ಸಂಗೀತ ಹಾಗೂ ಕಲೆಯ ಹಿನ್ನೆಲೆಯಿರುವ ಕುಟುಂಬದಲ್ಲಿ ಜನಿಸಿದ ಶ್ರೀಮತಿ ರಂಗನಾಯಕಿ ರಾಜನ್ ವೀಣೆ, ಸಂಗೀತ, ಮೃದಂಗ ಹೀಗೆ ಹಲವು ಪ್ರಕಾರಗಳಲ್ಲಿ ಪರಿಣತರು. ಶ್ರೀ ಶ್ರೀನಿವಾಸ ಅಯ್ಯಂಗಾರ್(ಸಂಗೀತ), ವಿದ್ವಾನ್ ರಾಜಾಚಾರ್ (ಮೃದಂಗ) ರಂನಾಯಕಿಯ ವಿದ್ಯಾ ಗುರುಗಳು.

ಮೃದಂಗ, ಸಂಗೀತ ಎರಡೂ ಪರೀಕ್ಷೆಗಳಲ್ಲಿ ರಂಗನಾಯಕಿ ಉತ್ತೀರ್ಣರಾಗಿದ್ದಾರೆ. ಜೊತೆಗೆ ವಿ.ಆರ್. ಕೃಷ್ಣನ್, ಮಹಾರಾಜಪುರಂ ಸಂತಾನಂ, ಎಚ್.ಕೆ.ನಾರಾಯಣ, ಎಂ.ಟಿ. ಸೆಲ್ವನಾರಾಯಣ ಮುಂತಾದವರಿಂದಲೂ ರಂಗನಾಯಕಿ ಮಾರ್ಗದರ್ಶನ ಪಡೆದಿದ್ದಾರೆ.

ತಮ್ಮ ೧೨ನೇ ವಯಸ್ಸಿನಲ್ಲಿ ಚೆನ್ನೈನ ಪಾರ್ಥಸಾರಥಿ ಸಭೆಯಲ್ಲಿ ರಾಗಂ ತಾನಂ ಪಲ್ಲವಿ ಹಾಡಿ ಅಲ್ಲಿ ಉಪಸ್ಥಿತರಿದ್ದ ಸಂಗೀತ ದಿಗ್ಗಜರ ಪ್ರಶಂಸೆಗೆ ಪಾತ್ರರಾದ ಹೆಗ್ಗಳಿಕೆ ರಂಗನಾಯಕಿ ಅವರದು. ನಂತರ ಹಲವು ಪ್ರಮುಖ ಉತ್ಸವಗಳಲ್ಲಿ, ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ರಂಗನಾಯಕಿ ನಿರಂತರ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ.

ನಮ್ಮ ದೇಶದ ಹಲವಾರು ಹೆಸರಾಂತ ನೃತ್ಯ ಕಲಾವಿದರಿಗೆ ಹಿನ್ನೆಲೆ ಗಾಯನ ನೀಡುತ್ತಾ ಬಂದಿರುವ ರಂಗನಾಯಕಿ ಆಕ್ಷೇತ್ರದಲ್ಲೂ ತಮ್ಮಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನ ’ಬಿ-ಹೈ’ ಶ್ರೇಣಿ ಕಲಾವಿದೆಯಾದ ಇವರು ತಿಲ್ಲಾನ, ಜತಿಸ್ವರ, ವರ್ಣ ಹೀಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಭಕ್ತಿಯ ಸಂಪತ್ತು, ಶ್ರೀ ರಾಮಾನುಜಾಚಾರ್ಯ ಸುಪ್ರಭಾತ, ದೇವೀಸುತ್ತಿ ಮುಂತಾದ ಹಲವು ಕ್ಯಾಸೆಟ್‌ಗಳನ್ನು ಹೊರತಂದಿದ್ದಾರೆ. ಜೊತೆಗೆ ತಮ್ಮ ಸ್ವರಾಲಯ ಸಂಗೀತ ಶಾಲೆಯಲ್ಲಿ ಅನೇಕ ಯುವ ಕಲಾವಿದರಿಗೆ ಸಂಗೀತ ಶಿಕ್ಷಣ ನೀಡುತ್ತಿರುವ ಶ್ರೀಮತಿರಂಗನಾಯಕಿ ಯವರಿಗೆ ೨೦೦೦-೦೧ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.