ಪದತ್ರಿವುಡೆ

ಕಾದುವರೆ ರಣದೊಳಗೆ ಯೀಗಲೆ  ಅಣ್ಣ
ಶುಂಬಾಸುರನು ಬೀಳಲೂ  ಫಡಿಫಡಿಸಿ
ಆರ್ಭಟಿಸಿ ಬಂದನು ನಿಶುಂಬರಾಜಾ

ನಿಶುಂಭಾಸುರ: ಮತಿರಂಡೆ ಮಾಯದ ಸುಂದರಿ, ಯನ್ನ ಅಣ್ಣನಾದ ಶುಂಭಾಸುರನನ್ನು ವಧಿಸಿರುವೆಯ. ಆಹಾ ದುರಾತ್ಮಳೆ ನಾನು ಬಂದಿರುವ ಪರಿಯಾಯವನ್ನು ತಿಳಿಯದೆ ಕೊಂದಿರುತ್ತೀಯ. ಮೂರ್ಖಳೆ ಇನ್ನು ಮೇಲೆ ನಿನ್ನ ಪ್ರಾಣವುಳಿಯುವುದೆ. ಹೇ ನಾರಿ ರಣಮಂಡಲದಲ್ಲಿ ಕೂತಿರುವೆಯಾ ಬೇಗನೆ ನಮ್ಮಣ್ಣನನ್ನು ತೋರಿಸುತ್ತೀಯೊ ನಿನ್ನ ಪ್ರಾಣವನ್ನು ತೆಗೆಯಲೋ. ಜಾಗ್ರತೆ ಮಾತನಾಡು ಹಾಗೆ ಮಾತನಾಡದಿದ್ದರೆ ಇಗೋ ನೋಡು ನಿನ್ನನ್ನು ಸೆರೆಯಿಡಿದು ಬಂಧಿಸಿ ಪ್ರಾಣವನ್ನು ತೆಗೆಯುತ್ತೇನೆ ಮಾತನಾಡು.

ತ್ರಿವುಡೆ

ದೇವಿರೂಪನು ತಾಳಿ ರಾಕ್ಷಸನ  ಕೊಂದು
ಮುರಿಯುವೆನೆಂದು ಯೆನುತಲಿ ಬಂದು
ಹಿಡಿದಳು ಯಿವನ ಯೀಗಲೆ ರಣದಲಿಂದು ॥

(ನಿಶುಂಭನ ಮರಣ)

ಭಾಮಿನಿ

ಅರಸಕೇಳ್ ವನದ ಪರಿಣಯವ ಪೇಳುವೆ ರಣಕೆ ಹೋದ
ಶುಂಬಾ ನಿಶುಂಬಾ ರಾಜರು ಮಡಿದರು ಇಂದಿನಲಿ
ಯೆನುತ ಪೇಳಲು ಚಾರ ಬೆದರಿ ಬಂದೆನು ನಿಮ್ಮಡಿಗೆ ರಾಜಾ ॥

ಚಾರ: ನಮೋ ನಮೋ ಮಹಾರಾಜರೆ, ಯೇನ ಹೇಳಲಿ ರಣದ ಅವಾಂತರವ ನೋಡಲಾರದೆ ಓಡಿ ಬಂದೆ ನಿಶುಂಭಾ ಶುಂಭಾ ಯಾರಾರೊ ಹೇಳಾಕೆ ಆಗೋದಿಲ್ಲಾ ಹೋಗತ್ಲಗೆ.

ಪದ

ಬೆದರಿ ಓಡಿ  ಹೋಗುವಂದದಿ  ಬಾಣ ಚದುರಿಸಿ ಹೊಡದನಾಗಲೆ
ಇಂದ್ರಾದಿ ದಿಕ್ಪಾಲರು ಸಹಿತ ವೋಡಿದರು ಆಗಾ ॥

ಮಂತ್ರಿ: ಎಲಾ ಚಾರನೆ ಯಮ್ಮ ಕಡೆ ಶುಂಭಾಸುರ ನಿಶುಂಭಾಸುರರೆಲ್ಲಾಮರಣ ಹೊಂದಿದರೆ. ಇಗೋ ನಾನೇ ಹೊರಟು ಬಾಣಪ್ರಯೋಗ ಮಾಡಿ ದೇವರ್ಕಳ ಸೆರೆಯಿಡಿದು ಬಂಧಿಸಿ ಮುಂದಲ ಪ್ರಯೋಗ ಮಾಡುತ್ತೇನೆ.

ಪದ

ಬಾಣವನ್ನು ಮಾಡಿಯೀಗ ಹೊಡಿಯುತಾಗಲೆ
ಇಂದ್ರಾದಿಗಳು ಯೆಲ್ಲಾ ಯೀಗ ವೋಡುತಾಗಲೆ
ರಥವನಿಳಿದು ದೇವಿಗೀಗ ಶರಣು ಮಾಡಿದ ॥

ಮಂತ್ರಿ: ಯಲಾ ಚಾರನೆ ನಾನು ಯನ್ನ ಬಾಣಾಸ್ತ್ರವನ್ನು ಹೂಡಿ  ಒಂದು ಬಾಣವನ್ನು ಸೇದಿ ಬಿಟ್ಟಾಕ್ಷಣವೆ ಇಂದ್ರಾದಿ ದೇವರ್ಕಳೆಲ್ಲ ಚದರಸ ತಡೆಯಲಾರದೆ ಓಡಿ ಹೋಗುವಂಥವರಾದರು. ಆದಕಾರಣ ದೇವತೆಯನ್ನು ಗೆದ್ದಂತಾಯಿತು. ನಿಮ್ಮ ವಂದೊಳಗಿರುವ ಮಾಯದ ನಾರಿಯರ ಸನಿಯಕ್ಕೆ ರಥವನ್ನು ಹಾರಿಸುವಂಥನಾಗು.

ಪದಅಷ್ಟತಾಳ

ದುರುಳರ ಸೇವೆಯನೂ  ತ್ವರಿಸೀಗ ಸಲಹಮ್ಮ ತಾಯೆ ದೇವಿ ॥
ಜಯ ಜಯವೆಂದೂ  ನಂಬಿದೆ ಭೂದೇವಿ ನಿಮ್ಮ ಪಾದ ಸೇವೆ
ಬಿಡದೆ ಭಜಿಸುವೆ ತಾಯೆ  ಕರುಣದಿಂದ ವರವ ಪಾಲಿಸು ತಾಯೆ॥

ಮಂತ್ರಿ: ಹೇ ಮಾತೆ ಲೋಕಪ್ರಖ್ಯಾತೆ, ಮೃತ್ಯುಂಜಯಗೆ ಸರ್ವಭೂತೆ ಆದಿಶಕ್ತಿ ಮಹೇಶ್ವರಿ ಯನ್ನನ್ನು ಕಾಪಾಡಿ ವುದ್ದಾರ ಮಾಡಬೇಕೆಂದು ವರ ಬೇಡಿಕೊಳ್ಳುತ್ತೇನೆ ಆದಿಶಕ್ತಿ ಕಾಪಾಡು ಕಾಪಾಡು.

ದೇವಿ: ಅಮ್ಮಯ್ಯ ಮಂತ್ರ ದೇವಿ ಹಾಗೆ ಕಣ್ಣು ಬಿಟ್ಟು ನೋಡು. ಯೀ ವಿತರಣನಾದ ಮಂತ್ರಿಯು ಬರುವ ಪರಿಯಾಯವನ್ನು ನೋಡು. ನಮ್ಮ ಯದುರಿನಲ್ಲಿ ಕರವನ್ನು ಎತ್ತಿ ಕೈ ಮುಗಿದು ನಮ್ಮನ್ನು ಸ್ತೋತ್ರ ಮಾಡುತ್ತಾ ನಿಂತಿರುವನಲ್ಲಮ್ಮ. ಈತನನ್ನು ನನ್ನ ಭಕ್ತನೆಂದು ಭಾವಿಸಿಕೊಳ್ಳಲೇಬೇಕು. ಇವನನ್ನು ಮಾತನಾಡಿಸಿ ನೋಡುತ್ತೇನೆ.

ಅಯ್ಯ ರಕ್ಕಸನೆ ನೀನು ಯನ್ನನ್ನು ಸ್ತೋತ್ರ ಮಾಡುತ್ತಾ ನಿಂತಿರುವ ವಿಷಯವೇನು. ಇದೂ ಅಲ್ಲದೆ ಇದುವರೆವಿಗೂ ನಮ್ಮ ಉಪವನದಲ್ಲಿ ಬಂದ ರಕ್ಕಸರೆಲ್ಲಾ ಮೋಹಿಸಿ ಮಡಿದು ಹೋದರು ನೀನು ನನ್ನನ್ನು ಸ್ತೋತ್ರವನ್ನು ಮಾಡಿದ ಕಾರಣ ಬೇಡಿದ ವರವನ್ನು ಕೊಡುತ್ತೇನೆ.

ಪದಅಷ್ಟತಾಳ)

ಬಾರೈಯ್ಯ ಭಕ್ತನೆ ಶೂರ ನೀನಲ್ಲದೆ
ಬೇರೆ ನಾನಿದನರಿಯೆನೂ ಪೊರೆಯೆ॥
ನಿನ್ನಾಯ ಭಕ್ತಿಗೆ ಮುಕ್ತಿಯ ಕೊಡುವೆ
ಭಕ್ತ ನೀನು ಶಂಕರನೆ ಪೋಷಿಸೈ ॥

ದೇವಿ: ನನ್ನ ಭಕ್ತನಾದ ಮಂತ್ರಿಯೆ ನಿನಗೆ ಮಂಗಳವಾಗಲಿ. ಅಮರ ಲೋಕದಲ್ಲಿ ನೀನು ಯಿರುವಂತೆ ವಿಮಾನದಲ್ಲಿ ಕಳುಹಿಸಿಕೊಡುತ್ತೇನೆ. ಶಿವ ಶರಣರ ಸನ್ನಿಧಿಗೆ ತೆರಳುವಂಥವನಾಗು.

ಭಾಮಿನಿ

ಅರಸ ಕೇಳೈ ವಿತರಣ ಮಂತ್ರಿಯು ಸಾಗಿದನು ಕೈಲಾಸ ಮಂದಿರಕೆ
ವಾರ್ತೆಯಂ ಪೇಳಬೇಕೆನುತ ಬಂದೆನು ನಿಮ್ಮಯ ಸನ್ನಿಧಿಗೆ

ಚಾರ: ನಮೋ ನಮೋ ಮಹಾರಾಜನೆ ರಕ್ತಬೀಜಾಸುರನೆ, ನಿಮ್ಮ ಮಂತ್ರಿಯವರು ಉಪವನಕ್ಕೆ ರಣ ಜೈಸುವುದಕ್ಕೆ ಹೋದವರು ಕೈಲಾಸವನ್ನು ಸೇರಿದರು. ಮುಂದಲ ವಿಚಾರವನ್ನು ನೋಡಿಕೊಳ್ಳುವಂಥವ ರಾಗಿರಿ.

ಭಾಮಿನಿ

ಘುಡಿಘುಡಿಸಿ ಆರ್ಭಟಿಸಿ  ಚಾರನ ನುಡಿಯ ಕೇಳಿದಾಕ್ಷಣಕೆ
ರಥವಂ ಹೂಡಿ ಬಾಣಾಸ್ತ್ರವಂ ಹೂಡುವುದರೊಳಗೆ
ಬಂದಳಾ ಮಂದಗಾಮಿನಿ  ತನ್ನ ಪತಿಯ ರಥವ ಸನ್ನಿಧಿಗೆ

ಪುಷ್ಯಮಾಲಿನಿ: ಪ್ರಾಣಕಾಂತರೆ ನಿಮ್ಮ ಪಾದಕ್ಕೆ ನಮಸ್ಕರಿಸುವೆನು.

ರಕ್ತಬೀಜಾಸುರ: ಪ್ರಾಣಕಾಂತೆ ನಿನಗೆ ಮಂಗಳವಾಗಲಿ ಮೇಲಕ್ಕೆ ಏಳು.

ಪದ

ಕಾಂತ ನಿನ್ನಯಾ  ಮುಖವು ಚಿಂತೆಗೊಂಡಿದೆ ಯಾಕೆ
ನೀತದಿಂದ ನಾ ಪೇಳುವ ಮಾತ ಲಾಲಿಸೊ ಕಾಂತಾ ॥

ಪುಷ್ಷಮಾಲಿನಿ: ಆಹಾ ಪತಿಗಳಾದ ರಕ್ತಬೀಜಾಸುರರೆ, ಹಿಂದಿನ ದಿವಸ ನಿಮ್ಮ ಮುಖವು ಚಂದ್ರನ ಕಳೆಯಂತಿರ್ದು ಈವತ್ತಿನ ದಿವಸ ನೋಡಿದರೆ ರಾಹು ಕುಡಿದಂತೆ ಕಂದಿರುವುದು, ಕಾರಣವೇನು. ಅಂಥಾ ಸಂಗತಿ ಏನಿರಬಹುದು, ಮರೆಮಾಜದೆ ನನ್ನಲ್ಲಿ ತಿಳಿಯಪಡಿಸುವಂಥವರಾಗಿರಿ ಪ್ರಾಣಕಾಂತರೆ.

ಪದಆದಿತಾಳ

ಕೇಳೆ ಪ್ರಾಣಕಾಂತೆ ನೀನು ಪೇಳುವೆನೀಗ
ಚಂಡಮುಂಡಾಸುರರೆಲ್ಲ  ಮಡಿದು ಪೋದರೂ
ನಮ್ಮ ವುದ್ಯಾನವನದಲ್ಲೀಗ  ಓರ್ವ ಸ್ತ್ರೀಯಳು
ನಮ್ಮ ಸೈನ್ಯವನ್ನು ಯೀಗ ವಧಿಸಿರುವಳೂ ॥

ರಕ್ತಬೀಜಾಸುರ: ಯಲೆ ಪ್ರಾಣಕಾಂತೆ, ಯಿವತ್ತಿನ ದಿವಸ ನನ್ನ ಮುಖದ ಕಾಂತಿಯು ತಗ್ಗಿರುವ ಕಾರಣವೇನೆಂದರೆ ನಮ್ಮ ವುದ್ಯಾನವನದಲ್ಲಿ ವೋರ್ವ ಸ್ತ್ರೀಯಳು ಸೇರಿಕೊಂಡು ನಮ್ಮ ಸೈನ್ಯ ಅಂದರೆ ವನಪಾಲಕರು ಚಂಡಾಮುಂಡಾಸುರ ಬಲಾಸುರ ನಮ್ಮ ಮಾವನವರಾದ ಮಹಿಷಾಸುರ ಮೊದಲಗೊಂಡು ಶುಂಭಾ ನಿಶುಂಬಾ ಇಂಥ ವೀರಾಧಿವೀರರನ್ನೆಲ್ಲ ಮರಣವನ್ನು ಹೊಂದಿಸಿರುವಳು. ಆದಕಾರಣ ಈ ದಿವಸವೆ ರಥಾರೂಢನಾಗಿ ವುದ್ಯಾನವನದಲ್ಲಿ ಇರುವ ಸ್ತ್ರೀಯಳನ್ನು ಕೊಂದು ಆ ನವಗ್ರಹ ದೇವರ್ಕಳನ್ನು ಬಿಟ್ಟು ಹೊರಡಿಸುತ್ತೇನೆ ತಡೆಯಬ್ಯಾಡ ದಾರಿ ಬಿಡುವಂಥವಳಾಗೆ ಪ್ರಾಣಕಾಂತೆ.

ಪದಆದಿತಾಳ

ಪೋಗಬ್ಯಾಡಿ ಪೋಗಬ್ಯಾಡಿ ಪ್ರಾಣಕಾಂತಾ
ವೋದರೀಗ ನಿಮಗೆ ಕೇಡು ಬರುವದೂ ಪ್ರಿಯ ಪೋಗಲಾಗದೂ

ಪುಷ್ಪಮಾಲಿನಿ: ಆಹಾ ಪ್ರಿಯ ಈ ವಿಷಯವನ್ನೆ ನಾನು ತಿಳಿದು ಬಂದಿರುವೆ. ಆದಕಾರಣ ವುದ್ಯಾನವನದ ಸುದ್ದಿಯನ್ನು ಬಿಟ್ಟು ಅರಮನೆಗೆ ತೆರಳುವಂಥವರಾಗಿರಿ. ನನ್ನ ಮಾತನ್ನು ಅಲಕ್ಷ್ಯ ಮಾಡದೆ ಖಂಡಿತವಾಗಿಯು ಅರಮನೆಗೆ ದಯಮಾಡಿಸಿ ॥

ಪದಆದಿತಾಳ

ಕೇಳೊದಿಲ್ಲವೆ ರಮಣಿ ಕೊಳ್ಳೆಹೊಡೆಯುವೆನವಳಾ
ವುದ್ಯಾನವನದ ರಣವನೀಗ ಜೈಸಿ ಬರುವೇನೊ॥

ರಕ್ತಬೀಜಾಸುರ: ಹೇ ಕೋಮಲಾಂಗಿ ನೀನು ಹೇಳುವುದು ಸರಿಯಲ್ಲ. ಈ ವ್ಯಾಳ್ಯದಲ್ಲಿ ನಿನ್ನ ಮಾತನ್ನು ಕೇಳುವ ಹಾಗಿಲ್ಲ. ಆದಕಾರಣ ನೀನು ಹೇಳಬೇಡ ಅರಮನೆಗೆ ನಡೆ.

ಪದರೂಪಕ

ಕೋಮಲಾಂಗ ಪ್ರಾಣಕಾಂತ ಬೇಡಿಕೊಳ್ವೆನೊ
ಆಟದ ಮಕ್ಕಳ ಮಾರಿಗೌತಣ ಮಾಡಿದಂತೆ ಆಗುವದೂ
ಮನುಜರಲ್ಲಾ ನಮ್ಮ ಕುಲದ ದೇವತೆಯಲ್ಲಾ
ಕೋಮಲಾಂಗ ಪ್ರಾಣಕಾಂತ ಬೇಡಿಕೊಳ್ವೆನೊ ॥

ಪುಷ್ಪಮಾಲಿನಿ: ಆಹಾ ಪ್ರಾಣಕಾಂತನೆ, ನಾರಿಯರ ಮೇಲೆ ಛಲವನ್ನು ಮಾಡಿ ಅನರ್ಥಕ್ಕೆ ಕಾರಣವಾಗಿ ಪ್ರಾಣವನ್ನು ಕಳೆದುಕೊಳ್ಳುವಂಥದ್ದು ವಿಹಿತವಲ್ಲ. ಹಿಂದೆ ಇದೇ ರೀತಿಯಲ್ಲಿ ಸುಂದೋಪಸುಂದರು ಸ್ತ್ರೀಯನ್ನು ಮೋಹಿಸಿ ಅವರವರೆ ಕಡಿದಾಡಿ ಮಡಿದು ಹೋದಂತೆ ಈ ಸುಂದರಿಗಾಗಿ  ನಮ್ಮ ಕುಲದೇವರೆಲ್ಲಾ ನಾಶವಾಗಿರುವುದನ್ನು ಕಂಡೂ ಕಂಡು ನೀವು ಸಡಗರದಿಂದ ಸಂಗರಕ್ಕೆ ಹೊರಟಿರುವುದು ನ್ಯಾಯವಲ್ಲ ಖಂಡಿತವಾಗಿಯೂ ಪೋಗಲಾಗದು ಪ್ರಾಣೇಶಾ.

ಪದಆದಿತಾಳ

ಕೇಳೆ ಮಂದಗಮನೆ ನೀನು  ಯಮ್ಮ ಪಟೂಭಟರೆಲ್ಲಾ
ಮಂದಮಾಯ ಸ್ತ್ರೀಯಳಿಂದ ಮಡಿದು ಪೋದರೂ ॥

ರಕ್ತಬೀಜಾಸುರ: ಯಲಾ ಸುಂದರಿ. ನಿನ್ನ ಮಾತು ಸಹಜವೇ ಸರಿ ಅದಕ್ಕೆ ನೀನು ಹೇಳುವ ಮಾತು ನಿಜವಾದಾಗ್ಯೂ ಈ ವ್ಯಾಳೆಯಲ್ಲಿ ನನ್ನನ್ನು ತಡೆಯಬ್ಯಾಡ. ಯಾಕೆಂದರೆ ಯಮ್ಮ ಪಟುಭಟರಾದ ಸೈನ್ಯವೆಲ್ಲ ನಮ್ಮ ವುದ್ಯಾನವನದಲ್ಲಿ ಯಿರುವ ಸ್ತ್ರೀಯಳಿಂದ ಮಡಿದು ಹೋಗಿರುವರು. ಆದಕಾರಣ ಪರಾಕ್ರಮವಂತರನ್ನೆಲ್ಲಾ ರಣಮಾರಿಗೆ ಬಲಿಯನ್ನು ಕೊಟ್ಟು ನಾನೊಬ್ಬ ಬದುಕಿದ್ದರೆ ಫಲವೇನು. ಆ ಮತಿಹೀನಳಾದ ಸ್ತ್ರೀಯಳನ್ನು ಸಂಹರಿಸಿ ಬರುವವರೆಗೂ ನನ್ನ ಮನಸ್ಸು ಬೇಗುದಿಯಾಗಿರುವುದು. ಆದಕಾರಣ ಯಮ್ಮನ್ನು ತಡೆಯಬ್ಯಾಡ ಅರಮನೆಗೆ ಹೊರಡು.

ಪದರೂಪಕ

ವದಿಗಿತಲ್ಲಾ ಮರಣ ಯೀಗ ಸದನಕೋಗುವದಾಯ್ತೆ
ಮದನಪಿತನೂ ಯಮ್ಮ ಯೀಗ ಕೈಯ್ಯ ಬಿಟ್ಟನೆ ॥

ಪುಷ್ಪಮಾಲಿನಿ: ಹೇ ಪಿತಾಮಹನೆ ಇವತ್ತಿನ, ದಿವಸ ಪ್ರಾಣಕಾಂತನು ಯನ್ನ ಮಾತನ್ನು ಯೆಷ್ಟು ವಿಧವಾಗಿ ಹೇಳಿದಾಗ್ಯು ಕೇಳುವುದಿಲ್ಲವಲ್ಲ. ಇವತ್ತಿನ ದಿವಸ ನನ್ನ ಮುತ್ತೈದೆ ಸ್ಥಾನಕ್ಕೆ ಕೊರತೆಯನ್ನು ತಂದಿಟ್ಟ ದೇವನೆ, ನನ್ನ ಸೌಭಾಗ್ಯವನ್ನು ವುಳಿಸಿ ಕಾಪಾಡೊ ಪರಮಾತ್ಮ.

ರಕ್ತಬೀಜಾಸುರ: ಎಲೆ ಪ್ರಾಣಕಾಂತೆ, ಪರಮಾತ್ಮನನ್ನು ಹೊಗಳುತ್ತಾ ಕುಳಿತಿದ್ದೀಯ. ಅವರೇನು ಮಾಡಬಲ್ಲರು ಏನು ಮಾತನಾಡುತ್ತೀಯ ಮಂಗಳಾಂಗಿ. ಅವರ ಕೈಯಲ್ಲಿ ಆಗಲಾರದೆ ಆ ಹೆಂಗಸಿನ ಮರೆಬಿದ್ದಿರುವರು. ಅವರನ್ನೇ ಹೊಗಳಿಕೊಂಡು ಕೂತರೆ ಅವರು ನಿನ್ನ  ಸೌಭಾಗ್ಯವನ್ನು ವುಳಿಸಿ ಕೊಡುವರೆ  ಆ ಸ್ತ್ರೀಯಳನ್ನು ಸಂಹಾರ ಮಾಡಿ ಆ ದೇವರ್ಕಳನ್ನು ಪುನಹ ಸೆರೆಯೊಳಗೆ ಇಡಿಸಿ ದೇವ ನಗರವನ್ನು ಆಳುತ್ತೇನೆ ಅರಮನೆಗೆ ನಡೆ. ಯಲೈ ಚಾರನೆ ಆ ದೇವತೆಗಳನ್ನು ಆ ಸ್ತ್ರೀಯಳನ್ನು ಸಂಹಾರ ಮಾಡಲು ಹೊರಡುವುದಕ್ಕೆ ರಥವೂಡಲು ತ್ರಿವಣಾಸುರನನ್ನು ಆಸ್ಥಾನಕ್ಕೆ ಬರಮಾಡು.

ತ್ರಿವಣಾಸುರ: ನಮೋ ನಮೋ ರಕ್ತ ಬೀಜಾಸುರನೆ ರಾಜಾಧಿರಾಜೇಂದ್ರನೆ ಯನ್ನನ್ನು ಕರೆಸಿದ ಕಾರಣವೇನು ಜಾಗ್ರತೆ ಹೇಳುವಂಥವರಾಗಿರಿ.

ರಕ್ತಬೀಜಾಸುರ: ಅಯ್ಯ ತ್ರಿವಣಶೂರನೆ, ನಿನ್ನನ್ನು ಯಿಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನೆಂದರೆ ನಮ್ಮ ವುದ್ಯಾನವನದಲ್ಲಿ ವೋರ್ವ ಸ್ತ್ರೀಯಳು ಬಂದು ದೇವರ್ಕಳೆಲ್ಲ ಸೇರಿ ನಮ್ಮ ಸೈನ್ಯವನ್ನೆಲ್ಲ ಮೃತಪಡಿಸಿರುವ ಕಾರಣ ನಾನೇ ವುದ್ದೇಶ ಹೊರಟಿರುತ್ತೇನೆ. ರಥ ಹೊಡೆಯಲು ನೀನು ನಿಸ್ಸೀಮನಾದ ಕಾರಣ ಕರೆಸಿರುತ್ತೇನೆ. ರಥವನ್ನು ಹೂಡಿ ಹೊಡೆಯುವಂಥವನಾಗು ಜಾಗ್ರತೆ ಹೊಡೆ.

ಪದತ್ರಿವುಡೆ

ಹೂಡಿ ಹೊಡೆದನು ರಥವನೀಗಲೆ ತ್ರಿವಣ ವುದ್ಯಾನವನಕೆ
ಬೇಗನೆ ಬಂದು ನಿಲಿಸಿದ ಮಾಯಾ ಸ್ತ್ರೀಯಳ ಸನ್ನಿಧಿಗೆ ॥

ತ್ರಿವರ್ಣ: ಮಹಾರಾಜನೆ ತಮ್ಮ ಅಪ್ಪಣೆ ಪ್ರಕಾರ ರಥವನ್ನು ಮೇಘ ಮಾರ್ಗದಲ್ಲಿ ಹಾರಿಸಿ ಉದ್ಯಾನವನದಲ್ಲಿ ನಿಲ್ಲಿಸಿರುತ್ತೇನೆ. ದೇವರ್ಕಳೆಲ್ಲ ಯಲ್ಲಿರುವರು ಜಾಗ್ರತೆ ಹಿಡಿಯುವಂಥವರಾಗಿರಿ.

ಭಾಮಿನಿ

ಗಡಬಡಿಸಿ ಭೋರ್ಗರಿಸಿ ಬಾಣವನೆ ಸೆಳೆಯುತಾ
ಜಗತ್ತಲ್ಲಣಿಸುವಂತೆ ಹೊರಡಲು ಆರ್ಭಟ
ತಡೆಯಲಾರದೆ ದೇವರ್ಕಳೆಲ್ಲ ಚದುರಿ
ಮರೆಯಾದರು ದೇವಿಯ ಹಿಂಬದಿಗೆ ॥

ರಕ್ತಬೀಜಾಸುರ: ಆಹಾ ರಥಾಧಿಪತಿಯಾದ ತ್ರಿವಣನೆ, ಯನ್ನ ಬಾಣದ ಆರ್ಭಟ ತಡೆಯಲಾರದೆ ದೇವರ್ಕಳೆಲ್ಲ ಯೀ ಸ್ತ್ರೀಯಳ ಮರೆ ಬಿದ್ದಿರುವರು. ಆಗಲಿ ಇವಳನ್ನೇ ಮಾತನಾಡಿಸುತ್ತೇನೆ.

ಪದಆದಿತಾಳ

ಯಾರು ನೀನು ಸುಂದರಿಯೆ  ವುದ್ಯಾನವನದಿ ಕೂತಿರುವೆ
ನಮ್ಮ ಸೈನ್ಯ ಮರಣವೊಂದಲೂ ಕಾರಣವೇನೆ ॥

ರಕ್ತಬೀಜಾಸುರ: ಯಲೈ ನಾರಿ ನೀವೀರ‌್ವರು ಸುಂದರಿಯರು ನಮ್ಮ ವುದ್ಯಾನವನದಲ್ಲಿ ಬಂದು ಕುಳಿತಿರಲು ಕಾರಣವೇನು. ಇದೂ ಅಲ್ಲದೆ ನಮ್ಮ ಸೈನ್ಯವೆಲ್ಲ ಇಲ್ಲಿ ಮಡಿದು ಹೋಗಿರುವ  ವಿಚಾರವೇನು. ನಿನ್ನ ತಂದೆ ತಾಯಿಗಳು ಯಾರು. ನಿನ್ನ ಹೆಸರೇನು ಇದನ್ನೆಲ್ಲಾ ಜಾಗ್ರತೆಯಾಗಿ ನನ್ನ ಸಂಗಡ ತಿಳಿಯಪಡಿಸುತ್ತಿ ರಕ್ತ ಬೀಜಾಸುರನು ಬಂದಿರುವನೆಂದು ನಿನ್ನ ಆತ್ಮದಲ್ಲಿ ಗ್ರಹಿಸಿಕೊಂಡು ತಿಳಿಸು.

(ಬ್ರಹ್ಮ ಈಶ್ವರ ಇಂದ್ರಾದಿ ಅಷ್ಟ ದಿಕ್ಪಾಲಕರುಗಳಿಂದ ದೇವಿಯ ಸ್ತೋತ್ರ)

ಹೇ ಜಗದಾಂಬೆಯಾದ ಆದಿಶಕ್ತಿ ನಿರಂಜನ ಸ್ವರೂಪಳೆ, ಈ ದುರುಳನಾದ ರಕ್ತಬೀಜಾಸುರನು ಬಂದಿರುವ ಆರ್ಭಟ ಹ್ಯಾಗಿದೆ ತಾಯೆ, ಇವನ ಭಯ ಬಹಳವಾದ್ದರಿಂದ ನಿಮ್ಮ ಅಡಿಗೆ ಬಂದಿದ್ದೇವೆ ತಾಯೆ. ಇದೂ ಅಲ್ಲದೆ ಇವನಿಗೆ ಪಾರ್ವತೀಶನಾದ ಹರನು ಲಕ್ಷ್ಮೀ ಲೋಲನಾದ ವಿಷ್ಣುವು ಇಬ್ಬರು ಸೇರಿ ನಿನ್ನ ಶರೀರದಲ್ಲಿನ ರಕ್ತವು ಒಂದು ತೊಟ್ಟು ಈ ಭೂಮಿಯ ಮೇಲೆ ಬಿದ್ದರೆ ಕೋಟಿಗೊಂದು ಕೋಟಿ ರಾಕ್ಷಸರು ವುದ್ಭವವಾಗಲೆಂದು ವರವನ್ನು ಕೊಟ್ಟಿರುತ್ತಾರೆ. ನಿಮ್ಮ ಶಕ್ತಿ ಸ್ವರೂಪಿನಿಂದ ಕೊಲ್ಲುವ ವಿಚಾರವನ್ನು ನೋಡಿಕೊಳ್ಳುವಂಥವರಾಗಿರಿ ತಾಯೆ ನಮ್ಮನ್ನು ಕಾಪಾಡಿರಿ ಆದಿಲಕ್ಷ್ಮಿ.

ಪದ

ಕೇಳಿ ದೇವರ್ಕಳೆ  ಪೇಳುವ ಮಾತ ಯಿಲ್ಲಿ
ಇರುಬ್ಯಾಡಿರಿ ಜೀವವನು ತಡಿರಿ
ಇವನ ರಕ್ತಕ್ಕೆ ನಾನು  ನಾಲಿಗೆ ಹಾಸುವೆ
ನಾಲಿಗೆ ಹಾಸುವೆ ರಕ್ತವ ಕುಡಿಯುವೆ ॥

ದೇವಿ: ಆಹಾ ಕೇಳಿರೈಯ್ಯ ದೇವರ್ಕಳೆ, ಯಿವನನ್ನು ನಾನು ಲೀಲಾಜಾಲದಿಂದ ರೌದ್ರವಂ ತಾಳಿ ಈ ಭೂಮಿಗೆ ನನ್ನ ನಾಲಿಗೆಯನ್ನು ಹಾಸಿ ಇವನ ವುದರವನ್ನು ಬಗೆದು ರಕ್ತವನ್ನು ಕುಡಿದು ನಿಮ್ಮನ್ನು ಬದುಕಿಸಿ ಕೊಡುತ್ತೇನೆ. ಈ ಸ್ಥಳವನ್ನು ಬಿಟ್ಟು ಬೇರೆ ಹೋಗುವಂಥವರಾಗಿರಿ.

ಕಂದ

ಇವಳಂ ನೋಡಲು ॥ಮದನತಾಪವು ಮೀರಿದಂದದಿ
ಯನ್ನಂ ಬಾಧಿಪುದೊ ಯಿವಳಂ ವೊಲಿಸುವೆ ನಾಂ ॥

ರಕ್ತ ಬೀಜಾಸುರ: ಹೇ ಮದನ ಮೋಹಿನಿ, ನಿನ್ನನ್ನು ನಾನು ನೋಡಿದ ಮಾತ್ರಕ್ಕೆ ಯನ್ನ ಮನವು ಮದನತಾಪ ಮೀರಿ ನಿನ್ನ ಮೇಲೆ ನನ್ನ ಮನ ಭ್ರಮೆವುಂಟಾದ ಕಾರಣ ನನ್ನ ವಶವಾಗುವಂಥವಳಾಗು. ನನ್ನ ರಾಜ್ಯಾಧಿಕಾರಗಳನ್ನು ನಿನ್ನ ಸ್ವಾಧೀನಕ್ಕೆ ವಹಿಸಿ ಪಟ್ಟದ ರಾಣಿಯಂತೆ ಮಡಗುವೆನು ಹೊರಡು. ಈ ವುಪವನದಲ್ಲಿ ನಿಮ್ಮ ಈರ್ವರಿಗೆ ಕಾಲಕ್ಷೇಪ ಹೇಗಾಗುವುದು. ಇದನ್ನು ಬಿಟ್ಟು ನನ್ನ ಪಟ್ಟದ ರಾಣಿಯಂತೆ ಇರುವೆ ಹೊರತು ಏನು ಹೇಳುವೆ ಹೇಳು.

ದೇವಿ: ಕವಿಯೆ ಸರ್ವರೋಳ್ ವುತ್ತಮಾ  ಕನಕವೆ ಲೋಹಂಗಳೋಳ್ ಶ್ರೇಷ್ಟ ಜಾಹ್ನವಿಯೆ ತೀರ್ಥದೋಳ್ ಉನ್ನತಂ ಗ್ರಹಗಳೋಳ್ ಸಪ್ತಗ್ರಹಂಗಳೆ ಶ್ರೇಷ್ಠ ಶಿವನೆ ದೈವ ಜನಂಗಳೋಳ್ ಶ್ರೇಷ್ಟ  ಎಂಬಂತೆ ಲೋಕದಲ್ಲಿ ಉದ್ಧಾರಕನಾದ ಪರಶಿವನನ್ನು ನಂಬುವರೆ ಹೊರ್ತು ಹಲವು ದೇವತೆಗಳಿಂದ ಫಲವೇನು. ಅದರಂತೆ ಯಾವ ಪ್ರಾಣಿಯೆ ಆಗಲಿ ಇದನ್ನರಿತು ಮಾತನಾಡಬೇಕಾದ್ದು ಹತ್ತಿರ ಬರಬೇಡ ಹೊರಡು ॥

ರಕ್ತಬೀಜಾಸುರ:ಮನೆಯೊಳಗೆ ಯಾವಾಗಲೂ ಕಲಹ ಮಾಡುವ ನಾರಿಯು ಮಾರಿಯಂತೆ ಭಾವಿಸಿಕೊಳ್ಳಬೇಕಾದ್ದು ಶಯನಸ್ಥಾನಕ್ಕೆ ಸುಂದರಿ ಸಾರ್ಥಕವಿಲ್ಲದ ಪುಷ್ಪವನ್ನು ಸಾವಿರ ಮುಡಿದರೇನು ಸುವಾಸನೆಯುಳ್ಳ ಪುಷ್ಪವನ್ನು ಒಂದು ಮುಡಿದರೆ ಸಾಕು. ಚಂದ್ರಕಾಂತಿಯಂತೆ ಪ್ರಕಾಶಿಸುತ್ತಿರುವಂಥ ನೀನು ಇಲ್ಲಿ ಇರುವಲ್ಲಿ ಮೋಹಭ್ರಾಂತನಾಗಿ ಕರೆದುಕೊಂಡು ಹೋಗುವೆನು ಹೊರಡು.

ಕಂದ

ಮಸಿಯಂ ತಂದೂ  ಹಾಲಿನೊಳದ್ದಿ ತೊಳೆಯಲೂ  ಮಲಿನ
ಪೋಪುದೆ ಇದ್ದಿಲಿನ ತೆರದಂತೆ ಬುದ್ದಿಯು ರಾಕ್ಷಸಂಗೆ ॥

ದೇವಿ:ಆಹಾ ಹೇ ದುರುಳನೆ ಬುದ್ದಿಯಿಲ್ಲದ ಮನುಷ್ಯನು ಯದ್ದು ಓಡಾಡಿದ ಹಾಗೆ, ಯಿದ್ದಲ ಮಸಿಯನ್ನು ಹಾಲಿನಲ್ಲಿ ಅದ್ದಿ ತೊಳೆದರೆ ಅದರ ಮಸಿ ಹೋಗುವುದೆ ಎಂಬ ಗಾದೆಯಂತೆ ನೀನು ಎಷ್ಟು ಹೇಳಿದರೂ ಕೇಳುವ ಹಾಗಿಲ್ಲ. ದೂರದಲ್ಲಿ ಕೈಗೆ ಎಟುಕದ ಹಾಗೆ ಇರುವಂಥ ಪುಷ್ಪವು ನಿನಗೆ ಹ್ಯಾಗೆ ದೊರೆಯುವುದು.

ರಕ್ತಬೀಜಾಸುರ: ಲೋಕ ಕಂಟಕನಾದ ಪರಾಕ್ರಮಶಾಲಿಯಾದ ನನಗೆ ಒಂದು ಯೋಜನ ಒಂದು ತೃಣ. ಅದರಂತೆ ದೂರದಲ್ಲಿದ್ದರೂ ದೊರೆಯುವುದಕ್ಕೆ ಸಂಶಯವಿಲ್ಲ.

ದೇವಿ: ಬ್ರಹ್ಮ ನೇಮಕವಿಲ್ಲದ್ದು ಹ್ಯಾಗೆ ದೊರೆಯುವುದು.

ರಕ್ತಬೀಜಾಸುರ: ಅಂತಾ ಬ್ರಹ್ಮ ವಿಷ್ಣು ಈಶ್ವರ ತ್ರೈಮೂರ್ತಿಗಳು ಎಂಟು ದಿಕ್ಕಿನ ಅಷ್ಟದಿಕ್ಪಾಲಕರು ಸಹ ನನ್ನ ಅಧೀನದಲ್ಲೇ ಇರುವಾಗ್ಯೆ ಬ್ರಹ್ಮನೇಮಕ ಅಂದರೇನು.

ದೇವಿ: ಮನುಷ್ಯನ ಪ್ರಯತ್ನವು ಆರು ವಿಧವಾಗಿರುವುದು. ದೈವ ಪ್ರಯತ್ನವು ಎಂದೂ ಹೆಚ್ಚಾಗಿರುವುದು. ಆದಕಾರಣ ಬ್ರಹ್ಮ ನೇಮಕ ಇಲ್ಲದ ಪದಾರ್ಥವು ಹತ್ತಿರ ಅಂದರೆ ಸಮೀಪದಲ್ಲಿದ್ದರೂ ದೊರೆಯುವುದಿಲ್ಲ ಇದನ್ನರಿಯದೆ ಮಾತನಾಡಬ್ಯಾಡ ದೂರ ಯಿರು.

ರಕ್ತಬೀಜಾಸುರ: ಈ ಕಮಲವನ್ನು ನಾನು ಮಾಡಿಯದೆ ಎಂದಿಗೂ ಬಿಡುವ ಹಾಗಿಲ್ಲ.

ದೇವಿ: ನೀನು ಬಂದು ಸಹಸ್ರವರ್ಷ ತಪಸ್ಸು ಮಾಡಿದಾಗ್ಯು ದೊರೆಯುವುದಿಲ್ಲ. ನನ್ನ ಮೇಲೆ ಮನಸ್ಸು ಮಾಡಿದವರಿಗೆ ಮರಣವು ಶಾಶ್ವತವಾದದ್ದೂ.

ರಕ್ತಬೀಜಾಸುರ: ಇಗೋ ಕಮಲಕ್ಕೆ ಕೈ ಹಾಕುವೆನೂ.

ದೇವಿ: ಆ ಕಮಲಕ್ಕೆ ಕೈ ಹಾಕಿದರೆ ನಿನಗೆ ಸಮೀಪವಾದದ್ದು ಮರಣ.

ರಕ್ತಬೀಜಾಸುರ: ಹಾಗಿದ್ದ ಮೇಲೆ ಸಹಸ್ರ ಜನ್ಮದಲ್ಲಿಯು ನನಗೆ ಮರಣವಿಲ್ಲದ ಚಿರಂಜೀವಿ. ಶೂರ ರಣಧೀರ ಪರಾಕ್ರಮಿಯಾದ ನಾನು ಕೈ ಹಾಕಿ ಎಳೆದು ಸೆಳೆದುಕೊಂಡು ಹೋಗುವೆನು ನಿಲ್ಲು.

ದೇವಿವಿಶ್ವರೂಪು

ಪದ

ಹಿಡಿಯುವೆ ಅಸುರನ ಕಡಿಯುವೆ ಶಿರವನಾ
ಪೊಡವಿಯೊಳ್ ಇಡದಂತೆ  ಕೆಡಹುವೆ ಇವನಾ ॥

ಪದಜಂಪೆ

ಹೇ ನಾನುಡಿನೆಲೆ ನೀನಲಾ  ಮಾರಿ ನಿನ್ನಯ ಶಿರವಾ
ಕಡಿದು  ಗಟಗಟನೆ ಹೀರುವೆನು ನಿನ್ನ ರಕ್ತವನೂ ॥

(ದೇವಿಯಿಂದ ರಕ್ತಬೀಜಾಸುರನ ಶಿರಶ್ಛೇದನ)

(ಮುಂಡ ಮಾತನಾಡುವುದು)

ರಕ್ತಬೀಜಾಸುರ: ಹರಾ ಹರಾ ಏನು ಮಾಡುವಂಥವನಾಗಲಿ ಹರಹರಾ  ಈ ಮಾರಿಯಿಂದ ನನ್ನ ಪ್ರಾಣ ಹತವಾಗುವಂಥದ್ದಾಯಿತಲ್ಲ. ಯಲೆ ರಂಡೆ ನನ್ನ ಕಡಿದ ರಕ್ತವೂ ಭೂಮಿಗೆ ಬೀಳದಂತೆ ನಾಲಿಗೆ ಹಾಸಿಕೊಳ್ಳುವಂಥವಳಾದೆಯ ಹರಹರಾ  ನನ್ನ ರಕ್ತವು  ಒಂದು ತೊಟ್ಟು ಭೂಮಿಗೆ ಹನಿಕಿದರೆ ಒಂದು ಸಹಸ್ರ ಕೋಟಿ ರಾಕ್ಷಸರಾಗಿ ಹುಟ್ಟಿ ನಿನ್ನ ಜನ್ಮವನ್ನು ಮುಳ್ಳಿನ ಮೊನೆಯಷ್ಟು ಬಿಡದಂತೆ ನುಗ್ಗಿ ನುಂಗಿ ಬಿಡುವೆನಲ್ಲ. ಎಲೆ ಮಾರಿ ನನ್ನ ಪ್ರಾಣ ನಿನಗೆ ಯೀಡಾಗಲಿ. ಸಹಸ್ರ ಜನ್ಮದಲ್ಲೂ ನಿನ್ನನ್ನು ಬಿಡದಂತೆ ತಗಣಿ ಜನ್ಮದಲ್ಲಿ ಹುಟ್ಟಿ ಬಂದು ನಿನ್ನನ್ನು ಬಾಧಿಸುತ್ತೇನೆ ಬಿಡುವುದಿಲ್ಲ. ಹರಹರಾ ನನ್ನನ್ನು ಕೈ ಬಿಟ್ಟೆಯಾ ಪ್ರಾಣ ಬಿಡುತ್ತೇನೆ ರಂಡೆ.

ದೇವಿ ಸ್ತೋತ್ರ

ಮಾಂ ಪಾರ್ವತ ಪಾಲಿಸು  ವರವಾ ಸ್ತುತಿಸುವೆ
ನಿಮ್ಮನು ವಸುಧೆಯೊಳೀಗಾ ಧನ್ಯರಾಗಿ ಜನ್ಮವಾರಿಗು
ಸ್ತುತಿಯಗೈವೆವು  ದೇವಿ ಮಾಂಪಾಹಿ ॥

ದೇವಿ: ಆಹಾ ಇಂದ್ರಾದಿ ಅಷ್ಟ ದಿಕ್ಪಾಲಕರೆ ನಿಮ್ಮದೇ ದೇವನಗರದಲ್ಲಿ ಸರ‌್ವರಾದಿಯಾಗಿ ತ್ರೈಮೂರ್ತಿಗಳೂ ಸಹಾ ಸುಖಿಯಾಗಿರಿ. ಪ್ರಪಂಚದಲ್ಲಿ ನನ್ನ ಸ್ತೋತ್ರ ಮಾಡುವಂತೆಯೂ, ಸ್ತೋತ್ರ ಮಾಡಿದವರಿಗೆ ಸುಖ ಕೊಡುವಳೆಂದು ತಪ್ಪಳ ಹೊಡೆಯಿರಿ ॥

ಶುಭಮಸ್ತು

ಶ್ರೀರಸ್ತು

ಸಂಪೂರ್ಣಂ

ಮಂಗಳಮಸ್ತು

* * *