ಮಹಾಂತೇಶ ಶಾಸ್ತ್ರಿಗಳ ‘ಕುಂಕುಮ’ ಒಂದೇ ದೃಶ್ಯದ ನಾಟಕ. ಒಂದು ಮನೆ ಸೆಟ್ಟಿನಲ್ಲಿ ಮೂರು ತಾಸಿನವರೆಗೆ ನಡೆಯುವ ನಾಟಕ. ಇದನ್ನು ಮರಾಠಿಯಲ್ಲಿ ನೋಡಿ ಮಾಡಿದ್ದೆ. ಇದರಲ್ಲೊಂದು ಹಾಡಿನ ಸನ್ನಿವೇಶ. ವಿಧವೆಯನ್ನು ಮದುವೆಯಾಗಲು ಒಪ್ಪಿದ ನಂತರ ಬರುವ ಸನ್ನಿವೇಶವದು. ಆಗ

            ಸತಿಪತಿಗಳು ಮತಿಯಿಂದ ಬಂಧುರ
            ಪಥವನ್ನು ಪಿಡಿದೆವು ಇಂದು ಸುಂದರ…….

ಎನ್ನುವ ಒಂದು ಚರಣವನ್ನು ಹೇಳುತಿದ್ದೆ. ಉಳಿದುದನ್ನು ವಿಧವೆ ಪಾತ್ರದಾರಿ ಹಾಡುತ್ತಿದ್ದಳು. ಹಾಡು ಮುಗಿಯುವವರೆಗೂ ನಾನು ಪ್ರೇಕ್ಷಕರನ್ನು ನೋಡುತ್ತ ನಿಲ್ಲಬಾರದೆಂದು ಕಿಟಕಿಯಲ್ಲಿ ನಿಂತು ಹಾಡು ಮುಗಿದ ನಂತರ ಕಿಟಕಿ ಪರದೆ ಸರಿಸಿದೆ. ಅಲ್ಲಿಗೆ ದೃಶ್ಯ ಮುಗಿಯುತ್ತದೆ. ಮರುದಿನ ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿ ಪ್ರೇಕ್ಷಕರೊಬ್ಬರು ಸಿಕ್ಕರು.

ನಿನ್ನೆ ನೀವು ಆ ಹಾಡಿನ ದೃಶ್ಯದಲ್ಲಿ ಪರದೆ ಸರಸಿದಿರಲ್ಲ ಅದು ಯಾಕೆಂದರೆ ಮೊದಲಿದ್ದ ಸಂಪ್ರದಾಯದ ಪರದೆಯನ್ನು ನೀವು ಸರಿಸಿದಂತೆ. ಅಂದರೆ ವಿಧವೆಯನ್ನು ಮದುವೆಯಾಗುವದರ ಮೂಲಕ ಪುನರ್ವಿವಾಹವಾದ ಎನ್ನುವುದನ್ನು ಸೂಚ್ಯವಾಗಿ ತಿಳಿಸಲು ಆ ಪರದೆ ಸರಿಸಿದ್ದೀರಲ್ಲ? ಎಂದರು ನನಗೂ ಗೊತ್ತಿಲ್ಲ. ನಾಟಕಕಾರನಿಗೂ ಗೊತ್ತಿಲ್ಲ. ಆದರೆ ಪ್ರೇಕ್ಷಕರು ಆ ದೃಶ್ಯವನ್ನು ಬೇರೊಂದು ರೀತಿಯಲ್ಲಿ ಅರ್ಥೈಸಿದ್ದರು. ನಾನಾಗ ಅವರಿಗೆ ಕೈ ಮುಗಿದಿದ್ದೆ ಎಂದು ಏಣಗಿಬಾಳಪ್ಪನವರ ಬಣ್ಣದ ಬದುಕಿನ ಚಿನ್ನದ ದಿನಗಳು ಪುಸ್ತಕದಲ್ಲಿ ಹೇಳಿರುವುದು ಗಮನಾರ್ಹ.

ಮಗುವಿನ ಪ್ರಾಣ ಹೆಣ್ಣಿನ ಮಾನ ಮತ್ತು ಪ್ರಾಣ ಇವುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ನಾಟಕಕಾರನ ವಿಚಾರಧಾರೆಯನ್ನು ವಿರೋಧಿಸಿ ಕಲಾವಿದರ ಸಲಹೆಯಂತೆ ಎಚ್.ಆರ್. ಭಸ್ಮೆಯವರು ಕಿರಣಗಿ ಅವರ ನಾಟಕದ ಸನ್ನಿವೇಶವನ್ನು ಬದಲಾಯಿಸಿದರು. ಕಿರಣಗಿ ಅವರು ಕೃತಿಯಲ್ಲಿ ಹೆಣ್ಣಿನ ಮಾನ ಹೋಗುತ್ತದೆ. ಆದರೆ ನಾಟಕಕಾರ ಭಸ್ಮೆಯವರು ಮಗುವಿನ ಪ್ರಾಣ-ಹೆಣ್ಣಿನ ಮಾನ-ಪ್ರಾಣವನ್ನು ಕಾಪಾಡಿ ನಮ್ಮ ಹಿಂದೂ ಸಂಸ್ಕೃತಿಯ ಪರಂಪರೆಯನ್ನು ಮೆರೆಯುತ್ತಾರೆ. ಅಲ್ಲಿಗೆ ತೆರೆ ಬೀಳುತ್ತದೆ. ಕನ್ನಡ ವೃತ್ತಿರಂಗ ಭೂಮಿಯಲ್ಲಿ ಅದ್ಧೂರಿಯ ವೈಭವ ಮತ್ತು ಪ್ರಚಾರವನ್ನು ಪಡೆದ ಕಂಪನಿ ಎಂದರೆ ಗುಬ್ಬಿವೀರಣ್ಣನವರ ಕಂಪನಿ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳನ್ನು ಪ್ರಯೋಗಿಸಿ ಸುಮಾರು ನೂರು ವರ್ಷಗಳ ಕಾಲ ಬಾಳಿ ಬದುಕಿದ ಹೆಗ್ಗಳಿಕೆ ಈ ಕಂಪನಿಗಿದೆ. ರಂಗಭೂಮಿ ಎಂದರೆ ವೃತ್ತಿ-ರಂಗಭೂಮಿ. ವೃತ್ತಿರಂಗಭೂಮಿ ಎಂದರೆ ರಂಗಭೂಮಿ ಎನ್ನುವಷ್ಟರಮಟ್ಟಿಗೆ ಕಂಪನಿ ನಾಟಕಗಳು ಜನಪ್ರಿಯತೆಯನ್ನು ಪಡೆದುಕೊಂಡವು. ಗುಬ್ಬಿ ಕಂಪನಿಯಲ್ಲಿ ಪೌರಾಣಿಕ ನಾಟಕಕ್ಕೆ ೧.೨೫ ಲಕ್ಷ ರೂಪಾಯಿ ಖರ್ಚುಮಾಡಿ ರಂಗಪರಿಕರಗಳನ್ನು ಪರದೆಗಳನ್ನು ಸೃಷ್ಟಿಮಾಡಿದ ಕೀರ್ತಿ ಇದೆ. ಗುಬ್ಬಿವೀರಣ್ಣನವರ ಕಂಪನಿ ನಾಟಕ ಪ್ರಯೋಗಕ್ಕೆ ತೊಡಗಿಕೊಂಡರೆ ಚಿತ್ರಮಂದಿರದ ಬಾಗಿಲುಗಳು ಮುಚ್ಚಿವೆ. ಇದಕ್ಕೆ ಕುರುಕ್ಷೇತ್ರ ನಾಟಕದ ಪ್ರಯೋಗವೇ ಸಾಕ್ಷಿ.

ಕುರುಕ್ಷೇತ್ರ ನಾಟಕದಲ್ಲಿ ಜೀವಂತ ಕುದುರೆಗಳನ್ನು, ಆನೆಗಳನ್ನು, ರಥಗಳನ್ನು ರಂಗದಮೇಲೆ ತಂದಿದ್ದಾರೆ. ದಶಾವತಾರವನ್ನು ನಾಟಕದ ಮೇಲೆ ಅಳವಡಿಸಿದ್ದಾರೆ. ಗುಬ್ಬಿ ಕಂಪನಿ ಕನ್ನಡ ರಂಗಭೂಮಿಯಲ್ಲಿ ಶತಮಾನಗಳವರೆಗೆ ಉಳಿದು ಬಂದು ಕನ್ನಡ ರಂಗಭೂಮಿಯ ಶ್ರೀಮಂತಿಕೆಯನ್ನು ಹೆಚ್ಚಿಸಿದೆ.

ನಟಸಾರ್ವಭೌಮ ನಾಟಕ ಶಿರೋಮಣಿ ವರದಾಚಾರ್ಯರು ಬಸವಪ್ಪಶಾಸ್ತ್ರಿಗಳು ಅಭಿಜ್ಞಾನ ಶಾಕುಂತಲ ನಾಟಕದ ಪ್ರಯೋಗದಲ್ಲಿ ವಿಶಿಷ್ಟ ರಂಗ ಪರದೆಗಳನ್ನು ಅಳವಡಿಸಿಕೊಂಡು ಶೃಂಗಾರ ರಸಭಾವಕ್ಕೆ ರತಿ, ಮನ್ಮಥರೇ ನಾಚುವಂತೆ, ಅಭಿನಯ ಕೌಶಲ್ಯವನ್ನು ನೀಡಿದ್ದಾರೆ. ನಾನು ನೂರಾರು ಸಲ ಶಾಕುಂತಲ ನಾಟಕದಲ್ಲಿ ದುಷ್ಯಂತನ ಪಾತ್ರವಹಿಸಿದ್ದೇನೆ ಒಂದೊಂದು ಸಾರಿಯೂ ಆ ಪಾತ್ರವನ್ನು ಮಾಡುವಾಗಲೂ ಒಂದೊಂದು ನವ್ಯತೆ ನನ್ನ ಅನುಭವಕ್ಕೆ ಬರುತ್ತಿದೆ. ನನ್ನ ಆಯುಷ್ಯದಲ್ಲಿ ಒಮ್ಮೆಯಾದರೂ ಆ ಪಾತ್ರವನ್ನು ತೃಪ್ತಿಕರವಾಗಿ ಪೂರೈಸಬಲ್ಲೆನೆ ಎಂದು ಎನಿಸುತ್ತದೆ. ನನಗೆ. (ಕರ್ನಾಟಕ ರಂಗಭೂಮಿ ಎಚ್.ಕೆ ರಂಗನಾಥ)

ಹೆಸರಾಂತ ನಾಯಕ ನಟ ಸುಬ್ಬಯ್ಯನಾಯ್ಡು ಅವರ ಅಭಿನಯ ಸಂದರ್ಭವನ್ನು ನೋಡಿಕೊಂಡಾಗ ಆ ಸನ್ನಿವೇಶಕ್ಕೆ ತಕ್ಕಂತೆ ಸಹಜ ಅಭಿನಯಕ್ಕೆ ಮೆರಗು ಬರುವಂತೆ ದೃಶ್ಯಾವಳಿಗಳನ್ನು ಜೋಡಿಸಿದ್ದಾರೆ. ಅವರ ಸಹಜ ಮಾತುಗಾರಿಕೆ, ಮಾತಿನ ಶೈಲಿ, ಶಬ್ದದ ಏರಿಳಿತಗಳು, ಅವರ ಹಾವ-ಭಾವ ರಂಗಭೂಮಿಯಲ್ಲಿ ಅವರು ಬಂದು ನಿಂತಾಗ ಸಂಗೀತ ವಾದ್ಯ ಪರಿಕರದವರು ನೀಡುವ ಸ್ಫೂರ್ತಿದಾಯಕ, ಸಂಗೀತಸುಬ್ಬಯ್ಯನಾಯ್ಡು ಅವರನ್ನು ಸಮರ್ಥ ಕಲಾವಿದನೆಂದು ಸಾಬೀತುಪಡಿಸಲಿಕ್ಕೆ ರಂಗಭೂಮಿಯ ಎಲ್ಲ ಪರಿಕರದವರನ್ನು ಸಹಕಾರ ನೀಡಿದರು.

ಮಾಸ್ಟರ ಹಿರಣ್ಣಯ್ಯನವರ ಕಂಪನಿಯಲ್ಲಿ ನಾಟಕ ಪ್ರಯೋಗಗಳನ್ನು ನೋಡಿಕೊಂಡಾಗ ಅವರು ಕಥಾವಸ್ತುವಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದಾರೆ. ರಂಗ ಪರಿಕರಗಳನ್ನು ಸಂಗೀತ ಮೇಳವನ್ನು ಊಟಕ್ಕೆ ಉಪ್ಪಿನ ಕಾಯಿಯಂತೆ ಉಪಯೋಗಿಸಿಕೊಂಡಿದ್ದಾರೆ. ಅವರ ವಿಡಂಬನಾತ್ಮಕ ಶೈಲಿ, ಕಥಾವಸ್ತು ಸಾಮಾಜಿಕ ಚಿಂತನೆಗೆ ತೊಡಗಿರುವದು ಒಂದು ವಿಶೇಷ. ಶಿವಮೂರ್ತಿ ಸ್ವಾಮಿಗಳು ಹತ್ತಾರು ಕಡೆಗೆ ಸುತ್ತಿ ಉತ್ತಮ ಪೆಂಟರರನ್ನು ಕುಸುರಿಕೆಲಸದ ರಂಗ ಕರ್ಮಿಗಳನ್ನು ಕೂಡಿಸಿ ರಂಗ ಸಜ್ಜಿಕೆಗಳನ್ನು ನಿರ್ಮಿಸಿದ್ದರು. ಸ್ವತಃ ಸ್ವಾಮಿಗಳು ನಾಟಕದ ವಿಷಯ ವಿವರಿಸಿ ಅವುಗಳಿಗನುಗುಣವಾಗಿ ಅಲಂಕಾರಿಕ ಪರದೆಗಳನ್ನು ಬರೆಸಿದ್ದರು. ಭಾರಿ ಕಿಮ್ಮತ್ತಿನ ಕಿರೀಟ, ಕಠಾರಿ, ಬಿಲ್ಲು ಬಾಣ, ಗದೆ, ಇತರ ವೇಷಭೂಷಣಗಳನ್ನು ಮುಂಬಯಿಂದ ಖರೀದಿಸಿಕೊಂಡು ಬಂದಿದ್ದರು. ಈ ಕಂಪನಿಗೆ ಬಸವೇಶ್ವರ ನಾಟಕಕ್ಕಿಂತಲೂ ಪ್ರೇಕ್ಷಣೀಯ ರಂಗ ಸಜ್ಜಿಕೆ ಅಳವಡಿಸಲಾಗಿತ್ತು. ಬಿಜ್ಜಳನ ಅರಮನೆ ದೃಶ್ಯಕ್ಕಾಗಿ ದೊಡ್ಡ ದೊಡ್ಡ ಕಟೌಟ್ಸ್ ಬಳಸಿದ್ದ ಅಂತಸ್ತಿನ ಅರಮನೆ ರಾರಾಜಿಸುತ್ತಿತ್ತು. ದರ್ಬಾರ ದೃಶ್ಯದಲ್ಲಿ ಅಲಂಕೃತ ಸಿಂಹಾಸನ, ಪ್ರಧಾನ ಮಂತ್ರಿ, ಸೇನಾಪತಿ ಇತರ ಅಧಿಕಾರಿ ವರ್ಗಕ್ಕಾಗಿ ಅವರವರ ಅಂತಸ್ತು ಸೂಚಿಸುವಂತ ಆಸನಗಳಿದ್ದವು. ಅನುಭವ ಮಂಟಪದ ದೃಶ್ಯದಲ್ಲಿ ಶೂನ್ಯಸಿಂಹಾಸನ ಶರಣರಿಗಾಗಿ ಸುಂದರ ಪೀಠೋಪಕರಣಗಳು ಹೀಗೆ ಪ್ರತಿ ದೃಶ್ಯಕ್ಕೂ ವಿಶಿಷ್ಟ ಏರ್ಪಾಡಿತ್ತು. ಶನಿ ಪ್ರಭಾವದ ಪ್ರದರ್ಶನವು ಟ್ರಾನ್ಸ್ ಫರ್ ಸೀನುಗಳಿಂದ, ವಿದ್ಯುತ್ ಲೈಟಿನಿಂದ, ಬಲು ಆಕರ್ಷಕವಾಗಿರುತ್ತಿತ್ತು. ಪ್ರತಿನಾಟಕದ ದೃಶ್ಯಯೋಜನೆಯ ಪರಿಕರಗಳನ್ನು ಪ್ರತ್ಯೇಕ ದೊಡ್ಡ ದೊಡ್ದ ಪೆಟ್ಟಿಗೆಗಳನ್ನು ಇಡಲಾಗುತ್ತಿತ್ತು; ಕೊಣ್ಣೂರು ಕಂಪನಿಯ ರಂಗಸಜ್ಜಿಕೆಯ ಏರ್ಪಾಡು ಶಿರಹಟ್ಟಿ ಕಂಪನಿಯಲ್ಲಿ ಮುಂದುವರೆದು ವೆಂಕೋಬರಾಯರ ಕಲಾ ಪರಿಣತಿಯಿಂದ ಇನ್ನಷ್ಟು ಬೆಳೆಯಿತು. ಈ ಕಂಪನಿಯಲ್ಲಿ ಸುಮಾರು ಮೂವತ್ತು. ರಂಗಪರದೆಗಳಿದ್ದವು. ಒಂದುನಾಟಕದ ರಂಗ ಪರಿಕರಗಳನ್ನು ಬೇರೊಂದು ನಾಟಕಕ್ಕೆ ಬಳಸುತ್ತಿರಲಿಲ್ಲವಂತೆ. ನಾಟಕ ಮಂಡಳಿಯ ಸುಂದರ ಪರದೆಗಳನ್ನು ನೋಡಿ ದಶಾವತಾರ ನಾಟಕಕ್ಕಾಗಿ ಆರು ಸಾವಿರ ವೆಚ್ಚದಲ್ಲಿ ದೃಶ್ಯಾವಳಿಗಳನ್ನು ಸಿದ್ಧಗೊಳಿಸಿದರಂತೆ. ಹೀಗೆ ಪಾರ್ಸಿ ಮತ್ತು ಮರಾಠಿ ಕಂಪನಿಗಳನ್ನು ಅನುಸರಿಸಿ ಶ್ರೀಮಂತ ರಂಗ ಪರಿಕರಗಳನ್ನು ಅಳವಡಿಸಿಕೊಂಡು, ಕಣ್ಣೂರ ಮತ್ತು ಶಿರಹಟ್ಟಿ ಮಂಡಳಿಗಳು ಇತರ ಮಂಡಳಿಗಳಿಗೆ ಅನುಕರಣೀಯವಾದವು. (ಉತ್ತರಕರ್ನಾಟಕದ ವೃತ್ತಿ ರಂಗಭೂಮಿ ಡಾ. ರಾಮಕೃಷ್ಣ ಮರಾಠೆ)

ಕಮತಗಿಯ ಹುಚ್ಚೇಶ್ವರ ಕಂಪನಿಯಲ್ಲಿ “ಹೊಳೆ ಹುಚ್ಚೇಶ್ವರ ಮಹಾತ್ಮೆ” ಪಂ. ಪಂಚಾಕ್ಷರಿ ಗವಾಯಿಗಳವರ ನಾಟ್ಯ ಸಂಘದಲ್ಲಿ ಪಂ. ಪುಟ್ಟರಾಜ ಗವಾಯಿಗಳರು ವಿರಚಿತ ‘ಅಕ್ಕಮಹಾದೇವಿ’ ನಾಟಕ, ಮಾರುತೇಶ ಮಾಂಡ್ರೆ ಕವಿಗಳ ಕಂಪನಿಯಲ್ಲಿ ಕೊಪ್ಪಳ ಗವಿಸಿದ್ದೇಶ್ವರ ಮಹಾತ್ಮೆ ಮುಂತಾದ ಭಕ್ತಿಪ್ರಧಾನ ನಾಟಕ ಪ್ರಯೋಗಗಳಿಗೆ ವಿಭಿನ್ನ ರೀತಿಯ ರಂಗಪರದೆಗಳಿದ್ದವು.

ಗರೂಡ ಸದಾಶಿವರಾಯರು ಔಚಿತ್ಯ ಪ್ರಜ್ಞೆಯುಳ್ಳವರು. ಸಂಗೀತದ ಬಗೆಗೂ ಕಟ್ಟುನಿಟ್ಟು. ಸನ್ನಿವೇಶಕ್ಕೆ ಪೂರಕವಾಗಿರುವಷ್ಟು ಮಾತ್ರ ಹಾಡು ಇರಬೇಕೆನ್ನುವವರು. ಒಂದು ಹಾಡನ್ನು ಐದು ನಿಮಿಷಕ್ಕಿಂತ ಹೆಚ್ಚು ಹಾಡುವಂತಿರಲಿಲ್ಲ. ಆದರೊಮ್ಮೆ ರಾಮ ಪಾತ್ರಧಾರಿ ನೀಲಕಂಠ ಗಾಡಗೋಳಿ ಒಳ್ಳೆಯ ಮೂಡಿನಲ್ಲಿದ್ದರು. ಐದು ನಿಮಿಷ ಮುಗಿದರೂ ಹಾಡು ಮುಗಿಯಲೊಲ್ಲದು. ಗರುಡರು ವಿಂಗಿನಲ್ಲಿ ನಿಂತುಕೊಂಡು ಸೀಟಿ ಊದಿದರು. ನೀಲಕಂಠರು ಕೇಳಲೊಲ್ಲರು. ಗರುಡರು ಪರದೆ ಕೆಳಗಿಳಿಸಲು ಸೂಚನೆಯಿತ್ತರು. ನೀಲಕಂಠ ಎರಡು ಹೆಜ್ಜೆ ಮುಂದೆ ಬಂದು ಪರದೆಯ ಮುಂದುಗಡೆ ನಿಂತು ಹಾಡು ಮುಂದುವರಿಸಿದರು. ಅದಕ್ಕೂ ಮುಂದಿನ ಪರದೆ ಇಳಿಸಲಾಯಿತು. ಆಗಲೂ ಹೀಗೆಯೇ. ಕೊನೆಗೆ ಅನಿವಾರ್ಯವಾಗಿ ಬೀಳುತೆರೆ ಕೆಳಗಿಳಸಲಾಯಿತು. ನೀಲಕಂಠ ಗಾಡಗೋಳಿ ಅದಕ್ಕೂ ಮುಂದೆ ಬಂದು ಅಡಿದೀಪಗಳ ಬಳಿನಿಂತು ಹಾಡು ಮುಂದುವರಿಸಿದರು. ಇನ್ನುಳಿದುದು ರಟ್ಟೆ ಹಿಡಿದು ಎಳಿದೊಯ್ಯವುದೊಂದೆ ಗರುಡರ ಕೋಪ ನಗೆಯಲ್ಲಿ ಕೊನೆಗೊಂಡಿತು. (ಕರ್ನಾಟಕದ ಹಿಂದೂಸ್ತಾನಿ ಸಂಗೀತಗಾರರು ಸದಾನಂದ ಕನವಳ್ಳಿ, ಪುಟ ೧೦-೧೧. ಜನವರಿ ೨೦೦೪) ವೃತ್ತಿರಂಗಭೂಮಿಯ ಜೊತೆ ಜೊತೆಯಲ್ಲಿ ಗ್ರಾಮೀಣ ರಂಗಭೂಮಿಯಲ್ಲಿ ವೃತ್ತಿ ರಂಗಭೂಮಿಯ ನಾಟಕಗಳನ್ನೇ ಅನುಸರಿಸಿಕೊಂಡು ಹಬ್ಬ ಹರಿದಿನಗಳಲ್ಲಿ ಜಾತ್ರೆ. ಉತ್ಸವಗಳಲ್ಲಿ ನಾಟಕಗಳನ್ನು ಗ್ರಾಮೀಣ ಭಾಗದ ಕಲಾವಿದರು ಪ್ರಯೋಗಿಸುತ್ತ ಬಂದರು. ಇಂಥ ಗ್ರಾಮೀಣ ಸಂವೇದನೆಯಲ್ಲಿ ವೃತ್ತಿ-ರಂಗಭೂಮಿಯ ನಾಟಕಕಾರರೇ ತಮ್ಮ ನಾಟಕಗಳನ್ನು ರಂಗಭೂಮಿಗೆ ಅಳವಡಿಸಿ ಪ್ರಯೋಗಿಸುತ್ತ ಬಂದಿದ್ದಾರೆ. ನಾಟಕ ಕಲೆಯ ತವರೂರು ಎನಿಸಿಕೊಂಡಿರುವ ಗುಳೇದಗುಡ್ಡದಲ್ಲಿ ಗಾನರತ್ನ ಗಂಗೂಬಾಯಿ, ನಾಟ್ಯಕವಿಕೇಸರಿ ಕಂದಗಲ್ಲ ಹನುಮಂತರಾಯರು ಕೋಪರ್ಡೆ ಎಚ್ಚರಪ್ಪನವರು, ಕ್ರಾಂತಿಕಾರಿ ನಾಟಕಕಾರ ಎಚ್.ಆರ್. ಭಸ್ಮೆಯವರು ಖ್ಯಾತ ರಂಗ ನಟಿ ಗುಳೇದಗುಡ್ಡದ ಪ್ರೇಮಾ ಅವರು ಕಂಪನಿಗಳನ್ನು ಕಟ್ಟಿ ಕಲೆಯ ಕುಸುಮದ ಪರಿಮಳವನ್ನು ರಾಜ್ಯ ನೆರೆರಾಜ್ಯಗಳಲ್ಲಿ ಹರಡುವಂತೆ ಮಾಡಿದ ಕೀರ್ತಿ ಪಡೆದಿದ್ದಾರೆ. ಈ ಎಲ್ಲ ಮಹನೀಯರು ರಂಗಭೂಮಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿ ರಂಗ ಚರಿತ್ರೆಯಲ್ಲಿ ದಾಖಲೆಯಾಗಿದೆ. ಅವರು ಕಂಪನಿಗಳನ್ನು ಕಟ್ಟುವ ಸಂದರ್ಭದಲ್ಲಿ ಮಾಡಿದ ಸಾಹಸ ಅನುಭವಿಸಿದ ನೋವು ಇತಿಹಾಸವಾಗಿದೆ. ಕೋಪರ್ಡೆ ಎಚ್ಚರಪ್ಪನವರು ಮನೆಯಲ್ಲಿ ಇಂದಿಗೂ ರಂಗ ಪರಿಕರಗಳು ಪರದೆಗಳು ಮೂಲೆಯಲ್ಲಿ ಧೂಳುಗಟ್ಟಿ ಬಿದ್ದಿವೆ. ಗುಳೇದಗುಡ್ದದ ಪ್ರೇಮಾ ಇನ್ನೂ ಕಂಪನಿಯನ್ನು ಮುಂದುವರಿಸಿಕೊಂಡು ಹೊರಟಿದ್ದಾರೆ.

ಗುಳೇದಗುಡ್ಡ ಪ್ರೇಮಾ ಅವರು ತಮ್ಮ ಕಂಪನಿಯಲ್ಲಿ ಪ್ರಯೋಗಿಸುವ ನಾಟಕಕ್ಕೆ ಅವರದೇ ಪ್ರಮುಖ ಪಾತ್ರ. ಗುಬ್ಬಿ ವೀರಣ್ಣ ಪುರಸ್ಕೃತ ಪಿ.ಬಿ.ಧುತ್ತರಗಿ ಅವರು ರಚಿಸಿ ನಿರ್ದೇಶಿಸಿದ ನಾಟಕ ವೀರರಾನಿ ಕಿತ್ತೂರು ಚೆನ್ನಮ್ಮಾ. ಈ ನಾಟಕದಲ್ಲಿ ಚೆನ್ನಮ್ಮನ ಪಾತ್ರವು ಪ್ರೇಮಾ ಅವರದೇ ಇರುತ್ತದೆ. ಹಲವಾರು ಸಾಮಾಜಿಕ ನಾಟಕಗಳಲ್ಲಿ ದುರ್ಗಿ, ಗಯ್ಯಾಳಿ, ಕಾಳೀ ಗೋದಾವರಿ ಮುಂತಾದ ಖಳನಾಯಕಿಯ ಪಾತ್ರಕ್ಕೆ ಸೈ ಎನಿಸಿಕೊಂಡವರು.

ನಾಡಿನ ಪ್ರಸಿದ್ಧ ಕುಂಚ ಕಲಾವಿದರನ್ನು ಆಹ್ವಾನಿಸಿ ಅದ್ಧೂರಿಯ ರಂಗಸಜ್ಜಿಕೆಗೆ ಬೇಕಾಗುವ ಪರದೆ ಪರಿಕರಗಳನ್ನು ತಯಾರಿಸಿಕೊಂಡರು. ಅದರ ಜೊತೆಗೆ ಮಾಸಿದ ಹರಿದ ರಂಗ ಪರದೆಗಳನ್ನು ಪುನಶ್ಚೇತನ ಗೊಳಿಸಿಕೊಂಡರು. ಉತ್ತರ ಕರ್ನಾಟಕದ ರಂಗಭೂಮಿಯ ಹಲವಾರು ಜನಪ್ರಿಯ ಕಂಪನಿಗಳು ತಮ್ಮ ಕಂಪನಿಗಳಿಗೆ ಕಾಯಕಲ್ಪ ಯೋಜನೆಯ ಹಣವನ್ನು ಪಡೆದುಕೊಂಡಿದ್ದಾರೆ. ಆ ಸವಲತ್ತನ್ನು ಪಡೆದುಕೊಂಡವರಲ್ಲಿ ಇವರೂ ಒಬ್ಬರು.

ಪ್ರಭಾವಿ ಮಾಧ್ಯಮವಾದ ನಾಟಕದ ಯಶಸ್ವಿಗೆ ರಂಗ ಪರಿಕರ ಕಲಾವಿದರು ಪ್ರಮುಖ ಪಾತ್ರವಹಿಸುತ್ತಾರೆ. ಅವರು ಡ್ರಾಮಾ ಸೀನರಿಜ್ ಮತ್ತು “ಪೆಂಡಾಲ್ ಕಾಂಟ್ರಾಕ್ಟರ” ಎಂದೇ ಖ್ಯಾತಿ ಪಡೆದಿದ್ದಾರೆ. ಗುಳೇದಗುಡ್ಡದಲ್ಲಿ ಪ್ರಮುಖವಾಗಿ ಕರನಂದಿ, ತಟ್ಟಿಮಠ, ಶಿಕಾರಿಪುರ, ಗಾಡದ, ಹೂಗಾರ, ಹುಬ್ಬಳ್ಳಿ, ಕಾಳಗಿ, ಹಂಡಿ, ಸಿಂಹಾಸನ, ಹಿರಾಳ, ಸಾರಂಗಿ, ಬಂಕಾಪುರ, ಪುರ್ತಗೇರಿ ಮುಂತಾದವರು ಗ್ರಾಮೀಣ ಕಲಾರಸಿಕರಿಗೆ, ಕಲಾವಿದರಿಗೆ ಉಪಯುಕ್ತವಾಗುವದಕ್ಕಾಗಿ ಕಲೆಯ ನಿರಂತರ ಸೇವೆಗಾಗಿ ತೊಡಗಿಕೊಂಡವರು. ಜಾತ್ರೆ ಉತ್ಸವ ಕಾರ್ತಿಕೋತ್ಸವ ಕಲೆಯ ಸಂದರ್ಭದಲ್ಲಿ ರಂಗ ಸಜ್ಜಿಕೆಗೆ ಬೇಕಾದ ಸಲಕರಣೆಗಳನ್ನು ಬಾಡಿಗೆ ರೂಪದಲ್ಲಿ ಕೊಡವದು ಅವರ ವೃತ್ತಿಕಾಯಕವಾಗಿದೆ. ಡ್ರಾಮಾ ಸೀನರಿಜ್ ಮತ್ತು ಪೆಂಡಾಲ್ ಕಾಂಟ್ರಾಕ್ಟರ್ ಬಳಿಯಲ್ಲಿ ಕನಿಷ್ಠ ೧೫ ರಿಂದ ೨೦ ಜನರು ರಂಗಕರ್ಮಿಗಳಾಗಿ ಕೆಲಸ ಮಾಡುತ್ತಾರೆ.

ರಂಗ ಸಜ್ಜಿಕೆಯನ್ನು ಎರಡು ಭಾಗಗಳಲ್ಲಿ ವಿಂಗಡಿಸುತ್ತಾರೆ ೧. ಸಿಂಗಲ್ ಸ್ಟೇಜ್ ೨. ಡಬಲ್ ಸ್ಟೇಜ್. ಈ ರಂಗ ವಿನ್ಯಾಸ ಗ್ರಾಮೀಣ ಪ್ರದೇಶದ ಸ್ಥಳವನ್ನು ಅನುಸರಿಸಿ ಸಿದ್ಧಗೊಳ್ಳುತ್ತದೆ. ಸಿಂಗಲ್ ಸ್ಟೇಜ್ ನಿರ್ಮಾಣ ಮಾಡಬೇಕಾದ ಸ್ವಲ್ಪ ಶ್ರಮ ಕಡಿಮೆ ಇರುತ್ತದೆ ಎಂಬುದು ರಂಗ ಕರ್ಮಿಗಳ ಅಭಿಮತ. ಸೆಂಟರ್ ಸ್ಟೇಜ್ ೨೧ ಫೂಟ್ ಎರಡು ಕಡೆಯ ಸೈಡ್ ವಿಂಗ್ ೭೭ ಇರುತ್ತದೆ. ಈ ಸಿಂಗಲ್ ರಂಗಸ್ಥಳದ ನಿರ್ಮಾಣದ ಕಾರ್ಯುದಲ್ಲಿ ಹಲವಾರು ಜನರು ಕೈಜೋಡಿಸುತ್ತಾರೆ. ೧\೧೨ ರಿಂದ ೨ ಫೂಟ್ ತಗ್ಗು ತೆಗೆದು ಅಥವಾ ೩ ಫೂಟ್ ತಗ್ಗು ತೆಗೆದು ಡಂಬುಗಳನ್ನು ಹುಗಿದು ಕಟ್ಟುತ್ತಾರೆ. ೩೦ ಫೂಟ್ ಸೈಡ್ ಬಟ್ಟೆ ಕಟ್ಟುತ್ತಾರೆ. ಸಂಗೀತಗಾರರಿಗೆ ಪ್ರತ್ಯೇಕ ಸ್ಥಳ ಹಾಗೂ ಮೈಕು ವ್ಯವಸ್ಥೆ ಮಾಡಲಾಗುತ್ತದೆ. ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ಗ್ರೀನ್ ರೂಂ ಪ್ರತ್ಯೇಕ ಮಾಡಿರುತ್ತಾರೆ. ರಂಗಸ್ಥಳದ ಮೇಲೆ ಬೆಳಕಿನ ವ್ಯವಸ್ಥೆಗಾಗಿ ೬ ಪುಲ್ ಲೈಟುಗಳು ೭ ಹಾಲು ಜೇನು, ೧-ಡಿಸ್ಕೋ, ೧-ದಾಂಡದಾಂಡಿಗೆ ೩-ಮೈಕ್-ಇಟ್ಟಿರುತ್ತಾರೆ. ರಂಗ ಸಜ್ಜಿಕೆಯನ್ನು ನಿರ್ಮಾಣ ಮಾಡುವಾಗ ೨೭ ಬಿದರಿನ ಎಳಿ, ೧೨ ಪೆಂಡಿ ಸೀಬು, ೩೮ ತಗಡು ಬೇಕಾಗುತ್ತವೆ. ಹೀಗೆ ರಂಗಸಜ್ಜಿಕೆ ನಿರ್ಮಾಣ ಮಾಡುವವರಿಗೆ ಸಣ್ಣ ಪುಟ್ಟ ಗಾಯಗಳು ಕಂಡು ಬಂದಾಗ ಸುಧಾರಿಸಿಕೊಳ್ಳುವದುಂಟು. ದೊಡ್ದ ಪೆಟ್ಟು ಬಿದ್ದಾಗ ಪೆಂಡಾಲ್‍ದ ಮಾಲೀಕರು ಸಹಾಯದ ಹಸ್ತ ಚಾಚುತ್ತಾರೆ.

ಆಘಾತ : ಅತಿವೃಷ್ಟಿ ಪ್ರಾರಂಭವಾದಾಗ ನಾಟಕಗಳ ಪ್ರಯೋಗಗಳು ತೀರ ಕಡಿಮೆ. ಅದರೆ ಕೆರೂರದಲ್ಲಿ ಒಂದು ನಾಟಕ ಕಂಪನಿ ಬಂದು ಬೀಡು ಬಿಟ್ಟಿತ್ತು. ಅತಿವೃಷ್ಠಿಯಿಂದಾಗಿ ಎಲ್ಲಿ ಬೇಕಲ್ಲಿ ಮನೆಗಳು ಬಿದ್ದವು. ಜನ ಆಶ್ರಯಕ್ಕಾಗಿ ದೇವಸ್ಥಾನಗಳನ್ನು ಆಶ್ರಯಿಸಿದ್ದರು. ನಾಟಕ ಕಂಪನಿಯು ಎಲ್ಲಾ ಕಡೆಗೆ ನಾಟಕ ಪ್ರಯೋಗಕ್ಕಾಗಿ ಪ್ರಚಾರ ಮಾಡಿ ಬಂದಿತ್ತು. ವಿಶಾಲವಾದ ಬಯಲಿನಲ್ಲಿ ರಂಗಸ್ಥಳ ನಿರ್ಮಾಣಗೊಂಡಿತ್ತು. ಕೆರೂರದಲ್ಲಿ ಸಾಂಯಕಾಲ ನಾಟಕದ ಪ್ರಯೋಗಕ್ಕೆ ಸಿದ್ಧತೆ ಜರುಗಿತು. ಕಂಪನಿಯವರೆಲ್ಲರೂ ತಮ್ಮ ತಮ್ಮ ತಯಾರಿಯಲ್ಲಿ ತೊಡಗಿಕೊಂಡಿದ್ದರು. ಲೈಟಿಂಗ್ ದವನು (ಬೆಳಕಿನ ವ್ಯವಸ್ಥೆಗೆ) ಲೈಟ್, ಮೈಕು, ವಾಯರ್‌ಗಳ ತಪಾಸಣೆ ಮಾಡಬೇಕೆಂದು ಸ್ವಿಚ್ಛ್ ಹಾಕಲು ಹೋದ. ಅಲ್ಲಿ ವಾಯರ್‌ಗಳು ಅರ್ಥಿಂಗ್ ಆಗಿ ಸ್ವಿಚ್ಛ್ ಹಾಕಲು ಹೋದವನಿಗೆ ವಿದ್ಯುತ್ ಸ್ಕೇಚ್ ಹಾಕಿತು. ಅತಿವೃಷ್ಟಿಯಿಂದ ಸಂಪೂರ್ಣ ಅರ್ಥಿಂಗ್ ಆಗಿತ್ತು. ಅತ್ತಿತ್ತ ಓಡಾಡಿ ಅವನನ್ನು ಕಾಪಾಡಬೇಕೆಂದು ರಂಗಕರ್ಮಿಗಳು ಪ್ರಯತ್ನ ಪಟ್ಟರು. ಅವರ ಪ್ರಯತ್ನ ಫಲಕಾರಿಯಾಗಲಿಲ್ಲ. ವಿದ್ಯುತ್‌ದಲ್ಲಿ ಸಾಕಷ್ಟು ಪರಿಣತಿ ಇದ್ದವನೇ ಅಲ್ಲಿ ಕೊನೆಯುಸಿರೆಳೆದಿದ್ದ. ಈ ಘಟನೆಯಿಂದ ರಂಗಕರ್ಮಿಗಳ ಎದೆ ಝಲ್ ಎಂದಿತು. ಇಡೀ ರಂಗಸಮೂಹವೇ ಕಣ್ಣೀರಿಟ್ಟಿತ್ತು.

ರಂಗ ಸಜ್ಜಿಕೆ ತಯಾರಿಸುವಾಗ, ಡಂಬುಗಳನ್ನು ಕಟ್ಟುವಾಗ, ಎತ್ತುವಾಗ ಇಳಿಸುವಾಗ, ಎಷ್ಟೋ ಸಂದರ್ಭಗಳಲ್ಲಿ ತಲೆಗೆ ಪೆಟ್ಟು ಬಿದ್ದು ಗಾಯಗಳಾಗಿವೆ. ಒಬ್ಬ ಪೆಂಡಾಲ್‍ದ ಮಾಲೀಕನಿಗೆ ತಲೆಗೆ ಪೆಟ್ಟುಬಿದ್ದು ಮತಿಭ್ರಮಣೆಯಾಗಿ ತಿರುಗುತ್ತಿದ್ದಾನೆ. ಹೀಗೆ ರಂಗಭೂಮಿಯ ಕಾಯಕದಲ್ಲಿ ತೊಡಗಿಕೊಂಡವರು ಒಂದಲ್ಲ ಒಂದು ವಿಶಿಷ್ಟ ಅನುಭವವನ್ನು ಪಡೆಯುತ್ತಾರೆ. ರಂಗ ಸಜ್ಜಿಕೆ ನಿರ್ಮಾಣ ಮಾಡುವ ರಂಗ ಕರ್ಮಿಗಳಿಗೆ ಹೆಚ್ಚಿನ ಸಂಬಳವಿರುವುದಿಲ್ಲ. “ಈಗೇನೋ ವಯಸ್ಸು ಐತೆ. ಮ್ಯಾಗ ಹತ್ತಿ ಡಂಬು ಕಟ್ಟುವುದು, ಇಳಿಸೂದು ಮಾಡ್ತೀವಿ. ಆದರ ನಾಳೆ ವಯಸ್ಸು ಮೀರಿಂದ ನಮಗೆ ಯಾವ ಆಶ್ರಯನೂ ಇಲ್ಲರೀ” ಎಂದು ಒಬ್ಬ ರಂಗಕರ್ಮಿ ತನ್ನ ಗೋಳನ್ನು ತೊಡಿಕೊಂಡ. ಸುಮಾರು ೨೦-೨೫ ವರ್ಷದವರೆಗೆ ರಂಗಭೂಮಿಯ ಅನುಭವ ಹೊಂದಿದ ರಂಗಕರ್ಮಿಗಳು ಗ್ರಾಮೀಣ ಪರಿಸರದ ಕಲಾವಿದರಿಗೆ ಪ್ರಸಾಧನ ಮಾಡಿ ವಸ್ತ್ರಾಲಂಕಾರ ಮಾಡುತ್ತಾರೆ. ರಂಗ ಸಂಚಾಲಕರನ್ನು ಕಂಡು ನಾಟಕ ಪ್ರಯೋಗದ ಸಂದರ್ಭದಲ್ಲಿ ಪರದೆಗಳನ್ನು ಏರಿಸುವ ಮತ್ತು ಇಳಿಸುವ ಕಾರ್ಯ ಮಾಡುತ್ತಾರೆ. ಇಂಥ ಕಥಾಸಂಚಾಲಕರು ನಾಟಕ ಪ್ರಯೋಗದ ಮುಂದಿನ ವಿವರಗಳನ್ನು ನೀಡುತ್ತಾರೆ. ಒಂದು ದೃಶ್ಯ ಮುಗಿಯುತ್ತಿದ್ದಂತೆ ಸೀಟಿ ಹೊಡೆಯುತ್ತಾರೆ. ಮತ್ತೊಂದು ಪರದೆ ಬೀಳುತ್ತದೆ. ಹೀಗೆ ರಸ್ತಾ, ಜಂಗಲ್, ದೃಶ್ಯಗಳಿದ್ದಾಗ ಹಿಂದೆ ನಿಂತು ಸಂಭಾಷಣೆ ಹೇಳಿ ಕೊಡುವುದು, ಮುಂದಿನ ಸನ್ನಿವೇಷದ ತಯಾರಿ ಮಾಡಿಕೊಳ್ಳುವುದು ನಡೆಯುತ್ತದೆ.

ಮನೆಯ ದೃಶ್ಯ ಬಂದಲ್ಲಿ ಸೈಡ್ ವಿಂಗ್‌ದಲ್ಲಿ ನಿಂತು ಸಂಭಾಷಣೆ ಹೇಳಿಕೊಡುತ್ತಾರೆ. ನಾಟಕದ ಸರಿಯಾದ ತಾಲೀಮು ಮಾಡಿದ್ದು, ಬಿಟ್ಟಿದ್ದು ಮನೆಯ ದೃಶ್ಯದಲ್ಲಿಯೇ ಗೊತ್ತಾಗುವುದು. ಸರಿಯಾದ ಮಾತು ಕಲಿಯದ ಕಲಾವಿದ ಕವಾಟಿನ ಕಡೆಗೆ ಹಾಗೂ ಪರದೆಯ ಕಡೆಗೆ ನೋಡುತ್ತ ಕಕ್ಕಾಬಿಕ್ಕಿಯಾಗಿದ್ದರೆ ಈ ಕಲಾವಿದ ಸರಿಯಾಗಿ ಮಾತು ಕಲಿತಿಲ್ಲ ಅಭಿನಯ ಸಮರ್ಪಕವಿಲ್ಲ ಎಂಬ ಭಾವನೆ ಬಂದು ಬಿಡುತ್ತದೆ. ಇನ್ನು ಕೆಲವು ಕಲಾವಿದರು ಸ್ವಲ್ಪ ಎಳೆ ಸಿಕ್ಕರೆ ಸಾಕು. ಸಂಭಾಷಣೆಗಳನ್ನು ಸಲೀಸಾಗಿ ಹೇಳಿ ಸಮರ್ಥವಾಗಿ ಅಭಿನಯಿಸಿಬಿಡುತ್ತಾರೆ. ಮೂರಂಕಿನ ನಾಟಕಗಳನ್ನು ಪ್ರಯೋಗಿಸುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆಗಳು ಉಂಟಾದಾಗ ಮೂಲ ಕಥೆಗೆ ಧಕ್ಕೆ ಬರದಂತೆ ಹಾಗೂ ನಾಟಕದ ಪ್ರೇಕ್ಷಕರಿಗೆ ಅರ್ಥವಾಗುವಂತೆ ದೃಶ್ಯಗಳನ್ನು ಸರಿಪಡಿಸಿಕೊಳ್ಳುವಲ್ಲಿ ರಂಗ ಪರದೆಗಳು ಸಹಾಯಮಾಡುತ್ತವೆ. ಕೆಲವು ಸಂದರ್ಭದಲ್ಲಿ ರಂಗ ಕಲಾವಿದರ ಕೊರತೆಯಾಗಿರಬಹುದು ಅಥವಾ ಸಮಯದ ಅಭಾವವಾಗಿರಬಹುದು. ನಾಟಕ ಸುರಳೀತವಾಗಿ ಸಾಗಿರಬೇಕು. ರಂಗಭೂಮಿಯ ಬಣ್ಣ ಬಣ್ಣದ ಥಳುಕು ಬಳುಕಿನಲ್ಲಿ ಕುಣಿದು ಕುಪ್ಪಳಿಸಿ ನಾಟಕಕ್ಕೆ ಮೆರಗು ನೀಡಿರುತ್ತಾರೆ. ನಾಟಕ ಪ್ರಯೋಗದ ಮರುದಿನ ಚರ್ಚೆ ಸಂವಾದ ಜರುಗುತ್ತದೆ. ಆದರೆ ನಾಟಕ ಪ್ರಯೋಗಿಸುವುದಿರಲ್ಲ ನಂತರದಲ್ಲಿ ಕಲಾವಿದರ ದೊಡ್ದ ನಾಟಕ ಮುಟ್ಟಿ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡಿರುತ್ತದೆ. ಆದರೆ ಅವೆಲ್ಲ ಮಹತ್ವದ ಘಟನೆಗಳು ರಂಗ ಪರದೆಯಲ್ಲಿಯ ಅನೇಕಾನೇಕ ಮಹತ್ವದ ಸಂಗತಿಗಳು ಪರದೆಯ ಮರೆಯಲ್ಲಿ ಹುದುಗಿಕೊಂಡಿರುತ್ತವೆ.