ಗುಳೇದಗುಡ್ದದಲ್ಲಿ ಸುಮಾರು ನಲವತ್ತು ವರ್ಷಗಳ ಹಿಂದಿನಿಂದ ರಂಗ ಚಟುವಟಿಕೆಗಳಿಗಾಗಿಯೇ ನಿರ್ಮಾಣವಾದ ಕರನಂದಿಯವರ ರಂಗಮಂದಿರಕ್ಕೆ ತನ್ನದೇ ಆದ ಪರಂಪರೆ ಇದೆ. “ಕರನಂದಿ” ಮನೆತನವು ರಂಗಸೇವೆಗಾಗಿಯೇ ತಮ್ಮ ಬದುಕನ್ನು ಮೀಸಲಾಗಿಟ್ಟ ವಿಶಿಷ್ಟ ಕುಟುಂಬ. ಇದರ ಹಿರಿಯರಾದ ಗುರುಶಾಂತಪ್ಪ ಕರನಂದಿಯವರು ಪೌರಾಣಿಕ ನಾಟಕಗಳ ಪಾತ್ರಗಳಿಗೆ ಬೇಕಾಗುವ ಜರಿವಸ್ತ್ರಗಳನ್ನು, ಕಿರೀಟ, ನಡುಪಟ್ಟಿ, ಗದೆ ಮುಂತಾದವುಗಳನ್ನು ಸ್ವತಃಮನೆಯಲ್ಲಿ ತಯಾರಿಸಿ ಊರಿಂದೂರಿಗೆ ಹೋಗಿ ಮಾರಿ ಬರುತ್ತಿದ್ದರು. ಇದು ಅವರ ವೃತ್ತಿಯಾಗಿತ್ತು. ನೆರಯ ರಾಜ್ಯವಾದ ಆಂಧ್ರ ಪ್ರದೇಶಕ್ಕೂ ಅವರು ವ್ಯಾಪಾರಕ್ಕಾಗಿ ಹೋಗುತ್ತಿದ್ದರಂತೆ. ಅನಂತಪೂರ ಅವರು ಮೇಲಿಂದ ಮೇಲೆ ಮಾರಾಟಕ್ಕೆ ಹೋಗುವ ಪಟ್ಟಣ, ಅಲ್ಲಿಯ ಭಾಷೆ ಇವರಿಗೆ ಬರದಿದ್ದರೂ ತಾವು ವ್ಯಾಪಾರಕ್ಕಾಗಿ ತಂದ ವಸ್ತುಗಳನ್ನು ಸ್ವತಃ ಧರಿಸಿಕೊಂಡು ಬೀದಿ ಬೀದಿಗಳಲ್ಲಿ ಹೋಗುತ್ತಿದ್ದರಂತೆ. ನಾಟಕಪ್ರಿಯ ಜನ ಅವರು ಹತ್ತಿರ ಬಂದು ಅವುಗಳ ಬೆಲೆ ವಿಚಾರಿಸಿ ಖರೀದಿಸುತ್ತಿದ್ದರಂತೆ ಈ ಪ್ರಸಂಗವನ್ನು ಗುರುಶಾಂತಪ್ಪನವರ ಮೊಮ್ಮಗ ಬಸವರಾಜ ಅತ್ಯಂತ ಸ್ವಾರಸ್ಯಕರವಾಗಿ ಹೇಳುತ್ತಾರೆ.

ಗುರುಶಾಂತಪ್ಪನವರು ಕರನಂದಿ ಅವರು ತರುವಾಯ ಅವರ ಮಗ ರಾಚಪ್ಪ ಕಲಾವಿದರ ತೊಂದರೆಗಳನ್ನರಿತು ಸ್ವತಃರಂಗಮಂದಿರವನ್ನು ನಿರ್ಮಾಣ ಮಾಡಬೇಕೆಂದು ಮನಸ್ಸಿನಲ್ಲಿ ಅಂದುಕೊಂಡು ಅದರಂತೆಯೇ ೧೯೬೧-೬೨ರ ವೇಳೆಗೆ ಶ್ರೀಧನಲಕ್ಷ್ಮೀ ರಂಗಮಂದಿರ”ವೆಂಬ ಹೆಸರಿನ ರಂಗಮಂದಿರವನ್ನು ಪ್ರಾರಂಭಿಸಿದರು. ಪ್ರಾರಂಭಕ್ಕೆ ಈ ರಂಗಮಂದಿರದಲ್ಲಿ ಪಡೆಸೂರ ಕಂಪನಿ (ಹಡೆದವ್ವ ಪ್ರಥಮ ಪ್ರಯೋಗ) ಬ್ಯಾಡಗಿ ಕಂಪನಿ (ಕೊಂಡು ತಂದ ಗಂಡು) ಗಂದಿಗ್ವಾಡ ಕಂಪನಿ (ಗಂಡನ ಮಾನ) ತಿರ್ಲಾಪೂರ ಕಂಪನಿ ಮೊದಲಾದ ನಾಟಕ ಕಂಪನಿಗಳು ತಮ್ಮ ನಾಟಕಗಳನ್ನು ಪ್ರದರ್ಶಿಸಿದವು.

ಕರನಂದಿಯವರು ತಮ್ಮ ರಂಗಮಂದಿರಕ್ಕೆ ಮೊದಲಿದ್ದ “ಶ್ರೀಧನಲಕ್ಷ್ಮೀ ರಂಗಮಂದಿರ” ವೆಂಬ ಹೆಸರನ್ನು ಬದಲಿಸಿ “ಶ್ರೀ ಶಿವಕೃಪಾ ರಂಗಮಂದಿರ” ವೆಂದು ಪುನರ್ ನಾಮಕರಣ ಮಾಡಿಕೊಂಡರು, (೧೯೭೦) ಆಗ ಗೋಕಾಕ ಕಂಪನಿ (ಸಂಪತ್ತಿಗೆ ಸವಾಲ್) ಗುಡಗೇರಿ ಕಂಪನಿ, ಕೆ.ಬಿ.ಆರ್. ಡ್ರಾಮಾ ಕಂಪನಿ. ಅರಿಶಿಣಗೋಡಿ ಕಂಪನಿ, ಸುಳ್ಳ ದೇಸಾಯಿ ಕಂಪನಿ, ಗುಬ್ಬಿ ಕಂಪನಿ, ಮಾಸ್ಟರ್ ಹಿರಣ್ಣಯ್ಯ ಕಂಪನಿ, ಯೋಗಾನರಸಿಂಹ ಅವರ ಚಂದ್ರೋದಯ ನಾಟ್ಯ ಸಂಘ. ಸ್ತ್ರೀ ನಾಟ್ಯ ಮಂಡಳಿ ಬೆಂಗಳೂರು, ಚಿತ್ರದುರ್ಗ ಕುಮಾರಸ್ವಾಮಿ ಕಂಪನಿ, ಗದಗದ ಪಂ. ಪಂಚಾಕ್ಷರಿ ಗವಾಯಿಗಳ ಕಂಪನಿ, ಏಣಗಿ ಬಾಳಪ್ಪನವರ ಕಂಪನಿ, ಪ್ರಕಾಶ ಕಡಪಟ್ಟಿ ಕಂಪನಿ ಹಾಲಾಪುರ ಅಮರೇಶ್ವರ ಕಂಪನಿ ಹೀಗೆ ನೂರಾರು ನಾಟಕ ರಂಗಮಂದಿರದಲ್ಲಿ ಸಾವಿರಾರು ಅಂದಿನಿಂದ ಹಿಡಿದು ಇಂದಿನವರೆಗೂ ಸ್ಥಳೀಯ ಶಿವಕೃಪಾ ರಂಗಮಂದಿರದಲ್ಲಿ ಸಾವಿರಾರು ನಾಟಕಗಳು ರಂಗ ಪ್ರದರ್ಶನ ಕಂಡಿವೆ. ಹವ್ಯಾಸಿ ತಂಡಗಳು ಸಹ ನಾಡಿನ ವಿವಿಧ ಮೂಲೆಗಳಿಂದ ಇಲ್ಲಿಗೆ ಬಂದು ತಮ್ಮ ರಂಗ ಪ್ರದರ್ಶನ ಮಾಡಿವೆ. ನೀನಾಸಂ, ಅಶೋಕ ಬಾದರದಿನ್ನಿ ತಂಡ, ಜ್ಯೂನಿಯರ್ ರಾಜಕುಮಾರ ತಂಡ, ಕಂದಗಲ್ ಹನುಮಂತರಾಯರ ನಾಟಕಗಳ ನಾಟಕೋತ್ಸವ ಸ್ಪರ್ಧೆ, ರಂಗ ಚಿಂತನ ಕಲಾಬಳಗ ಗುಳೇದಗುಡ್ದ, ರಂಗ ಸಮೂಹ ಬಾಗಲಕೋಟ, ಇವು ಮುಖ್ಯ ಹವ್ಯಾಸಿ ತಂಡಗಳಾಗಿವೆ.

ದಿವಂಗತ ರಾಚಪ್ಪ ಕರನಂದಿಯವರು ವೃತ್ತಿರಂಗಭೂಮಿಯ ಮತ್ತು ಹವ್ಯಾಸಿ ರಂಗಭೂಮಿಯ ರಂಗ ಪರಿಕರದಲ್ಲಿ ಒಟ್ಟು ರಂಗಭೂಮಿಗೆ ಅವರು ಸಲ್ಲಿಸಿದ ಅಮೋಘ ಸೇವೆಯನ್ನು ಗಮನಿಸಿದಾಗ ಇವರ ರಂಗ ಪರಿಕರಗಳನ್ನು ಬಾಡಿಗೆಯಿಂದ ಬಳಸಿಕೊಂಡ ರಾಜ್ಯದ ಸಮಸ್ತ ರಂಗಭೂಮಿಯ ಮಾಲೀಕರು ಇವರಿಗೆ ಕೊಡಬೇಕಾದ ಬಾಡಿಗೆಯ ಹಣವನ್ನು ಪ್ರಾಮಾಣಿಕ ರೀತಿಯಲ್ಲಿ ಕೊಟ್ಟಿದ್ದರೆ, ಅವರು ಬಂಗಾರದ ಮನೆ ಕಟ್ಟಿಸುತ್ತಿದ್ದರು.

ನಾಟಕ ಪ್ರಯೋಗಗಳಿಗೆ ರಂಗ ಪರಿಕರಗಳನ್ನು ಬಾಡಿಗೆ ರೂಪದಿಂದ ನೀಡುವ ಡ್ರಾಮಾ, ಸೀನರಿಜ್ ಮತ್ತು ಪೆಂಡಾಲ ಕಾಂಟ್ರಾಕ್ಟರ್ ನಾಡಿನ ತುಂಬ ಕಂಡು ಬರುತ್ತಾರೆ. ಇಂಥವರು ಗ್ರಾಮೀಣ ರಂಗಭೂಮಿಯ ಜೀವಂತಿಕೆಗೆ ಜೀವನಾಡಿಯಾಗಿದ್ದಾರೆ.

ಕಲೆ ಎಲ್ಲರನ್ನು ಕೈ ಮಾಡಿ ಕರೆಯುತ್ತದೆ. ಅವರಲ್ಲಿ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ. ಹೀಗೆ ಕಲೆ ಕೆಲವರಿಗೆ ದೈವದತ್ತವಾಗಿದೆ. ಇನ್ನು ಕೆಲವರಿಗೆ ಸತತ ಪರಿಶ್ರಮ ಫಲದಿಂದಾಗಿ ಅದು ಸಿದ್ಧಿಸುತ್ತಿದೆ. ರಂಗಭೂಮಿಯನ್ನು ನಾವು ಸಿಂಹಾವಲೋಕನ ಮಾದಿಕೊಂಡಾಗ ರಂಗಭೂಮಿಯ ಮೇಲೆ ಪರದೆಯ ಮುಂದೆ ನಿಂತು ಕುಣಿದು ಕುಪ್ಪಳಿಸಿ ಎಲ್ಲರಿಂದ ಹೊಗಳಿಕೆಯನ್ನು ಮೆಲಕು ಹಾಕುತ್ತ ಮುಂದೆ ಸಾಗುವದನ್ನು ನಾವು ಕಂಡಿದ್ದೇವೆ. ಜನಪದ ರಂಗಭೂಮಿಯಿಂದ ಇಂದಿನ ಅಧುನಿಕತೆಯವರೆಗೆ ಬಣ್ಣದ ಬದುಕಿನಲ್ಲಿಯೇ ಬಾಳಿ ಬದುಕುತ್ತಿರುವ ಕುಂಚ ಕಲಾವಿದರ ಕಲ್ಪನೆ ನಮ್ಮ ಮನದಾಳದಿಂದ ಮರೆಯಾಗುತ್ತಿರುವುದು ಅತ್ಯಂತ ಖೇದಕರ ಸಂಗತಿ. ರಂಗಪರದೆಯ ಕಲಾವಿದರ ಬದುಕು ಕಷ್ಟದಿಂದ ಕೂಡಿದೆ. ಹೊಟ್ಟೆಗೆ ಹಿಟ್ಟು ಇರದಿದ್ದರೂ ಬಟ್ಟೆಯ ಮೇಲೆ ಬಣ್ಣ ಹಚ್ಚಿ ಪರದೆ ಬಿಡಿಸುವದನ್ನು ಅವರು ಎಂದೂ ಬಿಡಲೇ ಇಲ್ಲ. ರಂಗಪರದೆಯ ಕಲಾವಿದರು ಒಂದೊಂದು ವೃತ್ತಿರಂಗಭೂಮಿಯ ಕಂಪನಿಗಳನ್ನು ಆಶ್ರಯಿಸಿದ್ದರು. ಇಂದು ವೃತ್ತಿರಂಗಭೂಮಿಯೇ ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಾಗ ಇನ್ನು ರಂಗ ಕಲಾವಿದರ ಹಾಗೂ ರಂಗ ಪರದೆ ಕಲಾವಿದರ ಬದುಕನ್ನು ನೆನಪಿಸಿಕೊಂಡರೆ ಹುಟ್ಟುತ್ತದೆ. ಜೊತೆಗೆ ಅಷ್ಟೆ ಕುತೂಹಲವೂ ಕೆರಳುತ್ತದೆ.

ಉತ್ತರ ಕರ್ನಾಟಕದಲ್ಲಿ ರಂಗ ಪರದೆಯ ಕಲಾವಿದರನ್ನು ಅವಲೋಕಿಸಿದಾಗ ಸಿಂಹಪಾಲು ಇಲಕಲ್ಲಕ್ಕೆ ಸಲ್ಲುತ್ತದೆ. ರಾಜ್ಯ ಮತ್ತು ಹೊಸರಾಜ್ಯದಿಂದ ಬೇಡಿಕೆ ಹೆಚ್ಚಿಸಿಕೊಂಡಾಗ ಇಲ್ಲಿಯ ಕಲಾವಿದರು ರಂಗಪರದೆಗಳನ್ನು ಮನಮೋಹಕವಾಗಿ ಚಿತ್ರಿಸುತ್ತಿದ್ದರು. ಇಲಕಲ್ಲದಲ್ಲಿ ಹಲವಾರು ರಂಗ ಪರದೆಯ ಕಲಾವಿದರು ಖ್ಯಾತಿ ಪಡೆದಿದ್ದರು. ಅವರೆಲ್ಲ ಒಂದೊಂದು ಶಿಷ್ಯ ಪೀಳಿಗೆಯನ್ನು ಕೊಡುಗೆಯಾಗಿ ಕೊಟ್ಟು ಹೋಗಿದ್ದಾರೆ. ರಂಗ ಪರದೆಯ ಕಲಾ ಜೀವನ ಒಬ್ಬ ಕಲಾವಿದನ ಮಾರ್ಗದರ್ಶನದಲ್ಲಿ ಮುಂದುವರೆದು ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದು ಸ್ಪಷ್ಟವಾಗುತ್ತದೆ.

ಚಿಲಕದ ವೆಂಕಣ್ಣ

ರಂಗಪರದೆಯ ಚಿತ್ರ ಕಲಾವಿದರಲ್ಲಿ ಚಿಲಕದ ವೆಂಕಣ್ಣನವರೇ ಈ ಭಾಗದಲ್ಲಿ ಮೊದಲನೆಯವರಾಗಿ ಕಂಡು ಬರುತ್ತಾರೆ. ಅವರು ರಂಗ ಕಂಪನಿಯ ಚಿತ್ರಗಳನ್ನು ಬಿಡಿಸುವದರೊಂದಿಗೆ ತಮ್ಮ ಬದುಕನ್ನು ಸಾಗಿಸಿದವರು. ಆಗಿನ ಕಾಲದಲ್ಲಿಯೇ ಮುಂಬೈಯ ಜೆ ಜೆ ಸ್ಕೂಲ್ ಆಫ್ ಆರ್ಟ್ಸದಲ್ಲಿ ಓದುವುದೆಂದರೆ ಒಂದು ದೊಡ್ಡಭಾಗ್ಯ. ಈ ಹಿನ್ನೆಲೆಯಲ್ಲಿ ಅವರು ಕಲಾ ಶಿಕ್ಷಣವನ್ನು ಪೂರೈಸಿ ತಮ್ಮ ವೈಯಕ್ತಿಕ ಇನ್ನುಳಿದ ಕೆಲಸ ಕಾರ್ಯಗಳನ್ನು ಮರೆತು ಚಿತ್ರ ರಚನೆಯಲ್ಲಿಯೇ ಕಾಲ ಕಳೆದರು.

ಚಿಲಕದ ವೆಂಕಣ್ಣನವರನ್ನು ಕುಂಚ ಬ್ರಹ್ಮನೆಂದು ಕರೆಯುತ್ತಿದ್ದರು. ಬಹುಶಃ ಈ ರೀತಿಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದವರು ಬಹಳಷ್ಟು ಅಪರೂಪವೆಂದೇ ಹೇಳಬಹುದು.

ನಾಟ್ಯ ಕವಿ ಕೇಸರಿ ಕಂದಗಲ್ಲ ಹನುಮಂತರಾಯರು ೩ ಬಾರಿ ವೃತ್ತಿ ಕಂಪನಿಗಳನ್ನು ಕಟ್ಟಿ ೩ ರಾಜ್ಯ ತಿರುಗಿದವರು. ಅವರ ಕಂಪನಿಯ ರಂಗ ಪರದೆಗಳ ಸೃಷ್ಟಿಕರ್ತರು ಚಿಲಕದ ವೆಂಕಣ್ಣನವರು. ಚಿತ್ರಕಲೆಯನ್ನು ಕುಸುರಿ ಕೌಶಲ್ಯವನ್ನು ಕರಗತ ಮಾಡಿಕೊಂಡವರು. ಚಿತ್ರಕಲೆಯಲ್ಲಿ ಸಿದ್ಧಹಸ್ತರಾಗಿದ್ದ ಚಿಲಕದ ವೆಂಕಣ್ಣನವರು ರಂಗ ಪರದೆಗಳಿಗೆ ಬಣ್ಣ ಬಣ್ಣಗಳಿಂದ ರಂಗು ತುಂಬುತ್ತಿದ್ದರು. ಯಾವ ಬಣ್ಣವನ್ನು ಯಾನ ಸಂದರ್ಭದಲ್ಲಿ ಉಪಯೋಗಿಸಬೇಕು. ವಿಭಿನ್ನವಾದ ಬಣ್ಣಗಳನ್ನು ಹೇಗೆ ಮಿಶ್ರಮಾಡಿದರೆ ಮೆರಗು ಬರುತ್ತದೆ ಎಂಬುದನ್ನು ಮನನ ಮಾಡಿಕೊಂಡಿದ್ದರು.

ಚಿತ್ರಕಲೆಯಲ್ಲಿ ಪ್ರಮುಖವಾಗಿ ಜಲವರ್ಣ, ತೈಲವರ್ಣ, ಪೆನ್ಸಿಲ್ ಸ್ಕೆಚ್ ದಿಂದ ವಿವಿಧ ಭಾವಚಿತ್ರಗಳನ್ನು ಬಿಡಿಸುವುದು ಒಂದು ಪರಂಪರೆ. ಚಿಲಕದ ವೆಂಕಣ್ಣನವರು ಈ ಎಲ್ಲ ವಿಭಾಗದಲ್ಲಿಯೂ ಪ್ರಬುದ್ಧರಾದವರು. ಅಂಥ ಮೇಧಾವಿ ಕುಂಚ ಕಲಾವಿದ ನಾಟ್ಯ ಕವಿಗೆ ದೊರೆತದ್ದು ಒಂದು ಯೋಗಾ ಯೋಗ.

ಟಿ.ಎಲ್. ಚಿಲ್ಲಾಳ

ಟಿ.ಎಲ್. ಚಿಲ್ಲಾಳರು ಚಿಲಕದ ವೆಂಕಣ್ಣನವರ ಮಾರ್ಗದರ್ಶನದಲ್ಲಿಯೇ ಮುಂದುವರೆದು ಒಬ್ಬ ಸಮರ್ಥ ಕಲಾಕಾರನೆಂದು ಸಾಬೀತು ಪಡಿಸಿದರು. ಇವರು ಹಲವಾರು ಕಂಪನಿಗಳಿಗೆ ರಂಗ ಪರದೆಗಳನ್ನು ಸೃಷ್ಟಿಸಿಕೊಟ್ಟಿದ್ದು ಅವರ ಅಭೂತಪೂರ್ವ ಪ್ರತಿಭೆಗೆ ಹಿಡಿದ ಕೈಗನ್ನಡಿ ಟಿ.ಎಲ್. ಚಿಲ್ಲಾಳರ ಮನದಲ್ಲಿ ಮುಂಬೈ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸದಲ್ಲಿ ಕಲಿಯಬೇಕೆಂಬ ಕನಸು ಚಿಗುರೊಡೆದಿದ್ದು ಕನಸು ಕನಸಾಗಿಯೇ ಉಳಿಯಿತು. ಅದಕ್ಕೆ ಮುಖ್ಯ ಕಾರಣ ಕಿತ್ತು ತಿನ್ನುವ ಬಡತನ.

ಬಡತನದ ಬವಣೆಯಲ್ಲಿಯೂ ಎದೆಗುಂದದೆ ಆತ್ಮಸ್ಥೈರ್ಯವನ್ನು ತಂದುಕೊಂಡು ಚಿಲಕದ ವೆಂಕಣ್ಣನವರ ಪ್ರೀತಿಯ ಶಿಷ್ಯರಾಗಿ ರಂಗಪರದೆಯೊಳಗೆ ವಿಶೇಷ ರಂಗು ನೀಡಿದ್ದಾರೆ.

ರಂಗ ಪರದೆಯ ಚಿತ್ರಕಲೆಯನ್ನು ವಿಶೇಷ ಹಿಡಿತ ಸಾಧಿಸಿರುವ ಇವರು ಪ್ರತಿಯೊಂದು ಚಿತ್ರಕ್ಕೂ ಜೀವ ತುಂಬಿದ್ದಾರೆ.

ಖೇಮರಾಜು ಕೆಂಧೂಳಿ

ರಂಗ ಪರದೆ ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದ ಖ್ಯಾತಿ ಖೇಮರಾಜ ಕೆಂಧೂಳಿಯವರಿಗೆ ಸಲ್ಲುತ್ತದೆ. ಉತ್ತರ ಕರ್ನಾಟಕದ ಪ್ರಸಿದ್ಧ ಕಂಪನಿಗಳೆಲ್ಲ ಇವರಿಂದ ರಂಗ ಪರದೆಗಳನ್ನು ನಿರ್ಮಿಸಿಕೊಂಡು ಹೋಗಿದ್ದಾರೆ. ಅವರ ಕುಂಚದಿಂದ ನಿರ್ಮಾಣಗೊಂಡ ಜಲಪಾತಗಳು ರಂಗಮಂಟಪದಿಂದ ಧುಮ್ಮಿಕ್ಕಿ ಭೋರ್ಗರೆಯುತ್ತವೆ. ಕಾಡುಬೆಟ್ಟಗಳು ಬೆಚ್ಚಿ ಬೀಳಿಸುತ್ತವೆ. ಅರಮನೆ ಅಂತಃಪುರಗಳು ಮೂಕವಿಸ್ಮಯರನ್ನಾಗಿಸುತ್ತವೆ. ತನ್ನ ಕಲೆಯ ಚಲುವಿನಿಂದ ನಾಡ ತುಂಬಾ ಬೆಳಕಾದ ಈ ಕಲಾವಿದ ಈಗ್ಗೆ ಒಂದು ವರ್ಷದ ಹಿಂದೆಯಷ್ಟೆ ನಿಧನರಾಗಿದ್ದಾರೆ.

ತುಕಾರಾಮ ಬೋರೆ

ಬಾಲ್ಯದಲ್ಲಿಯೇ ಬಣ್ಣದ ಗೀಳನ್ನು ಮೈಗಂಟಿಸಿಕೊಂಡು ಬೆಳೆಯುತ್ತಿರುವ ಹುಡುಗನನ್ನು ಹಿರಿಯರು, ಪಾಲಕರು ಆಗಾಗ ಬೆದರಿಸಿದರೂ ಬಿಡದೆ, ಗೋಡೆಗಳ ಮೇಲೆ, ಕಟ್ಟಿಗೆಯ ಹಲಗೆಯ ಮೇಲೆ ಚಿತ್ರ ಬಿಡಿಸಿ ಬಾಲ್ಯದಲ್ಲಿಯೇ ತನ್ನ ಕಲಾ ಫ್ರೌಡಿಮೆ ಮೆರೆದವರು ತುಕಾರಾಮ ಬೋರೆಯವರು.

ಇಲಕಲ್ಲ ನೇಕಾರಿಕೆಯಿಂದ ಸೀರೆಗಳಿಗೆ ಖ್ಯಾತಿ ಪಡೆದ ಊರು. ನೇಕಾರಿಕೆಯ ಉದ್ಯೋಗಕ್ಕೆ ಉಪಯೋಗಿಸುವ ಕಂಡಿಕೆಯನ್ನೇ ಕುಂಚವನ್ನಾಗಿ ಮಾಡಿಕೊಂಡು ತೆಂಗಿನ ಜಬ್ಬರಗಳನ್ನು ಜೋಡಿಸಿ ಕಂಡಿಕೆಗೆ ಸುತ್ತಿ ಕುಂಚ-ಮಾಡಿ, ತೆಂಗಿನ ಚಿಪ್ಪಿನಲ್ಲಿ ಬಣ್ಣಗಳನ್ನು ಕೂಡಿಸಿ, ಚಿತ್ರ ಬಿಡಿಸುತ್ತ ಸಾಗಿದ್ದು ಒಂದು ವಿಶೇಷ.

ಎಸ್.ಎಸ್. ಸನ್ನೂರ

ಗುರುವಿನಿಂದ ಬಣ್ಣದ ಬಳುವಳಿಯನ್ನು ವರವಾಗಿ ಪಡೆದವರು ಎಸ್.ಎಸ್. ಸನ್ನೂರ ಪೇಂಟರ್. ವಿವಿಧ ಚಿತ್ರಗಳಿಗೆ ರೀಟಚಪ್ ಮಾಡುತ್ತ ಚಿತ್ರಕಲೆಯಲ್ಲಿ ಪರಿಣತಿಯನ್ನು ಪಡೆಯುತ್ತ ಸ್ವತಂತ್ರ ಕುಂಚ ಕಲಾವಿದರಾಗಿ ರೂಪು ಪಡೆದಿದ್ದಾರೆ. ಮೂರು ದಶಕಗಳ ಕಾಲ ತಮ್ಮ ಬದುಕನ್ನು ಬಣ್ಣದಲ್ಲಿಯೇ ಕಳೆದಿದ್ದಾರೆ.

ಸನ್ನೂರ ಅವರು ವಿವಿಧ ಕಂಪನಿಗಳಿಗೆ ಬಣ್ಣದ ಪರದೆಗಳನ್ನು ಬಿಡಿಸಿಕೊಡುವುದಲ್ಲದೇ ವಿವಿಧ ಡ್ರಾಮಾ ಸೀನ್ರಿಜ್ ಮತ್ತು ಪೆಂಡಾಲದವರಿಗೂ ರಂಗ ಪರದೆಗಳನ್ನು ತಯಾರಿಸಿಕೊಟ್ಟಿದ್ದಾರೆ. ತಮ್ಮ ಕುಂಚದಿಂದ ಬಂದ ಹಣದಲ್ಲಿಯೇ ಮಗನಿಗೆ ಸ್ನಾತಕೋತ್ತರದ ಶಿಕ್ಷಣದ ಸಂಸ್ಕಾರ ಕೊಡಿಸಿದರು. ಅವರ ಮಗ ಶಂಕರ ಸನ್ನೂರ ಕೂಡ ರಂಗ ಪರದೆಯ ಕಲೆಯನ್ನು ಮೈಗೂಡಿಸಿಕೊಂಡು ಅದರಲ್ಲಿಯೇ ಮುಂದುವರೆದಿದ್ದಾರೆ.

ಅಮೀನ ಪೇಂಟರ

ಇಲಕಲ್ಲದ ಮುಸ್ಲಿಂ ಜನಾಂಗದ ಬಡಕುಟುಂಬದಲ್ಲಿ ಜನ್ಮ ತಾಳಿದ ಕೆ.ಅಮೀನ ಪೇಂಟರ. ಬಾಲ್ಯದಲ್ಲಿಯೇ ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ಮನೆಬಿಟ್ಟು ಮುಂಬೈ ಮಹಾನಗರವನ್ನು ಸೇರಿದ ಅ ಬಣ್ಣದ ಕನಸುಗಳಿಗೆ ಇಂಬುಕೊಟ್ಟಿದ್ದು, ಮುಂಬೈ ಅಲ್ಲಿಯ ಬಣ್ಣ ಬಣ್ಣದ ಲೋಕದಲ್ಲಿ ಮೈ ಛಳಿ ಬಿಡಿಸಿಕೊಂಡು ಒಬ್ಬ ಸಮರ್ಥ ಕಲಾವಿದನಾಗಿ ರೂಪು ಪಡೆದ, ಮರಾಠಿ ರಂಗಭೂಮಿಯ ಸಂಪರ್ಕವನ್ನು ಬೆಳೆಸಿಕೊಂಡು, ಚಿತ್ರದುರ್ಗದ ಸಂಪರ್ಕವನ್ನು ಬೆಳೆಸಿಕೊಂಡು, ತನ್ನ ಕಲಾ ಕುಂಚದ ಪ್ರಪಂಚದ ಲೋಕವನ್ನು ಕಣ್ಣು ಕುಕ್ಕುವ ಹಾಗೆ ಎಳೆ ಎಳೆಯಾಗಿ ಚಿತ್ರ ಬಿಡಿಸತೊಡಗಿದ. ಇಲಕಲ್ಲ ಮತ್ತು ಮುಂಬೈ ನಡುವೆ ಕಲೆಯ ನೇರ ಸಂಪರ್ಕ ಪಡೆದುಕೊಂಡ. ಈ ರಂಗ ಪರದೆಯ ಚಿತ್ರ ಕಲಾವಿದರಲ್ಲಿ ಮುಂಬೈ. ಮಹಾನಗರವನ್ನು ಕಂಡು ಕಲೆಯ ಕರಗತವನ್ನು ಮಾಡಿಕೊಂಡವರು. ಚಿಲಕದ ವೆಂಕಣ್ಣನವರ ತರುವಾಯು ಅ ಕೀರ್ತಿ ಸಲ್ಲುವುದು ಕೆ.ಅಮೀನ್ ಪೇಂಟರ್ ಅವರಿಗೆ. ಜಲವರ್ಣ, ತೈಲವರ್ಣ, ಪೆನ್ಸಿಲ್, ಸ್ಕೆಚ್‌ಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಆ ಕಲಾವಿದನಿಗೆ ಕಲೆಯ ಸಂಸ್ಕಾರ ಸಿಕ್ಕಾಗ ಮಾತ್ರ ಇಂಥ ಚಿತ್ರಗಳು ರೂಪ ತಾಳುತ್ತವೆ. ಕೆ.ಅಮೀನ್ ಪೇಂಟರ ಅವರ ಇಂಡಿಯನ್ ಇಂಕ್, ಪೆನ್ಸಿಲ್, ರೇಖಾಚಿತ್ರಗಳಲ್ಲಿ ತಮ್ಮ ಕಲೆಯ ಪ್ರಖರತೆಯ ಛಾಯೆಯನ್ನು ಬಿಂಬಿಸಿದ್ದಾರೆ.

ಕಲಾದಗಿ ಪೇಂಟರ

ಪ್ರತಿಭೆ ಗುಡಿಸಲಲ್ಲಿ ಹುಟ್ಟಿ ಅರಮನೆಯನ್ನು ಬೆಳಗುತ್ತದೆ ಎಂಬುದಕ್ಕೆ ಕಲಾದಗಿ ಪೇಂಟರ ಒಂದು ಉತ್ತಮ ನಿದರ್ಶನ. ಅವನ ಪೂರ್ಣ ಹೆಸರು ಸೀತಾರಾಮ ಕುಲಕರ್ಣಿ, ನಾಡು ಕಂಡ ಅಪರೂಪದ ಶ್ರೇಷ್ಠ ಕಲಾವಿದರಲ್ಲಿ ಕಲಾದಗಿ ಪೇಂಟರ ಕೂಡಾ ಒಬ್ಬರು. ತಮ್ಮ ಊರಿನ ಹೆಸರನ್ನೇ ಪ್ರಮುಖವಾಗಿಟ್ಟುಕೊಂಡು ರಂಗಪರದೆಯ ಚಿತ್ರಕಲೆಯಲ್ಲಿ ತಮ್ಮ ಹೆಸರನ್ನು ಅಜರಾಮರವಾಗಿಸಿಕೊಂಡವರು. ನಾಡಿನ ವೃತ್ತಿ ರಂಗಭೂಮಿ ಖ್ಯಾತ ಕಂಪನಿಗಳಾದ ಗುಬ್ಬಿ ವೀರಣ್ಣನವರು. ಕೆ.ಬಿ.ಆರ್. ಡ್ರಾಮಾ ಕಂಪನಿ, ಏಣಗಿ ಬಾಳಪ್ಪನವರ ಕಂಪನಿ, ಗರೂಡ ಸದಾಶಿವರಾಯರ ಕಂಪನಿ, ಗೋಕಾಕ ಕಂಪನಿ, ಮುಂತಾದ ಹೀಗೆ ಹಲವಾರು ಕಂಪನಿಗಳಿಗೆ ರಂಗ ಪರದೆಗಳನ್ನು ಸೃಷ್ಟಿ ಮಾಡಿ ಶ್ರೀಮಂತಗೊಳಿಸಿದ ಖ್ಯಾತಿ ಇವರದು. ೧೯೩೦ರ ದಶಕದಲ್ಲಿಯೇ ಅಂದರೆ ಸ್ವಾತಂತ್ರ್ಯ ಪೂರ್ವದ ವೃತ್ತಿ ರಂಗಭೂಮಿಯ ವಿಶಿಷ್ಟ ಚಿತ್ರರಚನೆ ಮಾಡಿದ ಹೆಗ್ಗಳಿಕೆ ಇವರದು. ಇಂಥ ಒಬ್ಬ ಪ್ರಬುದ್ಧ ಕಲಾವಿದ ೧೯೭೦ರಲ್ಲಿ ದೇಹ ತ್ಯಾಗ ಮಾಡಿದರು.

ರಂಗ ಪರದೆಯ ಪ್ರಮುಖ ಕಲಾವಿದರಾಗಿ ಕೊಪ್ಪದ, ಧೋತ್ರೆ, ಮರೋಳ, ಗೋಕರಸಾ ಕೊಡಗಲಿ, ರಾಮಮೂರ್ತಿ ಗಜೇಂದ್ರಗಡ, ಮಿಯಾಸಾಹೇಬ ಕೊಡಗಲಿ, ತಾಜುದ್ದೀನ್ ಕೊಡಗಲಿ, ಡೀಕಪ್ಪ ಹಿಟ್ನಾಳ, ಎಲ್ಲಪ್ಪ ಕಾಂಬಳೆ, ಸಿದ್ಧರಾಮ ಕಾಂಬಳೆ, ವಿಠ್ಠಪ್ಪ ಬಿಜ್ಜಳ, ಮಂಜುನಾಥ ಖೋರೆ, ಅಂಬಣ್ಣ ಪಾಣಿಬಾತೆ ಮುಂತಾದವರನ್ನು ಹೆಸರಿಸಬಹುದು.