ಭಾವುಸಾರ ಕ್ಷತ್ರೀಯರ ಆರಾಧ್ಯ ದೇವತೆ

ಶ್ರೀ ಹಿಂಗುಲಾಂಬಾ ದೇವಿಯ ದರ್ಶನಕ್ಕೆ ವಿವರ :

ಹಿಂದೂ ದರ್ಶನ ಶಾಸ್ತ್ರದಲ್ಲಿ ಸ್ತ್ರೀಯು ದೇವಿಯ ರೂಪವಾಗಿದ್ದಾಳೆ. ಆಕೆಯ ಪೂಜೆ ಆದಿಕಾಲದಿಂದಲೂ ನಡೆದು ಬಂದಿದೆ. ಶಿವನ ಹೆಸರುಗಳ ೫೨ ಶಕ್ತಿ ಪೀಠಗಳಿವೆ., ಅವುಗಳಲ್ಲಿ  ಎರಡು ದೇವಿಗೆ ಸಂಬಂಧಿಸಿದವುಗಳು. ಒಂದು ಗುವಾಹತಿಯ ಕಾಮಾಖ್ಯಾದೇವಿ, ಇನ್ನೊಂದು ಬಲೂಚಿಸ್ಥಾನದ ಹಿಂಗುಲಾಜದೇವಿ ಇವೆರಡು ಪೂರ್ವ ಪಶ್ಚಿಮಗಳಲ್ಲಿ ಭಾರತೀಯ ಸಂಸ್ಕೃತಿಯ ಕಾವಲುಗಾರರು. ಆರ್ಯಾವರ್ತ ಭಜನೆಯಾಗುತ್ತಾ ಹೋದ ಹಾಗೆ ಹಿಂದೂಗಳ ಅನೇಕ ತೀರ್ಥ ಕ್ಷೇತ್ರಗಳು ದೇಶಗಳ ಸೊತ್ತಾದವು. ಇರಾನ್, ಅಫಗಾನಿಸ್ಥಾನ ಕಠಮಂಡೋವಿನಿಂದ ಹಿಡಿದು ಬಾಂಗ್ಲಾದೇಶ, ಇಂಡೋನೇಷ್ಯಾ, ಮುಂತಾದ ಆಗ್ನೇಯ ಏಷ್ಯಾದ ದೇಶಗಳಲ್ಲಿ ಇಂತಹ ಹಿಂದೂ ತೀರ್ಥಕ್ಷೇತ್ರಗಳು ಕಂಡು ಬರುತ್ತಿವೆ. ಪಾಕಿಸ್ತಾನದ ನರಸಿಂಹ ಮಂದಿರ ಮುಂತಾದ ಅನೇಕ ಇಂದೂ ಕ್ಷೇತ್ರಗಳು ಜೀರ್ಣಾವಸ್ಥೆಯಲ್ಲಿವೆ. ಹಿಂದೂ ಶ್ರದ್ಧೆ ಮತ್ತು ದರ್ಶನಗಳ ಪ್ರಕಾರ ಪಾಕಿಸ್ತಾನದಲ್ಲಿ ಅತ್ಯಂತ ದೊಡ್ಡ ತೀರ್ಥಕ್ಷೇತ್ರ ಇರುವುದು ಹಿಂಗಲಾಜ ಶಕ್ತಿ ಪೀಠ. ದೇಶ ಭಜನೆಯ ಮೊದಲು ಗುಜರಾತ್ ಮತ್ತು ರಾಜಸ್ಥಾನದಿಂದ ತುಂಬಾ ಜನ ಹಿಂಗಲಾಜ ದೇವಿಯ ದರ್ಶನಕ್ಕೆ ಹೋಗುತ್ತಿದ್ದರು. ಪಾಕಿಸ್ತಾನ ಆದ ಮೇಲೆ ಬಲೂಚಿಸ್ತಾನ ಪಾಕಿಸ್ತಾನದ ಅಂಗವಾಯಿತು. ಹಿಂಗಲಾಜ ಮಹತ್ವ ಕಡಿಮೆಯಾಯಿತು. ಬಹಳ ಹಿಂದೆ ಬಲೂಚಿಸ್ತಾನ ಇರಾನಿನ ಭಾಗವಾಗಿತ್ತು. ಆ ಕಾಲದಲ್ಲಿ ಇದನ್ನು ಇರಾನಿಗಳು ತಮ್ಮ ದೇವಿಯ ಮಂದಿರ ಎಂದು ಹೇಳಿಕೊಳ್ಳುತ್ತಿದ್ದರು. ಈಗ ಹಿಂಗಲಾಜದೇವಿ ಕೇವಲ ಆದಿವಾಸಿಗಳ ದೇವಿಯಾಗಿ ಉಳಿದು ಬಿಟ್ಟಿದಾಳೆ. ಆದಿವಾಸಿಗಳು ಇದನ್ನು ’ನಾನಿಕಾಹಜ್’ ಎಂದು ಕರೆಯುತ್ತಾರೆ. ಅವರೆಲ್ಲ ಮುಸ್ಲಿಮರಲ್ಲ  ಆದರೂ ಹಜ್ ಶಬ್ದದ ಉಪಯೋಗ ಅಲ್ಲಿ ಆಗುತ್ತಿವೆ. ಅದೊಂದು ಆಶ್ಚರ್ಯದ ವಿಷಯ.

ನಮ್ಮ ಪಂಜಾಬಿನ ಗಡಿಯಲ್ಲಿರುವ ಗುರುದ್ವಾರಗಳು ಅಂತರರಾಷ್ಟ್ರೀಯ ಒತ್ತಡದಿಂದಾಗಿ ಈಗ ಸಿಖ್ಖರಿಗೆ ತೆರೆಯಲ್ಪಟ್ಟಿವೆ. ಪಾಕಿಸ್ತಾನ ಆ ಗುರುದ್ವಾರಗಳ ರಿಪೇರಿಗಾಗಿ ಹಣ ಖರ್ಚು ಮಾಡುವುದಿಲ್ಲ. ಆದರೆ ದೇಶದಲ್ಲಿರುವ ಸಿಖರು ಈ ಕಾರ್ಯ ಮಾಡಲು ಪಾಕಿಸ್ತಾನ ಅನುಮತಿ ಕೊಟ್ಟಿದೆ. ಈ ಗುರುದ್ವಾರಗಳನ್ನು ಸಿಖ್ಖರು ಸುಸ್ಥಿತಿಯಲ್ಲಿ ಇಟ್ಟಿದ್ದಾರೆ. ನನಕಾನಾ ಸಾಹೆಬ್ ಅಂತೂ ಕಂಗೊಳಿಸುತ್ತಿದೆ. ಆದರೆ  ಹಿಂದೂ ತೀರ್ಥ ಸ್ಥಾನಗಳು ಕಡೆಗಣಿಸಲ್ಪಟ್ಟಿವೆ. ಬಿದ್ದು ಹೋಗಿರುವ ದೇವಾಲಯಗಳನ್ನು ಕಟ್ಟಲು ಪುನಃ ಅನುಮತಿಯನ್ನು ಕೊಡುವುದಿಲ್ಲ ಯಾವ ದೇವಸ್ಥಾನದ ಮೂರ್ತಿಯೂ ಸರಿಯಾಗಿಲ್ಲ. ಮೂರ್ತಿಗಳೆಲ್ಲಾ ಭಗ್ನವಾಗಿವೆ. ಸ್ವಲ್ಪ ಸಮಯದ ಹಿಂದೆ ವಿಶ್ವಸಂಸ್ಥೆಯು ನ್ಯಾಷನಲ್ ಹೆರಿಟೇಜ ಎಂದು ಮುಲ್ತಾನಿನ ನರಸಿಂಹ ದೇವಾಲಯದ ನವೀಕರಣದಲ್ಲಿ ಆಸಕ್ತಿ ತೋರಿಸಿತು. ಆದರೆ ಪಾಕಿಸ್ತಾನದ ಸರಕಾರ ಇದಕ್ಕೆ ಅನುಮತಿ ಕೊಡಲಿಲ್ಲ. ಹಿಂಗಲಾಜ ಮಂದಿರವೂ ಕೂಡಾ ನೋಡಿಕೊಳ್ಳುವವರಿಲ್ಲದೆ ಪಾಳು ಬಿದ್ದಿದೆ. ಆಟಲ್ಜಿಯವರ ಸರಕಾರ ಇದ್ದಾಗ ಪಾಕಿಸ್ತಾನದೊಂದಿಗಿನ ಸಂಬಂಧಗಳ ಸುಧಾರಣೆಗೆ ಪ್ರಯತ್ನಗಳು ನಡೆದವು. ಫಲವಾಗಿ ಪಾಕ್ ಜನರಿಗೆ ಭಾರತದಲ್ಲಿ ಸುತ್ತಾಡಲು ಅನುಮತಿ ಸಿಕ್ಕಿತು. ಭಾರತವು ಪ್ರವಾಸಿಗರಿಗೆ, ವೀಸಾ ಕೊಟ್ಟಿತು. ಆದರೆ ಪಾಕಿಸ್ತಾನದ ಹಳೆಯ ನೀತಿ ಮುಂದುವರಿಯಿತು,. ಲಾಹೋರ್, ಕರಾಚಿ, ಸಿಂಧ್, ಹೈದರಾಬಾದಗಳಿಗೆ ಹೋಗಲು ಭಾರತೀಯರಿಗೆ ಅನುಮತಿ ಸಿಕ್ಕಿತು. ರಾವಲ್ ಪಿಂಡಿ ಸೈನ್ಯದ ಕೇಂದ್ರ ಆದುದರಿಂದ ಅಲ್ಲಿಗೆ ಹೋಗಲು ಅನುಮತಿ ಸಿಗಲಿಲ್ಲ. ಭಾರತ ಪಾಕ್ ಸಂಬಂಧ ಸುಧಾರಿಸಿದ ನಂತರ, ಪಾಕ್ ಭಾರತೀಯರಿಗೆ ವೀಸಾ ಕೊಡುತ್ತಿದೆ. ಆದರೆ ತೀರ್ಥ ಕ್ಷೇತ್ರಗಳ ಸಂಬಂಧದಲ್ಲಿ ಅವರ ನೀತಿ ಬದಲಾಗಿಲ್ಲ. ಪಾಕಿಸ್ತಾನದ ಒಳಭಾಗಗಳಿಗೆ ಈಗಲೂ ಭಾರತೀಯರು ಹೋಗುವುದು ಸಾಧ್ಯವಿಲ್ಲ. ಈ ಹಿಂಗಲಾಜ ಕ್ಷೇತ್ರವು ಕೂಡಾ ಇದೇ ನೀತಿಗೆ ಒಳಗಾಗಿದೆ. ಗುಜರಾತಿನ ಜನ ಹಿಂಗಲಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಹೋಗುತ್ತಾರೆ. ಭಜನೆಯ ಮೊದಲು ಹಿಂಗಲಾಜ ಯಾತ್ರೆಯನ್ನು ಕಚ್ಛ್ ಜನ ಕಾಲ್ನಡಿಗೆಯಲ್ಲಿ ಮಾಡುತ್ತಿದ್ದರು. ಕಚ್ಛ್ ನಿಂದ ಹಿಂಗಲಾಜಗೆ ಹೋಗಲು ೧೫ ದಿನಗಳು ಬೇಕಾಗುತ್ತಿದ್ದವು.

ಹಿಂಗಲಾಜ ಶಕ್ತಿಪೀಠ ಬಲೂಚಿಸ್ಥಾನ ಪ್ರಾಂತ್ಯದ ಲಾಶ್ ಬೆಸಾ ಜಿಲ್ಲೆಯ ಲ್ಯಾರಾ ತಾಲೂಕಿನಲ್ಲಿದೆ. ಕರಾಚಿಯಿಂದ ಇಲ್ಲಿಗೆ ೨೫೦ ಕಿಲೋ ಮಿಟರ್ ದೂರ ಇದೆ. ಈ ಕ್ಷೇತ್ರದ ಮಹತ್ವದ ಬಗ್ಗೆ ಯಾರಿಗೂ ಗೊತ್ತಿಲ್ಲ. ಪಾಕಿಸ್ತಾನದ ಜನರಿಗೆ ಈ ಕ್ಷೇತ್ರದ ಬಗ್ಗೆ ಏನೂ ಗೊತ್ತಿಲ್ಲ. ಬಲೂಚಿಸ್ಥಾನದ ಹಳೆಯ ಗೆಜೆಟ್ನಲ್ಲಿ ಈ ಕ್ಷೇತ್ರದ ವರ್ಣನೆ ಇದೆ. ಆಗ ಈ ಸ್ಥಳಕ್ಕೆ ಹೋಗಲು ಒಂಟೆ ಮಾತ್ರ ಸಾಧನ. ಇದು ಮರುಭೂಮಿಯಲ್ಲಿನ ಕ್ಷೇತ್ರ. ಈಗಲೂ ಲಾಶ್ ಬೆಸಾ ಜಿಲ್ಲಾ ಕೇಂದ್ರದಿಂದ ’ಹಿಂಗಲಾಜ’ ವರೆಗೆ ಒಂಟೆಯೇ ಪ್ರಯಾಣಕ್ಕೆ ಸಾಧನ. ಮಾರ್ಗ ತುಂಬಾ ಕಷ್ಟ. ಆದುದರಿಂದ ಇಲ್ಲಿಗೆ ಹೋಗುವ ಯಾತ್ರಿಕರು ಕಡಿಮೆ. ಮಾರ್ಗದಲ್ಲಿ ತುಂಬಾ ಮಂಗಗಳಿವೆ. ಭಕ್ತರು ಈ ಮಂಗಗಳನ್ನು ಹೊಡೆಯುವುದಿಲ್ಲ. ತಮ್ಮಲ್ಲಿರುವ ತಿಂಡಿಯನ್ನು ಅವರು ಮಂಗಗಳಿಗೆ ತಿನ್ನಿಸಿ ಪುಣ್ಯ ಕಟ್ಟಿಕೊಳ್ಳುತ್ತಾರೆ. ಈ ಮಂಗಗಳು ಹಿಂಗಲಾಮಾತೆಯ ಮಂದಿರದ ರಕ್ಷಕರು ಎಂದು ಓರ್ವ ಒಂಟೆಯ ಮಾಲೀಕ ಹೇಳಿದ. ದೇವಸ್ಥಾನಕ್ಕೆ ಹಾನಿ ಮಾಡಲು ಯಾರಾದರೂ ಇಲ್ಲಿಗೆ ಬಂದರೆ ಮಂಗಗಳು ಆತನಿಗೆ ಚೆನ್ನಾಗಿ ಹೊಡೆಯುತ್ತವೆ. ಹಿಂಗಲಾದೇವಿಯನ್ನು ನಾನಿಹಜ್ ಮಾತ್ರವಲ್ಲದೆ ನಾಜಾ, ಬೀಲಿ, ಬೈರ ಮತ್ತು ಕೋಟರಿ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಕೊಟ್ಟರಿಯಾ ಎಂಬುದು ಈಕೆಯ ಅತ್ಯಂತ ಜನಪ್ರಿಯವಾದ ಹೆಸರು.

ಕಚ್ ನಿಂದ ಹಿಂಗಲಾಜವರೆಗೆ ೧೩ ವಿಶ್ರಾಂತಿ ಸ್ಥಳಗಳಿವೆ. ಇಲ್ಲಿ ಯಾತ್ರಿಕರು ನಿಂತು ತಮ್ಮ ಪ್ರಯಾಣದ ಆಯಾಸವನ್ನು ದೂರ ಮಾಡಿಕೊಳ್ಳುತ್ತಾರೆ. ಹಿಂದೆ ಹಿಂಗಲಾಜನಲ್ಲಿ ದಟ್ಟವಾದ ಮರಗಳಿದ್ದುವಂತೆ. ಈಗ ಮರಗಳು ವಿರಳವಾಗಿವೆ. ಎರಡು ಆಲದ ಮರಗಳು, ಎಂಟು ಅಶ್ವತ್ಥ ಮರಗಳು ಮತ್ತು ಹಲವು ಬೇನ ಮರಗಳಿವೆ. ಈಗ ಅವು ಚಿಕ್ಕದಾಗುತ್ತಾ ಹೋಗುತ್ತಿವೆ. ಹೊಸ ವೃಕ್ಷಗಳನ್ನು ಈಗ ನೆಟ್ಟಿದ್ದರೆ ಮುಂದೆ ಯಾತ್ರಿಕರಿಗೆ ತುಂಬಾ ತೊಂದರೆಯಾಗಬಹುದು. ಈ ಮಾರ್ಗದಲ್ಲಿ ಸಣ್ಣಪುಟ್ಟ ೨೪ ತೀರ್ಥಸ್ಥಾನಗಳು ಸಿಗುತ್ತವೆ. ಇವುಗಳಲ್ಲಿ ಪೂಜೆ ನಡೆಯುತ್ತಿಲ್ಲ. ಯಾತ್ರಿಕರು ಅಲ್ಲಿಗೆ ಹೋಗುವುದು ತುಂಬಾ ಅಪರೂಪ ’ಠಠ್ಠಾ’ ಎಂಬುದು ಇಲ್ಲಿನ ಒಂದು ನಗರ. ಇಲ್ಲಿಂದ ಹಿಂಗಲಾಜ ೧೫ ಮೈಲುದೂರ ಇದೆ. ಇಲ್ಲಿ ಒಂದು ಠುಮ್ರಾ ಎಂಬ ಬೆಟ್ಟ ಇದೆ. ಇಲ್ಲಿಯ ಭಾಷೆಯಲ್ಲಿ ಕಲ್ಲನ್ನು ಠುಮ್ರಾ ಎನ್ನುತ್ತಾರೆ. ಈ ಬೆಟ್ಟದ ಕಲ್ಲುಗಳನ್ನು ನೀರಿಗೆ ಹಾಕಿ ನೀರನ್ನು ಕುದಿಸಿದಾಗ ಕಲ್ಲು ಮೆತ್ತಗಾಗುತ್ತದೆ, ಎಂದು ಠಠ್ಠಾದ ಜನರು ಹೇಳುತ್ತಾರೆ. ಹೀಗೆ ಆಗುವುದಕ್ಕೆ ಕಾರಣ ಇಂದಿನವರೆಗೂ ಯಾರಿಗೂ ಗೊತ್ತಿಲ್ಲ. ಮೆತ್ತಗಾದ ಕಲ್ಲುಗಳನ್ನು ಚೂರು ಚೂರು ಮಾಡಲಾಗುತ್ತದೆ. ಅವುಗಳನ್ನು ಪೋಣಿಸಿ ಮಾಲೆ ಮಾಡುತ್ತಾರೆ. ಹಿಂಗಲಾದೇವಿಯ ಭಕ್ತರು ಈ ಮಾಲೆಗಳನ್ನು ಧರಿಸುತ್ತಾರೆ. ಇದನ್ನು ಠುಮ್ರಾ ಮಾತೆಯ ಪ್ರಸಾದ ಎನ್ನುತ್ತಾರೆ. ಇದರ ಬಗ್ಗೆ ಹಲವು ವದಂತಿಗಳಿವೆ.

ಹಿಂಗಲಾಜ ಶಕ್ತಿ ಪೀಠ ಮರುಭೂಮಿಯಲ್ಲಿದೆ. ಇದರ ಪೂರ್ವದಲ್ಲಿ ಸಿಂಧ್ ಇದೆ. ಪಶ್ಚಿಮದಲ್ಲಿ ಕಲಾತ್ ಬೆಟ್ಟಗಳಿವೆ. ದಕ್ಷಿಣದಲ್ಲಿ ಅರಬ್ಬಿಸಮುದ್ರ ಇದೆ. ಹೋಕಾರ್ ಪರ್ವತ ಶ್ರೇಣಿಗಳೂ ಇವೆ. ಅಘೋರ ನದಿ ದೇವಸ್ಥಾನಕ್ಕೆ ಸಮೀಪದಲ್ಲಿ ಹರಿಯುತ್ತದೆ. ಹಿಂದೆ ಇಲ್ಲಿ ಅಘೋರಿಗಳು ಮಂತ್ರ ತಂತ್ರ ಮಾಡುತ್ತಿದ್ದರಂತೆ. ಈಗ ತಾಂತ್ರಿಕರ ದೇವತೆ ಕಾಮಾಖ್ಯಾ, ಹಿಂದೆ ಹಿಂಗಲಾದೇವಿಯನ್ನು ತಾಂತ್ರಿಕಿರೂ ನಂಬುತ್ತಿದ್ದರಂತೆ. ಈಗ ಹಿಂಗಲಾಜದಲ್ಲಿ ಮೌನ ಕವಿದಿದೆ. ಆದರೆ ಒಂದು ಕಾಲದಲ್ಲಿ ಇದು ತಂತ್ರ ವಿದ್ಯೆಯ ಕೇಂದ್ರವಾಗಿರಬಹುದೆಂದು ಹೇಳಬಹುದು. ಹಿಂಗಲಾಜ ಯಾತ್ರೆ ಅತ್ಯಂತ ರೋಮಾಂಚಕಾರಿಯಾಗಿದೆ.  ಪುರಾಣಗಳಲ್ಲಿ ಹಿಂಗಲಾಜದ ವರ್ಣನೆ ಸಾಕಷ್ಟು ಇದೆ. ಈಗ ಇದು ಪಾಕಿಸ್ತಾನದಲ್ಲಿ ಇರುವುದರಿಂದ ಭಾರತೀಯ ಸಂಸ್ಕೃತಿಗೆ ಸಂಬಂಧಪಟ್ಟ ಈ ಕ್ಷೇತ್ರದ ಪರಿಚಯ ಬಹುಸಂಖ್ಯೆಯ ಭಾರತೀಯರಿಗೆ ಇಲ್ಲ. ಪಾಕಿಸ್ಥಾನದಲ್ಲಿ ಈಗಲೂ ಅನೇಕ ಆದಿವಾಸಿಗಳು ಇಸ್ಲಾಮನ್ನು ಅನುಸರಿಸುವುದಿಲ್ಲ. ಈ ಆದಿವಾಸಿಗಳನ್ನು ಭೇಟಿಯಾಗುವುದೇ ಒಂದು ಅಪೂರ್ವವಾದ ಅನುಭವ. ಹಿಂಗಲಾಜನ ಯಾತ್ರೆಯನ್ನಂತೂ ಮರೆಯುವಂತೆಯೇ ಇಲ್ಲ.”ಭಾರತ ಮಾತಾ ಕಿ ಲಾಜ್ ಮೇರಾ ಹಿಂಗಲಾಜ್ ಮೇರಾ ಹಿಂಗಲಾಜ್ ’ಎಂದು ದೇವಸ್ಥಾನದ ಒಳ ಗೋಡೆಗಳ ಮೇಲೆ ಯಾರೋ ಸಿಂಧಿ ಭಾಷೆಯಲ್ಲಿ ಬರೆದಿದ್ದಾರೆ.ಈಗ ಪಾಕಿಸ್ತಾನದ ಸರಕಾರ ಮೊದಲ ಬಾರಿಗೆ ಹಿಂಗಲಾಜ ಯಾತ್ರೆಗೆ ವೀಸಾ ಕೊಡುತ್ತಿದೆ. ಕಚ್  – ಭುಜ್ ಗಳಿಂದ ಮೊದಲ ತಂಡ ಈ ಯಾತ್ರೆಗೆ ಹೊರಟಿದೆ. ಜನ ರಾಜಸ್ಥಾನದ ಖೋಕರಾಪಾರಾವನ್ನು ದಾಟಿ, ಪಾಕಿಸ್ತಾನದ ಗಡಿ ಕರಾಚಿ ಮತ್ತು ಸಿಂಧ್ ಹೈದರಾಬಾದಿನ ಮಾರ್ಗವಾಗಿ ಹಿಂಗಲಾಜಗೆ ಹೋಗುತ್ತಾರೆ. ಎಲ್ಲವೂ ವ್ಯವಸ್ಥಿತವಾಗಿ ನಡೆದರೆ ಈ ಸಲ ೨೫೦ ಭಾರತೀಯರು ಹಿಂಗಲಾಜ ದೇವಿಯ ದರ್ಶನ ಮಾಡುವವರಿದ್ದಾರೆ.

. ಪಿತೃ ಪ್ರಧಾನದ  ಕಪಿ ಮುಷ್ಟಿ :

ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ವಿಶಿಷ್ಟ ಮತ್ತು ಸಂಕೀರ್ಣ ಸಂಸ್ಕೃತಿಯಾಗಿದೆ. ಈ ಸಂಸ್ಕೃತಿಯ ಅಂತರಂಗದ ಒಳ ಪದರುಗಳಲ್ಲಿ ವಿರೋಧಾಭಾಸದ ಅಲೆಗಳು ಎದ್ದು ಕಾಣುತ್ತವೆ. ಒಂದರ್ಥದಲ್ಲಿ ಇದನ್ನು ದ್ವಿಮುಖ ಸಂಸ್ಕೃತಿ ಎನ್ನಬಹುದು. ಎರಡು ಸಂದರ್ಭಗಳಲ್ಲಿ ಇದರ ಸ್ಪಷ್ಟ ಚಿತ್ರ ಗೋಚರಿಸುತ್ತದೆ. ಒಂದು  ವ್ಯಕ್ತಿಯ ಜಾತಿ ಮತ್ತು ಆರ್ಥಿಕ ಬಲ ಮೇಲೆ, ಮೇಲ್ವರ್ಗ ಮತ್ತು ಕೆಳವರ್ಗ ಎಂದೂ ಮನುಷ್ಯನ ಜೈವಿಕ ಆಧಾರದ ಮೇಲೆ ಗಂಡು ಹೆಣ್ಣು ಎಂದು ಲಿಂಗಭೇದ ತಾರತಮ್ಯದ ನಯವಂಚಕತನ ಹೀಗೆ ಎಲ್ಲ ಹಂತದಲ್ಲಿಯೂ ಇದೊಂದು ಇಬ್ಬಗೆಯ ಸಂಸ್ಕೃತಿ ಎನ್ನುವುದರಲ್ಲಿ ಸಂಶಯವಿಲ್ಲ.

ಕಾಡಿನ ಸಂಸ್ಕೃತಿ ಜೊತೆಗೆ ಮಾನವ ನಾಗರಿಕತೆಯ ಹುಟ್ಟು ಮತ್ತು ವಿಕಾಸದೊಂದಿಗೆ ಮಾತೃ ಪ್ರಧಾನ ಕುಟುಂಬ ಹುಟ್ಟಕೊಂಡಿತು. ಮಹಿಳೆ ತನ್ನ ಸೃಷ್ಟಿ ಶಕ್ತಿ ಮತ್ತು ಪೊರೆಯುವ ಶಕ್ತಿಯಿಂದ ಮಕ್ಕಳಿಗೆ ಉತ್ತರದಾಯಿಯಾದಳು. ತಾಯಿಯಾಗಿ ಮಕ್ಕಳ ಪಾಲನೆ ಪೋಷಣೆ ನಿರ್ವಹಿಸತೊಡಗಿದ್ದರಿಂದ ಸುತ್ತಲಿನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸಹಜವಾಗಿ ಹಿಡಿತ ಸಾಧಿಸಿದಳು. ಜಗತ್ತಿನ ಮೊತ್ತಮೊದಲು ರೈತ ಪೀಳಿಗೆ ಮಹಿಳೆ ಎಂಬ ಅಗ್ಗಳಿಕೆಗೆ ಪಾತ್ರಳಾದಳು. ಮಾತ್ರವಲ್ಲ ಭೂಮಿಯ ಮೇಲೆ ಕಾಡು ಪ್ರಾಣಿಗಳಾದ ದನಕರು, ಹಸು, ಎಮ್ಮೆ, ಕೋಣ, ಕುರಿ, ಕೋಳಿ, ನಾಯಿ ಕತ್ತೆ ಮುಂತಾದ ಪ್ರಾಣಿಗಳ ಮೇಲೆ ಹಿಡಿತ ಸಾಧಿಸಿ ಅವನ್ನು ಕೃಷಿಗಾಗಿ ಮತ್ತು ಆಹಾರಕ್ಕಾಗಿ ಬಳಸಿಕೊಳ್ಳುವುದನ್ನು ಕುರಿತು ಕಾಡಿನ ಅಲೆಮಾರಿತನದ ಬದುಕಿಗೆ ಒಂದು ಸ್ಥಿರತೆಯನ್ನು ತರುವಲ್ಲಿ ಪ್ರಥಮದಲ್ಲಿ ಕೃಷಿಯನ್ನು ಕಲಿತುಕೊಂಡ ಮಹಿಳೆ. ಮನುಕುಲಕ್ಕೆ ಮೂಲ ಆಧಾರವಾದಳು. ಬೇಟೆಯಿಂದ – ಪಶುಪಾಲನೆ ಕೃಷಿ ಹೀಗೆ ಪ್ರಮುಖ ಪಾತ್ರವಹಿಸಿ ಜಗತ್ತಿನ ನಾಗರಿಕತೆಗೆ ಮಹಿಳೆ ಅತ್ಯಮೂಲ್ಯ ಕೊಡುಗೆ ನೀಡಿ ನಾಗರಿಕತೆಗೆ ನಾಂದಿ ಹಾಡಿದಳು. ಆದರೆ ಮಹಿಳೆಯರ ಈ ಮಹತ್ತರ ಕಾರ್ಯ ಸಾಧನೆ ದಾಖಲಿಸಲು ಪುರುಷನಿಗೆ ಪುರುಸೊತ್ತಿಲ್ಲ.

ಮಕ್ಕಳಿಗೆ ಜನ್ಮ ನೀಡುವುದು, ಪಾಲನೆ ಪೋಷಣೆ ಮಾಡುವುದುರ ಮಧ್ಯೆ, ಬೇಟೆಗೆ ಹೋಗುವ ಕಷ್ಟ ಕಳೆಯಲು ಪಶುಗಳನ್ನು ಆಹಾರಕ್ಕಾಗಿ ಬಳಸುವುದು ಮತ್ತು ಭೂಮಿಗೆ ಬೀಜ ಬಿತ್ತಿ ಆಹಾರ ಉತ್ಪಾದಿಸುವುದನ್ನು ಕರಗತ ಮಾಡಿಕೊಂಡ ಮಹಿಳೆ ಸಹಜವಾಗಿಯೇ ಕುಟುಂಬದಲ್ಲಿ ಪ್ರಾಧಾನ್ಯ ಪಡೆದಳು. ಹೀಗಾಗಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿತ್ತು ಎಂಬುದಕ್ಕೆ ನಾವು ಪೂಜೆ ಮಾಡುವ ಗ್ರಾಮದೇವತೆಗಳು, ಕುಲದೇವತೆಗಳೆ ಸಾಕ್ಷಿ.

ಆದರೆ ಅನೇಕ ಸಲ ಹೆಣ್ಣಿನ ಜವಬ್ದಾರಿಗಳು ಅವಳ ಪಾಲಿಗೆ ಒಂದು ರೀತಿಯಿಂದ ಉರುಳಾದಂತೆ ಕಾಣುತ್ತದೆ. ನಿಸರ್ಗದತ್ತ ಬಸಿರು, ಬಯಕೆ, ಹೆರಿಗೆ, ಮಕ್ಕಳ ಪಾಲನೆ – ಪೋಷಣೆಯ ಮತ್ತು ಮಾತೃತ್ವದ ಜವಾಬ್ದಾರಿಯಿಂದ ಹೊರಬರದ ವಾತ್ಸಲ್ಯಮಯಿ ಮುಗ್ಧ ಹೆಣ್ಣು ಅಧಿಕಾರವನ್ನು ಪುರುಷನಿಗೆ ಬಿಟ್ಟುಕೊಟ್ಟುದರ ಪರಿಣಾಮ ಪಿತೃ ಪ್ರಧಾನ ಕುಟುಂಬ ಕಾಲೂರಲು ತಳಪಾಯವಾಯಿತು.

ಜೊತೆಗೆ ಪುರುಷನ ಆಕ್ರಮಣಕಾಯಿ ಬುದ್ಧಿ ಮತ್ತು ದಮನಕಾಯಿ ದೃಷ್ಟಿಕೋನದಿಂದಾಗಿ ಪುರುಷಪ್ರಧಾನ ಕುಟುಂಬ ವ್ಯವಸ್ಥೆ ಸಾಮಾಜೀಕರಣಗೊಂಡು ಭದ್ರ ನೆಲೆ ಕಂಡುಕೊಳ್ಳಲು ಕಾರಣೀಭೂತವಾಯಿತು.

ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆ ನಾಲ್ಕು ಗೋಡೆಗಳ ಮಧ್ಯೆ ಮನೆಯ ಎಲ್ಲ ಜವಾಬ್ದಾರಿಯನ್ನು ಹೊರುವ ಅನಿವಾರ್ಯತೆ ಬಂದೊದಗಿತ್ತಲ್ಲದೆ, ಮಹಿಳೆಯ ಶೋಷಣೆ ಸಾಕಷ್ಟು ನಡೆಯಿತು. ಇಂದಿಗೂ ನಡೆಯುತ್ತಿದೆ. ಮಹಿಳೆ ಪುರುಷನ ಅಧೀನರು. ಅಡಿಯಾಳು ಎಂದು ರೂಪಿಸಿದ್ದು, ಮಾತ್ರವಲ್ಲ ಅವಳನ್ನು ಪರಾವಲಂಬಿಯಾಗಿ ಮಾಡಿದ್ದು ಅವಳ ಆತ್ಮವಿಶ್ವಾಸವನ್ನೇ ಅಳಿಸಿಹಾಕಿತು. ಪ್ರಭು – ಸೇವಕ ಸಂಬಂಧ ಮನೆಯ ಒಳಗಡೆಯೇ ದಟ್ಟವಾಗಿತ್ತು. ಮಹಿಳೆಗೆ ಆರ್ಥಿಕ ಹಕ್ಕುಗಳನ್ನು ನೀಡದೇ ಕೇವಲ ಗೃಹಕೃತ್ಯಗಳಿಗೆ ಆಕೆಯನ್ನು ಮೀಸಲಾಗಿರಿಸಿ ಸಾಂಸ್ಕೃತಿಕ ಆಚರಣೆ ಮತ್ತು ಧರ್ಮದ ಮೂಲಕ ಪುರುಷ ಮಹಿಳೆಯ ಮೇಲೆ ನಿಯಂತ್ರಣ ಸಾಧಿಸಿದ ಹೀಗಾಗಿ ಸ್ತ್ರೀ ಪರಾವಲಂಬಿಯಾಗಿ ಪುರುಷನ ಅಧೀನಕ್ಕೆ ಒಳಗಾದಳು ಮಾತ್ರವಲ್ಲ ಎಲ್ಲ ಸ್ವಾತಂತ್ರ‍್ಯದಿಂದ ವಂಚಿತಳಾಗಿ ಮೌನ ಗೌರಿಯಾಗಿಬಿಟ್ಟಳು.

ಅವಳನ್ನು ’ಮಾತೃದೇವೋಭವ’, ’ತಾಯಿ ದೇವರೆಂದು’, ’ ಗೃಹಿಣಿ ಗೃಹಮುಚ್ಯತೆ’, ಹೂ ಭೂಮಿತಾಯಿ, ಪುರುಷನ ಎಲ್ಲ ಬೆಳವಣಿಗೆಗೆ ಹಗಲಿರುಳು ಶ್ರಮಿಸುವ ತಾಳ್ಮೆ ಮೂರ್ತಿ, ಆದರ್ಶ ಸತಿ ಶಿರೋಮಣಿ ಹೀಗೆ ಏನೆಲ್ಲ ಹೇಳಿ ಅವಳಿಂದ ತ್ಯಾಗವನ್ನು ನಿರೀಕ್ಷಸುವುದು ಮಾತ್ರವಲ್ಲ, ಧೈರ್ಯದ ಹೆಜ್ಜೆ ಇಟ್ಟ ಹೆಣ್ಣನ್ನು ಲಜ್ಜೆಗೆಟ್ಟವಳು. ಚಾರಿಣಿ, ಕುಲಪಾತಕಿ, ಎಂದೆಲ್ಲಾ ಹೇಳಿ ತನ್ನ ಎಲ್ಲ ಪುರುಷಾರ್ಥ ಸಾಧನೆಗೆ ಮತ್ತು ಸ್ತ್ರೀಯನ್ನು ಪ್ರೇರಕ ಮತ್ತು ಸಾಧಕ ಶಕ್ತಿಯಾಗಿ ಬಳಕೆ ಮಾಡಿಕೊಂಡ ಪುರುಷ ತನ್ನ ಸಾಧನೆಗೆ ಸಹಕಾರಿಯಾದ ಹೆಣ್ಣನ್ನು ಅವಳ ರಕ್ಷಣೆಯ ಕಾರಣ ಮುಂದೆ ಮಾಡಿ ಹೆಚ್ಚಿನ ಕಾಳಜಿ ತೋರಿಸಲು ಅವಳನ್ನು ಪುರುಷ ವರ್ಗದಿಂದ ಪ್ರತ್ಯೇಕಿಸಿದ್ದು, ಮಾತ್ರವಲ್ಲ ಒಂದು ರೀತಿಯ ಪುಕ್ಕಲುತನವನ್ನು ಬೆಳೆಸಿ ನಿರ್ಜೀವ ಮಾಡಿದ ಪರಿಯನ್ನು ನೋಡಿದರೆ ಅವಳಿಗೆ ಧೈರ್ಯ ತುಂಬಲು ಶತ ಶತಮಾನಗಳೇ ಬೇಕಾದವು. ಹೀಗೆ ಬೇರೆ ಪುರುಷರಿಂದ ಬೇರ್ಪಡಿಸಿ ಒಬ್ಬ ಪುರುಷ ತನ್ನ ಅಧೀನದಲ್ಲಿ ಇಟ್ಟುಕೊಂಡು ಗಂಡ ಜಗಭಂಡನಾಗಿ ಅಟ್ಟಹಾಸದಿಂದ ಮೆರೆದು ಕುಣಿದು ಕುಪ್ಪಳಿಸಿದ. ಪಕ್ಕದ ಮನೆಯ ಪುರುಷರಿಂದ ಮಾತ್ರವಲ್ಲ ಮಹಿಳೆಯರಿಂದ ಕೂಡ ದೂರವಿಟ್ಟು ಅಧಿಕಾರ ವಾಣಿಯಿಂದ ಮೆರೆದ. ದಬ್ಬಾಳಿಕೆಗೆ ತತ್ತರಿಸಿದ ಯಾವುದೇ ವ್ಯಕ್ತಿಯ ಸೃಜನ ಶೀಲತೆ ನಾಯಕತ್ವದ ಗುಣ ಲಕ್ಷಣ, ತೀರ್ಮಾನಿಸುವ ಸಾಮರ್ಥ್ಯ ಧೈರ್ಯ ಎಲ್ಲವೂ ಹೇಳ ಹೆಸರಿಲ್ಲದಂತೆ ಉದುಗಿ ಹೋಗುತ್ತವೆ.

ಮಹಿಳೆಯನ್ನು ಪುರುಷ ತನಗೆ ಸರಿಸಾಮಾನ ವ್ಯಕ್ತಿಯೆಂದು ಭಾವಿಸದೇ ಆಕೆಯನ್ನು ಕುಟುಂಬದ ಒಳಗೂ ಹೊರಗೂ ನಿಕೃಷ್ಟ ರೀತಿಯಲ್ಲಿ ಕಂಡು ಅವಳ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಮೂಲಕ ಸ್ವಾತಂತ್ರ‍್ಯ ಹರಣ ಮಾಡಿ ವಿವಿಧ ರೀತಿಯ ಶೋಷಣೆಗೆ ಗುರಿಪಡಿಸಿ ಅವಳ ಶಕ್ತಿಯನ್ನು ಅದುಮಿಟ್ಟು ಅವಳ ಬೆಳವಣಿಗೆಯನ್ನು ದಮನಿಸುತ್ತ ಬಂದಿದ್ದಾನೆ. ಯಾವುದೇ ಪುರುಷ ಮಹಿಳೆಯ ಕುರಿತು ತೆಗೆದುಕೊಳ್ಳುವ ತೀರ್ಮಾನಗಳು ನೀಡುವ ಮಾರ್ಗದರ್ಶನಗಳು ವಾಸ್ತವದಲ್ಲಿ ಅವು ಮಹಿಳಾ ಪರವಾಗಿರುವುದು ಕಡಿಮೆ. ಇಲ್ಲಿಯವರೆಗೆ ನಮ್ಮ ಸಮಾಜ ನಡೆದುಕೊಂಡು ಬಂದ ರೀತಿ. ಇದು ಹೆಚ್ಚು ಕಡಿಮೆ ಜಗತ್ತಿನ ಎಲ್ಲ ಮಹಿಳೆಯರ ಸ್ಥಿತಿಯಾಗಿದೆ. ಪರಂಪರಾನುಗತವಾಗಿ ಇಲ್ಲಿಯವರೆಗೆ ಬೆಳೆದು ಬಂದ ಎಲ್ಲ ದೇಶದ ಎಲ್ಲ ಸಮಾಜಗಳಲ್ಲಿ ಮಹಿಳೆಗೆ ನಿಸರ್ಗದತ್ತವಾದ ಮಾನವ ಹಕ್ಕುಗಳನ್ನು ಕಿತ್ತುಕೊಂಡು ದೈನ್ಯತೆಗೆ ದೂಡಿದ್ದು ಶೋಚನೀಯ ಸಂಗತಿ.

ಹೆಣ್ಣಿನ ಕತೃತ್ವ ಶಕ್ತಿ., ಬುದ್ಧಿವಂತಿಕೆ ಅವಲ ಸೃಜನ ಶೀಲತೆಯ ಬಗ್ಗೆ ಪೂರ್ವಾಗ್ರಹ ಪೀಡಿತ ವಿಚಾರಗಳಿಂದ ಅವಳ ಎಲ್ಲ ಹಕ್ಕುಗಳನ್ನು ದಮನಿಸಲಾಯಿತು. ಈಗ ತನ್ನ ಹಕ್ಕುಗಳಿಗಾಗಿ ಮಹಿಳೆ ಹೋರಾಟ ಪ್ರಾರಂಭಿಸಿದ್ದಾಳೆ. ಈ ಹೋರಾಟ ನಿರಂತರವಾಗಿ ನಡೆದರೆ ಮಾತ್ರ ಮನುಕುಲದ ಏಳಿಗೆಯಾಗುವುದು ಸಾಧ್ಯ.

ಒಟ್ಟಿನಲ್ಲಿ  ಎಲ್ಲ ದೇಶಗಳಲ್ಲಿ ಎಲ್ಲ ವರ್ಗದ ಸಮಾಜ ಮತ್ತು ಕುಟುಂಬದಲ್ಲಿ ಸ್ತ್ರೀಯ ಸ್ಥಾನಮಾನಗಳು ಅಷ್ಟೇನೂ ಆಶಾದಾಯಕವಾಗಿಲ್ಲ. ಪ್ರಸ್ತುತ ರಂಗಾರಿ ಅಥವಾ ಭಾವುಸಾರ ಕ್ಷತ್ರಿಯರೆಂದು ಗುರುತಿಸಲ್ಪಡುವ ಈ ಜನಂಗದ ಪುರುಷರೇ ಕಡು ಬಡತನದಿ ಬೆಂದು ಶಿಕ್ಷಣದಿಂದ ವಂಚಿತರಾಗಿರುವಾಗ ಇನ್ನು ಮಹಿಳೆ ಯಾವ ಲೆಕ್ಕ? ಪ್ರಸ್ತುತ ಸಮಾಜದ ಅವಿಭಕ್ತ ಕುಟುಂಬದಲ್ಲಿ ಸ್ತ್ರೀ ಮನೆಯ ಒಳಗಡೆ ಗೃಹಕೃತ್ಯ ಮಾಡುತ್ತ ಹೊಲಿಗೆ ಕಾರ್ಯದಲ್ಲಿ ತೊಡಗಿಸಿಕೊಂಡು ಕುಟುಂಬದ ಆರ್ಥಿಕ ಸದೃಢತೆ ಮತ್ತು ಜೀವನ ನಿರ್ವಹಣೆಗೆ ಸಹಕಾರಿಯಾಗಿದ್ದಾಳೆ. ಈ ಜನಾಂಗದ ಹೆಣ್ಣುಮಕ್ಕಳು ಸುಂದರಿಯರಿರುವುದರಿಂದ ಅವರನ್ನು ಮನೆಯ ಹೊರಗೆ ಕಳುಹಿಸುವುದು ಕಡಿಮೆ. ಹೀಗಾಗಿ ಶಿಕ್ಷಣದಿಂದ ವಂಚಿತಳಾದಳು. ಆದರೆ ತನ್ನ ವೃತ್ತಿ ಕೌಶಲ್ಯದಿಂದ ದರ್ಜಿ ಕಾರ್ಯದಲ್ಲಿ ತೊಡಗಿ ಕುಟುಂಬದಲ್ಲಿ ಗೌಣತೆಯಲ್ಲಿಯೇ ಕೊಂಚ ಸ್ಥಾನವನ್ನು ಹೊಂದಿದ್ದಾಳೆ. ವೃತ್ತಿ ಕೌಶಲ್ಯ ಪರಂಪರವಾಗಿ ಬಂದಿರುವಂಥದ್ದು ಹೆಣ್ಣು ಮಗುವನ್ನು ಲಕ್ಷ್ಮೀ ಎಂದು ಪಾಲಿಸುತ್ತಾರೆ.

ಮನೆಯಲ್ಲಿದ್ದುಕೊಂಡು ಮಹಿಳೆ ಮಕ್ಕಳ ಕುಂಚಿಗೆ, ಕುಲಾವಿ, ಟೋಪಿ. ಅಮಡರವೇರ, ಜಬಲಾ ಅಂಗಿ ಹೊಲಿದು ಕೊಟ್ಟಾಗ ತಂದೆ ಅಥವಾ ಗಂಡನಾದವನು ಊರು ಸಂತೆಗೆ ಹೋಗಿ ಮಾರಿಕೊಂಡು ಬರುತ್ತಾರೆ. ಆರ್ಥಿಕ ಬಲಕ್ಕೆ ಮಹಿಳೆಯರ ಕೊಡುಗೆ ಇದ್ದರೂ ಈ ಜನಾಂಗದಲ್ಲಿ ಮಹಿಳೆಗೆ ಮಹತ್ವದ ಸ್ಥಾನ-ಮಾನ ನೀಡಿರುವುದು ತೀರ ಕಡಿಮೆ. ಆದರೆ ಕುಡುಕ ಗಂಡಂದಿರು ಹೊಡಿಬಡಿಮಾಡಿ ಅವಳು ಕಷ್ಟಪಟ್ಟು ದುಡಿದುದ್ದನ್ನು ಕಸಿದುಕೊಂಡು ಹೋಗಿ ಕುಡಿದು ತಮ್ಮದು ಮಾತ್ರವಲ್ಲ ಹೆಣ್ಣು ಮಕ್ಕಳ ಗೌರವವನ್ನು ಹಾಳು ಮಾಡಿ ಕುಟುಂಬದಲ್ಲಿ ಸಮಾಜದಲ್ಲಿ ಅವರ ಸ್ಥಾನಮಾನ ಕುಸಿಯುವುದಕ್ಕೆ ಕಾರಣರಾಗಿರುವ ಪುರುಷರು ಕಡಿಮೆಯೇನಿಲ್ಲ.

ಈ ಜನಾಂಗದಲ್ಲಿ ಹೆಚ್ಚು ಪುರುಷರು ಕುಡಿತಕ್ಕೆ ಬಲಿಯಾದುದರಿಂದ ಹೆಣ್ಣು ಮಕ್ಕಳ ಮೇಲೆ ಕೌಟುಂಬಿಕ ಕಿರುಕುಳ ಹೆಚ್ಚಾಗಿದೆ. ಮಹಿಳೆಯರ ಸ್ಥಾನ-ಮಾನ ಸಮಾಧಾನಕರವಾಗಿಲ್ಲ. ಅವರಿಗೆ ಶಿಕ್ಷಣವೇ ಇಲ್ಲ, ವಂಶಪರಂಪರೆವಾಗಿ ಬಂದ ಹೊಲಿಗೆ ಕಲೆ ಮತ್ತು ಚೆನ್ನಾಗಿ ಬಲ್ಲವರಾಗಿದ್ದಾರೆ. ಹೆಚ್ಚೆಂದರೆ ಎಸ್.ಎಸ್.ಎಲ್.ಸಿ. ವರೆಗೆ ಮಾತ್ರ ಓದಿದ್ದಾರೆ. ಅಜ್ಞಾನ ಇರುವಲ್ಲಿ ಅಂಧಕಾರ. ಅಂಧಕಾರ ಇರುವಲ್ಲಿ ಮೌಢ್ಯತೆಗಳು ಮನೆಮಾಡಿ ಕೊಂಡಿರುವುದರಿಂದ ಹೆಣ್ಣುಮಕ್ಕಳು ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಎಲ್ಲ ರೀತಿಯಿಂದಲೂ ಹಿಂದೆ ಉಳಿದಿದ್ದಾರೆ.

ಶಿಕ್ಷಣ :

ಈ ರಂಗಾರಿ ಜನರು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿಲ್ಲ.  ಸ್ತ್ರೀ ಪುರುಷರಾದಿಯಾಗಿ ಎಸ್.ಎಸ್.ಎಲ್.ಸಿ. ವರೆಗೆ ಓದಿದ್ದಾರೆ. ಕೆಲವು ಮನೆಯಲ್ಲಿ ಅನಕ್ಷರಸ್ಥ ಮಹಿಳೆಯರಿದ್ದಾರೆ. ಇತ್ತೀಚಿನ ೧೦ ವರ್ಷಗಳಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿದ್ದಾರೆ. ೯೦% ಮಹಿಳೆಯರು ಮನೆಗೆಲಸವನ್ನು ಮಾಡಿಕೊಂಡು ಹೊಲಿಗೆ ಹೊಲಿಯುವ ಕೆಲಸದಲ್ಲೂ ನಿರತರಾಗಿದ್ದಾರೆ.

ಗುಲಬರ್ಗಾ  ಜಿಲ್ಲೆಯಲ್ಲಿ ಶಿಕ್ಷಣ ತುಂಬ ಕಡಿಮೆ. ಬೆರಳೆಣಿಕೆಯಷ್ಟು ಮಹಿಳೆಯರು ಸುಶಿಕ್ಷಿತರಾಗಿದ್ದಾರೆ. ತೀರಾ ಕಡಿಮೆ ಸಂಖ್ಯೆಯಲ್ಲಿ ವೃತ್ತಿಪರ ಕೋರ್ಸುಗಳನ್ನು ಮಾಡಿದ್ದಾರೆ.

ಡಾಕ್ಟರ್ ೨-೩,, ವಕೀಲರು ೧, ಶಿಕ್ಷಕಿಯರು ೧೫-೨೦, (ಪ್ರಾಥಮಿಕ ಶಾಲಾ ಶಿಕ್ಷಕಿಯರು) ಹೈಸ್ಕೂಲ ಶಿಕ್ಷಕಿಯರು ೩,-೪ ಇತ್ತೀಚೆಗೆ ವೃತ್ತಿ ಕೋರ್ಸುಗಳಿಗೆ ವಿಜಾಪೂರ ಜಿಲ್ಲೆಯಲ್ಲಿ ಕೊಂಚ ಶಿಕ್ಷಣ ಮಟ್ಟ ಹೆಚ್ಚಾಗಿದೆ.

ಡಾಕ್ಟರ್ ೫೦೧೯
ಶಿಕ್ಷಕಿಯರು ೫೦-೫೫
ಹೈಸ್ಕೂಲ ಶಿಕ್ಷಕರು – ೨೦
ಇಂಜಿನಿಯರ್ ೧೫-೨೦
ಪ್ರಾಧ್ಯಾಪಕಿಯರು ೨

ಹುಬ್ಬಳ್ಳಿ, ಧಾರವಾಡ
ಡಾಕ್ಟರ್ ೨೦
ಶಿಕ್ಷಕಿಯರು ೭೫
ಹೈಸ್ಕೂಲ ಶಿಕ್ಷಕರು ೩೫
ಇಂಜಿನಿಯರ್ ೨೫-೩೫
ಪ್ರಾಧ್ಯಾಪಕಿಯರು ೫

ದಾವಣಗೆರೆ
ಡಾಕ್ಟರ್ ೧೫
ಶಿಕ್ಷಕಿಯರು ೩೫
ಹೈಸ್ಕೂಲ ಶಿಕ್ಷಕರು  ೨೫
ಇಂಜಿನಿಯರ್ ೧೫
ಪ್ರಾಧ್ಯಾಪಕಿಯರು ೬

ಬೆಳಗಾಂವ
ಡಾಕ್ಟರ್ ೧೫
ಶಿಕ್ಷಕಿಯರು ೪೦
ಹೈಸ್ಕೂಲ ಶಿಕ್ಷಕರು ೩೦
ಪ್ರಾಧ್ಯಾಪಕಿಯರು ೯

ಆರ್ಥಿಕ ಸ್ಥಿತಿ ಗತಿ :

ಬಡತನ ಹೆಚ್ಚಾಗಿದೆ. ೫೦% ಜನ ಬಡವರಿದ್ದು, ಬಟ್ಟೆ ಅಂಗಡಿಗಳಲ್ಲಿ ನೌಕರಿ ಮಾಡುತ್ತಾರೆ.  ೩೦% ಜನ ಸಂತೆಗಳಿಗೆ ಹೋಗಿ ಬಟ್ಟೆ, ರೆಡಿಮೇಡ್ ಡ್ರೆಸ್ ಗಳನ್ನು ಮಾರಾಟ ಮಾಡುತ್ತಾರೆ. ಕೆಲವರು ಸಂತೆಯಲ್ಲಿ ಬಜಾರದಲ್ಲಿ ಮನೆಯ ಮುಂದೆ ಯಂತ್ರ ಇಟ್ಟುಕೊಂಡು ದರ್ಜಿ ಕೆಲಸ ಮಾಡುತ್ತಾರೆ. ೧೫% ಜನ ಜವಳಿ ವ್ಯಾಪಾರ ಮಾಡುತ್ತಾರೆ. ೪.೫ % ಜನ ಮಾತ್ರ ರಂಗು ಹಾಕುತ್ತಾರೆ. ಜವಳಿ ವ್ಯಾಪಾರಸ್ಥರಲ್ಲಿ ಕೇವಲ ೫% ಜನ ಮಾತ್ರ ಹೆಚ್ಚು ಶ್ರೀಮಂತರಾಗಿದ್ದಾರೆ. ೦.೫% ಜನ ಸರಕಾರಿ ನೌಕರಿ ಮಾಡುತ್ತಾರೆ. ೭೫% ಜನ ಸಿಂಪಿಗರಾಗಿದ್ದಾರೆ.

ಮಹಿಳೆಯರು ೦.೦೧% ಮಾತ್ರ ಸರಕಾರಿ ನೌಕರಿಯಲ್ಲಿದ್ದಾರೆ. ಮಿಕ್ಕವರು ಸಿಂಪಿ ಕೆಲಸವನ್ನು ಮಾಡುತ್ತಾರೆ. ಮದುವೆಯಲ್ಲಿ ತವರು ಮನೆಯವರು ಮಗಳಿಗೆ ಏನೂ ಕೊಡದೇ ಇದ್ದರೂ ಒಂದು ಹೊಲಿಗೆ ಯಂತ್ರವನ್ನು ಕೊಟ್ಟು ಕಳಿಸುವುದು ವಾಡಿಕೆ. ಪುರುಷರು ಬಂದ ಸ್ವಲ್ಪ ಹಣದಲ್ಲಿಯೇ ಕುಡಿದು ಖರ್ಚು ಮಾಡಿ ಆರ್ಥಿಕ ಮುಗ್ಗಟ್ಟಿಗೆ ಕಾರಣರಾಗಿದ್ದಾರೆ. ಮಹಿಳೆ ದುಡಿದುದ್ದನ್ನು ಕೂಡ ಕಿತ್ತುಕೊಂಡು ಹಾಳು ಮಾಡುವವರೆ ಹೆಚ್ಚಾಗಿದ್ದಾರೆ. ಕೆಲವೆ ಕೆಲವರು ತುಂಬ ದೊಡ್ಡ ಮನೆ ಕಾರು ಬಂಗಲೆ ಹೊಂದಿದ್ದಾರೆ. ಬಹಳಷ್ಟು ಜನ ಚಿಕ್ಕ ಸ್ವಂತ ಮತ್ತು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಸಾಧಾರಣ ಜೀವನ ಮಟ್ಟ ಹೊಂದಿದ್ದಾರೆ. ಆದರೆ ಗುಡಿಸಲುಗಳಲ್ಲಿ ಯಾರೂ ವಾಸವಾಗಿರುವುದು ಕಂಡು ಬರುವುದಿಲ್ಲ. ಭಿಕ್ಷಾಟನೆ ಇಲ್ಲದಿರುವುದು ಕಂಡು ಬರುತ್ತದೆ.

ರಾಜಕೀಯ :

೨೦ ಲಕ್ಷದಿಂದ ೩೫ ಲಕ್ಷದವರೆಗೆ ಜನ ಸಂಖ್ಯೆಯನ್ನು ಹೊಂದಿದ ಈ ಸಮಾಜದಿಂದ ಇದುವರೆಗೆ ಕೇವಲ ಒಬ್ಬರು ಎಂ.ಎಲ್.ಎ. ಆಗಿದ್ದು ಕಂಡು ಬರುತ್ತದೆ. ಈ ಜನ ಮೂಲತಃ ಬಡತನ, ಇನ್ನೂ ಜಾಗೃತರಾಗಿಲ್ಲದಿರುವುದು, ಜೊತೆಗೆ ಗೆಲ್ಲುವಷ್ಟು ಜನಸಂಖ್ಯೆ ಒಂದೆಡೆ ಇಲ್ಲದಿರುವುದಲ್ಲದೆ, ಅಸಂಘಟಿತರಾಗಿರುವುದು ರಾಜಕೀಯ ಕ್ಷೇತ್ರದಲ್ಲಿ ಪುರುಷರೇ ಹಿಂದೆ ಬಿದ್ದಿದ್ದಾರೆ. ಮಹಿಳೆಯರ ಪ್ರವೇಶ ಅಷ್ಟಾಗಿ ಇನ್ನೂ ಆಗಿಲ್ಲವೆಂದೇ ಹೇಳಬೇಕು.

ಈ ಜನಾಂಗದಿಂದ ಇಲ್ಲಿಯವರೆಗೆ ೧-೨ ಜನ ಮಾತ್ರ ರಾಜಕೀಯದಲ್ಲಿ ಮಿಂಚಿದ್ದಾರೆ. ಉದಾ : ಗುಲಬರ್ಗಾದಲ್ಲಿ ಶ್ರೀ ತೇಲ್ಕರ್ ಎಂ.ಎಲ್.ಎ. ಆದರೂ ವಿಜಾಪೂರದಲ್ಲಿ ಶ್ರೀ ಮಹೀಂದ್ರಕರ ಇವರು ಆರ್.ಎಸ್.ಎಸ್.ನ ಸ್ಥಾಪಕರಾಗಿ ದುಡಿದು ಬಿಜೆಪಿ ಪಾರ್ಟಿ ಕಟ್ಟಿದ್ದಾರೆ. ಕಿಂಗ್ ಮೇಕರ್ ಆಗಿದ್ದಾರೆ ಹೊರತು ಅಧಿಕಾರ ಪಡೆದುಕೊಂಡಿಲ್ಲ.

ಪುರುಷರೇ ಈ ಕ್ಷೇತ್ರದಲ್ಲಿ ಹಿಂದೆ ಬಿದ್ದಿರುವಾಗ ಸ್ತ್ರೀಯರು ಯಾವ ಲೆಕ್ಕ, ಇದುವರೆಗೆ ಒಬ್ಬ ಮಹಿಳೆಯೂ ಎಂ.ಎಲ್.ಎ. ಎಂ.ಎಲ್.ಸಿ. ಎಂ.ಪಿಗಳಾಗಿಲ್ಲ. ಗುಲಬರ್ಗಾದಲ್ಲಿಯಂತೂ ರಾಜಕೀಯದ ಹತ್ತಿರ ಸಹ ಸುಳಿದಿಲ್ಲ. ವಿಜಾಪೂರದಲ್ಲಿ ಶ್ರೀಮತಿ ಸುನಂದಾಬಾಯಿ ಮಹೀಂದ್ರಕರ ಕ್ರಿಯಾಶೀಲ ದಿಟ್ಟ ಮಹಿಳೆಯಾಗಿದ್ದಾರೆ. ಜನಸಂಘದಲ್ಲಿ ಜಿಲ್ಲಾಧ್ಯಕ್ಷರಾಗಿ, ಪ್ರಾಂತೀಯ ಪದಾಧಿಕಾರಿಯಾಗಿ ರಾಷ್ಟ್ರೀಯ ಪದಾಧಿಕಾರಿಯಾಗಿ ಜನಸಂಘದಲ್ಲಿ ಜಿಲ್ಲಾಧ್ಯಕ್ಷರಾಗಿ, ಪ್ರಾಂತೀಯ ಪದಾಧಿಕಾರಿಯಾಗಿ ರಾಷ್ಟ್ರೀಯ ಪದಾಧಿಕಾರಿಯಾಗಿ ೧೯೮೦ ರಲ್ಲಿ ಭಾರತೀಯ ಜನತಾಪಾರ್ಟಿಯಲ್ಲಿ  ಪ್ರಾಂತೀಯ ಉಪಾಧ್ಯಕ್ಷರಾಗಿ ಅಟಲ ಬಿಹಾರಿ ವಾಜಪೇಯಿಯವರೊಂದಿಗೆ ಎರಡು ಬಾರಿ ಪ್ರಾಂತೀಯ ಪ್ರವಾಸ ಮಾಡಿದ್ದಾರೆ. ಲಾಲಕೃಷ್ಣ ಆದವಾನಿಯವರ ಜೊತೆ ಸಂಘಟನೆ, ಪಾರ್ಟಿ ಪ್ರಚಾರ ಕೈಕೊಂಡ ಏಕೈಕ ಮಹಿಳೆ ೧೯೯೦-೯೫ರ ವರೆಗೆ ವಿಜಾಪೂರ ನಗರ ಸಭೆಯಲ್ಲಿ ಬಿಜೆಪಿಯ ಪ್ರಥಮ ಅಭ್ಯರ್ಥಿಯಾಗಿ ಆಯ್ಕೆಯಾದರು. ಈಗ ಬಿಜೆಪಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಮತಿ ಯಶೋದಾ ಬಾಯಿ ಗುಜ್ಜರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಗುಲಬರ್ಗಾದ ರಮೇಶ್ ನವಲೆ ಶಿಕ್ಷಣ ಸಂಸ್ಥೆ ಕಟ್ಟಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.

ಮಹಿಳಾಪುರ ಸಾಮಾಜಿಕ ಕಳಕಳಿ :

ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಸಮಾಜದ ಮಹಿಳಾ ಪರಿಷತ್ ಅಧ್ಯಕ್ಷರಾಗಿ ಸುನಂದಾಬಾಯಿ ಮಹೀಂದ್ರಕರ ೫ ವರ್ಷ ಕಾರ್ಯ ನಿರ್ವಹಿಸಿದ್ದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ, ತಮಿಳುನಾಡು, ಪ್ರಾಂತಗಳಲ್ಲಿ ಮಹಿಳೆಯರ ಸಂಘಟನೆ, ಮಹಿಳಾ ಮಂಡಲಗಳ ಸ್ಥಾಪನೆ, ಮಹಿಳ ಜಾಗೃತಿಗಾಗಿ ಸತತ ದುಡಿಯುತ್ತಿದ್ದಾರೆ. ಹಿಂಗುಲಾಂಬಿಕಾ ಗೃಹ ನಿರ್ಮಾಣ ಸೊಸೈಟಿಯ ಅಧ್ಯಕ್ಷರಾಗಿ ಭಾವುಸಾರ ಕ್ಷತ್ರಿಯ ಕೋ ಆಪರೇಟಿವ ಸಂಸ್ಥೆಯ ಡೈರೆಕ್ಟರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರ್ಶ ಮಹಿಳಾ ಮಂಡಳಿ ಮತ್ತು ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾಗಿ, ಮಹಿಳೆಯರ ಶೋಷಣೆ, ಅನ್ಯಾಯದ ವಿರುದ್ಧ ಹೋರಾಡುತ್ತ ಬಂದಿದ್ದಾರೆ.