ಕುಬೇರ: ಭಲೈ ಸಾರಥಿ ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಅಮರಾವತಿಯನ್ನು ಪರಿಪಾಲಿಸುವ ದೇವೇಂದ್ರ ಮಹಾರಾಜನು ಕರೆಸಿದ ಕಾರಣ ಬಾಹೋಣವಾಯ್ತು. ದೇವೇಂದ್ರ ರಾಜರು ಧಾವಲ್ಲಿ ಇರುವರು ತೋರಿಸುವನಾಗು.

ಕುಬೇರ: ನಮೋ ನಮೋ ದಿವಿಜಕುಲಚಂದ್ರ ತಿಳಿ ರಾಜೇಂದ್ರ.

ಇಂದ್ರ: ನಿಮಗೈಶ್ವರ‌್ಯವಾಗಲಿ ಬಾರೈ ಯಕ್ಷ ರಾಜೇಂದ್ರ ಕೀರ್ತಿಗುಣ ಸಾಂದ್ರ.

ಕುಬೇರ: ನಮ್ಮನ್ನು ಕರೆಸಿದ ಕಾರಣವೇನು ಅಪ್ಪಣೆಯಾಗಲಿ.

ದೇವೇಂದ್ರ: ಅಯ್ಯ ಯಕ್ಷಪತಿಯಾದ ಕುಬೇರನೆ ಕೇಳು. ಈ ದಿವಸ ನಮ್ಮ ದೇವನಗರಿಯಲ್ಲಿ ಸರ್ವ ಅಲಂಕಾರ ವಿಹಾರಗಳಿಂದ ಹರುಷಗೊಳ್ಳಬೇಕೆಂದು ನನ್ನ ಮನಭರಿತವಾಗಿ ನಿಮ್ಮಗಳ ಸರ್ವರಾದಿಯಾಗಿ ಕರೆಸಿರುತ್ತೇನೆ ವಿಶ್ರಾಂತಿಯನ್ನು ಮಾಡುವಂಥವರಾಗಿರಿ.

ಕುಬೇರ: ಅಯ್ಯ ರಾಜೇಂದ್ರ ನಿಮ್ಮ ಇಷ್ಟದಂತಾಗಬಹುದು ವಿಶ್ರಮಿಸಿಕೊಳ್ಳುತ್ತೇವೆ.

ದೇವೇಂದ್ರ: ಯಲಾ ಚಾರನೆ  ನಮ್ಮ ಇಂದ್ರ ನಗರದಲ್ಲಿ ಆನಂದದಿಂದ ಸರಸ ಸಲ್ಲಾಪ ಸುಖಾನಂದ ನಾಟ್ಯಗಳನ್ನಾಡುವ ರಂಭಾ ವೂರ್ವಶಿಯರನ್ನು ಆಸ್ಥಾನಕ್ಕೆ ಬರಮಾಡುವನಾಗು.

(ರಂಭಾ ವೂರ್ವಶಿ ಬರುವಿಕೆ)

ಪದ

ದೇವ ಜಗದೋದ್ಧಾರ ಅಪಾರ ಕರುಣಾಕರ
ಸುರವರ ಪೂಜಿತ ಸುರವರ ಸೇವಿತ
ಪರಮ ಕೃಪಾಕರ ದೇವರ ದೇವನೆ ॥ದೇವ ಜಗದೋದ್ಧಾರ ॥

ಸಾರಥಿ: ಈ ಸಭಾ ಮಧ್ಯ ಮಹಲಿಗೆ ದಯಮಾಡಿ ಬಂದವರು ನೀವು ಧಾರಮ್ಮ ತಾಯೆ ಕರುಣದಿಂದೆನ್ನ ಕಾಯೆ.

ರಂಭಾ: ಅಪ್ಪಾ ಸಾರಥಿ ವಿಕಸಿತವಾದ ಹಸನ್ಮುಖದಿಂದ ತ್ರೈಲೋಕಕ್ಕೆ ಸುಂದರರಂತೆ ಬಂದು ನಿಂದಿರುವ ನಾರೀಮಣಿಯರು ನೀವು ಧಾರೆಂದು ಕೇಳುತ್ತೀಯ. ನಮ್ಮ ವೃತ್ತಾಂತವನ್ನು ವಿವರಿಸಿ ಹೇಳುತ್ತೇನೆ ಕೇಳಪ್ಪಾ ಸಾರಥಿ. ಅಣ್ಣಯ್ಯ ಸಾರಥಿ ಈ ತ್ರಿಭುವನದಲ್ಲಿ ವಿರಾಜಿಸುತ್ತಿರುವ ಆ ಇಂದ್ರ ಲೋಕದಲ್ಲಿ ದೇವೇಂದ್ರ ರಾಜರ ಸಮ್ಮುಖದೊಳು ವಿಲಾಸ ಹರುಷದಿಂದ ನಾಂಟ್ಯಗಳನ್ನು ಮಾಡುವಂಥ ರಂಭಾ ಎಂಬ ಹೆಣ್ಣು ನಾನೇ ಅಲ್ಲವೇನಪ್ಪಾ ಸಾರಥಿ.

ಸಾರಥಿ: ಹಾಗಾದರೆ ನಮ್ಮಿಂದ ಆಗಬೇಕಾದ ಕೆಲಸವೇನಮ್ಮಾ ಮಾತೆ.

ರಂಭ: ಅಂಣೈಯ್ಯ ಸಾರಥಿ ನಮ್ಮ ನಾಟ್ಯ ಮಂದಿರದಲ್ಲಿರುವ ಊರ್ವಶಿಯನ್ನು ಕರೆದುಕೊಂಡು ಬರುವಂಥವನಾಗು.

ಸಾರಥಿ: ಈ ಸಭಾಮಧ್ಯಮಹಲಿಗೆ ಬಂದವರು ನೀವು ಧಾರಮ್ಮ ತಾಯಿ ಕರುಣದಿಂದೆನ್ನ ಕಾಯೆ.

ಊರ್ವಶಿ: ಅಂಣೈಯ್ಯ ಸಾರಥಿ ಹೀಗೆ ಬಾ ಮತ್ತೂ ಹೀಗೆ ಬಾ. ಅಪ್ಪಾ ಸಾರಥಿ ನಮ್ಮನ್ನು ಧಾರೆಂದು ಕೇಳುತ್ತೀ ನಮ್ಮ ಸಂಗತಿಗಳ ಹೇಳುತ್ತೇನೆ ಕೇಳಪ್ಪ ಸಾರಥಿ. ಅಪ್ಪಾ ಸಾರಥಿ ಯೀ ಭುವನದೊಳು ಪ್ರಖ್ಯಾತಿಗೊಂಡಿರುವ ಅಮರಾವತಿ ಪಟ್ಟಣಕ್ಕೆ ಅರಸರಾದ ದೇವೇಂದ್ರ ರಾಜರ ಸಮ್ಮುಖದೊಳಗೆ ವಿನೋದನಾಟ್ಯಗಳನ್ನಾಡುವ ಊರ್ವಶಿಯೆಂದು ತಿಳಿಯುವಂಥವನಾಗಪ್ಪಾ ಸಾರಥಿ.

ಸಾರಥಿ: ನಮ್ಮಿಂದ ಆಗಬೇಕಾದ ಕಾರ‌್ಯಾರ್ಥವೇನಮ್ಮಾ ತಾಯೆ.

ಊರ್ವಶಿ: ಅಂಣಯ್ಯ ಸಾರಥಿ ನಿನ್ನಿಂದ ಆಗಬೇಕಾದ ಕಾರ‌್ಯವೇನೆಂದರೆ ನಮ್ಮ ಅಕ್ಕಯ್ಯನವರಾದ ರಂಭೆಯನ್ನು ಬೇಗನೆ ತೋರಿಸುವನಾಗು.

ಸಾರಥಿ: ಯಿಲ್ಲಿ ಯಾರಿದ್ದಾರಮ್ಮ ಮಾತೆ ಲೋಕಪ್ರಖ್ಯಾತೆ.

ವೂರ್ವಶಿ: ನಮೋ ನನೋ ಅಕ್ಕಯ್ಯ.

ರಂಭಾ: ಆಶೀರ್ವಾದಮಸ್ತು ಬಾರಮ್ಮಾ ತಂಗಿ ವೂರ್ವಶಿ.

ರಂಭ: ಅಮ್ಮಯ್ಯ ತಂಗಿ ನನ್ನ ಮನದ ಬಯಕೆಯನ್ನು ನಿನ್ನ ಸಂಗಡ ಹೇಳುವುದಕ್ಕೆ ಅಸದಳವಾಗಿದೆ. ಯಮನ ಪಾಶವನ್ನಾದರು ಗೆಲ್ಲಬಹುದು ಪ್ರಜ್ವಲಿಸುವ ಅಗ್ನಿಯೊಳಗಾದರು ನಿಲ್ಲಬಹುದು ಸ್ಮರನ ತಾಪವನ್ನು ಮಾತ್ರ ಸಹಿಸಲಾರೆನಮ್ಮಾ ತಂಗಿ ನೀ ಕೋಮಲಾಂಗಿ.

ವೂರ್ವಶಿ: ಅಕ್ಕಯ್ಯ ಸ್ಮರನ ತಾಪವನ್ನು ಸಹಿಸಲಾರೆನೆಂದು ಹೇಳುವೆಯಲ್ಲಾ, ಈ ಸಂತಾಪವನ್ನು ನಮ್ಮ ಒಡೆಯನಾದ ಇಂದ್ರನ ಆಸ್ಥಾನದಲ್ಲಿ ಕಳೆಯಲು ಈಗ ಸಮಯವಾಗಿರುವುದು ಹೋಗೋಣ ಬಾರೆ ಅಕ್ಕಯ್ಯ.

ರಂಭಾ: ಹಾಗಾದರೆ ಹೋಗೋಣ ನಡಿಯೆ ತಂಗಿ ವೂರ್ವಶಿ.

ಕಂದ

ಏನು ಅಂದವೊ ಅನುಪಮ ಗುಣ  ಕರುಣಾಕರ ಏನು ವೈಭವವೊ ॥
ಇಂದು ನೋಡಲು ಈ ಅಂದವನ್ನು ಸಂಭ್ರಮವಾಗಿ ತೋರುತಿಹುದು
ಏನು ಅಂದವೊ ॥ಮಂದಗಾಮಿನಿ ನೋಡು ಬೇಗನೆ
ಯಿಂದ್ರ ಕುಳಿತಿಹ ಅಷ್ಟಾದಿಕ್ಪಾಲಕರ ನೋಡು ಬೇಗನೆ ॥

ರಂಭಾವೂರ್ವಶಿ: ಯಿಂದ್ರಾದಿ ಅಷ್ಟದಿಕ್ಪಾಲಕರೆ ನಿಮಗೆ ನಮಸ್ಕರಿಸುವೆವು.

ಯಿಂದ್ರ: ನಿಮಗೆ ಮಂಗಳವಾಗಲಿ ಬರುವಂಥವರಾಗಿರೆ ರಂಭಾ ವೂರ್ವಶಿಯರೆ. ನಮ್ಮ ರಾಜಾಸ್ಥಾನ ದಲ್ಲಿ ನೀವು ಗಾನವನ್ನು ಹಾಡಿ ನಾಟ್ಯದಿಂದ ನಮ್ಮಗಳ ಮನಸ್ಸಂತೋಷಪಡಿಸುವಂಥವರಾಗಿರಿ.

ಪದ

ಗಾನ – ವೀಣೆಯ ಕೊಡು ಯನ್ನ ಪಾಣಿಯ ಬೇಗನೆ
ವೀಣಾ ವಿಲೋಚನೆ ಜಾಣೆ ನೀ  ಕೇಳೆ
ಪಿಡಿದು ವೀಣೆಯ ನಾಡಿ ನುಡಿಸುತ ಸಂತೋಷಪಡಿಪೆ
ನಿಲ್ಲೆಲೆ ಜಾಣೆ ಗಡಣಾವ ನೋಡಿ ॥
ರಾಗಬೇಡಂಗಳ ಅನುವಾಗಿ ತೋರಿಸುವೆನು
ಈಗ ಬಲುಬೇಗನೆ ಸೊಗಸ ತೋರಿಸುವೆ ॥

ರಂಭಾ ವೂರ್ವಶಿ: ಮಹಾರಾಜರೇ ತಮ್ಮ ಆಜ್ಞಾನುಸಾರವಾಗಿ ಗಾನವನ್ನು ಹಾಡಿಕೊಂಡು ನಾಂಟ್ಯವನ್ನು ಮಾಡುತ್ತೇವೆ ಮುಂದೇನಪ್ಪಣೆ.

ಪದ

ಸುಂದರಿ ವೈಯ್ಯರಿ  ಮದನತ ದಾರಿ  ಅಂದವ
ತೋರಿ ನಮ್ಮ ಮರುಳುಗೊಳಿಸುವೆ  ಸುರತರು ಕೇಳಿ
ಬಂದರು ಇಲ್ಲಿಗೆ  ಮರುಳುಗೊಳಿಸದಿರಿ ಈ ದಿನ ॥

ದೇವೇಂದ್ರ: ನಾರಿಯರೊಳು ನೀತಿಯರಾದ ಮದನ ಸುಂದರಿಯರೆ ನಿಮ್ಮ ಗಾನ ಸೇವೆಯಿಂದ ನಮ್ಮ ಮನಸ್ಸಂತೋಷಗೊಳಿಸಿದಿರಿ. ಇನ್ನೂ ವೊಂದು ಗಾನವನ್ನು ಹಾಡಿ ನಿಮ್ಮ ಮಂದಿರಕ್ಕೆ ತೆರಳುವರಾಗಿರಿ.

ಪದ

ಬಾರೊ ಪ್ರಿಯ ಮುಖವ ತೋರೊ ಮುಗುಳುನಗೆಯ ಬೀರಲಾ
ಅರಸಿ ಅರಸಿ ನಿಮ್ಮ ನಾವು ಸರಸದಿ ಬಂದಿರುವೆವು ಪ್ರಿಯ
ಕುಶಲದಿಂದ ಕುಚವ ಪಿಡಿದು ಸರಸವಾಡುವ ಬಾರೊ ಪ್ರಿಯಾ ॥

ರಂಭ ವೂರ್ವಶಿ: ಮಹಾರಾಜರೆ ನಿಮ್ಮ ಇಷ್ಟದಂತೆ ನಾಂಟ್ಯವಂ ಮಾಡಿ ಗಾನವನ್ನು ಮಾಡಿರುತ್ತೇವೆ ಮತ್ತೇನಪ್ಪಣೆ.

ದೇವೇಂದ್ರ: ಯಲಾ ಚಾರಕ ಈ ರಂಭಾದಿ ವೂರ್ವಶಿಯರಿಗೆ ಆನಂದವಾದ ಬಹುಮಾನಗಳನ್ನು ಕೊಡುವಂತೆ ತಿಳಿಸುವನಾಗು.

ಸಾರಥಿ: ಅಮ್ಮಾ ರಂಭಾ ವೂರ್ವಶಿಯರೆ ತಕ್ಕ ಬಹುಮಾನಗಳನ್ನು ತೆಗೆದುಕೊಂಡು ಹೊರಡುವಂಥವರಾಗಿ.

ಪದ

ಬಂದೆ ಬಂದೆ ರಾಜೇಂದ್ರನೆ  ಅಂದದಿಂದ ಕೇಳಿರೀಗ
ಇಂದ್ರನಗರವನ್ನು ಬಿಟ್ಟು ಮುಂದೆ ಹೋಗಿರಿ ॥

ಸಾರಥಿ: ದೇವಲೋಕದ ಅಷ್ಟದಿಕ್ಪಾಲಕರೆ ಇಗೋ ನಿಮಗೆ ಸಲಾಂ ಕೊಡುತ್ತೇನೆ ನನ್ನ ಮಾತನ್ನು ಚೆನ್ನಾಗಿ ಲಾಲಿಸುವರಾಗಿರಿ.

ಇಂದ್ರ: ಬಾಲನೆ ನೀನು ಯಾರು? ಮಾನವನೆ ನಿನ್ನ ನಾಮಾಂಕಿತವನ್ನು ತಿಳಿಸಲು ಯಿಲ್ಲಿಗೆ ಬಂದ ಕಾರಣವೇನು ಜಾಗ್ರತೆ ಹೇಳುವನಾಗು.

ಚಾರ: ಸ್ವಾಮಿ ಅಮರಾವತಿಯನ್ನಾಳುವ ಅರಸರೆ ಏನು ಇಲ್ಲ ವೊಂದು ಚುಟುಕು ಕೆಲಸಕ್ಕೆ ಬಂದಿದ್ದೇನೆ.

ಇಂದ್ರ: ಅದು ಏನು ತಿಳಿಸುವನಾಗು.

ಚಾರ: ಹೇ ಸ್ವಾಮಿ, ತೇಜೋವತಿ ನಗರವನ್ನು ಆಳುವಂಥ ನಮ್ಮ ಮಹಾರಾಜರಾದ ರಕ್ತಬೀಜಾಸುರರು ನಿಮ್ಮ ಅಮರಾವತಿಪಟ್ಟಣವನ್ನು ಅವರ ಸ್ವಾಧೀನ ಮಾಡಿಕೊಂಡು ನಿಮ್ಮಗಳನ್ನು ಸೆರೆಯೊಳಗೆ ಯಿಡುವಂತೆ ತಿಳಿಸಿ ಬರುವುದಾಗಿ ಹೇಳಿ ಕಳುಹಿಸಿದ್ದಾರೆ ಇರಲೊ ಹೋಗಲೋ.

ಕಂದ

ಅಸುರ ರಾಜನ ದೂತನೆ ಲಾಲಿಸು ನಿಮ್ಮ ದೊರೆ ರಾಜನು
ಬಿಡಿಸುವನೆ ನಗರವಂ  ಒಳಿತಾಯಿತು ಬರಲಿ ನೋಡುವೆನವನಂ ॥

ಇಂದ್ರ: ಎಲಾ ಚಾರನೆ ಆ ರಕ್ಕಸನು ಇಂದ್ರ ನಗರವನ್ನು ಬಿಡಿಸಿ ನನ್ನನ್ನು ಸೆರೆಯೊಳಗಿಡಿಸಿ ನಮ್ಮ ಪಟ್ಟಣವನ್ನು ಅವನು ಸ್ವಾಧೀನಪಡಿಸಿಕೊಳ್ಳುವನಂಥೊ ಒಳ್ಳೆಯದು ಜಾಗ್ರತೆಯಾಗಿ ಬರಹೇಳು ನೋಡುವೆನು.

ಪದ

ಯಾರೆಲೊ ದಿವಿಜನೆ ಬಾರೆಲೊ ರಣದಲಿ  ಧೀರತನವ ತೋರೋ
ಬೇಗದಿ ನಿನ್ನನು ರಣದಲಿ ಕೆಡಹಿ ಕುಡಿಯುವೆ ರಕ್ತವನು ॥

ರಕ್ತಬೀಜಾಸುರ: ಯಲವೊ ಅಧಮ ದೇವೇಂದ್ರನೆ ಈ ಧರೆಯೊಳು ನೀನು ಮೆರೆಯುವುದಂ ಬಿಡು. ನಾನು ರಾಜಾಧಿರಾಜರೆಲ್ಲರನ್ನು ಮುರಿದು ಬಲಗುಂದಿಸಿ ಅವರಿಂದ ಕಪ್ಪಕಾಣಿಕೆಯಂ ತೆಗೆದುಕೊಳ್ಳುವ ರಕ್ತಬೀಜಾಸುರನು ರಣ ಪ್ರಚಂಡನೆಂದು ತಿಳಿಯದೆ ನಮ್ಮ ಚಾರನ ಸಂಗಡ ಬರಹೇಳು ಎಂಬುದಾಗಿ ಗರ್ವದಿಂದ ಹೇಳಿರುತ್ತೀಯ ಇಂದ್ರನೆ ಈಗ ಯುದ್ಧಕ್ಕೆ ನಿಲ್ಲುವನಾಗು.

ಪದ

ಕೂಗುವೆ ಯಾಕೆಲೆ ಕುನ್ನಿ  ನಿನ್ನ ತಲೆಗೇರಿತು ಸನ್ನಿ
ಬಗೆಯದೆ ಯಾತಕೆ  ಬಗುಳುವೆ ಯನ್ನೊಳು
ಮಾಡೆಲೊ ಯುದ್ಧವ ಬದ್ಧವಾಗಿರುವೆ

ಇಂದ್ರ: ಯಲವೊ ಖೂಳರಕ್ಕಸರೇ ಹಸಿದಿರುವ ಮಾರಿಯ ಮುಂದೆ ಕುರಿಯನ್ನು ತೋರಿದಂತೆ ನೀನು ಬಂದು ಬಗುಳುತ್ತೀಯ. ಇಗೊ ನೋಡು ಈ ಬ್ರಹ್ಮಾಸ್ತ್ರದಿಂದ ನಿನ್ನ ರಕ್ತವನ್ನು ತೆಗೆದು ನನ್ನ ಕಡೆಯ ಭೂತಗಳಿಗೆ ಆಹುತಿಯನ್ನು ಕೊಡುವೆನು ಖೂಳ ರಣಾಗ್ರಕ್ಕೆ ನಿಲ್ಲುವಂಥವನಾಗು.

ರಕ್ತಬೀಜಾಸುರ: ಯಲಾ ಮೂಢನೆ ನನ್ನ ಸಾಹಸವನ್ನು ನೋಡದೆ ಮನಸ್ಸಿಗೆ ಬಂದಂತೆ ಬಗಳುತ್ತೀಯ ಅಧಮ ರಣಾಗ್ರಕ್ಕೆ ನಿಲ್ಲುವನಾಗು.

(ರಣಾಗ್ರಇಂದ್ರನ ಮೂರ್ಛೆ)

ಪದ

ಯಾರೋ ಬಾರೆಲಾ  ಮೂಢ ದನುಜನೆ
ಗಾಢದಿಂದ ನಿನ್ನ ಶಿರವ ತರಿದು ಬಿಡುವೆನು॥
ಅಮರ ಒಡೆಯನ ಕೊಂದೆನೆನುತಲಿ
ಗರ್ವಪಡುವೆಯ ಅಧಮ ನೋಡೋ ॥

ಯಮ: ಎಲಾ ಅಧಮನಾದ ರಕ್ತ ಬೀಜಾಸುರನೆ ನಮ್ಮ ದೇವೇಂದ್ರನನ್ನು ಗಾಯಗೊಳಿಸಿರುವೆ ನೆಂದು ನಿನಗೆ ಬಹಳ ಗರ್ವ ಬಂದಿರುವುದೊ ಅಧಮ. ದೇವೇಂದ್ರನನ್ನು ಕೊಲ್ಲುವುದಕ್ಕೆ ನಿನ್ನಿಂದ ಏನಾದೀತು ಅಧಮ ಅಮರೇಂದ್ರನು ಚೇತರಿಸಿಕೊಂಡು ಬರುವುದರೊಳಗಾಗಿ ನಿನ್ನ ಶಿರವನ್ನು ಕಡಿಯದೆ ಬಿಡುವುದಿಲ್ಲ ಅಧಮಾ ನನ್ನ ಸಂಗಡ ರಣಾಗ್ರಕ್ಕೆ ಎದುರಾಗು ಮೂಢ.

ಪದ

ನೋಡು ನೋಡು ರವಿಜತನಯ  ಕೇಡು ಮಾಳ್ಪುದ
ಯಿಡಿದು ನಿನ್ನ  ಭಂಗಿಸೀಗ ಸೆರೆಯೊಳಿಡುವುದ ॥

ರಕ್ತಬೀಜಾಸುರ: ಎಲೈ ಯಕ್ಷರೊಳಧ್ಯಕ್ಷನಾಗಿ ನರಪ್ರಾಣಿಗಳನ್ನು ಹಿಂಸೆ ಮಾಡುವ ಯಮನೆ, ಹಿಂದೆ ದಿವಿಜೇಶ್ವರನಂ ಗೆಲಿದು ಮೆರೆದಿರುವೆನೆಂದು ಯನ್ನನ್ನು ಭಂಗಿಸುವೆನೆಂದು ಬಂದಿರುತ್ತೀಯ. ನಾಲಿಗೆಯನ್ನು ಕಿತ್ತು ನೆಲಪಾಲು ಮಾಡಿ ನಿನ್ನನ್ನು ಸೆರೆಯೊಳಗಿಡಿಸುತ್ತೇನೆ ನೀನು ಯುದ್ಧ ಮಾಡಲು ಬಂದಿರುತ್ತೀಯ ಅಧಮ ಯುದ್ಧಕ್ಕೆ ನಿಲ್ಲುವಂಥವನಾಗು.

(ಯಮನ ಕೈಸೆರೆ)

ರಕ್ತಬೀಜಾಸುರ: ಯಲವೊ ಯಮನೆ ಗಂಡುಗಲಿಯಾದ ರಕ್ತ ಬೀಜಾಸುರನೆಂದು ತಿಳಿಯದೆ ಯುದ್ಧಕ್ಕೆ ಬಂದೆಯ ಅಧಮಾ ಸೆರೆಮನೆಗೆ ನಡೆ.

ಪದ

ಬಾರೋ ಬಾರೆಲೋ ಖೂಳ ದೈತ್ಯನೆ
ನಿನ್ನ ಮೊರೆಯ ಕ್ಷಣದಿ ತೋಡುವೆ ॥

ವರುಣ: ಯಲಾ ದುರಾತ್ಮನಾದ ರಕ್ತ ಬೀಜಾಸುರನೆ ಆಹಾರವಿಲ್ಲದೆ ಅಣಕಿಸುವ ರವಿಯಂತೆ ಶೌರ‌್ಯ ಪರಾಕ್ರಮವನ್ನು ತೋರುತ್ತಾ ಯಿರುವ ಎನ್ನಯ ಜಲಾರ್ಭದಿಂದ ನಿನ್ನನ್ನು ಈ ರಣದಲ್ಲಿ ಬಲಿಹೊಡೆದು ಯಮನಾಲಯಕ್ಕೆ ಕಳುಹಿಸಿಕೊಡುತ್ತೇನೆ. ಯುದ್ಧ ಮಾಡುವಂಥವನಾಗಲಾ ಮೂಢ.

ಪದ

ಎದ್ದು ಬಾರೆಲಾ ಸ್ವೇದರಾಜನೆ ನಿನ್ನ
ಮುದ್ದನು ನಾನು ನೋಡುವೆ ॥

ರಕ್ತ ಬೀಜಾಸುರ: ಯಲವೊ ನೀಚರೋಳ್ ಹುಚ್ಚನಂದದಿ ನೀನು ಪ್ರಸಿದ್ಧಿಯನ್ನು ಹೊಂದಿರುತ್ತೀಯ. ಅಧಮ ಇಂದ್ರ ಯಮ ಅವರು ಸಹ ಮೃತರಾದಂತೆ ಸೆರೆಯೊಳ್ ಸಿಕ್ಕಿ ಬಿದ್ದಿರುವುದಂ ನೋಡಿ ಅರಿಯದೆ ಇಲ್ಲಿ ಕಾದಿ ಜೈಸುವೆನೆಂದು ಬಂದಿರುವ ಪರಾಕ್ರಮವು ಎಷ್ಟರಮಟ್ಟಿಗೆ ಇರಬಹುದು ಅಧಮ ಯುದ್ಧಕ್ಕೆ ಎದುರಾಗು.

(ವರುಣನ ಮೂರ್ಛೆ)

ರಕ್ತಬೀಜಾಸುರ: ಯಲಾ ಮೂದೇವಿ ಅಧಮ ಯನ್ನಲ್ಲಿ ರಣಾಗ್ರಕ್ಕೆ ಬಂದೆಯಾ ಮೂರ್ಖ. ಎಲಾ ಚಾರನೆ ಇವನನ್ನು ತೆಗೆದುಕೊಂಡು ಸೆರೆಮನೆಯೊಳಗಿಡುವಂಥವನಾಗು ಎಂದು ಮಂತ್ರಿಗೆ ತಿಳಿಸುವನಾಗು.

ತ್ರಿವುಡೆ

ಯಾರೊ ಯಲವೋ ಮೂರ್ಖ ದೈತ್ಯ
ಖೂಳ ನಿಂನ ಶಿರವ ತರಿದು ಭೂತಗಳಿಗೆ
ಬಲಿಯ ಕೊಡುವೆನೂ  ಕ್ಷಣದೋಳು ॥

ಕುಭೇರ: ಎಲವೋ ಪಾಮರನಾದ ರಕ್ತ ಬೀಜಾಸುರನೆ ಕೇಳುವನಾಗು. ಅಧಮ ನಿನ್ನ ತಲೆಯನ್ನು ಖಂಡ್ರಿಸಿ ಭೂತ ಬಳಗಕ್ಕೆ ಆಹುತಿಯನ್ನು ಕೊಡುತ್ತೇನೆ. ಅಲ್ಲದೆ ಯನ್ನ ಧಾರೆಂದು ತಿಳಿದಿರುವೆ ನಿನ್ನ ಸಂಹರಿಸಿ ಯಮ ವರುಣರನ್ನು ಕರೆಸುತ್ತೇನೆ ನೋಡು.

ಪದ

ಧನಪತಿ ಕೇಳೆಲಾ ಧನಮದದಿಂದಲಿ
ರಣದಿ ಕೆಡಹಿ ನಿನ್ನ ಸೆರೆಯೊಳಗಿಡಿಸುವೆ ॥

ರಕ್ತ ಬೀಜಾಸುರ: ಯಲಾ ಅಧಮನಾದ ಧನಪತಿ ಕುಭೇರನೆ ಕೇಳುವನಾಗು ಧನಮದ ಗರ್ವದಿಂದ ಈ ದಿವಸ ಬಂದು ನನ್ನಲ್ಲಿ ಯುದ್ಧಕ್ಕೆ ಸನ್ನದ್ಧನಾಗಿರುತ್ತೀಯ ಅಧಮ ಈಗಲೇ ನಿನ್ನನ್ನು ನನ್ನ ಮಂತ್ರಿಯಿಂದ ಹಿಡಿಸಿ ಸೆರೆಯೊಳಗೆ ಇರಿಸುತ್ತೇನೆ ನೋಡೆಲಾ ಕುಬೇರ.

ಪದ

ಮಂತ್ರಿ ನೀ ಕೇಳಯ್ಯ  ಬೇಗಾದಿಂದಿವರುಗಳ ಹಿಡಿದು
ಸೆರೆಯೊಳಗಿರಿಸು ತಡಮಾಡದೆ ಯಿವರ

ರಕ್ತಬೀಜಾಸುರ: ಅಯ್ಯ ಮಂತ್ರಿ ಶ್ರೇಷ್ಠನೆ ಯೀ ದಿವಸ ನನ್ನೊಡನೆ ಯುದ್ಧಕ್ಕೆ ಬಂದಿರುವ ಯೀ ಖೂಳರಾದ ಇಂದ್ರ ಅಗ್ನಿ ಯಮ ನೈರುತ್ಯ ವರುಣ ವಾಯುವ್ಯ ಕುಭೇರ ಯೀಶಾನ್ಯ ಯಿವರೆಲ್ಲರನ್ನು ತೆಗೆದುಕೊಂಡು ಹೋಗಿ ಸೆರೆಮನೆಯೊಳಗೆ ಇರಿಸುವಂಥವನಾಗು ನಡೆ.

ಮಂತ್ರಿ: ರಾಜೇಂದ್ರನ ಅಪ್ಪಣೆಯಂತೆ ಇಂದ್ರಾದಿ ಅಷ್ಟಾ ದಿಕ್ಪಾಲಕರನ್ನು ಸೆರೆಯೊಳಗೆ ಯಿರಿಸುತ್ತೇನೆ. ಇಂದ್ರಾದಿ ಅಷ್ಟ ದಿಕ್ಪಾಲಕರೆ ನೀವೆಲ್ಲರೂ ಬೇಗನೆ ಹೊರಡಿರಿ. ನಿಮ್ಮಗಳನ್ನು ಕಾರಾಗೃಹದಲ್ಲಿ ಸೆರೆಯಾಗಿ ಯಿಡಲು ಅಪ್ಪಣೆಯಾಗಿರುತ್ತೆ ಬೇಗನೆ ಹೊರಡಿಸು.

ಭಾಮಿನಿ

ವರ ಮಂತ್ರಿಯೆ ಪೇಳುವೆ ಲಾಲಿಸು ಯೀ
ದಿವಿಜರಂ ಗೆಲಿದು  ಸೆರೆಯೊಳಗಿರಿಸು ನಡೆ
ಈ ಚತುರ್ದಶಿ ಭುವನವನು
ನಾನಾಳುವೆ ವಿಭವದಿ  ಅಂಗ ಭೋಗದಿ
ಏಳು ಸಾವಿರಮಂದಿ ಸ್ತ್ರೀಯರಿರುವರು
ಯೀ ಸಮಯದಿ  ಹರನ ಪೂಜೆಗೆ ಸಮಯವಿಲ್ಲೈ ಮಂತ್ರಿ ॥

ರಕ್ತಬೀಜಾಸುರ: ಅಯ್ಯ ಮಂತ್ರಿವರ‌್ಯ, ಯೀ ಯಿಂದ್ರಾದಿ ಅಷ್ಟದಿಕ್ಪಾಲಕರನ್ನೆಲ್ಲ ಸೆರೆಯೊಳಗೆ ಇರಿಸಿದಂತೆ ಆಯಿತು. ಇನ್ನು ಮೇಲೆ ಇಂದ್ರನಗರದಲ್ಲಿರುವ ಏಳು ಸಾವಿರಮಂದಿ ಸ್ತ್ರೀಯರುಗಳನ್ನು ತಕ್ಕ ಭೋಗಾಸಕ್ತಿಯಿಂದ ಸಂತೋಷಗೊಳಿಸಿ ಯೀ ಭೂಲೋಕವನ್ನು ನಾನೇ ಆಳುತ್ತೇನೆ ನೋಡು. ಶಹಬಾಸ್ ಯೀ ಸಮಯದಲ್ಲಿ ಆ ಹರನ ಪೂಜೆಯಂ ಮಾಡಲು ನನಗೆ ಸಮಯ ಇಲ್ಲವು ಮಂತ್ರಿಶ್ರೇಷ್ಟನೆ.

ಪದ

ರಕ್ಕಸರ ವುಪಟಳದಿ  ಸಿಕ್ಕಿ ನೊಂದೆವು ವಿಧಿಯೆ
ಹರಿಹರರೊಳು ಪೋಗಿ  ತಿಳೆಸೋಣವೆಂದರೆ
ಇಂಥ  ಬಂಧನದೊಳು ಮೀರಿ ಪೋಗುವದೆಂತೈ ದೇವ ॥

ಇಂದ್ರ: ಅಯ್ಯೋ ಹರಿಹರ ಶ್ರೀಹರಿ ದಾನವಾರಿ ಇಂದ್ರಾದಿ ಅಷ್ಟ ದಿಕ್ಪಾಲಕರಾದ ನಾವುಗಳು ಅಸುರನಾದ ರಕ್ತ ಬೀಜಾಸುರನ ವುಪಟಳದಿ ಸೆರೆಯೊಳಗೆ ಸೇರಿ ಬಂಧನವನ್ನು ತಾಳಲಾರೆವಲ್ಲ ಶ್ರೀಹರಿ ಹೀಗೆ ಚಿಂತಿಸಿದರೆ ಫಲವಿಲ್ಲಾ ಯೀ ಕಳ್ಳರಕ್ಕಸನು ಕಾಣದ ಹಾಗೆ ಹೋಗಿ ಸೃಷ್ಠಿಕರ್ತನಾದ ಬ್ರಹ್ಮನಿಗೆ ನಮ್ಮ ಕಷ್ಟಗಳನ್ನು ತಿಳಿಸಿ ಈ ದುಷ್ಟರನ್ನು ಕೊಲ್ಲುವ ವುಪಾಯವನ್ನು ಮಾಡುವೆನು ಇರಲಿ. ನಾನೋರ್ವನೆ ಬ್ರಹ್ಮನಲ್ಲಿಗೆ ಹೋಗುವೆನು.

ಸಾರಥಿ: ಈ ವರ ಸಭೆಗೆ ದಯಮಾಡಿ ಬಂದಂಥ ನೀವು ಧಾರೈ ದೇವ ಮಹಾನುಭಾವ.

ಬ್ರಹ್ಮ: ಭಲೈ ಮನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ ಸಾರಥಿ. ಈ ವರ ಸಭೆಗೆ ಬಂದಂಥವರು ನೀವು ಧಾರೆಂದು ವಿಧವಿಧದಿಂದ ಬಿನ್ನವಿಸಿ ಕೇಳುತ್ತೀಯ ಆದರೆ ನಮ್ಮ ವಿದ್ಯಮಾನವನ್ನು ಹೇಳುತ್ತೇನೆ ಲಾಲಿಸು ಭಲೈ ಸಾರಥಿ ವಟಪತ್ರ ಶಯನನಾದ ಶ್ರೀ ಹರಿಯ ಕರುಣದಿಂದ ವುದ್ಭವಿಸಿದ ಆದಿ ಬ್ರಹ್ಮನೆಂಬ ನಾನು ಹುಟ್ಟಿದೊಡನೆ ರಕ್ಕಸರು ಯನ್ನೊಡನೆ ಕಾದಿದರು ಆಗ ನಾನು ಮಹಾ ವಿಷ್ಣುವಿನಲ್ಲಿ ದೂರಿಡಲು ಆ ಮಹಾವಿಷ್ಣುವು ಎನ್ನ ವಾರ್ತೆಯಂ ಕೇಳಿದ ತಕ್ಷಣವೆ ಚಕ್ರದಿಂದ ಆ ತುಂಟ ರಾಕ್ಷಸರನ್ನು ಕೊಂದು ಧಾತ್ರಿಯ ಮೇಲೊರಗಿಸಲು ಅನಂತರ ಶ್ರೀ ಹರಿಯು ಯನಗೆ ಸೃಷ್ಠಿಯಂ ಮಾಡೆಂದು ಹೇಳಲು ಯಲ್ಲಾ ಜೀವರಾಶಿಗಳನ್ನು ಸೃಷ್ಟಿ ಮಾಡುತ್ತಿರುವೆ.

ಇಂದ್ರ: ಹೇ ಬ್ರಹ್ಮ ದೇವ ಆ ನೀಚರಾದ ಖೂಳ ರಾಕ್ಷಸರನ್ನು ನೀನು ಸಂಹರಿಸಿ ನಾವುಗಳು ಅವರ ಸೇವೆಯೊಳಗೆ ಇರುವುದನ್ನು ತಪ್ಪಿಸಿ ನಮ್ಮ ವಸ್ತು ವಾಹನಗಳನ್ನು ಯನ್ನ ವಶದಲ್ಲಿ ಯಿರುವಂತೆ ಮಾಡಿಕೊಡಬೇಕೈ ಮಹಾನುಭಾವ.

ಪದ

ಅಹಹ ಯೆನಗೈಯ್ಯಲೀಗ  ಮುಂದೆ ತೋಚದು
ಕ್ರೂರ ರಾಕ್ಷಸರಾದರು ಹರನೋಳ್ ವರವ
ಪಡೆದಿಹರು ಪರಿಯ ಪೇಳಲೆನಗೆ ಈ ವಿಧ  ತಿಳಿಯದಾಯಿತೆ ॥

ಬ್ರಹ್ಮ: ಹೇ ಅಮರಾವತಿಯ ಅರಸನಾದ ದೇವೇಂದ್ರ ಲಾಲಿಸುವನಾಗು ಆ ದುಷ್ಟ ದಾನವನಾದ ರಕ್ತ ಬೀಜಾಸುರನು ಘೋರವಾದ ತಪಸ್ಸನ್ನು ಮಾಡಿ ನಮ್ಮಗಳನ್ನು ಮೆಚ್ಚಿಸಿದ್ದರಿಂದ, ನಾವು ಅವರಿಗೆ ವರವನ್ನು ಕೊಟ್ಟ ಕಾರಣದಿಂದ ಈ ಕಾಲದಲ್ಲಿ ನಿಮ್ಮಗಳಿಗೆ ಯಿಂಥ ಕಷ್ಟವು ಬರುವಂತದ್ದಾಯಿತು. ಆದ್ದರಿಂದ ಇಂದ್ರನೆ ಇದು ನನ್ನಿಂದ ಆಗುವುದಿಲ್ಲಾ ಯಾವ ಹದನವನ್ನು ಮಾಡಲಿ.

ಭಾಮಿನಿ

ಯೀಶನಂ ಕರುಣಾಶರಣಂ  ಜಗದೀಶನಂ
ರಜತಾದ್ರಿ ವಾಸನಂ  ಅಖಿಲ ಭೂಪೇಶನಂ
ಸ್ಮರಭಸ್ಮಭೂಷನಂ  ಶಂಭು ಸರ್ವೇಶನಂ ನಾಂ ನುಡಿಪೆ ಭಕ್ತಿಯಿಂದಂ ॥

ಬ್ರಹ್ಮ: ಆಹಾ ಹರನೆ ಗಂಗಾಧರನೇ ಇವತ್ತಿನ ದಿವಸ ಇಂದ್ರಾದಿ ಅಷ್ಟದಿಕ್ಪಾಲಕರಿಗೆ ಬಂದಿರುವ ಕಷ್ಟಗಳು ನಮ್ಮದಲ್ಲವೇ ದೇವ ಹಿಂದೆ ಆ ರಕ್ತ ಬೀಜಾಸುರನಿಗೆ ನಾವು ಕೊಟ್ಟಂಥ ವರವು ಯೀ ಕಾಲದಲ್ಲಿ ಯಿಂದ್ರಾದಿ ಅಷ್ಟದಿಕ್ಪಾಲಕರು ಅವರ ಸೆರೆಯೊಳಗೆ ಸಿಕ್ಕಿ ನರಳುವಂಥ ಕಷ್ಟವೂ ಬರುವಂತದ್ದಾಯಿತಲ್ಲಾ ಯೀ ಕಷ್ಟವು ನಿಮ್ಮದಲ್ಲವೇ ದೇವ. ಅಯ್ಯ ಇಂದ್ರನೆ ಜಾಗ್ರತೆ ಆ ಕೈಲಾಸಪತಿಯಾದ ಪರಶಿವನಲ್ಲಿ ಹೋಗಿ ಈಗ ವದಗಿರುವ ಕಷ್ಟವನ್ನು ಬಿನ್ನೈಸಿಕೊಳ್ಳೋಣ ನಡೆ ಹೋಗೋಣ.

(ಈಶ್ವರ ಪಾರ್ವತಿಯರು ಬರುವಿಕೆ)

ಪದ

ಶಂಕರಗಿರಿಜೇಶ  ಸದಾಶಿವ  ಶಂಕರ ಗಿರಿಜೇಶ
ಲಂಕಾಧೀಶ ಬಂಧವಿನಾಶ  ಪಯಜಾತ ಪ್ರೋಷ ಸದಾಶಿವ
ಪಾರ್ವತಿ ನಿಮಿತೆ  ಸರ್ವಸಂಪ್ರೀತೆ  ಆಗಮಶೃತಿ ಘೋಶ
ಸದಾಶಿವ ಶಂಕರಗಿರಿಜೇಶ ಸದಾಶಿವ  ಶಂಕರ ಸದಾಶಿವ ॥

ಬ್ರಹ್ಮ: ನಮೋ ನಮೋ  ಶಂಕರನೆ ಹೇ  ಮೃತ್ಯುಂಜಯ ಪಾಲಿಸು ಪಾಲಿಸು ॥

ಈಶ್ವರ: ನಮೋ ನಮೋ ಬ್ರಹ್ಮದೇವ ನಿಮಗೆ ಮಂಗಳವಾಗಲಿ ಬರುವಂಥವರಾಗಿ ಹೇ ಬ್ರಹ್ಮ ಇಂದ್ರರೆ ನೀವುಗಳು ನಮ್ಮ ಕೈಲಾಸಕ್ಕೆ ಬಂದ ವಿಚಾರವೇನು ತಿಳಿಸುವುದಾಗಿರಿ ಅಲ್ಲದೆ ನಿಮ್ಮ ಮುಖವನ್ನು ನೋಡಿದರೆ ಖಿನ್ನವಾಗಿರುವುದು. ಸಂಗತಿಯೇನು ತಿಳಿಸುವರಾಗಿರಿ.

ಪದ

ನಿಮಗೆ ಬಂದ  ಕೇಡ ಪೇಳಿ  ಬೇಗ
ಯನ್ನೊಡನೆ ಬ್ರಹ್ಮೇಂದ್ರಾರೆ ಪೇಳಿ ಯನ್ನೊಡನೆ ॥

ಈಶ್ವರ: ಹೇ ಬ್ರಹ್ಮ ದೇವನೆ ನಿನಗೆ ಯಾರಿಂದ ಏನು ತೊಂದರೆ ವುಂಟಾಗಿರುವುದು ಆ ಸಂಗತಿಯನ್ನು ಸಾಂಗದಿಂದ ನನ್ನೊಡನೆ ಹೇಳುವನಾಗು ಅನಂತರ ನೋಡೋಣ.