ಇಪ್ಪತ್ತನೆಯ ಶತಮಾನವು ಮುಗಿದು ಇಪ್ಪತ್ತೊಂದನೆಯ ಶತಮಾನದ ಹೊಸ್ತಿಲಲ್ಲಿರುವಾಗ, ಇಪ್ಪತ್ತನೆಯ ಶತಮಾನದ ಪ್ರಮುಖ ಚಾರಿತ್ರಿಕ ರಾಜಕೀಯ ಘಟನೆಗಳನ್ನು ನೆನಪಿಸಿಕೊಳ್ಳುವಾಗ ೧೯೧೪ ರಿಂದ ೧೯೧೮ರವರೆಗೆ ಮೊದಲನೆಯ ಜಾಗತಿಕ ಮಹಾಯುದ್ಧ, ೧೯೧೭ರಲ್ಲಿ ರಷ್ಯಾದಲ್ಲಿ ನಡೆದ ಅಕ್ಟೋಬರ್ ಕ್ರಾಂತಿ, ಮೂವತ್ತರ ದಶಕದಲ್ಲಿ ಸಂಭವಿಸಿದ ಬಂಡವಾಳಶಾಹಿ ಬಿಕ್ಕಟ್ಟು, ಅದರ ನಡುವೆ ಇಟಲಿಯಲ್ಲಿ ಬೆಳೆದ ಫ್ಯಾಸಿಸಂ, ಜರ್ಮನಿಯಲ್ಲಿ ಬೆಳೆದ ನಾಜಿಸಂ, ೧೯೩೯ ರಿಂದ ೧೯೪೫ರವರೆಗೆ ನಡೆದ ಎರಡನೆಯ ಜಾಗತಿಕ ಮಹಾಯುದ್ಧ, ಪೂರ್ವ ಯೂರೋಪಿನಲ್ಲಿ ಸಮಾಜವಾದಿ ದೇಶಗಳ ಉದಯ, ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯ, ೧೯೪೯ರಲ್ಲಿ ಚೀನಾದ ಕ್ರಾಂತಿ ಯಶಸ್ವಿಯಾದುದು, ೧೯೫೧ರಲ್ಲಿ ಕೊರಿಯ ಯುದ್ಧ, ೧೯೫೯ರಲ್ಲಿ ಕ್ಯೂಬದ ಕ್ರಾಂತಿ, ೧೯೭೫ರಲ್ಲಿ ವಿಯಟ್ನಾಂ ಕ್ರಾಂತಿ, ಎರಡನೆಯ ಜಾಗತಿಕ ಮಹಾಯುದ್ಧದ ನಂತರ ಒಂದೊಂದೇ ವಸಾಹತು ದೇಶವು ವಸಾಹತು ಸಂಕೋಲೆಯನ್ನು ಕಳಚಿ ಸ್ವತಂತ್ರವಾಗುತ್ತಾ ನಿರ್ವಸಾಹತೀಕರಣವಾಗುವುದು, ಕೊನೆಯ ದಶಕದ ಪ್ರಾರಂಭದಲ್ಲಿ ಸೋವಿಯತ್ ಒಕ್ಕೂಟದ ವಿಘಟಣೆ, ಪೂರ್ವ ಯೂರೋಪಿನ ಸಮಾಜವಾದಿ ದೇಶ ಗಳಲ್ಲಿ ಸಮಾಜವಾದಕ್ಕೆ ಸೋಲು, ಜಾಗತಿಕ ಸಾಮ್ರಾಜ್ಯಶಾಹಿಗಳ ಪ್ರಾಬಲ್ಯ ಬೆಳೆದುದು ಎದ್ದು ಕಾಣುವುದು.

ಜಾಗತಿಕ ವರ್ಗ ಹೋರಾಟದಲ್ಲಿ ೧೯೧೭ ರಿಂದ ೧೯೮೯ರವರೆಗೆ ಕಾರ್ಮಿಕವರ್ಗ ಮತ್ತು ಶೋಷಿತ ಜನಸಮುದಾಯವು ಹಂತಹಂತಕ್ಕೂ ಜಯಗಳಿಸುತ್ತಾ ಬಂದುದು, ಅನಂತರದ ಕಾಲಾವಧಿಯಲ್ಲಿ ತೀವ್ರವಾದ ಸೋಲುಗಳನ್ನು ಅನುಭವಿಸುತ್ತಾ ಶೋಷಣೆ ಮಾಡುವ ವರ್ಗಗಳಿಗೆ ಗೆಲುವಾಗಿರುವುದನ್ನು ಕಾಣಬಹುದು.

ರಷ್ಯಾದಲ್ಲಿ ಅಕ್ಟೋಬರ್ ಕ್ರಾಂತಿಯಾಗಿ ಸಮಾಜವಾದಿ ಸಮಾಜದ ನಿರ್ಮಾಣ ಪ್ರಾರಂಭವಾಗುವಾಗ ಗ್ರಾಮಾಂತರ ಪ್ರದೇಶದಲ್ಲಿ ಅಂತರ್ಯುದ್ಧ ಪ್ರಾರಂಭವಾಯಿತು. ಕುಲಕ್ ಎಂದು ಕರೆಯಲ್ಪಡುವ ಶ್ರೀಮಂತ ರೈತರು ದಂಗೆಯೆದ್ದರು. ಆ ಸನ್ನಿವೇಶದಲ್ಲಿ ಅವರಿಗೆ ಬೆಂಬಲವಿತ್ತು. ಬೆಳೆಯುತ್ತಿದ್ದ ಕಾರ್ಮಿಕ ವರ್ಗದ ಪ್ರಭುತ್ವದ ಸಮಾಜವನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಲು ಸಾಮ್ರಾಜ್ಯಶಾಹಿ ದೇಶಗಳು-ಪಶ್ಚಿಮದಿಂದ ಬ್ರಿಟನ್, ಜರ್ಮನಿ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮೊದಲಾದವುಗಳು, ಪೂರ್ವ ದಿಂದ ಜಪಾನ್ ಸೈನ್ಯದ ತುಕಡಿಗಳನ್ನು ದಂಗೆಕೋರರ ಸಹಾಯಾರ್ಥವಾಗಿ ಕಳಿಸಿದುವು. ಆ ದಂಗೆಯನ್ನಡಗಿಸಿ, ಸೈನ್ಯದ ತುಕಡಿಗಳನ್ನು ಹಿಮ್ಮೆಟ್ಟಿಸಿ, ಓಡಿಸಿ, ಸಮಾಜವಾದಿ ಸಮಾಜದ ನಿರ್ಮಾಣವನ್ನು ಮುಂದುವರಿಸಲಾಯಿತು.

ಸಮಾಜವಾದಿ ಸಮಾಜದ ನಿರ್ಮಾಣಕ್ಕಾಗಿ ಪಂಚವಾರ್ಷಿಕ ಯೋಜನೆಗಳನ್ನು ಹಾಕಲಾಗುತ್ತಿದ್ದಿತು. ಸಮಾಜವಾದಿ ಯೋಜನೆಗಳು ಗುರಿ ತಲುಪುತ್ತಿದ್ದುವು. ಇಲ್ಲವೇ ಗುರಿಯನ್ನು ಮಿರುತ್ತಿದ್ದುವು. ಐರೋಪ್ಯ ದೇಶಗಳು ಬಂಡವಾಳಶಾಹಿ ಬಿಕ್ಕಟ್ಟನ್ನು ಅನುಭವಿಸುತ್ತಿದ್ದು ಸರಕುಗಳಿಗೆ ನಿರಾಶೆ ಇಲ್ಲದ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ಸೋವಿಯತ್ ಒಕ್ಕೂಟವು ಬಿಕ್ಕಟ್ಟು ರಹಿತವಾಗಿದ್ದ ನಿರ್ಮಾಣವನ್ನು ನಡೆಸುತ್ತಿದ್ದುದು ಮಾತ್ರವಲ್ಲದೆ ಭಾರತವೂ ಸೇರಿದಂತೆ ಪ್ರಪಂಚದ ಹಲವು ದೇಶಗಳ ಮೇಲೆ ಪ್ರಭಾವವನ್ನು ಬೀರುತ್ತಿದ್ದಿತು. ಆ ಕಾಲದಲ್ಲಿಯೇ ಜವಾಹರಲಾಲ್ ನೆಹರು ಮತ್ತು ಅವರ ತಂದೆ ಮೋತಿಲಾಲ ನೆಹರು ಸೋವಿಯತ್ ಒಕ್ಕೂಟಕ್ಕೆ ಭೇಟಿ ಇತ್ತಿದ್ದರು.

ಅಕ್ಟೋಬರ್ ಕ್ರಾಂತಿ ಮತ್ತು ಸೋವಿಯತ್ ಒಕ್ಕೂಟದಲ್ಲಿ ನಡೆಯುತ್ತಿದ್ದ ಸಮಾಜ ವಾದಿ ಸಮಾಜದ ನಿರ್ಮಾಣವು ವಸಾಹತುಗಳಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ವಿಮೋಚನಾ ಹೋರಾಟಗಳು ಮತ್ತು ಕ್ರಾಂತಿಕಾರಿ ಹೋರಾಟಗಳ ಮೇಲೆ ಪ್ರೋ ಪ್ರಭಾವ ವನ್ನು ಬೀರಿದುವು. ಎರಡು ದಶಕಗಳ ನಂತರ ಮಂಗೋಲಿಯವು ಸೋವಿಯತ್ ಒಕ್ಕೂಟದ ಹಾದಿಯನ್ನು ಹಿಡಿಯಿತು. ಚೀನಾದಲ್ಲಿ ಸುದೀರ್ಘವಾದ ಸಶಸ್ತ್ರ ಹೋರಾಟವು ನಡೆಯುತ್ತಿದ್ದಿತು. ಅಂದಿನ ಇಂಡೋಚೀನಾದ ವಿಯಟ್ನಾಮ್ ಮತ್ತು ಲಾವೋಸ್‌ಗಳಲ್ಲಿ ಕ್ರಾಂತಿಕಾರಿ ಹೋರಾಟಗಳು ಪ್ರಾರಂಭವಾದುವು.

ಎರಡನೆಯ ಜಾಗತಿಕ ಮಹಾಯುದ್ಧದಲ್ಲಿ ನಾಜಿ ಜರ್ಮನಿಯನ್ನು, ಅದರ ಮಿತ್ರ ಕೂಟನ್ನು ಸೋಲಿಸಿ ಪ್ರಪಂಚವನ್ನು ಫ್ಯಾಸಿಸಮ್ಮಿನ ಅಪಾಯದಿಂದ ಪಾರುಮಾಡಿ ರಕ್ಷಿಸುವಲ್ಲಿ ಸೋವಿಯತ್ ಒಕ್ಕೂಟವು ನಿರ್ಣಾಯಕ ಪಾತ್ರವನ್ನು ವಹಿಸಿತು. ಅದರ ಪರಿಣಾಮವಾಗಿ ಅಂದಿನ ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್, ಸಮಾಜವಾದ, ಸಮತಾವಾದ (ಕಮ್ಯುನಿಸಂ) ಶಬ್ದಗಳು ಪ್ರಪಂಚದ ಎಲ್ಲಾ ದೇಶಗಳ ಮೂಲೆಮೂಲೆಗಳಲ್ಲಿ ಪ್ರಚಾರವಾದುವು.

ಎರಡನೆಯ ಜಾಗತಿಕ ಮಹಾಯುದ್ಧ ನಡೆಯುವ ವೇಳೆಗೆ ಪೂರ್ವ ಯೂರೋಪಿನ ಹಂಗೇರಿ, ಬಲ್ಗೇರಿಯ, ಜೆಕೋಸ್ಲೊವಾಕಿಯ, ರುಮೇನಿಯ ಮೊದಲಾದ ದೇಶಗಳಲ್ಲಿ ಫ್ಯಾಸಿಸ್ಟ್ ವಿರೋಧಿ ಸಂಯುಕ್ತ ರಂಗಗಳು ಹೋರಾಟ ನಡೆಸುತ್ತಿದ್ದುವು. ಈ ರಂಗಗಳಲ್ಲಿ ಕಮ್ಯುನಿಸ್ಟ್ ಪಕ್ಷವು ಮುಖ್ಯಪಾತ್ರವನ್ನು ವಹಿಸಿದ್ದಿತು. ಯುದ್ಧದಲ್ಲಿ ಸೋವಿಯತ್ ಒಕ್ಕೂಟದ ಒಳಗೆ ನುಗ್ಗಿದ್ದ ನಾಜಿ ಸೇನೆಯನ್ನು ಹಿಮ್ಮೆಟ್ಟಿಸಿ ಓಡಿಸಿಕೊಂಡು ಹೋದ ‘‘ಕೆಂಪು ಸೇನೆಯು’’ ಬರ್ಲಿನ್ ನಗರದವರೆಗೆ ಹೋಯಿತು. ನಾಜಿ ಸೇನೆಯನ್ನು ಸೋಲಿಸಿ ಹಿಂದಿರುಗುವಾಗ ಫ್ಯಾಸಿಸ್ಟ್ ವಿರೋಧಿ ಸಂಯುಕ್ತ ರಂಗಗಳಿಗೆ ಆಯಾ ದೇಶಗಳಲ್ಲಿ ಅಧಿಕಾರಕ್ಕೆ ಬರಲು ಕೆಂಪು ಸೇನೆ ಸಹಾಯ ಮಾಡಿತು.

ಜಗತ್ತಿನ ಸಾಮ್ರಾಜ್ಯಶಾಹಿಗಳು ಈ ಬೆಳವಣಿಗೆಗಳನ್ನು, ಮುಂದುವರಿಯುತ್ತಿದ್ದ ಚೀನಾದ ಕ್ರಾಂತಿಯನ್ನು ಗಮನಿಸಿ ನಡುಗಿದರು. ಜಗತ್ತಿನ ಶೋಷಕರೆಲ್ಲಾ ಚಿಂತಾಕ್ರಾಂತ ರಾದರು. ಅಮೆರಿಕ ಸಂಯುಕ್ತ ಸಂಸ್ಥಾನಗಳ ‘ಬ್ರೆಟನ್‌ವುಡ್’ ಎಂಬಲ್ಲಿ ಸಾಮ್ರಾಜ್ಯಶಾಹಿ ನೇತಾರರು ಸಭೆ ಸೇರಿ ಹರಡುತ್ತಿದ್ದ ಸಮಾಜವಾದವನ್ನು ತಡೆಗಟ್ಟಲು ಒಂದು ಯೋಜನೆ ಯನ್ನು ಸಿದ್ಧಪಡಿಸಿದರು. ನೇಟೋ, ಸೀಟೋ, ಸೆಂಟೋ ಎಂಬ ಮಿಲಿಟರಿ ಕೂಟಗಳನ್ನು ರಚಿಸಿ ಸಮಾಜವಾದಿ ದೇಶಗಳ ಸುತ್ತಲೂ ಸೇನಾ ನೆಲೆಗಳನ್ನು ಸ್ಥಾಪಿಸಲು ನಿರ್ಧರಿಸಿದರು. ಆ ಯೋಜನೆಯ ಇನ್ನೊಂದು ಫಲವೇ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐ.ಎಂ.ಎಫ್) ಹಾಗೂ ಇಂಟರ್ ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ಸ್ಟ್ರಕ್ಷನ್ ಅಂಡ್ ಡೆವಲಪ್‌ಮೆಂಟ್(ಐ.ಬಿ.ಆರ್.ಡಿ). ಯುದ್ಧದಲ್ಲಿ ನಾಶವಾಗಿದ್ದ ಪಶ್ಚಿಮ ಯೂರೋಪಿನ ದೇಶಗಳ ಭಾಗಗಳನ್ನು ಪುನರ್ನಿರ್ಮಾಣ ಮಾಡಲು ಈ ಬ್ಯಾಂಕ್ ಹಣವನ್ನು ಒದಗಿಸಬೇಕಾಗಿದ್ದಿತು. ಆ ಬ್ಯಾಂಕೇ ಇಂದಿನ ವಿಶ್ವಬ್ಯಾಂಕ್. ಆ ಸಭೆಯಲ್ಲಿ ಭಾಗವಹಿಸಿದ್ದ ಅಂದಿನ ಬ್ರಿಟಿಷ್ ಪ್ರಧಾನಮಂತ್ರಿ ವಿನ್ಸ್ಟನ್ ಚರ್ಚಿಲ್ ರಷ್ಯದ ಸುತ್ತ ‘ಕಬ್ಬಿಣದ ಪರದೆ’ ಹಾಕಲಾಗಿದೆ ಎಂದು ಘೋಷಿಸಿದರು. ಅಂದಿನಿಂದ ‘‘ಶೀತಲಯುದ್ಧ’’ವು ಪ್ರಪಂಚದಲ್ಲಿ ಪ್ರಾರಂಭವಾಯಿತು. ಸಮಾಜವಾದ ಹರಡುವುದನ್ನು ತಡೆಯಲು ಒಂದು ಕಡೆ ಸೇನೆಯನ್ನೂ, ಇನ್ನೊಂದು ಕಡೆ ಹಣವನ್ನೂ ಉಪಯೋಗಿಸಲು ಸಾಮ್ರಾಜ್ಯಶಾಹಿಗಳು ನಿರ್ಧರಿಸಿದರು.

ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷವು ೧೯೪೯ರ ಅಕ್ಟೋಬರ್ ೧ ರಂದು ಅಧಿಕಾರಕ್ಕೆ ಬಂದಿತು. ಕೊರಿಯಾ ಯುದ್ಧದ ನಂತರ ಕೊರಿಯಾ ಎರಡು ಭಾಗವಾಗಿ ಉತ್ತರ ಕೊರಿಯಾವು ‘ಕೊರಿಯಾದ ಜನತಾ ಪ್ರಜಾಸತ್ತಾತ್ಮಕ ಗಣರಾಜ್ಯ’ವಾಗಿ ಸಮಾಜವಾದಿ ನಿರ್ಮಾಣದ ಪಥದಲ್ಲಿ ಮುನ್ನಡೆಯಿತು. ಪ್ರಪಂಚದ ಎಲ್ಲಾ ಸಮಾಜವಾದಿ ದೇಶಗಳೂ ಸೇರಿ ‘ಜಾಗತಿಕ ಸಮಾಜವಾದಿ ಶಿಬಿರ’ವು ಉದಯವಾಯಿತು. ಪ್ರಪಂಚದ ವರ್ಗಶಕ್ತಿಗಳ ಬಲಾಬಲದಲ್ಲಿ ಗುಣಾತ್ಮಕವಾದ ಬದಲಾವಣೆಯಾಯಿತು.

ಏಷ್ಯಾ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕ ಖಂಡಗಳ ದೇಶಗಳಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ವಿಮೋಚನಾ ಹೋರಾಟಗಳಿಗೆ ಸೋವಿಯತ್ ಒಕ್ಕೂಟದ ನಾಯಕತ್ವದಲ್ಲಿದ್ದ ಸಮಾಜವಾದಿ ಶಿಬಿರದ ದೇಶಗಳು ಬೆಂಬಲವಿತ್ತವು. ರಾಷ್ಟ್ರೀಯ ಸ್ವಾತಂತ್ರ್ಯವನ್ನು ಪಡೆದ ದೇಶಗಳ ಬೆಳವಣಿಗೆಗೂ ಸಹಾಯ ಮಾಡಿದುವು.

ಭಾರತದ ಸ್ವಾತಂತ್ರ್ಯೋತ್ತರ ವರ್ಷಗಳಲ್ಲಿ ತೀವ್ರವಾದ ಬರಗಾಲವಿದ್ದಿತು. ಪ್ರಧಾನಿ ಜವಹರಲಾಲ್ ನೆಹರು ಆಹಾರ ಧಾನ್ಯಗಳ ನೆರವಿಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಮನವಿ ಮಾಡಿದರು. ಅಲ್ಲಿಂದ ಏನೂ ಸಿಕ್ಕಲಿಲ್ಲ. ಆದರೆ ಸೋವಿಯತ್ ಒಕ್ಕೂಟವು ಒಂದು ಹಡಗು ಗೋಧಿಯನ್ನು ಕಳಿಸಿತು. ಚೀನಾವು ೫೦೦೦ ಟನ್ ಅಕ್ಕಿಯನ್ನು ಕಳಿಸಿತು. ಭಾರತದಲ್ಲಿ ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ಉಕ್ಕಿನ ಕಾರ್ಖಾನೆಗಳನ್ನು ಎರಡನೆಯ ಪಂಚವಾರ್ಷಿಕ ಯೋಜನೆಯಡಿ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಾರಂಭಿಸುವಾಗ ಭಿಲೈ ಉಕ್ಕಿನ ಕಾರ್ಖಾನೆಯ ನಿರ್ಮಾಣಕ್ಕೆ ಸೋವಿಯತ್ ಒಕ್ಕೂಟವು ಹಣಕಾಸನ್ನು ಕೊಟ್ಟಿದ್ದಲ್ಲದೆ ಇಂಜಿನಿಯರುಗಳನ್ನು, ತಂತ್ರಜ್ಞರನ್ನು ಕಳಿಸಿತು.

ಈ ರೀತಿ ಸಮಾಜವಾದಿ ದೇಶಗಳು ಅಭಿವೃದ್ದಿಶೀಲ ದೇಶಗಳಿಗೆ ನೆರವಾಗುತ್ತಿದ್ದುವು. ೧೯೫೬ರಲ್ಲಿ ಬಾಂಡುಂಗ್(ಇಂಡೋನೇಷ್ಯ)ನಲ್ಲಿ ನಡೆದ ಸಮ್ಮೇಳನದಲ್ಲಿ ಅಲಿಪ್ತ ದೇಶಗಳ ಚಳವಳಿ ಆರಂಭವಾಯಿತು. ಅಂದು ಸಾಮ್ರಾಜ್ಯಶಾಹಿಗಳು ಒಂದು ಕಡೆ ಸಮಾಜವಾದಿ ಶಿಬಿರವನ್ನು ಇನ್ನೊಂದು ಕಡೆ ಅಲಿಪ್ತ ದೇಶಗಳ ಚಳವಳಿಯನ್ನೂ ಎದುರಿಸಬೇಕಾಯಿತು. ಸಾಮ್ರಾಜ್ಯಶಾಹಿ ದೇಶಗಳ ನಾಯಕ ದೇಶವಾದ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ೯೦ ಮೈಲಿ ದೂರದಲ್ಲಿರುವ ಕ್ಯೂಬದಲ್ಲಿ ೧೯೫೯ರಲ್ಲಿ ಕ್ರಾಂತಿಯಾಗಿ ಸಮಾಜವಾದಿ ಸಮಾಜದ ನಿರ್ಮಾಣವು ಪ್ರಾರಂಭವಾಯಿತು. ಜಾಗತಿಕ ಕಮ್ಯುನಿಸ್ಟ್ ಚಳವಳಿಯಲ್ಲಿ ೧೯೬೦ರ ವೇಳೆಗೆ ಭಿನ್ನಾಭಿಪ್ರಾಯಗಳು ತಲೆದೋರಿದವು.

೧೯೭೫ರಲ್ಲಿ ವಿಯಟ್ನಾಮ್ ಕ್ರಾಂತಿಯು ಯಶಸ್ವಿಯಾಗಿ ಅಮೆರಿಕನ್ ಸಾಮ್ರಾಜ್ಯ ಶಾಹಿಗಳು ಅಲ್ಲಿಂದ ಕಾಲ್ತೆಗೆಯಬೇಕಾಯಿತು. ಕೈಗಾರಿಕಾಭಿವೃದ್ದಿಯಲ್ಲಿ ಹಿಂದುಳಿದಿದ್ದ ಒಂದು ಪುಟ್ಟ ದೇಶವು ಜಾಗತಿಕ ಸಾಮ್ರಾಜ್ಯಶಾಹಿ ನಾಯಕ ದೇಶವನ್ನು ಸೋಲಿಸಿ ಓಡಿಸಿದುದು, ಪ್ರಪಂಚದಲ್ಲಿ ಶೋಷಣೆಯ ವಿರುದ್ಧ ಹೋರಾಡುತ್ತಿದ್ದ ಶಕ್ತಿಗಳಿಗೆ ಸ್ಫೂರ್ತಿಯನ್ನೂ, ಉತ್ತೇಜನವನ್ನು ಕೊಟ್ಟಿತು.

ಜಾಗತಿಕ ಸಾಮ್ರಾಜ್ಯಶಾಹಿಗಳು ಸಮಾಜವಾದಿಗಳ ದೇಶಗಳ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವುಗಳೊಳಗಿನ ನ್ಯೂನ್ಯತೆಗಳನ್ನು ಗಮನಕ್ಕೆ ತೆಗೆದು ಕೊಂಡು, ಸಮಾಜವಾದವನ್ನು ಒಡೆಯಲು, ಸೋಲಿಸಲು ಅವುಗಳನ್ನು ಉಪಯೋಗಿಸಿದರು. ಅಲ್ಲಿಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು, ಸಂಪರ್ಕಗಳನ್ನು ಬೆಳೆಸಲು ಬೇರೆ ಬೇರೆ ವೃತ್ತಿಗಳ ರೂಪದಲ್ಲಿ ಗೂಢಚಾರವನ್ನು ಕಳಿಸುತ್ತಿದ್ದರು.

ಸೋವಿಯತ್ ಒಕ್ಕೂಟದಲ್ಲಿ ಅಕ್ಟೋಬರ್ ಕ್ರಾಂತಿಯಲ್ಲಿ ನಾಯಕ ಪಾತ್ರವಹಿಸಿದ್ದ ಮುಖಂಡರು ಕಾಲ ಕಳೆದಂತೆ ವಯಸ್ಸಾಗಿ ತೀರಿಕೊಂಡರು. ಫ್ಯಾಸಿಸ್ಟ್ ವಿರೋಧಿ ಎರಡನೆಯ ಜಾಗತಿಕ ಮಹಾಯುದ್ಧದಲ್ಲಿ ಹೋರಾಡಿದ್ದ ಮುಖಂಡರೂ ಒಬ್ಬೊಬ್ಬರಾಗಿ ತೀರಿಕೊಂಡರು. ಆ ತಲೆಮಾರಿನ ಕೊನೆಯ ಧುರೀಣ ಕಾನ್‌ಸ್ಟಾಂಟಿನ್ ಚೆರ್ನೆಂಕೋ ೧೯೮೦ರ ದಶಕದ ನಡುವೆ ಸೋವಿಯತ್ ಒಕ್ಕೂಟದ ಅಧ್ಯಕ್ಷರಾದರು. ಅವರ ನಂತರ ಸೋವಿಯತ್ ಒಕ್ಕೂಟದ ವಿಘಟನೆಯಲ್ಲಿ ಮುಖ್ಯಪಾತ್ರವಹಿಸಿದ, ತಾನು ಪ್ರಧಾನ ಕಾರ್ಯದರ್ಶಿಯಾಗಿದ್ದ ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ (ಸಿ.ಪಿ.ಎಸ್.ಯು) ಕೇಂದ್ರ ಸಮಿತಿಯನ್ನು ವಿಸರ್ಜಿಸಿದ ಮಿಖಾಯಿಲ್ ಗೊರ್ಬಚೇವ್ ಸೋವಿಯತ್ ಒಕ್ಕೂಟದ ಅಧ್ಯಕ್ಷರಾದರು. ಕೂಡಲೇ ಬ್ರಿಟಿಷ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್, ಗೊರ್ಬಚೇವ್ ಸೋವಿಯತ್ ಒಕ್ಕೂಟದ ಅಧ್ಯಕ್ಷರಾದುದನ್ನು ಸ್ವಾಗತಿಸಿ ಇವರೊಂದಿಗೆ ವ್ಯವಹರಿಸಬಹುದು ಎಂದು ಹೇಳಿದರು. ಸಾಮ್ರಾಜ್ಯಶಾಹಿ ಬಣದಲ್ಲಿ ಇರುವ ಒಬ್ಬ ನಾಯಕಿ ಮಾರ್ಗರೆಟ್ ಥ್ಯಾಚರ್. ‘ಶತ್ರು ನಿಮ್ಮನ್ನು ಹೊಗಳಿದರೆ ನಿಮ್ಮಲ್ಲಿ ಏನೋ ದೋಷವಿದೆ ಎಂದು ತಿಳಿದುಕೊಳ್ಳಿ’ ಎಂದು ಲೆನಿನ್ ಒಂದು ಕಡೆ ಹೇಳಿದ್ದಾರೆ. ಆದರೆ ಈ ಎಚ್ಚರಿಕೆಯು ಥ್ಯಾಚರ್ ಹೇಳಿಕೆ ಬಂದಾಗ ಯಾವ ಕಮ್ಯುನಿಸ್ಟರಿಗೂ ನೆನಪಾಗಲಿಲ್ಲ.

ಗೊರ್ಬಚೇವ್ ‘ಪೆರಿಸ್ಟ್ರೋಯಿಕ’, ‘ಗ್ಲಾಸ್‌ನೋಸ್ತ್’ ಎಂಬ ಎರಡು ಕರೆಗಳನ್ನು ಕೊಟ್ಟರು. ಪ್ರಾರಂಭದಲ್ಲಿ ಅನೇಕರು ಮರುಳಾದರು. ಆದರೆ ವಾಸ್ತವವಾಗಿ ಈ ಎರಡು ಘೋಷಣೆಗಳ ಮೂಲಕ ಸೋವಿಯತ್ ಒಕ್ಕೂಟದ ವಿಘಟನೆಯನ್ನು ಪ್ರಾರಂಭಿಸಲಾಯಿತು.

ಇದರ ನಂತರದ ಕಾಲದಲ್ಲಿ ಸಾಮ್ರಾಜ್ಯಶಾಹಿಗಳ ಯೋಜನೆಯ ಕಾರ್ಯಾಚರಣೆಯು ಪ್ರಾರಂಭವಾಯಿತು. ಚೀನಾದಲ್ಲಿ ೧೯೮೯ರಲ್ಲಿ ರಾಜಧಾನಿ ಬೀಜಿಂಗಿನಲ್ಲಿ ನಮಗೆ ‘ಹೆಚ್ಚು ಪ್ರಜಾಪ್ರಭುತ್ವಬೇಕು’ ಎಂದು ಸಹಸ್ರಾರು ವಿದ್ಯಾರ್ಥಿಗಳು ಪ್ರದರ್ಶನ ನಡೆಸಲಾರಂಭಿಸಿದರು. ಅವರಿಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳಿಂದ ಫ್ಯಾಕ್ಸ್ ಮುಖಾಂತರ ಪ್ರತಿರಾತ್ರಿ ನಿರ್ದೇಶನಗಳು ಬರುತ್ತಿದ್ದುವು! ಚೀನಾದ ಸರ್ಕಾರವು ಪರಿಶ್ರಮ, ಚಾಕಚಕ್ಯತೆಗಳಿಂದ ಚಳವಳಿಯನ್ನು ನಿಯಂತ್ರಿಸಿ, ನಿಲ್ಲಿಸಿ ಸಮಾಜವಾದದ ವಿರುದ್ಧದ ಸಾಮ್ರಾಜ್ಯಶಾಹಿಗಳ ಪಿತೂರಿಯನ್ನು ಸೋಲಿಸಿತು. ಕ್ರಾಂತಿಯ ಹಾದಿಯಲ್ಲಿ ಸುದೀರ್ಘಕಾಲ ಸಶಸ್ತ್ರ ಹೋರಾಟ ವನ್ನು ನಡೆಸಿದ್ದ ಚೀನಾದ ಕಮ್ಯುನಿಸ್ಟ್ ಪಕ್ಷವು ಅಧಿಕಾರದಲ್ಲಿದ್ದು ಆ ಅನುಭವವು ಆ ಚಳವಳಿಯನ್ನು ನಿಲ್ಲಿಸಿ, ಪಿತೂರಿಯನ್ನು ಸೋಲಿಸಲು ಸಹಾಯಕವಾಯಿತು.

ಸಾಮ್ರಾಜ್ಯಶಾಹಿ ಪಿತೂರಿಯು ೧೯೫೫-೫೬ರಲ್ಲಿ ಹಂಗೇರಿಯಲ್ಲಿ, ಒಂದು ದಶಕದ ನಂತರ ಜೆಕೊಸ್ಲೊವಾಕಿಯದಲ್ಲಿ, ಅದರ ಮುನ್ನ ಮತ್ತು ತರುವಾಯ ಪೋಲೆಂಡಿನಲ್ಲಿ ಪ್ರಚೋದನೆಗಳನ್ನುಂಟು ಮಾಡಿದ್ದಿತು.

೧೯೮೮-೮೯ರಲ್ಲಿ ಪೋಲೆಂಡ್ ರಾಜಧಾನಿ ವಾರ್ಸಾ, ಹಂಗೇರಿಯ ರಾಜಧಾನಿ ಬುಡಾಪೆಸ್ಟ್ , ಜೆಕೊಸ್ಲಾವಾಕಿಯ ರಾಜಧಾನಿ ಪ್ರಾಗ್ ನಗರಗಳಲ್ಲಿ ಜನರು ಗುಂಪುಗಳಲ್ಲಿ ಸರ್ಕಾರದ ವಿರುದ್ಧವಾಗಿ ಘೋಷಣೆಗಳನ್ನು ಪ್ರಾರಂಭಿಸಿದರು. ಇದಕ್ಕೆ ಇಡೀ ಪ್ರಪಂಚದಲ್ಲಿ ಪ್ರಸಾರ ಮಾಧ್ಯಮಗಳ ಮೂಲಕ ದೊಡ್ಡ ಪ್ರಚಾರ ದೊರೆತು ಜನರ ಗಮನವನ್ನು ಆ ಕಡೆ ಸೆಳೆಯಿತು. ಅನಂತರ ಜರ್ಮನ್ ಪ್ರಜಾಸತ್ತಾತ್ಮಕ ಗಣತಂತ್ರದ ಬರ್ಲಿನ್ ನಗರದಲ್ಲಿ, ಬಲ್ಗೇರಿಯದ ರಾಜಧಾನಿ ಸೋಫಿಯ ನಗರದಲ್ಲಿ ಇದೇ ರೀತಿಯ ಪ್ರದರ್ಶನ ಗಳು ನಡೆದುವು. ಆ ಪ್ರದೇಶಗಳ ಸರಣಿಯಲ್ಲಿಯೇ ಒಂದೊಂದಾಗಿ ಸರ್ಕಾರಗಳು ಉರುಳಿದುವು. ಕೊನೆಯಲ್ಲಿ ರುಮೇನಿಯದಲ್ಲಿಯೂ ಇದೇ ನಡೆಯಿತು. ಚೀನಾದ ಅನುಭವ ಈ ದೇಶಗಳ ಅಧಿಕಾರ ರೂಢ ಪಕ್ಷಗಳಿಗೆ ಇರದಿದ್ದುದರಿಂದ ಶತ್ರುವಿನ ಪಿತೂರಿ ಯಶಸ್ವಿಯಾಗಿ ಸಮಾಜವಾದಕ್ಕೆ ಸೋಲಾಯಿತು. ಸೋವಿಯತ್ ಒಕ್ಕೂಟದ ವಿಘಟನೆಯಾದ ನಂತರದ ವರ್ಗಶಕ್ತಿಗಳ ಜಾಗತಿಕ ಸಮತೋಲನವು ಶೋಷಣೆ ಮಾಡುವ ಶಕ್ತಿಗಳ ಮತ್ತು ಸಾಮ್ರಾಜ್ಯಶಾಹಿಗಳ ಪರವಾಗಿ ಬದಲಾಯಿತು. ಸಮಾಜವಾದಕ್ಕೆ ಭವಿಷ್ಯವಿಲ್ಲ, ಕಮ್ಯುನಿಸಂಗೆ ಭವಿಷ್ಯವಿಲ್ಲ, ಸಾಮಾಜಿಕ ವಿಕಾಸದಲ್ಲಿ ಬಂಡವಾಳಶಾಹಿಯೇ ಕೊನೆಯ ಹಂತ ಎಂದು ಪ್ರಪಂಚದಾದ್ಯಂತ ಪ್ರಸಾರ ಮಾಡಲಾಯಿತು. ಸಾಮ್ರಾಜ್ಯಶಾಹಿಗಳು ಐ.ಎಂ.ಎಫ್, ವಿಶ್ವಬ್ಯಾಂಕ್, ಬಹುರಾಷ್ಟ್ರೀಯ ಸಂಸ್ಥೆಗಳ ಮೂಲಕ ಇತರ ದೇಶಗಳ ಜನರನ್ನು ವಿಪರೀತವಾಗಿ ಶೋಷಣೆ ಮಾಡಲು, ಸಂಪತ್ತನ್ನು ದೋಚಲು ಮುಂದಾದರು. ಅಮೆರಿಕನ್ ಸಾಮ್ರಾಜ್ಯಶಾಹಿಗಳು ಇರಾಕಿನ ಮೇಲೆ ಬಾಂಬ್ ದಾಳಿಯನ್ನು ನಡೆಸಿದರು.

ಐ.ಎಂ.ಎಫ್ ಮತ್ತು ವಿಶ್ವಬ್ಯಾಂಕುಗಳ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳನ್ನು ಸರಕಾರಗಳ ಮೇಲೆ ಹೇರಲಾರಂಭಿಸಿದುವು. ಭಾರತ ಸರ್ಕಾರವು ಸಹ ಈ ಅಂಶಗಳನ್ನೊಳಗೊಂಡ ಬಜೆಟ್, ಆರ್ಥಿಕ ಸುಧಾರಣೆಗಳು, ಕೈಗಾರಿಕಾ ನೀತಿ ಗಳನ್ನು ೧೯೯೧ರ ಜುಲೈನಿಂದ ಕಾರ್ಯಗತ ಮಾಡಲಾರಂಭಿಸಿತು. ಗ್ಯಾಟ್(ಜನರಲ್ ಅಗ್ರಿಮೆಂಟ್ ಆನ್ ಟ್ರೇಡ್ ಟ್ಯಾರಿಫ್ಸ್) ಮಾತುಕತೆಗಳು ಮುಕ್ತಾಯವಾಗಿ ವಿಶ್ವವ್ಯಾಪಾರ ಸಂಸ್ಥೆಯು ಅಸ್ತಿತ್ವಕ್ಕೆ ಬಂದು ಅದೂ ಸಹ ಸಾಮ್ರಾಜ್ಯಶಾಹಿಗಳ ಸೂರೆಯ ಒಂದು ಸಲಕರಣೆಯಾಯಿತು.

೧೯೬೦ರ ನಂತರದ ನಾಲ್ಕು ದಶಕಗಳಲ್ಲಿ ತಂತ್ರಜ್ಞಾನದಲ್ಲಿ ಕ್ರಾಂತಿಯಾಗಿ ಬಹಳ ಬೆಳವಣಿಗೆಗಳಾದವು. ಗಣಕ(ಕಂಪ್ಯೂಟರು)ಗಳ ಹೊಸ ಸಂಶೋಧನೆಗಳಾಗಿ ಇಂಟರ್ ನೆಟ್, ವೆಬ್ ಸೈಟ್, ಸೈಬರ್ ಕೆಫೆ ಇತ್ಯಾದಿಗಳ ಬೆಳವಣಿಗೆಗಳು ಇಂದು ಸಾಮಾನ್ಯವಾಗಿ ಬಿಟ್ಟಿವೆ. ಬಂಡವಾಳಗಾರರಿಗೆ ಇಂದು ಒಂದು ನಗರದಿಂದ ಬೇರೆ ದೇಶಗಳಲ್ಲಿರುವ ನಗರಕ್ಕೆ ಒಂದೇ ಕಡೆ ಕೂತು ಹಣವನ್ನು ಇನ್ನೊಂದು ಕಡೆಗೆ ವರ್ಗಾವಣೆ ಮಾಡಲು ಸಾಧ್ಯವಾಗಿದೆ. ಈ ತಾಂತ್ರಿಕ ಪ್ರಗತಿಯನ್ನು ಉಪಯೋಗಿಸಿ ಸಾಮ್ರಾಜ್ಯಶಾಹಿ ನಿರ್ದೇಶಿತ ಜಾಗತೀಕರಣವು ದುರ್ಬಲ ದೇಶಗಳು ಶರಣಾಗುವಂತೆ ಮಾಡಿದೆ. ಆ ದೇಶಗಳು ಮೂಲಭೂತ ಕೈಗಾರಿಕೆಗಳು, ಸೇವೆಗಳು ಮತ್ತು ಪರಿಕರಗಳನ್ನು ಖಾಸಗೀಕರಿಸಿ ಆರ್ಥಿಕ ಸಾರ್ವಭೌಮತೆಯನ್ನು ಬಲಿದಾನ ಮಾಡುವಂತೆ ಬಲಾತ್ಕರಿಸುತ್ತಿದೆ. ಅವರು ‘ಆರ್ಥಿಕ ಸುಧಾರಣೆ’ ಎನ್ನುವುದರ ಅರ್ಥವೇನೆಂದರೆ ‘ಆರ್ಥಿಕ ಸಾರ್ವಭೌಮತೆ’ಯನ್ನು ಕದಿಯು ವುದು. ತನಗೆ ಸರಿಸಮಾನ ಶಕ್ತಿಯಾಗಿದ್ದ ಸಮಾಜವಾದಿ ಶಕ್ತಿಯು ಕುಸಿದು ಇಲ್ಲದಂತಾಗಿರು ವುದರಿಂದ ಅಮೆರಿಕ ಸಂಯುಕ್ತ ಸಂಸ್ಥಾನಗಳ ನಾಯಕತ್ವದ ಜಾಗತಿಕ ಸಾಮ್ರಾಜ್ಯಶಾಹಿಯು ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನ ಅಧಿನಾಯಕತ್ವವನ್ನು ಸ್ಥಾಪಿಸಲು ತೀವ್ರವಾಗಿ ಪ್ರಯತ್ನಿಸುತ್ತಿದೆ.

ಕೊನೆಯ ದಶಕದಲ್ಲಿ ಜಾಗತಿಕ ಬಂಡವಾಳಶಾಹಿಯ ಮೂರು ಕೇಂದ್ರಗಳು ಉದಯಿಸಿವೆ. ಅವುಗಳ ನಡುವೆ ಪೈಪೋಟಿ ಇದೆ. ಹಣದ ಏಕೀಕರಣವನ್ನು ಸ್ಥಾಪಿಸಲು ಹೆಣಗುತ್ತಿರುವ ಐರೋಪ್ಯ ಒಕ್ಕೂಟವು ಒಂದು ಭಾಗವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ನಾಯಕತ್ವದಲ್ಲಿರುವ ‘ನಾರ್ತ್ ಅಟ್ಲಾಂಟಿಕ್ ಫ್ರೀ ಟ್ರೇಡ್ ಅಸೋಸಿಯೇಷನ್’ (ಎನ್.ಎ.ಎಫ್ .ಟಿ.ಎ) ಇನ್ನೊಂದು ಭಾಗವಾಗಿದ್ದು ದಕ್ಷಿಣದ ಲ್ಯಾಟಿನ್ ಅಮೆರಿಕದೊಳಗೆ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಪೂರ್ವ ಮತ್ತು ಆಗ್ನೇಯ ಏಷ್ಯಾಕ್ಕೆ ಹರಡಲು ಯತ್ನಿಸುತ್ತಿ ರುವ ಜಪಾನ್ ಮೂರನೆಯ ಭಾಗವಾಗಿದೆ. ಈ ಮೂರು ಭಾಗಗಳ ನಡುವೆ ಸ್ಪರ್ಧೆ ಇದ್ದರೂ ಸಹ ಸಾಮ್ರಾಜ್ಯಶಾಹಿ ವ್ಯವಸ್ಥೆ ಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳು ತನ್ನ ಅಧಿನಾಯಕ ಪಾತ್ರವನ್ನು ನಿರ್ವಹಿಸುತ್ತಿದೆ.

ವಿಶ್ವರಾಷ್ಟ್ರ ಸಂಸ್ಥೆಯು ಶಾಂತಿ, ನಿಶ್ಶಸ್ತ್ರೀಕರಣ, ಅಭಿವೃದ್ದಿಯನ್ನು ಸಾಧಿಸುವುದನ್ನು, ವಿವಾದಗಳಿಗೆ ರಾಜಕೀಯ ಪರಿಹಾರಗಳನ್ನು ಕಂಡುಹಿಡಿದು, ಅಂತರರಾಷ್ಟ್ರೀಯ ಸಹಕಾರವನ್ನು ಏರ್ಪಡಿಸುವುದನ್ನು ಬಿಟ್ಟು ಹೆಚ್ಚು ಹೆಚ್ಚಾಗಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಮತ್ತು ಮಿತ್ರರಾಷ್ಟ್ರಗಳ ಅಧಿನಾಯಕತ್ವದ ಸಲಕರಣೆಯಾಗುತ್ತಿದೆ. ಐ.ಎಂ.ಎಫ್, ವಿಶ್ವಬ್ಯಾಂಕ್, ವಿಶ್ವವ್ಯಾಪಾರ ಸಂಘಟನೆ, ನೇಟೋ(ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್) ಎಂಬ ಮಿಲಿಟರಿ ಕೂಟ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತಿತರ ಸಾಮ್ರಾಜ್ಯಶಾಹಿ ಶಕ್ತಿಗಳು ಹೇಳಿದಂತೆ ನಡೆಯುವ, ವಿಶ್ವರಾಷ್ಟ್ರ ಸಂಸ್ಥೆಯು ವಿಭಿನ್ನ ಒತ್ತಡಗಳು ಮತ್ತು ಮಿಲಿಟರಿ ಮಧ್ಯಪ್ರವೇಶಗಳ ಮೂಲಕ ಸಾಮ್ರಾಜ್ಯಶಾಹಿ ಜಾಗತಿಕ ಆರ್ಥಿಕ ಕಾರ್ಯಸೂಚಿಯನ್ನು ಹೇರುವ ಹೊಸ ವ್ಯವಸ್ಥೆಯ ಆಧಾರ ಸ್ಥಂಭಗಳಾಗಿವೆ. ಬಹುರಾಷ್ಟ್ರೀಯ ಸಂಸ್ಥೆಗಳ ಜಾಗತಿಕ ಹಿತಾಸಕ್ತಿಗಳ ಸೇವೆ ಮಾಡುವ ಈ ಸಂಸ್ಥೆಗಳು ಜಾಗತಿಕ ಸರ್ಕಾರದ ‘ಡಿ ಫ್ಯಾಕ್ಟೋ’ ಸರ್ಕಾರದ ಸ್ವರೂಪವಾಗಿವೆ.

ಈ ಹಾದಿಯಲ್ಲಿ ಅವರು ಕುಲಸಂಬಂಧಿ, ಧಾರ್ಮಿಕ, ಗಡಿಸಂಬಂಧದ ಕಲಹಗಳನ್ನು ಹೊಡೆದೆಬ್ಬಿಸುತ್ತಾರೆ, ತೀವ್ರವಾದ ಪ್ರತಿಗಾಮಿ ಮತ್ತು ಮೂಢನಂಬಿಕೆಯ ಶಕ್ತಿಗಳನ್ನು ಬೆಳೆಸುತ್ತಾರೆ. ದಮನಕಾರಿ, ರಕ್ತಪಿಪಾಸು, ಸರ್ವಾಧಿಕಾರಗಳನ್ನು ಬೆಂಬಲಿಸುತ್ತಾರೆ. ನಾಗರಿಕರನ್ನು ಕೊಚ್ಚಿ ಹಾಕುತ್ತಾರೆ. ಜನಸಾಮಾನ್ಯರನ್ನು ಹೊಡೆದೋಡಿಸುತ್ತಾರೆ. ಬರಗಾಲಕ್ಕೆ ಗುರಿ ಮಾಡುತ್ತಾರೆ, ಪ್ರಭುತ್ವದ ಭಯೋತ್ಪಾದನೆಯನ್ನು ಪ್ರಯೋಗಿಸುತ್ತಾರೆ.

ಈಗ ಸಾಮ್ರಾಜ್ಯಶಾಹಿಯು ಎರಡು ರೀತಿಯ ತಂತ್ರಗಳನ್ನು ಅನುಸರಿಸುತ್ತಿದೆ; ಮೊದಲನೆಯದಾಗಿ ಕ್ರಾಂತಿಕಾರಿ ಮತ್ತು ಪ್ರಗತಿಶೀಲ ಶಕ್ತಿಗಳ ಮೇಲೆ ಕ್ರೂರ ದಬ್ಬಾಳಿಕೆ ಯನ್ನು ಹರಿ ಬಿಡುವುದು, ಆ ಮೂಲಕ ಜನರ ಅತೃಪ್ತಿಯ ಲಾಭವನ್ನು ಅತ್ಯಂತ ಪ್ರತಿಗಾಮಿ ಮತ್ತು ಮೂಢನಂಬಿಕೆಯ ಶಕ್ತಿಗಳು ಪಡೆಯುವಂತೆ ಮಾಡುವುದು, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಸೈದ್ಧಾಂತಿಕ ಮತ್ತು ಮಿಲಿಟರಿ ಮಧ್ಯಪ್ರದೇಶಕ್ಕೆ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಬಲಾತ್ಕಾರದ ಸಲಕರಣೆಗಳನ್ನು ಬೆಳೆಸುವುದು.

ಜಾಗತೀಕರಣದ ನಿಜಸ್ವರೂಪ ಮತ್ತು ಪರಿಣಾಮ

ಮೂರನೆಯ ಜಗತ್ತಿನ ದೇಶಗಳಲ್ಲಿ ಜನರು ಸಾಮೂಹಿಕವಾಗಿ ಹಸಿವಿನಿಂದ ನರಳುವುದು, ಕಾಯಿಲೆ, ಅನಕ್ಷರತೆ, ನಿರುದ್ಯೋಗ, ಪೌಷ್ಟಿಕ ಆಹಾರದ ಕೊರತೆಗಳು ವಿಪರೀತವಾಗಿ ಹೆಚ್ಚಾಗಿವೆ. ಹೀಗಿರುವಾಗ ಜನರಿಗೆ ಯಾವುದೇ ಪರಿಹಾರಗಳನ್ನು ಒದಗಿಸದ ಪಾಶವೀ ಬಜೆಟ್‌ಗಳನ್ನು ಸಿದ್ಧಪಡಿಸಬೇಕೆಂದು ಐ.ಎಂ.ಎಫ್ ಮತ್ತು ವಿಶ್ವಬ್ಯಾಂಕ್ ಸರ್ಕಾರಗಳ ಮೇಲೆ ಒತ್ತಡವನ್ನು ಹೇರುತ್ತಿವೆ. ಯಾಕೆಂದರೆ ಆ ಸಂಸ್ಥೆಗಳು ಕೊಟ್ಟಿರುವ ಸಾಲದ ಮರುಪಾವತಿಗೆ ಬಜೆಟ್ಟಿನಲ್ಲಿ ಹಣ ಉಳಿದಿರಬೇಕು!

ಇನ್ನೊಂದೆಡೆ ಪ್ರಪಂಚದಲ್ಲಿ ೨೨೫ ವ್ಯಕ್ತಿಗಳ ವಾರ್ಷಿಕ ವರಮಾನವು ೧.೭ ಸಾವಿರ ಶತಕೋಟಿ ಡಾಲರುಗಳಾಗಿದೆ. ಇದು ಪ್ರಪಂಚದ ಒಟ್ಟು ಜನರ ಶೇ.೪೭ರಷ್ಟು ಮಂದಿಯ ವಾರ್ಷಿಕ ಆದಾಯಕ್ಕಿಂತಲೂ ಹೆಚ್ಚಾಗಿದೆ. ಎಂದರೆ ೨.೫.ಶತಕೋಟಿ ಜನರಿಗೆ ಜೀವಿಸಲು ಈ ೨೨೫ ಜನರಿಗಿರುವಷ್ಟು ವರಮಾನವಿಲ್ಲ. ಪ್ರಪಂಚದ ಬೃಹತ್ ಸಂಖ್ಯೆಯ ಜನರಿಗೆ ಬಂಡವಾಳಶಾಹಿ ಜಾಗತೀಕರಣವು ಒಂದು ದುರಂತವಾಗಿದೆ.

ವಿಶ್ವರಾಷ್ಟ್ರಸಂಸ್ಥೆಯ(ಯು.ಎನ್.ಒ) ಬೆಳವಣಿಗೆ ಕಾರ್ಯಕ್ರಮದ ವರದಿಯ ಪ್ರಕಾರ ಬಡತನ ಮತ್ತು ನಿರ್ಗತೀಕರಣ ಅಭಿವೃದ್ದಿಶೀಲ ದೇಶಗಳ ಸಮಸ್ಯೆ ಮಾತ್ರವೇ ಅಲ್ಲ. ಓಇಸಿಡಿ ದೇಶಗಳ ೧೦ ಕೋಟಿ ಗಿಂತಲೂ ಹೆಚ್ಚು ಜನರು ಬಡತನ ರೇಖೆಯ ಕೆಳಗಿದ್ದಾರೆ. ಓಇಸಿಡಿ ದೇಶಗಳಲ್ಲಿ ೩.೭ ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ. ಯುವಕಯುವತಿಯರಲ್ಲಿ(೧೫ ರಿಂದ ೨೪ರ ಪ್ರಾಯ) ನಿರುದ್ಯೋಗವು ವಿಪರೀತ ವಾಗಿ ಹೆಚ್ಚಿದೆ. ಫ್ರಾನ್ಸ್ ದೇಶದಲ್ಲಿ ಯುವತಿಯರಲ್ಲಿ ಶೇ.೩೨ರಷ್ಟು, ಯುವಕರಲ್ಲಿ ಶೇ.೨೨ರಷ್ಟು ಇಟಲಿಯಲ್ಲಿ ಯುವತಿಯರಲ್ಲಿ ಶೇ.೩೯, ಯುವಕರಲ್ಲಿ ಶೇ.೩೦ ರಷ್ಟುಸ್ಪೇಯಿನ್‌ನಲ್ಲಿ ಯುವತಿಯರಲ್ಲಿ ಶೇ.೪೯, ಮತ್ತು ಯುವಕರಲ್ಲಿ ಶೇ.೩೬ರಷ್ಟು ನಿರುದ್ಯೋಗವಿದೆ. ಓಇಸಿಡಿ ದೇಶ ಗಳಲ್ಲಿ ಶೇ.೮ರಷ್ಟು ಮಕ್ಕಳು ಬಡತನದ ರೇಖೆಯ ಕೆಳಗೆ ಜೀವಿಸುತ್ತಿದ್ದಾರೆ. ಹತ್ತು ಕೋಟಿಗಿಂತಲೂ ಹೆಚ್ಚು ಜನರು ವಸತಿಹೀನರಾಗಿದ್ದಾರೆ.

-ಯು.ಎನ್ .ಡಿ.ಪಿ.ವರದಿ, ೧೯೯೮.

ಇದೇ ವಿಶ್ವರಾಷ್ಟ್ರ ಸಂಸ್ಥೆಯು ೧೯೯೮ಕ್ಕೆ ೭೭ ದೇಶಗಳ ಬಡತನದ ಮಟ್ಟವನ್ನು (ಹೂಮನ್ ಪಾವರ್ಟಿ ಇಂಡೆಕ್ಸ್ -ಎಚ್.ಪಿ.ಎಂ) ಲೆಕ್ಕ ಹಾಕಿದ್ದಾರೆ.

೧. ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಇದು ಶೇ.೩ರಷ್ಟಾದರೆ, ನೈಜೀರಿಯಾದಲ್ಲಿ ಶೇ.೬೨.

೨. ಮಾಲಿ, ಇಥಿಯೋಪಿಯ, ಸಿ ಎರ‌್ರೆ ಲಿಯೋನ್, ಬುರ್‌ಕಿನ್ ಫಾಸೊ ಮತ್ತು ನೈಜೀರಿಯಗಳಲ್ಲಿ ಶೇ.೫೦ರ ಮೇಲಿದೆ.

೩. ಭಾರತದಲ್ಲಿ ಶೇ.೩೫.೯, ಪಾಕಿಸ್ತಾನ, ಶೇ.೪೬, ಬಾಂಗ್ಲಾದೇಶ ಶೇ.೪೬.೫, ಶ್ರೀಲಂಕಾ ಶೇ.೨೦.೬. ಪ್ರಪಂಚದ ಜನರಲ್ಲಿ ಶೇ.೨೦ರಷ್ಟು ಶ್ರೀಮಂತರು, ಶೇ.೮೬ರಷ್ಟು ಖಾಸಗಿ ಬಳಕೆಯ ಖರ್ಚು ಮಾಡುತ್ತಾರೆ. ಅವರಲ್ಲಿ ಶೇ.೨೦ರಷ್ಟು ಬಡವರು ಶೇ.೧.೩ರಷ್ಟು ಖರ್ಚು ಮಾಡುವರು. ಜಾಗತಿಕ ಅರ್ಥ ವ್ಯವಸ್ಥೆಯ ಲಕ್ಷಣಗಳು ಸಂಕ್ಷಿಪ್ತವಾಗಿ ಹೀಗಿವೆಯೆಂದು ಹೇಳಬಹುದು.

೪. ಬೃಹತ್ ಜಾಗತಿಕ ನಿಗಮಗಳು ಪ್ರಪಂಚದ ಹಣವನ್ನು, ತಂತ್ರಜ್ಞಾನವನ್ನು ಮತ್ತು ಮಾರುಕಟ್ಟೆಗಳನ್ನು ನಿಯಂತ್ರಿಸಿ, ನಿರ್ವಹಿಸುತ್ತವೆ.

೫. ಒಂದು ಸಾಮಾನ್ಯ ಗ್ರಾಹಕರ ಸಂಸ್ಥೆಯು ಭೌತಿಕ ತೃಪ್ತಿಯ ಹುಡುಕಾಟದಲ್ಲಿರುವ ಜನರನ್ನು ಒಂದುಗೂಡಿಸಬಹುದು.

೬. ಕಾರ್ಮಿಕರ ನಡುವೆ ಹಾಗೂ ಸ್ಥಳಗಳ ನಡುವೆ ಬಂಡವಾಳ ಹೂಡುವವರಿಗೆ ತಮ್ಮ ಸೇವೆಗಳನ್ನು ಸಲ್ಲಿಸಲು, ಅತ್ಯಂತ ಅನುಕೂಲಕರವಾದ ಷರತ್ತುಗಳ ಮೇಲೆ ಸಲ್ಲಿಸಲು ಪಕ್ಕಾ ಜಾಗತಿಕ ಸ್ಪರ್ಧೆ ಇದೆ.

೭. ರಾಷ್ಟ್ರೀಯ ಮತ್ತು ಸ್ಥಳೀಯ ಪರಿಣಾಮಗಳನ್ನು ಲೆಕ್ಕಿಸದೆ ಸಂಪೂರ್ಣವಾಗಿ ವ್ಯಾಪಾರದ ಆಧಾರದ ಮೇಲೆ ವ್ಯವಹರಿಸಲು ನಿಗಮಗಳು(ಬಹುರಾಷ್ಟ್ರೀಯ ಸಂಸ್ಥೆಗಳು) ಮುಕ್ತವಾಗಿವೆ.

೮. ವೈಯಕ್ತಿಕ ಹಾಗೂ ಕಾರ್ಪೊರೇಟ್ ಸಂಬಂಧಗಳು ಸಂಪೂರ್ಣವಾಗಿ ಮಾರುಕಟ್ಟೆಯಿಂದ ನಿರ್ಧರಿಸಲ್ಪಡುತ್ತವೆ.

೯. ಊರು ಮತ್ತು ಸಮುದಾಯಗಳಿಗೆ ಇರುವ ಬದ್ಧತೆಗೆ ಬೆಲೆ ಇರುವುದಿಲ್ಲ.

ಇದು ಜಾಗತೀಕರಣ ಮಾಡಿದ ಹಾವಳಿ, ಸಾಮ್ರಾಜ್ಯಶಾಹಿಗಳ ಪ್ರಾಬಲ್ಯಗಳಿಂದ ಪ್ರಪಂಚದ ಸಾರ್ವಜನಿಕರಿಗೆ ಆಗಿರುವ ನಷ್ಟ, ಜನಸಾಮಾನ್ಯರ ಅವನತಿಯನ್ನು ಸೂಕ್ಷ್ಮವಾಗಿ ಸೂಚಿಸುವುದು.

ಚೀನಾ

ಈಗ ಸಾಮ್ರಾಜ್ಯಶಾಹಿಗಳ ದಾಳಿ, ಕುತಂತ್ರಗಳನ್ನು ಮೆಟ್ಟಿ ನಿಂತಿರುವ ಸಮಾಜವಾದಿ ದೇಶವಾಗಿಯೇ ಉಳಿದಿರುವ ಚೀನಾದತ್ತ ನೋಡೋಣ. ಚೀನಾವು ಪ್ರಪಂಚದ ಕಾಲು ಭಾಗದ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಸರಕುಗಳ, ಸೇವೆಗಳ ಉತ್ಪಾದನಾ ದರದಲ್ಲಿ ಚೀನಾವು ಮೊದಲನೆಯ ಸ್ಥಾನದಲ್ಲಿದೆ. ಕೆಲವೊಮ್ಮೆ ಅದರ ಜಿ.ಡಿ.ಪಿ(ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಶೇ.೧೨ನ್ನು ದಾಟಿದ್ದಿತು.

ಚೀನಾವು ಎರಡು ದಶಕಗಳ ಹಿಂದೆಯೇ ಆರ್ಥಿಕ ಸುಧಾರಣೆಗಳಿಗೆ ಕೈ ಹಾಕಿತು. ಸಮಾಜವಾದಕ್ಕೆ ಭವಿಷ್ಯವಿಲ್ಲ, ಬಂಡವಾಳಶಾಹಿ ಮಾರುಕಟ್ಟೆಯೇ ಶ್ರೇಷ್ಟ ಎಂದು ಸಾಮ್ರಾಜ್ಯಶಾಹಿಗಳು ಡಂಗುರ ಬಾರಿಸುತ್ತಿರುವಾಗಲೇ ಚೀನಾವು ಸಮಾಜವಾದಿ ಮಾರುಕಟ್ಟೆ ವ್ಯವಸ್ಥೆಯನ್ನು ಪ್ರಾರಂಭಿಸಿದ್ದಿತು. ಇದರಿಂದಾಗಿ ಅರ್ಥವ್ಯವಸ್ಥೆಯ ಪ್ರತಿಯೊಂದು ವಿಭಾಗದಲ್ಲೂ ಶರವೇಗದ ಪ್ರಗತಿಯನ್ನು ದಾಖಲಿಸಿ ಶಕ್ತಿಯುತವಾದ ಆರ್ಥಿಕ ಶಕ್ತಿ ಯನ್ನು ಬೆಳೆದುಬಂದಿದೆ. ಭವಿಷ್ಯದಲ್ಲಿ ಸಾಮ್ರಾಜ್ಯಶಾಹಿ ಪ್ರಾಬಲ್ಯಕ್ಕೆ ಪ್ರತಿರೋಧವ ನ್ನೊಡ್ಡಲು ಈ ಬೆಳವಣಿಗೆಯು ಸಾಧಕವಾಗುವುದು. ಹಣಕಾಸಿನ ಬಿರುಗಾಳಿಯು ರಷ್ಯಾ ದಾದ್ಯಂತ ಬೀಸಿದಾಗ ಚೀನಾವು ದೃಢವಾಗಿದ್ದು ಏಷ್ಯಾದ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯನ್ನು ಸ್ಥೈರ್ಯಗೊಳಿಸುವುದರಲ್ಲಿ ತೊಡಗಿದ್ದಿತು.

ಇಂದು ಬಂಡವಾಳಶಾಹಿ ಪ್ರಪಂಚದಲ್ಲಿ ಬೆಳೆದು ಬಂದಿರುವ ವ್ಯವಸ್ಥೆಯ ಬಿಕ್ಕಟ್ಟು, ಉತ್ಪಾದನೆಯ ಬಿಕ್ಕಟ್ಟು, ಜನರು ಅನುಭವಿಸಬೇಕಾಗಿ ಬಂದಿರುವ ಕಷ್ಟಗಳು ಸಮಾಜವಾದ ಪದ್ಧತಿಯು ಬಂಡವಾಳಶಾಹಿ ಪದ್ಧತಿಗಿಂತಲೂ ಉತ್ತಮ ಎಂಬುದನ್ನು ತೋರಿಸುತ್ತದೆ.

ಕ್ಯೂಬದ ಪ್ರತಿರೋಧ

ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಾಮ್ರಾಜ್ಯಶಾಹಿಗಳ ಅವಿರತ ದಾಳಿಗೆ, ಆರ್ಥಿಕ ದಿಗ್ಭಂಧನಕ್ಕೆ ಮತ್ತು ಬುಡಮೇಲು ಕೃತ್ಯಗಳಿಗೆ ಗುರಿಯಾಗಿರುವ ಕ್ಯೂಬವು ಇಂದು ತನ್ನ ಆರ್ಥಿಕ ಸಂಬಂಧಗಳನ್ನು ಪುನರ್‌ಸಂಘಟಿಸಿದೆ. ಕ್ಯೂಬವು ಸಮಾಜವಾದ ಪದ್ಧತಿಯ ಫಲಗಳಾದ ಸಾಮಾಜಿಕ ಸಾಧನೆಗಳನ್ನು ಧೈರ್ಯದಿಂದ ರಕ್ಷಿಸಿಕೊಳ್ಳುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಕ್ರಾಂತಿಕಾರಿ ಕಾಲಾವಧಿಯ ಕಠಿಣವಾದ ಅನುಭವವನ್ನು ಪಡೆದ ಅವರು, ಬಹಳ ಕಷ್ಟಕರವಾದ ಪರಿಸ್ಥಿತಿಗಳಲ್ಲಿ ಭೂಮಿಯ ಮೇಲಿರುವ ಅತ್ಯಂತ ಬಲಿಷ್ಟ ಶಕ್ತಿಯನ್ನು ಎದುರಿಸಿ ಯಾವುದು ಅಸಾಧ್ಯವೋ ಅದನ್ನು ಸಾಧಿಸಿದರು. ವಿನಾಶಕಾರಿ ಪರಿಸ್ಥಿತಿಯು ಮುಗಿಯಿತು. ಆದರೆ ಕಷ್ಟಗಳು ಉಳಿದಿದೆ. ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದು, ಅಮೆರಿಕ ಸಂಯುಕ್ತ ಸಂಸ್ಥಾನಗಳ ಎದುರಿಗೆ ಮುಖಾಮುಖಿಯಾಗಿ ನಿಂತು ಭವಿಷ್ಯದಲ್ಲಿಯೂ ಸಹ ಎಲ್ಲಾ ಕಷ್ಟನಷ್ಟಗಳನ್ನೂ ಜಯಿಸುವ ವಿಶ್ವಾಸವು ಕ್ಯೂಬಕ್ಕಿದೆ.

ಕ್ಯೂಬದ ಕ್ರಾಂತಿಯಾಗಿ ನಲವತ್ತೊಂದು ವರ್ಷಗಳಾಗಿವೆ. ಆ ವೇಳೆಗೇನೇ ಅಮೆರಿಕ ಸಂಯುಕ್ತ ಸಂಸ್ಥಾನಗಳು ಅತ್ಯಂತ ಶಕ್ತಿಯಾದ ಸಾಮ್ರಾಜ್ಯಶಾಹಿ ದೇಶವಾಗಿದ್ದಿತು. ಈ ಕಾಲಾವಧಿಯಲ್ಲಿಯೇ ಈ ಸಾಮ್ರಾಜ್ಯಶಾಹಿಯು ಕ್ಯೂಬದ ಮೇಲೆ ಒಂದು ದಿವಸವೂ ಬಿಡದೆ ದಾಳಿ ಮಾಡುತ್ತಾ ಬಂದಿದೆ. ಈಗ ಕ್ಯೂಬದ ಒಬ್ಬ ಬಾಲಕನನ್ನು ಅ ದೇಶವು ಅಪಹರಿಸಿಕೊಂಡು ಹೋಗಿದೆ. ಕ್ಯೂಬವನ್ನು ಮೂಲೆ ಗುಂಪು ಮಾಡಬೇಕೆಂದು ಅಮೆರಿಕ ಸಂಯುಕ್ತ ಸಂಸ್ಥಾನಗಳು ಎಷ್ಟು ಪ್ರಯತ್ನಪಟ್ಟರೂ ಕ್ಯೂಬಕ್ಕೆ ಹೆಚ್ಚು ಹೆಚ್ಚಾದ ಅಂತರರಾಷ್ಟ್ರೀಯ ಬೆಂಬಲ ಸಿಕ್ಕುತ್ತಾ ಇದೆ. ಲ್ಯಾಟಿನ್ ಅಮೆರಿಕ ಮತ್ತು ಕ್ಯಾರಿಬಿಯನ್ ಗಳಲ್ಲಿ ಕೈ ಬೆರಳೆಣಿಕೆಯಷ್ಟು ದೇಶಗಳನ್ನು ಬಿಟ್ಟರೆ ಕ್ಯೂಬದೊಂದಿಗೆ ರಾಯಭಾರ ಸಂಬಂಧಗಳನ್ನು ಬೆಳೆಸಿವೆ. ವಿಶ್ವರಾಷ್ಟ್ರಸಂಸ್ಥೆಯ ಸಾಮಾನ್ಯಸಭೆಯ ಅಧಿವೇಶನದಲ್ಲಿ ಕ್ಯೂಬದ ವಿರುದ್ಧವಾಗಿರುವ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಬೇಕೆಂಬ ನಿರ್ಣಯಕ್ಕೆ ಮೂರು ದೇಶಗಳನ್ನು ಬಿಟ್ಟರೆ ಉಳಿದೆಲ್ಲಾ ದೇಶಗಳೂ ಬೆಂಬಲ ಕೊಟ್ಟಿವೆ. ಪ್ರಜಾಪ್ರಭುತ್ವ, ಶಾಂತಿ, ಸ್ವಾತಂತ್ರ್ಯಗಳಿಗೆ ಪರವಾದ ಜಾಗತಿಕ ಸಮಾವೇಶಗಳು ಕ್ಯೂಬದಲ್ಲಿ ನಡೆದಿವೆ. ೨೦೦೦ದ ಉತ್ತರಾರ್ಧದಲ್ಲಿ ಜಾಗತಿಕ ವಕೀಲರ ಸಮ್ಮೇಳನವು ಕ್ಯೂಬದ ರಾಜಧಾನಿ ಹವಾನಾದಲ್ಲಿ ನಡೆಯಲಿದೆ.

ಕಾರ್ಮಿಕ ಪ್ರತಿಭಟನೆ

ಜಾಗತಿಕ ಶೋಷಕ ವರ್ಗಗಳು ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ದಾಳಿಗಳನ್ನು ನಡೆಸುತ್ತಿರುವಾಗ ಕಾರ್ಮಿಕರು ಅದರ ವಿರುದ್ಧವಾಗಿ ವಿವಿಧ ರೀತಿಗಳಲ್ಲಿ ಪ್ರತಿಭಟಿಸುತ್ತಿದ್ದಾರೆ. ಬ್ರಿಟನ್, ಫ್ರಾನ್ಸ್, ಜರ್ಮನಿ ಮೊದಲಾದ ಐರೋಪ್ಯ ದೇಶಗಳಲ್ಲಿ ಮುಷ್ಕರಗಳು ನಡೆದಿವೆ. ಕಳೆದ ವರ್ಷ (೧೯೯೯) ಕಾರ್ಮಿಕರ ಮುಷ್ಕರ, ಪ್ರತಿಭಟನೆಗಳಿಂದಾಗಿ ಚುನಾವಣೆಯಲ್ಲಿ ಚಾನ್ಸೆಲರ್ ಕೋಲ್ ಸೋತರು, ಜಪಾನಿನಲ್ಲಿ, ಪೂರ್ವ ಯೂರೋಪಿನ ಮಾಜಿ ಸಮಾಜವಾದಿ ದೇಶಗಳಲ್ಲಿ, ರಷ್ಯಾದಲ್ಲಿ, ಲ್ಯಾಟಿನ್ ಅಮೆರಿಕ, ಆಫ್ರಿಕದ ದೇಶಗಳಲ್ಲಿ ಕಾರ್ಮಿಕ ವರ್ಗವು ಮುಷ್ಕರ, ಪ್ರತಿಭಟನೆಗಳನ್ನು ನಡೆಸುತ್ತಿದೆ. ಜಾಗತಿಕ ವಾರ್ತಾಸಂಸ್ಥೆಗಳು ಬಹುರಾಷ್ಟ್ರೀಯ ಸಂಸ್ಥೆಗಳ ಕೈಯಲ್ಲಿರುವುದರಿಂದ ಇವುಗಳಿಗೆ ಪ್ರಚಾರವು ಸಿಕ್ಕಲಿಲ್ಲ.

ಭಾರತದಲ್ಲಿ ೧೯೯೧ರಲ್ಲಿ ಕಾರ್ಮಿಕ ಸಂಘಗಳ ಪ್ರಾಯೋಜಕ ಸಮಿತಿ, ಅನಂತರ ಸಾಮೂಹಿಕ ಸಂಘಟನೆಗಳ ರಾಷ್ಟ್ರೀಯ ವೇದಿಕೆಯ ಪ್ರಕಾರ ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ವಿರುದ್ಧವಾಗಿ ರಾಷ್ಟ್ರವ್ಯಾಪಿ ಮುಷ್ಕರಗಳು, ಇತರ ಸ್ವರೂಪಗಳ ಪ್ರತಿಭಟನೆಗಳು ನಡೆದುವು. ೧೯೯೮ರ ಡಿಸೆಂಬರ್ ೧೧ ಮತ್ತು ೨೦೦೦ದ ಮೇ ೧೧ರಂದು ರಾಷ್ಟ್ರವ್ಯಾಪಿ ಮುಷ್ಕರಗಳು ನಡೆದುವು.

ಹೊಸ ವಿರೋಧ

ಹಿಂದಿನಂತಲ್ಲದೆ, ಇತ್ತೀಚೆಗಿನ ಕಾಲದಲ್ಲಿ ಅಮೆರಿಕ ನಾಯಕತ್ವದ ಮೈತ್ರಿಯು ಮೂರನೆಯ ಜಗತ್ತಿನ ದೇಶಗಳ ಮೇಲೆ ಆಕ್ರಮಣ ನಡೆಸಿದಾಗ ಹೆಚ್ಚು ವಿರೋಧವು ವ್ಯಕ್ತವಾಗಿದೆ. ವಿಶ್ವರಾಷ್ಟ್ರ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯ ಮತ್ತು ಚೀನಾಗಳ ವಿರೋಧವಿದ್ದುದರಿಂದ ಇರಾಕ್ ಮತ್ತು ಯುಗೊಸ್ಲಾವಿಯ ಮೇಲೆ ನಡೆದ ಆಕ್ರಮಣಗಳಿಗೆ ವಿಶ್ವಸಂಸ್ಥೆಯ ಅನುಮತಿ ಇರಲಿಲ್ಲ.

ಬೆಳೆಯುತ್ತಿರುವ ಚೀನಾದ ಶಕ್ತಿ, ಪ್ರಾಬಲ್ಯ, ಚೀನ ಮತ್ತು ರಷ್ಯಗಳ ನಡುವೆ ಕಾರ್ಯವ್ಯೆಹಾತ್ಮಕವಾದ ಪಾಲುದಾರಿಕೆಯ ಬೆಳವಣಿಗೆಗೆ ಇಟ್ಟಿರುವ ಹೆಜ್ಜೆ ಭವಿಷ್ಯದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧಿನಾಯಕತ್ವಕ್ಕೆ ಪರಿಣಾಮಕಾರಿ ವಿರೋಧಿ ವೇದಿಕೆ ಯಾಗಲಿದೆ.

 

ಪರಾಮರ್ಶನ ಗ್ರಂಥಗಳು

೧. ಪೌಲ್ ಸ್ವೀಡಿ. ೧೯೯೧. ದಿ ಥಿಯರಿ ಆಫ್ ಕ್ಯಾಪಿಟಲಿಸ್ಟ್ ಡೆವಲಪ್‌ಮೆಂಟ್, ಕಲ್ಕತ್ತಾ: ಕೆ.ಪಿ.ಬಾಗ್ಚಿ ಆ್ಯಂಡ್ ಕಂಪನಿ.

೨. ಫೀಡಲ್ ಕ್ಯಾಸ್ಟ್ರೋ. ೧೯೯೯. ಆ್ಯನ್ ಇಂಪೀರಿಯಾಲಿಸ್ಟ್ ಗ್ಲೋಬಲೈಜೇಶನ್, ನವದೆಹಲಿ: ವರ್ಲ್ಡ್ ಬುಕ್ಸ್.

೩. ಅಶೋಕ ದೇಸಾಯಿ. ೧೯೯೯. ದಿ ಎಕನಾಮಿಕ್ಸ್ ಆ್ಯಂಡ್ ಪಾಲಿಟಿಕ್ಸ್ ಆಫ್ ಟ್ರಾನ್ಸಿಶನ್ ಟು ಆ್ಯನ್ ಓಪನ್ ಮಾರ್ಕೆಟ್ ಎಕಾನಾಮಿ: ಇಂಡಿಯಾ, ವರ್ಕಿಂಗ್ ಪೇಪರ್ ನಂ.೧೫೫, ಓ.ಇ.ಸಿ.ಡಿ., ಡೆವಲಪ್‌ಮೆಂಟ್ ಸೆಂಟರ್.