೧-

ಲಂಡನ್ನಿನಿಂದ ಡೋವರ್ ಕಡೆಗೆ ಧಾವಿಸುತ್ತಿದ್ದ ಕಾಸ್‌ಮಾಸ್ ಕಂಪನಿಯ ಹವಾನಿಯಂತ್ರಿತ, ಸುಸಜ್ಜಿತವಾದ ಬಸ್ಸು ಒಂದು ಸಂಕ್ಷಿಪ್ತ ಜಗತ್ತಿನಂತೆ ಇತ್ತು. ಅದರೊಳಗೆ ನನ್ನನ್ನೂ ಸೇರಿಸಿಕೊಂಡಂತೆ ಪ್ರಯಾಣ ಮಾಡುತ್ತಿದ್ದ ಮೂವತ್ತೈದು ಮಂದಿಯಲ್ಲಿ, ಅಮೆರಿಕಾದವರು, ಥಾಯ್ಲೆಂಡಿನವರು, ಕೋರಿಯಾದವರು, ಕೆನಡಾದವರು, ಮಲೇಶಿಯಾದವರು, ಇಂಗ್ಲೆಂಡಿನವರು ಮತ್ತು ಇಂಡಿಯಾದವರು ಇದ್ದೆವು. ಇನ್ನು ಹನ್ನೆರಡು ದಿನ ಈ ನಾವೆಲ್ಲರೂ ಸಹಯಾತ್ರಿಗಳು. ಸೆಪ್ಟೆಂಬರ್ ತಿಂಗಳ ಹಿತವಾದ ಬಿಸಿಲು. ಅತ್ತಿತ್ತ ಹೆದ್ದಾರಿಯ ಬದಿಗೆ ಹರಹಿಕೊಂಡ ಏರಿಳಿವ ಹಸಿರು. ಅಲ್ಲಲ್ಲಿ ಸಣ್ಣಪುಟ್ಟ ಊರುಗಳು. ನಮಗೆ ಕೊಡಲಾಗಿದ್ದ ಮಾಹಿತಿ ಪುಸ್ತಕದ ಪ್ರಕಾರ ಬೆಳಿಗ್ಗೆ ಹತ್ತು ಗಂಟೆಯ ವೇಳೆಗೆ ಡೋವರ್ ಎಂಬ ಸ್ಥಳವನ್ನು ತಲುಪಿ, ಅಲ್ಲಿ ಲಾಂಚ್ ಒಂದನ್ನೇರಿ ಇಪ್ಪತ್ತೈದು ಮೈಲಿಗಳಗಲದ ಬ್ರಿಟಿಷ್ ಕಡಲ್ಗಾಲುವೆಯನ್ನು ದಾಟಿ, ಫ್ರಾನ್ಸಿನ ‘ಕೆಲೆ’ಯನ್ನು ತಲುಪಬೇಕು. ನಾನು ಅಷ್ಟಗಲ ಕಡಲ ಮೇಲೆ ತೇಲಿ ದಾಟುವ ಅನುಭವದ ರೋಮಾಂಚಕತೆಯನ್ನು ಕಲ್ಪಿಸಿಕೊಳ್ಳುತ್ತಾ ಕೂತಿದ್ದೆ. ಹತ್ತುಗಂಟೆಗೆ ಮೊದಲೇ ಒಂದೆಡೆ ಬಸ್ಸು ನಿಂತು, ದೊಡ್ಡದೊಂದು ಸಂಕೀರ್ಣವನ್ನು ಪ್ರವೇಶಿಸಿತು. ನಮ್ಮ ಎಸ್ಕಾರ್ಟ್, ಅಲೆನ್ ಎನ್ನುವ ಚೂಟಿಯಾದ ಮನುಷ್ಯ ಹೇಳಿದ: ‘ಇದೊಂದು ತೆರಿಗೆ ಮುಕ್ತ ವಾಣಿಜ್ಯ ಸಂಕೀರ್ಣ, ಬಸ್ಸು ಅರ್ಧಗಂಟೆ ನಿಲ್ಲುತ್ತದೆ, ಬೇಕಾದವರು ಇಲ್ಲಿ ವ್ಯಾಪಾರ ಮಾಡಬಹುದು.’ ಎಲ್ಲ ಪಯಣಿಗರೂ ಸಂಭ್ರಮದಿಂದ ಇಳಿದರು. ನಾನೂ ಇಳಿದು, ಅಲ್ಲಿನ ಕೆಫೆಯೊಂದರಲ್ಲಿ ಕಾಫಿ ಕುಡಿದು, ಮಧ್ಯಾಹ್ನದ ಲಂಚ್‌ಗಾಗಿ ಒಂದಷ್ಟು ಬ್ರೆಡ್ಡು, ಬಿಸ್ಕತ್ತು, ಹಣ್ಣಿನ ರಸದ ಪ್ಯಾಕೆಟ್‌ಅನ್ನು ಕೊಂಡುಕೊಂಡೆ. ಎಲ್ಲರೂ ಬಸ್ಸಿಗೆ ಹಿಂದಿರುಗಿದಾಗ ಯಥಾಶಕ್ತಿ ವ್ಯಾಪಾರ ಮಾಡಿದ್ದರು. ಸೊಗಸಾದ ವಿಸ್ಕಿ, ಬ್ರಾಂದಿ ಹಾಗೂ ವೈನ್ ಬಾಟಲುಗಳು ಅವರ ಕೈ ಚೀಲಗಳಿಂದ ಇಣುಕಿ ನೋಡುತ್ತಿದ್ದವು. ಬಸ್ಸು ಹೊರಟ ಇಪ್ಪತ್ತು ನಿಮಿಷಗಳಲ್ಲಿ ಒಂದೆಡೆ, ನಮ್ಮ ನಮ್ಮ ಪಾಸ್‌ಪೋರ್ಟ್‌ಗಳನ್ನು ತಪಾಸಣೆ ಮಾಡುವ ಕಛೇರಿಯಲ್ಲಿ ಮುದ್ರೆ ಒತ್ತಿಸಿಕೊಂಡು, ಯೂರೋಪು ದೇಶವನ್ನು ಪ್ರವೇಶಿಸುವ ಅನುಮತಿ ಪಡೆದುಕೊಂಡು, ಮತ್ತೆ ಮುಂದೆ ಹೊರಟೆವು. ಆದರೆ ನಾನು ನಿರೀಕ್ಷಿಸುತ್ತಿದ್ದ ಹಾಗೂ ದಾಟಿ ಹೋಗಬೇಕಾದ ಸಮುದ್ರ ಕಣ್ಣಿಗೇ ಬೀಳಲಿಲ್ಲ. ಇನ್ನೇನು ಈಗ ಕಂಡೀತು ಆಗ ಕಂಡೀತು ಎಂದು ಲೆಕ್ಕ ಹಾಕುತ್ತ ಇದ್ದ ಹಾಗೆ ನಮ್ಮ ಬಸ್ಸು ಇದ್ದಕ್ಕಿದ್ದ ಹಾಗೇ ಭಾರೀ ರೈಲ್ವೆ ವ್ಯಾಗನ್ ಒಂದನ್ನು ಪ್ರವೇಶಿಸಿತು. ಇದೇನೆಂದು ವಿಚಾರಿಸಿದ್ದರಲ್ಲಿ ಬ್ರಿಟಿಷ್ ಕಡಲ್ಗಾಲುವೆಯ ತಳದಲ್ಲಿ ಫ್ರಾನ್ಸಿನ ಕೆಲೆಗೆ ಹೋಗುವ ಸುರಂಗ ಮಾರ್ಗದ ರೈಲು ಅದು ಎಂದು ತಿಳಿಯಿತು. ನಮ್ಮ ಬಸ್ಸು ಪ್ರವೇಶಿಸಿದ ಈ ವ್ಯಾಗನ್ನಿನಲ್ಲಿ ಮುಂದೆ ಮತ್ತು ಹಿಂದೆ ನಮ್ಮ ಬಸ್ಸಿನಂತೆ ಇನ್ನೂ ಹಲವು ವಾಹನಗಳು ನಿಂತಿದ್ದವು ಮತ್ತು ನಮ್ಮ ಬಸ್ಸು ನಿಂತೊಡನೆಯೇ ಒಂದು ವಾಹನಕ್ಕೂ ಮತ್ತೊಂದು ವಾಹನಕ್ಕೂ ನಡುವೆ ಸ್ವಯಂಚಾಲಿತ ಬಾಗಿಲುಗಳು ತಾವಾಗಿಯೇ ಅಡ್ಡ ಗೋಡೆಗಳನ್ನು ನಿರ್ಮಿಸಿದವು. ನಾವು ಬಸ್ಸಿನಲ್ಲಿ ಕೂತಿರುವಂತೆಯೇ, ಬಸ್ಸನ್ನು ಒಳಗಿರಿಸಿಕೊಂಡು ಆ ರೈಲ್ವೆ ವ್ಯಾಗನ್ನಿನ ಸಾಲುಗಳು, ಕೆಳಗೆ ಹಾಸಿದ್ದ ಕಂಬಿಗಳ ಮೇಲೆ ಚಲಿಸತೊಡಗಿದವು. ಕೇವಲ ಇಪ್ಪತ್ತು ನಾಲ್ಕು ನಿಮಿಷಗಳ ಅವಧಿಯಲ್ಲಿ, ಈ ಕಡಲತಳದ ಸುರಂಗ ರೈಲು – ಆಚೆ ದಡದ ಕೆಲೆಯನ್ನು ತಲುಪಿತು. ಈ ಕತ್ತಲದಾರಿಯ ನಮ್ಮ ತಲೆಯ ಮೇಲೆ, ಇಪ್ಪತ್ತೈದು ಮೈಲಿಗಳಗಲದ ಕಡಲು ತನ್ನ ಪಾಡಿಗೆ ತಾನು ಭೋರ್ಗರೆಯುತ್ತಿದ್ದರೂ ಅದರ ತಳಾತಳದಲ್ಲೇ ನಾವು ಅದಾವುದರ ಪರಿವೆಯೇ ಇಲ್ಲದೆ ಸುರಂಗಮಾರ್ಗದ ಮೂಲಕ ಆಚೆಯ ದಡವನ್ನು ತಲುಪಿದ್ದೆವು. ಮೇಲಿನ ಕಡಲ ಮೇಲೆ ಲಾಂಚ್ ಒಂದರಲ್ಲಿ ಕೂತು ಪಯಣ ಮಾಡುವುದರಿಂದಾಗ ಬಹುದಾಗಿದ್ದ ಆ ಅದ್ಭುತ ರೋಮಾಂಚಕ ಅನುಭವದ ಬದಲು, ಮನುಷ್ಯನ ಈ ತಾಂತ್ರಿಕ ಸಾಮರ್ಥ್ಯದ ಪರಿಣಾಮವಾಗಿ, ಕಡಲ ತಲಾತಲದಲ್ಲೇ ದಾರಿ ಮಾಡಿಕೊಂಡು, ಆಚೆಯ ದಡವನ್ನು ತಲುಪಿದ ಈ ವಿಸ್ಮಯ ನನ್ನನ್ನು ಆವರಿಸಿಕೊಂಡಿತು.

ಫ್ರಾನ್ಸ್ ದೇಶದ ಕೆಲೆಯಲ್ಲಿ ಮತ್ತೆ ನಾವು ಮಧ್ಯಾಹ್ನದ ಲಂಚ್ ಮುಗಿಸಿಕೊಂಡು, ಬೆಲ್ಜಿಯಂನ ರಾಜಧಾನಿಯಾದ ಬ್ರಸೆಲ್ಸ್ ಕಡೆಗೆ ಪಯಣ ಹೊರಟೆವು. ಉದ್ದಕ್ಕೂ ಯಾವ ಏರಿಳಿತವೂ ಇಲ್ಲದ, ಬಹುಮಟ್ಟಿಗೆ ಸಮತಲವಾದ ಪರಿಸರದ ಹಸಿರ ನಡುವೆ ಪಯಣ ಮಾಡಿ ನಾಲ್ಕು ಗಂಟೆಯ ವೇಳೆಗೆ ನಗರವನ್ನು ತಲುಪಿದೆವು. ಅಂದು ಭಾನುವಾರವಾದ ಕಾರಣ, ನಗರವೆಲ್ಲ ಒಂದರ್ಥದಲ್ಲಿ ಬಾಯಿಮುಚ್ಚಿಕೊಂಡು ಸ್ತಬ್ಧವಾಗಿತ್ತು. ಬ್ರಸೆಲ್ಸ್‌ನ ಪ್ಯಾಲೇಸ್ ಹೋಟೆಲ್ ಎಂಬಲ್ಲಿ ಬಸ್ಸು ನಿಲ್ಲಿಸಿ ನಮಗೆ ನಿಗದಿತವಾದ ಕೊಠಡಿಗಳ ನಂಬರ್ ಅನ್ನು ನಮ್ಮ ಎಸ್ಕಾರ್ಟ್ ಅಲೆನ್ ಓದಿ ಹೇಳಿ, ನಮ್ಮ ನಮ್ಮ ಕೊಠಡಿಗಳ ಬೀಗದ ಕೈಗಳನ್ನು ಕೊಟ್ಟ. ಹಾಗೆಯೇ ಏಕಾಂಗಿಯಾದ ನನ್ನ ಜೊತೆಗೆ, ಮತ್ತೊಬ್ಬ ಏಕಾಂಗಿ ಪೆರೇರಾನನ್ನು ಒಂದು ಕೊಠಡಿಯಲ್ಲಿ ಜತೆಗಿರತಕ್ಕದೆಂದು ನಿಗದಿ ಮಾಡಿದ. ಮುಂದಿನ ಹನ್ನೆರಡು ದಿನಗಳೂ, ಈ ಪೆರೇರಾ ನನ್ನ ಸಂಗಾತಿ ಎಲ್ಲ ಊರುಗಳ ಹೋಟೆಲುಗಳಲ್ಲೂ. ಪೆರೇರಾ ಇಪ್ಪತ್ತೈದು ವರ್ಷದ ಚೂಟಿಯಾದ ತರುಣ. ಈತ ಕೇರಳದವನು. ತಂದೆ ದೊಡ್ಡ ವ್ಯಾಪಾರಿಯಂತೆ. ಸದ್ಯಕ್ಕೆ ಈತ ಸ್ಕಾಟ್‌ಲೆಂಡಿನ ಗ್ಲಾಸ್ಗೊ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ. ಈತ ಅದೇ ವಿಶ್ವವಿದ್ಯಾಲಯದ ಸಹಪಾಠಿಗಳಾದ ಇಬ್ಬರು ಹುಡುಗಿಯರ ಜೊತೆಗೆ ಈ ಪ್ರವಾಸವನ್ನು ಆಯ್ಕೆ ಮಾಡಿಕೊಂಡಿದ್ದ. ಆ ಇಬ್ಬರು ಹುಡುಗಿಯರಿಗೂ ಬೇರೊಂದು ಕೊಠಡಿಯನ್ನು ನಿಗದಿ ಮಾಡಲಾಗಿದ್ದು, ಪೆರೇರಾ ನನ್ನ ಸಂಗಾತಿಯಾಗಬೇಕಾಯಿತು. ನಮ್ಮ ನಮ್ಮ ಕೊಠಡಿಯ ಬೀಗದ ಕೈ ಕೊಟ್ಟ ನಂತರ ನಮ್ಮ ‘ಎಸ್ಕಾರ್ಟ್’ ಹೇಳಿದ : ‘ದಯಮಾಡಿ ನೀವೆಲ್ಲ ನಿಮ್ಮ ನಿಮ್ಮ ಕೊಠಡಿಗಳಿಗೆ ಹೋಗಿ ವಿಶ್ರಾಂತಿ ಪಡೆಯಬಹುದು. ಇಷ್ಟವಿದ್ದವರು ಹೊರಗೆ ಹೋಗಿ ಒಂದಷ್ಟು ಸುತ್ತಾಡಬಹುದು. ಇಗೋ ನೋಡಿ. ಇಲ್ಲಿದೆ ಈ ಹೋಟೆಲ್ ಇರುವ ಸ್ಥಳದ ನಕ್ಷೆ. ಇದು ನಿಮ್ಮ ಕೈಯಲ್ಲಿರಲಿ. ಈ ಊರಲ್ಲಿ ಇಂಗ್ಲಿಷ್ ಭಾಷೆ ತಿಳಿಯುವುದು ಕಷ್ಟ. ಈ ನಕ್ಷೆಯ ನೆರವಿನಿಂದ ಸುರಕ್ಷಿತವಾಗಿ ಹಿಂದಕ್ಕೆ ಬರಬಹುದು. ನಿಮ್ಮ ನಿಮ್ಮ ಲಗ್ಗೇಜುಗಳು ಇನ್ನೈದು ನಿಮಿಷಗಳಲ್ಲಿ ನಿಮ್ಮ ಕೊಠಡಿಯ ಬಾಗಿಲಿಗೆ ಬರುತ್ತವೆ. ಬೆಳಿಗ್ಗೆ ಆರೂವರೆ ಹೊತ್ತಿಗೆ ನಿಮ್ಮ ನಿಮ್ಮ ಲಗ್ಗೇಜುಗಳನ್ನು ನಿಮ್ಮ ಕೊಠಡಿಯ ಹೊರಗೆ ಇರಿಸಬೇಕು. ಅವುಗಳನ್ನು ಬಸ್ಸಿಗೆ ಸ್ಥಳಾಂತರಿಸುವ ಜವಾಬ್ದಾರಿ ನಮ್ಮದು. ಬೆಳಿಗ್ಗೆ ಏಳು ಗಂಟೆಗೆ ಬ್ರೆಕ್ ಫಾಸ್ಟ್. ಅನಂತರ ಏಳೂ ನಲವತ್ತಕ್ಕೆ ಬಸ್ಸು ಹೊರಡುತ್ತದೆ. ಓ. ಕೆ. ಹ್ಯಾವ್ ಎ ನೈಸ್ ಟೈಂ.’ ಮುಂದಿನ ಹನ್ನೆರಡೂ ದಿನಗಳ ಕಾಲ ನಮ್ಮ ಪಯಣದ ದಾರಿ ಉದ್ದಕ್ಕೂ ಇದೇ ಪಾಠ. ಎಂದೂ ಎಲ್ಲೂ ಈ ಒಂದು ಶಿಸ್ತಿಗೆ ಭಂಗ ಬರಲೇ ಇಲ್ಲ. ಅಷ್ಟು ಸೊಗಸಾಗಿ ನಿರ್ವಹಿಸಿದ ನಮ್ಮ ಮೇಲ್ವಿಚಾರಕ.

ನಾವು ನಮ್ಮ ನಮ್ಮ ಕೊಠಡಿಗಳಿಗೆ ಬಂದೆವು. ಸೊಗಸಾದ ಹೋಟೆಲು. ಎರಡೆರಡು ಹಾಸಿಗೆಗಳು; ಸದಾ ತಣ್ಣೀರು – ಬಿಸಿನೀರು ಬರುವ ನಲ್ಲಿಗಳು; ಶುಭ್ರವಾದ ಥಳ ಥಳ ಅಮೃತ ಶಿಲೆಯ ಬಾತ್ ರೂಂಗಳು; ಟಿ.ವಿ. ದೂರವಾಣಿ ಇತ್ಯಾದಿ. ನಾನೂ ಪೆರೇರಾ ಮುಖಮಾರ್ಜನಾದಿಗಳನ್ನು ಮುಗಿಸಿಕೊಂಡು, ಒಂದಷ್ಟು ಹೊರಗೆ ತಿರುಗಾಡಿಕೊಂಡು ಬರೋಣ ಅಂದುಕೊಂಡೆವು. ಹನ್ನೆರಡು ದಿನಗಳ ಈ ಪಯಣದಲ್ಲಿ ಪ್ರವಾಸಿ ಕಂಪನಿಯವರು, ಪ್ರತಿದಿನದ ಬ್ರೆಕ್‌ಫಾಸ್ಟಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರೂ, ರಾತ್ರಿಯ ಭೋಜನ ಅವರ ಲೆಕ್ಕದಲ್ಲಿ ಒಟ್ಟು ಆರು ದಿನ ಮಾತ್ರ. ಹೀಗಾಗಿ ಮಧ್ಯಾಹ್ನದ ಎಲ್ಲ ದಿನಗಳ – ಲಂಚ್‌ನ ವ್ಯವಸ್ಥೆಯೂ ನಮ್ಮದೆ. ಅದೇನು ಅಂತಹ ತೊಂದರೆಯ ವಿಷಯವೇನೂ ಆಗಿರಲಿಲ್ಲ. ಯಾಕೆಂದರೆ ಪ್ರತಿದಿನ, ಬೆಳಿಗ್ಗೆ ಸೊಗಸಾದ ಬ್ರೆಕ್‌ಫಾಸ್ಟ್‌ನ ನಂತರ ಹತ್ತೂವರೆಯ ವೇಳೆಗೆ ದಾರಿಯಲ್ಲೊಂದು ಕಡೆ ಕಾಫಿಯ ಬಿಡುವು; ಅನಂತರ ಮಧ್ಯಾಹ್ನ ಒಂದೂವರೆಗೆ ಊಟದ ಬಿಡುವು. ದಾರಿಯುದ್ದಕ್ಕೂ ಇವಕ್ಕೆಲ್ಲ ಅನುಕೂಲವಾದ ‘ನಿಲುಗಡೆ’ಗಳನ್ನು – ಅವರ  ಯೋಜನೆಯಲ್ಲೇ ಯೋಚಿಸಲಾಗಿದೆ. ಮತ್ತೆ ಸಂಜೆ, ಐದು ಅಥವಾ ಆರರ ವೇಳೆಗೆ ಸಂಜೆಯ ನಿಲುಗಡೆ- ವೇಳಾಪಟ್ಟಿಯಂತೆ ನಿಗದಿತವಾದ ಸ್ಥಳಗಳ ಹೋಟೆಲುಗಳಲ್ಲಿ. ಎಂದೂ ರಾತ್ರಿಯ ಪ್ರಯಾಣ ಇಲ್ಲ. ಈ ಹನ್ನೆರಡು ದಿನಗಳ ಪಯಣದಲ್ಲಿ ಆರು ರಾತ್ರಿಗಳ ಭೋಜನ ಈ ಪ್ರವಾಸಿ ಕಂಪನಿಯವರದು. ಇನ್ನುಳಿದದ್ದು ನಮ್ಮದು.

ಬ್ರಸೆಲ್ಸ್ ತಲುಪಿದ ದಿನ ಸಂಜೆಯ ಊಟದ ಜವಾಬ್ದಾರಿ ನಮ್ಮದೇ. ಹೀಗಾಗಿ ನಾನೂ ಪೆರೇರಾ ಹಾಗೂ ಆತನ ಇಬ್ಬರು ಗೆಳತಿಯರೂ, ಒಂದು ಸ್ವಲ್ಪ ಹೊತ್ತು ಊರೊಳಗೆ ಸುತ್ತಾಡಿ, ಎಲ್ಲಾದರೂ ಒಂದಿಷ್ಟು ತಿಂದು ಹೋಟಲಿಗೆ ಹಿಂದಿರುಗುವುದು ಅಂದುಕೊಂಡೆವು. ಪೆರೇರಾನ ಗೆಳತಿಯರಿಬ್ಬರಲ್ಲಿ ಒಬ್ಬಳು ನಾಗಪುರದವಳು, ಇನ್ನೊಬ್ಬಳು ಪೂನಾದವಳು. ಅವರಿಬ್ಬರೂ ಗ್ಲಾಸ್ಕೋ ವಿಶ್ವವಿದ್ಯಾಲಯದಲ್ಲಿ ಅವನ ಕ್ಲಾಸ್‌ಮೇಟ್‌ಗಳು. ನಾವೂ ಮೂವರೂ ಹೋಟಲನ್ನು ಬಿಟ್ಟು ಆ ಊರಿನ ಮುಖ್ಯರಸ್ತೆಯಲ್ಲಿ ನಡೆದೆವು. ಆದರೆ ಅಂಗಡಿಗಳ ಬಾಗಿಲನ್ನೆಲ್ಲಾ ಹಾಕಿದ್ದರಿಂದ ಅಂಥ ಚಟುವಟಿಕೆಯೇನೂ ಇರಲಿಲ್ಲ. ಎರಡೂ ಕಡೆ ಎತ್ತರವಾದ ಹಾಗೂ ಅಚ್ಚುಕಟ್ಟಾದ, ಥಳಥಳ ಹೊಳೆಯುವ ಗಾಜುಗಳನ್ನು ಜೋಡಿಸಿದ ಕಟ್ಟಡಗಳು ಸಂಜೆ ಬೆಳಕಿನಲ್ಲಿ ವಿಲಕ್ಷಣವಾಗಿ ತೋರಿದವು. ಅಗಲವಾದ ಹಾಗೂ ಸ್ವಚ್ಛವಾದ ಬೀದಿಗಳಲ್ಲಿ ವಾಹನ ಸಂಚಾರ ಹಾಗೂ ಜನಸಂಚಾರ ವಿರಳವಾಗಿತ್ತು. ನಾವು ಒಂದರ್ಧಗಂಟೆ ನಡೆದು ಅಲ್ಲೊಂದು ಚೌಕದ ಮಧ್ಯೆ, ರೇಖಾಗಣಿತದ ವಿಚಿತ್ರವಾದ ಆಕೃತಿಗಳ ನಿರ್ಮಾಣದ  ನಡುವೆ ಚಿಮ್ಮುವ ಚಿಲುಮೆಗಳನ್ನು ವೀಕ್ಷಿಸುತ್ತ ನಿಂತೆವು. ಅನಂತರ ಆ ಮೂವರೂ ಏನು ಮಾತನಾಡಿಕೊಂಡರೋ ಏನೋ. ‘ಪ್ರೊಫೆಸರ್ ಸಾಬ್, ನಾವು ಆಗೋ ಅಲ್ಲಿ ದೂರದಲ್ಲಿ ಶಿಖರಾಕೃತಿಯಲ್ಲಿ ಕಾಣುತ್ತದಲ್ಲ ಆ ಕಟ್ಟಡ, ಅಲ್ಲಿಗೆ ಹೋಗಿ ಬರುತ್ತೇವೆ. ನಿಮಗೆ ಅಷ್ಟು ದೂರ ನಡೆಯೋಕ್ಕಾಗುತ್ತದೋ ಇಲ್ಲವೋ. ಬೇಕಾದರೆ ನೀವು ಹೋಟಲಿಗೆ ಹೋಗಿ ವಿಶ್ರಾಂತಿ ಪಡೆಯಿರಿ. ನಾವು ನಿಧಾನಕ್ಕೆ ಬರುತ್ತೇವೆ’ ಅಂದರು. ನನಗೆ ಅರ್ಥವಾಯಿತು. ತಾರುಣ್ಯ ತಾರುಣ್ಯವೇ, ವಾರ್ಧಕ್ಯ ವಾರ್ಧಕ್ಯವೇ. ಆ ತಾರುಣ್ಯದ ಉತ್ಸಾಹ ಹಾಗೂ ವೇಗದ ಜತೆಗೆ ನನ್ನಂಥವನು ಹೆಜ್ಜೆ ಹಾಕುವುದು ಸಾಧ್ಯವೇ. “ಓ.ಕೆ. ಹ್ಯಾವ್ ಎ ನೈಸ್ ಟೈಂ’ ಎಂದು ಹೇಳಿ ನಕ್ಕು ನಾನು ಹೋಟೆಲ್ ಕಡೆ ಹಿಂದಿರುಗಿದೆ. ಇನ್ನೇನು ಹೋಟೆಲ್ ಸ್ವಲ್ಪ ದೂರವಿದೆ ಅನ್ನುವಾಗ ಇದೇ ಬಸ್ಸಿನಲ್ಲಿ ಜತೆಗೆ ಬಂದ ಬಂಗಾಳಿ ದಂಪತಿಗಳು ಎದುರಾದರು. ‘ಹಲೋ ಎಲ್ಲಿಗೆ ಹೊರಟಿದ್ದೀರಿ ಒಬ್ಬರೆ?’ ಎಂದರು. ನಾನು ‘ಹೀಗೆ ಸುಮ್ಮನೆ ಸುತ್ತಾಡಿಕೊಂಡು ಬಂದೆ. ನೀವು?’ ಅಂದೆ. ‘ಇವತ್ತು ರಾತ್ರಿಗೆ ಊಟ ಇಲ್ಲವಲ್ಲ? ಏನಾದರೂ ಹಣ್ಣು ಗಿಣ್ಣು  ಸಿಕ್ಕೀತೇನೋ ಅಂತ ಮಾರ್ಕೆಟ್ ಹುಡುಕುತ್ತಿದ್ದೇವೆ’ ಅಂದರು ಶ್ರೀಯುತ ರಾಯ್. ಅವರಿಗೂ ಅರುವತ್ತರ ವಯಸ್ಸು. ಜೊತೆಗೆ  ಅವರ ದಢೂತಿ ಹೆಂಡತಿ. ಇಬ್ಬರದೂ ಮಂದಗಮನವೇ. ಅವರಿಬ್ಬರೂ ಕಲ್ಕತ್ತಾದವರು. ಅವರ ಮಾತು ಕೇಳಿ, ನಾನೂ ಏನಾದರೂ ಒಂದಿಷ್ಟು ಹಣ್ಣು ಕೊಂಡುಕೊಳ್ಳಬಹುದೆಂದು ಯೋಚಿಸಿ, ‘ನಡೆಯಿರಿ, ನಾನೂ ನಿಮ್ಮ ಜೊತೆಗೆ ಬರುತ್ತೇನೆ – ಮಾರ್ಕೆಟ್ ಇಲ್ಲೆಲ್ಲಾದರೂ ಇದ್ದೀತು’ ಎಂದೆ. ನಾನು ಅಲ್ಲೇ ಹೋಗುತ್ತಿದ್ದ  ಒಬ್ಬರನ್ನು, ‘ಕ್ಷಮಿಸಿ ಇಲ್ಲೆಲ್ಲಾದರೂ ಮಾರ್ಕೆಟ್ ಇದೆಯೆ’ ಎಂದು ಪ್ರಶ್ನಿಸಿದೆ ಇಂಗ್ಲಿಷಿನಲ್ಲಿ. ಅವರಿಗೆ ಏನೂ ಅರ್ಥವಾಗಲಿಲ್ಲ. ಬಹಳ ಕಷ್ಟಪಟ್ಟು, ಸಾಭಿನಯವಾಗಿ Fruits ಅಂದದ್ದೂ, Market ಅಂದದ್ದೂ ಅವರ ತಲೆಗೆ ಹೋದಂತೆ ತೋರಿತು. ಆತ ಒಂದು ದಿಕ್ಕಿಗೆ ಕೈ ತೋರಿಸಿದ. ನಾವು ಸ್ವಲ್ಪ ದೂರ ನಡೆದೆವು. ಒಂದು ಹಣ್ಣಿನ ಅಂಗಡಿಯೇನೋ ಸಿಕ್ಕಿತು. ನಾವೂ ನಮ್ಮ ಭಾಷಾತೀತವಾದ ಒಂದು ಅಭಿನಯದ ಭಾಷೆಯಲ್ಲಿ ವ್ಯಾಪಾರ ಮಾಡಿ, ನಮ್ಮ ಬಳಿ ಇದ್ದ ಡಾಲರ್ ಅನ್ನು ಕೊಟ್ಟು, ಅವನು ಹಿಂದಿರುಗಿಸಿದ ಬೆಲ್ಜಿಯಂ ನಾಣ್ಯಗಳ ಚಿಲ್ಲರೆಯನ್ನು ಜೇಬಿಗೆ ಇಳಿಯಬಿಟ್ಟುಕೊಂಡು ಹೋಟಲಿಗೆ ಬಂದೆವು.

ಪೆರೇರಾ ಹೋಟಲಿಗೆ ಬಂದಾಗ ರಾತ್ರಿ ಎಂಟೂವರೆ. ನಾನೊಂದಷ್ಟು ಫಲಹಾರ ಮುಗಿಸಿ ಟಿ.ವಿ. ನೋಡುತ್ತ ಮಲಗಿದ್ದೆ. ಆತ ಅಂದು ಸಾಕಷ್ಟು ಸುತ್ತಾಡಿದ್ದನ್ನೂ ಅಲ್ಲೇ ಎಲ್ಲೋ ಒಂದು ಸೊಗಸಾದ ಹೋಟಲಿನಲ್ಲಿ ಊಟ ಮಾಡಿದ್ದನ್ನೂ ವಿವರಿಸಿ, ‘ನೀವು ಮಲಗಿ, ನಾನು ನನ್ನ ಸ್ನೇಹಿತರನ್ನು ಒಂದಷ್ಟು ಮಾತನಾಡಿಸಿಕೊಂಡು ಬರುತ್ತೇನೆ’ – ಎಂದು ಹೇಳಿ ಹೊರಟೇ ಹೋದ. ಆಮೇಲೆ ಆತ ರೂಮಿಗೆ ಬಂದಾಗ ಬಹುಶಃ ಹನ್ನೆರಡಾಗಿತ್ತೋ ಏನೋ. ನನ್ನ ಹನ್ನೆರಡು ದಿನಗಳ ಪಯಣದ ಉದ್ದಕ್ಕೂ ಇದು ನನಗೆ ಅಭ್ಯಾಸವಾಗಿಬಿಟ್ಟಿತು.

ಬೆಳಿಗ್ಗೆ ಪ್ಯಾಲೇಸ್ ಹೋಟಲಿನ ಕೆಳಗಿನ ವಿಸ್ತಾರವಾದ ಕೊಠಡಿಯೊಂದರಲ್ಲಿ ಸೊಗಸಾದ ‘ಬ್ರೆಕ್‌ಫಾಸ್ಟ್’. ಒಂದೆಡೆ ಓರಣವಾಗಿ ಜೋಡಿಸಿದ್ದ ಖಾದ್ಯ ಪದಾರ್ಥಗಳನ್ನು ತಟ್ಟೆಗೆ ನಾವೇ ಬಡಿಸಿಕೊಂಡು ನಮ್ಮ ನಮ್ಮ ಟೇಬಲ್‌ಗಳಿಗೆ ಒಯ್ದು ತಿನ್ನುವ ವ್ಯವಸ್ಥೆ. ಬ್ರೆಡ್ – ಛೀಸ್ – ಕಾರ್ನ್ ಫ್ಲೇಕ್ಸ್ ಮತ್ತು ಹಾಲು, ಹಣ್ಣು, ಕಾಫಿ – ಟೀ ಇತ್ಯಾದಿ. ನಿಗದಿತವಾದಂತೆ ಏಳು ನಲವತ್ತಕ್ಕೆ ಹೊರಟಿತು  ಬಸ್ಸು. ಆಗಲೇ ಬ್ರಸೆಲ್ಸ್ ನಗರ ತನ್ನ ಚಕ್ರಗಳ ಮೇಲೆ ಉರುಳುತ್ತಿತ್ತು. ನಗರದಿಂದಾಚೆ ಬಂದೊಡನೆ ಅದೆಲ್ಲಿಂದಲೋ ಧುತ್ತೆಂದು ಮಂಜು ಕವಿದುಕೊಂಡಿತು. ದಾರಿಯೇ ಕಾಣದ ಮಂಜಿನ ಹೊಗೆಯ ನಡುವೆ ಬಸ್ಸು ತನ್ನ ಕಣ್ಣಿನ ಬೆಳಕು ಹಾಯಿಸಿ ನಿಧಾನಕ್ಕೆ ಮುಂದುವರಿಯಿತು. ರಸ್ತೆಯ ಎರಡೂ ಬದಿಗೆ ಸಾಲಾಗಿ ದೀಪಗಳು ಹೊತ್ತಿಕೊಂಡು, ಪಂಜುಗಳಂತೆ ಕಾಣತೊಡಗಿದವು. ಹಬ್ಬಿಕೊಂಡ ಮಬ್ಬಿನ ನಡುವೆ ತನ್ನ ಕಣ್ಣ ಬೆಳಕಿನಿಂದ ತನ್ನ ದಾರಿಯನ್ನು ತಾನೇ ತೆರೆಯುತ್ತ ಮುಂದುವರಿದಂತಿರುವ ಬಸ್ಸು, ಹಾಗೂ ಅದರೊಳಗೆ ಕೂತ ಪಯಣಿಗರು ಯಾವುದೋ ಒಂದು ನಿಶ್ಯಬ್ದ ಅಸ್ಪಷ್ಟ ಪರಿಸರವೊಂದನ್ನು ಪ್ರವೇಶಿಸುತ್ತಿರುವಂತೆ ತೋರಿತು. ಸುಮಾರು ಒಂದು ಗಂಟೆಯ ಕಾಲ ಹೊಗೆ ಮಂಜಿನ ಮೋಡಿಯೊಳಗೆ ಸಿಕ್ಕಿಕೊಂಡಂತಿದ್ದ ನಾವು, ಕ್ರಮ ಕ್ರಮೇಣ ಮಂಜು ಹಿಂಜರಿದು, ಅತ್ತ ಇತ್ತ ತಣ್ಣನೆಯ ಬಿಸಿಲಲ್ಲಿ ಮಲಗಿದ ಕೊಯ್ಲಾದ ಹೊಲಗಳ ಹರಹನ್ನೂ, ಅಲ್ಲಲ್ಲಿ ಚೌಕಾಕಾರವಾಗಿ ಒಟ್ಟಿದ ಬಣವೆಗಳನ್ನೂ ಮತ್ತು ಆಗಾಗ ಥಟ್ಟನೆ ಗೋಚರವಾಗುವ ಮಡುಗಟ್ಟದ ಮರಗಳ ಹಸುರನ್ನೂ ವೀಕ್ಷಿಸತೊಡಗಿದೆವು. ಮುಂದೆ ಬಸ್ಸು ತನ್ನ ವೇಗವನ್ನು ವರ್ಧಿಸಿಕೊಂಡು ಧಾವಿಸತೊಡಗಿತು. ನಮ್ಮ ಮೇಲ್ವಿಚಾರಕ ಹಾಗೂ ಮಾರ್ಗದರ್ಶಿ ಎಲ್ಲವೂ ಆದ ಮಿಸ್ಟರ್ ಅಲೆನ್, ಡ್ರೈವರ್‌ನ ಬದಿಗೆ ಕೂತು ಕೈಗೆ ಮೈಕ್ ತೆಗೆದುಕೊಂಡು ಎರಡನೆಯ ಮಹಾಯುದ್ಧದ ಕಾಲದಲ್ಲಿ ಬ್ರಸೆಲ್ಸ್ ಹಾಗೂ ಇಷ್ಟರಲ್ಲೆ ನಾವು ತಲುಪಲಿರುವ ಲಕ್ಸಂಬರ್ಗ್ ನಗರ ಪರಿಸರಗಳು ವಹಿಸಿದ ಪಾತ್ರವನ್ನು ಕುರಿತ ಐತಿಹಾಸಿಕ ಸಂಗತಿಗಳನ್ನು ವಿವರಿಸತೊಡಗಿದ್ದ. ಅವನ ನಿರರ್ಗಳವಾದ ಹಾಗೂ ಮೌಲಿಕವಾದ ಮಾಹಿತಿಯಿಂದ ಕೂಡಿದ ವಾಗ್‌ವಿಲಾಸವನ್ನು ಆಲಿಸುತ್ತ ಇದ್ದ ಹಾಗೆ, ಬೆಳಗಿನ ಹತ್ತೂವರೆಯ ಹೊತ್ತಿಗೆ ಬಸ್ಸು ಲಕ್ಸಂಬರ್ಗ್ ಎಂಬ ಪುಟ್ಟ, ಆದರೆ ಅತ್ಯಾಧುನಿಕವಾದ ನಗರವೊಂದನ್ನು ಪ್ರವೇಶಿಸಿ, ಸಮರ ಸ್ಮಾರಕವನ್ನೊಳಗೊಂಡ ಚೌಕವೊಂದರಲ್ಲಿ ನಿಂತಿತು. ಹಿಂದಿನ ಜಾಗತಿಕ ಮಹಾಯುದ್ಧಗಳಲ್ಲಿ ಹೋರಾಡಿ ಮಡಿದ ಯೋಧರ ಗೌರವಾರ್ಥವಾಗಿ ನಿರ್ಮಿಸಿದ ಸ್ಮಾರಕ ಚೌಕದ ಬಳಿ ನಿಂತು, ಅದರ ಬದಿಯ ದಟ್ಟವಾದ ಹಸುರಿನ ಕಣಿವೆಯ ಆಳವನ್ನೂ, ಆ ಕಣಿವೆಯ ಎರಡೂ ಬದಿಗಳನ್ನು ಸೇರಿಸುವ ಕಮಾನಿನಾಕಾರದ ಸೇತುವೆಯ ಸೊಗಸನ್ನೂ, ಅದರಾಚೆಗೆ ಒತ್ತಾಗಿ ಬೆಳೆದ ಮರಗಳ ನಡುವೆ ಎತ್ತರವಾಗಿ ತಲೆಯೆತ್ತಿ ನಿಂತ ಆಡಳಿತ ಕಛೇರಿಗಳ ವೈಭವವನ್ನೂ ನೋಡುತ್ತ ನಿಂತೆವು. ಲಕ್ಸಂಬರ್ಗ್ ಎನ್ನುವುದು ಅದೇ ಹೆಸರಿನ, ಕೇವಲ ೯೯೯ ಚದರ ಮೈಲಿಗಳಗಲದ ಒಂದು ರಾಜ್ಯದ ರಾಜಧಾನಿ. ಎತ್ತರವಾದೊಂದು ದಿನ್ನೆಯ ಮೇಲೆ  ನಿಂತಿರುವ ಈ ನಗರ ಒಂದು ಕಾಲಕ್ಕೆ ಯೂರೋಪಿನ ಅತ್ಯಂತ ಪ್ರಬಲವಾದ ದುರ್ಗವೂ ಆಗಿತ್ತು. ತನ್ನ ವೈಶಿಷ್ಟ್ಯವನ್ನು ಸದಾ ಕಾಯ್ದುಕೊಂಡಂತೆ ತೋರುವ ಈ ಪುಟ್ಟನಗರ ಜಾಗತಿಕ ನಾಗರಿಕತೆಯ ಪ್ರಗತಿಯೊಂದಿಗೆ ಹೇಗೆ ಸಮಸಮವಾಗಿ ಹೆಜ್ಜೆ ಹಾಕುತ್ತಿದೆ ಅನ್ನುವುದು ಸ್ವಯಂ ಸ್ಪಷ್ಟವಾಗುವಂತಿತ್ತು. ಮುಂದೆ ನಮ್ಮ ಪಯಣದ ಉದ್ದಕ್ಕೂ ಕಂಡ ಊರುಗಳ ಹೆಸರುಗಳೂ ಹೀಗೆಯೇ : ಬಿಟ್ಟೆಂಬರ್ಗ್, ಸ್ಟ್ರಾಸ್ ಬರ್ಗ್ ಇತ್ಯಾದಿ. ಈ ಊರುಗಳನ್ನು ಹಾದು ಫ್ರಾನ್ಸ್  ದೇಶದ ಮೂಲಕ, ರೈನ್ ನದಿಯನ್ನು ದಾಟಿಕೊಂಡು, ಸಂಜೆ ನಾಲ್ಕೂವರೆಯ ವೇಳೆಗೆ, ಸ್ವಿಟ್ಜರ್‌ಲ್ಯಾಂಡಿನ ಫ್ರಾಂಕುಗಳನ್ನು ಪಡೆದುಕೊಂಡು, ರಮ್ಯಾದ್ಭುತ ಗಿರಿ-ಕಾನನ-ಕಂದರಗಳ ಸೀಮೆಯನ್ನು ಪ್ರವೇಶ ಮಾಡಿದೆವು.

೨ –

ರಮ್ಯತೆಯಿಂದ ಮೊದಲುಗೊಂಡ ಭವ್ಯತೆಯವರೆಗೆ ವಿವಿಧ ಮಜಲುಗಳಲ್ಲಿ ನಿಸರ್ಗದ ಚೆಲುವು ಸೂರೆಯಾದಂತಿರುವ ಸ್ಟಿಟ್ಜರ್‌ಲ್ಯಾಂಡ್, ಜಗತ್ತಿನ ಪ್ರವಾಸ ಪ್ರಿಯರೆಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಆಲ್ಫ್ಸ್ ಹಾಗು ಜುರಾ ಪರ್ವತಗಳಿಂದ ಆವೃತವಾದ ಈ ಪರಿಸರ ಎತ್ತರವಾದ ಹಾಗೂ ಹಿಮಾಚ್ಛಾದಿತವಾದ ಹಲವು ಶಿಖರಗಳಿಂದ, ಹಸುರು ತುಳುಕುವ ಆಳವೂ ಅಗಲವೂ ಆದ ಕಂದರಗಳಿಂದ, ವಿಸ್ತಾರವಾದ ಅನೇಕ ಸರೋವರಗಳಿಂದ, ದಟ್ಟವಾದ ಕಾಡುಗಳಿಂದ, ಜುಳುಜುಳನೆ ಹರಿಯುವ ಹೊಳೆಗಳಿಂದ, ನಯನ ಮನೋಹರವಾಗಿದೆ. ಇಡೀ ಯುರೋಪಿನಲ್ಲಿಯೆ ಈ ದೇಶ, ವಿಸ್ತಾರದಲ್ಲಿ ಅಷ್ಟೇನೂ ದೊಡ್ಡದಲ್ಲವಾದರೂ ಅಭಿವೃದ್ಧಿಯಲ್ಲಿ  ಅತ್ಯಂತ ಗಮನಾರ್ಹವಾದದ್ದು. ಈ ದೇಶದ ಶೇಕಡಾ ಅರುವತ್ತರಷ್ಟು ಭಾಗ, ಪರ್ವತದ ಕಾರಣದಿಂದ ಜನವಸತಿಗೆ ಅನುಕೂಲವಾಗಿಲ್ಲದಿದ್ದರೂ, ಈ ಪರ್ವತಾರಣ್ಯ ನಿಸರ್ಗ ಸೌಂದರ್ಯವೇ ಪ್ರವಾಸೋದ್ಯಮದ ಕಾಮಧೇನುವಾಗಿ ಇದರ ಆರ್ಥಿಕ ಪ್ರಗತಿಗೆ ಕಾರಣವಾಗಿದೆ. ಎಲ್ಲಿ ನೋಡಿದರೂ ಪ್ರವಾಸಿಗಳಿಗೆ ಅನುಕೂಲವಾದ ನೆಲೆಯನ್ನು ಕಲ್ಪಿಸುವ ವಸತಿ ಗೃಹಗಳೂ, ವಿಹಾರ ಸೌಲಭ್ಯಗಳೂ, ಕ್ರೀಡಾ ವಿನೋದದ ವ್ಯವಸ್ಥೆಗಳೂ – ಕಣ್ಣಿಗೆ ಬೀಳುತ್ತವೆ.

ಇಂಥ ಪರಿಸರದಲ್ಲಿ ನಾವಿದ್ದದ್ದು ಕೇವಲ ಎರಡೂವರೆ ದಿನ ಮಾತ್ರ. ಮೊದಲ ದಿನ ಕುಷ್ ನೆಟ್ (Kussnch) ಎಂಬ ಪುಟ್ಟ ಊರಿನ ವಸತಿಗೃಹ ವೊಂದರಲ್ಲಿ ತಂಗಿ, ಇರುಳನ್ನು ಕಳೆದೆವು. ಬೃಹದಾಕಾರವಾದ ಪರ್ವತವೊಂದರ ತಪ್ಪಲಿನ ಪ್ರಶಾಂತವಾದ ಈ ಊರನ್ನು ಬಿಟ್ಟು, ಸ್ವಚ್ಛವಾದ ಬೆಳಿಗ್ಗೆ ಹೊರಟ ಬಸ್ಸು, ಆಲ್ಫ್ಸ್ ಪರ್ವತದ ಕಣಿವೆಯ ಬಳಸುದಾರಿಗಳನ್ನು ಹಾದು, ದಾರಿ ಉದ್ದಕ್ಕೂ ಅನೇಕ ಸುರಂಗಗಳನ್ನು ಹೊಕ್ಕು ಮುನ್ನಡೆಯಿತು. ಒಂದೊಂದು ಸುರಂಗವನ್ನು ಹೊಕ್ಕು ಹೊರಬಂದಂತೆ ತರಂಗ ತರಂಗವಾಗಿ ತೆರೆದುಕೊಳ್ಳುವ ಸಸ್ಯಶಾಮಲ ಗಿರಿಶ್ರೇಣಿಗಳೂ, ಕಣಿವೆಯಾಳಗಳಿಂದ ಎದ್ದು, ತಮ್ಮ ಮುಡಿಗಳನ್ನು ಕೆದರಿಕೊಂಡ ನೀಳ ಕಾಂಡಗಳ ನಿಬಿಡ ವೃಕ್ಷಗಳೂ, ಹಠಾತ್ತನೆ ಮೇಲೆದ್ದು ತಮ್ಮ ದೈತ್ಯ ಗಾತ್ರಗಳಿಂದ ಆಕಾಶವನ್ನೆ ಆಕ್ರಮಿಸಿಕೊಳ್ಳುವಂತೆ ತೋರುವ ನಿಷ್ಠುರ ಶಿಲಾ ಶೈಲಭಿತ್ತಿಗಳೂ ಮತ್ತು ಶ್ವೇತಶುಭ್ರ ಹಿಮಾಚ್ಛಾಧಿತ ಶಿಖರಗಳೂ, ಒಂದು ಅದ್ಭುತ ಮಧುರ ಜಗತ್ತನ್ನು ಕಣ್ಣಮುಂದೆ ಅನಾವರಣಗೊಳಿಸುವಂತಿದ್ದುವು. ಸುಮಾರು ಒಂದೂವರೆ ಗಂಟೆಯ ಪಯಣದ ನಂತರ ವಿಸ್ತಾರವಾದ, ಸುನೀಲ ಜಲಶೋಭಿತ ಸರೋವರದ ಗುಂಟ ಹಾದು ರುವೆಸ್ (Reuss) ಎಂಬ ನದಿಯ ಪಕ್ಕದ ಲುಜ್ರೇನ್ ಎಂಬ ಪುಟ್ಟ ನಗರವೊಂದನ್ನು ತಲುಪಿದೆವು. ಅತ್ಯಂತ ಪ್ರಾಚೀನವೂ ಐತಿಹಾಸಿಕವೂ ಆದ ಈ ಊರು ಒಂದರ್ಥದಲ್ಲಿ ಗಡಿಯಾರಗಳ ನಗರ. ಎಲ್ಲಿ ನೋಡಿದರೂ ಹಾದಿ ಬೀದಿಗಳಲ್ಲಿ ಗಡಿಯಾರದ ಅಂಗಡಿಗಳು. ಅವುಗಳೊಳಗಿನ ಗಡಿಯಾರಗಳ ರಚನಾ ವೈವಿಧ್ಯ ಕೂಡಾ ತೀರ ಬೆರಗುಗೊಳಿಸುವ ಕಲೆಗಾರಿಕೆಯಿಂದ ಕೂಡಿದೆ. ಇಂಥ ಅನೇಕ ಗಡಿಯಾರದಂಗಡಿಗಳ ಮುಂದೆ ನಾವು ಭ್ರಮಿಸುತ್ತಾ, ಮಹಾವೇಗದಿಂದ ಧಾವಿಸುವ ರುವೆಸ್ ನದಿಯ ಮೇಲೆ ನಿರ್ಮಿಸಲಾದ ಹಳೆಯ ಕಾಲದ ಮರದ ಸೇತುವೆಯ ಮೇಲೆ ನಿಂತು ದೂರದಲ್ಲಿ ಅಲೆ ಅಲೆಯಾಗಿ ಹಬ್ಬಿಕೊಂಡ ಪರ್ವತ ಶ್ರೇಣಿಗಳನ್ನು ನೋಡುತ್ತ, ನಮಗೆ ದತ್ತವಾದ ನಲವತ್ತೈದು ನಿಮಿಷಗಳನ್ನು ಸಾರ್ಥಕಪಡಿಸಿಕೊಂಡೆವು. ಅನಂತರ  ಮುಂದಿನ ನಿಲುಗಡೆ, ಲುಜ್ರೇನ್ ಸರೋವರದ ಬಳಿ. ಇಪ್ಪತ್ತು ನಾಲ್ಕು ಮೈಲಿಗಳಷ್ಟು ಸುದೀರ್ಘವಾದ ಮತ್ತು ಎಪ್ಪತ್ತನಾಲ್ಕು ಚದರ ಮೈಲಿಗಳಷ್ಟು ವ್ಯಾಪಕವಾದ ಈ ಸರೋವರ ನೂರಾರು ದೋಣಿಗಳ ಸಂಚಾರದಿಂದ ತರಂಗಿತವಾಗಿತ್ತು. ನಾವು ಇನ್ನೂ ಪಯಣ ಮಾಡಿ, ಸ್ವಿಟ್ಜರ್‌ಲ್ಯಾಂಡಿನ ಮಧ್ಯ ಭಾಗದಲ್ಲಿ ಆಲ್ಫ್ಸ್ ಪರ್ವತದ ಎತ್ತರವಾದ ಶಿಖರಗಳಲ್ಲಿ ಒಂದಾದ ಟಟ್ಲಸ್ ಎಂಬ ಪರ್ವತವನ್ನು ಮಧ್ಯಾಹ್ನದೊಳಗಾಗಿ ತಲುಪಬೇಕಾಗಿದ್ದರಿಂದ, ಈ ಸರೋವರದ ‘ಜಲವಿಹಾರ’ಕ್ಕೆ ಹಾತೊರೆವ ಮನಸ್ಸಿಗೆ ಕಡಿವಾಣ ಹಾಕಿ, ಏಂಜಲ್‌ಬರ್ಗ್ ಎಂಬ ಊರಿನ ಕಡೆ  ಧಾವಿಸಿದೆವು. ಮುಂದಿನ ಪಯಣದ ದಾರಿ ಆಲ್ಫ್ಸ್ ಪರ್ವತದ ಏರಿಳಿತಗಳಲ್ಲಿ. ಒಂದು ಸ್ವಾರಸ್ಯವೆಂದರೆ ನಮ್ಮ ದೇಶದ ಪಶ್ಚಿಮ ಘಟ್ಟಗಳ ಅಥವಾ ಹಿಮಾಲಯ ಪರ್ವತದ ದಾರಿಗಳ ಪಯಣದಲ್ಲಿ ಎದುರಾಗುವಂತೆ, ವಕ್ರಪಥಗಳಲ್ಲಿ ಎತ್ತರಕ್ಕೆ ಏರುವ ಅಥವಾ ಕಣಿವೆಯಾಳಗಳಿಗೆ ಹಠಾತ್ತನೆ ಇಳಿಯುವ ಹಾಗೂ ಆ ಮೂಲಕ ನಿಮಿಷಕ್ಕೊಮ್ಮೆ ಬದಲಾಗುವ ದೃಶ್ಯಗಳನ್ನು ಕಾಣುವ ಅನುಭವ ಇಲ್ಲಿ ಇಂಥ ಸುಖಾಸೀನ ಬಸ್ಸುಗಳಲ್ಲಿ ಕೂತ ನಮಗೆ ಆಗುವುದಿಲ್ಲ. ಯಾಕೆಂದರೆ ಈ ಪರ್ವತಾರಣ್ಯ ಪ್ರದೇಶದ ದಾರಿಗಳ ರಚನಾ ವಿನ್ಯಾಸ ಹೇಗಿದೆಯೆಂದರೆ, ನಾವು ಎಷ್ಟು ಎತ್ತರಕ್ಕೆ ಏರಿದರೂ ಹಾಗೆ ಏರುವ ಅನುಭವ ನಮಗಾಗದಂತೆ, ಸಲೀಸಾಗಿ ಹಾಗೂ ನಿಧಾನವಾಗಿ ಏರಿರುತ್ತೇವೆ ಮತ್ತು ದಾರಿ ಉದ್ದಕ್ಕೂ ಬೆಟ್ಟ ಬೆಟ್ಟಗಳನ್ನು ಕೊರೆದು ಸುರಂಗಗಳನ್ನು ಮಾಡಿರುವುದರಿಂದ, ಬಸ್ಸು ಬೆಟ್ಟ ಹತ್ತುವ ಬದಲು, ಬೆಟ್ಟದ ಹೊಟ್ಟೆಯನ್ನೆ ತೂರಿ ಒಂದು ನಿಶ್ಚಿತವಾದ ಎತ್ತರದ ನೇರ ದಾರಿಯಲ್ಲಿ ಮುಂದುವರೆಯುವಂತೆ ಭಾಸವಾಗುತ್ತದೆ. ಹಾಗೆಯೇ ಕಣಿವೆಗಳ ದಾರಿಯೂ ಕೂಡಾ, ನೂರಾರು ಸೇತುವೆಗಳ ಕಾರಣದಿಂದ ನಿಶ್ಚಿತವಾದ ಎತ್ತರದ ಸಂಚಾರ ಭೂಮಿಕೆಯಾಗಿರುತ್ತದೆ. ಹೀಗಾಗಿ ಇಳಿಯುವ ಹಾಗೂ ಆ ಇಳಿತಗಳ ನೆಲೆಯಿಂದ ಮೇಲೇರುವ ಸ್ಥಿತಿಗೆ ಅವಕಾಶ ಬಹಳ ಕಡಿಮೆ. ಈ ಪರ್ವತದ ಪ್ರದೇಶದಲ್ಲಿ ನಾವು ಹಾದು ಹೋದ ಸುರಂಗಗಳು ಅಸಂಖ್ಯ;  ಅಷ್ಟೆ ಅಲ್ಲ ಈ ಸುರಂಗಗಳು ಅನೇಕ ಮೈಲಿಗಳಷ್ಟು ಸುದೀರ್ಘವಾಗಿವೆ. ಸುರಂಗದೊಳಗೆ ಜೋಡಿ ರಸ್ತೆಗಳಿದ್ದು, ಸದಾ ಝಗಝಗ ದೀಪದ ಬೆಳಕು ಇರುವ  ಕಾರಣದಿಂದ ಅತ್ತ ಕಡೆಯಿಂದ ಹೋಗುವ ಹಾಗೂ ಇತ್ತ ಕಡೆಯಿಂದ ಬರುವ ವಾಹನಗಳು ಯಾವ ಅಪಘಾತಗಳಿಗೂ ಒಳಗಾಗದೆ ನಿರಾತಂಕವಾಗಿ ಸಂಚರಿಸಬಹುದಾಗಿದೆ. ಇನ್ನು ಈ ಪರ್ವತಾರಣ್ಯಗಳ ಸೊಗಸನ್ನು ಅನುಭವಿಸಬೇಕೆನ್ನುವ ಸಾಹಸ- ರಸಿಕರು, ಈ ‘ರಾಜಮಾರ್ಗ’ಗಳನ್ನು ಬಿಟ್ಟು ಅವರ ಪಾಡಿಗೆ ಅವರು  ಚಾರಣಪಥಗಳನ್ನು ಹಿಡಿಯುತ್ತಾರೆ.

ಅಂತೂ ಕುಡಿದ ನೀರು ಅಲುಗದಂತೆ ನಾವು ಆಲ್ಫ್ಸ್ ಪರ್ವತದ ದಾರಿಯನ್ನು ಕ್ರಮಿಸಿ ಮಧ್ಯಾಹ್ನದ ವೇಳೆಗೆ ಟಿಟ್ಲಸ್ ಮಹಾಪರ್ವತದ ತಪ್ಪಲಿನ ಏಂಜಲ್‌ಬರ್ಗ್ ಎಂಬ ಊರನ್ನು ತಲುಪಿದೆವು.  ಬಸ್ಸಿಳಿದು ನೋಡುತ್ತೇನೆ, ಸುತ್ತ ಆದಿಶೇಷನ ಮಹಾಕಾಯದಂತೆ ಬಳಸಿಕೊಂಡ ಪರ್ವತ ಶ್ರೇಣಿಗಳು. ಆ ಪರ್ವತದ ಶಿಖರ ಹಾಗೂ ಸಾನುಗಳಲ್ಲಿ ಸಾಫಾಗಿ ಬೆಳ್ಳಗೆ ಆಚ್ಛಾದಿತವಾದ ಹಿಮ.

ನಮ್ಮ ಎಸ್ಕಾರ್ಟ್ ಅಲೆನ್‌ನ ಸೂಚನೆಯಂತೆ ಅಲ್ಲೇ ಇದ್ದ ಕೇಬಲ್ ಕಾರ್ ಸ್ಟೇಷನ್ನನ್ನು ನಾವು ಪ್ರವೇಶಿಸಿದೆವು. ಅಲೆನ್ ಪ್ರತಿಯೊಬ್ಬರ ಕೈಗೂ ಒಂದೊಂದು ಟಿಕೆಟ್‌ಅನ್ನು ಕೊಟ್ಟು. ಸಂಜೆ ನಾಲ್ಕು ಗಂಟೆಯವರೆಗೆ ನೀವು ಈ ಟ್ರಿಪ್ ಅನ್ನು ಎಂಜಾಯ್ ಮಾಡಬಹುದೆಂದು ಹೇಳಿದ. ನಾವು ದೊಡ್ಡದೊಂದು ಕ್ಯೂನಲ್ಲಿ ನಿಂತು, ಒಳಾಂಗಣವನ್ನು ಪ್ರವೇಶಿಸಿ, ಅಲ್ಲಿ ಒಂದರ ನಂತರ ಮತ್ತೊಂದರಂತೆ ಬರುವ ಕೇಬಲ್ ಕಾರ್‌ನೊಳಗೆ ಹೋಗಿ ಕೂತೆವು. ಈ ಕೇಬಲ್ ಕಾರ್ ಎನ್ನುವುದು, ನಾಲ್ಕು ಜನ ಕೂರುವಂತಹ ಒಂದು ಚೌಕಾಕೃತಿಯ ಮುಚ್ಚು ಪೆಟ್ಟಿಗೆ. ಇದರ ಮೇಲ್ ಭಾಗ ಒಂದು ಕಿರುಚಕ್ರದ ಮೂಲಕ, ಮೇಲಿಂದ ಎತ್ತರಕ್ಕೆ ದೂರದೂರದವರೆಗೆ ಅನೇಕ ಸ್ತಂಭಗಳ ಆಸರೆಯ ಮೇಲೆ ಹಾಸಿಕೊಂಡಿರುವ ಬಲವಾದ ಉಕ್ಕಿನ  ಹಗ್ಗಕ್ಕೆ ಲಗತ್ತಾಗಿರುತ್ತದೆ. ಸಮಾನಾಂತರವಾಗಿ, ಈ ನಿಲ್ದಾಣದಿಂದ, ಈ ಪರ್ವತದ ಟಿಟ್ಲಸ್ ಎಂಬ ಶಿಖರದ ಹತ್ತು  ಸಾವಿರ ಅಡಿಗಳ ಎತ್ತರದವರೆಗೂ ಹಾಸಿಕೊಂಡಿರುವ  ಈ ಹಗ್ಗದ ದಾರಿಯಲ್ಲಿ ನಾವು ಕೂತ ಈ ಚೌಕಾಕಾರದ ಕೇಬಲ್ ಕಾರುಗಳು ಏರುತ್ತಾ ಹೋಗುತ್ತವೆ; ಹಾಗೆಯೆ ಆ ಎತ್ತರದಿಂದ ಇದೇ ಬಗೆಯ ‘ಕೇಬಲ್ ಕಾರ್’ಗಳು ಇಳಿಯುತ್ತಾ ಬರುತ್ತವೆ. ಈ ಕೇಬಲ್ ಕಾರ್‌ನೊಳಗೆ ನಾವು ಪ್ರವೇಶಿಸಿದ ಏಂಜಲ್‌ಬರ್ಗ್ ಎಂಬ ಹೆಸರಿನ ಮೊದಲ ನೆಲೆ ಇರುವುದೆ ಸಮುದ್ರ ಮಟ್ಟದಿಂದ ಮೂರುಸಾವಿರ ಅಡಿಗಳ ಎತ್ತರದಲ್ಲಿ. ಕೇಬಲ್ ಕಾರ್ ನಿಧಾನಕ್ಕೆ ಏರತೊಡಗಿದಂತೆ, ಕೆಳಗಣ ಅಗಲವಾದ ಕಣಿವೆ ತಪ್ಪಲಿನ ಹಚ್ಚನೆಯ ಬಯಲಲ್ಲಿ ಹರಡಿಕೊಂಡ ಕೆಲವೇ ಮನೆಗಳ ಪುಟ್ಟ ಊರುಗಳು ಬೊಂಬೆಯ ಮನೆಯಂತೆ ತೋರುತ್ತವೆ. ಸುತ್ತಲೂ ಎತ್ತರವಾಗಿ ಹಬ್ಬಿಕೊಂಡ ಬೆಟ್ಟಗಳ ನಡುವಣ ಆ ಮೌನದಲ್ಲಿ  ಕೆಳಗೆ ಹಚ್ಚ ಹಸುರ ಬಯಲಲ್ಲಿ ಮೇಯುತ್ತಿರುವ ಹಸುಗಳ ಕೊರಳ ಗಂಟೆಯ ಧ್ವನಿ ಕೇಳಿಸುತ್ತಿತ್ತು. ಹಗ್ಗದ ದಾರಿಯಗುಂಟ ಕೇಬಲ್ ಕಾರ್ ಮೇಲೇರಿದಂತೆ, ಹಸುರು ಕಣಿವೆ ಕಣ್ಮರೆಯಾಗಿ, ಪದರ ಪದರಗಳಾಗಿ ಹಾಸಿಕೊಂಡ ಪರ್ವತದ ಏರುವೆಗಳು ಹಾಗೂ ಆ ಪರ್ವತದ ರೂಕ್ಷ ಶಿಲಾವಿನ್ಯಾಸಗಳೂ ತೆರೆಯತೊಡಗುತ್ತವೆ. ಹಾಗೆಯೇ ಕ್ರಮ ಕ್ರಮೇಣ ಮೇಲೇರಿದಂತೆ, ಕೇಬಲ್ ಕಾರ್ ಐದು ಸಾವಿರ ಅಡಿಗಳೆತ್ತರದ ನಿಲುಮನೆಯೊಂದರಲ್ಲಿ ನಿಲ್ಲುತ್ತದೆ. ನಿಲ್ದಾಣದ ಹೆಸರು ಟ್ರುಬಸ್ಕೀ. ಇಲ್ಲಿ ನಾವು ಇಳಿದು ಮತ್ತೊಂದು ಚೌಕಾಕಾರದ ಸುಮಾರು ಇಪ್ಪತ್ತೈದು ಜನ ನಿಂತುಕೊಳ್ಳ ಬಹುದಾದ ಇನ್ನೊಂದು ಕೇಬಲ್ ಕಾರ್‌ಗೆ ಬದಲಾಯಿಸಬೇಕು. ಈ ಕೇಬಲ್ ಕಾರ್ ಮತ್ತೆ ಹತ್ತು ಸಾವಿರ ಅಡಿ ಎತ್ತರದ ಟಿಟ್ಲಸ್ ಎಂಬ ಶಿಖರದ ನಿಲುಮನೆಯನ್ನು ತಲುಪುವವರೆಗೆ, ಏಕಕಾಲಕ್ಕೆ ಚಲಿಸುತ್ತ ಹಾಗೂ ತಿರುಗುತ್ತ, ಮುಂದುವರಿಯುವಾಗ, ಸಂಪೂರ್ಣ ಗಾಜಿನ ಹೊದಿಕೆಯ ದೊಡ್ಡ ಪಂಜರದಂಥ ಈ ಕೇಬಲ್ ಕಾರ್‌ನೊಳಗೆ ನಿಂತವರ ಕಣ್ಣಿಗೆ ಕಾಣುವ ದೃಶ್ಯ ವೈವಿಧ್ಯ ಹಾಗೂ ವೈಭವ ಅಪೂರ್ವವಾದದ್ದು, ಅದು ನಿಂತ ಒಡನೆ, ತಾನಾಗಿ ತೆರೆದುಕೊಂಡ ಬಾಗಿಲ ಮೂಲಕ ಇಳಿದು ಮತ್ತೆ ಮರದ ಮೆಟ್ಟಿಲುಗಳನ್ನೇರಿ ಬಂದರೆ, ಅಲ್ಲಿ ಕುಳಿತು ಸುತ್ತಿನ ದೃಶ್ಯಗಳನ್ನು ಕಾಣಬಹುದಾದ ಪಾರದರ್ಶಕ ಗಾಜುಗಳ ವೀಕ್ಷಣಾಮಂದಿರ, ಅದರ ಬದಿಗೊಂದು ವಿವಿಧ ವಸ್ತುಗಳನ್ನುಳ್ಳ ಅಂಗಡಿ, ಒಂದು ರೆಸ್ಟೋರಾಂಟ್ ಇವೆ. ಅದನ್ನು ದಾಟಿ ಮೇಲಕ್ಕೆ ಬಂದರೆ ಕಟಕಟೆಯನ್ನುಳ್ಳ ಒಂದು ತೆರೆದ ಅಂಗಳ. ಅಂಗಳದಗಲಕ್ಕೂ ಹಾಕಿದ ಮರದ ಬೆಂಚುಗಳು. ಅಲ್ಲಿ ಕೂತು ಅಥವಾ ನಿಂತು ಸುತ್ತ ನಾಲ್ಕೂ ದಿಕ್ಕಿಗೆ ನೋಡಿದರೆ, ಮೇರೆಯರಿಯದಂತೆ ಹಬ್ಬಿಕೊಂಡ ಪರ್ವತಮಂಡಲಗಳ ಹಾಗೂ ಶಿಖರಗಳ ನೋಟ ದಂಗುಬಡಿಸುತ್ತದೆ. ಈ ತೆರೆದ ಅಂಗಳದ ಎದುರಿಗೆ, ಹಾಸಿಕೊಂಡ ಬೆಳ್ಳನೆಯ ಹಿಮದ ‘ಗ್ಲೇಸಿಯರ್’ ಅನ್ನು ದಾಟಿಕೊಂಡು ಮುನ್ನಡೆದರೆ ಪರ್ವತಾಗ್ರದಲ್ಲಿದೆ ಒಂದು ವೀಕ್ಷಣಾ ಗೋಪುರ. ಈ ಗೋಪುರದ ಮೇಲೆ ನಿಂತು ನೋಡಿದರೆ ಮೈಲಿ ಮೈಲಿಗಳಗಲಕ್ಕೆ, ನಿಶ್ಚಲವಾದ ಶ್ವೇತ ಶುಭ್ರವಾದ ಮಹಾಕಾಯದ ಪರ್ವತದ ಇಳಿಜಾರುಗಳು, ಅವುಗಳ ನಡುವೆ ಮುಗಿಲೆಡೆಗೆ ವಿವಿಧಾಕೃತಿಗಳಲ್ಲಿ ಚಾಚಿಕೊಂಡ ಕೃಷ್ಣವರ್ಣದ ಬೃಹತ್ ಶಿಲಾಶಿಖರಗಳೂ, ನಡುಹಗಲಿನ ಬಿಸಿಲಿನಲ್ಲಿ ಥಳ ಥಳ ಹೊಳೆಯುತ್ತವೆ. ಅಷ್ಟೇ ಅಲ್ಲ. ಆಲ್ಫ್ಸ್ ಪರ್ವತದ ಇನ್ನೆಷ್ಟೋ ಶಿಖರಗಳನ್ನು ಅಲ್ಲಿ ಇರಿಸಿರುವ ದುರ್ಬೀನಿನ ಮೂಲಕ ನೋಡಬಹುದು. ಎತ್ತರ ಹಾಗೂ ಗಾತ್ರ ವಿಸ್ತಾರಗಳಲ್ಲಿ ಹಿಮಾಲಯಕ್ಕೆ ಸೋದರ ಸಂಬಂಧಿಯಂತೆ ತೋರುವ ಈ ಆಲ್ಫ್ಸ್ ಪರ್ವತದಲ್ಲಿರುವ ಶಿಖರಗಳಲ್ಲಿ ‘ಮ್ಯಾಟರ್ ಹಾರನ್’ ಎಂಬುದೆ ಅತ್ಯಂತ ಎತ್ತರವಾದುದೆಂದು ಹೇಳಲಾಗಿದೆ. ಈ ಶಿಖರದೆತ್ತರ ೧೪,೭೦೫ ಅಡಿಗಳು. ವಾಸ್ತವವಾಗಿ ನಾವು ಕೇಬಲ್ ಕಾರ್ ಮೂಲಕ ತಲುಪಿದ, ಹತ್ತು ಸಾವಿರ ಅಡಿಗಳೆತ್ತರದ ಟಿಟ್ಲಸ್ ಪರ್ವತ, ಸ್ವಿಟ್ಜರ್‌ಲ್ಯಾಂಡಿನ ಮಧ್ಯಭಾಗದಲ್ಲಿರುವಂಥದ್ದು. ಈ ಹಿಮಪರ್ವತದ ವಿಸ್ತಾರಗಳಲ್ಲಿ ಪ್ರವಾಸಿಗಳಿಗಾಗಿ ಬಹು ಬಗೆಯ ವಾಹನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಅದರಲ್ಲೂ ಮೌಂಟ್ ರಿಗಿ ಎಂಬಲ್ಲಿಗೆ, ಐದು ಸಾವಿರದ ಒಂಬೈನೂರು ಅಡಿಗಳೆತ್ತರದ ನೆಲೆಗೆ ಕೈಕೊಳ್ಳುವ ರೈಲು ಪ್ರಯಾಣವಂತೂ ಒಂದು ರೋಮಾಂಚಕರವಾದ ಅನುಭವವೆಂದು ಹೇಳಲಾಗಿದೆ.

ಟಿಟ್ಲಸ್ ಎಂಬ ಪರ್ವತಾಗ್ರದಲ್ಲಿ ಸಾಕಷ್ಟು ಹೊತ್ತು ನಿಂತು, ಕೂತು, ಸಂಚರಿಸಿ ಆ ಮಹಾಶ್ವೇತಾ ಪ್ರಪಂಚದ ಭವ್ಯತೆಯನ್ನು ಆಸ್ವಾದಿಸಿದೆವು. ನಮ್ಮ ಸುತ್ತ ಪರ್ವತಗಳನ್ನು ತಬ್ಬಿಕೊಂಡು ಹಬ್ಬಿಕೊಂಡು, ನುಣ್ಣಗೆ ಹಾಗೂ ನಯವಾಗಿ ಸಕ್ಕರೆಯ ಹರಳಿನಂತೆ ಥಳಥಳಿಸುವ ಆ ಹಿಮದ ನಿಶ್ಯಬ್ದ ಹಾಗೂ ನಿಶ್ಚಲವಾದ ಸೌಂದರ್ಯದ ಎದುರು, ನಾವು, ನಮ್ಮಂಥ ಎಷ್ಟೋ ಜನದ ಚಲನೆ, ನಾವಾಡುವ ಮಾತು-ಕತೆ, ಈ ಎಲ್ಲವೂ ಒಂದು ರೀತಿ ಯಃಕಶ್ಚಿತ್ ಎಂಬಂತೆ ಭಾಸವಾಗತೊಡಗಿತ್ತು. ಧೀರವಾದ, ಗಂಭೀರವಾದ, ಅಪ್ರತಿಹತವಾದ ನಿರ್ಲಕ್ಷ್ಯವೊಂದು ಬೃಹದಾಕಾರವಾಗಿ ಮೂರ್ತೀಭವಿಸಿ ಬೆಳ್ಳಗೆ ಗಹಗಹಿಸುವಂತಿದ್ದ ಆ ಎತ್ತರಗಳಲ್ಲಿ, ಮತ್ತೆ ಕೇಬಲ್ ಕಾರ್‌ಗಳನ್ನೇರಿ ಹಗ್ಗದ ದಾರಿಗುಂಟ ಇಳಿದು, ನಮ್ಮ ಪರಿಚಿತ ಪ್ರಪಂಚದ ತಲಾತಲದ ನೆಲೆಯನ್ನು ತಲುಪಿ ಸಮಾಧಾನದ ನಿಟ್ಟುಸಿರಿಟ್ಟೆವು.

ಮತ್ತೆ ಬಸ್ಸನ್ನೇರಿ ಹೊರಟಾಗ ಎಷ್ಟೋ ಹೊತ್ತು ಯಾರೂ ಮಾತನಾಡಲಿಲ್ಲ. ಮೇಲೆ ನೋಡಲು ಕೇವಲ ದೈಹಿಕ ಆಯಾಸದ ಮೌನವೋ ಎಂಬ ಭ್ರಮೆಯನ್ನುಂಟು ಮಾಡುತ್ತಿದ್ದ ಆ ‘ಮಾತಿಲ್ಲದ’ ಒಂದು ಸ್ಥಿತಿಯ ಹಿಂದೆ, ಅದುವರೆಗೂ ಚಿರಪರಿಚಿತ ಜಗತ್ತಿನ ಅನುಭವಗಳು ಎಷ್ಟೊಂದು ಅರ್ಥಹೀನ ಎಂಬುದನ್ನು, ಅಪ್ರಜ್ಞಾಪೂರ್ವಕವಾಗಿ ತತ್ಕಾಲಕ್ಕಾದರೂ ಅಂತರ್ಮನಕ್ಕೆ ಅರಿವು ಮಾಡಿಕೊಟ್ಟ, ಆ ‘ಎತ್ತರ’ದ ನಿಸರ್ಗಾನುಭೂತಿಯ ಪರಿಣಾಮ, ಅಗೋಚರವಾದ ರೀತಿಯಲ್ಲಿ ಇತ್ತೆಂದು ತೋರುತ್ತದೆ. ಆ ಪರ್ವತಾರಣ್ಯಗಳ ದಾರಿಯಲ್ಲಿ ಅತ್ತ ಇತ್ತ ಗೋಡೆ ಗಟ್ಟಿದಂತೆ ಆಗಾಗ ಎದ್ದು ನಿಲ್ಲುತ್ತಿದ್ದ ಬೆಟ್ಟಗಳನ್ನೂ, ಯಾವುದೋ ರಹಸ್ಯದೊಳಹೊಕ್ಕು ಹೊರಬಂದಂತೆನಿಸುವ ಸುರಂಗಗಳನ್ನೂ, ಥಟ್ಟನೆ ಅಗಲಕ್ಕೆ ತೆರೆದುಕೊಳ್ಳುವ ಹಚ್ಚಹಸುರಿನ ಏರಿಳಿತಗಳನ್ನೂ, ಬಿಡುಗಡೆಗೊಂಡ ಉಲ್ಲಾಸಗಳಂತೆ ಹರಿದೋಡುವ ಹಳ್ಳ ಹೊಳೆಗಳನ್ನೂ, ನೋಡುತ್ತ ನೊಡುತ್ತ ಸಂಜೆ ಐದು ಗಂಟೆಯ ಹೊತ್ತಿಗೆ ಲುಗಾನೊ ಎಂಬ ತುಂಬ ಸುಂದರವಾದ ಊರೊಂದನ್ನು ಪ್ರವೇಶಿಸಿದೆವು.

ಲುಗಾನೋ, ಸ್ವಿಟ್ಜರ್‌ಲ್ಯಾಂಡಿನ ಅತ್ಯಂತ ಸುಂದರವಾದ ಸರೋವರ ನಗರಗಳಲ್ಲಿ ಒಂದು. ಈ ಸರೋವರದ ಎರಡೂ ಬದಿಗೆ ರಕ್ಷಕರಂತೆ ನಿಂತ ಎರಡು ಪರ್ವತಗಳಿವೆ. ಆ ಪರ್ವತಗಳ ಮೇಲಿನಿಂದ ಸರೋವರದ ಅಂಚಿನವರೆಗೂ ವಾಸದ ಮನೆಗಳೂ, ವಿಹಾರ ಗೃಹಗಳೂ ಹಂತಹಂತವಾಗಿ ಕಾಣಿಸುತ್ತವೆ. ಸರೋವರದ ಈಚೆ ದಡದಲ್ಲಿ ಲುಗಾನೋ ಎಂಬ ಸೊಗಸಾದ ನಗರ. ನಗರಕ್ಕೂ ಸರೋವರಕ್ಕೂ ನಡುವೆ ಅರ್ಧಚಂದ್ರಾಕೃತಿಯ ದಾರಿಯ ತುಂಬ ಬಗೆ ಬಗೆಯ ಮರಗಳು. ಸರೋವರದ ಬದಿಗೆ ಕೂತುಕೊಳ್ಳಲು ಪೀಠಗಳು. ಸರೋವರದ ಅಂಚಿನಲ್ಲೆ ವಿಶ್ರಮಿಸುತ್ತಿರುವ ದೋಣಿಗಳು.

ಈ ಸುಂದರವಾದ ನಗರದ ಬೀದಿಗಳಲ್ಲಿ ಸಂಜೆ ಅಡ್ಡಾಡಿ, ನಮ್ಮ ಪ್ರವಾಸಿ ಕಂಪನಿಯವರು ಒದಗಿಸಿದ ಸೊಗಸಾದ ಹೋಟಲಿನ ಸೌಲಭ್ಯಗಳಲ್ಲಿ ಇರುಳನ್ನು ಕಳೆದು, ಮರುದಿನ ಮುಂಜಾನೆ, ಲುಗಾನೋ ಪರಿಸರದ ಪರ್ವತಾರಣ್ಯ ಸೀಮೆಯನ್ನು  ಹಾದು ವೆನಿಸ್ ಕಡೆಗೆ ಹೊರಟೆವು. ಲುಗಾನೋದಿಂದ ವೆನಿಸ್‌ಗೆ ನಾಲ್ಕು ಗಂಟೆಗಳ ದಾರಿ. ಬೆಟ್ಟಗಳ ಬಳಸುದಾರಿಗಳನ್ನು ಹಿಂದೆ ಹಾಕಿ, ಸ್ವಿಟ್ಜರ್‌ಲ್ಯಾಂಡಿನ ಗಡಿಯನ್ನು ದಾಟಿ, ಇಟಲಿಯನ್ನು ಪ್ರವೇಶಿಸುವಾಗ ಹನ್ನೊಂದೂವರೆ. ಪರ್ವತದ ದಟ್ಟ ವನಸಿರಿಯಿಂದ, ದ್ರಾಕ್ಷಿ ಬೆಳೆಯುವ ತೋಟಗಳ ಪರಿಸರವನ್ನೂ, ಕುರುಚಲು ಗಿಡಗಳ ಸಣ್ಣಪುಟ್ಟ ಗುಡ್ಡಗಳನ್ನೂ ಹಾದು, ಮೆಡಿಟರೇನಿಯನ್ ಕಡಲತೀರದ ವೆನಿಸ್ ಕಡೆಗೆ ಬಸ್ಸು ಧಾವಿಸುತ್ತಿದ್ದಂತೆ, ನಮ್ಮ ನಿರ್ವಾಹಕನೂ, ಮಾರ್ಗದರ್ಶಿಯೂ ಆದ ಅಲೆನ್, ವೆನಿಸ್ ನಗರದ ವಿಶೇಷತೆಗಳನ್ನೂ, ಷೇಕ್ಸ್‌ಪಿಯರನ ಸುಪ್ರಸಿದ್ಧನಾಟಕಗಳಾದ ಮರ್ಚೆಂಟ್ ಆಫ್ ವೆನಿಸ್ ಮತ್ತು ರೋಮಿಯೋ ಜೂಲಿಯಟ್  ನಾಟಕಗಳ ಹಿನ್ನೆಲೆ ಈ ವೆನಿಸ್ಸೇ ಆಗಿದೆಯೆಂಬುದನ್ನೂ ಕುರಿತು ನಿರರ್ಗಳವಾಗಿ ಮಾತನಾಡುತ್ತಿದ್ದನು. ಹಾಗೆಯೇ ನಾವೀಗ ಇಟಲಿ ದೇಶದ ಪರಿಸರದಲ್ಲಿರುವುದರಿಂದ ಪ್ರವಾಸಿಗಳು ತಮ್ಮ ಜೇಬುಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂಬುದನ್ನು, ಅನೇಕ ಪ್ರವಾಸಿಗಳಿಗೆ ಆಗಿರುವ ಅನುಭವದ ಹಿನ್ನೆಲೆಯಲ್ಲಿ ವಿವರಿಸಿದ. ಕೊಂಚ ಹೊತ್ತಿನಲ್ಲೆ ನಾವು ವೆನಿಸ್ ಅನ್ನು ಪ್ರವೇಶಿಸುವ ‘ಗ್ರ್ಯಾಂಡ್ ಕೆನಾಲ್’ ಎಂಬ ಕಡೆ ಬಸ್ಸಿಳಿದು, ಕಿಕ್ಕಿರಿದ ಬಹು ಸಂಖ್ಯೆಯ ದೋಣಿಯಲ್ಲೊಂದನ್ನೇರಿ,  ಆ ಕಡಲ್ಗಾಲುವೆಯ ಮೇಲೆ ಹೊರಟೆವು. ವಾಸ್ತವವಾಗಿ ಈ ಗ್ರ್ಯಾಂಡ್ ಕೆನಾಲ್ ಅನ್ನುವುದು ವೆನಿಸ್ ನಗರದ ಬಹು ಮುಖ್ಯವಾದ ಬೀದಿಗಳಲ್ಲಿ ಒಂದು. ಅಂದರೆ ಈ ನಗರ ಇರುವುದೇ ಹರಹಿಕೊಂಡ ಕಡಲ ನೀರಿನ ಮೇಲೆ. ಹೀಗಾಗಿ ಬಸ್ಸು – ಕಾರು ಇತ್ಯಾದಿಗಳು  ಸಂಚರಿಸಲು ಸಾಧ್ಯವಲ್ಲದ ಕಾಲುವೆಗಳೇ ಬೀದಿಗಳು. ಇಂಥ ಒಂದುನೂರಾ ಐವತ್ತಕ್ಕೂ ಹೆಚ್ಚಿನ ಬೀದಿಗಳಿವೆ ಇಲ್ಲಿ. ಇವುಗಳ ಮೇಲೆ ನಿರ್ಮಿತಿಯಾದ ನಾಲ್ಕೂನೂರು ಸೇತುವೆಗಳಿವೆ. ಬಸ್ಸು – ಕಾರು – ಸೈಕಲ್ ಇತ್ಯಾದಿ ಯಾವ ವಾಹನಗಳೂ ಇಲ್ಲದ ನಗರ ಇದೊಂದೇ. ಈ ನಗರದಲ್ಲಿ ಸಂಚರಿಸಬಹುದಾದದ್ದು ಎರಡೇ ರೀತಿಯಲ್ಲಿ. ಪಾದಚಾರಿಗಳಾಗಿ ಸುತ್ತಾಡಬಹುದು, ಇಲ್ಲವೆ ದೋಣಿಗಳಲ್ಲಿ ಕೂತು ಕಾಲುವೆ ದಾರಿಗಳಲ್ಲಿ ಸಂಚಾರ ಮಾಡಬಹುದು. ನಾವು ಕೂತ ದೋಣಿ ಗ್ರ್ಯಾಂಡ್ ಕೆನಾಲ್ ಎಂದು ಕರೆಯಲಾದ, ಕಡಲ್ದಾರಿಯ ಮೇಲೆ  ಏರಿಳಿಯುತ್ತ ಸಾಗಿತ್ತು. ನಡುನಡುವೆ ಕಡಲ ನೀರ ಮಧ್ಯೆ ನಿಂತ ಅನೇಕ ಸುಂದರವಾದ ಕಟ್ಟಡಗಳು ಗೋಚರಿಸುತ್ತಿದ್ದವು. ಒಂದರ್ಧ ಗಂಟೆಯ ನಂತರ ಆ ನಗರದ ಸೇಂಟ್ ಮಾರ್ಕ್ಸ್ ಚೌಕಕ್ಕೆ ಬಂದು ಇಳಿದೆವು.

ವೆನಿಸ್ ನಗರ ಅತಿ ಪ್ರಾಚೀನಕಾಲದಿಂದಲೂ ಕವಿಗಳಿಗೆ ಹಾಗೂ ಕಲಾವಿದರಿಗೆ ಸ್ಫೂರ್ತಿಯ ನೆಲೆಯಾಗಿದೆ. ಗೊಂಡಾಲಾ ಎಂದು ಕರೆಯಲಾಗುವ ದೋಣಿಯಾಕಾರದ  ತೇಲು ವಾಹನದಲ್ಲಿ ಕೂತು ಪಯಣ ಮಾಡಿದರೆ ಈ ನಗರದ ಅದ್ಭುತವಾದ ವಾಸ್ತುಸೌಂದರ್ಯದ ಪರಿಚಯವನ್ನು ಮಾಡಿಕೊಳ್ಳಬಹುದು. ಎತ್ತರವಾದ ಕಟ್ಟಡಗಳು, ಗೋಪುರಗಳು, ಮತ್ತಿತರ ರಚನಾವಿನ್ಯಾಸಗಳು ಸದಾ ನೀರಿನಲ್ಲಿ ಬಿಂಬಿಸುವ ಹಾಗೂ ಸ್ಪಂದಿಸುವ ದೃಶ್ಯ ಅವರ್ಣನೀಯ. ಈ ನಗರ ಒಂದು ಕಾಲಕ್ಕೆ ಜಗತ್  ಪ್ರಸಿದ್ಧ ವ್ಯಾಪಾರ ಕೇಂದ್ರವೂ ಆಗಿತ್ತೆಂದು  ಹೇಳಲಾಗಿದೆ. ಮಹಾಕವಿ ಗಯಟೆ, ಈ ನಗರವನ್ನು ‘ಉದಯಾಸ್ತಮಾನಗಳ ನಾಡುಗಳ ಮಾರುಕಟ್ಟೆ’ ಎಂದು ವರ್ಣಿಸಿದ್ದಾನೆ. ಮಹಾಪ್ರವಾಸಿಯಾದ ಮಾರ್ಕೋಪೋಲೋ, ಪೂರ್ವದೇಶಗಳ ತನ್ನ ಕಡಲ ಪಯಣವನ್ನು ಮುಗಿಸಿ ಹಿಂದಿರುಗುವ ಹೊತ್ತಿನಲ್ಲಿ ಒಂದು ಮುಂಜಾನೆಯ ಹೊಂಬೆಳಕಿನಲ್ಲಿ ಈ ನಗರದ ಚೆಲುವನ್ನು ವೀಕ್ಷಿಸಿ ‘ವೆನಿಸ್ ಒಂದು ಮಾಯಾನಗರಿ’ ಎಂದು ಉದ್ಗಾರವೆತ್ತಿದನಂತೆ.

ನಾವು ದೋಣಿಯಿಂದಿಳಿದು, ದಡದ ಉದ್ದಕ್ಕೂ ಕಿಕ್ಕಿರಿದ ಉಪಹಾರಗೃಹ ಹಾಗೂ ಅಂಗಡಿಗಳ ದಾರಿಯ ಮೂಲಕ ಸೇಂಟ್ ಮಾರ್ಕ್ಸ್ ಚೌಕಕ್ಕೆ ಬಂದೆವು. ಆ ಬೃಹದ್ ವಿಸ್ತಾರದ ಚೌಕದಲ್ಲಿ ಸಾವಿರಾರು ಜನ. ಆ ಜನರ ನಡುವೆ ಅಸಂಖ್ಯ ಪಾರಿವಾಳಗಳು. ಅತ್ಯಂತ ನಿರ್ಭಯವಾಗಿ ಹಾರಾಡುತ್ತ, ಪ್ರವಾಸಿಗಳ ಭುಜದ ಮೇಲೆ ಹಾಗೂ ತಲೆಯ ಮೇಲೇ ಬಂದು ಕೂತುಕೊಳ್ಳುವ ಪಾರಿವಾಳಗಳು. ಆ ಚೌಕದ ಬದಿಗೆ ಅತ್ಯಂತ ಎತ್ತರವಾದ ಗಡಿಯಾರ ಗೋಪುರವನ್ನುಳ್ಳ ಕಂಭ. ಒಂದು ಕಡೆಗೆ ಸಂತ ಮಾರ್ಕನ ಅತಿದೊಡ್ಡ ಚರ್ಚ್. ಚರ್ಚಿನ ಒಳಗೆ ಪ್ರಾಚೀನ ಕಾಲದ ತೈಲಚಿತ್ರಗಳು. ಈ ಚಿತ್ರಗಳ ವೀಕ್ಷಣೆಗೆ ದೊಡ್ಡದೊಂದು ಕ್ಯೂ. ಈ ಚರ್ಚನ್ನು ಒಳಗೊಂಡಂತೆ ಈ ಚೌಕದ ನಾಲ್ಕೂ ದಿಕ್ಕಿಗೂ ಎತ್ತರವಾದ, ಸೊಗಸಾದ  ಶಿಲ್ಪವೈವಿಧ್ಯವನ್ನು ಪ್ರಕಟಿಸುವ ಕಟ್ಟಡಗಳ ಸಾಲು. ಕೆಳಗಿನ ಸಾಲು ಅಂಗಡಿಗಳನ್ನೂ, ಉಪಹಾರ ಗೃಹಗಳನ್ನೂ ಮತ್ತು ಸಣ್ಣ ಪುಟ್ಟ ಕಛೇರಿಗಳನ್ನೂ ಒಳಗೊಂಡಿದೆ. ಒಂದೊಂದು  ಉಪಹಾರ ಗೃಹದ ಎದುರಿನ ಅಂಗಳದಲ್ಲಿ ಕುರ್ಚಿ- ಟೇಬಲ್‌ಗಳು. ಆ ನಡುವೆ ವೇದಿಕೆಯೊಂದರ ಮೇಲೆ ಬಗೆ ಬಗೆಯ ವಾದ್ಯಗಳನ್ನು ನುಡಿಸುವ ವಾದ್ಯಗಾರರು. ಇಂಥ ವಾದ್ಯಗಾರರ ಹಲವು ತಂಡಗಳ ಸುಸ್ವರಗಳಿಂದ ನಾದಮಯವಾದ ಈ ಚೌಕದ ತುಂಬ ಗಿಜಿಗುಟ್ಟುವ ಜನಸಂದಣಿ. ನಾವು ನಮ್ಮ ಬಸ್ಸಿನ ಸಹಪ್ರಯಾಣಿಕರು ವಿಸ್ತಾರವಾದ ಈ ಚೌಕವನ್ನು ಹೊಕ್ಕ ಒಡನೆಯೇ ಆ ನೂಕುನುಗ್ಗಲಿನಲ್ಲಿ ಚೆಲ್ಲಾಪಿಲ್ಲಿಯಾಗಿ, ನಾವೆಲ್ಲ ಎತ್ತೆತ್ತಲೋ ಹೋಗುವಂತಾಯಿತು. ಈ ಕಾರಣದಿಂದಲೇ ಇರಬೇಕು ನಮ್ಮ ಮಾರ್ಗದರ್ಶಿ ಅಲೆನ್  ನಮಗೆ ಮೊದಲೇ ಹೇಳಿದ್ದ : ‘ಸಾಧ್ಯವಾದಷ್ಟೂ ನಿಮ್ಮ ನಿಮ್ಮ ಜತೆಯವರೊಡನೆ ಸಂಚರಿಸಿ; ಒಂದು ವೇಳೆ ನೀವು ಬೇರೆ ಬೇರೆಯಾದರೆ ಗಾಬರಿಯಾಗಬೇಕಾಗಿಲ್ಲ. ನಿಮ್ಮ ಪಾಡಿಗೆ ನೀವು ಸುತ್ತಾಡಿಕೊಂಡು, ಸಂಜೆ ನಾಲ್ಕೂವರೆಯ ವೇಳೆಗೆ ಯಾರು ಎಲ್ಲಿದ್ದರೂ, ಈ ಚೌಕದ ಬಲಬದಿಯ ಗಡಿಯಾರ ಸ್ತಂಭದ ಹತ್ತಿರ ಬಂದು ನಿಲ್ಲಬೇಕು’ – ಎಂದು. ಹೀಗಾಗಿ ನಾನು, ಬಂಗಾಳಿಯ ರಾಯ್ ದಂಪತಿಗಳೂ ಸಾಧ್ಯವಾದಷ್ಟೂ ಜತೆ ಜತೆಗೆ ಈ ಜನ ಜಂಗುಳಿಯ ನಡುವೆ ಸಂಚರಿಸಿದೆವು. ಸಣ್ಣ ಬ್ಯಾಂಕ್ ಒಂದನ್ನು ಪತ್ತೆ ಮಾಡಿ ನಮ್ಮ ಡಾಲರ್ ಅನ್ನು ಇಟಲಿಯ ‘ಲಿರಾ’ಗಳಿಗೆ ವಿನಿಮಯ ಮಾಡಿಕೊಂಡೆವು. ಇಲ್ಲಿ ಪ್ರತಿಯೊಂದು ವಸ್ತುವಿಗೂ ಇಟ್ಟ ಬೆಲೆ ಸಾವಿರದ ಮೂಲಮಾನದಲ್ಲೇ. ಒಂದು ಐಸ್ ಕ್ರೀಂಗೆ ಮೂರು ಸಾವಿರ ಲಿರಾ; ಒಂದು ಕಪ್ ಟೀಗೆ ನಾಲ್ಕು ಸಾವಿರ ಲಿರಾ; ಬಾತ್ ರೂಮ್ ಹುಡುಕಿಕೊಂಡು ಹೋಗಿ ಉಚ್ಚೆ ಹೊಯ್ಯುವುದಕ್ಕೆ ಐನೂರು ಲಿರಾ – ಹೀಗೆ. ನಾನು ಸಂಜೆಯ ತನಕ ಈ ಚೌಕದ ವಾಸ್ತುವೈಭವವನ್ನೂ, ಬಹುಬಗೆಯ ವಸ್ತುಗಳನ್ನು ಹೆಗಲಿಗೆ ತೂಗು ಹಾಕಿಕೊಂಡು ಚೌಕಾಶೀ ವ್ಯಾಪಾರದಲ್ಲಿ ತೊಡಗಿದ ‘ಕಪ್ಪು ಜನ’ರನ್ನೂ, ಚೌಕದ ಉದ್ದಗಲಕ್ಕೂ ಕಿಕ್ಕಿರಿದ ವಿವಿಧ ದೇಶಗಳ ಪ್ರವಾಸಿಗಳನ್ನೂ, ಎದುರಿನ ಕಡಲದಾರಿಯ ಮೇಲೆ ಬರುವ ಹೋಗುವ ಲೆಕ್ಕವಿಲ್ಲದಷ್ಟು ಸಂಖ್ಯೆಯ, ದೋಣಿಗಳ ಸಂಚಾರವನ್ನೂ, ಮನೆ ಮನೆಗಳ ನಡುವಣ ನೀರದಾರಿಗಳಲ್ಲಿ ವಿಹರಿಸುವ ರಸಿಕರನ್ನೂ ನೋಡುತ್ತ ನಾಲ್ಕೂವರೆಯ ಹೊತ್ತಿಗೆ ಚೌಕದ ಒಂದು ಪಕ್ಕದಲ್ಲಿ ನಿಂತ ಗಡಿಯಾರ  ಸ್ತಂಭಶಿಲ್ಪದ ಬುಡವನ್ನು ಸೇರಿದೆವು. ಸ್ವಲ್ಪ ಹೊತ್ತಿನಲ್ಲಿಯೇ ಒಬ್ಬೊಬ್ಬರಾಗಿ ನಮ್ಮ ಸಹ ಪ್ರಯಾಣಿಕರು ಬಂದು ಸೇರಿದರು. ಮತ್ತೆ ಅಲೆನ್ ನಮ್ಮನ್ನೆಲ್ಲಾ ದೊಡ್ಡ ಮುಚ್ಚುದೋಣಿಯೊಂದರಲ್ಲಿ ಕೂರಿಸಿಕೊಂಡು, ಗ್ರ್ಯಾಂಡ್ ಕೆನಾಲ್ ಅನ್ನು ದಾಟಿಸಿ, ಬಸ್ಸಿನಲ್ಲಿ ಅಂದು ನಮಗೆ ನಿಗದಿತವಾದ ಹೋಟಲ್‌ಗೆ ಕರೆದುಕೊಂಡು ಹೋದನು.

ನಾವು ಮರುದಿನ ಮುಂಜಾನೆ ಹೊರಟದ್ದು ವೆನಿಸ್ ನಗರದಿಂದ ರೋಂ ನಗರದ ಕಡೆಗೆ . ಸುಮಾರು ಏಳೆಂಟು ಗಂಟೆಗಳ ಪಯಣ ಅದು. ವೆನಿಸ್‌ದಿಂದ ಹೊರಟಾಗ ಎರಡೂ ಕಡೆ ಬಟಾಬಯಲು; ಅಲ್ಲಲ್ಲಿ ದ್ವೀಪಗಳಂತೆ ಹೆಪ್ಪುಗಟ್ಟಿದ ಹಸಿರು. ನಮ್ಮ ನಿರ್ವಾಹಕ ಅಲೆನ್, ತನ್ನ ಪ್ರವಾಸಿಗಳನ್ನು ಸಂತೋಷಪಡಿಸಲು, ಕೆಲವು ಜೋಕ್ಸ್‌ಗಳ ರೆಕಾರ್ಡನ್ನು ಹಾಕಿದ್ದ. ಆ ಜೋಕ್‌ಗಳು ಸ್ಫೋಟಿಸುತ್ತಿದ್ದ ಹಾಸ್ಯಕ್ಕೆ ಹೋ ಎಂದು ಕೆಲವರು ನಗುತ್ತಿದ್ದರು. ಬ್ರಿಟಿಷ್ ಮಾದರಿಯ ಉಚ್ಚಾರದಿಂದಾಗಿ, ಅದರ ಅರ್ಥವನ್ನು ಸರಿಯಾಗಿ ಗ್ರಹಿಸಲಾಗದ ನಮ್ಮಂಥವರು ಸುಮ್ಮನೆ ಹೊರಗಿನ ದೃಶ್ಯಗಳನ್ನು ವೀಕ್ಷಿಸುತ್ತಿದ್ದೆವು. ಅಲೆನ್ ನಮ್ಮ ಅಷ್ಟೂ ದಿನಗಳ ಪಯಣದಲ್ಲಿ ಸದಾ ಬಸ್ಸೊಳಗಿನ ಪ್ರಯಾಣಿಕರನ್ನು ಲವಲವಿಕೆಯಿಂದ ಇಡಲು ಪ್ರಯತ್ನಿಸುತ್ತಿದ್ದ. ಉದ್ದಕ್ಕೂ ಆಯಾ ದೇಶಗಳ ಪರಿಸರವನ್ನು ಕುರಿತು, ಇತಿಹಾಸವನ್ನು ಕುರಿತು, ಯಾವ ಯಾವ ಊರುಗಳಲ್ಲಿ ನಾವು ಹೇಗೆ ವಿಹರಿಸಬಹುದೆಂಬುದನ್ನು ಕುರಿತು, ಹಿಂದಿನ ಪಯಣಿಗರ ಅನುಭವಗಳನ್ನು ಕುರಿತು, ನಾವು ಅಲ್ಲಲ್ಲಿ ಮಾಡಿಕೊಳ್ಳಬಹುದಾದ ‘ಐಚ್ಛಿಕ ಪ್ರವಾಸ’ಗಳನ್ನು ಕುರಿತು, ಧ್ವನಿವರ್ಧಕದ ಮೂಲಕ ತಿಳಿವಳಿಕೆ ಕೊಡುತ್ತಲೇ ನಮ್ಮ ದೈನಂದಿನ ಸಲಹೆಗಾರನಂತೆ, ಮಾರ್ಗದರ್ಶಿಯಂತೆ, ತುಂಬ ಸೌಜನ್ಯದಿಂದ ನಡೆಯಿಸಿಕೊಂಡ. ಒಂದೊಂದು ಸಲ ಆತ ಕೆಲವು ಒಗಟುಗಳನ್ನು, ಸಮಸ್ಯೆಗಳನ್ನು ಕೊಟ್ಟು ಬಿಡಿಸಲು ಹೇಳುವನು; ನಡುನಡುವೆ ಹಾಡಿನ ಕ್ಯಾಸೆಟ್‌ಗಳನ್ನು ಕೇಳಿಸುವನು. ಅಂತು ಅದಾ ತನ್ನ ಪಯಣಿಗರ ಬೇಸರ ಪರಿಹಾರ ಮಾಡಲು ಬೇರೆ ಬೇರೆ ದಾರಿಗಳನ್ನು ಹುಡುಕುವನು. ಆದರೆ ನನ್ನ ಪಾಲಿಗೆ ಪಯಣವೇ ಒಂದು ಚೇತೋಹಾರಿಯಾದ ಅನುಭವವಾಗಿದ್ದ ಕಾರಣ, ಅತ್ತಿತ್ತ ಹರಹಿಕೊಂಡ ಹೊಸ ದೇಶಗಳ ನೆಲ-ಜಲ-ಸಸ್ಯಾದಿ ವಿಶೇಷಗಳೇ ಹೆಜ್ಜೆ ಹೆಜ್ಜೆಗೂ ನನ್ನ ಕುತೂಹಲದ ಹಾಗೂ ಗಮನದ ವಸ್ತುಗಳಾಗಿ, ನನಗೆ ಒಂದು ದಿನವೂ ಬೇಸರವಾಗಲಿಲ್ಲ. ಆದರೆ, ಪ್ರಯಾಣ ಎಂದರೆ ಒಂದೂರಿಂದ ಮತ್ತೊಂದು ಊರಿಗೆ ಹೋಗುವ ಕ್ರಿಯೆಯಷ್ಟೇ ಎಂದು ಭಾವಿಸಿ, ನಗರಗಳಲ್ಲಿ ಅಥವಾ ಬೇರೆ ಬೇರೆ ಪ್ರೇಕ್ಷಣಿಯ ಸ್ಥಳಗಳಲ್ಲಿ ಇಳಿದ ಕೂಡಲೇ ಸಂಭ್ರಮದಿಂದ ಓಡಾಡುವ, ಹೆಗಲಿಗೆ ಸದಾ ತಗುಲಿಸಿಕೊಂಡ ಕ್ಯಾಮರಾದಿಂದ ಕಂಡದ್ದನ್ನೆಲ್ಲ ಫೊಟೋ ತೆಗೆಯುವ, ಅಂಗಡಿಗಳಿಗೆ ಉತ್ಸಾಹದಿಂದ ನುಗ್ಗಿ ವ್ಯಾಪಾರ ಮಾಡುವ ಹೊತ್ತಿನಲ್ಲಿ – ಕ್ರಿಯಾ ಶೀಲವಾಗುತ್ತ, ಮತ್ತೆ ಬಸ್ಸಲ್ಲಿ ಬಂದು ಕೂತ ಒಡನೆಯೇ ಮತ್ತೊಂದು ನಗರವೋ ಅಥವಾ ಪ್ರೇಕ್ಷಣೀಯ ಸ್ಥಳವೋ ಸಿಗುವ ತನಕ, ಹಾಯಾಗಿ ಸೀಟಿಗೆ ಒರಗಿ ನಿದ್ರಿಸುವ, ಸಹಪ್ರಯಾಣಿಕರೂ ನಮ್ಮ ಬಸ್ಸಲ್ಲಿರಲಿಲ್ಲವೆಂದಲ್ಲ. ನಾನು ಸುಮ್ಮನೆ ಹೊರಳಿ ನೋಡಿದೆ. ನನ್ನ ಹೋಟೆಲು ಕೊಠಡಿಯ ಸಂಗಾತಿ ಪೆರೇರ, ತನ್ನ ಗೆಳತಿಯರೊಡನೆ ಚರ್ಚಿಸುತ್ತಿದ್ದ; ಬಂಗಾಳಿಯ ರಾಯ್ ದಂಪತಿಗಳು ತೂಕಡಿಸುತ್ತಿದ್ದರು. ಕೊರಿಯಾದ ನವದಂಪತಿಗಳು ಕೈ ಕೈ ಹಿಡಿದುಕೊಂಡು ಒಬ್ಬರಿಗೊಬ್ಬರು ಒರಗಿಕೊಂಡಿದ್ದರು; ಅಮೆರಿಕಾದ ವೃದ್ಧ ದಂಪತಿಗಳು, ದುರ್ಬೀನನ್ನು ಒಬ್ಬರ ನಂತರ ಒಬ್ಬರು ಸರದಿಪ್ರಕಾರ ಬಳಸಿ ದೂರದ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು. ಇನ್ನುಳಿದವರು ರೆಕಾರ್ಡ್ ಮೂಲಕ ಕೇಳಿಸಲಾಗುತ್ತಿದ್ದ ಜೋಕ್‌ಗಳನ್ನು ಆಲಿಸಿ ನಗುತ್ತಿದ್ದರು.

ಒಂದೆಡೆ ಕಾಫಿ ಬಿಡುವಿನ ನಂತರ ಮತ್ತೆ ಹೊರಟ ಬಸ್ಸು ಇಟಲಿಯ ಆಪೆನೈನ್ ಪರ್ವತ ಪ್ರದೇಶವನ್ನು ಪ್ರವೇಶಿಸಿತು. ಹೆಚ್ಚು ಕಡಮೆ ನಮ್ಮ ಕರ್ನಾಟಕದ ಪಶ್ಚಿಮ ಘಟ್ಟಗಳನ್ನು ಹೋಲುವ ಕಾಡು – ಕಣಿವೆಗಳ ದಾರಿ ಇದು. ಬಸ್ಸು ಯಾವ ಏರುವ ಅಥವಾ ಇಳಿಯುವ ಗೊಡವೆಯೂ ಇಲ್ಲದೆ, ಸುರಂಗ ಸುರಂಗಗಳ ಮೂಲಕ ತನಗಡ್ಡಲಾಗಿ ನಿಂತ ಪರ್ವತಗಳ ಹೊಟ್ಟೆಯನ್ನು ಹೊಕ್ಕು ಹೊರಬಂದು, ಅಗಲವಾದ ಕಣಿವೆಗಳನ್ನು ಹಾಸಿದ ಸೇತುವೆಗಳ ಮೂಲಕ ದಾಟಿಕೊಂಡು ಒಂದೇ ವೇಗದಿಂದ ಮುಂದುವರಿಯಿತು. ಅನೇಕ ನದಿಗಳನ್ನು ದಾಟುತ್ತ, ಬೆಟ್ಟದ ಹಸುರು ನಡುವೆ ಹುದುಗಿಕೊಂಡ ಗ್ರಾಮೀಣ ವಸತಿಗಳನ್ನು ಅನಾವರಣಗೊಳಿಸುತ್ತ, ಥಟ್ಟನೆ ದೃಶ್ಯಗಳ ಮೇಲೆ ದೃಶ್ಯಗಳನ್ನು ತೆರೆಯುತ್ತ ಸುಮಾರು ಒಂದೂವರೆ ಗಂಟೆಗಳ ಕಾಲದ ಪಯಣ ಮತ್ತೆ ನಮ್ಮನ್ನು ಕುರುಚಲು ಕಾಡಿನ ಬಯಲಿಗೆ ತಂದಿತ್ತು. ಆ ಬಯಲದಾರಿಯ ನಡುವೆ ಒಂದೆಡೆ, ದೂರದಲ್ಲಿ ಎತ್ತರವಾದ ಕೋಟೆಯಂತೆ ಕಾಣುವ ಕಟ್ಟಡವೊಂದು ಕಣ್ಣನ್ನು ಸೆಳೆಯಿತು. ಅಲೆನ್ ಹೇಳಿದ : ಮಹನೀಯರೆ ಮತ್ತು ಮಹಿಳೆಯರೆ, ಆ ದೂರದ ಎತ್ತರದಲ್ಲಿ ಕಾಣುತ್ತದಲ್ಲ; ಅದೊಂದು ಪ್ರಾಚೀನ ಕಾಲದ ಚರ್ಚು. ಅಲ್ಲಿ ಅಸಿಸಿಯ ಸಂತ ಫ್ರಾನ್ಸಿಸ್‌ನ ಸಮಾಧಿ ಇದೆ. ನಾವೀಗ ತಲುಪಲಿರುವುದು, ಸಂತ ಫ್ರಾನ್ಸಿಸ್‌ನ ಊರಾದ ಅಸಿಸಿ ಎಂಬ ಕ್ರೈಸ್ತ ಧರ್ಮದ ಒಂದು ಕ್ಷೇತ್ರವನ್ನು. ಬಸ್ಸಿಳಿದ ನಂತರ ನೀವು ಹೋಗಿ ನೋಡಿಕೊಂಡು ಬರಬಹುದು. ಈಗ ಗಂಟೆ ಹನ್ನೆರಡೂವರೆ. ಮತ್ತೆ ನಾವು ಈ ಸ್ಥಳವನ್ನು ಬಿಡುವುದು ಮಧ್ಯಾಹ್ನ ಎರಡೂವರೆಗೆ.

ಜಗತ್ತಿನ ಅನುಭಾವಿಗಳನ್ನು ಕುರಿತು ಒಂದಿಷ್ಟು ಓದಿಕೊಂಡಾಗ ನನ್ನ ಗಮನವನ್ನು ಸೆಳೆದಿದ್ದ ಅಸಿಸಿಯ ಸಂತ ಫ್ರಾನ್ಸಿಸ್‌ನ ಊರಿಗೆ ಬಂದಿದ್ದೇನೆ ಅನ್ನುವ ಸಂಭ್ರಮ ನನ್ನ ಮನಸ್ಸನ್ನು ತುಂಬಿಕೊಂಡಿತು. ಬಸ್ಸಿಳಿದು, ಆ ಎತ್ತರದಲ್ಲಿ ಕೋಟೆಯಂತೆ ಕಾಣುವ ಆವರಣಕ್ಕೆ ಮೆಟ್ಟಿಲು ದಾರಿಗಳನ್ನೇರಿ ಹೊರಟೆ. ಒಂದು ಎತ್ತರವಾದ ಗೋಡೆಯ ನಡುವೆ  ಬಾಗಿಲನ್ನು ತೂರಿ ಹೋದೊಡನೆಯೆ, ಗೋಚರವಾಗುತ್ತದೆ ವಿಸ್ತಾರವಾದೊಂದು ಕ್ರೈಸ್ತ ದೇವಾಲಯ, ಪ್ರವೇಶಕ್ಕೆ ಮುನ್ನ ಅಲ್ಲಿನ ಅಂಗಳದಲ್ಲಿ ಈ ದೇವಾಲಯಕ್ಕೆ ಸಂಬಂಧಿಸಿದ ಮಾಹಿತಿ ಪುಸ್ತಿಕೆಗಳನ್ನು ಕಂಡು, ಒಂದನ್ನು  ಕೈಗೆತ್ತಿಕೊಂಡೆ. ಅವೆಲ್ಲ ಇಟಾಲಿಯನ್ ಭಾಷೆಯಲ್ಲಿ  ಅಚ್ಚಾಗಿದ್ದವು. ಇಂಗ್ಲಿಷ್ ಭಾಷೆಯ ಮಾಹಿತಿ ಪುಸ್ತಕಗಳಿಲ್ಲವೆ ಎಂದು ಕೇಳಿದೆ. ಇಲ್ಲ ಎಂಬಂತೆ ತಲೆಯಾಡಿಸಿದರು. ನನ್ನ ಜೊತೆಗಾರರೊಂದಿಗೆ ಆ ದೇವಾಲಯವನ್ನು ಪ್ರವೇಶಿಸಿದೆ. ಒಂದು ಬಗೆಯ ಮಾಸಲು ಬೆಳಕು, ಎತ್ತರವೂ ವಿಸ್ತಾರವೂ ಆದ ಆ ದೇವಾಲಯವನ್ನು  ತುಂಬಿಕೊಂಡಿತ್ತು. ಪ್ರಾರ್ಥನೆಗಾಗಿ ಸಾಲಾಗಿ ಜೋಡಿಸಿದ ಪೀಠಗಳ ಮೇಲೆ ಅನೇಕರು ಕೂತು ಕಣ್ಣುಮುಚ್ಚಿ ಮೌನವಾಗಿದ್ದರು. ಅನತಿ ದೂರದ ಪೂಜಾವೇದಿಕೆಯ ಮೇಲೆ ಮೋಂಬತ್ತಿಗಳು ಉರಿಯುತ್ತಿದ್ದವು. ಅದರ ಬದಿಯ ಮೆಟ್ಟಿಲುಗಳನ್ನೇರಿ ಮೇಲಿನ ಹಂತಕ್ಕೆ ಹೋದೆವು. ಅಲ್ಲಿ ಕ್ರೈಸ್ತ ಧರ್ಮದ ಕೃತಿಗಳನ್ನು ಇರಿಸಿದ ಒಂದು ಲೈಬ್ರರಿ ಇತ್ತು. ಕುತೂಹಲಕ್ಕೆ ಒಂದೆರಡು ಪುಸ್ತಕಗಳನ್ನು ಕೈಗೆತ್ತಿಕೊಂಡು ನೋಡಿದೆ. ಅವೆಲ್ಲಾ ಇಟಾಲಿಯನ್ ಅಥವಾ ಲ್ಯಾಟಿನ್ ಭಾಷೆಯ ಕೃತಿಗಳು. ಮತ್ತೆ ಮೇಲಿನ ಮೊಗಸಾಲೆಗೆ ಬಂದೆ. ಎರಡೂ ಬದಿಗೆ ದುಂಡನೆಯ ಕಂಬಗಳ ಮೇಲೇರಿದ ದೇವಾಲಯ, ಎತ್ತರದಲ್ಲಿ ತನ್ನ ಗುಮ್ಮಟಗಳನ್ನು ಚಾಚಿಕೊಂಡಿತ್ತು. ಕೆಳಗೆ ಒಂದೆಡೆ ದೂರದೂರದ ಬಯಲಿನಲ್ಲಿ ಇಂಥವೇ ಕೆಲವು ದೇವಾಲಯಗಳೂ ಮತ್ತೊಂದೆಡೆ ಅಸಿಸಿ ಎಂಬ ಹೆಸರಿನ ಊರಿನ ಹರಹೂ ಗೋಚರಿಸಿತು.

ಈ ಒಂದು ಊರಿನಲ್ಲಿಯೇ ಕ್ರೈಸ್ತಧರ್ಮದ ‘ದೇವದತ ಸಂತ’ನೆಂದು ಹೆಸರಾದ ಫ್ರಾನ್ಸಿಸ್ ಹುಟ್ಟಿ ಬೆಳೆದು ಬದುಕಿದ್ದು. ಅವನದೇ ಹೆಸರಿನ ಧಾರ್ಮಿಕ ಪಂಥವೊಂದು ಇಲ್ಲಿ ಪ್ರಾರಂಭವಾಯಿತು – ಹದಿಮೂರನೆಯ ಶತಮಾನದ ಪ್ರಾರಂಭದಲ್ಲಿ. ಎಲ್ಲ ಸಂತರ ವಿಚಾರದಲ್ಲಿ ಹೇಗೋ ಹಾಗೆ, ಇವನ ವಿಚಾರದಲ್ಲೂ ಹಲವಾರು ಐತಿಹ್ಯ ಹಾಗೂ ಪವಾಡಗಳು ಪ್ರಚಲಿತವಾಗಿವೆ. ಇವನ ಬದುಕು ಮುಖ್ಯವಾಗಿ ‘ಕ್ರಿಸ್ತನ ಅನುಕರಣೆ’ ಯನ್ನು ತನ್ನ ಲಕ್ಷಣವಾಗಿ ಉಳ್ಳದ್ದು. ಲೌಕಿಕವಾದ ಸುಖ ಸಂತೋಷಗಳನ್ನು ತ್ಯಾಗ ಮಾಡಿ, ಬಡತನದ ಬದುಕನ್ನು ತಾನಾಗಿಯೆ ಆಯ್ಕೆ ಮಾಡಿಕೊಂಡು, ಸುತ್ತಣ ಜಗತ್ತಿನೊಂದಿಗೆ ಅಪೂರ್ವವಾದ ಭ್ರಾತೃತ್ವವನ್ನು ಸಾಧಿಸುತ್ತ, ಧ್ಯಾನ ಪ್ರಾರ್ಥನೆಗಳಲ್ಲಿ ತೊಡಗಿದ ಸಂತ ಈತ. ಜಗತ್ತಿನ ಮನುಷ್ಯರೆಲ್ಲರನ್ನೂ ತನ್ನ ಸಹೋದರ ಸಹೋದರಿಯಂತೆ ಪ್ರೀತಿಸಿದ್ದಷ್ಟೇ ಅಲ್ಲ, ನಿಸರ್ಗದೊಂದಿಗೂ ಇದೇ ಭಾವನೆ ಅವನಲ್ಲಿ ವಿಸ್ತರಣೆಗೊಂಡಿತೆಂಬುದು ವಿಶೇಷದ ಸಂಗತಿಯಾಗಿದೆ. ಇಡೀ ನಿಸರ್ಗವೆಲ್ಲವೂ ದೈವತ್ವದ ಪ್ರತಿಬಿಂಬವೆಂದು ಭಾವಿಸಿದ ಫ್ರಾನ್ಸಿಸ್, ಸೂರ್ಯನನ್ನು ‘ಅಣ್ಣ ಸೂರ್ಯ’’ ಎಂದೂ, ಚಂದ್ರನನ್ನು ‘ತಂಗಿ ಚಂದ್ರ’ ಎಂದೂ, ನೆಲ-ನೀರುಗಳು ತನ್ನ ಸೋದರ ಸೋದರಿಯರೆಂದೂ, ಅಷ್ಟೇ ಅಲ್ಲ ಮೃತ್ಯುವನ್ನು ಕೂಡ ತನ್ನ ಸೋದರನೆಂದೂ – ಕರೆದದ್ದನ್ನು ನೋಡಿದರೆ, ಆತನ ಈ ಲೋಕಬಾಂಧವ್ಯದ ಮಾನವೀಕರಣ ಆತನ ಅನುಭಾವಿಕ ನೆಲೆಯನ್ನು ಸೂಚಿಸುತ್ತದೆ. ಕ್ರಿ.ಶ. ೧೨೨೪ರಲ್ಲಿ ಆತ ಪರ್ವತಾರಣ್ಯಗಳ ನಡುವೆ, ನಲವತ್ತು ದಿನಗಳ ಕಾಲ ಧ್ಯಾನ- ಉಪವಾಸಾದಿಗಳಲ್ಲಿ ತೊಡಗಿದ್ದನೆಂದೂ, ಆಗ ಆತನಿಗೆ ಸಾಕ್ಷಾತ್ ಕ್ರಿಸ್ತನ ದರ್ಶನವಾಯಿತೆಂದೂ, ಆ ದರ್ಶನದಲ್ಲಿ ಕ್ರಿಸ್ತನ ಮೈಮೇಲೆ ಕಾಣಿಸಿಕೊಂಡ ಶಿಲುಬೆಯ ಗಾಯಗಳನ್ನು ಕಂಡು ಅತೀವ ದುಃಖಕ್ಕೆ ಒಳಗಾದನೆಂದೂ ಆತ ಈ ‘ದರ್ಶನ’ದ ನಂತರ ಅಸಿಸಿಗೆ ಹಿಂದಿರುಗಿದಾಗ, ಕ್ರಿಸ್ತನ ಮೈಮೇಲಿನ ಶಿಲುಬೆ ಗಾಯಗಳ ಗುರುತುಗಳು ಈತನ ಮೈಮೇಲೂ ಕಾಣಿಸಿಕೊಂಡುವೆಂದೂ ಹೇಳಲಾಗಿದೆ. ಈತ ಹಲವು ವರ್ಷಗಳ ಕಾಲ ಆ ಗಾಯದ ಗುರುತುಗಳ ವೇದನೆಯನ್ನು ಅನುಭವಿಸಿದನಂತೆ. ಇದೊಂದು ರೀತಿಯಲ್ಲಿ ಕ್ರಿಸ್ತನ ಬದುಕಿನೊಂದಿಗೆ ಈ ಸಂತನು ಪಡೆದ ತಾದಾತ್ಮ್ಯದ ಅದ್ವೈತಾನುಭೂತಿ ಎಂದು ಹೇಳಬಹುದು. ಕ್ರಿ.ಶ. ೧೨೨೬ರಲ್ಲಿ ಮರಣ ಹೊಂದಿದ ಈ ಸಂತನನ್ನು, ಈ ಬೃಹದ್ ದೇವಾಲಯದ ಎರಡನೆ ಹಂತದಲ್ಲಿ ಸಮಾಧಿ ಮಾಡಲಾಗಿದೆ.

ಅಸಿಸಿಯ ಸಂತನ ಸಮಾಧಿಯ ಎದುರಿಗೆ ನಿಂತ ಭಕ್ತರ ನಡುವೆ, ನಾನೂ ಸ್ವಲ್ಪ ಹೊತ್ತು ಮೌನವಾಗಿ ನಿಂತು ಕೈಮುಗಿದು ಹೊರಕ್ಕೆ ಬಂದೆ. ಒಬ್ಬೊಬ್ಬರಾಗಿ, ಬಸ್ಸಿನ ಬಳಿ ಬಂದ ನನ್ನ ಸಹಪ್ರಯಾಣಿಕರೊಡನೆ ಬಸ್ಸೇರಿ, ಒಂದೂವರೆ ಗಂಟೆಯ ಪಯಣದ ನಂತರ ನಾವು ತಲುಪಿದ್ದು ಜಗತ್ ಪ್ರಸಿದ್ಧವಾದ ರೋಂ ನಗರವನ್ನು.

೩ –

ಎಲ್ಲ ದಾರಿಗಳೂ ಕರೆದೊಯ್ಯುವುದು ರೋಂ ನಗರದ ಕಡೆಗೇ – ಅನ್ನುವುದು ಒಂದು ಕಾಲದ ಗಾದೆ ಮಾತಾಗಿತ್ತು. ಅಂತಹ ಒಂದು ಪ್ರತಿಷ್ಠೆಯ ಕೇಂದ್ರವಾಗಿ ಮೆರೆದಿದೆ ರೋಂ, ಜಗತ್ತಿನ ಚರಿತ್ರೆಯಲ್ಲಿ. ಪಶ್ಚಿಮದ ನಾಗರಿಕತೆ – ಸಂಸ್ಕೃತಿಗಳ ತೊಟ್ಟಿಲು ; ಕಲೆ-ವಿದ್ಯೆ-ಪೌರುಷ ಹಾಗೂ ಅಭಿರುಚಿಗಳ ತವರೂರು; ಶತಮಾನಗಳ ಕಾಲ ಇಡೀ ಪರಿಚಿತ ಪ್ರಪಂಚವನ್ನು ಆಳಿದ ಸಾರ್ವಭೌಮತ್ವದ ಅಧಿಕಾರ ಪೀಠ; ಕ್ರೈಸ್ತ ಧರ್ಮದ ಕೇಂದ್ರ-ಹೀಗೆಂದು ವರ್ಣಿಸಲ್ಪಟ್ಟಿರುವ ರೋಂ ನಗರ ಎಷ್ಟು ಸನಾತನತೆಯ ಲಕ್ಷಣಗಳನ್ನು ಒಳಗೊಂಡಿದೆಯೋ, ಅಷ್ಟೇ ವಿನೂತನತೆಯಿಂದ ಯಾರನ್ನಾದರೂ ಬೆರಗುಗೊಳಿಸುತ್ತದೆ.

ಇಂಥ ರೋಂ ನಗರದ ಹೊರವಲಯದ ಸುಸಜ್ಜಿತವಾದ ಹೋಟೆಲ್ ಒಂದರಲ್ಲಿ ನಮ್ಮನ್ನು ಸಂಸ್ಥಾಪಿಸಿದ ನಮ್ಮ ಮೇಲ್ವಿಚಾರಕ ಹಾಗೂ ಮಾರ್ಗದರ್ಶಿ, ನಾವೆಲ್ಲ ಬೆಳಗಿನಿಂದ ಸಾಕಷ್ಟು ಸುದೀರ್ಘವಾದ ಪಯಣದಲ್ಲಿ ತೊಡಗಿದ್ದರಿಂದ, ನಮ್ಮ ನಮ್ಮ ಕೊಠಡಿಗಳಲ್ಲಿ ವಿಶ್ರಾಂತಿ ಪಡೆಯಬೇಕೆಂದೂ, ಅನಂತರ ರಾತ್ರಿ ಎಂಟೂವರೆಯಿಂದ ಸ್ವಲ್ಪ ಹೊತ್ತು ನಮ್ಮನ್ನು ರೋಂ ನಗರದ ‘ರಾತ್ರಿ ಸಂಚಾರ’ಕ್ಕೆ ಕರೆದೊಯ್ಯುವುದಾಗಿಯೂ, ಕಾಸ್‌ಮಾಸ್ ಪ್ರವಾಸಿ ಸಂಸ್ಥೆಯವರ ಕೊಡುಗೆ ಯಾಗಿರುವ ವಿಶೇಷ ಭೋಜನಕೂಟದಲ್ಲಿ ನಾವೆಲ್ಲ ಭಾಗವಹಿಸಬೇಕೆಂದೂ ತಿಳಿಸಿದ. ನಾವೆಲ್ಲ ನಮ್ಮ ಕೊಠಡಿಗಳಲ್ಲಿ ಬಿಸಿನೀರಿನ ಮಜ್ಜನಾದಿಗಳಿಂದ ಉಲ್ಲಸಿತರಾಗಿ, ಹಾಸಿಗೆಗಳಲ್ಲಿ ಒರಗಿಕೊಂಡು ಇಟಾಲಿಯನ್ ಭಾಷೆಯಲ್ಲಿ ಬಿತ್ತರವಾಗುತ್ತಿದ್ದ ಕಾರ್ಯಕ್ರಮಗಳನ್ನು ಕೊಠಡಿಗಳಲ್ಲಿದ್ದ ದೂರದರ್ಶನದಲ್ಲಿ ವೀಕ್ಷಿಸುತ್ತ ವಿಶ್ರಾಂತಿ ಪಡೆದೆವು.

ರಾತ್ರಿ ಎಂಟೂವರೆಗೆ ನಾವು ಕೂತ ಬಸ್ಸು ಜಗಜಗ ಬೆಳಕಿನ ದಾರಿಗಳಲ್ಲಿ ನಮ್ಮನ್ನು ಕರೆದೊಯ್ಯಿತು. ರೋಂ ನಗರದ ವಿಸ್ತಾರವಾದ ಹರಹಿನಲ್ಲಿ ಅನೇಕ ಶಿಖರಗಳೂ, ಗೋಪುರಗಳೂ, ಗುಮ್ಮಟಗಳೂ, ಬಿಡುದೀಪಗಳ ಬೆಳಕಿನಲ್ಲಿ ಹೊಳೆಯುತ್ತಿದ್ದವು. ಅಲ್ಲಲ್ಲಿ ಕಂಡ ಅಮೃತಶಿಲ್ಪ ಸ್ತಂಭಗಳ ವಾಸ್ತು ರಚನೆಗಳೂ, ಚೌಕಚೌಕಗಳಲ್ಲಿ ನಿಂತ ಹಾಲುಗಲ್ಲಿನ ಅನೇಕ ಪ್ರತಿಮೆಗಳೂ ಮತ್ತು ಪುಟಿಯುತ್ತಿದ್ದ ಚಿಲುಮೆಗಳೂ ಯಾವುದೋ ಕನಸಿನ ಲೋಕವನ್ನು ಕಣ್ಣೆದುರಿಗೆ ತೆರೆಯುತ್ತಿದ್ದವು. ಅಗಲವೂ ಸುದೀರ್ಘವೂ ಆದ ರಸ್ತೆಗಳ ತುಂಬ ಕಿಕ್ಕಿರಿದ ವಾಹನಗಳ ಮಧ್ಯೆ. ಅತ್ತ ಇತ್ತ ತಮ್ಮ ದೈನಂದಿನ ವ್ಯವಹಾರಗಳನ್ನು ಮುಗಿಸಿಕೊಂಡು, ಮೌನವೇ ಮೂರ್ತೀಭವಿಸಿದಂತೆ ನಿಂತ ಎತ್ತರದ ಹಾಗೂ ಸಾಲಾದ ಕಟ್ಟಡಗಳ ನಡುವೆ ಸಾಗಿತು ನಮ್ಮ ಪಯಣ. ಸುಮಾರು ಒಂದು ಗಂಟೆಯ ಸಂಚಾರದ ನಂತರ ಎಲ್ಲೋ ಒಂದೆಡೆ ಬಸ್ಸು ನಿಂತು, ನಾವು ಅಲೆನ್‌ನ ಸೂಚನೆಯ ಮೇರೆಗೆ, ಹಲವಾರು ಓಣಿ ತಿರುವುಗಳ ಮೂಲಕ ಅವನ ಹಿಂದೆ ನಡೆದೆವು. ಅಲ್ಲಿ ಒಂದೆಡೆ ಬೃಹದಾಕಾರವಾದ ಅಮೃತಶಿಲ್ಪ ಸಮುಚ್ಚಯವೂ, ಅದರ ಎದುರಿಗೆ ಪುಟಿವ ಚಿಲುಮೆಗಳಿಂದ ವಿವಿಧ ವಿನ್ಯಾಸಗಳಲ್ಲಿ ಹರಿಯುವ ನೀರಿನ ಧಾರೆಗಳೂ ಮತ್ತು ನೀರಿನ ಧಾರೆಗಳೆಲ್ಲ ಮಡುಗೊಂಡ ವೃತ್ತಾಕಾರದ ಒಂದು ಕೊಳವೂ ಗೋಚರವಾದವು. ಈ ಚಿಲುಮೆ, ಈ ಶಿಲ್ಪ ಸಮುಚ್ಚಯ ಹಾಗೂ ವೃತ್ತಾಕಾರವಾದ ಕೊಳ ಇರುವ ಸ್ಥಳವನ್ನು ‘ಟ್ರೆವಿ’ (Trevi) ಬುಗ್ಗೆಗಳೆಂದು ಕರೆಯಲಾಗಿದೆ. ಪ್ರಖರವಾದ ಬಿಡುದೀಪಗಳ ಬೆಳಕಿನಲ್ಲಿ ಎದ್ದು ಕಾಣುವ ಶಿಲ್ಪಸಮುಚ್ಚಯದ ಸುತ್ತ ಸಾವಿರಾರು ಜನ ಸೇರಿದ್ದರು. ನಾವು ಆ ನೂಕು ನುಗ್ಗಲಿನಲ್ಲಿ ಕಳೆದುಹೋಗದಂತೆ ಎಚ್ಚರವಹಿಸಿ, ಒಂದರ್ಧ ಗಂಟೆಯ ನಂತರ ಅಲ್ಲೇ ಕೆಲವು ಹೆಜ್ಜೆ ದೂರದಲ್ಲಿರುವ ಕಟ್ಟಡವೊಂದರ ಪಕ್ಕದಲ್ಲಿ ನಿಲ್ಲಿಸಲಾಗಿರುವ ಕಪ್ಪುಶಿಲೆಯ ಕಂಭವೊಂದರ ಬಳಿಗೆ ಬಂದು ನಿಲ್ಲಬೇಕೆಂದು ಅಲೆನ್ ನಾವು ಇಲ್ಲಿಗೆ ಬಂದ ಕೂಡಲೇ ಹೇಳಿದ್ದ. ಅಷ್ಟೇ ಅಲ್ಲ, ನಿಮ್ಮ ನಿಮ್ಮ ಜೇಬುಗಳೂ, ಹೆಗಲ ಚೀಲಗಳೂ ಭದ್ರವಾಗಿರುವಂತೆ ನಿಗಾ ವಹಿಸಿರಿ ಎಂದೂ ಎಚ್ಚರಿಸಿದ್ದ. ನಾವೆಲ್ಲ ಅವನು ಹೇಳಿದ್ದಕ್ಕೆ ತಲೆಯಾಡಿಸಿ, ನಮ್ಮ ಪಾಡಿಗೆ ನಾವು ಆ ಜನಜಂಗುಳಿಯ ನಡುವೆ ತೂರಿ, ಆ ಶಿಲ್ಪ ಸಮುಚ್ಚಯ ಹಾಗೂ ವಿವಿಧ ಆಕಾರಗಳಲ್ಲಿ ಚಿಮ್ಮಿ ಹರಿಯುವ ನೀರಿನ ಧಾರೆಗಳನ್ನೂ ನೋಡುತ್ತ ನಿಂತೆವು. ಆದರೂ ಆ ವೃತ್ತಾಕಾರದ ಕೊಳದ ಹತ್ತಿರಕ್ಕೆ ಹೋಗಲು ಸಾಧ್ಯವಾಗದ ಹಾಗೆ ನಾವು ಹಿಂದಕ್ಕೆ ತಳ್ಳಲ್ಪಡುತ್ತಲೇ ಇದ್ದೆವು. ಆ ಸಂದಣಿಯ ನಡುವೆ ನನ್ನ ಸಹಪ್ರಯಾಣಿಕ ಪೆರೇರಾ ತೂರಿ ಬಂದು, ‘ಬನ್ನಿ ಬನ್ನಿ, ಈ ಕೊಳ ಇದೆಯಲ್ಲ, ಅದರಲ್ಲಿ ನಾಣ್ಯಗಳನ್ನು ಎಸೆಯೋಣ’ ಅಂದ. ನಾನು ‘ಅದೇಕೆ ಎಸೆಯಬೇಕು’ ಎಂದೆ. ‘ಅಯ್ಯೋ, ನಿಮಗೆ ಗೊತ್ತಿಲ್ಲವೆ, ನಮ್ಮ ನಮ್ಮ ಮನಸ್ಸಿನಲ್ಲಿ ಯಾವುದೇ ಒಂದು ಕೋರಿಕೆಯನ್ನು ಮಾಡಿಕೊಂಡು, ನಾಣ್ಯಗಳನ್ನು, ಹಿಂದು ಮುಂದಾಗಿ ನಿಂತು ಈ ಕೊಳಕ್ಕೆ ಎಸೆದರೆ ನಮಗೆ ಇಷ್ಟಾರ್ಥ ಸಿದ್ಧಿಯಾಗುತ್ತದಂತೆ’ – ಅಂದ. ನಾನು ನಕ್ಕು, ‘ನನಗೆ ಯಾವ ಇಷ್ಟಾರ್ಥವೂ ಇಲ್ಲವಪ್ಪ. ನೀವಿನ್ನೂ ಹುಡುಗರು. ನೀವೇ ಏನಾದರೂ ಕೇಳಿಕೊಳ್ಳಿ, ಗುಡ್‌ಲಕ್’ ಎಂದೆ, ಕಂಪ್ಯೂಟರ್ ಸೈನ್ಸ್ ಓದಿದರೇನು, ಏನು ಮಾಡಿದರೇನು? ಯಾವ ಧರ್ಮದವರಾದರೂ ಏನು? ಯಾವ ದೇಶದವರಾದರೂ ಏನು? ಈ ಬಗೆಯ ನಂಬಿಕೆಗಳಿಂದ ಪಾರಾಗುವುದು ಸುಲಭವಲ್ಲ ಅಂದುಕೊಂಡೆ ಮನಸ್ಸಿನಲ್ಲಿ. ಪೆರೇರಾ ನನ್ನನ್ನು ಕರೆದು ಪ್ರಯೋಜನವಿಲ್ಲ ಅಂದುಕೊಂಡು ಮತ್ತೆ ಜನದ ನಡುವೆ ತೂರಿಕೊಂಡು, ವೃತ್ತಾಕಾರದ ಕೊಳದಂಚಿನಲ್ಲಿ ಕಾಯುತ್ತಿದ್ದ ತನ್ನ ಗೆಳತಿಯರನ್ನು  ಸೇರಿಕೊಂಡ. ಕೊಂಚ ಹೊತ್ತಾದ ನಂತರ ನಾನೂ ಕಷ್ಟಪಟ್ಟು, ಜನದ ನಡುವೆ ದಾರಿ ಮಾಡಿಕೊಂಡು ಆ ಕೊಳದ ಬದಿಗೆ ಹೋಗಿ ನಿಂತುಕೊಂಡೆ. ಆ ಝಗ ಝಗ ಬೆಳಗಿನಲ್ಲಿ ಆ ವೃತ್ತಾಕಾರದ ಕೊಳದ – ಅಷ್ಟೇನೂ ಆಳವಲ್ಲದ ಹಾಗೂ ನಿರ್ಮಲ ಜಲದಿಂದ ಪಾರದರ್ಶಕವಾದ – ತಳದಲ್ಲಿ, ಹೀಗೆ ಎಸೆಯಲಾದ ನಾಣ್ಯಗಳ ರಾಶಿಯನ್ನು ಕಂಡೆ. ಅಂಚಿನಲ್ಲಿ ಎಷ್ಟೋ ಜನ ಕೊಳಕ್ಕೆ ಬೆನ್ನು ತಿರುಗಿಸಿ ತಮ್ಮ ಭುಜದ ಮೇಲಿನಿಂದ ಎರಡೆರಡು ನಾಣ್ಯಗಳನ್ನು ಆ ನೀರಿನಲ್ಲಿ ಅವು ಬೀಳುವಂತೆ ಎಸೆಯುತ್ತಿದ್ದರು. ಒಂದು ನಾಣ್ಯ, ತನ್ನ ಇಷ್ಟಾರ್ಥ ಸಿದ್ಧಿಗಂತೆ; ಮತ್ತೊಂದು ತಾವು ಸುರಕ್ಷಿತವಾಗಿ ತಮ್ಮ ತಮ್ಮ ಊರುಗಳನ್ನು ತಲುಪುವಂತಾಗಲಿ ಎಂಬುದಕ್ಕಂತೆ’!

ಅಲೆನ್ ನಮಗೆ  ಕೊಟ್ಟ ಸಮಯ ಹತ್ತಿರಕ್ಕೆ ಬಂದಿತ್ತು. ಕೂಡಲೆ ನಾವೆಲ್ಲ ಆತ ಹೇಳಿದ್ದ ‘ಸಂಕೇತ ಸ್ಥಳ’ಕ್ಕೆ ಬಂದು ಸೇರಿದೆವು. ಸ್ವಲ್ಪ ಹೊತ್ತಿನ ನಂತರ ಅಲೆನ್‌ನ ಹಿಂದೆ ನಡೆದು ಹಲವಾರು ಮೆಟ್ಟಿಲ ದಾರಿಯನ್ನಿಳಿದು, ದಾರಿಯಲ್ಲಿ ಬಿಡುದೀಪದ ಬೆಳಕಿನಲ್ಲಿ ಹೊಳೆಯುತ್ತಿದ್ದ ಅಮೃತ ಶಿಲಾಸ್ತಂಭ ಶಿಲ್ಪವೊಂದನ್ನು ವೀಕ್ಷಿಸಿ, ಚೌಕವೊಂದನ್ನು ಪ್ರವೇಶಿಸಿ ಅಲ್ಲಿ ನಮಗಾಗಿ ಕಾದಿದ್ದ ಬಸ್ಸನ್ನು ಹತ್ತಿ ಕುಳಿತೆವು. ಬಸ್ಸು ಹೊರಡುವ ಮುನ್ನ ಅಲೆನ್ ಒಂದು ಸಲ ಎಣಿಸಿ ನೋಡುತ್ತಾನೆ. ಇಬ್ಬರು ಪ್ರಯಾಣಿಕರು ನಾಪತ್ತೆ! ತನ್ನ ಬಳಿ ಇದ್ದ ಪಟ್ಟಿಯನ್ನು ಒಮ್ಮೆ ನೋಡಿದಾಗ ಅವನಿಗೆ ಗೊತ್ತಾಯಿತು, ಮಹಾರಾಷ್ಟ್ರದ ಊರೊಂದರಿಂದ ಬಂದ ತ್ರಿವೇದೀ ದಂಪತಿಗಳೇ ಕಾಣೆಯಾಗಿದ್ದಾರೆ. ನಮಗೂ ತುಂಬ ಗಾಬರಿಯಾಯಿತು. ಈ ಅಪರಿಚಿತವಾದ ಮಹಾನಗರದಲ್ಲಿ, ಅದೂ ಭಾಷೆ ಗೊತ್ತಿಲ್ಲದ ಮತ್ತು ದಾರಿ ಗೊತ್ತಿಲ್ಲದ ಈ ಪರಿಸರದಲ್ಲಿ ಹೀಗೆ ಕಳೆದು ಹೋಗುವ ಸಂದರ್ಭ ತುಂಬ ಆತಂಕಕಾರಿಯಾದದ್ದು ಕೂಡಾ. ಆದರೆ ಅಲೆನ್ ಎದೆಗುಂದಲಿಲ್ಲ. ನಮ್ಮನ್ನು ಭೋಜನ ಕೂಟ ಏರ್ಪಾಡಾಗಿರುವ ಹೋಟಲಿಗೆ ಕರೆದುಕೊಂಡು ಹೋಗುವಂತೆ ಬಸ್ಸಿನ ಡ್ರೈವರ್‌ನಿಗೆ ತಿಳಿಸಿ, ತಾನೊಬ್ಬನೇ ಮತ್ತೆ ‘ಟ್ರೆವಿ ಫೌಂಟನ್’ ಕಡೆಗೆ ಧಾವಿಸಿದ. ಸ್ವಾರಸ್ಯದ ಸಂಗತಿ ಎಂದರೆ ನಾವು ಹದಿನೈದು ಇಪ್ಪತ್ತು ನಿಮಿಷಗಳಲ್ಲಿ, ಅಲ್ಲೇ ಯಾವುದೋ ಒಂದೆಡೆ ಇದ್ದ ಹೋಟೆಲ್ ಬಳಿ ಬಸ್ಸಿಳಿದು, ನಿರೀಕ್ಷಿಸುತ್ತಿದ್ದಂತೆಯೇ ಟ್ಯಾಕ್ಸಿಯೊಂದು ಬಂದು ನಮ್ಮ ಬಸ್ಸಿನ ಹಿಂದೆ ನಿಂತಿತು. ಅದರೊಳಗಿಂದ ಅಲೆನ್ ತ್ರಿವೇದೀ ದಂಪತಿಗಳ ಸಹಿತ ಕೆಳಕ್ಕೆ ಇಳಿದು ನಮ್ಮನ್ನು ಚಕಿತಗೊಳಿಸಿದ. ಆತ ಹೇಳಿದ : ‘ನೋ ಪ್ರಾಬ್ಲಮ್’, ಅದೃಷ್ಟವಶಾತ್ ಅವರಿಬ್ಬರೂ ಅಲ್ಲೇ, ನಾವೂ ನೀವು ಕಾದು ನಿಂತಿದ್ದೆವಲ್ಲ ಅಲ್ಲೇ ಇದ್ದರು. ಎಲ್ಲ ಒಳ್ಳೆಯದಾಯಿತು. ಬನ್ನಿ ಊಟಕ್ಕೆ ಹೋಗೋಣ’. ಆಮೇಲೆ ಗೊತ್ತಾಯಿತು, ಈ ತ್ರಿವೇದೀ ದಂಪತಿಗಳು ತಮ್ಮ ಬಂಧುಬಾಂಧವರ ಪರವಾಗಿಯೂ ಇಷ್ಟಾರ್ಥಸಿದ್ಧಿಗಾಗಿ, ನಾಣ್ಯಗಳನ್ನು ಆ ಕೊಳದೊಳಗೆ ಎಸೆಯುವುದರಲ್ಲಿ, ಹೊತ್ತೇ ಗೊತ್ತಾಗಲಿಲ್ಲವೆಂದೂ, ಅನಂತರ ನಿಗದಿತ ಸ್ಥಳಕ್ಕೆ ಬಂದಾಗ ಸಹ ಪ್ರಯಾಣಿಕರಾರೂ ಕಾಣದೆ ಧೃತಿಗುಂದಿದರೂ, ಅಲ್ಲೇ ನಿಂತು ಕಾಯಲು ಮನಸ್ಸು ಮಾಡಿದ್ದರಿಂದ ಅಲೆನ್ ಬಂದು ಹುಡುಕಿದಾಗ ತಾವು ಅಲ್ಲೇ ಇದ್ದದ್ದು ತಮ್ಮ ಅದೃಷ್ಟವೇ ಸರಿ ಎಂದು, ಅವರ ಸ್ನೇಹಿತರಿಗೆ ಈ ಘಟನೆಯ ಬಗ್ಗೆ ವಿವರಿಸಿದಾಗ.

ನಾವು ಕಿಕ್ಕಿರಿದ ಹೋಟಲಿನಲ್ಲಿ, ನಮಗಾಗಿ ಕಾಯ್ದಿರಿಸಿದ ಭೋಜನ ಶಾಲೆಯನ್ನು ಪ್ರವೇಶಿಸಿದಾಗ ಆಗಲೇ ರಾತ್ರಿ ಹನ್ನೊಂದು ಘಂಟೆ. ನಮ್ಮ ಪಕ್ಕದ ಹಾಲ್‌ನಲ್ಲಿ ಹಲವಾರು ವಾದ್ಯಗಾರರು, ಗಿಟಾರ್ ಮಾದರಿಯ ವಾದ್ಯದ ಜತೆಗೆ ಹಾಡುವ ಸ್ವರ ಕೇಳುತ್ತಿತ್ತು. ನಾವು ಆಯ್ದುಕೊಂಡು ಕೂತ ಟೇಬಲ್ಲುಗಳಿಗೆ, ಸ್ವಲ್ಪ ಹೊತ್ತಿನಲ್ಲೇ ಇಟಲಿಯ ಮಧು (Wine) ಅವತರಿಸಿತ್ತು. ತುಂಬ ಸೊಗಸಾದ ವೈನ್ ಕುಡಿಯುತ್ತಾ ಕೂತ ಹಾಗೆ ಕ್ರಮ ಕ್ರಮೇಣ, ಅಲೆನ್‌ನ ಸೂಚನೆಯ ಮೇರೆಗೆ ವೆಜ್ ಹಾಗೂ ನಾನ್‌ವೆಜ್ ಖಾದ್ಯ ಪದಾರ್ಥಗಳು ಬರತೊಡಗಿದವು. ನಾನು ನನ್ನ ಪಾಲಿಗೆ ಬಂದ ‘ಪೀಜಾ’ ವನ್ನು ರುಚಿ ನೋಡುತ್ತ, ಆಗಾಗ ವೈನ್ ಕುಡಿಯುತ್ತ ಕೂತೆ. ‘ಪೀಜಾ’ ಅನ್ನುವುದು ಇಟಲಿಗೇ ವಿಶಿಷ್ಟವಾದ ಒಂದು ಖಾದ್ಯ. ಟೊಮೆಟೊ, ನೀರುಳ್ಳಿ, ದೊಣ್ಣೆ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಇತ್ಯಾದಿ ಬಹುಬಗೆಯ ತರಕಾರಿಗಳಿಂದ ತಯಾರಿಸಿದ ರೊಟ್ಟಿಯಾಕಾರದ ಪೀಜಾ, ಈಗ ತೀರಾ ಲೋಕಪ್ರಿಯವಾದ ಖಾದ್ಯವಾಗಿದೆ. ಇಂಗ್ಲೆಂಡ್ ಅಮೆರಿಕಾಗಳಲ್ಲೂ ‘ಪೀಜಾ ಹಟ್’ ಎಂಬ ಹೆಸರಿನ ಉಪಹಾರಗೃಹಗಳು ಬಹು ಸಂಖ್ಯೆಯಲ್ಲಿವೆ. ನಾನು ಪೀಜಾ ಜೊತೆಗೆ ತಂದಿರಿಸಲಾದ ಇನ್ನೂ ಇತರ ಸಸ್ಯಾಹಾರಿ ಪದಾರ್ಥಗಳನ್ನು ತಿನ್ನುತ್ತ, ಕೂತ ಹಾಗೆ, ವಾದ್ಯಗಾರರ ತಂಡವೊಂದು ನಮ್ಮ  ಟೇಬಲ್‌ಗಳ ಸುತ್ತ ಇಟಾಲಿಯನ್ ಹಾಡುಗಳನ್ನು ಹಾಡುತ್ತ ಸಂಚರಿಸತೊಡಗಿತು. ಆ ಹಾಡುಗಳಾಗಲೀ, ಅದರ ಭಾಷೆಯಾಗಲಿ ನಮಗೆ ಅರ್ಥವಾಗದಿದ್ದರೂ, ಹಾಡುಗಾರರ ದನಿಯೊಳಗಿನ ಉತ್ಸಾಹವನ್ನೂ, ಆ ಉತ್ಸಾಹಕ್ಕನುಗುಣವಾದ ಕುಣಿತವನ್ನೂ, ಇಟಾಲಿಯನ್ ಭಾಷೆಯ ನಾದ – ಲಯಗಳನ್ನೂ ಗುರುತಿಸಿ ಸಂತೋಷಗೊಂಡೆ. ಆ ಸಂತೋಷ ಸೂಚಕವಾಗಿ, ಅಲ್ಲಿನ ಶಿಷ್ಟಾಚಾರದಂತೆ, ಒಂದಿಷ್ಟು ಭಕ್ಷೀಸನ್ನು ಅವರಿಗೆ ಕೊಟ್ಟೆ. ಹೀಗೆ ಪ್ರತಿಯೊಬ್ಬರೂ ಕೊಡುವ ಈ ಭಕ್ಷೀಸನ್ನು ತಮ್ಮ ವಾದ್ಯಗಳ ಮೇಲ್ ಭಾಗಕ್ಕೆ ಸಿಕ್ಕಿಸಿ ಮತ್ತೆ ಇನ್ನೂ ಒಂದು ಸುತ್ತು ಅವರ ಹಾಡುಗಾರಿಕೆ ಪ್ರಾರಂಭವಾಗುತ್ತಿತ್ತು. ಅಂತೂ ಈ ಹಾಡು, ಈ ವಾದ್ಯ, ನಾವು ಭೋಜನ ಮುಗಿಸಿ ಅಲ್ಲಿಂದ ಹೊರಟ ನಂತರವೂ ಮುಂದುವರಿದಿತ್ತು. ನಾವು ನಮ್ಮ ಹೋಟಲಿನ ಕೊಠಡಿಗಳನ್ನು ತಲುಪಿದಾಗ ನಡುರಾತ್ರಿ ಮೀರಿತ್ತು.

ಮಾರನೆಯ ದಿನದ ಕಾರ್ಯಕ್ರಮವೆಂದರೆ ರೋಂ ನಗರ ಸಂಚಾರ. ರೋಂ ನಗರವನ್ನು ನಮಗೆ ತೋರಿಸಲು, ಕಾಸ್‌ಮಾಸ್ ಕಂಪನಿಯವರು ಸ್ಥಳೀಯ ಗೈಡ್ ಆದ ಮಹಿಳೆಯೊಬ್ಬಳ ಮಾರ್ಗದರ್ಶನಕ್ಕೆ ನಮ್ಮನ್ನು ಒಪ್ಪಿಸಿದರು. ಹಿಂದಿನ ಇರುಳಿನಲ್ಲಿ ನಾವು ಅಸ್ಪಷ್ಟವಾಗಿ ಕಂಡ ರೋಂ ನಗರ, ಬೆಳಗಿನ ಹೊಳೆಯುವ ವಿಸ್ತಾರದಲ್ಲಿ ಅದ್ಭುತ – ರಮ್ಯವಾಗಿ ಹರಡಿಕೊಂಡಿತ್ತು. ಯೂರೋಪಿನ ಅತ್ಯುತ್ತಮವಾದ ಐದಾರು ಮಹಾನಗರಗಳನ್ನು ಹೆಸರಿಸುವುದಾದರೆ ಅವುಗಳಲ್ಲಿ ಅರ್ಧದಷ್ಟು ನಗರಗಳು ಇಟಲಿಯಲ್ಲೇ ಇವೆ. ವೆನಿಸ್, – ಫ್ಲಾರೆನ್ಸ್ – ರೋಂ – ಮಿಲಾನ್ ಹೀಗೆ ಹೆಸರಿಸಬಹುದಾದ ನಗರಗಳಲ್ಲಿ, ರೋಂ ವಿಸ್ತಾರ ಹಾಗೂ ಪ್ರತಿಷ್ಠೆಯ ದೃಷ್ಟಿಯಿಂದ ದೊಡ್ಡದು. ರೋಮ್ ತನ್ನ ಪ್ರಾಚೀನ ವಾಸ್ತು ಹಾಗೂ ಶಿಲ್ಪಗಳಿಗೆ ಹೆಸರಾಗಿರುವಂತೆ, ಈ ಸಾಂಪ್ರದಾಯಿಕವಾದ ಕಲಾ ಪ್ರತಿಭೆಯು, ಪುನರುಜ್ಜೀವನವೆಂದು ಗುರುತಿಸಲಾದ ಕಾಲದಲ್ಲಿ ನವನವೀನತೆಯಿಂದ ಅರಳಿಕೊಂಡ ಸ್ಥಳವೂ ಹೌದು. ಈ ಸಂದರ್ಭದಲ್ಲಿ ಮಹಾದೇವಾಲಯಗಳೂ, ವೈಭವಯುತವಾದ ಅರಮನೆಗಳೂ ಹಾಗೂ ಅತ್ಯುತ್ತಮವಾದ ವರ್ಣಚಿತ್ರ ಮತ್ತು ಶಿಲ್ಪಕಲೆಗಳೂ ವರ್ಧಿಸಿದವು. ಹಾಗೆ ನೋಡಿದರೆ ಪಾಶ್ಚಾತ್ಯ ಕಲೆಯ ಅರ್ಧದಷ್ಟು ಸಂಪತ್ತು ಇಲ್ಲೇ ಸಂಚಯಗೊಂಡಂತೆ ತೋರುತ್ತದೆ. ಇಡೀ ನಗರವೆ ಪ್ರಾಚೀನ ನಾಗರಿಕತೆಯ ಅವಶೇಷಗಳಿಂದ ಹಾಗೂ ಸ್ಮಾರಕಗಳಿಂದ ಒಂದು ಬಯಲು ವಸ್ತು ಪ್ರದರ್ಶನಾಲಯದಂತೆ ಭಾಸವಾಗುತ್ತದೆ. ಎಲ್ಲಿ ನೋಡಿದರೂ ಪ್ರಾಚೀನ ರೋಮನ್ನರ ವಾಸ್ತು-ಶಿಲ್ಪ ಸಾಹಸಗಳ ಪ್ರತೀಕವಾದ ಕಟ್ಟಡಗಳೂ ಪ್ರತಿಮೆಗಳೂ ಗೋಚರಿಸುತ್ತವೆ. ಅದರಲ್ಲೂ ಕಟ್ಟಡಗಳ ಎತ್ತರವಾದ ಸ್ತಂಭ ಶಿಲ್ಪಗಳಂತೂ, ಈ ವಾಸ್ತುವಿನ ವೈಶಿಷ್ಟ್ಯವೆಂಬಂತೆ ಎದ್ದು ಕಾಣುತ್ತವೆ. ವಾಸ್ತವವಾಗಿ ಸ್ತಂಭದ ಮಾದರಿಗಳನ್ನು ರೋಮನ್ನರು ಗ್ರೀಕರಿಂದ ಕಲಿತು, ಅದರ ಮೇಲೆ ಕಮಾನು ಹಾಗೂ ಗುಮ್ಮಟಗಳನ್ನು ಅಳವಡಿಸಿ ಗಾಥಿಕ್ ಎಂಬ ಬೃಹತ್ ವಿನ್ಯಾಸಗಳನ್ನು ಆವಿಷ್ಕರಿಸಿದರೆಂದು ಹೇಳಲಾಗಿದೆ. ಯೂರೋಪಿನಲ್ಲಿ ಹಾಗೂ ಇಂಗ್ಲೆಂಡಿನಲ್ಲಿರುವ ಹಳೆಯ ಕ್ರೈಸ್ತ ದೇವಾಲಯಗಳೆಲ್ಲವೂ ಬಹುಮಟ್ಟಿಗೆ ಗಾಥಿಕ್ ರಚನಾ ವಿನ್ಯಾಸದಿಂದ ಕೂಡಿವೆ. ರೋಮ್ ನಗರದ ಮಧ್ಯಭಾಗದಲ್ಲಿ ಪ್ರವಹಿಸುವ ಟೈಬರ್ ನದಿಯ ಎರಡೂ ಬದಿಗೆ ಈ ನಗರದ ಪ್ರಾಚೀನ ನಾಗರಿಕತೆಯ ಅವಶೇಷಗಳೂ ಸ್ಮಾರಕಗಳೂ ನಿಬಿಡವಾಗಿವೆ. ಈ ನದಿಯ ಮೇಲೆ ಹಲವೆಡೆಗೆ ಪ್ರಾಚೀನ ರೋಮನ್ನರು ನಿರ್ಮಿಸಿದ ಕಮಾನು ಮಾದರಿಯ ಸೇತುವೆಗಳು ಇಂದಿಗೂ ಕಲಾವಂತಿಕೆಯಿಂದ ರಾರಾಜಿಸುತ್ತವೆ. ಈ ನದಿಯ ಒಂದು ಪಾರ್ಶ್ವದಲ್ಲೇ ಇದೆ ಕಲೋಸಿಯಂ ಎಂದು ಕರೆಯಲಾಗುವ ವೃತ್ತಾಕಾರದ ಹಾಗೂ ಹಲವು ಕಮಾನುಗಳನ್ನೊಳಗೊಂಡ ಒಂದು ಬೃಹತ್ ಕಟ್ಟಡಗಳ ನಡುವಣ ಕ್ರೀಡಾಂಗಣ. ಈಗ ಅಲ್ಲಲ್ಲಿ ಶಿಥಿಲವಾಗಿರುವ ಈ ಕ್ರೀಡಾಂಗಣ, ಸುತ್ತ ವೃತ್ತಾಕಾರವಾದ ಮೂರುನಾಲ್ಕು ಅಂತಸ್ತುಗಳಲ್ಲಿ ಕೂತು ವೀಕ್ಷಿಸಬಹುದಾದ ವಿಭಾಗಗಳನ್ನು ಒಳಗೊಳ್ಳುವ ಕಟ್ಟಡದ ಸಮುಚ್ಚಯವಾಗಿದೆ. ಏಕಕಾಲಕ್ಕೆ ಸುಮಾರು ಐವತ್ತು ಸಾವಿರ ಪ್ರೇಕ್ಷಕರು ಕೂತು ನೋಡಬಹುದಾದ ಈ ವೃತ್ತಾಕಾರವಾದ ರಚನೆ ಕ್ರಿ.ಶ. ೭೨ ರಿಂದ ೭೮ರ ಕಾಲಮಾನದಲ್ಲಿ ಪೂರ್ಣಗೊಂಡಿತೆಂದು ಹೇಳಲಾಗಿದೆ. ಇದರ ನಡುವಣ ಆಳವಾದ ಹಾಗೂ ವೃತ್ತಾಕಾರವಾದ ಅಂಗಳ ಅನೇಕ ಭಯಾನಕವಾದ ನೆನಪುಗಳನ್ನು ತನ್ನಲ್ಲಿ ಒಳಗೊಂಡಿದೆ. ಯುದ್ಧದಲ್ಲಿ ಸೆರೆಯಾಳುಗಳಾದ, ಶತ್ರುಪಕ್ಷದ ಯೋಧರನ್ನು ಚಿತ್ರಹಿಂಸೆಗೆ ಗುರಿಪಡಿಸಲಾಗುತ್ತಿದ್ದುದು ಇಲ್ಲಿ; ಕ್ರೈಸ್ತ ಧರ್ಮೀಯರನ್ನು ಹಿಡಿದು ತಂದು ನಿಲ್ಲಿಸಿ, ಅವರ ಮೇಲೆ ಹಸಿದ ಸಿಂಹಗಳನ್ನು ಬಿಟ್ಟು, ಅವರನ್ನು ಆ ಸಿಂಹಗಳು ಕಚ್ಚಿ ಕೊಲ್ಲುವುದನ್ನು ವೀಕ್ಷಿಸುತ್ತಿದ್ದುದು ಇಲ್ಲಿ; ಅನೇಕ ನಿರಪರಾಧಿಗಳನ್ನು  ರಾಜದ್ರೋಹದ ಆಪಾದನೆ ಹೊರಿಸಿ ಕೊಲ್ಲುತ್ತಿದ್ದುದು ಇಲ್ಲಿ; ಈ ರಕ್ತರಂಜಿತ ದೃಶ್ಯಗಳನ್ನು ಅಂದಂದಿನ ರಾಜರಾಣಿಯರೂ, ಅಧಿಕಾರಿಗಳೂ ಹಾಗೂ ಕಿಕ್ಕಿರಿದ ಬಹುಸಂಖ್ಯೆಯ ಮಹಾಜನರೂ ‘ವಿನೋದ’ವೆಂಬಂತೆ ವೀಕ್ಷಿಸುತ್ತಿದ್ದುದು ಇಲ್ಲಿ.

ರೋಮನ್ನರು ರಥಪಂದ್ಯ (Charriate Race) ಗಳಲ್ಲಿ ವಹಿಸುತ್ತಿದ್ದ ಆಸಕ್ತಿ ವಿಶೇಷವಾದುದು. ಒಂದೆಡೆ ಈ ಪಂದ್ಯವು ನಡೆಯುತ್ತಿದ್ದ ಸ್ಥಳವನ್ನು ನಾವು ನೋಡಿದೆವು. ಐದುನೂರು ಗಜಗಳಷ್ಟು ಅಗಲವಾದ ಪಥವೊಂದರಲ್ಲಿ, ಏಕಕಾಲಕ್ಕೆ ನಾಲ್ಕು ರಥಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದುವಂತೆ. ಹಾಗೆಯೇ ನಮ್ಮ ಸಂಚಾರದ ಉದ್ದಕ್ಕೂ ಕ್ರಿಸ್ತಪೂರ್ವದ ರೋಮನರಿಗೆ ಸಂಬಂಧಿಸಿದ ಅನೇಕ ದೇವದೇವತೆಗಳ ದೇವಸ್ಥಾನಗಳನ್ನು ವೀಕ್ಷಿಸಿದೆವು. ಸುಮಾರು ನಡುಹಗಲವರೆಗೂ ಬಸ್ಸಲ್ಲಿ ಕೂತು, ನಮ್ಮ ಮಾರ್ಗದರ್ಶಕ ಮಹಿಳೆಯ ನಿರ್ದೇಶನ ಹಾಗೂ ಮಾಹಿತಿ ಪೂರ್ಣ ವಿವರಣೆಗೆ ಕಿವಿಗೊಡುತ್ತ, ಅಲ್ಲಲ್ಲಿ ಇಳಿದು ಚಾರಿತ್ರಿಕ ವಿಶೇಷದ ಸ್ಮಾರಕಗಳನ್ನು ನೋಡುತ್ತ, ಮಧ್ಯಾಹ್ನ ಎರಡೂವರೆಯ ಹೊತ್ತಿಗೆ ವ್ಯಾಟಿಕನ್ ಮ್ಯೂಸಿಯಂ ಹತ್ತಿರ ಬಂದೆವು.

ರೋ ನಗರ ಕ್ರೈಸ್ತಧರ್ಮದ ಕೇಂದ್ರ. ಈ ಧರ್ಮದ ‘ಜಗದ್ಗುರು’ ಇರುವುದು ಈ ರೋಂ ನಗರದ, ‘ವ್ಯಾಟಿಕನ್’ ಎಂಬ ಒಂದು ಸ್ವಯಂ ಸ್ವತಂತ್ರವಾದ ‘ನಗರ’ದಲ್ಲಿ. ರೋಂ ಮಹಾನಗರದೊಳಗೆ ಇರುವ ‘ವ್ಯಾಟಿಕನ್ ಸಿಟಿ’ ಅನ್ನುವುದು ಒಂದು ನೂರಾ ಹನ್ನೆರಡು ಎಕರೆಯಷ್ಟು ವಿಸ್ತಾರದ ಒಂದು ‘ಧರ್ಮ ನಗರ’- ಎನ್ನಬಹುದು. ೧೯೨೯ ರಿಂದ ಬೇರೆ ಯಾವ ಆಧಿಪತ್ಯಕ್ಕೂ ಒಳಗಾಗದೆ, ತನ್ನದೇ ಆದ ವ್ಯವಸ್ಥೆಯನ್ನು ರೂಪಿಸಿಕೊಂಡ, ಈ ಪರಿಸರದಲ್ಲಿ, ಜಗದ್ಗುರು ಪೋಪ್ ಅವರ ಅರ (ಗುರು) ಮನೆ, ಜಗತ್ ಪ್ರಸಿದ್ಧವಾದ ಸೇಂಟ್ ಪೀಟರ್ಸ್ ಮಹಾ ದೇವಾಲಯ, ಮ್ಯೂಸಿಯಂ – ಇತ್ಯಾದಿಗಳಿವೆ. ಪ್ರತಿವರ್ಷವೂ ಲಕ್ಷಾಂತರ ಕ್ರೈಸ್ತಧರ್ಮೀಯರು ಕ್ರಿಸ್ಮಸ್ ಸಮಯದಲ್ಲಿ ಜಗದ್ಗುರುಗಳ ಸಂದೇಶವನ್ನಾಲಿಸಿ, ಅವರ ಆಶೀರ್ವಾದವನ್ನು ಪಡೆಯಲು ಇಲ್ಲಿಗೆ ಬರುತ್ತಾರೆ. ಈ ಆವರಣದಲ್ಲಿರುವ ‘ಸೇಂಟ್ ಪೀಟರ್‌ನ ಮಹಾದೇವಾಲಯ’ ಇಡೀ ಜಗತ್ತಿನಲ್ಲಿ ಅತ್ಯಂತ ವಿಸ್ತಾರವಾದ ಒಂದು ಕ್ರೈಸ್ತ ದೇವಾಲಯ. ಅದರ ಎತ್ತರ, ಗಾತ್ರ ಹಾಗೂ ಅಗಲಗಳಿಂದ ದಂಗು ಬಡಿಸುವ ಈ ದೇವಾಲಯದ ಮುಂದಿರುವ ವಿಶಾಲವಾದ ಅಂಗಳದಲ್ಲಿ ಏಸುಕ್ರಿಸ್ತನ ಮೊದಲ ಶಿಷ್ಯನಾದ ಪೀಟರ್‌ನನ್ನು ಅಂದಿನ ರೋಮನ್ನರು ಶಿಲುಬೆಗೆ ಏರಿಸಿದರಂತೆ. ಕ್ರೈಸ್ತ ಧರ್ಮೀಯರ ಪ್ರಕಾರ ಈತನೆ ಅವರ ಮೊದಲ ಪೋಪ್ ಅಥವಾ ಧರ್ಮಗುರು. ಈ ದೇವಾಲಯದ ಸುತ್ತ ಹದಿನೈದು ಎಕರೆಗಳಗಲದ ಉದ್ಯಾನವಿದೆ. ಈ ಮಹಾದೇವಾಲಯದ ಒಂದಷ್ಟು ಭಾಗ, ಜಗತ್‌ಪ್ರಸಿದ್ಧ ವರ್ಣಚಿತ್ರಕಾರನೂ, ಶಿಲ್ಪಿಯೂ ಆದ ಮೈಕೇಲ್ ಏಂಜಲೋನ ಕಲಾಕೃತಿಗಳಿಂದ ಶ್ರೀಮಂತವಾಗಿದೆ. ಈ ಭಾಗವನ್ನೆ ‘ವ್ಯಾಟಿಕನ್ ಮ್ಯೂಸಿಯಂ’ ಎಂದು ಕರೆಯಲಾಗಿದೆ.

ಈ ಮ್ಯೂಸಿಯಂನಲ್ಲಿ ಸುಮಾರು ನೂರಾ ನಲವತ್ತರಷ್ಟು ಸಂಖ್ಯೆಯ ಸಂತರ ವಿಗ್ರಹಗಳಿವೆ. ಮೈಕೇಲ್ ಏಂಜಲೋ ಕೆತ್ತಿದ ಅತ್ಯಂತ ಅದ್ಭುತವಾದ ಅಮೃತಶಿಲಾಪ್ರತಿಮೆಗಳೂ ಇಲ್ಲಿವೆ. ಎಲ್ಲಕ್ಕಿಂತ ಮಿಗಿಲಾಗಿ ಆತನ ಶ್ರೇಷ್ಠ ಕಲಾಕೃತಿಗಳೆಂದು ಹೇಳಲಾದ ಬಹುಸಂಖ್ಯೆಯ ವರ್ಣಚಿತ್ರಗಳಿರುವುದು ‘ಸಿಸ್ಟ್ಯೆನ್ ಚಾಪೆಲ್’ನ ಒಳ ಛಾವಣಿಯಲ್ಲಿ. ಅಪರೂಪದ ಹಾಗೂ ತಿರುಚುಮುರುಚಾದ ಮತ್ತು ಭಾವತೀವ್ರತೆಯ ಚಿತ್ರಗಳನ್ನು ಬಿಡಿಸುವುದರಲ್ಲಿ ಅದ್ವಿತೀಯನೆಂದು ಹೆಸರಾದ ಮೆಕೇಲ್ ಏಂಜಲೋ, ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿ ಪ್ರಸ್ತಾಪಿತವಾಗಿರುವ ಕ್ರಿಸ್ತಾಗಮನ ಪೂರ್ವದ ಸಂತರನ್ನು ಅಂದಿನ ಪ್ರವಾಸಿ ಗ್ರಂಥಗಳ ಪ್ರಸಂಗಗಳ ಹಿನ್ನೆಲೆಯಲ್ಲಿ ಚಿತ್ರಿಸಿರುವ ಕ್ರಮ ಅದ್ಭುತವಾಗಿದೆ. ಈ ಚ್ಯಾಪೆಲ್‌ನ ವಿಸ್ತಾರವಾದ ಕಮಾನು ಛಾವಣಿಯಲ್ಲಿ ಮೈಕೇಲ್ ಏಂಜಲೋ ಅಟ್ಟಣೆಯನ್ನು ನಿರ್ಮಿಸಿಕೊಂಡು, ತನ್ನ ಹಣೆಗೆ ಉರಿಯುವ ಮೋಂಬತ್ತಿಗಳನ್ನು ಕಟ್ಟಿಕೊಂಡು, ಹಲವು ವರ್ಷಗಳ ಕಾಲ ಚಿತ್ರಿಸಿದನೆಂದು ಹೇಳಲಾಗಿದೆ. ಈ ‘ಸಿಸ್ಟೈನ್ ಚಾಪೆಲ್’ನ ಕೆಳಗೆ, ಏಕಕಾಲಕ್ಕೆ ಐನೂರು ಆರುನೂರು ಜನ ನಿಂತು, ತಮ್ಮ ತಲೆಯನ್ನು ಎತ್ತಿ, ಮೇಲಿನ ಕಮಾನಿನಾಕಾರದಲ್ಲಿ ಚಿತ್ರಿತವಾಗಿರುವ ವರ್ಣಚಿತ್ರ ಪ್ರಪಂಚವನ್ನು ವಿಸ್ಮಿತರಾಗಿ ನೋಡುತ್ತಿದ್ದರು. ಐದು ಶತಮಾನಗಳ ಹಿಂದೆ ಬರೆದ ಆ ವರ್ಣಚಿತ್ರಗಳ ಜೀವಂತಿಕೆ, ಹೊಚ್ಚ ಹೊಸತನ ಹಾಗೂ ಮಾನವೀಯ ಭಾವನೆಗಳ ಅತ್ಯಂತ ತೀವ್ರವೂ, ವೈವಿಧ್ಯಮಯವೂ ಆದ ಅಭಿವ್ಯಕ್ತಿ – ವಿಸ್ಮಯಗೊಳಿಸುತ್ತದೆ. ಈ ವರ್ಣಚಿತ್ರ ಸಮುಚ್ಚಯಗಳಲ್ಲಿ ‘ಕೊನೆಯ ತೀರ್ಪು’ (The last judgement) ಮತ್ತು ‘ಸೃಷ್ಟಿ’ (Creation) ಇಂದಿಗೂ ನನ್ನ ಕಣ್ಣಿಗೆ ಕಟ್ಟಿವೆ.

ರೋಂ ನಗರದಲ್ಲಿ ನಮಗೆ ದೊರಕಿದ ಪರಿಮಿತ ಅವಕಾಶದಲ್ಲಿ ನೋಡಲು ಸಾಧ್ಯವಾದದ್ದು ‘ನಾಲ್ಕು ನದಿಗಳ ಕಾರಂಜಿ’ (Fountain of four rivers)  ಎಂಬುದನ್ನು ಈ ಕಾರಂಜಿಯ ಶಿಲ್ಪದಲ್ಲಿ ನಾಲ್ಕು ನದಿಗಳ ಪ್ರತಿಮಾರೂಪವಿದ್ದು ಅವುಗಳಲ್ಲಿ ನಮ್ಮ ಗಂಗಾನದಿಯೂ ಸೇರಿದೆ ಅನ್ನುವುದು ಭಾರತೀಯರಾದ ನಮಗೆ ತೀರಾ ಕುತೂಹಲದ ಸಂಗತಿಯಾಗಿದೆ. ರೋಂ ನಗರದ ಚೌಕವೊಂದರಲ್ಲಿರುವ ಈ ಶಿಲ್ಪ ಸಮುಚ್ಚಯವನ್ನು ಕೆತ್ತಿದವನು ಇಟಲಿಯ ಬರ್ನಿನಿ ಎಂಬ ಶಿಲ್ಪಿ (ಕ್ರಿ. ಶ. ೧೫೯೮-೧೬೯೦). ಈ ನಾಲ್ಕು ನದಿಗಳ ಶಿಲ್ಪದಲ್ಲಿ, ನೈಲ್, ಡ್ಯಾನೂಬ್, ಗಂಗಾ ಮತ್ತು ರಯೋಡಿ ಪ್ಲಾಟಾ ನದಿಗಳ ಮೂರ್ತಿಗಳಿವೆ. ಆದರೆ ಈ ನದೀ ಮೂರ್ತಿಗಳೆಲ್ಲವೂ ಪುರುಷಾಕೃತಿಯಲ್ಲಿವೆ. ಗಂಗಾ ಎಂದು ಕರೆಯಲಾದ ವಿಗ್ರಹ, ಸ್ಯೂಸ್ ದೇವತೆಯನ್ನು ಹೋಲುವ, ದಷ್ಟಪುಷ್ಟ ಶರೀರದ, ಗಡ್ಡ ಮೀಸೆಗಳ ಮುಖದ ಒಬ್ಬ ಪುರುಷನದಾಗಿದೆ. ನದಿಗಳನ್ನು ಪುರುಷಾಕೃತಿಗಳಲ್ಲಿ ಕಲ್ಪಿಸಿಕೊಳ್ಳುವ, ಪಶ್ಚಿಮ ದೇಶದ ಶಿಲ್ಪಿಯ ಈ ಕಲೆಯಲ್ಲಿ ನಮ್ಮ ‘ಗಂಗೆ’ಗೆ ಒದಗಿರುವ ರೂಪಾಂತರ ನಮ್ಮಲ್ಲಿ ಅಂಥ ಉತ್ಸಾಹವನ್ನೇನೂ ಹುಟ್ಟಿಸಲಿಲ್ಲ. ಬಂಗಾಳಿ ಮಹಿಳೆ, ರಾಯ್ ಅವರ ಹೆಂಡತಿ, ಗಂಗೆಗೆ ಒದಗಿದ ಈ ಅವಸ್ಥೆಯನ್ನು ನೋಡಿ ‘ಹಾಯ್ ಹಾಯ್’ ಎಂದು ಹಣೆ ಚಚ್ಚಿಕೊಂಡಳು.

ಮರುದಿನ ನಮ್ಮ ಮುಂಜಾನೆಯ ಪಯಣ ಫ್ಲಾರೆನ್ಸ್ ಕಡೆಗೆ. ದಾರಿ ಉದ್ದಕ್ಕೂ ದಟ್ಟವಾದ ಹಸಿರು, ಅಲ್ಲಲ್ಲಿ ಎತ್ತರಗಳಲ್ಲಿ ಹಳೆಯ ಕಾಲದ ಕೋಟೆ ಕೊತ್ತಲಗಳು. ನಮ್ಮ ಪಯಣದ ಈ ದಿನವಂತೂ ಫ್ಲಾರೆನ್ಸ್ ನಗರದವರೆಗೂ ದಟ್ಟವಾದ ಮೋಡಗಳ ನೆರಳು ಹಾಸಿಕೊಂಡಿತ್ತು. ಫ್ಲಾರೆನ್ಸ್ ತಲುಪಿದಾಗ ಹನ್ನೆರಡೂವರೆ.

ಫ್ಲಾರೆನ್ಸ್ ಇಟಲಿಯ ಅತ್ಯಂತ ಸುಂದರವಾದ ನಗರಗಳಲ್ಲಿ ಒಂದು. ಇದು ಯೂರೋಪಿನ ಇತಿಹಾಸದಲ್ಲಿ ಸಂಭವಿಸಿದ ಪುನರುಜ್ಜೀವನದ ಕೇಂದ್ರ. ‘ಡಿವೈನ್ ಕಾಮೆಡಿ’ ಎಂಬ ಮಹಾಕಾವ್ಯವನ್ನು ಬರೆದ ಡಾಂಟೆಯ ಊರು; ಮೈಕೇಲ್ ಏಂಜಲೋ ಹುಟ್ಟಿ ಬೆಳೆದದ್ದು ಈ ಪರಿಸರದಲ್ಲಿ; ಲಿಯೋನಾರ್ಡೊ ಡಾ. ವಿಂಚಿ ಜಗತ್ಪ್ರಸಿದ್ಧವಾದ ಮೋನಾಲಿಸಾ ಎಂಬ ಚಿತ್ರವನ್ನು ಬರೆದದ್ದು ಇಲ್ಲಿ; ಮಹಾವಿಜ್ಞಾನಿ ಗೆಲಿಲಿಯೋನ ವೈಜ್ಞಾನಿಕ ಪ್ರತಿಭೆ ಅರಳಿಕೊಂಡದ್ದು ಇಲ್ಲಿ. ಸಮೃದ್ಧ ಹಸುರಿನ ಟಸ್ಕನ್ ಗುಡ್ಡಗಳಿಂದ ಆವೃತವಾದ ಈ ನಗರ, ಆರ‍್ನೋ ನದಿ ಪ್ರವಹಿಸುವ ಕಣಿವೆಯಗಲಕ್ಕೂ ಹರಡಿಕೊಂಡಿದೆ. ಈ ನಗರದ ಪಿಜಾಲೇ ಮೆಕೇಲ್ ಏಂಜಲೋ ಎಂಬ ಎತ್ತರವಾದ ಹಾಗೂ ಸಾಕಷ್ಟು ಅಗಲವಾದ ಸ್ಥಳವೊಂದರಲ್ಲಿ ನಿಂತು, ಕೆಳಗೆ ನೀಲವಾಗಿ, ದೀರ್ಘವಾಗಿ ಹರಿಯುವ ಆರ‍್ನೋ ನದಿಯನ್ನೂ, ಅದರ ಎರಡೂ ಕಡೆಗೆ ಹರಡಿಕೊಂಡ ನಗರದ ಗೋಪುರಗಳನ್ನೂ, ಕಟ್ಟಡಗಳನ್ನೂ ನೋಡಿದೆವು. ಆಗಲೇ ಆಕಾಶದಲ್ಲಿ ದಟ್ಟವಾದ ಮೋಡಗಳು ಜಮಾಯಿಸುತ್ತಿದ್ದವು. ನಾವು ಕೊಂಚ ಹೊತ್ತು ಅಲ್ಲಿ ನಿಂತು, ಬಸ್ಸನ್ನೇರಿ ಸಂತಾಕ್ರೂಸ್ ಎಂಬ ಚೌಕವೊಂದನ್ನು ತಲುಪಿದೆವು. ನಾವು ಆ ಸುತ್ತ ಮುತ್ತ ಇರುವ ಅಂಗಡಿ ಬೀದಿಗಳಲ್ಲಿ ಸುತ್ತಾಡಿ, ಲಂಚ್ ಮುಗಿಸಿ ಮತ್ತೆ ಅಲ್ಲೇ ನಿಲ್ಲಿಸಿದ ಬಸ್ಸಿನ ಬಳಿಗೆ ಮೂರು ಘಂಟೆಗೆ ಸರಿಯಾಗಿ ಬರಬೇಕೆಂದೂ, ಅನಂತರ ಬಸ್ಸಲ್ಲಿ ಇಡೀ ನಗರವನ್ನು ಸುತ್ತು ಹಾಕಿ ಸಂಜೆ ಪ್ರವಾಸಿ ಸಂಸ್ಥೆಯವರು ಗೊತ್ತುಪಡಿಸಿದ ಹೋಟಲಿನಲ್ಲಿ ವಿಶ್ರಾಂತಿ ಪಡೆಯಬಹುದೆಂದೂ ನಮಗೆ ಸೂಚಿಸಲಾಯಿತು. ನಾವೆಲ್ಲ ಆ ಚೌಕದಲ್ಲಿದ್ದ ಬೃಹದಾಕಾರವಾದ ಅಮೃತಶಿಲೆಯ ಶಿಲ್ಪವನ್ನು ನೋಡಿಕೊಂಡು, ತಮ ತಮಗೆ ತೋರಿದಂತೆ ಬೀದಿಗಳ ಉದ್ದಕ್ಕೂ  ನಡೆದೆವು. ಫ್ಲಾರೆನ್ಸ್ ಇಟಲಿಯ ವಿಲಾಸ ವಸ್ತುಗಳಿಗೆ, ಚರ್ಮದ ಕೈಗಾರಿಕೆಗೆ ಮತ್ತು ಬಂಗಾರದ ವಡವೆ ವಸ್ತುಗಳಿಗೆ ಪ್ರಸಿದ್ಧಿಯಾದುದು. ನಾನು ಸ್ವಲ್ಪ ಹೊತ್ತು ಈ ಅಂಗಡಿಗಳನ್ನು ಕುತೂಹಲದಿಂದ ಹೊಕ್ಕು ಹೊರಬರುತ್ತ, ಅಲ್ಲೇ ಇದ್ದ ‘ಸ್ಯಾಂಡ್‌ವಿಚ್ ಷಾಪ್’ ಒಂದನ್ನು ಪ್ರವೇಶಿಸಿ, ವೆಜಿಟಬಲ್ ಸ್ಯಾಂಡ್‌ವಿಚ್ ಮತ್ತು ಜತೆಗೊಂದು ಐಸ್ ಕ್ರೀಂ ಅನ್ನು ಕೊಂಡುಕೊಂಡು ನನ್ನ ‘ಲಂಚ್’ ಅನ್ನು ಮುಗಿಸಿದೆ. ನಾನು ನನ್ನ ಈ ‘ಭೋಜನ’ದಲ್ಲಿ ತೊಡಗಿದಾಗಲೇ ದಟ್ಟವಾದ ಮೋಡಗಳಿಂದಾವೃತವಾದ ಆಕಾಶವೆಲ್ಲಾ ಕಪ್ಪಾಗಿ, ಮಧ್ಯಾಹ್ನದೊಳಕ್ಕೇ ಸಂಜೆ ನುಸುಳಿ ಬಂದ ಹಾಗೆ ತೋರಿತು. ಅಂಗಡಿಯ ಅಲೆತಕ್ಕೆ ಹೋದ ನನ್ನ ಸಹ ಪ್ರಯಾಣಿಕರು ಒಬ್ಬೊಬ್ಬರಾಗಿ ಬಸ್ಸಿನ ಬಳಿಗೆ ಬರುವ ಹೊತ್ತಿಗಾಗಲೇ ಆಕಾಶದಲ್ಲಿ ಗುಡುಗು – ಮಿಂಚುಗಳು ತಮ್ಮ ಅಬ್ಬರವನ್ನು ಪ್ರದರ್ಶಿಸತೊಡಗಿದ್ದವು. ಬಸ್ಸನ್ನೇರಿ ಕೂತು, ನಮ್ಮ ಮಾರ್ಗದರ್ಶಿ ಅಲೆನ್‌ಗಾಗಿ ಕಾಯುತ್ತಿದ್ದಂತೆ, ಧಾರಾಕಾರವಾದ ಮಳೆ ಪ್ರಾರಂಭವಾಗಿ, ಆ ಮಳೆಯ ನಡುವೆ ಛತ್ರಿಯನ್ನು ಹಿಡಿದು, ಅದೆಲ್ಲಿಂದಲೋ ಅಲೆನ್ ಬಸ್ಸೊಳಗೆ ಬಂದು ಕೂತ. ಆದರೇನು ಆ ಬಿರುಮಳೆಯ ಅಬ್ಬರದಲ್ಲಿ ನಮ್ಮ ನಗರ ಸಂಚಾರ ಸ್ಥಗಿತಗೊಂಡಂತೆಯೇ. ಈ ಬಗೆಯ ಕಾಲಬದ್ಧ ಪಯಣದ ಪರಿಮಿತಿಗಳೇ ಹೀಗೆ. ಒಂದು ವಾರ ಸುತ್ತಿದರೂ ತೃಪ್ತಿಯಾಗುವ ಹಾಗೆ ನೋಡಿದೆವು ಎನ್ನಲಾಗದ ರೋಂ ನಗರವನ್ನು ಕೇವಲ ಒಂದೆರಡು ದಿನಗಳಲ್ಲಿ – ಅದೂ ಬಸ್ಸಲ್ಲಿ ಕೂತು ನೋಡಲು ಸಾಧ್ಯವೆ? ಇನ್ನು ಫ್ಲಾರೆನ್ಸ್‌ನಂತಹ ಶಿಲ್ಪಕಲೆಗಳ ನಗರವನ್ನು, ಕೇವಲ ಅರ್ಧದಿನದಲ್ಲಿ ನೋಡಲು ಸಾಧ್ಯವೆ? ಇನ್ನು ನಮ್ಮ ಪ್ರವಾಸ ಕಾರ್ಯಕ್ರಮದಲ್ಲಿ ದೊರೆತ ಈ ಅರ್ಧದಿನದ ಅವಕಾಶವನ್ನೂ ಅನಿರೀಕ್ಷಿತವಾದ ಈ ಮಳೆ ನುಂಗಿ ಹಾಕಿಬಿಟ್ಟಿತು. ಹೀಗಾಗಿ ನಾವು ಕಂಡಷ್ಟೆ ನಮ್ಮ ಪುಣ್ಯ ಅಂದುಕೊಂಡು, ಮಳೆ ನಿಂತೀತೇನೋ ಎಂದು ಕಾದೆವು. ಇಲ್ಲ, ನಿಲ್ಲಲಿಲ್ಲ, ನಿಲ್ಲುವಂತೆಯೂ ತೋರಲಿಲ್ಲ. ಹೀಗೆ ಈ ಜಡಿಮಳೆಯಲ್ಲಿ, ಸುಮ್ಮನೆ ಬಸ್ಸಲ್ಲಿ ಕೂರುವುದಕ್ಕಿಂತ ನಮ್ಮನ್ನು ಹೋಟಲಿಗಾದರೂ ಕರೆದುಕೊಂಡು ಹೋಗಿ ವಿಶ್ರಾಂತಿಗೆ ಅವಕಾಶ ಮಾಡಿಕೊಡುವುದು ಒಳ್ಳೆಯದೆಂದು ನಮ್ಮ ಸಹ ಪ್ರಯಾಣಿಕರನೇಕರು ಅಲೆನ್‌ಗೆ ಒತ್ತಾಯಿಸತೊಡಗಿದರು. ಹಾಗೂ ಹೀಗೂ ಮುಕ್ಕಾಲು ಗಂಟೆ ಕಾದು ನೋಡಿದ ನಂತರ, ಇದು ನಿಲ್ಲುವ ಮಳೆ ಅಲ್ಲ ಎಂದು ಖಾತ್ರಿಯಾದ ಮೇಲೆ ನಮ್ಮ ಬಸ್ಸು ನಿಧಾನಕ್ಕೆ ಚಲಿಸತೊಡಗಿತ್ತು. ಇಡೀ ಮಳೆ ಹನಿಗಳ ಹೊಗೆ ಮಬ್ಬಿನ ನಡುವೆ ಹೊರಟ ಬಸ್ಸು ಹೋಟಲ್ ತಲುಪಿದಾಗ ಆಗಲೇ ಸಂಜೆ ಐದು ಘಂಟೆ.

ಅತ್ಯಂತ ಸುಂದರವಾದ ಕಲಾಕೃತಿಗಳ ನಗರ ಎಂದು ಹೇಳಲಾದ ಫ್ಲಾರೆನ್ಸ್ ಅನ್ನು ವೀಕ್ಷಿಸಲು ಸಾಧ್ಯವಾಗದ ಕಾರಣದಿಂದ ಉಂಟಾದ ನಿರಾಸೆಯನ್ನು ತುಂಬಿಕೊಂಡ ಬಸ್ಸು, ಮರುದಿನ ಬೆಳಿಗ್ಗೆ, ಪೀಸಾ ಎಂಬ ಊರಿನ ಕಡೆ ಧಾವಿಸುತ್ತಿತ್ತು. ಪೀಸಾ ಫ್ಲಾರೆನ್ಸ್‌ದಿಂದ ಪಶ್ಚಿಮಕ್ಕೆ ಎಂಬತ್ತು ಮೈಲಿ ದೂರದಲ್ಲಿರುವ ಒಂದು ಪಟ್ಟಣ. ಅಲ್ಲಿ ಒಂದು ಹಳೆಯ ವಿಶ್ವವಿದ್ಯಾಲಯವಿದೆ. ಈ ವಿಶ್ವದ ರಚನೆಯನ್ನು ಕುರಿತು ಮೊಟ್ಟ ಮೊದಲಿಗೆ ಪ್ರಾಯೋಗಿಕವಾಗಿ ವಿವರಿಸಿ, ಅಂದಿನ ಧರ್ಮಾಧಿಕರಣದ ಆಗ್ರಹಕ್ಕೆ ಗುರಿಯಾದ ಸುಪ್ರಸಿದ್ಧ ವಿಜ್ಞಾನಿಯಾದ ಗೆಲಿಲಿಯೋ ಪೀಸಾ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಅಧ್ಯಾಪಕನಾಗಿ, ‘ಚಲನಶಾಸ್ತ್ರದ’ ಬಗ್ಗೆ ಸಂಶೋಧನೆ ಮಾಡಿ, ಅನಂತರ ಬಹುಕಾಲ ಫ್ಲಾರೆನ್ಸ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಅಧ್ಯಾಪಕನಾಗಿ  ಕೆಲಸ ಮಾಡಿದ್ದ. ಹೀಗಾಗಿ ಫ್ಲಾರೆನ್ಸ್ ಮತ್ತು ಪೀಸಾ ಈ ಎರಡು ನಗರ ಪರಿಸರಗಳು ಗೆಲಿಲಿಯೋನ ನೆನಪುಗಳನ್ನು ಬೆಸೆದುಕೊಂಡಿವೆ. ಎಂಬತ್ತು ಮೈಲಿಗಳ, ಒಂದೂವರೆ ಗಂಟೆಗಳ ಪಯಣದಲ್ಲಿ ನನ್ನ ಮನಸ್ಸು ಯೂರೋಪಿನ ರಿನೇಸಾನ್ಸ್ ಕಾಲದ ವಿಜ್ಞಾನಿಯಾದ ಗೆಲಿಲಿಯೋನನ್ನು ಕುರಿತು ಯೋಚಿಸತೊಡಗಿತ್ತು.

ಈ ವಿಶ್ವದ ರಚನೆಯನ್ನು ಕುರಿತು ಬಹು ಹಿಂದಿನಿಂದಲೂ ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳು ವಿಚಾರ ಮಾಡುತ್ತಲೇ ಬಂದಿದ್ದಾರೆ. ಈ ವಿಷಯದಲ್ಲಿ ಬಹು ಕಾಲದಿಂದ ಪ್ರಚಲಿತವಾಗಿರುವ ಸಿದ್ಧಾಂತ ಎಂದರೆ ಈ ಭೂಮಿಯೇ ಈ ವಿಶ್ವದ ಕೇಂದ್ರ ಅನ್ನುವುದು. ಸಕಲ ವಿದ್ಯಾಪಾರಂಗತನೆಂಬ ಪ್ರತೀತಿಯನ್ನುಳ್ಳ ಹಾಗೂ ಎಲ್ಲ ವಿಚಾರಗಳಿಗೂ ಅವನೆ ಪ್ರಮಾಣ ಪುರುಷನೆಂದೂ ಒಪ್ಪಿತವಾದ ಅರಿಸ್ಟಾಟಲನೂ ಮತ್ತು ಅವನ ನಂತರದ ಐದು ಶತಮಾನಗಳೀಚೆಗಿನ ಟಾಲೆಮಿ ಎಂಬ ಖಗೋಳ ಶಾಸ್ತ್ರಜ್ಞನೂ, ಈ ಭೂಕೇಂದ್ರ ಸಿದ್ಧಾಂತವನ್ನು ಜನದ ನಂಬಿಕೆಯ ಒಂದು ಭಾಗವನ್ನಾಗಿ ರೂಢಿಸಿಬಿಟ್ಟಿದ್ದರು. ಅಲ್ಲದೆ ಈ ಸಿದ್ಧಾಂತವು ರೋಮನ್ ಕ್ಯಾಥೋಲಿಕ್ ಧರ್ಮದ ಕ್ರೈಸ್ತ ದೇವತಾಶಾಸ್ತ್ರದೊಂದಿಗೆ ಹೊಂದಿಕೊಂಡದ್ದರಿಂದ ಈ ಸಿದ್ಧಾಂತವನ್ನು ಯಾರೂ ಪ್ರಶ್ನಿಸಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಕ್ರೈಸ್ತ ಧಾರ್ಮಿಕ ಸಂಪ್ರದಾಯದ ಪ್ರಕಾರ ಈ ಭೂಮಿಯು, ಜೀವಿಗಳಲ್ಲೆಲ್ಲ ಶ್ರೇಷ್ಠನಾದ ಮಾನವನಿಗಾಗಿ, ಆ ಭಗವಂತನಿಂದ ಮೊಟ್ಟ ಮೊದಲು ಸೃಷ್ಟಿಸಲ್ಪಟ್ಟ ಕಾರಣದಿಂದ, ಈ ಭೂಮಿಯೆ ವಿಶ್ವದ ಕೇಂದ್ರ; ಇನ್ನುಳಿದ ಗ್ರಹಗಳೇನಿದ್ದರೂ ಇದರ ಸುತ್ತ ಸುತ್ತುವಂಥವು. ಈ ಸಿದ್ಧಾಂತವನ್ನು ಅರಿಸ್ಟಾಟಲನ ನಂತರ ಒಂದು ಶತಮಾನವಾದ ಮೇಲೆ ಅರಿಸ್ಟಾರ್ಕಸ್ ಎಂಬ ಖಗೋಲ ವಿಜ್ಞಾನಿಯೂ ಮತ್ತು ಹದಿನೈದನೆಯ ಶತಮಾನದ ಕೋಪರ್‌ನಿಕಸ್ ಎಂಬಾತನೂ ನಿರಾಕರಿಸಿ, ಈ ಭೂಮಿ ವಿಶ್ವದ ಕೇಂದ್ರದಲ್ಲಿದೆ ಎಂದು ಭಾವಿಸುವ ಬದಲು, ಸೂರ್ಯನೆ ವಿಶ್ವದ ಕೇಂದ್ರದಲ್ಲಿದ್ದಾನೆ ಎಂದು ಇಟ್ಟುಕೊಂಡರೆ, ಆಗ ಗ್ರಹಗಳ ಚಲನೆಯನ್ನು ಇನ್ನೂ ಸುಲಭವಾಗಿ ವಿವರಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದರೂ, ಅದಕ್ಕೆ ವಿಶ್ವವಿದ್ಯಾಲಯಗಳಲ್ಲಾಗಲೀ, ಸಾರ್ವಜನಿಕರಲ್ಲಾಗಲೀ ಯಾವ ಮನ್ನಣೆಯೂ ದೊರೆಯಲಿಲ್ಲ. ಯಾಕೆಂದರೆ ಪರಂಪರಾಗತವಾದ ಹಾಗೂ ಪವಿತ್ರವಾದ ಕ್ರೈಸ್ತ ಧಾರ್ಮಿಕ ಗ್ರಂಥಗಳಲ್ಲಿ ಉಕ್ತವಾಗಿರುವ ವಿಚಾರಗಳನ್ನು ಪ್ರಶ್ನಿಸುವುದು ಹಾಗೂ ವಿರೋಧಿಸುವುದು ಧರ್ಮದ್ರೋಹವೆಂದು ಪರಿಗಣಿತವಾಗಿ, ಅಂಥವರು ರೋಂ ನಗರದಲ್ಲಿ ಈ ಬಗೆಯ ‘ಪಾಷಂಡಿ’ಗಳನ್ನು ವಿಚಾರಣೆಗೆ ಗುರಿಪಡಿಸುವ ಧಾರ್ಮಿಕ ನ್ಯಾಯಾಲಯದ ಮುಂದೆ ನಿಲ್ಲಬೇಕಾದ ಭಯವಿತ್ತು.

ಈ ಹಿನ್ನೆಲೆಯಲ್ಲಿ – ಹದಿನಾರನೆಯ ಶತಮಾನದ ಈ ಪುನರುಜ್ಜೀವನದ ಕಾಲದ ವೈಜ್ಞಾನಿಕ ಚಿಂತನೆಯ ಮಹಾಪ್ರತಿಭೆಯಂತೆ ಬಂದನು ಗೆಲಿಲಿಯೋ, ಕೈಯಲ್ಲಿ ಟೆಲಿಸ್ಕೋಪು ಹಿಡಿದು. ದೂರದರ್ಶಕ ಯಂತ್ರವನ್ನು ಮೊಟ್ಟಮೊದಲ ಬಾರಿಗೆ ಬಳಸಿ ತಾನು ಕಂಡ ಸತ್ಯವನ್ನು ಗೆಲಿಲಿಯೋ ಘೋಷಿಸಿದ : ‘ಈ ಭೂಮಿ ಇದುವರೆಗೂ ನಾವು ತಿಳಿದುಕೊಂಡಂತೆ ವಿಶ್ವದ ಕೇಂದ್ರವಲ್ಲ. ಅದೂ ಅನೇಕ ಗ್ರಹಗಳಲ್ಲಿ ಒಂದು. ಇಂತಹ ಹಲವು ಗ್ರಹಗಳಲ್ಲಿ ಒಂದಾಗಿರುವ ಈ ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ.’

ಗೆಲಿಲಿಯೋನ ಈ ಹೊಸ ಆವಿಷ್ಕಾರದಿಂದ ಮೊದಲು ಬೆಚ್ಚಿ ಬಿದ್ದದ್ದು ಕ್ರೈಸ್ತ ಧಾರ್ಮಿಕ ಪ್ರಪಂಚ. ‘ಇದೇನಿದು? ಯಾವ ಭೂಮಿಯನ್ನು ನಮ್ಮ ಸೃಷ್ಟಿಕರ್ತನಾದ ಆ ಪ್ರಭುವು, ಈ ಸೃಷ್ಟಿಯ ಶಿಖರವಾದ ಮಾನವನಿಗಾಗಿ ಮೊಟ್ಟಮೊದಲು ನಿರ್ಮಿಸಿ, ಅದರ ಕೈಂಕರ್ಯಕ್ಕಾಗಿ ಸೂರ್ಯ ಚಂದ್ರ ನಕ್ಷತ್ರಾದಿಗಳನ್ನು ಸುತ್ತಲೂ ಜೋಡಿಸಿದನೋ, ಅಂಥ ಜಗತ್ತಿನ ಕೇಂದ್ರವನ್ನು ಇವನಾವನೋ ಒಬ್ಬ ನಿರಾಕರಿಸಿ, ಈ ಭೂಮಿಯನ್ನು ಒಂದು ಯಃಕಶ್ಚಿತ್ ಗ್ರಹ ಮಾತ್ರವೆಂದು ಸಿದ್ಧಮಾಡಿ, ನಮ್ಮನ್ನು ಸೃಷ್ಟಿಸಿದ ಆ ಕರುಣಾಮಯನಾದ ಆ ಭಗವಂತನಿಗೂ, ಆತನ ವಾಣಿಗೂ, ಆತನ ಭಕ್ತರಿಗೂ ಅವಮಾನ ಮಾಡಿದ್ದಾನೆ. ಹೀಗೆ ಪವಿತ್ರವಾದ ಧಾರ್ಮಿಕ ಗ್ರಂಥದಲ್ಲಿ ಉಕ್ತವಾದ ಸತ್ಯಗಳಿಗೆ ವ್ಯತಿರಿಕ್ತವಾಗಿ ಮಂಡಿಸುವ ಈ ಸುಳ್ಳು ಸಿದ್ಧಾಂತವನ್ನು  ಹಿಂದಕ್ಕೆ ತೆಗೆದುಕೊಂಡು, ನಮ್ಮ ಪವಿತ್ರ ಮತವು ಹೇಳುವ ಸಿದ್ಧಾಂತವನ್ನು ಆತ ಒಪ್ಪಿಕೊಳ್ಳದಿದ್ದರೆ, ಅವನನ್ನು ಪಾಷಂಡಿ ಎಂದು ಪರಿಗಣಿಸಿ ಜೀವಸಹಿತ ಸುಡಬೇಕಾಗುತ್ತದೆ’ – ಎಂಬ ಹುಯಿಲನ್ನೆಬ್ಬಿಸಿ, ಗೆಲಿಲಿಯೋನನ್ನು ‘ಷಾಷಂಡ ವಿಚಾರಣಾ ನ್ಯಾಯಾಲಯ’ದ ಮುಂದೆ ಎಳೆದು ತಂದು ನಿಲ್ಲಿಸಲಾಯಿತು.

ಗೆಲಿಲಿಯೋಗೆ ಗೊತ್ತಿತ್ತು. ತನ್ನ ಸಿದ್ಧಾಂತವೇ ಸರಿ ಎಂದು. ಆದರೆ ತನ್ನನ್ನು ವಿಚಾರಣೆ ಮಾಡಿದ ಧಾರ್ಮಿಕ ಮತಾಂಧ ಮೂರ್ಖರನ್ನು ಎದುರು ಹಾಕಿಕೊಳ್ಳುವುದು ವಿವೇಕದ ಕ್ರಮವಲ್ಲವೆಂದು ನಿಶ್ಚಯಿಸಿ, ಆತ ಅವರ ತೃಪ್ತಿಗಾಗಿ ತನ್ನ ಸಿದ್ಧಾಂತವನ್ನು ಹಿಂತೆಗೆದುಕೊಂಡು, ಅವರ ಸಿದ್ಧಾಂತವೇ ಸರಿ ಎಂದು ತಪ್ಪೊಪ್ಪಿಗೆ ಪತ್ರವನ್ನು ಬರೆದು ಕೊಟ್ಟು, ನ್ಯಾಯಾಲಯದಿಂದ ಹೊರಕ್ಕೆ ಬರುವಾಗ ಅಂದುಕೊಂಡನಂತೆ, ‘ನಾನು ಶಿಕ್ಷೆಗೆ ಹೆದರಿ ನನ್ನ ಸಿದ್ಧಾಂತವನ್ನು ಹಿಂದಕ್ಕೆ ಪಡೆದರೇನಾಯಿತು? ಭೂಮಿ ಸೂರ್ಯನ ಸುತ್ತ ಸುತ್ತಿಯೇ ಸುತ್ತುತ್ತದೆ.’ ನಂತರ ಗೆಲಿಲಿಯೋ ಎಂಟು ವರ್ಷಗಳ ಕಾಲ ಗೃಹಬಂಧನಕ್ಕೆ ಒಳಗಾಗಬೇಕಾಯಿತಂತೆ. ಇಂದಿಗೂ ನಾವು ಗೆಲಿಲಿಯೋನ ಕಾಲಕ್ಕಿಂತ ನಿಜವಾಗಿಯೂ ವೈಚಾರಿಕವಾಗಿ, ಮುಂದುವರಿದಿದ್ದೇವೆಯೆ ಎಂಬ ಪ್ರಶ್ನೆಗೆ ‘ಹೌದು’ ಎಂದು ಉತ್ತರ ಕೊಡುವ ಧೈರ್ಯ ನಮಗಿಲ್ಲ.

ನಾವು ಕೂತ ಬಸ್ಸು ಆರ‍್ನೋ ನದೀ ತೀರದ, ಪೀಸಾ ನಗರವನ್ನು ಪ್ರವೇಶಿಸತೊಡಗಿತ್ತು. ಬಸ್ಸು ನಿಂತ ನಂತರ, ಒಂದಿಷ್ಟು ಚಹಾ ಕುಡಿದು, ಒಂದು ದೊಡ್ಡ ಪ್ರಾಕಾರವನ್ನು ದಾಟಿ ಮುಂದೆ ನಡೆದೊಡನೆಯೆ ಕಾಣಿಸುತ್ತದೆ, ಪೀಸಾದ ವಾಲಿಕೊಂಡ ಗೋಪುರಸ್ತಂಭವೊಂದು. ಈ ಊರಿನ ವಿಶೇಷವೇ ಇದು. ವಿಸ್ತಾರವಾದ ಬಯಲ ನಡುವೆ, ದೊಡ್ಡ ಚರ್ಚೊಂದರ ಎದುರಿಗೆ ಸಣ್ಣ ಸಣ್ಣ ಕಂಬಗಳನ್ನುಳ್ಳ ವೃತ್ತಾಕಾರದ ಆರು ಹಂತಗಳನ್ನುಳ್ಳ ಒಂದುನೂರಾ ಎಂಬತ್ತು ಅಡಿಗಳೆತ್ತರದ ಗೋಪುರವೊಂದು ವಾಸ್ತುವಿನ ಚಾತುರ್ಯವನ್ನು ಪ್ರದರ್ಶಿಸಲೆಂಬಂತೆ ವಾಲಿಕೊಂಡು ನಿಂತುಕೊಂಡಿದೆ. ಇದರ ಅಡಿಪಾಯ ಕೊಂಚ ಕೊಂಚವೇ ಸಡಿಲವಾಗುತ್ತ ಕಾಲಕ್ರಮದಲ್ಲಿ ಇಡೀ ಗೋಪುರವೇ ಕುಸಿದು ಬೀಳುವ ಕಾಲ ದೂರವಿಲ್ಲವೆಂದು ಹೇಳುತ್ತಾರೆ. ಈ ವಾಲುಗೋಪುರದ ತುದಿಯನ್ನೇರಿ, ಗೆಲಿಲಿಯೋ ಬೇರೆ ಬೇರೆ ತೂಕದ ಎರಡು ವಸ್ತುಗಳನ್ನು ಕೆಳಗೆ ಬಿಟ್ಟನೆಂದೂ, ಅವೆರಡೂ ಏಕಕಾಲಕ್ಕೆ ನೆಲಕ್ಕೆ ಬಿದ್ದು, ಹೆಚ್ಚು ತೂಕದ  ವಸ್ತು, ಅದಕ್ಕಿಂತ ಕಡಿಮೆ ತೂಕದ ವಸ್ತುವಿಗಿಂತ ವೇಗದಲ್ಲಿ ಹಾಗೂ ಕಡಿಮೆ ಕಾಲದಲ್ಲಿ ನೆಲಕ್ಕೆ ಬೀಳುತ್ತದೆಂಬ ಅರಿಸ್ಟಾಟಲನ ಸಿದ್ಧಾಂತವನ್ನು ಈ ಪ್ರಯೋಗ ಸುಳ್ಳಾಗಿಸಿತ್ತೆಂದೂ, ದಂತಕತೆಯೊಂದು ಪ್ರಚಲಿತವಾಗಿದೆ. ಆದರೆ ಅರಿಸ್ಟಾಟಲನ ಕಾಲದ ‘ಚಲನ ಸಿದ್ಧಾಂತ’ವನ್ನು ಗೆಲಿಲಿಯೋ, ತನ್ನ ಪ್ರಯೋಗ – ಪರೀಕ್ಷೆಗಳಿಂದ ನಿರಾಕರಿಸಿದ್ದಂತೂ ನಿಜ. ಈ ವಾಲು ಗೋಪುರದ ಸುತ್ತ ಅನೇಕ ‘ನೆನಪಿನ ವಸ್ತು’ (ಸೋವನೀರ್)ಗಳ ಅಂಗಡಿಗಳು ಸದಾ ಪ್ರವಾಸಿಗಳಿಂದ ಕಿಕ್ಕಿರಿದಿರುತ್ತವೆ.

ಪೀಸಾದಿಂದ ಜಿನೋವಾ ಕಡೆಗೆ ಪಯಣ ಮಾಡಿದಂತೆ ಮತ್ತೆ ಎತ್ತರವಾದ ಪರ್ವತ ಪಂಕ್ತಿಗಳನ್ನು ಪ್ರವೇಶಿಸಿದೆವು. ಇಟಲಿಯ ಉತ್ತರಕ್ಕೆ ಹೋದಂತೆ, ಫ್ರಾನ್ಸಿನ ಗಡಿಯನ್ನು ಸಮೀಪಿಸುವ ದಾರಿಯುದ್ದಕ್ಕೂ ಅತ್ಯಂತ ಎತ್ತರವಾದ ಪರ್ವತಮಂಡಲಗಳು ಎರಡೂ ಕಡೆ ತಮ್ಮ ದೈತ್ಯ ಶಿಖರಗಳಿಂದ ದಂಗುಬಡಿಸುತ್ತವೆ. ಅಗಲವಾದ ದಟ್ಟ ಹಸುರಿನ ಕಣಿವೆಗಳು, ಕಣಿವೆಗಳ ಉದ್ದಕ್ಕೂ ಕಣ್ಣಿಗೆ ಬೀಳುವ ಹಳ್ಳಿಗಳು – ಪಟ್ಟಣಗಳು; ಅಲ್ಲಲ್ಲಿ ಕಣಿವೆಯೊಳಗೆ ತೂಗಡಿಸುವ ಮಂಜು; ಹಿಂಜರಿದ ಮಂಜಿನ ನಡುವೆ ಥಟ್ಟನೆ ತೆರೆದುಕೊಳ್ಳುವ ಕನ್ನಡಿ ಚೂರಿನಂಥ ಸರೋವರಗಳು; ತುಂಡು ತುಂಡಾದ ಬೆಳ್ಳಿಗೆರೆಯಂಥ ಹಳ್ಳ ಹೊಳೆಗಳು; ಹೆಜ್ಜೆ ಹೆಜ್ಜೆಗೊಂದು ಸುರಂಗಗಳು; ಮತ್ತೆ ದಟ್ಟ ಹಸುರಿನ ಗಿರಿಗಳು; ಆ ಗಿರಿಗಳ ಮೇಲಿಂದ ಕೆಳಗಿನವರೆಗೆ ಹಂತಹಂತವಾದ ಮನೆಗಳು. ಇಟಲಿ ನಮ್ಮ ದೇಶದಂತೆ ಅತ್ಯಧಿಕ ಜನಸಂಖ್ಯೆಯ ದೇಶ ಅನ್ನುವುದನ್ನು ದಾರಿ ಉದ್ದಕ್ಕೂ ಕಣ್ಣಿಗೆ ಕಾಣುವ ಊರು ಕೇರಿ – ಹಳ್ಳಿ- ನಗರಗಳು ದೃಢಪಡಿಸುತ್ತಿದ್ದವು. ನಮ್ಮ ದೇಶದಂತೆಯೆ, ಭ್ರಷ್ಟಾಚಾರಕ್ಕೂ ಇಟಲಿ ಹೆಸರುವಾಸಿಯಾಗಿದ್ದರೂ, ಆ ಕಾರಣದಿಂದ ಆ ದೇಶದ ಪ್ರಗತಿ ಹಿನ್ನಡೆದಂತೇನೂ ತೋರಲಿಲ್ಲ. ಇಲ್ಲಿನ ನಗರ-ಪಟ್ಟಣಗಳ ಅಚ್ಚುಕಟ್ಟುತನವಾಗಲೀ, ನಾಗರಿಕರಿಗೆ ಒದಗಿಸಿರುವ ಸೌಲಭ್ಯಗಳಾಗಲೀ, ದಾರಿಯುದ್ದಕ್ಕೂ ನಿರ್ಮಿತಿಯಾಗಿರುವ ಹೆದ್ದಾರಿಗಳ ವ್ಯವಸ್ಥೆಯಾಗಲಿ ಎಲ್ಲೂ ನಮಗೆ ಯಾವ ಬಗೆಯ ಅನಾನುಕೂಲಗಳನ್ನೂ ಉಂಟು ಮಾಡುವಂತಿರಲಿಲ್ಲ. ಅನೇಕ ಘಂಟೆಗಳ ಕಾಲ, ಬೆಳಗಿಂದ ಸಂಜೆಯತನಕ ಪಯಣ ಮಾಡಿದರೂ, ಮೈ ಕೈ ನೋವಾಗುವುದಿಲ್ಲ. ಉಟ್ಟಬಟ್ಟೆಗಳು ಧೂಳಿನಿಂದ ಮಲಿನವಾಗುವುದಿಲ್ಲ. ಅಂಥ ಸುಗಮ ಸಂಚಾರದ ವ್ಯವಸ್ಥೆ ಹಾಗೂ ಪರಿಸರ – ಇಡೀ ಯುರೋಪಿನಲ್ಲಿ. ನಮ್ಮ ದೇಶದಲ್ಲಿ ಇಂಥ ಸುದೀರ್ಘವಾದ ಪ್ರಯಾಣವನ್ನು ಕೈಕೊಂಡಾಗ ಪ್ರಯಾಣಿಕರು ಒಳಗಾಗುವ ‘ಅವಸ್ಥೆ’ಗಳಾವುವೂ ಇಲ್ಲಿ ಪ್ರಾಪ್ತವಾಗುವುದಿಲ್ಲ. ಅಂಥದೊಂದು ಶಿಸ್ತು ಹಾಗೂ ದಕ್ಷತೆಗಳು, ಬಹುಶಃ ಇಲ್ಲಿ ಎಲ್ಲವನ್ನೂ ನಿಯಂತ್ರಿಸುತ್ತವೆ ಎಂದು ಕಾಣುತ್ತದೆ.

ಮಧ್ಯಾಹ್ನದ ವೇಳೆಗೆ ದಟ್ಟ ಹಸುರಿನ ಕಣಿವೆಯಗಲಕ್ಕೂ ಹಬ್ಬಿಕೊಂಡ, ಜಿನೋವಾ ಎಂಬ ದೊಡ್ಡದೊಂದು ಪ್ರಾಚೀನ ನಗರವನ್ನು ಹಾದು, ಮತ್ತೆ ಬೆಟ್ಟದಂಚುಗಳ ಕಡಿದಾದ ದಾರಿಯ ಮೆಡಿಟರೇನಿಯನ್ ಸಮುದ್ರದ ಪಕ್ಕದಲ್ಲಿ ‘ನೀಸ್’ ಎಂಬ ಪ್ರವಾಸಿಪ್ರಿಯ ನಗರದ ದಿಕ್ಕಿಗೆ ಹೊರಟೆವು. ಹಲವು ಘಂಟೆಗಳ ಕಾಲ ಬೆಟ್ಟ-ಕಡಲುಗಳ ನಡುವಣ ಈ ಪಯಣ ಅತ್ಯಂತ ರೋಮಾಂಚಕಾರಿ ಯಾಗಿತ್ತು. ಬೆಟ್ಟಗಳು, ಅಲ್ಲಲ್ಲಿ ತಮ್ಮ ವಕ್ರವೂ, ಕಡಿದೂ ಆದ ಮೈಗಳನ್ನು, ದೂರ ದೂರದವರೆಗೆ ಕಡಲಿನೊಳಕ್ಕೆ ಚಾಚಿಕೊಂಡು ಬಿದ್ದಿದ್ದವು. ಕಡಲಿಗೆ ಸಮಾನಾಂತರವಾಗಿ ಹಬ್ಬಿಕೊಂಡಿದ್ದ ಬೆಟ್ಟಗಳ ದಾರಿಯಲ್ಲಿ ಹೋದಂತೆ, ಬಲಗಡೆಗೆ ಏರಿಳಿಯಲು ಪರ್ವತಗಳು, ಎಡಗಡೆಗೆ ಬೆಟ್ಟಗಳ ಬಂಡೆಮೈಗಳಿಗೆ ಭೋರೆಂದು ಬಂದು ಬಡಿಯುವ ವಿಸ್ತಾರವಾದ ನೀಲಿಯ ಕಡಲು, ಕಡಲ ಮೇಲೆ ಪಟಬಿಚ್ಚಿ ತೇಲುವ ದೋಣಿಗಳು, ಹಡಗುಗಳು – ಸಂಜೆಯ ಬಿಸಿಲಿನಲ್ಲಿ ಒಂದು ವಿಲಕ್ಷಣವಾದ ವಾತಾವರಣವನ್ನು ಚಿತ್ರಿಸಿದ್ದವು. ಕೊಂಚ ಹೊತ್ತಿನಲ್ಲೇ, ನಾವು ಬೆಟ್ಟದೆತ್ತರದ  ದಾರಿಯಿಂದ ಥಟ್ಟನೆ  ಕೆಳಗೆಲ್ಲೋ ತೆರೆದುಕೊಂಡ ದೊಡ್ಡ ನಗರವೊಂದನ್ನು ಕಾಣುತ್ತ, ಕ್ರಮ ಕ್ರಮೇಣ ಬಳಸುದಾರಿಗಳ ಮೂಲಕ ಇಳಿಯುತ್ತ ಆ ನಗರದ ಕಟ್ಟಡಗಳ ನಡುವಣ ಬೀದಿಗಳನ್ನು ಹಾದು ಅಂದಿನ ನಮ್ಮ ನಿಲುಗಡೆಯ ಹೋಟಲನ್ನು ತಲುಪಿದೆವು.

‘ಫ್ರೆಂಚ್ ರಿವೇರಾ’ ಎಂದು ಕರೆಯಲಾದ, ಮೆಡಿಟರೇನಿಯನ್ ತೀರದ ಸುಪ್ರಸಿದ್ಧವಾದ ಪ್ರವಾಸಿ ಕೇಂದ್ರವಾದ ನೀಸ್ ಎಂಬ ಹೆಸರಿನ ತುಂಬ ಆಕರ್ಷಕವಾದ ಈ ನಗರದ ಅರ್ಧಚಂದ್ರಾಕೃತಿಯ ತೀರದಲ್ಲಿ ಮರುದಿನ ಬೆಳಿಗ್ಗೆ, ಹನ್ನೊಂದು ಗಂಟೆಯವರೆಗೂ ಅಲೆದಾಡಿದೆವು. ಫ್ರಾನ್ಸ್ ದೇಶದ ಈ ಪ್ರವಾಸಿ ನಗರದಲ್ಲಿ ದೇಶ ದೇಶದ ಪ್ರತಿಷ್ಠಿತ ಹಾಗೂ ಶ್ರೀಮಂತ ವ್ಯಕ್ತಿಗಳನೇಕರು ಮನೆಗಳನ್ನು ಕಟ್ಟಿಸಿಕೊಂಡು, ವರ್ಷಕ್ಕೆ ಒಂದೆರಡು ಸಲ ಬಂದು ಹೋಗುತ್ತಾರಂತೆ. ಅರ್ಧಚಂದ್ರಾಕೃತಿಯ ಕಡಲ ತೀರದ ಉದ್ದಕ್ಕೂ ವಸತಿಗೃಹಗಳು, ರೆಸ್ಟೋರಾಂಟುಗಳು, ಪ್ರವಾಸಿಗಳ  ಅನುಕೂಲಕ್ಕಾಗಿ ಇರುವ ಮಾಹಿತಿ  ಕೇಂದ್ರಗಳು ಗೋಚರಿಸುತ್ತವೆ. ನಾವು ಕೆಲವರು, ಕಡಲಂಚಿನ ಎತ್ತರವಾದ ಕಟಕಟೆಯ ಸಂಚಾರ ಪಥಗಳ ಮೇಲೆ ನಿಂತು ಎದುರಿಗೆ ಚಾಚಿಕೊಂಡ ಕಡುನೀಲಿಯ ಕಡಲ ವಿಸ್ತಾರವನ್ನು ವಿಸ್ಮಯಾನಂದದಿಂದ ವೀಕ್ಷಿಸಿದೆವು. ನನಗೆ ಅತ್ಯಂತ ವಿಶೇಷವಾಗಿ ಕಂಡದ್ದೆಂದರೆ ಮೆಡಿಟರೇನಿಯನ್ ಸಮುದ್ರದ ಉಜ್ವಲ ನೀಲಿ. ನಾನು ಇದುವರೆಗೂ ಕಂಡ ಯಾವ ಕಡಲಿಗೂ ಈ ಉಜ್ವಲ  ನೀಲಮಣಿಯ ಸೊಬಗು ಇದ್ದಂತೆ ತೋರಲಿಲ್ಲ. ಅಷ್ಟು ದಟ್ಟವಾದ, ಥಳಥಳಿಸುವ ನೀಲಿಯ ಕಡಲು ಮೇರೆಯರಿಯದಂತೆ ನನ್ನೆದುರು ಹರಹಿಕೊಂಡಿತ್ತು. ಬೆಳಗಿನ ಶುಭ್ರವಾದ ಆಕಾಶ ಕೂಡಾ ಅಷ್ಟೇ ನೀಲಿಯಾಗಿ ಶೋಭಿಸಿತ್ತು. ಕೆಳಗೆ ನಿರಂತರ ಚಲನಶೀಲವಾದ ಉಜ್ವಲವಾದ ನೀಲಿ, ಮೇಲೆ ನಿಶ್ಚಲವಾದ ಹಾಗೂ ಧ್ಯಾನದಂತೆ ವ್ಯಾಪಿಸಿಕೊಂಡ ಅಚಂಚಲ ಕೋಮಲವಾದ ಆಕಾಶದಲ್ಲಿ ನೀಲಿ. ಈ  ಎರಡು ನೀಲಿಯ ನಡುವೆ ನಾನು ಕರಗಿಹೋಗದ ಹಾಗೆ ನಿಂತು, ಅಪೂರ್ವವಾದ ಅನುಭವವೊಂದನ್ನು ತುಂಬಿಕೊಂಡೆ.

ಇಡೀ ದಿನ ಫ್ರಾನ್ಸ್ ದೇಶದುದ್ದಕ್ಕೂ ಪಯಣ. ಅಂದಿನ ನಮ್ಮ ಗುರಿ ಲಿಯಾನ್ ಎಂಬ ನಗರವನ್ನು ಸಂಜೆಯ ಹೊತ್ತಿಗೆ ತಲುಪಿ, ಅಲ್ಲಿ ತಂಗಿದ್ದು ಮರು ದಿನ ಮತ್ತೆ ಪ್ಯಾರಿಸ್ ಕಡೆಗೆ ಪ್ರಯಾಣ ಮಾಡುವುದು. ನೀಸ್ ನಗರವನ್ನು ಬಿಟ್ಟು ಹೊರಟ ನಂತರ ಸುಮಾರು ಮೂರು ಘಂಟೆಗಳ ಕಾಲ ನಾವಿನ್ನೂ ಫ್ರಾನ್ಸ್ ದೇಶದೊಳಗೆ ಚಾಚಿಕೊಂಡಿರುವ ಆಲ್ಫ್  ಪರ್ವತದ  ಅಂಚಿನಲ್ಲೆ ಸಂಚರಿಸಿದೆವು. ಹಿಂದಿನ ದಿನ ಹಾಗೂ ಬೆಳಿಗ್ಗೆ ಕಂಡ ಕಡಲು ಹಿಂದಾಗಿ ನಾವು ಮತ್ತೆ ಬೆಟ್ಟಗಳ ಹಾಗೂ ದಟ್ಟ ಹಸುರಿನ ಸೀಮೆಯಲ್ಲಿದ್ದೆವು. ದಾರಿ ಉದ್ದಕ್ಕೂ ದಟ್ಟವಾದ ಹಸುರನ್ನು ಉಟ್ಟುಕೊಂಡು ಕೂತ ಬೆಟ್ಟಗಳ  ಮೈತುಂಬ ಹರಡಿಕೊಂಡ ಊರುಗಳನ್ನು ಕಂಡೆವು. ಬೆಟ್ಟದ ಮೈತುಂಬ, ಹಚ್ಚ ಹಸುರಿನ ನಡುವೆಯೇ,  ಆ ಹಸುರನ್ನು ನಾಶ ಮಾಡದೆಯೇ ಹೊಂದಿಕೊಂಡು ಕೂತ ಮನೆಗಳನ್ನು ನೋಡಿ ಆಶ್ಚರ್ಯವಾಯಿತು. ನಾಗರಿಕತೆಗೂ, ನಿಸರ್ಗಕ್ಕೂ ಯಾವುದೇ ಸಂಘರ್ಷವಿಲ್ಲದ ಸಹಬಾಳ್ವೆಯ ಸಂಕೇತಗಳಂತೆ ತೋರಿದವು, ಬೆಟ್ಟಗಳ  ತುಂಬಾ ಹರಡಿಕೊಂಡಿದ್ದ  ಆ ಊರ ಮನೆಗಳು. ಕಟ್ಟಡಗಳನ್ನು ಕಟ್ಟುವುದೆಂದರೆ ಮರಗಿಡಗಳ ಹಸಿರನ್ನು  ನಾಶ ಮಾಡುವುದು ಎಂದು ಅರ್ಥವಲ್ಲ. ಆ ಮರಗಿಡಗಳ ಹಸಿರನ್ನು ಉಳಿಸಿಕೊಂಡೂ, ಹಸಿರಿನ ಸೊಗಸಿಗೆ ಆಘಾತ ಮಾಡದಂತೆ ವಸತಿಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯ ಅನ್ನುವುದನ್ನು ಪ್ರಾಯೋಗಿಕವಾಗಿ ತೋರಿಸುವ ಕ್ರಮ ಇದು. ನನ್ನ ಇಡೀ ಯೂರೋಪು ಹಾಗೂ ಇಂಗ್ಲೆಂಡಿನ ಪ್ರವಾಸ ಕಾಲದಲ್ಲಿ ನಾನು ಗಮನಿಸಿದ ಬಹುಮುಖ್ಯವಾದ ಸಂಗತಿ ಎಂದರೆ, ಈ ದೇಶಗಳ ಜನ ದಟ್ಟವಾದ ಹಸಿರನ್ನು ತಮ್ಮ ಬದುಕಿನ ಒಂದು ಭಾಗವೆಂಬಂತೆ ಉಳಿಸಿಕೊಂಡಿರುವ ಕ್ರಮ; ಎಲ್ಲೂ ನಿಸರ್ಗದ ಮೇಲೆ ಅತ್ಯಾಚಾರ ನಡೆಯಿಸದೆ, ಅದನ್ನೊಂದು ಜೀವಧಾತುವೆಂಬಂತೆ ಉಳಿಸಿಕೊಳ್ಳುವುದರ ಹಿಂದಿರುವ ವಿವೇಕ. ನಮ್ಮಲ್ಲಾದರೋ ನಾವು ಯಾವ ವಿವೇಚನೆಯೂ ಇಲ್ಲದೆ ಪರಿಸರವನ್ನು ಧ್ವಂಸ ಮಾಡಿದ್ದೇವೆ. ಪರಿಸರ ಸಂರಕ್ಷಣೆಯನ್ನೂ, ಅಭಿವೃದ್ಧಿಶೀಲತೆಯನ್ನೂ ಒಟ್ಟಿಗೇ ಸರಿತೂಗಿಸಿಕೊಂಡು ಹೋಗುವುದು ಹೇಗೆ ಎಂಬುದನ್ನು ನಾವಿನ್ನೂ ಕಂಡುಕೊಳ್ಳಲು ಅಸಮರ್ಥರಾಗಿದ್ದೇವೆ.

ಲಿಯಾನ್ ನಗರವನ್ನು ತಲುಪಿದಾಗ ಸಂಜೆ ಆರು ಘಂಟೆಯಾಗಿತ್ತು. ಊರ ನಡುವೆ ರ‍್ಹೋನ್ ಎಂಬ ನದಿಯೊಂದು ಹರಿಯುತ್ತದೆ. ತುಂಬ ಅಗಲವಾದ ಈ  ನದಿಯ ನೀರಿನಲ್ಲಿ ಅತ್ತಿತ್ತ ನಿಂತ ನಗರದ ಸೌಧಗಳ ಛಾಯೆಯೂ ಪ್ರವಹಿಸುವಂತೆ ತೋರುತ್ತಿತ್ತು. ನಗರದ ಕಟ್ಟಡಗಳ ರಚನೆಯಲ್ಲಿ ಯೂರೋಪಿಯನ್ ವಾಸ್ತುಕಲೆಯ ಮಾದರಿ ಎದ್ದು ಕಾಣುವಂತಿತ್ತು. ನಾಲ್ಕೈದು ಅಂತಸ್ತಿನ, ಚೌಕಾಕಾರವಾದ ಕಟ್ಟಡಗಳೊಳಗೆ ಸ್ತಂಭಶಿಲ್ಪದ ಚೌಕಟ್ಟುಗಳೂ, ಕಮಾನುಗಳೂ ಮತ್ತು ಅಲ್ಲಲ್ಲಿ ಉಚಿತವರಿತು ಜೋಡಿಸಲಾದ ಮೂರ್ತಿಶಿಲ್ಪ ಮತ್ತಿತರ ಅಲಂಕರಣಗಳೂ ಕಣ್ಣನ್ನು ಸೆಳೆಯುವಂತಿವೆ. ಇಡೀ ಯೂರೋಪಿನ ಬಹುತೇಕ ನಗರಗಳೆಲ್ಲಾ (ಇಂಗ್ಲೆಂಡೂ ಸೇರಿದಂತೆ) ಗ್ರೀಕ್ ಹಾಗೂ ರೋಮನ್ ವಾಸ್ತು ಪರಂಪರೆಯ ಲಕ್ಷಣಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಂತೆ ತೋರುತ್ತವೆ.

ಮರುದಿನ ಲಿಯಾನ್ ನಗರದಿಂದ ಪ್ಯಾರಿಸ್ ಕಡೆಗೆ – ಏಳು ಗಂಟೆಗಳ ಪಯಣ. ಎಂದಿನಂತೆ ದಾರಿಯ ನಡುವೆ, ಕಾಫಿ ಬಿಡುವು ಮತ್ತು ಊಟದ ಬಿಡುವು. ದಾರಿಯುದ್ದಕ್ಕೂ ವಿಸ್ತಾರವಾದ ದ್ರಾಕ್ಷಿಯ ತೋಟಗಳು. ಅಲ್ಲಲ್ಲಿ ದಟ್ಟ ಹಸುರಿನ ಏರಿಳಿತಗಳು. ಸೆಪ್ಟೆಂಬರ್ ತಿಂಗಳ ಕಾಲವಾದುದರಿಂದ ಇಲ್ಲಿನ ಮರದ ಎಲೆಗಳಿಗೆ ಬಗೆ ಬಗೆಯ  ಬಣ್ಣಗಳು ಬಂದಿದ್ದವು. ಛಳಿಗಾಲ ಸಮೀಪಿಸಿದಂತೆ ಹಣ್ಣಾಗಿ ಉದುರುವ ಎಲೆಗಳಿಗೆ ಬರುವ ವರ್ಣವೈವಿಧ್ಯ ವಿಶೇಷವಾದದ್ದು. ಅದರಲ್ಲೂ ಅಮೆರಿಕಾದ ಪೆನ್ಸಿಲ್‌ವೇನಿಯಾ ಪರಿಸರದಲ್ಲಿನ ಮರದ ಎಲೆಗಳಿಗೆ ಬಂದು ಕೂಡಿಕೊಳ್ಳುವ ವರ್ಣ ವೈವಿಧ್ಯವನ್ನು ನೋಡಲು, Fall Season ಎಂದು ಕರೆಯುವ  ಈ ಕಾಲದಲ್ಲಿ ಪ್ರವಾಸಿಗಳು ಹಾತೊರೆಯುತ್ತಾರೆ. ಆ ಬಗೆಯ ಪ್ರವಾಸಿಗಳಲ್ಲಿ ನಾನೂ ಒಬ್ಬನಾಗಿದ್ದೆ – ಕೆಲವು ವರ್ಷಗಳ ಹಿಂದೆ. ಆದರೆ ಪ್ಯಾರಿಸ್‌ನ ದಾರಿಯಲ್ಲೂ ಅದೇ Fall Season  ನ ಒಂದು ಅನುಕರಣೆಯನ್ನು ಮಾತ್ರ ನೋಡಬಹುದಾಗಿತ್ತು. ಊಟದ ಬಿಡುವಿನ ನಂತರ, ಈ ಹಸುರಿನ ದೃಶ್ಯಗಳನ್ನು ದಾಟಿಕೊಂಡು, ಸುದೀರ್ಘವಾದ ಬಂಡೆ ಬೆಟ್ಟಗಳನ್ನು ಬಳಸಿಕೊಂಡು ಮತ್ತೆ ಬಯಲುನಾಡನ್ನು ಪ್ರವೇಶಿಸಿದೆವು. ಪ್ಯಾರಿಸ್ ನಗರ ಹತ್ತಿರವಾದಂತೆ ಮತ್ತೆ ದಟ್ಟವಾಗಿ ಕೋಟೆಗಟ್ಟಿದ ಹಾಗೂ ದೂರದೂರದವರೆಗೆ ವ್ಯಾಪಿಸಿದ ಕಾಡಿನ ನಡುವೆ ಬಸ್ಸು ಓಡುತ್ತಿತ್ತು. ಈ ಎರಡೂ ಕಡೆಯ ಅರಣ್ಯ, ಒಂದು ಕಾಲಕ್ಕೆ ಫ್ರಾನ್ಸಿನ ಚಕ್ರವರ್ತಿಗಳ ಬೇಟೆ ಹಾಗೂ ವಿನೋದದ ನೆಲೆಯಾಗಿತ್ತೆಂದೂ, ಅದನ್ನು ಇಂದಿಗೂ ಹಾಗೆಯೆ ಉಳಿಸಿಕೊಳ್ಳಲಾಗಿದೆಯೆಂದೂ ನಮ್ಮ ಮಾರ್ಗದರ್ಶಿ ಅಲೆನ್ ಹೇಳಿದ. ಕೊಂಚ ಹೊತ್ತಿನಲ್ಲೇ ಪ್ಯಾರಿಸ್ ನಗರವನ್ನು ಪ್ರವೇಶಿಸಿ ಮಧ್ಯಾಹ್ನ ಮೂರೂವರೆಗೆ ಸರಿಯಾಗಿ ವಿಸ್ತಾರವಾದ ಚೌಕವೊಂದರಲ್ಲಿ ಬಸ್ಸು ನಿಂತಿತು. ನಮ್ಮ ಪ್ರವಾಸದ ಕೊನೆಯ ನಿಲುಗಡೆಯಾದ ಈ ನಗರದಲ್ಲಿ ನಮ್ಮ ಪಾಲಿಗೆ ಉಳಿದ ಕೇವಲ ಒಂದೂವರೆ ದಿನದಲ್ಲಿ, ಪ್ರೇಕ್ಷಣಿಯ ಸ್ಥಳಗಳನ್ನು ತೋರಿಸಲು ಈ ಪ್ರವಾಸಿ ಸಂಸ್ಥೆಯವರು ಗೊತ್ತುಪಡಿಸಿದ  ಸ್ಥಳೀಯ  ಮಾರ್ಗದರ್ಶಕ ಮಹಿಳೆ ಬಸ್ಸನ್ನು ಪ್ರವೇಶಿಸಿ ಮೊದಲು ಫ್ರೆಂಚ್ ಭಾಷೆಯಲ್ಲಿ, ಅನಂತರ ಇಂಗ್ಲಿಷ್‌ನಲ್ಲಿ ತನ್ನ ಪರಿಚಯವನ್ನು ಮಾಡಿಕೊಂಡಳು.

೪ –

ಪ್ಯಾರಿಸ್ ಯೂರೋಪಿನ ಭೋಗ – ವೈಭವಗಳ ರಾಜಧಾನಿ. ಬೆಳಕಿನ, ಬೆಡಗಿನ, ವಿಲಾಸಗಳ ಮಾಯಾನಗರಿ. ಕಲೆಗಾರರ, ಸಾಹಿತಿಗಳ, ಶ್ರೀಮಂತರ, ವಿಚಾರವಂತರ ಬೀಡು. ಅಡುಗೆಯವರ, ಲಫಂಗರ, ದಗಾಕೋರರ, ಪ್ರದರ್ಶನದ ಹುಡುಗಿಯರ ನೆಲೆ. ಸುಖವನ್ನು, ಸಂತೋಷವನ್ನು, ಷೋಕಿಯನ್ನು ಹಾಗೂ ಬದುಕಿನ ವಿವಿಧ ಶೈಲಿಗಳನ್ನು ಹುಡುಕಿಕೊಂಡು ಬರುವವರ ಆಕರ್ಷಣೆಯ ಕೇಂದ್ರ. ಬಹುಬಗೆಯ ಸುಗಂಧ ದ್ರವ್ಯಗಳು ಬೇಕೆ ? ಜಾಸ್‌ಗೀತ ಬೇಕೆ ? ರಾಕ್ ಅಥವಾ ಶಾಸ್ತ್ರೀಯ ಸಂಗೀತ ಬೇಕೆ ? ನಾಟ್ಯ ಮಂದಿರಗಳ ವಿವಿಧ ಶೈಲಿಯ ನರ್ತನಗಳು ಬೇಕೆ ? ಕ್ಯಾಬರೆ ಬೇಕೆ? ನಾಟಕಗಳು ಬೇಕೆ ? ವಿನೋದ -ವಿಹಾರಗಳು ಬೇಕೆ ? ರುಚಿ ರುಚಿಯಾದ ತಿಂಡಿ – ತಿನಿಸುಗಳು ಬೇಕೆ ? ಎಲ್ಲವೂ ಇಲ್ಲಿ ಸಮೃದ್ಧವಾಗಿವೆ. ಯಾವತ್ತೂ ನಿದ್ರಿಸದೆ, ಸದಾ ಎಚ್ಚರವಾಗಿರುತ್ತ,  ಜೀವನ ಸಂತೋಷವೆಂಬುದು ಸದಾ ಪುಟಿಯುವ ನಗರ ಪ್ಯಾರಿಸ್.

ಈ ಊರಿನಲ್ಲಿ ನೋಡಬಹುದಾದ ನೋಟಗಳು ಅಸಂಖ್ಯವಾಗಿವೆ. ಎಫಿಲ್ ಟವರ್ ಒಂದೇ ಅಲ್ಲ, ಅಷ್ಟೇ ಕುತೂಹಲಕಾರಿಯಾದ ಇನ್ನೆಷ್ಟೋ ಇವೆ ಈ ಊರಿನಲ್ಲಿ. ಕೈ ತುಂಬ ಹಣವಿರಬೇಕು,  ಸಾಕಷ್ಟು  ವಿರಾಮವಾದ ಅವಕಾಶವಿರಬೇಕು, ಮೈಯಲ್ಲಿ ಉತ್ಸಾಹವಿರಬೇಕು, ಫ್ರೆಂಚ್ ಭಾಷೆಯ ಪರಿಜ್ಞಾನವಿರಬೇಕು. ಆಗ ನೋಡಬಹುದು – ವಿವರವಾಗಿ ಈ ನಗರವನ್ನು.

ನಮ್ಮ ಪಾಲಿಗಿದ್ದದ್ದು ಕೇವಲ ಒಂದೂವರೆ ದಿನ. ಅವಲಂಬಿಸಿದ್ದು ಕಾಸ್ಮಾಸ್ ಕಂಪನಿಯ ಬಸ್ಸನ್ನು, ಹಾಗೂ ಅದು ಗೊತ್ತುಮಾಡಿದ್ದ ಸ್ಥಳೀಯ ಮಾರ್ಗದರ್ಶಿಯನ್ನು.

ಮೊದಲು ಈ ಮಾರ್ಗದರ್ಶಿ ನಮ್ಮನ್ನು ಕರೆದುಕೊಂಡು ಹೋದದ್ದು ಸುಪ್ರಸಿದ್ಧವಾದ ನಾಟರ್‌ಡೇಂ ಚರ್ಚ್‌ಗೆ. ಪ್ಯಾರಿಸ್‌ನ ನಡುಭಾಗದಲ್ಲಿ ಪ್ರವಹಿಸುವ ಸೈನ್ ನದಿಯ ಎರಡು ಕವಲುಗಳ ನಡುವಣ ದ್ವೀಪದಂತಿರುವ  ಸ್ಥಳದಲ್ಲಿ ನಿಂತಿದೆ ಈ ಬೃಹತ್ ದೇವತಾಮಂದಿರ. ನಾಲ್ಕುನೂರಾ ಇಪ್ಪತ್ತು ಅಡಿ ಉದ್ದ ಮತ್ತು ನೂರೈವತ್ತು ಅಡಿ ಅಗಲವಾದ ಈ ಬೃಹದಾಕೃತಿಯ ಕಟ್ಟಡದ ಮುಂದೆ, ಮೂರು ಮಹಾದ್ವಾರಗಳಿವೆ. ಪ್ರತಿಯೊಂದು ದ್ವಾರದ ಮುಂದಿರುವ ದೊಡ್ಡ ದೊಡ್ಡ ಕಮಾನುಗಳ ತುಂಬ ಅನೇಕ ವಿಗ್ರಹಗಳು ಕೆತ್ತಲ್ಪಟ್ಟಿವೆ. ಒಳಗೆ ಪ್ರವೇಶಿಸಿದೊಡನೆಯೆ  ಅದರ ಒಳಗಿನ ವಿಸ್ತಾರವು ದಿಗ್‌ಭ್ರಮೆ ಹುಟ್ಟಿಸುತ್ತದೆ – ತನ್ನ ಗಾಥಿಕ್ ಮಾದರಿಯ ರಚನೆಗಳಿಂದ. ಮೂರು  ಅಂತಸ್ತುಗಳನ್ನುಳ್ಳ ಈ ಕಟ್ಟಡದ ದೊಡ್ಡ  ಗೋಪುರಗಳ  ಕಡೆಗೆ ಹತ್ತಿ ಹೋಗಲು ಮೆಟ್ಟಿಲುಗಳಿವೆ.  ಈ ಕಟ್ಟಡದ ಮೂರನೆಯ ಅಂತಸ್ತಿನಲ್ಲಿ ಬೃಹದಾಕಾರವಾದ ಘಂಟೆಗಳಿವೆ. ಬಹುಸಂಖ್ಯೆಯ ಭಾರೀ ತೊಲೆಗಳಿಗೆ ನೇತುಹಾಕಿರುವ  ಘಂಟೆಯೊಂದರ ಅಗಲ ಎಷ್ಟಿದೆಯೆಂದರೆ ಸುಮಾರು ಮೂವತ್ತು ಜನ ಅದರ ಕೆಳಗೆ ನಿಲ್ಲಬಹುದು ಸದಾ ಮಬ್ಬು ಬೆಳಕಿನ ಮೆಟ್ಟಿಲದಾರಿಯ ಹಾಗೂ ಹಲವಾರು ಕಮಾನುಗಳ ಮೂಲೆ ಮೊಡಕುಗಳನ್ನುಳ್ಳ ಈ ಮಹಾ ದೇವಾಲಯದ ರಚನೆ, ಮೇಲೆ ಹತ್ತಿಹೋದ ಯಾರನ್ನಾದರೂ ಗಾಬರಿಗೊಳಿಸು ವಂತಿದೆ. ಈ ರಹಸ್ಯಮಯ ಹಿನ್ನೆಲೆಯನ್ನಾಧರಿಸಿ, ವಿಕ್ಟರ್‌ಹ್ಯೂಗೋ ತನ್ನ ‘ಹಂಚ್‌ಬ್ಯಾಕ್ ಆಫ್ ನಾಟರ್ ಡೇಂ’ ಎಂಬ ರೋಮಾಂಚಕಾರಿಯಾದ ಕಾದಂಬರಿಯೊಂದನ್ನು ಬರೆದನು. ಆ ಕೃತಿಯನ್ನೋದಿ, ಈ ಚರ್ಚಿನ ಒಳಭಾಗವನ್ನು ಪ್ರವೇಶಿಸಿದರೆ, ಆ ಕಾದಂಬರಿಯ ಘಟನೆಗಳು ವಾಸ್ತವವಾಗಿ ಇದರೊಳಗೆ ಸಂಭವಿಸಿದವೇನೋ ಎಂದು ಅನ್ನಿಸುತ್ತದೆ. ಆದರೆ ನಮ್ಮ ಮಾರ್ಗದರ್ಶಿ ಹೇಳಿದಳು: ‘ವಿಕ್ಟರ್ ಹ್ಯೂಗೋನ ಕಾದಂಬರಿ ಕೇವಲ ಒಂದು ಕಲ್ಪಿತ ಕಥೆ. ನಾಟರ್ ಡೇಂ ಚರ್ಚಿನಲ್ಲಿ ಅವರ ಕಾದಂಬರಿಯ ಆ ಗೂನು ಬೆನ್ನಿನ ನಾಯಕ ಎಂದೂ ಇರಲಿಲ್ಲ. ಆದರೆ ವಿಕ್ಟರ್ ಹ್ಯೂಗೋ ಆ ಕಾದಂಬರಿಯನ್ನು ಬರೆದ ಮೇಲೆ, ಈ ಚರ್ಚಿನ ವಿಚಾರದಲ್ಲಿ ಅದಮ್ಯವಾದ ಕುತೂಹಲ ಮತ್ತು ಆಸಕ್ತಿಗಳು ಸಾರ್ವಜನಿಕರಲ್ಲಿ ಹುಟ್ಟಿಕೊಂಡದ್ದು ಮಾತ್ರ ನಿಜ.’

ನಾಟರ್  ಡೇಂ ಚರ್ಚಿನಿಂದ ಮುಂದಕ್ಕೆ  ನಾವು ಹೋದದ್ದು ಜಗತ್ ವಿಖ್ಯಾತವಾದ ಎಫಿಲ್ ಟವರ್ ಬಳಿಗೆ. ಪ್ಯಾರಿಸ್ ನಗರದಲ್ಲಿ ಎಲ್ಲಿ  ಸಂಚಾರಮಾಡುತ್ತಿದ್ದರೂ ಕಣ್ಣಿಗೆ ಬೀಳುವ ಈ ಲೋಹ ಗೋಪುರ ತನ್ನ ಬೃಹತ್ತಾದ  ನಾಲ್ಕು  ಹೆಜ್ಜೆಗಳನ್ನು ಅಗಲವಾಗಿ ನೆಲದ ಮೇಲೂರಿ, ಆಕಾಶದುದ್ದಕ್ಕೂ ತನ್ನ ಶರೀರವನ್ನು ಚಾಚಿಕೊಂಡು ತಲೆಯೆತ್ತಿದ, ಪ್ರಾಚೀನ ಕಾಲದ ಪೆಡಂಭೂತದಂತೆ ತೋರುತ್ತದೆ. ಕಬ್ಬಿಣದ ಜಾಲಕಗಳಿಂದ ಜೋಡಿಸಿದ ಅದ್ಭುತವಾದ ಕಮಾನುಗಳ ರಚನೆಯನ್ನೊಳಗೊಂಡು, ಸುಮಾರು ಒಂದು ಸಾವಿರ ಅಡಿ ಎತ್ತರಕ್ಕೆ (ವಾಸ್ತವವಾಗಿ ೯೪೮ ಅಡಿಗಳು) ನಿಂತ ಈ ಕಬ್ಬಿಣದ ರಚನೆಯನ್ನು ಹೋಲುವಂಥದ್ದು ಜಗತ್ತಿನಲ್ಲಿ ಬೇರೊಂದಿಲ್ಲ.  ಅಮೆರಿಕಾದ  ಚಿಕಾಗೋ ನಗರದಲ್ಲಿರುವ ‘ಸಿಯರ್ಸ್  ಟವರ್’  ಎಂಬ ಖಾಸಗೀ ವಾಣಿಜ್ಯ ಸಂಕೀರ್ಣ ಒಂದು ಸಾವಿರದ ಮುನ್ನೂರ ಐವತ್ಮೂರು ಅಡಿಗಳೆತ್ತರ ಇರುವುದು ನಿಜವಾದರೂ, ಈ ಮಾನವ ನಿರ್ಮಿತ ಕಬ್ಬಿಣದ ಗೋಪುರಕ್ಕೆ ಇರುವ ಸೊಗಸು ಹಾಗೂ ಗಾಂಭೀರ್ಯ ಅದಕ್ಕೆ ಇಲ್ಲ. ಈ ಗೋಪುರದಲ್ಲಿ  ಮೂರು ವೀಕ್ಷಣಾನೆಲೆಗಳಿದ್ದು, ಮೊದಲ ಹಂತದವರೆಗೆ ಹತ್ತಿ ಹೋಗಲು ಮೆಟ್ಟಿಲುಗಳಿವೆ. ಮೊದಲ ನೆಲೆ, ನೂರಾ ಐವತ್ತು ಅಡಿಗಳೆತ್ತರದ್ದು; ಸುಮಾರು ಆರು ಸಾವಿರ ಅಡಿಗಳಗಲದ ಈ ಹಂತದಲ್ಲಿ ಸೊಗಸಾದ ರೆಸ್ಟೋರಾಂಟ್ ಕೂಡಾ ಇದೆ. ಇನ್ನು ಮುಂದಿನ ಹಂತಗಳನ್ನು ತಲುಪಲು ಲಿಫ್ಟ್‌ಗಳನ್ನು ಅವಲಂಬಿಸಬೇಕು. ಮುನ್ನೂರ ನಲವತ್ತೈದು ಅಡಿಗಳೆತ್ತರದ ಎರಡನೆಯ ಹಂತದಲ್ಲೂ ಅಂಗಡಿಗಳೂ, ಫೋಟೋ ಸ್ಟುಡಿಯೋಗಳೂ ಇವೆ. ಇನ್ನೂ ಮೂರನೆಯ ಹಂತದ ಆ ಎತ್ತರದಲ್ಲಿ ನಿಂತರಂತೂ ಕಾಣುವ ಪ್ಯಾರಿಸ್ ನಗರದ ನೋಟ ಅದ್ಭುತವೆಂದೇ ಹೇಳಬೇಕು. ಕ್ರಿ. ಶ. ೧೮೮೭ರಿಂದ ಎರಡು ವರ್ಷಗಳ ಕಾಲ ವಿಖ್ಯಾತ ಎಂಜಿನಿಯರ್ ಆದ ಅಲೆಗ್ಸಾಂಡರ್ ಗಸ್ಟಾವ್ ಎಂಬಾತ ಇದನ್ನು ನಿರ್ಮಿಸಿ, ಫ್ರೆಂಚ್ ಜನತೆಗೆ ಈ ಟವರ್ ಅನ್ನು ಅರ್ಪಿಸಿದನಂತೆ.

ಪ್ರಾರಿಸ್‌ಗೆ ಬಂದ ಮೇಲೆ ಕ್ಯಾಬರೆಯನ್ನು ನೋಡದೆ ಹೋಗುವುದು ತರವೆ? ನಮ್ಮ ಪ್ರವಾಸಿ ಸಂಸ್ಥೆಯವರು ಮೊದಲೇ ನಮಗಾಗಿ ‘ಬುಕ್’ ಮಾಡಿಸಿದ್ದ ‘ಷೋ’ ಒಂದಕ್ಕೆ ರಾತ್ರಿ ಒಂಬತ್ತು ಗಂಟೆಗೆ ಕರೆದುಕೊಂಡು ಹೋದರು. ಪ್ಯಾರಿಸ್ ತನ್ನ ಇರುಳ  ವೈಭವಗಳಿಗೆ  ಹೆಸರಾದದ್ದು. ನೈಟ್ ಕ್ಲಬ್ಬುಗಳೂ, ನರ್ತನ ಶಾಲೆಗಳೂ, ಗೀತ – ರೂಪಕ  ಪ್ರದರ್ಶನಗಳೂ – ಸಾಕಷ್ಟು ಸಂಖ್ಯೆಯಲ್ಲಿವೆ. ಶೀಲಾಶ್ಲೀಲಗಳ ಬಗ್ಗೆ ತಲೆಕೆಡಿಸಿಕೊಳ್ಳದ ಒಂದು ಮನಃಸ್ಥಿತಿಯಿದ್ದರೆ, ಇಲ್ಲಿನ ಈ ಮನರಂಜನೆ ಹಾಗೂ ವಿಲಾಸಗಳಲ್ಲಿ ಪಾಲುಗೊಂಡು ಸಂತೋಷಪಡಬಹುದು. ವಿಲಾಸಮಯವಾದ ಲಿಡೋ, ಪ್ಯಾರಿಸ್‌ನ ನೈಟ್‌ಕ್ಲಬ್ಬುಗಳಲ್ಲಿ ಅತ್ಯಂತ ಪ್ರಸಿದ್ಧವಾದುದೆಂದು ಹೇಳಲಾಗಿದೆ. ಆದರೆ ನಮ್ಮ ನಿರ್ವಾಹಕ ಹಾಗೂ ಮಾರ್ಗದರ್ಶಕ  ಅಲೆನ್ ನಮ್ಮನ್ನು ಕರೆದುಕೊಂಡು ಹೋದದ್ದು ‘ಮೌಲಿನ್ ರೋಗ್’ ಎಂಬ ಪ್ರದರ್ಶನಕ್ಕೆ. ನಾವು ಸಾಕಷ್ಟು ವಿಸ್ತಾರವಾದ ಪಾರ್ಟಿಹಾಲ್ ಒಂದನ್ನು ಪ್ರವೇಶಿಸಿದೆವು. ಕೆಲವು ಬೆಡಗಿಯರು ಮುಗುಳುನಗೆಯಿಂದ ಅಲ್ಲಿದ್ದ ಒಂದೊಂದು ಟೇಬಲ್ ಸುತ್ತ, ಮೂರು ನಾಲ್ಕು ಜನರಂತೆ ನಮ್ಮನ್ನು ಕೂರಿಸಿದರು. ನಾವಿದ್ದ ಹಾಲ್ ಪಕ್ಕದ ಕೆಳಗೆ ಇನ್ನೊಂದು ಹಂತದಲ್ಲೂ ಇದೇ ರೀತಿ ಜನ ಕೂತಿದ್ದರು. ಅದರ ಬದಿಗೆ ಕಿನ್‌ಕಾಪು ಪರದೆಗಳ ಒಂದು ರಂಗಸ್ಥಳ. ಮಂದವಾದ ಬೆಳಕೊಂದು ಇಡೀ ಆವರಣವನ್ನು ತುಂಬಿಕೊಂಡಿತ್ತು. ನಾವು ಕೂತ ಕೆಲವೇ ನಿಮಿಷಗಳಲ್ಲಿ ನಮ್ಮ ನಮ್ಮ ಟೇಬಲ್‌ಗಳಿಗೆ ಷಾಂಪೇನ್ ಬಾಟಲುಗಳೂ ಗ್ಲಾಸುಗಳೂ ಅವತರಿಸಿದವು. ನೀಟಾದ ಉಡುಗೆ ತೊಡುಗೆಯ ಪರಿಚಾರಕರು ನಮ್ಮೆದುರಿನ ಬಟ್ಟಲುಗಳನ್ನು ತುಂಬಿದರು. ನಾವು ಅತ್ಯಂತ ರುಚಿಕರವಾದ ಷಾಂಪೇನ್ ತುಂಬಿದ  ಬಟ್ಟಲುಗಳನ್ನು  ನಮ್ಮ ತುಟಿಗಳಿಗೆ ಮುಟ್ಟಿಸುತ್ತಿದ್ದಂತೆ, ರಂಗಸ್ಥಳದ ಮೇಲೆ ಝಗ್ಗನೆ ಬೆಳಕೂ ಬಿದ್ದು, ಪರದೆ ಸರಿದು ಏಳೆಂಟು ಜನ ಅರೆಬೆತ್ತಲೆ ಸುಂದರಿಯರು, ಹಿನ್ನೆಲೆ ವಾದ್ಯ ಸಂಗೀತಕ್ಕೆ ಅನುಸಾರವಾಗಿ ನರ್ತಿಸತೊಡಗಿದರು. ಕಿತ್ತಲೆ ಬಣ್ಣದ ಮೈಕಾಂತಿಯ, ಹೊಳೆವ ಅಧರಗಳ, ಮಿಂಚಿನ ಕಣ್ಣಿನ, ಮಾಟಾದ ಕಾಲುಗಳ ಆ ಚೆಲುವೆಯರು  ಕನಿಷ್ಠತಮ  ವಸ್ತುಗಳಲ್ಲಿ ವಿರಾಜಿಸಿದರು. ತಲೆಯ ಮೇಲೆ ಪ್ರತಿಯೊಬ್ಬರೂ ಗುಲಾಬಿ ಕೆಂಪಿನ ಬಣ್ಣದ ಚಾಮರದಾಕಾರದ ಟೋಪಿಯೊಂದನ್ನು ಧರಿಸಿದ್ದರು; ಅದಕ್ಕೆ ಲಗತ್ತಾದಂತೆ, ಗಾಳಿಗಿಂತಲೂ ಹಗುರವಾದ ರೇಷ್ಮೆಯ ತೇಲುವಸ್ತ್ರವೊಂದು ಅವರ ಹಿನ್ನೆಲೆಗಿತ್ತು. ಮೂರು ನಾಲ್ಕು ವರಸೆಗಳಲ್ಲಿ ಬಂದ ಈ ತಂಡಗಳಲ್ಲಿ ಫ್ರೆಂಚ್ ಬೆಡಗಿಯರ ಜೊತೆ, ಆಫ್ರಿಕಾದ ಕೃಷ್ಣ ಸುಂದರಿಯರೂ ಇದ್ದರು. ಕೆಲವೊಮ್ಮೆ ಎದೆಗಟ್ಟೂ ನಾಪತ್ತೆಯಾಗಿ, ಅವರ ಸದೃಢವಾದ ಸ್ತನ ಸೌಂದರ್ಯವೂ ಪ್ರದರ್ಶಿತವಾಗುತ್ತಿತ್ತು. ಈ ಬಗೆಯ ನರ್ತನದ ನಡುನಡುವೆ, ಹಾಸ್ಯಲಹರಿಯ ಹಾಗೂ ಸರ್ಕಸ್‌ಗೆ ಸಮೀಪವಾದ ಚಮತ್ಕಾರಗಳೂ ಇದ್ದವು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಗಾಯನ – ನರ್ತನಾದಿಗಳನ್ನು, ನಾವು ಉದ್ದಕ್ಕೂ ಷಾಂಪೇನ್ ಕುಡಿಯುತ್ತ ನೋಡಿ ಸಂತೋಷಪಟ್ಟೆವು.

ನಮ್ಮ ಹನ್ನೆರಡು ದಿನಗಳ ಪಯಣದ ಕೊನೆಯ ದಿನದ ಮುಂಜಾನೆ ನಾವು ಬಸ್ಸಲ್ಲಿ ಕೂತು ಬಿರುಗಾಳಿಯ ಹಾಗೆ ಸ್ಥಳದಿಂದ ಸ್ಥಳಕ್ಕೆ ಅಲೆದಾಡಿದವು. ಬಸ್ಸಿನ ವೇಗಕ್ಕೆ ಸಮನಾಗಿ ನಮ್ಮ ಫ್ರೆಂಚ್ ಮಾರ್ಗದರ್ಶಕ ಮಹಿಳೆಯ ಮಾತು, ನಾವು ಕಂಡ ಎಷ್ಟೋ ಸ್ಮಾರಕಗಳ, ಕಟ್ಟಡಗಳ, ಬೀದಿಗಳ, ಚೌಕಗಳ ಬಗ್ಗೆ ವ್ಯಾಖ್ಯಾನದಲ್ಲಿ ತೊಡಗಿತ್ತು. ಒಂದೆಡೆ ಹನ್ನೆರಡು ರಸ್ತೆಗಳು ಕೂಡುವೆಡೆಯ  ಚೌಕವೊಂದರಲ್ಲಿ ಎತ್ತರವಾಗಿ ಭವ್ಯವಾಗಿ ನಿಂತಿದ್ದ Arc de Troimphe ಎಂಬ ಮಹಾದ್ವಾರದ ಬಳಿ ಹದಿನೈದು ಇಪ್ಪತ್ತು ನಿಮಿಷಗಳ ಬಿಡುವನ್ನು ಕೊಡಲಾಯಿತು. ಬೊಂಬಾಯಿ ಕಡಲತೀರದ ‘ಗೇಟ್‌ವೇ ಆಫ್ ಇಂಡಿಯಾ’ದ ನೆನಪನ್ನು ತರುವಂತಿರುವ, ಈ ಮಹಾದ್ವಾರ ಫ್ರೆಂಚ್ ಮಹಾಕ್ರಾಂತಿಯ ಸಮಯದಲ್ಲಿ ನೆಪೋಲಿಯನ್ನನ ಪಡೆಗಳು ಸಾಧಿಸಿದ ಗೆಲುವಿನ ಸಂಕೇತವಾಗಿದೆ. ಒಂದುನೂರಾ ಅರವತ್ತೆರಡು ಅಡಿ ಎತ್ತರದ, ಒಂದುನೂರಾ ನಲವತ್ತೇಳು ಅಡಿ ಅಗಲದ ಈ ಮಹಾದ್ವಾರದ ಮೇಲ್‌ಕಟ್ಟಿನ ಉದ್ದಕ್ಕೂ ಅಳವಟ್ಟಿರುವ ಚಿತ್ರಗಳು ವಿಸ್ಮಯಕಾರಿಯಾಗಿವೆ. ಈ ಮಹಾದ್ವಾರದ ಕಮಾನಿನ ಹೊರಮೈಯಲ್ಲಿ ಫ್ರೆಂಚ್ ಇತಿಹಾಸಕ್ಕೆ ಸಂಬಂಧಿಸಿದ, ಹದಿನೆಂಟನೆಯ ಶತಮಾನದ ಪ್ರಮುಖ ಘಟನೆಗಳು ಕೆತ್ತಲ್ಪಟ್ಟಿವೆ.

ಪ್ಯಾರಿಸ್ ನಗರದಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯ ಮ್ಯೂಸಿಯಂಗಳಿವೆ ಎಂದು ಹೇಳಲಾಗಿದೆ. ಅವುಗಳಲ್ಲೆಲ್ಲ ಲೂವ್ರಾ (Louvera) ಮ್ಯೂಸಿಯಂ ಅತ್ಯಂತ ಲೋಕ ಪ್ರಸಿದ್ಧವಾದದ್ದು. ಮಾನವ ಪ್ರತಿಭೆಯ ಅಭಿವ್ಯಕ್ತಿಗಳಾದ ಕಲಾಕೃತಿಗಳು, ಈ ಮ್ಯೂಸಿಯಂನಲ್ಲಿರುವಷ್ಟು ಸಂಖ್ಯೆಯಲ್ಲಿ ಜಗತ್ತಿನ  ಬೇರಾವ ಮ್ಯೂಸಿಯಂಗಳಲ್ಲೂ ಇಲ್ಲವೆಂದು ಹೇಳಲಾಗಿದೆ. ಈ ಮ್ಯೂಸಿಯಂನ ಪ್ರವೇಶದ್ವಾರದಲ್ಲಿರುವ ಗಾಜಿನ ಪಿರಮಿಡ್ ತನ್ನ ಕಲಾಕುಶಲತೆಯಿಂದ ಬೆರಗು ಹುಟ್ಟಿಸುತ್ತದೆ. ಈ ಮ್ಯೂಸಿಯಂ ಅನ್ನು ಪ್ರವೇಶಿಸಿ ಒಂದೊಂದು ವಿಭಾಗದ ಮೂಲಕ ಸುಮ್ಮನೆ ಹಾದು ಬಂದರೂ ಅದು ಒಂದು ಮೈಲಿಯಷ್ಟಾಗುತ್ತದಂತೆ. ಈ ಮ್ಯೂಸಿಯಂ ಅನ್ನು ವಿವರವಾಗಿ ನೋಡಲು ಕಡೇ ಪಕ್ಷ ಒಂದು ವಾರವಾದರೂ ಬೇಕಂತೆ. ಇಂಥ ವಿಸ್ತಾರವಾದ  ಮ್ಯೂಸಿಯಂನಲ್ಲಿ ನಾವು ನೋಡಲು ಸಾಧ್ಯವಾದದ್ದು, ಈಜಿಪ್ಟ್ ಹಾಗೂ ರೋಮನ್ ಶಿಲ್ಪಕಲಾ ವಿಭಾಗಗಳನ್ನು ಮತ್ತು ಜಗತ್ ಪ್ರಸಿದ್ಧ ವರ್ಣಚಿತ್ರಗಳ ವಿಭಾಗವನ್ನು. ಬಹುಸಂಖ್ಯೆಯ ಅಮೃತಶಿಲ್ಪ ಕಲಾಕೃತಿಗಳ ಜಗತ್ತನ್ನು ಹಾದು, ವರ್ಣಚಿತ್ರಗಳ ಪ್ರಪಂಚವನ್ನು ಪ್ರವೇಶಿಸಿದೆವು. ಸುಮಾರು ಒಂದೂವರೆ ಗಂಟೆಗಳ ಅವಧಿಯಲ್ಲಿ ಜಗತ್ತಿನ ವಿವಿಧ ಕಲಾಪಂಥಗಳ ವರ್ಣಚಿತ್ರಶಾಲೆಯಲ್ಲಿ ಸುತ್ತಿ, ಕೊನೆಗೆ  ಲಿಯೋನಾರ್ಡೋ ಡಾವಿಂಚಿ ಬರೆದ ಮೋನಲಿಸಾಳ ಚಿತ್ರವಿರುವ ಗ್ಯಾಲರಿಗೆ ಬಂದೆವು. ಈ ಚಿತ್ರದ ಮುಂದಂತೂ ಪ್ರೇಕ್ಷಕರು ಮಡುಗಟ್ಟಿ ನಿಂತಿದ್ದರು. ನಾನೂ ಆ ಗುಂಪಿನ ನಡುವೆ ಹೋಗಿ ಆ ಚಿತ್ರದ ಎದುರು ನಿಂತೆ. ‘ಮೋನಲಿಸಾ’ಳ ಚಿತ್ರವನ್ನು ಲಿಯೋನಾರ್ಡೊ ಡಾವಿಂಚಿ ಎಂಬ ಚಿತ್ರಕಾರ, ಸಿಸಾರೇ ಬೋರ್ಜಿಯ (Cesare Borgea) ಎಂಬುವನ ಕೋರಿಕೆಯ ಮೇರೆಗೆ ಫ್ಲಾರೆನ್ಸ್‌ನಲ್ಲಿ ಬರೆದನಂತೆ. ಈ ಚಿತ್ರ ಜಗತ್‌ಪ್ರಸಿದ್ಧವಾಗಿರುವುದು ಅದರ ಮಂದಹಾಸದಿಂದ ಎಂಬುದು ಜನಜನಿತವಾಗಿದೆ.  ‘ಮೊನಾಲಿಸಾಳ ಮುಗುಳ್ನಗೆ’ ಅನ್ನುವುದೊಂದು ಗಾದೆಮಾತಾಗಿ ಬಿಟ್ಟಿದೆ. ಮಂದಹಾಸವೇನೋ ಇದೆ. ಆದರೆ ಆ ಮಂದಹಾಸವನ್ನು ಸೂಸುವ ಮುಖದ ಅಂದ ಅಷ್ಟಕಷ್ಟೆ. ಅಗಲವಾದ ಹಣೆಯ, ನೀಳವಾದ ಮೂಗಿನ, ಅರೆತೆರೆದ ಕಣ್ಣುಗಳ ಬೈತಲೆಯ ಅತ್ತ ಇತ್ತ ಎರಡೂ ಭುಜಗಳವರೆಗೆ  ಇಳಿದ ಕಪ್ಪು ಕೂದಲಿನ, ಒಂದು ರೀತಿ ವಿಲಕ್ಷಣವಾದ ಗಾಂಭೀರ್ಯದ – ಬಹುಮಟ್ಟಿಗೆ ಗಂಡುಕಳೆಯನ್ನುಳ್ಳ – ಈ ಮುಖದ ‘ಮಂದಹಾಸ’ ತೀರಾ ವಿಶೇಷವಾದ ಆಕರ್ಷಣೆಯನ್ನೇನೂ ಉಂಟು ಮಾಡುವುದಿಲ್ಲ. ಆದರೂ ಜನ ಈ ಮ್ಯೂಸಿಯಂನಲ್ಲಿ ಇನ್ನೆಷ್ಟೋ ಚಿತ್ರಗಳಿದ್ದರೂ, ನೋಡಲೇಬೇಕಾದ ಚಿತ್ರ ಇದೊಂದೇ ಏನೋ ಎಂಬಂತೆ, ಈ ಚಿತ್ರದ ಕಡೆ ಧಾವಿಸಿ, ಇಲ್ಲಿ ನಿಂತು ‘ಮೋನಲಿಸಾಳ ಮುಗುಳ್ನಗೆ’ಯ ಮುಂದೆ ಮಡುಗೊಂಡು ನಿಲ್ಲುತ್ತಾರೆ. ಆದರೆ ಈ ಚಿತ್ರದ ಕಣ್ಣುಗಳು ಮಾತ್ರ, ನಾವು ಯಾವ ದಿಕ್ಕಿಗೆ ನಿಂತು ನೋಡಿದರೂ ನಮ್ಮನ್ನೆ ನೋಡುವಂತೆ ಭಾಸವಾಗುತ್ತದೆ. ಬಹುಶಃ ಇದೇ ಇರಬಹುದು ಈ ಚಿತ್ರದ ಮೋಡಿ.

ಊಟದ  ಬಿಡುವಿನ ನಂತರ ನಾವು ಫ್ರೆಂಚ್ ದೊರೆ ಹದಿನಾಲ್ಕನೆ ಲೂಯಿಯ ಮತ್ತು ನೆಪೋಲಿಯನ್‌ನ ಅರಮನೆಗಳನ್ನು ನೋಡಲು ಹೊರಟೆವು. Versailles ಎಂದು ಕರೆಯಲಾಗುವ, ಫ್ರೆಂಚ್ ರಾಜ ಹದಿನಾಲ್ಕನೆ ಲೂಯಿಯ ಹಾಗೂ Fontianeb leau ಎಂದು ಕರೆಯಲಾಗುವ ನೆಪೋಲಿಯನ್ನನ – ಈ ಅರಮನೆಗಳ ವಿಸ್ತಾರ ಹಾಗೂ  ಭವ್ಯತೆ ಬಹುದೂರದಿಂದಲೇ ಕಣ್ಣನ್ನು ಸೆಳೆಯುತ್ತದೆ. ಪ್ಯಾರಿಸ್‌ನಿಂದ ಸುಮಾರು ಹನ್ನೆರಡು  ಮೈಲಿ ದೂರದ ಹೊರವಲಯದಲ್ಲಿರುವ  ಈ ಅರಮನೆಯ ಸಮುಚ್ಚಯ ಫ್ರಾನ್ಸ್ ದೇಶದ ಸಾಹಿತ್ಯ-ಕಲೆ-ಚರಿತ್ರೆ ಹಾಗೂ ಸಂಸ್ಕೃತಿಗಳ ಉತ್ಕರ್ಷ ಕಾಲದ ವೈಭವದ ಸಾಕ್ಷಿಗಳಂತಿವೆ. ಒಂದೊಂದು ಮೊಗಸಾಲೆಯೂ ತನ್ನೊಳಗಿನ ಕಲಾತ್ಮಕ ವಿನ್ಯಾಸಗಳಿಂದ, ವರ್ಣವೈಭವದಿಂದ ಚಕಿತಗೊಳಿಸುತ್ತವೆ. ರಾಜರ ಹಾಗೂ ರಾಣಿಯರ ವಿಲಾಸ ಜೀವನವನ್ನು ಬಿಂಬಿಸುವಂತಿರುವ ಬಹುಸಂಖ್ಯೆಯ ಕೊಠಡಿಗಳೂ, ಅವುಗಳೊಳಗೆ ಬಗೆಬಗೆ ಕೆತ್ತನೆ ಕೆಲಸ ಮಾಡಿರುವ ಪೀಠೋಪಕರಣ ಗಳೂ, ತೂಗುದೀಪ ರಾಜಿಗಳೂ, ಹಂಸ ತೂಲಿಕಾತಲ್ಪಗಳೂ, ಕೊಠಡಿಯ ಗೋಡೆಯನ್ನಲಂಕರಿಸಿರುವ ರೇಖಾಚಿತ್ರಗಳೂ ಮತ್ತು ಉದ್ದಕ್ಕೂ ರಾಜಮನೆತನದವರ ಬಗೆ ಬಗೆ ವರ್ಣಚಿತ್ರಗಳೂ – ಶ್ರೀಮಂತಿಕೆಯ ಜಗತ್ತೊಂದನ್ನು ತೆರೆಯುತ್ತ  ಹೋಗುತ್ತವೆ. ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಒಂದಿನಿತೂ ಸ್ಪಂದಿಸದೆ, ಸೊಕ್ಕಿನಿಂದ ಮೆರೆದ ಫ್ರಾನ್ಸಿನ ದೊರೆ ಹದಿನಾಲ್ಕನೆ ಲೂಯಿಯ ಈ ವಿಲಾಸ – ವೈಭವ ಫ್ರೆಂಚ್ ಜನತೆಯನ್ನು ರೊಚ್ಚಿಗೆಬ್ಬಿಸಿ, ರಾಜವಂಶವನ್ನೇ ನಿರ್ನಾಮ ಮಾಡಿದ ಫ್ರೆಂಚ್ ಮಹಾಕ್ರಾಂತಿಗೆ ಕಾರಣವಾಯಿತು.

ಫ್ರಾನ್ಸಿನ ಮಹಾಕ್ರಾಂತಿ ಇಂಥ ಸೊಕ್ಕಿನ ರಾಜನನ್ನೂ, ರಾಜತ್ವವನ್ನೂ ಕಿತ್ತೊಗೆದು ಜನತೆಯ ಗೆಲುವಿನ ಸಂಕೇತವಾಯಿತೆಂಬುದೇನೋ ನಿಜವೆ. ಆದರೆ ಈ ಮಹಾಕ್ರಾಂತಿಯ ನಂತರ ಕೇವಲ ಒಂದು ದಶಕದ ಹೊತ್ತಿಗೇ, ಈ ಕ್ರಾಂತಿಯನ್ನು ಬೆಂಬಲಿಸಿದ್ದ ನೆಪೋಲಿಯನ್, ತನ್ನ ದಕ್ಷತೆ ಹಾಗೂ ಸಾಮರ್ಥ್ಯಗಳಿಂದ, ಈ ಸನ್ನಿವೇಶವನ್ನೆ ತನ್ನ ಅನುಕೂಲಕ್ಕೆ ಪರಿವರ್ತಿಸಿಕೊಂಡು ತನ್ನನ್ನು ತಾನೇ ಚಕ್ರವರ್ತಿ ಎಂದು ಘೋಷಿಸಿಕೊಂಡು ರಾಜತ್ವದ ಸಿಂಹಾಸನವನ್ನೇರಿ ಕೂತುಬಿಟ್ಟನು ! ಇನ್ನು ಚಕ್ರವರ್ತಿಯಾದ ಮೇಲೆ ವಾಸಕ್ಕೆ  ಅರಮನೆ ಬೇಡವೆ ? ಫ್ರೆಂಚ್ ಮಹಾಕ್ರಾಂತಿಯ ಸಂದರ್ಭದಲ್ಲಿ ಜನತೆಯ ಆಕ್ರೋಶಕ್ಕೆ ಧಾಳಿಯಾದ ಆ ಹಿಂದಿನ ರಾಜರ ಅರಮನೆಯನ್ನು ಮೊದಲಿಗಿಂತ  ಹತ್ತರಷ್ಟು  ವೈಭವದಿಂದ  ರೂಪುಗೊಳಿಸಿ ವಿಸ್ತರಿಸಿದನು. ಅದರ ಸುತ್ತಲೂ ಇದ್ದ ರಾಜೋದ್ಯಾನವನ್ನು ಇನ್ನಷ್ಟು ಅಲಂಕರಣಗೊಳಿಸಿದನು. ಮತ್ತೊಮ್ಮೆ ಈ ಅರಮನೆ, ನೆಪೋಲಿಯನ್ ಪತನ ಹೊಂದಿ ಬ್ರಿಟಿಷರ ಬಂದಿಯಾಗುವವರೆಗೂ ಅವನ ಭೋಗವಿಲಾಸಗಳ ಬೀಡಾಗಿತ್ತು. ಈಗ ಈ ಅರಮನೆಯ ಒಂದು ಭಾಗ, ನೆಪೋಲಿಯನ್ನನ ರಣಸಾಹಸದ ವರ್ಣಚಿತ್ರಗಳ ಪ್ರದರ್ಶನಾಲಯವಾಗಿದೆ.

ಚರಿತ್ರೆಯ ಈ ಚಕ್ರಗತಿಯ ವಿಸ್ಮಯವನ್ನು ಪರಿಭಾವಿಸುತ್ತ ನಾವು ಮತ್ತೆ ಪ್ಯಾರಿಸ್ ನಗರದ ನಡುವಣ ಚೌಕವೊಂದಕ್ಕೆ  ಬಂದೆವು. ಮರುದಿನ ಬೆಳಿಗ್ಗೆ ಪ್ಯಾರಿಸ್‌ಗೆ ವಿದಾಯ ಹೇಳಿ, ಲಂಡನ್ನಿಗೆ ಪಯಣ ಬೆಳೆಯಿಸಲಿರುವುದರಿಂದ, ಸಂಜೆ ಸ್ವಲ್ಪ ಹೊತ್ತು ನಾವೆಲ್ಲ ಬಿಡುವಾಗಿ, ಅಂಗಡಿ ಬೀದಿಗಳಲ್ಲಿ ಸುತ್ತಾಡಬಹುದೆಂದೂ, ಸಂಜೆ ಏಳು ಗಂಟೆಯ ಹೊತ್ತಿಗೆ ನಾವು ಎಲ್ಲಿದ್ದರೂ ಇದೇ ಚೌಕಕ್ಕೆ ಬರಬೇಕೆಂದೂ, ಅನಂತರ ರಾತ್ರಿ ಕಾಸ್‌ಮಾಸ್ ಕಂಪನಿಯವರು  ಏರ್ಪಡಿಸಿರುವ ‘ಫೇರ್‌ವೆಲ್ ಡಿನ್ನರ್’ಗೆ ಕರೆದೊಯ್ಯುವುದಾಗಿಯೂ ನಮ್ಮ ಯೋಗಕ್ಷೇಮ ನಿರ್ವಾಹಕ ಅಲೆನ್ ಹೇಳಿ, ‘ಬೈ, ಹ್ಯಾವ್ ಎ ನೈಸ್ ಟೈಂ’ ಎಂದು – ಹಾರೈಸಿದ.

– 1997