ಕರ್ನಾಟಕ ನೃತ್ಯ ಕ್ಷೇತ್ರಕ್ಕೆ ಒಂದು ಹೊಸ ಆಯಾಮವನ್ನು ದೊರಕಿಸಿಕೊಟ್ಟ ಕೀರ್ತಿ ಕೃಷ್ಣರಾವ್ ದಂಪತಿಗಳದ್ದು. ಸುಶಿಕ್ಷಿತರು ನೃತ್ಯವನ್ನು ಕಲಿಯುವುದಿರಲಿ. ನೋಡುವುದೂ ಅನೀತಿಕರ ಎಂಬ ಅಭಿಪ್ರಾಯ ಹರಡಿದಾಗ, ಈ ಇಬ್ಬರೂ ವಿಶ್ವವಿದ್ಯಾನಿಲಯದ ಪದವೀಧರರು, ನೃತ್ಯವನ್ನು ಆಳವಾಗಿ ಅಭ್ಯಾಸಮಾಡಿ, ಅದು ಜನಪ್ರಿಯವಾಗುವಂತೆ ಪ್ರಚಾರ ಭಾಷಣಗಳನ್ನು ಪ್ರದರ್ಶನಗಳನ್ನು ನೀಡಿ ಮಹಾ ಮಾಯಾ ಎಂಬ ನೃತ್ಯ ಶಾಲೆಯ ಮೂಲಕ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ.

ಮೊದಲಿಗೆ ಕೋಲಾರದ ಪುಟ್ಟಪ್ಪನವರಿಂದ, ನಂತರ ಪಂದನಲ್ಲೂರು ಮೀನಾಕ್ಷಿ ಸುಂದರಂ ಪಿಳ್ಳೆಯವರಿಂದ ಭರತ ನಾಟ್ಯವನ್ನು ಕಲಿತ ಇವರುಗಳು ಕುಂಜು ಕುರುಪರಿಂದ ಕಥಕ್ಕಳಿಯ ಶಿಕ್ಷಣವನ್ನು ಪಡೆದಿದ್ದಾರೆ.

ಮದರಾಸಿನ ಮ್ಯೂಸಿಯಂ ಥಿಯೇಟರ್‌ನಲ್ಲಿ ೧೯೪೪ರಲ್ಲಿ ರಂಗಪ್ರವೇಶ ಮಾಡಿದ ಈ ದಂಪತಿಗಳ ಕಾರ್ಯಕ್ರಮಗಳ ಸಂಖ್ಯೆ ೧೫೦೦ಕ್ಕೂ ಮೀರಿದೆ. ಇವುಗಳಲ್ಲಿ ದೇಶದ ವಿವಿಧ ಭಾಗ, ವೈವಿಧ್ಯಮಯ ಕ್ಷೇತ್ರಗಳಲ್ಲದೇ, ವಿದೇಶಗಳಲ್ಲಿ ನೀಡಿದ ಪ್ರದರ್ಶನಗಳೂ ಸೇರಿವೆ.

ಕೃಷ್ಣರಾವ್‌ರವರು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿದ್ದರಲ್ಲದೇ, ಆ ವಿದ್ಯಾ ಸಂಸ್ಥೆಯು ನೃತ್ಯ ವಿಭಾಗದ ಮುಖ್ಯಸ್ಥರಾಗಿಯೂ ದುಡಿದಿದ್ದಾರೆ. ಕೆಲಕಾಲ ಭಾರತೀಯ ವಿದ್ಯಾ ಭವನದಲ್ಲಿ ನೃತ್ಯ ಶಿಕ್ಷಕರಾಗಿ ಕೆಲಸ ಮಾಡಿದರು.

ಈ ದಂಪತಿಗಳಿಗೆ ರಾಜ್ಯ ಸಂಗೀತ-ನೃತ್ಯ ಅಕಾಡೆಮಿ ತನ್ನ ೧೯೭೭-೭೮ನೇ ಸಾಲಿನ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಪತ್ನಿ ನಿಧನದ ನಂತರ ಕೃಷ್ಣರಾಯರಿಗೆ ’ಶಾಂತಲಾ’ ಪ್ರಶಸ್ತಿಯೂ ಸಂದಿತು.