ಭಾಷೆ ಮತ್ತು ಚಿಂತನೆಗಳಿಗೆ ಸಂಬಂಧವಿದೆಯೆಂದು ತೋರಿಸಿಕೊಡುವುದು ಸುಲಭ. ಹಾಗೆ ಅವರೆಡರ ನಡುವೆ ಸಂಬಂಧವಿರುವುದನ್ನು ಗ್ರಹಿಸುವುದೂ ಅಷ್ಟು ಕಷ್ಟವಲ್ಲ. ನಮ್ಮ ದಿನ ದಿನದ ನೂರಾರು ವ್ಯವಹಾರಗಳಲ್ಲಿ ಭಾಷೆಗಿರುವ ಪಾತ್ರವನ್ನು ಅರಿತರೆ ಆಗ ನಾವು ಚಿಂತಿಸುವ ಬಗೆಯಲ್ಲೂ ಭಾಷೆ ಹೇಗೆ ಭಾಗಿಯಾಗುವುದೆಂಬ ಸಂಗತಿ ಗೊತ್ತಾಗುತ್ತದೆ. ಆದರೆ ಈ ಸಂಬಂಧದ ಸ್ವರೂಪವೇನು? ಒಂದು ಇನ್ನೊಂದನ್ನು ಬಿಟ್ಟಿರುವುದು ಅಸಾಧ್ಯವೆನ್ನು ವಷ್ಟು ನಿಕಟವೇ? ಭಾಷೆಯ ಗೊಡವೆಯಿಲ್ಲದ ಚಿಂತನೆಗಳು ಸಾಧ್ಯವೇ? ಚಿಂತನೆಯ ಸ್ಪರ್ಶವಲ್ಲದ ಭಾಷಾರೂಪಗಳನ್ನು ನಾವು ಉತ್ಪಾದಿಸಬಹುದೇ? ಭಾಷೆಗೂ ಚಿಂತನೆಗೂ ನಿಕಟ ಸಂಬಂಧವಿದೆಯಾಗಿ ಭಾಷೆಗಳ ನಡುವೆ ಇರುವ ವ್ಯತ್ಯಾಸಗಳಿಂದಾಗಿ ಆಯಾ ಭಾಷೆಯ ಮೂಲಕ ನಡೆಯುವ ಚಿಂತನೆಯ ಸ್ವರೂಪದಲ್ಲಿ ವ್ಯತ್ಯಾಸ ಉಂಟಾಗುತ್ತದೆಯೇ? ನಮ್ಮ ಭಾಷೆಯೇ ನಮ್ಮ ಜಗತ್ತು ಎಂದು ಹೇಳುವುದರ ಅರ್ಥವೇನು? ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಹೋಗಬಹುದು. ಈ ಪ್ರಶ್ನೆಗಳಿಗೆ ಸರಳವಾದ ಉತ್ತರಗಳಿಲ್ಲ. ನಮ್ಮ ಜ್ಞಾನ ವಿಕಾಸದ ವಿವಿಧ ಹಂತಗಳಲ್ಲಿ ಈ ಪ್ರಶ್ನೆಗಳಿಗೆ ಬಗೆ ಬಗೆಯಾದ ಉತ್ತರಗಳನ್ನು ನೀಡಲಾಗಿದೆ. ತತ್ವಶಾಸ್ತ್ರಜ್ಞರು, ಮೀಮಾಂಸಕರು, ಲೌಕಿಕರು, ನೈಯಾಯಿಕರು, ಮನಃಶಾಸ್ತ್ರಜ್ಞರು, ಭಾಷಾಶಾಸ್ತ್ರಜ್ಞರು ಮೊದಲಾಗಿ ಹಲವರು ಈ ಪ್ರಶ್ನೆಗಳಿಗೆ ಪರಿಹಾರ ಕಾಣಲು ಅಧ್ಯಯನ ನಡೆಸಿದ್ದಾರೆ. ಈ ಅವಿರತ ಯತ್ನ ಇನ್ನೂ ಮುಂದುವರೆದಿದೆ. ಹಾಗಾಗಿ ಭಾಷೆಗೂ ಚಿಂತನೆಗೂ ಇರುವ ಸಂಬಂಧದ ಎಲ್ಲ ನೆಲೆಗಳನ್ನು ಅರಿಯುವುದು ಅಸಾಧ್ಯ. ಆದರೆ ಅವರೆಡರ ನಡುವಣ ಸಂಬಂಧ ಜಟಿಲಗೊಳ್ಳಲು ಇರುವ ವಿವಿಧ ಕಾರಣಗಳನ್ನು ತಿಳಿಯಲು ಸಾಧ್ಯ.

ಚಿಂತನೆಯ ವಿಧಗಳು

ದಾರಿಯಲ್ಲಿ ನಡೆಯುತ್ತಿರುವಾಗ ಎದುರಿಗೆ ಸರಕ್ಕನೆ ಸರಿಯುವ ಹಾವನ್ನು ಕಂಡಾಗ ‘ಹಾವು’ ಎಂದೋ ‘ಅಯ್ಯೋ’ ಎಂದೋ ಕಿರುಚುತ್ತೇವೆ. ಹಿಂದಕ್ಕೆ ಹಾರುತ್ತೇವೆ. ಅಥವಾ ಇಂಥವೇ ಬೇರೆ ಬೇರೆಯ ಪ್ರತಿಕ್ರಿಯೆ ಸೂಚಿಸುತ್ತೇವೆ. ಅವುಗಳಲ್ಲಿ ಕೆಲವು ಭಾಷಿಕ. ಮತ್ತೆ ಕೆಲವು ಅಂಗಿಕ. ಈ ಎಲ್ಲ ಪ್ರತಿಕ್ರಿಯೆಗಳಿಗೂ ಮೂಲ ಕಾರಣ ಭಯ. ಇದೊಂದು ಭಾವ; ಮನಸ್ಸಿನ ಒಂದು ಸ್ಥಿತಿ. ಭಯವೇ ಮುಂತಾದ ಭಾವಗಳಿಗೂ ಅವು ಉಂಟಾದಾಗ ನಾವು ತೋರಿಸುವ ಭಾಷಿಕ ಪ್ರತಿಕ್ರಿಯೆಗೂ ಇರುವ ಸಂಬಂಧವೇನು? ಭಾವವನ್ನು ‘ಚಿಂತಿಸಿ’ ನಾವು ಪ್ರತಿಕ್ರಿಯಿಸುತ್ತೇವೆ. ಆಯಾ ಭಾವಗಳಿಗೆ ಈ ಪ್ರತಿಕ್ರಿಯೆಗಳು ಸೂಚಕಗಳು ಮಾತ್ರ. ಅಥವಾ ಉಂಟಾದ ಬೇರೆ ಬೇರೆ ಭಾವಗಳನ್ನು ಕುರಿತು ನಾವು ಮಾತನಾಡಬಹುದು; ಮನಸ್ಸಿನ ಸ್ಥಿತಿಯನ್ನು ವಿವರಿಸಬಹುದು. ಆದರೆ ಇವು ಯಾವುದೂ ಆ ಭಾವಕ್ಕೆ ಪರ್ಯಾಯಗಳಲ್ಲ. ಅಂದರೆ ಮನಸ್ಸಿನ ಭಾವಗಳು ಮೂಲಭೂತವಾಗಿ ಭಾಷೆಗೆ ಅತೀತವಾದದ್ದು, ಅದರ ವ್ಯಾಪ್ತಿಗೆ ಹೊರತಾಗಿರುತ್ತವೆ.

ಹೀಗೆ ನಮ್ಮ ಮನಸ್ಸಿನ ವಿವಿಧ ಚಟುವಟಿಕೆಗಳಲ್ಲಿ ಎಷ್ಟೋ ಪಾಲನ್ನು ಚಿಂತನೆಯ ವ್ಯಾಪ್ತಿಯಿಂದ ಹೊರಗಿಡಬೇಕಾಗುತ್ತದೆ. ಕಲಾವಿದರಲ್ಲೂ, ಅದರಲ್ಲೂ ಚಿತ್ರಕಲಾವಿದರು, ಸಂಗೀತಗಾರರು ತಮ್ಮ ಕಲೆಯ ಮಾನಸಿಕ ಅವಸ್ಥೆಗೂ ಭಾಷೆಗೂ ಸಂಬಂಧವಿದೆ ಎಂದು ತಿಳಿಯುವುದಿಲ್ಲ. ಅವರು ನಂಬುವ ಸ್ಪೂರ್ತಿಯಂತೂ ಚಿಂತನೆಯನ್ನು ನಿರಾಕರಿಸುತ್ತದೆ.

ಭಾಷೆಗೂ ಚಿಂತನೆಗೂ ಸಂಬಂಧವಿರುವ ಮನಸ್ಸಿನ ಚಟುವಟಿಕೆಗಳಲ್ಲೂ ಹಲವು ವಿಧಗಳಿವೆ. ಇವುಗಳಲ್ಲಿ ಮುಖ್ಯವಾದುದು ‘ತಾರ್ಕಿಕ ಚಿಂತನೆ’. ನಮ್ಮ ದಿನದಿನದ ಸಮಸ್ಯೆಗಳನ್ನು ಅರಿಯಲು ಮತ್ತು ಪರಿಹರಿಸಲು ತಾರ್ಕಿಕ ಚಿಂತನೆಯನ್ನು ಬಳಸುತ್ತೇವೆ; ಕೊಠಡಿಯಲ್ಲಿ ಕತ್ತಲಾಯಿತೆಂದರೆ ದೀಪದ ಸ್ವಿಚ್ ಒತ್ತುವುದು. ಹತ್ತದಿದ್ದರೆ ಬಲ್ಬ್ ಹಾಳಾಗಿದೆಯೇ, ಸ್ವಿಚ್ ಕೆಟ್ಟಿ ದೆಯೇ, ಪ್ಯೂಸ್ ಹೋಗಿದೆಯೇ ಅಥವಾ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆಯೇ ಎಂದು ತಿಳಿಯುವುದು; ಕೊನೆಗೆ ಬೆಂಕಿಕಡ್ಡಿ ಗೀರಿ ಮೇಣದಬತ್ತಿ ಬೆಳಗಿಸುವುದು ಇವೆಲ್ಲ ತಾರ್ಕಿಕ ಚಿಂತನೆಯ ಫಲಗಳು. ಈ ಚಿಂತನೆಯಲ್ಲಿ ಬುದ್ದಿಯ ಪಾತ್ರ ಹೆಚ್ಚು. ಕೆಲವು ಪೂರ್ವ ನಿರ್ಣಯಗಳನ್ನು, ಕಾರ್ಯಕಾರಣ ಸಂಬಂಧಗಳನ್ನು ಒಪ್ಪಿ ಈ ಚಿಂತನೆ ಮುಂದುವರೆಯುತ್ತದೆ. ಕಪ್ಪು ಮೋಡ ಕವಿದಾಗ ಮನೆ ಬಿಟ್ಟು ತೆರಳುವುದಾದರೆ ಕೈಯಲ್ಲಿ ಚತ್ರಿ ಹಿಡಿಯುತ್ತೇವೆ. ಕಪ್ಪು ಮೋಡಗಳು ಕವಿದಿದ್ದರೆ ಮಳೆ ಬೀಳುವ ಸಾಧ್ಯತೆಯಿದೆ ಯೆಂಬ ಪೂರ್ವ ನಿರ್ಣಯವನ್ನು ಒಪ್ಪಿ ಇಲ್ಲಿ ಚಿಂತನೆ ನಡೆದಿದೆ. ಈ ಬಗೆಯ ಚಿಂತನೆಗಳಿಗೆ ನಿರ್ದಿಷ್ಟ ಗುರಿ ಇರುತ್ತದೆ. ಸಮಸ್ಯೆಯನ್ನು ಬಿಡಿಸುವುದೇ ಮುಖ್ಯ ಗುರಿ. ಈ ಗುರಿ ಸಾಧನೆಗಾಗಿಯೇ ಚಿಂತನೆ ನಡೆಯುತ್ತದೆ. ಇಲ್ಲದಿದ್ದರೆ ದಾರಿ ತಪ್ಪುವುದುಂಟು.

ತಾರ್ಕಿಕ ಚಿಂತನೆಯಲ್ಲಿ ಅನುಗಮನ ವಿಧಾನ ಮತ್ತು ನಿಗಮನ ವಿಧಾನ ಎಂಬ ಎರಡು ಬಗೆಗಳನ್ನು ಸೂಚಿಸುತ್ತಾರೆ. ಬಿಡಿಬಿಡಿಯಾದ ಮಾಹಿತಿಗಳ ಮೂಲಕ ಸಮಸ್ಯೆಗಳನ್ನು ಅರಿತು ಬಿಡಿಸಲು ತೊಡಗುವುದು ಅನುಗಮನ ವಿಧಾನ. ಮನೆಯೊಂದನ್ನು ಹುಡುಕುತ್ತಿರುತ್ತೇವೆಂದುಕೊಳ್ಳೋಣ. ವಿಳಾಸ ನಮ್ಮ ಬಳಿಯಿದೆ. ಮೊದಲು ಊರಿಗೆ ಬಂದು, ಆಮೇಲೆ ವಿಸ್ತರಣಕ್ಕೆ ಹೋಗುತ್ತೇವೆ. ಅಲ್ಲಿಂದ ಬೀದಿಗೆ, ಬೀದಿಯಿಂದ ತಿರುವಿಗೆ, ತಿರುವಿನ ಎಡ ಅಥವಾ ಬಲಬದಿಯಲ್ಲಿರುವ, ನಮಗೆ ಬೇಕಾದ ಮನೆಗೆ ಕೊನೆಗೆ ತಲುಪುತ್ತೇವೆ. ಹೀಗೆ ಹುಡುಕುವಾಗ ವಿಳಾಸದ ಜತೆಗೆ ನಮಗೆ ಲಭ್ಯವಿರುವ ಮತ್ತೆ ಕೆಲವು ಗುರುತುಗಳನ್ನೂ ಬಳಸುತ್ತೇವೆ.  ಅಂಗಡಿ, ಲೈಟುಕಂಬ, ಮರ ಹೀಗೆ ಹತ್ತಾರು ಅವಶ್ಯ ಮಾಹಿತಿಯನ್ನು ಜೋಡಿಸಿ ಕೊನೆಗೆ ಮನೆ ತಲುಪುತ್ತೇವೆ. ಇದು ಅನುಗಮನ ಚಿಂತನೆ. ನಿಗಮನ ವಿಧಾನದಲ್ಲಿ ಮೊದಲು ಸೂತ್ರ ರೂಪದ ಸಾಮಾನ್ಯ ನಿರ್ಣಯಗಳಿರುತ್ತವೆ; ಅವುಗಳನ್ನು ಆಧರಿಸಿ ಹೊರಟು ಒಂದು ವಿಶಿಷ್ಟ ಸಮಸ್ಯೆಯನ್ನು ಬಿಡಿಸುತ್ತೇವೆ. ಗಂಟೆಗೆ 15 ಮೈಲಿ ವೇಗದಲ್ಲಿ ಚಲಿಸುವ ವಾಹನ 4 ಗಂಟೆಗಳಲ್ಲಿ ಎಷ್ಟು ದೂರ ಚಲಿಸುತ್ತದೆ? ಈ ಸಮಸ್ಯೆಯನ್ನು ಬಿಡಿಸಲು ಚಲಿಸಿದ ದೂರವು ವೇಗ ಮತ್ತು ಚಲಿಸಿದ ಅವಧಿಗಳ ಗುಣಲಬ್ದಕ್ಕೆ ಸಮಾನವೆಂಬ ಸೂತ್ರವನ್ನು ಆಶ್ರಯಿಸುತ್ತೇವೆ. ಹಾಗೆ ನೋಡಿದರೆ ನಮ್ಮ ತಾರ್ಕಿಕ ಚಿಂತನೆಗಳನ್ನು ಹೀಗೆ ಅನುಗಮನ ಮತ್ತು ನಿಗಮನವೆಂದು ಗೆರೆಯೆಳೆದು ಬೇರೆ ಮಾಡಲು ಬರುವುದಿಲ್ಲ. ಬಹಳ ಸಂದರ್ಭದಲ್ಲಿ ಎರಡೂ ವಿಧಾನಗಳನ್ನು ಬೇರೆ ಬೇರೆ ಪ್ರಮಾಣದಲ್ಲಿ ಒಟ್ಟಾಗಿ ಬಳಸುತ್ತಿರುತ್ತೇವೆ.

ತಾರ್ಕಿಕ ಚಿಂತನೆಗೆ ಭಾಷೆ ಅವಶ್ಯ. ಭಾಷೆಯ ರಾಚನಿಕ ವ್ಯವಸ್ಥೆಯನ್ನು ಬಳಸಿಯೇ ಈ ಚಿಂತನೆ ನಡೆದಿರುತ್ತದೆ. ಒಂದೊಂದು ಹಂತವನ್ನೂ ವಾಕ್ಯಗಳ ಮೂಲಕ ಪ್ರತಿನಿಧಿಸುವುದು ಸಾಧ್ಯ. ಚಿಂತನೆಯೇ ಈ ಕಾರಣದಿಂದಾಗಿ ಭಾಷಿಕವಾಗಿ ಸಂಭವಿಸುವುದೆಂದು ತಿಳಿಯುವುದು ಅವಶ್ಯವಾಗುತ್ತದೆ.