“ಆಕೆಯನ್ನು ವಿವಾಹವಾಗಲು ನೀವು ಬಹಳ ಅದೃಷ್ಟ ಮಾಡಿರಬೇಕು”

“ಇಲ್ಲ, ನನ್ನಂಥ ಪತಿ ದೊರಕಬೇಕಾದರೆ ಆಕೆ ಅದೃಷ್ಟ ಮಾಡಿರಬೇಕು”

“ಬಿಸಿ ರಕ್ತದ ತರುಣರ ಮಾತೇ ಹೀಗೆ” ಎಂದು ನಗುತ್ತಾ ತರುಣ ಕೃಷ್ಣರಾವ್‌ನ ಬೆನ್ನು ಸವರಿದವರು ಖ್ಯಾತ ಚಿತ್ರ ಕಲಾವಿದ ಅ.ನ. ಸುಬ್ಬರಾಯರು.

“ನನ್ನ ಮತ್ತು ನಮ್ಮವರ ಮದುವೆಯ ಮಾತು ಮೊದಲು ಆರಂಭವಾದದ್ದು ಹೀಗೆ” ಚಂದ್ರಭಾಗಾದೇವಿ ಅವರ ನುಡಿಯಿದು.

“ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಅ.ನ. ಸುಬ್ಬರಾಯರು ಅಂದು ಏರ್ಪಡಿಸಿದ ನೃತ್ಯ ಕಾರ್ಯಕ್ರಮ(೧೯೪೦) ಏರ್ಪಾಟು ಮಾಡಿದ್ದ ಸಂದರ್ಭದ ಆಹ್ವಾನ ಪತ್ರಿಕೆಯಲ್ಲಿ ಕೃಷ್ಣರಾಯರ ಹೆಸರಿನೊಂದಿಗೆ ನನ್ನ ಹೆಸರೂ ಅಚ್ಚಾಗಿದ್ದುದು ಅಪರಾಧ ಎಂದವರ ಲೆಕ್ಕ. ಅದನ್ನು ಕಂಡು ಹಿರಿಯರಾದ ಅ.ನ. ಸುಬ್ಬರಾಯರು ಬಿಗಡಾಯಿಸಿದ್ದ ಪರಿಸ್ಥಿತಿಯನ್ನು ನಗೆಮಾತಿನಿಂದ ಸರಿಪಡಿಸಿದರು” ಎಂದು ಚಂದ್ರಭಾಗಾದೇವಿ ಸಂದರ್ಭದ ಹಿನ್ನೆಲೆಯ ಪರಿಚಯ ನೀಡಿದ್ದರು.

ಅನಂತರ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಚಂದ್ರಭಾಗಾದೇವಿ ಯವರ “ಉಷಾ ನೃತ್ಯ’ದ ಅಭಿನಯ ಹಾಗೂ ಪದಗತಿ ಕಂಡು ಪಕ್ಷಪಾತವಿಲ್ಲದೆ ಮನಸಾರೆ ಮೆಚ್ಚಿ ಕೃಷ್ಣರಾಯರು ಅಭಿನಂದಿಸಿದ್ದರು. ನಂತರದ ಒಂದು ವರ್ಷದಲ್ಲಿ ಒಂದು ಶುಭದಿನ (೧೯೪೧) ಚಂದ್ರಭಾಗಾದೇವಿ ಕೃಷ್ಣರಾವ್‌ಸತಿಪತಿಗಳಾದರು. ಕಲೆಯೊಂದಿಗೆ ಒಲವೂ ಸೇರಿದಾಗ ಹಾಲು ಜೇನಿನ ಸವಿ. ವಿವಾಹ ನಂತರದ ವರ್ಷಗಳನ್ನು ಹಿಂತಿರುಗಿ ಈ ದಂಪತಿಗಳು ನೋಡಿದಾಗ ತಮ್ಮ ತನು, ಮನ, ಧನದಿಂದ ಮಾಡಿದ ನೃತ್ಯ ಕಲಾಸೇವೆಯಿಂದ ಜೀವನ ಸಾರ್ಥಕವಾಗಿದೆ ಎಂದುಕೊಂಡರು.

ಪ್ರೊ. ಯು.ಎಸ್‌. ಕೃಷ್ಣರಾವ್‌ಅವರ ಹುಟ್ಟೂರು ಉತ್ತರಕನ್ನಡ ಜಿಲ್ಲೆಯ ಮಲ್ಲಾಪುರವಾದರೂ ಅವರು ಬೆಳೆದು ದೊಡ್ಡವರಾದುದು ಬೆಂಗಳೂರಿನಲ್ಲೇ. ತಂದೆ ಶಿವರಾಮ, ತಾಯಿ ಗಿರಿಜಾಬಾಯಿ, ಮುತ್ತಾತ ಒಬ್ಬರು ಕುಮಟಾದಲ್ಲಿ ನೃತ್ಯದ ಮೇಷ್ಟ್ರಾಗಿದ್ದರಂತೆ. ಕೃಷ್ಣರಾಯರು ಪದವೀಧರರಾಗಿ ವೃತ್ತಿ ಕೈಕೊಂಡಿರುವುದು ರಸಾಯನ ಶಾಸ್ತ್ರದಲ್ಲಿ. ಗೀಳು ಹಚ್ಚಿಸಿಕೊಂಡಿದ್ದು ಭರತನಾಟ್ಯದಲ್ಲಿ.

೧೯೨೧ ಆಗಸ್ಟ್‌ತಿಂಗಳ ೧೧ ನೇ ದಿನಾಂಕ ಚಂದ್ರಭಾಗಾದೇವಿಯವರ ಜನ್ಮದಿನ. ತಂದೆ ಪಡುಕೋಣೆ ರಮಾನಂದರಾಯರು. ತಾಯಿ ಸೀತಾದೇವಿ (ಇಬ್ಬರೂ ಬರಹಗಾರರು) ಶಿವರಾಮ ಕಾರಂತರ ಶುಭದತ್ತಾ ಗೀತ ನಾಟಕದಲ್ಲಿ ಪಾತ್ರ ದೊರೆತ ಕಾರಣವಾಗಿ ಚಂದ್ರಭಾಗದೇವಿಯರಿಗೆ ನಾಟ್ಯದಲ್ಲಿ ಆಸಕ್ತಿ ಮೂಡಿತು.

ಕೃಷ್ಣರಾಯರು ಕೋಲಾರ ಪುಟ್ಟಪ್ಪನವರಲ್ಲಿ ೩೦.೧.೩೯ರಿಂದ ಮೈಸೂರು ಶೈಲಿಯ ಭರತನಾಟ್ಯ ಅಭ್ಯಾಸವನ್ನೂ ಪಂದನಲ್ಲೂರು ಶೈಲಿಯ ಭರತನಾಟ್ಯ ಅಭ್ಯಾಸವನ್ನೂ ಕುಮಾರನ್‌ಹಾಗೂ ಕುಂಜು ಕುರೂಪ್‌ಅವರ ಕೈಕೆಳಗೆ ಕಥಕಳಿಯನ್ನೂ ಕಲಿತರು. ಚಂದ್ರಭಾಗದೇವಿಯರು ೧೦-೧೧ನೇ ವಯಸ್ಸಿನಲ್ಲಿ ಡಾ. ಶಿವರಾಮ ಕಾರಂತ ಅವರಿಂದ ಮೊದಲ ನೃತ್ಯ ಹೆಜ್ಜೆಗಳನ್ನು ಇಡಲು ಕಲಿತರು. ಎರಡು ಕಥಕಳಿ ನೃತ್ಯಬಂಧಗಳನ್ನು ಕಥಕ್‌ಗುರುಗಳಾದ ಶ್ರೀನಿವಾಸ ಕುಲಕರ್ಣಿಯವರಿಂದಲೂ, ಶ್ರೀ ಯು.ಎಸ್‌.ಕೃಷ್ಣರಾವ್‌ಅವರ ಸಹಾಯದಿಂದ ಕೋಲಾರ ಪುಟ್ಟಪ್ಪನವರ ಬಳಿ ಚತುರಶ್ರ ಅಲರಿಪು ಕಲಿತು ನಂತರ ಕೃಷ್ಣರಾಯರಿಂದಲೇ ಭರತನಾಟ್ಯ ನೃತ್ಯಬಂಧಗಳನ್ನು ಕಲಿತು, ಮುಂದೆ ತಂಜಾವೂರಿಗೆ ಹೋಗಿ ಪಂದನಲ್ಲೂರು ಶೈಲಿಯನ್ನು ಕಲಿತರು.

ಕೃಷ್ಣರಾವ್‌ದಂಪತಿಗಳು ತಂಜಾವೂರಿನ ನಾಟ್ಯ ಕಲಾನಿಧಿ ಮೀನಾಕ್ಷಿ ಸುಂದರಂ ಪಿಳ್ಳೆ ಅವರಲ್ಲಿ ಭರತನಾಟ್ಯ ಶಿಕ್ಷಣ ಪಡೆದರು. ಬೆಳಿಗ್ಗೆ ೫.೩೦ ಕ್ಕೆ ಪಾಠ ಪ್ರಾರಂಭ. ೫.೩೦ ರಿಂದ ೭.೩೦ ಗಂಟೆಯವರೆಗೆ ಭರತನಾಟ್ಯದ ನಾನಾ ತರಹದ ನಡೆಯುವಿಕೆಗಳನ್ನು ಹೇಳಿಕೊಡುತ್ತಿದ್ದರು. ಪುನಃ ೮.೦೦ ರಿಂದ ೧೧.೦೦ ಗಂಟೆಯವರೆಗೆ ವಿವಿಧ ಅಡವುಗಳ ಪಾಠ. ಒಂದೊಂದು ಅಡವು ನೂರು ಸಲ ಮಾಡಬೇಕು. ಕೈ ವಿನ್ಯಾಸ, ಭಂಗಿಗಳಲ್ಲಿ ಒಂದಂಗುಲವೂ ಹೆಚ್ಚು ಕಡಿಮೆ ಆಗದಂತೆ ಮಾಡಬೇಕಾಗುತ್ತಿತ್ತು. ನಂತರ ವಿಶ್ರಾಂತಿ, ಊಟ ಇತ್ಯಾದಿ. ಮಧ್ಯಾಹ್ನ ೨.೦೦ ಗಂಟೆಯಿಂದ ೫.೦೦ ಗಂಟೆಯವರೆಗೆ ನೃತ್ಯಾಭ್ಯಾಸ, ರಾತ್ರಿ ೭.೦೦ ರಿಂದ ೯.೦೦ ಗಂಟೆಯವರಿಗೂ ಅಭಿನಯ, ಮುದ್ರೆ, ಭರತನಾಟ್ಯ ಶಾಸ್ತ್ರದ ಶ್ಲೋಕಗಳ ಆಧಾರದಿಂದ ಹೇಳಿಕೊಡುತ್ತಿದ್ದರು. ರಾತ್ರಿ ೯ ಗಂಗೆ ಮಲಗಿದರೆ ಪುನಃ ಬೆಳಿಗ್ಗೆ ೫.೦೦ ಗಂಟೆಗೆ ನೃತ್ಯಾಭ್ಯಾಸ ಪ್ರಾರಂಭ. ತಂಜಾವೂರು ಅರಸರ ಅರಮನೆಯಲ್ಲಿಯೇ ಅವರ ರಂಗಪ್ರವೇಶ ೧೯೪೩ ಡಿಸೆಂಬರ್ ೩೧ ರಂದು ಜರುಗಿತು. ಅಂದು ಈ ದಂಪತಿಗಳು ನರ್ತಿಸಿದ ರೀತಿ ರಸಿಕರ ಕಣ್ಮನಗಳಿಗೆ ಆನಂದವನ್ನು ಕೊಡುವ ವಿಷಯವಾಗಿತ್ತು . ಅಂದಿನ ಖ್ಯಾತ ನೃತ್ಯ ವಿಮರ್ಶಕರಾದ ಇ. ಕೃಷ್ಣಅಯ್ಯರ್ ದಿನಪತ್ರಿಕೆಯೊಂದರಲ್ಲಿ “ಲಲಿತವಾಗಿ ಪೂರ್ಣತೆಯಿಂದ ಪ್ರದರ್ಶಿಸಿದ ನೃತ್ಯವನ್ನು ನೋಡಿದೆ ಗಂಡು ಜೊತೆಗಾರ ಆವೇಶ ಉತ್ಸಾಹದ ಬುಗ್ಗೆಯಂತಿದ್ದರೆ, ಹೆಣ್ಣು ಜೊತೆಗಾತಿ ಹೆಣ್ಣುತನಕ್ಕೆ ತಕ್ಕ ಹಿತಮಿತ ಹಾಗೂ ವಿನಯ ಶೀಲತೆಯಿಂದ ಕೂಡಿರುವುದು ಹೆಣ್ಣು ಗಂಡುಗಳಲ್ಲಿರುವ ಮೂಲ ಪ್ರಧಾನ ವ್ಯತ್ಯಾಸ ಅಲ್ಲದೆ ಕಲೆಯ ಸಮಾಗಮದಲ್ಲಿ ಎರಡು ಬೇರೆ ಬೇರೆ ಮಾದರಿಗಳು ಹೊಂದಿಕೊಂಡಿರುವ ಘನವಾದ ವಿಷಯವಾಗಿದೆ. ಸುಸಂಸ್ಕೃತ ಸತಿಪತಿಯರು ನೃತ್ಯ ಜೋಡಿಯಾಗಿ ಪ್ರದರ್ಶಿಸುವ ಕಲೆಯಲ್ಲಿ ಮೋಹಕತೆ ಘನತೆ ಗಾಂಭೀರ್ಯ ಹಾಗೂ ಪರಿಶುದ್ಧತೆ ಇದ್ದು ಪುರಾಣಗಳಲ್ಲಿ ಕಂಡುಬರುವ ಶಿವ ಪಾರ್ವತಿಯರ ನೃತ್ಯಗಳ ಆಧ್ಯಾತ್ಮಕತೆಯನ್ನು ಸೂಚಿಸುವಂತಿತ್ತು. ಇಂತಹ ದಂಪತಿಗಳು ಕಲೆಗೆ ಅನುಪಮ ಗೌರವ ಹಾಗೂ ಅಂತಸ್ತು ಕೊಟ್ಟು ಇತರರಿಗೆ ಸ್ಪೂರ್ತಿದಾಯಕ ಮಾದರಿಯಾಗಿ ಮೇಲ್ಪಂಕ್ತಿ ಹಾಕಿ ಕೊಡುವಂತಿದೆ………” ಎಂದು ಬರೆದರು.

ನೃತ್ಯಕಲೆಗೆ ಜೀವನವನ್ನು ಮುಡಿಪಾಗಿಟ್ಟು ಕೃಷ್ಣರಾಯರು ಕಾಲೇಜು ಕೆಲಸವನ್ನು ಬಿಟ್ಟಾಗ ಕಲಾಭಿಮಾನಿಗಳೆಂದೆನಿಸಿಕೊಂಡವರು ಅನಾಮಧೇಯ ಪತ್ರಗಳನ್ನು ಕಳುಹಿಸುತ್ತಲೇ ಇದ್ದರು. “ನೀವೊಬ್ಬರು ಕುಣಿಯುವುದಲ್ಲದೇ ನಿಮ್ಮ ಗೌರವಾನ್ವಿತ ಧರ್ಮಪತ್ನಿಯನ್ನೂ ರಂಗಸ್ಥಳಕ್ಕೆ ತಂದು ಕುಣಿಸಿ ಅವರ ಮಾನ ಕೆಡಿಸಬೇಡಿ” ಎಂಬ ಅಸಮಾಧಾನದ ಬೆದರಿಕೆಗಳು ಬಮದರೂ ಚಂದ್ರಭಾಗಾದೇವಿಯವರು ಕಲಾರಾಧನೆಯನ್ನು ಮುಂದುವರಿಸಿಕೊಂಡೇ ಬಂದರು. ನೃತ್ಯ ಪ್ರದರ್ಶನದ ಮಧ್ಯೆ ದೊರೆತ ಬಿಡುವಿನ ವೇಳೆಯಲ್ಲಿ ಚಂದ್ರಭಾಗಾದೇವಿ ಮಗುವಿಗೆ ಹಾಲುಣಿಸಿ ತಮ್ಮ ವೈವಾಹಿಕ ಮತ್ತು ಕಲಾಜೀವನದಲ್ಲಿ ಹಾಸುಹೊಕ್ಕಾಗಿ ಮುಂದುವರಿದರು.

ಪ್ರೋ|| ಕೃಷ್ಣರಾಯರ ಜೀವನ ಕಾಲೇಜು ಕೆಲಸ ಬಿಟ್ಟ ಮೇಲೆ ತ್ರಿಶಂಕು ಸ್ವರ್ಗವಾಯಿತು. ಕಂಕುಳಲ್ಲಿ ಮಕ್ಕಳನ್ನಿಟ್ಟುಕೊಂಡು ಕಲಾಭ್ಯಾಸ, ಕಲಾಪ್ರದರ್ಶನಗಳನ್ನು ಕಷ್ಟಪಟ್ಟು ಮುಂದುವರಿಸಿ ಕಲೆ ಕೇವಲ ದೇವದಾಸಿಯರ ಸೊತ್ತಲ್ಲ ಸಂಸಾರವಂದಿಗರೂ ಗೌರವಸ್ಥರ ಕುಟುಂಬಗಳೂ ಕಲಾ ಪ್ರದರ್ಶನಗಳನ್ನೀಯುವುದರಿಂದ ಮಾನಕ್ಕೇನೂ ಚ್ಯುತಿ ಇಲ್ಲ ಎಂಬುದನ್ನು ತೋರಿಸಿಕೊಟ್ಟರು ಚಂದ್ರಭಾಗಾದೇವಿಯವರು. ಮಕ್ಕಳನ್ನು ಕಟ್ಟಿಕೊಂಡು ಊರೂರು ಹಳ್ಳಿ-ಹಳ್ಳಿಗಳಲ್ಲಿ ನರ್ತಿಸಿದ ಲಂಬಾಣಿಗರ ರೀತಿಯಲ್ಲಿ ಜೀವನ-ನಿತ್ಯ ಬಡತನ-ಹಸಿವಿನ ಬವಣೆ ತನು ಮನಗಳನ್ನು  ನಿಗ್ರಹಿಸಿ ಕಲಾ ಸೇವೆ ಮಾಡಿದುದು, ಸಮಾಜದ ದೂಷಣೆ ನಿಂದೆ ಅಪಮಾನ ಇತ್ಯಾದಿ ಅವರು ಸಹಿಸಬೇಕಾಗಿತ್ತು ಆ ದಿನಗಳಲ್ಲಿ. ಇಷ್ಟಾದರೂ ಮದುವೆಯ ನಂತರದ ನಲವತ್ತೈದು ವರುಷಗಳ ಸಾಧನೆ ಮೆಚ್ಚವಂತಹುದು. ಪ್ರೊ|| ಕೃಷ್ಣರಾಯರು ಸಮಯಕ್ಕೆ ತುಂಬಾ ಮಹತ್ವವನ್ನು ಅಂದಿನಿಂದಲೂ ನೀಡುತ್ತಿದ್ದರು .

ವರ್ಷಗಳು ಕಳೆದಂತೆ ಈ ನೃತ್ಯಾರಾಧಕ ದಂಪತಿಗಳು ಸಾವಿರಾರು ನೃತ್ಯ ಪ್ರದರ್ಶನಗಳನ್ನೂ, ನೃತ್ಯ ಉಪನ್ಯಾಸಗಳನ್ನೂ ಕೊಟ್ಟು ಖ್ಯಾತಿ ಪಡೆದರು. ಕಲಾ ಪ್ರಸಾರಕ್ಕಾಗಿ ಕಲೆಯ ಪ್ರದರ್ಶನ ಭಾಷಣಗಳನ್ನು ಕೊಡುವುದರಲ್ಲಿ ಪ್ರಸಿದ್ಧಿ ಪಡೆದರು. ರೇಡಿಯೋ ಮೂಲಕ ಪ್ರಸಾರ. ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದು, ವಿದ್ಯಾಇಲಾಖೆಯ ಎಲ್ಲ ಸ್ಥಳಗಳಲ್ಲಿ, ಶಾಲೆ ಕಾಲೇಜು ವಿಶ್ವವಿದ್ಯಾನಿಲಯ ಎಲ್ಲೆಲ್ಲೂ ನಾಟ್ಯದ ಮೇಲೆ ಉಪನ್ಯಾಸ ನೀಡಿದ್ದರು. ೧೯೪೦ರಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಥಮ ಭಾಷಣ ಕೊಟ್ಟ ಮೇಲೆ ಭಾರತಾದ್ಯಂತ ಹಾಗೂ ದೇಶ ವಿದೇಶಗಳಲ್ಲಿ ೮೦೦ ಕ್ಕೂ ಮಿರಿ ಪ್ರದರ್ಶನ ಭಾಷಣಗಳನ್ನು ಮಾಡಿದ್ದಾರೆ. ಈ ದಂಪತಿಗಳು ತಮ್ಮ ಕಲಾ ಪ್ರತಿಭೆಯನ್ನು ಕೇವಲ ಸ್ವಾರ್ಥಕ್ಕಾಗಿ ಬಳಸಿಕೊಂಡವರಲ್ಲ. ನಿಸ್ವಾರ್ಥ ಮನೋಭಾವದಿಂಧ ಅನೇಕಾನೇಕ ಸಹಾಯರ್ಥ ಪ್ರದರ್ಶನಗಳನ್ನು ನೀಡಿ ಲಕ್ಷಗಟ್ಟಲೆ ಹಣವನ್ನು ಗಳಿಸಿ ಕಲಾ ಸಂಸ್ಥೆಗಳಿಗೆ, ಬಡವರಿಗೆ, ಪುಸ್ತಕ ಭಂಡಾರಗಳಿಗೆ, ದೇವಸ್ಥಾನಗಳಿಗೆ, ಯುದ್ಧನಿಧಿಗೆ, ಅಂಗವಿಕಲರಿಗೆ, ರೆಡ್‌ಕ್ರಾಸ್‌ಗೆ, ಫ್ಯಾಮಿಲಿ ರಿಲೀಫ್‌ಫಂಡ್‌ಗೆ ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಇತ್ಯಾದಿಗಳಿಗೆ ಧನಸಹಾಯ ಮಾಡಿದ್ದಾರೆ.

೧೯೫೨ರಲ್ಲಿ ಇಂಡೋ ಪಾಕಿಸ್ತಾನ ಮ್ಯೂಸಿಕ್‌ಕಾನ್‌ಫೆರಿನ್ಸಿನವರು ಈ ದಂಪತಿಗಳ (ಕರಾಚಿಯಲ್ಲಿ ಸರ್ಕಾರದ ನೆರವಿನಿಂದ) ನೃತ್ಯಗಳನ್ನು ಪ್ರದರ್ಶಿಸಿದರು. ೧೯೫೮ ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಆಹ್ವಾನಿತರಾಗಿ ಮಾಡರ್ನ್‌ಟ್ರೆಂಡ್ಸ್ ಇನ್‌ಭರತನಾಟ್ಯ ಎಂಬ ವಿಷಯದ ಮೇಲೆ ಪ್ರದರ್ಶನ ಭಾಷಣ ನೀಡಿದರು. ಹೀಗೆ ನೃತ್ಯ ಕ್ಷೇತ್ರದಲ್ಲಿ ಅವ್ಯಾಹುತ ಅಭ್ಯಾಸ ಆರಾಧನೆ ಸಾಧನೆ, ನೃತ್ಯ ನೃತ್ಯಾಭ್ಯಾಸ, ನೃತ್ಯ ಶಿಕ್ಷಣ ಹಾಗೂ ಕಲೆಯ ಅಭಿವೃದ್ಧಿ ಇವರ ಜೀವನ ಧ್ಯೇಯವೇ ಆಯಿತು.

ತಮ್ಮ ಇಡೀ ಬದುಕನ್ನೇ ನೃತ್ಯಕಲೆಗಾಗಿ ಸವೆಸಿದ ಈ ನೃತ್ಯ ಕಲಾ ದಂಪತಿಗಳು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿದ್ದಾರೆ. ಇವರ ಕಲೋಪಾಸನೆ ಸಾಧನೆ ಹಾಗೂ ಜೀವನ ವಿಚಾರಗಳು ಸ್ವರಾಸ್ಯಪೂರ್ಣ. ಇವರ ಬಗ್ಗೆ ಎಷ್ಟು ಬರೆದರೂ ಅದು ಹೊಗಳಿಕೆಯ ಮಾತುಗಳಾಗುವುದರ ಜೊತೆಗೆ ಅಪೂರ್ಣ ಎನಿಸುತ್ತದೆ. ಲಂಡನ್ನಿನಲ್ಲಿ ಎರಡು ವರ್ಷಗಳ ಕಾಲ ಅವಿಶ್ರಾಂತ ಕೆಲಸ ಮಾಡಿ ತಮ್ಮ ಪಾಶ್ಚಾತ್ಯ ಶಿಷ್ಯವೃಂದದ ನೆರವಿನಿಂದ ನಾಲ್ಕು ನೃತ್ಯ ನಾಟಕಗಳನ್ನು ರಚಿಸಿ ಪಾಶ್ಚಾತ್ಯ ರಸಿಕರ ಮನಸ್ಸನ್ನು ಸೂರೆಗೊಂಡರು. ರಾಣಿ ಶಾಂತಲಾ ನೃತ್ಯ ನಾಟಕದ ಮೂಲಕ ಭಾರತೀಯ ಕಲಾ ಸಂಸ್ಕೃತಿಯನ್ನು ಕರ್ನಾಟಕದ ಹಳೇಬೀಡು, ಬೇಲೂರಿನ ವೈಭವವನ್ನು ತಿಳಿಸಿದರು. ಆ ನಂತರ ನ್ಯೂಯಾರ್ಕಿನ ಇಂಡೋ ಅಮೆರಿಕನ್‌ಡಾನ್ಸ್ ಕಂಪೆನಿಯ ಆಹ್ವಾನದ ಮೇಲೆ ಎರಡು ತಿಂಗಳ ಕಾಲ ಅವಿರತ ಶ್ರಮ ಮತ್ತೆ ಎರಡು ತಿಂಗಳಲ್ಲಿ ಅಮೆರಿಕ ಪ್ರಯಾಣ ಟಿ.ವಿ. ರೇಡಿಯೋ ಮೂಲಕ ಕಲಾ ಪ್ರಸಾರ, ಹವಾಯಿಯಿಂದ ಹಾಂಗ್‌ಕಾಂಗ್‌, ಸಿಂಗಾಪುರ ನಗರಗಳಲ್ಲಿ ಯಶಸ್ವಿ ಕಾರ್ಯಕ್ರಮಗಳು.

೧೯೭೩ರಲ್ಲಿ ಬೆಂಗಳೂರಿನಲ್ಲಿ ತಮ್ಮದೇ ಆದ ಮಹಾ ಮಾಯಾ (ಮಿನಿ ರಂಗಗೃಹ) ನೃತ್ಯ ಶಾಲೆಯನ್ನು ಕಟ್ಟಿಸಿ ನೃತ್ಯ ಶಿಕ್ಷಣವನ್ನು  ಸ್ವದೇಶದವರಿಗೇ ಅಲ್ಲದೆ, ವಿದೇಶದಿಂದ ಬಂದ ಅನೇಕ ವಿದ್ಯಾರ್ಥಿಗಳಿಗೂ ನೃತ್ಯ ಶಿಕ್ಷಣ ತರಬೇತಿ ನೀಡುತ್ತಿದ್ದಾರೆ. ತಮ್ಮ ಜೀವಮಾನದಲ್ಲಿ ನೂರಾರು ವಿದ್ಯಾರ್ಥಿಗಳನ್ನು ‘ರಂಗ ಪ್ರವೇಶ’ ಕಾರ್ಯಕ್ರಮಗಳಿಗೆ ತಯಾರು ಮಾಡಿದುದು ಇವರ ಅದ್ವಿತೀಯ ಸಾಹಸ. ಈ ದಂಪತಿಗಳ ಶಿಷ್ಯ ವರ್ಗದಲ್ಲಿ ಕೆಲವು ನರ್ತಕಿಯರು, ನರ್ತಕರು ವಿಶ್ವಖ್ಯಾತಿ ಪಡೆದಿದ್ದಾರೆ.

ನಾಟ್ಯದಂತೆಯೇ ಈ ದಂಪತಿಗಳು ಬರವಣಿಗೆಯಲ್ಲೂ ಹೆಸರುವಾಸಿ. ಇಂಗ್ಲಿಷ್‌ಹಾಗೂ ಕನ್ನಡದಲ್ಲಿ ಚಂದ್ರಭಾಗಾದೇವಿ ಬರೆದ ‘ಗೆಜ್ಜೆಯ ಹೆಜ್ಜೆಯ ನುಡಿ’ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಆ ಪುಸ್ತಕವು ಕನ್ನಡದ ಪ್ರವಾಸ ಸಾಹಿತ್ಯದಲ್ಲೇ ವಿಶಿಷ್ಟ ಸ್ಥಾನ ಪಡೆದ ಪುಸ್ತಕ. .ಕನ್ನಡ ವಿಶ್ವಕೋಶ ಪ್ರಕಟಣೆಯಲ್ಲಿ ಈ ದಂಪತಿಗಳು ಹಲವಾರು ವಿಷಯಗಳ ಮೇಲೆ ಲೇಖನಗಳನ್ನು ಬರೆದಿದ್ದಾರೆ. ಮೈಸೂರು, ಬೆಂಗಳೂರು, ಆಕಾಶವಾಣಿಯ ಮೂಲಕ ಇವರ ವಿಚಾರ ವಿಮರ್ಶೆಗಳು ಹಲವಾರು ಬಾರಿ ಪ್ರಸಾರವಾಗಿದೆ. ಅನೇಕ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ.

ಹದಿನಾಲ್ಕನೆ ಶತಮಾನದಲ್ಲಿ ಸಿಂಹ ಭೂಪಾಲನಿಂದ ರಚಿತವಾದ ಲಾಸ್ಯರಂಜನ ಶ್ರೀಮಾನ್‌ಹೆಚ್‌.ಆರ್.ರಂಗಸ್ವಾಮಿ ಅಯ್ಯಂಗಾರ್ ಹಾಗೂ ಶ್ರೀಮಾನ್‌ಎಸ್‌.ಎನ್‌. ಕೃಷ್ಣ ಜೋಯಿಸ್‌ಅವರಿಂದ ೧೯೬೬ ರಲ್ಲಿ ಕನ್ನಡಕ್ಕೆ ಅನುವಾದಗೊಂಡಿತು. ಇದರಲ್ಲಿ ಬರುವ ಚಾರಿ, ಸ್ಥಾನಕ, ಹಸ್ತ, ರಸಗಳ ನಿರೂಪಣೆಗೆ ಈ ದಂಪತಿಗಳ  ಸೂಕ್ತ ಭಾವ ಚಿತ್ರಗಳು ಗ್ರಂಥಕ್ಕೆ ಹೆಚ್ಚಿನ ಮೆರಗನ್ನು ನೀಡಿವೆ. ಇಂದು ನರ್ತನ ಕ್ಷೇತ್ರದಲ್ಲಿ ‘ಲಾಸ್ಯರಂಜನ’ ಒಂದು ಅಮೂಲ್ಯ ಗ್ರಂಥವೆಂದು ಪರಿಗಣಿಸಲಾಗಿದೆ. ಹೈಸ್ಕೂಲ್‌ಮಟ್ಟದಲ್ಲಿ ನಡೆಯುವ ನಾಟ್ಯ ತರಗತಿಗಳಿಗೆ ಇವರ ಆಧುನಿಕ ಭಾರತದಲ್ಲಿ ನೃತ್ಯಕಲೆ ಪಠ್ಯಪುಸ್ತಕವಾಗಿದೆ. ೧೯೮೦ ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಸಂಗೀತ, ನಾಟಕ, ನೃತ್ಯ ವಿಭಾಗಕ್ಕೆ ಅಗತ್ಯವಿರುವ ಪಠ್ಯಪುಸ್ತಕ ‘ನೃತ್ಯ ಕಲೆಯನ್ನು ಪ್ರಸಾರಾಂಗ ಪ್ರಕಟಿಸಿದೆ. ಕೃಷ್ಣರಾವ್‌ಚಂದ್ರಭಾಗಾದೇವಿ ಸಿನಿಮಾ ಪ್ರಪಂಚವನ್ನೂ ಬಿಟ್ಟಿಲ್ಲ. ಹಲವು ದಶಕಗಳ ಹಿಂದೆ ಭರತನಾಟ್ಯ ಹಸ್ತ ಮುದ್ರೆಗಳನ್ನು ಅಭಿನಯಿಸುವ ಸಾಕ್ಷ್ಯಚಿತ್ರಕ್ಕೂ ನೆರ‍ವು ನೀಡಿ ಭರತನಾಟ್ಯ ಹಸ್ತಮುದ್ರೆಗಳನ್ನು ಅಭಿನಯಿಸುವ ಸಾಕ್ಷ್ಯಚಿತ್ರಕ್ಕೂ ನೆರವು ನೀಡಿ ಅಂದಿನ ದಿನಗಳಲ್ಲಿ ಭರತನಾಟ್ಯದತ್ತ ಜನರ ಗಮನ ಸೆಳೆದಿದ್ದಾರೆ. ಕನ್ನಡ ಭಾಷೆಯ ಪದಗಳಿಗೆ ನೃತ್ಯಗಳನ್ನು ಜೋಡಿಸುವುದರದತ್ತ ಅವರ ಗಮನ ಐದು ದಶಕಗಳ ಹಿಂದೆಯೇ ನಿದರ್ಶನವಾಗಿದೆ.

ಭಾರತಭಾರತಿ ಸಂಪದ ಪುಸ್ತಕ ಮಾಲೆಯಲ್ಲಿ ಚಂದ್ರಭಾಗಾದೇವಿಯವರು ‘ವಿಷ್ಣು ನಾರಾಯಣ ಭಾತಖಾಂಡೆ’ ಕಿರು ಪುಸ್ತಕವನ್ನು ಬರೆದಿದ್ದಾರೆ. ಅಲ್ಲದೆ ‘ಶ್ರೀ ಕೃಷ್ಣ ಪುಷ್ಪಾಂಜಲಿ’ ಹಾಗೂ ತಂದೆಯವರ ಸ್ಮಾರಕ ಗ್ರಂಥವಾಗಿ ‘ಪರಮಾನಂದ’ ಅಲ್ಲದೆ ನೃತ್ಯ ಕಲೆಯ ವಿಷಯವಾಗಿ ಬರೆದಿರುವ ಅನೇಕಾನೇಕ ಲೇಖನಗಳು ಪ್ರಖ್ಯಾತ ಪುಸ್ತಕಗಳಲ್ಲಿ ಕಾಣಬಹುದು.

೧೯೭೯ರಲ್ಲಿ ಮತ್ತು ೧೯೮೨ರಲ್ಲಿ ಮತ್ತೆ ವಿದೇಶ ಪ್ರಯಾಣ. ಕೆನಡಾದ ಮಾಂಟ್ರಿಯಲ್‌ನ ‘ಕಲಾ ಭಾರತಿ’ ಸಂಸ್ಥೆಯ ಆಹ್ವಾನದ ಮೇಲೆ ಕಲಾಸೇವೆ ಮಾಡುವ ಸುಯೋಗ, ಅವರಿಂದ ತಾಮ್ರಪತ್ರ ಗೌರವ ಪಡೆದ ಅವಕಾಶ ಹಾಗೂ ಅಮೆರಿಕ ದೇಶವನ್ನೆಲ್ಲ ಸುತ್ತಿ ವಿವಿಧ ಕಲಾಸಂಸ್ಥೆಗಳಲ್ಲೂ, ವಿಶ್ವವಿದ್ಯಾನಿಲಯದ ಆಶ್ರಯಗಳಲ್ಲೂ ಭಾಷಣ, ನೃತ್ಯಪ್ರದರ್ಶನ ಕ್ರಮಗಳನ್ನು ಕೊಟ್ಟರು. ಲಂಡನ್ನಿನ ಭಾರತೀಯ  ವಿದ್ಯಾಭವನದಲ್ಲಿ ಭಾಷಣ ಹಾಗೂ ಪ್ರದರ್ಶನ ಕಾರ್ಯಕ್ರಮಗಳನ್ನು ಕೊಟ್ಟರು. ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿ ಭಾಷಣ  ಹಾಗೂ ಪ್ರದರ್ಶನ ನಡೆಯಿತು.

ನೋವು ನಲಿವುಗಳ  ಬದುಕಿನಲ್ಲಿ ಐದು ದಶಕಗಳನ್ನು ನೃತ್ಯರಂಗದಲ್ಲೇ ಇವರು ಸವೆಸಿದ್ದಾರೆ. ಕರ್ನಾಟಕ ನೃತ್ಯ ಪ್ರಪಂಚದಲ್ಲಿ ಕೃಷ್ಣರಾವ್‌ದಂಪತಿಗಳು ಧ್ರುವತಾರೆಯರಿದ್ದಂತೆ.

ಕಲ್ಲು ಸಕ್ಕರೆಯ ಸವಿಯ ಬಲ್ಲವರೇ ಬಲ್ಲರು. ಈ ಅಪರೂಪಲ ಹಾಗೂ ಅನ್ಯೋನ್ಯ ಬಾಂಧವ್ಯದ ದಂಪತಿಗಳು ಭರತನಾಟ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಚಂದ್ರಭಾಗದೇವಿಯರನ್ನು ಕರ್ನಾಟಕ ಸರ್ಕಾರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದು (೧೯೯೫) ಅವರು ಈ ಅವಧಿಯಲ್ಲಿ ಮಾಡಿದ ಕಾರ್ಯ ಅನುಕರಣೀಯ. ಸಂಗೀತ ನೃತ್ಯ ಕಲೆ ಬಹುಮುಖ ಪ್ರಗತಿಗೆ ಅಗತ್ಯವಾದ ಎಲ್ಲಾ ವಿಚಾರಗಳಲ್ಲಿ ಚಂದ್ರಭಾಗಾದೇವಿಯವರಿಗಿದ್ದ ಆಸಕ್ತಿ ಈ ಅವಧಿಯಲ್ಲಿ ಎದ್ದು ಕಾಣುತ್ತಿತ್ತಿಉ.

ಇದ್ದಕ್ಕಿದ್ದಂತೆ ಒಂಧು ದಿನ ಚಂದ್ರಭಾಗಾದೇವಿಯವರ ಆರೋಗ್ಯ ಹದಗೆಟ್ಟಿತು. ಸಾಧ್ಯವಾದ ಎಲ್ಲಾ ಚಿಕಿತ್ಸೆಗಳನ್ನು ಮಾಡಿದರೂ ದೈವ ಅವರನ್ನು  ಕೃಷ್ಣರಾಯರಿಂದ ಕಸಿದುಕೊಂಡಿತು. (ನಿಧನ ೧೯೯೭). ನಾಡಿನ ನೃತ್ಯರಂಗಕ್ಕೆ ಇವರ ನಿಧನದಿಂದ ಅಪಾರ ಹಾನಿಯಾಯಿತು. ಕೃಷ್ಣರಾಯರಿಗಂತೂ ಆಕಾಶವೇ ತಮ್ಮ ತಲೆಯ ಮೇಲೆ ಕುಸಿದಂತಾಯಿತು. ನಂತರದ ಕೃಷ್ಣರಾವ್‌ಜೀವನದ ಬಗ್ಗೆ ಬರೆಯುವುದು ಕಷ್ಟ. ತಮ್ಮ ಜೀವನದ ಪ್ರತಿಯೊಂದು ವಿಷಯದಲ್ಲಿ ಚಂದ್ರಭಾಗಾದೇವಿಯವರ ಒಲವು ನಿಲುವನ್ನೇ ಆಧಾರವಾಗಿಟ್ಟುಕೊಂಡೇ ಬಂದ ಕೃಷ್ಣರಾಯರಿಗೆ ಒಬ್ಬಂಟಿ ಜೀವನದ ಪರಿಚಯವೇ ಇಲ್ಲ. ಪರಿಸ್ಥಿತಿ ಹೀಗಿದ್ದರೂ ಅವರ ನಿತ್ಯ ಜೀವನವೂ ನೃತ್ಯ ಕಲೆಗೇ ಅಂಟಿಕೊಂಡಿದೆ.

ರಾವ್‌ದಂಪತಿಗಳಿಗೆ ದೊರೆತ ಪ್ರಶಸ್ತಿಗಳು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಪ್ರಶಸ್ತಿ (೧೯೮೦). ಕರ್ನಾಟಕ ರಾಜ್ಯ ಸರ್ಕಾರದಿಂದ ಚಂದ್ರಭಾಗಾದೇವಿಯವರಿಗೆ ರಾಜ್ಯ ಪ್ರಶಸ್ತಿ (೧೯೮೫), ಕಲಾಭಾರತಿ ಪ್ರಶಸ್ತಿ (೧೯೮೬), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ದಂಪತಿಗಳು ಬರೆದ ನೃತ್ಯಕಲೆ ಪುಸ್ತಕಕ್ಕೆ ಬಹುಮಾನ (೧೯೮೬), ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ (೧೯೮೮), ಕರ್ನಾಟಕ ಸರ್ಕಾರದ ಶಾಂತಲಾ ಪ್ರಶಸ್ತಿ (೧೯೯೭). ಕಲಾ ವಿಮರ್ಶಕ ಇ.ಕೃಷ್ಣ ಅಯ್ಯರ್ ಸ್ಮಾರಕ ಚಿನ್ನದ ಪದಕ(೨೦೦೨)-ಚಂದ್ರಭಾಗಾದೇವಿ ವಿಧಿವಶರಾದ ನಂತರ ಕೃಷ್ಣರಾಯರು ಒಬ್ಬಂಟಿಯಾಗಿ ಸ್ವೀಕರಿಸಿರುವ ಪ್ರಶಸ್ತಿ ಇದಾಗಿದೆ.

ನಾಡಿನ ಅನೇಕ ಸಂಘ ಸಂಸ್ಥೆಗಳು, ಸರ್ಕಾರದ ಸಾಂಸ್ಕೃತಿಕ ಇಲಾಖೆಗಳು ಕೃಷ್ಣರಾಯರಿಗೆ ೯೦ ವರ್ಷ ತುಂಬಿದ ಸಂದರ್ಭದಲ್ಲಿ ಗೌರವಿಸಿದೆ. ಒಟ್ಟಿನಲ್ಲಿ ಕೃಷ್ಣರಾವ್‌ಚಂದ್ರಭಾಗಾದೇವಿ ದಂಪತಿಗಳನ್ನು ಪಡೆದಂತಹ ಈ ನಾಡು ಧನ್ಯ.