಶ್ವಸಂಸ್ಥೆಯ ಮೂಲಕ ಯೋಜಿತವಾದ ರೀತಿಯಲ್ಲಿ ಜಗತ್ತಿನಾದ್ಯಂತ ಬೆಳೆಸಲಾಯಿತು. ಈ ಅವಧಿಯಲ್ಲಿ ನೇರವಾಗಿ ಯುದ್ಧಗಳು ಸಂಭವಿಸದೇ ಹೋದರೂ ನಿರಂತರವಾಗಿ ಅಮೆರಿಕಾ ಮತ್ತು ಸೋವಿಯತ್ ಒಕ್ಕೂಟದ ನಡುವೆ ಶೀತಲ ಸಮರ ಮುಸುಕಿನೊಳಗಿನ ಗುದ್ದಾಟದಂತೆ ಮುಂದುವರಿದುಕೊಂಡು ಬಂದಿತು. ಎರಡೂ ಪ್ರಮುಖ ಆರ್ಥಿಕ ಶಕ್ತಿಗಳು ತಮ್ಮ ಬಲವರ್ಧನೆಗೆ ಪ್ರಯತ್ನಿಸುತ್ತಾ ಬಂದರೂ ೧೯೭೦ರ ನಂತರದ ದಿನಗಳಲ್ಲಿ ಅಮೆರಿಕಾ ತನ್ನ ಹಿಡಿತವನ್ನು ಬಲಗೊಳಿಸಿತು. ಸೋವಿಯತ್ ಒಕ್ಕೂಟದಲ್ಲಿ ಬಿರುಕುಂಟಾಗಿ ಅದರ ತೆಕ್ಕೆಯಿಂದ ಕೆಲವೊಂದು ಪ್ರದೇಶಗಳು ಸ್ವತಂತ್ರವಾದುವು. ಒಕ್ಕೂಟದೊಳಗೆ ಹಲವು ರೀತಿಯ ಗೊಂದಲಗಳು ತೊಂದರೆಗಳು ಕಾಣಿಸಿಕೊಂಡವು. ಬದಲಾವಣೆಗೆ ಅನಿವಾರ್ಯವಾಯಿತೋ ಅಥವಾ ಗೋರ್ಬಚೇವ್ ಅವರಿಗೆ ಆಕರ್ಷಣೀಯವಾಗಿ ಕಂಡಿತೋ ಅಂತೂ ಸೋವಿಯತ್ ಒಕ್ಕೂಟದಲ್ಲಿ ಬೀಸಿದ ಬದಲಾವಣೆಯ ಗಾಳಿ ಶೀತಲ ಸಮರಕ್ಕೆ ಮಂಗಳ ಹಾಡಿತು. ಈ ವೇಳೆಗೆ ಬ್ರಿಟನ್‌ನಲ್ಲಿ ಅಂದಿನ ಪ್ರಧಾನಿಯಾಗಿದ್ದ ಮಾರ್ಗರೇಟ್ ಥ್ಯಾಚರ್ ಅವರ ಹೊಸ ಆರ್ಥಿಕ ನೀತಿ, ಉದಾರೀಕರಣ ಬಹಳ ವೇಗದಲ್ಲಿ ವಿಶ್ವಾದಾದ್ಯಂತ ಪ್ರಸರಿಸಲಾರಂಭಿಸಿತು. ಅಮೆರಿಕದಲ್ಲಿ ರೊನಾಲ್ಡ್ ರೇಗನ್‌ರವರ ಮುಂದಾಳತ್ವದಲ್ಲಿ ಹೊಸ ರೀತಿಯ ಬದಲಾವಣೆಯನ್ನು ಪ್ರೊತ್ಸಾಹಿಸಲಾಯಿತು. ಇದರ ಪರಿಣಾಮವಾಗಿ ಹೊಸ ತಂತ್ರಜ್ಞಾನದ ಅನ್ವೇಷಣೆಗಳಾದುವು. ಪ್ರಮುಖವಾಗಿ ಮಾಹಿತಿ ತಂತ್ರಜ್ಞಾನದಲ್ಲಿ ಉಂಟಾದ ಕ್ರಾಂತಿಯ ಪರಿಣಾಮ ದೇಶ, ಕಾಲದ ಎಲ್ಲೆಗಳನ್ನು ಮೀರಿ ಬೆಳೆಯಲಾರಂಭಿಸಿದಾಗ, ಒಂದು ರೀತಿಯ ಅವ್ಯಕ್ತ ಬದಲಾವಣೆ ಎಲ್ಲಾ ದೇಶಗಳಲ್ಲಿ ಮತ್ತು ಎಲ್ಲಾ ರಂಗಗಳಲ್ಲಿ ಕಾಣಲಾರಂಭಿಸಿತು. ಇಂತಹ ತಂತ್ರಜ್ಞಾನಗಳನ್ನು ಅಭಿವೃದ್ದಿಪಡಿಸಿದ ಮುಂದುವರಿದ ರಾಷ್ಟ್ರಗಳಿಗೆ ಇದರಿಂದ ಹೊಸ ರೀತಿಯಲ್ಲಿ ಮಿಕ್ಕುಳಿದ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಸಾಧನಗಳು ದೊರೆತಂತಾಯಿತು. ಹೀಗೆ ಬದಲಾದ ತಂತ್ರಜ್ಞಾನ, ರಾಜಕೀಯ ಪರಿಸ್ಥಿತಿ ಮತ್ತು ಜಗತ್ತಿನ ಬಹುಪಾಲು ದೇಶಗಳಲ್ಲಿ ಆಧುನಿಕತೆಯ ಪ್ರಸರಣಕ್ಕೆ ಅವಶ್ಯಕವಾಗಿರುವ ಸಾಂಸ್ಥಿಕ ವ್ಯವಸ್ಥೆಯ ಬೆಳವಣಿಗೆ ಜಾಗತೀಕರಣ ಪ್ರಕ್ರಿಯೆಗೆ ಯೋಗ್ಯ ಭೂಮಿಕೆಯನ್ನು ಒದಗಿಸಿಕೊಟ್ಟಿತು. ಹಾಗಾಗಿ ಜಾಗತೀಕರಣ ಎನ್ನುವುದನ್ನು ಈ ಮೊದಲು ಉಲ್ಲೇಖಿಸಿದ ಐದು ಹಂತಗಳಲ್ಲಿ ಮುಂದುವರಿದುಕೊಂಡು ಬಂದ ವ್ಯವಸ್ಥೆಯ ಒಂದು ತಾರ್ಕಿಕ ವಿಸ್ತರಣೆಯೆಂದು ಹೇಳಬಹುದಾಗಿದೆ. ಇಂತಹ ತಾರ್ಕಿಕ ವಿಸ್ತರಣೆಯ ವೇಗ ಮತ್ತು ಗತಿ ಹಿಂದಿನ ವೇಗ ಮತ್ತು ಗತಿಗಳಿಗೆ ಹೋಲಿಸಿದರೆ ಬಹಳ ತೀವ್ರಗತಿಯಲ್ಲಿ ಆಗಿರುವ ಕಾರಣ ಮತ್ತು ಇಲ್ಲಿ ಬಳಕೆಯಾಗುತ್ತಿರುವ ತಂತ್ರಜ್ಞಾನದ ಸ್ವಭಾವದ ಕಾರಣದಿಂದಾಗಿ ಹಾಗೂ ಬದಲಾವಣೆಗಳು ಅವ್ಯಕ್ತ ರೂಪದಲ್ಲಿರುವ ಕಾರಣ, ಇದನ್ನು ಜನ ಸಾಮಾನ್ಯರ ತಿಳುವಳಿಕೆಗೆ ದಕ್ಕುವ ರೀತಿಯಲ್ಲಿ ಸರಳೀಕರಿಸಿ ಹೇಳುವುದು ಬಹಳ ತ್ರಾಸದಾಯಕ ಕೆಲಸವೆಂದೇ ಭಾವಿಸಬಹುದು. ಮಾತ್ರವಲ್ಲ ಜಾಗತೀಕರಣದ ಪ್ರಕ್ರಿಯೆಯಲ್ಲಿ ಬಹಳಷ್ಟು ಸಂಗತಿಗಳು ಏಕಕಾಲಕ್ಕೆ ಕಾರ್ಯ ಪ್ರವೃತ್ತವಾಗುವ ಕಾರಣದಿಂದಾಗಿ ಇಡೀ ಈ ಪ್ರಕ್ರಿಯೆ ತೀವ್ರ ಜಟಿಲವಾದ ವಿಷಯವಾಗಿ ನಮಗೆ ಗೋಚರವಾಗುತ್ತದೆ. ಕಳೆದ ಮೂರು ನಾಲ್ಕು ದಶಕಗಳ ಹಿಂದಿನವರೆಗೂ ಅಂದರೆ ೧೯೮೦ರವರೆಗೂ ಉತ್ಪಾದನಾ ವ್ಯವಸ್ಥೆ, ವ್ಯಾಪಾರ, ಬಂಡವಾಳ ಸಂಚಯನ, ಮಾರುಕಟ್ಟೆ ವಿಸ್ತರಣೆ, ಎಲ್ಲವೂ (ಒಂದು ಭೌಗೋಳಿಕ ಪರಿಧಿಯೊಳಗೆ) ಒಂದು ದೇಶದ ಗಡಿಗಳೊಳಗೆ, ಒಂದು ರಾಜಕೀಯ ಸಾಂಸ್ಥಿಕ ವ್ಯವಸ್ಥೆಯೊಳಗೆ, ಆ ದೇಶದ ಸಾರ್ವಭೌಮತೆ ಮತ್ತು ಶಾಸನಾತ್ಮಕ ವಿಧಿ ವಿಧಾನಗಳಿಗೆ ಅನುಸಾರವಾಗಿ ನಡೆಯುತ್ತಿತ್ತು. ದೇಶದ ಗಡಿಗಳಾಚೆಗೆ ಬಂಡವಾಳದ ವಿಸ್ತರಣೆ, ವ್ಯಾಪಾರ, ಮಾರುಕಟ್ಟೆ ವಿಸ್ತರಣೆ, ವ್ಯಾಪಾರ ಒಪ್ಪಂದ, ಉತ್ಪಾದನಾ ಚಟುವಟಿಕೆಗಳಿಗೆ ಬಹಳಷ್ಟು ಕಟ್ಟುಪಾಡುಗಳನ್ನು ದೇಶದ ಸರಕಾರಗಳು ಹೇರುತ್ತಿದ್ದವು. ಅಂದರೆ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಒಂದು ದೇಶದ ಸಾರ್ವಭೌಮತೆಗೆ ಅನುಸಾರವಾಗಿ ನಡೆಯುತ್ತಿತ್ತು. ಆದರೆ ೧೯೭೫-೮೦ರ ನಂತರ ಇಂತಹ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿರು ವುದನ್ನು ಅಥವಾ ಅಂತಹ ಬದಲಾವಣೆ ಬಹಳ ತೀವ್ರಗತಿಯಲ್ಲಿ ಆಗಿರುವುದನ್ನು ನಾವು ಗಮನಿಸಬಹುದು. ತಂತ್ರಜ್ಞಾನ, ವ್ಯಾಪಾರ ಒಪ್ಪಂದಗಳಲ್ಲಿ ಬದಲಾವಣೆ ಮತ್ತು ಅಂಥ ಹಣಕಾಸು ಸಂಸ್ಥೆಗಳು ದೇಶೀಯ ಸರಕಾರಗಳ ಮೇಲೆ ಸಾಲ ಪಡೆಯುವಾಗ ಹೇರಿದ್ದ ಶರತ್ತುಗಳು, ಹೀಗೆ ಈ ಎಲ್ಲದರ ಪರಿಣಾಮವಾಗಿ ಇಂದು ಈ ಮೊದಲು ಉಲ್ಲೇಖಿಸಿದ ಪ್ರಮುಖ ಚಟುವಟಿಕೆಗಳು ದೇಶದ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ನಡೆಯುತ್ತ ಓಟಕಿತ್ತಿವೆ. ಒಂದು ಅರ್ಥದಲ್ಲಿ ಇಡೀ ಉತ್ಪಾದನಾ ವ್ಯವಸ್ಥೆ ಅಥವಾ ಅರ್ಥವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಹೊಸ ರೂಪದಲ್ಲಿ ಸಂಘಟಿತವಾಗುತ್ತಿವೆ. ಮತ್ತು ಈ ಹೊಸ ಬೆಳವಣಿಗೆಯನ್ನು ಜಾಗತೀಕರಣ ಎಂದು ಕರೆಯಲಾಗುತ್ತದೆ. ಈ ಹೊಸ ಬೆಳವಣಿಗೆಗೆ ಹಲವಾರು ಆಯಾಮಗಳಿರುವ ಕಾರಣ ಇದನ್ನು ಮರುನಿರೂಪಿಸುವ ವ್ಯಾಖ್ಯಾನಿಸುವ ಕೆಲಸ ಬಹಳ ತ್ರಾಸದಾಯಕವಾದದ್ದೇ ಆಗಿದೆ.

ಜಾಗತೀಕರಣವನ್ನು ಬಹಳಷ್ಟು ಪಂಡಿತರು ವ್ಯಾಖ್ಯಾನಿಸಿದ್ದಾರೆ. ಇವುಗಳಲ್ಲಿ ಕೆಲವೊಂದು ವ್ಯಾಖ್ಯಾನಗಳನ್ನು ಗಮನಿಸಿ, ಅದರ ವಿವಿಧ ಆಯಾಮಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ಲೇಖನದ ಮುಂದಿನ ಭಾಗದಲ್ಲಿ ನಡೆಸಲಾಗಿದೆ.

ಜಾಗತೀಕರಣದ ಪರಿಕಲ್ಪನೆ

ಆ್ಯಂಟನಿ ಗಿಡ್ಡನ್ಸ್ ಅವರ ಪ್ರಕಾರ ಜಾಗತೀಕರಣವೆಂದರೆ ಜಾಗತಿಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ಸಾಮಾಜಿಕ ಸಂಬಂಧಗಳು ಮತ್ತು ಇಂತಹ ಬೆಳವಣಿಗೆಯ ಕಾರಣ ದಿಂದ ಸ್ಥಳೀಯ ಸಂದರ್ಭಗಳು ಘಟನೆಗಳೂ ಕೂಡಾ ಜಗತ್ತಿನ ಯಾವುದೋ ಮೂಲೆ ಯಲ್ಲಿ ನಡೆಯುವ ಘಟನೆಗಳಿಂದ ದಟ್ಟವಾದ ಪ್ರಭಾವಕ್ಕೆ ಒಳಗಾಗುತ್ತಿರುವ ವಿದ್ಯಮಾನ ವಾಗಿದೆ. ಇನ್ನೊಂದು ಸಂದರ್ಭದಲ್ಲಿ ಗಿಡ್ಡನ್ಸ್ ಜಾಗತೀಕರಣದ ಬಗ್ಗೆ ವಿವರಿಸುತ್ತಾ ಇದು ಕಾಲ ಮತ್ತು ಕ್ಷೇತ್ರಗಳನ್ನು ಕಳಚಿಕೊಂಡು, ಮಾಹಿತಿ ತಂತ್ರಜ್ಞಾನದ ಮೂಲಕ ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ಜ್ಞಾನ ಮತ್ತು ಸಂಸ್ಕೃತಿಯನ್ನು ಎಲ್ಲಾ ಬಳಕೆದಾರರು ಏಕಕಾಲದಲ್ಲಿ ಬಳಸಬಹುದಾದಂತಹ ಒಂದು ಸಂದರ್ಭವೆಂದು ಹೇಳುತ್ತಾರೆ.

ಪ್ರೇಡ್ರಿಕ್ ಜೇಮ್ಸ್‌ನ್‌ರವರ ಪ್ರಕಾರ ಜಾಗತೀಕರಣವೆನ್ನುವುದು ಜಾಗತಿಕ ಸಂವಹನ ಮತ್ತು ಮಾರುಕಟ್ಟೆಯ ದಿಗಂತಗಳ ಅಪರಿಮಿತ ವಿಸ್ತರಣೆ ಮತ್ತು ಈ ಎರಡು ಅಂಶಗಳು ಆಧುನಿಕ ಜಗತ್ತಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವ್ಯಕ್ತವಾಗಿ ನಮಗೆ ಹತ್ತಿರವಾಗಿರುವಂತಹ ಒಂದು ವಸ್ತುಸ್ಥಿತಿಯಾಗಿದೆ.

ರಡ್ ಲಬ್ಬರ್ಸ್‌ರವರ ಪ್ರಕಾರ ದೇಶದ ಗಡಿಯಾಚೆಗೂ ನಡೆಯುವ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಮಾಜಿಕ ಸಂಬಂಧಗಳ ನಿರ್ವಚನೆ ಮತ್ತು ನಿರ್ವಚನೆಯ ವಿಷಯದಲ್ಲಿ, ಭೌಗೋಳಿಕ ಮಿತಿಗಳು ಮಹತ್ವ ಕಳಕೊಳ್ಳುತ್ತಿರುವ ಸಂದರ್ಭವಾಗಿದೆ.

ಎಡಪಂಥೀಯ ಚಿಂತಕರು ಹೇಳುವ ಪ್ರಕಾರ ಯಾವುದೇ ದೇಶ, ಸರಕಾರ ಜನರಿಗೆ ಯಾವ ಭಾದ್ಯತೆಯನ್ನು ಹೊಂದಿಲ್ಲದಿರುವ ಬಹುರಾಷ್ಟ್ರೀಯ ಸಂಸ್ಥೆಗಳು (ವ್ಯಾಪಾರ ಮತ್ತು ಹಣಕಾಸು) ಜಾಗತಿಕ ಅರ್ಥವ್ಯವಸ್ಥೆಯ ಮೇಲೆ ಸಾಧಿಸುತ್ತಿರುವ ಬಿಗಿ ಹಿಡಿತವಾಗಿದೆ. ಇಂತಹ ಒಂದು ಪ್ರಮುಖ ಬೆಳವಣಿಗೆಗೆ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಸೋವಿಯತ್ ರಷ್ಯಾ ದುರ್ಬಲವಾಗಿರುವುದೇ ಪ್ರಮುಖ ಕಾರಣವಾಗಿದೆ.

ಡೇವಿಡ್ ಹೆಲ್ಡ್ ಅವರು ಹೇಳುವಂತ ಜಾಗತೀಕರಣವೆನ್ನುವುದು ಕಳೆದ ೨೫ ವರ್ಷ ಗಳಿಂದ ಬಹುಚರ್ಚೆಗೆ ಒಳಗಾಗಿರುವ ಸಂಗತಿಯಾಗಿದೆ. ಆದರೆ ಇದರ ವ್ಯಾಖ್ಯಾನ ಬಹಳ ಜಟಿಲವಾದಂತಹ ಸಂಗತಿಯಾಗಿದೆ. ಬಹುಮುಖ ಅಯಾಮಗಳಿರುವ ಈ ವಿಷಯವು ಪರಸ್ಪರ ಪೂರಕ ಮತ್ತು ಪರಸ್ಪರ ವಿರುದ್ಧವೆಂದು ಕಂಡುಬರುವಂತಹ ಒಂದು ಸಂಕೀರ್ಣ ಸಂಗತಿಯಾಗಿದೆ. ಇದರಲ್ಲಿ ಆರ್ಥಿಕ, ರಾಜಕೀಯ, ತಾಂತ್ರಿಕ, ಸಾಂಸ್ಕೃತಿಕ ಮತ್ತು ಪರಿಸರ ಸಂಬಂಧೀ ವಿಷಯಗಳೂ ಸೇರಿಕೊಂಡಿವೆ. ಆ್ಯಂಟನಿ ಗಿಡ್ಡನ್ಸ್ ಅವರ ವ್ಯಾಖ್ಯಾನವನ್ನು ಹೋಲುವ ವಿವರಣೆಯನ್ನು ಡೇವಿಡ್ ಹೆಲ್ಡ್ ಅವರೂ ಕೂಡ ನೀಡುತ್ತಾರೆ.

ಸಮಾಜ ವಿಜ್ಞಾನಿಗಳು ನಿರೂಪಿಸಲು ಯತ್ನಿಸಿದ ‘ಜಾಗತೀಕರಣ’ ಸಮಗ್ರ ಸ್ಥಿತಿಯಲ್ಲಿ ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಅನುಭವಕ್ಕೆ ಬರಲಾರದು. ಆದಾಗ್ಯೂ ಈ ವ್ಯಾಖ್ಯಾನಗಳ ಪಠ್ಯ ಮತ್ತು ಈ ಪಠ್ಯಗಳು ನಿರೂಪಿತವಾಗಿರುವ ಸಾಮಾಜಿಕ ಹಿನ್ನೆಲೆ ಮತ್ತು ಚೌಕಟ್ಟನ್ನು ಗಮನಿಸಿದರೆ ಜಾಗತೀಕರಣ ಕುರಿತ ಕೆಲವೊಂದು ಪ್ರಮುಖ ಲಕ್ಷಣಗಳನ್ನು ಈ ಕೆಳಗಿನಂತೆ ಗುರುತಿಸಬಹುದು.

. ವಿಸ್ತೃತಗೊಳ್ಳುತ್ತಿರುವ ಸಾಮಾಜಿಕ ಸಂಬಂಧಗಳು

ಇಲ್ಲಿಯವರೆಗೆ ದೇಶದ ಅಥವಾ ಪ್ರದೇಶದ ಅಥವಾ ಒಂದು ಭೌಗೋಳಿಕ ವ್ಯಾಪ್ತಿಯಲ್ಲಿ ಮಾತ್ರ ಜೋಡಣೆಯಾಗುತ್ತಿದ್ದ ಸಾಮಾಜಿಕ ಸಂಬಂಧಗಳು ದೇಶ, ಪ್ರದೇಶ, ಭಾಷೆಯ ಎಲ್ಲೆಗಳನ್ನು ಮೀರಿ ಜಗತ್ತಿನಾದ್ಯಂತ ವಿಸ್ತಾರಗೊಳ್ಳುತ್ತಿದೆ. ಅಂದರೆ ಯಾವುದೇ ಒಂದು ನೆಲೆಯಲ್ಲಿ ಸಂಘಟಿತವಾಗುವ ಅಥವಾ ಘಟಿತವಾಗುವ ಸಾಮಾಜಿಕ ಸಂಬಂಧಗಳು ಜಾಗತಿಕ ಮಟ್ಟದಲ್ಲಿ ಕಾರ್ಯಾಚರಿಸುವುದು ಸಾಧ್ಯವಿದೆ. ಇದು ಉದ್ಯೋಗದ ವಿಷಯದಲ್ಲಿ, ಸಂಸ್ಕೃತಿಯ ವಿಚಾರದಲ್ಲಿ, ಶಿಕ್ಷಣದ ವಿಷಯದಲ್ಲಿ, ರಾಜಕೀಯದ ವಿಷಯದಲ್ಲಿ ಅಥವಾ ಧರ್ಮದ ವಿಚಾರದಲ್ಲಿ ಅಷ್ಟೇ ಏಕೆ ಭಯೋತ್ಪಾದಕ ಸಂಘಟನೆಗಳ ವಿಷಯದಲ್ಲಿಯೂ ಅನ್ವಯಿಸುವ ವಿಷಯವಾಗಿದೆ.

. ತೀವ್ರಗೊಳ್ಳುತ್ತಿರುವ ಪ್ರವಹನ ಕ್ರಿಯೆ

ಇಲ್ಲಿ ಪ್ರವಹನವೆಂದರೆ ಹರಿಯುವಿಕೆ ಅಥವಾ ಆಂಗ್ಲಭಾಷೆಯ ಹರಿಯುವಿಕೆ, ಸಾಂದ್ರವಾಗಿರುವ ಪ್ರವಾಹ ಎನ್ನುವ ಅರ್ಥದಲ್ಲಿ ಪರಿಭಾವಿಸಬಹುದಾಗಿದೆ. ಇಂದು ಮೇಲೆ ಉಲ್ಲೇಖಿಸಿದ ವಿಸ್ತೃತಗೊಳ್ಳುತ್ತಿರುವ ಸಾಮಾಜಿಕ ಸಂಬಂಧವನ್ನು ತೀವ್ರಗೊಳಿ ಸುತ್ತಿರುವ ದಿಸೆಯಲ್ಲಿ ಕೆಲಸ ಮಾಡುತ್ತಿರುವುದೇ ಈ ಪ್ರವಹನ ಕ್ರಿಯೆ. ಅಂದರೆ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಆಸಕ್ತಿಯ ಕೇಂದ್ರಗಳನ್ನು ಹೆಣೆಯುವ ಸಂಬಂಧ ಜಾಲದಲ್ಲಿ ಪ್ರವಹಿಸುವ ಮಾಹಿತಿ ಈ ಸಂಬಂಧಗಳನ್ನು ವೃದ್ದಿಸುವ ಅಥವಾ ಕ್ಷಯಿಸುವ ಕೆಲಸವನ್ನು ಮಾಡುತ್ತದೆ. ಹಿಂದಿನ ದಿನಗಳಿಗೆ ಹೋಲಿಸಿದಲ್ಲಿ ಪ್ರಸ್ತುತ ಮಾಹಿತಿ ತಂತ್ರಜ್ಞಾನ ಮತ್ತು ಬಂಡವಾಳ ಸಂಚಲನ ವಿಧಾನಗಳಲ್ಲಿ ಆಗಿರುವ ಬದಲಾವಣೆಗಳ ಕಾರಣದಿಂದಾಗಿ ಅವುಗಳ ಹರಿಯುವಿಕೆ ಬಹಳ ರಭಸ ಪಡೆದುಕೊಂಡಿದೆ. ಇದು ರಭಸ ಮಾತ್ರವಲ್ಲ. ಒಂದು ರೀತಿಯಲ್ಲಿ ಅವ್ಯಕ್ತವೂ ಆಗಿರುವುದರಿಂದ ಇದನ್ನು ಸರಕಾರ ಅಥವಾ ರಾಜ್ಯಾಂಗ ವ್ಯವಸ್ಥೆ ಬಹಳ ಸುಲಭದಲ್ಲಿ ನಿಯಂತ್ರಿಸಲು ಸಾಧ್ಯವಿಲ್ಲ. ಉದಾಹರಣೆಗೆ ಆಫಘಾನಿಸ್ಥಾನದ ಗುಹೆಯೊಂದರಲ್ಲಿ ಒಸಾಮಾಬಿನ್ ಲಾದೆನ್ ಮಾಡುವ ಭಾಷಣದ ವಿಡಿಯೋ ಟೇಪ್ ಯಾವುದೋ ಒಂದು ಟೀವಿ ಚಾನೆಲ್ ತಲುಪಿದರೆ ಕ್ಷಣಾರ್ಧದಲ್ಲಿ ಅದು ಜಗತ್ತಿನಾದ್ಯಂತ ಹರಡಿಬಿಡುತ್ತದೆ. ಹಾಗೆಯೇ ಭಾರತದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಒಬ್ಬ ಗ್ರಾಹಕ ಜಗತ್ತಿನ ಯಾವ ಭಾಗದಲ್ಲಾದರೂ ತನ್ನ ಖಾತೆಯಿಂದ ಹಣ ಪಡೆಯಬಹುದು. ಸಂವಹನದ ಸಾಮರ್ಥ್ಯ ಮತ್ತು ವೇಗ ತೀವ್ರಗೊಂಡಿರುವ ಕಾರಣದಿಂದ ಮಾಹಿತಿಯ ಪ್ರವಹನ ಹೆಚ್ಚು ವೇಗ ಪಡೆದುಕೊಂಡಿದೆ ಎಂದು ಹೇಳಬಹುದು.

. ಹೆಚ್ಚುತ್ತಿರುವ ಅಂತರ್ ಭೇದೀಕರಣ

ಜಾಗತೀಕರಣದ ಕಾಲಘಟ್ಟದಲ್ಲಿ ಈ ಮೊದಲು ವಿವರಿಸಲಾದ ಎರಡು ಪ್ರಮುಖ ಲಕ್ಷಣಗಳ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿನ ಬಹುಪಾಲು ಸಂಗತಿಗಳು ಸುಲಭವಾಗಿ ಮುಖಾಮುಖಿಯಾಗುವುದು ಸಾಧ್ಯವಾಗಿದೆ. ಇದು ಉದ್ಯೋಗವಿರಬಹುದು, ಆಹಾರ, ಸಂಗೀತ, ನೃತ್ಯ, ಕಲೆಯ ವಿಷಯ ಇರಬಹುದು ಅಥವಾ ಶಿಕ್ಷಣವಿರಬಹುದು. ಹೀಗೆ ಒಂದು ಪ್ರದೇಶದ ಕಲೆ, ಸಂಸ್ಕತಿ ಇನ್ನೊಂದರೊಂದಿಗೆ ಮುಖಾಮುಖಿಯಾದಾಗ ಒಂದು ಇನ್ನೊಂದನ್ನು ಪ್ರಭಾವಿಸುವ ಕೆಲಸವನ್ನು ಮಾಡುತ್ತವೆ. ಅದರಲ್ಲೂ ಮುಖ್ಯವಾಗಿ ಬಂಡವಾಳದ ಹರಿಯುವಿಕೆಯನ್ನು ಪ್ರೋ ಸಂಸ್ಕೃತಿಯಂತೂ ಮಿಕ್ಕುಳಿದ ಸಂಸ್ಕೃತಿಯನ್ನು ಭೇದಿಸುವುದು ಮಾತ್ರವಲ್ಲ. ಅದನ್ನು ಅಪೋಷಣ ತೆಗೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಈ ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲವೆಂದಲ್ಲ. ಹಿಂದೆ ಇಂತಹ ಪ್ರಭಾವ ದೀರ್ಘಾವಧಿಯಲ್ಲಿ ಆಗುತ್ತಿದ್ದುರಿಂದ ಇದೊಂದು ವಿಕಾಸ, ಬೆಳವಣಿಗೆ ಎಂದು ಪರಿಗಣಿತವಾಗುತ್ತಿತ್ತು. ಆದರೆ ಜಾಗತೀಕರಣದ ಸಮಯದಲ್ಲಿ ಇದರ ಪರಿಣಾಮ ಬಹಳ ವೇಗವಾಗಿ ಮತ್ತು ತೀವ್ರವಾಗಿ ಆಗುತ್ತಿರುವುದರಿಂದ ಇದನ್ನು ಬದಲಾವಣೆಯೆಂದು ಕರೆಯಲಾಗುತ್ತಿದೆ. ಇಂತಹ ಬದಲಾವಣೆ ಹೆಚ್ಚುತ್ತಿರುವ ಅಂತರ್ ಭೇದೀಕರಣದ ರೂಪದಲ್ಲಿ ನಡೆಯುತ್ತಿದೆ.

. ಜಾಗತಿಕ ಮೂಲಭೂತ ಸೌಕರ್ಯ

ಈ ಮೊದಲು ಉಲ್ಲೇಖಿಸಿದ ಗುಣಲಕ್ಷಣಗಳ ವಿಸ್ತರಣೆಯಾಗಿ ಈ ನಾಲ್ಕನೆಯ ಅಂಶವನ್ನು ನಾವು ಗಮನಿಸಬೇಕು. ಇಂದು ಬಂಡವಾಳ ಮತ್ತು ತಂತ್ರಜ್ಞಾನ ವಿಶ್ವದಾದ್ಯಂತ ತನ್ನ ಜಾಲವನ್ನು ವಿಸ್ತರಿಸಿಕೊಂಡಿರುವ ಕಾರಣದಿಂದ. ಈ ತಂತ್ರಜ್ಞಾನ ಮತ್ತು ಬಂಡವಾಳ ತನ್ನ ಚಲನೆಗೆ ಬೆಳವಣಿಗೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ದಿಪಡಿಸಲೇ ಬೇಕಾದ ಅನಿವಾರ್ಯತೆ ಇದೆ. ಒಂದು ಅರ್ಥದಲ್ಲಿ ಉತ್ಪಾದನಾ ವ್ಯವಸ್ಥೆಯೇ ಜಾಗತಿಕ ಮಟ್ಟದಲ್ಲಿ ಹೊಸ ಸ್ವರೂಪದಲ್ಲಿ ಮರುಸಂಘಟಿತ ವಾಗುತ್ತಿರುವುದರ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ದಿಯನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.

. ಸಾಮಾಜಿಕ ಸಂಬಂಧಗಳ ಮರುನಿರೂಪಣೆ

ಜಾಗತೀಕರಣದ ಕಾಲಘಟ್ಟದವರೆಗೆ ಒಂದು ದೇಶೀಯ ಗಡಿಯೊಳಗೆ ಕಾರ್ಯಾ ಚರಣೆ ನಡೆಸುತ್ತಿದ್ದ ಸಾಮಾಜಿಕ ವರ್ಗಗಳ ವಿಘಟನೆಯಾಗಿ ಅದು ಇಂದು ಜಾಗತಿಕ ಮಟ್ಟದಲ್ಲಿ ಮರು ಸಂಘಟಿತವಾಗುತ್ತಿದೆ. ಉದಾಹರಣೆಗೆ ಹಿಂದೆ ಒಂದು ವಸ್ತುವಿನ ಉತ್ಪಾದನೆಯನ್ನು ಯಾವುದೋ ಒಂದು ದೇಶದ ದೊಡ್ಡ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗು ತ್ತಿತ್ತು. ಆದರೆ ಈಗ ವಾಣಿಜ್ಯ ವ್ಯವಸ್ಥೆಯ ಸ್ವರೂಪವೇ ಬದಲಾಗಿದೆ. ಯುರೋಪಿನಲ್ಲಿ ಸಿದ್ಧಪಡಿಸುವ ಉಡುಗೆಯ ಮಾದರಿಯನ್ನು ಬಾಂಗ್ಲಾದೇಶದ ಸಿದ್ದ ಉಡುಪು ಘಟಕಗಳಲ್ಲಿ ಹೊಲಿಯಲಾಗುತ್ತಿದೆ. ಅಲ್ಲಿಗೆ ಬೇಕಾಗುವ ಬಟ್ಟೆಯನ್ನು ಭಾರತದ ಗಿರಣಿಗಳಿಂದ ಆಮದು ಮಾಡಲಾಗುತ್ತಿದ್ದರೆ, ಸಿದ್ಧಪಡಿಸಿದ ಬಟ್ಟೆಗಳು ಅಮೆರಿಕಾ ಮತ್ತು ಕೆನಡಾದ ಮಾಲ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಈ ಹಿಂದೆ ಇದ್ದ ಮಾಲಿಕರು ಕೆಲಸಗಾರರು ಎನ್ನುವ ವಿಭಜನೆ ಸಾಧ್ಯವಿಲ್ಲ. ಯಾಕೆಂದರೆ ಈಗ ಕೆಲಸಗಳು ಒಪ್ಪಂದ ಆಧಾರಿತವಾಗಿವೆ. ಒಂದು ಯೋಜನೆಯನ್ನು ಪೂರೈಸುವವರೆಗೆ ಮಾತ್ರ ಕೆಲಸ. ಆನಂತರ ಇನ್ನೊಂದು ಯೋಜನೆ ಬಂದರೆ ಮತ್ತು ಕೆಲಸಗಾರ ತೆಪ್ಪಗೆ ದುಡಿಯೋಕೆ ಸಾಧ್ಯವಿದ್ದರೆ ಮಾತ್ರ ಕೆಲಸ. ಹೀಗಾಗಿ ಉತ್ಪಾದನಾ ಚಟುವಟಿಕೆಯೇ ಮರು ಸಂಘಟಿತವಾಗುತ್ತಿದ್ದು ಇದನ್ನವಲಂಬಿಸಿದ ಸಾಮಾಜಿಕ ಸಂಬಂಧಗಳೂ ಕೂಡ ಮರು ನಿರೂಪಿತವಾಗಬೇಕಾಗಿದೆ. ಮತ್ತು ಅವು ಜಾಗತಿಕ ಮಟ್ಟದಲ್ಲಿ ಕಾರ್ಯಾಚರಿಸುವ ಸಾಮಾಜಿಕ ಸಂಬಂಧದ ಜಾಲದ ಆಧಾರದಲ್ಲಿ ಮರುನಿರೂಪಿತವಾಗುತ್ತವೆ.

ಸದ್ಯದ ಪರಿಸ್ಥಿತಿಯಲ್ಲಿ ಜಾಗತೀಕರಣದ ಕಾರಣದಿಂದ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಇದು ನಾವು ಇದುವರೆಗೆ ಅನುಸರಿಸಿಕೊಂಡು ಬಂದ ಅಭಿವೃದ್ದಿ ನೀತಿಗಳು ಅಥವಾ ಉತ್ಪಾದನಾ ವಿಧಾನಗಳು ಮತ್ತು ಅದನ್ನು ಅವಲಂಬಿಸಿ ನಿರ್ಮಾಣವಾಗಿದ್ದ ಸಾಂಸ್ಥಿಕ ಸ್ವರೂಪಗಳ ಮುಂದುವರಿದ ಭಾಗವಾಗಿದೆ ಎನ್ನಬಹುದು. ಈ ಹಿಂದೆಯೂ ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಸಂಬಂಧ, ವ್ಯಾಪಾರ, ಬಂಡವಾಳ ಮತ್ತು ಮಾಹಿತಿಯ ಪ್ರವಹಿಸುವಿಕೆ ಇತ್ತು. ಆದರೆ ಈ ಮೊದಲಿದ್ದ ಪ್ರವಹನದ ರೀತಿಗೂ ಜಾಗತೀಕರಣದ ಈ ಕಾಲಘಟ್ಟದಲ್ಲಿ ಇರುವ ನೀತಿಗೂ ಬಹಳಷ್ಟು ವ್ಯತ್ಯಾಸವಿದೆ. ಈ ಹಿಂದೆ ಭಾರತದಿಂದ ಜ್ಞಾನ ಮತ್ತು ಸರಕುಗಳು ಅರಬ್ ವ್ಯಾಪಾರಿಗಳ ಮೂಲಕ ಜಗತ್ತಿನ ಇತರೆಡೆಗೆ ಹರಿಯು ತ್ತಿತ್ತು ಯಾ ಪ್ರವಹಿಸುತ್ತಿತ್ತು. ಭಾರತೀಯ ಉಪಖಂಡದಲ್ಲಿ ಉತ್ಪಾದನೆಯಾಗುತ್ತಿದ್ದ ವೈವಿಧ್ಯಮಯ ಸಾಮಗ್ರಿಗಳು ಜಗತ್ತಿನ ಇತರ ದೇಶಗಳ ಜನರಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಅಲ್ಲದೇ ಭಾರತದಲ್ಲಿ ಇದ್ದ ಬೌದ್ದಿಕ ಸಂಪತ್ತು ಕೂಡಾ ಆಸಕ್ತಿಯ ಮುಖ್ಯ ವಿಷಯವಾಗಿತ್ತು. ಈ ಕುರಿತ ವಿವರಗಳನ್ನು ಅಮರ್ತ್ಸಸೆನ್ ಅವರು ತಮ್ಮ ಆರ್ಗ್ಯುಮೆಂಟೆಟಿವ್ ಇಂಡಿಯನ್ ಕೃತಿಯಲ್ಲಿ ಪ್ರಸ್ತಾಪಿಸುತ್ತಾರೆ. ಆದರೆ ಈಗ ಜಗತ್ತಿನ ವಿವಿಧೆಡೆ ಲಭ್ಯವಿರುವ ಎಲ್ಲಾ ರೀತಿಯ ವಸ್ತು ಯಾ ಸೇವೆಯನ್ನು ಕೊಳ್ಳುವ ಸಾಮರ್ಥ್ಯವಿರುವ ಬಳಕೆದಾರರು ಲಭ್ಯವಿರುವ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಕಾರಣದಿಂದಾಗಿ ಉಪಯೋಗಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಒಂದು ಪರಿಸ್ಥಿತಿಯಲ್ಲಿ ಇಡೀ ವ್ಯವಸ್ಥೆಯ ನಿಯಂತ್ರಣ ಎಲ್ಲಿ ಯಾರಿಂದ ಮತ್ತು ಹೇಗೆ ಆಗುತ್ತದೆ ಎನ್ನುವ ಗೊಂದಲದ ಸ್ಥಿತಿ ಇದೆ. ವಾಸ್ತವದಲ್ಲಿ ಸಂಪತ್ತಿನ ಮೇಲೆ, ಬಂಡವಾಳದ ಮೇಲೆ ನಿಯಂತ್ರಣ ಹೊಂದಿರುವ ಬಹುರಾಷ್ಟ್ರೀಯ ಕಂಪನಿಗಳು ಅಂತಾರಾಷ್ಟ್ರೀಯ ಸಂಸ್ಥೆಗಳ ಮೂಲಕ ಇಡೀ ಜಾಗತಿಕ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿದೆ. ಮೇಲ್ನೋಟಕ್ಕೆ ಕಾಣುವ ವಿಸ್ತಾರಗೊಳ್ಳುತ್ತಿರುವ ಆಯ್ಕೆಗಳು ನಿಜವಾಗಿಯೂ ಆಯ್ಕೆಗಳಲ್ಲಿ ಬದಲಾಗಿ, ಜಾಗತಿಕ ಮಟ್ಟದಲ್ಲಿ ಬಳಕೆದಾರರು ಒಂದು ನಿಶ್ಚಿತ ಉತ್ಪಾದನಾ ವ್ಯವಸ್ಥೆಯಿಂದ ಹೊರನಡೆಯದಂತೆ ತಡೆಹಿಡಿಯಲು ಬೀಸಿರುವ ನಾಜೂಕಾಗಿರುವ ಬಲೆಯಾಗಿದೆ. ಇಂತಹ ಒಂದು ಬೆಳವಣಿಗೆ ಪ್ರಮುಖವಾಗಿ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ವಿಷಯವಾಗಿದೆ. ಆದಾಗ್ಯೂ ಇದು ರಾಜಕೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗೆ ಹೇತುವಾಗಿದೆ. ಮುಂದಿನ ಭಾಗದಲ್ಲಿ ಈ ವಿಷಯಗಳ ಕುರಿತಂತೆ ಚರ್ಚಿಸಲಾಗಿದೆ.

ಜಾಗತೀಕರಣದ ಆರ್ಥಿಕ ಆಯಾಮಗಳು

ಜಾಗತೀಕರಣದ ಪ್ರಕ್ರಿಯೆಗಳನ್ನು ಗಮನಿಸಿದರೆ ಈ ಹಿಂದಿಗಿಂತ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಲಿಲ್ಲ ಅಥವಾ ಬಂಡವಾಳ ಮತ್ತು ತಂತ್ರಜ್ಞಾನದ ಪ್ರವಹನವನ್ನು ತೀವ್ರಗೊಳಿಸಿದ ಕ್ರಮಗಳಿಂದಾಗಿ ಜಡವಾಗಿದ್ದ ಉತ್ಪಾದನಾ ಪರಿಕರಗಳು ಬಹಳ ದೊಡ್ಡ ಮಟ್ಟದಲ್ಲಿ ಕ್ರಿಯಾಶೀಲವಾಗಿರುವಂತಹ ಪರಿಸ್ಥಿತಿ ಇಲ್ಲ. ಯಾವುದೇ ಒಂದು ಉತ್ಪಾದನಾ ಕ್ರಿಯೆಯಲ್ಲಿ ಜನ ಭಾಗಿಗಳಾಗಬೇಕಾದರೆ ಅವರಲ್ಲಿ ಸಂಪನ್ಮೂಲ ಇರಬೇಕಾಗುತ್ತದೆ. ಅದು ಬಂಡವಾಳವಿರಬಹುದು, ಮಾನವ ಸಂಪನ್ಮೂಲವಿರಬಹುದು, ಭೂಮಿ ಇರಬಹುದು ಅಥವಾ ಉದ್ಯಮಶೀಲತೆಯಿರಬಹುದು. ಆದರೆ ಇದು ಯಾವುದೂ ಇಲ್ಲದ ಅನಕ್ಷರಸ್ಥರು ಮತ್ತು ಬಡವರು ಉತ್ಪಾದನಾ ಕ್ರಿಯೆಯಲ್ಲಿ ಭಾಗವಹಿಸುವುದು ಸಾಧ್ಯವಿಲ್ಲ. ಆದರೆ ಉತ್ಪಾದನಾ ವ್ಯವಸ್ಥೆ ಅವರನ್ನು ತನಗೆ ಅನುಕೂಲಕರವಾದ ರೀತಿಯಲ್ಲಿ, ಅಗತ್ಯ ಸಂದರ್ಭಗಳಲ್ಲಿ ಬಳಸಿಕೊಳ್ಳುತ್ತದೆ. ಇಂತಹ ಜನವರ್ಗದ ಆಶೋತ್ತರಗಳನ್ನು ಹಿತ ಕಾಯುವ ಕೆಲಸವನ್ನು ಸರಕಾರಗಳು ಮಾಡಬೇಕಾಗುತ್ತದೆ. ೧೯೮೦ರ ದಶಕದವರೆಗೂ ಇಂತಹ ಒಂದು ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಆದರೆ ಜಾಗತೀಕರಣ ಪ್ರಕ್ರಿಯೆ ಆರಂಭವಾದ ನಂತರ ಯಾರು ಉತ್ಪಾದನಾ ವ್ಯವಸ್ಥೆಯಲ್ಲಿ ಭಾಗಿಯಾವುದಿಲ್ಲವೋ ಅಥವಾ ಅರ್ಥ ವ್ಯವಸ್ಥೆಯ ಅಂಚಿನಲ್ಲಿರುವ ಜನರಿದ್ದಾರೋ ಅಂಥವರನ್ನು ಉದ್ದೇಶಿಸಿ ಮತ್ತೊಂದು ರೀತಿಯ ಕಾರ್ಯಕ್ರಮಗಳನ್ನು ಆರಂಭಿಸಿಲಾಗಿದೆ. ಅದನ್ನು ಸರಕಾರೇತರ ಸಂಸ್ಥೆಗಳ ಅಥವಾ ಸೇವಾ ಸಂಸ್ಥೆಗಳ ಮೂಲಕ ಮತ್ತು ಸಹಕಾರಿ ತತ್ವಗಳ ಅನ್ವಯ ನಡೆಸಲು ಉದ್ದೇಶಿಸಲಾಗಿದೆ. ವಾಸ್ತವವಾಗಿ ಇದು ಉತ್ಪಾದನಾ ವ್ಯವಸ್ಥೆಯ ಮುಖ್ಯವಾಹಿನಿಗೆ ಪ್ರವೇಶವಿಲ್ಲದವರಿಗೆ ನಿರ್ಗಮನ ದಾರಿ ತೋರಿಸುವ ಕೆಲಸವನ್ನೇ ಮಾಡುತ್ತಿದೆ. ಅಂದರೆ ಉತ್ಪಾದನಾ ವಲಯ ಮಾರುಕಟ್ಟೆ ನೀತಿಯನ್ವಯ ಕಾರ್ಯ ನಿರ್ವಹಿಸುತ್ತಿದ್ದು ಅಂತಹ ವ್ಯವಸ್ಥೆಯಲ್ಲಿ ಯಾವ ವಸ್ತುವಿಗೆ ಬೇಡಿಕೆ ಇರುವುದಿಲ್ಲವೋ (ಅಂದರೆ ಅಗತ್ಯವಿರುವುದಿಲ್ಲವೋ) ಅದಕ್ಕೆ ಯಾವುದೇ ಮೌಲ್ಯವಿಲ್ಲ. ಇದಕ್ಕೆ ಮನುಷ್ಯ ಜೀವನವೂ ಹೊರತಾಗಿಲ್ಲ. ಇಲ್ಲಿ ನಾವು ಗಮನಿಸಬೇಕಾದದ್ದು, ಇಡೀ ವ್ಯವಸ್ಥೆಯಲ್ಲಿ ಜಾಗತೀಕರಣ ಪೂರ್ವದಲ್ಲಿ ಸಮಾಜಮುಖಿ, ಸಮುದಾಯ ಮುಖಿಯಾಗಿದ್ದ ನಮ್ಮ ಆರ್ಥಿಕ ನೀತಿಗಳು (ಅಥವಾ ನಮಗೆ ಹಾಗೆ ಕಾಣುತ್ತಿದ್ದ) ಇಂದು ಬಂಡವಾಳ ಯಾ ಸಂಪತ್ತಿನ ಕ್ರೂಢೀಕರಣದತ್ತ ಅರ್ಥಮುಖಿಯಾಗಿ ಹೊರಹೊಮ್ಮುತ್ತಿವೆ. ಈ ಒಂದು ಬೆಳವಣಿಗೆಯನ್ನು ಕೆಲವೊಂದು ಆರ್ಥಿಕ ಲಕ್ಷಣಗಳ ಮೂಲಕ, ಅಂತಾರಾಷ್ಟ್ರೀಯ ವಲಯದಲ್ಲಿ ನಡೆಯುತ್ತಿರುವ ವ್ಯಾಪಾರದ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ.

ಜಾಗತೀಕರಣದ ನಂತರದ ದಿನಗಳಲ್ಲಿಯೂ ಈ ಹಿಂದೆ ಇದ್ದ ಮುಂದುವರಿದ ದೇಶಗಳ ಆರ್ಥಿಕ ಯಜಮಾನಿಕೆ ಮುಂದುವರಿಯುತ್ತಿದೆ. ಯಾವುದೇ ಕಾರಣದಿಂದ ಮುಂದುವರಿದ ದೇಶಗಳ ಕೂಟವಾಗಿರುವ ಹೂಡಿಕಾ ಸಮುಚ್ಛಯ ಮತ್ತು ವ್ಯಾಪಾರೀ ಸಮುಚ್ಚಯದ ಹಿಡಿತ ಸಡಿಲವಾಗುವ ಸಾಧ್ಯತೆಗಳಂತೂ ಖಂಡಿತಾ ಇಲ್ಲ. ಈ ಸಂಬಂಧ ಉತ್ತರ ಅಮೆರಿಕಾ ಮುಕ್ತ ವ್ಯಾಪಾರ ಒಪ್ಪಂದ, ಯುರೋಪಿಯನ್ ಒಕ್ಕೂಟ ಮತ್ತು ಜಪಾನ್ ದೇಶಗಳು ವಿಶ್ವದ ಉತ್ಪಾದನೆಯಲ್ಲಿ ೭೫ ಭಾಗದಷ್ಟನ್ನು ಹೊಂದಿದ್ದರೆ ಉಳಿದ ಎಲ್ಲ ದೇಶಗಳ ಉತ್ಪಾದನೆ ಶೇಕಡಾ ೨೫ ಮಾತ್ರ. ಆದರೆ ವಿಶ್ವ ಜನಸಂಖ್ಯೆಯ ಶೇಕಡಾ ೧೫ರಷ್ಟು ಜನರಿರುವ ಈ ದೇಶಗಳು ವಿಶ್ವದ ಸಂಪತ್ತಿನ ಮುಕ್ಕಾಲು ಪಾಲನ್ನು ಹೊಂದಿದ್ದಾರೆ. ಮುಕ್ತ ಅರ್ಥವ್ಯವಸ್ಥೆ, ಮಾರುಕಟ್ಟೆಯ ನೀತಿಯನ್ನು ಪ್ರತಿಪಾದಿಸುವ ಈ ಅರ್ಥವ್ಯವಸ್ಥೆಗಳು ತಮ್ಮ ಅರ್ಥವ್ಯವಸ್ಥೆ ಬಡದೇಶಗಳ ನಿಲುಕುವಿಗೆ ಸಿಗದಂತಹ ರೀತಿಯಲ್ಲಿ ಸಂರಚಿಸಿಕೊಂಡು, ತಮ್ಮ ಹಿತಾಸಕ್ತಿಯ ಬಗ್ಗೆ ಕಾಳಜಿ ವಹಿಸಿದೆ. ಈ ಕಾರಣದಿಂದಾಗಿ ಈ ದೇಶಗಳಿಗೆ ಇತರ ದೇಶಗಳು ತಮ್ಮ ಉತ್ಪಾದನೆಯನ್ನು ರಫ್ತು ಮಾಡುವುದಾಗಲೀ ಅಥವಾ ಮುಂದುವರಿದ ಈ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಸ್ಪರ್ಧಿಸುವುದಾಗಲೀ ಸಾಧ್ಯವಾಗುತ್ತಿಲ್ಲ.

ವಿದೇಶಿ ಬಂಡವಾಳದ ಹರಿವಿನ ವಿಷಯದಲ್ಲಿ ಮುಂದುವರಿದ ರಾಷ್ಟ್ರಗಳ ಬಂಡವಾಳಗಳು ಕೂಡಾ ಮುಂದುವರಿದ ರಾಷ್ಟ್ರಗಳ ಹಿತಾಸಕ್ತಿಯನ್ನು ರಕ್ಷಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಅಭಿವೃದ್ದಿ ಶೀಲ ದೇಶಗಳಲ್ಲಿರುವ ಬಂಡವಾಳ ಕೂಡ ಅಭಿವೃದ್ದಿ ಹೊಂದಿರುವ ಶ್ರೀಮಂತ ದೇಶಗಳು ನಿಯಂತ್ರಿಸುವ ಬಂಡವಾಳ ಮಾರುಕಟ್ಟೆಯತ್ತ ಹರಿಯುತ್ತಿವೆ ಎಂದು ಹೇಳಿದರೂ ತಪ್ಪಾಗಲಾರದು. ಈ ಬಂಡವಾಳದ ಹರಿವು ವಿವಿಧ ರೂಪಗಳಲ್ಲಿ ನಡೆಯುತ್ತಿವೆ. ಅವುಗಳಲ್ಲಿ ಒಂದು ಅಭಿವೃದ್ದಿಶೀಲ ದೇಶಗಳ ವಾಣಿಜ್ಯ ಮತ್ತು ಉತ್ಪಾದನಾ ಸಂಸ್ಥೆಗಳು ಬಹುರಾಷ್ಟ್ರೀಯ ಕಂಪನಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ನಿಯಂತ್ರಣಕ್ಕೆ ಒಳಗಾಗುತ್ತಿರುವುದು. ಪ್ರತ್ಯಕ್ಷ ಎಂದರೆ ಕಂಪನಿಗಳನ್ನು ಖರೀದಿಸುವುದು ಅಥವಾ ನೇರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದು. ಅಪ್ರತ್ಯಕ್ಷವೆಂದರೆ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಲಾಭದ ಹಣವನ್ನು ಅಭಿವೃದ್ದಿಶೀಲ ದೇಶಗಳ ಬಂಡವಾಳ ಮಾರುಕಟ್ಟೆ (ಸ್ಟಾಕ್ ಎಕ್ಸ್‌ಚೇಂಜ್)ಯಲ್ಲಿ ಹೂಡಿಕೆ ಮಾಡುವ ಮೂಲಕ ಆ ದೇಶದ ಉದ್ಯಮ ವಲಯವನ್ನು ನಿಯಂತ್ರಿಸುವುದು. ಉದಾಹರಣೆಗೆ ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳ ಶೇರುಗಳನ್ನು ಖರೀದಿಸುವ ಮೂಲಕ ಈ ದೇಶದ ಕಂಪನಿಗಳನ್ನು ನಿಯಂತ್ರಿಸುವುದು. ಈ ಹಿಂದೆ ಈ ರೀತಿಯ ಹೂಡಿಕೆಗಳಿಗೆ ಬಹಳಷ್ಟು ನಿಯಂತ್ರಣವಿತ್ತು. ಹಾಗಾಗಿ ಒಂದು ಸೀಮಿತ ಪ್ರಮಾಣಕ್ಕಿಂತ ಇಲ್ಲಿ ವಿದೇಶಿ ಕಂಪನಿಗಳು ಹೂಡಿಕೆ ಮಾಡುವುದಾಗಲೀ ಹೂಡಿದ ಬಂಡವಾಳವನ್ನು ಹಿಂಪಡೆದು ಬೇರೆಡೆಗೆ ವರ್ಗಾಯಿಸುವುದಾಗಲೀ ಸುಲಭವಾಗಿರಲಿಲ್ಲ. ಆದರೆ ಈ ಹೊಸ ವ್ಯವಸ್ಥೆಗೆ ಅನುಕೂಲಕರವಾಗುವ ರೀತಿಯಲ್ಲಿ ಈಗ ಶಾಸನಗಳನ್ನು ಕಾನೂನುಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಲಾಗಿದೆ. ಉದಾಹರಣೆಗೆ ಈ ಹಿಂದೆ ಅಸ್ತಿತ್ವದಲ್ಲಿದ್ದ ಜನರಲ್ ಅಗ್ರಿಮೆಂಟ್ ಆನ್ ಟ್ರೇಡ್ ಅಂಡ್ ಟಾರಿಫ್ ಅಂದರೆ ವ್ಯಾಪಾರ ಮತ್ತು ಸುಂಕ ಪದ್ಧತಿಯ ಬಗೆಗಿನ ಸಾಮಾನ್ಯ ಒಪ್ಪಂದದ ಬದಲಿಗೆ ಈ ವಿಶ್ವವ್ಯಾಪಾರ ಒಪ್ಪಂದ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಈ ಸಂಸ್ಥೆ ಜಾಗತಿಕ ಮಟ್ಟದಲ್ಲಿ ದೇಶ, ದೇಶಗಳ ಮಧ್ಯೆ ವ್ಯಾಪಾರ ಯಾವ ರೀತಿ ನಡೆಯಬೇಕು, ಒಪ್ಪಂದದ ಶರತ್ತುಗಳು ಹೇಗಿರಬೇಕು, ಯಾಕಿರಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ಈ ಸಂಸ್ಥೆ ಒಂದನೆಯದಾಗಿ ದೇಶದ ಸರಕಾರಗಳು ವ್ಯಾಪಾರ ಸರಾಗವಾಗಿ ನಡೆಯಲು ಯಾವ ರೀತಿಯ ಕಾನೂನುಗಳನ್ನು ಮಾಡಬೇಕು ಎನ್ನುವುದನ್ನು ಟಿಪ್ಪಣಿ ನೀಡುತ್ತವೆ. ಅದರಂತೆಯೇ ಅಭಿವೃದ್ದಿಶೀಲ ದೇಶಗಳು ನಡೆದುಕೊಳ್ಳಬೇಕಾದ ಒತ್ತಡ ತಂತ್ರವನ್ನು ಅನುಸರಿಸುತ್ತವೆ. ಹಾಗಾಗಿ ಭಾರತವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ನಮ್ಮ ದೇಶದಲ್ಲಿನ ಕೈಗಾರಿಕಾ ನೀತಿ, ವಿದೇಶಿ ವಿನಿಮಯ ಮತ್ತು ವಿದೇಶಿ ಬಂಡವಾಳ ಹೂಡಿಕೆ ನೀತಿ, ನಮ್ಮ ವ್ಯಾಪಾರ ಒಪ್ಪಂದ, ಕಾರ್ಮಿಕ ಕಾನೂನು, ಎಲ್ಲವನ್ನು ಈ ಹಿನ್ನೆಲೆಯಲ್ಲಿ ಮರು ನಿರೂಪಿಸುವುದನ್ನು ನಾವು ಕಾಣಬಹುದು. ಈ ರೀತಿಯಲ್ಲಿ ಮರು ನಿರೂಪಿಸುವಾಗ ನಾವು ನಮ್ಮ ಹಿತಾಸಕ್ತಿಯನ್ನು ರಕ್ಷಿಸುವ ಸಂಪೂರ್ಣ ಅವಕಾಶದಿಂದ ವಂಚಿತರಾಗಿರುತ್ತೇವೆ. ವಿಶ್ವವ್ಯಾಪಾರ ಒಪ್ಪಂದ ಸಂಸ್ಥೆಯೊಳಗೆ ಇರುವ ವ್ಯಾಪಾರ ಮತ್ತು ಹೂಡಿಕೆ ಸಂಬಂಧಿ ಕ್ರಮಗಳು, ವ್ಯಾಪಾರಕ್ಕೆ ಸಂಬಂಧಿಸಿದ ಬೌದ್ದಿಕ ಆಸ್ತಿಯ ಹಕ್ಕುಗಳು ಜಾಗತೀಕರಣದ ಸಂದರ್ಭದಲ್ಲಿ ಮುಂದುವರಿದ ರಾಷ್ಟ್ರಗಳಿಗೆ ಬಹಳಷ್ಟು ಅಧಿಕಾರವನ್ನು ನೀಡುತ್ತವೆ. ಆದಾಗ್ಯೂ ಅಭಿವೃದ್ದಿ ಶೀಲ ರಾಷ್ಟ್ರಗಳು ತಮ್ಮದೇ ಗುಂಪು ಕಟ್ಟಿಕೊಂಡು ಒತ್ತಡ ತಂತ್ರವನ್ನು ನಿರ್ಮಿಸಿದರೆ ಕೆಲವೊಂದು ಸಲ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವ ಅವಕಾಶಗಳನ್ನು ನಿರ್ಮಿಸಿಕೊಳ್ಳಬಹುದು. ವಿಶ್ವವ್ಯಾಪಾರ ಒಪ್ಪಂದ ಸಂಘಟನೆಯಲ್ಲಿ ಕೃಷಿ ಕ್ಷೇತ್ರದ ವ್ಯಾಪಾರೀ ನೀತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಮಾತುಕತೆಗಳಲ್ಲಿ ಭಾರತದ ಮತ್ತು ದಕ್ಷಿಣ ಅಮೆರಿಕಾದ ದೇಶಗಳು ಅನುಸರಿಸುತ್ತಿರುವ ಒತ್ತಡ ತಂತ್ರಗಳನ್ನು ಇಲ್ಲಿ ಸ್ಮರಿಸಬಹುದು.

ಈ ಮೊದಲು ಉಲ್ಲೇಖಿಸಿದಂತೆ ಜಾಗತೀಕರಣದಲ್ಲಿ ಬಂಡವಾಳ ಮತ್ತು ತಂತ್ರಜ್ಞಾನದ ಪ್ರವಹಿಸುವಿಕೆ ಸುಲಭವಾಗಿರುವ ಕಾರಣ ಉತ್ಪಾದನಾ ವ್ಯವಸ್ಥೆಯೂ ಪುನರ್ ಸಂಘಟಿತ ವಾಗುತ್ತಿರುವುದನ್ನು ಕಾಣಬಹುದಾಗಿದೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಪ್ರದೇಶಗಳು ಕೆಲವೊಂದು ರೀತಿಯ ಉತ್ಪಾದನಾ ಸಾಮರ್ಥ್ಯದಲ್ಲಿ ಪ್ರಾವೀಣ್ಯವನ್ನು ಅಥವಾ ವಿಶೇಷ ಪರಿಣತಿಯನ್ನು ದುಡಿಸಿಕೊಳ್ಳುವ ಮೂಲಕ ಉತ್ಪಾದನಾ ಸಾಮರ್ಥ್ಯವನ್ನು ವೃದ್ದಿಸಿಕೊಂಡಿವೆ. ಉದಾಹರಣೆಗೆ ನಮ್ಮದೇಶದಲ್ಲಿ ಮಾಹಿತಿ ತಂತ್ರಜ್ಞಾನದಂತಹ ಜ್ಞಾನ ಆಧಾರಿತ ಮತ್ತು ಚಿನ್ನಾಭರಣ, ಜವುಳಿ ಉದ್ಯಮ, ಜೈವಿಕ ತಂತ್ರಜ್ಞಾನದಂತಹ ಕ್ಷೇತ್ರಗಳು ಬಹಳ ದೊಡ್ಡ ರೀತಿಯಲ್ಲಿ ಬೆಳೆದಿವೆ ಎಂದು ಹೇಳಬಹುದು. ಆದರೆ ಅಂತಹ ಸಂಪತ್ತು ಕೆಲವೇ ಕಡೆ ಕೇಂದ್ರಿಕೃತವಾಗಿದೆ. ಅಂತಹ ಕೇಂದ್ರಗಳು ತಮ್ಮನ್ನು ಮುಂದುವರಿದ ದೇಶಗಳ ಮಾರುಕಟ್ಟೆಗೆ ಸಂಪರ್ಕಿಸಿಕೊಳ್ಳುತ್ತವೆಯೇ ಹೊರತು ದೇಶೀಯ ಅರ್ಥವ್ಯವಸ್ಥೆಯೊಂದಿಗೆ ಸಂಪರ್ಕಿಸಿಕೊಳ್ಳುತ್ತಿಲ್ಲ. ದೇಶೀಯ ಅರ್ಥವ್ಯವಸ್ಥೆಯಲ್ಲಿ ಉತ್ಪಾದನೆಗೆ ಬೇಕಾಗುವ ಪರಿಕರಗಳನ್ನು ಅತೀ ಸುಲಭದ ದರದಲ್ಲಿ ಪಡೆದು ದುಡಿಸಿ ಕೊಂಡು ಅದರ ಫಲವನ್ನು ಜಾಗತಿಕ ಮಟ್ಟದಲ್ಲಿರುವ ಶ್ರೀಮಂತ ದೇಶಗಳಿಗೆ ಕಡಿಮೆ ದರದಲ್ಲಿ ವರ್ಗಾಯಿಸುತ್ತವೆ. ಇದರಿಂದಾಗ ಅಲ್ಪಾವಧಿಯಲ್ಲಿ ದೇಶೀಯ ಮಾರುಕಟ್ಟೆಯು ಉತ್ಪಾದನೆಯನ್ನು ಪ್ರೋ ಸುವಂತೆ ಕಂಡರೂ ಅಂತಿಮವಾಗಿ ನಾವು ಜಾಗತಿಕ ವಲಯದಲ್ಲಿ ಉತ್ಪಾದನೆಯನ್ನು ತನ್ಮೂಲಕ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಒಂದು ಸಣ್ಣ ಪ್ರಭಾವ ವಲಯಕ್ಕೆ ಇನ್ನೂ ಹೆಚ್ಚು ಇಂಬು ನೀಡುತ್ತಿದ್ದೇವೆ.

ವಿಶ್ವವ್ಯಾಪಾರ ಒಪ್ಪಂದ, ಜಾಗತಿಕ ಹಣಕಾಸು ಸಂಸ್ಥೆಗಳು ಇವತ್ತು ಜಗತ್ತಿನ ಅರ್ಥವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ಕಾರಣ ದೇಶೀಯ ಅರ್ಥವ್ಯವಸ್ಥೆಗಳಲ್ಲಿ ಸ್ವರೂಪಕ್ಕೆ ಬದಲಾವಣೆಗಳನ್ನು ತಂದಿದೆ. ಇಂತಹ ಬದಲಾವಣೆಗಳನ್ನು ಗಮನಿಸಿದರೆ ಸರಕಾರದ ನಿಯಂತ್ರಣದಿಂದ ಅವು ಮುಕ್ತವಾಗಿ ಮಾರುಕಟ್ಟೆ ನಿಯಂತ್ರಿತ ವ್ಯವಸ್ಥೆಯೆಡೆಗೆ ಸಾಗುತ್ತಿರುವುದನ್ನು ಗಮನಿಸಬಹುದು. ಈ ಕಾರಣದಿಂದಾಗಿ ಪ್ರತಿಯೊಂದು ದೇಶ ಗಳಲ್ಲಿಯೂ ಬಹುರಾಷ್ಟ್ರೀಯ ಕಂಪನಿಗಳ ವ್ಯಾಪಾರ ವಹಿವಾಟು ದಿನದಿಂದ ದಿನಕ್ಕೆ ನಾಗಾಲೋಟದಲ್ಲಿ ವೃದ್ದಿಸುತ್ತಿದೆ. ಕೆಲವೊಂದು ಸಂದರ್ಭಗಳಲ್ಲಿ ಕಂಪನಿಯ ಬಿಟ್ಟು ವ್ಯಾಪಾರ ವಹಿವಾಟು ದೇಶದ ರಾಷ್ಟ್ರೀಯ ಉತ್ಪನ್ನಕ್ಕಿಂತಲೂ ಹೆಚ್ಚಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಈ ಕೆಳಗಿನ ಕೋಷ್ಟಕವನ್ನು ಗಮನಿಸಿದರೆ ಈ ಅಂಶ ಸ್ಪಷ್ಟ ವಾಗುತ್ತದೆ.

ಕ್ರ. ಸಂ.

ದೇಶದ ಹೆಸರು

ರಾಷ್ಟ್ರೀಯ ಉತ್ಪನ್ನ ಮಿಲಿನಯನ್ ಡಾಲರ್

ಕಂಪನಿಯ ಹೆಸರು

ಮಾರಾಟ ಮಿಲಿಯನ್ ಡಾಲರ್ಗಳಲ್ಲಿ

ಡೆನ್ಮಾರ್ಕ್ ೧೭೪೩೬೩ ಜನರಲ್ ಮೋಟರ್ಸ್ ೧೭೬೫೫೮
  ೨ ಪೋಲಾಂಡ್ ೧೫೪೧೪೬ ವಾಲ್‌ಮಾರ್ಟ್ ೧೬೬೮೦೯
  ೩ ದ.ಆಫ್ರಿಕಾ ೧೩೧೧೨೭ ಎಕ್ಸಾನ್‌ಮೊಬಿಲ್ ೧೬೩೮೮೧
  ೪ ಇಸ್ರೇಲ್ ೯೯೦೬೮ ರಾಯಲ್ ಡಚ್ ೧೦೫೩೬೬
  ೫ ಐರ್ಲೆಂಡ್ ೮೪೮೬೧ ಐಬಿಎಂ ೮೭೫೪೮
  ೬ ಮಲೇಶಿಯಾ ೭೪೬೩೪ ಸಿಮನ್ಸ್ ೭೫೩೩೭
  ೭ ಚಿಲಿ ೭೧೦೯೨ ಹಿಟಾಚಿ ೭೧೮೫೮.೫
  ೮ ಪಾಕಿಸ್ತಾನ ೫೮೮೮೦ ಸೋನಿ ೬೦೦೫೨.೭
  ೯ ನ್ಯೂಜಿಲ್ಯಾಂಡ್ ೫೩೬೨೨ ಹೊಂಡಾ ಮೋಟಾರ್ಸ್ ೫೪೭೭೩.೫
೧೦ ಹಂಗೇರಿ ೪೮೩೫೫.೦ ಕ್ರೆಡಿಟ್ ಸೂಯಿಸ್ ೪೬೨೬೨.೦

ಆಧಾರ : ಫಾರ್ಚೂನ್ ಜುಲೈ ೨೦೦೦ ಮತ್ತು ಜಾಗತಿಕ ಅಭಿವೃದ್ದಿ ವರದಿ ೨೦೦೦

ಜಗತ್ತಿನ ಶೇಕಡಾ ೭೦ರಷ್ಟು ಅಂತಾರಾಷ್ಟ್ರೀಯ ವ್ಯಾಪಾರವನ್ನು ನಿಯಂತ್ರಿಸುವ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದನಾ ವ್ಯವಸ್ಥೆಯನ್ನು ವಿಘಟನೆಗೊಳಿಸಿ ಉಪ ಒಪ್ಪಂದದ ಮೂಲಕ ತೃತೀಯ ಜಗತ್ತಿನ ದೇಶಗಳಲ್ಲಿ ಉತ್ಪಾದಿಸಿ ವಿಶ್ವಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಉತ್ಪಾದನೆಯನ್ನು ಈ ಮೊದಲಿನ ಸ್ಥಿತಿಗೆ ಹೋಲಿಸಿದರೆ ಶೀಘ್ರವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದ್ದು ಪ್ರಸರಣದ ವೇಗವೂ ಹೆಚ್ಚಿದೆ. ಉತ್ಪಾದನಾ ಚಕ್ರವು ವೇಗವಾಗಿರುವುದರಿಂದ ಬಂಡವಾಳ ಹೆಚ್ಚು ಕ್ರಿಯಾ ಶೀಲವಾಗಿದೆ. ಹೆಚ್ಚು ಪ್ರಮಾಣದಲ್ಲಿ ಲಾಭ ಸಂಚಯನವಾಗುತ್ತಿದೆ. ಹೆಚ್ಚು ವೇಗ ಮತ್ತು ಪ್ರಮಾಣದಲ್ಲಿ ಸಂಪತ್ತಿನ ಮತ್ತು ಬಂಡವಾಳದ ಸಂಚಯನವೂ ಸಾಧ್ಯವಾಗುತ್ತಿದೆ. ದೇಶದ ಗಡಿಗಳೊಳಗೆ ಕಾರ್ಯಾಚರಿಸುವ ಬಹುರಾಷ್ಟ್ರೀಯ ಕಂಪನಿಗಳು ಆರ್ಥಿಕವಾಗಿ ಪ್ರಬಲವಾಗಿರುವುದರಿಂದ ಆ ದೇಶದ ರಾಜಕೀಯ ಮತ್ತು ಸಾಮಾಜಿಕ ಬದುಕನ್ನು ಪ್ರಭಾವಿಸುವ (ನಿಯಂತ್ರಿಸುವ) ಶಕ್ತಿಯನ್ನು ಹೊಂದಿರುತ್ತವೆ.

ಈ ಮೇಲೆ ಉಲ್ಲೇಖಿಸಿದ ಬದಲಾವಣೆಗಳನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯನಿಸ ಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದ ಎರಡು ವಿಚಾರ ಅಥವಾ ವಾದಗಳ ಬಗ್ಗೆ ಗಮನ ಹರಿಸೋಣ.

ಜಾಗತೀಕರಣವು ಹಿಂದೆ ಇದ್ದ ಜಡವಾದ ವ್ಯವಸ್ಥೆಯನ್ನು ಚುರುಕುಗೊಳಿಸಿದ್ದು, ಸಾಂಸ್ಥಿಕ ಸ್ವರೂಪದ ಬದಲಾವಣೆಗಳು ಏನೇ ಆದರೂ ಅದರಿಂದ ಜನಸಾಮಾನ್ಯರಿಗೆ ಒಳ್ಳೆಯದಾಗಿದೆ ಎನ್ನುವುದು ಈ ವಾದದ ಹಿಂದಿನ ಗ್ರಹಿತವಾಗಿದೆ. ಇಂತಹ ಒಂದು ವಾದ ಸರಣಿ ತನ್ನ ಸಮರ್ಥನೆಗಾಗಿ ಈ ಕೆಳಗಿನ ವಿಚಾರಗಳನ್ನು ಪ್ರತಿಪಾದಿಸುತ್ತದೆ.

೧. ಬಳಕೆದಾರರಿಗೆ ಮತ್ತು ಹೂಡಿಕೆದಾರರಿಗೆ ಜಾಗತೀಕರಣ ಹೆಚ್ಚು ಅವಕಾಶ ಮತ್ತು ಆಯ್ಕೆಗಳನ್ನು ಒದಗಿಸಿದೆ. ಹೀಗಾಗಿ ಇವತ್ತು ಬಳಕೆದಾರರ ಅಥವಾ ಹೂಡಿಕೆದಾರ ತನಗೆ ಇಷ್ಟವಾದ ವಸ್ತುವನ್ನು ಖರೀದಿಸಬಹುದು ಅಥವಾ ತನ್ನ ಸಂಪತ್ತನ್ನು ಇಷ್ಟ ಬಂದ ರೀತಿಯಲ್ಲಿ ಹೂಡಿಕೆ ಮಾಡಬಹುದು. ಸರಕಾರದ ನಿಯಂತ್ರಣದಿಂದ ಇಂತಹ ಆಯ್ಕೆ ಅಥವಾ ಸ್ವಾತಂತ್ರ್ಯ ಇದುವರೆಗೆ ಲಭ್ಯವಿರಲಿಲ್ಲ.

೨. ಹೆಚ್ಚು ಪ್ರಮಾಣದಲ್ಲಿ ಬಂಡವಾಳ ಸಂಚಯನವಾಗುವ ಮೂಲಕ, ಮತ್ತು ವಿದೇಶೀ ಬಂಡವಾಳ ಹರಿದು ಬರುವ ಮೂಲಕ ಬಹಳಷ್ಟು ಉದ್ಯೋಗಾವಕಾಶಗಳು ಅಭಿವೃದ್ದಿ ಶೀಲ ರಾಷ್ಟ್ರಗಳಲ್ಲಿ ಉಂಟಾಗಿದೆ. ಇದರಿಂದ ಮಾರುಕಟ್ಟೆ ವಿಸ್ತೃತವಾಗಿದ್ದು, ಇನ್ನಷ್ಟು ಪ್ರಮಾಣದ ಉತ್ಪಾದನೆ ಉದ್ಯೋಗ ಸೃಷ್ಟಿಯಾಗಿದೆ. ಇಂತಹ ಕ್ರಮದಿಂದ ಅಭಿವೃದ್ದಿ ಸಾಧ್ಯವಾಗಿದೆ.

೩. ಸರಕಾರದ ನೀತಿ ನಿಯಮಗಳನ್ನು ಬಳಸಿಕೊಂಡು ಉದ್ಯಮಶೀಲತೆಯನ್ನು ಅದುಮಿಟ್ಟಿದ್ದ ಅಧಿಕಾರಶಾಹಿಗಳ ಕಪಿಮುಷ್ಟಿಯಿಂದ ಅರ್ಥವ್ಯವಸ್ಥೆ ಹೊರಬಂದಿದೆ. ನೀತಿ ನಿಯಮಗಳ ಪಾವಿತ್ರ್ಯ ಕಾಯುವ ಅಡ್ಡಿಯಿಂದ ಉತ್ಪಾದಕ ಚಟುವಟಿಕೆಗಳಿಗೆ ತೊಡರುಗಾಲು ಹಾಕುತ್ತಿದ್ದ ಸರಕಾರದ ಶಾಸನಾತ್ಮಕ ಸಂಸ್ಥೆಗಳ ತಂಡ ಕಡಿಮೆಯಾಗಿದ್ದು, ಬಹಳಷ್ಟು ಜನ ಭಾರತೀಯ ಉದ್ಯಮಶೀಲರು ಸಕ್ರಿಯರಾಗಿದ್ದಾರೆ.

೪. ಬಂಡವಾಳ ನಿಯಂತ್ರಣ, ಕಾರ್ಮಿಕ ಕಾಯಿದೆ, ಸಾಮಾಜಿಕ ಜವಾಬ್ದಾರಿಯ ವಿಷಯ ದಲ್ಲಿ ಹಿಂದೆ ಇದ್ದಂತಹ ಒಂದು ರೀತಿಯ ಜಡವಾಗಿದ್ದ ಬದಲಾವಣೆಗೆ ಒಪ್ಪಂದ ಜಿಗಟುತನದ ಪ್ರವೃತ್ತಿ ನಿಧಾನವಾಗಿ ಕರಗಿ ಹೋಗುತ್ತಿದೆ. ಈ ಕಾರಣದಿಂದ ಕಾರ್ಯ ದಕ್ಷತೆ ಕೇಂದ್ರಿತ, ಪರಿಣಾಮ ಆಧಾರಿತವಾದ ನಿರ್ಧಾರಗಳನ್ನು ಸರಕಾರದ ಮಟ್ಟ ದಲ್ಲಿಯೂ ಮಾಡಲಾಗುತ್ತಿದೆ. ಅಭಿವೃದ್ದಿಗೆ ತೊಡಕಾಗಿರುವ ಕಾನೂನುಗಳನ್ನು ಸರಕಾರ ಇಂದು ಬದಲಾಯಿಸಲು ಉತ್ಸುಕವಾಗಿದೆ.

೫. ದೇಶದಲ್ಲಿ ಉದ್ದಿಮೆಗಳ ವಿಲೀನ, ಸಹಯೋಗಗಳು ನಡೆಯುತ್ತಿದೆ. ಇದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಬಲ್ಲ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸ್ಪರ್ಧೆ ನೀಡಬಲ್ಲ ಬೃಹತ್ ಉದ್ದಿಮೆಗಳು ಅಸ್ತಿತ್ವಕ್ಕೆ ಬರುತ್ತಿರುವುದು ಸ್ವಾಗತಾರ್ಹ.

೬. ಉದ್ಯಮ, ಉತ್ಪಾದನೆ, ಬಂಡವಾಳ ಸಂಚಯನ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಈ ಹಿಂದೆ, ಈ ಕ್ಷೇತ್ರಗಳಲ್ಲಿ ಯಾವ ಅನುಭವವೂ ಇಲ್ಲದ ಸರಕಾರಿ ಅಧಿಕಾರಶಾಹಿ ಕೈಗೊಳ್ಳುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಈ ಮೇಲಿನ ವಿಷಯಗಳಲ್ಲಿ ವೃತ್ತಿ ನಿರತರು, ಉದ್ಯಮಪತಿಗಳು ಮತ್ತು ಅನುಭವಿಗಳು ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಈ ಹಿಂದೆ ಇದ್ದಂತಹ ಗೊಂದಲ, ಅದಕ್ಷತೆ, ಅರಾಜಕತೆ ಮಾಯವಾಗಿ ಶಿಸ್ತು, ಕಾರ್ಯದಕ್ಷತೆ, ಸಂಪನ್ಮೂಲದ ಸದುಪಯೋಗವಾಗುತ್ತಿರುವ ವಾತಾವರಣವಿದೆ.

೮. ಬಂಡವಾಳ ಮತ್ತು ತಂತ್ರಜ್ಞಾನ ಇವತ್ತು ಜಾಗತಿಕ ಮಟ್ಟದಲ್ಲಿ ಪ್ರವಹಿಸುವ ಮತ್ತು ಕಾರ್ಯಾಚರಿಸುವ ಅವಕಾಶ ನಿರ್ಮಾಣವಾಗಿದೆ. ಈ ಹಿಂದಿನಂತೆ ಇದಕ್ಕೆ ತೊಡಕಾಗಿದ್ದ ನಿಯಂತ್ರಣ ವ್ಯವಸ್ತೆಯನ್ನು ನಿವಾರಿಸಲಾಗಿದೆ.

೯. ಬಂಡವಾಳ ಮತ್ತು ತಂತ್ರಜ್ಞಾನ ಹರಿವು ಸುಲಭವಾಗಿರುವುದರಿಂದಾಗಿ ಇವತ್ತು ಹಿಂದುಳಿದ ದೇಶಗಳು ಕೂಡಾ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದುವ ಮತ್ತು ದೇಶದ ಅಭಿವೃದ್ದಿಯಲ್ಲಿ ಅದನ್ನು ಬಳಸುವ ಅವಕಾಶವನ್ನು ಪಡೆದುಕೊಂಡಿವೆ.

೧೦. ವಿಶ್ವದಾದ್ಯಂತ ಚದುರಿರುವ ವಿವಿಧ ಸಮುದಾಯಗಳನ್ನು ಮಾಹಿತಿ ತಂತ್ರಜ್ಞಾನ ಆಧಾರಿತ ಸಂಪರ್ಕ ವ್ಯವಸ್ಥೆ ಒಂದುಗೂಡಿಸುವುದು ಸಾಧ್ಯವಾಗಿದೆ. ಇಂತಹ ಒಂದು ಉನ್ನತ ತಂತ್ರಜ್ಞಾನ ದೊಡ್ಡ ಪ್ರಮಾಣದ ಸಂಶೋಧನೆಯ ಮೂಲಕ ಸಾಧ್ಯವಾಗಿದೆ. ಅಂತಹ ಸಂಶೋಧನೆಗೆ ಬೃಹತ್ ಪ್ರಮಾಣದ ಆರ್ಥಿಕ ಸಹಾಯದ ಅಗತ್ಯವಿದ್ದು, ಅದನ್ನು ಉದ್ಯಮರಂಗ ನೀಡಲು ಶಕ್ತವಾಗಿದೆ. ಹೀಗಾಗಿ ಉದ್ಯಮರಂಗದಲ್ಲಿ ಲಾಭವಾದರೆ ಅದರ ಪ್ರಯೋಜನ ಇಡೀ ವಿಶ್ವ ಸಮುದಾಯಕ್ಕೆ ದೊರಕುವುದು ಸಾಧ್ಯವಿದೆ. ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ ಈ ಬೆಳವಣಿಗೆ ದೇಶದ ಗಡಿಗಳು ಮತ್ತು ಕಾನೂನುಗಳು ತಡೆ ಒಡ್ಡುತ್ತಿದ್ದವು. ಆದರೆ ಜಾಗತೀಕರಣ ಅಂತಹ ಮಿತಿಗಳನ್ನು ಮೀರಿ ಬೆಳೆಯಲು ಸಹಾಯ ಮಾಡಿದೆ.

ಮೇಲೆ ಉಲ್ಲೇಖಿಸಿದ ವಿಚಾರಗಳನ್ನು ಅಲ್ಲಗಳೆಯುವ ಅಥವಾ ಅದನ್ನು ಅಂಶಿಕ ಸತ್ಯವೆಂದು ಸಾಧಿಸುವ ಇನ್ನೊಂದು ಬಗೆಯ ತರ್ಕವೂ ಚಲಾವಣೆಯಲ್ಲಿದೆ. ತನ್ನನ್ನು ಸಮರ್ಥಿಸಲು ಅದು ಬಳಸುತ್ತಿರುವ ವಾದಗಳು ಮತ್ತು ವಿಚಾರಗಳು ಈ ಕೆಳಗಿನಂತಿವೆ.

೧. ಜಾಗತೀಕರಣವು ಸಂಪತ್ತಿನ ವಿಚರಣೆಯಲ್ಲಿದ್ದ ಅಸಮತೋಲನವನ್ನು ಇನ್ನೂ ಹೆಚ್ಚು ಮಾಡುತ್ತಾ ಹೋಗುತ್ತಿದೆ. ೭೦ರ ದಶಕದಲ್ಲಿ ವಿಶ್ವದಲ್ಲಿದ್ದ ಶ್ರೀಮಂತರ ಪೈಕಿ ಮೊದಲ ೨೦ ಶೇಕಡಾ ಜನ ಮತ್ತು ಬಡವರಲ್ಲಿ ಕೊನೆಯಲ್ಲಿರುವ ೨೦ ಶೇಕಡಾ ಜನರ ನಡುವಿನ ಸಂಪತ್ತಿನ ವಿತರಣೆಯ ಅನುಪಾತ ೩೦ಕ್ಕೆ ೧ ರಂತಿದ್ದರೆ, ೧೯೯೦ರಲ್ಲಿ ಈ ಅನುಪಾತ ೬೦ಕ್ಕೆ ಒಂದರಂತೆ ಮತ್ತು ೨೦೦೦ ಇಸವಿಯಲ್ಲಿ ಇದು ೭೪ ಕ್ಕೆ ಒಂದರಷ್ಟಾಗಿದ್ದು ಈ ಅಂತರ ಇನ್ನೂ ದೊಡ್ಡದಾಗುತ್ತಾ ಹೋಗುತ್ತಿದೆ. ಉತ್ಪನ್ನದ ಬಳಕೆಯಲ್ಲಿಯೂ ಈ ಅಂತರ ಹೆಚ್ಚಾಗುತ್ತಿದೆ. ದೇಶದ ಮಟ್ಟದಲ್ಲಿಯೂ ಈ ಅಸಮಾನತೆಯನ್ನು ನಾವು ಕಾಣಬಹುದಾಗಿದೆ. ಭಾರತದಲ್ಲಿ ಈ ಕುರಿತ ವಿವರಗಳನ್ನು ಅರ್ಜುನ ಸೆನ್ ಗುಪ್ತಾ ಅವರು ತಯಾರಿಸಿದ ವರದಿಯಲ್ಲಿ ಕಾಣಬಹುದು.

೨. ಸರಕಾರದ ನೀತಿಗಳು ಅಭಿವೃದ್ದಿ ಯೋಜನೆಗಳು ಮತ್ತು ತಂತ್ರಜ್ಞಾನದ ಬಳಕೆಯ ಮೂಲಕ ಉದ್ಯೋಗ ಸೃಷ್ಟಿ ಮತ್ತು ಆದಾಯದ ಮರು ವಿತರಣೆಗಳು ಸಮರ್ಪಕವಾಗಿ ಆಗಿದೆ ಎನ್ನುವ ಮಾತು ಕೂಡಾ ಸರಿಯಲ್ಲ ಎನ್ನುವುದನ್ನು ಅಂಕಿ ಅಂಶಗಳು ತಿಳಿಸುತ್ತವೆ. ವಾಸ್ತವಿಕವಾಗಿ ದೇಶದೊಳಗೆ ಖಾಸಗೀ ಉದ್ಯಮ ವಲಯ, ಬಂಡವಾಳ ಹೂಡಿಕೆದಾರರು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಗಳಿಸುವ ಲಾಭ… ಇವೆಲ್ಲವೂ ಶ್ರೀಮಂತ ದೇಶಗಳ ನಿಯಂತ್ರಣದಲ್ಲಿರುವ ಉದ್ದಿಮೆಗಳಲ್ಲಿ ಮರು ಹೂಡಿಕೆಯಾಗುತ್ತಿವೆ. ಅಂದರೆ ವಾಸ್ತವಿಕವಾಗಿ ಇದುವರೆಗೆ ಜಗತ್ತಿನ ಅಭಿವೃದ್ದಿಶೀಲ ದೇಶಗಳಲ್ಲಿ ಇರುತ್ತಿದ್ದ ಸಂಪತ್ತು ಶ್ರೀಮಂತ ದೇಶಗಳ ಲಾಭದಾಯಕ ಉದ್ಯಮಗಳ ಬೆಳವಣಿಗೆಯಲ್ಲಿ ಉಪಯೋಗವಾಗುತ್ತಿದೆ. ಹೀಗಾಗಿ ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ಹೊಸ ಜಾಗತಿಕ ವ್ಯವಸ್ಥೆಯಲ್ಲಿ ಮತ್ತು ಜಾಗತೀಕರಣದ ಪರಿಣಾಮವಾಗಿ ದೇಶದ ಒಳಗೆ ವಿವಿಧ ಪ್ರದೇಶ ಮತ್ತು ಸಮುದಾಯಗಳ ನಡುವೆಯೂ ಹೆಚ್ಚುತ್ತಾ ಹೋಗುತ್ತಿರುವುದನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ.

೩. ಉದ್ಯೋಗದ ಸ್ವರೂಪ ಮತ್ತು ಪ್ರಮಾಣದಲ್ಲಿಯೂ ಬಹಳಷ್ಟು ಬದಲಾವಣೆಗಳು ಆಗುತ್ತಿವೆ. ಈ ಮೊದಲು ಇದ್ದಂತಹ ಜೀವನ ಭದ್ರತೆ ಇರುವ ಅಥವಾ ಖಾಯಂ ನೆಲೆಯ ಉದ್ಯೋಗಗಳು ಕಡಿಮೆಯಾಗುತ್ತಿವೆ. ಸರಕಾರಿ ರಂಗದ ಉದ್ಯೋಗಗಳು ಕಡಿಮೆಯಾಗುತ್ತಿದ್ದು ಖಾಸಗೀ ರಂಗದ ಉದ್ದಿಮೆಗಳಲ್ಲಿ ಉದ್ಯೋಗಗಳು ಹೆಚ್ಚುತ್ತಿವೆ ಮಾತ್ರವಲ್ಲ ಉದ್ಯೋಗದಲ್ಲಿ ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರವೃತ್ತಿಯೂ ಮಾಯವಾಗುತ್ತಿದೆ. ಈಗಿನ ಎಲ್ಲಾ ಉದ್ಯೋಗಗಳು ಒಪ್ಪಂದ ಮಾದರಿಯ ಉದ್ಯೋಗಗಳು. ಅಂದರೆ ಒಪ್ಪಂದದ ಅವಧಿ ಮುಗಿದ ನಂತರ ಮರು ನೇಮಕದ ಯಾವ ಭರವಸೆಯೂ ಇರುವುದಿಲ್ಲ. ಕಾರ್ಮಿಕ ಸಂಘಟನೆಗಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುವಂತಹ ಒಂದು ಪರಿಸ್ಥಿತಿ ಇದರಿಂದಾಗಿ ಕೊನೆಗೊಂಡಾಂತಾಗಿದೆ. ಉತ್ಪಾದನಾ ರಂಗದಲ್ಲಿ ಇದರಿಂದ ಅದಕ್ಷತೆ, ಅನಿಶ್ಚಿತತೆ, ಅನಗತ್ಯ ರಾಜಕೀಯ ಹಸ್ತಕ್ಷೇಪಗಳನ್ನು ತಡೆಯಲಾಗಿದೆಯೆಂದು ಹೇಳಿಕೊಂಡರೂ ಇದು ಮಾನವ ಸಂಪನ್ಮೂಲವನ್ನು ಶೋಷಣೆ ಮಾಡಲು ಮುಕ್ತ ಪರವಾನಗಿ ನೀಡಿದೆ ಎಂದೂ ಹೇಳಲಾಗುತ್ತಿದೆ. ನಿರುದ್ಯೋಗದ ಕಾರಣದಿಂದ ಜನ ಹೊಸ ಅವಕಾಶಗಳನ್ನು ಅರಸಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವ ಪ್ರವೃತ್ತಿಯನ್ನು ನಾವು ಕಾಣಬಹುದು. ಆದರೆ ಇಂತಹ ವಲಸಿಗರ ಬಗ್ಗೆ ಸ್ಥಳೀಯರಾದ ನಿರುದ್ಯೋಗಿಗಳು ರೊಚ್ಚಿಗೇಳುವ ಪ್ರವೃತ್ತಿಯನ್ನು ಮತ್ತು ವಲಸಿಗರ ಮೇಲೆ ದಾಳಿ ಮಾಡುವ ಉದಾಹರಣೆಗಳನ್ನು ಜಾಗತಿಕ ಮಟ್ಟದಲ್ಲಿ ಮತ್ತು ದೇಶದೊಳಗೆಯೂ ನಾವು ಕಾಣಬಹುದಾಗಿದೆ. ಇದು ವ್ಯಾಪಾರದ ವಿಷಯದಲ್ಲೂ ಕಂಡುಬರುತ್ತದೆ. ಇಂತಹ ಬೆಳವಣಿಗೆಗಳು ಅಸಂಘಟಿತ ವಲಯ ಉದ್ಯೋಗ ಮತ್ತು ವ್ಯಾಪಾರ ಚಟುವಟಿಕೆಗಳಲ್ಲಿ ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ನಷ್ಟಕ್ಕೆ ಗುರಿಯಾಗುವವರು ಸಮಾಜದ ಅಂಚಿನಲ್ಲಿರುವ ಜನ ಮಾತ್ರ. ದೊಡ್ಡ ಉದ್ಯೋಗಪತಿಗಳು ಮತ್ತು ವ್ಯಾಪಾರಸ್ಥರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅವರ ಉದ್ದಿಮೆಯನ್ನು ಸ್ಥಳಾಂತರಿಸುವುದು ಬಹಳ ಕಷ್ಟದ ವಿಷಯವಾಗುಳಿದಿಲ್ಲ.

೪. ಜಾಗತೀಕರಣದ ನಂತರದ ದಿನಗಳಲ್ಲಿ ಸರಕಾರದ ಮೇಲೆ ಅಂತರರಾಷ್ಟ್ರೀಯ ಪ್ರಭಾವ ಬೇರೆ ಬೇರೆ ರೀತಿಯಲ್ಲಿ ಆಗುತ್ತಿರುವುದರಿಂದ ಮತ್ತು ಸರಕಾರ ತನ್ನ ಆಡಳಿತವನ್ನು ದಕ್ಷತೆಯಿಂದ ನಡೆಸುವ ಹಂಗಿಗೆ ಒಳಗಾಗಿರುವ ಕಾರಣದಿಂದ ‘ಲಾಭ ದಾಯಕ’ವಲ್ಲದ ಶಿಕ್ಷಣ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಖರ್ಚು ಮಾಡುವಂತಿಲ್ಲ. ಇದರಿಂದಾಗಿ ಇಂತಹ ನೆರವನ್ನು ನಂಬಿರುವ ಜನರಿಗೆ ತೀವ್ರ ತೊಂದರೆಯುಂಟಾಗಿದೆ. ಇದರಿಂದ ಬಡಜನತೆ ಆಹಾರ, ಶಿಕ್ಷಣ ಮತ್ತು ಆರೋಗ್ಯ ದಂತಹ ಮೂಲಭೂತ ಅನುಕೂಲಗಳಿಂದ ವಂಚಿತರಾಗಿರುವಂತಹ ಸ್ಥಿತಿ ನಿರ್ಮಾಣ ವಾಗಿದೆ. ಜನರ ಈ ಅಸಹನೆ, ಅಸಹಾಯಕತೆ ಮತ್ತು ಸಿಟ್ಟನ್ನು ಬೇರೆ, ಬೇರೆ ಹಿತಾಸಕ್ತಿ ಗುಂಪುಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸುತ್ತಿವೆ. ಪ್ರಾದೇಶಿಕ ಹಿನ್ನೆಲೆಯಲ್ಲಿ, ಜಾತಿಯ ಆಧಾರದಲ್ಲಿ ಮತ್ತು ಅಸ್ಮಿತಿಯ ಆಧಾರದಲ್ಲಿ ನಡೆಯುತ್ತಿರುವ ಹಿಂಸೆಯ ಹಿಂದಿರುವ ವಿಷಯಗಳನ್ನು ಅಧ್ಯಯನ ಮಾಡಿದರೆ ಅದರ ಹಿಂದಿರುವ ಆರ್ಥಿಕ ಲಕ್ಷಣಗಳು ಸ್ಪಷ್ಟವಾಗಿ ತಿಳಿದುಬರುತ್ತವೆ.

೫. ಸರಕಾರದ ಮೇಲೆ ಉದ್ಯಮಪತಿಗಳ, ವಿದೇಶಿ ಸಂಸ್ಥೆಗಳ ಪ್ರಭಾವ ಹೆಚ್ಚಾಗುತ್ತಿದೆ. ಇಂದು ಬೇರೆ ಬೇರೆ ದೇಶಗಳಲ್ಲಿ ಈ ಪರಿಸ್ಥಿತಿ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ವ್ಯಾಪಾರೀ ಅಥವಾ ಉದ್ಯಮ ಜಗತ್ತು. ಅಪಾರ ಹಣ ಗಳಿಸಿರುವ ಕಾರಣದಿಂದ ರಾಜ್ಯಗಳಿಗೆ ಅಥವಾ ದೇಶಕ್ಕೆ ಮುಖ್ಯವಾಗಿವೆ. ಯಾಕೆಂದರೆ ಯಾವುದೇ ಅಭಿವೃದ್ದಿ ನಡೆಸಿಕೊಂಡು ಹೋಗಬೇಕಾದರೆ ಬಂಡವಾಳದ ಅವಶ್ಯಕತೆ ಇದ್ದೇ ಇದೆ. ಸರಕಾರಗಳು ಇವತ್ತು ಅನುಸರಿಸುತ್ತಿರುವ ನೀತಿಗಳ ಕಾರಣದಿಂದ ಬೊಕ್ಕಸ ಬರಿದಾಗುತ್ತಿದೆ. ರಾಜಕರಣ ಮಾಡುವವರಲ್ಲಿ ವೈಚಾರಿಕತೆ, ದೂರದರ್ಶಿತ್ವ ಯಾವುದೂ ಇಲ್ಲದೆ ಬರೀ ಅಧಿಕಾರ ದಾಹವಿದೆ. ಈ ಕಾರಣದಿಂದ ಹಣಬಲವಿದ್ದವರನ್ನು ಓಲೈಸುವ ಪ್ರವೃತ್ತಿ ಹೆಚ್ಚುತ್ತಿದೆ. ಹೀಗಾಗಿ ಭಾರತ ದೇಶದಲ್ಲಿ ಅಂಬಾನಿ, ಬಿರ್ಲಾ, ಟಾಟಾರಂತಹ ಉದ್ಯಮಪತಿಗಳು ಸರಕಾರದ ನಿರ್ಧಾರಗಳನ್ನು ಬಹಳಷ್ಟು ಮಟ್ಟಿಗೆ ಪ್ರಭಾವಿಸು ವಂತಾಗಿದೆ. ಇನ್ನು ಕರ್ನಾಟಕದ ಉದಾಹರಣೆಯನ್ನು ತೆಗೆದುಕೊಂಡರೆ ಇನ್ಪೋಸಿಸ್, ವಿಪ್ರೋ ಮತ್ತು ಮಠಾಧೀಶರು ಅತ್ಯಂತ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ. ಪ್ರತಿಯೊಂದು ಸಮಸ್ಯೆಗೂ ಉದ್ಯಿಮಪತಿಗಳತ್ತ ನೋಡುವ ಸರಕಾರಗಳು ಜನಸಾಮಾನ್ಯರ ಬಗ್ಗೆ, ಪ್ರಜಾತಂತ್ರ ಮೌಲ್ಯಗಳ ತೀವ್ರ ಅನಾದರ ಹೊಂದಿರುವ ಒಂದು ಸ್ಥಿತಿಯನ್ನು ಗಮನಿಸ ಬಹುದಾಗಿದೆ.ಈ ಕಾರಣದಿಂದಾಗಿ ರಾಜಕೀಯ ಪಕ್ಷಗಳೊಳಗೆ ಅರ್ಥವ್ಯವಸ್ಥೆ ಯನ್ನು ಬಲಪಡಿಸುವ ಅಥವಾ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯ ಕ್ರಮ ಗಳಿಗಿಂತಲೂ ಉದ್ಯಮಪತಿಗಳನ್ನು ಸಂತೃಪ್ತಿಗೊಳಿಸುವ, ಮಠಾಧಿಪತಿಗಳನ್ನು ಓಲೈಸುವ ಪ್ರವೃತ್ತಿಯೇ ಕಂಡುಬರುತ್ತಿದೆ.

೫. ಉತ್ಪಾದನೆ ಬಂಡವಾಳ, ತಂತ್ರಜ್ಞಾನ ಅಭಿವೃದ್ದಿ, ವ್ಯಾಪಾರಕ್ಕೆ ಉತ್ತೇಜನ ನೀಡುವುದಕ್ಕೆ ತೋರುತ್ತಿರುವ ಉತ್ಸಾಹದ ಒಂದಂಶವನ್ನಾದರೂ ಕಾರ್ಮಿಕ ಕಲ್ಯಾಣ, ಶಿಕ್ಷಣ ವ್ಯವಸ್ಥೆಯ ಬಲವರ್ಧನೆ, ಪ್ರಜಾಪ್ರಭುತ್ವದ ಸದೃಢತೆ, ಬಡವರಿಗೆ ಮೂಲಭೂತ ಸೌಕರ್ಯ ಒದಗಿಸುವಂತಹ ಕಾರ್ಯಕ್ರಮ ನೀಡುವುದರ ಕುರಿತು ತೋರಲಾಗುತ್ತಿಲ್ಲ. ಇದರ ಬದಲಿಗೆ ಅಸಹಾಯಕರ ನೆರವಿಗೆ ಬರಲು ಕಾರ್ಪೋರೇಟ್ ಜಗತ್ತಿನ ತೀಟೆ ಯಾಗಿರುವ ಸಮಾಜ ಕಲ್ಯಾಣ ಕಾರ್ಯಕ್ರಮ, ಧರ್ಮದ ಆಧಾರದಲ್ಲಿ ಬಡವರನ್ನು ಅಧಿಕಾರಸ್ಥರ ಪರವಾಗಿ ಸಂಘಟಿಸಲು ಮಠಮಾನ್ಯಗಳನ್ನು, ಚರ್ಚ್ ಮಸೀದಿಗಳಂತಹ ಧಾರ್ಮಿಕ ಸಂಸ್ಥೆಗಳನ್ನು ತೊಡಗಿಸುವಂತೆ ಮಾಡಲಾಗುತ್ತಿದೆ. ಇದು ಇನ್ನೊಂದಷ್ಟು ತಲೆನೋವಿಗೆ ದಾರಿ ಮಾಡಿಕೊಡುತ್ತಿದೆ.

೬. ವಿಶ್ವವ್ಯಾಪಾರ ಸಂಘಟನೆಯು ಮುಕ್ತ ಮಾರುಕಟ್ಟೆಯ ವಾದವನ್ನು ಮುಂದಿಡುತ್ತಲೇ ಬಡದೇಶಗಳು ಮತ್ತು ಅಭಿವೃದ್ದಿಶೀಲ ದೇಶಗಳು ಶ್ರೀಮಂತ ದೇಶಗಳ ಮಾರುಕಟ್ಟೆ ಪ್ರವೇಶ ಮಾಡದಂತೆ ತಡೆಯಲಾಗುತ್ತಿದೆ. ಅಭಿವೃದ್ದಿಶೀಲ ದೇಶಗಳು ಮತ್ತು ಬಡದೇಶಗಳಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿರುವ ಮುಂದುವರಿದ ದೇಶಗಳು ಮಿಕ್ಕುಳಿದವರಿಗೆ ಹಲವಾರು ರೀತಿಯ ನೀತಿ ನಿಯಮಗಳನ್ನು ಪಾಲಿಸುವಂತೆ ಶರತ್ತು ಗಳನ್ನು ವಿಧಿಸುತ್ತಿವೆ. ಮತ್ತು ಅಂತಹ ಶರತ್ತುಗಳನ್ನು ಪಾಲಿಸುವಂತೆ ಒತ್ತಡ ತಂತ್ರವನ್ನು ಅನುಸರಿಸುತ್ತಿವೆ.

೭. ಅಪರಾಧೀಕರಣವೂ ಇಂದಿನ ಸಂದರ್ಭದಲ್ಲಿ ವಿಶ್ವದಾದ್ಯಂತ ಪ್ರಸರಿಸುತ್ತಿದ್ದು ಭೂಗತ ಲೋಕವೂ ಕೂಡಾ ಆಧುನಿಕ ತಂತ್ರಜ್ಞಾನ ಬಂಡವಾಳವನ್ನು ಉಪಯೋಗಿಸಿಕೊಂಡು ವ್ಯಾಪಕ ಬೆಳೆಯುತ್ತಿದೆ. ಇಂತಹ ಅಪರಾಧ ಜಗತ್ತು ಅಧಿಕಾರದ ಕೇಂದ್ರದೊಂದಿಗೆ, ರಾಷ್ಟ್ರೀಯತೆಯ ಗುರಾಣಿಯನ್ನು ಮುಂದು ಮಾಡಿಕೊಳ್ಳುತ್ತಾ, ಸಮಾಜದಲ್ಲಿ ಆತ್ಮಸಾಕ್ಷಿಯಾಗಿ ಕಾರ್ಯನಿರ್ವಹಿಸುವ ಟೀಕಾಕಾರರ ಬಾಯಿ ಮುಚ್ಚಿಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ.

ಜಾಗತೀಕರಣದ ರಾಜಕೀಯ ಆಯಾಮಗಳು

ಲೇಖನದ ಮೊದಲ ಭಾಗದಲ್ಲಿ ವರ್ತಮಾನದಲ್ಲಿ ಜಾಗತೀಕರಣ ಪ್ರಕ್ರಿಯೆ ಹಾದುಬಂದ ವಿವಿಧ ಹಂತಗಳ ಬಗ್ಗೆ ಉಲ್ಲೇಖಿಸಲಾಗಿದೆ. ಮೊದಲ ನಾಲ್ಕು ಹಂತಗಳ ಅವಧಿಯಲ್ಲಿ ಸರಕಾರ ಒಂದು ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ರಂಗದ ಮೇಲೆ ಸಂಪೂರ್ಣ ಅಧಿಕಾರ ಅಥವಾ ಹಿಡಿತ ಹೊಂದಿರುವಂತಹ ಒಂದು ಪರಿಸ್ಥಿತಿ ಇತ್ತು. ಇದರರ್ಥ ಸರಕಾರಕ್ಕೆ ಇಡೀ ವ್ಯವಸ್ಥೆಯ ಮೇಲೆ ನಿಯಂತ್ರಣವಿತ್ತು ಮತ್ತು ಅದು ಒಂದು ಸ್ವಾಯತ್ತ ಸಾಂಸ್ಥಿಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಲಾಗದಿದ್ದರೂ ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಮಾದರಿಯ ಸಾಂಸ್ಥಿಕ ಸಂರಚನೆ ಅಸ್ಥಿತ್ವದಲ್ಲಿತ್ತು ಎಂದು ಹೇಳಬಹುದು. ಮಾತ್ರವಲ್ಲ ಇಂತಹ ಒಂದು ವ್ಯವಸ್ಥೆ ಆಧುನಿಕತೆಯ ನಂತರ ವ್ಯಕ್ತಿ ಸ್ವಾತಂತ್ರ್ಯವನ್ನು ಪೋಷಿಸುವ ಒಂದು ಉದಾರವಾದಿ ಉತ್ಪಾದನಾ ವ್ಯವಸ್ಥೆಯನ್ನು ಹೊಂದಿದ ಪ್ರಜಾತಂತ್ರ ವ್ಯವಸ್ಥೆಯನ್ನು ಆಧರಿಸಿ ಸಮುದಾಯ ಜೀವನ ನಡೆಯುತ್ತಿತ್ತು ಎಂದು ಹೇಳಬಹುದು. ಹಾಗಾಗಿ ಜನರ ಆಶೋತ್ತರಗಳಿಗೆ ಅನುಗುಣವಾಗಿ ರಾಜ ಪ್ರಭುತ್ವ ಮತ್ತು ಪ್ರಜಾತಂತ್ರ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿತ್ತು ಎನ್ನುವುದನ್ನು ತಾತ್ವಿಕ ವಾಗಿ ಒಪ್ಪಬಹುದಾಗಿದೆ. ಇಂತಹ ವ್ಯವಸ್ಥೆಯಲ್ಲಿ ಜಾಗತೀಕರಣದ ನಂತರ ಬಹಳಷ್ಟು ಬದಲಾವಣೆಗಳಾಗುತ್ತಲಿವೆ. ಆದರೆ ಇಂತಹ ಬದಲಾವಣೆಗಳು ವಿಶ್ವದ ಎಲ್ಲಾ ಕಡೆಗಳಲ್ಲಿ ಒಂದೇ ರೀತಿಯಲ್ಲಿ ಆಗುತ್ತಿದೆ ಎಂದು ಹೇಳಲಾಗದು. ಆದರೆ ಎಲ್ಲಿ ಎಲ್ಲ ಸರಕಾರ ಉತ್ಪಾದನಾ ವ್ಯವಸ್ಥೆಯಲ್ಲಿ ದೇಶದ ಗಡಿಯೊಳಗಿನ ಜನರ ಆಶೋತ್ತರಗಳಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತಿತ್ತೋ ಅಥವಾ ಎಲ್ಲಿ ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳ ವಿನ್ಯಾಸ ದೇಶದ ಜನರ ಅವಶ್ಯಕತೆಗಳಿಗನುಸಾರ ರೂಪುಗೊಳ್ಳುತ್ತಿತ್ತೋ ಅಂತಹ ಪರಿಸ್ಥಿತಿಯಲ್ಲಿ ಬಹಳ ವ್ಯತ್ಯಯವಾಗುತ್ತಿದೆ. ಕೆಲವೊಂದು ಸಿದ್ಧಾಂತಿಗಳು ವಾದಿಸುವ ಹಾಗೆ ರಾಜ್ಯಾಂಗ ವ್ಯವಸ್ಥೆ ಅಥವಾ ಸರಕಾರಗಳು ಖಾಸಗೀ ಉದ್ಯಮ ವಲಯ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಗಳಾಗಿವೆ ಎನ್ನುವುದು ಸರಿಯಲ್ಲವಾದರೂ ಅವುಗಳ ಪ್ರಭಾವ ಮತ್ತು ಹಿಡಿತ ಬಿಗಿಗೊಂಡಿರುವುದಂತೂ ಸತ್ಯ. ಸರಕಾರದ ಧ್ಯೇಯ ಗಳಲ್ಲಿ ಬದಲಾವಣೆಯಾಗುತ್ತಿದೆ, ಗುರಿಗಳಲ್ಲಿ ಬದಲಾವಣೆಯಾಗುತ್ತಿದೆ ಮತ್ತು ಸರಕಾರದ ಆಡಳಿತದ ಭಾಷೆಯಲ್ಲೂ ಬದಲಾವಣೆಯಾಗುತ್ತಿರುವುದನ್ನು ಗಮನಿಸಬಹುದು. ಒಂದು ರೀತಿಯಲ್ಲಿ ಸರಕಾರಗಳು ಆದರ್ಶ, ದೂರದರ್ಶಿತ್ವ, ಭವಿಷ್ಯತ್ತಿನ ಬಗ್ಗೆ ಮಾತನಾಡುವ ಯೋಚಿಸುವ ಬದಲಿಗೆ, ವಾಸ್ತವಿಕ ಅವಶ್ಯಕತೆಗಳು, ವ್ಯವಹಾರ ಜಾಣತನ, ಈ ಕ್ಷಣದ ಅವಶ್ಯಕತೆ ಮತ್ತು ಲಾಭ ನಷ್ಟಗಳು ಇತ್ಯಾದಿ ದೃಷ್ಟಿಕೋನವಿರುವ ವ್ಯವಹಾರಿಕ ರೀತಿಯಲ್ಲಿ ಜನರೊಂದಿಗೆ ವ್ಯವಹರಿಸಲಾರಂಭಿಸಿವೆ. ಸರಕಾರವನ್ನು ನಡೆಸುವುದೆಂದರೆ ಉದ್ಯಮ ಜಗತ್ತಿನಲ್ಲಿ ವ್ಯವಹಾರಾಡಳಿತದ ತತ್ವಗಳನ್ವಯ ‘ಸಮರ್ಥ’ವಾಗಿ ಮುನ್ನಡೆಸುವುದೆನ್ನುವ ರೀತಿಯಲ್ಲಿ ಕಾರ್ಯನಿರ್ವಹಿಸಲಾರಂಭಿಸಿವೆ. ಹಾಗಾಗಿ ರಾಜಕೀಯ ಪಕ್ಷಗಳು ಜಾಹೀರಾತಿನ ಮೂಲಕ ತಮ್ಮ ತತ್ವ ಸಿದ್ಧಾಂತಗಳನ್ನು ಯಶಸ್ವಿಯಾಗಿ ಮಾರಾಟ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಕಳೆದ ಹಲವಾರು ಚುನಾವಣೆಗಳಲ್ಲಿ ನಮ್ಮ ದೇಶದ ಪ್ರಮುಖ ಪಕ್ಷಗಳಾದ ಬಿ.ಜೆ.ಪಿ ಮತ್ತು ಕಾಂಗ್ರೆಸ್ ಉದ್ಯಮ ವಲಯದ ಜಾಹೀರಾತು ಸಂಸ್ಥೆಗಳ ಮೂಲಕ ಪ್ರಚಾರ ಕಾರ್ಯವನ್ನು ವಿನ್ಯಾಸಗೊಳಿಸಿವೆ. ಬಹಳಷ್ಟು ರಾಜಕೀಯ ನಾಯಕರು ಸುದ್ದಿಯಲ್ಲಿರುವ ಮೂಲಕ ಜನರ ನೆನಪಿನಲ್ಲಿ ಸದಾ ಹಸಿರಾಗಿರುವಂತೆ ನೋಡಿಕೊಳ್ಳಲು ಮಾಧ್ಯಮ ಪಂಡಿತರ ಸಲಹೆ ಪಡೆಯುವಂತಹ ಪರಿಸ್ಥಿತಿಯನ್ನು ಕಾಣಬಹುದು. ಇದೆಲ್ಲವನ್ನೂ ಗಮನಿಸಿದರೆ ನಮಗೆ ವಿಷಾದವಾಗುವ ಅಂಶವೆಂದರೆ ಪ್ರಜಾತಂತ್ರ ವ್ಯವಸ್ಥೆ ಉದ್ಯಮೀಕರಣಗೊಳ್ಳುತ್ತಿದೆ. ಪ್ರಜೆಗಳು ಬಳಕೆದಾರರು ಆಡಳಿತ ನಡೆಸುವವರು ಸೇವೆಯನ್ನು ಮಾರಾಟ ಮಾಡುವ ಉದ್ದಿಮೆದಾರರಾಗಿರುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಇದು ರಾಜಕೀಯ ಮಾತ್ರವಲ್ಲ. ಎಲ್ಲಾ ರಂಗಗಳಲ್ಲಿಯೂ ಕಂಡುಬರುತ್ತಿರುವ ಸ್ಥಿತಿಯಾಗಿದೆ.

ಜಾಗತಿಕ ಮಟ್ಟದಲ್ಲಿ ನಡೆಯುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಎಲ್ಲ ಏರುಪೇರುಗಳ ಹಿಂದೆಯೂ ರಾಜಕೀಯದ ವ್ಯಾಪಾರೀಕರಣವನ್ನು ನಾವು ಗುರುತಿಸಬಹುದು. ಇರಾಕ್‌ನ ಮೇಲೆ ಅಮೆರಿಕಾವು ಸದ್ದಾಂ ಹುಸೇನ್‌ನ ಬಳಿ ಇರುವ ಸಮೂಹ ನಾಶಕ ಜೈವಿಕ ಅಸ್ತ್ರಗಳನ್ನು ನಾಶಪಡಿಸುವ ಉದ್ದೇಶದಿಂದ ಯುದ್ಧ ಮಾಡಿತು. ಆದರೆ ಅಂತಹ ಸಮೂಹನಾಶಕ ಅಸ್ತ್ರಗಳು ಎಲ್ಲಿದ್ದುವು, ಅವುಗಳ ಪತ್ತೆಯಾಯಿತೇ? ಇಲ್ಲವೆಂದಾದರೆ ಸಾವಿರಾರು ಜನರ ಜೀವನ ಬಲಿ ತೆಗೆದುಕೊಂಡ ಅಮೆರಿಕವನ್ನು ಯಾರು ಶಿಕ್ಷಿಸಬೇಕು? ಇದೀಗ ಇರಾನ್ ಮೇಲೆ ಅಮೆರಿಕಾದ ಕೆಂಗಣ್ಣು ಬಿದ್ದಿದೆ. ಜಾರ್ಜಿಯಾದಲ್ಲಿ ಪ್ರಜಾಪ್ರಭುತ್ವ ಮಾತಾಡುವ ಅಮೆರಿಕ, ಮೈಯಾನ್‌ಮಾರ್‌ನಲ್ಲಿ ನೊಬೆಲ್ ಪಾರಿತೋಷಕ ಪಡೆದ ಮತ್ತು ಅಲ್ಲಿನ ಶೇಕಡಾ ೯೦ ಜನರ ಒಪ್ಪಿಗೆ ಇರುವ ಬಹುಮತದ ನಾಯಕಿ ಲಿಂಗ್‌ಸಾನ್‌ಸೂಕಿಯ ಬಗ್ಗೆ ಅಮೆರಿಕಾದ ಅಭಿಪ್ರಾಯವೇನು? ಟಿಬೆಟ್ ಗಲಭೆಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುವ ಮುಂದುವರಿದ ದೇಶಗಳು ಯುರೋಪ್‌ನ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಮೌನವಹಿಸುತ್ತಿದೆ. ಅಂದರೆ ಬದಲಾಗುತ್ತಿರುವ ಸನ್ನಿವೇಶದಲ್ಲಿ ಅಭಿವೃದ್ದಿಶೀಲ ದೇಶಗಳಲ್ಲಿ ಮತ್ತು ಹಿಂದುಳಿದಿರುವ ದೇಶಗಳಲ್ಲಿ ಸರಕಾರಗಳನ್ನು ನಿತ್ರಾಣಗೊಳಿಸಿ, ಅಲ್ಲಿನ ಆಂತರಿಕ ತಲ್ಲಣಗಳ ಬಗ್ಗೆ ಜನರು ಗಮನ ಹರಿಸುವಂತೆ ಮಾಡುವ ಕುಟಿಲೋಪಾಯಗಳನ್ನು ಗಮನಿಸಬಹುದು. ಈ ಎಲ್ಲಾ ಕಾರಣಗಳಿಂದ ವಿಶ್ವದಾದ್ಯಂತ ಜನ ಇವತ್ತು ಸಮಸ್ಯೆಗಳನ್ನು ತೀರಾ ಸರಳೀಕರಿಸಿ ನೋಡು ವಂತಹ ಸ್ಥಿತಿ ನಿರ್ಮಾಣವಾಗಿದೆ. ಬಹುಶಃ ಧಾರ್ಮಿಕ ಕಾರಣಗಳಿಂದಾಗಿ ಹುಟ್ಟಿಕೊಳ್ಳುವ ಭಯೋತ್ಪಾದನೆ, ಮಧ್ಯಪೂರ್ವದ ರಾಜಕೀಯ ಸಮಸ್ಯೆ, ಮತ್ತು ತೃತೀಯ ಜಗತ್ತಿನಲ್ಲಿ ಕಂಡುಬರುತ್ತಿರುವ ರಾಜಕೀಯ ತಲ್ಲಣಗಳನ್ನು ಮತ್ತು ಅವುಗಳಿಗೆ ಕಾರಣವಾದ ಸಂಗತಿಗಳನ್ನು ವಿಶ್ಲೇಷಿಸಿದರೆ ಜಾಗತೀಕರಣದ ರಾಜಕೀಯ ಆಯಾಮಗಳ ಬಗ್ಗೆ ವಿಷದವಾಗಿ ವಿಶಿಷ್ಟ ಒಳನೋಟಗಳು ದೊರೆಯಬಹುದು. ಪ್ರಾಯಶಃ ಜಾಗತೀಕರಣದ ಬಗ್ಗೆ ನಡೆಯುವ ಹಲವು ಶಿಬಿರಗಳಿಂದ ಕೇಳಿಬರುತ್ತಿರುವ ಆಪಾದನೆ ಮತ್ತು ಸಮರ್ಥನೆ ಯನ್ನು ಕೂಲಂಕಷವಾಗಿ ವಿಶ್ಲೇಷಿಸುವುದು ಸೂಕ್ತವೆನಿಸುತ್ತದೆ.

ರಾಜಕೀಯ ಆಯಾಮಗಳ ಬಗ್ಗೆ ಪ್ರಸ್ತಾಪಿಸುವಾಗ ಇನ್ನೊಂದು ಬೆಳವಣಿಗೆಯನ್ನು ಗಮನಿಸುವುದು ಸೂಕ್ತವೆನಿಸುತ್ತದೆ. ಅದೆಂದರೆ ಉದ್ಯಮ ವಲಯವಲ್ಲದೆ ತೃತೀಯ ವಲಯವೆನ್ನುವ ಇನ್ನೊಂದು ಕ್ಷೇತ್ರವನ್ನು ಮುಂದುವರಿದ ದೇಶಗಳು ಇವತ್ತು ಗುರುತಿ ಸುತ್ತಿವೆ. ಏನಿದು ತೃತೀಯ ರಂಗ ಎನ್ನುವ ಪ್ರಶ್ನೆ ಎಂಬ ಕುತೂಹಲ ಸಹಜವಾಗಿಯೇ ಮೂಡುತ್ತದೆ. ಅಭಿವೃದ್ದಿಶೀಲ ದೇಶಗಳಲ್ಲಿ ಸರಕಾರಗಳು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುವ ಸಮಯದಲ್ಲಿ ಅಂತಹ ಶೂನ್ಯವನ್ನು ತುಂಬುವ ಒಂದು ಪ್ರಯತ್ನವಾಗಬೇಕಿದೆ. ಇಂತಹ ಕೆಲಸ ಬಹಳ ಕಾರಣಗಳಿಗಾಗಿ ಅವಶ್ಯ. ಒಂದನೆಯದಾಗಿ ಸರಕಾರದ ಹಿಂದೆ ಸರಿಯುವಿಕೆಯಿಂದ ಉಂಟಾಗುವ ಶೂನ್ಯವನ್ನು ತುಂಬದೇ ಹಾಗೆ ಬಿಟ್ಟಲ್ಲಿ ಜನರ ಸಮಸ್ಯೆ ಉಲ್ಬಣವಾಗಿ ಅಂತಹ ಒಂದು ಅಸಹನೆ, ಸಿಟ್ಟು ಹಿಂಸಾರೂಪದಲ್ಲಿ ಅಥವಾ ಇನ್ನಾವುದೋ ರೂಪದಲ್ಲಿ ಸಾಮಾಜಿಕ ಅಶಾಂತಿಯನ್ನು ಹರಡಬಹುದು. ಹೀಗಾಗಿ ಇಂತಹ ಒಂದು ಪ್ರಯತ್ನ ಅಗತ್ಯ. ಎರಡನೆಯದಾಗಿ ಈ ಶೂನ್ಯವನ್ನು ತುಂಬುವ ಪ್ರಕ್ರಿಯೆಯಲ್ಲಿ ವಿದೇಶೀ ನೆರವನ್ನು ಪಡೆಯುವ ಸಂಸ್ಥೆಗಳು ಅವಕಾಶಗಳನ್ನು ಪಡೆಯುತ್ತವೆ. ಈ ರೀತಿಯಲ್ಲಿ ವಿದೇಶಗಳಿಂದ ಮತ್ತು ಜಾಗತಿಕ ಸಂಸ್ಥೆಗಳಿಂದ ನೆರವು ಪಡೆಯುವ ಸಂಸ್ಥೆಗಳನ್ನು ಸರಕಾರಕ್ಕಿಂತಲೂ ಸುಲಭವಾಗಿ ನಿಯಂತ್ರಿಸಬಹುದು ಮತ್ತು ಪ್ರಭಾವಿಸ ಬಹುದಾಗಿದೆ. ತೃತೀಯ ರಂಗದ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಗಳಲ್ಲಿ ಉದ್ಯಮ ಜಗತ್ತಿ ನೊಂದಿಗೆ ನಂಟು ಹೊಂದಿರುವ ಅಥವಾ ಉದ್ಯಮ ಜಗತ್ತಿನಿಂದಲೇ ಪ್ರಾಯೋಜಿಸಲ್ಪಟ್ಟ ಸಂಸ್ಥೆಗಳೂ ಇಂದು ದೊಡ್ಡ ಸಂಖ್ಯೆಯಲ್ಲಿವೆ. ಮಾತ್ರವಲ್ಲ ಜಾಗತೀಕರಣದ ನಂತರದ ದಿನಗಳಲ್ಲಿ ಅವುಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಸರಕಾರದ ಹಿಂದೆ ಸರಿಯುವಿಕೆಯಿಂದ ಉಂಟಾದ ವಾತಾಯನವನ್ನು ತುಂಬುವ ಸಂಸ್ಥೆಗಳು ಮತ್ತು ಸ್ಥಳೀಯ ಜನರ ಮಧ್ಯೆ ತಿಕ್ಕಾಟಗಳು ನಡೆಯುವ ಸಂದರ್ಭಗಳೂ ಇದೆ. ಇಂತಹ ಸಂಘರ್ಷಗಳಿಗೆ ಬೇರೆ ಬೇರೆ ರೀತಿಯ ಹಿತಾಸಕ್ತಿಗಳು ಕಾರಣವಾಗಿದ್ದು, ಅವುಗಳಲ್ಲಿ ರಾಜಕೀಯ, ಧಾರ್ಮಿಕ ಮತ್ತು ಅಸ್ಮಿತಿಯ ಕಾರಣಗಳು ಹೆಚ್ಚಾಗಿ ಕಂಡುಬರುತ್ತಿವೆ.

ಜಾಗತೀಕರಣ ಪ್ರಕ್ರಿಯೆಯ ರಾಜಕೀಯ ಮತ್ತು ಆರ್ಥಿಕ ಆಯಾಮಗಳನ್ನು ಚರ್ಚಿಸಿದ ನಂತರ ಈ ಎರಡೂ ಅಂಶಗಳಿಂದ ನಿರ್ಧರಿತವಾಗುವ ಅಥವಾ ಪ್ರಭಾವಿಸಲ್ಪಡುವ ಸಾಂಸ್ಕೃತಿಕ ಆಯಾಮಗಳ ಕುರಿತು ಮುಂದೆ ಪ್ರಸ್ತಾಪಿಸಲಾಗಿದೆ.

ಜಾಗತೀಕರಣದ ಸಾಂಸ್ಕೃತಿಕ ಆಯಾಮಗಳು

ಸಂಸ್ಕೃತಿ ಎನ್ನುವುದು ಬಹಳ ವಿಸ್ತೃತ ಅರ್ಥ ಮತ್ತು ವ್ಯಾಪ್ತಿ ಇರುವ ಶಬ್ದವಾಗಿದೆ. ಇದು ವ್ಯಕ್ತಿಯ ಮತ್ತು ಸಮುದಾಯದ ಇಡೀ ಜೀವನ ವಿಧಾನಗಳನ್ನು ಒಳಗೊಳ್ಳುವ ಅರ್ಥ ಸಮುಚ್ಛಯ. ಇಂತಹ ವಿಶಾಲವಾದ ಹರುಹುಗಳಿರುವ ಈ ಪರಿಕಲ್ಪನೆಯೊಳಗೆ ಉತ್ಪಾದನಾ ಸಂಸ್ಕೃತಿ, ಆಹಾರ ಸಂಸ್ಕೃತಿ, ಕರ್ಮಸಂಸ್ಕೃತಿ ಮತ್ತು ಧರ್ಮ ಸಂಸ್ಕೃತಿಯೇ ಮುಂತಾದ ಉಪ ಶಾಖೆಗಳನ್ನು ಗಮನಿಸಬಹುದು. ಆದರೆ ಸಂಸ್ಕೃತಿ ಎನ್ನುವಾಗ ಈ ಎಲ್ಲಾ ಆಯಾಮಗಳನ್ನು ಒಳಗೊಂಡಂತೆ ಬಹಳ ಸರಳವಾದ ಅರ್ಥದಲ್ಲಿ ನಾವು ಈ ಪದವನ್ನು ಬಳಸುತ್ತಿದ್ದೇವೆ. ಪ್ರಾಯಶಃ ಕೇವಲ ಸಂಸ್ಕೃತಿಯ ಬಗ್ಗೆಯೇ ನಾವು ಚರ್ಚಿಸು ವುದಿದ್ದರೆ ಈ ಎಲ್ಲಾ ಸೂಕ್ಷ್ಮಗಳ ಬಗ್ಗೆ ಒಳಸುಳಿವುಗಳ ಬಗ್ಗೆ ವಿಷದವಾಗಿ ಚರ್ಚಿಸ ಬಹುದೇನೋ. ಆದರೆ ಸದ್ಯದ ಸಂದರ್ಭದಲ್ಲಿ ಜಾಗತೀಕರಣ ನಮ್ಮ ಜೀವನ ವಿಧಾನಗಳನ್ನು ಯಾವ ರೀತಿಯಲ್ಲಿ ಪ್ರಭಾವಿಸುತ್ತಿದೆ ಎನ್ನುವ ಚರ್ಚೆಯ ಸಂದರ್ಭದಲ್ಲಿ ನಾವು ಬಹಳ ಸಾಮಾನ್ಯವಾದ ಅರ್ಥದಲ್ಲಿ ಅಂದರೆ ಜನಸಾಮಾನ್ಯರ ದಿನ ನಿತ್ಯದಲ್ಲಿ ಬದುಕಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕೇಂದ್ರವಾಗಿರಿಸಿ ವಿಷಯವನ್ನು ಅವಲೋಕಿಸಬೇಕಾಗಿದೆ. ಜಾಗತೀಕರಣದ ಕಾರಣದಿಂದ ನಮ್ಮ ಕರ್ಮ ಸಂಸ್ಕೃತಿ, ಆಹಾರ ಸಂಸ್ಕೃತಿ, ಮನೋರಂಜನಾ ವಿಧಾನ, ಕಲಿಕಾ ಸಂಸ್ಕೃತಿ, ರಾಜಕೀಯ ಸಂಸ್ಕೃತಿ ಎಲ್ಲವೂ ಪ್ರಭಾವಕ್ಕೆ ಒಳಗಾಗುತ್ತಿದೆ. ಇಂತಹ ಸಮಗ್ರ ಸಂಸ್ಕೃತಿಯನ್ನು ಗಮನಿಸಿದರೆ ನಾವು ಮನುಷ್ಯನ ಆಂತರಿಕ ಸುಪ್ತ ಪ್ರತಿಭೆಗೆ ಹೊಳಪು ನೀಡುವ, ಜೀವನ ಮೌಲ್ಯದ ಹುಡುಕಾಟ ನಡೆಸುವ ದೇಶೀಯ ಸಂಸ್ಕೃತಿಯಿಂದ ಭಿನ್ನವಾದ ಉಪಭೋಗ ಅಥವಾ ಮಾರುಕಟ್ಟೆ ಅಥವಾ ಕೊಳ್ಳುಬಾಕ ಸಂಸ್ಕೃತಿಯತ್ತ ಕೊಚ್ಚಿ ಹೋಗುತ್ತಿದ್ದೇವೆ. ಇಂದಿನ ಪರಿಸ್ಥಿತಿಯಲ್ಲಿ ಒಂದು ಕಾಲದಲ್ಲಿ ಮೌಲ್ಯಗಳಾಗಿದ್ದ ವಿಷಯಗಳು ಸರಕುಗಳಾಗುತ್ತಿವೆ ಮತ್ತು ಸಂಪನ್ಮೂಲವಾಗುತ್ತಿವೆ. ಪ್ರತಿನಿತ್ಯದ ನಮ್ಮ ಬದುಕಿನಲ್ಲಿ ಇಂತಹ ಬದಲಾವಣೆಗಳನ್ನು ನಾವು ಕಾಣಬಹುದು. ನಾವು ಆಚರಿಸುವ ‘ಪ್ರೇಮಿಗಳ ದಿನ’, ‘ತಾಯಂದಿರ ದಿನಾಚರಣೆ’ ‘ತಂದೆಯಂದಿರ ದಿನಾಚರಣೆ’, ‘ಜನ್ಮದಿನಾಚರಣೆ’ ಎಲ್ಲವೂ ಒಂದು ರೀತಿಯ ಚಟಗಳಾಗಿ ಬಿಟ್ಟಿವೆ. ಇವುಗಳ ಮುಖ್ಯ ಉದ್ದೇಶ ವಸ್ತುಗಳಿಗೆ ಮಾರುಕಟ್ಟೆಯೊದಗಿಸಿಕೊಡುವುದೇ ಹೊರತು ಪಾರಂಪರಿಕ ಮೌಲ್ಯಗಳನ್ನು ಹುಡುಕುವುದಾಗಿಲ್ಲ.

ಇಂದು ಕ್ರಿಕೆಟ್‌ನಂತಹ ಕ್ರೀಡೆಗಳು, ಒಲಂಪಿಕ್ಸ್‌ನಂತಹ ಕ್ರೀಡಾ ಕೂಟಗಳು ಕೂಡಾ ಇಂತಹ ಮಾರುಕಟ್ಟೆ ಪ್ರವೃತ್ತಿಗೆ ಬಲಿಯಾಗುತ್ತಿವೆ. ಇವೆಲ್ಲವೂ ವರ್ತಮಾನದ ನಾಗರಿಕತೆಯ ಔನ್ನತ್ಯದ ದರ್ಶನ ಮಾಡಿಕೊಡುವುದಿಲ್ಲ. ಬದಲಾಗಿ ಮಾರುಕಟ್ಟೆ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ, ಉತ್ತೇಜಿಸುವ ಕ್ರಿಯೆಗಳಾಗಿ ಕಂಡುಬರುತ್ತವೆ. ಇಂತಹ ಎಲ್ಲಾ ಯೋಜನೆಗಳ ಹಿಂದೆ ಕೆಲಸ ಮಾಡುವುದು ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ಮಾಧ್ಯಮಗಳು, ವೃತ್ತ ಪತ್ರಿಕೆಗಳು, ಶಿಕ್ಷಣ ವ್ಯವಸ್ಥೆ, ಆರೋಗ್ಯ ತಂತ್ರಜ್ಞಾನ, ಅರ್ಥವ್ಯವಸ್ಥೆ… ಹೀಗೆ ಪ್ರತಿಯೊಂದು ಕೂಡಾ ಮನುಷ್ಯನನ್ನು ಹಣ ಸಂಪಾದಿಸುವ ಮತ್ತು ಸಂಪಾದಿಸಿದ ಹಣವನ್ನು ಖರ್ಚುಮಾಡುವ ಯಂತ್ರವನ್ನಾಗಿ ಮಾರ್ಪಡಿಸಿದೆ ಎನ್ನುವ ಅಪಾದನೆಯಿದೆ. ಒಟ್ಟಿನಲ್ಲಿ ಒಂದು ನಿರ್ದಿಷ್ಟ ಮಾದರಿಯ ಉತ್ಪಾದನಾ ವ್ಯವಸ್ಥೆಯು ಮುಂದುರಿಯುವ ಮತ್ತು ಮುಂದುವರಿದು ಬೆಳೆಯಲು ಅಗತ್ಯವಾಗಿರುವ ಭೂಮಿಕೆಯನ್ನು ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಕಾರಣದಿಂದಾಗಿಯೇ ನಾವು ಬಳಸುವ ವಸ್ತುಗಳು, ನಾವು ನೋಡುವ ಚಲನಚಿತ್ರ, ಓದುವ ಪತ್ರಿಕೆಗಳ ಸ್ವರೂಪ, ಕೇಳುವ ಸಂಗೀತ, ತಿನ್ನುವ ಅಹಾರ, ನೃತ್ಯ ಚಿತ್ರಕಲೆ ಎಲ್ಲವೂ ಒಂದು ರೀತಿಯ ಸಿದ್ಧ ಮಾದರಿಯ ಚೌಕಟ್ಟಿಗೆ ಸೀಮಿತವಾಗುತ್ತಿರುವ ಬೆಳವಣಿಗೆಯನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಬದುಕಿನ ವೈವಿಧ್ಯಗಳು ಮರೆಯಾಗಿ ಒಂದು ರೀತಿಯ ಏಕತಾನತೆ ಸ್ಥಾಪಿತ ಗೊಳ್ಳುವುದನ್ನು ಕಾಣಬಹುದು. ಬಹುಶಃ ಇಂತಹ ಬೆಳವಣಿಗೆಯಿಂದಾಗಿ ವೈವಿಧ್ಯತೆ ಮಾಯವಾಗಿ, ಸಾವಿರಾರು ಭಾಷೆ, ಸಂಸ್ಕೃತಿಗಳ ಅಸ್ತಿತ್ವ ನಿರಾಕರಣೆಯಾದರೆ ಅದರಿಂದ ಬೇರೆ ಬೇರೆ ರೀತಿಯ ಪರಿಣಾಮಗಳಾಗಬಹುದು. ಇಂತಹ ಪರಿಣಾಮಗಳು ಜನರ ಬದುಕಿನಲ್ಲಿ ಒತ್ತಡಗಳನ್ನು, ತಲ್ಲಣಗಳನ್ನು ಉಂಟುಮಾಡಬಹುದು. ವೈವಿಧ್ಯ ಮರೆಯಾಗುವುದರ ಸಂಕೇತವನ್ನು, ಮರೆಯಾಗುತ್ತಿರುವ ಭಾಷೆಗಳ ಸಂಖ್ಯೆಯನ್ನು ಗಮನಿಸಿದರೆ ತಿಳಿಯುತ್ತದೆ. ಈ ಕೆಳಗೆ ನೀಡಿದ ಕೋಷ್ಟಕದಲ್ಲಿ ಈ ಬಗೆಗಿನ ವಿವರಗಳನ್ನು ನೀಡಲಾಗಿದೆ.

ಕ್ರಿ.ಶ.೧೫೦೦ ರಿಂದ ಕ್ರಿ.ಶ.೨೦೦೦ನೆಯ ಇಸವಿಯವರೆಗೆ ಜಗತ್ತಿನಾದ್ಯಂತ ಬಳಕೆಯಲ್ಲಿರುವ ಭಾಷೆಗಳ ವಿವರಗಳು

ಖಂಡ

೧೬ನೆಯ ಶತಮಾನ

೧೭ನೆಯ ಶತಮಾನ

೧೮ನೆಯ ಶತಮಾನ

೧೯ನೆಯ ಶತಮಾನ

೨೦ನೆಯ ಶತಮಾನ ಆದಿ

೨೦ನೆಯ ಶತಮಾನ ಅಂತ್ಯ

೨೧ನೆಯ ಶತಮಾನ

ಅಮೆರಿಕಾ ೨೧೭೫ ೨೦೨೫ ೧೮೦೦ ೧೫೦೦ ೧೧೨೫ ೧೦೦೫ ೩೬೬
ಆಫ್ರಿಕಾ ೪೩೫೦ ೪೦೫೦ ೩೬೦೦ ೩೦೦೦ ೨೨೫೦ ೨೦೧೧ ೧೩೫೫
ಯುರೋಪ್ ೪೩೫ ೪೦೫ ೩೬೦ ೩೦೦ ೨೨೫ ೨೦೧ ೧೪೦
ಏಷಿಯಾ ೪೭೮೫ ೪೪೫೫ ೩೯೬೦ ೩೩೦೦ ೨೪೭೫ ೨೨೧೨ ೧೦೪೪
ಪೆಸಿಪಿಕ್ ೨೭೫೫ ೨೫೬೫ ೨೨೮೦ ೧೯೦೦ ೧೪೨೫ ೧೨೭೪ ೯೨
ಜಾಗತಿಕ ಮಟ್ಟದಲ್ಲಿ ೧೪೫೦೦ ೧೩೫೦೦ ೧೨೦೦ ೧೦೦೦೦ ೭೫೦೦ ೬೭೦೩ ೨೯೯೭

 

ಮೇಲೆ ಉಲ್ಲೇಖಿಸಿದ ವಿಷಯಗಳಲ್ಲದೇ ಪರಿಸರ ಮಾಲಿನ್ಯದಂತಹ ವಿಷಯಗಳು, ಉಪಭೋಗ ವಿಧಾನದಲ್ಲಿ ಅಗುತ್ತಿರುವ ಬದಲಾವಣೆಗಳು, ಜೀವ ವೈವಿಧ್ಯಕ್ಕೆ ಧಕ್ಕೆಯಾಗು ವುದರಿಂದ ಉಂಟಾಗುತ್ತಿರುವ ತೊಂದರೆಗಳು ಮುಂತಾದ ವಿಷಯಗಳು ಜಗತ್ತಿನ ವಿವಿಧ ಸಮುದಾಯದ ಜನಗಳ ಜೀವನ ವಿಧಾನದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಇದರೊಂದಿಗೇನೆ ಗುಡ್ಡಗಾಡು ಮತ್ತು ಬುಡಕಟ್ಟು ಜನರು ಆಧುನಿಕ ವ್ಯವಸ್ಥೆಯಲ್ಲಿ ಬದುಕಿನ ಹಕ್ಕಿನಿಂದ ವಂಚಿತರಾಗುತ್ತಿರುವುದನ್ನು ಗಮನಿಸಬಹುದಾಗಿದೆ.

ಉಪಸಂಹಾರ

ಜಾಗತೀಕರಣದ ವಿವಿಧ ಆಯಾಮಗಳ ಬಗ್ಗೆ ಚರ್ಚೆ ನಡೆಸಿದ ನಂತರವೂ ನಾವು ಈ ಪರಿಕಲ್ಪನೆಯ ಬಗ್ಗೆ ಮತ್ತು ಅದು ಜನರ ಜೀವನದಲ್ಲಿ ತರುತ್ತಿರುವ ಬದಲಾವಣೆಗಳ ಬಗ್ಗೆ ಯಾವುದೇ ಮೌಲ್ಯಾಧಾರಿತ ತೀರ್ಮಾನಗಳನ್ನು ಮಾಡಲಾಗದು. ಒಂದಂತೂ ಬಹಳ ಸತ್ಯ ಇದುವರೆಗೆ ನಾವು ಅನುಸರಿಸಿದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನೀತಿಗಳೆಲ್ಲವೂ ಬಂಡವಾಳ ಆಧಾರಿತ ಮುಕ್ತ ಮತ್ತು ಮಾರುಕಟ್ಟೆ ಆಧಾರಿತ ಚಿಂತನೆಯ ತಳಹದಿಯ ಮೇಲೆ ರೂಪು ಪಡೆದಿರುವಂತಹದು ಅಥವಾ ರಚಿತವಾದದ್ದಾಗಿದೆ. ಬಹಳ ದೀರ್ಘ ಅವಧಿಯವರೆಗೆ ಇಂತಹ ಒಂದು ವ್ಯವಸ್ಥೆಯ ಸಂಪೂರ್ಣ ಉತ್ಕರ್ಷಕ್ಕೆ ತಾತ್ವಿಕ ನೆಲೆಯಲ್ಲಿ ಅಲ್ಲವಾದರೂ ಪ್ರಾಯೋಗಿಕ ನೆಲೆಯಲ್ಲಿ ಸಮಾಜವಾದಿ ವ್ಯವಸ್ಥೆಯ ತಡೆಯಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಅಂತಹ ತಡೆಯೂ ದೂರವಾಗಿರುವುದರಿಂದ ಮುಕ್ತ ಮಾರುಕಟ್ಟೆಯ ನೀತಿ ತನ್ನ ಸಂಪೂರ್ಣ ವಿಶ್ವದರ್ಶನ ನೀಡುತ್ತಿದೆ. ಇಂತಹ ಒಂದು ಬೆಳವಣಿಗೆಯನ್ನು ತಡೆಯುವುದು ಅಗತ್ಯವೂ ಅಲ್ಲ ಅನಿವಾರ್ಯವೂ ಅಲ್ಲ. ಆದರೆ ಇಂತಹ ವ್ಯವಸ್ಥೆಯಲ್ಲಿ ಅಂಚಿಗೆ ಸರಿಯುವ ಜನರನ್ನು ಮುಖ್ಯ ವಾಹಿನಿಗೆ ತರುವ ಮತ್ತು ಅಂತಹ ಕೆಲಸವನ್ನು ತುರ್ತಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುವುದು ಎಲ್ಲಕ್ಕಿಂತಲೂ ಮುಖ್ಯ. ಬಂಡವಾಳಶಾಹಿ ವ್ಯವಸ್ಥೆಯ ಮುಂದುವರಿಕೆಯನ್ನು ನಾವು ಒಪ್ಪಬಹುದು, ಒಪ್ಪದಿರಬಹುದು. ಆದರೆ ಅಂತಹ ಒಂದು ವ್ಯವಸ್ಥೆಗೆ ಸದ್ಯದ ಭವಿಷ್ಯದಲ್ಲಿ ಯಾವ ಪರ್ಯಾಯವೂ ಗೋಚರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಎರಡು ಪ್ರಮುಖ ವಿಷಯಗಳ ಬಗ್ಗೆ ಚಿಂತನೆ ನಡೆಸುವ ಅವಶ್ಯಕತೆ ಇದೆ.

ಮೊದಲನೆಯದಾಗಿ ಸಮಾಜವಾದಿ ಸಿದ್ಧಾಂತದ ಬಗ್ಗೆ ಕುರುಡು ವ್ಯಾಮೋಹವನ್ನು ಬದಿಗಿಟ್ಟು, ಸಮಾಜವಾದಿ ಸಿದ್ಧಾಂತಗಳನ್ನು ಬದಲಾದ ಪರಿಸ್ಥಿತಿಯಲ್ಲಿ ಮರು ವಿಮರ್ಶಿ ಸುವ ಕಾಲ ಬಂದಿದೆ ಎನ್ನುವುದನ್ನು ಮನಗಾಣಬೇಕು. ಮಾತ್ರವಲ್ಲ ಬಹುಮತೀಯ ಸಮಾಜದಲ್ಲಿ ಸಾಮಾಜಿಕ ಬದ್ಧತೆಯನ್ನು ಪ್ರತಿಸ್ಪರ್ಧಾತ್ಮಕವಾದ ರೀತಿಯಲ್ಲಿ ಪರಿಭಾವಿಸುವ ಪ್ರವೃತ್ತಿಯನ್ನು ಬಿಟ್ಟು ಪೂರಕವಾದ ದೃಷ್ಟಿಯಿಂದ ಮರು ನಿರೂಪಿಸಿಕೊಳ್ಳಬೇಕಾಗುತ್ತದೆ. ಪ್ರಾಯಶಃ ಆಧುನಿಕತೆಯ ಮತ್ತು ಆಧುನಿಕ ಸಂಸ್ಥೆಗಳ ಬಗ್ಗೆ ಬಹಳ ತೀಕ್ಷ್ಣವಾಗಿಯೇ ಟೀಕೆ ಮಾಡಿದ ನೆಹರೂ ಚಿಂತನೆಗಳು ಇಂತಹ ದಿಸೆಯಲ್ಲಿ ನಮ್ಮ ನೆರವಿಗೆ ಬರಬಹುದೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಬಗ್ಗೆ ಯೋಚಿಸುವ ಅಗತ್ಯವಿದೆ. ಪ್ರತಿಯೊಬ್ಬ ವ್ಯಕ್ತಿಯ ಒಳಿತು ಸಮುದಾಯದ ಒಳಿತಿನಲ್ಲಿ ಅಡಗಿರುವುದೂ ಸತ್ಯವಾಗಿರುವ ಕಾರಣ ಸಾಮಾಜಿಕ ಕಾಳಜಿ ಗಳಿಗೆ ಸ್ಪಂದಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ಯಾಕೆಂದರೆ ಜಾಗತೀಕರಣದ ದಿನಗಳಲ್ಲಿ ಅಧಿಕಾರಶಾಹಿ, ಸರಕಾರಗಳು ಮತ್ತು ದೇಶ ದೇಶಗಳ ನಡುವಿರುವ ನೀತಿ ನಿಯಮಗಳು ಯಾವ ಕಾನೂನಿನ ತೊಂದರೆಗಳು ನಿವಾರಣೆಯಾಗಿರುವುದು ಸತ್ಯ. ಆದರೆ ಇಂತಹ ಬೇಲಿಗಳು ವ್ಯಕ್ತಿ, ವ್ಯಕ್ತಿಗಳ ನಡುವೆ ಹುಟ್ಟಿಕೊಂಡಿವೆ. ಜಾಗತೀಕರಣದ ದಿನಗಳಲ್ಲಿ ಅಡೆತಡೆಗಳಿರುವ ಮನಸ್ಸುಗಳ ಮಧ್ಯೆ, ಸಮುದಾಯಗಳ ಮಧ್ಯೆ, ಜಾತಿ ಮತ್ತು ಧರ್ಮಗಳ ಮಧ್ಯೆ ಈ ಗೋಡೆಗಳನ್ನು ಹೇಗೆ ಉರುಳಿಸುವುದು. ಇದು ನಮ್ಮ ಮುಂದಿರುವ ಸದ್ಯದ ಬಹುದೊಡ್ಡ ಸವಾಲು. ಸಮಾಜವಾದಿ ಸಿದ್ಧಾಂತದ ಬೇರುಗಳು ಗಟ್ಟಿಯಾಗಬೇಕಾದರೆ ವ್ಯಕ್ತಿ ಸಮಾಜ ಮುಖಿಯಾಗಿ ಚಿಂತನೆ ನಡೆಸುವುದು ಬಹಳ ಅಗತ್ಯ. ವೈಯಕ್ತಿಕ ಕಲ್ಯಾಣದ ಬಗ್ಗೆ, ಸಾಧನೆಯ ಬಗ್ಗೆ ಯೋಚಿಸುವ ವ್ಯಕ್ತಿ ಗಳಿರುವ ಸಮುದಾಯದಲ್ಲಿ ಸಮಾಜವಾದಿ ಚಿಂತನೆಗಳು ಅಥವಾ ಸಮಾಜದ ಕಲ್ಯಾಣ ಕೇಂದ್ರಿತ ಚಿಂತನೆಗಳು ಬೆಳೆಯಲು ಸಾಧ್ಯವಿಲ್ಲವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲರ ಹಿತ ಮತ್ತು ಅದಕ್ಕೆ ಪೂರಕವಾದ ವೈಯಕ್ತಿಕ ಸಾಧನೆಯ ಗುರಿಗಳನ್ನು ಸರಿಹೊಂದಿಸಿ ಕೊಳ್ಳುವುದು ಅಗತ್ಯ.

ಎರಡನೆಯದಾಗಿ, ಜಾಗತೀಕರಣದ ಪ್ರಕ್ರಿಯೆ ಕೇವಲ ಬಡರಾಷ್ಟ್ರಗಳಿಗೆ ನಷ್ಟವನ್ನೇ ಅಥವಾ ಶೋಷಣೆಯನ್ನೇ ಬಳುವಳಿಯಾಗಿ ಕೊಟ್ಟಿದೆ ಎಂದು ಹೇಳುವ ಹಾಗಿಲ್ಲ. ಒಂದೊಮ್ಮೆ ಅಂತಹ ರೀತಿಯಲ್ಲಿ ನಷ್ಟವಾಗಿದ್ದರೆ, ಅದು ಉದ್ದೇಶಪೂರ್ವಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ನಡೆಯುತ್ತಿರುವ ವಿದ್ಯಾಮಾನವೆಂದೇ ಪರಿಗಣಿಸಬೇಕಾಗಿಯೂ ಇಲ್ಲ. ನಮ್ಮ ಕಾಳಜಿ ಇರಬೇಕಾದುದು ಇಂತಹ ಅನಾನುಕೂಲತೆಗಳನ್ನು ಯಾವ ರೀತಿಯಲ್ಲಿ ಸರಿದೂಗಿಸಿಕೊಂಡು ಹೋಗುವುದು ಅಥವಾ ಇಂದಿನ ಸಮಸ್ಯೆಗಳಿಗೆ ಯಾವ ರೀತಿ ಮಾರ್ಗೋಪಾಯಗಳನ್ನು ಕಂಡುಹಿಡಿಯುವುದು. ಈ ನಿಟ್ಟಿನಲ್ಲಿ ಜಾಗತೀಕರಣ ಯುಗದಲ್ಲಿ ನಮ್ಮ ನೆರವಿಗೆ ನಿಲ್ಲಬಲ್ಲ ಹಲವಾರು ಸಂಗತಿಗಳಿವೆ. ಅದರಲ್ಲಿ ಸಂಪರ್ಕ ವನ್ನು ಸುಲಭವಾಗಿಸಿದ ಕಂಪ್ಯೂಟರ್ ಆಧಾರಿತ ತಂತ್ರಜ್ಞಾನ, ಮಾಹಿತಿಯ ಲಭ್ಯತೆ, ಜಾಗತಿಕ ಮಟ್ಟದಲ್ಲಿ ಸಮಾನ ಆಸಕ್ತರು ಸಂಘಟಿತರಾಗಬಹುದಾದಂತಹ ಒಂದು ವ್ಯವಸ್ಥೆ. ಇದನ್ನು ಸರಿಯಾಗಿ ದುಡಿಸಿಕೊಂಡು, ಜಾಗತಿಕ ಮಟ್ಟದಲ್ಲಿ ಒಂದು ನಾಗರಿಕ ಸಮಾಜವನ್ನು ಕಟ್ಟಿಕೊಳ್ಳಬಹುದು. ಇಂತಹ ನಾಗರಿಕ ಸಮಾಜ ಪ್ರಾದೇಶಿಕ, ದೇಶದ ಮತ್ತು ಜಾಗತಿಕ ಮಟ್ಟದಲ್ಲಿ ಸಂಘಟಿಸಿಕೊಳ್ಳುವ ಮೂಲಕ, ಸಮುದಾಯದ ಹಿತಕ್ಕೆ ಮಾರಕವಾದಂತಹ ನೀತಿಗಳ ಬಗ್ಗೆ ಜನಾಂದೋಲನಗಳನ್ನು ರೂಪಿಸಬಹುದಾಗಿದೆ. ಉದ್ಯೋಗ, ವ್ಯಾಪಾರ ಮತ್ತು ಉತ್ಪಾದನೆಯ ವಲಯಗಳಲ್ಲಿ ಜಾಗತಿಕ ಮಟ್ಟದ ಸ್ಪರ್ಧೆ ಇರುವ ಕಾರಣದಿಂದ, ಸಾಮರ್ಥ್ಯವಂತರಿಗೆ ಜಾಗತಿಕ ಮಟ್ಟದಲ್ಲಿ ಎಲ್ಲಿಗೆ ಬೇಕಾದರೆ ಅಲ್ಲಿಗೆ ಹೋಗುವ ಒಂದು ಅವಕಾಶ ನಿರ್ಮಾಣವಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗ ಮತ್ತು ಹೂಡಿಕೆಯ ಅವಕಾಶಗಳನ್ನು ಬಹಳ ದೊಡ್ಡ ಪ್ರಮಾಣದಲ್ಲಿಯೇ ಸೃಷ್ಟಿಸುತ್ತಿವೆ. ಇಂತಹ ಎಲ್ಲ ಅವಕಾಶಗಳ ಬಗ್ಗೆಯೂ ಗಮನಹರಿಸಬೇಕಿದೆ.

ಜಾಗತೀಕರಣವೆನ್ನುವ ಏಕಮುಖ ಬದಲಾವಣೆಯಲ್ಲಿ ನಮ್ಮ ಮುಂದಿರುವ ಆಯ್ಕೆಯೆಂದರೆ, ಮುಂದಿನ ದಿನಗಳಲ್ಲಿ ಆಯ್ಕೆಯ ಅವಕಾಶಗಳನ್ನು ಸಂರಕ್ಷಿಸುವುದು. ಇದಕ್ಕೆ ಬಹಳ ಪ್ರಮುಖವಾಗಿ ಅಗತ್ಯವಿರುವ ಅಂಶವೆಂದರೆ ಬದಲಾವಣೆಯ ವೇಗ ಮತ್ತು ಗತಿಯನ್ನು ಗ್ರಹಿಸುವ ಜಾಗೃತ ಮನಸ್ಸು. ಇಂತಹ ಮನಸ್ಸನ್ನು ಹಸನುಗೊಳಿಸಲು ಜ್ಞಾನದ ಅಗತ್ಯ ತುಂಬಾ ಇದೆ. ಬಹುಶಃ ಈ ಕಾರಣದಿಂದಾಗ ‘ಜ್ಞಾನ’ ಉತ್ಪಾದನಾ ಪ್ರಕ್ರಿಯೆಯಲ್ಲಿ ಅವಶ್ಯವಾಗಿರುವ ೫ನೆಯ ಪ್ರಮುಖ ಅಂಶವೆಂದು ಅರ್ಥಶಾಸ್ತ್ರಜ್ಞರು ಕೂಡಾ ಒತ್ತಿ ಹೇಳಿರುವುದು.

 

ಪರಾಮರ್ಶನ ಗ್ರಂಥಗಳು

೧. ಹೆಲ್ಡ್ ಡೇವಿಡ್(ಸಂ), ೨೦೦೦. ಎ ಗ್ಲೋಬಲೈಸಿಂಗ್ ವರ್ಲ್ಡ್: ಕಲ್ಚರ್, ಎಕನಾಮಿಕ್ಸ್, ಪಾಲಿಟೆಕ್ಸ್,  ಲಂಡನ್: ಓಪನ್ ಯುನಿವರ್ಸಿಟಿ ಪ್ರೆಸ್.

೨. ಹೂಗ್‌ವೆಲ್ಟ್ ಆಂಕೀ, ೧೯೯೭. ಗ್ಲೋಬಲೈಸೇಶನ್ ಆಂಡ್ ದಿ ಪೋಸ್ಟ್ ಕೊಲೋನಿಯಲ್ ವರ್ಲ್ಡ್: ದಿ ನ್ಯೂ ಎಕಾನಮಿ ಆಫ್ ಡೆವಲಪ್‌ಮೆಂಟ್, ಲಂಡನ್: ಮ್ಯಾಕ್‌ಮಿಲನ್.

೩. ಅಮಾರ್ತ್ಯಸೆನ್, ೨೦೦೫, ‘‘ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್: ರೈಟಿಂಗ್ಸ್ ಆನ್ ಇಂಡಿಯನ್ ಕಲ್ಚರ್, ಹಿಸ್ಟರಿ ಆಂಡ್ ಐಡೆಂಟಿಟಿ, ನವದೆಹಲಿ: ಪೆಂಗ್ವಿನ್.

೪. ಗುರುಚರಣ್ ದಾಸ್, ೨೦೦೨. ‘‘ಇಂಡಿಯಾ ಅನ್ ಬೌಂಡ್ : ಫ್ರಮ್ ಇಂಡಿಪೆಂಡೆನ್ಸ್ ಟು ಗ್ಲೋಬಲ್ ಇನ್‌ಫಾರ್ಮಮೇಶನ್ ಏಜ್’’, ನವದೆಹಲಿ: ಪೆಂಗ್ವಿನ್.

೫. ಗಿಲೆನ್ ಮೌರೋ ಎಫ್, ೨೦೦೧. ‘‘ಈಸ್ ಗ್ಲೋಬಲೈಸೇಶನ್ ಸಿವಿಲೈಸಿಂಗ್, ಡಿಸ್ಟ್ರಿಕ್ಟೀವ್, ಆರ್ ಫೀಬಲ್? ಎಕ್ರಿಟೀಕ್ ಆಫ್ ಫೈವ್ ಕೀಡಿಬೇಟ್ಸ್ ಇನ್ ಸೋಶಿಯಲ್ ಸೈನ್ಸ್ ಲಿಟರೇಚರ್’’ ಆನ್ಯುವಲ್ ರಿವ್ಯೆ ಆಪ್ ಸೋಶಿಯಾಲಜಿ ವಾಲ್ಯೂಮ್ ೨೭, ವಾರ್ಟನ್ ಸ್ಕೂಲ್, ಡಿಪಾರ್ಟ್‌ಮೆಂಟ್ ಆಫ್ ಸೋಶಿಯಾಲಜಿ, ಯುನಿರ್ಸಿಟಿ ಆಫ್ ಪೆನ್ಸಿಲೇನಿಯಾ

೬. ಫ್ರೆಡ್ ಮಾನ್  ಬಿ. ಸ್ವೆಜೆರ್, ೨೦೦೩. ‘‘ಗ್ಲೋಬಲೈಸೇಶನ್: ಎ ವೆರಿ ಶಾರ್ಟ್ ಇಂಟ್ರಡಕ್ಷನ್’’, ನೂಯಾರ್ಕ: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್

೭. ಉದಯಕುಮಾರ್ ಇರ್ವತ್ತೂರು, ೨೦೦೭. ‘‘ಅಭಿವೃದ್ದಿ ವಾಸ್ತವ ಮತ್ತು ವಿಕಲ್ಪ’’ ಬೆಂಗಳೂರು: ದಾಮಿನಿ ಪ್ರಕಾಶನ

೮. ಸ್ಟಿಗ್ಲಿಡ್ಜ್ ಜೋಸೆಫ್, ೨೦೦೨. ‘‘ಗ್ಲೋಬಲೈಸೇಶನ್ ಆ್ಯಂಡ್ ಇಟ್ಸ್ ಡಿಸ್‌ಕಂಡೆಂಟ್ಸ್’’ ನ್ಯೂಯಾರ್ಕ್: ಡಬ್ಲ್ಯೂ.ಡಬ್ಲ್ಯೂ, ನಾರ್ದನ್ ಆ್ಯಂಡ್  ಕಂಪನಿ

೯. ಬೆಹರಾ ಎಂ.ಸಿ., ೨೦೦೬. ‘ಗ್ಲೋಬಲೈಸಿಂಗ್ ರೂರಲ್ ಡೆವಲಪ್‌ಮೆಂಟ್: ಕಂಪೀಟಿಂಗ್ ಪ್ಯಾರಾಡೈಮ್ಸ್ ಆ್ಯಂಡ್ ಎಮರ್ಜಿಂಗ್ ರಿಯಾಲಿಟೀಸ್’’, ನವದೆಹಲಿ: ಸೇಜ್ ಪಬ್ಲಿಕೇಶನ್ಸ್.

೧೦. ಪ್ರಭಾತ್ ಪಟ್ನಾಯಕ್, ೨೦೦೬. ‘‘ಟೆಕ್ನಾಲಜಿ ಎಂಡ್ ಎಂಪ್ಲಾಯ್‌ಮೆಂಟ್ ಇನ್ ಎನ್ ಓಪನ್ ಅಂಡರ್ ಡೆವಲಪಡ್ ಎಕಾನಮಿ’’, ದಿ ಪಿಡಿಯಾ ವರ್ಕಿಗ್ ಪೆಪರ್ ಸೀರಿಸ್, ನಂ.೧.

೧೧. ಅಮಾರ್ತ್ಯಸೆನ್,  ೨೦೦೪. ‘‘ಅಂಡರ್‌ಸ್ಟಾಂಡಿಂಗ್ ರಿಫಾರ್ಮ್ಸ್’’ ಗ್ಲೋಬಲ್  ಡೆವಲಪ್ ಮೆಂಟ್ ನೆಟವರ್ಕ್‌ನ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಟಿಪ್ಪಣಿ, ನವದೆಹಲಿ, ಜನವರಿ.