ಶ್ರೇಷ್ಠ ಸೃಜನಶೀಲ ಚಿಂತಕರಾದ ಅನಂತಮೂರ್ತಿಯವರು ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ, ೧೯೩೨ ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮತ್ತು ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದ ಇವರು ಹಲವು ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದರು.
ಅನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೇರಳದ ಕೊಟ್ಟಾಯಂನ ಮಹಾತ್ಮಗಾಂದಿ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ಸೇವೆಸಲ್ಲಿಸಿದರು. ಅಮೆರಿಕದ ಅಯೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ, ಕೊಲಾಪುರದ ಶಿವಾಜಿ ವಿಶ್ವವಿದ್ಯಾಲಯ, ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ- ಮೊದಲಾದ ಕಡೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ಅನಂತಮೂರ್ತಿ ತಮ್ಮ ಗೆಳೆಯರೊಡನೆ ತರಂಗಿಣಿ ಎಂಬ ಕೈಬರಹದ ಪತ್ರಿಕೆಯನ್ನು ತರುತ್ತಿದ್ದರು. ಇವರ ಎಂದೆಂದೂ ಮುಗಿಯದ ಕಥೆ, ಪ್ರಕಟವಾದದ್ದು ೧೯೫೫ ರಲ್ಲಿ ಅದು ಹೊಸ ಸಂವೇದನೆಯ ಕಾಲ. ಮಾಸ್ತಿ ಸಂಪ್ರದಾಯ ಮತ್ತು ಪ್ರಗತಿಶೀಲ ಚಳುವಳಿ – ಇವೆರಡು ಮಾದರಿಗಳಿಗಿಂತ ಬಿನ್ನರೀತಿಯಲ್ಲಿ ಅನಂತಮೂರ್ತಿ ಬರೆಯಬೇಕಾಗಿತ್ತು. ಬರೆದರು. ಇವರ ಮೂಲಕ ಸಣ್ಣಸಾಹಿತ್ಯದಲ್ಲಿ ನವ್ಯತೆ ಮೊದಲಿಗೆ ಬಂದಿತು ತಮ್ಮ ಮೊದಲ ಕೃತಿಯಲ್ಲಿಯೇ ಅನಂತಮೂರ್ತಿಯವರು ಪ್ರಬುದ್ಧತೆಯನ್ನು ಮೆರೆದಿದ್ದರು. ಪ್ರಶ್ನೆ (೧೯೬೩), ಮೌನಿ (೧೯೭೨), ಆಕಾಶ ಮತ್ತು ಬೆಕ್ಕು (೧೯೮೧), ಮತ್ತು ಸೂರ್ಯನಕುದುರೆ (೧೯೯೫), ಇವರ ಅನಂತರದ ಕಥಾಸಂಕಲನಗಳು. ಇವರ ಆನಂತರದ ಕಥಾಸಂಕಲನಗಳು, ಸಮಗ್ರ ಕಥಾಸಂಕಲನವೂ (೧೯೯೩) ಪ್ರಕಟವಾಗಿದೆ. ತಂತ್ರ ಮತ್ತು ವಸ್ತುವಿನ ದೃಷ್ಟಿಯಿಂದ ಕಥಾಸಾಹಿತ್ಯದಲ್ಲಿ ಇವರು ಅನೇಕ ಪ್ರಯೋಗಗಳನ್ನು ಮಾಡಿದರು. ಜಿ.ಎಸ್.ಆಮೂರ ಕೇಳುವಂತೆ – ಸಣ್ಣಕಥೆಯು ಅನಂತಮೂರ್ತಿಯವರಿಗೆ ವಿಶೇಷತಃ ಒಗ್ಗಿದ ಸಾಹಿತ್ಯ ಪ್ರಕಾರ. ಇವರ ಘಟಶ್ರಾದ್ದ, ಸಣ್ಣಕಥೆಯನ್ನಾಧರಿಸಿದ ಕನ್ನಡ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಲಬಿಸಿತು. ಇದೇ ಕಥೆಯನ್ನಾಧರಿಸಿದ ಹಿಂದಿ ಚಿತ್ರಕೂಡ ಪ್ರಶಸ್ತಿ ಪಡೆಯಿತು.
ಸಂಸ್ಕಾರ (೧೯೬೫) ಅನಂತಮೂರ್ತಿಯವರ ಮೊದಲ ಕಾದಂಬರಿ. ಬ್ರಾಹ್ಮಣ್ಯವು ಯಾವುದನ್ನು ಪಾವಿತ್ರ್ಯವೆಂದು ಪರಿಗಣಿಸಿತ್ತೋ ಅದನ್ನು ಅಪವಿತ್ರಗೊಳಿಸುವುದರ ಮೂಲಕ ಬ್ರಾಹ್ಮಣ್ಯವನ್ನು ದಿಕ್ಕರಿಸುವ, ಶವಸಂಸ್ಕಾರದ ಸಮಸ್ಯೆಯನ್ನು ಮುಂದಿಡುತ್ತ ವ್ಯಕ್ತಿತ್ವದ ಸಂಸ್ಕಾರವನ್ನು ಒತ್ತಾಯಿಸುವ ರೂಪಕ ಈ ಕಾದಂಬರಿ. ಬ್ರಾಹ್ಮಣ-ಶೂದ್ರ ಪ್ರಜ್ಞೆಗಳ ಪಾತಾಳಿಯ ಮೇಲೆ ಹೆಣೆದ ಸಂಸ್ಕಾರವು ಸಾಹಿತ್ಯ ಮತ್ತು ಸಮಾಜದಲ್ಲಿ ವೈಚಾರಿಕ ಕ್ರಾಂತಿಯನ್ನೆಬ್ಬಿಸಿತು. ಅನೇಕ ಭಾರತೀಯ ಭಾಷೆಗಳೇ ಅಲ್ಲದೆ ಇಂಗ್ಲಿಷ್, ರಷ್ಯನ್, ಫ್ರೆಂಚ್, ಹಂಗೇರಿಯನ್ ಭಾಷೆಗಳಿಗೆ ಅನುವಾದವಾಯಿತು. ಚಲನಚಿತ್ರವಾಗಿ (೧೯೭೦) ರಾಷ್ಟ್ರಪ್ರಶಸ್ತಿಯನ್ನು ಪಡೆದ ಈ ಕೃತಿ ಹೊಸ ಅಲೆಯ ಚಲನಚಿತ್ರ ಚಳುವಳಿಗೆ ಪ್ರೇರಣೆ ನೀಡಿತು.
ಅನಂತಮೂರ್ತಿಯವರು ಆನಂತರ ಬರೆದ ಕಾದಂರಿಗಳು; ಭಾರತೀಪುರ (೧೯೭೩), ಅವಸ್ಥೆ (೧೯೭೮), ಮತ್ತು ಭವ (೧೯೯೪), ಭಾರತೀಪುರ; ಒಬ್ಬ ಭಾರತೀಯ ಸೋಷಿಯಲಿಸ್ಟ್ ಸುಧಾರಕನ ಸಮಾಜ ಸುಧಾರಣೆಯ ಕಥೆ. ಆಧುನಿಕ ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದ ಇಂಡಿಯಾದ ತರುಣನೊಬ್ಬನ ತಲ್ಲಣಗಳ ಕಥೆ. ಸಮಾಜ ಸುಧಾರಣೆಯ ವಿಫಲತೆಯ ಕಥೆ. ಅವಸ್ಥೆ; ಹಿಂದುಳಿದ ಜಾತಿಗಳಿಂದ ಮೇಲೆದ್ದು ಬಂದ ಉತ್ಸಾಹಿ ಪ್ರಾಮಾಣಿಕ ರಾಜಕೀಯ ನಾಯಕನೊಬ್ಬನು ಭ್ರಷ್ಟ ರಾಜಕಾರಣದ ಬಲೆಯಲ್ಲಿ ಸಿಲುಕಿ ಸೋಲುವ ಕಥೆ. ರೈತಚಳುವಳಿಯ ರಾಜಕಾರಣದ ಸೋಲಿನ ಕಥೆ. ಭವ ಆಧುನಿಕ ಬದುಕಿನ ಸಮಸ್ಯೆಗಳನ್ನು ಅದರ ಆಯಸ್ಥಳಗಳಲ್ಲಿ ಮುಟ್ಟಿನೋಡಲು ಪ್ರಯತ್ನಿಸುವ, ಬದಿಕಿನ ಅನುರಕ್ತಿ – ವಿರಕ್ತಿಗಳ ಸ್ವರೂಪವನ್ನು ಶೋದಿಸ ಬಯಸುವ ಕಾದಂಬರಿಯಾಗಿದೆ.
ಅನಂತಮೂರ್ತಿಯವರ ಕಾದಂಬರಿಗಳಲ್ಲಿ ಪ್ರಧಾನವಾಗಿ ಚರ್ಚಿತವಾಗುವ ಸಂಗತಿಗಳು – ರಾಜಕೀಯ ಮೌಲ್ಯಗಳ ಶೋಧ, ಕ್ರಾಂತಿಯ ವೈಫಲ್ಯ, ರಾಜಕೀಯ ಹಾಗೂ ನೈತಿಕತೆಯ ಪ್ರಶ್ನೆ ಐಹಿಕಜೀವನ ಆಹ್ವಾನಗಳು. ಅನಂತಮೂರ್ತಿಯವರ ಈ ಕಾದಂಬರಿಗಳು – ಕೃತಿಗಳು ಲೇಖಕನಿಗೆ ವೈಚಾರಿಕ ಆಕೃತಿಗಳನ್ನು ಮಂಡಿಸುವುದಕ್ಕಿರುವ ಮಾಧ್ಯಮ ಎನ್ನುವ ರೀತಿಯಲ್ಲಿವೆ. ದಿವ್ಯ (೨೦೦೧) ಇತ್ತೀಚೆಗೆ ಪ್ರಕಟವಾದ ಇವರ ಐದನೆಯ ಕಾದಂಬರಿ. ಇದು ಮಲೆನಾಡಿನಲ್ಲಿ ೬೦ರ ದಶಕದ ಸುಮಾರಿನಲ್ಲಿ ನಡೆಯುವ ಕಥೆ. ಅಂತರ್ಜಾತೀಯ ಮತ್ತು ಅಂತರ್ಮತೀಯ ಸಂಘರ್ಷದ ಅಬಿವ್ಯಕ್ತಿಯಾಗಿದೆ. ಈ ಕೃತಿ ಇಂಗ್ಲಿಷಿಗೂ ಅನುವಾದಗೊಂಡಿದೆ.
೧೯೬೩ರಲ್ಲಿ ಪ್ರಕಟವಾದ ಬಾವಲಿ ಅನಂತಮೂರ್ತಿಯವರ ಮೊದಲ ಕವನ ಸಂಕಲನ ನಂತರ ಇದರಲ್ಲಿದ್ದ ಹತ್ತು ಕವಿತೆಗಳ ಜೊತೆಗೆ ಮತ್ತೈದು ಕವಿತೆಗಳನ್ನು ಸೇರಿಸಿ ೧೫ ಪದ್ಯಗಳು ಎಂಬ ಕವನ ಸಂಕಲನವನ್ನು ೧೯೭೦ರಲ್ಲಿ ಪ್ರಕಟಿಸಿದರು. ಅಜ್ಜನ ಹೆಗಲ ಸುಕ್ಕುಗಳು (೧೯೮೯) ಮತ್ತು ಮಿಥುನ (೧೯೯೨) ಈಚಿನವು. ಇವರು ಬರೆದಿರುವ ಏಕೈಕ ನಾಟಕ ಆವಾಹನೆ (೧೯೭೧) ಅಗೆದಷ್ಟೂ ಕೆಸರು ಮುಚ್ಚಿಕೊಳ್ಳುವಂತಹ ವಠಾರದ ಜಗತ್ತಿನೊಡನೆ ಯುವಕನೊಬ್ಬನ ಸೆಣಸಾಟ ಈ ನಾಟಕದ ವಸ್ತು, ಆತ್ಮನಿಷ್ಟೆ ಮತ್ತು ಸಂಪ್ರದಾಯಗಳ ನಿರಂತರ ಹೋರಾಟವನ್ನು ಚಿತ್ರಿಸುವುದಾಗಿದೆ.
ಅನಂತಮೂರ್ತಿಯವರು ಮುಖ್ಯವಾಗಿ ವೈಚಾರಿಕ, ಬೌದ್ಧಿಕಚಿಂತಕರು. ಅವರ ಕಾದಂಬರಿಗಳು ಕಥನ ಮಾದರಿಗಳಾಗಿರದೆ, ಥೀಸೀಸ್ ಮಾದರಿಯವಾಗಿರುವುದು ಈ ಕಾರಣಕ್ಕಾಗಿಯೇ. ಇವರು ಬರೆದ ವಿಮರ್ಶಾ, ವೈಚಾರಿಕ ಲೇಖನಗಳು ಕನ್ನಡ ವಿಮರ್ಶೆಗೆ ಹೊಸ ಆಯಾಮಗಳನ್ನು ತಂದುಕೊಟ್ಟವು. ಪ್ರಜ್ಞೆ ಮತ್ತು ಪರಿಸರ (೧೯೭೧) ಸನ್ನಿವೇಶ (೧೯೭೪) ಸಮಕ್ಷಮ (೧೯೮೦) ಪೂರ್ವಾಪರ (೧೯೯೦) ಸಂಸ್ಕೃತಿ ಮತ್ತು ಅಡಿಗ (೧೯೯೬) ಬೆತ್ತಲೆ ಪೂಜೆ ಯಾಕೆ ಕೂಡದು (೧೯೯೬) ನವ್ಯಾಲೋಕ (೧೯೯೭)- ಇವರ ಪ್ರಮುಖ ಸಾಹಿತ್ಯವಿಮರ್ಶೆ ಮತ್ತು ಸಂಸ್ಕೃತಿ ಚಿಂತನೆಯ ಕೃತಿಗಳಾಗಿವೆ. ಪ್ರಜ್ಞೆ ಮತ್ತು ಪರಿಸರದಲ್ಲಿನ ಪಾಶ್ಚಾತ್ಯ ಪ್ರೇರಣೆಗಳಿಗೆ, ಸಂವೇದನೆಗಳಿಗೆ ತೆರೆದುಕೊಂಡು ಉತ್ತಮಾಂಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬ ನಿಲುವಿನ ಅನಂತಮೂರ್ತಿಯವರು ಪೂರ್ವಾಪರ ಮತ್ತು ನಂತರದ ಕೃತಿಗಳಲ್ಲಿ ಅಂಥ ಹೊರಗಿನ ಪ್ರಭಾವಗಳಿಂದ ಬಿಡುಗಡೆ ಪಡೆಯುವ ರಹದಾರಿಗಳನ್ನು ಹುಡುಕುವತ್ತ ಚಿಂತಿಸುವುದನ್ನು ಕಾಣಬಹುದು. ೮೦ರ ದಶಕದಿಂದ ಇವರ ಸಂಪಾದಕತ್ವದಲ್ಲಿಬಂದ ರುಜುವಾತು ಸಾಹಿತ್ಯಕ ನಿಯತಕಾಲಿಕೆ ಈ ನಿಟ್ಟಿನಲ್ಲಿ ಮಹತ್ತರ ಕೆಲಸ ಮಾಡಿತು. ’Politics and Fiction in the 1930’ ಅನಂತಮೂರ್ತಿಯವರ ಪಿ.ಎಚ್.ಡಿ ಪದವಿ ಪಡೆದ (೧೯೬೬) ಪ್ರೌಡ ಪ್ರಬಂಧ. ದಾವ್‌ದ ಜಿಂಗ್ (೧೯೯೩) ಚೀನೀಯ ತಾತ್ವಿಕ ದರ್ಶನವನ್ನು ಮುಂದಿಡುವ ಇವರು ಅನುವಾದಿಸಿದ ಕೃತಿ ಅನೇಕ ಇಂಗ್ಲಿಷ್ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕನ್ನಡ ಸಾಹಿತ್ಯ ಸಂಸ್ಕೃತಿಗೆ ಇಂಥ ಮಹತ್ವದ ಕೃತಿಗಳನ್ನು ನೀಡಿರುವ ಅನಂತಮೂರ್ತಿ ಅಂತರರಾಷ್ಟ್ರೀಯ ಮಟ್ಟದ ಬರಹಗಾರ. ದೇಶ ದೇಶಗಳ ಅನೇಕ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ನ್ಯಾಷನಲ್ ಬುಕ್ ಟ್ರಸ್ಟ್ ನ ಅಧ್ಯಕ್ಷರು, ಕೇಂದ್ರಸಾಹಿತ್ಯ ಅಕಾಡಮಿಯ ಅಧ್ಯಕ್ಷರು ಆಗಿದ್ದ ಇವರು ಕರ್ನಾಟಕದ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೮೪) ಮಾಸ್ತಿಪ್ರಶಸ್ತಿ (೧೯೯೪) ಮತ್ತು ದೇಶದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿ (೧೯೯೪)ಯನ್ನು ಪಡೆದಿದ್ದಾರೆ.
ವಿಜಯೇಂದ್ರ
ಕೃತಿಗಳು
ಕಥಾ ಸಂಕಲನ
- ಎಂದೆಂದೂ ಮುಗಿಯದ ಕತೆ (೧೯೫೫)
- ಪ್ರಶ್ನೆ (೧೯೬೩)
- ಮೌನಿ (೧೯೭೨)
- ಆಕಾಶ ಮತ್ತು ಬೆಕ್ಕು (೨೦೦೧)
- ಕ್ಲಿಪ್ ಜಾಯಿಂಟ್
- ಘಟಶ್ರಾದ್ಧ
- ಸೂರ್ಯನ ಕುದುರೆ (೧೯೮೧)
- ಪಚ್ಚೆ ರೆಸಾರ್ಟ್ (೨೦೧೧)
- ಬೇಟೆ, ಬಳೆ ಮತ್ತು ಓತಿಕೇತ
- ಎರಡು ದಶಕದ ಕತೆಗಳು
- ಮೂರು ದಶಕದ ಕಥೆಗಳು (೧೯೮೯)
- ಐದು ದಶಕದ ಕತೆಗಳು (೨೦೦೨)
ಕಾದಂಬರಿಗಳು
ವಿಮರ್ಶೆ ಮತ್ತು ಪ್ರಬಂಧ ಸಂಕಲನ
- ಪ್ರಜ್ಞೆ ಮತ್ತು ಪರಿಸರ (೧೯೭1)
- ಪೂರ್ವಾಪರ (೧೯೮೦)
- ಸಮಕ್ಷಮ (೧೯೮೦)
- ಸನ್ನಿವೇಶ (೧೯೭೪)
- ಯುಗಪಲ್ಲಟ (೨೦೦೧)
- ವಾಲ್ಮೀಕಿಯ ನೆವದಲ್ಲಿ (೨೦೦೬)
- ಮಾತು ಸೋತ ಭಾರತ (೨೦೦೭)
- ಸದ್ಯ ಮತ್ತು ಶಾಶ್ವತ (೨೦೦೮)
- ಸಂಸ್ಕೃತಿ ಮತ್ತು ಅಡಿಗ (೧೯೯೬)
- ಬೆತ್ತಲೆ ಪೂಜೆ ಏಕೆ ಕೂಡದು (೧೯೯೯)
- ಋಜುವಾತು (೨೦೦೭)
- ಶತಮಾನದ ಕವಿ ಯೇಟ್ಸ್ (೨೦೦೮)
- ಕಾಲಮಾನ (೨೦೦೯)
- ಮತ್ತೆ ಮತ್ತೆ ಬ್ರೆಕ್ಟ್ (೨೦೦೯)
- ಶತಮಾನದ ಕವಿ ವರ್ಡ್ಸ್ ವರ್ತ್ (೨೦೦೯)
- ಶತಮಾನದ ಕವಿ ರಿಲ್ಕೆ (೨೦೦೯)
- ರುಚಿಕರ ಕಹಿಸತ್ಯಗಳ ಕಾಲ (೨೦೧೧)
- ಆಚೀಚೆ (೨೦೧೧)
ನಾಟಕ
- ಆವಾಹನೆ (೧೯೬೮)
ಕವನ ಸಂಕಲನ
- ಹದಿನೈದು ಪದ್ಯಗಳು (೧೯೬೭)
- ಮಿಥುನ (೧೯೯೨)
- ಅಜ್ಜನ ಹೆಗಲ ಸುಕ್ಕುಗಳು (೧೯೮೯)
- ಅಭಾವ (೨೦೦೯)
- ಸಮಸ್ತ ಕಾವ್ಯ (೨೦೧೨)
ಆತ್ಮಕತೆ
- ಸುರಗಿ (೨೦೧೨)
- ಮೊಳಕೆ (ಅಮಿತನ ಆತ್ಮಚರಿತ್ರೆ)
ಚಲನಚಿತ್ರವಾದ ಕೃತಿಗಳು
- ಘಟಶ್ರಾದ್ಧ
- ಸಂಸ್ಕಾರ
- ಬರ
- ಅವಸ್ಥೆ
- ಮೌನಿ (ಸಣ್ಣಕಥೆ)
- ದೀಕ್ಷಾ (ಹಿಂದಿ ಚಿತ್ರ)
- ಪ್ರಕೃತಿ (ಸಣ್ಣಕಥೆ)
ಪ್ರಮುಖ ಉಪನ್ಯಾಸಗಳು
- ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ, ತುಮಕೂರು, 2002
- ಫ್ರೆಂಚ್ ಸಾಹಿತ್ಯ ಉತ್ಸವ, 2002
- ಬರ್ಲಿನ್ ಸಾಹಿತ್ಯ ಉತ್ಸವ, 2002
- ಕರ್ನಾಟಕವನ್ನು ಕುರಿತ ವಿಚಾರ ಸಂಕಿರಣ, ಅಯೋವಾ ವಿವಿ, 1997
- ಭಾರತವನ್ನು ಕುರಿತ ವಿಚಾರ ಸಂಕಿರಣ, ಬರ್ಲಿನ್, ಜರ್ಮನಿ, 1997
- ‘ದಿ ವರ್ಡ್ ಆ್ಯಸ್ ಮಂತ್ರ: ಎ ಸೆಲೆಬ್ರೇಷನ್ ಆಫ್ ರಾಜಾರಾವ್’ ವಿಚಾರ ಸಂಕಿರಣ, ಟೆಕ್ಸಾಸ್ ವಿವಿ, 1997
- ‘ಟ್ರಾನ್ಸ್‌ಲೇಟಿಂಗ್ ಸೌತ್ ಏಷ್ಯನ್ ಲಿಟರೇಚರ್’ ವಿಚಾರ ಸಂಕಿರಣ, ಲಂಡನ್, 1993
- ಭಾರತೀಯ ಲೇಖಕರ ನಿಯೋಗದ ಮುಖ್ಯಸ್ಥ, ಚೀನಾ, 1993
- ಗಾಂಧಿ ಸ್ಮಾರಕ ಉಪನ್ಯಾಸ, ರಾಜಘಾಟ್, ವಾರಣಾಸಿ, 1989
- ‘ಮಾರ್ಕ್ಸಿಸಂ ಅಂಡ್ ಲಿಟರೇಚರ್’, ಅಂಗನ್‌ಗಲ್ ಸ್ಮಾರಕ ಉಪನ್ಯಾಸ, ಮಣಿಪುರ, 1976.