ನೃತ್ಯಕಲೆಗೆ ಇಂದು ಸಮಾಜದಲ್ಲಿ ಗೌರವವಿದೆ, ಉನ್ನತವಾದ-ಸ್ಥಾನವಿದೆ. ಬಹಳ ನೃತ್ಯ ಕಲಾವಿದರು ಈ ರಂಗದಲ್ಲಿ ಮುಂದೆ ಬಂದಿದ್ದಾರೆ; ಬರುತ್ತಿದ್ದಾರೆ. ಇದು ಅತ್ಯಂತ ಸಂತಸದ ವಿಚಾರ. ಆದರೆ ಸುಮರು ಅರ್ಧಶತಮಾನದಷ್ಟು ಹಿಂದಿನ ಪರಿಸ್ಥಿತಿಯನ್ನು ಗಮನಿಸಿದರೆ ನೃತ್ಯರಂಗದ ಸ್ಥಿತಿ ತುಂಬಾ ದುಸ್ಥಿತಿಯಲ್ಲಿತ್ತು. ನೃತ್ಯಕಲೆಯನ್ನು ತುಚ್ಛವಾಗಿ ಕಾಣುವ, ಕುಲೀನ ಮನೆತನದವರಂತೂ ಇದರಿಂದ ಮಾರುದೂರ ಸರಿಯುವ ಪರಿಸ್ಥಿತಿಯಲ್ಲಿತ್ತು. ಆ ಸಮಯದಲ್ಲಿ ನೃತ್ಯ ರಂಗಕ್ಕೆ ಪ್ರವೇಶ ಮಾಡಿ ಏನಾದರೂ ಸಾಧನೆಯನ್ನು ಮಾಡಿದ್ದರೆ ಅದು ಖಂಡಿತವಾಗಿಯೂ ನೃತ್ಯರಂಗಕ್ಕೆ ಸಲ್ಲಿಸಿದ ಅಮೂಲ್ಯವಾದ ಕೊಡುಗೆಯೆಂದೇ ಹೇ ಳಬೇಕು.

ಹಿಂದಿನ ಕಾಲದಲ್ಲಿ ನೃತ್ಯ, ಚಿತ್ರ, ಶಿಲ್ಪ, ಸಾಹಿತ್ಯ, ನಾಟಕ ಹೀಗೆ ಯಾವುದೇ ಕಲಾ ಪ್ರಕಾರಗಳನ್ನು ಗಮನಿಸಿದಾಗಲೂ ಆ ಕಲೆಯ ಅಭ್ಯುದಯಕ್ಕೆ ರಾಜಾಶ್ರಯವೇ ಪ್ರಮುಖ ಕಾರಣವೆಂಬುದನ್ನು ತಿಳಿಯುತ್ತೇವೆ. ಕರ್ನಾಟಕದಲ್ಲೂ ರಾಜಾಶ್ರಯವಿದ್ದ ಸಮಯದಲ್ಲಿ ಅದರ ರಾಜಧಾನಿ ಹಾಗೂ ಆ ಸುತ್ತಲಿನ ಪ್ರದೇಶದಲ್ಲಷ್ಟೇ ಕಲೆಯು ಪ್ರವರ್ಧಮಾನವಾಗಿದೆ, ಕಲಾವಿದರು ಕೀರ್ತಿವಂತರಾಗಿದ್ದಾರೆ ಎಂಬುದು ಸತ್ಯ. ರಾಜಧಾನಿಯಿಂದ ದೂರವಾಗಿದ್ದ ಸ್ಥಳಗಳು ಕಲಾ ಸಂಪತ್ತಿನಿಂದ ದೂರವಾಗಿ ಬರಡು ಪ್ರದೇಶವಾಗಿಯೇ ಉಳಿದಿರುವುದು ಕಂಡು ಬರುತ್ತದೆ.

ಈ ರೀತಿಯಲ್ಲಿ ರಾಜಾಶ್ರಯದಿಂದ ದೂರವಾಗಿ, ಕಲಾ ಸಂಪತ್ತಿನಿಂದ ಬರಡಾಗಿ, ನೃತ್ಯಕಲೆಗೆ ಸಮಾಜದಲ್ಲಿ ಯಾವುದೇ ಸ್ಥಾನಮಾನಗಳು ಇಲ್ಲದೇ ಇರುವ ಸಮಯದಲ್ಲಿ ಕರ್ನಾಟಕದ ಕರಾವಳಿ ತೀರದ ಮಂಗಳೂರಿಗೆ ನೃತ್ಯ ಕಲಾ ಸಂಪತ್ತನ್ನು ತಂದುಕೊಟ್ಟು, ಸಮಾಜದ ಜನರಿಂದ ಗೌರವಿಸಲ್ಪಟ್ಟು, ಕಲೆಗೂ ಜನರು ಗೌರವ ನೀಡುವಂತೆ ಮಾಡಿದ ಮಹಾನ್‌ ಸಾಧಕವ್ಯಕ್ತಿ ನಾಟ್ಯಾಚಾರ್ಯ ಶ್ರೀ ಯು.ಎಸ್‌. ಕೃಷ್ಣರಾಯರು ಎಂಬುದರಲ್ಲಿ ಅತಿಶಯವಿಲ್ಲ.

ಬ್ರಿಟಿಷರ ಆಡಳಿತ ಕಾಲದಲ್ಲಿ ಶಿರಸ್ತೆದಾರರಾಗಿದ್ದ ಶ್ರೀ ಸುಬ್ಬರಯರದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ಶಿಸ್ತಿಗೆ ಹೆಸರಾದ ಮನೆತನ. ಉಡುಪಿಯ ಸಮೀಪದ ಉಚ್ಚಿಲದಲ್ಲಿ ವಾಸ್ತವ್ಯ. ೧೯೧೪ ನವಂಬರ್ ೧೯ ರಂದು ಸುಬ್ಬರಾಯರಿಗೆ ಸುಪುತ್ರನಾಗಿ ಕೃಷ್ಣರಾಯರು ಉಚ್ಚಿಲದಲ್ಲಿ ಜನಿಸಿದರು. ಆದರೆ ವೃತ್ತಿಯ ನಿಮಿತ್ತದಿಂದ ಸುಬ್ಬರಾಯರು ಮಂಗಳೂರಿನಲ್ಲಿ ಮನೆಮಾಡ ಬೇಕಾಯಿತು. ಹೀಗಾಗಿ ಕೃಷ್ಣರಾಯರು ಬೆಳೆದದ್ದು ಮಂಗಳೂರಿನಲ್ಲಿ.

ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕೃಷ್ಣರಾಯರ ಶಿಕ್ಷಣ, ಆಟ ಮತ್ತು ನಾಟಕದಲ್ಲೇ ಹೆಚ್ಚಿನ ಆಸಕ್ತಿ. ಪಾಠ ನಂತರವೇ. ಶಾಲೆಯಲ್ಲಿ ಯಾವುದೇ ನಾಟಕವಾದರೂ ಕೃಷ್ಣರಾಯರಿಗೆ ಪ್ರಮುಖ ಪಾತ್ರ ಮೀಸಲು. ಅವರ ಹಾಡಿಗೆ, ಅಭಿನಯಕ್ಕೆ ಆಗ ‘ಓನ್ಸ್ ಮೋರ್’ ಸಾಮಾನ್ಯವಾಗಿತ್ತಂತೆ. ಹೈಸ್ಕೂಲಿನಲ್ಲಿ ಕನ್ನಡ ಪಂಡಿತರೂ ಕವಿಗಳೂ ಆಗಿದ್ದ ಶ್ರೀ ಎಂ.ಎನ್‌. ಕಾಮತ್‌ರವರು ನಾಟಕದಲ್ಲಿ ಅಭಿನಯಿಸಲು ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಕೊಟ್ಟವರು. ಅವರ ಮಾರ್ಗದರ್ಶನವೇ ಈ ರಂಗದಲ್ಲಿ ಮುಂದುವರಿಯಲು ನನಗೆ ಪ್ರೇರಣೆಯಾಯಿತು ಎಂಬುದನ್ನು ಕೃಷ್ಣರಾಯರು ಈಗಲೂ ಗೌರವದಿಂದ ಸ್ಮರಿಸುತ್ತಾರೆ. ಹಾಗೆಯೇ ಆ ಸಮಯದಲ್ಲಿ ಕ್ರಿಕೆಟ್‌ನ ಹುಚ್ಚೂ ಹೆಚ್ಚಾಗಿತ್ತು. ನಾನು ಉತ್ತಮ ಬೌಲರ್ ಆಗಿದ್ದೆ ಎನ್ನುತ್ತಾರೆ ಕೃಷ್ಣರಾಯರು.

ಹಾಡಿನಲ್ಲಿ, ಅಭಿನಯದಲ್ಲಿ ಮೋಡಿ ಮಾಡುತ್ತಿದ್ದ ಕೃಷ್ಣರಾಯರ ಅಂತರಂಗದಲ್ಲಿ ಕಲೆಯ ಸತ್ವ ಅಡಗಿತ್ತು. ಅದು ಹೊರಬರಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಲೇ ಇತ್ತು.

ನೃತ್ಯ ರಂಗದಲ್ಲಿ ವಿಶ್ವವಿಖ್ಯಾತಿಯನ್ನು ಗಳಿಸಿದ್ದ ಉದಯಶಂಕರ್ ಅವರ ನೃತ್ಯ ತಂಡದಲ್ಲಿ ನೃತ್ಯಕಲಾವಿದರಾಗಿದ್ದ ಶ್ರೀ ಕೆ.ಕೆ. ಶೆಟ್ಟಿಯವರು ಆ ಸಮಯದಲ್ಲಿ ಮಂಗಳೂರಿಗೆ ಬಂದಿದ್ದರು. ಕೃಷ್ಣರಾಯರು ಅವರನ್ನು ಭೇಟಿಯಾದರು. ಕಾಲಿಗೆ ಗೆಜ್ಜೆಕಟ್ಟಿ ಹೆಜ್ಜೆ ಹಾಕಲು ಪ್ರಾರಂಭಿಸಿದರು. ಅವರಲ್ಲಿ ನೃತ್ಯ ಕಲಿತರು, ಮಾತ್ರವಲ್ಲ ಜೊತೆಗೆ ಕಲಿಸಲೂ ಹೊರಟರು. ನೃತ್ಯ ಅಂದರೆ ದೂರಸರಿಯುತ್ತಿದ್ದ ಜನರತ್ತ ಇವರೆಲ್ಲ ಹೋದರು. ನಿಮ್ಮ ಮಕ್ಕಳಿಗೆ ನೃತ್ಯ ಕಲಿಸುವುದಾಗಿ ಹೇಳಿ ಮನವೊಲಿಸಿ ಕಲಿಸಲು ಪ್ರಾರಂಭಿಸಿದರು. ನೃತ್ಯ ರಂಗಕ್ಕೆ ಪಾದಾರ್ಪಣೆ ಆದದ್ದು ಈ ರೀತಿಯಲ್ಲಿ.

೧೯೩೪ ರಲ್ಲಿ ಕದ್ರಿಯ ವಿದ್ಯಾ ಬೋಧಿನಿ ಶಾಲೆಯಲ್ಲಿ ಅಧ್ಯಾಪಕರಾಗಿ ವೃತಿರಂಗಕ್ಕೆ ಸೇರಿ ಕಲೆಯನ್ನು ಪ್ರವೃತ್ತಿಯಾಗಿ ಬೆಳೆಸಿದರು.

ಶ್ರೀ ಮಹಾಲಿಂಗಂ ಅವರು‌ ‌ಶಾಲಾ ಇನ್ಸ್ ಪೆಕ್ಟರ್ ಆಗಿದ್ದು ಕಥಕ್ಕಳಿಯನ್ನು ಬಲ್ಲವರಾಗಿದ್ದರು. ಅವರ ಬಳಿ ಕಥಕ್ಕಳಿ ಕಲಿಯಲು ಪ್ರಾರಂಭಿಸಿದರು. ಇಲಾಖೆಯ ಅಧಿಕಾರಿಯಾಗಿ, ಗುರುವಾಗಿ ನೃತ್ಯರಂಗದಲ್ಲಿ ಮುಂದುವರಿಯಲು ಮಹಾಲಿಂಗಂ ಅವರು ಕೃಷ್ಣರಾಯರಿಗೆ ಹೆಚ್ಚಿನ ಉತ್ಸಾಹ ತುಂಬಿದರು. ಶಾಲೆಯಲ್ಲಿ ಹಾಡು, ಅಭಿನಯ, ನೃತ್ಯ ಇವುಗಳಿಂದ ಕೃಷ್ಣರಾಯರ ಪಾಠವೂ ಮಕ್ಕಳಿಗೆ ಆಕರ್ಷಕವಾಯಿತು. ವಿದ್ಯಾರ್ಥಿಗಳಿಗೆ ಮೆಚ್ಚಿನ ಶಿಕ್ಷಕರಾದರು. ಜೊತೆಯಲ್ಲಿ ಶಿಸ್ತಿನ ಮಾಸ್ಟ್ರು ಬೇರೆ. ಶಾಲೆಯಲ್ಲಿ ಪಾರ್ಲಿಮೆಂಟಿನ ವ್ಯವಸ್ಥೆಯ ಮೂಲಕ ಮಕ್ಕಳಿಂದಲೇ ಶಾಲಾ ಆಡಳಿತ ನಡೆಸಿದವರು. ಒಟ್ಟಿನಲ್ಲಿ ವಿದ್ಯಾರ್ಥಿಗಳ, ಹೆತ್ತವರ ಗೌರವಕ್ಕೆ ಪಾತ್ರರಾಗಿ ‘ರಾಜಾ’ ಮಾಸ್ಟ್ರೆಂದೇ ಹೆಸರು ಗಳಿಸಿದರು. ಉತ್ತಮ ಶಿಕ್ಷಕರಾಗಿಯೂ ಗುರುತಿಸಲ್ಪಟ್ಟರು.

ಶಾಲೆ ಬಿಟ್ಟ ನಂತರ ಸೈಕಲ್‌ ಹತ್ತಿ ಕೃಷ್ಣರಾಯರ ಪ್ರಯಾಣ ಮಕ್ಕಳ ಮನೆಗಳಿಗಾಗುತ್ತಿತ್ತು. ಮನೆ ಮನೆಗಳಿಗೆ ಹೋಗಿ ನೃತ್ಯ ಕಲಿಸಲು ಪ್ರಾರಂಭಿಸಿದ ಕೃಷ್ಣರಾಯರು ಆಗಲೇ ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿ ಹೆಸರು ಪಡೆದರು. ಯಾವುದೇ ಸಭೆ ಸಮಾರಂಭಗಳಲ್ಲಿ ಕೃಷ್ಣರಾಯರ ನೃತ್ಯ ಪ್ರದರ್ಶನವಿದ್ದರೆ ಅದಕ್ಕೊಂದು ಶೋಭೆ ಎನ್ನುವಂತಾಯಿತು. ನೃತ್ಯ ಕಲೆಯನ್ನು ಜನರ ಮನಸ್ಸಿನ ಹತ್ತಿರಕ್ಕೆ ಕೊಂಡೊಯ್ಯುವಲ್ಲಿ ಸಫಲರಾದರು.

೧೯೪೧ರಲ್ಲಿ ಕದ್ರಿಯ ತನ್ನ ಮನೆಯಲ್ಲೇ ನೃತ್ಯ ವಿದ್ಯಾನಿಲಯ ಎಂಬ ನಾಮಕರಣದೊಂದಿಗೆ ಸಂಸ್ಥೆಯ ರೂಪುಕೊಟ್ಟು ನೃತ್ಯ ಪಾಠ ಮುಂದುವರಿಸಿದರು. ಅಲ್ಲಿಯವರೆಗೆ ಮನೆ ಮನೆಗೆ ಹೋಗಿ ನೃತ್ಯ ಕಲಿಸುತ್ತಿದ್ದ ಕೃಷ್ಣರಾಯರು ಮುಂದೆ, ಕೃಷ್ಣರಾಯರನ್ನು ಹುಡುಕಿಕೊಂಡು ಮಕ್ಕಳು ಮನೆಗೇ ಕಲಿಯಲು ಬರುವಂತಾಯಿತು. ಹೀಗೆ ಕಲಿಯುವವರ ಸಂಖ್ಯೆಯೂ ಹೆಚ್ಚಾಯಿತು. ಮನೆ ಗುರುಕುಲವಾಯಿತು. ನೃತ್ಯ ವಿದ್ಯಾನಿಲಯದ ಸ್ಥಾಪನೆಯ ಮುಂಚಿತವಾಗಿಯೇ ನೂರಾರು ಪ್ರದರ್ಶನಗಳನ್ನು ನಾನಾ ಊರುಗಳಲ್ಲಿ ನೀಡಿದ್ದ ಕೃಷ್ಣರಾಯರು ನಂತರ ಪ್ರತಿ ವರ್ಷ ನವರಾತ್ರಿಯ ಸಂದರ್ಭದಲ್ಲಿ ನೃತ್ಯ ಸಂಸ್ಥೆಯ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಾರಂಭಿಸಿದರು.

ಇದೇ ಸಮಯದಲ್ಲಿ ಕೇರಳದ ನೃತ್ಯಕಲಾ ನಿಪುಣ ಶ್ರೀ ರಾಜನ್‌ ಅಯ್ಯರ್ ಅವರು ಮಂಗಳೂರಿಗೆ ಬಂದರು. ಇವರು ಭರತನಾಟ್ಯ ಮತ್ತು ಕಥಕ್ಕಳಿಯನ್ನು ಬಲ್ಲವರಾಗಿದ್ದು ನೃತ್ಯ ಪ್ರದರ್ಶನಗಳ ಮೂಲಕ ಹೊಸ ಅಲೆಯನ್ನು ಎಬ್ಬಿಸಿದರು. ಕೃಷ್ಣರಾಯರು ಅವರನ್ನೂ ಬಿಡಲಿಲ್ಲ. ಅವರ ಪ್ರದರ್ಶನಗಳಿಗೆ ಮೂಲಕ ಹೊಸ ಅಲೆಯನ್ನು ಎಬ್ಬಿಸಿದರು. ಕೃಷ್ಣರಾಯರು ಅವರನ್ನೂ ಬಿಡಲಿಲ್ಲ. ಅವರ ಪ್ರದರ್ಶನಗಳಿಗೆ ಒಳ್ಳೆಯ ಅವಕಾಶಗಳನ್ನು ಕಲ್ಪಿಸಿಕೊಡುತ್ತಾ ತಾವೂ ಅವರಲ್ಲಿ ಕಲಿಯಲು ಪ್ರಾರಂಭಿಸಿದರು. ಗುರು ಶಿಷ್ಯರ ಬಾಂಧವ್ಯ ಬೆಳೆಯಿತು. ಅವರ ಜೊತೆಯೂ ಪ್ರದರ್ಶನ ನೀಡಲು ಪ್ರಾರಂಭಿಸಿದರು.

ಮಂಗಳೂರಿಗೆ ಜಿಲ್ಲಾಧಿಕಾರಿಗಳೇ ಆಗಲಿ ಯಾವುದೇ ಉನ್ನತ ಅಧಿಕಾರಿಗಳು ಬಂದರೂ ಕೃಷ್ಣರಾಯರು ಅವರ ಸಂಪರ್ಕ ಬೆಳೆಸಿ ಅವರ ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದರು. ಕ್ಯಾಪ್ಟನ್‌ ಸಿ.ಕೆ. ಮೆನನ್‌, ಜಿಲ್ಲಾಧಿಕಾರಿ ಕರ್ಮತುಲ್ಲಾ ಮುಂತಾದ ಹಿರಿಯ ಅಧಿಕಾರಿಗಳು ಆಗಿನ ಕಾಲದಲ್ಲೂ ಬಹಳಷ್ಟು ಪ್ರೋತ್ಸಾಹ ನೀಡಿದವರು ಎನ್ನುವ ಕೃಷ್ಣರಾಯರು ಜನರ ಪ್ರೋತ್ಸಾಹ ಬಹಳ ಮುಖ್ಯ ಎನ್ನುತ್ತಾರೆ.

ಮಂಗಳೂರಿನಿಂದ ಹಿಡಿದು ಬೆಂಗಳೂರು, ಮೈಸೂರು, ಮುಂಬಯಿ, ದಹೆಲಿ ಹೀಗೆ ಪ್ರಮುಖ ನಗರಗಳಲ್ಲಿ ಅಲ್ಲದೆ ಇತರ ಸಾವಿರಾರು ಸ್ಥಳಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ದಾಖಲೆಯಲ್ಲಿ ಕೃಷ್ಣರಾಯರದ್ದು ಪ್ರಥಮ ಸ್ಥಾನವಾಗಬಹುದು.

ನೃತ್ಯವಿದ್ಯಾನಿಲಯದ ಬೆಳ್ಳಿಹಬ್ಬವನ್ನು ಮುಂಬಯಿ ನಗರದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಿ ನಂತರ ಸುವರ್ಣ ಮಹೋತ್ಸವ ವಜ್ರ ಮಹೋತ್ಸವಗಳನ್ನು ಮಂಗಳೂರಿನಲ್ಲಿ ವೈಭವದಿಂದ ಆಚರಿಸಿರುತ್ತಾರೆ. ಈ ಸಂದರ್ಭದಲ್ಲಿ ನಾಡಿನ ಹಿರಿಯ ಕಲಾವಿದರನ್ನು ಗೌರವಿಸಿ ಸನ್ಮಾನಗಳನ್ನೂ ಮಾಡಿರುತ್ತಾರೆ.

ಧರ್ಮಸ್ಥಳ ಶ್ರೀ ಕ್ಷೇತ್ರದ ಮಂಜಯ್ಯ ಹೆಗ್ಗಡೆಯವರು, ಜಯಚಾಮರಾಜೇಂಧ್ರ ಒಡೆಯರ್, ಕಾಮರಾಜ ನಾಡರ್, ನೆಹರೂರವರ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಿದ ಇವರು ೧೯೪೩ರಲ್ಲಿ ವಾರ್ ಫಂಡಿಗೆ ಸಹಾಯಾರ್ಥ ನೃತ್ಯ ಕಾರ್ಯಕ್ರಮ ನೀಡಿ ರಾಷ್ಟ್ರ ಸೇವೆಗೂ ತನ್ನ ದೇಣಿಗೆ ನೀಡಿರುತ್ತಾರೆ. ೧೯೪೮ರಲ್ಲಿ ಮಹಾತ್ಮಾ ಗಾಂಧೀಜಿಯವರ ಶೋಕ ಸಭೆಯಲ್ಲಿ ಇವರು ಹಾಡಿದ ಶೋಕ ಗೀತೆ ಜನರ ಕಣ್ಣುಗಳಲ್ಲಿ ನೀರಿಳಿಸಿದುದನ್ನು ನೋಡಿದ ಹಳೆಯ ತಲೆಮಾರಿನ ಜನ ಈಗಲೂ ಆ ಸಂದರ್ಭವನ್ನು ಸ್ಮರಿಸುತ್ತಾರೆ.

ಸದಾ ಹಾಸ್ಯ ಪ್ರವೃತ್ತಿಯವರಾದ ಕೃಷ್ಣರಾಯರ ಮಾತಿನ ಶೈಲಿಯೇ ವಿಶಿಷ್ಟ. ಮಕ್ಕಳಿಂದ ತೊಡಗಿ ಪ್ರಾಯಸ್ಥರವರೆಗೂ ಅವರ ಮಾತಿನ ಮೋಡಿಗೆ ಒಳಗಾಗದವರಿಲ್ಲ. ಶ್ರೀಮತಿ ಜಯಲಕ್ಷ್ಮಿಯವರನ್ನು ಬಾಳ ಸಂಗಾತಿಯಾಗಿ ಪಡೆದ ಇವರು ಸಾಂಸಾರಿಕ ಜೀವನದಲ್ಲಿ ಅತ್ಯಂತ ಸಂತಸವನ್ನು ಪಡೆದವರು.

ಮನೆಯಲ್ಲಿ ದಿನಾ ನೃತ್ಯಾಭ್ಯಾಸಕ್ಕೆ ಬರುವ ಮಕ್ಕಳು ಜೊತೆಗೆ ಬರುವ ಹೆತ್ತವರು, ಹೀಗೆ ಮನೆಯಲ್ಲೂ ಸದಾ ಜನರಿಂದಲೇ ತುಂಬಿರುತ್ತಿದ್ದರೂ ಹಸನ್ಮುಖಿಯಾಗಿಯೇ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಪತ್ನಿ ಜಯಲಕ್ಷ್ಮಿಯವರ ಸಹಕಾರ ಕೃಷ್ಣರಾಯರ ಕಲಾ ಜೀವನಕ್ಕೆ ಹೊಸ ಶಕ್ತಿಯನ್ನೇ ನೀಡಿತ್ತು. ಒಂದು ದಿನ ಸಂಜೆಯ ಸಮಯ ನೃತ್ಯಾಭ್ಯಾಸವನ್ನು ನೋಡುತ್ತಿರುವಂತೆಯೇ ಆ ಆನಂದದ ಅಲೆಯಲ್ಲಿ ಲೀನವಾಗಿ ಬದುಕಿನಿಂದ ಮರೆಯಾದ ಜಯಲಕ್ಷ್ಮಿಯವರು ಕೃಷ್ಣರಾಯರ ಬಾಳಿಗೆ ವಿಜಯಶ್ರೀಯನ್ನೇ ತಂದಿತ್ತವರು. ಪತ್ನಿಯ ಅಗಲುವಿಕೆಯ ನೋವು ಕಲೆಯ ಮೂಲಕವಾಗಿ ಮರೆಯಲು ಸಾಧ್ಯವಾಯಿತಾದರೂ ಅಂತಃರಂಗದ ಆಳದಲ್ಲಿ ಇನ್ನೂ ಆ ನೋವಿನ ಛಾಯೆಯಿದೆ. ಕೃಷ್ಣರಾಯರ ದಾಂಪತ್ಯದ ಬಳ್ಳಿಯಲ್ಲಿ ಅರಳಿದ ಕಲಾ ಕುಸುಮಗಳು ಅರುಣ್‌, ನಿರ್ಮಲಾ, ಶೈಲಜಾ, ಸಂಧ್ಯಾ ಮತ್ತು ಪ್ರವೀಣ್‌.

ನೃತ್ಯ ವಿದ್ಯಾನಿಲಯದಲ್ಲಿ ನೃತ್ಯ ಕಲಿತವರ ಸಂಖ್ಯೆಯ ಲೆಕ್ಕ ನಿಖರವಾಗಿ ತಿಳಿದಿಲ್ಲವಾದರೂ ಸಾವಿರಕ್ಕೂ ಮೀರಿದೆ. ಕಲಿತವರೆಲ್ಲರೂ ನೃತ್ಯ ಕಲಾವಿದರೇ ಆಗದಿದ್ದರೂ ಕಲೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿ ಮುಂದಿನ ಪೀಳಿಗೆಗೆ ಅದನ್ನು ನೀಡುವವರೇ ಆಗಿದ್ದಾರೆ. ಕೆಲವರು ನೃತ್ಯ ಗುರುಗಳಾಗಿ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ಇನ್ನು  ಕೆಲವರು ವಿದೇಶದಲ್ಲಿದ್ದು ಶಿಕ್ಷಣ ನೀಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ನೃತ್ಯ ಕಲೆಯ ಕಂಪನ್ನು ಪಸರಿಸಿದ ಕೃಷ್ಣರಾಯರು ತಮ್ಮ ಐದು ಮಂದಿ ಮಕ್ಕಳೂ ಕೂಡಾ ನೃತ್ಯ ರಂಗದಲ್ಲೇ ಮುಂದುವರಿಯುವಂತೆ ಮಾಡಿರುವುದು ಈ ರಂಗಕ್ಕೆ ಅವರು ನೀಡಿದ ಬಹುದೊಡ್ಡ ಕೊಡುಗೆಯೇ ಆಗಿದೆ. ಮೊಮ್ಮಕ್ಕಳೂ ಇದೇ ದಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ವಿದ್ವಾನ್‌ ಯು.ಕೆ. ಅರುಣ್‌ ನೃತ್ಯ ಕಲಾವಿದರಾಗಿ ಬೆಂಗಳೂರಿನಲ್ಲಿ ನೃತ್ಯ ವಿದ್ಯಾ ನಿಕೇತನ ಎಂಬ ನೃತ್ಯ ಸಂಸ್ಥೆಯನ್ನೂ ಅರುಣಾ‌ ಕಲಾವಿದರು ಎಂಬ ನೃತ್ಯ ತಂಡವನ್ನು  ಸ್ಥಾಪಿಸಿ ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡುತ್ತಾ ಈಗಾಗಲೇ ಪ್ರಸಿದ್ಧರಾಗಿದ್ದಾರೆ.

ವಿದುಷಿ ಶ್ರೀಮತಿ ನಿರ್ಮಲಾ ಮಂಜುನಾಥ್‌ ಮತ್ತು ವಿದುಷಿ ಶ್ರೀಮತಿ ಸಂಧ್ಯಾ ಕೇಶವರಾವ್‌ ನೃತ್ಯ ಕಲಾವಿದರಾಗಿ ದೇಶದಾದ್ಯಂತ ಹಾಗೂ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಬೆಂಗಳೂರಿನಲ್ಲಿ ನೃತ್ಯ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

ವಿದುಷಿ ಶ್ರೀಮತಿ ಶೈಲಜಾ ಮಧುಸೂದನ್‌ ಸಂಗೀತ ಮತ್ತು ನೃತ್ಯ ಕಲಾವಿದೆಯಾಗಿ ಮುಂಬಯಿಯಲ್ಲಿ ನೃತ್ಯ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ವಿದ್ವಾನ್‌ ಯು.ಕೆ. ಪ್ರವೀಣ್‌ ಉತ್ತಮ ನೃತ್ಯಪಟುವಾಗಿ ದೇಶವಿದೇಶಗಳಲ್ಲೂ ನೃತ್ಯ ಪ್ರದರ್ಶನ ನೀಡಿದವರು. ಕದ್ರಿಯ ನೃತ್ಯ ವಿದ್ಯಾನಿಲಯದಲ್ಲಿ ತಂದೆಯವರ ಸ್ಥಾನದಲ್ಲಿ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ.

ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಪ್ರಥಮವಾಗಿ ನೀಡಿದ ಖ್ಯಾತಿ ನೃತ್ಯವಿದ್ಯಾನಿಲಯಕ್ಕೆ ಸಲ್ಲುತ್ತದೆ. ಭರತನಾಟ್ಯದ ವಿದ್ವತ್‌ ಪರೀಕ್ಷೆಯಲ್ಲಿ ಈ ನೃತ್ಯವಿದ್ಯಾನಿಲಯದಿಂದ ಅನೇಕರು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಂಸ್ಥೆಯು ನೀಡಿದ ನೃತ್ಯ ಪ್ರದರ್ಶನಗಳ ಸಂಖ್ಯೆಯೂ ಲೆಕ್ಕಕ್ಕೆ ಸಿಗಲಾರದಷ್ಟು, ರಾಷ್ಟ್ರದ ಪ್ರಮುಖ ನಗರಗಳಲ್ಲೂ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ, ಜಾತ್‌ಎ, ಉತ್ಸವಗಳಲ್ಲಿ, ಶುಭ ಸಮಾರಂಭಗಳಲ್ಲಿ ಹೀಗೆ ಸಾವಿರಕ್ಕೂ ಮೀರಿದ ದಾಖಲೆಯಾಗಬಹುದು. ಈ ರೀತಿಯಲ್ಲಿ ನೃತ್ಯ ಶಿಕ್ಷಣ, ನೃತ್ಯ ಪ್ರದರ್ಶನದ ಮೂಲಕವಾಗಿ ನೃತ್ಯರಂಗಕ್ಕೆ ನೀಡಿದ ಅನನ್ಯವಾದ ಕೊಡುಗೆಗಾಗಿ ಅನೇಕ ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಕೃಷ್ಣರಾಯರನ್ನು ಗೌರವಿಸಿ ಸನ್ಮಾನಿಸಿವೆ.

ಭಾರತದ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದಲ್ಲಿ ಕೃಷ್ಣರಾಯರು ನೀಡಿದ ನೃತ್ಯ ಪ್ರದರ್ಶನಕ್ಕೆ ಮೆಚ್ಚುಗೆಯ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ೧೯೬೫ರಲ್ಲಿ ರಾಷ್ಟ್ರಪತಿಗಳು ಕೃಷ್ಣರಾಯರಿಗೆ ನೀಡಿ ಶುಭ ಹಾರೈಸಿರುವುದು ಇವರ ಮೊದಲ ಹಾಗೂ ಶ್ರೇಷ್ಠ ದಾಖಲೆ. ೧೯೭೧ರಲ್ಲಿ ಶಿಕ್ಷಣ ಕ್ಷೇತ್ರದ ಸೇವೆಗಾಗಿ ಸರಕರದ ರಾಜ್ಯ ಪ್ರಶಸ್ತಿಯು ಇವರಿಗೆ ಲಭಿಸಿದೆ. ೧೯೮೧ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಕರ್ನಾಟಕ ಕಲಾ ತಿಲಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ೧೯೯೧ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೃತ್ಯರಂಗದ ಸೇವೆಗಾಗಿ ಸರಕಾರವು ನೀಡಿದೆ. ೧೯೯೮ರಲ್ಲಿ ಕರ್ನಾಟಕ ಸರಕಾರದ ನೃತ್ಯರಂಗದ ನಾಟ್ಯ ರಾಣಿ ಶಾಂತಲಾ ಪ್ರತಿಷ್ಠಿತ ಪ್ರಶಸ್ತಿಯು ಇವರಿಗೆ ಲಭಿಸಿರುವುದು ಇವರ ನೃತ್ಯರಂಗದ ಸಾಧನೆಗಾಗಿ ಸಂದ ಗೌರವವಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ನೃತ್ಯ ಪರೀಕ್ಷೆಗಳ ಪರೀಕ್ಷಕರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಲ್ಲಿ ಎರಡು ಅವಧಿಗಳಲ್ಲಿ ಸದಸ್ಯರಾಗಿ, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸಿರುತ್ತಾರೆ.

ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ, ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪರಮ ಕಲೆಯೆನಿಸಿದ ನೃತ್ಯದ ಮೂಲಕ ಸಾವಿರಾರು ಹೃದಯಗಳಲ್ಲಿ ಸಾಂಸ್ಕೃತಿಕ ಹಣತೆಯನ್ನು ಹಚ್ಚಿದ ಕೃಷ್ಣರಾಯರು ನೃತ್ಯಕಲೆಯ ಬೆಳಕನ್ನು ನೀಡಿದ್ದಾರೆ, ಪ್ರಜ್ವಲವಾಗಿ ಬೆಳಗಿಸಿದ್ದಾರೆ. ಸಾಂಸ್ಕೃತಿಕವಾಗಿ ಬರಡಾಗಿದ್ದ ಕರಾವಳಿ ಜಿಲ್ಲೆಯ ಜನರಲ್ಲೂ ಕಲಾಭಿರುಚಿಯನ್ನುಂಟುಮಾಡಿ ನೃತ್ಯಕಲೆಯ ಅಭ್ಯುದಯಕ್ಕೆ ಕಾರಣರಾಗಿದ್ದಾರೆ. ಇಂತಹ ಹಿರಿಯ ಚೇತನ ಶಕ್ತಿ ೮೮ನೇ ವರ್ಷದಲ್ಲಿ ತಮ್ಮ ಮಕ್ಕಳು ಕಲಿಸುತ್ತಿರುವುದನ್ನು, ಮೊಮ್ಮಕ್ಕಳು ಕುಣಿಯುತ್ತಿರುವುದನ್ನು ನೋಡಿ ಆನಂದಿಸುತ್ತಿದ್ದಾರೆ, ಮಾರ್ಗದರ್ಶನ ನೀಡುತ್ತಿದ್ದಾರೆ. ನೃತ್ಯಕಲೆಯನ್ನು ಪ್ರಾಜ್ಞರಿಂದ ಸಾಮಾನ್ಯ ಜನವರ್ಗದವರೆಗೂ ತಲುಪಿಸಿ ಎಲ್ಲರಿಂದಲೂ ಮಾನ್ಯತೆ, ಗೌರವಗಳನ್ನು ಪಡೆದು ಕಲೆಯಿಂದ ಬದುಕಿನಲ್ಲೂ ಅತ್ಯಂತ ಸಂತಸವನ್ನು ಕಾಣುತ್ತಿರುವ ಕೃಷ್ಣರಾಯರು ಧನ್ಯರು.

ಬದುಕಿನ ಕಹಿಗಳೆಲ್ಲ ಕಲೆಯ ಜೇನಿನ ಮೂಲಕ ಮಾಯವಾಗುವುದು ಎಂಬುದಕ್ಕೆ ಆದರ್ಶ ಪ್ರಾಯರು ಶ್ರೀ ಕೃಷ್ಣರಾಯರು.