ಪದ

ಪೇಳುವೆ ಲಾಲಿಸು ಶಂಕರ
ಖಳನಾದಂಥ ಬೀಜಾಸುರನ ವಿವರವ
ಮದ ಅಹಂಕಾರದಿ ರಕ್ಕಸ ಬಂಧಿಸಿ  ಇಂದ್ರನ ನಗರವ ಗೆಲ್ಸಿ ॥

ಬ್ರಹ್ಮ: ಹೇ ಜಗತ್ಕರ್ತ ಹೇ ಶಂಕರ ರಕ್ತ ಬೀಜಾಸುರನೆಂಬ ಖೂಳ ದೈತ್ಯನು ಮದ ಅಹಂಕಾರದಿಂದ ಮೆರೆಯುತ್ತಾ ಇಂದ್ರನಗರವನ್ನು ವಶಪಡಿಸಿಕೊಂಡಿರುತ್ತಾನೆ. ದೇವನಗರವನ್ನು ಅವನ ಸ್ವಾಧೀನ ಮಾಡಿಕೊಂಡು ಬಹಳ ಗರ್ವದಿಂದ ಮೆರೆಯುತ್ತ ಇರುವನಾದ್ದರಿಂದ ದೇವೇಂದ್ರನನ್ನು ಸಂಗಡ ಕರೆದುಕೊಂಡು ತಮ್ಮ ಸನ್ನಿಧಿಗೆ ಬಂದಿರುವೆನು  ಇವರುಗಳನ್ನು ವುಳಿಸಿ ಆ ರಾಕ್ಷಸರ ವುಪಟಳವನ್ನು ತಪ್ಪಿಸುವ ಹದನವನ್ನು ಹೇಳಬೇಕೈ ದೇವ.

ಪದ

ಹಿಂದೆ ಕೊಟ್ಟಿರುವಂಥ ವರದ ಬಲದಿಂದಲಿ
ಮದಅಹಂಕಾರದಿಂದಲಿ  ಮೆರೆಯುತ್ತಲಿರುವ
ದಾನವ ಸಂಹರಿಸಲು ಯನ್ನಿಂದಲಾಗದು
ಶ್ರೀಹರಿ ಕೃಪೆಯಿಂದ ನೋಡೋಣ ತೆರಳಿ ॥

ಈಶ್ವರ: ಅಯ್ಯ ಬ್ರಹ್ಮನೆ ಇಂದ್ರಾಧಿಪನೆ ಯೇನ ಹೇಳಲಿ ಆ ರಕ್ತಬೀಜಾಸುರನು ಬಾಲ್ಯದಲ್ಲಿರು ವಾಗಲೆ ತಪಸ್ಸು ಮಾಡಿ ನಮ್ಮಗಳನ್ನು ಮೆಚ್ಚಿಸಿ ನಮ್ಮಿಂದ ಚಿರಂಜೀವಿಯಾದ ವರವನ್ನು ಪಡೆದಿರುವನು. ಆದ್ದರಿಂದ ನಾವೆಲ್ಲರೂ ಕೂಡಿ ಕ್ಷೀರಾಬ್ಧಿಶಯನನಾದ ನಾರಾಯಣನ ವೈಕುಂಠಕ್ಕೆ ಹೋಗೋಣ ನಡಿಯಿರಿ.

(ವಿಷ್ಣು ಬರುವಿಕೆ)

ಪದ

ಶ್ರೀಹರಿಯಾದವ ಗೋಪಾಲ ಹರಿಕೇಶವ
ಮಾಧವ ಗೋವಿಂದಾ ಹರೆ ಗೋವಿಂದಾ
ಗೋಪಾಲ ಹರಿ  ಗರುಡ ಗಮನ ಹರಿ
ವೈಕುಂಠವಾಸ ಗೋವಿಂದ ಪಾಲಿಸಿ ಕಾಪಾಡೈ ಹರಿ ॥

ಬ್ರಹ್ಮ: ಜಯ ಜಯ ಜಗದ್ಭರಿತನಾದ ಶ್ರೀ ಮಹಾವಿಷ್ಣುವೆ ನಿಮ್ಮ ಪಾದಗಳಿಗೆ ನಮಸ್ಕರಿಸಿದೆ.

ವಿಷ್ಣು: ಬ್ರಹ್ಮ, ಇಂದ್ರ ರುದ್ರಾದಿಗಳಿಗೆ ಜಯವಾಗಲಿ ಬರುವರಾಗಿರಿ.

ಪದ

ಬಂದ ಕಾರ‌್ಯಗಳೇನು  ಇಂದು ಶೇಖರ ನೀನು ಚಂದದಿ ತಿಳಿಸೈ ಬ್ರಹ್ಮದೇವನೆ ॥

ವಿಷ್ಣು: ಹೇ ಬ್ರಹ್ಮ ರುದ್ರ ಇಂದ್ರಾದಿಗಳೆ ನೀವುಗಳೆಲ್ಲಾ ಜೊತೆಯಾಗಿ ಬಂದ ಸಂಗತಿಯನ್ನು ನೋಡಿದರೆ ನನಗೆ ಆತಂಕವಾಗುತ್ತಿದೆ. ನಿಮಗೇನಾಯಿತು ತಿಳಿಸುವರಾಗಿರಿ.

ಪದ

ದಾನವರ ವುಪಟಳವು  ಬಲವಾಯಿತು
ಧರೆಯೊಳಗೆ ಕಾಯುವ ಪರಿಯನು
ಅರುಹಾಲು ಬೇಕೈ ॥

ಬ್ರಹ್ಮ: ಹೇ ಜಗದ್ಭರಿತನಾದ ಶ್ರೀ ಹರಿಯೆ ಈ ದಿವಸ ಆ ಖೂಳ ರಕ್ತಬೀಜಾಸುರನ ವುಪಟಳವನ್ನು ಸಹಿಸಲಾರದೆ ಇಂದ್ರಾದಿಗಳು ಬಂದು ನನ್ನ ಸಂಗಡ ಮೊರೆಯಿಡುವಂಥವರಾದರು. ನಾನು ಇವರನ್ನು ಸಂಗಡ ಕರೆದುಕೊಂಡು ಹೋಗಿ ಶಿವನಿಗೆ ಪೇಳಲು ಅವರು ನಮ್ಮಗಳನ್ನು ಕರೆದುಕೊಂಡು ತಮ್ಮ ಸನ್ನಿಧಿಗೆ ಬಿಜ ಮಾಡಿದರು. ಹೇ ದೇವ ನಮ್ಮಗಳನ್ನು ಕಾಪಾಡುವ ಹದನವನ್ನು ಹೇಳಿ ನಮ್ಮನ್ನು ವುದ್ದರಿಸ ಬೇಕೊ ದೇವ ಮಹಾನುಭಾವ.

ಪದ

ಹರನು ತಾ ಬೆದರಿದ ನರರೂಪ ಲಾಲಿಸೈ ನಮಗೆ
ಬಂದಿಹ ಕಷ್ಟ ಪರಿಹರಿಸೋ ದೇವ ॥

ಇಂದ್ರ: ಹೇ ದೇವನೆ, ಈಶ್ವರ ದೇವರೇ ನೀವು ನಮ್ಮ ಮೇಲೆ ಕರುಣವಿಟ್ಟು ದುಷ್ಟನಿಂದ ನಮ್ಮನ್ನು ಕಾಪಾಡಬೇಕು.

ಭಾಮಿನಿ

ಪಂಚ ಜಾತಕದಲಿ ಬೆದರದೆ ಪಂಚ
ಕೋಶಂಗಳಿಗೆ ಸೋಂಕದೆ  ಪಂಚವಿಷಯಂಗಳಿಗೆ
ಸಿಲ್ಕದೆ  ಪಂಚ ಕೋಶಂಗಳು  ಸಂಜಲಕೆ
ಮೈಗೊಡದೆ  ರಾಜಿಪ  ಪಂಚತತ್ವವದು
ಮುಂದೆ ತೋರುವ  ಮಹಿಮನೆ ಸಲಹೊ
ಮೂಜಗವ ನಾರಾಯಣ ॥

ಬ್ರಹ್ಮ: ಹೇ ವೈಕುಂಠ ನಾಯಕನಾದ ಶ್ರೀ ಹರಿಯೆ ನಿಮ್ಮಲ್ಲಿಗೆ ಬಂದ ಕಾರಣವೇನೆಂದರೆ ಸುರೇಂದ್ರಾದಿಗಳು ರಾಕ್ಷಸರ ವುಪಟಳವನ್ನು ತಾಳಲಾರದೆ ನನ್ನಲ್ಲಿಗೆ ಬಂದರು. ನನಗೂ ಅಸಾಧ್ಯವಾದ ಕಾರಣ ನಾವುಗಳೆಲ್ಲರೂ ಶಂಕರನಲ್ಲಿಗೆ ಹೋಗಿ ಬಿನ್ನವಿಸಲು ಶಂಕರನು ನನ್ನಿಂದಲೂ ಸಾಧ್ಯವಾಗದು ಎಂದು ಸರ್ವರು ತಮ್ಮ ಸನ್ನಿಧಿಗೆ ಬಂದಿರುವೆವು. ಆದ್ದರಿಂದ ಶ್ರೀಮನ್ ನಾರಾಯಣನೆ ಆ ರಕ್ಕಸರ ನಿಗ್ರಹವನ್ನು ಮಾಡಿ ನಮ್ಮನ್ನು ಕಾಪಾಡುವನಾಗೈ ದೇವ.

ವಿಷ್ಣು: ಹೇ ಶಂಕರನೆ ಹಿಂದೆ ದಕ್ಷನಂ ವಧಿಸಲು ದೃಢ ವೀರಭದ್ರನನ್ನು ಪಡೆದವನೆ, ಶೂರನಾದ ರಕ್ತ ಬೀಜಾಸುರನಂ ವಧಿಸಲಾರದೆ ಹೀಗೆ ಸಂಕಟ ಪಡುತ್ತಿರುವೆ ಆ ರಾಕ್ಷಸನಿಗೆ ಬೇಡಿದ ವರವನ್ನಿತ್ತು ಅವನಿಗೆ ಬಲವಂ ಕೊಟ್ಟಿರುವೆ. ಹೇ ಗೌರೀಶ ಈ ಜಗತ್ತನ್ನು ಹಾಳು ಮಾಡುವಂಥವನಾದೆ. ಹೇ ಶಂಕರ ಆಗ ವಿಹಿತನಾಗಿ ವರವಂ ಕೊಟ್ಟಂತೆ ಈಗ ಈ ದೇವತೆಗಳನ್ನು ನೀನೇ ಕಾಪಾಡು.

ಕಂದ

ವೊಂದು ಬಿಂದುವು ರಕ್ತ ಭೂಮಿಗೆ ಬೀಳೆ
ವೊಂದು ಕೋಟಿ ರಾಕ್ಷಸರು ವುದಿಸುವರು
ಮುಂದಿನ ತೆರನೇನ ಮಾಡಲಿ ॥

ವಿಷ್ಣು: ಹೇ ಶಂಕರನೆ ಹೇಬ್ರಹ್ಮನೆ, ನಾನೆಷ್ಟು ಸಾರಿ ನೋಡಿದರೂ ಈ ಕಾರ‌್ಯ ನೆರವೇರುವಂತೆ ಕಾಣುವುದಿಲ್ಲ. ನೀವೀರ್ವರುಆ ದನುಜಾರಿಯಾದ ರಕ್ತಬೀಜಾಸುರನಿಗೆ ಕೊಟ್ಟಿರುವ ವರದಂತೆ ಅವನ ಶರೀದಲ್ಲಿ ವೊಂದು ರಕ್ತ ಬಿಂದು ಬಿದ್ದಲ್ಲಿ ಅವನ ರಾಕ್ಷಸರು ವೊಂದು ಕೋಟಿ ಉದ್ಭವಿಸುವರು. ಅವನನ್ನು ಹ್ಯಾಗೆ ಸಂಹರಿಸುತ್ತೀರಿ. ಶಂಕರನು ಕೊಟ್ಟ ವರಗಳ ಬಲದಿಭ್ರಷ್ಟ ಮೆರೆಯುತಿಹನು ಸೃಷ್ಟಿಯೊಳು ಗೆಲುವುಪಾಯವೇನೈಯ್ಯ.

ಹೇ ಪರಮೇಶ್ವರನೆ,ಆ ಖೂಳ ರಾಕ್ಷಸನನನ್ನು ಗೆಲ್ಲುವುದಕ್ಕೆ ನಮ್ಮಗಳ ಸಾಹಸಗಳೇನು ನಡೆಯುವುದಿಲ್ಲ.ನೀವುಗಳು ಕೊಟ್ಟಿರುವ ವರಗಳಂ ಅಳಿಯಲು ಯತ್ನವೇನಿರುವುದು ಜಾಗ್ರತೆ ಹೇಳೈಯ್ಯ ಗೌರೀಶ.

ಪದ

ನಾನೇನ ಹೇಳಲೋ ಶ್ರೀ ಹರಿಶೌರಿ ಹಿಂದೆ
ದಾನವರಿಗೆ, ವರವ ಕೊಟ್ಟಂತೆ ಕೊಟ್ಟಿರುವೆ
ವರಗಳನು ಯಿದಕೇನ ಮಾಡಲು ಯತ್ನಿಸೈ ದೇವ॥

ಈಶ್ವರ: ಹೇ ಶ್ರೀಹರಿಯೆ ಹಿಂದೆ ಅನೇಕ ಕೋಟಿ ರಾಕ್ಷಸರಿಗೆ ಕೊಟ್ಟ ವರಗಳಂತೆ ಈಗಲು ಯೀ ರಾಕ್ಷಸನಿಗೆ ವರವನ್ನು ಕೊಟ್ಟಿರುವೆನು. ಹೇ ಮಾಧವನೆ ನೀನು ಕೈಗೊಳ್ಳದಿದ್ದರೆ ಭಕ್ತರು ಉಳಿವರೆ ದೇವ. ಜಗತ್ಪಾವನ ಚಿಂತಿಸಿ ಹೇಳುವನಾಗು.

ವಿಷ್ಣು: ಹೇ ಶಂಕರನೆ ದೇವಿ ಸ್ತೋತ್ರ ಮಾಡಲು ಸರ್ವರು ಹೊರಡುವರಾಗಿರಿ.

ಪದ

ಚಂದ್ರಧರನ ಚಲುವೆಯಿಂದ
ಚಂಡ ಖಳರನ್ನು ಬೇಗ ಚಂಡನಾಡಿಸುವೆನು
ನಾನು ಇರಲಿ ಗೊಡವೆ

ವಿಷ್ಣು: ಕೇಳಿರೈಯ್ಯ ಹರವಿರಂಚಿ ಇಂದ್ರಾದಿಗಳೆ ಈ ರಕ್ತ ಬೀಜಾಸುರನೆಂಬ ಖಳನನ್ನು ಸಂಹರಿಸಲು ವೊಂದು ವುಪಾಯವನ್ನು ಹೇಳುತ್ತೇನೆ. ಸರ್ವರು ನಾನು ಹೇಳುವಂತೆ ಕೇಳುವರಾಗಿ. ಆದಿಶಕ್ತಿಯೆಂಬ ಅಂಬಿಕಾದೇವಿಯನ್ನು ಸ್ಥಾಪನೆ ಮಾಡಲು ಸರ್ವರು ಹೊರಡುವರಾಗಿ.

ಈಶ್ವರ: ಹೇ ದಾನವಾಂತಕನಾದ ಮಾಧವನೆ ದನುಜಾರಿಯೆಂಬ ಬಿರುದು ನಿನಗೆ ಸಲ್ಲುವುದಲ್ಲದೆ ಯಲ್ಲರಿಗೂ ಸಲ್ಲುವುದಿಲ್ಲ ನಿಮ್ಮ ಆಲೋಚನೆಗೆ ಬದಲು ಉತ್ತರವು ಇಲ್ಲ. ಆದಿಶಕ್ತಿ ಸ್ಥಾಪನೆಯಂ ಮಾಡಲು ಹೊರಡುವರಾಗಿರಿ.

ಪದ

ದೇವಿ ಮಾಂಪಾಲಯ ಲಲಿತೆ  ಪಾಲಿಸೆಮ್ಮ ತಾಯೆ ಬಂದು
ಪ್ರೇಮದಿಂದ ಸ್ತುತಿಸುವೆವು  ಬಾ ಬಾ ತಾಯಿ ಶಕ್ತಿದೇವಿ ॥
ಭಲಾ ಭಲಾ ವಿಷ್ಣು ಪೂಜಿತೆ ಮಾಯಾಲಲನೆ
ಮಂಗಳಮೂರ್ತಿಯೆ ಪಾಲಿಸಮ್ಮಾ ಭೂಜಾತೆ
ಜಯತು ಜಯತು ಮಂಗಳ ಮೂರ್ತಿಯೆ ॥

ಸರ್ವರು: ಹೇ ಮಂಗಳಾಕರೆ ಹೇ ಭೂಜಾತೆ ನಿನ್ನನ್ನು ನಾವುಗಳು ಸ್ತುತಿಸುವೆವು ನಮ್ಮಗಳಲ್ಲಿ ದಯವಿಟ್ಟು ಪಾಲಿಸೆಮ್ಮ ಶುಭಾಕರೆ ಪಾಹಿ ಪಾಹಿ.

(ಈಶ್ವರನ ಸ್ತೋತ್ರ)

ಕಂದ

ಆದಿಶಕ್ತಿಯೆ  ಮಾಯಾಶಂಕರಿ ನಿಗಮ ಗೋಚರಿ
ವಿಶ್ವಮಂದಿರೆ ನಾಮ ವತ್ಸಲೆ  ಸರ್ವಗುಣ ವಿನೋದಿತೆ
ಸುಜನಾರ್ಚಿತೆ  ರಕ್ಷಾವರಣೆ  ರಕ್ಷಿಸು ಮಂದಿರೆ ॥

(ಹರಿಹರಇಂದ್ರಯಮಬ್ರಹ್ಮ ಸ್ತೋತ್ರ)

ಪದ

ಬಾರಮ್ಮಾ ತಾಯೆ ಪಾರ್ವತಿದೇವಿ ಬಾರಮ್ಮ
ಬಾರೆ ಮಹೇಶ್ವರಿ  ಬಾರೆ ರುದ್ರಾಣಿಯಮ್ಮಾ
ಮಾಕಾಳಿಯಮ್ಮಾ ಶಾರದಾಂಬ  ಬಾರಮ್ಮ
ಹರಿಹರ ಇಂದ್ರಾದಿ ಕರೆಯುತಿರುವರು

(ಆದಿಶಕ್ತಿ ಪ್ರತ್ಯಕ್ಷ)

ಕಂದ

ಹರಿಹರ ಬ್ರಹ್ಮಾದಿಗಳು ಅಷ್ಟದಿಕ್ಪಾಲಕರು ಆದಿಶಕ್ತಿಮಯಂ ॥
ಕಾಳಿಕಂಕಾಳಿ ಮುರುಡಾಣಿ ಮೃತ್ಯುಂಜಯೆ
ಸರ‌್ವಭೂತ್ ಆದಿಶಕ್ತಿ ಮಹೇಶ್ವರಿ ಮಂತ್ರಾದಿ ದೇವತೆ
ಹೇ ರಾಮೇಶ್ವರಿ ಪ್ರಸನ್ನಳಾಗಿ ಬಂದಿರುವ ನಿಮ್ಮ
ಪಾದ ಪದ್ಮಂಗಳಿಗೆ ಅಭಿವಂದನೆಯ ಮಾಳ್ಪೆವೂ

ದೇವೇಂದ್ರ : ನಮೋ ನಮೋ ಶಾರದಾಂಬ ಮಹೇಶ್ವರಿ.

ದೇವಿ : ಐಶ್ವರ‌್ಯಮಸ್ತು ಬಾರೈಯ್ಯ ದೇವೇಂದ್ರ.

ವಿಷ್ಣು : ಮಹಾಕಾಳಿ ಆದಿಶಕ್ತಿ ನಿಮಗೆ ವಂದಿಸುವೆವು.

ದೇವಿ : ನಿನಗೆ ಮಂಗಳವಾಗಲಿ ಪರಮಾತ್ಮ.

ಹರ : ಸರ‌್ವಮಂಗಳೆ ಜಯವಾಗಲಿ ನಿನಗೆ.

ದೇವಿ : ಹರಾಸ್ತು ಯೆಂದು ನಂಬಿರುವೆನು.

ಬ್ರಹ್ಮ : ಸರ‌್ವಭೂತೆ ಆದಿಶಕ್ತಿ ನಿಮಗೊಂದಿಸುವೆವು.

ದೇವಿ : ದೀರ್ಘಾಯುಮಸ್ತು ಬಾರೈಯ್ಯ ಬ್ರಹ್ಮ.

ದೇವಿ: ಆಹಾ ಹರಿಹರ ಬ್ರಹ್ಮಾದಿಗಳೇ ಅಷ್ಟದಿಕ್ಪಾಲಕರೆ ನನ್ನನ್ನು ಈ ವನಾಂತರದಲ್ಲಿ ಸ್ತೋತ್ರವನ್ನು ಮಾಡಿದ ಕಾರ‌್ಯವೇನಿರುವುದು. ನಿಮ್ಮ ನಿಮ್ಮ ಅಂತರಂಗಗಳನ್ನು ನನ್ನಲ್ಲಿ ಮರೆಮಾಚದೆ ಹೇಳುವಂಥವರಾಗಿರಿ.

ಆದಿತಾಳ

ರಕ್ತ ಬೀಜಾಸುರನೆಂಬ  ದಾನವನಿಗೆ ಹರ ವಿರಿಂಚಿಗಳು
ಹರುಷದಿಂದ ವರವ ಕೊಟ್ಟು ಇರುವ ಕಾರಣಾ ॥

ವಿಷ್ಣು: ಆದಿಶಕ್ತಿ ನಿರಂಜನ ಸ್ವರೂಪಳೆ, ನಾವುಗಳು ನಿಮ್ಮನ್ನು ಸ್ತೋತ್ರ ಮಾಡಿದ ಕಾರಣವೇನೆಂದರೆ, ಈ ಧರೆಯೊಳಗೆ ರಕ್ತಬೀಜಾಸುರನೆಂಬ ದಾನವನಿಗೆ, ಹರವಿಧಿಯು ಆತನು ಮಾಡಿದ ತಪೋಬಲಕ್ಕೆ ಮೆಚ್ಚಿ ಆತನ ಶರೀರದಲ್ಲಿ ಒಂದು ತೊಟ್ಟು ರಕ್ತವು ಭೂಮಿಯ ಮೇಲೆ ಬೀಳಲು ನಿನ್ನಂಥ ರಾಕ್ಷಸರು ಅನೇಕ ಕೋಟಿ ಉತ್ಪತ್ತಿಯಾಗಲೆಂದು ವರವನ್ನು ಕೊಟ್ಟಿರುವ ಸಂಗತಿಯನ್ನು ಹೇಳುತ್ತೇನೆ ತಾಯೆ.

ಪದ

ಅಷ್ಟದಿಕ್ಪಾಲಕರನ್ನು  ಇಂದ್ರನಮರಾವತಿಯನ್ನೂ
ದುರುಳ ರಕ್ತಬೀಜಾಸುರನು  ಸೆರೆಯೊಳಿಟ್ಟು
ಬಂಧಿಸಿರುವ ಸುದ್ದಿಯ ಕೇಳವ್ವಾ ॥

ವಿಷ್ಣು: ಅಮ್ಮಾ ತಾಯೆ, ಇವರು ಕೊಟ್ಟಿರುವ ವರದಿಂದ ಭೂಲೋಕ ಭವರ್ಲೋಕ, ಮೇಲೋಕಗಳಿಗೆಲ್ಲಾ ಆವರಿಸಿಕೊಂಡು ಆ ದುರುಳರಕ್ಕಸನು ಲೋಕ ಕಂಟಕನಾಗಿ ದೇವತೆಗಳನ್ನು ಸೆರೆ ಹಿಡಿದು ನಿರ್ಬಂಧಪಡಿಸುತ್ತಿದ್ದಾನೆ. ಆತನ ಹಾವಳಿಯನ್ನು ತಡೆಯಲಾರದೆ ನಿಮ್ಮಲ್ಲಿ ಬಂದು ಮೊರೆ ಇಡಬೇಕಾಯ್ತು. ಆತನನ್ನು ಸಂಹಾರ ಮಾಡಿ ಕಾಪಾಡಬೇಕಮ್ಮಾ ಮಾತೆ.

ಪದತ್ರಿವುಡೆ

ಮುಟ್ಟಿ ದೈತ್ಯನ ಮುರಿದು ಎಳೆಯುವೆ
ಸೃಷ್ಟಿಯೊಳಗತಿ ಚೋದ್ಯವಲ್ಲವೆ ರಾಜ್ಯಗಧಿಪತಿಯಾಗಿ
ಯೀಗ ಮೆರೆಯುವ ಖಳನಾ ॥

ದೇವಿ: ಹೇ ಶ್ರೀಮನ್ ಮಹಾಲಕ್ಷ್ಮಿ ವಲ್ಲಭ, ಆ ದುರ್ಮುಖನಾದ ರಕ್ತಾಬೀಜಾಸುರನು ಅಮರಾವತಿ ನಗರವನ್ನು ಸೂರೆ ಮಾಡಿ ದಿಕ್ಪಾಲಕರನ್ನು ಸೆರೆಯೊಳಗೆ ಇಟ್ಟಿರುವನೆ, ವಳ್ಳೆಯದು. ಆ ಖೂಳ ರಾಕ್ಷಸರನ್ನು ಕೊಲ್ಲುವುದಕ್ಕೆ, ಯನ್ನಿಂದ ಆಗುವುದೆ, ಅವನನ್ನು ಕೊಲ್ಲುವುದಕ್ಕೆ ಹೋದರೆ ಹೆಣ್ಣು ಹೆಂಗಸು ಯುದ್ಧ ಮಾಡುವಳೆಂದು ಜನರು ಆಡಿಕೊಳ್ಳುವುದಿಲ್ಲವೆ, ಪತಿವ್ರತಾ ಶಿರೋಮಣಿಯಾದ ನಾನು ಆ ದುರಾತ್ಮನನ್ನು ಮುಟ್ಟುವುದಿಲ್ಲ ನೀವೆ ಕೊಲ್ಲುವಂಥವರಾಗಿರಿ ॥

ವಿಷ್ಣು: ಹೇ ಲೋಕ ಮಾತೆಯಾದ ಆದಿಶಕ್ತಿಯೆ, ಈ ಖೂಳನಾದ ನೀಚನು ಮನುಜರು ಮುನೀಂದ್ರರು ಮಾಡುವಂಥ ಯಜ್ಞಾದಿಗಳನ್ನು ಕೆಡಿಸಿ ನಮ್ಮ ಅಮರಾವತಿಯನ್ನು ಸೂರೆ ಮಾಡಿ ನಮ್ಮ ಎಲ್ಲ ಸುರರನ್ನು ಸೆರೆಯೊಳಗೆ ಇರಿಸಿರುತ್ತಾನೆ. ಇದೂ ಅಲ್ಲದೆ ಅವನ ಶರೀರದ ರಕ್ತವು ಈ ಭೂಮಿಯ ಮೇಲೆ ಒಂದು ತೊಟ್ಟು ಬಿದ್ದರೂ ಒಂದು ಕೋಟಿ ರಾಕ್ಷಸರು ವುತ್ಪತ್ತಿಯಾಗುವರು. ಅಂಥ ಖೂಳನನ್ನು ವಧಿಸುವುದಕ್ಕೆ ನಮ್ಮಿಂದ ಆದೀತೆ ತಾಯೆ, ನಮ್ಮನ್ನು ಕಾಪಾಡುವ ಬಗೆಯನ್ನು ತೋರುವಂಥವಳಾಗು.

ದೇವಿ: ಹೇ  ಪರಮ ಪಾವನ ಇದಕ್ಕೆ ಹರಿಹರ ಬ್ರಹ್ಮಾದಿಗಳೆಲ್ಲಾ ಚಿಂತೆಯನ್ನು ಮಾಡುವುದನ್ನು ನಾನು ನೋಡಿ ಸೈರಿಸಲಾರೆನು. ಆದುದರಿಂದ ಮುಂದಲ ವಿವರವನ್ನು ಹೇಳುತ್ತೇನೆ ಕೇಳು ॥

ಪದ

ಬಿಡು ಬಿಡು ಬಿಡು ಬಿಡು ಮನದೊಳು ದುಗುಡವ
ಮಿಡುಕದೆ ಹಿಡಿಯುವೆನವನಾ ಗಡಭಡೆ ಮಾಡುತ
ಬಿಡದಲೆ ದೈತ್ಯನ ಕಡಿಯುವೆ ಶಿರವ ಕುಡಿಯುವೆ ರಕ್ತವ ॥

ದೇವಿ: ಹೇ ಜಗತ್ಪತಿಯಾದ ಹರಿಯೆ ಹರಿಹರ ಬ್ರಹ್ಮ ತ್ರೈಮೂರ್ತಿಗಳು ಇಂದ್ರಾದಿ ಅಷ್ಟದಿಕ್ಪಾಲಕರು ಸರ್ವರಾದಿಯಾಗಿ ಆ ತೇಜೋವತಿಯ ವುದ್ಯಾನದಲ್ಲಿ ಬಂದು ನನ್ನ ಸ್ತೋತ್ರವನ್ನು ಮಾಡುತ್ತಾ ಯಿರಿ. ನಿಮ್ಮ ಸೈನ್ಯವನ್ನೆಲ್ಲ ಸಿದ್ಧಪಡಿಸಿಕೊಂಡು ವುದ್ಯಾನವನಕ್ಕೆ ನಡೆಯಿರಿ. ನಾನು ಸಖಿಯರ ಸಂಗದಿಂದ ನಟನಾ ಮೇಳದ ಸ್ತ್ರೀಯಳಾಗಿ ಮೋಹಿನಿಯ ವೇಷಮಂ ತಾಳ್ದು ಆ ವುದ್ಯಾನವನಕ್ಕೆ ಬರುತ್ತೇನೆ ನಡೆಯಿರಿ ॥

(ದೇವಿಯು ಮೋಹಿನಿ ವೇಷಧಾರಿಯಾಗಿ ಬರುವಿಕೆ)

ಮೋಹಿನಿ: ಅಪ್ಪಾ ಮನುಷ್ಯನೆ ಅತಿನೂತನವಾದ ಶೃಂಗಾರವಾಗಿ ರಂಜಿಸುತ್ತಿರುವ ರಂಗಮಂಟಪಕ್ಕೆ ಬಂದಿರುವರು ತಾವು ಧಾರೆಂದು ಕೇಳುತ್ತೀಯ ಮುತ್ತಿನ ಮಣಿ ಹೀಗೆ ಬಾ ॥ಅಪ್ಪಾ ಮನುಜ ಈ ಚತುರ್ದಶ ಭುವನ ಮಧ್ಯದಲ್ಲಿ ನೆಲೆಯಾಗಿರುವ ರಜತಾದ್ರಿಯು ಅಲ್ಲಿಗೆ ನೆಲೆಯಾಗಿರುವ ಶಿವನನ್ನು ನೆನೆದು, ಈ ಜಗತ್ತಿಗೆ ವಡೆಯನಾದ ಶ್ರೀಹರಿಯ ಅನುಜೆಯೆಂದು ಪ್ರಸಿದ್ಧಳಾಗಿ ಈ ತೇಜೋವತಿಯ ನಗರದ ವುಪವನದಲ್ಲಿ ನೆಲೆಸಿರ್ಪ ಮೋಹಿನಿದೇವಿಯೆಂದು ಕರೆಯುವರಪ್ಪ ಸಾರಥಿ ಇದು ನಿನಗೆ ಯಾವ ನೀತಿ

ಅಪ್ಪ ಮನುಜ ಈ ರಾಜಸಭೆಗೆ ಬಂದ ಕಾರಣವೇನೆಂದರೆ ಯನ್ನ ಸಖೀಮಣಿಯಾದ ಮಂತ್ರದೇವಿಯನ್ನು ಆಸ್ಥಾನಕ್ಕೆ ಕರೆದುಕೊಂಡು ಬಾರಪ್ಪ.

ಸಖಿ: ಅಪ್ಪಾ ಮನುಜ ಈ ತೇಜೋವತಿಯ ವುದ್ಯಾನವನದಲ್ಲಿ ಇರುವಂಥ ಆ ಸುಂದರಿಯಳ ಮನವರಿತು ಸೇವೆಯ ಮಾಳ್ಪ ಮಂತ್ರದೇವಿಯೆದು ತಿಳಿಯುವಂಥವನಾಗಪ್ಪ ಸಾರಥಿ. ಈ ವರ ಸಭೆಗೆ ಬಂದ ಕಾರಣವೇನೆಂದರೆ ನಮ್ಮ ಅರಸಿಯಾದ ಮೋಹಿನಿ ಅಮ್ಮಯ್ಯ ಧಾವಲ್ಲಿ ಯಿರುವಳು ತೋರಿಸುವಂಥವನಾಗಪ್ಪ ಮುದ್ದು ಮುಖದ ಚದುರ. ನಮೋ ನಮೋ ಅಮ್ಮಯ್ಯ ನಿಮಗೆ ವಂದಿಸುವೆನು.

ಮೋಹಿನಿ: ನಿನಗೆ ಮಂಗಳವಾಗಲಿ ಬಾರಮ್ಮ ಸಖೀಮಣಿ.

ಸಖಿ: ಅಮ್ಮಯ್ಯ ದೊರೆಸಾನಿ, ಯಿಷ್ಟು ವಿಧವಾಗಿ ನನ್ನನ್ನು ಕರೆಸಿಕೊಂಡ ಅಭಿಪ್ರಾಯವೇನು ಜಾಗ್ರತೆ ತಿಳಿಯಪಡಿಸಮ್ಮಾ ದೇವಿ ॥

ಪದ

ತಾಳಲಾರೆನಮ್ಮ ಸಖಿಯೆ  ಚಂದ್ರ ಮುಖಿಯೆ ॥
ತಾಳಲಾರೆನಮ್ಮ ಸಖಿಯೆ ಮದನ ತಾಪವ ಸೈರಿಸಲಾರೆ ॥

ಮೋಹಿನಿ: ಅಮ್ಮಾ ಸಖೀಮಣಿ ವುಡುರಾಜನಂ ಪೋಲುವ ಸುಂದರರ ವಶಪೂರ್ತಿಯಂ ಮಾಡಿ ಸುಖಿಸುವಲ್ಲಿ ನಿರತಳಾಗಿರುವ ನಾನು ಪರಪುರುಷರನ್ನು ಬಯಸಿರುವುದನ್ನು ನಿನ್ನ ಮುಂದೆ ನಾನೇನಂಥ ಹೇಳಲಮ್ಮ ಸಖಿಯೆ, ಇದೂ ಅಲ್ಲದೆ ಮದನ ಮನ್ಮಥನ ತಾಪವನ್ನು ತಡೆಯಲಾರೆನಮ್ಮಾ ಸಖಿಯೆ ಯಿದು ನನಗೆ ಸುಖಿಯೆ.

ಪದ

ವುಪವನದಲ್ಲಿ ಪಂಥವ್ಯಾತಕೆ ನಾರಿ ಚಿಂತೆಯ
ನೀ ಬಿಟ್ಟು ಬಾರಮ್ಮ ಕಾಂತೆ ಕೇಳಮ್ಮ
ಬೆಡಗಿನಲಿ ಬಟ್ಟ ಮುಖದ ಬಾಲೆ ಚೆಲುವೆ
ನೀನಿಗ ಬಾರಮ್ಮ ಬೇಗ ಬಾರಮ್ಮಾ ॥

ಸಖಿ: ಅಮ್ಮಾ ತಾಯೆ ಮನದೊಳಗೆ ಭ್ರಮೆವುಂಟಾಯಿತೆಂದು ಮನಸ್ಸಿಗೆ ಬಂದಂತೆ ಕೂಗಿದರಾಯಿತೆ, ಅನರ್ಥಕ್ಕೆ ಕಾರಣವಾಗುವುದು. ಆದಕಾರಣ ಸ್ಮರನ ಬಾಧೆಯನ್ನು ಸ್ವಲ್ಪ ಸೈರಿಸಿಕೊಂಡಿರು.

ಅಮ್ಮಾ ತಾಯಿ ಆತ್ರ ಬಂದಾಗ ವಂತರವನ್ನು ಮಾಡಬಾರದು. ಈ ಲೋಕದಲ್ಲಿ ಹೆಣ್ಣು ಜನ್ಮ ಒಂದೆ ಹೊರ್ತು ಮದನ ತಾಪವನ್ನು ಯಾರೆ ನಮ್ಮವ್ವ ತಡೆದೋರು ನಮ್ಮಿಂದ ಸಾಧ್ಯವಿಲ್ಲವೂ ಹಣ್ಣಿರುವ ಮರಕ್ಕೆ ಗಿಳಿಗಳು ತುಂಬಿದಂತೆ ಗಾದೆ ಇರುವುದು. ಹೆಣ್ಣಿರುವ ಬಳಿಗೆ ಅನೇಕ ಪುರುಷರು ಬಂದೇ ಬರುವರು. ಸ್ವಲ್ಪ ಮಾತ್ರ ನಿಧಾನ ಮಾಡು ಬರುವರು.

ಈಶ್ವರ: ಅಯ್ಯ ಬ್ರಹ್ಮ ವಿಷ್ಣು ಇಂದ್ರಾದಿ ಅಷ್ಟ ದಿಕ್ಪಾಲಕರೆ ಸರ‌್ವರಾದಿಯಾಗಿ ಆ ರಕ್ತಬೀಜಾಸುರನ ಉಪವನಕ್ಕೆ ದೇವಿ ಮಾತಿನಂತೆ ಹೊರಡುವಂಥವರಾಗಿರಿ.

ಕಂದ

ಆದಿಶಕ್ತಿ ಮಹೇಶ್ವರಿ ಮುರುಡಾಣಿ ಮೃತ್ಯುಂಜಯೆ ॥
ಮಂತ್ರಾದಿದೇವದೇವತೆಯೆ ಸರ‌್ವರಾದಿಯಾಗಿ ನಿನ್ನಂ ಸ್ತುತಿಸುವೆ ನಾಂ ॥

ವಿಷ್ಣು: ಹೇ ದೇವಿ ಆದಿಶಕ್ತಿ ಮಹೇಶ್ವರಿ ಮಂತ್ರಾದಿ ದೇವತೆ ಸರ್ವರಾದಿಯಾಗಿ ಈ ಉಪವನದಲ್ಲಿ ನಿನ್ನನ್ನು ಸ್ತೋತ್ರ ಮಾಡಿರುತ್ತೇವೆ ಪ್ರತ್ಯಕ್ಷವಾಗಬೇಕು ದೇವಿ.

ಪದ

ದೇವ ಲಾಲಿಸಿ ನೀವು ಸ್ತೋತ್ರಗೈಯುವರೀಗ
ಬೆಂಬಲದಿ ನೀವೆಲ್ಲ ನಿಂತು ವರ್ನಿಸಿರಿ ॥

ದೇವಿ: ಮಹದೇವ ಪರಮಾತ್ಮನೆ ತಾವು ಎಲ್ಲರು ನನ್ನ ಸ್ತೋತ್ರವನ್ನು ಮಾಡಿದ ಕಾರಣ ಈ ವುಪವನದಲ್ಲಿ ಆ ದನುಜನನ್ನು ಸಂಹಾರ ಮಾಡಿ ನಿಮ್ಮ ಯಲ್ಲರನ್ನೂ ಕಾಪಾಡುತ್ತೇನೆ. ನನ್ನ ಬೆಂಬಲದಲ್ಲಿ ನಿಲ್ಲುವಂಥವರಾಗಿರಿ ಮಹದೇವ.

ವಿಷ್ಣು: ಹೇ ತಾಯಿ ಯಿವತ್ತಿನ ದಿವಸ ಸರ್ವರಾದಿಯಾಗಿಯು ನಿಮ್ಮ ಸೇವೆಯಲ್ಲಿ ನಿರತರಾಗಿರುತ್ತೇವೆ. ಆ ಖೂಳನಾದ ದನುಜನನ್ನು ಸಂಹರಿಸಿ ಯಮ್ಮನ್ನು ಕಾಪಾಡಬೇಕು ತಾಯಿ ಮಹದೇವಿ.

ದೇವಿ: ಹೇ ಲಕ್ಷ್ಮೀವಲ್ಲಭ ನಿಮ್ಮ ಇಷ್ಟದಂತೆ ಆ ದನುಜ ದೈತ್ಯನಾದ ರಕ್ತಬೀಜಾಸುರನ ಸಂಹಾರವನ್ನು ಮಾಡಿ ನಿಮ್ಮನ್ನು ಕಾಪಾಡುತ್ತೇನೆ. ನೀವುಗಳು ಎಲ್ಲರೂ ನನ್ನ ಬೆಂಬಲವಾಗಿ ನಿಲ್ಲುವಂಥವರಾಗಿರಿ.

ಪದ

ಅರಸ ಕೇಳಯ್ಯ ನಾ ಪೇಳುವ ಮಾತನು  ವನದ ಒಳಗೆ
ನಾರಿ ಬಂದು  ಮಾಡಿರುವ ಕೃತ್ಯವನ್ನು
ವನದೊಳಿರುವ ಚಾರಕರನ್ನು ನಾರೀಮಣಿಯು
ಹಾವುಕಪ್ಪೆ ನುಂಗಿದಂತೆ ನುಂಗುತಿರುವಳು ॥

ರಕ್ತಬೀಜಾಸುರ: ತಥಾಸ್ತು ಬಾರೈಯ್ಯ ಚಾರಕ, ಇಷ್ಟು ಗಾಬರಿಯಿಂದ ಬರಲು ಕಾರಣವೇನು ಹೇಳುವಂಥವನಾಗು.

ಚಾರಕ: ಅಯ್ಯ ದನುಜೇಂದ್ರನೆ, ಈ ದಿವಸ ನಿಮ್ಮ ವುದ್ಯಾನವನದಲ್ಲಿ ವೋರ‌್ವ ಸ್ತ್ರೀಯಳು ತನ್ನ ಜೊತೆಯಲ್ಲಿ ಇನ್ನೊಬ್ಬಳನ್ನು ಕೂಡಿಕೊಂಡು ಸರಸವನ್ನು ಆಡುತ್ತಿದ್ದಳು. ನಾನು ಕಂಡು ಮೋಹಿಸಿ ಮಾತನಾಡಿಸಲು ಮೂರ್ಖನಂತೆ ಆಕೆಯು ಸುಮ್ಮನೆ ಇದ್ದಿದ್ದರಿಂದ ತಮ್ಮಲ್ಲಿಗೆ ಕರೆತರಲು ಪ್ರಯತ್ನ ಮಾಡಿದೆವು. ಆಕೆಯು ಕೋಪದಿಂದ ಅಹಂಕಾರ ಮಾಡಿ ಕಾವಲುಗಾರನ ಕೊರಳನ್ನು ಮುರಿದು ನುಂಗುವಂಥವಳಾದಳು. ಅದನ್ನು ನೋಡಿ ನಾನು ತಪ್ಪಿಸಿಕೊಂಡು ಓಡಿಬಂದೆನೈ ದೊರೆಯೆ ನಿಮಗಾರು ಸರಿಯೆ.

ರಕ್ತಬೀಜಾಸುರ: ನಿಜವೇನೊ ಚಾರನೆ, ತ್ರಿಜಗವ ಸೋಲಿಪ ನಮ್ಮ ವುಪವನದಲ್ಲಿ ಅಂಥ ರಕ್ಕಸಿ ಇರುವಳೆ.

ರಕ್ತಬೀಜಾಸುರ: ಯಲಾ ಚಾರನೆ ನಮ್ಮ ವುದ್ಯಾನವನದಲ್ಲಿ ಅಂಥ ಸುಂದರವಾದ ಚಲುವೆಯಾದ ಹೆಣ್ಣು ಇರುವಳೆ. ವಳ್ಳೇದು ಹಾಗಾದರೆ ನಾನು ಅವಳನ್ನು ನೋಡಬೇಕಾದ ಪ್ರಯುಕ್ತ ನನ್ನ ಸೈನ್ಯಾಧಿಪತಿಗಳಾದ ಚಂಡಮುಂಡಾಸುರರನ್ನು ಜಾಗ್ರತೆಯಾಗಿ ಕರೆದುಕೊಂಡು ಬಾರೈ ಚಾರಕ.

ಚಂಡಾಸುರ: ಎಲೈ ಭೃತ್ಯನೆ ಅಖಿಲಾಂಡ ಕೋಟಿ ಬ್ರಹ್ಮಾಂಡದೊಳ್ ಅದ್ಭುತ ಭುಜಬಲ ಅರಸರು ಅವನಿಯಂ ಪಾಲಿಸೆ ಸಹಿಸಲಾರದೆ ದೇವಕಿನಂದನನು ಹಿತವಿಲ್ಲದೆ ಅಹಿತದಿಂದ ಅದಿತೀನಂದನರ ವೈರವಂ ಬೆಳೆಸಿ ಮೆರೆಯುವ ಅತುಳ ದಾನವರ ವೈರದೋಳ್ ಬಹುಬಲಾಢ್ಯನಾಗಿ ಜನಿಸಿ ಪಿತಾಮಹನಾದ ಚತುರ್ಮುಖನಂ ಮೆಚ್ಚಿಸಿ ಸುರ ನರ ಗರುಡ ಗಾಂಧರ್ವ ಯಕ್ಷ ಕಿನ್ನರರಂ ಗೆಲಿಯುವಂತೆ ವರವನ್ನು ಪಡೆದು ಈ ತೇಜೋವತಿ ಪಟ್ಟಣವನ್ನು ಪರಿಪಾಲಿಸುವಂಥ ರಕ್ತಬೀಜ ಪ್ರಚಂಡ ಅಖಂಡ ಖಳವುದ್ದಂಡ ಭುಜಬಲತ್ವದಿಂ ಬಾಳುತ್ತಲಿರುವ ಅಸುರರಾಜನ  ಸಂಮುಖದೊಳ್ ಮೆರೆಯುತ್ತಿರುವ ಚಂಡಮುಂಡಾಸುರರೆಂದು ಈ ಸಭೆಯೊಳು ಪ್ರಚುರಪಡಿಸುವಂಥವನಾಗೊ ದೂತ ಕೇಳೆನ್ನ ಮಾತ.

ಮುಂಡಾಸರ: ಎಲೈ ಸಾರಥಿ ನಮ್ಮ ದೊರೆಯಾದ ರಕ್ತ ಬೀಜಾಸುರರು ಕರೆಸಿದ ಕಾರಣ ಬಾಹೋಣವಾಯಿತು. ರಕ್ತಬೀಜಾಸುರರು ಧಾವಲ್ಲಿರುತ್ತಾರೆ ಭೇಟಿ ಮಾಡಿಸುವಂಥವನಾಗೊ ಚಾರನೆ ಕುಟಿಲ ಕರವರನೆ.

ಚಂಡಮುಂಡಾಸುರರು: ನಮೋ ನಮೋ ರಾಜನೆ.

ರಕ್ತಬೀಜಾಸುರ: ದೀರ್ಘಾಯುಷ್ಯಮಸ್ತು ಬನ್ನಿರೈಯ್ಯ ಚಂಡಮುಂಡಾಸುರರೆ.

ಚಂಡಮುಂಡಾಸುರರು: ಅರಸ ಯಮ್ಮನ್ನು ಕರೆಸಿದಂಥ ಪರಿಯ ಪೇಳ್ವುದು  ಹರುಷದಿಂದ ನಡೆಸಿಕೊಡುವೆವು ಅರಸ ಪೇಳ್ವುದು.