ನಾಟಕ ರಂಗಕಲೆಯೂ ಆಗಿದೆ. ಹಾಗೆ ಸಾಹಿತ್ಯ ಕೃತಿಯೂ ಆಗಿದೆ. ಶ್ರವ್ಯ ಕಲೆಯೂ ಆಗಿರುವಂತೆ ದೃಶ್ಯಕವೂ ಆಗಿದೆ. ಹೀಗಾಗಿ ನಾಟಕವೂ ಸಂಪೂರ್ಣ ಕಲೆಯಾಗಿ ಸಂಕೀರ್ಣವಾಗುತ್ತಾ ಸಾಗಿದೆ. ಪ್ರಾಚೀನ ಕಾಲದಿಂದ ನಾಟಕ ಸಾಹಿತ್ಯದ ಉಲ್ಲೇಖಗಳಿರುವಂತೆ. ರಂಗ ಪರದೆಯ ಕುರಿತು ಉಲ್ಲೇಖಗಳು ಸಿಕ್ಕಿರುತ್ತವೆ. “ವಿಜಯೋ ಪಚಿತ ನಾಟಕಕ್ಕೆ ಜವನಿಕೆಯೋಮ್ತಲೇ ರಜನಿ” ವಿಜಯದಿಂದ ಮುಗಿದ ರಣ ನಾಟಕಕ್ಕೆ ರಾತ್ರಿಯ ಜವನಿಕೆಯಂತು ಎಂಬ ರೂಪಕದಲ್ಲಿ “ಜವನಿಕೆ” ಅಂದರೆ ಪರದೆಯನ್ನು ಉಪಯೋಗಿಸುತ್ತಿದ್ದರೆಂದು ತಿಳಿದು ಬರುತ್ತದೆ. (ಕನ್ನಡ ರಂಗಭೂಮಿ ನಡೆದು ಬಂದು ದಾರಿ ಬಿ. ಪುಟ್ಟಸ್ವಾಮಯ್ಯ).

ನಿಜಗುಣ ಶಿವಯೋಗಿಗಳ ವಿವೇಕ ಚಿಂತಾಮಣಿಯಲ್ಲಿ “ನಾಟಕದೊಳ್ ದಿನ ದಿನಕ್ಕೆ ಅಭಿನಯಿಸಲ್‍ತಕ್ಕ ರಸಭಾವ ಸಂವಿಧಾನ ಆಶ್ರಮಗಳೆಂಬ ಚತುರ್ವಿಧ ಪ್ರಬಂಧಾಂಕಗಳಂ” ಎಂದು ಪ್ರಾರಂಭ ಮಾಡಿ ಮುಖ, ಕಣ್ಣು, ಹಸ್ತ ಪಾದಗಳ ಅಭಿನಯದ ಜೊತೆಗೆ ನಾಟಕದಂಕಗಳ ಉಲ್ಲೇಖವೂ ಇದೆ.

ಕ್ರಿ.ಶ. ೭ನೇ ಶತಮಾನದಿಂದ ಮುಂದೆ ರೋಮನ್ ರಂಗಭೂಮಿ ದೃಶ್ಯ ವೈಭವವನ್ನು ಸಾಧಿಸಿದ್ದರ ಬಗೆಗೆ ಕ್ರಿ.ಶ. ೧೫೦ರಲ್ಲಿ ದಾಖಲೆಯೊಂದು ದೊರಕಿದ್ದು ರಂಗದ ಮುಂಬದಿಯಲ್ಲಿರುವ ಬಿರುಕಿನಲ್ಲಿ ವಾದ್ಯಗಳೊಂದಿಗೆ ಪರದೆ ಕೆಳಗಿಳಿದು ಪ್ರದರ್ಶನದ ಅದ್ಭುತಲೋಕ ತೆರೆದುಕೊಳ್ಳುತ್ತಿತ್ತು ಎಂದಿದೆ. ಇಟಲಿಯವರು ಪ್ರಯೋಗಿಸಿದ ರಂಗಪರದೆಯ ಹೊಸ ಆಯಾಮಗಳನ್ನು ತೆರೆದಿಟ್ಟವು. ರಂಗ ಸಜ್ಜಿಕೆಯಲ್ಲಿ ದೂರದೃಷ್ಟಿ ಇಟ್ಟುಕೊಂಡು ಸೀನರಿಗಳ ರಚನೆಯನ್ನು ಮಾಡಿ ತಂತ್ರಗಳನ್ನು ಅನುಸರಿಸಿದರು. ರಂಗ ಪರದೆ ಜಾಲರಿಗಳ ಕಟ್ಟಡದ ಕಲ್ಪನೆಯನ್ನು ಮೂಡಿಸುತ್ತಿದ್ದವು. ರಂಗಭೂಮಿಯ ಅಂಕ ಪರದೆಯ ಕಲ್ಪನೆ ಇಂಗ್ಲೆಂಡ್ ಮತ್ತು ಯೂರೋಪಗಳಲ್ಲಿ ಮೂಡಿಬಂದಿತು. ಸುಮಾರು ೧೯ನೇ ಶತಮಾನದ ಉತ್ತರಾರ್ಧದಲ್ಲಿ ರಂಗಭೂಮಿಯಲ್ಲಿ ಅಂಕ ಪರದೆಗಳು ವಿಜೃಂಭಿಸತೊಡಗಿದವು. ರಂಗಭೂಮಿಯಲ್ಲಿ ಅಂಕ ಪರದೆಯ ಜೊತೆಗೆ ಪ್ರೇಕ್ಷಾಗೃಹವನ್ನು ಸುಮಾರು ಅರವತ್ತು ಅಗಲದಷ್ಟು ವ್ಯಾಪಿಸಿಕೊಂಡಿದ್ದು ಅಂಕ ಪರದೆಯ ಮೇಲ್ಭಾಗದ ಆಚೆಗೆ ಅಟ್ಟದಲ್ಲಿ ಪ್ರೇಕ್ಷಕರಿಗೆ ಕಾಣದಂತೆ ಕೆಲವರು ಕುಳಿತು ಪರದೆಗಳನ್ನು ಮೇಲೆ ಕೆಳಗೆ ಎಳೆಯುತ್ತಿದ್ದರು. ಇಂಗ್ಲೆಂಡ್ ರಂಗಭೂಮಿಯಿಂದ ಪರಿವರ್ತನೆ ಹೊಂದಿ ಪ್ರೇಕ್ಷಾಗೃಹವನ್ನು ಮುಖ್ಯವಾಗಿಟ್ಟುಕೊಂಡು ಇವುಗಳ ಜೊತೆಗೆ ಸಂಬಂಧದ ಬೆಸುಗೆ ನಿರ್ಮಾಣ ಮಾಡಿಕೊಂಡು ಪ್ರತ್ಯೇಕವಾಗಿ ಕವಲೊಡೆಯಿತು.

ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ನಮ್ಮ ರಂಗಭೂಮಿಯಲ್ಲಿ ಜಾನಪದ ವೃತ್ತಿ ಮತ್ತು ಹವ್ಯಾಸಿಗಳೆಂಬ ಪ್ರಬೇಧಗಳಿವೆ. ಆಯಾ ಪರಿಸರ ಮತ್ತು ಕಾಲ ಘಟ್ಟಕ್ಕೆ ತಕ್ಕಂತೆ ಪರಿವರ್ತನೆಯನ್ನು ಪಡೆಯುತ್ತಾ ರಂಗಭೂಮಿ ತನ್ನ ಜೀವಂತಿಕೆಯನ್ನು ಕಾಯ್ದುಕೊಂಡು ಬಂದಿದೆ. ಜಾನಪದ ರಂಗಭೂಮಿಯಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಜನಾನುರಾಗಿಯಾಗಿ ತನ್ನ ಸಾಂಸ್ಕೃತಿಕ ಹಿರಿಮೆ ಗರಿಮೆಯನ್ನು ಮೆರೆದು ಉಜ್ವಲ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಜನಪದ ರಂಗಭೂಮಿಯಲ್ಲಿ ಹಲವಾರು ಪ್ರಬೇಧಗಳು ಕವಲೊಡೆದಿದ್ದರೂ ಅದು ಇಂದಿಗೂ ಹೊಸತನವನ್ನು ಅಳವಡಿಸಿಕೊಂಡು ಬಂದಿದೆ. ಪ್ರಯೋಗದಿಂದ ಪ್ರಯೋಗಕ್ಕೆ ತನ್ನದೇಯಾದ ಮೆರಗನ್ನು ಹೊಂದಿದೆ. ದೊಡ್ಡಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ರಾಧಾನಾಟ. ದಾಸರಾಟದಂತಹ ಬಯಲಾಟಗಳು ಹಾಗೂ ಕರಾವಳಿಯ ಯಕ್ಷಗಾನ ನೋಡಿಕೊಂಡಾಗ ಇವುಗಳಿಗೆ ರಂಗಸಜ್ಜಿಕೆ, ರಂಗ ಪರದೆ. ರಂಗಪರಿಕಗಳು ಎಲ್ಲವೂ ರಂಗಭೂಮಿಯನ್ನು ಸುಸಜ್ಜಿತಗೊಳಿಸುತ್ತಿದ್ದರು. ಆದರೆ ಈ ಪ್ರಯೋಗಗಳು ಕೇವಲ ದಣಿದುಬಂದ ದೇಹಕ್ಕೆ ಮನಃಶಾಂತಿಯನ್ನು ಮನರಂಜನೆಯನ್ನು ನೀಡುವ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಇವುಗಳಲ್ಲಿ ಗ್ರಾಮೀಣ ಸಂವೇದನೆಯ ಪ್ರತಿಭೆಯುಳ್ಳವರು ಕಲಾವಿದರಾಗಿ ತಮ್ಮ ಅಭಿನಯ ಕೌಶಲ್ಯವನ್ನು ತೋರ್ಪಡಿಸುತ್ತಿದ್ದರು. ಜನಪದ ರಂಗಭೂಮಿಗೆ ಸಂಬಂಧಿಸಿದಂತೆ ತೊಗಲುಗೊಂಬೆಯಾಟ. ಗೊಂಬೆಯಾಟದಂತಹ ಪ್ರಯೋಗಗಳನ್ನು ನೋಡಿಕೊಂಡಾಗ ಪರದೆಯ ಮೇಲೆಯೇ ಪೌರಾಣಿಕ, ಐತಿಹಾಸಿಕ ಕಥೆಯ ಸಾರವನ್ನು ಜನಸಾಮಾನ್ಯರಿಗೆ ನೀಡಿ ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷೆ ಎನ್ನುವ ಸೂಕ್ಷ್ಮ ಸಂದೇಶವನ್ನು ಸಾರುವ ಸ್ಪಷ್ಟ ಚಿತ್ರಣ ನಮ್ಮ ಕಣ್ಮುಂದೆ ನಿಲ್ಲುತ್ತದೆ.

ಜನಪದ ರಂಗಭೂಮಿಯಲ್ಲಿ ರಂಗಸಜ್ಜಿಕೆಯನ್ನು ನಿರ್ಮಾಣ ಮಾಡಬೇಕಾದರೆ ಕಟ್ಟಿಗೆಯ ಹಲಗೆಗಳನ್ನು ಬಂಡಿಯ ಗಾಲಿಗಳನ್ನು ಮತ್ತು ಖಾಲಿ ಡ್ರಮ್ಮುಗಳನ್ನು ಉಪಯೋಗಿಸುತ್ತಿದ್ದರು. ರಂಗದ ಮೇಲೆ ಪರದೆಯನ್ನು ಕಟ್ಟಿ ಬೆಳಕಿಗಾಗಿ ಎರಡೂ ಬದಿಯಲ್ಲಿ ಹಿಲಾಲುಗಳನ್ನು ಬಳಸುತ್ತಿದ್ದರು. ತದನಂತರ ಪೆಟ್ರೊಮ್ಯಾಕ್ಸ ಬಳಕೆ ಆರಂಭವಾಯಿತು.

ಸಂಸ್ಕೃತಿ ಮತ್ತು ಪಾಶ್ಚಾತ್ಯ ರಂಗಭೂಮಿಯ ನಾಟಕಗಳು ಕನ್ನಡಕ್ಕೆ ಅನುವಾದಗೊಂಡವು. ಉತ್ತರ ಕರ್ನಾಟಕದಲ್ಲಿ ಮರಾಠಿಗರ ನಾಟಕಗಳ ವಿರುದ್ಧ ಧ್ವನಿ ಎತ್ತಿದ ಶಾಂತಕವಿಗಳು ವೃತ್ತಿರಂಗಭೂಮಿಯ ಪಿತಾಮಹರಾದರು. ಪಾರ್ಸಿ ಕಂಪನಿಯಿಂದ ಪ್ರೇರಿತರಾದಂತಹ ಕನ್ನಡಿಗರು ವೃತ್ತಿರಂಗಭೂಮಿಯನ್ನು ಒಂದು ಉದ್ದಿಮೆಯನ್ನಾಗಿ ಮಾಡಿಕೊಂಡರು. ವೃತ್ತಿ, ರಂಗಭೂಮಿಯಲ್ಲಿ ಪೌರಾಣಿಕ. ಐತಿಹಾಸಿಕ, ಸಾಮಾಜಿಕ ನಾಟಕಗಳು ರಂಗ ಪ್ರಯೋಗಕ್ಕೆ ಸಿದ್ಧಗೊಂಡವು. ದಕ್ಷಿಣ ಕರ್ನಾಟಕದ ರಂಗಭೂಮಿ ರಾಜಾಶ್ರಯದಲ್ಲಿ ಸಾಗಿತ್ತು. ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿ ಜನಾಶ್ರಯದಲ್ಲಿ ಮುಂದುವರಿಯಿತು. ಮೈಸೂರು ಅರಸರು ಕಲೆ, ಸಾಹಿತ್ಯ, ಸಂಸ್ಕೃತಿಗೆ ಉತ್ತೇಜನ ನೀಡಿದರು. ಆ ಒಂದು ಸಂದರ್ಭದಲ್ಲಿ ವರದಾಚಾರ್ಯರು, ಸುಬ್ಬಯ್ಯ ನಾಯ್ಡು, ಗುಬ್ಬಿ ವೀರಣ್ಣ ಉತ್ತರ ಕರ್ನಾಟಕದಲ್ಲಿ ಶಾಂತ ಕವಿಗಳಿಂದ ಹಿಡಿದು ಸಾಕಷ್ಟು ಕಂಪನಿಯ ಮಾಲೀಕರು ನಾಟಕ ಕಂಪನಿಗಳನ್ನು ಹುಟ್ಟು ಹಾಕಿದರು. ಕಂಪನಿಗಳು ತಮ್ಮದೇ ಆದ ನಾಟಕದ ಸಾಮಾನುಗಳನ್ನು ಹೊಂದಿರುತ್ತಿದ್ದವು. ಪ್ರಸಿದ್ಧ ಪೇಂಟರುಗಳಿಂದ (ನಾಟಕದ ಸೀನರಿಗಳನ್ನು ಬರೆಯುವ ಚಿತ್ರ ಕಲಾವಿದರನ್ನು ಪೇಂಟರ್‌ಗಳೆಂದು ಕರೆಯುತ್ತಿದ್ದರು) ತಮ್ಮ ಪರದೆಗಳನ್ನು ಬರೆಸುತ್ತಾ ಆಗಾಗ ನವೀಕರಿಸುತ್ತ ಹೊಸ ನಾಟಕಗಳಿಗೆ ಯೋಗ್ಯವಾದ ಹೊಸ ದೃಶ್ಯಗಳನ್ನು ಬರೆಸುತ್ತ ರಂಗಭೂಮಿಯ ಚಿತ್ರಕಲೆಯನ್ನು ಬೆಳೆಸಿದರು.

ಈ ಪ್ರಸಿದ್ಧ ಕಂಪನಿಗಳಲ್ಲದೆ, ಗ್ರಾಮೀಣ ಹವ್ಯಾಸಿ ನಾಟಕ ತಂಡಗಳಿಗಾಗಿ ನಾಟಕದ ಸಾಮಾನುಗಳನ್ನು ಬಾಡಿಗೆ ಕೊಡಲಿಕ್ಕಾಗಿಯೇ ಸಿದ್ಧ ಮಾಡಿರುತ್ತಿದ್ದರು. ಡ್ರಾಮಾಸೀನರಿ ಕಂಪನಿಗಳೂ ಅಲ್ಲಲ್ಲಿ ಇರುತ್ತಿದ್ದವು. ಪ್ರಸಿದ್ಧ ಕಂಪೆನಿಗಳ ಗುಣಮಟ್ಟದ ಸೀನರಿಗಳಂತೆಯೇ ಇವು ಇರುತ್ತಿದ್ದವು.

ಅಲ್ಲದೆ ಕಂಪನಿಗಳ ಹಾಗೂ ಬಾಡಿಗೆ ಡ್ರಾಮಾ ಸೀನರಿಗಳು, ಪೇಂಟರ್‌ಗಳು ಎರಡೂ ಕಡೆಯಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದರು. ಅದೇ ಜೀವನೋಪಾಯದ ಮಾರ್ಗವಾಗಿ ಅವರು ಪ್ರಸಿದ್ಧ ಕಲಾವಿದರಾಗಿ ಬಾಳುತ್ತಿದ್ದರು. ಇಳಕಲ್ಲು, ಗದಗ, ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಮುಂತಾದೆಡೆಗಳಲ್ಲಿ ಇಂಥ ಪ್ರಸಿದ್ಧ ಪೇಂಟರುಗಳಿದ್ದರು. ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧರಾಗಿದ್ದ. ಎ.ಕೆ.ಸ್ವಾಮಿ, ಕೊಲ್ಲಾಪುರದ ಶಿವರಾಮ, ಪೇಂಟರ, ಹುಬ್ಬಳ್ಳಿಯ ಡೊಂಗ್ರೆ, ತೀವೇಂದ್ರಮ್ಮಿನ, ಮುತ್ತುವೇಲು, ಗೋವಾದ ರಘುವೀರ ಪೇಂಟರ, ನರಸಿಂಹ ಪೇಂಟರ, ಬೋರಕರ ಪೇಂಟರ, ಕಲಾದಗಿ ಪೇಂಟರ (ಸೀತಾರಾಮ), ಮೈಸೂರಿನ ಪುಟ್ಟಸ್ವಾಮಿ, ಜನಾರ್ಧನ ಪೇಂಟರ, ಹಾವೇರಿಯ ರಾಮಚಂದ್ರ ಪೇಂಟರ, ಇಲಕಲ್ಲನ ಧೋತ್ರೆ, ಕೆಂಧೂಳಿ, ಮರೋಳ, ಕುಂಭಾರೆ, ಶಿಲ್ಪಾಚಾರ್, ಅಮೀನ್ ಪೇಂಟರ, ಚಿಲಕದ ವೆಂಕಣ್ಣ, ಟಿ.ಎಲ್. ಚಿಲ್ಲಾಳ, ತುಕಾರಾಮ ಬೊಕಿ, ಎಸ್.ಎಸ್. ಸನ್ನೂರ, ಜಗದೀಶ, ಕೊಪ್ಪರದ, ಸಿರ್ಸಿಪೇಂಟರ್, ರಾಯಚೂರ ಪೇಂಟರ, ಮೊದಲಾದವರನ್ನು ನೆನೆಯಬಹುದು.

ರಂಗಭೂಮಿ ಒಂದು ಪ್ರಭಾವಿ ಮಾದ್ಯಮವಾಗಲು ಕಾರಣ ನಾಟಕದ ಪ್ರಚಾರವನ್ನು ಕೂಡಾ ಕಂಪನಿಯವರು ಪೈಪೋಟಿಯ ಹಾಗೆಯೇ ಮಾಡುತ್ತಾ ಬಂದಿದ್ದಾರೆ. ಆಯಾ ಕಂಪನಿಯ ಪ್ರಮುಖ ಕಲಾವಿದರ ಭಾವಚಿತ್ರಗಳನ್ನು ನಿರ್ಮಿಸಿ ದೊಡ್ಡ ದೊಡ್ದ ಕಟೌಟ ಮಾಡಿ ಜಾತ್ರೆ ಉತ್ಸವಗಳಲ್ಲಿ ಅವುಗಳಿಗೆಲ್ಲ ದೀಪಾಲಾಂಕಾರ ಮಾಡಿ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವಂತೆ ಮಾಡುವುದು ಅವರ ಪ್ರಮುಖ ಉದ್ದೇಶ. ಮೇಲಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸುತ್ತಾಡಿ ಅನೌನ್ಸ್ ಮಾಡಿ ಹ್ಯಾಂಡ ಬಿಲ್ಲುಗಳನ್ನು ಹಂಚಿ ಅದ್ಧೂರಿಯ ಪ್ರಚಾರ ನೀಡಿ ನಾಟಕ ಪ್ರಯೋಗದತ್ತ ಜನಸಾಮಾನ್ಯರನ್ನು ಸೆಳೆಯುವದು ಇವರ ತಂತ್ರಗಾರಿಕೆ. ಪ್ರಮುಖ ರಸ್ತೆಗಳ ಗೋಡೆಯ ಮೇಲೆ ಪೇಂಟರ್‌ಗಳಿಂದ ನಾಟಕದ ಹೆಸರು ಬರೆಯಿಸಿ ಬೋರ್ಡ್, ಬ್ಯಾನರ್ ಕಟ್ಟಿಸಿ ಹೊಸ ಹೊಸ ನಾಟಕಗಳ ಪ್ರಯೋಗಗಳ ಕುರಿತು ದಾಖಲೆ ನೀಡುತ್ತಾರೆ. ಹೀಗೆ ಆಯಾ ಕಂಪನಿಯ ಮಾಲೀಕರು ಕೆಲವು ಪೇಂಟರುಗಳನ್ನು ತಮ್ಮ ಕಂಪನಿಯಲ್ಲಿಟ್ಟುಕೊಂಡು ಕಳೆಗುಂದಿದ ರಂಗಪರದೆಗಳಿಗೆ ಪುನಶ್ಚೇತನ ನೀಡುತ್ತಿದ್ದರು ರಂಗಪರಿಕರದ ನಿರ್ಮಾತೃಗಳು ಪ್ರತಿ ಕಂಪನಿಯಲ್ಲಿ ಇರುತ್ತಿದ್ದರು.

ಪರದೆ ನಿರ್ಮಾಣದ ಬಣ್ಣಗಳು

ಪರದೆ ಬರೆಯುವದರಲ್ಲಿ ಬಳಸುವ ಬಣ್ಣಗಳಿಗೆ ಲೇಕ್ ಕಲರ್ಸ್ ಎನ್ನುತ್ತಾರೆ. ಚೈನಾಬ್ಲೂ, ಅಜರ್ ಬ್ಲೂ, ಸ್ಕೈಬ್ಲೂ, ಡರ್ಕ್ ಗ್ರೀನ್, ಉಮರಾಲ್ಡ್ ಗ್ರೀನ್, ಕ್ರೀಮ್ಸನ್ ರೆಡ್, ಸ್ಕಾರ್ಲೆಡ್, ರೋಜ್ ಪಿಂಕ, ಮೆಂಜೆಟಾ, ಪರ್ಪಲ್ ವಾಯಲೆಟ್, ಮಿಡಲ್ ಕ್ರೋಂ, ಲೆಮನ್ ಕ್ರೋಂ, ಆರೇಂಜ್ ಕ್ರೋಂ, ರಾಸಿಯನ್ನಾ, ಬರಂಟ್ ಸಿಮನ್ನು ಟರ್ಕಿ, ಅಂಬರ್ ಮತ್ತು ಬಿಳಿ ಬಣ್ಣಕ್ಕಾಗಿ ವೈಲ್ ಜಂಕ ಪುಡಿ, ಲೇಕ್ ಕಲರ್ಸ್ ಹುಳುಕಿನ ರೂಪದಲ್ಲಿರುತ್ತವೆ. ಅವುಗಳನ್ನು ಬೇರೆ ಬೇರೆ ಮಣ್ಣಿನ ಬಟ್ಟಲುಗಳಲ್ಲಿ ನೀರಲ್ಲಿ ನೆನೆಹಾಕಿ ನಂತರ ನೀರನ್ನು ಮಾತ್ರ ಚೆಲ್ಲಿ ಕಟ್ಟಿಗೆಯ ಗುಣಕಗಳಿಂದ ಚೆನ್ನಾಗಿ ಅರೆಯಬೇಕು. ಇದು ಬೆಣ್ಣೆಯಿಂದ ನುಣ್ಣಗಾಗುವವರೆಗೆ ಅರೆಯಬೇಕು. ಇದಕ್ಕೆ ಮಾಧ್ಯಮವಾಗಿ ಬಳಸಿಕೊಳ್ಳಲು ಮೀನ್ ಸರಿ ಅಥವಾ ವಜ್ರ ಸರಿಯನ್ನು ನೀರಲ್ಲಿ ನೆನೆಹಾಕಿ ಚೆನ್ನಾಗಿ ಕುದಿಸಿ ಸಿದ್ಧಮಾಡಿಟ್ಟುಕೊಳ್ಳಬೇಕಾತ್ತದೆ. ಇದೂ ಒಂದು ಹದ. ಬಹಳ ನೀರಾಗಬಾರದು. ಬಹಳ ಮಂದವೂ ಆಗಬಾರದು. ಒಳ್ಳೆಯ ಹದವಿರುವ ಸರಿಯನ್ನು ಬಳಸಿ ಬರೆದ ಪರದೆಗಳ ಬಣ್ಣ ಎಷ್ಟೋ ದಿನಗಳವರೆಗೆ ಮಾಗದೇ ಉಳಿಯುತ್ತದೆ.

ಪರದೆಯ ಎತ್ತರ ೧೫ಅಡಿ. ಅಗಲ ೨೫ ರಿಂದ ೩೦ ಮಂಜೂರಪಾಟ ಬಟ್ಟೆಯನ್ನು ಹೊಲೆದು ಸಿದ್ಧಪಡಿಸಿದ ನಂತರದಲ್ಲಿ ವಿಶಾಲವಾದ ಸ್ಥಳದಲ್ಲಿ ಬಟ್ಟೆಯನ್ನು ತೂಗುಹಾಕಿ ಅಥವಾ ನೆಲದ ಮೇಲೆ ಹಾಕಿ ಅದರ ಮೇಲೆ ಚಿತ್ರ ಬಿಡಿಸುತ್ತಾರೆ. ಈ ಪರದೆಗಳಲ್ಲಿ ಉದ್ಯಾನವನ, ರಸ್ತೆ, ಜಂಗಲ್, ಮನೆ, ಸಾಮಾಜಿಕ ನಾಟಕಕ್ಕೆ, ಮಹಡಿಮನೆ, ಐತಿಹಾಸಿಕ ನಾಟಕಕ್ಕೆ, ದರ್ಬಾರ ಸೀನು, ಅರಮನೆ, ಮುಂತಾದ ದೃಶ್ಯಗಳನ್ನು ಚಿತ್ರಿಸುತ್ತಾರೆ. ನಾಟಕಾರರು ಈ ಎಲ್ಲಾ ದೃಶ್ಯಗಳನ್ನು ಗಮನದಲ್ಲಿ ಕಟ್ಟಿಕೊಂಡು ನಾಟಕಗಳನ್ನು ರಚಿಸುತ್ತಾರೆ. ಯಾವುದೇ ನಾಟಕ ಪ್ರಯೋಗಿಸುವ ಪೂರ್ವದಲ್ಲಿ ನಾಟಕದ ಸನ್ನಿವೇಶಗಳಿಗೆ ತಕ್ಕಂತೆ ದೃಶ್ಯಗಳನ್ನು ಅಳವಡಿಸಿಕೊಳ್ಳುವದು ನಾಟಕಕ್ಕೆ ಒಂದು ಮೆರಗು ನೀಡುತ್ತದೆ. ಕಂಪನಿಯ ಮಾಲೀಕರಾಗಲಿ ಅಥವಾ ಡ್ರಾಮಾ ಸೀನರಿ ಕಂಪನಿಗಳು ಬಾಡಿಗೆಯ ರೂಪದಲ್ಲಿ ನಾಟಕಕ್ಕೆ ಬೇಕಾಗುವ ರಂಗ ಪರಿಕರಗಳನ್ನು ನೀಡಬೇಕಾಗುತ್ತದೆ. ಒಂದು ಪರದೆ ನಿರ್ಮಾಣವಾಗಬೇಕಾದರೆ ಕನಿಷ್ಟ ಐದು ಸಾವಿರ ರೂಪಾಯಿಗಳು ವೆಚ್ಚವಾಗುತ್ತದೆ. ವೃತ್ತಿನಾಟಕ ಕಂಪನಿಯವರು ಇಂಥಹ ಹಲಾವರು ರಂಗ ಪರದೆಯ ಕಲಾಕಾರರನ್ನು ತಮ್ಮಲ್ಲಿರಿಸಿಕೊಂಡು ರಂಗಪರದೆಗಳನ್ನು ತಯಾರಿಸಿಕೊಳ್ಳುತ್ತಿದ್ದರು.

ರಂಗ ಪರದೆಯ ಕಲಾವಿದರು ಆಧ್ಯಾತ್ಮಿಕ ನಾಟಕಕ್ಕೆ ತಕ್ಕಂತೆ ದೇವಸ್ಥಾನದ ಚಿತ್ರಗಳನ್ನು ಚಿತ್ರಿಸುತ್ತಾರೆ. ಅವುಗಳಲ್ಲಿ ಪ್ರಚಲಿತವಿರುವ ದೇವಸ್ಥಾನವೆಂದರೆ ಹಂಪೆಯ ವಿರೂಪಾಕ್ಷ ಮತ್ತು ಬೇಲೂರಿನ ಚೆನ್ನಕೇಶವ ದೇವಸ್ಥಾನ ಚಿತ್ರಗಳು. ಕಲಾವಿದರು ರಂಗ ಪರದೆಗಳ ಮೇಲೆ ಕ್ಯಾಲೆಂಡರಗಳ ಮೇಲೆ ಇರುವ ಭಾವಚಿತ್ರಗಳನ್ನು ಸ್ಕೇಚ್ ಮಾಡಿ ಯಥಾರೀತಿಯಲ್ಲಿ ಚಿತ್ರ ಬಿಡಿಸುವದು ಅವರ ಕಲಾನೈಪುಣ್ಯತೆಗೆ ಸಾಕ್ಷಿಯಾಗುತ್ತದೆ. ಕೆಲವು ಕಲಾವಿದರು ವಿಭಿನ್ನ ರೀತಿಯ ಪರದೆಗಳನ್ನು ಸೃಷ್ಟಿಸಿ ಮನಮೋಹಕವಾಗಿ ಮಾಡುತ್ತಾರೆ. ಸರೋವರ, ಹೊಳೆ, ಗುಡ್ಡ, ನಿಸರ್ಗದ ರಹಷ್ಯ ಚಿತ್ರಗಳು, ಹಾಗೂ ಮಹಾಪಟ್ಟಣದ ಪ್ರದೇಶಗಳು ಮತ್ತು ಅವುಗಳ ಹೆದ್ದಾರಿಗಳು ಕಣ್ಣಿಗೆ ಕಟ್ಟುವಂತೆ ನಿಲ್ಲಿಸುತ್ತಾರೆ. ರಂಗದ ಎರಡೂ ಬದಿಯ ಕಟೌಟಗಳಿಗೆ ಕ್ಯಾಲೆಂಡರದಲ್ಲಿರುವ ಮಹಿಳೆಯರ ಭಾವ ಬಂಗಿಗಳನ್ನು ನೈಜವಾಗಿ ಚಿತ್ರಿಸಿ ಇವುಗಳಿಗೆ ಜೀವ ತುಂಬುತ್ತಾರೆ. ಹೀಗೆ ಅವರ ಕಲಾಭಿವ್ಯಕ್ತಿ ಜನಪ್ರಿಯತೆ ಪಡೆಯುತ್ತದೆ. ನಾಟಕ ಕಂಪನಿಯ ಪರದೆಯ ಮೇಲೆ ಕಂಪನಿಯ ಹೆಸರು ಹಾಗೂ ಮಾಲೀಕರು ಹೆಸರು, ನಾಟಕದ ಹೆಸರು, ಇಷ್ಟದೈವದ ಚಿತ್ರ ಕಂಡು ಬರುತ್ತದೆ.

ರಂಗ ಮಂದಿರಕ್ಕೆ ಬೆಂಕಿ

ಉತ್ತರ ಕರ್ನಾಟಕದಲ್ಲಿ ಗುಬ್ಬಿ ವೀರಣ್ಣನವರಂತೆ ರಂಗಭೂಮಿಯ ಶ್ರೀಮಂತಿಕೆಯ ವೈಭವವನ್ನು ಮೆರೆಸಿದ ಕೀರ್ತಿ ಸುಳ್ಳದ ದೇಸಾಯಿ ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಫು ಸುಳ್ಳ ಕಂಪನಿಗೆ ಸಲ್ಲುತ್ತದೆ. ಅದ್ಧೂರಿಯ ಹೊಸ ಹೊಸ ರಂಗ ಪರದೆಗಳು, ರಂಗ ಸಜ್ಜಿಕೆ, ರಂಗ ಪರಿಕರಗಳು, ಕಂಪನಿಯನ್ನು ನೋಡಿದ ತಕ್ಷಣ ಅತ್ಯಂತ ಆಕರ್ಷಕ ನಾಟಕ ಕಂಪನಿಯಾಗಿ ಬೆಳಕಿಗೆ ಬಂದಿತು. ಈ ಕಂಪನಿಯಲ್ಲಿ ಕೋಟೆಕಲ್ಲದ ಶ್ರೀ ಹೊಳೆಹುಚ್ಚೇಶ್ವರ ಮಠದ ಬಿಳಿಯ ಕುದುರೆ. ಕರನಂದಿಯವರ ತಿರುಗುವ ಮಂಚ, ಅದ್ಭುತ ದೀಪಾಲಂಕಾರ, ರಂಗ ಪ್ರೇಕ್ಷಕರನ್ನು ಮೋಡಿ ಮಾಡುವಂತಿತ್ತು.

ನಾಟ್ಯ ಕವಿಕೇಸರಿ ಕಂದಗಲ್ಲ ಹನುಮಂತರಾಯರು ರಚಿಸಿದ ಐತಿಹಾಸಿಕ ಕೊನೆಯ ನಾಟಕ “ವೀರ ರಾಣಿ ಕಿತ್ತೂರು ಚೆನ್ನಮ್ಮ” ಚೆನ್ನಮ್ಮನ ಐತಿಹಾಸಿಕ ಹಿನ್ನೆಲೆ ಹಾಗೂ ಅವಳ ಶೌರ್ಯ ಸಾಹಸಗಳ ಬಗೆಗೆ ಬೆಳಕು ಚೆಲ್ಲುವ ವಿಶಿಷ್ಟ ಕೃತಿಯಿದು. ಈ ನಾಟಕದ ಹಸ್ತಪ್ರತಿಯು ಇದೇ ಕಂಪನಿಯಲ್ಲಿ ಉಳಿದುಕೊಂಡಿತ್ತು.

ಬೈಲಹೊಂಗಲದ ವಿಶಾಲವಾದ ಬೈಲಲ್ಲಿ ಭವ್ಯವಾಗಿ ಹಾಕಿದ್ದ ರಂಗಭೂಮಿಗೆ ಬೆಂಕಿ ಹಚ್ಚಿದವರು ಹೊಟ್ಟೆಕಿಚ್ಚಿನ ದುಷ್ಟರು, ನಾಟಕ ಪ್ರಯೋಗ ಮುಗಿಸಿ ಉಂಡು ಖುಷಿಯಲ್ಲಿ ಕಲಾವಿದರು ಮಲಗಿದ್ದರು. ನಾಟಕ ಕಂಪನಿಗೆ ಬೆಂಕಿ ತಗುಲಿದುದನ್ನು ಕಂಡು ಹೌಹಾರಿದರು. ರಂಗ ಪರಿಕರಗಳನ್ನು ಹೊರಗೆ ತೆಗೆಯಲು ಪ್ರಯತ್ನಿಸುತಿದ್ದಂತೆ. ಬಿರುಗಾಳಿ ಬೀಸಿದ ರಭಸಕ್ಕೆ ಜ್ವಾಲೆಯು ತನ್ನ ಕೆನ್ನಾಲಿಗೆಯನ್ನು ಚಾಚಿಕೊಂಡಿತು. ಸಾಗವಾನಿ ಕಟ್ಟಿಗೆಯಿಂದ ತಯಾರಿಸಿದ ಫ್ರೇಮುಗಳು ಬೆಂಕಿಯಲ್ಲಿ ಬೆಂದು ಬೂದಿಯಾದವು. ದೇಸಾಯಿಯವರ ನಾಟಕಕ್ಕೆ ಹಾಕೆದ ಬಂಡವಾಳದೊಂದಿಗೆ ನಾಟಕಗಳಿಂದ ಹರಿದು ಬಂದ ಹಣವು ಭಸ್ಮವಾಯಿತು. ಈ ನಾಟಕದ ಸಹವಾಸವೇ ಸಾಕೆನ್ನುವ ರೀತಿಯಲ್ಲಿ ಕಠೋರ ನಿರ್ಣಯದೊಂದಿಗೆ ಕಂಪನಿ ಬಂದು ಮಾಡುವ ನಿರ್ಧಾರ ತಾಳಿದರು. ಆದರೆ ಬೈಲಹೊಂಗಲದ ಹಿರಿಯರು ಕಲಾವಿದರು, ಕಲಾಭಿಮಾನಿಗಳು ಸೇರಿ ತಮ್ಮೂರಲ್ಲಾದ ಈ ದುರ್ಘಟನೆಗೆ ವಿಷಾದ ವ್ಯಕ್ತಪಡಿಸಿ ಮಲ್ಲನಗೌಡ ದೇಸಾಯಿಯವರ ರಂಗಭೂಮಿಯ ಪ್ರೀತಿಯ ಒರತೆ ಬತ್ತದಂತೆ ಧೈರ್ಯ ತುಂಬಿದರು. ಅಲ್ಲದೆ ದೇಸಾಯಿಯವರಿಗೆ ಬೆಂಗಾವಲಾಗಿ ನಿಂತರು ಮುಂದೆ ೧೯೭೬-೭೭ರವರಗೆ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ನಡೆದ ಕ್ಯಾಂಪಿನಲ್ಲಿ ವ್ಯವಸ್ಥಿತವಾಗಿ ನಾಟಕ ನಡೆದು ದಿನೇ ದಿನೇ ವೃದ್ಧಿಗೊಳ್ಳತೊಡಗಿತು ಇದನ್ನು ಕಂಡು ಕೀರ್ತಿಗೆ ಕುಂದು ತರಲು ಯತ್ನಿಸಿದ ಸ್ಥಳೀಯ ರಾಜಕೀಯ ದಳ್ಳುರಿಗೆ ಪುನಃ ರಂಗಸಜ್ಜಿಗೆ ಬೆಂಕಿಗೆ ಆ ಹುತಿಯಾದುದು ನಾಟಕ ಕಂಪನಿಗೆ ಆದ ಎರಡನೇಯ ಆಘಾತ. ಇದರಲ್ಲಿ ನಾಟಕ ಕಂಪನಿಯ ಮಾಲೀಕರಾದ ದೇಸಾಯಿಯವರಿಗೆ ಹೆಚ್ಚು ಹಾನಿಯಾಗದೇ ನಾಟಕಕ್ಕೆ ಥೇಟರ ಹಾಕಿದ ಕಲಾವಿದರ ಆಶ್ರಯದಾತರೆಂದೇ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದ ಗುಳೇದಗುಡ್ದದ ಶ್ರೀ ರಾಚಪ್ಪಣ್ಣ ಕರನಂದಿಯವರಿಗೆ ಹೆಚ್ಚು ಹಾನಿಯಾಯಿತೆಂದು ತಿಳಿದು ಬರುತ್ತದೆ. ಕರನಂದಿಯವರ ಪುತ್ರ ಬಸವರಾಜು ಕರನಂದಿಯವರನ್ನು ಸಂದರ್ಶಿಸಿದಾಗ ತಿಳಿಯಿತು. ಪುನಃ ಧಣಿಗಳು ಮುಂದೆ ತಮ್ಮ ಸಂಪತ್ತೆಲ್ಲವನ್ನು ಸುರಿದು ಬಾಗಲಕೋಟೆಯಲ್ಲಿ ಮತ್ತೆ ಕಂಪನಿ ತಲೆಯೆತ್ತಿ ನಿಲ್ಲುವಂತೆ ಮಾಡಿದರು.

ಗುಳೇದಗುಡ್ಡದ ಶ್ರೀ ರಾಮ ನಾಟ್ಯಸಂಘ ಹರದೊಳ್ಳಿ ಶ್ರೀಮಾರುತೇಶ್ವರ ಕಾರ್ತಿಕೋತ್ಸವದಂಗವಾಗಿ ಸಂಗಮೇಶ ಗುರವ ಕಪಟಗಿ ವಿರಚಿತ ವೀರ ಸಿಂಧೂರ ಲಕ್ಷ್ಮಣ ನಾಟಕ ಪ್ರಯೋಗಗೊಳ್ಳುತ್ತಿತ್ತು. ಬ್ರಿಟಿಷ್‌ರಿಗೆ ಸಿಂಹ ಸ್ವಪ್ನವಾಗಿದ್ದ ವೀರಸಿಂಧೂರ ಲಕ್ಷ್ಮಣ ಅಮ್ಮಾ ಎಂದು ಚೀರುತ್ತಾನೆ. ತುಳಸಿಗೇರಿ ಹನುಮಪ್ಪನನ್ನು ಕಪ್ಪರ ಪಡಿಯವ್ವನನ್ನು ಮನದಲ್ಲಿ ಸ್ಮರಿಸಿ ಕೊನೆಯುಸಿರೆಳೆಯುವ ಸಂದರ್ಭವದು. ಬ್ರಿಟೀಷ್ ಪೊಲೀಸ್ ವರಿಷ್ಠಾಧಿಕಾರಿ ಗಾರ್ಮ್‌ನ್ ಬಂದು ವೀರ ಸಿಂಧೂರ ಲಕ್ಷ್ಮಣ ಶೌರ್ಯ, ಸಾಹಸಗಳನ್ನು ನೆನಪಿಸಿಕೊಂಡು ಇಂಥ ವೀರ, ಶೂರ, ನಮ್ಮಲ್ಲಿ ಏನಾದರೂ ಹುಟ್ಟಿದ್ದರೆ ಅವನ ಪೋಟೊವನ್ನು ಮನೆಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಿದ್ದೇವು. ಅಂಥ ವೀರ-ಧೀರನಿಗೆ ಶೆಲ್ಯೂಟ್ ಹೊಡೆಯುವ ಸಂದರ್ಭವದು. ವೀರ ಸಿಂಧೂರ ಲಕ್ಷ್ಮಣನಿಗೆ ಗುಂಡು ಬಿದ್ದ ತಕ್ಷಣ ಲಕ್ಷ್ಮಣ ಸತ್ತನೆಂದು ತಿಳಿದು ನಾಟಕ ಮುಗಿಯಿತು ಎಂದು ಭಾವಿಸಿ ಪರದೆ ಏಳೆಯುವ ರಂಗಕರ್ಮಿ ಅಂಕ ಪರದೆಯನ್ನು ಕೆಳಗಿಳಿಸುತ್ತಿರುವುದನ್ನು ಕಂಡು ಗಾರ್ಮ್‌ನ್ ಪಾತ್ರಧಾರಿಯಲ್ಲಿದ್ದ ನಾನು ಅಂಕ ಪರದೆಯ ಮುಂದೆ ನಿಂತು ಬೇಡರ ಬಂಟ, ಶೂರ ಶಾರ್ದೂಲ ಸಿಂಧೂರ ಲಕ್ಷ್ಮಣನಿಗೆ ಶೆಲ್ಯೂಟ್ ಹೊಡೆದಂತಾಗಿತ್ತು. ಗಾರ್ಮ್‌ನ್ ಪಾತ್ರಧಾರಿಯ ವೇಷಭೂಷಣಗಳನ್ನು ಕಳಚಿ ಮನೆಗೆ ಹೋಗುವ ಸಂದರ್ಭದಲ್ಲಿ ಕೆಲವರು ಭೇಟಿಯಾಗಿ “ಅಂಕ ಪರದೆ ಬಿದ್ದ ಮೇಲೆಯೂ ನೀವು ಮುಂದೆ ಸರಿಯುತ್ತ ಸಂಭಾಷಣೆ ಹೇಳುತ್ತ ಶೆಲ್ಯೂಟ್ ಹೊಡೆಯುತ್ತ ಮುಂದೆ ಬಂದಿರಲ್ಲ ನೀವು ಲಕ್ಷ್ಮಣನಿಗೆ ಶೆಲ್ಯೂಟ್ ಹೊಡೆದಿರೋ. ಅಥವಾ ನಮಗ ಬಂದು ಹೊಡೆದಿರೋ” ಎಂದು ಕೇಳಿದರು. ಅದಕ್ಕೆ “ನೀವು ತಿಳಿದುಕೊಂಡಂಗ ಐತಿ. ಪರದೆ ಬಿಡಾಂವ ನಾಟಕ ಮುಗಿತು ಅಂತ ತನ್ನ ಕೆಲಸ ತಾ ಮಾಡ್ಯಾನ” ಅದಕ್ಕೆ ಪ್ರತಿಯಾಗಿ “ನೀವರ ಬಿಟ್ಟಿರೇನು ನಮ್ಮ ಕೆಲಸ ನೀವು ಮಾಡಿ” “ಒಬ್ಬ ಕಲಾವಿದಾಗಿ ಏನು ಮಾಡಬೇಕಾಗಿತ್ತೋ ಅದನ್ನ ನಾ ಮಾಡೀನಿ ಅಷ್ಟೇ” “ಆದರೂ ನಿಮ್ಮ ಕಲಾ ನೈಪುಣ್ಯ ಮೆಚ್ಚುವಂಥದ್ದು. ನೀವು ಶೆಲ್ಯೂಟ್ ಹೊಡೆದದ್ದು. ಲಕ್ಷ್ಮಣಗ ಅಷ್ಟೇ ಅಲ್ಲ ಅದು ಎಲ್ಲರಿಗೂ ತಲುಪಿತು ನಾಟಕ ಭಾರಿ ಆತು” ಎಂದ ಅವನ ಮಾತು ಕೇಳ್ತಾ ಕೇಳ್ತಾ ನಾನು ಮುಂದೆ ಹೆಜ್ಜೆ ಹಾಕಿದೆ.