ರಂಗನಾಥ ಶ್ರೀನಿವಾಸ ಮುಗಳಿಯವರು ೧೯೦೯ ರಲ್ಲಿ ಧಾರವಾಡ ಜಿಲ್ಲೆ ಹೊಳೆ ಹಾಲೂರಿನಲ್ಲಿ ಜನಿಸಿದರು. ಪ್ರಸಿದ್ದ ವಿದ್ವಾಂಸರಾದ ಇವರು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕರಾಗಿ ವೃತ್ತಿಜೀವನವನ್ನು ಆರಂಬಿಸಿದ ಮುಗಳಿಯವರು ಗೆಳೆಯರ ಗುಂಪಿನ ಸಹಚರ್ಯದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿ ಅನೇಕ ಅಮೂಲ್ಯ ಗ್ರಂಥಗಳ ಬೆಳೆಯನ್ನು ತೆಗೆದಿದ್ದಾರೆ. ಇವರ ‘ಕನ್ನಡ ಸಾಹಿತ್ಯ ಚರಿತ್ರೆ, ಎಂಬ ಗ್ರಂಥ ಕನ್ನಡ ಸಾಹಿತ್ಯ ಚರಿತ್ರೆಗಳಲ್ಲಿ ಒಂದು ಮಹತ್ವ ಕೃತಿ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸಾಹಿತ್ಯದ ಪ್ರಾಚೀನ ಕಾಲದಿಂದ ಮುದ್ದಣನವರೆಗಿನ ಸಾಹಿತ್ಯ ವಿಚಾರ ಚರ್ಚಿತವಾಗಿದೆ.

‘ರನ್ನನ ಕೃತಿರತ್ನ, ‘ತವನಿದಿ, ‘ಸಾಹಿತ್ಯವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು, ಇವುಗಳೊಂದಿಗೆ ಮುಗಳಿಯವರು ಕಾವ್ಯ, ಸಣ್ಣಕಥೆ, ಕಾದಂಬರಿ, ನಾಟಕ, ಕ್ಷೇತ್ರಗಳಲ್ಲೂ ದುಡಿದಿದ್ದಾರೆ. ‘ರಸಿಕರಂಗ, ಎಂಬ ಕಾವ್ಯ ನಾಮದಿಂದ ಪರಿಚಿತರಾಗಿದ್ದ ಇವರು ‘ಬಾಸಿಗ, ‘ಅಪಾರಕರುಣೆ, ‘ಓಂ ಅಶಾಂತಿ, ‘ಮಂದಾರಹೂ, ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ.

‘ಬಾಸಿಗ,ದಲ್ಲಿ ಅನೇಕ ಕವಿತೆಗಳು ಕನ್ನಡದ ನವೋದಯವನ್ನು ಕುರಿತು ಬರೆದವುಗಳಾಗಿವೆ. ನಿಸರ್ಗ ಕವಿತೆಗಳನ್ನು ಬಿಟ್ಟರೆ ಉಳಿದ ಕವಿತೆಗಳಲ್ಲಿ ಸೌಂದರ್ಯಪ್ರೀತಿ, ಆದರ್ಶಹಂಬಲ, ಗೆಳೆತನ, ಪ್ರಣಯ, ದೇವರ ಕರುಣೆ, ಇಂಥ ಭಾವಗೋಚರವಾದ ವಸ್ತುಗಳೇ ದೊರೆಯುತ್ತವೆ. ಓಂ ಅಶಾಂತಿ, ಅಪಾರಕರುಣೆ, ಈ ಸಂಗ್ರಹಗಳಲ್ಲಿ ಜೀವನದ ಬಿರುಸಾದ ಸತ್ಯವನ್ನು ಕವಿ ಎದುರಿಸಿದ್ದರೂ ಮನೋಧರ್ಮದ ಕೋಮಲತೆ ಕಡಿಮೆಯಾಗಿಲ್ಲದಿರುವುದನ್ನು ಕಾಣತ್ತೇವೆ.

ಮುಗಳಿಯವರ ‘ಕನಸಿನ ಕೆಳದಿ, ತಡವಾಗಿ ಪ್ರಕಟವಾದರೂ ಅವರು ಇದೇ ತಲೆಮಾರಿನ ಕತೆಗಾರರಾಗಿದ್ದಾರೆ. ಸುಸಂಬದ್ದವಾದ ಕಥಾರಚನೆ, ಗುರಿತಪ್ಪದ ಪರಿಣಾಮ, ಇವು ಎಂದಿಗೂ ಅವರ ಕತೆಗಳ ವೈಶಿಷ್ಟ್ಯಗಳಾಗಿವೆ. ಕಾಲಕ್ರಮದಲ್ಲಿ ಮೊದಲು ಬಂದ ‘ವಿತಂತು ವೇಶ್ಯೆ, ಎಂಬ ಕಥೆಯಲ್ಲಿಯೇ ಈ ಎಲ್ಲ ಗುಣಗಳು ಸೂಚಿತವಾಗಿವೆ. ಈಕತೆ ದುರ್ದೈವಿಯಾದ ಹೆಣ್ಣುಮಗಳೊಬ್ಬಳ ಅತ್ಮ ವೃತ್ತಾಂತದಂತೆ ಬರೆಯಲ್ಪಟ್ಟಿದೆ. ‘ನೀರಿನ ನಾಗಪ್ಪ, ಹಾಗೂ ಕೂಟಪ್ರಶ್ನೆಗಳು, ಕೂಡ ಇದೇ ಮಾದರಿಯ ಶ್ರೇಷ್ಟ ಕತೆಗಳಾಗಿವೆ.

ಮುಗಳಿಯವರ ಕಾದಂಬರಿಗಳು ಆದರ್ಶವಾದಿತ್ವದ ಗುಣದೋಷಗಳನ್ನೆಲ್ಲಾ ಪ್ರತಿಬಿಂಬಿಸುವಂಥವಾಗಿವೆ. ‘ಬಾಳುರಿ, ‘ಕಾರಣ ಪುರುಷ, ಹಾಗೂ ‘ಅನ್ಯ, ಈ ಮೂರು ಕಾದಂಬರಿಗಳಿಗೂ ಆದರ್ಶವಾದವೇ ಪ್ರೇರಕ ಶಕ್ತಿಯಾಗಿದೆ. ‘ಬಾಳುರಿ, ಯ ಜಗಣ್ಣ ಆದರ್ಶ ವಾದಿತ್ವದ ಭರವಸೆ ಇರುವುದರಿಂದ ವಿಕೃತ ಜೀವಿಯಾಗುವುದಿಲ್ಲ. ಆದರೆ ವಾಮಣ್ಣ ಕೊನೆಯವರೆಗೂ ಮೂರ್ತಿ ಪೂಜಕನಾಗಿ ಉಳಿಯುವುದು ಆದರ್ಶವಾದದಬಲಹೀನತೆಯನ್ನು ಎತ್ತಿತೋರುತ್ತದೆ. ‘ಅನ್ಯ, ದ ಅಮೃತ ಆದರ್ಶವನ್ನು ಪ್ರತ್ಯಕ್ಷವಾಗಿ ಕಾರ್ಯ ರಂಗಕ್ಕಿಳಿಸುತ್ತಾನೆ. ಬರಗಾಲದಿಂದ ಪೀಡಿತರಾದವರಿಗೆ ಸಹಾಯ ಮಾಡುತ್ತಾನೆ. ‘ಎತ್ತಿದ ಕೈ, ಏಕಾಂಕ ಸಂಕಲನ ‘ನಾಮಧಾರಿ, ‘ಮನೋರಾಜ್ಯ, ‘ಧನಂಜಯ, ಇವರ ನಾಟಕಗಳು. ಇವರ ಸೇವೆಗಾಗಿ ಅನೇಕ ಗೌರವಗಳು ಲಬಿಸಿವೆ. ೧೯೪೧ ರಲ್ಲಿ ಹೈದರಾಬಾದಿನಲ್ಲಿ ನಡೆದ ೩೭ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಟಕ ಗೋಷ್ಠಿಯ ಅಧ್ಯಕ್ಷರಾಗಿದ್ದರು. ಇವರ ಕನ್ನಡ ಸಾಹಿತ್ಯ ಚರಿತ್ರೆಗೆ ೧೯೫೬ ರಲ್ಲಿ ಪುಣೆ ವಿಶ್ವವಿದ್ಯಾನಿಲಯದ ಡಿ.ಲಿಟ್. ಪದವಿ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರ ಲಬಿಸಿದವು.