ಆಯಾ ಪ್ರದೇಶಗಳಲ್ಲಿ ಪ್ರಯೋಗಗೊಳ್ಳುವ ನಾಟಕಗಳ ಬೋರ್ಡ್, ಬ್ಯಾನರ್, ಬರೆಯುವ ಕಲಾವಿದರು ನಾಡಿನಲ್ಲಿ ಸಾಕಷ್ಟು ಇದ್ದಾರೆ. ದಿ.ಶಿಂಧೆ ಸಹೋದರರು, ದಿ.ಪತ್ತಾರ ಕೇಶಪ್ಪ, ಬರಹಾನಪೂರ ಶ್ರೀಶೈಲ, ವಿನಾಯಕ ಜೋಶಿ, ಸುಭಾಸ ಜೋಶಿ, ಸೀರಿ ಪೇಂಟರ್ಸ್, ಅನ್ನಂ ಪೇಂಟರ್, ಈರಣ್ಣ ಹಟ್ಟಿ, ರಾಜು ಮಾಳಗಿ ಮುಂತಾದವರು ಕಂಡುಬರುತ್ತಾರೆ. ಇಂಥ ಪೇಂಟರ್ಸ್ ಗಳು ನಾಟ್ಯ ಸಂಘಗಳಲ್ಲಿರುವ ಹಲವಾರು ಬೋರ್ಡ್, ಬ್ಯಾನರ್ ಗಳ ಹಾಗೂ ಗೋಡೆಗಳ ಮೇಲೆ ಇಂಥಿಂಥ ನಾಟ್ಯ ಸಂಘದಿಂದ ಇಂಥಿಂಥ ನಾಟಕಗಳ ಪ್ರಯೋಗ, ಸಮಯ, ತಾರೀಖು ಸಂದರ್ಭಗಳನ್ನು ತಮ್ಮ ಕಲಾತ್ಮಕತೆಯ ಮೂಲಕ ವಿವರಿಸುತ್ತಾರೆ.

ರಂಗ ಪರದೆಯ ಕಲಾಕಾರರು, ಭಾರತೀಯ ಸಂಪ್ರದಾಯದ ಚಿತ್ರಕಲೆಯನ್ನು ಉಳಿಸಿ-ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯ ಉಡುಗೆ-ತೊಡುಗೆ, ಗತವೈಭವವನ್ನು ಮೆಲಕು ಹಾಕುವಂತೆ ಮಾಡುತ್ತಾರೆ. ಹುಬ್ಬಳ್ಳಿ, ಧಾರವಾಡ, ಗದಗ, ಬೆಂಗಳೂರು, ಮೈಸೂರ, ಗುಳೇದಗುಡ್ಡ, ಇಳಕಲ್ಲ, ಬಳ್ಳಾರಿಯಂಥ ಪ್ರಮುಖ ಪ್ರದೇಶಗಳಲ್ಲಿ ಈ ಕಲಾವಿದರ ಬದುಕು ಹರಡಿಕೊಂಡಿದೆ.

ರಂಗಪರದೆಯ ಚಿತ್ರಕಲಾವಿದರು ಸೃಷ್ಟಿಸಿದ ಚಿತ್ರಗಳು ರಂಗಭೂಮಿಯನ್ನು ಅಲಂಕರಿಸಿಕೊಂಡಾಗ ಧ್ವನಿ ಮತ್ತು ಬೆಳಕಿನ ತಂತ್ರಜ್ಞರು ಅ ಪರದೆಗಳಿಗೆ ತಕ್ಕಂತೆ ಬೆಳಕಿನ ಸಂಯೋಜನೆ ಮಾಡಿಕೊಳ್ಳುತ್ತಾರೆ. ಹೀಗೆ ರಂಗ ಕಲಾವಿದರ ಅಭಿನಯಕ್ಕೆ ತಕ್ಕಂತೆ ಪರದೆಗಳು ಪೂರಕವಾಗಿದ್ದರೆ ಬೆಳಕು ರಂಗು ರಂಗಿನ ಮಾಯಾ ಜಗತ್ತನ್ನು ಸೃಷ್ಟಿ ಮಾಡುತ್ತದೆ.

ರಂಗಭೂಮಿಯಲ್ಲಿ ಪ್ರತಿಯೊಬ್ಬರ ಪ್ರತಿಭೆಗೆ ಮುಕ್ತ ಅವಕಾಶವಿರುತ್ತದೆ. ಜಾನಪದ ರಂಗಭೂಮಿಯಿಂದ ಹಿಡಿದು ವೃತ್ತಿ, ಹವ್ಯಾಸಿ, ನಾಟಕಗಳವರೆಗೆ, ರಂಗಭೂಮಿ ಹೊಸ ಹೊಸ ಮಜಲುಗಳನ್ನು ತೋರ್ಪಡಿಸಿದೆ. ಮನುಷ್ಯ ಅದಕ್ಕೆ ತಕ್ಕಂತೆ ಪರಿವರ್ತನೆಗೊಂಡಿದ್ದಾನೆ.

ರಂಗಭೂಮಿಯ ವಿಶಾಲವಾದ ಪ್ರಂಪಂಚದಲ್ಲಿ ಪ್ರತಿಭೆಗಳು ಅರಳುತ್ತವೆ. ತಮ್ಮ ಕಲೆಯ ಸೌಗಂಧವನ್ನು ಹರಡಿ ಎಂದೆಂದೂ ಮಾಸದ, ಅಳಿಯದ ಅಜರಾಮರವಾದ ಕೊಡುಗೆಯನ್ನು ನೀಡುತ್ತ ಸಾಗುವುದು ರಂಗಭೂಮಿಯ ಚಲನಶೀಲತೆಗೆ ಜೀವಂತ ಸಾಕ್ಷಿ.

ಹವ್ಯಾಸಿ ರಂಗ ಪರದೆ

ಹವ್ಯಾಸಿ ರಂಗಭೂಮಿಯಲ್ಲಿ ವೃತ್ತಿ ರಂಗಭೂಮಿಯ ಹಾಗೆ ಅದ್ಧೂರಿಯ ರಂಗ ಪರಿಕರಗಳು ಕಂಡುಬರುವುದಿಲ್ಲ. ಪಾಶ್ಚಾತ್ಯ ರಂಗಭೂಮಿಯ ಅನುಕರಣೆಯನ್ನು ಮಾಡಿಕೊಂಡು ಟಿ.ಪಿ.ಕೈಲಾಸಂ, ಶ್ರೀರಂಗರಂಥ ಮಹಾನ್ ನಾಟಕಕಾರರು ಹೊಸ ರಂಗಭೂಮಿಯ ಪಂಡಿತ-ಪಾಮರರ ಸುಸಂಸ್ಕೃತರ ಸೊತ್ತಾಗಿಯೇ ಬೆಳೆಯಿತು. ನಮ್ಮ ಗ್ರಾಮೀಣ ಭಾಗದ ರಂಗ ಪ್ರೇಕ್ಷಕರಿಗೆ ಈ ನಾಟಕಗಳು ತಲುಪಲೇ ಇಲ್ಲ. ಸಂಕೇತ, ಪ್ರತಿಮೆ, ಮುಖ್ಯವಾಗಿಟ್ಟುಕೊಂಡು ನಾಟಕದ ವಸ್ತು ನಿರ್ದೇಶಕನ ತಂತ್ರಗಾರಿಕೆಯ ಮೇಲೆ ಸಾಗಿಬರುತ್ತದೆ. ಇಲ್ಲಿ ವಿಶಿಷ್ಟವಾದ ರಂಗವಿನ್ಯಾಸ, ರಂಗ ಪರಿಕರ ಮತ್ತು ನೆಳಲು ಬೆಳಕಿನ ಚಮತ್ಕಾರವನ್ನು ಕಾಣಬಹುದು.

ನವ್ಯ ನಾಟಕಕಾರರಾದ ಡಾ.ಚಂದ್ರಶೇಖರ ಕಂಬಾರ, ಡಾ. ಗಿರೀಶ ಕಾರ್ನಾಡ, ಪಿ. ಲಂಕೇಶ, ಚಂದ್ರಕಾಂತ ಕುಸನೂರ ಮುಂತಾದವರು ದೇಸಿಯ ಭಾಷೆಯನ್ನು ತಮ್ಮ ನಾಟಕಗಳಲ್ಲಿ ಅಳವಡಿಸಿಕೊಂಡು ಜನಪದ ಸಾಹಿತ್ಯದ ಸೊಗಡನ್ನು ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಲ್ಲಿ ಇಲ್ಲಿಯ ನಾಟಕಗಳು ಯಶಸ್ವಿಯಾದವು. ಗ್ರಾಮೀಣ ಪ್ರದೇಶದ ನೈಜ ಚಿತ್ರಣವನ್ನು ಹಾಗೂ ಪೌರಾಣಿಕ ಕಲ್ಪನೆಯನ್ನು ರಂಗಭೂಮಿಗೆ ಅಳವಡಿಸಿ ಹೊಸ ಹೊಸ ವಿಚಾರಧಾರೆಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ಒಂದು ಹಾದಿಯಲ್ಲಿಯೇ ಅಸಂಗತ ನಾಟಕಕರಾದ ಚಂದ್ರಶೇಖರ ಪಾಟೀಲರು ಕೂಡ ವ್ಯಂಗ, ವಿಡಂಬನೆಯ ಮುಖಾಂತರ ಹವ್ಯಾಸಿ ರಂಗಭೂಮಿಯಲ್ಲಿ ಹೊಸ ಹಾದಿ-ಹೊಸ ದಿಕ್ಕು ತೋರ್ಪಡಿಸಿದ್ದಾರೆ. ಹೀಗೆ ರಂಗಭೂಮಿ ಆಯಾ ಸಂದರ್ಭಕ್ಕೆ ತಕ್ಕಂತೆ ಪರಿವರ್ತನೆಗೊಂಡು ಬಂಡಾಯ ಸಾಹಿತ್ಯದಲ್ಲಿಯೂ ಕೂಡಾ ಸಾಮಾಜಿಕ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸಿತು. ಇಷ್ಟಾ ಸಮುದಾಯ ಮುಂತಾದ ತಂಡಗಳು ರಂಗ ಚಳುವಳಿಯನ್ನು ಮಾಡಿದವು.

ಹವ್ಯಾಸಿ ರಂಗಭೂಮಿಯಲ್ಲಿ ಸಂಗೀತ, ವಾದ್ಯಪರಿಕರ ಬೆಳಕಿನ ವ್ಯವಸ್ಥೆಗೆ ಸ್ಪಾಟ್‍ಲೈಟ್, ಡಿಮ್ಮರ್ಸ್, ಮುಖ್ಯಾವಾಗಿ ಬೇಕಾಗುತ್ತವೆ. ಆಗಾಗ ಕರಿ ಬಟ್ಟೆ ಅಥವಾ ಬಿಳಿ ಬಟ್ಟೆ ಮತ್ತು ಸಿದ್ಧಗೊಂಡಿರುವ ರಂಗ ಪರಿಕರ ಇವುಗಳ ಮೇಲೆ ನಿರ್ದೇಶಕನ ಮಾರ್ಗದರ್ಶನದ ಮೇಲೆ ನಾಟಕ ನಡೆಯುತ್ತದೆ. ನೀನಾಸಂ ಹೆಗ್ಗೋಡು, ಮೈಸೂರಿನ ರಂಗಾಯಣ, ಚಿತ್ರದುರ್ಗ ಜಮುರಾ ಹಾಗೂ ಸಾಣೇಹಳ್ಳಿಯ ತಂಡಗಳು ಹೆಸರಾಂತ ರಂಗನಿರ್ದೇಶಕರ ಮಾರ್ಗದರ್ಶನದಲ್ಲಿ ಹೊಸ ಹೊಸ ವಿನೂತನ ಶೈಲಿಯ ನಾಟಕಗಳನ್ನು ಪ್ರಯೋಗಿಸಿ ಜನಮನ್ನಣೆಗೆ ಪಾತ್ರವಾಗಿದ್ದಾರೆ.

ಧಾರವಾಡದ ಇಫ್ಟಾ ತಂಡದಿಂದ ಬಯಲು ರಂಗಮಂದಿರದಲ್ಲಿ ನಾಟಕ ಪ್ರಯೋಗಿಸಬೇಕಾಗಿತ್ತು. ಪ್ರತಿನಿತ್ಯ ಬಯಲು ರಂಗಮಂದಿರದಲ್ಲಿಯೇ ದಿಹರ್ಸಲ್ ನಡೆಯುತ್ತಿತ್ತು. ಡಾ.ಸಿದ್ಧನಗೌಡ ಪಾಟೀಲರ ರಚನೆ ಮತ್ತು ನಿರ್ದೇಶನದ ನಾಟಕ ರಾಜಸತ್ತೆ, ಪ್ರಯೋಗಕ್ಕೆ ಸಿದ್ಧಗೊಂಡಿತ್ತು. ನಾನು ಕೆ.ಆರ್. ಹಿರೇಮಠ, ವಿರೂಪಾಕ್ಷ ಪಡಿಗೋದಿ, ಈ ನಾಟಕದಲ್ಲಿ ಪ್ರಮುಖ ಪಾತ್ರಧಾರಿಗಳು. ವಿದ್ಯಾಗುರುಗಳಾದ ಡಾ.ಎ.ಮುರೊಗೆಪ್ಪನವರ ಮನೆಗೆ ಹೋಗಿ ಅವರ ಮನೆಯಲ್ಲಿದ್ದ ರಂಗ ಪರಿಕರಗಳನ್ನು, ಪರದೆಗಳನ್ನು ಹೊತ್ತು ತಂದೆವು. ಈ ಮೊದಲೇ ಕನ್ನಡ ಅಧ್ಯಯನ ಪೀಠದಿಂದ ಯುವಜನೋತ್ಸವದಲ್ಲಿ ಈ ನಾಟಕ ಪ್ರಯೋಗ ಕಂಡು ಪ್ರಥಮ ಬಹುಮಾನ ಬಾಚಿಗೊಂಡಿತ್ತು. ಅ ಸಂದರ್ಭದಲ್ಲಿ ಡಾ.ಎ.ಮುರಿಗೆಪ್ಪ, ಡಾ.ವೀರಣ್ಣ ರಾಜೂರ, ಪ್ರೊ.ಸಂಪಿಗೆ ತೋಂಟದಾರ್ಯರು ನಾಟಕವನ್ನು ವೀಕ್ಷಿಸಿದರು. ತಂದೆ-ಮಗನ ವ್ಯಾಜ್ಯ, ರಾಮನ ಆಸ್ಥಾನಕ್ಕೆ ಬರುವುದು. ರಾಮನ ಸಮ್ಮುಖದಲ್ಲಿ ತಂದೆ-ಮಗನ ವಾಗ್ವಾದ ಜರುಗುವುದು. ಅಹಲ್ಯ ನ್ಯಾಯ ದೊರಕಿಸಿಕೊಡು ಎಂದು ಬೇಡಿಕೊಳ್ಳುವುದು. ಆ ಕ್ಷಣದಲ್ಲಿ ಗೌತಮ ಮಹರ್ಷಿಯ ವೇಷದಲ್ಲಿ ಬಂದು ತಪೋ ಭಂಗವನ್ನುಂಟು ಮಾಡುವುದು. ಗೌತಮ ಮಹರ್ಷಿ ಉಗ್ರರೂಪ ತಾಳಿ ಅಹಲ್ಯೆಗೆ ಕಲ್ಲಾಗಿ ಬೀಳುವಂತೆ ಶಾಪವಿಧಿಸುವುದು ಮತ್ತೆ ರಾಮನ ಅರಮನೆ, ಸಿಂಹಾಸನಾಧೀಶನಾದ ರಾಮ ಅವರಿಬ್ಬರ ವ್ಯಾಜ್ಯವನ್ನು ವೀಕ್ಷಿಸುತ್ತಿರುವಾಗ ತಂದೆ-ಮಗನ ಸಂಘರ್ಷ ಅತಿರೇಖಕ್ಕೆ ತಲುಪಿದಾಗ ಮಗ ಈ ವ್ಯವಸ್ಥೆಯ ವಿರುದ್ಧ ಸಿಂಹಾಸನದ ವಿರುದ್ಧ ಧ್ವನಿ ಎತ್ತುತ್ತಾನೆ. ರಾಮನು ಅವನನ್ನು ಸ್ಜಿಕ್ಷೆಗೆ ಒಳಪಡಿಸುತ್ತಾನೆ. ಸೈನಿಕರು ಬಂದು ಅವನನ್ನು ಎಳೆದೊಯ್ಯುತ್ತಾರೆ. ಸೈನಿಕ ಪಾತ್ರ ದಾರಿಯಲ್ಲ ವೀರೇಶ ಬಡಿಗೇರರೂ ಒಬ್ಬರಾಗಿದ್ದರು. ಈ ಘಟನೆಯಿಂದ ಕಕ್ಕಾಬಿಕ್ಕಿಯಾದ ತಂದೆ ತನ್ನ ವ್ಯಾಜ್ಯವನ್ನು ಹಿಂದಕ್ಕೆ ಪಡೆಯುವುದಾಗಿ ವಿನಂತಿಸಿಕೊಳ್ಳುತ್ತಾನೆ. ಆದರೆ ಏನೂ ಫಲಕಾರಿಯಾಗುವುದಿಲ್ಲ. ಸೈನಿಕರು ಭರ್ಜಿಯಿಂದ ಅವನನ್ನು ಇರಿದು ಕೊಲ್ಲುತ್ತಾರೆ. ರಂಗ ಪರದೆಯ ಹಿಂದೆ ಜರುಗುವ ಈ ದೃಶ್ಯ ರಂಗ ಪ್ರೇಕ್ಷಕರ ಮನ ಕರಗಿಸುತ್ತದೆ. ಕಂಬನಿ ಮಿಡಿಸುತ್ತದೆ. ‘ರಾಜಸತ್ತೆ’ ನಾಟಕ ಇಫ್ಟಾ ತಂಡದಿಂದ ಧಾರವಾಡ ಮತ್ತು ದಾವಣಗೆರೆಯಲ್ಲಿ ಪ್ರಯೋಗ ಕಂಡಿತು. ಡಾ.ಸಿದ್ಧನಗೌಡ ಪಾಟೀಲರ ಅಮರಾನಗರ ದೇಸಾಯರ ಅಥೆ, ಟ್ವೆಂಟಿ ಫಸ್ಟ್ ಸೆಂಚೂರಿ ನಾಟಕಗಳ ಪ್ರಯೋಗಗಳ ಇಫ್ಟಾ ತಂಡವು ಉಪಯೋಗಿಸಿಕೊಂಡಿರುವ ರಂಗವಿನ್ಯಾಸ ರಂಗ ಪರಿಕರ, ಪರದೆಗಳು ಕುತೂಹಲ ಕೆರಳಿಸುವಂತಿದ್ದವು.

ಜಿ.ಎಚ್. ರಾಘವೇಂದ್ರರ ‘ಬಾಗಲ ತಗೀರಪೋ ಬಾಗಿಲಾ’ ನಾಟಕ ನಿರ್ದೇಶಕ ಅಶೋಕ ಬಾದರಿದಿನ್ನಿಯವರು ವಿಜಾಪುರ ತಂಡಕ್ಕಾಗಿ ಈ ನಾಟಕವನ್ನು ರಂಗಕ್ಕೆ ಅಳವಡಿಸಿದ್ದರು.

ಉತ್ತಮ ಕಥೆ, ಹರಿತ ಸಂಭಾಷಣೆ, ಕುತೂಹಲ ಕೆರಳಿಸುವ ಅಭಿನಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಪ್ರೇಮಿಗಳಿಗೆ ಜಾತಿ, ಘನತೆ, ಗೌರವ, ಅಂತಸ್ತು ಅಡ್ಡಗೋಡೆಯಾಗಿತ್ತು. ಮಧ್ಯಮ ವರ್ಗದ ಹುಡುಗನು ಯುವರಾಣಿಯನ್ನು ಪ್ರೇಮಿಸಿದ್ದು, ಯುವರಾಣಿಯೂ ಕೂಡಾ ಈ ಹುಡುಗನನ್ನು ಗಾಢವಾಗಿ ಪ್ರೀತಿಸಿದ್ದು, ಅರಮನೆಯ ಗೋಡೆ ಗೋಡೆಗೂ ಗೊತ್ತು.

ಪ್ರೀತಿಯ ಹಂಬಲದಲ್ಲಿ ತವಕಿಸುತ್ತಿದ್ದ ಈ ಹುಡುಗ ಅರಮನೆಯನ್ನು ಪ್ರವೇಶಿಸುತ್ತಾನೆ. ಅ ಹುಡುಗನ ಮೇಲೆ ಹದ್ದಿನ ಕಣ್ಣಿಟ್ಟು ಮಹಾರಾಜರು ಕೋಟೆಯ ಗೋಡೆಯ ಬಾಗಿಲು ಮುಚ್ಚಲು ಆಜ್ಞೆ ಮಾಡುತ್ತಾರೆ. ಹೌ ಹಾರಿದ ಜೀವರಕ್ಷಣೆಗಾಗಿ “ಬಾಗಿಲಾ ತಗೀರಪ್ಪಾ ಬಾಗಿಲಾ” ಎಂದು ಕೂಗಿಕೊಳ್ಳುತ್ತಾನೆ. ಅ ಕೂಗು ಮಾರ್ಧನಿಸುತ್ತದೆ. ಅರಸನ ಆಜ್ಞೆಯನ್ನು ಪಾಲಿಸುವದಕ್ಕಾಗಿ ಸೈನಿಕರು ಆ ಹುಡುಗನನ್ನು ಕೊಲ್ಲಲು ಆಯುಧಗಳನ್ನು ಹಿಡಿದು ಅರಮನೆಯ ತುಂಬಾ ಓಡಾಡಿಸಿ ಬೆನ್ನತ್ತಿ ಹೊಡೆಯುತ್ತಾರೆ. ಹುಡುಗ ಕೋಟೆಯ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಾನೆ. ಗೋಡೆ ಜಿಗಿದು ಪಾರಾಗಲು ಹವನಿಸುತ್ತಾನೆ. ಸೈನಿಕರೊಂದಿಗೆ ಸೆಣಸಾಡಿ ಸುಸ್ತಾಗಿದ್ದಾನೆ. ಪ್ರಾಣವನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳುವುದಕ್ಕಾಗಿ ಹೊಂಚು ಹಾಕುತ್ತಾನೆ. ಅವನ ಪ್ರಯತ್ನವೆಲ್ಲ ಫಲಕಾರಿಯಾಗುವದೇ ಇಲ್ಲ. ಹುಡುಗ ಪ್ರಾಣದ ಹಂಗುದೊರೆದು ಏಕಾಂಗಿಯಾಗಿ ಸೈನಿಕರೊಂದಿಗೆ ಹೋರಾಡುತ್ತಾನೆ. ಬಾಗಲಾ ತಗಿರಪೋ ಎಂದು ಗಂಟಲು ಹರಿಯುವಂತೆ ಚೀರಿಕೊಂಡರೂ ಯಾರೂ ಬಾಗಿಲು ತೆಗೆಯುವದಿಲ್ಲ. ಹಸಿದ ಹೆಬ್ಬುಲಿಗಳ ಮಧ್ಯದಲ್ಲಿ ಹಸುವಿನಂತಾಗಿದ್ದ. ಮಧ್ಯದಲ್ಲಿ ಕೋಟೆಯ ಬಾಗಿಲು ಬಾಗಿಲದ ಅಕ್ಕ ಪಕ್ಕ ಕೋಟೆ ಗೋಡೆಯ ದೃಶ್ಯದ ಪರದೆ ಇನ್ನುಳಿದದ್ದು ಬಿಳಿ ಪರದೆ. ಅ ಪರದೆ ಮೇಲೆ ಮನುಷ್ಯಾಕೃತಿಗಳು ಹೋರಾಟ ಮಾಡುವ ದೃಶ್ಯದ ಪರದೆ ಮನಸ್ಸಿಗೆ ಗಾಢವಾದ ಪರಿಣಾಮ ಬೀರುತ್ತದೆ.

ಹುಡುಗ ಅಂಗಲಾಚಿ ಬೇಡಿಕೊಂಡರೂ ಅವರ ಹೃದಯ ಕರಗಲಿಲ್ಲ. ಇನ್ನು ಜೀವಕ್ಕೆ ಆಪತ್ತು ತಪ್ಪಿದ್ದಲ್ಲವೆಂದೂ ಭಾವಿಸಿ ಕೋಟೆಯ ಬಾಗಿಲು ತೆರೆಯದೇ, ಇದ್ದಾಗ ಹುಡುಗ ಕೋಟೆಯ ಗೋಡೆಯನ್ನು ಹಾರಿ ಬರಬೇಕೆನ್ನುವಷ್ಟರಲ್ಲಿ ಸೈನಿಕರು ಸುತ್ತುವರೆದು ತಮ್ಮ ಆಯುಧಗಳಿಂದ ಅವನನ್ನು ಇರಿದರು. ಹುಡುಗ “ಅಮ್ಮಾ” ಎಂದು ಜೋರಾಗಿ ಕೂಗಿಕೊಂಡ, ಆ ಹುಡುಗನ ದೇಹವು ಕೋಟೆ ಗೋಡೆಯ ಮಧ್ಯದಲ್ಲಿ ಅರ್ಧ ಒಳಗೆ ಅರ್ಧ ಹೊರಗೆ ಜೋತಾಡುತ್ತದೆ. ಈ ದೃಶ್ಯಕ್ಕೆ ರಂಗ ಪರದೆಗಳನ್ನು ಮತ್ತು ಬೆಳಕಿನ ವ್ಯವಸ್ಥೆಯನ್ನು ಅದ್ದೂರಿಯಾಗಿ ಮಾಡಿದ್ದರು. ಅರಮನೆಯ ದೃಶ್ಯದ ಪರದೆಗಳು ರೋಮಾಂಚನ ಹುಟ್ಟಿಸುವಂತೆ ಮಾಡಿದವು. ಪ್ರೇಮಕ್ಕಾಗಿ ಪ್ರಾಣವನ್ನೇ ಬಲಿಕೊಟ್ಟ ಯುವಕ ಒಂದು ಕಡೆಯಾದರೆ, ಬಡವ-ಶ್ರೀಮಂತರ ನಡುವಿನ ಅಂತರದ ಗೋಡೆ ಮನುಷ್ಯ ಜನ್ಮ ಇರುವವರೆಗೆ ನಿರಂತರವಾಗಿಯೇ ಇರುತ್ತದೆ ಎಂಬ ಮಾತನ್ನು ರಂಗ ಪರದೆಯ ಬಾಗಿಲು ಮತ್ತು ಗೋಡೆಗಳು ಸಾಂಕೇತಿಕವಾಗಿ ಪ್ರತಿಧ್ವನಿಸುತ್ತವೆ.

ನಾಟಕಗಳು ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ರಾಜಕೀಯ ಮತ್ತು ಸಂಸ್ಕೃತಿಕ ಪರಂಪರೆಗೆ ಜೀವಂತ ಸಾಕ್ಷಿಯಾಗಿ ನಿಲ್ಲುತ್ತವೆ. ಪ್ರಯೋಗದಿಂದ ಪ್ರಯೋಗಕ್ಕೆ ಹೊಸತನವನ್ನು ನೀಡುತ್ತವೆ. ಜಗತ್ತಿನ ರಂಗಭೂಮಿಯಲ್ಲಿ ಮನುಷ್ಯ ನಿಮಿತ್ಯ ಮಾತ್ರ. ಸೂತ್ರವನ್ನು ತನ್ನೊಳಗೆ ಹಿಡಿದುಕೊಂಡು ಪರದೆಯ ಮೇಲೆ ತರುವವನು ಅವನೇ, ಪರದೆಯ ಹಿಂದೆ ಸರಿಸುವವನು ಅವನೇ, ನಾವಿಲ್ಲಿ ಕೇವಲ ನೆಪಮಾತ್ರ.