ಕರ್ನಾಟಕದ ಕರಾವಳಿ ತೀರದ ಮಂಗಳೂರಿನಲ್ಲಿ ನೃತ್ಯ ಸಂಪತ್ತನ್ನು ತಂದುಕೊಟ್ಟು ಆ ಶಾಸ್ತ್ರೀಯ ಕಲೆಗೆ ಸಮಾಜದ ಗೌರವವೂ ದೊರಕುವಂತೆ ಮಾಡಿದ ಕೀರ್ತಿ ಅಲ್ಲಿನ ನಾಟ್ಯಾಚಾರ್ಯ ಯು.ಎಸ್. ಕೃಷ್ಣರಾಯರಿಗೆ ಸಲ್ಲಬೇಕು. ಬ್ರಿಟಿಷ್‌ರ ಕಾಲದಲ್ಲಿ ಶಿರಸ್ತೇದಾರರಾಗಿದ್ದ ಶಿಸ್ತಿಗೆ ಹೆಸರಾದ ಸುಬ್ಬರಾಯರದು ಸಂಪ್ರದಾಯಸ್ತ ಬ್ರಾಹ್ಮಣ ಮನೆತನ, ಶ್ರೀಯುತರ ಸುಪುತ್ರರಾಗಿ ಯು.ಎಸ್.ಕೃಷ್ಣರಾಯರು ಉಚ್ಚೆಲ್ಲದಲ್ಲಿ ೧೯೧೪ರ ನವೆಂಬರ್ ೧೯ ರಂದು ಜನಿಸಿದರು. ಮುಂದೆ ಈ ಕುಟುಂಬ ಮಂಗಳೂರಿನಲ್ಲಿ ನೆಲೆಸಿದುದರಿಂದ ಕೃಷ್ಣರಾಯರ ಶಿಕ್ಷಣ ಅಲ್ಲೆ ಜರುಗಿತು. ಆದರೆ ಶ್ರೀಯುತರಿಗೆ ಪಾಠಕ್ಕಿಂತ ಆಟ, ನಾಟಕಗಳಷ್ಟೇ ಹೆಚ್ಚಿನ ಆಸಕ್ತಿ ಶಾಲೆಯ ನಾಟಕಗಳೆಲ್ಲಾ ಕೃಷ್ಣರಾಯರದ್ದೇ ಪ್ರಮುಖ ಪಾತ್ರ. ಇವರ ಹಾಡಿಗೆ, ಅಭಿನಯಕ್ಕೆ ’ಒನ್ಸೆಮೋರ್‌’ಗಳ ಅಭಾವನಿಂದೂ ಇರಲಿಲ್ಲ. ಆ ಸಮಯದಲ್ಲಿ ಕ್ರಿಕೆಟ್‌ನ ಹುಚ್ಚು ಇವರಿಗಿದ್ದು, ಉತ್ತಮ ಬೋಲರ್ ಆಗಿದ್ದದು ಕೂಡ.

ಕೃಷ್ಣರಾಯರ ಹೈಸ್ಕೂಲಿನ ದಿನಗಳಲ್ಲಿ, ಖ್ಯಾತ ನೃತ್ಯ ಕಲಾವಿದ ಉದಯಶಂಕರ್‌ರ ತಂಡದಲ್ಲಿ ಕಲಾವಿದರಾಗಿದ್ದ ಕೆ.ಕೆ. ಶೆಟ್ಟಿ ಮಂಗಳೂರಿಗೆ ಬಂದಿದ್ದರು. ರಾಯರು ಅವರನ್ನು ಭೇಟಿಯಾದರು. ಪರಿಣಾಮ ಅವರಿಂದ ನೃತ್ಯದ ಕಲಿಕೆ. ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲು ಪ್ರಾರಂಭಿಸಿದರು. ಶೆಟ್ಟರಲ್ಲಿ ನೃತ್ಯ ಕಲಿತರು. ಜೊತೆಗೆ ಕಲಿಸಲೂ ಹೊರಟರು.

೧೯೩೪ರಲ್ಲಿ ಕದ್ರಿಯ ವಿದ್ಯಾ ಬೋದಿಸಿ ಶಾಲೆಯಲ್ಲಿ ಅಧ್ಯಾಪಕರಾಗಿ ನೇಮಕಗೊಂಡ ಶ್ರೀಯುತರು ನೃತ್ಯವನ್ನು ಪ್ರವೃತ್ತಿಯನ್ನಾಗಿ ಬೆಳೆಸಿಕೊಂಡರು. ಶಾಲಾ ಇನ್ಸ್‌ಪೆಕ್ಟರ್ ಮಹಾಲಿಂಗಾ ಕಥಕ್ಕಳಿಯನ್ನು ಬಲ್ಲವರಾಗಿದ್ದರು. ಅವರಲ್ಲಿ ಆ ಕೇರಳದ ವಿಶಿಷ್ಠ ಶೈಲಿಯನ್ನು ಅಭ್ಯಾಸಮಾಡಿದರು. ಇಲಾಖೆಯ ಅಧಿಕಾರಿಯಾಗಿ, ಗುರುವಾಗಿ ಮಹಾಲಿಂಗಂ ಕೃಷ್ಣರಾಯರಿಗೆ ನೃತ್ಯ ರಂಗದಲ್ಲಿ ಮುಂದುವರಿಯಲು ಹೆಚ್ಚಿನ ಉತ್ಸಾಹ ತುಂಬಿದರು ರಾಯರ ಹಾಡು, ಅಭಿನಯ, ನೃತ್ಯ ಶಾಲೆಯ ಮಕ್ಕಳಿಗೂ ಆಕರ್ಷಣೀಯವಾದುವು. ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾದರು. ವಿದ್ಯಾರ್ಥಿಗಳ ಪೋಷಕರ ಗೌರವಕ್ಕೆ ಪಾತ್ರರಾದರು.

 

 

ವಿ.ಎಸ್.ಕೌಶಿಕ್

ಶ್ರೀ ವಿ.ಎಸ್.ಕೌಶಿಕ್ ಅವರು ಹಳೆಯ ಮೈಸೂರಿನ ಹಿರಿಯ ನಾಟ್ಯ ಕಲಾವಿದರಾದ ಶ್ರೀ ದಾಸಪ್ಪ ಹಾಗೂ ರಾಜಮ್ಮ ಎಂಬುವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದರು. ಮುಂದೆ ಸ್ವಂತ ಪ್ರಯತ್ನದಿಂದ ತಮ್ಮ ಕಲೆಯನ್ನು ಹಿಗ್ಗಿಸಿಕೊಂಡರು. ಸಂಸ್ಕೃತವನ್ನು ಕಲಿತು ಶಾಸ್ತ್ರ ಗ್ರಂಥವನ್ನೆಲ್ಲ ಅಭ್ಯಾಸ ಮಾಡಿ ಭರತ ನಾಟ್ಯದ ಪ್ರಾಚೀನ ಸ್ವರೂಪವನ್ನು ಅರಿತುಕೊಂಡರು. ೧೯೪೬ರಲ್ಲಿ ಸನಾತನ ಕಲಾಕ್ಷೇತ್ರ ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಿ ನೂರಾರು ವಿದ್ಯಾರ್ಥಿಗಳಿಗೆ ನಾಟ್ಯ ಕಲೆಯನ್ನು ಧಾರೆಯೆರೆದಿದ್ದಾರೆ. ರಾಜ್ಯ ಸರ್ಕಾರವು ನಾಟ್ಯ ಶಿಕ್ಷಕರ ತರಬೇತಿಗೂ ಸನಾತನ ಕಲಾ ಕ್ಷೇತ್ರವನ್ನು ಆರಿಸಿಕೊಂಡಿದೆ. ಅದರ “ಕನಕಸಭಾ” ಅತ್ಯುತ್ತಮ ಹಾಗೂ ಆದರ್ಶ ಸಭಾ ಭವನವೆಂದು ಹೆಸರಾಗಿದೆ. ಅನೇಕ ಉತ್ತಮ ಕೃತಿಗಳನ್ನು ಹಾಗೂ ಕರ್ನಾಟಕ ಸಂಗೀತದ ’ರಾಗ-ತಾನ-ಪಲ್ಲವಿ’ ಎಂಬ ಭಾಗವನ್ನು ಭರತ ನಾಟ್ಯಕ್ಕೆ ಅಳವಡಿಸಿ ಪ್ರಯೋಗ ನಡೆಸಿದ್ದಾರೆ. ಅನೇಕ ಪಾಶ್ಚಾತ್ಯ ಪೌರ್ವಾತ್ಯ ವಿದ್ವಾಂಸರು ಕೌಶಿಕರ ಈ ಪ್ರಯೋಗ ಸಾಧನೆಯನ್ನು ಶಾಸ್ತ್ರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ.

’ಭರತನಾಟ್ಯ ದಿಗ್ದರ್ಶನ’ ಎಂಬ ಪ್ರಮುಖ ಗ್ರಂಥವನ್ನೊಳಗೊಂಡು ಅನೇಕ ಉತ್ತಮ ಗ್ರಂಥಗಳನ್ನು ಶ್ರೀಯುತರು ರಚಿಸಿದ್ದಾರೆ. ಶ್ರೀಯುತರಿಗೆ ಸಂದಿರುವ ಅನೇಕ ಸನ್ಮಾನಗಳಲ್ಲಿ ನಮ್ಮ ಅಕಾಡೆಮಿಯ ಪ್ರಶಸ್ತಿಯೂ ಸೇರಿದೆ.