ಕವಿ : ಲಿಂಗಣ್ಣಯ್ಯ

ಪ್ರತಿಕಾರ : ಲಿಂಗಣ್ಣಯ್ಯನವರ ಮಗ ಚಿಕ್ಕಯ್ಯ

ಕಾಲ : 1935 ಮಾರ್ಚ್ 1

ಸ್ಥಳ : ಬಾಗೇಶಪುರ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು

 

ಗಣಸ್ತುತಿ

ಗಜಾನನಂ ಭೂತಗಣಾಧಿ ಸೇವಿತಂ ಕಪಿತ್ಥ ಜಂಭೂಫಲ
ಸಾರಭಕ್ಷಿತಂ ವುಮಾಸುತಂ ಮೂಲ ವಿಘ್ನೇಶ್ವರಂ
ಪಾದ ಪಂಕಜಂ ವಂದೇ ಸದಾ ರಾಘವಂ ॥

ಶಾರದಾ ಸ್ತುತಿ

ನಮಸ್ತೆ  ಶಾರದಾದೇವಿ  ಕಾಶ್ಮೀ  ರ ಪುರವಾಸಿನಿ
ತ್ವಾಮಹಂ ಪ್ರಾರ್ಥಯೆ  ದೇವಿ ವಿದ್ಯಾದಾನಂಚ ದೇ ಹಿಮೆ ॥

ಭೂಕೇಶಕ್ಲೇಶ ಪಾಶಾಯನಾಂ ಸೂರ‌್ಯೇಂದು ಪುರವಾಹಿನಿ
ಭಾಗೀರಥಿ ಅಲಂಕಾರೆ ಶ್ರೀ ಭೂಮಿದೇವಿ ನಮಸ್ತೇ  ನಮಃ ॥

ವಿದ್ಯಗತಿ ಮತಿಯಿಲ್ಲ ಬುದ್ಧಿಗಣ ಮತಿ…….. ಬುದ್ಧಿವಂತರು ನೋಡಿ ತಿದ್ದಿಕೊಂಬುದು ರೂಡಿ ಸಕಲವಿದ್ಯವನ್ನು ಕಲಿತಂಥ ವಿದ್ಯಾಂಸರ ಪಾದಪದ್ಮಂಗಳಿಗೆ ನಾನಭಿವಂದನೆಯಂ ಮಾಡಿ ಈ ದೇವಿ ಮಹಾತ್ಮೆಯಂ ಪೇಳುವೆನು. ಇದರೊಳಗೆ ತಪ್ಪಿರಲು ತಿದ್ದುವುದು ವುತ್ತಮ ಸುಜನರು ತಾವು ಮನದೊಳು ಬೇಸರವಾಗದೆ ಇರಲು ನಾನು ಸರ್ವರಿಗೆ ಸಾಷ್ಟಾಂಗವೆರಗುವೆನೂ ॥

ಸಾರಥಿ ಬರುವಿಕೆ

ಪದ

ವಾಲೆಕಾರನು ಪೋರ  ನಿನ್ನ ಕಾಲಲಿ ಕಂಬಳಿ ದಾರ
ವಾಲೆಕಾರನಂತೆ ಬಹು ಮೋಜುಗಾರನಂತೆ ॥
ಕತ್ತಿ ಕಠಾರಿಯೊಳಗೆ ಶಿಪಾಯ ಬರುತಾನೆ ರಾಜ  ವೋ
ಶಿಪಾಯ್ ಬರುತಾನೆ ರಾಜ ಲಕ್ಷರ ದಂಡಿಗೆ ರಣಶೂರ  ರಣಧೀರಾ ॥

ಸಾರಥಿ: ಬಿತ್ತೋ ಬಿತ್ತಂಣ ಅಂದೆ.

ಭಾಗವತ: ಅದೇನೋ ಬಿದ್ದಂತಾದ್ದು.

ಸಾರಥಿ: ಭಾಗವತಣ್ಣ ಅಂದೆ ಯೇನು ಬಿದ್ದಂತಾದ್ದು ಯೆಂದು ಕೇಳುತ್ತೀರೋ. ಆಟಕ್ಕೆ ಹರಕತ್ತು ಮಾಡಿ ವೋಗುತಾನಲ್ಲಾ ಆ ನನ್ನ ಹೆಂಡಿರ ಮಗನ ಮನೆ ಮೇಲೆ ಯತ್ತು ಬಾರದಂತೆ ದುಂಡಿ ಬಿತ್ತೋ ಬಿತ್ತಂಣಾ ಅಂದೆ ಮತ್ತು ನುಗ್ಗಿತೂ ನುಗ್ಗಿತಣ್ಣಾ ಅಂದೆ.

ಭಾಗವತ: ಅದೇನೊ ನುಗ್ಗಿದಂತಾದ್ದು.

ಸಾರಥಿ: ಯೇನು ನುಗ್ಗಿದಂತಾದ್ದು ಎಂದು ಕೇಳುತ್ತೀ, ಆಟ ಆಡಿಸಿ ಹಣಕೊಡದೆ ಮೋಸ ಮಾಡಿ ಹೋಗುತ್ತಾನಲ್ಲಾ ಆ ನನ್ನ ಮಗನ ಮನೆಗೆ ದೊಡ್ಡ ಮಾರಿ ನುಗ್ಗಿತೊ ನುಗ್ಗಿತಂಣಾ ಅಂದೆ ಮತ್ತು ಸುರಿತೊ ಸುರಿತಂಣಾ ಅಂದೆ.

ಭಾಗವತ: ಯೇನೊ ಸುರಿದಂತಾದ್ದು ಹಾಸ್ಯಗಾರ.

ಸಾರಥಿ: ಯೇನು ಸುರಿದಂತಾದ್ದು ಯೆಂತಾ ಕೇಳ್ತಿರೇನೂ. ಆಟ ಆಡಿಸಿ ಹಣಕೊಡದೆ ಹೋಗುತಾನಲ್ಲಾ ನನ್ನ ಹೆಂಡಿರ ಮಗನ ಮನೆ ಮೇಲೆ ಕೆಂಡದ ಮಳೆ ಸುರಿತೋ ಸುರಿತಣ್ಣಾ ಅಂದೆ.

ಭಾಗವತ: ಯಲಾ ಹನುಮನಾಯ್ಕ ಬಹಳ ಬುದ್ಧಿವಂತನಾಗಿದ್ದೀಯೆ. ಕಾರ‌್ಯಬಂದಾಗ ಕರೆಸಿಕೊಳ್ಳುತ್ತೇನೆ ನಡೆ  ಬಾಗಿಲಲ್ಲಿ ಹಾಜರಿರುವಂಥವನಾಗು.

ಗಣಪತಿ ಬರುವಿಕೆ

ವೃತ್ತ

ಗಣಪತಿಯ ಬಾಲಂಗಳೆರಡು ಕೈದೊೀಳುಗಳು ಹನ್ನೆರಡು
ಲೀಲೆಯಿಂದೆಸೆವ ಕರ್ಣಂಗಳಾರು ತವಿಂ
ಮೂರು ಮಹಾಸ್ಥೂಲ ಮುಖ ನಾಲ್ಕರಿಒ
ಮೆರೆಯುವ ಲೋಲ ಗಣಪತಿಗೆರಗುವೆ ॥

ಪದ

ವಿನಾಯಕ ವಿಮಲವದನ ದೇವ
ಪ್ರಮಿಸುರ ಗಣನಾಥ ಹದಿನಾಲ್ಕು ಲೋಕವ ಹೃದಯದೊಳು ಬಿಟ್ಟು
ಮುದದಿಂ ಪಾಲಿಸುವ
ವಿನಾಯಕ ವಿಮಲವ ನದೇವ ॥

ಭಾಗವತ: ಯಲಾ ಹನುಮ ನಾಯ್ಕ ಬಾರೊ ಇಲ್ಲಿ ಯೆಲ್ಲಿ ಹೋಗಿದ್ದೆ.

ಸಾರಥಿ: ಭಾಗವತಣ್ಣಾ ಅಂದೆ. ಎಲ್ಲೂ ಹೋಗಿರಲಿಲ್ಲ ತಡ ಬಾಗಿಲಲ್ಲಿ ಹಾಜರಿದ್ದೇನಪ್ಪಾ.

ಭಾಗವತ: ಯಲಾ ಹನುಮನಾಯ್ಕ, ಯೆಲ್ಲಿಯಾದರು ನೋಡಿ ವೊಬ್ಬರು ಜೋಯಿಸರನ್ನು ಕರೆತರಬೇಕಲ್ಲಾ.

ಸಾರಥಿ: ಯಾತಕ್ಕೆ ಜೋಯಿಸರು.

ಭಾಗವತ: ಯಲಾ ಹನುಮನಾಯ್ಕ ವಿಘ್ನೇಶ್ವರ ದೇವರ ಪೂಜೆಗೆ ವೊಬ್ಬರು ಜೋಯಿಸರು ಬೇಕಲ್ಲಾ॥ಹಾಗಾದರೆ ಬೇಗಹೋಗಿ ಕರೆದುಕೊಂಡು ಬರುತ್ತೀನಿ ಆಗಲಿ.

(ಜೋಯಿಸರು ಬರುವಿಕೆ)

ಪದ

ನಮ್ಮ ಗಣೇಶನ ಪೂಜಾರಿ ಬಂದ
ನಮ್ಮ ವಿಘ್ನೇಶನ ಪೂಜಾರಿ ಬಂದ

ಗಣಪತಿ ಮಂಗಳ

ಪದ

ಗಜಮುಖದವಗೆ ಗಣಪಗೆ, ಚೆಲ್ವ ತ್ರಿಜಗವಂದಿತನಿ
ಗಾರತಿಯೆತ್ತಿರೇ ಗಜಮುಖದವಗೆ ಗಣಪಗೆ ॥
ವಿಘ್ನೇಶ್ವರನಿಗೆ ಸಿದ್ಧಿದಾಯಕನಿಗೆ ವಿದ್ಯ ವಿದ್ಯವನೆಲ್ಲ ಕೊಡುವಾತಗೆ
ಮುದ್ದು ಮುಖದ ಶ್ರೀ ಸೊಂಡಿಲ ಗಣಪಗೆ ವಜ್ರ ಮಾಣಿಕದಾರತಿ
ಎತ್ತಿರೆ  ಗಜ ಮುಖದವಗೆ ಗಣಪಗೆ ॥

ಪಾಶಾಂಕುಶನಿಗೆ ಮೂಷಕ ವಾಹನನಿಗೆ ದೇಶ ದೇಶದಿ
ಪೂಜೆಗೊಂಬುವಗೆ  ಈಶ್ವರನ ಪುತ್ರ ಶ್ರೀ ಶುಂಡಿ  ಲ ಗಣಪಗೆ
ಜ್ಯೋತಿ ಮಾಣಿಕದಾರತಿ ಯೆತ್ತಿರೇ  ಗಜಮುಖದವಗೆ ಗಣಪಗೆ ॥

ವಳ್ಳಿ  ತದವಲು ತೆಂಗಿನಕಾಯಿ ಕಡಲೆಯು ಎಳ್ಳುಂಡೆ
ಕಬ್ಬುಗಳ ಮೆಲುವಾತಗೆ ಬೆಳ್ಳಿಯ ವುರಿಗೆಜ್ಜೆಗಳ
ತೊಟ್ಟಿರುವಂತ ಡೊಳ್ಳಿ  ನ ಗಣಪಗಾರತಿ ಎತ್ತಿರೆ
ಗಜಮುಖದವಗೆ ಗಣಪಗೆ ಚೆಲ್ವ ತ್ರಿಜಗ
ವಂದಿತನಿಗಾರತಿ ಎತ್ತಿರೆ  ಗಜಮುಖದವಗೆ ಗಣಪಗೆ ॥

(ಬಾಲಕೃಷ್ಣ ಬರುವಿಕೆ)

ಪದ

ಆರೇನಂದ ಇಂದುವದನ ದೇವ
ಗೋಪೀ ಯಿಂದು ವದನದೇವ
ಮುರುಳಿಯ ಲೋಲನೆ ಮುನಿಜನಪಾಲನೆ
ಕರುಣಾರ‌್ಯಪಾಲನೆ ಕೌಸ್ತುಭಲೋಲನೆ ಯಿಂದು ವದನ ದೇವ ॥

ಸಾರಥಿ: ಯೀ ಸಭಾಮಧ್ಯ ಮಹಲಿಗೆ ದಯಮಾಡಿ ಬಂದವರು ನೀವು ಧಾರೈ ದೇವ ಮಹಾನುಭಾವ.

ಕೃಷ್ಣ: ಭಲೈ ಸಾರಥಿ ಹೀಗೆ ಬಾ ಮತ್ತೂ ಹೀಗೆ ಬಾ. ಭಲೈ ಸಾರಥಿ ಯೀಗ ಬಂದವರು ತಾವು ಧಾರೆಂದು ಅಂದದಿಂದ ಬಿನ್ನವಿಸಿ ಕೇಳುತ್ತೀಯ. ಆದರೆ ನಮ್ಮ ವಿದ್ಯಮಾನವನ್ನು ಚೆನ್ನಾಗಿ ಬಿತ್ತರಿಸಿ ಹೇಳುತ್ತೇನೆ ಚಿತ್ತವಿಟ್ಟು ಕೇಳೈ ಸಾರಥಿ, ಭಲೈ ಸಾರಥಿ ಈರೇಳು ಲೋಕಕ್ಕೆ ಅಧಿಕವಾದ ಧೀರ ಚಂದ್ರಮನಂತೆ ವಾರಿಜಾಕ್ಷಿಯರ ಸುರತದಲ್ಲಿ ಮಾರನೆಂದೆನಿಸಿ ಯೀ ದಾರುಣ ಜನರನ್ನು ಪೊರೆಯುವಂತಹ ಕ್ಷೀರಾಬ್ಧಿಶಯನನಾದ ನಾರಾಯಣ ಮೂರುತಿ ನಾನೇ ಅಲ್ಲವೇನೈ ಸಾರಥಿ ಸದ್ಗುಣ ಪೂರುತಿ.

ಸಾರಥಿ: ಮತ್ತೂ ತಿಳಿಯಲಿಲ್ಲ ಸ್ವಾಮಿ.

ಪದ

ಯಿನ್ನಾದರೂ ಹೇಳುತ್ತೇನೆ ಕೇಳುವಂಥವನಾಗು ॥
ಶಂಖು ಚಕ್ರಾಂಕಿತರಾಂಕಿತವಾಗಿರೆ  ಪಂಕಜನಾಭನ
ಪರಮ ನಾಮಾಂಕಿತ  ಆರೇನಂದ ಯಿಂದುವದನದೇವ ॥

ಕೃಷ್ಣ: ಭಲೈ ಸಾರಥಿ, ಶಂಕುಚಕ್ರವನ್ನು ಕರದಲ್ಲಿ ಪಿಡಿದು ಪಂಕಜನಾಭನೆಂಬ ಪರಮ ನಾಮಾಂಕಿತವುಳ್ಳ ಸೃಷ್ಠಿ ಪಾಲಕ ಶ್ರೀಕೃಷ್ಣ ಮೂರುತಿ ನಾನೇ ಅಲ್ಲವೇನೈ ಸಾರಥಿ ಸದ್ಗುಣ ಪೂರುತಿ.

ಪದ

ಭೂಮಿಯ ಜನರನು ಪ್ರೇಮದಿಂ ಪೊರೆಯುವ
ಕಾಮಿತಫಲಗಳ ಕೊಡುವ ಗೋಪಾಲ ಬಾಲ,
ಆಡಿಇ ನಂದ ಯಿಂದುವದನದೇವ ॥

ಕೃಷ್ಣ: ಎಲೈ ಸಾರಥಿ, ಧಾರುಣಿಯ ಜನರನ್ನು ರಕ್ಷಿಪ ಕ್ಷೀರಾಬ್ದಿಶಯನನಾದ ಶ್ರೀಕೃಷ್ಣ ಮೂರುತಿ ನಾನೇ ಅಲ್ಲವೇನೈ ಸಾರಥಿ ಸಂದಾನ ಪೂರುತಿ. ಭಲೇ ಸಾರಥಿ ಯೀ ಲೋಕವನ್ನು ವುತ್ಪತ್ಯ ಮಾಡುವುದಕ್ಕೆ ಬ್ರಹ್ಮನೇ ಕರ್ತನು, ಆತನು ವುತ್ಪತ್ತಿ ಮಾಡಿದ ಸಚರಾಚರ ಪ್ರಾಣ ಕೋಟಿಯ ಪಾಲಿಸೆ ನಾನೇ ಕರ್ತನು ಪ್ರಳಯ ಕಾಲಕ್ಕೆ ರುದ್ರನೇ ಕರ್ತನು, ಸತ್ಪಲ ವಿದ್ಯ ವೇದಂಗಳಿಗೆ ವಿನಾಯಕನೆ ಕರ್ತನು ಭಲೈ ಸಾರಥಿ ಮತ್ತಾದರು ಹೇಳುತ್ತೇನೆ ಕೇಳುವಂಥವನಾಗು.

ಪದ

ದ್ವಾರಕಿಯೊಳು ಜನಿಸಿ ಮಾವ ಕಂಸನ ಕೊಂದೆ
ಈ ಭೂಮಿಯೊಳು ನಾನು ಕೃಷ್ಣನೆಂದೆನಿಸಿದೆ
ಆರೇನಂದ ಯಿಂದುವದನ ದೇವ ॥

ಕೃಷ್ಣ: ಭಲೈ ಸಾರಥಿ, ನಾನು ದ್ವಾರಕಾ – ಪಟ್ಟಣದಲ್ಲಿ ದೇವಕಿಗರ್ಭದಲ್ಲಿ ಕೃಷ್ಣನೆಂಬ ಹೆಸರಿನಲ್ಲಿ ವುದ್ಭವಿಸಿ ನಮ್ಮ ಮಾವನಾದ  ಕಂಸಾಸುರ ಧೇನುಕಾಸುರರೆಂಬ ರಾಕ್ಷಸರನ್ನು ಕೊಂದು ಭಕ್ತರನ್ನು ಉದ್ಧರಿಸಿದಂಥ ಶ್ರೀಕೃಷ್ಣ ಮೂರುತಿ ನಾನೇ ಅಲ್ಲವೇನೈ ಸಾರಥಿ ಶುಭೋದಯ ಮೂರುತಿ. ಭಲೈ ಸಾರಥಿ ನಾವು ಬಂದು ಬಹಳ ಹೊತ್ತಾಯಿತು ನಂದಗೋಕುಲಕ್ಕೆ ಹೋಗಿ ಬರುತ್ತೇವೆ.

(ಕಥಾ ಪ್ರಾರಂಭ)

ಪದ: ರಾಗತ್ರಿವುಡೆ ತಾಳ

ಧಾರುಣಿಯೊಳೊಪ್ಪುವರು  ತೇಜೋವತಿಯ ರಾಜ್ಯನಾಳುವ
ರಕ್ತಬೀಜಾಸುರನ ವಿವರವ ಪೇಳೈನೀಗ ॥
ಮಾತೆ ನಿಕಶಾದೇವಿಯುದರದಿ  ಮುನ್ನ ಜನಿಸಿದ ರಕ್ತ ಬೀಜನ
ಸತಿಯು ಪುಷ್ಪಮಾಲಿನಿಯಿಂದೊಡಗೊಡಿ ಯಿರಲು ॥

ಸಾರಥಿ: ಯೀ ಸಭಾ ಮಧ್ಯಮಹಲಿಗೆ ಬಂದವರು ತಾವು ಧಾರೈ ರಾಜ ರವಿಸಮತೇಜ.

ರಕ್ತಬೀಜಾಸುರ: ಭಲೈ ದೂತ ಹೀಗೆ ಬಾ ಮತ್ತೂ ಹೀಗೆ ಬಾ. ಭಲಾ ಸಾರಥಿ ಯೀಗ ಬಂದವರು ಧಾರು ಧಾರೆಂದು ಕೇಳುತ್ತೀಯ. ಆದರೆ ನಮ್ಮ ವಿದ್ಯಮಾನವನ್ನು ಹೇಳುತ್ತೇನೆ ಕೇಳುವಂಥವನಾಗು. ಭಲೈ ಸಾರಥಿ ಆದಿ ಬ್ರಹ್ಮನ ಮಗ ಕಶ್ಯಪ ಆ ಕಶ್ಯಪರ ಧರ್ಮಪತ್ನಿಯಾದ ನಿಕಶಾದೇವಿಯ ವರಗರ್ಭದಿಂದುದ್ಭವಿಸಿ ಧೂರ್ಜಟಿಯ ನೆನೆಯುತ ತಪವಂ ಮಾಡಿ ವಿಧಿರುದ್ರರಂ ಮೆಚ್ಚಿಸಿ ಅವರ ಬಲದಿಂದ ಆ ದಿತಿ ಸುತರ ವೈರಿಯಾದ ದಿವಿಜರನ್ನು ನಿರ‌್ಲಕ್ಷ್ಯದಿಂದ ಭಂಗಪಡಿಸುತ್ತ ಅಧಮರಾದ ದಿವಿಜೇಂದ್ರರನ್ನು ಪರಿಪರಿ ವಿಧದಿಂದ ಧಿಕ್ಕರಿಸಿ ಸೆರೆಯೊಳಗಿರಿಸಿ ಹರುಷದಿಂ ತೇಜೋವತಿ ನಗರವಂ ಪರಿಪಾಲಿಸುವಂಥ ಮಹಿಷಾದಿ ರಕ್ಕಸರ ತಂಡ ತಂಡದಿಂದೊಡಗೂಡಿ ಮೆರೆಯುವಂಥ ರಕ್ತಬೀಜಾಸುರ ಪ್ರಚಂಡ ರಿಪುಮದಗರ್ವ ತಂಡವುದ್ದಂಡತಳ ರಾಜೇಂದ್ರನೆಂದು ಈ ಸಭೆಯೊಳ್ ಕಿತಾಪು ಮಾಡಿಸುವಂಥವನಾಗೋ ಚಾರ.

ಸಾರಥಿ: ರಾಜಾಧಿರಾಜ ರಾಜಮಾರ್ತಾಂಡ ರಕ್ತ ಬೀಜಾಸುರ ಮಹಾರಾಜ ಪರಾಕು. ಪರಾಕು  ತಾವು ಯೀ ಸಭಾ ಆಸ್ಥಾನಕ್ಕೆ ಬಂದ ಕಾರಣವೇನೈ ರಾಜ ರವಿಸಮತೇಜ.

ರಕ್ತಬೀಜಾಸುರ: ಭಲೈ ಮನುಷ್ಯನೆ ಈ ರಾಜಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಎನ್ನ ಅಷ್ಟಮಂತ್ರಿಗಳೋಳ್ ಶ್ರೇಷ್ಠರಾದ ವೀರ ವಿತರಣನೆಂಬ ಮಂತ್ರಿಯನ್ನು ಆಸ್ಥಾನಕ್ಕೆ ಬರಮಾಡು.

ಸಾರಥಿ: ಹುಕ್ಕೂಂ ಬರಮಾಡುತ್ತೇನೆ.

ಮಂತ್ರಿ: ಎಲೈ ಭೃತ್ಯನೆ, ಅತ್ಯಧಿಕತರವಾದ ಮಾನವ ಖಂಡವಾ ಸುತ್ತರಿದು ಪರಿವಿಧಿಯಂ ಕೂಡಿ ಮೆರೆಯುವ ವಿಷವೆಂಬ ಸಮುದ್ರದ ಮಧ್ಯ ಲಕ್ಷದ್ವೀಪವೆಂದು ರಂಜಿಸುತ್ತಿರುವಂಥ ದ್ವೀಪದೋಳ್ ಅಮರನಗರಕ್ಕೆ ಮಿಗಿಲಾಗಿ ಪ್ರಕಾಶಗೊಳಿಸುತ್ತಿರುವ ತೇಜೋವತಿ ಪಟ್ಟಣವನ್ನು ಪರಿಪಾಲಿಸುವಂಥ ರಾಜಾಧಿರಾಜರಿಗೆ ಗಂಡ ದಿವಿಜರಿಗೆ ಮಿಂಡ ಖಳ ಪ್ರಚಂಡರಾದ ರಕ್ತ ಬೀಜಾಸುರನ ಸಂಮುಖದೋಳ್ ಮೆರೆಯುವಂಥ ವೀರ ವಿತರಣನೆಂಬ ಮಂತ್ರಿಯೆಂದು ತಿಳಿಯೋ ಭಟನೆ ಹಿಡಿ ನೇಮ ತಟ್ಟನೆ.

ಸಾರಥಿ: ಗೊತ್ತಾಯಿತು ಈ ಸಭಾಸ್ಥಾನಕ್ಕೆ ಬಂದಂಥ ಕಾರಣವೇನೈ ಮಂತ್ರಿ ಶ್ರೇಷ್ಟನೆ.

ಮಂತ್ರಿ: ಭಲೈ ಮಾನವ, ಈ ರಾಜಾಸ್ಥಾನಕ್ಕೆ ಬಂದ ಕಾರಣವೇನೆಂದರೆ ನಮ್ಮ ಅರಸರಾದ ರಕ್ತಬೀಜಾಸುರೇಂದ್ರರು ಕರೆಸಿದ ಕಾರಣ ಬಾಹೋಣವಾಯಿತು. ಧಾವಲ್ಲಿರುವರು ಭೇಟಿ ಮಾಡಿಸುವಂಥವನಾಗು.

ಸಾರಥಿ: ಆಸ್ಥಾನದಲ್ಲಿ ವೊಡ್ಡೋಲಗಸ್ಥರಾಗಿದ್ದಾರೆ.

ಮಂತ್ರಿ: ನಮೋ ನಮೋ ರಾಜಾ.

ರಕ್ತಬೀಜಾಸುರ: ದೀರ್ಘಾಯುಷ್ಯಮಸ್ತು ಬಾರೈ ಪ್ರಧಾನಿ ಕಾರ‌್ಯದಲ್ಲಿ ಸಭವಾಣಿ.

ಮಂತ್ರಿ: ಅಯ್ಯ ರಾಜ ಸಭಾಮಣಿ, ನಮ್ಮನ್ನು ಯಿಷ್ಟು ಜಾಗ್ರತೆಯಿಂದ ಕರೆಸಿದ ಅಭಿಪ್ರಾಯವೇನು ಅಪ್ಪಣೆಯಾಗಲಿ.

ರಕ್ತಬೀಜಾಸುರ: ಹಾಗಾದರೆ ಹೇಳುತ್ತೇನೆ ಲಾಲಿಸು.

ರಾಗಚಾಪುಜಂಪೆ

ವರಮಂತ್ರಿ ಕೇಳಯ್ಯ ॥ಯಲ್ಲಾ ರಾಜರು ಈಗ ಕಪ್ಪಕಾಣಿಕೆಯನು ತಂದೊಪ್ಪಿಸುವರೇ

ರಕ್ತಬೀಜಾಸುರ: ಹೇ ಮಂತ್ರಿವರ‌್ಯನೆ ಯನ್ನೊಡನೆ ಕಾದಲಾರದೆ ಕಪ್ಪ ಕಾಣಿಕೆಯನ್ನು ತಪ್ಪದೆ ತಂದು ವೊಪ್ಪಿಸುತ್ತೇವೆಂದು ವೊಪ್ಪಿಕೊಂಡು ಹೋದ ಅವನಿ ಮಂಡಲದ ರಾಜರು ತಪ್ಪದೆ ಕಪ್ಪ ಕಾಣಿಕೆಯನ್ನು ತಂದು ವೊಪ್ಪಿಸುತ್ತಾರೋ ಇಲ್ಲವೋ ಹೇಳುವಂಥವನಾಗು.

ಪದ

ದನುಜ ರಾಜಾನೆ ಕೇಳೈ ಯಲ್ಲಾರಾಜರು ಈಗ
ತಪ್ಪದೆ ಕಪ್ಪವನು ವಪ್ಪಿಸುತಿಹರೂ ॥

ಮಂತ್ರಿ: ಹೇ ದನುಜಾರಿಯರಸನೆ ಲಾಲಿಸುವಂಥವನಾಗು. ಎಲ್ಲಾ ರಾಜಾಧಿರಾಜರು ತಪ್ಪದೆ ಕಪ್ಪಕಾಣಿಕೆಯನ್ನು ತಂದು ವೊಪ್ಪಿಸುತ್ತಿರುವರೈ ದೊರೆಯೆ ಮತ್ತೂ ಹೇಳುತ್ತೇನೆ.

ಪದ

ರಾಜಾಧಿರಾಜನೆ ಮನುಮುನಿಗಳು ಯಲ್ಲಾ
ಸನುಮತದಿಂದಲಿ ಪೂಜಿಸುತಿಹರೈ ॥

ಮಂತ್ರಿ: ಅಯ್ಯ ರಾಜ ಮತ್ತು ಆ ರಾಜಾಧಿರಾಜರೊಳಗೆ ನಿಕಶ ದೇವಿಯ ಸುಕುಮಾರರು ಮಹಾರಾಜಾಧಿರಾಜನೆಂದು ದ್ವಿಜರೆಲ್ಲರೂ ಹೊಗಳುತ್ತಾ ವಸ್ತ್ರ ಭೋಜನ ಗಂಧ ಚಂದನ ಪುಷ್ಪ ತಾಂಬೂಲಾದಿಗಳನ್ನು ಕೊಡುತ್ತಾ ಆಪ್ತ ಭೋಗಕ್ಕೂ ಕಂಟಕವಿಲ್ಲದಂತೆ ನಿಮ್ಮಗಳ ಆಶೀರ್ವಚನಗಳನ್ನು ತೆಗೆದುಕೊಂಡು ಹೋಗುತ್ತಿರುವರೊ ದೊರೆಯೆ ತಮಗಾರು ಸರಿಯೆ.

ಭಾಮಿನಿ

ವರಮಂತ್ರಿ ಕೇಳು ಎನ್ನಯ ಭುಜಬಲಸತ್ಯದಿಂದ
ರಿಪುಗಳನು ಸಂಹರಿಸಿ ಶರಣಾಗತರಾದರು
ರಾಜರು ಯಲ್ಲಾ ಯೀ ಜಗದೊಳು ॥

ರಕ್ತಬೀಜಾಸುರ: ಅಂ್ಯಾ ಮಂತ್ರಿ ಯನ್ನ ಭುಜಬಲತ್ವದಿಂದ ಭೂನರೇಂದ್ರರನ್ನು ಮುಷ್ಟಿಯಿಂದ ಮುರಿಯಲು ಶರಣಾಗತರಾಗಿ ಬೇಡಿದ ವರಗಳನ್ನು ಕೊಟ್ಟು ಪ್ರಾಣವನು ವುಳಿಸಿಕೊಂಡರು. ಈ ಧರಣಿಯಲ್ಲಿ ನನಗೆ ಯಾರೂ ಎದುರಿಲ್ಲದಂತೆ ಬಿರುದನ್ನು ಧರಿಸಿಕೊಂಡಿರುತ್ತೇನೆ. ಆದ್ದರಿಂದ ಸುರನರ ಗರುಡ ಗಂಧರ್ವ ಯಕ್ಷ ಕಿನ್ನರ ಕಿಂಪುರುಷ ಮೊದಲಾದ ದೇವತೆಗಳೆಲ್ಲರನ್ನು ವಿಧಿಯ ಬಲದಿಂದ ಗೆಲಿದು ಸೆರೆಮನೆಯೊಳಗಿರಿಸಿ ಯನ್ನ ಆಜ್ಞೆಯನ್ನು ಮೀರಿ ನಡೆಯದಂತೆ ನೇಮಿಸಬೇಕಾದ ಕಾರಣ, ನಮ್ಮ ಕಡೆ ಸೈನ್ಯವೆಲ್ಲವನ್ನು ಹೊರಡಿಸಿಕೊಂಡು ದೇವತೆಗಳಿಗೆ ಮುತ್ತಿಗೆಯಂ ಹಾಕಿ ಹೆಡಮುರಿಯಂ ಕಟ್ಟಿ ಹಿಡಿದು, ಆ ದೇವನಗರವಂ ನಾನೇ ಆಳಬೇಕು ಜಾಗ್ರತೆ ಸೈನ್ಯವನ್ನು ಬರಮಾಡುವನಾಗೈ ಮಂತ್ರಿ.

 

(ದೇವೇಂದ್ರನ ಒಡ್ಡೋಲಗ)

ಪದ

ಮಂತ್ರಿಯೆ ಬಾರೈಯ್ಯ  ವಿವರವ ಕೇಳಯ್ಯ
ದೇವನಗರದ ವಿಷಯಗಳ ಬೇಗನೆ ಪೇಳೈ ॥
ಅಮರಾವತಿಯಲ್ಲಿ ದೇವ ಕನ್ನಿಕೆಯರು  ಒಡ್ಡೋಲಗ
ಸುಖಭವದಿಂದಲಿ ಯಿರುವರೇನೈ ಆಹಾ
ಮಂತ್ರಿವರ‌್ಯನೆ ನಮ್ಮ ದೇವಲೋಕದಲ್ಲಿ ಸರ್ವರಾದಿಯಾಗಿ
ಧರ್ಮವುಳ್ಳವರಾಗಿ  ಕೀರ್ತಿ ಸಂಪದವುಳ್ಳವರಾಗಿ
ಪ್ರತಿ ದಿನವು ದೇವತಾರಾಧನೇ ನಿರತರಾಗಿ ನಮ್ಮ
ಅಮರಾವತಿಯಲ್ಲಿ ಸಂತುಷ್ಟದಿಂದ ಯಿರುವರೇನೈ ಪ್ರದಾನಿ॥

ಮಂತ್ರಿ: ಭುವನಾಧೀಶನೆ ಭೂರಿವಿಲಾಸನೆ ಅವಧರಿಸೈ. ಅಮರಾವತಿಯಲಿ ಯಿರುತಿಹ ಸುಖವನು ಪೇಳುವೆ ಕೇಳೈಯ್ಯ.

ಮಂತ್ರಿ: ಮಹಾರಾಜನೆ, ಯಿಂದ್ರಪ್ರಸ್ತ ಪಟ್ಟಣದಲ್ಲಿ. ಸರ್ವರಾದಿಯಾಗಿಯು ಸುಖದಿಂದಲು ವೈಭವದಿಂದಲೂ ಪ್ರತಿದಿನವು ದೇವತಾರಾಧನೆಯಿಂದ ಸಂತುಷ್ಟರಾಗಿರುತ್ತಾರೈ ದೇವ ಮಹಾನುಭಾವ.

ಕಂದ

ವರಮಂತ್ರಿಯೆ ಕೇಳ್  ಶಾಮಲವತಿಯಂ  ಪರಿಶೋಭಿಸುವ
ವೈವಸ್ವತ ರಾಯನಂ  ಹರುಷದಿಂ
ಯನ್ನಯ ಸನ್ನಿಧಿಗೆ ಕರೆತಾರೊ ನೀ  ಬೇಗ ॥

ಇಂದ್ರ: ಮಂತ್ರಿಯೆ, ಶಾಮಲ ನಗರವನ್ನು ಪರಿಪಾಲಿಸುವ ಯಮದೇವನನ್ನು ಆಸ್ಥಾನಕ್ಕೆ ಬರಮಾಡುವನಾಗು.

ಯಮ: ಭಲೈ ಮನುಷ್ಯನೆ ಗುಡಿಗುಡಿಸುತ ಆರ್ಭಟೆಯಿಂದ ಬಂದವರು ಧಾರೆಂದು ಕೇಳುತ್ತೀಯ  ಹೇಳುತ್ತೇನೆ ಹೀಗೆ ಬಾ. ಯಲೈ ಮಾನವನೆ ಮನುವಂಶದಲ್ಲಿ ದೇವಾಂಶ ಸಂಭೂತನೆನಿಸಿ ಹೆಸರೊಂದಿದತಪದ ಮಹಿಮೆಯೊಳ್ ಸುಧಾಂಶುಕಿರಣನು ತನ್ನ ಸುತೆಯಾದ ಅಪ್ಸರಸೆಯನ್ನಿತ್ತು ಶಾಂತತೆಯಿಂಗೊಳಿಸಿ ಪೋಗಲು,ಮನುಜ ಆ ಅಪ್ಸರಸೆ ವುದರದಲ್ಲಿ ನಿದಕ್ಷನೆಂಬುದಾಗಿ ಪುಟ್ಟಿ ಹರಿಯಂ ಭಜಿಸಿ ಪ್ರಖ್ಯಾತರಾದ ಕಮಲವು ಸರಸಿಯೋಳ್ ಪುಟ್ಟುವಂತೆ ಪುಟ್ಟಿರ್ದ ಸಂಜ್ಞಾದೇವಿಯೆಂಬುವಳ ಗರ್ಭದೊಳ್ ಜನಿಸಿ ಸೂರ‌್ಯತಮನಾಗಿ ರಕ್ಷಿಸಿ ಕೈಕೊಂಡು ಈ ನರಲೋಕದ ನರ ಮನುಜರ ಪಾಪಕರ್ಮಂಗಳಂ ವಿವರಿಸಿ ವಿಧವರಿತು ಶಿಷ್ಟ ರಕ್ಷಣೆಯಂ ಮಾಳ್ಪ ಶಾಮಲವತಿಯಂ ಪರಿಪಾಲಿಸುವ ಯಮಧರ್ಮರಾಯನೆಂದು ತಿಳಿಯುವಂಥವನಾಗೈ ಸಾರಥಿ.

ಸಾರಥಿ: ಗೊತ್ತಾಯಿತು ಯೀ ಸಭಾಮಧ್ಯಕ್ಕೆ ಬಂದ ಕಾರ‌್ಯವೇನು ಹೇಳುವರಾಗಿರಿ.

ಯಮ: ಯಲಾ ಸಾರಥಿ ಈ ಸಭೆಗೆ ಬಂದ ಕಾರಣವೇನೆಂದರೆ. ಯಿಂದ್ರ ಲೋಕವನ್ನು ಪರಿಪಾಲಿಸುವಂಥ ದೇವೇಂದ್ರ ರಾಜರು ಕರೆಸಿದ ಕಾರಣ ಬಂದಿರುತ್ತೇನೆ. ಧಾವಲ್ಲಿರುವರು ತೋರುವನಾಗು.

ಯಮ: ನಮೋ ನಮೋ ದೇವೇಂದ್ರ ಭೂಪತಿ ನಿಮಗೆ ನಮಸ್ಕರಿಸುವೆನು.

ಇಂದ್ರ: ತಥಾಸ್ತು ನಿನಗೆ ಮಂಗಳವಾಗಲಿ ಬಾರೈಯ್ಯ ಯಮದೇವನೇ.

ಮಂತ್ರಿ: ಹೇ ಅಮರಾಧಿಪತಿಯೆ, ಯಿಷ್ಟು ಜಾಗ್ರತೆ ನನ್ನನ್ನು ಕರೆಸಿದ ಕಾರಣವೇನು ಅಪ್ಪಣೆಯಾಗಬೇಕೈ ರಾಜಾ.

ಇಂದ್ರ: ಅಯ್ಯ ಯಮದೇವನೆ ಇಲ್ಲಿಗೆ ನಿನ್ನನ್ನು ಕರೆಸಿದ ಕಾರಣವೇನೆಂದರೆ ನಾವುಗಳೆಲ್ಲರು ಈ ದಿನ ಸುಖವಿಹಾರವಂ ಮಾಡಬೇಕಾಗಿರುವುದರಿಂದ ನಿನ್ನನ್ನು ಕರೆಸಿರುತ್ತೇನೆ, ವಿಶ್ರಾಂತಿಯಂ ಮಾಡಲು ಕುಳಿತುಕೊಳ್ಳುವಂಥವನಾಗು.

ಇಂದ್ರ: ಭಲೈ ಸಾರಥಿ ಜಾಗ್ರತೆ ವರುಣನನ್ನು ಆಸ್ಥಾನಕ್ಕೆ ಬರಮಾಡುವಂಥವನಾಗು.

ಸಾರಥಿ: ಅಪ್ಪಣೆ ಕರೆಸುತ್ತೇನೆ.

ವರುಣ: ಭಲೈ ಸಾರಥಿ ಹೀಗೆ ಬಾ ಮತ್ತೂ ಹೀಗೆ ಬಾ. ಎಲೈ ಸಾರಥಿ ಈಗ ಬಂದವರು ನೀವು ಧಾರೆಂದು ವಿಚಾರಿಸುತ್ತೀಯ ಹೇಳುತ್ತೇನೆ ಕೇಳು ಶ್ರೀ ಹರಿಯ ಪಾದ ಭಜನೆಗಳಿಂದ ಪಡೆದ ಅಲಕಾನಗರವನ್ನು ಪರಿಪಾಲಿಸುವಂಥ ವರುಣದೇವನೆಂದು ತಿಳಿಯುವಂಥವನಾಗು ಚಾರ ಮಾತಿನಲ್ಲಿ ಚಮತ್ಕಾರ.

ವರುಣ: ಈ ರಾಜಾಸ್ಥಾನಕ್ಕೆ ಬಂದ ಕಾರಣವೆಂದರೆ ಅಮರಾಧಿಪತಿಯಾದ ದೇವೇಂದ್ರ ರಾಜನು ಕರೆಸಿದ ಕಾರಣ ಬಾಹೋಣವಾಯಿತು. ಜಾಗ್ರತೆಯಿಂದ ನನ್ನನ್ನು ಕರೆಸಿದ ಕಾರ‌್ಯವೇನು ಅಪ್ಪಣೆಯಾಗಲಿ.

ಕಂದ

ವರುಣನೆ ಲಾಲಿಸಿ ಕೇಳೈ ಯೀ ದಿನ
ಸುಖವಿಹಾರವ ಮಾಡಲು ನಿಮ್ಮೆಲ್ಲರನು
ಕರೆಸಿದೆನು ವಿರಚಿತಾಸನವಂ ರಚಿಸಬೇಕೈ ॥

ಇಂದ್ರ: ಅಯ್ಯ ವರುಣನೆ ನಿಮ್ಮೆಲ್ಲರನ್ನು ಕರೆಸಿದ ಅಭಿಪ್ರಾಯವೇನೆಂದರೆ ಕುಬೇರನು ಬರಲಿ ಹೇಳುತ್ತೇನೆ ವಿಶ್ರಾಂತಿಯನ್ನು ಹೊಂದುವಂಥವನಾಗು. ಭಲೈ ಸಾರಥಿ ಕಾಂಚಿಪಟ್ಟಣಕ್ಕೆ ಅಧಿಪತಿಯಾದ ಕುಬೇರನನ್ನು ಆಸ್ಥಾನಕ್ಕೆ ಬರಮಾಡು.

ಕುಬೇರ: ಯಲೈ ಭಟಕುಟುಂಬಿ ಭಟಾಗ್ರಗಣ್ಯನೆ ಅವಭ್ರವಿಭ್ರ ಶುಭ್ರಾಜಿತ ಕಾದಂಬಿನಿಯಂ ಕಂಡು ಕಣ್ಣು ಮುಚ್ಚಿ ಮೈ ಬೆಚ್ಚಿ ಮೈ ಮರೆದು ಬೆಸಗೊಳ್ಳುವ ಮಾನವ ನೀನು ಯಾರು ನಿನ್ನ ಅಭಿಧಾನ ಯಾವುದು ತಿಳಿಸುವಂಥವನಾಗೊ ಸಾರಥಿ.

ಸಾರಥಿ: ಅಟ್ಟದ ಮೇಲಾಡುವ ಪುಟ್ಟ ಸಾರಥಿಯೆಂದು ಕರೆಯುತ್ತಾರೆ ಮತ್ತು ನೀವು ಧಾರೈ ದೇವ.

ಕುಬೇರ: ಯಲೆ ಭಟನೆ ನಮ್ಮನ್ನು ಧಾರೆಂದು ಕೇಳುತ್ತೀಯ. ಕಂಠಹಾರ ಮಣಿಹಾರ ಶಂಬೊ ಸದಾಶಿವ ದಾಯಕ ಗಂಗಾವಯ ಬಿಂಭವಾಹ ಯಿಂತೆಂದು ಪ್ರಕಾಶಮಾನವಾದ ಪರಮೇಶ್ವರನಂ ಭಜಿಸಿ ಪೂಜಿಸಿ ಮತ್ತು ಸಿರಿಬಲ ಧನಬಲ ಧನವಂತನೆಂದೆನಿಸಿ ಯಕ್ಷರಾಜನಿಗೆ ನೆಲೆಯಾದ ಕಾಳಾವತಿ ನಗರಪುರಾಧ್ಯಕ್ಷನಾದ ಕುಬೇರನೆಂದು ತಿಳಿಯುವಂಥವನಾಗೊ ಚಾರ ಮಾತಿನಲ್ಲಿ ಚಮತ್ಕಾರ.

ಸಾರಥಿ: ಗೊತ್ತಾಯಿತು ಈ ಸಭಾಸ್ಥಾನಕ್ಕೆ ಬಂದಂಥ ಕಾರಣವೇನು ಅಪ್ಪಣೆಯಾಗಲಿ.