1924ರ ಮಾತು. ಲಂಡನಿನಲ್ಲಿ ಒಂದು ಸಭೆ ನಡೆದಿತ್ತು. ಅಂದು ಇಂಗ್ಲೆಂಡಿನಲ್ಲಿ ಪ್ರಮುಖರು ಎನಿಸಿಕೊಂಡವರೆಲ್ಲ ಸೇರಿ ಐವತ್ತು ವರ್ಷಗಳಷ್ಟು ದೀರ್ಘಕಾಲ ಸಾರ್ವಜನಿಕ ಸೇವೆ ಮಾಡಿದ್ದ ಎಪ್ಪತ್ತೇಳರ ಹರೆಯದ ಒಬ್ಬ ಹೆಂಗಸನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದರು. ಕಡೆಯಲ್ಲಿ ಆಕೆ – ಯ್ಯಾನಿ ಬೆಸೆಂಟ್‌ಮಾತನಾಡಿದರು:

“ತಮ್ಮಲ್ಲಿ ಕೆಲವರು ಕ್ರಿಯೆ, ತ್ಯಾಗ ಎಂಬುದಾಗಿ ಮಾತನಾಡಿದ್ದೀರಿ. ಯಾವೊಂದು ಮಹಾಕಾರ್ಯಕ್ಕಾಗಿ ತ್ಯಾಗ ಮಾಡುವ ಸಂತೋಷಕ್ಕಿಂತ ಮಿಗಿಲಾದ ಹರ್ಷವಿಲ್ಲ ಎಂದು ಈ ಇಳಿವಯಸ್ಸಿನಲ್ಲಿ ನನಗೆ ಅರಿವಾಗಿರುವಂತೆ, ತಾವೆಲ್ಲರೂ ಕೂಡ ತಿಳಿದಿರಬಹುದೋ ಏನೋ. ಅದರಲ್ಲಿ ವ್ಯಥೆಯೆಂಬುದೇ ಇಲ್ಲ; ನಾನು ಎನ್ನುವುದಕ್ಕಿಂತ ಹೆಚ್ಚಿನ ಗುರಿಗಾಗಿ ದುಡಿಯುವ ಘನತೆಯಿಂದ ಬರುವ ಆನಂದವಿದೆ. ನಮ್ಮೊಳಗೆ ವ್ಯಕ್ತವಾಗುವ ದೈವ, ಅವನ ಹಿರಿಮೆಯನ್ನು ನಾವರಿಯದಿರುವಾಗಲೇ ನಮ್ಮನ್ನು ಮುಂದಕ್ಕೆ ತಳ್ಳುತ್ತದೆ. ಅವನೇ ಕರ್ತ. ಅವನೇ ತ್ಯಾಗ. ನಮ್ಮ ಹೃದಯಗಳಲ್ಲಿ ನೆಲೆಸಿರುವ ಅವನೇ ಸೇವೆಗೆ ಅಗತ್ಯವಾದ ಸ್ಫೂರ್ತಿ… ಆ ದೈವೀ ಚೇತನದ ಶಕ್ತಿ ನಮ್ಮಲ್ಲಿ ಪ್ರತಿಯೊಂದರಲ್ಲೂ ಅಂತರ್ಗತವಾಗಿದೆ. ಜೀವಂತ ದೈವದ ಮಂದಿರವೇ ಈ ದೇಹ”.

ಹೀಗೆ ತನ್ನ ದೀರ್ಘವಾದ ಜೀವನ, ಅಪರಿಮಿತ ಸೇವೆಯನ್ನೆಲ್ಲ ತನ್ನನ್ನು ಸಾಕ್ಷಾತ್ಕಾರ ಗೊಳಿಸಿಕೊಂಡಾಕೆ ಯ್ಯಾನಿ ಬೆಸೆಂಟ್‌.

ಐರಿಷ್‌ವಂಶದವಳಾಗಿ, ಇಂಗ್ಲೆಂಡಿನಲ್ಲಿ ಹುಟ್ಟಿ ಭಾರತಕ್ಕೆ ಬಂದು ಇದೇ ತನ್ನ ದೇಶವೆಂದು ಸ್ವೀಕರಿಸಿ, ತಾನಿದ್ದ ಎಲ್ಲ ಕಡೆಯಲ್ಲೂ ದೀನ ದಲಿತರ ಸೇವೆಗಾಗಿ ಬಾಳನ್ನು ಮುಡಿಪಾಗಿಟ್ಟು ದಿಟ್ಟತನದಿಂದ ಹೋರಾಟದ ಬದುಕನ್ನು ಸಾಗಿಸಿದ ಯ್ಯಾನಿ ಬೆಸೆಂಟ್ರ ಕಥೆ ನಿಜಕ್ಕೂ ರೋಮಾಂಚಕಾರಿ.

ಪ್ರಾರಂಭದ ವರ್ಷಗಳು

ಯ್ಯಾನಿ1947ರ ಅಕ್ಟೋಬರ್ ಒಂದರಂದು ಲಂಡನಿನಲ್ಲಿ ಹುಟ್ಟಿದಳು. ತಾಯಿ ಐರಿಷ್ ಮಹಿಳೆ. ತಂದೆ ತುಂಬ ಮೇಧಾವಿ. ಬಲು ವಿದ್ಯಾವಂತರು. ಗಣಿತಜ್ಞರು. ಅಲ್ಲದೆ ಆರೆಂಟು ಭಾಷೆಗಳಲ್ಲಿ ಪ್ರವೀಣರು. ತತ್ವಶಾಸ್ತ್ರ ಓದಿದ್ದರು. ಮೂಢನಂಬಿಕೆಗಳಿಲ್ಲದ ವಿಚಾರವಾದಿ. ಯ್ಯಾನಿ ಕೇವಲ ಐದು ವರ್ಷ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಳು.

ಯ್ಯಾನಿ ಕೂಡ ಬಾಲ್ಯದ ವರ್ಷಗಳಿಂದಲೂ ತುಂಬ ಮುತಶ್ರದ್ಧೆಯುಳ್ಳವಳು. ಬಾಲಕಿಯದೇ ಒಂದು ಭಾವನಾ ಪ್ರಪಂಚ. ಏನೋ ಕನಸುಗಳು, ಕಲ್ಪನೆಗಳು.

ಯ್ಯಾನಿಗೆ ಬಾಲ್ಯದಲ್ಲಿ ಅವಳ ತಾಯಿ ತನ್ನ ಕಷ್ಟಗಳನ್ನು ಮಗಳಿಂದ ಮುಚ್ಚಿಟ್ಟು ಭೋಜನಗೃಹ ನಡೆಸಿ, ಮಗಳಿಗೆ ಉಚ್ಚ ವಿದ್ಯಾಭ್ಯಾಸ ಮಾಡಿಸಿದಳು. ಆ ದಿನಗಳಲ್ಲಿ ಯ್ಯಾನಿಯನ್ನು ಬೆಳೆಸಿದ್ದು ಶ್ರೀಮತಿ ಮಾರ್ಯಟ್ ಎಂಬುವರು. ಹುಟ್ಟಿನಿಂದಲೇ ಅಧ್ಯಾಪಕಿಯಂತಹ ಗುಣ ಈಕೆಯದು. ನೋವೇನೂ ಇಲ್ಲದೆ ನಲವಿನಿಂದಲೇ ಮಕ್ಕಳ ಶಿಕ್ಷಣ ಆಗಬೇಕೆಂಬುದು ಈಕೆಯ ನಂಬಿಕೆ.

 

ಯ್ಯಾನಿ ಬಾಲ್ಯದ ದಿನಗಳನ್ನು ಹೀಗೆ ಸಂತೋಷದಿಂದ ಕಳೆದು ವಿದ್ಯಾರ್ಜನೆ ಮಾಡಿದಳು. ಖ್ಯಾತ ಕವಿಗಳ ಮತ್ತು ಇತರ ಲೇಖಕರ ಪ್ರಸಿದ್ಧ ಕೃತಿಗಳನ್ನೆಲ್ಲ ಓದಿ, ಜ್ಞಾನಭಂಡಾರ ಬೆಳೆಸಿಕೊಂಡಳು. ಪ್ರವಾಸದಿಂದಲೂ ಅವಳ ತಿಳಿವಳಿಕೆ ಹೆಚ್ಚಿತು. ಶ್ರೀಮತಿ ಮಾರ್ಯಟ್ ಅವಳನ್ನು ಜರ್ಮನಿಗೂ, ಫ್ರಾನ್ಸಿಗೂ ಕರೆದೊಯ್ದಳು.

ಇಂಗ್ಲೆಂಡಿಗೆ ಮರಳಿದ ನಂತರ ಯ್ಯಾನಿ ತನ್ನ ತಾಯಿಯ ಬಳಿಗೆ ಬಂದು ಜರ್ಮನ್ ಮತ್ತು ಫ್ರೆಂಚ್‌ಭಾಷೆಗಲ ಕಲಿಕೆಯನ್ನು ಮುಂದುವರಿಸಿ ಪೂರ್ಣಗೊಳಿಸಿದಳು, ಸಂಗೀತವನ್ನೂ ಅಭ್ಯಾಸ ಮಾಡಿದಳು. ತಾಯಿ ಈ ಮಧ್ಯೆ ತುಂಬ ತೊಂದರೆಗೆ ಸಿಕ್ಕಿದಳು. ಆಕೆ ನಂಬಿದ ವಕೀಲನೊಬ್ಬ ಅವಳ ಹಣವನ್ನೆಲ್ಲ ನುಂಗಿಹಾಕಿದ್ದ. ತಾಯಿ ಮಾತ್ರ ತನ್ನ ಯಾವ ಕಷ್ಟವನ್ನೂ ಮಗಳಿಗೆ ತಿಳಿಸದೆ, ಅವಳನ್ನು ನೋವು, ಚಿಂತೆಗಳಿಂದ ದೂರವಿಟ್ಟು ಬೆಳೆಸಿದಳು. ಅವಳ ಪ್ರೀತಿ ಅಷ್ಟು ಅಪಾರ.

ಮದುವೆ – ಬೇಸರ

ಯ್ಯಾನಿಗೆ ಆ ಸಮಯದಲ್ಲಿ ಪರರಿಗಾಗಿ ತ್ಯಾಗ ಮಾಡಬೇಕು ಎಂಬ ಹಂಬಲ ಪ್ರಬಲವಾಗಿತ್ತು. ಆಕೆ ಕ್ರೈಸ್ತ ಮತದ ಧಾರ್ಮಿಕ ಮುಖಂಡರ ಅನೇಕ ಬರವಣಿಗೆಗಳನ್ನು ಓದಿದಳು. ಹೀಗಿರುವಾಗಲೇ ೧೯೬೬ರಲ್ಲಿ ಕ್ರೈಸ್ತ ಪಾದರಿ ಫ್ರಾಂಕ ಬೆಸೆಂಟ್ ಎಂಬುವರ ಪರಿಚಯ ಆಯಿತು. ಮೊದ ಮೊದಲು ಆತ ದೇವರ ವಿಶೇಷ ದೂತನೋ ಎಂದು ಯ್ಯಾನಿ ಭಾವಿಸಿದಳು. ಕೆಲ ದಿನಗಳಲ್ಲಿ ಪಾದರಿಯವರಲ್ಲಿ ತನಗೆ ಅನುರಾಗವೇನೂ ಇಲ್ಲವೆಂಬ ಭಾವನೆ ಬಂದರೂ, ತಾಯಿಯ ಒತ್ತಾಯದಿಂದಾಗಿ ಬೇಡವೆನ್ನದೆ ಫ್ರಾಂಕ್ ಬೆಸೆಂಟ್ ಅವರನ್ನು ಮದುವೆಯಾದಳು ಯ್ಯಾನಿ. ಆಗ ಅವಳಿಗೆ ೨೦ ವರ್ಷ ವಯಸ್ಸು.

ಅವರದು ಸರಸ ದಾಂಪತ್ಯವಾಗಲಿಲ್ಲ. ಗಂಡನಿಗೆ ಅಧಿಕಾರವಿದೆ, ಹೆಂಡತಿ ವಿಧೇಯಳಾಗಿರಬೇಕು ಎನ್ನುವುದು ಫ್ರಾಂಕ್‌ಅವರ ನಂಬಿಕೆ. ಯ್ಯಾನಿಗೆ ಮೊದಲಿನಿಂದಲೂ ಸ್ವಾಂತತ್ರ್ಯದಲ್ಲಿ ಬೆಳೆದವಳು. ತುಂಬ ಸ್ವಾಭಿಮಾನಿ. ಹೀಗಾಗಿ ಅವರ ದಾಂಪತ್ಯದ ದೋಣಿಯನ್ನು ಒಡೆಯುವ ಕಲ್ಲುಗಳೇ ಎಲ್ಲೆಲ್ಲೂ. ಯ್ಯಾನಿ ಬರುಬರುತ್ತ ತನ್ನ ಸುತ್ತ ಹಿಮಗಡ್ದೆಗಳ ಗೋಡೆ ನಿರ್ಮಿಸಿಕೊಂಡಳು. ಪ್ರಪಂಚದಲ್ಲಿ ಪ್ರೀತಿ, ವಿಶ್ವಾಸಗಳೇ ಇಲ್ಲ ಎನಿಸಿತು. ತನ್ನ ಏಕಾಕಿತನವನ್ನು ಕಳೆಯಲು ಸಣ್ಣ ಕತೆಗಳನ್ನೂ, ಸಂತರ ಜೀವನ ಚರಿತ್ರೆಗಳನ್ನೂ ಬರೆಯತೊಡಗಿದಳು.

ಯಾತನೆಯ ವರ್ಷಗಳು – ಮದುವೆ ಒಡೆಯಿತು

ಮದುವೆಯಾದ ಎರಡು ವರ್ಷಗಳ ನಂತರ (೧೮೬೯) ಗಂಡು ಮಗು ಹುಟ್ಟಿತು ಮಾರನೆಯ ವರ್ಷ ಒಬ್ಬ ಮಗಳು ಈ ಕಂದಮ್ಮಗಳಿಂದ ಯ್ಯಾನಿಗೆ ಬದುಕಿನಲ್ಲಿ ಹೊಸ ಆಸಕ್ತಿ, ಹೊಸ ಹರುಷ, ತಾನೇ ಸ್ವತಃ ಅವುಗಳ ಲಾಲನೆ ಪಾಲನೆ ಮಾಡತೊಡಗಿದಳು. ಆದರೆ ಎಳೆಯದಕ್ಕೆ ಇನ್ನೂ ವರ್ಷವೆನ್ನುವಾಗಲೇ, ಎರಡು ಮಕ್ಕಳಿಗೂ ನಾಯಿಕೆಮ್ಮಿನ ಉಪಟಳ. ಈ ಮಕ್ಕಳ ಯಾತನೆ ತಾಯಿಗೊಂದು ಆಘಾತ. ಮಕ್ಕಳನ್ನು ಉಳಿಸಿಕೊಳ್ಳಲು ಸಾವಿನೊಡನೆ ಸೆಣುಸುವವಳಂತೆ ಯ್ಯಾನಿ ಹೆಣಗಿದಳು. ದುಗುಡದ ದಿನಗಳಲ್ಲಿ ಮಕ್ಕಳಿಂದ ಹೊಸ ಬದುಕನ್ನು ಕಂಡಿದ್ದ ಯ್ಯಾನಿಯ ಮನಸ್ಸಿನಲ್ಲೀಗ ಬಿರುಗಾಳಿ ಎದ್ದಿತು. ಅರಿಯದ ಹಸುಳೆಗಳಿಗೇಕೆ ಈ ದಾರುಣ ಹಿಂಸೆ ಎಂಬ ಕುದಿಯುವ ಪ್ರಶ್ನೆಗೆ ಉತ್ತರ ಸಿಕ್ಕದು. ದೇವರು ನಮ್ಮೆಲ್ಲರ ದಯಾಮಯನಾದ ತಂದೆ ಎಂಬ ಅವಳ ನಂಬಿಕೆಗೆ ಕೊಡಲಿ ಏಟು ಬಿದ್ದಂತಾಯಿತು. ಈಚಿನ ತಿಂಗಳುಗಳಲ್ಲಿ ಯ್ಯಾನಿ ಸೇವಾಕಾಂಕ್ಷೆಯಿಂದ ಬಡವರ ಮನೆಗಳಿಗೆ ಹೋಗಿ ಅವರ ಸ್ಥಿತಿಯನ್ನೂ ಕಂಡಿದ್ದಳು. ಅಕ್ಕರೆಯ ತಾಯಿ ನಂಬಿದ್ದ ವಕೀಲ, ಅವಳನ್ನು ಮೋಸದ ಬಲೆಯಲ್ಲಿ ಕೆಡವಿ, ಸಾಲದ ಬಾಧೆಯಲ್ಲಿ ಮುಳುಗಿಸಿದ್ದ. ಹಕ್ಕಿಯಂತೆ ಬೆಳೆದ ತಾನೇ ಬಾಳಿನ ಕಠೋರತೆಯನ್ನುಂಡು ಹೌಹೌರಿದಳು. ಈಗಂತೂ ಏನೂ ಅರಿಯದ ತನ್ನ ಹಸುಗೂಸುಗಳು ವಾರಗಟ್ಟಲೆ ಕ್ರೂರ ವೇದನೆಯಿಂದ ಕಂಗೆಟ್ಟು ಕೃಶವಾದವು. ಯ್ಯಾನಿಗೆ ಮೊದಲೆಷ್ಟು ಭಕ್ತಿಯೋ ಈಗಷ್ಟು ವಿರಕ್ತಿ.

ಧಾರ್ಮಿಕ ಶ್ರದ್ಧೆಯಲ್ಲಿ ಎದ್ದ ಸಂದೇಹ ಗೃಹಶಾಂತಿಯನ್ನೂ ಇನ್ನಷ್ಟು ಕಲಕಿತು. ಸಂಪ್ರದಾಯದ ಪ್ರಾರ್ಥನೆಗಳಿಗೂ ಇತರ ವಿಧಿಗಳಿಗೂ ಈಗ ಅವಳ ಮನ ಒಪ್ಪದು. ಅವಳ ಮನೋಭಾವದಿಂದ ಗಂಡ ಹೆಂಡಿರ ವಿರಸ ಉಗ್ರವಾಯಿತು. ಕ್ರೈಸ್ತಮತ ತತ್ವಗಳನ್ನೂ ಇನ್ನೊಮ್ಮೆ ಗಾಡವಾಗಿ ಅಧ್ಯಯನ ಮಾಡತೊಡಗಿದಳು. ಯ್ಯಾನಿಯ ಮನಸ್ಸಿನಲ್ಲಿ ಹೀಗೆ ಮೂರು ವರ್ಷಕ್ಕೂ ಮಿಗಿಲಾದ ಕಾಲ ತೀವ್ರ ತುಮುಲ, ಬೆಂಕಿಯ ಕುದಿ, ಜ್ವಾಲಾಮುಖಿಯ ಸ್ಫೋಟ, ಕಡೆಗೆ ಆಚಾರವಂತ ಕ್ರಿಶ್ಚಯನ್ನಳಾಗಿದ್ದವಳು ಸ್ವತಂತ್ರವಾಗಿ ಯೋಚಿಸುವ ನಾಸ್ತಿಕಳಾದಳು.

ಈ ಮಧ್ಯೆ ಹೃದಯದ ಬೇಗುದಿಯನ್ನು ಪರಿಹರಿಸಿಕೊಳ್ಳಲು ಯ್ಯಾನಿ ಸಮಾಜಸೇವೆಗೆ ಕೈ ಹಾಕಿದಳು. ರೋಗಿಗಳ ಶುಶ್ರೂಷೆ ಮಾಡಿದಳು. ಬಡವರಿಗೆ ಬೇಕಾದ ಸಹಾಯ ಮಾಡಿದಳು. ಕಾರ್ಮಿಕ ಸಂಘಗಳ ಪರಿಚಯ, ತಿಳಿವಳಿಕೆ ಬಂದವು. ಸೀಬ್ಸೆ ಗ್ರಾಮದಲ್ಲಿ ವಿಷಯಶೀತ ಜ್ವರದ ಸಾಂಕ್ರಾಮಿಕ ರೋಗ ಹಬ್ಬಿದಾಗ ತನ್ನ ಶಕ್ತಿಮೀರಿ ಆರೈಕೆಗೆ ಕಾರ್ಯದಲ್ಲಿ ತೊಡಗಿದಳು.

೧೮೭೩ರಲ್ಲಿ ಫ್ರಾಂಕ ಬೆಸೆಂಟ್ ತನ್ನ ಹೆಂಡತಿಗೆ ಹೇಳಿದ: “ಸಂಪ್ರದಾಯದಂತೆ ಇರಬೇಕು. ಇಲ್ಲ ಮನೆಬಿಟ್ಟು ಹೊರಡಬೇಕು” ಎಂದು. ಮದುವೆ ಒಡೆಯಿತು. ಯ್ಯಾನಿಗೆ ತುಂಬಾ ಯಾತನೆಯಾಯಿತು.

ಯ್ಯಾನಿ ಮತ್ತು ಅವಳ ತಾಯಿ ಬೇರೆ ಮನೆ ಮಾಡಿದರು. ಕೆಲವು ಕಾಲ ಯ್ಯಾನಿ ಕಸೂತಿ ಕೆಲಸ ಮಾಡಿದಳು. ಯಾರದೋ ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡು ಪಾಠ ಕಲಿಸುವ “ಗವರ್ನೆಸ್” ಆದಳು. ತಾಯಿಯೂ ಕಾಯಿಲೆಯಿಂದ ಕೆಲವು ದಿನ ನರಳಿದಳು.

ಚಾರ್ಲ್ಸ್ ಬ್ರಾಡ್‌ಲಾ

ಈ ಮಧ್ಯೆ ೧೮೬೭ರಲ್ಲಿ ಯ್ಯಾನಿ ಬೆಸೆಂಟ್‌ರಿಗೆ ಆಗ ಇಂಗ್ಲೆಂಡಿನಲ್ಲಿ ಪ್ರಖ್ಯಾತ ವಿಚಾರವಾದಿ ಯಾಗಿದ್ದ ಚಾರ್ಲ್ಸ್ ಬ್ರಾಡ್‌ಲಾ ಅವರ ಪರಿಚಯವಾಗಿತ್ತು.

ಬ್ರಾಡ್‌ಲಾ ಅವರನ್ನು ನೋಡಿ, ಅವರ ಉಪನ್ಯಾಸ ಕೇಳಿ, ಯ್ಯಾನಿ ಬೆಸೆಂಟ್‌ತುಂಬ ಪ್ರಭಾವಿತರಾದರು. ಕ್ರಿಸ್ತನ ಮತ್ತು ಕೃಷ್ಣನ ವೃತ್ತಾಂತಗಳನ್ನೆಲ್ಲ ಅವರು ಬಿಡಿಸಿ ಹೇಳುತ್ತಿದ್ದುದನ್ನೂ, ಅದರ ಹಿಂದಿನ ಅಧ್ಯಯನ, ಜ್ಞಾನ ಸಂಪತ್ತನ್ನೂ, ಜೊತೆಗೆ ಅವರ ಭಾಷಣ ಚಾತುರ್ಯವನ್ನೂ ಯ್ಯಾನಿ ಬೆಸೆಂಟ್‌ರು ತುಂಬ ಮೆಚ್ಚಿದರು. ಹೀಗೆ ಪ್ರಾರಂಭವಾದ ಸ್ನೇಹ ಬ್ರಾಡ್‌ಲಾರ ಸಾವಿನತನಕ ಉಳಿಯಿತು. ಸಾವಿನ ನಂತರವೂ ಅದಿತ್ತೆಂದೇ ಬೆಸೆಂಟ್‌ರ ನಂಬಿಕೆ. ಅದು ಅತ್ಯಂತ ಆತ್ಮೀಯವಾದ ಸ್ನೇಹ.

“ಒಂದು ವಿಷಯದ ಬಗ್ಗೆ ಅತ್ಯುತ್ತಮ ವಿದ್ವಾಂಸರು ಹೇಳುವುದನ್ನೆಲ್ಲ ತಿಳಿಯುವ ತನಕ ಆ ವಿಷಯ ನಿಮಗೆ ತಿಳಿದಿದೆ ಎಂದು ಭಾವಿಸಿಬೇಡಿ. ನಿಮ್ಮ ಬಗ್ಗೆ ಬರುವ ಟೀಕೆಗಳನ್ನೆಲ್ಲ ಓದಿ. ಅದರಲ್ಲಿರಬಹುದಾದ ಸತ್ಯಾಂಶಗಳನ್ನು ಶೋಧಿಸಲು ಯತ್ನಿಸಿ” ಎಂದು ಬ್ರಾಡ್‌ಲಾ ಅವರು ಹೇಳುತ್ತಿದ್ದುದು ಯ್ಯಾನಿ ಬೆಸೆಂಟರ ಮನಸ್ಸನ್ನು ಹದಗೊಳಿಸಿರಬೇಕು.

ಧೀರ ಹೋರಾಟ

ಈಗ ಬೆಸೆಂಟರಿಗೆ ಬ್ರಾಡ್‌ಲಾ ನಡೆಸುತ್ತಿದ್ದ “ನ್ಯಾಷನಲ್‌ರಿಫಾರ್ಮರ್” ಪತ್ರಿಕೆಯಲ್ಲಿ ಉದ್ಯೋಗ, ಬ್ರಾಡ್‌ಲಾ ಅವರ ಜೊತೆಗೂಡಿ ಓದಿದ್ದೆಷ್ಟೋ, ಚರ್ಚೆಗಳೆಷ್ಟೋ, ಬರೆದಿದ್ದೇಷ್ಟೋ, ಅದರ ಪರಿಣಾಮವಾಗಿ ಬೀದಿಮಾತಿಗೆ ಸಿಕ್ಕಿ ಅಪನಿಂದೆಗೆ ಒಳಗಾಗಬೇಕಾಯಿತು. ನಾಸ್ತಿಕತೆ ಎಂದರೆ ಅನೀತಿಯ ಬದುಕೆಂದೇ ಆಗ ಜನ ಭಾವಿಸಿದ್ದರು. ಹಾಗೇ ಜನ ಬೆಸೆಂಟರ ಶೀಲವನ್ನು ಶಂಕಿಸಿ, ಕಳಂಕ ಹಚ್ಚಿದರು. ಬೆಸೆಂಟರು ಭೂ ಸುಧಾರಣೆ ವಿಷಯ, ರಾಜಮನೆತನದ ಖರ್ಚು, ಇಂಗ್ಲೆಂಡ್ ಆಳುತ್ತಿದ್ದ ದೇಶಗಳ ಜನರಿಗೆ ಅವರೇ ಆಳಿಕೊಳ್ಳುವ ಅಧಿಕಾರ ಕೊಡುವ  ಅವಶ್ಯಕತೆ – ಹೀಗೆ ಹಲವಾರು ವಿಚಾರಗಳಲ್ಲಿ ಸರ್ಕಾರವನ್ನು ಖಂಡಿಸುತ್ತಿದ್ದುದೂ ಸೇರಿ ಎಲ್ಲೆಲ್ಲೂ ಆಕೆಯ ಹೆಸರು ಹೇಳಿದರೆ ದ್ವೇಷ, ತಿರಸ್ಕಾರ ಕಂಡು ಬರುತ್ತಿದ್ದವು. 

ಇದೇ ಸಮಯದಲ್ಲಿ ಬೆಸೆಂಟರು ಮತ್ತೊಂದು ಹೋರಾಟವನ್ನು ಪ್ರಾರಂಭಿಸಿದರು. ಡಾಕ್ಟರ್ ಚಾರ್ಲ್‌‌ಸ್‌ನೋಲ್ಟನ್‌ಎಂಬಾತ ಜನಸಂಖ್ಯೆಯನ್ನು ಮಿತಗೊಳಿಸಬೇಕು ಎಂದು ಪ್ರತಿಪಾದಿಸಿ ಪುಸ್ತಕ ಬರೆದಿದ್ದ. ದುಷ್ಟ ಪ್ರಕಾಶಕನೊಬ್ಬ ಅದಕ್ಕೆ ಅಶ್ಲೀಲ ಚಿತ್ರಗಳನ್ನು ಸೇರಿಸಿ ಪ್ರಕಟಿಸಿದ. ಅದಕ್ಕಾಗಿ ಅವನಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಯಿತು. ಆದರ ಪುಸ್ತಕ ಮುಖ್ಯವಾದ ವಿಷಯ ಒಂದನ್ನು ಕುರಿತದ್ದು ಎಂದು ಬ್ರಾಡ್‌ಲಾ ಮತ್ತು ಬೆಸೆಂಟರು ಅದನ್ನು ಪ್ರಕಟಿಸಲು ತೀರ್ಮಾನಿಸಿದರು. ತಾವು ಅದರಲ್ಲಿ ಹೇಳಿದ ಹಲವು ಅಭಿಪ್ರಾಯಗಳನ್ನು ಒಪ್ಪದಿದ್ದರೂ, ದೇಶದಲ್ಲಿ ಧೈರ್ಯವಾಗಿ ಹೊಸ ಅಭಿಪ್ರಾಯಗಳನ್ನು ಪ್ರತಿಪಾದಿಸುವ ಸ್ವಾತಂತ್ರ್ಯಕ್ಕಾಗಿ ತಾವು ಅದನ್ನು ಪ್ರಕಟಿಸಲು ತೀರ್ಮಾನಿಸಿದರು. ತಾವು ಅದರಲ್ಲಿ ಹೇಳಿದ ಹಲವು ಅಭಿಪ್ರಾಯಗಳನ್ನು ಒಪ್ಪದಿದ್ದರೂ, ದೇಶದಲ್ಲಿ ಧೈರ್ಯವಾಗಿ ಹೊಸ ಅಭಿಪ್ರಾಯಗಳನ್ನು ಪ್ರತಿಪಾದಿಸುವ  ಸ್ವಾತಂತ್ರ್ಯಕ್ಕಾಗಿ ತಾವು ಅದನ್ನು ಪ್ರಕಟಿಸುವುದಾಗಿ ಘೋಷಿಸಿದರು. ಇದರಿಂದ ಅವರ ದಸ್ತಗಿರಿಯಾಯಿತು. ಇಬ್ಬರಿಗೂ ಆರು ತಿಂಗಳು ಸೆರೆಮನೆ ವಾಸ ಮತ್ತು ಇನ್ನೂರು ಪೌಂಡುಗಳ ಜುಲ್ಮಾನೆ ವಿಧಿಸಲಾಯಿತು.

ಬೆಸೆಂಟರಿಗೆ ಮತ್ತೊಂದು ಆಘಾತ ಎಂದರೆ ಅವರ ಮಕ್ಕಳನ್ನು ನೋಡಿಕೊಳ್ಳಲು ಯೋಗ್ಯರಲ್ಲ ಎಂದು ಒಂದು ನ್ಯಾಯಾಲಯ ತೀರ್ಮಾನಿಸಿದ್ದು. ಮಕ್ಕಳನ್ನು ಆಗಾಗ ನೋಡಲು ಅನುಮತಿ ಸಿಕ್ಕಿತು ಅಷ್ಟೆ.

ಕ್ರಮೇಣ ಜನರು ಅವರ ಧೈರ್ಯವನ್ನೂ ವಿಚಾರ ರೀತಿಯನ್ನೂ ಮೆಚ್ಚಲಾರಂಭಿಸಿದರು. ಇದೇ ಸಮಯದಲ್ಲೆ ಬೆಸೆಂಟರು ನಡೆಸಿದ ಇನ್ನೊಂದು ಧೀರ ಹೋರಾಟವೆಂದರೆ ಬ್ರಾಡ್‌ಲಾ ಅವರು ಪಾರ್ಲಿಮೆಂಟಿನಲ್ಲಿ ಕೊಡುವ ಹಕ್ಕಿಗಾಗಿ ಚುನಾವಣಾ ಕಾರ್ಯದಲ್ಲೂ ಭಾಗವಹಿಸಿದರು.

ಬ್ರಾಡ್‌ಲಾ ಬಹು ಹಿರಿಯ, ಸುಸಂಸ್ಕೃತ ವ್ಯಕ್ತಿ. ಅವರು ಚುನಾವಣೆಯಲ್ಲಿ ಗೆದ್ದರು. ಅವರ ಹೆಂಡತಿಗೆ ಕುಡಿಯುವ ಚಟ ವಿಪರೀತ. ಇದರಿಂದ ಬ್ರಾಡ್‌ಲಾ ಅವರಿಂದ ದೂರವಾಗಿದ್ದರು. ಇದಕ್ಕೆ ತಪ್ಪು ಅರ್ಥ ಕೊಟ್ಟು ಅವರ ವಿರೋಧಿಗಳು ಅವರು ಪಾರ್ಲಿಮೆಂಟಿನಲ್ಲಿ ಕೂಡಲು ಅವಕಾಶ ಕೊಡಲಿಲ್ಲ. ಮತ್ತೆ ಬ್ರಾಡ್‌ಲಾ ಚುನಾವಣೆಗೆ ನಿಂತು ಗೆದ್ದರೂ ಅವರು ಪಾರ್ಲಿಮೆಂಟ್‌ಭವನದ ಒಳಕ್ಕೆ ಹೋಗಲಾಗದಂತೆ ಭವನದ ಮಹಾದ್ವಾರವನ್ನೇ ಮುಚ್ಚಿ ಪೊಲೀಸರ ಕಾವಲನ್ನು ಹಾಕಲಾಯಿತು. ದೇಶಾದ್ಯಂತ ಪ್ರತಿಭಟನಾ ಸಭೆಗಳು ನಡೆದವು. ೧೮೮೦ರ ಆಗಸ್ಟ್ ೩ನೇ ತಾರೀಖು ಬ್ರಾಡ್‌ಲಾ ಸಭೆಗೆ ಹೊರಟರು. ಭಾರಿ ಜನಸಮೂಹ ಸೇರಿತು. ಏನೇ ಆಗಲಿ, ಜನ ಹಿಂಸಾಮಾರ್ಗಕ್ಕಿಳಿಯದಂತೆ ನೋಡಿಕೊಳ್ಳಬೇಕು ಎಂದು ಬೆಸೆಂಟರಿಗೆ ಬ್ರಾಡ್‌ಲಾರ ಆಜ್ಞೆ. ಆಗಾಧ ಜನಸ್ತೋಮ “ನ್ಯಾಯಬೇಕು” ಎಂದು ಕೂಗುತ್ತ ಭವನದ ಬಾಗಿಲವರೆಗೂ ನುಗ್ಗಿದಾಗ, ಗುಂಪಿಗೂ, ಪೊಲೀಸರಿಗೂ ನಡುವೆ ನಿಂತು ಯಾರೂ ಹಿಂಸೆಗೆ ಇಳಿಯದಂತೆ ತಡೆದದ್ದು – ನಿರಾಯುಧಳಾದ ಒಬ್ಬಂಟಿ ಹೆಣ್ಣು, ಯ್ಯಾನಿ ಬೆಸೆಂಟ್‌. ಆಕೆಯ ಧೈರ್ಯವನ್ನು ಮೆಚ್ಚದವರಿಲ್ಲ.

ಹೋರಾಟದ ನಡುವೆ ಅಧ್ಯಯನ

ಇದರ ನಂತರ ಬೆಸೆಂಟರು ಐರ‍್ಲೆಂಡಿನ ಜನರಿಗೆ ಅನ್ಯಾಯ ಎಸುಗುತ್ತಿದ್ದ ಒಂದು ಕಾಯಿದೆಯ ವಿರುದ್ಧ ಹೋರಾಡಿದರು. ಈ ಮಧ್ಯೆಯೇ ಈಜಿಪ್ಟ್‌, ಭಾರತ, ಮುಂತಾದ ದೇಶಗಳಲ್ಲಿ ಇಂಗ್ಲೆಂಡ್‌ಅನುಸರಿಸುತ್ತಿದ್ದ ರೀತಿನೀತಿಗಳನ್ನು ಖಂಡಿಸಿ ಹಲವಾರು ಲೇಖನಗಳನ್ನು ಬರೆದರು. ಅನೇಕ ಭಾಷಣ ಮಾಡಿದರು. ವಿಚಾರ ಸ್ವಾತಂತ್ರ್ಯ ಚಳವಳಿಗಾಗಿ ಬೇಕಾದಷ್ಟು ಬರೆದರು. ಮಹಿಳಾ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ಸಮಾಜವಾದೀ ಹಾಗೂ ಕಾರ್ಮಿಕ ಚಳವಳಿಗಳಲ್ಲೂ ದುಡಿಯುತ್ತಿದ್ದರು. ಭೂ ಸುಧಾರಣೆಗಾಗಿ ದೊಡ್ಡ ಸಮ್ಮೇಳನ ಸೇರಿಸಿದರು. ಇವೆಲ್ಲ ಸಾಲದೋ ಎಂಬಂತೆ ಬೆಸೆಂಟರು ವಿಜ್ಞಾನ ವಿಷಯಗಳ ವ್ಯಾಸಂಗವನ್ನು ಇದೇ ವರ್ಷಗಳಲ್ಲಿ ಮಾಡುತ್ತಿದ್ದರು. ವಿಜ್ಞಾನದ ಬಗೆಗೆ ಹಲವಾರು ಜನಪ್ರಿಯ ಲೇಖನಗಳನ್ನು ಬರೆದರು. ಮಗಳು ತಮ್ಮ ಪೋಷಣೆಗೆ ಬರಬೇಕು ಎಂದು ನ್ಯಾಯಾಲಯದಲ್ಲಿ ಕಟ್ಟಳೆ ಹೂಡುತ್ತಿರುವಂತೆಯೇ ೧೮೭೬ರಲ್ಲಿ ಲಂಡನ್‌ವಿಶ್ವ ವಿದ್ಯಾನಿಲಯದ ವಿಜ್ಞಾನ ತರಗತಿಗೆ ವಿದ್ಯಾರ್ಥಿನಿಯಾಗಿ ಸೇರಿದರು. ಕೋರ್ಟಿನ ಕೆಲಸ ಕಳವಳಗಳ ನಡುವೆ ಬೇಜಾರು ಕಳೆಯಲು ಬೀಜ ಗಣಿತ, ಭೌತಶಾಸ್ತ್ರಗಳ ವ್ಯಾಸಂಗ. ವಿಜ್ಞಾನ ಶಿಕ್ಷಕಿಯಾಗುವಂತೆ ಅರ್ಹತೆ ಗಳಿಸಿದರು. ವಿದ್ಯಾರ್ಥಿಯಾಗಿ ಸಸ್ಯೋದ್ಯಾನಕ್ಕೆ ಭೇಟಿ ಕೊಡಲು ಅಡಚಣೆ ಬಂದಿತ್ತು. ಆದರೂ ಸಸ್ಯಶಾಸ್ತ್ರದಲ್ಲಿ ಆನರ್ಸ್‌ಪ್ರಶಸ್ತಿ ಪಡೆದರು – ಇಡೀ ಇಂಗ್ಲಂಡಿಲ್ಲಿ ಪ್ರಶಸ್ತಿ ಪಡೆದ ಏಕಮಾತ್ರ ಪದವೀಧರೆ!

ಅನ್ಯಾಯಕ್ಕೆ ಒಳಗಾದವರ ಪ್ರತಿನಿಧಿ

ಪ್ರಸಿದ್ಧ ನಾಟಕಕಾರ ಮತ್ತು ಪ್ರತಿಭಾವಂತ ವಿಚಾರಶೀಲ ಬರ್ನಾಡ್‌ಷಾ ಮತ್ತು ಇತರರ ಪರಿಚಯದಿಂದಲೂ ವೆನಿಸ್‌, ಆರ್ಮ್‌‌ಸ್ಟರ್ಡಾಂ ಮುಂತಾದ ಸ್ಥಳಗಳಲ್ಲಿ ನಡೆದ ಅಂತರ ರಾಷ್ಟ್ರೀಯ ಸಮ್ಮೇಳನಗಳಿಂದಲೂ ಬೆಸೆಂಟರಿಗೆ ಸಮಾಜವಾದದಲ್ಲಿ ಆಸಕ್ತಿ ಹೆಚ್ಚಿತು. ವಿಶೇಷವಾಗಿ ಷಾ ಅವರಿಂದ ಬೆಸೆಂಟರು ತುಂಬಾ ಪ್ರಭಾವಿತರಾದರು. ( ಇಂಗ್ಲೆಡಿನಲ್ಲೇ ಅಲ್ಲದೆ ಬಹುಶಃ ಇಡೀ ಯುರೋಪಿನಲ್ಲೇ ಅತ್ತಯುತ್ತಮ ಭಾಷಣಗಾರರೆಂದು ಬೆಸೆಂಟರನ್ನು ಆಗೊಮ್ಮೆ ಷಾ ವರ್ಣಿಸಿದ್ದರು.) ಇತರ ಸುಧಾರಕರೊಡನೆ ಸೇರಿ ಆಕೆ ಸಾಮಾನ್ಯ ಜನರ ಸ್ಥಿತಿಗತಿಗಳನ್ನು ಸುಧಾರಿಸಲು ತೀವ್ರ ಪ್ರಯತ್ನ ನಡೆಸಿದರು. ಬಾಲಕರೂ ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸೂಚಿಸಿದ ಮಸೂದೆಯನ್ನು ಬೆಸೆಂಟ್ ವಿರೋಧಸಿದರು. ಲಂಡನ್‌ಶಾಲಾ ಮಂಡಳಿಯ ಮಕ್ಕಳಿಗೆ  ಉಚಿತವಾಗಿ ಆಹಾರ ಕೊಡಬೇಕು ಎಂದು ಒತ್ತಾಯ ಮಾಡಿದರು. ಮಂಡಳಿಯ ಸದಸ್ಯರಾಗಿ ಚುನಾಯಿತರೂ ಆದರು. ಕೊಳಚೆ ಪ್ರದೇಶಗಳ ಜನರ ಜೀವನ ಉತ್ತಮ ಪಡಿಸಲು ಹಲವಾರು ಲೇಖನಗಳನ್ನು ಬರೆದರು. ಕಾರ್ಮಿಕ ಚಳವಳಿಗೆ ತುಂಬ ಬೆಂಬಲ ನೀಡಿದರು. ಬೆಂಕಿಕಟ್ಟಿ ಮಾಡುವ ಮಹಿಳಾ ಕಾರ್ಮಿಕರ ಮುಷ್ಕರಕ್ಕೆ ಮಾರ್ಗದರ್ಶನ ನೀಡಿ ಅವರನ್ನು ಸಂಘಟಿಸಿದರು. ಆ ಸಂಘದ ಕಾರ್ಯದರ್ಶಿಯಾಗಿ ಪಾರ್ಲಿಮೆಂಟಿಗೆ ಮೆರವಣಿಗೆ ಹೋಗಿ ದೂರು ಸಲ್ಲಿಸಿದರು. ಹೆಂಗಸರಿಗೆ ಸಮಾನ ಪೌರ ಹಕ್ಕುಗಳಿರಬೇಕು ಎಂದು ಹೋರಾಡಿದರು. ರಷ್ಯನ್ ಸ್ವಾತಂತ್ರ್ಯ ಪ್ರೇಮಿಗಳ ಸಂಘವನ್ನೂ ಸ್ಥಾಪಿಸಿ ಅದಕ್ಕಾಗಿ ದುಡಿದರು. ಬರ್ನಾಡ್‌ಷಾ, ಸಿಡ್ನಿ ವೆಬ್‌ಮುಂತಾದ ಪ್ರಖ್ಯಾತ ಸಮಾಜವಾದಿ ಸುಧಾರಕರಿದ್ದ ಫೇಬಿಯಾನ್‌ಸೊಸೈಟಿಯನ್ನು ಸೇರಿ ಅಲ್ಲೂ ಕೆಲಸ ಮಾಡಿದರು. ನಿರುದ್ಯೋಗ ನಿವಾರಣೆಗಾಗಿಯೂ, ಕಾರ್ಮಿಕರಿಗೆ ದಿನಕ್ಕೆ ಎಂಟೇ ಗಂಟೆಗಳ ಕೆಲಸವಿರಬೇಕು ಎಂಬುದಾಗಿಯೂ ಇನ್ನೊಂದು ಚಳವಳಿಯನ್ನು ನಡೆಸಿದರು. ಸಾರ್ವಜನಿಕ ಮಹತ್ವದ ವಿಷಯಗಳನ್ನು ಚರ್ಚಿಸಲು ಛೇರಿಗ್‌ಕ್ರಾಸ್‌ಚರ್ಚಾಕೂಟ ಎಂಬುದನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದರು. ತಮ್ಮ ಭಾವನೆಗಳನ್ನು ಪ್ರಚುರಪಡಿಸಲು ಮತ್ತು ಮೂಕವಾಗಿ ನರಳುತ್ತಿರುವವರ ಮುಖವಾಣಿಯಾಗಿರಲು “ಲಿಂಕ್‌” ಎಂಬ ವಾರಪತ್ರಿಕೆಯನ್ನು ಸ್ಥಾಪಿಸಿದರು. ಬರೆದ ಲೇಖನಗಳಿಗೆ ಮಾಡಿದ ಭಾಷಣಗಳಿಗೆ ಕೊನೆಯಿರಲಿಲ್ಲ. ಹತ್ತು ತಲೆಗಳಿದ್ದಂತೆ, ನೂರು ಕೈಗಳಿದ್ದಂತೆ ದುಡಿದರು, ಇಷ್ಟೆಲ್ಲ ಚಟುವಟಿಕೆಗಳಿಗೂ ಒಮ್ಮೆಗೆ ಮನಸ್ಸು ಕೊಡುತ್ತಿದ್ದ , ಪ್ರಾಮಾಣಿಕವಾಗಿ ಹಗಲೂ ರಾತ್ರಿ ದುಡಿಯುತ್ತಿದ್ದ ಬೆಸೆಂಟರ ಬುದ್ಧಿಶಕ್ತಿ, ಸಾಮರ್ಥ್ಯ ಎಷ್ಟೆಂಬುದು ಆಶ್ಚರ್ಯಕರ!

ಅತೃಪ್ತಿ

ಇಷ್ಟೆಲ್ಲ ಕಾರ್ಯ ಕಲಾಪಗಳ ನಡುವೆಯೂ ಯ್ಯಾನಿ ಬೆಸೆಂಟ್ ಮನಸ್ಸಿನಲ್ಲಿ ತಮ್ಮ ಭಾವನೆ, ಆಲೋಚನೆಗಳಲ್ಲಿ, ಜೀವನ ಸಿದ್ಧಾಂತದಲ್ಲಿ ಏನೋ ಕೊರತೆಯಿದೆ ಎಂಬ ಅತೃಪ್ತಿಯಿತ್ತು. ಆ ದಿನಗಳಲ್ಲಿ ಮನಶಾಸ್ತ್ರದ ಬಗೆಗೆ ಸಂಶೋಧನೆಗಳು ತೀವ್ರವಾಗಿ ನಡೆಯುತ್ತಿದ್ದವು. ಯ್ಯಾನಿ ಬೆಸೆಂಟರು ಹೊಸ ಪ್ರಯೋಗಗಳನ್ನು ಮತ್ತು ಸಿದ್ಧಾಂತಗಳನ್ನು ಕುರಿತು ಆಳವಾಗಿ ಓದಿದರು. ಸ್ವತಃ ಕೆಲವು ಪ್ರಯೋಗಗಳನ್ನೂ ನಡೆಸಿದರು. ಕುತೂಹಲಕಾರಿ ಫಲಿತಾಂಶಗಳನ್ನು ಕಂಡರು. ನಮ್ಮ ಇಂದ್ರಿಯಗಳಿಂದ ನಾವು ಅರ್ಥಮಾಡಿಕೊಳ್ಳು ಸಾಧ್ಯವಿಲ್ಲದ ವಿಶಿಷ್ಟ ಶಕ್ತಿ ಇದೆ ಎಂದು ಅವರಿಗೆ ಬಲವಾದ ಭಾವನೆ ಬಂದಿತು. ಇಂತಹ ಆಲೋಚನೆಗಳಲ್ಲೇ ಮುಳುಗಿರುವುದು ಅಭ್ಯಾಸವಾಗಿದ್ದಾಗ, ಒಂದು ಸಂಜೆ ಸೂರ್ಯಾಸ್ತದ ನಂತರ, ಮನುಷ್ಯನ ಜೀವ ಮತ್ತು ಮನಸ್ಸಿನ ನಿಗೂಢತೆಯನ್ನು ತಿಳಿಯಬೇಕೆಂಬ ಹಂಬಲದಿಂದ ಯೋಚಿಸುತ್ತಿರುವಾಗ, ಒಂದು ಧ್ವನಿ ” ಧೈರ್ಯವಿರಲಿ, ಜ್ಯೋತಿ ಸಮೀಪಿಸುತ್ತಿದೆ” ಎಂದಂತಾಯಿತು. 

 ಬ್ರಹ್ಮವಿದ್ಯಾ ಸಮಾಜ”

 

ಈ ಸಮಯದಲ್ಲಿ ಅವರಿಗೆ ಮ್ಯಾಡಂ ಬ್ಲ್ಯಾವಟ್‌ಸ್ಕಿ ಯವರ ” ದಿ ಸೀಕ್ರೆಟ್ ಡಾಕ್ಟ್ರಿನ್‌” ( ನಿಗೂಢ ಸಿದ್ಧಾಂತ) ಎಂಬ ಗ್ರಂಥದ ಎರಡು ಸಂಪುಟಗಳು ದೊರೆತವು. ತಮ್ಮ ಮನದಲ್ಲಿದ್ದ ಎಲ್ಲ ಶಂಕೆ, ಸಂದೇಹ, ಸಮಸ್ಯೆಗಳೂ ಈ ಪುಸ್ತಕಗಳನ್ನು ಓದುತ್ತಾ ಹೋದಂತೆ ದೂರವಾದುವು ಎಂದು ಬೆಸೆಂಟರು ಬರೆದಿದ್ದಾರೆ. ಬ್ಲ್ಯಾವಟ್‌ಸ್ಕಿ ಯವರು ಸ್ಥಾಪಿಸಿದ್ದ ” ಥಿಯಸಾಫಿಕಲ್‌ಸೊಸೈಟಿ” ಅಂದರೆ “ಬ್ರಹ್ಮವಿದ್ಯಾ ಸಮಾಜ”ವನ್ನು ೧೮೮೯ರ ಮೇ ತಿಂಗಳಿನಲ್ಲಿ ಸೇರಿದರು.

ಅವರ ನಂಬಿಕೆಗಳ ಬಗೆಗೆ ಅವರೇ ಒಂದೆಡೆ ಹೀಗೆ ಬರೆದರು – ” ಆತ್ಮ ಎಂಬುದು ಇದೆ. ನಾನು ಎಂದರೆ ಆತ್ಮವೇ ಹೊರತು ದೇಹವಲ್ಲ. ಆತ್ಮ ತನ್ನಿಚ್ಛೆಯಂತೆ ದೇಹವನ್ನು ಬಿಟ್ಟು ಬರಬಲ್ಲುದು. ಹೊರಬಂದು ದೂರದಲ್ಲಿರುವ ಗುರುಗಳಿಂದ ಉಪದೇಶ ಪಡೆದು ಹಿಂದಿರುಗಬಲ್ಲದು. ಅದರಿಂದ ತನ್ನ ಈಗಿನ ಮನಸ್ಸನ್ನು ಪ್ರಭಾವಿತಗೊಳಿಸಬಲ್ಲದು. ಹಲವಾರು ಮಹರ್ಷಿಗಳು ಇನ್ನೂ ಜೀವಂತವಾಗಿದ್ದಾರೆ. ಅವರ ದಿವ್ಯಜ್ಞಾನ ಮತ್ತು ಶಕ್ತಿಯ ಮುಂದೆ ಪ್ರಕೃತಿಯ ನಿಯಂತ್ರಣಕ್ಕಾಗಿ ನಮ್ಮ ಪ್ರಯತ್ನ ಮತ್ತು ತಿಳಿವಳಿಕೆ ಕೇವಲ ಮಕ್ಕಳಾಟದಂತೆ. ನನ್ನ ತಿಳಿವಳಿಕೆ ಆತ್ಯಲ್ಪವೇ. ಈ ಮಾರ್ಗ ಎಲ್ಲರಿಗೂ ತೆರೆದಿದೆ. ಆಧ್ಯಾತ್ಮಿಕ ಸತ್ವಕ್ಕಾಗಿ ಬೇರೆ ಎಲ್ಲವನ್ನೂ ತ್ಯಜಿಸಲು ಸಿದ್ಧರಾದಲ್ಲಿ ಮತ್ತು ಸ್ವಾರ್ಥವನ್ನು ಬಿಟ್ಟಲ್ಲಿ ಈ ಪರಮಜ್ಞಾನ ಎಲ್ಲರಿಗೂ ಲಭ್ಯ.”

ಜಾತಿ, ವರ್ಣ, ಪಂಥಗಳ ತಾರತಮ್ಮವಿಲ್ಲದೆ ಜಗತ್ತಿನಲ್ಲಿ ಎಲ್ಲ ಜೀವಿಗಳಲ್ಲೂ ಸೋದರ ಭಾವನ್ನು ಮೂಡಿಸುವುದೇ ಥಿಯಸಾಫಿಕಲ್‌ಸೊಸೈಟಿಯ ಮುಖ್ಯ ಉದ್ದೇಶ. ಸದಸ್ಯರು ತಮ್ಮ ತಮ್ಮ ಮತ ಪದ್ಧತಿಗಳನ್ನು ಆಚರಿಸಲು ಅಡ್ಡಿ ಇರುವುದಿಲ್ಲ.

ಇಂಥ ಪ್ರಾಚೀನ ಜ್ಞಾನವನ್ನೂ, ದಿವ್ಯ ರಹಸ್ಯಗಳನ್ನೂ ಪಡೆದಿರುವ ಅರ್ಹತೆ ಅಂದರೆ ಮಹರ್ಷಿಗಳು ಈಗಲೂ ಜೀವಂತವಾಗಿದ್ದಾರೆ. ಅಗಸ್ತ್ಯ ಮುಂತಾದ ಪೂಜ್ಯ ಮಹರ್ಷಿಗಳು ಟಿಬೆಟ್‌ನಲ್ಲೂ, ಗೋಬಿ ಮರಭೂಮಿಯಲ್ಲೂ ದುರ್ಗಮ ಸ್ಥಳಗಳಲ್ಲಿ ಇದ್ದಾರೆ. ಅವರಲ್ಲಿ ಒಬ್ಬಿಬ್ಬರೊಡನೆ ತಮಗೂ ಆಗಾಗ ಭೇಟಿ ನಡೆಯುತ್ತದೆ ಎಂದು ಯ್ಯಾನಿ ಬೆಸೆಂಟರು ಬರೆದಿದ್ದಾರೆ.

೧೮೯೧ ಬೆಸೆಂಟರಿಗೆ ಆಘಾತದ ವರ್ಷ. ಚಾರ್ಲ್ಸ್ ಬ್ರಾಡ್‌ಲಾ ಮತ್ತು ಶ್ರೀಮತಿ ಬ್ಲ್ಯಾವಟ್‌ಸ್ಕಿ ಇವರಿಬ್ಬರೂ ಆ ವರ್ಷ ಮೃತಪಟ್ಟರು. ಬೆಸೆಂಟರದು ಈಗ ಪರಿಪಕ್ವವಾದ ಮನಸ್ಸು, ಥಿಯಸಾಫಿಕಲ್‌ಸೊಸೈಟಿಯ ಮೂಲಕ ಉನ್ನತ ಆಧ್ಯಾತ್ಮಿಕ ರಹಸ್ಯಗಳನ್ನು ತಿಳಿದಿದ್ದ ಚೇತನ. ಅವರ ಮನಸ್ಸಿನಲ್ಲಿ ಗಾಢವಾದ ಶಾಂತಿಯಿತ್ತು.

ಭಾರತದಲ್ಲಿ – ನಾಲ್ಕು ಧ್ಯೇಯಗಳಿಗೆ ಸಮರ್ಪಣೆ

ಬ್ಲ್ಯಾವಟ್ ಸ್ಕಿಯವರ ನಿಧನಕ್ಕೆ ಕೆಲವು ವರ್ಷ ಮುಂಚೆಯೇ ಥಿಯಸಾಫಿಕಲ್‌ಸಂಘಟ ಚಟುವಟಿಕೆಗಳು ಹೆಚ್ಚು ಹೆಚ್ಚಾಗಿ ಭಾರತಕ್ಕೆ ವರ್ಗಾಯಿಸಲ್ಪಟ್ಟಿದ್ದವು. ಯ್ಯಾನಿ ಬೆಸೆಂಟರಿಗೂ ಭಾರತದ ಬಗ್ಗೆ ಮೊದಲಿಂದ ಹೆಚ್ಚಿನ ಆಸಕ್ತಿ ಇತ್ತು.

ಹೀಗಾಗಿ ೧೯೯೩ರಲ್ಲಿ ಯ್ಯಾನಿ ಬೆಸೆಂಟರು ಭಾರತಕ್ಕೆ ಬಂದುದು ಸಹಜವೇ ಆಗಿತ್ತು. ಬೆಸೆಂಟರು ಬರುತ್ತಿದ್ದಂತೆಯೇ ಬೆಂಗಳೂರು, ವಿಜಯವಾಡ, ತೂತ್ತುಕುಡಿ ಹಾಗೂ ಆಗ ಭಾರತದ ಭಾಗವಾಗಿದ್ದ ಶ್ರೀಲಂಕಾದ ಕ್ಯಾಂಡಿ ಮತ್ತು ಇತರೆಡೆಗಳಲ್ಲಿ ಉಪನ್ಯಾಸಗಳನ್ನಿತ್ತರು.

ಇಲ್ಲಿಂದ ಮುಂದೆ ಅವರ ಬಾಳು ನಾಲ್ಕು ಧ್ಯೇಯಗಳಿಗೆ ಮೀಸಲಾದವು. ಈ ಕ್ರೈಸ್ತ ಮಹಿಳೆ ಹಿಂದೂ ಸಂಸ್ಕೃತಿಯ ಮುಖ್ಯ ಅಂಶಗಳನ್ನು ಪ್ರಸಾರ ಮಾಡಿದರು. ಈ ಬ್ರಿಟಿಷ್‌ಮಹಿಳೆ ಭಾರತದ ಸ್ವಾತಂತ್ರಕ್ಕಾಗಿ ಬ್ರಿಟಿಷ್‌ಸರ್ಕಾರದ ವಿರುದ್ಧ ಹೋರಾಡಿದರು. ಇಲ್ಲಿನ ಸಮಾಜದ  ದೋಷಗಳನ್ನು ತೊಡೆದುಹಾಕಲು ಮತ್ತು ಹೆಂಗಸರಿಗೆ ನ್ಯಾಯ ದೊರಕಿಸಲು ಶ್ರಮಿಸಿದರು.

ಅವರಿಗೆ ಸಮಾಜ ಸುಧಾರಣೆಯ ಆಸಕ್ತಿ ಮೊದಲಿಂದಲೂ ಇದ್ದೂದೇ. ಮದರಾಸಿನ ಅಡಿಯಾರಿನಲ್ಲಿ ಹೀನಸ್ಥಿತಿಯ ಹರಿಜನರಿಗಾಗಿ ಅವರ “ಆಲ್ಕಾಟ್ ಪಂಚಮ ಸ್ಕೂಲ್‌” ಎಂಬ ಶಾಲೆಯನ್ನು ಸ್ಥಾಪಿಸಿದರು. ಭಾರತದ ಶಿಕ್ಷಣ ಸುಧಾರಣೆ ಕುರಿತು ಅನೇಕ ಸ್ಥಳಗಳಲ್ಲಿ ಭಾಷಣ ಮಾಡಿದರು. ಇಲ್ಲಿಗೆ ಬಂದ ಸ್ವಲ್ಪಕಾಲದಲ್ಲೇ ಅನೇಕಾನೇಕ ಮುಖಂಡರನ್ನೆಲ್ಲ ಪರಿಚಯ ಮಾಡಿಕೊಂಡರು.

ಮೊದಲ ವರ್ಷಗಳಲ್ಲಿ ವಾರಾಣಸಿಯಲ್ಲಿ “ಶಾಂತಿಕುಂಜ” ಎಂಬ ಹೆಸರಿನ ಮನೆಮಾಡಿಕೊಂಡ ಯ್ಯಾನಿಬೆಸೆಂಟರು ಅದರ ಆವರಣದಲ್ಲಿದ್ದ ಹಳೆಯ ಶಿಥಿಲವಾದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬಯಸಿದರು. ಅದಕ್ಕಾಗಿ ಅವರು ಪಂಡಿತರ ಸಭೆಯೊಂದನ್ನು ಸೇರಿಸಿದ್ದರು.

ಎಲ್ಲ ಪಂಥಗಳನ್ನೂ ಆಳವಡಿಸಿಕೊಂಡ ಥಿಯಸಾಫಿಕಲ್ ಸೊಸೈಟಿಯನ್ನೂ ಸೇರಿದ್ದರೂ ಬೆಸೆಂಟರಿಗೆ ಆದಷ್ಟು ಮಟ್ಟಿಗೂ ಭಾರತೀಯ ರೀತಿಯಲ್ಲಿ ಇರುವುದೆಂದರೆ ಅಚ್ಚುಮೆಚ್ಚು. ಆಕೆ ಭಾರತೀಯ ಸತ್ವವನ್ನು ಬಲುಬೇಗ ಮೈಗೂಡಿಸಿಕೊಂಡರು. ಭಗವದ್ಗೀತೆಯ ಮೇಲೆ ಬೆಸೆಂಟರ ಉಪನ್ಯಾಸ ಕೇಳಲು ಮೈಲಿಗಳ ದೂರದಿಂದ ಯುವಕರೂ ವೃದ್ಧರೂ ಬರುತ್ತಿದ್ದರು.

ಶಿಕ್ಷಣ ಕ್ಷೇತ್ರ

ಭಾರತಕ್ಕೆ ಬಂದ ನಂತರ ಯ್ಯಾನಿಬೆಸೆಂಟರು ಕೈಗೆತ್ತಿಕೊಂಡ ಗಮನಾರ್ಹವಾದ ಮೊದಲ ಕಾರ್ಯವೆಂದರೆ ೧೮೯೮ರಲ್ಲಿ ವಾರಾಣಸಿಯಲ್ಲಿ “ಸೆಂಟ್ರಲ್‌ಹಿಂದೂ ಕಾಲೇಜ್‌”ನ್ನು ಸ್ಥಾಪಿಸಿದುದು. ಇಲ್ಲಿನ ಬಾಲಕ ಬಾಲಕಿಯರ ಶಿಕ್ಷಣ ಭಾರತದ ಸನಾತನ ಸಂಸ್ಕೃತಿಯ ದೃಷ್ಟಿ ಹೊತ್ತು, ಅದರ ಆಡಳಿತ ಮತ್ತು ಹಣಕಾಸಿನ ಹೊಣೆ ಪೂರ್ಣವಾಗಿ ಭಾರತೀಯರದಾಗಿರಬೇಕು ಎಂದು ಅವರು ವಾದಿಸುತ್ತಿದ್ದರು. ದೇಶಾಭಿಮಾನ ಮತ್ತು ಮತತತ್ವಗಳ ಸಾರವನ್ನು ಈ ಶಿಕ್ಷಣ ಕ್ರಮವು ಖಚಿತವಾಗಿ ಒಳಗೊಂಡು, ಜೊತೆಗೆ ಪಾಶ್ಚಾತ್ಯ ದೇಶಗಳ ವೈಜ್ಞಾನಿಕ ಮತ್ತು ತಾಂತ್ರಿಕ ಲಕ್ಷಣಗಳನ್ನು ಸೇರಿಸಿಕೊಂಡಿರಬೇಕು ಎಂಬುದು ಅವರ ಭಾವನೆ. ವಿದ್ಯಾರ್ಥಿಗಳ ದೈಹಿಕ, ಬೌದ್ಧಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಬ್ರಹ್ಮಚರ್ಯ ಅವಶ್ಯಕ ಎಂದು ಅವರು ಪ್ರತಿಪಾದಿಸಿದರು. ಅದಷ್ಟು ಹೆಚ್ಚು ವಿದ್ಯಾರ್ಥಿಗಳು ಸೇರುವಂತಾಗಲು ಶುಲ್ಕವನ್ನು ತುಂಬ ಕಡಿಮೆಯಾಗಿಟ್ಟು ಕಾಲೇಜು ನಡೆಸಲು ಸಾಲದೆ ಬರುತ್ತಿದ್ದ ಹಣವನ್ನು ಆಗಾಗ ತಾವೇ ತುಂಬುತ್ತಿದ್ದರು. ವಿದ್ಯಾರ್ತಿಗಳಲ್ಲಿ ಸೇವಾಭಾವನೆ ಬೆಳೆಸಲು ಬೆಸೆಂಟರು ” ಸನ್ಸ್ ಅಂಡ್‌ಡಾಟರ್ಸ್ ಆಫ್‌ಇಂಡಿಯ” (ಭಾರತದ ಪುತ್ರ – ಪುತ್ರಿಯರು), ” ಸ್ಕೌಟ್ಸ್ ಅಂಡ್ ಗಾರ್ಡ್ಸ್ ಆಪ್‌ಆನರ್” ಮುಂತಾದ ಅಂಗ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅನೇಕ ವಿದೇಶಿಯರೂ ಕೂಡ ವೇತನವನ್ನೇ ಅಪೇಕ್ಷಿಸದೆ ಆಕೆಯೊಡನೆ ದುಡಿದುದು ಬೆಸೆಂಟರ ವ್ಯಕ್ತಿತ್ವದ ಆಕರ್ಷಣೆಗೆ ಸಾಕ್ಷಿ.

೧೯೧೦ರಲ್ಲಿ ಬೆಸೆಂಟರು ಕೇಂದ್ರೀಯ ವಿಶ್ವ ವಿದ್ಯಾ ನಿಲಯಕ್ಕಾಗಿ ಯೋಜನೆ ರೂಪಿಸಿದರು. ಅದಕ್ಕಾಗಿ ಪಂಡಿತ ಮದನಮೋಹನ ಮಾಲವೀಯ ಮತ್ತು ಇತರ ಗಣ್ಯರನ್ನು ಸೇರಿಸಿ ನ್ಯಾಸ ಮಂಡಳಿಯನ್ನು ರಚಿಸಿದರು. ಮೂರು ನಾಲ್ಕು ವರ್ಷಗಳ ನಂತರ ರಾಷ್ಟ್ರೀಯ ವಿಶ್ವವಿದ್ಯಾನಿಲಯ ಪ್ರಾರಂಭವಾದಾಗ ರೂಪಿಸಿದ್ದ ಕಾಲೇಜನ್ನು ತ್ಯಾಗ ಬುದ್ಧಿಯಿಂದ ಧಾರೆಯೆರೆದರು. ಹಾಗೆ ಜನ್ಮ ತಾಳಿದ ವಾರಾಣಸಿ ಹಿಂದೂ ವಿಶ್ವವಿದ್ಯಾನಿಲಯದ ಸೆನೆಟ್ ಮತ್ತು ಇತರ ಹಲವಾರು ಸಮಿತಿಗಳಲ್ಲಿ ಸದಸ್ಯೆಯಾಗಿ ಸೇವೆ ಸಲ್ಲಿಸಿದರು. ೧೯೨೧ರಲ್ಲಿ ಈ ವಿಶ್ವ ವಿದ್ಯಾನಿಲಯ ಯ್ಯಾನಿ ಬೆಸೆಂಟರಿಗೆ ” ಡಾಕ್ಟರ್ ಆಫ್‌ಲೆಟರ್ಸ್ ” ಗೌರವ ಪದವಿ ನೀಡಿ ಸನ್ಮಾನಿಸಿತು. ಈಗ ಅದು ಭಾರತದ ಅಗ್ರಗಣ್ಯ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾಗಿದೆ.

ಸ್ತ್ರೀಯರಿಗಾಗಿ

ಈ ಮಧ್ಯೆ ಬೆಸೆಂಟರು ಹಲವು ಹತ್ತು ದಿಸೆಗಳಲ್ಲಿ ಕಾರ್ಯೋನ್ಮುಖರಾಗಿದ್ದರು. “ವಿಮೆನ್ಸ್ ಇಂಡಿಯನ್ ಅಸೋಸಿಯೇಷನ್‌” ಎಂಬ ಭಾರತೀಯ ಮಹಿಳಾ ಸಂಘಕ್ಕೆ ಅವರು ಮುಖ್ಯ ಪ್ರೇರಕರಾಗಿದ್ದರು; ಅದರ ಮೊದಲ ಅಧ್ಯಕ್ಷರೂ ಆಗಿದ್ದರು. ಇದಕ್ಕೆ ಭಾರತದ ಆದ್ಯಂತ ಶಾಖೆಗಳಿದ್ದವು. ಶಿಕ್ಷಣ, ಉದ್ಯಮ, ರಾಜಕೀಯ ಮತ್ತಿತರ ಕ್ಷೇತ್ರಗಳಲ್ಲಿ ಮಹಿಳೆಯರ ಉನ್ನತಿಗಾಗಿ ಶ್ರಮಿಸುವುದು ಈ ಸಂಘದ ಉದ್ದೇಶ. ರಾಜಕೀಯ ಸುಧಾರಣೆಗಾಗಿ ೧೯೧೭ರಲ್ಲಿ ಬ್ರಿಟಿಷ್‌ಸರಕಾರ ಆಗಿನ ಭಾರತ ವ್ಯವಹಾರಗಳ ಕಾರ್ಯದರ್ಶಿ ಮಾಂಟೆಗ್ಯು ಅವರನ್ನು ಕಳುಹಿಸಿದಾಗ, ಯ್ಯಾನಿ ಬೆಸೆಂಟ್ ಮತ್ತಿತರರು ಅವರನ್ನು ಭೇಟಿ ಮಾಡಿ ಭಾರತೀಯ ಸ್ತ್ರೀಯರಿಗೆ ಮತ ನೀಡುವ ಹಕ್ಕು ಇರಬೇಕೆಂದು ಒತ್ತಾಯಪಡಿಸಿದರು. ನಮ್ಮ ಮಹಿಳೆಯರ ಸ್ಥಿತಿ ಉತ್ತಮಗೊಂಡು, ಅವರು ವಿಚಾರಶೀಲ ನಾಯಕತ್ವಕ್ಕೆ ಅರ್ಹರಾಗುವಂತೆ ಬೆಸೆಂಟರು ಮಾಡಿದ ಪ್ರಯತ್ನ ಆಕೆ ಭಾರತಕ್ಕೆ ಮಾಡಿದ ಸೇವೆಯಲ್ಲಿ ಒಂದು ಮುಖ್ಯ ಉದ್ದೇಶ.

ಭಾರತದ ಬಾಲಕ ಬಾಲಕಿಯರು ಸತ್ಪ್ರಜೆಗಳಾಗಿ ಬೆಳೆದು ನಮ್ಮ ಪುರಾತನ ಸಂಸ್ಕೃತಿಗೆ ತಕ್ಕಂತೆ ತಲೆ ಎತ್ತಿ ನಿಲ್ಲುವಂತಾಗಬೇಕು ಎಂದು ಅವರ ಹೆಬ್ಬಯಕೆಯಾಗಿತ್ತು. ಅದಕ್ಕಾಗಿಯೇ ಅವರು ನಮ್ಮ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸಲು ಮುಂದಾಗಿದ್ದುದು. ಎಳೆಯರಲ್ಲಿ ಶಿಸ್ತು ಮೂಡಿಸುವ ಉದ್ದೇಶವುಳ್ಳ ಸ್ಕೌಟ್ ಚಳವಳಿಯನ್ನು ಭಾರತದಲ್ಲಿ ಹುಟ್ಟಿ ಬೆಳೆಸುವುದಕ್ಕೂ ಅವರೇ ಕಾರಣರು. ಬಾಯ್ ಸ್ಕೌಟ್ ಸಂಸ್ಥೆಯ ಸ್ಥಾಪಕ ಬೇಡನ್ ಪೊವೆಲ್ ಎಂಬಾತ. ಆತನು ಭಾರತದಲ್ಲಿ ಸ್ಕೌಟ್ ಚಳವಳಿಯಲ್ಲಿ ಸಾಕಷ್ಟು ಬ್ರಿಟಿಷರಿಲ್ಲ ಎಂಬ ಕಾರಣದಿಂದ ಭಾರತದಲ್ಲಿ ಸ್ಕೌಟ್ ತಂಡಕ್ಕೆ ಮಾನ್ಯತೆ ಕೊಡಲಿಲ್ಲ. ಇದನ್ನು ಕೇಳಿದ ಬೆಸೆಂಟರು ಎಂದಿನಂತೆ ನ್ಯಾಯದ ಕಡೆ ಕತ್ತಿ ಎತ್ತಿ ನಿಂತರು. ತಾವೇ ಉತ್ತಮ ಜನಾಂಗವೆಂಬ ಗರ್ವದ ಜನ, ಭಾರತೀಯರಿಗೆ ಮಾಡಿದ ಅಪಮಾನ ಎಂದು ಬಗೆದು ಬೆಸೆಂಟರು ೧೯೧೭ರಲ್ಲಿ ಭಾರತೀಯ “ಬಾಲಚಮೂ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯಲು “ಸನಾತನ ಧರ್ಮಮಾಲೆ” ಎಂದು ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಬಾಲ್ಯವಿವಾಹವನ್ನು ವಿರೋಧಿಸಿದರು. ಬಾಲ ವಿಧವೆಯವರ ಪುನರ್ವಿವಾಹಕ್ಕಾಗಿ ಒತ್ತಾಯ ತಂದರು. ಸಮಾಜ ಸುಧಾರಣೆ, ಜಾತಿ, ಪದ್ಧತಿ, ವರ್ಣಭೇದ, ಶಿಕ್ಷಣ, ರಾಜಕೀಯ ಸ್ವಾತಂತ್ರ್ಯ ಮುಂತಾದ ವಿಷಯಗಳನ್ನು ಕುರಿತು, ದೇಶವೆಲ್ಲ ಸುತ್ತಿ ಎಣಿಕೆ ಮೀರಿದಷ್ಟು ಭಾಷಣಗಳನ್ನು ಮಾಡಿದರು. ಲೇಖನಗಳನ್ನು ಬರೆದರು.

ಭಾರತದ ಸ್ವಾತಂತ್ರ್ಯಯಕ್ಕಾಗಿ

ಭಾರತದ ಉದ್ಧಾರವಾಗಿ ಅದು ತನ್ನ ಯೋಗ್ಯ ಸ್ಥಾನ ಮತ್ತು ನೈಜ ಧ್ವನಿಯಿಂದ ವಿಶ್ವದ ಇತರ ದೇಶಗಳೊಡನೆ ಮಾತನಾಡಲು ಈ ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಅತ್ಯಗತ್ಯ. ಅದು ಅನಿವಾರ್ಯ ಎಂದು ಗಾಢವಾಗಿ ನಂಬಿದ್ದರು ಯ್ಯಾನಿ ಬೆಸೆಂಟ್. ಈ ಸ್ವಾತಂತ್ರ್ಯಕ್ಕಾಗಿ ದುಡಿಯಲು ಹಿಮಾಲಯದ ತಪ್ಪಲಿನಲ್ಲಿ ತಪಸ್ಸಿನಲ್ಲಿರುವ ಮಹರ್ಷಿ ಗುರುಗಳು ತಮಗೆ ಅಜ್ಞಾಪಿಸಿದ್ದಾರೆ ಎಂದು ಅವರು ಬಹಿರಂಗವಾಗಿ ಹೇಳುತ್ತಿದ್ದರು. ೧೯೧೩ರಲ್ಲಿ ಬೆಸೆಂಟರು ಮದರಾಸಿನಲ್ಲಿ ಭಾರಿ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿ ಭಾರತಕ್ಕೆ ಬೇಗ ಸ್ವರಾಜ್ಯ ದೊರಕಲು ಕಾಮನ್ಸ್‌ಸಭೆಯಲ್ಲಿ ಪ್ರತ್ಯೇಕ ಸ್ಥಾಯಿ ಸಮಿತಿ ಹೊಂದಿರಬೇಕು ಎಂದು ವಾದಿಸಿದರು. ಸ್ವರಾಜ್ಯಕ್ಕಾಗಿ ದೇಶದಲ್ಲಿ ನಿರಂತರವಾದ ಚಳವಳಿ ನಡೆಯಬೇಕು ಎಂದರು. ಈ ಉದ್ದೇಶಗಳಿಗೆ ಬೆಂಬಲ ಕೊಡಲು ” ಕಾಮನ್‌ವೀಲ್” ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಮತ್ತೆ ” ಮದರಾಸ್‌ಸ್ಟಾಂಡರ್ಡ್‌” ಎಂಬ ಪತ್ರಿಕೆಯನ್ನು ಕೊಂಡು “ನ್ಯೂ ಇಂಡಿಯ” ಎಂಬ ಹೆಸರಿನಿಂದ ನಡೆಸಿದರು. ಬಂಗಾಳದಲ್ಲಿ “ಫಿನಿಕ್ಸ್‌”ಎಂಬ ಪತ್ರಿಕೆ ನಡೆಯಲು ಪ್ರೋತ್ಸಾಹವಿತ್ತರು. ಎಡಬಿಡದೆ ಲೇಖನಗಳನ್ನು ಬರೆದರು.

೧೯೧೫ರ‍ಲ್ಲಿ ಯ್ಯಾನಿ ಬೆಸೆಂಟರು ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರತಿನಿಧಿಯಾದರು. ಆ ವರ್ಷ ಅಧಿವೇಶನದ ಅಧ್ಯಕ್ಷರಾಗಿದ್ದ ಲಾರ್ಡ್‌ಸಿನ್ಹ ಅವರು ಪೂರ್ಣ ಸ್ವರಾಜ್ಯ ಬೇಕೆಂದವರನ್ನು ಜರಿದಾರ ಮುಂಬಯಿಯಲ್ಲಿ ನಾಯಕನ ಸಭೆಯೊಂದನ್ನು ಕರೆದು ಪೂರ್ಣ ಸ್ವರಾಜ್ಯಕ್ಕಾಗಿ ಹೋರಾಡಲು ” ಹೋಂರೂಲ್‌ಲೀಗ್” ಸಂಸ್ಥೆಯನ್ನು ಸ್ಥಾಪಿಸಲು ಮುಂದಾದರು. ಈ ಮಧ್ಯೆ ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂಸಾಮಾರ್ಗ ತಲೆದೋರಿ ಪುಣೆಯಲ್ಲೂ ಬಂಗಾಳದಲ್ಲೂ ಬ್ರಿಟಿಷ್ ಸೇನಾಧಿಕಾರಿಗಳ ಹಾಗೂ ಇತರರ ಕೊಲೆ ಪ್ರಯತ್ನಗಳಾದಾಗ, ವಿದ್ಯಾರ್ಥಿಗಳಲ್ಲಿ ಅಹಿಂಸೆ ಮತ್ತು ಶಿಸ್ತನ್ನು ಮೂಡಿಸುವ ದಿಸೆಯಲ್ಲಿ “ಯಂಗ್ ಮೆನ್ಸ್ ಇಂಡಿಯನ್‌ಅಸೋಸಿಯೇಷನ್” ( ಭಾರತೀಯ ಯುವಕರ ಸಂಘ) ಎಂಬುದನ್ನು ಸ್ಥಾಪಿಸಿದರು. ಹಿಂದೂ – ಮುಸ್ಲಿಂ ಐಕ್ಯತೆ ಮೂಡಿಸಲು ಬಹುವಾಗಿ ಶ್ರಮಿಸಿದರು. ಇಡೀ ಭಾರತ ಒಕ್ಕೊರಲಿನಿಂದ ಸ್ವರಾಜ್ಯಕ್ಕಾಗಿ ಒತ್ತಾಯಪಡಿಸಬೇಕು ಎಂಬುದು ಬೆಸೆಂಟರ ಉದ್ದೇಶವಾಗಿತ್ತು.

ಭಾರತದ ಸ್ವಾತಂತ್ರ್ಯಕ್ಕಾಗಿ ಯ್ಯಾನಿ ಬೆಸೆಂಟರು ನಡೆಸುತ್ತಿದ್ದ ಹೋರಾಟದಿಂದ ಆಳುತ್ತಿದ್ದ ಬ್ರಿಟಿಷರ ಕಣ್ಣು ಕೆಂಪಾಯಿತು. ಆಕೆಯೇ ಬ್ರಿಟಿಷ್‌ಮಹಿಳೆ, ಅವರು ಬ್ರಿಟಿಷ್‌ಸರಕಾರದ ವಿರುದ್ಧ ನಿಂತರೆಂಬ ಕಾರಣದಿಂದ ಸರ್ಕಾರಕ್ಕೆ ತುಂಬ ಕೋಪ. ಆಗಿನ ಕಾಲದಲ್ಲಿ ಸರಕಾರ ಕೇಳಿದಷ್ಟು ಹಣವನ್ನು ಪತ್ರಿಕೆಯವರು ಠೇವಣಿಯಾಗಿ ಇಡಬೇಕಾಗಿತ್ತು. ಸರಕಾರ ಮನಸ್ಸು ಬಂದಾಗ ಆ ಹಣವನ್ನು ತೆಗೆದುಕೊಂಡು ಬಿಡುತ್ತಿತ್ತು, ಮತ್ತು ಪತ್ರಿಕೆ ಅಚ್ಚು ಮಾಡಬೇಕಾದರೆ ಮತ್ತು ಹಣ ಇಡಬೇಕು. ” ನ್ಯೂ ಇಂಡಿಯ” ಪತ್ರಿಕೆಯಲ್ಲಿ ಸರ್ಕಾರವನ್ನು ಟೀಕಿಸಿ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಕು ಎಂದು ವಾದಿಸಿ ತೀಕ್ಷಣವಾದ ಲೇಖನಗಳು ಬಂದವು. ಸರಕಾರ ಪತ್ರಿಕೆಗೆ ಕೊಟ್ಟಿದ್ದ ಹಣವನ್ನು ತೆಗೆದುಕೊಂಡಿತು. ಮತ್ತೆ ಠೇವಣಿ ಇಟ್ಟು ಬೆಸೆಂಟರು ಉಗ್ರವಾದ ಲೇಖನ ಬರೆದರು. ಮತ್ತೆ ಸರಕಾರ ಹಣವನ್ನು ಕಿತ್ತುಕೊಂಡಿತು. ಹೀಗೆ ಆದದ್ದು ಎಷ್ಟು ಬಾರಿಯೋ !

೧೯೧೬ರಲ್ಲಿ ಕಡಲೂರಿನಲ್ಲಿ ರಾಜಕೀಯ ಸಮ್ಮೇಳನ ನಡೆಯಿತು. ಬೆಸೆಂಟರು  ಸರಕಾರವನ್ನು ಟೀಕಿಸಿ, ಭಾರತೀಯರಿಗೆ ಸ್ವಾತಂತ್ರ್ಯ ಕೊಡಬೇಕು ಎಂದು ಸಾರಿದರು. ಮದರಾಸ್ ಪ್ರಾಂತದ ಗವರ್ನರನು ಅವರನ್ನು ಕರೆಸಿ, ಭಾರತವನ್ನು ಬಿಟ್ಟು ಹೋಗಬೇಕು ಎಂದು ಅಪ್ಪಣೆ ಮಾಡಿದ. ” ಹೋಗುವುದಿಲ್ಲ” ಎಂದರು ಬೆಸೆಂಟರು.

ಸರಕಾರ ಅವರನ್ನು ಜೈಲಿಗೆ ಹಾಕಿತು. ಇದನ್ನು ವಿರೋಧಿಸಿ ಅನೇಕ ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳಾದವು. ಮೆರವಣಿಗೆಗಳಾದವು. ಹೀಗೆ ಬ್ರಿಟಿಷ್‌ಸರಕಾರ ಭಾರತಕ್ಕಾಗಿ ಹೋರಾಡಿದ ಬ್ರಿಟಿಷ್‌ಮಹಿಳೆಯನ್ನು ಜೈಲಿಗೆ ನೂಕಿತು. ಕಡೆಗೆ ಅದು ಆಕೆಯನ್ನು ಬಿಡುಗಡೆ ಮಾಡಬೇಕಾಯಿತು.

ಹೋಗುವುದಿಲ್ಲ’ ಎಂದು ಬೆಸೆಂಟರು.

ಕಾಂಗ್ರೆಸ್‌ಅಧ್ಯಕ್ಷಣಿ

 

ಆ ವರ್ಷ (೧೯೧೭) ಕಲ್ಕತ್ತದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಯ್ಯಾನಿ ಬೆಸೆಂಟರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಅಧಿವೇಶನದಲ್ಲಿ ಯ್ಯಾನಿ ಬೆಸೆಂಟರ ಅಧ್ಯಕ್ಷ ಭಾಷಣ ಅತ್ಯಂತ ಸ್ಫೂರ್ತಿದಾಯಕವಾಗಿತ್ತು. “ನನಗೆ ಅವಮಾನವಾಗಿದ್ದಾಗ, ನೀವು ಗೌರವ ಕೊಟ್ಟಿರಿ, ನನ್ನನ್ನು ಆಡಳಿತಶಾಹಿ ಮೆಟ್ಟಿನಿಂತಾಗ, ನೀವು ನನಗೆ ನಾಯಕ ಪಟ್ಟ ಕಟ್ಟಿದಿರಿ. ನಾನು ಸೇವಕಿಯಾಗಿರಲು ತೃಪ್ತಿಯಾಗಿರುವಾಗ ನಿಮ್ಮ ಪ್ರತಿನಿಧಿ ಎಂದು ಉನ್ನತ ಸ್ಥಾನದಲ್ಲಿ ಕೂಡಿಸಿದಿರಿ, ಈ ಉಪಕಾರ ತೀರಿಸಲು ನನ್ನಲ್ಲಿ ಮಾತುಗಳೇ ಇಲ್ಲ. ಈ ಋಣವನ್ನು ತಾಯಿನಾಡಿನ ಸೇವೆಯಿಂದ ತೀರಿಸುತ್ತೇನೆ. ಆಕೆಯ ಸೇವೆಗೆ ನನ್ನ ಬಾಳನ್ನು ಮತ್ತೆ ಮುಡಿಪಾಗಿಡುವೆ. ನನ್ನ ಸರ್ವಸ್ವವೂ ಈ ತಾಯಿಯ ಪದತಲದಲ್ಲಿ ಸಮರ್ಪಿತ” ಎಂದರು.

ದೇಶದ ಎಲ್ಲೆಡೆ ಸಂಚರಿಸಿ ಬೆಸೆಂಟರು ಜನರನ್ನು ಹುರಿದುಂಬಿಸಿದರು. ಈ ವೇಳೆಗೆ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಗಾಂಧೀಜಿಯವರು ಹಿಂದಿರುಗಿದ್ದರು. ಅವರ ಅಸಹಕಾರ ವಿಧಾರ ಬೆಸೆಂಟರಿಗೆ ಒಪ್ಪಿಗೆಯಾಗಲಿಲ್ಲ. ಅದರೂ ಅವರು ಗಾಂಧೀಜಿಯವರ ಉನ್ನತ ಧ್ಯೇಯ, ತ್ಯಾಗ ಜೀವನವನ್ನು ಮುಕ್ತಕಂಠದಿಂದ ಹೊಗಳಿದರು. ಭಾರತದ ಸ್ವಾತಂತ್ರ್ಯ ಚಳವಳಿ ಪರಿಶೀಲಿಸಲು ೧೯೧೯ರಲ್ಲಿ ಇಂಗ್ಲೆಂಡಿನ ಪಾರ್ಲಿಮೆಂಟ್‌ರಚಿಸಿದ ಸೆಲ್ಬರ್ನ್‌ಸಮಿತಿಯ ಮುಂದೆ ಹಾಜರಾಗಿ ಸ್ವರಾಜ್ಯಕ್ಕಾಗಿ ಒತ್ತಾಯ ಪಡಿಸಿದರು. ಮದರಾಸಿನಲ್ಲಿ ತಮ್ಮ ಸ್ವಂತ ಖರ್ಚಿನಿಂದ ನಿರ್ಮಿಸಿದ ಗೋಖಲೆ ಭವನದಲ್ಲಿ, ರಾಜಕೀಯ ಕಾರ್ಯಕರ್ತರಿಗೆ ಪಾರ್ಲಿಮೆಂಟರಿ ಪದ್ಧತಿಗಳ ಪರಿಚಯ ಮಾಡಿಕೊಡಲು ಮಾದರಿ ಪಾರ್ಲಿಮೆಂಟ್‌ಸೇರಿಸಿದರು. ಭಾರತಕ್ಕೆ ಹೊಂದುವಂತೆ ” ಪಂಚಾಯತ್ ಕಾಯಿದೆ” ಮುಂತಾದುವನ್ನು ಅದರಲ್ಲಿ ಚರ್ಚಿಸಿ ಸಿದ್ಧ ಪಡಿಸಲಾಯಿತು.

೧೯೭೪ ರಿಂದ ೧೯೨೯ರವರೆಗೆ ಅವರು ಅದೆಷ್ಟೋ ಸಮ್ಮೇಳನಗಳನ್ನು ಸೇರಿಸಿದರು. ಎಷ್ಟೋ ಪುಸ್ತಕಗಳನ್ನು ಬರೆದರು, ಮತ್ತೆಷ್ಟೋ ವಾರ್ತಾ ಪತ್ರಗಳನ್ನು ಪ್ರಕಟಿಸಿದರು.

ಇಂಗ್ಲೆಂಡಿನಲ್ಲಿ – ಭಾರತಕ್ಕಾಗಿ

ಹಲವು ಬಾರಿ ಅವರು ಇಂಗ್ಲೆಂಡಿನಲ್ಲೂ ಪ್ರವಾಸ ಕೈಗೊಂಡು ಅನೇಕ ಸ್ಥಳಗಳಲ್ಲಿ ಭಾಷಣಗಳನ್ನು ಮಾಡಿ, ಲೇಖನಗಳನ್ನು ಬರೆದು, ಭಾರತ ಸ್ವತಂತ್ರವಾಗ ಬೇಕೆಂಬುದಕ್ಕೆ ಅಲ್ಲಿನ ಜನಾಭಿಪ್ರಾಯ ರೂಪಿಸಲು ಯತ್ನಿಸಿದರು. ೧೯೧೯ರಲ್ಲಿ ಹಾಗೆ ತೆರಳಿದಾಗ ಪೂರ್ಣ ಸ್ವರಾಜ್ಯಕ್ಕಾಗಿ ಹೋರಾಡಲು ಅವರು ಸ್ಥಾಪಿಸಿದ್ದ “ಹೋಂರೂಲ್ ಲೀಗ್” ಶಾಖೆಯನ್ನು ಲಂಡನಿನಲ್ಲೂ ಆರಂಭಿಸಿದರು. ತನ್ನ ಪ್ರಯತ್ನಕ್ಕೆ ಆಗ ಇಂಗ್ಲೆಂಡಿನಲ್ಲಿ ಪ್ರಭಾವಶಾಲಿಗಳಾಗಿದ್ದ  ಜಾರ್ಜ್‌ಲಾನ್ಸ್‌ಬರಿ, ಬರ್ನಾಡ್‌ಷಾ. ಫಿಲಿಪ್‌ಸ್ನೋಡನ್‌ಮುಂತಾದವರ ಬೆಂಬಲ ಗಳಿಸಿಕೊಂಡರು. ಪಾರ್ಲಿಮೆಂಟಿನ ೬೦ ಸದಸ್ಯರ ಸಭೆ ಸೇರಿಸಿ ಭಾರತಕ್ಕೆ ಸ್ವರಾಜ್ಯ ಬರಬೇಕೆಂದು ಪ್ರತಿಪಾದಿಸಿದರು. ಇನ್ನೂರಕ್ಕೂ ಹೆಚ್ಚು ಕಾರ್ಮಿಕ ಸಂಘಗಳ ಮತ್ತು ಅನೇಕ ಮಹಿಳಾ ಸಂಸ್ಥೆಗಳ ಬೆಂಬಲ ಪಡೆದುಕೊಂಡರು. ” ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ – ವಿಶ್ವಶಾಂತಿಗೆ ಅಪಾಯ” ಎಂಬ ವಿಷಯವಾಗಿ ೧೯೨೯ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ಭಾರಿ ಪ್ರದರ್ಶನ ನಡೆದಾಗಲೂ ಬೆಸೆಂಟರು ಭಾರತದ ಸ್ವಾತಂತ್ರ್ಯಕ್ಕಾಗಿ ಒತ್ತಾಯಪಡಿಸಿದರು.

ಯ್ಯಾನಿ ಬೆಸೆಂಟರಿಗೆ ಎಂಬತ್ತು ವರ್ಷ ದಾಟಿತ್ತು, ಆದರೆ ಭಾರತಕ್ಕಾಗಿ ಅವರ ಹೋರಾಟ ಒಂದೇ ಸಮನೆ ಸಾಗಿತ್ತು. ಕಡೆಯ ವರ್ಷಗಳಲ್ಲಿ ಆರೋಗ್ಯ ಹದಗೆಟ್ಟಿತು. ೧೯೩೩ರಲ್ಲಿ ೮೬ನೇ ವರ್ಷದ ಹಣ್ಣು ವಯಸ್ಸಿನಲ್ಲಿ ಯ್ಯಾನಿ ಬೆಸೆಂಟರು ತಾವು ಸ್ವೀಕರಿಸಿದ್ದ ತಾಯಿನಾಡಿಗೆ ತನು ಒಪ್ಪಿಸಿ ಕೊನೆಯುಸಿರೆಳೆದರು.

ಪರಿಪಕ್ವ ಚೇತನ

ಯ್ಯಾನಿ ಬೆಸೆಂಟರು ಜೀವನದುದ್ದಕ್ಕೂ ದುಡಿದ ರೀತಿಯನ್ನು ನೋಡಿದರೆ ಅವರು ಬಿಡುವೇ ಇಲ್ಲದೆ ಬೇರೆ ಯೋಚನೆಯೇ ಇಲ್ಲದೆ, ಇತರರಿಗಾಗಿ ದುಡಿಮೆ ನಡೆಸಿದ ಯಂತ್ರವೋ ಎನ್ನುವಷ್ಟು ಆಶ್ಚರ್ಯವಾಗುತ್ತದೆ. “ಕರ್ಮಣ್ಯೇವಾಧಿಕಾರಸ್ತೆ ಮಾಫಲೇಷು ಕದಾಚನ” (ಕೆಲಸ ಎನಾಗುತ್ತದೆ ಎಂದು ಯೋಚಿಸಬೇಡ) ಎಂಬ ಗೀತೋಕ್ತಿಗೆ ಬೆಸೆಂಟರು ಉಜ್ವಲ ನಿದರ್ಶನ. ಆಕೆ ತನಗಾಗಿ ಯಾವುದನ್ನೂ ಬೇಕೆನ್ನಲಿಲ್ಲ. ಭಗವದ್ಗೀತೆಯ ಉಪದೇಶದಂತೆ ಅವರು ಮನಸ್ಸಿನ ಸಮಭಾವವನ್ನು ಸಾಧಿಸಿಕೊಂಡಿದ್ದರು. ಕಡೆಯ ವರ್ಷಗಳಲ್ಲಿ ಆಗ ನಡೆದ ದುಂಡು ಮೇಜಿನ ಪರಿಷತ್ತುಗಳಿಂದ ನಿರಾಶೆಗೊಂಡು ಅನಾರೋಗ್ಯ ತೀವ್ರವಾಗಿ ಕಾಣಿಸಿಕೊಳ್ಳುತ್ತಿದ್ದರೂ, ಎಷ್ಟೋ ವರ್ಷಗಳ ಕಾಲ ನಿಂದೆ, ನೋವು, ಅಪಮಾನಗಳನ್ನು ಅನುಭವಿಸಿದ್ದರೂ ಕಡೆತನಕ ಬೆಸೆಂಟರು ಸಹನೆ, ಕ್ಷಮೆ ಮತ್ತು ಪ್ರಸನ್ನತೆನ್ನು ಉಳಿಸಿಕೊಂಡಿದ್ದರು. ಒಮ್ಮೆಯಾದರೂ ಮುಖ ಗಡುಸಾಗಲಿಲ್ಲ. ಒಂದಾದರೂ ಪ್ರತಿ ಮಾತನ್ನು ಆಡಲಿಲ್ಲ. ತಮ್ಮ ಅಭಿಪ್ರಾಯವನ್ನು ಒಪ್ಪದೆ ದೂರ ಹೋದವರೊಡನೆಯೂ ಬೆಸೆಂಟರು ತುಂಬ ಸ್ನೇಹ ಸೌಹಾರ್ದಗಳೊಡನೆ ವರ್ತಿಸುತ್ತಿದ್ದರು. ಅವರನ್ನು ಮೊದಲ ದಿನಗಳಲ್ಲಿ ಬಾಲ ಗಂಗಾಧರ ತಿಲಕರು ಕಟುವಾಗಿ ಟೀಕಿಸಿದ್ದರು. ತಿಲಕರ ಜತೆಯವರೊಬ್ಬರು ಕೃಷ್ಣನಿಗೆ ಪೂತನಿ ವಿಷ ಉಣಿಸಿದಂತೆ ಭಾರತಕ್ಕೆ ವಿದೇಶಿಯಳ ಕೆಲಸ ಎಂದು ಬೆಸೆಂಟರನ್ನು ಜರೆದರು. ಆದರೂ ಅನಂತರದ ದಿನಗಳಲ್ಲಿ ಬೆಸೆಂಟರು ಭಾರತ ರಾಜಕೀಯ ಹೋರಾಟದಲ್ಲಿ ಅವರಿಬ್ಬರೊಡನೆಯೂ ಸೇರಿ ಸಹಕರಿಸಿ ದುಡಿದರು.

ಬೆಸೆಂಟರಿಗೆ ಎಂದಿಗೂ ಕೋಪ ಬರುತ್ತಿರಲಿಲ್ಲ. ಅವರ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದವರು ಪ್ರಾಮಾಣಿಕವಾಗಿಲ್ಲವೆಂದು ಬೇರೆ ಸ್ನೇಹಿತರು ಅವರನ್ನು ಕೆಲವು ಸಲ ಎಚ್ಚರಿಸಿದ್ದರೂ ಎಷ್ಟೋ ಸಮಯ ಆಕೆ ಸುಮ್ಮನೆಯೇ ಇದ್ದುಬಿಟ್ಟರು. ಒಂದಷ್ಟು ಹಣ ಪತ್ತೆಯಿಲ್ಲವೆಂದು ಗೊತ್ತಾದಾಗಲೂ ಕೂಡ ಬೆಸೆಂಟರು ಅ ಮೊಬಲಗನ್ನು ಕಳೆದ ಹಣವೆಂದು ಕಾಣಿಸಿ ಸುಮ್ಮನಾದರು. ಮೋಸ ಮಾಡಿದವರ ವಿರುದ್ಧ ಚಕಾರ ಎತ್ತಲಿಲ್ಲ.

ಬೆಸೆಂಟರ ದೃಷ್ಟಿಯಲ್ಲಿ ಹಣವೆಂದರೆ ಇತರರಿಗೆ ಒಳ್ಳೆಯದನ್ನು ಮಾಡಲು ಒರುವ ಸಾಧನ ಮಾತ್ರ. ಬೆಸೆಂಟರ ಅಭಿಮಾನಿಗಳು, ಅನುಯಾಯಿಗಳು, ಬೇರೆ ದೇಶಗಳಿಂದ ಆಗಾಗ್ಗೆ ಅವರಿಗೆ ಹಣ ಕಳಿಸುತ್ತಿದ್ದರು. ಬೇರೆ ಬೇರೆ ಬ್ಯಾಂಕುಗಳಲ್ಲಿ ತಮ್ಮ ಹೆಸರಿಗೆ ಹೀಗೆ ಬಂದಿದ್ದ ಹಣವನ್ನೆಲ್ಲ ಬೆಸೆಂಟರು ಪ್ರತಿವರ್ಷದ ಕಡೆಯ ದಿನಗಳಲ್ಲಿ ಅನೇಕ ಸೇವಾ ಸಂಸ್ಥೆಗಳು, ಶಾಲಾ ಕಾಲೇಜುಗಳಿಗೆ ಕೊಟ್ಟು ಬಿಡುತ್ತಿದ್ದರು. ಅನುಕ್ರಮವಾಗಿ ಎರಡು ಮೂರು ವರ್ಷಗಳಲ್ಲಿ ಮದರಾಸಿನ “ಯಂಗ್ ಮೆನ್ಸ್ ಇಂಡಿಯನ್‌ಅಸೋಸಿಯೇಷನ್‌”ಗಾಗಿ ಅವರು ಹತ್ತು ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಕೊಟ್ಟರು. ವಿದೇಶಗಳಲ್ಲಿ ಉಚ್ಚ ವಿದ್ಯಾಭ್ಯಾಸ ನಡೆಸಲು ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು. “ಹೋಂರೂಲ್ ಲೀಗ್” ಕಾರ್ಯಕಲಾಪಗಳಿಗಾಗಿ, “ಕಾಮನ್‌ವೀಲ್‌” ಮತ್ತು “ನ್ಯೂ ಇಂಡಿಯ” ಪತ್ರಿಕೆಗಳ ನಿರ್ವಹಣೆಗಾಗಿ, ಇನ್ನೆಷ್ಟೋ ಸದುದ್ದೇಶಗಳಿಗಾಗಿ ಬೆಸೆಂಟರು ಧಾರಾಳವಾಗಿ ನೆರವಾಗುತ್ತಿದ್ದರು. “ನೀವು ಹಣವನ್ನು ಆಸ್ತಿ ಎಂದು ಬಗೆಯದೆ ಸೇವೆಯ ಸಾಧನ ಎಂದು ಭಾವಿಸಿದರೆ ನಿಮಗೆ ಕೊರತೆಯೇ ಇರುವುದಿಲ್ಲ” ಎಂದು ಬೆಸೆಂಟರು ಹೇಳುತ್ತಿದ್ದರು.

ತಮ್ಮ ಅನುಯಾಯಿಗಳಾದ ಜಿನರಾಜದಾಸ, ಭಗವಾನ್‌ದಾಸ್‌, ತ್ರಿಲೋಕಿಕರ್, ಬಿ.ಪಿ.ವಾಡಿಯ, ಜಾರ್ಜ್‌ಅರುಂಡೇಲ್ ಮುಂತಾದವರ ಜೊತೆಯಲ್ಲಿ ಯಾವುದಾದರೂ ಕೆಲಸಕ್ಕೆ ಓಡಾಡಬೇಕಾದಗ ಅವರ ಊಟೋಪಚಾರಗಳ ವಿಷಯದಲ್ಲಿ ಅವರೆಲ್ಲ ತಮ್ಮ ಮಕ್ಕಳೋ ಎಂಬಂತೆ ನೋಡಿಕೊಳ್ಳುತ್ತಿದ್ದರು. ಅಷ್ಟು ಕೆಲಸಗಳ ಮಧ್ಯೆಯೊ ಸ್ವತಃ ಕಾಫಿ, ತಿಂಡಿ ತಯಾರಿಸಿ ಕೊಡುತ್ತಿದ್ದುದೂ ಉಂಟು.

ಅನ್ಯರ ಸುಖವೆಂಬುದರಲ್ಲಿ ಯಾವುದನ್ನೂ ಸಣ್ಣದೆಂದು ಯ್ಯಾನಿ ಬೆಸೆಂಟರು ಕಡೆಗಣಿಸುತ್ತಿರಲಿಲ್ಲ. ವಾರಾಣಸಿಯ ಹಿಂದೂ ಕಾಲೇಜಿನ ವಾರ್ಷಿಕ ಉತ್ಸವದಲ್ಲಿ ಭಾಷಣ ಮಾಡಲು ಹೋಗಿದ್ದಾಗ, ಅಲ್ಲಿ ವಿದ್ಯಾರ್ಥಿಯಾಗಿದ್ದ ಶ್ರೀಪ್ರಕಾಶರು (ಮುಂದೆ ರಾಜಕೀಯ ಮುಖಂಡರಾಗಿ ಕೆಲವು ರಾಜ್ಯಗಳ ರಾಜ್ಯಪಾಲರಾದರು) ಇಂಗ್ಲಿಷ್‌ಕಾವ್ಯವಾಚನ ಸ್ಪರ್ಧೆಯಲ್ಲಿ ವಿಜಯಿಯಾದರು. ತಮಗೆ ಬೇಕಾಗಿದ್ದ ಪುಸ್ತಕವನ್ನು ಬಹುಮಾನವಾಗಿ ಪಡೆಯಲಾಗಲಿಲ್ಲ. ಅದು ಕಾಶಿ ಪುಸ್ತಕದಂಗಡಿಗಳಲ್ಲಿ ಸಿಕ್ಕಲಿಲ್ಲ. ಕೆಲವು ತಿಂಗಳುಗಳ ನಂತರ ಶ್ರೀಪ್ರಕಾಶರಿಗೆ ಒಂದು ಭಾಂಗಿ ಬಂದಿತು. ಒಡೆದು ನೋಡಿದಾಗ, ತಾವು ಹಿಂದೆ ಬಹುಮಾನಕ್ಕಾಗಿ ಆರಿಸಿಕೊಂಡಿದ್ದ ಪುಸ್ತಕ ಅದರಲ್ಲಿದ್ದುದನ್ನು ನೋಡಿ ಆಶ್ಚರ್ಯವಾಯಿತು. ಯ್ಯಾನಿ ಬೆಸೆಂಟರು ಆ ಪುಸ್ತಕದ ಪ್ರಕಾಶಕರಿಗೆ ಬರೆದು, ಇಂಗ್ಲೆಂಡಿನಿಂದ ಅದನ್ನು ತರಿಸಿ, ಒಟ್ಟಿಗೆ ಪೊಟ್ಟಣ ಕಟ್ಟಿ,

ಅಂಚೆ ಚೀಟಿಗಳನ್ನು ಅಂಟಿಸಿ, ಅಂದವಾಗಿ ವಿಳಾಸ ಬರೆದು, ಕಳುಹಿಸಿಕೊಟ್ಟಿದ್ದರು.

ಯಾವುದು ಎಲ್ಲ ಕಾಲಕ್ಕೂ ಎಲ್ಲ ಜೀವಿಗಳಿಗೂ ಒಳ್ಳೆಯದೋ ಯಾವುದು ಧರ್ಮವಾದ್ದರಿಂದ ಶಾಶ್ವತವೋ, ಅದೇ ಸತ್ಯವೆಂದು ನಂಬಿದವರು ಯ್ಯಾನಿ ಬೆಸೆಂಟ್‌. ಅದಕ್ಕಾಗಿ ಎಳೆಯ ಬಾಲಕಿಯಾಗಿದ್ದಾಗಿನಿಂದ ಮನಃಪೂರ್ವಕವಾಗಿ ಹುಡುಕಿ, ಗೋಚರವಾದನಂತರ ಕೊನೆಯುಸಿರಿತನಕ ಅದಕ್ಕಾಗಿಯೇ ಅಹರ್ನಿಶಿ ದುಡಿ ಅಮರಜೀವಿ. ಮೇಲಾಗಿ ಭಾರತದ ಜನರಿಗೆ ಭಾರತೀಯತೆಯನ್ನು ಸ್ಮರಣಗೆ ತಂದವರು. ದೂರದಲ್ಲಿ ಹುಟ್ಟಿ, ಭಾರತವನ್ನೇ ತಾಯ್ನಾಡೆಂದು ಬಗೆದು, ಅದರ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಹೆಣಗಿದರು. ಗಾಂಧೀಜಿಯ ಬದುಕಿನಂತೆಯೇ ಯ್ಯಾನಿ ಬೆಸೆಂಟರದು ರಾಜಕೀಯ ಚಟುವಟಿಕೆ, ಸಮಾಜ ಸುಧಾರಣೆ, ಶಿಕ್ಷಣದ ಪರಿಷ್ಕರಣ, ದಲಿತರ ಉದ್ಧಾರ, ಅನ್ಯಾಯಕ್ಕೆ ಪ್ರತಿಭಟನೆ, ಆಧ್ಯಾತ್ಮಿಕ ಉನ್ನತಿ, ಧಾರ್ಮಿಕ ಶ್ರದ್ಧೆ – ಇವೆಲ್ಲ ಬೆರೆದ ವಿಶಾಲ ದೃಷ್ಟಿಯ ಪರಿಪೂರ್ಣ ಜೀವನ.