ಜಾಗತಿಕವಾಗಿ ವಿಶ್ವರಂಗಭೂಮಿ ದಿನ ಎಂದು ಗುರುತಿಸುವ ಅಭ್ಯಾಸವೊಂದು ಆರಂಭವಾದದ್ದು 1962ರಲ್ಲಿ. ಅಲ್ಲಿಂದ ಈ ದಿನದ ವರೆಗೆ ಪ್ರತೀ ವರ್ಷ ಹಿರಿಯ ರಂಗಕರ್ಮಿಗಳು “ವಿಶ್ವರಂಗದಿನದ ಸಂದೇಶ” ನೀಡುತ್ತಾ ಬಂದಿದ್ದಾರೆ. 1962ರಲ್ಲಿ ಫ್ರೆಂಚ್ ರಂಗಕರ್ಮಿ ಜೀನ್ ಕಾಕ್‍ಟಿಯೂ ನೀಡಿದ ಸಂದೇಶದಿಂದ ಈ ವರ್ಷ ರಷ್ಯದ ವ್ಯಾಸಿಲೇವ್ ಮತ್ತು ಅಮೇರಿಕಾದ ಚೀನಿ ಮೂಲದ ಚಾಂಗ್ ಇಬ್ಬರು ಸಂದೇಶ ನೀಡುವವರೆಗಿನ ಎಲ್ಲಾ ಸಂದೇಶಗಳನ್ನೂ ಗಮನಿಸಿದರೆ ನಮಗೆ ಕಾಣುವುದು ಒಂದೇ ವಿಷಯ. ಸಮಕಾಲೀನ ಜಗತ್ತನ್ನು ಕಾಡುತ್ತಾ ಇರುವ ಜಾತೀಯವಾದ, ಮತೀಯ ಗಲಭೆ, ವರ್ಗ-ವರ್ಣ ಭೇದ, ಬಡತನದ ಸಮಸ್ಯೆಗಳು ಹಾಗೂ ಬಂಡವಾಳಶಾಹಿಗಳ ಮನಾಪಲಿ ಬಹುಮತೀಯ ವಾದಗಳನ್ನು ಗೆಲ್ಲಲು ಇರುವ ಏಕೈಕ ಅಸ್ತ್ರ ಹಾಗೂ ಔಷಧವು – ಜಾತ್ಯಾತೀತ ಹಾಗೂ ಸಮಸಮಾಜವಾದ ಪ್ರತೀಕ ಎನ್ನಬಹುದಾದ ರಂಗಭೂಮಿ ಮಾತ್ರ. ಈ ಕಾರಣಕ್ಕಾಗಿಯೇ ಇಂದು ರಂಗಭೂಮಿಯು ನಮ್ಮ ಸಮಾಜ ನಿರ್ಮಾಣಕ್ಕೆ ನೀಡಿರುವ ಕೊಡುಗೆಗಳನ್ನು ಮತ್ತೆ ಮತ್ತೆ ಗಮನಿಸಬೇಕಾಗಿದೆ ಹಾಗೂ ದೊಡ್ಡ ದನಿಯಲ್ಲಿ ಜಗತ್ತಿಗೆ ಹೇಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ರಂಗಭೂಮಿಯನ್ನು ಗಮನಿಸಿದಾಗ ಅದು ತಾಯಿಯ ಹಾಗೆ ಇನ್ನಿತರ ಮಾಧ್ಯಮಗಳನ್ನು ಮಾತ್ರವೇ ಅಲ್ಲ ಸಮಾಜ ನಿರ್ಮಾಣದಲ್ಲೂ ನೇರ ಪಾತ್ರ ವಹಿಸಿರುವುದನ್ನು ಕಾಣಬಹುದಾಗಿದೆ. 1970ರ ದಶಕದ ಬೀದಿ ನಾಟಕ ಚಳುವಳಿಯು ಆಗಿನ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸುತ್ತಾ, ತುರ್ತುಪರಿಸ್ಥಿತಿಯನ್ನು ಹೊಡೆದೋಡಿಸಲು ಸಹಾಯ ಮಾಡಿದ್ದಷ್ಟೇ ಅಲ್ಲದೇ ರಂಗಭೂಮಿ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿತು. ಹೀಗೆ ಹುಟ್ಟಿದ ಹೋರಾಟದ ರಂಗಭೂಮಿಯು ಕನ್ನಡಕ್ಕೆ ಅನೇಕಾನೇಕ ಹೊಸ ರಂಗಕೃತಿಗಳನ್ನು ನೀಡಿತು. ಜೊತೆಗೆ ಅನೇಕ ಹೊಸ ರಂಗಕರ್ಮಿಗಳನ್ನು ಸಹ ನೀಡಿತು. ಆಗ ಹುಟ್ಟಿದ “ಬಂದರೋ ಬಂದರು”, “ಕೇಳ್ರಪ್ಪೋ ಕೇಳ್ರೀ”, “ಧನ್ವಂತರಿಯ ಚಿಕಿತ್ಸೆ”, “ಬೆಲ್ಚಿ”, “ಅಲ್ಲೇ ಇದ್ದೋರು”, “ತಾಯಿ”, “ಗೆಲಿಲಿಯೋ”, “ದಂಗೆಯ ಮುಂಚಿನ ದಿನಗಳು” ತರಹದ ಕೃತಿಗಳು ಬೆಂಗಳೂರಿನಿಂದ ಆಚೆಗೆ ರಂಗಭೂಮಿಯು ಬೆಳೆಯುವ ಹಾಗೆ ಮಾಡಿತು. ರಂಗಭೂಮಿಯ ವಿಕೇಂದ್ರೀಕರಣದ ಜೊತೆಗೆ ಅನೇಕ ರಂಗಶಾಲೆಗಳು ಕರ್ನಾಟಕದ ಅನೇಕ ಮೂಲೆಗಳಲ್ಲಿ ಆರಂಭವಾಯಿತು. “ನೀನಾಸಂ”, “ಅಭಿನಯತರಂಗ”ದಂತಹ ಸಂಸ್ಥೆಗಳಲ್ಲದೆ ಕುಂದಾಪುರದ ಭಂಡಾರ್ಕರ್ ಕಾಲೇಜಿನ ರಂಗಶಿಕ್ಷಣ ಕೇಂದ್ರ, ಸಾಣೇಹಳ್ಳಿಯ ರಂಗ ಶಿಕ್ಷಣ ಕೇಂದ್ರ, ರಂಗಾಯಣದಲ್ಲಿನ ಶಿಕ್ಷಣ ಕೇಂದ್ರವಲ್ಲದೇ ಇನ್ನೂ ಹಲವು ರಂಗಶಿಕ್ಷಣದ ಡಿಪ್ಲೊಮ ನೀಡುವ ಸಂಸ್ಥೆಗಳು ಆರಂಭವಾದವು. ಇವುಗಳು ರಂಗಭೂಮಿಗೆ ಮಾತ್ರವೇ ಅಲ್ಲದೆ ದೃಶ್ಯಮಾಧ್ಯಮಗಳೇ ಆದ ಸಿನಿಮಾ ಹಾಗೂ ಟೆಲಿವಿಷನ್ ಧಾರಾವಾಹಿಗಳಿಗೆ ಕಲಾವಿದರನ್ನು ಹಾಗೂ ತಂತ್ರಜ್ಞರ ದಂಡನ್ನೇ ನೀಡಿತು. ಆ ಮಾರ್ಗವಾಗಿ ಕನ್ನಡದಲ್ಲಿನ ಸೃಜನಶೀಲ ಚಟುವಟಿಕೆಗಳ ಎಲ್ಲಾ ಮಗ್ಗುಲುಗಳಿಗೆ “ಹೋರಾಟದ ರಂಗಭೂಮಿ”ಯ ಶಕ್ತಿ-ಕಸುವು ದೊರೆತದ್ದು ಕನ್ನಡ ರಂಗಭೂಮಿಯ ಬಹುಮುಖ್ಯ ಕೊಡುಗೆ.

ತೊಂಬತ್ತರ ದಶಕ ಹಾಗೂ ಹೊಸ ಶತಮಾನದ ಮೊದಲ ದಶಕದಲ್ಲಿಯಂತೂ ಕನ್ನಡದ ವಿಕೇಂದ್ರಿತ ರಂಗ ಚಟುವಟಿಕೆಗಳು ಅದೆಷ್ಟು ಬೃಹತ್ತಾದವು ಎಂದರೆ ದಿನವೊಂದಕ್ಕೆ ನಾಡಿನ ಅನೇಕ ಊರುಗಳಲ್ಲಿ ನೂರಾರು ರಂಗಚಟುವಟಿಕೆಗಳು ನಡೆಯತೊಡಗಿದವು. ಜೊತೆಗೆ ಜಾಗತೀಕರಣದ ಫಲವಾಗಿ ತಮ್ಮ ಮಕ್ಕಳನ್ನು ಖಾಸಗಿ ಮತ್ತು ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಸೇರಿಸಿದ ಹೊಸತಲೆಮಾರಿನ ಪೋಷಕರಿಗೆ ತಮ್ಮ ಮಕ್ಕಳಿಗೆ ತಮ್ಮ ಸಂಸ್ಕೃತಿಯ ಪಾಠಗಳು ದೊರೆಯುವುದಕ್ಕೆ ರಂಗಭೂಮಿಯೇ ಸೂಕ್ತ ಮಾರ್ಗ ಎಂಬುದರಿವಾದಾಗ ಬೇಸಿಗೆಯಲ್ಲಿ ಪ್ರತಿ ಊರಲ್ಲಿ ಮಕ್ಕಳ ರಂಗಶಿಬಿರಗಳು ನಡೆಯತೊಡಗಿದವು. ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ಪ್ರತೀ ಬೇಸಿಗೆಯಲ್ಲೂ ಒಂದೋ – ಎರಡೋ ಎಂಬಂತೆ ನಡೆಯುತ್ತಿದ್ದ ಮಕ್ಕಳ ರಂಗಶಿಬಿರಗಳು ಈಗ ಪ್ರತೀ ಊರಲ್ಲಿ ಹತ್ತು ಹದಿನೈದರಷ್ಟು ಸಂಖ್ಯೆಯನ್ನು ಮುಟ್ಟಿವೆ ಮತ್ತು ಪ್ರತೀ ಕೇಂದ್ರದಲ್ಲೂ ನೂರಾರು ಮಕ್ಕಳು ರಂಗ ತರಬೇತಿ ಪಡೆಯುವಂತಾಗಿದೆ. ಇಂತಹ ಎಲ್ಲಾ ಶಿಬಿರಗಳೂ ಸಹ ರಂಗಶಿಕ್ಷಣ ಕೇಂದ್ರದಿಂದ ಬಂದ ಹೊಸ ವಿದ್ಯಾರ್ಥಿಗಳಿಗೆ ಪ್ರಯೋಗಶಾಲೆಗಳಾದವು. ಈ ನಾಡಿನ ಎಲ್ಲಾ ಮೂಲೆಗಳಲ್ಲಿ ಹೊಸ ಮಾದರಿಯ ನಾಟಕಗಳು ಮೂಡತೊಡಗಿದವು. ಹೀಗೆ ಹುಟ್ಟಿದ ಹೊಸ ನಾಟಕಗಳು ನಾಡಿನಾದ್ಯಂತ ಸಂಚರಿಸಿದವು ಆ ಮೂಲಕ ಮತ್ತಷ್ಟು ಹೊಸಬರನ್ನು ರಂಗಭೂಮಿಗೆ ತಂದವು. ಈ ಮಾದರಿಯಲ್ಲಿ ಕಳೆದ ಐದಾರು ದಶಕದ ಕನ್ನಡ ರಂಗಭೂಮಿಯು ಏಕಕಾಲಕ್ಕೆ ಕನ್ನಡದ ಉಳಿವಿಗೂ ಹಾಗೂ ಕನ್ನಡ ಸಂಸ್ಕೃತಿಯ ಉಳಿವಿಗೂ ಕಾರಣವಾಗಿದೆ.

ಇದೇ ಕಾಲಘಟ್ಟದಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಬಂದ ಪದವೀಧರರು ಸಹ ನಮ್ಮ ನಾಡಿನ ರಂಗ ಚಳುವಳಿಗೆ ಬೃಹತ್ತಾದ ಕೊಡುಗೆ ನೀಡಿದ್ದಾರೆ. ಈ ಪದವೀಧರರು ಇಲ್ಲಿನ ಬಹುತೇಕ ರಂಗಶೀಕ್ಷಣ ಕೇಂದ್ರಗಲ್ಲಿ ಉಪನ್ಯಾಸಗಳನ್ನು ನೀಡಿ ನಮ್ಮ ರಂಗಭೂಮಿಗೆ ಜಾಗತಿಕ ಎನ್ನಬಹುದಾದ ವೃತ್ತಿಪರತೆಯನ್ನು ತಂದುಕೊಟ್ಟಿದ್ದಾರೆ. ರಂಗಭೂಮಿಯ ಮೇಲೆ ಮೂಡುವ ಮಾಯಕಗಳನ್ನು ಹಾಗೂ ವೈಭವವನ್ನು ಕಟ್ಟಲು, ಆ ಮೂಲಕ ಪ್ರದರ್ಶನವು ನೋಡುಗನಿಗೆ ನೀಡಬಹುದಾದ ಅನುಭೂತಿಯ ಸಾಧ್ಯತೆಗಳನ್ನು ವಿಸ್ತರಿಸಲು ಈ ರಂಗತಜ್ಞರು ನೀಡಿದ ಕೊಡುಗೆ ಅಪಾರ. ಆ ನಿಟ್ಟಿನಲ್ಲಿ ಬಿ.ವಿ.ಕಾರಂತರ ನಾಟಕಗಳು ಉತ್ಸವವನ್ನು ಸೃಷ್ಟಿಸಿದರೆ, ಪ್ರಸನ್ನ ಅವರ ನಾಟಕಗಳು ದೃಶ್ಯ ನಿರ್ಮಿತಿಯ ಶಿಸ್ತು ಹಾಗೂ ವಸ್ತು ನಿರ್ವಹಣೆಯ ಮೂಲಕ ರಾಜಕೀಯ ನಿಲುವುಗಳನ್ನು ದಾಟಿಸುವ ಕೆಲಸ ಮಾಡಿದವು. ಅಶೋಕ ಬಾದರದಿನ್ನಿಯವರ ನಾಟಕಗಳು ಗುಂಪಿನ ನಿರ್ವಹಣೆ ಮತ್ತು ಭಾಷಾ ಬಳಕೆಯ ದೃಷ್ಟಿಯಲ್ಲಿ ವಿಶಿಷ್ಟ ಪ್ರಯೋಗಗಳೆನೆಸಿದವು. ಸುರೇಂದ್ರನಾಥ್ ಅವರು ಅನುವಾದಿತ ನಾಟಕಗಳ ಮೂಲಕವೇ ಕನ್ನಡದ ದನಿಯನ್ನು ಭಾಷೆಯ ಮೂಲಕ ಹಾಗೂ ಅಪರೂಪದ ರಂಗವಿನ್ಯಾಸದ ಮೂಲಕ ದಾಟಿಸಿದರು. ಚಿದಂಬರರಾವ್ ಜಂಬೆ ಅವರು ಕ್ಲಾಸಿಕಲ್ ಚೌಕಟ್ಟಿನ ಒಳಗಡೆಯೇ ಆಧುನಿಕ ಚಿಂತನೆಗಳನ್ನು ಕಟ್ಟಿಕೊಡುವ ಅಪರೂಪದ ಪ್ರಯತ್ನ ಮಾಡಿದರು. ಜಯತೀರ್ಥ ಜೋಷಿಯವರು ಪ್ರೋಸಿನಿಯಂ ರಂಗಮಂದಿರದಾಚೆಗೂ ವಿಶಿಷ್ಟ ಪರಿಸರಗಳಲ್ಲಿ ನಾಟಕ ಕಟ್ಟುವ ಸಾಧ್ಯತೆಗಳನ್ನು ಪರಿಚಯಿಸಿದರು. ಬಸವಲಿಂಗಯ್ಯ ಅವರು ಆರಂಭಕಾಲದಲ್ಲಿ ಉತ್ಸವ ರಂಗಭೂಮಿ ಮತ್ತು ರಾಜಕೀಯ ರಂಗಭೂಮಿಗಳೆರಡರ ಸಮ್ಮಿಳಿತವನ್ನು ಕಟ್ಟಿದರೆ ಅವರ ರಂಗ ಜೀವನದ ಎರಡನೆಯ ಅರ್ಧದಲ್ಲಿ ಕಥನ ರಂಗಭೂಮಿಯನ್ನು ಮತ್ತು ವೈಭವೋಪೇತ ದೃಶ್ಯ ನಿರ್ಮಿತಿಯನ್ನು ಬಳಸಿ ಕನ್ನಡದ ಸಾಹಿತ್ಯ ಕೃತಿಗಳನ್ನು ರಂಗಕ್ಕೆ ತಂದರು. ರಘುನಂದನ್ ಅವರು ನಿರಂತರ ಪ್ರಯೋಗಶೀಲತೆಯನ್ನು ಮತ್ತು ಅಭಿನಯ ಪದ್ಧತಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿದರು. ಗೋಪಾಲಕೃಷ್ಣ ನಾಯರಿಯವರು ಕರಾವಳಿಯ ಜನಪದ ಪ್ರಾಕರಗಳ ಮೂಲಕವೇ ಪಾರಂಪರಿಕ ನಾಟಕಗಳನ್ನು ಕಟ್ಟುವ ಕ್ರಮ ರೂಢಿಸಿದರು. ಅಕ್ಷರ ಅವು ಪಾಶ್ಚಾತ್ಯ ರಂಗಕೃತಿಗಳಿಗೆ ಇರುವ ಚಲನಶೀಲತೆಯನ್ನು ಮತ್ತು ಸಮಕಾಲೀನ ಸಮಸ್ಯೆಗಳನ್ನು ಸರಳವಾಗಿ ದಾಟಿಸುವ ಪ್ರಯತ್ನಗಳನ್ನು ಮಾಡಿದರು. ಸುರೇಶ್ ಆನಗಳ್ಳಿಯವರು ರಂಗವಿನ್ಯಾಸ ಹಾಗೂ ಅಭಿನಯ ನಿರ್ವಹಣೆಯ ಹೊಸ ಮಾದರಿಗಳನ್ನು ಹಾಗೂ ಉತ್ಸವ ರಂಗಭೂಮಿಯ ಮೂಲಕವೇ ಗಂಭೀರ ಚರ್ಚೆಗೆ ತೊಡಗಬಹುದಾದ ರಂಗಕೃತಿಗಳನ್ನು ನೀಡಿದರು. ವಾಲ್ಟೇರ್ ಡಿಸೋಜಾ ತರಹದವರು ಮೈಮ್ ರಂಗಭೂಮಿಯ ಸಾಧ್ಯತೆಗಳನ್ನು ದುಡಿಸಿಕೊಂಡರೆ, ಜನಾರ್ಧನ್ ತರಹದವರು ಹೋರಾಟದ ರಂಗಭೂಮಿಯ ಮಾದರಿಯ ಮುಂದುವರಿಕೆಯನ್ನು ಹಾಡುಗಬ್ಬದ ಹಾಗೆ ಕಟ್ಟಿದರು ಹೀಗೆ ಎನ್‍ಎಸ್‍ಡಿ ಪದವೀಧರರು ಪ್ರಯೋಗಳನ್ನು ಮಾಡುವಾಗಲೇ ಸಮಾನಂತರವಾಗಿ ಸಿಜಿಕೆ, ಗಂಗಾಧರಸ್ವಾಮಿ, ಆರ್‍ ನಾಗೇಶ್ ಮುಂತಾದವರು ಸಹ ಬಹುಮುಖ್ಯ ಪ್ರಯೋಗಗಳನ್ನು ಕಟ್ಟಿಕೊಟ್ಟರು. ಇವರೆಲ್ಲರ ಹಿಂದೆ ಬಂದ ಈ ನಾಡಿನ ರಂಗಶಾಲೆಯ ಪ್ರಾಡಕ್ಟ್‍ಗಳಾದ ಇಕ್ಬಾಲ್ ಅಹ್ಮದ್, ಎಣಗಿ ನಟರಾಜ, ಮಂಡ್ಯ ರಮೇಶ್, ಹುಲಿಗೆಪ್ಪ ಕಟ್ಟೀಮನಿ, ಜೀವನರಾಂ ಸುಳ್ಯ, ನಟರಾಜ ಹೊನ್ನವಳ್ಳಿ ಮುಂತಾದವರ ಪ್ರಯೋಗಗಳು ಒಂದು ಬಗೆಯಾದರೆ ಮಾಲತೇಶ್ ಬಡಿಗೇರ್, ಪ್ರಮೋದ ಶಿಗ್ಗಾಂವ್, ಮಂಜುನಾಥ ಬಡಿಗೇರ, ಜೋಸೆಫ್, ಮಂಗಳಾ ಅವರ ಪ್ರಯೋಗಗಳು ವಿದ್ಯಾರ್ಥಿ ಸಮೂಹವನ್ನು ರಂಗಭೂಮಿಗೆ ತಂದವು. ಇವರೆಲ್ಲರ ನಡುವೆ ಸ್ವಯಂ ಕೃಷಿಯಿಂದ ರಂಗಶಿಕ್ಷಣ ಪಡೆದ ಶ್ರೀಪಾದ ಭಟ್, ಎಸ್‍ ಆರ್ ರಮೇಶ್, ಎಚ್ ಎಸ್ ಉಮೇಶ್, ನಾ.ಶ್ರೀನಿವಾಸ ಮುಂತಾದವರು ಎಡಪಂಥೀಯ ರಂಗಚಳುವಳಿಯಿಂದ ಪ್ರಭಾವಿತರಾಗಿ ಕಟ್ಟಿದ ಪ್ರಯೋಗಗಳು (ಈ ಗುಂಪಿನಲ್ಲಿ ಈ ಲೇಖನದ ಬರಹಗಾರನನ್ನೂ ಸೇರಿಸಬಹುದು) ನಾಡಿನಾದ್ಯಂತ ಪ್ರದರ್ಶನ ಕಂಡವು. (ಇಲ್ಲಿ ಹೆಸರಿಸಿಲ್ಲದ ಇನ್ನೂ ಅನೇಕ ರಂಗಕರ್ಮಿಗಳ ಕೊಡುಗೆ ನಿಜಕ್ಕೂ ದೊಡ್ಡದು. ಎಲ್ಲರನ್ನೂ ಈ ಲೇಖನದಡಿಯಲ್ಲಿ ಚರ್ಚಿಸಲಾಗುತ್ತಿಲ್ಲ ಎಂಬ ವಿಷಾದ ಲೇಖಕನದು.) ಒಟ್ಟಾರೆಯಾಗಿ ಹೇಳುವುದಾದರೆ ರಂಗಶಿಕ್ಷಣಕ್ಕೆ ಒದಗಿ ಬಂದ ಶಿಸ್ತುಗಳು ನಮ್ಮ ನಾಡಿನ ರಂಗಪ್ರಯೋಗಳ ಜೀವಂತಿಕೆಗೆ ಕಾರಣವಾದವು. ಆ ಮೂಲಕ ನಾಡು ಕಟ್ಟುವ ಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಂಡವು.

ಈ ಎಲ್ಲಾ ರಂಗ ಚಳುವಳಿಯಿಂದಲೇ ಹಿರಿತೆರೆ ಮತ್ತು ಕಿರುತೆರೆಗೆ ಆದ ಕೊಡುಗೆಯೂ ಅಪಾರ. ಇಂದು ನಮ್ಮ ನಾಡಿನ ಯಾವುದೇ ಮೂಲೆಯಲ್ಲಿ ಯಾವುದೇ ದೃಶ್ಯ ಮಾಧ್ಯಮದ ಚಟುವಟಿಕೆ ಆಗುತ್ತಾ ಇದ್ದರೂ ಅಲ್ಲಿ ಒಬ್ಬರಾದರೂ ರಂಗಭೂಮಿಯ ಹಿನ್ನೆಲೆಯಿಂದ ಬಂದವರು ಇದ್ದೇ ಇರುತ್ತಾರೆ ಮತ್ತು ಅಂತಹವರಿಂದಲೇ ಆಯಾ ಪ್ರಯೋಗಗಳು ಸಶಕ್ತವಾಗುತ್ತವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.