ವೃತ್ತಿ ಕೌಶಲ್ಯ :

ಈ ಜನಾಂಗ ದರ್ಜಿಗಳಾಗಿ ಕೌಶಲ್ಯ ಹೊಂದಿದ್ದಾರೆ. ಪುರುಷರು ಗಾಂಧೀಟೋಪಿ, ನೆಹರು ಶರ್ಟು ಪೈಜಾಮ ಹೊಲಿಯುವುದರಲ್ಲಿ ವಿಶೇಷ ಪ್ರಾವೀಣ್ಯತೆ ಹೊಂದಿದ್ದಾರೆ.

ಈ ರಂಗಾರಿ ಜನಾಂಗದ ಸ್ತ್ರೀಯರು ಕರಕುಶಲ ಕಲೆಯಲ್ಲಿ ಪರಿಣಿತರಾಗಿದ್ದಾರೆ. ಸೀರೆಯ ಮೇಲೆ ಜರೀ ದಾರದ ಕಸೂರಿ, ಮುತ್ತಿನ ಕಸೂತಿ ಮಾಡುತ್ತಾರೆ. ರೇಷ್ಮೆಯ ಸೀರೆಗಳಿಗೆ ಗೊಂಡೆ ಕಟ್ಟುವುದು ವಾಡಿಕೆ. ಕುಸುರಳ್ಳಿನ ಸಾಮಾನು ತಯಾರಿಕೆ ವಿರಳವಾಗಿ ಮಾಡುತ್ತಾರೆ. ಎಲೆ, ಚೀಲ, ಹಣದ ಚೀಲ ತಯಾರಿಸುತ್ತಾರೆ. ಹೆಚ್ಚಾಗಿ ಹೊಲಿಗೆ ಹೊಲಿಯುವಲ್ಲಿ ಪಳಗಿದವರಾಗಿದ್ದಾರೆ. ಸಣ್ಣ ಮಕ್ಕಳ ಜಬಲಾ, ಅಂಗಿ, ಕುಲಾಯಿ ಕುಂಚಿಗೆ ವಿಶೇಷವಾಗಿ ಹಳ್ಳಿಯ ಮಹಿಳೆಯರಿಗೆ ಕುಪ್ಪಸ ಹೊಲಿಯುವಲ್ಲಿ ಪ್ರವೀಣರಾಗಿದ್ದಾರೆ. ಕುಪ್ಪಸ ಹೊಲಿಯುವುದು ಇಂದಿಗೂ ಬೇರೆ ಯಾವುದೇ ಜನಾಂಗದ ದರ್ಜಿಗಳಿಗೆ  ಬಿಟ್ಟುಕೊಟ್ಟಿಲ್ಲ. ಬಜಾರದಲ್ಲಿ ರಸ್ತೆಯ ಪಕ್ಕಕ್ಕೆ ಹೊಲಿಗೆಯ ಯಂತ್ರ ಇಟ್ಟುಕೊಂಡು ಹೊಲಿಗೆ ಕಾಯಕ ಮಾಡುತ್ತಾರೆ.

ಸಾಹಿತ್ಯ :

ಈ ಜನಾಂಗದಲ್ಲಿ ಇದುವರೆಗೂ ಒಬ್ಬ ಸಾಹಿತಿಯೂ ಇಲ್ಲದಿರುವುದು ತಿಳಿದು ಬರುತ್ತದೆ. ಆದರೆ ವಿಜಾಪೂರದ ಶ್ರೀಮತಿ ಸುನಂದಾ ಮಹೀಂದ್ರಕರ ಮಾತ್ರ ಕೆಲವು ಕತೆ ಹಾಗೂ ಘಟನೆಗಳನ್ನೇ ಕಥಾರೂಪದಲ್ಲಿ ನಿರೂಪಿಸಿದ್ದಾರೆ.

ನಗು ಮಗಳೆ ನೀ ನಗು :
ನಗು ಮಗಳೆ ನೀ ನಗು
ಕಷ್ಟ ಬಂದಿತೆಂದು ಅಳುತ್ತಾ ಮೂಲಗುಂಪಾಗದೆ
ನಗು ಮಗಳೆ ನೀ ನಗು

ನೀ ನಕ್ಕು ಎಲ್ಲರನ್ನು ನಗಿಸು
ಹೆಣ್ಣುಮಗುವಾಯಿತೆಂದು ದುಃಖಿಸದೆ
ಮನೆಗೆ ಲಕ್ಷ್ಮೀ ಬಂದಳೆಂದು ನಗು
ಅವಳಿಗೆ ಶಿಕ್ಷಣ – ಸಂಸ್ಕಾರವ ಕೊಟ್ಟು
ಹೋದ ಮನೆಯ ಬೆಳಕಾದಳೆಂದು
ನಗು ಮಗಳೆ ನೀ ನಗು

ಕಷ್ಟ -ಸುಖಗಳನು ಧೈರ್ಯದಿಂದ
ಪಾರು ಮಾಡಿ ನಗು ಮಗಳೆ ನೀ ನಗು
ಸಂಸಾರವೆಂಬ ಸಮುದ್ರದಲ್ಲಿ
ಈಜಾಡಿ ದಂಡೆಗೆ ಬಂದು
ನಗು ಮಗಳೆ ನೀ ನಗು

ನೀ ನಕ್ಕರೆ ಜಗ ನಗುವುದು
ಎರಡು ಮನೆಗಳಿಗೆ ದಾರಿ ದೀಪವಾಗಿ
ವಂಶೋದ್ಧಾರಕಳಾದಳೆಂದು
ನಗು ಮಗಳೆ ನೀ ನಗು

ಸಾಹಿತ್ಯ ಪ್ರಚಲಿತ ಸಾಮಾನ್ಯವಾದ ಒಡಪು (ಒಗಟು)ಗಳನ್ನುಗಂಡನ ಹೆಸರು ಹೇಳುವಾಗ ಬಳಸುವುದು ಕಂಡು ಬರುತ್ತದೆ.  ಕೆಲವು ಮರಾಠಿಯಲ್ಲಿಯೂ ಇವೆ.

ಒಗಟುಗಳು

ಉದಾ :

೧. ಗೋಧಿ ಬಕ್ಕರಿ ಚೀನಿ ಸಕ್ಕರಿ ಮೋಜ ಮಾಡತಾ ಮಗನ ಆಡುತ್ತಾರೆ..

೨. ಮಂಗನಿಗೆ ಅಂತಾರ ಕೋತಿ, ಹಿಂದೂದೇಶದಲ್ಲಿ ಅನೇಕ ಜಾತಿ . ರಾಯರು ನನ್ನ ಮೇಲೆ ಬಹು ಪ್ರೀತಿ.

೩. ಮಹಾರಾಷ್ಟ್ರಕ್ಕೆ ಮುಖ್ಯ ಶಿವಾಜಿ, ಕರ್ನಾಟಕಕ್ಕೆ ಮುಖ್ಯ ಮಾಧವಜಿ,… ರಾಯರಿಗೆ ಜನರು ಅಂತಾರೆ ಜೀ ಜೀ.

೪. ಸತ್ಯ ಧರ್ಮದ ಮೂಲ, ನೀತಿ ನಡತೆಯ ಮೂಲ, ಶೀಲ ಶಾಂತಿಯ ಮೂಲ, ಸ್ವಾರ್ಥ ಪಾಪದ ಮೂಲ, … ರಾಯರು ನನಗೆ ಬಲು ಅನುಕೂಲ.

೫. ಬಸವಣ್ಣ ಮಾಡಿದ್ದು ದೇಶೋದ್ಧಾರ, ಗಾಂಧಿಜೀ ಮಾಡಿದ್ದು ಅಷ್ಪೃಶೋದ್ಧಾರ.. ರಾಯರು ಮಾಡಿದ್‌ಉ ನನ್ನ ಜನ್ಮದ ಉದ್ಧಾರ.

 

ಗಾದೆ ಮಾತು :

ನಿತ್ಯ ಜೀವನದಲ್ಲಿ  ಇವರು ಬಳಸುವ ಗಾದೆಗಳು ಸಾಮಾನ್ಯವಾಗಿ ಎಲ್ಲರೂ ಬಳಸುವ ಗಾದೆಗಳನ್ನೇ

ಉದಾ :

೧. ಹೊತ್ತಿಗಾದವನೇ ಉತ್ತಮ ಗೆಳೆಯ

೨. ದುಡ್ಡೇ ದೊಡ್ಡಪ್ಪ, ವಿದ್ಯೆ ಅವನಪ್ಪ

೩. ತನ್ನನ್ನು ತಾನು ಅರಿತವನೇ ಜಾಣ

೪. ಬೆಳ್ಳಗಿರುವುದೆಲ್ಲ ಹಾಲಲ್ಲ

೫. ಓದುವಕ್ಕಾಲು ಬುದ್ಧಿ ಮುಕ್ಕಾಲು

೬. ಯಥಾ ರಾಜ, ತಥ ಪ್ರಜಾ

ಮುಂತಾದ ಪ್ರಚಲಿತದಲ್ಲಿರುವ ಒಗಟು ಹಾಗೂ ಗಾದೆಗಳ ಬಳಕೆ ಕಾಣುತ್ತೇವೆ.

 

ಸಾಧನೆಗೈದ ರಂಗಾರಿ ಮಹಿಳೆಯರು

ಶ್ರೀಮತಿ ಭಾರತಿ ವಿಷ್ಣುವರ್ಧನ :

ಹುಟ್ಟಿದ ಊರು : ಬೆಂಗಳೂರು

ತಂದೆ : ವ್ಹಿ. ಎಂ. ರಾಮಚಂದ್ರರಾವ್ (ಬಟ್ಟೆ ವ್ಯಾಪಾರ)

ತಾಯಿ : ಭದ್ರಾವತಿ ಬಾಯಿ

ವಿದ್ಯಾಭ್ಯಾಸ : ಪಿಯುಸಿ (ಮಹಾರಾಣಿ ಕಾಲೇಜು)

ಹುಟ್ಟಿದ ದಿನಾಂಕ : ೧೫.೮.೧೯೫೦

ಹವ್ಯಾಸ : ಕ್ರೀಡೆ, ಸಂಗೀತ, ಭರತನಾಟ್ಯ

ಚಿತ್ರರಂಗ : ಕಲ್ಯಾಣಕುಮಾರ ಇವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು.

ತಂದೆತಾಯಿಯ, ಶಿಕ್ಷಕರ ಒತ್ತಾಯದ ಮೇರೆಗೆ ೧೫ ವರ್ಷ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ದಾಂಪತ್ಯ : ೧೯೭೫ರಲ್ಲಿ ಸಾಹಸ ಸಿಂಹ ಡಾ. ವಿಷ್ಣುವಿರ್ಧನ ಇವರ ಜೊತೆ ಅಂತರ್ ಜಾತಿಯ ವಿವಾಹವಾಯಿತು. ಆದರ್ಶ ದಾಂಪತ್ಯಕ್ಕೆ ಹೆಸರಾಗಿದ್ದಾರೆ.

ಪ್ರಶಸ್ತಿಗಳು :

೧೯೬೫ರಲ್ಲಿ ಸಂದ್ಯಾರಾಗ ಚಿತ್ರಕ್ಕೆ , ೧೯೬೭ರಲ್ಲಿ ಶ್ರೀ ಕೃಷ್ಣದೇವರಾಯ ಚಿತ್ರಕ್ಕೆ, ತಮಿಳಿನಲ್ಲಿ ನವರಸ ನಾಯಕಿ ಪ್ರಶಸ್ತಿ, ಕಲಾ ಸರಸ್ವತಿ ಪ್ರಶಸ್ತಿ, ಮಲಯಾಳಂ ಚಿತ್ರಕ್ಕೆ ಬೆಸ್ಟ್ ಆರ್ಟಿಸ್ಟ್ ಅವಾರ್ಡ್, ಪ್ರೀತಿ ಪ್ರೇಮ ಪ್ರಣಯ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅಭಿಮಾನಿಗಳಿಂದ ಮುದ್ದು ನಟ್ಟಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಶ್ರೀಮತಿ ಭಾರತಿಯವರನ್ನು ಅರಸಿಕೊಂಡು ಬಂದಿವೆ.

ಹೆಸರಾಂತ ಜನಪ್ರಿಯ ಚಿತ್ರ ತಾರೆ, ಕನ್ನಡ ಚಿತ್ರಂಗದ ಸುವರ್ಣ ಯುಗ ಕಂಡ ಮುದ್ದು ನಟಿ ಶ್ರೀಮತಿ ಭಾರತಿ ೧೯೬೬ರಲ್ಲಿ ಲವ್ ಇನ್ ಬೆಂಗಳೂರು ಚಿತ್ರದ ಮೂಲಕ ಬೆಳ್ಳೀತೆರೆ ಪ್ರವೇಶ ಪಡೆದರು. ಹಿಂದಿ, ತಮಿಳು, ತೆಲುಗು, ಭಾಷಾ ಚಿತ್ರಗಳಲ್ಲೂ ಅಭಿನಯಿಸಿ ಖ್ಯಾತರಾಗಿದ್ದ ಶ್ರೀಮತಿ ಭಾರತಿ ೨೦೦ ಚಿತ್ರಗಳಲ್ಲಿ ನಟಿಸಿದ ಶ್ರೇಷ್ಠ ಕಲಾವಿದೆ. ಕನ್ನಡ ಚಿತ್ರ ಜಗತ್ತಿನಲ್ಲಿ ರಾಜಕುಮಾರ ಭಾರತಿ ತೆರೆಯ ಮೇಲಿನ ಅತ್ಯಂತ ಜನಪ್ರಿಯ ನಾಯಕ ನಾಯಕಿಯರಾಗಿ ಕಾಣಿಸಿಕೊಂಡು ಕನ್ನಡ ಚಿತ್ರ ಪ್ರೇಮಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದ ಹೇಳಿ ಮಾಡಿಸಿದ ಜೋಡಿ.

ಭಾರತಿ – ರಾಜಕುಮಾರ ಅಭಿನಯಿಸಿದ ಬಂಗಾರದ ಮನುಷ್ಯ ೧೦೪ ವಾರಗಳವರೆಗೆ ಪ್ರದರ್ಶನಗೊಂಡು ಕನ್ನಡದಲ್ಲಿ ಇದುವರೆಗೆ ಇನ್ನೂ ಮುರಿಯಲಾಗದ ದಾಖಲೆ ಚಿತ್ರ. ಇದರಲ್ಲಿ ಭಾರತೀಯವರ ಪಾತ್ರ ಕಿರಿದಾದರೂ ಕನ್ನಡಿಗರ ಮನದಲ್ಲಿ ನೆಲಯಾಗಿ ನಿಂತಿದ್ದಾರೆ. ಕಂಪ್ಲಿಯಲ್ಲಿ ಮಹಿಳೆಯೊಬ್ಬಳು ಅವರ ಫೊಟೋಕ್ಕೆ ಹಾರ ಹಾಕಿ ನಿತ್ಯ ಪೂಜೆ ಮಾಡುತ್ತಿದ್ದುದು ಭಾರತೀಯರ ಅಭಿನಯ ಚಿತ್ರ ಪ್ರೇಮಿಗಳ ಹೃದಯದಲ್ಲಿ ನೆಲೆ ನಿಂತಿರುವುದಕ್ಕೆ ಸಾಕ್ಷಿ. ಹೀಗೆ ಅಭಿಮಾನಿಗಳ ಗೌರವಕ್ಕೆ ಪಾತ್ರರಾದ ಹೆಸರಾಂತ ಜನಪ್ರಿಯ ಚಿತ್ರತಾರೆ ಎನ್. ಭಾರತಿಯವರು ಲವ್ ಇನ್ ಬೆಂಗಳೂರು ದಿಂದ ಪ್ರೀತಿ ಪ್ರೇಮ ಪ್ರಣಯ ಚಿತ್ರದವರೆಗೆ ಅವರು ನಡೆದು ಬಂದ ಹಾದಿ ಅಭೂತಪೂರ್ವವಾದದ್ದು.

ಅವರಿಗೆ ತೃಪ್ತಿ ಕೊಟ್ಟ ಚಿತ್ರಗಳು : ಶ್ರೀ ಕೃಷ್ಣದೇವರಾಯ, ಬಾಳು ಬೆಳಗಿತು, ಭಾಗ್ಯಜ್ಯೋತಿ, ಯಲ್ಲಮ್ಮ, ಗಂಡೊಂದು ಹೆಣ್ಣಾರು, ಬಂಗಾರದ ಮನುಷ್ಯ ಅದರಲ್ಲೂ ಭಾರತಿಯವರ ಮನಸ್ಸಿಗೆ ತೃಪ್ತಿತಂದುಕೊಟ ಪಾತ್ರಗಳೆಂದರೆ, ಋಣಮುಕ್ತಳು, ಕಲ್ಲರಳಿ ಹೂವಾಗಿ ಹೀಗೆ ಇನ್ನೂ ಅನೇಕ ಚಿತ್ರಗಳುಂಟು.

 

ಸುನಂದಾತಾಯಿ ಮಹೀಂದ್ರಕರ ಅವರ ಕಿರು ಪರಿಚಯ :

ಜನ್ಮ ದಿನಾಂಕ : ೨೯.೫.೧೯೩೬

ಹುಟ್ಟಿದ ಊರು : ಹರಪನಹಳ್ಳಿ

ಶಿಕ್ಷಣ : ಎಸ್.ಎಸ್.ಎಲ್.ಸಿ. ದಾವಣಗೆರೆಯಲ್ಲಿ

ಮದುವೆ : ೫.೧೨.೧೯೫೪

ಡಾ. ಮನೋಹರಕುಮಾರ್ ಮಹೀಂದ್ರಕರ ವಿಜಾಪೂರ ಇವರ ಜೊತೆಗೆ.

ಮಕ್ಕಳು : ಇಬ್ಬರು ಹೆಣ್ಣುಮಕ್ಕಳು ನಾಲ್ಕು ಜನ ಮೊಮ್ಮಕ್ಕಳು. ೧೯೬೦ರಲ್ಲಿ ರಾಜಕೀಯ ಪ್ರವೇಶ. ಪತಿ ಡಾ. ಮಹೀಂದ್ರಕರ್ ಜೊತೆ ಜನಸಂಘದಲ್ಲಿ ಜಿಲ್ಲಾಧ್ಯಕ್ಷರಾಗಿ, ಜಿಲ್ಲೆಯಾದ್ಯಂತ ಪ್ರವಾಸ ಸಂಘಟನೆಯ ಕೆಲಸ ಪ್ರಾಂತೀಯ ಪದಾಧಿಕಾರಿ ಹಾಗೂ ರಾಷ್ಟ್ರೀಯ ಪದಾಧಿಕಾರಿಯಾಗಿ, ಇಂದಿರಾ ಗಾಂಧಿ ವಿಜಾಪೂರ ಜಿಲ್ಲೆಯ ಆಲಮಟ್ಟಿಗೆ ಬರಗಾಲದ ವೀಕ್ಷಣೆಗಾಗಿ ಬಂದಾಗ ಪ್ರಮುಖ ಪಾತ್ರ ವಹಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದ ದಿಟ್ಟ ಮಹಿಳೆ. ಮುಂದೆ ಜನತಾ ಪಾರ್ಟಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ, ೧೯೮೦ರಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಪ್ರಾಂತೀಯ ಉಪಾಧ್ಯಕ್ಷರಾಗಿ ಅಟಲ್ ಬಿಹಾರಿ ವಾಜಪೇಯಿ ಜೊತೆ ಎರಡು ಬಾರಿ ಪ್ರಾಂತೀಯ ಪ್ರವಾಸ, ಸಂಘಟನೆ ಹಾಗೂ ಪಾರ್ಟಿ ಪ್ರಚಾರ ಕೆಲಸ. ಶ್ರೀ ಲಾಲ್ ಕೃಷ್ಣ ಅದವಾನಿಯವರ ಜೊತೆ ಪ್ರವಾಸ ಮಾಡಿ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡವರು. ೧೯೯೦-೯೫ರ ವರೆಗೆ ವಿಜಾಪೂರ ನಗರ ಸಭೆಯಲ್ಲಿ ಬಿಜೆಪಿಯ ಏಕೈಕ ಸದಸ್ಯರಾಗಿ ಆರಿಸಿ ಬಂದು ನಗರದ ನೀರಿನ ಸಮಸ್ಯೆ ಹಾಗೂ ಅನೇಕ ಮಹಿಳೆಯರ ಸಮಸ್ಯೆಗಳ ವಿರುದ್ಧ ಸತತ ಹೋರಾಟ ಮಾಡಿ ಜನರ ಪ್ರೀತಿ ಗಳಿಸಿದ್ದಾರೆ.

ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಸಮಾಜದ ಮಹಿಳಾ ಪರಿಷತ್ ಅಧ್ಯಕ್ಷರಾಗಿ ಐದು ವರುಷಗಳವರೆಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ ಪ್ರಾಂತಗಳಲ್ಲಿ ಮಹಿಳೆಯರ ಸಂಘಟನೆ ಮಹಿಳಾಮಂಡಲಿಗಳ ಸ್ಥಾಪನೆ, ಮಹಿಳ ಜಾಗೃತಿ ಸಲುವಾಗಿ ಸತತ ಪ್ರವಾಸ ಹಾಗು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಆದರ್ಶ ಮಹಿಳಾ ಮಂಡಳ ಹಾಗೂ ಜಿಲ್ಲಾ ಮಹಿಳಾ ಮಂಡಳಗಳ ಜಲ್ಲಾ ಮಟ್ಟದ ಅಧ್ಯಕ್ಷರಾಗಿ ಸತತ ಮಹಿಳೆಯರ ಅನ್ಯಾಯದ ಹಾಗೂ ಶೋಷಣೆಯ ವಿರುದ್ಧ ಹೋರಾಡುತ್ತಿದ್ದಾರೆ. ಭಾವಸಾರ ಕ್ಷತ್ರೀಯ ಕೋ ಆಪರೇಟಿವ್ ಸೊಸೈಟಿ ಡೈರೆಕ್ಟರ್ ರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

 

ಶ್ರೀಮತಿ ಯಶೋದಾ ವಿಠ್ಠಲರಾವ್ ಗುಜ್ಜರ :

ಜನನ : ೨೪.೧೧.೧೯೫೧ (ಮೂಲ ಸ್ಥಳ ಹರಿಹರ)

ತಂದೆ : ಶ್ರೀ ಆರ್.ಟಿ. ನಾರಾಯಣರಾವ್ (ಸೈನಿಕರ ಬಟ್ಟೆ ಹೊಲಿಗೆ ಕೆಲಸ)

ತಾಯಿ : ಶ್ರೀಮತಿ ರತ್ನಾ

ಶಿಕ್ಷಣ : ಎಸ್.ಎಸ್.ಎಲ್.ಸಿ. ವರೆಗೆ

ಇವರು ಕೂಡ ೧೯೯೬ ರಿಂದ ಪೂಜಾ ಮಹಿಳಾ ಮಂಡಳದ ಮೂಲಕ ಮಹಿಳೆಯರಿಗೆ ಹೊಲಿಗೆ, ಕಸೂರಿ, ಉಣ್ಣೆ ಕಸೂತಿ ಸಣಬು,  ಕರಕುಶಲ ತರಬೇತಿಗಳನ್ನು ಆಯೋಜಿಸಿದ್ದರಲ್ಲದೆ, ೧೯೯೮ರಲ್ಲಿ ರತ್ನ ಮಹಿಳಾ ಮಂಡಳದ ಮೂಲಕ ವಿಜಾಪೂರದಲ್ಲಿ ನ್ಯಾಯ ಬೆಲೆ ಅಂಗಡಿ ನಡೆಸುತ್ತಿದ್ದಾರೆ. ಸಾಕ್ಷರತೆಗಾಗಿ ದುಡಿಯುತ್ತಿದ್ದಾರೆ. ಮಹಿಳೆಗೆ ಆರ್ಥಿಕ ಭದ್ರತೆಗಳಿಗಾಗಿ ಲಂಬಾಣಿ ಉಡುಪು ತಯಾರಿಕೆ ಸೀರೆಗಳಿಗೆ ಕಸೂತಿ, ಗೊಂಡೆ, ಕುಸುರಿನ ಕೆಲಸ ಕಲಿಸುತ್ತ ಉತ್ಪಾದಿತ ವಸ್ತುಗಳನ್ನು ಅಲ್ಲಲ್ಲಿ ಪ್ರದರ್ಶನ ಮಾರಾಟ ಮಾಡುತ್ತಾರೆ. ಮಹಿಳಾ ಮಂಡಳದ ಉತ್ಪನ್ನಗಳನ್ನು ಕೆನಡಾ ಥಾಯಲ್ಯಾಂಡ್ ಸಿಂಗಾಪೂರಕ್ಕೆ ಕಳುಹಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯದ ಪ್ರತಿಷ್ಠಿತ ರಾಣಿ ಚೆನ್ನಮ್ಮ ಪ್ರಶಸ್ತಿ, ಝೀ ಕನ್ನಡ ವಾಹಿನಿ ಸಮಾಜ ಸೇವಾ ಪ್ರಶಸ್ತಿ, ಕಸ್ತೂರಬಾ ಗಾಂಧಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಭಾವಸಾರ ಕ್ಷತ್ರಿಯ ಜನಾಂಗದ ಸಮಾಜೋದ್ಧಾರ ಕಾರ್ಯ ಚಟುವಟಿಕೆಗಳು :

ಹಿಂದುಳಿದ ವರ್ಗಗಳ ಜನಾಂಗಗಳು ಸ್ವಯಂ ಪ್ರಜ್ಞಾವಂತಿಕೆ ಹೊಂದಿ ಸಮಾಜದ ಉದ್ಧಾರದೆಡೆಗೆ ಹೆಜ್ಜೆ ಹಾಕಿರುವುದು ವಿರಳ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ ಮುಂತಾದವರು ಸಾರ್ವತ್ರಿಕವಾಗಿ ಹಿಂದುಳಿದ ಎಲ್ಲ ಜನಾಂಗಗಳ ಏಳಿಗೆಗಾಗಿ ಶ್ರಮಿಸಿದ ಮಹಾತ್ಮರೆನಿಸಿಕೊಂಡರು. ಆದರೆ ಇದರಿಂದ ಸಂಪೂರ್ಣ ಪ್ರಗತಿ ಸಾಧಿಸುವುದು ಅಸಾಧ್ಯ. ಈ ಮುಖ್ಯ ಪ್ರಯತ್ನಕ್ಕೆ ಸಹಕಾರಿಯಾಗಿ ಆಯಾ ಜನಾಂಗದಲ್ಲಿಯ ಪ್ರಜ್ಞಾವಂತರು, ಜನಾಂಗೀಯ ಕಾಳಜಿಯುಳ್ಳ ಸೇವಾ ಕಾರ್ಯಕರ್ತರು ಕೂಡ ಒಂದುಸಣ್ಣ ಪ್ರಯತ್ನ ಮಾಡಿದರೆ ಆ ಸಮಾಜ ಮುಖ್ಯ ವಾಹಿನಿಯತ್ತ ಮುಖ ಮಾಡುತ್ತದೆ.

ಭಾವುಸಾರ ಕ್ಷತ್ರಿಯರ ಸಮಾಜ ಆ ನಿಟ್ಟಿನ ಪ್ರಯತ್ನ ಮಾಡುತ್ತಿರುವುದು ಸಮಾಧಾನಕರ ಸಂಗತಿ ೧೯೧೧ರಲ್ಲಿ ಶ್ರೀ ಶ್ರೀನಿವಾಸರಾವ್ ಟಿಕಾರೆಯವರ ಪ್ರಯತ್ನದಿಂದ ಸಮಾಜ ಕಟ್ಟುವ ಕೆಲಸ ಪ್ರಾರಂಭವಾಗಿ ೧೯೨೪ರಲ್ಲಿ ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತೀಯ ಭಾವುಸಾರ ಕ್ಷತ್ರಿಯ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಯಾದರು. ಅದೇ ಸಭೆಯಲ್ಲಿ ಧಾರವಾಡದ ಹೃದಯ ಭಾಗದಲ್ಲಿ ಒಂದು ಕಟ್ಟಡ ಹಾಗೂ ನಿವೇಶನವನ್ನು ತಮ್ಮ ಪ್ರೀತಿಯ ಚಿಕ್ಕಪ್ಪ ಶ್ರೀ ಕೃಷ್ಣಾಜಿರಾವ್ ಟಿಕಾರೆಯವರ ಹೆಸರಿನಲ್ಲಿ ದಾನ ಮಾಡುವುದಾಗಿ ವಾಗ್ದಾನ ಮಾಡಿ ಸಮಾಜೋದ್ಧಾರಕ್ಕೆ ನಾಂದಿ ಹಾಡಿದರು. ೧೯೨೬ರಲ್ಲಿ ವಿದ್ಯಾರ್ಥಿ ವಸತಿ ನಿಲಯ ಪ್ರಾರಂಭಗೊಂಡು ಇಂದಿಗೂ ಕಾರ್ಯ ರೂಪದಲ್ಲಿದೆ. ಹುಬ್ಬಳಿಯಲ್ಲಿ ೨೦೦೨ರಲ್ಲಿ  ಶ್ರೀ ನಾರಾಯಣರಾವ್ ತಾತೂಸಕರ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಭಾವುಸಾರ ವಿಜನ್ ಹುಬ್ಬಳ್ಳಿಯ ಧ್ಯೇಯಗಳು ಗಮನ ಸೆಳೆಯುತ್ತವೆ.

Our door is always open to the finest people of our samaj who believe in friendship and service ಎಂದು ಎಲ್ಲರನ್ನು ಸೇವೆಗೆ ಕೈಬೀಸಿ ಕರೆಯುತ್ತ ಹೀಗೆ ನಮೂದಿಸಿಕೊಳ್ಳುತ್ತಾರೆ.

Why Join Bhavasar Vision?

Friendship

Personal Growth and Development

Leadership Development

Continuing Education

Entertainment

Fun

Public Speaking Skills

The development of social skills

Family programs

Prestige

Nice Samaj People

No Secret

Business Development

The Opportunity to serve

ಸಮಾಜ ಸೇವೆಗೆ ಮುಖ ಮಾಡಿದ ಪ್ರಜ್ಞಾವಂತರು ಈಗ ಭಾವುಸಾರ ಜನಾಂಗ ಸುಧಾರಣೆಗೆ ಒಪ್ಪಿ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಗುಲಬರ್ಗಾದ ಭಾವುಸಾರ ಕ್ಷತ್ರಿಯ ಸಮಾಜವು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದೆ. ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಮಹಾಸಭೆ ಅನೇಕ ಕಡೆ ಉತ್ತಮ ಕಾರ್ಯಗಳಿಗೆ ಚಾಲನೆ ನೀಡಿರುವುದು ಗಮನಾರ್ಹ ಸಂಗತಿ. ಅದನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.

೧. ಅಖಿಲ ಭಾರತೀಯ ಭಾವುಸಾರ ಕ್ಷತ್ರಿಯ ಮಹಾಸಭೆ ೧೯೧೧ರಲ್ಲಿ ಮುಂಬಯಿಯ ಪರೇಲ್ ನಲ್ಲಿ ಶ್ರೀ ಕಲ್ಯಾಣದಾಸ ಗಡಾಳೆ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು.

೨. ದಿವಂಗತ ಕೃಷ್ಣಾಜಿರಾವ್ ಟಿಕಾರೆ ಬೋರ್ಡಿಂಗ ಟ್ರಸ್ಟ್ ಧಾರವಾಡದಲ್ಲಿ ೧೯೨೬ಕ್ಕೆ ಶ್ರೀ ಮಧುಕರರಾವ್ ಮಹೀಂದ್ರಕರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ಪ್ರಾರಂಭಗೊಂಡಿತು. ಮಂಗಲ ಕಾರ್ಯಾಲಯ, ವಸತಿ ನಿಲಯ, ಕಾರ್ಯಗತಗೊಂಡಿದೆ.

೩. ಅಖಿಲ ಹಿಂದು ಮಹಾಜನವಾದಿ ಮತ್ತು ಬೋರ್ಡಿಂಗ ಟ್ರಸ್ಟ್ ೧೯೩೮ರಲ್ಲಿ ಶ್ರೀ ಕೈಲಾಸ ರೇಣುಕ ಅವರ ಅಧ್ಯಕ್ಷತೆಯಲ್ಲಿ ಅತಿಥಿ ಗೃಹ, ವಿದ್ಯಾರ್ಥಿ ವಸತಿ ನಿಲಯ ಮತ್ತು ಮಂಗಲ ಕಾರ್ಯಾಲಯಗಳು ಮುಂಬಯಿಯಲ್ಲಿ ಕಾರ್ಯಗತಗೊಂಡಿದೆ.

೪. ಅಖಿಲ ಭಾರತೀಯ ಪಂಡರಪೂರ ಧರ್ಮಶಾಲಾ ಪಂಡರಪೂರದಲ್ಲಿ ೧೯೬೫ರಲ್ಲಿ ಪುಣೆಯವರಾದ ಶ್ರೀ ಕೆ.ಬಿ. ಮಹೀಂದ್ರಕರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಗತವಾಗಿದೆ.

೫. ಅಖಿಲ ಭಾರತ ಭಾವುಸಾರ ಜ್ಯೋತಿ ಟ್ರಸ್ಟ್ ಮ್ಯಾಗ್ಝಿನ್ ಮ್ಯಾನೇಜಿಂಗ್ ಟ್ರಸ್ಟೀ ಶ್ರೀ ಜಯಪ್ರಕಾಶ ಎ. ಗೊಂದಕರ್ ಅವರ ನೇತೃತ್ವದಲ್ಲಿ ೧೯೬೯ರಲ್ಲಿ ಪ್ರಾರಂಭಗೊಂಡು ಇಂದಿನವರೆಗೂ ಪುಣೆಯಿಂದ ಪ್ರಕಟಗೊಳ್ಳುತ್ತಿದೆ.

೬. ಅಖಿಲ ಭಾರತೀಯ ಹುಬ್ಬಳ್ಳಿ ಹಾಸ್ಟೆಲ್ ೧೯೬೭ರಲ್ಲಿ ಡಾ. ಬಿ.ಐ. ಮಿರಜಕರ ಅವರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ ಕಾರ್ಯಗತವಾಗಿದೆ.

೭. ಅಖಿಲ ಭಾರತೀಯ ಶ್ರೀ ಮಹಾಲಕ್ಷ್ಮೀ ಮಂದಿರ ಟ್ರಸ್ಟ್ – ಶ್ರೀ ಎಸ್.ಬಿ. ಶಾಂತಾರಾಮ್ ತಾಂದಳೆ ಅವರ ಅಧ್ಯಕ್ಷತೆಯಲ್ಲಿ ಕುಮಾರ ಪಾರ್ಕ್, ಬೆಂಗಳೂರಿನಲ್ಲಿ ಕಾರ್ಯಗತಗೊಂಡಿದೆ.

೮. ಅಖಿಲ ಭಾರತ ಉತ್ಕರ್ಷ ನಿಧಿ ೧೯೮೯ರಲ್ಲಿ ಶ್ರೀ ಜಿ. ಕಲ್ಯಾಣದಾಸ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡು ವಿದ್ಯಾರ್ಥಿವೇತನ, ವಿದ್ಯಾರ್ಥಿಕಲ್ಯಾಣ ಕಾರ್ಯಕ್ರಮ, ಸ್ವಯಂ ಉದ್ಯೋಗ ಮತ್ತು ವಿದೇಶ ವ್ಯಾಸಂಗಕ್ಕಾಗಿ ಸಹಾಯಧನ ಅಣಿಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಮುಖ್ಯ ಕಛೇರಿ ಪುಣೆಯಲ್ಲಿದೆ.

. ಅಖಿಲ ಭಾರತೀಯ ಮಹಿಳಾ ಪರಿಷತ್ :

೧೯೬೭ರಲ್ಲಿ  ಬೆಂಗಳೂರು ಅಧಿವೇಶನದಲ್ಲಿ ಶ್ರೀಮತಿ ಗಿರಿಜಾದೇವಿ ಮಹೀಂದ್ರಕರ (ಬೆಂಗಳೂರು)

೧೯೭೨ರ ನಾಸಿಕ ಅಧಿವೇಶನದಲ್ಲಿ ಶ್ರೀಮತಿ ಇಂದುಮತಿ ಎಸ್. ನಾಲಕರ (ನಂದೂರ)

೧೯೭೯ರ ಬೆಂಗಳೂರು ಅಧಿವೇಶನದಲ್ಲಿ ಶ್ರೀಮತಿ ಲಕ್ಷ್ಮೀ ಮಹೇಂದ್ರಕರ (ಧಾರವಾಡ)

೧೯೮೬ರ ಹೈದರಾಬಾದ್ ಅಧಿವೇಶನದಲ್ಲಿ ಶ್ರೀಮತಿ ನಿರ್ಮಲಾಬಾಯಿ ಲೋಖಂಡೆ (ಹೈದರಾಬಾದ್)

೧೯೯೩ರ ಅಹಮದಾಬಾದ್ ಅಧಿವೇಶನದಲ್ಲಿ ಶ್ರೀಮತಿ ಸ್ಮಿತಾ ಎಂ. ಭಾವುಸಾರ (ಮುಂಬಯಿ)

೧೯೯೮ರ ಸೋಲಾಪೂರ ಅಧಿವೇಶನದಲ್ಲಿ ಶ್ರೀಮತಿ ಸುನಂದಾತಾಯಿ ಮಹೇಂದ್ರಕರ (ವಿಜಾಪೂರ) ಇವರು ಪರಿಷತ್ ಅಧ್ಯಕ್ಷರಾಗಿದ್ದುಕೊಂಡು ಮಹಿಳೆಯರನ್ನು ಜಾಗೃತಗೊಳಿಸುವುದಕ್ಕಾಗಿ ದೇಶದ ವಿವಿಧೆಡೆ ಸಭೆ ಸಮಾರಂಭಗಳನ್ನು ನಡೆಸುತ್ತಿರುವುದು ಮಹಿಳೆಯರ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿದೆ. ಪ್ರಸ್ತುತ ಕರ್ನಾಟಕ ಮಹಿಳಾ ಪರಿಷತ್ ಅಧ್ಯಕ್ಷರಾಗಿ ಶ್ರೀಮತಿ ಜಯಶ್ರೀ ಎನ್. ತಾತೂಸ್ಕರ್ (ಹುಬ್ಬಳ್ಳಿ) ಕಾರ್ಯ ನಿರ್ವಹಿಸುತ್ತಿದ್ದಾರೆ.ಶ್ರೀಮತಿ ಸುನಂದಾತಾಯಿ, ಮಹೀಂದ್ರಕರ ಇವರು ರಾಷ್ಟ್ರೀಯ ಮಹಿಳಾ ಪರಿಷತ್ ನ ಸಲಹೆಗಾರರಾಗಿದ್ದಾರೆ.

ಭಾವುಸಾರ ಸಮಾಜದ ವಿವಿಧ ಅಂಗಗಳಾದ ಯುವಕ ಸಂಘ, ಸಹಕಾರ ಸಂಘ, ಮಹಿಳಾ ಮಂಡಳಿ, ಕಾಸ ವೇದಿಕೆ, ಪದವೀಧರ ಪರಿಷತ್ತು, ಸಾಕಷ್ಟು ಕೆಲಸ ಮಾಡುವ ಯೋಚನೆ ಹಾಕಿಕೊಂಡಿದ್ದಾರೆ. ವಿಜಾಪೂರದಲ್ಲಿ ಹಿಂಗುಲಾಂಬಿಕಾ ಗೃಹ ನಿರ್ಮಾಣ ಸೊಸೈಟಿ ಅಧ್ಯಕ್ಷರಾಗಿ ಶ್ರೀಮತಿ ಸುನಂದಾತಾಯಿ ಮಹೇಂದ್ರಕರ ಅವರು ಶೇಷವಾಗಿ ಆರ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟಿನಲ್ಲಿ ಭಾವುಸಾರ ಕ್ಷತ್ರಿಯ ಜನಾಂಗದ ಮಹಿಳೆಯರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಪುರುಷರೊಂದಿಗೆ ಪ್ರಗತಿಯ ಹೆಜ್ಜೆ ಹಾಕುತ್ತಿರುವುದು ಸಮಾಧಾನಕರ ಸಂಗತಿ.

ಈ ಜನಾಂಗದ ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಬಹುದೆಂಬುದನ್ನು ನಿರೀಕ್ಷಿಸಬಹುದಾಗಿದೆ.

ಅನುಬಂಧ :

ಈ ಸಮಾಜದಲ್ಲಿ ಹೊಲಿಗೆ (ದರ್ಜಿ, ಟೇಲರ್ ) ವೃತ್ತಿಯೊಂದಲೇ ಜೀವನ ನಡೆಸುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಈ ವೃತ್ತಿಯ ಮೇಲೆ ಅಮೇರಿಕಾದ ವಾಲ್ ಮಾರ್ಟ್, ಬಿಗ್ ಬಜಾರ್, ದೊಡ್ಡ ದೇಶಿ ಕಂಪನಿಗಳ ರೆಡಿಮೇಡ್ ವ್ಯಾಪಾರಸ್ಥರಿಂದ ದರ್ಜಿಗಳ ಮೇಲೆ ಗದಾ ಪ್ರಹಾರ ನಡೆಯುತ್ತಿದೆ. ಪಕ್ಕದ ರಾಜ್ಯಗಳಾದ ತುಳುನಾಡು, ಕೇರಳಗಳಲ್ಲಿ ದರ್ಜಿಗಳಿಗೆ ವಿಶೇಷ ರೀತಿಯ ಸವಲತ್ತುಗಳನ್ನು ಕಳೆದ ಹತ್ತಾರು ಷರುಷಗಳಿಂದ ನೀಡುತ್ತಿದ್ದು, ಇದರಿಂದ ದರ್ಜಿಗಳ ಕುಟುಂಬಗಳ ಬದುಕಿಗೆ ಸ್ವಲ್ಪ ಮಟ್ಟಿಗೆ ಅನುಕೂಲಕರವಾಗಿದೆ.

ಕರ್ನಾಟಕದ ಭಾವುಸಾರ ಕ್ಷತ್ರಿಯ (ದರ್ಜಿ) ಬೇರೆ ರಾಜ್ಯಗಳಂತೆ ತಮಗೂ ಸರಕಾರ ಸವಲತ್ತುಗಳನ್ನು ನೀಡಬೇಕೆಂದು ಚಳುವಳಿ, ರಸ್ತಾರೋಖೋ ಮುಂತಾದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಕರ್ನಾಟಕದಲ್ಲಿ ಎಲ್ಲ ಸಮುದಾಯದ ಸುಮಾರು ೧೦ ಲಕ್ಷಕ್ಕೂ ಮಿಕ್ಕಿ ದರ್ಜಿಗಳಿದ್ದು, ಅವರಿಗೆ ಅನುಕೂಲವಾಗುವಂತೆ ಆರ್ಥಿಕ ಪ್ಯಾಕೇಜೊಂದನ್ನು ಸರ್ಕಾರ ಬಿಡುಗಡೆ ಮಾಡಿದರೆ ಸಿಂಪಿಗರ ಸ್ಥಿತಿ ಸುಧಾರಿಸಬಹುದು.

ವಿಶೇಷವೆಂದರೆ – ಈ ಸಮಾಜದಲ್ಲಿ ಭಿಕ್ಷಾಟನೆ ಇಲ್ಲ, ಕಷ್ಟಪಟ್ಟು ದುಡಿದು ಉಣ್ಣುವ ಪ್ರವೃತ್ತಿ ಇದೆ.

ಕ್ಷೇತ್ರ ಕಾರ್ಯಕ್ಕೆ ಸಹಕರಿಸಿದ ಪ್ರಮುಖರು

೧. ಡಾ. ಮನೋಹರ ಮಹೀಂದ್ರಕರ (ವೈದ್ಯರು ಮತ್ತು ರಾಜಕೀಯ ಮುಖಂಡರು)

೨. ಶ್ರೀ ತಾತುಸ್ಕರ (ರಾಜ್ಯಾಧ್ಯಕ್ಷರು ಭಾವಸಾರ ಕ್ಷತ್ರಿಯರು)

೩. ಶ್ರೀ ವ್ಹಿ.ಎನ್. ಹಂಚಾಟೆ (ವಕೀಲರು)

೪. ಶ್ರೀ ದಿಲೀಪ ದೇವಗಿರಿಕರ

೫. ಶ್ರೀ ಮಿಲನ ಮಿರಜಕರ (ಸರಪಂಚ್)

೬. ಶ್ರೀ ವಣಕುಮಾರ ಮಹೀಂದ್ರಕರ

೭. ಶ್ರೀಮತಿ ಸುನಂದಾತಾಯಿ ಮಹೀಂದ್ರಕರ

೮. ಶ್ರೀಮತಿ ಯುಶೋಧಾಬಾಯಿ ಗುಜ್ಜರ