ಕಾಡಿನಲ್ಲಿ ಕಣ್ಣುಬಿಟ್ಟ ನಮ್ಮ ಸಂಸ್ಕೃತಿ ಸಂಕೀರ್ಣವಾದುದು. ನಾಡು ಕಟ್ಟಿದ ಅಸಂಖ್ಯಾತ ಜನರ ಬದುಕಿನ ಅಗತ್ಯಗಳ ಪೂರೈಕೆಗಾಗಿ ಪ್ರಯತ್ನಿಸಿದ ಮಾನವ, ಕೆಲಸವನ್ನು ಅವನೇ ಹುಡುಕಿಕೊಳ್ಳುತ್ತಾನೆ. ಇನ್ನೂ ಕೆಲವು ಸಲ ಪ್ರಕೃತಿ ಅವನಿಗೆ ಅನುಗ್ರಹಿಸುತ್ತದೆ. ಉತ್ತಮ ಜೀವನಮಟ್ಟ ತಲುಪುವ ಸಫಲತೆಯಲ್ಲಿ ಶಿಲಾಯುಗದಿಂದ ಕಲಿಯುಗದ ಇಂದಿನವರೆಗೆ ಅನೇಕ ಆಯಾಮಗಳನ್ನು ಪಡೆದುಕೊಳ್ಳುತ್ತ ವಿವಿಧ ಸಾಂಘಿಕ ಸಮೂಹಗಳ ಜೀವನ ಕ್ರಮ, ರೀತಿ-ನೀತಿಗಳು, ನಂಬಿಕೆ ಆಚರಣೆಗಳು, ನೈತಿಕ ಮೌಲ್ಯಗಳು, ಧರ್ಮ-ದೇವರು, ಬದುಕಿನ ಆದರ್ಶ ಮತ್ತು ಬದ್ಧತೆಗಳು ಸಾರ್ವತ್ರಿಕ ಮುದ್ರೆಯೊಂದಿಗೆ ಸಂಸ್ಕೃತಿಯ ಮಡಿಲು ತುಂಬುತ್ತ, ಶಾಶ್ವತ ಮೌಲ್ಯಗಳಾಗಿ ಜೀವನ ಕ್ರಮದ ಮೈಲುಗಲ್ಲುಗಳಾಗಿ ಮಾನವನ ಬಾಳಿಗೆ ದಾರಿದೀಪವಾಗಿ, ತಲೆಮಾರಿನಿಂದ ತಲೆಮಾರಿಗೆ ಸಾಗುತ್ತ ಬಂದು, ಸಂಸ್ಕೃತಿಯಾಗಿ ಸಾಕಾರಗೊಳ್ಳುತ್ತದೆ. ಸಂಸ್ಕೃತಿ ಎಂಬುದು ಕೇವಲ ಸಮಾಜದ ಒಪ್ಪಿತ ಮೌಲ್ಯವಾಗಿರದೆ, ಅನೇಕರ ವ್ಯಕ್ತಿಗತ ಪರಿಪೂರ್ಣತೆಯ ಒಂದು ಸಂಕೇತ ಕೂಡ ಆಗಿರುತ್ತದೆ. ಚಲನ ಶೀಲ ಗುಣವುಳ್ಳ ಸಂಸ್ಕೃತಿ ನಿಂತ ನೀರಾಗದೆ ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತ ಹೊಸದನ್ನು ಸ್ವೀಕರಿಸುತ್ತ, ಹಳೆಯ ಕೆಲಸವನ್ನು ಕೈ ಬಿಡುತ್ತ, ಗಂಭೀರವಾದ ನದಿಯಂತೆ ಸದಾ ಪ್ರವಹಿಸುತ್ತಲೇ ಇರುತ್ತದೆ.

ನಮ್ಮ ಭಾರತೀಯ ಸಂಸ್ಕೃತಿ ಯುಗ-ಯುಗಗಳಿಂದ ಹಲವಾರು ಶಿಷ್ಟ ಸಮುದಾಯಗಳ ಸಾಮೂಹಿಕ ಕೊಡುಗೆಯಾಗಿದ್ದು “ಅನೇಕ ಬಣ್ಣ ಬಣ್ಣದ ಪಗಡಿಗಳ ತೇಪೆ ಹೆಚ್ಚಿ ಏಕತೆಯ ದಾರದಿಂದ ಹೊಲಿದು ಸುಂದರಗೊಳಿಸಿದ ನಾಣ್ಯಮಯ ಕೌದಿ ಇದ್ದಂತೆ’ ಅನೇಕ ಪರಕೀಯರು ಇದರ ಬೆಚ್ಚನೆಯ ಹೊದಿಕೆಯಲ್ಲಿ ತಮ್ಮ ತಮ್ಮ ಧರ್ಮದ ತತ್ತಿಗಳನ್ನಿಟ್ಟು ಸುಖಪಟ್ಟು ಸಿಕ್ಕಿದ್ದನ್ನು ದೋಚುತ್ತ ಅಟ್ಟಹಾಸದಿಂದ ಮೆರೆದದ್ದು ಮಾತ್ರವಲ್ಲ. ಇಂದಿನವರೆಗೂ ನಮ್ಮ ಸಂಸ್ಕೃತಿಯ ಮೇಲೆ ನಿರಂತರ ದಾಳಿ ಮಾಡುತ್ತಲೇ ಇವೆ. ಆದರೂ ಭಾರತೀಯ ಸಂಸ್ಕೃತಿ ತನ್ನತನವನ್ನು ಉಳಿಸಿಕೊಳ್ಳುತ್ತ ಕೊಡುಕೊಳ್ಳುವಿಕೆಯನ್ನು ಮುಂದುವರೆಸಿಕೊಂಡು ಬರುತ್ತಿದೆ.

ಅಂದು ನಾಡುಕಟ್ಟಿ ಮೆರೆದ ಆರ್ಯ ವೈದಿಕ ಧರ್ಮ, ಸ್ವಾಮಿ -ಸೇವಕ, ಶ್ರೇಷ್ಠ-ಕನಿಷ್ಠ ಸಂಸ್ಕೃತಿಗೆ ಹುಟ್ಟು ಹಾಕಿತ್ತು. ಸಾಮಾಜಿಕ ರಚನೆಯನ್ನು ತೋರಿಸುವ ವೃತ್ತಿ ವ್ಯವಸ್ಥೆಗೆ ಜಾತಿ ಸೂತಕ ತಗುಲಿಸಿ ಮನುಷ್ಯ ಮನುಷ್ಯರ ಮಧ್ಯೆ ಜಾತಿಯ ಗೋಡೆಗಳನ್ನು ನಿರ್ಮಿಸಿ ಒಟ್ಟು ಸಮಾಜವನ್ನು ಸಣ್ಣ ಸಣ್ಣ ಸಮುದಾಯಗಳಾಗಿ ಮಾಡಿ ಮಾನವೀಯತೆಯನ್ನು ಗಾಳಿಗೆ ತೂರಿ ಅನುಕೂಲ ಸಿಂಧು ಸಮಾಜವನ್ನು ನಿರ್ಮಿಸಿದ ಆರ್ಯರ ಒಡೆದು ಆಳುವ ನೀತಿ ಬ್ರಿಟಿಷರನ್ನು ಮೀರಿಸಿದ್ದು ಭಾರತೀಯ ವೈದಿಕತೆಯಲ್ಲಿ ಯುಗಾಂತರಗಳಿಂದ ರಕ್ತಗತವಾಗಿರುವುದು ಇಂದಿಗೂ ಕಂಡು ಬರುತ್ತದೆ. ಕಾಯಕವೇ ಕೈಲಾಸವೆಂದು ನಂಬಿಸಿ ಮುಗ್ಧ ಶ್ರಮ ಜೀವಿಗಳನ್ನು ಕಡೆಗಣಿಸಿ ಅವರನ್ನು ಸಂಸ್ಕೃತಿಯ ಮುಖ್ಯವಾಹಿನಿಯಿಂದ ದೂರ ಇರಿಸುವ ಹುನ್ನಾರ ಸಾಕಷ್ಟು ನಡೆಯಿತು. ಬಡವನ ಶ್ರಮದ ಮೇಲೆ ಸೌಧಗಳ ಕಟ್ಟಿರುವ ಹಪಾಹಪಿಗಳಿಂದ ದುಡಿಯುವ ಕೈಗಳಿಗೆ ಅನ್ನ ಸಿಕ್ಕದೆ ನಲುಗಿದ ಶ್ರಮ ಸಂಸ್ಕೃತಿ ಇಂದಿಗೂ ನಿಚ್ಚಳವಾಗಿ ಜೀವಂತವಾಗಿದೆ. ಅನೇಕ ಪಾಶ್ಚಾತ್ಯ ಪ್ರವಾಸಿಗರು ತಮತಮಗೆ ತಿಳಿದಂತೆ ಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಪ್ರತಿಭಾವಂತ ಭಾರತೀಯ ಸಮೂಹವನ್ನು ಜಾತಿ ಪದ್ಧತಿಯೇ ಆ ನೆಲದ ಅದ್ಭುತ ಸಾಂಸ್ಕೃತಿಕ ಸಾಧನೆ’ ಎಂದು ವೈಭವೀಕರಿಸಿದ್ದು ಖೇದದ ಸಂಗತಿ. ಈ ಎಲ್ಲ ಆವಾಂತರಗಳ ಮಧ್ಯೆ ಕರ್ನಾಟಕ ಅನೇಕತೆಯಲ್ಲಿ ಏಕತೆಯನ್ನು ಅಸಮಾನತೆಯಲ್ಲಿ ಸಮಾನತೆಯನ್ನು ಅನ್ಯ ಧರ್ಮ ಸಹಿಷ್ಣುತೆಯನ್ನೇ ಜೀವನದ ಉನ್ನತ ಮೌಲ್ಯವೆಂದು ಬಗೆದು, ಅನುಸರಿಸುವಲ್ಲಿ ಜಗತ್ತಿಗೆ ಮಾದರಿಯಾಗಿದೆ.

ಕಾಲಕಾಲಕ್ಕೆ ಅನೇಕ ಧಾರ್ಮಿಕ, ಸಾಮಾಜಿಕ, ಭಾಷಿಕ, ಸಾಹಿತ್ಯಿಕ ಕ್ರಾಂತಿಗಳಾಗಿ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಿದ ಸಂಸ್ಕೃತಿ ಕನ್ನಡಿಗರದ್ದು. ಈ ಹೆಮ್ಮೆಯ ಬೀಗುವಿಕೆಯ ಮಧ್ಯೆ ಕೆಲವು ನೋವಿನ ಸಂಗತಿಗಳೂ ಇಲ್ಲದಿಲ್ಲ.

ಸಂಸ್ಕೃತಿ ನಿರ್ಮಾಣದಲ್ಲಿ ಮಾನವನ ಪಾತ್ರ ಬಹುದೊಡ್ಡದು ಎಂಬುದು ಸರ್ವವಿದಿತ. ’ಮನುಷ್ಯನ ಶ್ರಮ ಎಷ್ಟೆಷ್ಟು ಬಳಕೆಯಾಗುತ್ತದೆಯೋ ಅಷ್ಟಷ್ಟು ಸಂಸ್ಕೃತಿಯು ವಿಕಾಶವಾಗುತ್ತದೆ’ ಎಂದ ಸಮಾಜ ಶಾಸ್ತ್ರಜ್ಞ ವೈಲ್ಡ್ ಮಾತು ಸತ್ಯ. ಅಂದಿನಿಂದ ಇಂದಿನವರೆಗೆ ಶ್ರಮ ಜೀವಿಗಳು ಸಂಸ್ಕೃತಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಎಲ್ಲ ರೀತಿಯಿಂದ ಕಡೆಗಣಿಸಲ್ಪಟ್ಟು ಹಿಂದುಳಿದವರು ಎಂಬ ಹಣೆಪಟ್ಟಿಯನ್ನು ಕೂಡ ಹೊತ್ತಿದ್ದಾರೆ ಮಾತ್ರವಲ್ಲ ಈ ವೃತ್ತಿ ಕಾಯಕಗಳೇ ಅನೇಕ ಜಾತಿಗಳಾಗಿ ಪರಿಭಾವಿಸಲ್ಪಟ್ಟು ಸಮಾಜದ ಬೆಳವಣಿಗೆಯಲ್ಲಿ ಸಾಕಷ್ಟು ಏರುಪೇರುಗಳಾಗಿವೆ. ಹಿಂದೂ ಸಮಾಜದಲ್ಲಿ  ಕೆಳ ವರ್ಗದವರ ಬದುಕು ಅಸಹನೀಯವಾಗಿತ್ತು. ಆದರೆ ಇಂದು ಪ್ರಜಾಪ್ರಭುತ್ವದಲ್ಲಿ ಕೂಡ ತೃಪ್ತಿಕರ ಬದಲಾವಣೆಗಳಾಗಿರುವುದಿಲ್ಲ. ಮೇಲು-ಕೀಳು, ವರ್ಗ -ವರ್ಣ ಸಂಘರ್ಷಗಳು ಇಂದಿಗೂ ನಡೆಯುತ್ತಲೇ ಇವೆ.

ಈ ದೇಶದ ಒಟ್ಟು ಜನ ಸಂಖ್ಯೆ ಬಹುದೊಡ್ಡ ಭಾಗವಾದ ಶ್ರಮಿಕ ಸಂಸ್ಕೃತಿಯ ಜನ ಮುಖ್ಯ ಸಂಸ್ಕೃತಿಯ ಸಂಕೋಲೆಯಿಂದ ಬಿಡುಗಡೆ ಪಡೆಯುವುದಕ್ಕಿಂತ ಮೇಲ್ವರ್ಗದ ಜನರ ರೂಢಿ ಪದ್ಧತಿ ಆಚರಣೆಗಳನ್ನು ಅನುಕರಣೆ ಮಾಡುತ್ತ ರೂಢಿಸಿಕೊಂಡು ಮೂಲ ಮಾತೃ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯ. ಉನ್ನತ ವರ್ಗದ ಉಳ್ಳವರ ಬದುಕಿಗೆ ಆಸರೆಯಾಗಿ ಅವರ ರಕ್ಷಣೆಗೆ ಅನೇಕ ಕಾಯಕ ಜೀವಿಗಳು ತಮ್ಮ ಶ್ರಮ ವ್ಯಯ ಮಾಡುತ್ತ ಅವರ ಕಾಲಿಗೆ ಮುಳ್ಳೊತ್ತದಿರಲೆಂದು ಮೆಚ್ಚಿ ಹೊಲಿದು, ಮಾನ ಮುಚ್ಚಲು ಬಟ್ಟೆ ನೇಯ್ದು. ಮೈಗೆ ತಕ್ಕಂತೆ ವಿವಿಧ ವಿನ್ಯಾಸಗೊಳಿಸಿ  ಬಟ್ಟೆ ಹೊಲಿದು, ಮಳೆ ಗಾಳಿ ಬಿಸಿಲಿನಿಂದ ರಕ್ಷಿಸಲು ಮನೆಕಟ್ಟಿ ಅವರ ಕೊಳಕು ಬಟ್ಟೆ ಒಗೆದು ಅವರ ಮಲ ಮೂತ್ರ ಹೊತ್ತು ಒಗದು, ಊಹೆಗೆ ನಿಲುಕದ ಮಾನವೀಯತೆ ಮೆರೆದ ಶ್ರಮಜೀವಿಗಳೇ ಹೊಲೆಯ ಮಾದಿಗರಾಗಿ, ಉಪ್ಪಾರ, ಅಗಸ, ಮೇದಾರ, ಮೋಚಿ, ದರ್ಜೆಗಳಾಗಿ ಇಂದಿಗೂ ಕಷ್ಟದ ಬದುಕು ಬದುಕುತ್ತಿರುವ ಕಸಬುದಾರರು ಮೂಕ ಸಾಕ್ಷಿಯಾಗಿದ್ದಾರೆ ಮಾತ್ರವಲ್ಲ ಹಿಂದುಳಿದವರ ಬಾಳು ಒಂದು ಶಿಕ್ಷೆಯಾಗಿದೆ.

ಈ ಶಿಕ್ಷೆಯಿಂದ ಹೊರಬರುವಂತೆ ಮಾಡುವುದೇ ಸಾಮಾಜಿಕ ಬದಲಾವಣೆಯ ಮೂಲ ಆಶಯ. ’ಕಾಡು ಊರಿಗೆ ಬರುವಂತೆ ಮಾಡುವುದು, ಊರಲ್ಲಿರುವ ಕಾಡು ಕರಗುವಂತೆ ಮಾಡುವುದು,  ಪರಿವರ್ತನಶೀಲ ಸಂಸ್ಕೃತಿಯ ಪ್ರಧಾನ  ಒತ್ತಾಸೆ’ ಎಂಬ ಬರಗೂರರ ಮಾತು ಔಚಿತ್ಯ ಪೂರ್ಣವಾಗಿದೆ.

ಆದರೆ ಗಮನಾರ್ಹ ಸಂಗತಿಯೆಂದರೆ ಮೇಲ್ವರ್ಗದ ಪೂರ್ವಜರಿಂದ ಹರಿದು ಬಂದ ಸಂಪ್ರದಾಯ ಮತ್ತು ಒಂದೇ ಜಾತಿಯಲ್ಲಿ ಮದುವೆಯಾಗುವ ಪದ್ಧತಿಯ ಮೂಲ ಬೇರು ಇಂದಿಗೂ ಆಳವಾಗಿ ಬೇರೂರಿದೆ. ಹೀಗಾಗಿ ಜಾತೀಯತೆ ಪೋಷಣೆ ಇಂದಿಗೂ ನಡೆಯುತ್ತಿದೆ. ಆದರೂ ಪ್ರತಿಯೊಂದು ಶ್ರಮಿಕ ಕಸಬುದಾರರು ಜನಾಂಗಗಳಿಗೆ ಅವರದೇ ಆದ ರೀತಿ-ನೀತಿ, ನಂಬಿಕೆ, ಆಚರಣೆಗಳು, ಸಂಸ್ಕೃತಿ, ಒಳ ಪದರುಗಳಲ್ಲಿ ಅಚ್ಚಳಿಯದೆ ನಿಚ್ಚಳವಾಗಿ ಉಳಿದುಕೊಂಡು ಬಂದಿವೆ. ಇದುವರೆಗೂ ಎಲ್ಲೂ ದಾಖಲಾಗದೆ ತೀರ ಹಿಂದುಳಿದ ಉಪ್ಪಾರ, ರಂಗಾರಿ ಜನಾಂಗಗಳು ಮನುಕುಲದ ಸೇವೆಯನ್ನು ಸಾಕಷ್ಟು ಮಾಡಿದ್ದರೂ ಹೇಳ ಹೆಸರಿಲ್ಲದಂತಾಗಿವೆ. ಪ್ರತಿಯೊಂದು ಸಮಾಜಕ್ಕೆ ತನ್ನದೇ ಆದ ನಡೆ-ನುಡಿ, ರೀತಿ-ನೀತಿ ನಂಬುಕೆ, ಆಚರಣೆಗಳು ಹಾಗೂ ಸಂಸ್ಕೃತಿಯ ಒಳಪದರುಗಳಲ್ಲಿ ಇದ್ದೇ ಇರುತ್ತವೆ.

ಪೀಠಿಕೆ :

ರಂಗ ಹಾಕುವವರು ರಂಗಾರೇರು ಎಂಬುದು ಗೋಚರಿಸಿದರೂ, ಜಾತಿ ಸೂಚಕ ಪದವೆಂದು ಮೇಲು ನೋಟಕ್ಕೆ ಕಂಡರೂ, ವಿವಿಧ ಜಾತಿಯ ಜನ ಈ ಬಣ್ಣ ಹಾಕುವ ಕೆಲಸವನ್ನು ಮಾಡಿ ಜೀವನ ನಡೆಸುತ್ತಿದ್ದಾರೆ. ಪಟ್ಟೆಗಾರ, ನೀಲಗಾರ, ಮಡ್ಡಿಕಾರ, ಬಣ್ಣಗಾರ, ಮತ್ತು ರಂಗಾರಿ ಈ ಪದಗಳು ಒಂದೇ ಎಂದು ಕಂಡು ಬಂದರೂ ಇವುಗಳಲ್ಲಿ ಭಿನ್ನತೆ ಇರುವುದು ಕಂಡು ಬರುತ್ತದೆ.

ಪಟ್ಟೆಗಾರ :

ಇವರು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯರೆಂದು ಗುರುತಿಸಿಕೊಳ್ಳುತ್ತಾರೆ. ಬಟ್ಟೆಗೆ ಬಣ್ಣ ಹಾಕುವುದು ಇವರ ಸಾಂಪ್ರದಾಯಿಕ ಉದ್ಯೋಗವಾಗಿದ್ದು ಈಚೆಗೆ ನೇಕಾರಿಕೆ, ವ್ಯಾಪಾರ, ನೌಕರು ಮಾಡುತ್ತಾರೆ. ಇವರು ಮಾಂಸಾಹಾರಿಗಳಾಗಿದ್ದಾರೆ. ಮರಾಠಿ, ಗುಜರಾತಿ ಮಿಶ್ರಿತ ’ಅಹಿರಾಣಿ’ ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ’ತೆರವು’ ಪದ್ಧತಿ ಹಿಂದೆ ರೂಢಿಯಲ್ಲಿತ್ತು. ಇವರು ಜನಿವಾರ ಧರಿಸುತ್ತಾರೆ. ಜಗದಂಬಾ, ತುಳಜಾಭವಾನಿ, ವಿಠೋಬ, ಸೌದತ್ತಿ ಎಲ್ಲಮ್ಮ ದೇವತೆಗಳಿಗೆ ನಡೆದುಕೊಳ್ಳುತ್ತಾರೆ ಮೃತರಿಗೆ ಅಗ್ನಿ ಸಂಸ್ಕಾರ ಮಾಡುತ್ತಾರೆ.

ನೀಲಗಾರರು :

ಇವರೂ ಕೂಡ ಬಣ್ಣ ಹಾಕುವವರೇ,ಆದರೆ ಇವರು ನೀಲಿ ಬಣ್ಣ ಹಾಕುವುದರಿಂದ ನೀಲಗಾರರು ಎಂದು ಕರೆಯುತ್ತಾರೆ.

ಮಡ್ಡಿಕಾರರು :

ಇವರೂ ಕೂಡ ಬಣ್ಣ ಹಾಕುವವರೇ. ಇವರು ಗಿಡದಿಂದ ಬಣ್ಣ ತೆಗೆದು ಬಣ್ಣ ಹಾಕುತ್ತಿದ್ದರು. ಆದರೆ ಇವರು ಕೆಂಪು ಬಣ್ಣ ಹಾಕುತ್ತಿದ್ದರು.

ಬಣಗಾರ (ನಾಗಲೀಕ):

ಇವರು ಲಿಂಗಾಯತ ಕೋಮಿನಲ್ಲಿ ಬರುತ್ತಾರೆ. ಈ ಜನಾಂಗದ ಮೂಲ ಸೂಜಿ ಕಸುಬನ್ನು ಅನೇಕರು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಬಹುಜನರು ನೈಸರ್ಗಿಕವಾಗಿ ಬಣ್ಣವನ್ನು ತಯಾರಿಸಿ ನೂಲಿಗೆ ಬಣ್ಣ ಹಾಕುವ ಕಸಬು ಮಾಡುತ್ತಿದರು. ಇವರನ್ನು ಬಣ್ಣಗಾರರೆಂದೂ ಕರೆಯುತ್ತಾರೆ. ಇನ್ನು ಕೆಲವರು ಬಟ್ಟೆ ವ್ಯಾಪಾರದಲ್ಲಿ ತೊಡಗಿಸಿ ಕೊಂಡಿದ್ದರಿಂದ ಅವರನ್ನು ಜವಳಿಯವರೆಂದೂ ಕರೆಯುತ್ತಾರೆ. ಇವರು ಬಟ್ಟೆ ಹೊಲಿದು ಮರ್ಯಾದೆ ಮುಚ್ಚಿಕೊಂಡು ಜನರು ನಾಗರೀಕರಾಗಿ ಕಾಣಲು ತಮ್ಮ ಕೈಚಳಕ ಮತ್ತು ಪರಿಣತಿಯಿಂದ ಜನಪ್ರಿಯರಾಗಿದ್ದಾರೆ. ಜನ ನಾಗರಿಕರಾಗಿ ಕಾಣಲು ಶ್ರಮಿಸಿದ ಇವರನ್ನು ನಾಗಲೀಕರೆಂದೂ ಕರೆಯುವುದು ರೂಢಿಯಲ್ಲಿದೆ. ಈ ಜನಾಂಗವನ್ನು ನಾಗಲೀಕ, ಚಿಪ್ಪರು, ನಾಗಲೀಕ ಸಿಂಪಿ, ದರ್ಜೆ ರಂಗಾರಿ ಬಣಗಾರ ಈ ಹೆಸರುಗಳಿಂದ ಗುರುತಿಸುತ್ತಾರೆ. ಅವರಿಗೆ ಐತಿಹಾಸಿಕ ಹಿನ್ನೆಲೆಯೂ ಕೂಡ ಇದೆ. ಅಂದು ಕೆಳದಿ ಅರಸರ ಅಧೀನದಲ್ಲಿದ್ದ ಸುರಕ್ಷಿತ ತಾಣವಾಗಿದ್ದ ನ್ಯಾವತಿಯಲ್ಲಿ ಬಣಗಾರರು (ನಾಗಲೀಕ) ಜವಳಿ ಜನಾಂಗದವರು ಹೆಚ್ಚು ನೆಲೆಸಿದ್ದಾರೆ.

ಪೇಟೆಯಲ್ಲಿ ಬಟ್ಟೆಗಳನ್ನು ಖರೀದಿಸಿ ಬಯಲು ಅಂಗಡಿ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ. ಆದ್ಯ ವಚನಕಾರ ಎಂಬ ಬಿರುದಿಗೆ ಪಾತ್ರರಾದ ಜೇಡರ ದಾಸಿಮಯ್ಯ (ಶಂಕರದ ನೇಮಯ್ಯ) ಈ ಜನಾಂಗದ ಪ್ರಮುಖ ವಚನಕಾರ ಮಾತ್ರವಲ್ಲ ಶ್ರೇಷ್ಠ ಶರಣನಾಗಿದ್ದ.

ಜೀವನ ಕ್ರಮ :

ನಾಗಲೀಕ ಜನನಾಂಗದವರು ವ್ಯಾಪಾರಸ್ಥರಾಗಿದುದರಿಂದ ತಮ್ಮ ಮಕ್ಕಳನ್ನು ವ್ಯಾಪಾರದಲ್ಲಿ ಪರಿಣಿತರನ್ನಾಗಿ ಮಾಡಬೇಕಾಗಿರುವುದರಿಮದ ವ್ಯವಹಾರಕ್ಕೆ ಬೇಕಾಗುವಷ್ಟೇ ವಿದ್ಯೆಯನ್ನು ಕಲಿಸಿ, ಚಿಕ್ಕ ವಯಸ್ಸಿನಿಂದಲೇ ವ್ಯಾಪಾರ, ಹೊಲಿಗೆ ಕೆಲಸ ನಿರ್ವಹಿಸಲು ಅಣಿ ಮಾಡುತ್ತಾರೆ.

ಇವರ ಶಿಷ್ಟ ಉಡಿಗೆ ಕಚ್ಚೆಪಂಚೆ, ಶರ್ಟು ಟೋಪಿ ವಿಶೇಷ ಸಂದರ್ಭದಲ್ಲಿ ಕೋಟುಪೇಟಾ (ರುಮಾಲು) ಧರಿಸುತ್ತಾರೆ. ಇವರು ವಿಜಾಪೂರ, ಸೊಲ್ಲಾಪುರದ ಕಡೆಗೆ ಅಧಿಕವಾಗಿದ್ದಾರೆ. ಈಗಲೂ ಅವರ ಉದ್ಯೋಗ ಬಟ್ಟೆಗೆ ಬಣ್ಣ ಹಾಕುವುದು ಇವರ ಮೂಲ ಕಸುಬಾಗಿದೆ. ಅಲ್ಲಿ ಇವರನ್ನು ಬಣಗಾರರು ಎಂದು ಕರೆಯುತ್ತಾರೆ. ಹುಬ್ಬಳ್ಳಿ ಪ್ರದೇಶದಲ್ಲಿ ನೆಲೆಸಿದ ಈ ಜನಾಂಗದವರನ್ನು ನಾಗಲೀಕ ’ಶಿವಶಿಂಪಿಗೆ’ ಎಂದು ಕರೆಯುತ್ತಾರೆ.

ದಾವಣಗೆರೆ, ಚಿತ್ರದುರ್ಗದಲ್ಲಿ ಜವಳಿ ಮನೆತನ ಹೆಚ್ಚಾಗಿ ಇವೆ. ಈ ಜನಾಂಗದ ಜನರು ಮದುವೆಯಲ್ಲಿ ಮದುಮಗನ ಕೈಯಲ್ಲಿ ತಮ್ಮ ಮೂಲ ಕಸುಬಿನ ಕುರುಹುಗಳಾದ ಕತ್ತರಿ, ಗಜ ಪಟ್ಟಿಯನ್ನು ಕೊಡುವ ಪದ್ಧತಿ ಇದೆ. ಈಗಲೂ ಈ ಮನೆತನಗಳ ಪೂಜಾ ಕೋಣೆಯಲ್ಲಿ ಕತ್ತರಿ, ಮುರಿಗೆ, ಬೆತ್ತ, ತಾಳೆಗರಿ ಗ್ರಂಥಗಳನ್ನು ಇವರು ಪೂಜಿಸುವ ಪದ್ಧತಿ ಉಳಿದು ಬಂದಿರುವುದು ಕಂಡು ಬರುತ್ತದೆ. ಇವರು ಶವ ಸಂಸ್ಕಾರದಲ್ಲಿ ಎಲ್ಲ ವೀರಶೈವರಂತೆ ಹೂಳುತ್ತಾರೆ. ಮೊದಲು ಸಂತೆಯಲ್ಲಿ ಮಾರಾಟಕ್ಕೆ ಬಂದ ರಾಟಿಯಿಂದ ನೂಲಿನ ಕುಕ್ಕಡಿಗಳನ್ನು ಕೊಂಡುಕೊಂಡು ನೈಸರ್ಗಿಕ ಬಣ್ಣ ಹಾಕಿ ನೇಕಾರರಿಗೆ ಮಾರುತ್ತಿದ್ದರು. ನಂತರ ಇಂಗ್ಲೆಂಡಿನಿಂದ ಸಿದ್ಧ ಬಣ್ಣಗಳು ಭಾರತಕ್ಕೆ ಬಂದು ಇವರ ನೈಸರ್ಗಿಕ ಬಣ್ಣಗಾರಿಕೆ ನಿಂತು ಹೋಗಿ ಈಗ ಕೇವಲ ದರ್ಜೆ ಕೆಲಸ ಮತ್ತು ವ್ಯಾಪಾರ ಮಾತ್ರ ಉಳಿದುಕೊಂಡು ಬಂದಿದೆ. ಇವರು ವೀರಶೈವ ಮತಾವಲಂಬಿಗಳಾಗಿದ್ದು. ಕನ್ನಡ ಭಾಷೆಯನ್ನೇ ಬಳಸುತ್ತಾರೆ. ಆದರೆ ವ್ಯಾಪಾರದಲ್ಲಿ ವಿಶಿಷ್ಟ ಸಂಖ್ಯಾ ಭಾಷೆಯನ್ನೇ ಬಳಸುತ್ತಾರೆ.

ಪೆಂಟಿ – ೨೫ ಪೈಸೆ
ಉದ್ದನ ಪೆಂಟಿ – ೭೫ ಪೈಸೆ
ಅವಾರಗಿಂಟ – ೨ ರೂ.
ಪೋರಗಿಂಟ – ೪ ರೂ.
ಸೇಬಾಗಿಂಟ – ೬ ರೂ
ಟಾಲಾಗಿಂಟ – ೮ ರೂ.
ಅವತರಗಿಂಟ – ೧೦ ರೂ.
ಉದ್ದಿನ ಉಳಿ – ೧೨ ರೂ.
ಮೋಕಳಿ  – ೧೬ ರೂ.
ಪೋಕಳಿ ಅವರಗಿಂಟ – ೧೮ ರೂ.
ಅವಾರದಸಕ – ೨೦ ರೂ.
ಉದ್ದನ ದಸಕ – ೩೦ ರೂ.
ಪೊಕತರಸಾರಾ – ೪೦ ರೂ.
ಅವಾರಗಿಂಟ ಕೆವಣ – ೨೦೦ ರೂ.
ಗೈರನಗಿಂಟ ಕೆವಣ – ೧೦೦೦ ರೂ.
ಚಕಾರ – ೨೫ ಪೈಸೆ
ಗಿಂಟ – ೧ ರೂ.
ಉದ್ದನಗಿಂಟ – ೩ ರೂ.
ಪಾಲಾಗಿಂಟ – ೫ ರೂ.
ಪೈತರಗಿಂಟ – ೭ ರೂ.
ನೌಲಗಿಂಟ – ೯ ರೂ.
ಏಕವರಗಿಂಟ – ೧೧ ರೂ.
ಗಿಂಟ ನಾಸ್ತಿ ಪೋಕಳಿ – ೧೫ ರೂ.
ಪೋಕಳಿಗಿಂಟ – ೧೭ ರೂ.
ಗಿಂಟನಾಸ್ತಿ ಪಾಲಾವಳಿ – ೨೯ ರೂ.
ಅವಾರದಸಕ ಪಾಲಾಗಿಂಟ – ೨೫ ರೂ.
ಉದ್ದನ ದಸಕ ಪಾಲಾಗಿಂಟ – ೩೫ ರೂ.
ಗಿಂಟದ ಕೆವಣ  – ೧೦೦
ಪಾಲಾಗಿಂಟ ಕೇವಣ – ೫೦೦
ದೊಡ್ಡಮಣ – ೧ ಲಕ್ಷ ರೂ.

ಇಂತಹ ವಿಶಿಷ್ಟ ಸಂಖ್ಯಾ ಸಂಜ್ಞಾ ಭಾಷೆಯನ್ನು ಈಗಲೂ ಜವಳಿ ವ್ಯಾಪಾರಸ್ಥರು ಬಳಸುವುದು ಕಂಡು ಬರುತ್ತದೆ.

ಧಾರ್ಮಿಕ :

ಮೂಲತಃ ಲಿಂಗಾಯತ ಮತದವರಾದ ಇವರು ಬಸವಣ್ಣನವರನ್ನು ಹೆಚ್ಚು ಆರಾಧಿಸುತ್ತಾರೆ. ಜೊತೆಗೆ ಇವರ ಕುಲದೇವರು ಲಿಂಗಸಗೂರು ತಾಲೂಕಿನ ನವಲೇ ಜಡೆ ಶಂಕರ. ಅದರಂತೆ ಶ್ರೀಶೈಲದ ಮಲ್ಲಿಕಾರ್ಜುನ, ವೀರಭದ್ರ ದೇವರು, ಚೌಡೇಶ್ವರಿ, ಗುಡ್ಡಾಪೂರದ ದಾನಮ್ಮ ಮುಂತಾದ ದೇವ ದೇವತೆಗಳಿಗೆ ನಡೆದುಕೊಳ್ಳುತ್ತಾರೆ. ಆದರೂ ಶ್ರೀ ಬಡಶಂಕರಲಿಂಗನೇ ಕುಲದೈವ ಹಾಗೂ ಶ್ರೀ ಶಂಕರ ದಾಸಿಮಯ್ಯನೇ ಕುಲಗುರು ಎಂದು ತಿಳಿದುಬರುತ್ತದೆ.

ಈ ಜನಾಂಗ ಕೂಡಾ ತೀರಾ ಹಿಂದುಳಿದಿದ್ದಾರೆ.  ಬಡವರೆ ಹೆಚ್ಚಾಗಿದ್ದು ಬೆರಳೆಣಿಕೆಯಷ್ಟು ಮಾತ್ರ ಅನುಕೂಲಸ್ಥರಿದ್ದಾರೆ. ಶಿಕ್ಷಣದಿಂದ ವಂಚಿತರಾದ ಮಹಿಳೆಯರೇ ಹೆಚ್ಚು. ಓದಿದವರು ತೀರಾ ಕಡಿಮೆ ಆದರೂ ತಮ್ಮ ಸೂಜಿಕಾಯಕದಿಂದ ಅಷ್ಟು ಇಷ್ಟು ಸಂಪಾದನೆ ಮಾಡಿ ಕುಟುಂಬದ ಆರ್ಥಿಕ ಬೆಳವಣಿಗೆಯಲ್ಲಿ ಭಾಗೀದಾರೂ ಸ್ತ್ರೀ ಪಿತೃಪ್ರಾಧಾನ್ಯದಲ್ಲಿ ಯಾವ ಲೆಕ್ಕಕ್ಕು ಬಾರದೆ ಗೌಣವಾಗಿದ್ದಾಳೆ. ಇತ್ತೀಚೆಗೆ ಶಿಕ್ಷಣಕ್ಕೆ ಮಹತ್ವ ಕೊಟ್ಟು ಓದಿದ ಅವಕಾಶ ದಕ್ಕಿಸಿಕೊಂಡ ಬೆರಳೆಣಿಕೆಯಷ್ಟು ಜನ ಮಾತ್ರ ನೌಕರಿ ಮಾಡುತ್ತಿದ್ದಾರೆ.

ರಂಗಾರೇರ ಬಗ್ಗೆ ಈ ಕೆಳಕಂಡ ವಿವರಗಳು ಗಮನಾರ್ಹವಾಗಿವೆ.

ಮಿ. ಎಡ್ಘರ್ ಥರ್ ಸ್ಟನ್ ಅವರು ತಮ್ಮ Castes & Tribes of South India ಎಂಬ ಪುಸ್ತಕದ ಆರನೇಯ ಸಂಪುಟದಲ್ಲಿ ರಂಗಾರೇಋ ಬಗ್ಗೆ ಹೀಗೆ ನಮೂದಿಸಿದ್ದಾರೆ.

Castes & Tribes of Southern India Edger Thurstion K. Rangachari.

Rangari :

The Rangaris are summed up in the Madras Census Report. As being a caste of dyers and tailors found in almost all the Telugu districts. They are of Maratha Origin. and still speak that language. They worship the goddess Ambabhavani. The dead are either burned or buried. Their title is Rao’

In an account of the Rangaris of the North Arcot District Mr. H.A. Sturart writes that ‘Rangari is a caste of dyers, chiefly found in Walajapet. They claim to be Kshatriyas, who accompanied Rama in his conquest of Ceylon, from which fact one of their names, Langari (lanka, the island i.e., Ceylon) is said to be derived. Rama, for some reason or other, become incenses against, and persecuted them. Most were destroyed, but a respectable Kshatriya Indy saved her two sons by taking off their sacred threads and causing one to pretend that he was a tailor sewing. And the other that he was a dyer, colouring his thread with the red betel nut and leaf, which she hurriedly supplied out of her mouth. The boys became the progenitors of the caste, the members of which now wear and of the other, the most numerous, dyers. Their chief feasts are the Dassara and Kaman, the former celebrated in honour of the Goddess Tuljabhavani and the latter of Manmuda, the Indian Cupid, fabled to have been destroyed by the flame of Siva’s third eye. During the Kaman feast, fires of Combustible materials are lighted, round which the votaries grather, and beating their mouths, exclaim laba, laba. Lamenting the death of Cupid. In this feast Rajputs, Mahrattas, Bondills, and Guzeratis also join. The Rangaris spread Marathi which they write in the northern character and name Poona and Sholapur as the place in which they originally resided. In appearance they do not at all resemble the other claimants to Kshatriya descent, the Razus and Rajputs, for they are poorly developed and by no means handsome. Widow remarriage is permitted where children have not been born, but remarried widows are prohibited  from taking part in religious recessions, which seems to sign that the concession has been reluctantly permitted. In most of their customs they differ but little from the Razus, eating meat and drinking spirits, but not keeping their women gosha.

All the Rangaris examined by me at Adoni in the Bellary district were tailors. Like other Maratha Classesses they had a high Cephalic Index (av 79:max 92) and it was noticeable that the breadth of the head exceeded 15 cm in. nine out of thirty individuals.

In the Madras Census Report, 1901 Bahusagara Malla or Mulla, and Namdev are given as Synonyms, and Chimpiga (tailor) and Unupulavadu (dyer) as sub-castes of Rangari.

ಈ ದರ್ಜೆಗಳ ಬಗ್ಗೆ ಗುಲಬರ್ಗಾ ಮತ್ತು ವಿಜಾಪೂರ ಜಿಲ್ಲೆಯ ಗ್ಯಾಸೆಟಿಯರ್ ನಲ್ಲಿ ಹೀಗೆ ನಮೂದಿಸಲಾಗಿದೆ.

ದರ್ಜೆ : ಬಟ್ಟೆ ಹೊಲೆಯುವುದು ಇವರ ಸಾಂಪ್ರದಾಯಿಕ ಕಸಬು. ಈಚೆಗೆ ಕೆಲವರು ಬಟ್ಟೆ ವ್ಯಾಪಾರ ಮಾಡುವುದು ಉಂಟು. ಇವರು ತಮ್ಮನ್ನು ಸಿಂಪಿ ನಾಮದೇವ ಸಿಂಪಿ ಭಾವಸಾರ ಕ್ಷತ್ರಿಯ ಮೊದಲಾದ ಹೆಸರುಗಳಿಂದಲೂ ಕರೆದುಕೊಳ್ಳುತ್ತಾರೆ. ಇದರಲ್ಲೂ ಕನ್ನಡ ಹಾಗೂ ಮರಾಠೀ ಭಾಷಿಕರು ಇದ್ದಾರೆ.

ಇವರು ಯಜ್ಞೋಪವೀತವನ್ನು ಧರಿಸುತ್ತಾರೆ ಹಾಗೂ ತಮ್ಮ ಧಾರ್ಮಿಕ ಕಾರ್ಯಗಳಿಗೆ ಬ್ರಾಹ್ಮಣ ಪುರೋಹಿತರನ್ನು ಕರೆಯುತ್ತಾರೆ. ನಾಮದೇವ ಸಿಂಪಿಗಳು ಮರಾಠೀ ಸಂತ ನಾಮದೇವ ಮೂಲದಿಂದ ಬಂದವರೆಂದು ಹೇಳಿಕೊಳ್ಳುತ್ತಾರೆ. ಚಂದ್ರಿಕಾ ಇವರ ವಿಶೇಷ ದೇವತೆ. ಆ ದೇವಿಗೆ ಗಣೇಶ ಚತುರ್ಥಿಯ ದಿನ ಪೂಜೆ ಸಲ್ಲುತ್ತದೆ. ಸೌದತ್ತಿ ಎಲ್ಲಮ್ಮ ತುಳಜಾಪೂರದ ಅಂಬಾಭವಾನಿ, ಪಂಢರಾಪೂರದ ಪಾಂಡುರಂಗ ಮೊದಲಾದ ದೇವ ದೇವತೆಗಳಿಗೆ ಇವರು ನಡೆದುಕೊಳ್ಳುತ್ತಾರೆ. ಇವರಲ್ಲಿ ಶವವನ್ನು ಸುಡುವ ಪದ್ಧತಿಯಿದೆ.

ಜಿಲ್ಲೆಯಲ್ಲಿ ವೀರಶೈವ ಮತಾಚರಣೆಯನ್ನು ಅನುಸರಿಸುವ ಸಿಂಪಿ ಕಾಯಕದವರು ಇರುವವರು. ಧಾರ್ಮಿಕ ಕಾರ್ಯಗಳನ್ನು ಇವರಲ್ಲಿ ಜಂಗಮರು ನೆರವೇರಿಸುತ್ತಾರೆ. ಇವರನ್ನು ಶಿವಸಿಂಪಿಗಳು ಎಂದು ಕರೆಯುವರು (ಬಣಗಾರರಲ್ಲಿ ವಿವರಿಸಲಾಗಿದೆ) (ಗುಲಬರ್ಗಾ ಗ್ಯಾಜಿಟಿಯರ್)

ವಿಜಾಪೂರ ಗ್ಯಾಸೆಟಿಯರ್ನನಲ್ಲಿ ಹೊಲಿಗೆ ಕೆಲಸ ಮಾಡುವುದು ಇವರ ಸಾಂಪ್ರದಾಯಿಕ ಉದ್ಯೋಗವಾಗಿದ್ದು ಈಚೆಗೆ ಬಟ್ಟೆ ವ್ಯಾಪಾರ ಮತ್ತಿತರ ಉದ್ಯೋಗಗಳಲ್ಲಿ ತೊಡಗಿರುತ್ತಾರೆ. ಇವರು ತಮ್ಮನ್ನು ಸಿಂಪಿ, ನಾಮದೇವ ಸಿಂಪಿ, ಭಾವಸಾರ ಕ್ಷತ್ರಿಯ ಮುಂತಾದ ಹೆಸರುಗಳಿಂದಲೂ ಕರೆದುಕೊಳ್ಳುತ್ತಾರೆ. ಇವರಲ್ಲಿ ಜಾತಿ ಪಂಚಾಯಿತಿಯಿದ್ದು ಪಂಚರ ಸಮ್ಮುಖದಲ್ಲಿ ನ್ಯಾಯ ತೀರ್ಮಾನ ಮಾಡುವರು. ಇವರು ಮರಾಠಿ ಹಾಗೂ ಕನ್ನಡ ಮಾತನಾಡುತ್ತಾರೆ. ಇವರಲ್ಲಿ ಜನಿವಾರ ಧರಿಸುವ ಪದ್ದತಿಯಿದ್ದು ಬ್ರಾಹ್ಮಣ ಪುರೋಹಿತರರು ಇವರ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಡುತ್ತಾರೆ. ಸಾಂಪ್ರದಾಯಿಕವಾಗಿ ವಿವಾಹವು ಹೆಣ್ಣಿನ ಮನೆಯಲ್ಲಿ ಜರುಗುತ್ತದೆ. ಯುಗಾದಿ, ನಾಗರಪಂಚಮಿ, ಗಣೇಶ ಚೌತಿ, ದಸರಾ, ದೀಪಾವಳಿ ಹಾಗೂ ಹೋಳಿ ಇವರು ಆಚರಿಸುವ ಕೆಲವು ಪ್ರಮುಖ ಹಬ್ಬಗಳಾಗಿವೆ. ಸಂತರಿರುವ ಕಡೆ, ಭಾದ್ರಪದ ನವಮಿಯಿಂದ ಏಳು ದಿನಗಳವರೆಗೆ ವಿಠೋಬ ಉತ್ಸವವನ್ನು ಆಚರಿಸಿ ಹುಣ್ಣಿಮೆಗೆ ಮುಕ್ತಾಯಗೊಳಿಸುತ್ತಾರೆ. ಮಾಂಸಾಹಾರ ಸೇವಿಸುವುದು ಇವರಲ್ಲಿ ರೂಢಿಯಲ್ಲಿದೆ. ಸಂತರು ಮಾಂಸಾಹಾರವನ್ನು ಸೇವಿಸುವುದಿಲ್ಲ. ಅಂಬಾಭವಾನಿ ತುಳಜಾ ಭವಾನಿ, ವಿಠೋಬಾ, ಎಲ್ಲಮ್ಮ, ಮೊದಲಾದ ದೇವ ದೇವತೆಗಳಿಗೆ ಇವರು ನಡೆದುಕೊಳ್ಳುತ್ತಾರೆ. ಇವರು ತಮ್ಮ ಮೃತರಿಗೆ ಅಗ್ನಿ ಸಂಸ್ಕಾರ ಮಾಡುತ್ತಾರೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆಯಲ್ಲಿ ಅಂಬಾಭವಾನಿ ಮಂದಿರ ಹಾಗೂ ಮಂಗಲ ಕಾರ್ಯಾಲಯವಿದ್ದು ಅಂಬಾಭವಾನಿ ಜಯಂತಿಯಂದು (ಮಾಘ ಬಹುಳ ಪಂಚಮಿ) ಇದರ ಆಶ್ರಯದಲ್ಲಿ ಈ ಸಮಾಜದ ಜನರ ಸೌಲಭ್ಯಕ್ಕಾಗಿ ಸಾಮೂಹಿಕ ವಿವಾಹವನ್ನು ನೆರವೇರಿಸುವುದು ಉಂಟು.

ಮೂಲ :

ರಂಗಾರೇರ ಮೂಲ ಪಾಕಿಸ್ತಾನದ ಬಲೂಚಿಸ್ತಾನ ಎಂದು ಹೇಳುತ್ತಾರೆ. ಅವರ ಆರಾಧ್ಯ ದೈವ ಹಿಂಗುಲಾಂಬಿಕಾದೇವಿಯ ಗುಡಿ ಬಲುಚಿಸ್ಥಾನದಲ್ಲಿದೆ. ಆಳರಸರ ಸೈನಿಕರು ದಾಳಿ ಯುದ್ಧ ಮಾಡುತ್ತ ಹೋದಂತೆ ಅವರೊಂದಿಗೆ ಈ ದರ್ಜಿಗಳು ಎಲ್ಲೆಡೆಗೂ ಹೋಗಿ ನೆಲೆಸಿದ್ದು ಕಂಡು ಬರುತ್ತದೆ.

ಈ ಜನಾಂಗ ಕರ್ನಾಟಕದ ಗುಲಬರ್ಗಾ ಆಳಂದ, ಬೆಂಗಳೂರು, ವಿಜಾಪೂರ, ತಾಳಿಕೋಟೆ, ಇಲಕಲ್, ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು, ಬಳ್ಳಾರಿ, ತುಳುನಾಡು, ಪಂಜಾಬ, ಆಂಧ್ರ, ಗುಜರಾತ, ಮಧ್ಯಪ್ರದೇಶ, ಒರಿಸ್ಸಾ ಹಳ್ಳಿಯಿಂದ ದಿಲ್ಲಿಯವೆಗೆ ದರ್ಜಿಗಳು  ಇದ್ದಾರೆ. ಕರ್ನಾಟಕದಲ್ಲಿ ಸುಮಾರು ೨೫ ಲಕ್ಷ ಜನಸಂಖ್ಯೆ ಇದೆ ಎಂದು ತಿಳಿದು ಬರುತ್ತದೆ.

ಆಯಾ ರಾಜ್ಯದಲ್ಲಿ ಇರುವವರು ಆಯಾ ರಾಜ್ಯ ಭಾಷೆ ಆಡುತ್ತಾರೆ. ಹಾಗೆಯೇ ವೇಷ-ಭೂಷಣ ಧರಿಸುತ್ತಾರೆ. ಆದರೂ ಮಾತೃಭಾಷೆ ಮರಾಠಿ ಕೊಂಚವಾದರೂ ಬಲ್ಲವರಾಗಿದ್ದಾರೆ.

ರಂಗಾರೇರು / ದರ್ಜಿಗಳು :

ರಂಗಾರಿ – ಉರ್ದುವಿನಲ್ಲಿ ರಂಗರೇಜ (ದರ್ಜಿ) ಮೊದಲ ಬಟ್ಟೆಗೆ ಬಣ್ಣ ಹಾಕುವ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯಲ್ಲಿ ತಯಾರಾದ ಬಿಳಿ ಬಟ್ಟೆಗೆ ಬಣ್ಣದ ಅಚ್ಚು ಹಾಕುತ್ತಿದ್ದರು.

ಕರೀ ಬಣ್ಣ ಹಾಕುವುದರಿಂದ ಇವರನ್ನು ಕರಿ ಕೈಯವರೆಂದು ಕರೆಯುತ್ತಿದ್ದರು. ಇವರು ರಂಗ ಹಾಕುವ ಮತ್ತು ಬಟ್ಟೆ ಹೊಲಿಯುವ ಕೆಲಸವನ್ನು ಮಾಡಿ ಉಪಜೀವನ ನಡೆಸುತ್ತಾರೆ. ಉಪ ಕಸುಬಾದ ರೇಶ್ಮೆಯ ಸೀರೆಗೆ ಗೊಂಡೆ ಹಾಕುವುದನ್ನು ಮಾಡುತ್ತಾರೆ. ಗಂಟು ಕಟ್ಟಿಕೊಂಡು ಸಂತೆ ಸಂತೆ ರಿಗುಡಿ ಬಟ್ಟೆ ಮತ್ತು ರೆಡಿಮೇಡ್ ಬಟ್ಟೆ ವ್ಯಾಪಾರ ಮಾಡುತ್ತಾರೆ.

ಇವರು ತಮ್ಮನ್ನು ಭಾಸಾರ ಕ್ಷತ್ರಿಯ ಸಮಾಜದವರೆಂದು ಗುರುತಿಸಿಕೊಳ್ಳುತ್ತಾರೆ. ಇದರಲ್ಲಿ ಎರಡನೇ ಪಂಗಡ ನಾಮದೇವ ಶಿಂಪಿ. ಆದರೆ ಇವರ ಸಮೀಪದವರೆಂದು ಭಾಸವಾಗುವ ಪಟ್ಟೆಗಾರ, ಖತ್ರಿ, ಸಕೂಲ ಭಾಯಿ, ಸಮಾಜ ಸಕೂಳ ಸಾಳಿ, ಸಾವುಜಿ, ಮುಂತಾದ ಪಂಗಡಗಳು ಇದ್ದು ನೇರಬಳಕೆ ಮಾತ್ರ ನಡೆಯುತ್ತದೆ. ಗಂಡು ಹೆಣ್ಣು ಕೊಡುಕೊಳ್ಳುವುದು ಭಾವಸಾರ ಕ್ಷತ್ರಿಯ ಮತ್ತು ನಾಮದೇವ ಶಿಂಪಿಗಳಲ್ಲಿ ಮಾತ್ರ (ಮದುವೆ ವ್ಯವಹಾರ) ನಡೆಯುತ್ತದೆ. ಆಹೇರ ಸಿಂಪಿ ಎನ್ನುವ ಪಂಗಡ ಮಹಾರಾಷ್ಟ್ರದಲ್ಲಿದೆ. ಇವರು ಮಾಂಸಾಹಾರಿಗಳಾಗಿದ್ದಾರೆ.

ನಾಮದೇವ ಶಿಂಪಿಗಳು ಸಸ್ಯಾಹಾರಿಗಳಾಗಿದ್ದಾರೆ. ಇವರು ಸಂತ ನಾಮದೇವನ ಭಕ್ತರಾಗಿದ್ದಾರೆ. ಇವರೆಲ್ಲರ ಮಾತೃ ಭಾಷೆ ಮರಾಠಿ. ಜಗತ್ತಿನಲ್ಲಿ ಎಲ್ ವರ್ಗದ ಜನರನ್ನು ಆಕರ್ಷಿಸುವ ಮುಖೀಯ ಕಸುಬು ಹೊಲಿಗೆ. ವ್ಯಕ್ತಿಗಳ ನಡುವಿನ ಅಂತರ, ಸ್ತ್ರೀ ಪುರುಷರ ಪ್ರತ್ಯೇಕ ಗುರುತಿಸುವಿಕೆ. ವ್ಯಕ್ತಿತ್ವಕ್ಕೆ ಗೌರವ, ಘನತೆ, ಗಾಂಭೀರ್ಯ, ರಾಜ ಠೀವಿ, ಸಾಮಾನ್ಯ ಜೀವಿ ಹೀಗೆ ನೂರಾರು ರೀತಿಯ ಉಡುಪಿ. ಇಂದಿನ ತರಾವರಿ ಫ್ಯಾಷನ್ ಷೋಗಳಿಗೆ ಅವಕಾಶ ಮಾಡಿಕೊಟ್ಟಿರುವ ಈ ಹೊಲಿಗೆ (ಟೈಲರಿಂಗ್) ಕಸುಬಿಗೆ ಸರಿಸಾಟಿಯಿಲ್ಲ, ಮನುಷ್ಯನ ವ್ಯಕ್ತಿತ್ವ ನಿರ್ಮಾಣದಲ್ಲಿ ದರ್ಜಿಯ ಕೈ ಚಳಕಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ.

ಜೀವನ ಪದ್ಧತಿ :

ಇವರಲ್ಲಿ ಅವಿಭಕ್ತ ಕುಟುಂಬ ಹೆಚ್ಚಾಗಿದೆ. ಇತ್ತೀಚೆಗೆ ಸಣ್ಣ ಕುಟುಂಬಗಳು ಕೂಡಾ ಇವೆ. ಬಡತನ ಹೆಚ್ಚಾಗಿರುವುದರಿಂದ ಸಾಮಾನ್ಯ ಜೀವನಮಟ್ಟ ಹೊಂದಿದ್ದಾರೆ. ವೈದಿಕ ಸಂಪ್ರದಾಯವನ್ನೇ ಹೆಚ್ಚಾಗಿ ಅನುಸರಿಸುತ್ತಾರೆ. ಆದರೆ ಸಂಧ್ಯಾವಂದನೆ ಮಾಡುವುದಿಲ್ಲ. ಮುಂಜ್ವಿ ಕೆಲವೇ ಕೆಲವರು ಮಾಡುತ್ತಾರೆ. ಕೆಲವರು ಸೋಡ ಮುಜ್ವಿ ಮಾಡುತ್ತಾರೆ. ಜನಿವಾರ ಇದೆ. ಆದರೆ ಯಾರೂ ಧರಿಸುವುದಿಲ್ಲ.

ಗಡಾಳೆ, ಭಾವುಸರ (ಗುಜರಾತ) ಎಜ್ಜತಕರ, ರೇಳೇಕರ, ಅಂಬರಕರ, ತಾತೂಸಕರ, ಉಪ್ಪಾರೆ ಖಡಾಳೆ, ತೇಲ್ಕರ, ಡವುಳಖಾಗಳ, ಮಹೀಂದ್ರಕರ, ರಂಗದಳ, ರಾಶಿಂಕರ, ಹಂಚಾಟೆ, ಢಗೆ, ಗುಜ್ಜರ, ಬಗಾಡೆ ಪತಂಗೆ ನವಲೆ, ಸರೂದೆ, ವೈಕುಂಠ, ಗರಜೆನ, ಕಾನಕುರ್ತೆ, ಸುತರಾವೆ, ಘನಾತೆ, ಲೋಖಂಡ, ಸುಲಾಖೆ, ಜವಳಕರ, ಪುಲಸೆ, ಜಿಂಗಾಡೆ, ಬಾಸೂತಕರ, ಯಲಣೆಟ್ಟಿ, ಕ್ಷೀರಸಾಗರ, ಪುಕಾಳೆ, ತಾಂದಳೆ, ಅಂಬುರೆ, ಬುಲಬುಲೆ, ಅಷ್ಟೇಕರ, ಬಗ್ರೆ, ಕಪಟಕರ, ಮುಂತಾದ ಅಡ್ಡ ಹೆಸರಿನಿಂದ ಮನೆತನಗಳನ್ನು ಗುರುತಿಸುತ್ತಾರೆ.

ವೇಷಭೂಷಣ :

ಕರ್ನಾಟಕದಲ್ಲಿ ಇವರ ಉಡಿಗೆ-ತೊಡಿಗೆ ಎಲ್ಲರಂತೆ ಕಂಡುಬಂದರೂ ಪುರುಷರು ಧೋತಿ ಹಾಕುವುದು ತೀರ ಕಡಿಮೆ. ಬಿಳಿಪೈಜಾಮ, ನೆಹರಿ ಷರ್ಟು ತಲೆಯ ಮೇಲೆ ಹೆಚ್ಚಾಗಿ ಟೋಪಿ ಧರಿಸುತ್ತಾರೆ. ಇತ್ತೀಚೆಗೆ ಪ್ಯಾಂಟ ಷರ್ಟು ಧರಿಸುತ್ತಾರೆ. ಮಹಿಳೆಯರು ಎಲ್ಲರಂತೆ ಸೀರೆ ಬ್ಲೌಜ್ ಉಡುತ್ತಾರೆ. ಹಿಂದಿನ ಕಾಲದ ಹೆಣ್ಣುಮಕ್ಕಳು ಫ್ಯಾನ್ಸಿ ಸೀರೆ ಕುಪ್ಪಸ ಧರಿಸುತ್ತಾರೆ. ಬಾಲಕಿಯರಿಗೆ ಅಂಗಿ ಲಂಗ ಹಾಕುತ್ತಿದ್ದರು. ಇತ್ತೀಚೆಗೆ ಚೂಡಿದಾರ ಹಾಕುತ್ತಿದ್ದಾರೆ. ಪ್ಯಾಂಟ ಹಾಕುವುದು ತೀರ ಕಡಿಮೆ. ಬೇರೆ ಬೇರೆ ರಾಜ್ಯಗಳಲ್ಲಿ ಇರುವವರು ಆಯಾ ರಾಜ್ಯದ ಪಾರಂಪರಿಕ ಉಡುಗೆ ತೊಡಿಗೆ ಧರಿಸುತ್ತಾರೆ.

ವಿವಾಹ ಪದ್ದತಿ :

ವೈದಿಕ ಪದ್ಧತಿಯಂತೆ ಇಲ್ಲಿಯೂ ಸ್ವಗೋತ್ರ ಮದುವೆ ನಿಷಿದ್ಧವಿದೆ. ಇವರಲ್ಲಿ ಬ್ರಾಹ್ಮಣರಂತೆ ಆತ್ರೇಯ, ಕಶ್ಯಪ, ಶೃಂಗೃಷಿ, ವಶಿಷ್ಟ, ಕೌಂಡಿಣ್ಯ, ಜಮದಗ್ನಿ, ಭಾರದ್ವಜ, ಭಾರ್ಗವ ಮುಂತಾದ ಗೋತ್ರಗಳಿವೆ. ಸಪ್ತಪದಿ (ವಧು-ವರರು ಪತ್ರವಾದ ಅಗ್ನಿ ಕುಂಡಲದ ಸುತ್ತಲೂ ಏಳು ಹೆಜ್ಜೆಗಳನ್ನು ಹಾಕುತ್ತ ಸುತ್ತುತ್ತಾರೆ) ಇರುತ್ತದೆ. ಲಾಜ ಹೋಮ ಮಾಡುತ್ತಾರೆ. ಹೋಮದಲ್ಲಿ ಭತ್ತದ ಅರಳನ್ನು ಹಾಕುತ್ತಾರೆ) ಸುರಗಿ ಸ್ನಾನ, ಅರಿಣ ಹಚ್ಚುವುದು, ಮೆಹಂದಿ ಕಾರ್ಯ ಇರುತ್ತದೆ.

ಹೆಣ್ಣಿನ ಕಡೆಯವರೇ ಮದುವೆ ಮಾಡಿ ಕೊಡುತ್ತಾರೆ. ಕೆಲವು ವೇಳೆ ಗಂಡಿನ ಮನೆಯಲ್ಲಿಯೂ ಮದುವೆ ನಡೆಯುತ್ತದೆ. ಮೊದಲು ಕನ್ಯಾಶುಲ್ಕ (ತೆರವು) ರೂಢಿಯಲ್ಲಿತ್ತು. ಈಗ ವರದಕ್ಷಿಣೆ ಪ್ರಚಾರಕ್ಕೆ ಬಂದಿದೆ. ಮದುವೆಗೆ ಪೂರ್ವದಲ್ಲಿ ನಿಶ್ಚಿತಾರ್ಥ ಮಾಡುತ್ತಾರೆ. ಮದುವೆಯಲ್ಲಿ ವರ ಕನ್ಯಾಗಳಿಗೆ ಕಂಕಣ ಬಾಸಿಂಗ ಕಟ್ಟುತ್ತಾರೆ. ತಲೆಯ ಮೇಲೆ ಅಕ್ಷತೆ ಹಾಕುತ್ತಾರೆ. ಮದುವೆಯಲ್ಲಿ ಮಗಳಿಗೆ ಏನೂ ಕೊಡದಿದ್ದರೂ ಚಿಂತೆಯಿಲ್ಲ ಒಂದು ಹೊಲಿಗೆ ಯಂತ್ರ ಮಂತ್ರ ಕೊಟ್ಟೆ ಕೊಡುತ್ತಾರೆ. ಗಂಡ ಸತ್ತರೆ, ಅಥವಾ ಬಿಟ್ಟರೆ ಮರು ಮದುವೆ ಮಾಡುತ್ತಾರೆ.

ಇತ್ತೀಚೆಗೆ ಸಾಮೂಹಿಕ ವಿವಾಹ ಅಂತರ್ ಜಾತಿ ವಿವಾಹ ನಡೆಯುತ್ತಿದೆ. ಇವರು ಗಂಡಸರ ಹೆಸರಿನ ಮುಂದೆ ರಾವ್ ಹಚ್ಚುತ್ತಾರೆ ಮತ್ತು ಪಂಥಾ ನಾರ್ಥ ಕೂಡ ಹಚ್ಚುತ್ತಾರೆ. ಹೆಣ್ಣುಮಕ್ಕಳ ಹೆಸರಿಗೆ ಬಾಯಿ ಹಚ್ಚುತ್ತಾರೆ. ಹೆಣ್ಣುಮಕ್ಕಳು ಹೆಚ್ಚಾಗಿ ಮನೆಗೆಲಸ ಮಾಡುತ್ತಾರೆ.

ಸೀಮಂತ :

ಹೆಣ್ಣುಮಕ್ಕಳು ಮೊದಲಸಲ ಗರ್ಭಿಣಿಯಾದಾಗ ೪ನೇ ತಿಂಗಳು, ಕಳ್ಳ, ಕುಪ್ಪಸ, ೭ ಅಥವಾ ೯ನೇ ತಿಂಗಳಲ್ಲಿ ಸೀಮಂತ ಮಾಡುವಾಗ ಗರ್ಭಿಣಿಗೆ ಹಸಿರುಬಳೆ ಹಸಿರು ಸೀರೆ ತಂದು ಉಡಿಸಿ ಉಡಿಯಕ್ಕಿ ಹಾಕಿ ಉಡುಗೊರೆ ಶಾಸ್ತ್ರ ಮಾಡುತ್ತಾರೆ. ಮೊದಲು ಚೊಚ್ಚಿಲ ಹೆರಿಗೆ ತವರು ಮನೆಯಲ್ಲಿ ಮಾಡಿಸುತ್ತಾರೆ. ೧೦ ದಿನ ಸೂತಕ ಕಳೆದು ೧೧ನೇ ದಿನಕ್ಕೆ ಶುದ್ಧೀಕರಿಸಿ ಗಂಡಾದರೆ ೧೨ನೇ ದಿನಕ್ಕೆ. ಹೆಣ್ಣಾದರೆ ೧೩ನೇ ದಿನಕ್ಕೆ ನಾಮಕರಣ ಮಾಡುತ್ತಾರೆ. ಜಾವುಳ ಕಾರ್ಯ ಮಾಡುತ್ತಾರೆ.

ಶವ ಸಂಸ್ಕಾರ:

ಇವರಲ್ಲಿ ಹೆಚ್ಚಾಗಿ ಹೆಣವನ್ನು ಅಗ್ನಿ ಸಂಸ್ಕಾರ ಮಾಡುತ್ತಾರೆ. ಕೆಲವೆಡೆ ಹೂಳುತ್ತಾರೆ, ೫ ವರ್ಷದ ಕೆಳಗಿನ ಮಕ್ಕಳು ಸತ್ತರೆ ಹೂಳುತ್ತಾರೆ ಮತ್ತು ಹಿರಿಯ ಮಗನಿಂದ ಅಗ್ನಿ ಸಂಸ್ಕಾರ ಮಾಡಿಸುತ್ತಾರೆ. ಸತ್ತ ಮನೆಯಲ್ಲಿ ೧೦ ದಿನ ಸೂತಕ ಆಚರಿಸುತ್ತಾರೆ. ೧೧ನೇ ದಿನಕ್ಕೆ ಬಂಧು – ಬಾಂಧವರೊಂದಿಗೆ ಸಿಹಿ ಊಟ ಮಾಡುತ್ತಾರೆ. ಪ್ರತಿ ವರ್ಷ ಸತ್ತವರ ಶ್ರಾದ್ಧವನ್ನು ಮಾಡುವ ಪದ್ಧತಿ ರೂಢಿಯಲ್ಲಿದೆ. ಸರ್ವ ಪಿತೃ ಅಮವಾಸ್ಯೆಯ ದಿನ (ಮಹಾಲಯ ಅಮವಾಸ್ಯೆ) ಪಿತೃಗಳಿಗೆ ತರ್ಪಣ ಕೊಡುವ ಸಂಪ್ರದಾಯ ಕೆಲವರಲ್ಲಿ ರೂಢಿಯಲ್ಲಿದೆ.

ನ್ಯಾಯ ಪದ್ಧತಿ :

ಇವರದೇ ಆದ ನ್ಯಾಯ ಮಂಡಳಿ ಇದೆ. ಸರಪಂಚ ಎಂದು ಕರೆಯುತ್ತಾರೆ. ೯ ಜನ ಹಿರಿಯರು ಇದರಲ್ಲಿ ಸದಸ್ಯರಾಗಿರುತ್ತಾರೆ. ಅದರಲ್ಲಿಯೇ ಹಿರಿಯರಾದವರು ಅಧ್ಯಕ್ಷರಾಗಿರುತ್ತಾರೆ. ಏನೇ ಜಗಳ -ಜೂಟಿ, ಗಂಡು -ಹೆಣ್ಣಿನ ಸಮಸ್ಯೆ, ಮದುವೆ ಸಂದರ್ಭ ಹೀಗೆ ಎಲ್ಲ ಮುಖ್ಯ ಕಾರ್ಯಗಳು ಇವರ ಸಮ್ಮುಖದಲ್ಲಿಯೇ ನಡೆಯುತ್ತವೆ. ಇವರ ತೀರ್ಮಾನವೇ ಅಂತಿಮವಾಗಿರುತ್ತದೆ. ಅದನ್ನು ಯಾರೂ ಮೀರಿ ನಡೆಯುವಂತಿಲ್ಲ.

ಹಬ್ಬಹರಿದಿನಗಳು :

ದುಡಿಮೆಗಿಂತ ನಮ್ಮಲ್ಲಿ ಧಾರ್ಮಿಕ ಭಾವನೆಗೆ ಹಬ್ಬ – ಹರಿದಿನಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಹಿಂದೂಗಳಿಗೆ ವರ್ಷದ ತುಂಬ ಹಬ್ಬಗಳನ್ನಾಚರಿಸುವ ವ್ರತ – ಉಪವಾಸ ಕೈಗೊಳ್ಳುವ ಅನೇಕ ವ್ರತ ದಿನಗಳಿವೆ. ವಿವಿಧ ಪಂಗಡದ ಎಲ್ಲ ಹಿಂದೂಗಳು ಆಚರಿಸುವ ಹಬ್ಬಗಳನ್ನು ಈ ರಂಗಾರೇರು ಆಚರಿಸುತ್ತಾರೆ.

ಯುಗಾದಿ, ಅಕ್ಷಯ ತೃತೀಯಾ, ಹನುಮ ಜಯಂತಿ, ಪಂಚಮಿ, ಗಣೇಶ ಚೌತಿ, ದೀಪಾವಳಿ ಮುಂತಾದ ಎಲ್ಲ ಮಹತ್ವದ ಹಬ್ಬಗಳಲ್ಲದೆ ವಿಶೇಷವಾಗಿ ದಸೆಯನ್ನು ಬಹು ವಿಜೃಂಭಣೆಯಿಂದ ಮಾಡುತ್ತಾರೆ. ಹತ್ತು ದಿನ ಅಂಬಾಭವಾನಿ ಹಾಡು ಹೇಳುತ್ತಾರೆ.

ಶ್ರಾವಣ ಮಾಸದಲ್ಲಿ ಸಂಪತ್ ಶುಕ್ರವಾರವಲ್ಲದೇ ಮಹಿಳೆಯರು ವಿಶೇಷವಾಗಿ ಶನಿವಾರ ಲಕ್ಷ್ಮೀ ಕಥೆ ಹೇಳಿ ಪೂಜೆ ಮಾಡುತ್ತಾರೆ.

೫ ತರಹದ ಹಿಟ್ಟಿಗೆ ಮೆಂತೆ ಪಲ್ಯ ಸೇರಿಸಿ ದಪಾಟಿ ಮಾಡುತ್ತಾರೆ. ಇದನ್ನು ಕಾಳ್ನಕುಳ್ಯ್ನಾಚ ರೋಟಿ ಕಾಡಿ ಮೋಟ್ಯಾಚ ಭಾಜಿ ಎಂದು ಕರೆಯುತ್ತಾರೆ. ದಪಾಟಿ ಮಾಡಿ ಮೆಂತ್ಯ ಪಲ್ಯ ತಾಳಿಸಿ ೫ ದಪಾಟಿಗಳನ್ನು ಮಣೆಯ ಮೇಲಿಟ್ಟು ಅದರ ಮೇಲೆ ಮೆಂತೆ ಪಲ್ಯ ಎರಡೂ ಬದಿಗೆ ಮೂಲಂತಿ ಇಟ್ಟು ಪೂಜೆ ಮಾಡುತ್ತಾರೆ. ಇದನ್ನು ನರಸಿಂಹ ನಾರಾಯಣ ಪೂಜೆ ಎಂದು ಕರೆಯುತ್ತಾರೆ. ಇದನ್ನು ಕೆಲವರ ಮನೆಯಲ್ಲಿ ಮಾತ್ರ ಮಾಡುತ್ತಾರೆ.