ದಿನಾಂಕ ೧೪-೬-೧೯೪೦ರಂದು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಜನಿಸಿದ ಯು. ಮಂದಾಕಿನಿಯವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರಾದರೂ ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನೃತ್ಯ ಕಲೆಯ ಬಗ್ಗೆ ಆಸಕ್ತಿ ಮೂಡಿಸಿಕೊಂಡಾಗ ಮಗಳ ಉತ್ಸಾಹಕ್ಕೆ ತಣ್ನೀರೆರಚದೆ ತಂದೆ ವೇದಮೂರ್ತಿ ರಾಮಕೃಷ್ಣಾಚಾರ್ಯರು ಇವರನ್ನು ಪುತ್ತೂರಿನ ನಾಟ್ಯಾಚಾರ್ಯ ಇವರನ್ನು ಪುತ್ತೂರಿನ ನಾಟ್ಯಾಚಾರ್ಯ ಕೆ. ವಿಶ್ವನಾಥ ರೈ ಅವರ ಬಳಿ ಪ್ರಾರಂಭಿಕ ಶಿಕ್ಷಣ ಕೊಡಿಸಿ ಮುಂದೆ ಧಾರವಾಡದ ಪಿ.ವೆಂಕಟರಮಣ ಉಪಾಧ್ಯೆ ಅವರಲ್ಲಿ ಪ್ರೌಢಶಿಕ್ಷಣ ಪಡೆದ ನಂತರ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿಯವರ ಹಂಸಭಾವಿಯ ಗುರುಕುಲದಲ್ಲಿ ಸಾಕಷ್ಟುಕಾಲ ಉನ್ನತ ಶಿಕ್ಷಣ ಮಾರ್ಗದರ್ಶನ ಪಡೆದಿದ್ದಾರೆ.ಭರತನಾಟ್ಯದಲ್ಲಿ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹಾಗೂ ಸವಾಯಿ ಗಂಧರ್ವ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಕೇವಲ ಭರತನಾಟ್ಯವೇ ಅಲ್ಲದೆ ಕಥಕ್, ಜಾನಪದ ನೃತ್ಯಗಳಲ್ಲೂ ಸಾಕಷ್ಟು ಪರಿಶ್ರಮ ಹೊಂದಿರುವ ಮಂದಾಕಿನಿಯವರು ಅನೇಕ ನಾಟ್ಯ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಶ್ರೀನಿವಾಸ ಕುಲಕರ್ಣಿಯವರ ನೃತ್ಯ ತಂಡದ ಸದಸ್ಯರಾಗಿ ಅವರೊಂದಿಗೆ ಅನೇಕ ಕಡೆ ಪ್ರವಾಸ ಮಾಡಿದ್ದಾರೆ. ಕರ್ನೂಲ್, ಹೈದ್ರಾಬಾದ್, ಮುಂಬೈ, ಪುಣೆ, ನಾಗಪುರ, ಹಾಗೂ ಗೋವಾಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇವರು ತಮ್ಮ ’ಮಯೂರ’ ನೃತ್ಯದ ಮೂಲಕ ಅಪಾರ ಮನ್ನಣೆ ಖ್ಯಾತಿಗಳಿಸಿ ’ಮಯೂರ ರಾಣಿ’ ಎಂದು ಬಿರುದು ಗಳಿಸಿದ್ದಾರೆ.

ತಮ್ಮದೇ ಆದ ’ನೂಪುರ’ನೃತ್ಯ ಶಾಲೆಯನ್ನು ಆರಂಭಿಸಿ ತನ್ಮೂಲಕ ಅಪಾರ ಶಿಷ್ಯ ಸಂಪತ್ತನ್ನು ಹೊಂದಿದ್ದಾರೆ. ’ನಾಟ್ಯ ಶಾರದೆ’, ’ಶಾರದಾ-ಶಾಲ್ಮಲಾ’, ’ನಾಟ್ಯ ಕಲಾರ್ಶರಿ’ ಮುಂತಾದ ಬಿರುದು ಸನ್ಮಾನಗಳನ್ನು ಗಳಿಸಿರುವ ಮಂದಾಕಿನಿಯವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೦೧-೦೨ನೇ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.