ಚಂಡ: ಅಸುರರ ಕದಂಬಕ್ಕೆ ಹಸನಾಗಿ ಪೆಸರಂ ಪಡೆದಿರುವ ರಾಜೇಂದ್ರನೆ, ನಮ್ಮನ್ನು ಇಷ್ಟು ತ್ವರಿತವಾಗಿ ಕರೆಸಿದ ಕಾರಣವೇನೈ ದೊರೆಯೆ ನಿಮಗಾರು ಸರಿಯೆ.

ರಕ್ತಬೀಜಾಸುರ: ಚಂಡಮುಂಡಾಸುರರೆ ಕೇಳಿ, ಚಂಡಿಯೋರ್ವಳು ಉದ್ಯಾನವನದಿ ಬಂಡು ಮಾಡಿದಳಂತೆ ವನಚರರನ್ನು ॥ಗಂಡುಗಲಿಗಳೊಳಗೆ ಮಹಾಪ್ರಚಂಡರಾದ ಚಂಡ ಮುಂಡಾಸುರರೆ ನಿಮಗೆ ತಿಳಿಯಪಡಿಸುವುದೇನೆಂದರೆ ನಮ್ಮ ವುದ್ಯಾನವನದೊಳಗೆ ಯಾರೊಬ್ಬಳು ಸುಂದರಿ ತನ್ನ ಗೆಳತಿಯಿಂದೊಡಗೂಡಿ ಬಂದಿರುವಳಂತೆ. ನಮ್ಮ ವನಚರರು ಅವಳನ್ನು ಮೋಹಿಸಲು ತನ್ನ ಚಾತುರ‌್ಯದಿಂದ ಅವರನ್ನು ಭಂಗಿಸುವಂಥವಳಾದಳಂತೆ. ಆದಕಾರಣ ಅಪೂರ್ವಳಾದ ಆ ನಾರಿಯನ್ನು ಧೀರತನದಿಂದ ಪೋಗಿ ಎಳೆದುಕೊಂಡು ಬರುವಂಥವರಾಗಿರೈಯ್ಯ ಅಸುರರೆ.

ಮುಂಡ: ಅಯ್ಯ ದನುಜರಾಜನೆ, ನಿಮ್ಮ ಮಾತಿನಂತೆ ಅಖಂಡ ಬಲಶಾಲಿಗಳಾದ ರಕ್ಕಸರನ್ನು ಕರೆಸಿಕೊಂಡು ಆ ಮರುಳ ಮಾರಿಯಂತೊಪ್ಪುವ ಕಾಮಿನಿಯನ್ನು ಕ್ಷಣಮಾತ್ರದಲ್ಲಿ ಸೆರೆಯನ್ನು ಹಿಡಿಸಿ ಯಳತರುತ್ತೇನೆ ಅಪ್ಪಣೆಯನ್ನು ಕೊಡುವಂಥವರಾಗಿ.

ಪದ

ದೈವ ಬಲವನ್ನು ಸಂಹರಿಸಿ ಆ ಸುಂದರಿಯನ್ನು
ಎಳೆತರುವಂಥವರಾಗಿರೈಯ್ಯ ಚಂಡಮುಂಡ ಸುರೇಂದ್ರರೆ ॥
ದೇವದಿವಿಜರನ್ನು ಗೆಲಿದು, ದೇವಿಯನ್ನು ಹಿಡಿದು ತರುವೆ
ಸಾವಧಾನದಿಂದ ಕೊಡಿ ಬಲವ ಚಂದದಿ ॥

ಚಂಡ: ಎಲಾ ಚಾರನೆ, ಹರಿಹರ ಬ್ರಹ್ಮಾದಿ ಇಂದ್ರರು ನಮ್ಮ ವುದ್ಯಾನವನದಲ್ಲಿ ಆ ಸುಂದರಸ್ತ್ರೀ ಯಳ ಸಹ ಯಿರುವರಂತೆ. ಆ ದೈವ ಬಲವನ್ನು ಸಂಹಾರ ಮಾಡಿ ಆ ಸ್ತ್ರೀಯನ್ನು ಯಳ ತರಲು ನಮ್ಮ ದನುಜೇಂದ್ರನ ಅಪ್ಪಣೆಯಾಗಿದೆ. ಜಾಗ್ರತೆಯಿಂದ ನಮ್ಮ ಕಡೆ ಬಲಾಸುರರನ್ನು ಕರೆದುಕೊಂಡು ಬರುವಂಥವನಾಗು.

ಬಲಾಸುರ: ಯಲೈ ಭಟಕುಟುಂಬಿ ಹೀಗೆ ಬಾ ಮತ್ತೂ ಹೀಗೆ ಬಾ. ಯಲೈ ಭಟನೆ ಭಲಭಲರೆ ಭಲರೆಂದು ಅದ್ಭುತದಿ ಆರ್ಭಟಿಸಿ ಗರ್ಜಿಸಿದ ಮಾತ್ರಕ್ಕೆ ಈ ಜಗತ್ತೆಲ್ಲ ತಲ್ಲಣಿಸುವಂತೆ ಮಾಳ್ಪ ರಕ್ತ ಬೀಜಾಸುರರ ಆಜ್ಞೆಯಂ ನಡೆಸುವಂತೆ ಚಂಡಮುಂಡಾಸುರರು ಕರೆಸಿದ ಕಾರಣ ಬಾಹೋಣವಾಯಿತು. ಚಂಡಮುಂಡಾಸುರರು ಧಾವಲ್ಲಿರುತ್ತಾರೆ ತೋರಿಸುವಂಥವನಾಗೊ ದೂತ ಕೇಳೆನ್ನ ಮಾತ.

ಬಲಾಸುರ: ನಮೋ ನಮೋ ಚಂಡ ಮುಂಡಾಸುರರೆ ನಿಮಗೆ ವಂದಿಸುವೆನು.

ಚಂಡಮುಂಡಾಸುರರು: ನಿನಗೆ ಮಂಗಳವಾಗಲಿ ಬಾರೈಯ್ಯ ಬಲಾಸುರನೆ.

ಬಲಾಸುರ: ಅಯ್ಯ ಚಂಡಮುಂಡಾಸುರರೆ ನನ್ನನ್ನು ಇಷ್ಟು ವಿಧವಾಗಿ ಕರೆಸಿಕೊಂಡ ಕಾರ‌್ಯಕಾರಣವೇನು ಬೇಗದಿಂದ ತಿಳಿಸುವಂಥವರಾಗಿರಿ.

ಚಂಡ: ಯಲೈ ಬಲಾಸುರನೆಂಬ ರಕ್ಕಸನೆ, ನಿನ್ನನ್ನು ಕರೆಸಿಕೊಂಡ ಅಭಿಪ್ರಾಯವೇನೆಂದರೆ ಈ ದಿವಸ ನಮ್ಮ ವುದ್ಯಾನವನದಲ್ಲಿ ದೇವರ್ಕಳೆಲ್ಲ ಒಂದಾಗಿ ಬಲಾರ್ಕಳಾದ ಸ್ತ್ರೀಯಳು ಯುದ್ಧವನ್ನು ಮಾಡುವಳಂತೆ. ಆದಕಾರಣ ನಮ್ಮ ರಾಜನಾದ ರಕ್ತಬೀಜಾಸುರನು ಅವಳನ್ನು ಜೈಸಿ ಅವಳನ್ನು ಯಳತರುವಂತೆ ಅಪ್ಪಣೆಯಾಗಿದೆ. ಅವಳನ್ನು ಜೈಸಿ ಯಳತರುವುದಕ್ಕೆ ಕರೆಸಿರುತ್ತೇನೆ ಹೊರಡುವಂಥವನಾಗೊ ಬಲಾಸುರನೆ.

ಪದ

ಬಿಡು ಬಿಡು ಬಿಡು  ಕಡೆಯಾದೆ ಸಮರಕ್ಕೆ
ಸಡಗರದೊಳು ಯನ್ನ  ದಿವಿಜರಾ ಗೆಲಿದು
ತಿಂದು ಬರುವೆ ನನಗೀಯೊ ವರವಾ ॥

ಬಲಾಸುರ: ಭಳಿರೆ ಚಂಡ ಗಂಡುಗಲಿಗಳ ಪುಂಡನೆಂದು ಹೊಗಳಿಸಿಕೊಳ್ಳುವ ಚಂಡಮುಂಡಾಸುರರೆ, ಈ ದಿವಸ ಮಾಡುವ ಸಮರವೆ ಮೊದಲು ನನ್ನದಾಗಿರುವದು. ಆದಕಾರಣ ನಮ್ಮ ವೈರಿಗಳಾದ ದೈವಬಲವನ್ನು ನುಗ್ಬಡಿದು ಅವರನ್ನೆಲ್ಲಾ ಜೈಸಿ ಆ ಸ್ತ್ರೀಯಳನ್ನು ತರುತ್ತೇನೆ ಜಾಗ್ರತೆ ಅಪ್ಪಣೆಯನ್ನು ದಯಪಾಲಿಸುವಂಥವರಾಗಿರಿ.

ಚಂಡ: ಯಲೈ ಭಟಾಗ್ರಣಿಯೆ ದೈವಬಲವನ್ನು ಜೈಸಲು ವರವನ್ನು ಕೊಟ್ಟಿರುತ್ತೇನೆ ಹೊರಡುವಂಥ ವನಾಗು.

ಕಂದ

ಭಲಭೋಲರೆಂದು ಗರ್ಜಿಸಿ ದೈವಬಲದೊಳಗೆ ಬಿಲ್ಲಂ ಮಸೆದೂ
ಸುರದಿಕ್ಪಾಲಕರ ಸದೆ ಬಡಿವೆನೆಂದು॥

ಬಲಾಸುರ: ಹರಿಹರ ವಿಧಿಸುರೇಂದ್ರರೆ ಹಿಂದೆ ನಮ್ಮೊಡನೆ ಕಾದಲಾರದೆ ಕದ್ದು ವೋಡಿದ್ದವರು ಯೀಗ ಯೀ ಹೆಂಗಸನ್ನು ನೆವ ಮಾಡಿಕೊಂಡು ದಳಗೂಡಿ ಬಂದಿರುವ ನಿಮ್ಮಗಳನ್ನೆಲ್ಲ ನಮ್ಮ ವನ ದೇವತೆಗೆ ಹಬ್ಬ ಮಾಡಿಸುತ್ತೇನೆ. ಯುದ್ಧಕ್ಕೆ ಹೊರಟು ಬರುವಂಥವರಾಗಿರೊ ಮೂರ್ಖರೆ.

ಪದ

ಈ ಕೊಳುಗುಳದೊಳೀಗ ನಿನ್ನ ಖೂಳನೆಂದು ಕೂಗಬೇಡ
ಖೂಳ ದನುಜನೆ ಗೆಲಿದು ಸೂರೆ ಮಾಡುವೆ॥

ದೇವೇಂದ್ರ: ಯಲವೊ ಖೂಳನಾದ ರಕ್ಕಸನೆ, ಈ ಧರಿತ್ರಿಯಲ್ಲಿ ಪೂಜಿತನೆಂದು ಘರ್ಜಿಸಿ ನುಡಿಯುವಂಥ ಖೂಳ ರಕ್ಕಸ ನಿನ್ನ ತಲೆಯನ್ನು ನನ್ನ ವಜ್ರಾಯುಧದಿಂದ ಕಡಿದು ತುಂಡು ಮಾಡುತ್ತೇನೆ. ನನ್ನೊಡನೆ ಹೊಡೆದಾಡಿ ನೋಡೊ ಬಲನೆ ಯೀಗಲೆ ಖಳನೆ.

ಪದಆದಿತಾಳ

ಕುನ್ನಿ ನಿನಗೆ ಹಿಂದಣ ಸುದ್ದಿ ಮರೆತು ಬಂದೇನೊ ॥
ನಿನ್ನನೀಗ ರಣದಿ ಬಲಿಯ ಕೊಡುವೆನಂದೇನೊ॥

ಭಲಾಸುರ: ಯಲವೊ ಶ್ವಾನನಂದದಿ ಬಾಯಿ ಬಂದಂತೆ ಬಗಳಿಕೊಳ್ಳುವ ಕಳ್ಳ ದೇವೇಂದ್ರನೆ. ಹಿಂದೆ ಯಮ್ಮೊಡನೆ ಕಾದಲಾರದೆ ಕೈಸೆರೆಗೆ ಸಿಕ್ಕಿ ನರಳುತ್ತಿದ್ದೆ. ಈಗ ಪೌರುಷವನ್ನು ತೋರಿದರೆ ನಡೆಯಬಲ್ಲುದೆ. ಆ ಸುದ್ದಿಯನ್ನು ಬಿಟ್ಟು ಯೀ ದಿವಸ ರಣರಂಗಕ್ಕೆ ನಿಲ್ಲುವಂಥವರಾನಾಗು ನಿನ್ನ ಬಲಿಯನ್ನು ಕೊಡುತ್ತೇನೆ.

ಪದ

ಬಿಡು ಬಿಡು ಬಿಡು ಹಿಂದಣ ಸುದ್ದಿಯ  ನುಡಿಯದಿರೊ
ಯನ್ನೊಡನೆ  ಗಡೆಬಡೆ ಮಾಡುತ
ಬಿಡುವೆನೆ ದೈತ್ಯನೆ ಕಡಿಯದೆ ನಿನ್ನಯ ಶಿರವಾ ॥

ದೇವೇಂದ್ರ: ಯಲವೊ ರಕ್ಕಸ ಹಿಂದೆ ನಿಮಗೆ ನಾವು ಸೋತೆವೆಂದು ನೀವುಗಳು ತಿಳಿದು ಈ ದಿವಸ ನೀನು ಬಂದಿರುತ್ತೀಯ. ಯಲಾ ಭ್ರಷ್ಟ ಹಿಂದೆ ನಿಮಗೆ ಜಯಕಾಲ ಒದಗಿದ್ದರಿಂದ ನಾವು ನಿಮಗೆ ಸೋತೆವು. ಯೀಗ ನಮಗೆ ಜಯಕಾಲ ವದಗಿರುವುದು. ನೋಡು ನನ್ನ ವಜ್ರಾಸ್ತ್ರದಿಂದ ನಿನ್ನ ಶಿರವನ್ನು ತರಿಯುತ್ತೇನೆ. ನನ್ನೊಡನೆ ಯುದ್ಧಕ್ಕೆ ನಿಲ್ಲುವಂಥವನಾಗು.

ತ್ರಿವುಡೆ

ಗದೆಯ ತಿರುವುತ ಸಿಂಹನಂದದಿ  ಮುದದಿ
ಮದನೇರಿದನು ಶೂರನು  ಇಂದು
ರಣದೊಳು ಗದರಿಕೊಂಡನೊ ॥ಜಗವು ನಡುಗೆ

ಬಲಾಸುರ: ಎಲೈ ಹರಿಹರ ಬ್ರಹ್ಮಾದಿಗಳಾದ ಅಷ್ಟ ದಿಕ್ಪಾಲಕರುಗಳಿರಾ ಹಿಂದೆ ನಮಗೆ ರಣದಲ್ಲಿ ಸೋತು ಸೆರೆಯೊಳಗೆ ಇಂದ್ರ ನೀವುಗಳೂ ಕದ್ದು ಬಂದು ಗುಂಪುಗೂಡಿಕೊಂಡು ಪುನಃ ಕಾಳಗ್ಕೆ ಬಂದಿರುತ್ತೀರ. ಈ ದಿವಸ ಈ ರಣದೊಳಗೆ ನಿಮ್ಮೆಲ್ಲರನ್ನೂ ದೋರ್ದಂಡದಿಂದ ಬಡಿದು ಅಪ್ಪಳಿಸಿ ಕೆಡವುತ್ತೇನೆ. ಯುದ್ಧಕ್ಕೆ ನಿಲ್ಲುವಂಥವರಾಗಿರಿ.

ಪದ

ಬಾರೊ ಬಾರೆಲೊ ರಣಕೆ ನೀ ಯೀಗಲೆ
ನಿನ್ನ ಮೋರೆಯ ನೋಡು ಯೀಗಲೆ
ಹಿಂದೆ ತೋರಿದ ಪರಿಯನೆಲ್ಲವ ಯೀಗ ನೋಡುವೆ
ಬೇಗ ಬಾರೆಲಾ ಯೀಗ ಭಳಿರೆ

ಯಮ: ನೀಚರೋಳ್ ನೀಚನಾದ ದುರುಳ ರಕ್ಕಸನೆ ಹಿಂದೆ ನಮಗೆ ಅಪಮಾನ ಮಾಡಿದ್ದಲ್ಲದೆ ಈವಾಗ ನಮ್ಮನ್ನು ಸೂರೆ ಮಾಡುವೆನೆಂದು ಬಂದಿರುತ್ತೀಯ ಅಧಮಾ. ಇಗೋ ನೋಡು ಇಲ್ಲಿರುವ ದೇವತೆಗೆ ಯಿದಿರಾಗಿ ನಿಮ್ಮನ್ನು ನಿಲ್ಲಿಸಿ ಕೋಣವನ್ನು ಕಡಿದಂತೆ ನಿನ್ನ ಶಿರವನ್ನು ಕಡಿಯುತ್ತೇನೆ. ರಣದಲ್ಲಿ ನಿಲ್ಲುವಂಥವನಾಗೆಲ ಭಂಡ ಖಂಡ್ರಿಸುವೆನು ನಿನ್ನ  ಚೆಂಡ.

(ಯುದ್ಧಬಲಾಸುರನ ಮರಣ)

ಭಾಮಿನಿ

ಅರಸ ಕೇಳ್ ಕಲಿ ಬಲನು ಕಾಲಭೈರವನು ಮಡಿದ ವಾರ್ತೆಯಂ ಕೇಳಿ
ಚಂಡ ಮುಂಡಾಸುರರು ಭೋಯೆಂದಬ್ಬರಿಸಿ
ಶರಂ ಬೀರುತ್ತಾ ಬಂದರಾ ವನಕೆ ॥

ತ್ರಿವುಡೆ

ಬಂದರಾಗಲೆ ಚಂಡ ಮುಂಡರು ನಿಂದು
ರಣದಲಿ ಭೋರ್ಗರೆಯುತ್ತಲಿ  ಹರಿಹರರು
ಓಡಿದರು ಸುರಪರೊಳಗೆ ಮರೆಯಾಗಿ ॥

ಚಂಡ: ಭಳಿರೆ ಭಳಿರೆ ಸುರನರಗರುಡ ಗಾಂಧರ್ವರೆ, ಯಮ್ಮ ಬೊಬ್ಬೆಯಂ ತಾಳಲಾರದೆ ನಮಗೆ ಮರೆಯಾಗಿ ಓಡುತ್ತೀರ ಅಧಮರೆ. ಶಾಭಾಷ್ ಯಲೋ ದೂತ ಕ್ಷಣಮಾತ್ರದಲ್ಲಿ ವುಪವನದಲ್ಲಿ ಯಿರುವ ಪನ್ನಗವೇಣಿಯಾದ ಸುಂದರಿಯಿರುವ ಸ್ಥಳಕ್ಕೆ ರಥ ಬಿಡುವನಾಗು.

ಪದತ್ರಿವುಡೆ

ಕರದಿ ಮೀಸೆಯ ತಿರುವುತಾಕ್ಷಣ ಕರದಿ ಖಡ್ಗವ
ಜಳಪಿಸುತಾಕ್ಷಣ  ತರುಣಿಯಂ ಮುಖ
ನೋಡಿದಾಕ್ಷಣ ಯಳೆಯುತವರು ॥

ಚಂಡ: ಭಲಾ ಸಾರಥಿ ಹರಿಹರ ಬ್ರಹ್ಮಾದಿಗಳು ಸುರೇಂದ್ರರು ನಮ್ಮ ಆರ್ಭಟ ಸೈರಿಸಲಾರದೆ ಓಡಿ ಹೋಗಿ ಮರೆಯಾಗುವಂಥವರಾದರು. ಈ ಸುಂದರಿಯನ್ನು ನೋಡಿದ ಮಾತ್ರವೆ ಯನ್ನ ಮನವು ಅಂಗಜ ತಾಪಕ್ಕೀಡಾಗಿ ವೇದನೆಯು ಯನಗುಂಟಾಗಿರುವ ಕಾರಣ ಈ ಸುಂದರಿಯನ್ನು ಹಿತವಾದ ಮಾತುಗಳಿಂದ ಮಾತನಾಡಿಸುತ್ತೇನೆ.

ಪದ

ಮಾತನಾಡೆ ನೀತದಿಂದ  ಸೋತೆ ನಿನ್ನೊಳು
ಜೊತೆಯೊಳೆನ್ನ ಸೇರಿ ಮಾರನ ತಾಪ ತೀರಿಸೆ ॥

ಮುಂಡ: ನಾರಿ ನೀನು ಯಾರು. ನಿನ್ನ ಅಂದ ಚಂದವಾದ ನಾಮಧೇಯ ಯಾವುದು ಮರಮಾಜದೆ ನನ್ನಲ್ಲಿ ತಿಳಿಸುವಳಾಗು. ಇದು ಅಲ್ಲದೆ ನೀತವಾದ ನಿನ್ನ ಅಂದಚಂದ ನಿನ್ನ ಸೊಬಗನ್ನು ನಾನು ನೋಡಿದ ಮಾತ್ರಕ್ಕೆ ನನಗೆ ಚಪಲವುಂಟಾದ ಕಾರಣ ಗೆಳತಿಯರ ಕೂಟವನ್ನು ಬಿಟ್ಟು ಮೃದು ವಚನವನ್ನು ನುಡಿದು ಸುಖಿ ಮಾತುಗಳಿಂದ ಮನೆಗೆ ಒದಗಿ ಬಾರೆ ಚಕೋರಾಕ್ಷಿ.

ಪದಆದಿತಾಳ

ಮನವ್ಯಾಕೆ ಮದನ ಸುಂದರಿ  ಯನ್ನನೊಲಿಯದೆ
ನಿನ್ನ ಮನದ ಬಯಕೆ ಯನ್ನೋಳ್ ಪೇಳದೆ ॥

ಚಂಡ: ಹೇ ಕೋಮಲಾಂಗಿ ನನ್ನ ಮೇಲಣ ಮಮತೆಯು ನಿನಗಿರುವುದೋ ಇಲ್ಲವೊ, ಯಾವ ವಿಚಾರವನ್ನು ಮಾತನಾಡದೆ ಮೌನದಿಂದ ಕುಳಿತಿರುವೆಯಲ್ಲ. ಕೋಪದಿಂದ ತಾಪಗೊಂಡು ಭಯಗೊಳಿಸಿದ ಬಯಕೆಯೇನಾದರು ಯಿರಬಹುದೆ. ಆ ಭಯವನ್ನು ಬಿಟ್ಟು ಏನಿದ್ದರು ತಿಳಿಸೆ ಸುಂದರಿ ಮದನಕಂಜರಿ.

ಆಹಾ ನಾನು ಯಿಷ್ಟು ಬಗೆಯಿಂದ ಕೇಳಿದರೂ ಮಾತನಾಡದೆ ಮೂಗನಂತೆ ಕೂತಿರುವಳು. ಈ ಅಂಗನೆಯನ್ನು ಯನ್ನ ಅಂಗಕ್ಕೆ ಎಳೆದು ಮಾತನಾಡಿಸುವೆನು ಹೇ ಕಾಮಿನಿ ಮಾತನಾಡು.

ಪದ

ರೂಪಿಗೆ ಮರುಳಾಗಿ ನೀನು  ತಾಪವ ಮಾಡುವರೆ ಛಿ ಛಿ
ತಾಪವ ಮಾಡುವರೆ ಛೀ ಛೀ  ಭೂಪ
ನಿನ್ನನು ಲಗ್ನಗೈವ ತಾಪವ ಮಾಡುವರೆ

ದೇವಿ: ಅಮ್ಮ ಒಡತಿಯಾದ ಸಖಿಯೆ, ಈ ದುರುಳ ರಕ್ಕಸನನ್ನು ನೋಡು ಏನು ಮಾತನಾಡುವನು. ಹೇ ರಾಜ ಈ ಭೂಮಂಡಲದಲ್ಲಿ ಸ್ತ್ರೀಯರಿಗೆ ರೂಪ ಯನ್ನುವಂಥದ್ದು ಪಾಪವು. ಅಂಥ ಪಾಪವೆ ನರಕವು. ಹಿಂದೆ ನಿನ್ನಂಥ ಅನೇಕ ದೈತ್ಯರು ರೂಪಿಗೆ ಮರುಳಾಗಿ ನಾಶವಾಗಿರುತ್ತಾರೆ. ನನ್ನ ಹತ್ತಿರ ನಿನಗೇನು ಮಾತು ಹೊರಡು.

ಪದ

ಬಿಡು ಬಿಡು ಬಿಡು ಬೇಗದಿ ಕೋರಬ್ಯಾಡ
ನಡಿನಡಿನಡಿ ಜಡೆಯಾ ಪಿಡಿದೆಳೆಯುವೆ ॥

ಚಂಡ: ಯಲೈ ನಾರಿ ಮೌನದಲ್ಲಿ ಕುಳಿತಿರುವ ಮೋಹದ ಕಾಣಿಕೆ. ನನ್ನಯ ವಿನಯ ವಚನಂಗಳಿಗೆ ಒದಗಿ ಬಂದರೆ ಸರಿಯಾಯ್ತು ಇಲ್ಲವಾದರೆ ಈಗಲೇ ನನ್ನ ಅಂಗಸಂಗಕ್ಕೆ ಎಳೆಯುತ್ತೇನೆ ಮಾರಿ.

ಪದ

ಚಂಡದೈತ್ಯನೆ ನಿನ್ನ ಚಂಡನು ಕಡಿಯುವೆ
ಚಂಡಿ ರೂಪನು ನಾನು ಯೀಗ ತಾಳುವೆ ॥
ಭಂಡ ಖಳನೆ ಯೀಗಂ ತಂಟಿಯ ಮಾಡೊ
ಚಂಡನೆ ನಿನ್ನನ್ನು ದಂಡಿಸಿರುವೆನೊ॥

(ಚಂಡಾಸುರನ ಮರಣ)

ಭಾಮಿನಿ

ಕೇಳು ರುತುಪರ್ವವನೀಶ್ವರ ಖಳರನೇಕರ ನೆರೆಗೊಂಡು
ಚಂಡಮುಂಡರು ಬರಲು  ಮೋಹಿನಿ ರೂಪು ತಾಳಿದಳು
ಚಂಡೇಶ್ವರಿಯಂತೆ ರಾಕ್ಷಸರ ಮುರಿದು ಸಲವಿದಳು ಜಗವಾ॥

ಅಷ್ಟತಾಳ

ಹೇಳಲೇನ್ಯಳವಲ್ಲವೊ  ಹೆಣ್ಣಿನ ಪರಿಯ ಪೇಳಲಸದಳವೊ
ನೀಳಾದ ರಮಣಿ  ಯಿಂದೆಲ್ಲ ದೈತ್ಯರು ಮಡಿದರಲ್ಲ ನಾ ಪೇಳಲಾರೆ ॥

ಚಾರ: ನಮೋ ನಮೋ ರಾಜೇಂದ್ರನೆ

ರಕ್ತಬೀಜಾಸುರ: ತತಾಸ್ತು ಬರುವಂತಾವನಾಗು ಮುಂದಣ ವಿಷಯವೇನು.

ಚಾರ: ಅಯ್ಯ ರಾಜನೆ, ರಣರಂಗದಲ್ಲಿನ ವಿಚಾರವನ್ನು ಹೇಳುವುದಕ್ಕೆ ಬಹಳ ಭಯಂಕರವಾಗುತ್ತದೆ. ಅದು ಹ್ಯಾಗೆಂದರೆ ಹರಿಹರ ವಿರಂಚಿ ಸುರೇಂದ್ರಾದಿಗಳೆಲ್ಲಾ ದಳಗೂಡಿ ಆ ಹೆಣ್ಣಿನ ಸುತ್ತಲೂ ಪಾರೆ ಇರುವರು. ಆದ್ದರಿಂದ ಯಾರೊಬ್ಬರಲ್ಲಿ ಸೇರಬೇಕಾದರೂ ಅಸಾಧ್ಯವಾಗಿರುವುದು. ಇದೂ ಅಲ್ಲದೆ ನಿಮ್ಮ ಆಜ್ಞೆಯನ್ನು ಪಡೆದುಕೊಂಡು ಹೋಗಿದ್ದ ಚಂಡಮುಂಡರು ಮೊದಲಾದ ಬಲಾಸುರ ಕಾಲಬೃಂದ ಇವರೆಲ್ಲರೂ ನಿಮ್ಮ ವ್ಯಸನಕ್ಕೆ ಹೋಗಿ ಆ ದೇವತೆಗಳಲ್ಲಿ ರಣಾಗ್ರ ಮಾಡುವುದರೊಳಗೆ ಆ ಸುಂದರಿಯಾದ ಸ್ತ್ರೀಯಳು ಅವರನ್ನೆಲ್ಲಾ ಸಂಹಾರ ಮಾಡಿದಳು. ಅದನ್ನು ನೋಡಿ ಸೈರಿಸಲಾರದೆ ನಿಮ್ಮ ಬಳಿಗೆ ಓಡಿ ಬಂದೆನು ರಾಜರೆ.

ಪದಜಂಪೆ

ಅಳಿದರೆ ಪಟುಭಟರಲಾ  ಯಿದು ಯೇನು ಚೋದ್ಯವೂ
ವುಳಿದ ವೀರರ ನೋಡಿ ಕಳುವೆನು ಧುರಕೆ

ರಕ್ತಬೀಜಾಸುರ: ಆಹಾ ಚಾರನೆ ಇದು ಏನು ಬಹಳ ಚೋದ್ಯವಾಗಿ ತೋರುವುದಲ್ಲಾ. ನಮ್ಮ ಸೈನ್ಯದ ಬಲಾಸುರ ಕಾಲಬೃಂದಾ ಚಂಡಮುಂಡಾಸುರರೆಲ್ಲರನ್ನೂ ಹತಮಾಡಿದಳೆ. ಆಹಾ ಅವಳ ಬಲವು ಎಷ್ಟರಮಟ್ಟಿಗೆ ಇರುವುದು ಒಳ್ಳೆಯದು ಕುಟಿಲಗಾತಿಯಾದ ಸ್ತ್ರೀಯನ್ನು ಯಳೆತರಿಸುತ್ತೇನೆ

ಯಲೈ ಚಾರನೆ ನಮ್ಮ ಮಾವನಾದ ಮಹಿಷಾಸುರ ರಾಜನನ್ನು ಕರೆದುಕೊಂಡು ಬರುವಂಥವನಾಗೊ ಚಾರ ಪುತ್ಸಿಚಾರ.

ಮಹಿಷಾಸುರ: ಯಲಾ ದೂತ ಶಿಖಾಮಣಿ ಈ ಜಗಕ್ಕೆ ಸೃಷ್ಟಿಕರ್ತನಾದ ಆ ಪರಮೇಷ್ಟಿ ಕುಮಾರನಾದ ಕಶ್ಯಪರ ಸಂತತಿಯಿಂದ ವುದ್ಭವಿಸಿ  ತಪಸ್ಸು ಮಾಡಿದ ಕಾರಣ ಆ ಅಜನಿಂದ ವರವನ್ನು ಪಡೆದು ಧೂರ್ಜಟಿಗೆ ಅಸದಳವೆನಿಸಿ ಒಂದು ದಿನ ನದಿಯೊಳಗೆ ಸ್ನಾನವನ್ನು ಮಾಡಿ ಮನದೊಳಗೆ ಪಿತಾಮಹನಂ ಭಜಿಸುತ್ತ ಕುಳಿತಿರಲು ಅಲ್ಲಿಗೆ ದೇವತಾಸ್ತ್ರೀಯಳಾದ ಊರ‌್ವಶಿಯು ರುತುವಾದ ಹದಿನಾರನೆ ದಿವಸಕ್ಕೆ ನಾನಿರ್ದ ಅರಣ್ಯದೊಳು ನಿಂದು ಪೋಗುತ್ತಿರಲು ನಾನು ಅವಳಂ ಕಂಡು ಮೋಹಿಸಿ ರತಿಕೇಳಿಯನೆಸಗಲು ಕೂಡಲೇ ಹೆಣ್ಣು ಮಗು ಹುಟ್ಟಿತು. ಅದನ್ನು ಬಿಟ್ಟು ತೆರಳಿದ ಬಳಿಕ ಆ ಕೂಸನ್ನು ಸಾಕಿ ಈ ರಕ್ತಬೀಜಾಸುರನಿಗೆ ಕೊಟ್ಟು ಪರಿಣಯ ಮಾಡಿದ ನೆವದಿಂದ ಮಾಯಾನಗರ ವನ್ನು ನಿರ್ಮಿಸಿ ಮಹಿಸಾಮೌಳಿಯೆಂದು ಹೆಸರಿಟ್ಟು ಮೆರೆಯುತ್ತಿರುವ ಮಹಿಷಾಸುರನೆಂದು ತಿಳಿಯುವಂಥವನಾಗೊ ಚಾರ ಮಾರನೊಳು ಚಮತ್ಕಾರ. ಯಲಾ ಮಾನವ ಈ ಸಭಾ ಸ್ಥಾನಕ್ಕೆ ಬಂದ ಕಾರಣವೇನೆಂದರೆ ಯನ್ನ ಅಳಿಯನಾದ ರಕ್ತಬೀಜಾಸುರನು ಕರೆಸಿದ ಕಾರಣ ಬಾಹೋಣ ವಾಯಿತು. ಜಾಗ್ರತೆ ತೋರುವಂಥವನಾಗು.

ರಕ್ತಬೀಜಾಸುರ: ನಮೋ ನಮೋ ಮಾವಯ್ಯನವರೆ, ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಬಂದಿರುತ್ತೆ ಮಾವೈಯ್ಯನವರೆ.

ಮಹಿಸಾಸುರ:ದೀರ್ಘಾಯುಮಸ್ತು ನಿನಗಾಗಲಿ ಮೇಲಕ್ಕೇಳುವಂಥವನಾಗೊ. ರಕ್ತ ಬೀಜಾಸುರನೆ ಇಷ್ಟು ಜಾಗ್ರತೆಯಿಂದ ಕರೆಸಿದ ಕಾರಣವೇನು ಹೇಳುವಂಥವನಾಗು ಅಳಿಯನೆ.

ಪದ

ಮಾವ ಕೇಳೊ ಪೇಳುವೇನು ಮೂಲವೆಲ್ಲವಾ
ನಮ್ಮ ವುದ್ಯಾನವನದಲ್ಲೀಗ ಚಂಡಿ ರೂಪಳಿರುವಂತೀಗ
ನಮ್ಮ ಸೈನ್ಯವೆಲ್ಲವನ್ನು ಕೊಂದು ಇರುವಳೂ ॥

ರಕ್ತಬೀಜಾಸುರ: ಮಾವಯ್ಯನವರಾದ ಮಹಿಷಾಸುರರೆ ನಿಮ್ಮನ್ನು ಕರೆಸಿಕೊಂಡ ಅಭಿಪ್ರಾಯವೇನೆಂದರೆ ನಮ್ಮ ವುದ್ಯಾನವನದಲ್ಲಿ ವೋರ್ವ ಸುಂದರಿ ಬಂದು ನೆಲೆಗೊಂಡು ಹರಿಹರ ವಿಧಿ ಸುರೇಂದ್ರರು ಸೇವೆ ಮಾಡುತ್ತಾ ಇರುವರಂತೆ. ಯಿದೂ ಅಲ್ಲದೆ ಈವರೆವಿಗೂ ನನ್ನ ಅಧೀನ ಸೆರೆಯೊಳಗೆ ಇದ್ದಂಥ ದೇವರ್ಕಳು ಮೋಸದಿಂದ ಕದ್ದು ಹೋಗಿ ನಮ್ಮ ಕಡೆಯ ವೀರಾಧಿವೀರರಾದಂಥ ಭಲಾಸುರ ಚಂಡಾಸುರ, ಮುಂಡಾಸುರಾದಿಯಾಗಿ ಮರಣವನ್ನು ಹೊಂದಿಸಿರುವಳಂತೆ. ಆದಕಾರಣ ಆ ಉಪವನದಲ್ಲಿರುವ ದೇವರ್ಕಳನ್ನು ಸಂಹಾರ ಮಾಡಿ ಆ ವೋರ್ವ ಸ್ತ್ರೀಯಳನ್ನು ಯಳೆದುಕೊಂಡು ಬರುವಂಥವನಾಗೊ ಮಾವೈಯ್ಯ.

ಪದ ತ್ರಿವುಡೆ

ಮಗಳ ಗಂಡನ ಮನದ ಕಾಂತೆಯಾ
ನಗಡು ಮೈಸಾಸುರನು ಕಾಣುತಾ
ಮನದಿ ಕೋಪದಿ ಮೀಸೆ ತಿರುವುತ ಅಬ್ಬರಿಸಿ ತಾನು ॥

ಮಹಿಷಾಸುರ: ಯನ್ನಳಿಯನಾದ ರಕ್ತಬೀಜಾಸುರನೆ ಈ ನವಕಾಂಡ ಪೃಥ್ವಿಯನ್ನೆಲ್ಲಾ ವಶಮಾಡಿಕೊಂಡಿರುವ ಈ ಶೂರನಿಗೆ ಈ ಕಾರ‌್ಯವು ಬಹು ದೊಡ್ಡದೆ. ಆ ಸುಂದರಿ ಹ್ಯಾಗಿರಬಹುದು ಹ್ಯಾಗಿದ್ದರೂ ಅವಳು ಹೆಣ್ಣು ಹೆಂಗಸು. ಅವಳನ್ನು ತರುವುದಕ್ಕೆ ಎರಡು ಕೈಗಳು ಬೇಕೆ. ಅಳಿಯನೆ ನಿನ್ನ ಮನದ ಯೋಚನೆಯನ್ನು ಬಿಡುವಂಥವನಾಗು. ಯೀಗಲೆ ಯಳೆದುಕೊಂಡು ಬರುತ್ತೇನೆ.

ಪದ್ಯ ತ್ರಿವುಡೆ

ಅಳಿಯನನುಮತಿ ಪಡೆಯಲಾಕ್ಷಣ
ಕರದಿ ಕತ್ತಿ ಪಿಡಿಯುತಾಗಲೆ  ಹೊರಟು
ವುದ್ಯಾನಕೆ ರಥವ ಹೊಡೆದರಾಗ॥

ಮಹಿಷಾಸುರ: ಎಲೈ ಚೋಪ್ಪಾರ್ ನನ್ನ ಅಳಿಯನಾದ ರಕ್ತ ಬೀಜಾಸುರನಿಗೆ ವೈರಿಯಾಗಿ, ವುದ್ಯಾನದಲ್ಲಿರುವ ಆ ಸ್ತ್ರೀಯಳನ್ನು ಎಡೆಬಿಡದೆ ಸುತ್ತಲೂ ನಿಂತಿರುವ ಆ ದೇವರ್ಕಳನ್ನು ಸಂಹರಿಸಿ, ಆ ಸ್ತ್ರೀಯಳನ್ನು ಯಳತರುವುದಕ್ಕೆ ಹೊರಡಲು ರಥವನ್ನು ವುದ್ಯಾನವನಕ್ಕೆ ಹೊಡೆಯುವಂಥವನಾಗು. ಯಿದೂ ಅಲ್ಲದೆ ನಮ್ಮ ಸೇನಾಧಿಪತಿಯಾದ ವಜ್ರಮುಷ್ಟಿಯನ್ನು ಕರೆತರುವಂಥವನಾಗು ಜಾಗ್ರತೆ ರಥ ಹೊಡೆ.

ವಜ್ರಮುಷ್ಟಿಕ: ಭಳಭಳಿರೆ ಪುರನೊಕ್ಕ ಅಕ್ಕಸಡಿಯಾದ ಮಾನವರ ತಿಂದು ನಿಡುಗಣದಿಂದ ಗಾಂಧರ್ವರನ್ನು ಯನ್ನ ಸೆರೆಯೊಳಗಿರಿಸಿ ಧರೆಯನ್ನಾಳುವ ಮೈಸಾಸುರನ ಜನ ಮಂದಾರ ಶೂರಾಗ್ರಹ ಶರನಾದ ವಜ್ರಮುಷ್ಟಿಕ ರಾಜನೆಂದು ತಿಳಿಯುವಂಥವನಾಗೊ ಚಾರ ಮಾತಿನ ಪ್ರಚಾರ. ಈ ರಾಜಸಭೆಗೆ ಬಂದ ಕಾರಣವೇನೆಂದರೆ ನಮ್ಮ ದೊರೆಯಾದ ಮೈಸಾಸುರನು ಕರೆಸಿದ ಕಾರಣ ಬಾಹೋಣವಾಯಿತು. ಜಾಗ್ರತೆ ತೋರುವಂಥವನಾಗೊ ದೂತ ಕೇಳೆನ್ನ ಮಾತ. ನಮೋ ನಮೋ ಮಹಾರಾಜನೆ ಮೈಸಾಸುರನೆ.

ಮಹಿಷಾಸುರ: ದೀರ್ಘಾಯುಮಸ್ತು ಬಾರೈಯ್ಯ ವಜ್ರ ಮುಷ್ಟಿಕ ರಾಜನೆ. ಎಲೈ ಸೇನಾಧಿಪತಿಯೆ ಈವತ್ತಿನ ದಿವಸ ದೇವ ಸಂತತಿ ಇಂದ್ರಾದಿ ಅಷ್ಟ ದಿಕ್ಪಾಲಕರನ್ನು ಸಂಹಾರ ಮಾಡಿ ಆ ವುದ್ಯಾನವನದಲ್ಲಿ ಇರುವ ವೋರ‌್ವ ಸ್ತ್ರೀಯಳನ್ನು ಎಳೆತರಲು ಹೊರಟಿರುತ್ತೇನೆ ಸಿದ್ಧವಾಗಿ ಹೊರಡುವಂಥವರಾಗಿರಿ.

ಪದ ತ್ರಿವುಡೆ

ಬಂದನಾಗಲೆ ವಜ್ರಮುಷ್ಠಿಯೂ
ನಿಂದು ಸಮರವ ಮಾಳ್ಪೆ ಯನುತಾ ॥
ವಂದು ಶರವನು ಸೇದಿ ಬಿಡುತಾ ಹೊರಟರಾಗ ॥

ವಜ್ರಮುಷ್ಠಿಕ: ಯಲೈ ವುದ್ಯಾನವನದಲ್ಲಿರುವ ದೇವರ್ಕಳೆ ನಾವೇ ಶೂರರೆಂದು ಯಮ್ಮ ಕಡೆ ಸೈನ್ಯವನ್ನು ಕೊಡುತ್ತೀರ. ಈಗ ಒಂದು ಬಾಣವನ್ನು ಬಿಟ್ಟಿರುತ್ತೇನೆ. ತರಹರಿಸಿಕೊಂಡು ರಣರಂಗಕ್ಕೆ ಬರುವಂಥವರಾಗಿರಿ.

ಪದ

ಯಾರೆಲೊ ಯುದ್ಧವ ಮಾಡುವೆನೆನುತಾ ವುದ್ಯಾನವನದೊಳು
ಬಂದಿರುವೆ ಬಿಟ್ಟ ಬಾಣವ ನಾನು ಮಧ್ಯ ಮಾರ್ಗದಿ
ಯೀಗ ತುಂಡು ಮಾಡಿರುವೆನು ಮುಂದರೆ ಬಾರೆಲಾ ॥

ಕುಬೇರ: ಯಲೊ ಲಂಡರೋಳ್ ವುದ್ದಂಡನಾದ ವಜ್ರ ಮುಷ್ಠಿಯೆ ನೀನು ಬಿಟ್ಟುಕೊಂಡು ಬಂದಿರುವ ಬಾಣವನ್ನು ಮಧ್ಯದಲ್ಲಿ ತುಂಡು ಮಾಡಿರುತ್ತೇನೆ. ನೀನು ವುದ್ಯಾನವನದಲ್ಲಿ ಬಂದು ನಿಲ್ಲುವುದರೊಳಗಾಗಿ ಮಾರಿ ಯದುರಿಗೆ ಕುರಿಕೋಣವನ್ನು ಹಿಡಿದು ಯಾವರೀತಿ ವಪ್ಪಿಸುತ್ತಾರೋ ಅದೇ ರೀತಿ ನಿನಗೆ ಮರಣಗಾಲ ವದಗಿತೆಂದು ತಿಳಿ ರಣದೊಳಗೆ ನಿಲ್ಲುವಂಥವನಾಗು. ಭಂಡ ಖಂಡ್ರಿಸುವೆನು ನಿನ್ನ ಚೆಂಡ.

ವಜ್ರಮುಷ್ಠಿ: ಯಲಾ ಕುಬೇರನೆ ಯನ್ನ ಬಾಣವನ್ನು ಮಧ್ಯದಲ್ಲೆ ತುಂಡು ಮಾಡಿರುವೆನೆಂದು ಗರ್ವದಿಂದ ಮಾತನಾಡುತ್ತೀಯ. ಅಧಮನೆ ನನ್ನ ಸಾಹಸವನ್ನು ಯುದ್ಧದಲ್ಲಿ ನಿಂತು ನೋಡುವಂಥವನಾಗು ಗೊತ್ತಾಗುತ್ತದೆ ಯುದ್ಧಕ್ಕೆ ನಿಲ್ಲುವಂಥವನಾಗು.

(ವಜ್ರಮುಷ್ಠಿ ಮರಣ)