ಭಾಮಿನಿ

ಯುದ್ಧ ಮಂಡಲದಿಂ  ವಜ್ರ ಬೀಳಲು
ನೋಡಿದನು ಧೂಮ್ರಲೋಚನನು ಹೂಡಿದನು ಬಿಲ್ಲುಬಾಣವಂ
ಸೇದಿ ಬಿಡುತಲೆ ಬಂದನಾಗ

ಧೂಮ್ರಲೋಚನ: ಯಲೈ ದೂತನೆ ಅಜನಿರ್ಮಿತವಾದ ಈ ನವಕಾಂಡ ಪೃಥ್ವಿಯಲ್ಲಿ ಲಕ್ಷದೀಪದ ಮಧ್ಯದಲ್ಲಿರುವ ತೇಜೋವತಿಯ ನಗರವನ್ನು ಪಾಲಿಸುವಂಥ ರಕ್ತಬೀಜಾಸುರನ ಸಂಮುಖದೋಳ್ ಮೆರೆಯುವ ವೀರಾಧಿವೀರರ ಶಿರದ ರಕ್ತ ಮೃತ್ತಿಕೆಯನ್ನು ಶಿರದೋಳ್ ಧರಿಸಿ ಮೆರೆಯುವ ಮಹಿಷಾಸುರನ ಸನ್ನಿಧಿಯಲ್ಲಿ ಆಜ್ಞಾಧಾರಕನಾಗಿ ಧುರಧೀರನಾದ ಧೂಮ್ರಲೋಚನನೆಂದು ಈ ಸಭೆಯೊಳ್ ಕಿತಾಪ್ ಮಾಡುವಂಥವನಾಗೊ ಚಾರ ಮಾತಿನಲ್ಲಿ ಚಮತ್ಕಾರ.

ಯಲೈ ಮನುಷ್ಯನೆ ಈ ರಾಜಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಈ ದಿವಿಜರ ರಣದೊಳಗೆ ವಜ್ರಮುಷ್ಟಿ ಎಂಬುವನನ್ನು ವರುಣ ಕುಬೇರರೆಂಬ ಅಧಮರು ಸಂಹಾರ ಮಾಡಿರುವರಂತೆ. ಆದಕಾರಣ ಅವರಲ್ಲಿ ರಣಾಗ್ರವನ್ನು ಮಾಡಿ ನಿಗ್ರಹಿಸಲು ಬಂದಿರುತ್ತೇನೆ ನೋಡುತ್ತಾ ಯಿರೊ.

ಜಂಪೆ

ಯಾರೊ ವೀರರೆ ಬನ್ನಿರೊ ಧೀರ ರಣಕೆ ಈಗ
ಕರುಳನ್ನೆ ಬಗೆದೀಗ ತಿನ್ನುವೆ ನಾನು ॥

ಧೂಮ್ರ: ಯಲೈ ದೇವರ್ಕಳೆ ಯುದ್ಧಕ್ಕೆ ಬಂದ ನಮ್ಮ ಕಡೆ ಅಸುರರನ್ನೆಲ್ಲ ಸಾಲು ಸಾಲಾಗಿ ವಧಿಸಿರುವೆನೆಂಬ ಅಹಂಕಾರದಿಂದ ನನ್ನೊಡನೆ ಮಾತನಾಡಲು ನಿಮ್ಮನ್ನು ಯೀಗಲೆ ಸಾಲು ಮರಿಹಬ್ಬವನ್ನು ಮಾಡುತ್ತೇನೆ ರಣರಂಗಕ್ಕೆ ನಿಲ್ಲುವಂಥವನಾಗೊ ಅಧಮ.

ಪದ

ಯಾರೊ ನೀ ಬಂದದ್ದು ಕಾರಣವೇನುಂಟೊ
ಧೀರನೆ ನಿನ್ನನ್ನು ಕೊಲ್ಲುವೆ ಬಾರೊ ॥

ಕುಬೇರ: ಯಲಾ ಪುಂಡರೋಳ್ ಪ್ರಚಂಡನಾದ ರಕ್ಕಸನೆ ನೀನ್ಯಾರು ನಿನ್ನ ಹೆಸರೇನು ಯಿಲ್ಲಿ ಬಂದುಮಾತನಾಡಲು ಕಾರಣವೇನು. ಜಾಗ್ರತೆ ಪೇಳದಿರ್ದಡೆ ಇಗೋ ನನ್ನ ಖಡ್ಗದಿಂದ ನಿನ್ನ ಮುಂಡವನ್ನು ತರಿಯುತ್ತೇನೆ ಜಾಗ್ರತೆ ತಡಮಾಡದೆ ಹೇಳು.

ಪದ ಜಂಪೆ

ಬಾರೊ ಬಾರೆಲೆ ರಣಕೆ ತೋರೊ ಪೌರುಷವನ್ನು
ಯೀಗ ನಿನ್ನ ಶಿರವ ಸೂರೆ ಮಾಡುವೆನು॥

ಧೂಮ್ರ: ಭಳಿರೆ  ಕುಬೇರನೆ ನಿನ್ನ ಮದಗರ್ವವನ್ನು ಕಡಿದು ಯೀಡಾಡಿ ಸಾಹಸವಂತನಾದ ಧೂಮ್ರರಾಯನೆಂದು ಹೆಸರನ್ನು ಪಡೆಯುತ್ತೇನೆ. ಬರಿ ಮಾತಿಗೆ ನಾನು ನಂಬುವನಲ್ಲ ರಣ ಮಂಡಲದಲ್ಲಿ ನಿಂತ ಮೇಲೆ ತೋರುತ್ತೇನೆ ಎದುರಾಗು.

ಪದ

ಬಾರೆಲ ಬಾರೆಲ ಬಾರೆಲ ರಣಕೆ ತೋರು ಪೌರುಷ ॥
ಕ್ಷಣಕೆ ಕಡಿಯುವೆ ನಿನ್ನಯ ಶಿರವನು ನಾನೀಗ
ಮುರಿಯುವೆ ಭುಜಗಳ ಗಡಣದಿ ನಾನೂ ॥

ಕುಬೇರ: ಯಲವೊ ರಕ್ಕಸನೆ ಲೋಕೇಶ್ವರನಾದ ಶಿವಸಖನೆಂದರಿಯದೆ ಯನ್ನನ್ನು ಕೆಣಕುವುದಕ್ಕೆ ಬಂದಿರುತ್ತೀಯ. ಯೀಗ ನೋಡು ಯದುರಿಗೆ ನಿಲ್ಲು ನಿನಗೆ ಗೊತ್ತಾಗುತ್ತದೆ ಯದುರಾಗು.

(ಧೂಮ್ರನ ಮರಣ)

ಭಾಮಿನಿ

ಕೇಳಿದನು ಮಹಿಷಾಸುರನು ॥ಧೂಮ್ರನ ಮರಣವನೂ ॥
ಹೂಳುವೆ ನಾನಿವರ ತಲೆಯಂ ಯನುತಾ
ಬಾಣವನು ಬೀರುತ್ತಾ ಬಿರುಗಾಳಿಯಂದದಿ ಹೊಕ್ಕನು ರಣವಾ ॥

ಮಹಿಷಾಸುರ: ಎಲಾ ಖೂಳರಾದ ದೇವರ್ಕಳೆ ಎದುರಿಗೆ ನಿಂತು ಕಾದಲಾರದೆ ಮರೆಯಾಗಿ ಹೋಗುವಂಥವರಾದಿರಲ್ಲಾ. ನಮ್ಮ ಕಡೆ ದೈತ್ಯರನ್ನೆಲ್ಲಾ ಸಂಹಾರ ಮಾಡಿ ನನ್ನ ಆರ್ಭಟಕ್ಕೆ ಹೆದರಿ ಓಡಿ ಹೋಗಿರುವ ನಿಮ್ಮನ್ನು ಹಿಡಿದು ಈ ರಣಭೂಮಿಗೆ ದಿಗ್ಬಲಿ ಕೊಡದಿದ್ದರೆ ನಾನು ಮಹಿಷಾಸುರನೆ. ಛೇ ರಣಹೇಡಿಗಳೆ ಎಲ್ಲಿಗೆ ಓಡುತ್ತಿರುವಿರಿ ನಿಲ್ಲಿ ನಿಲ್ಲಿ.

ದೇವತೆಗಳು: ಛೀ ಛೀ ಜಗದ್ಭಂಡ, ದೇವಾನುದೇವತೆಗಳ ಸಾಹಸವನ್ನು ತಿಳಿಯದೆ ರಣಾಗ್ರಕ್ಕೆ ಬಂದಿರುತ್ತೀಯ ಅಧಮ. ದೇವತೆಗಳಾದ ನಮ್ಮ ಸಾಹಸವನ್ನು ತಿಳಿಯಬೇಕಾದರೆ ರಣಾಗ್ರಕ್ಕೆ ಯದುರಾಗುವಂಥವನಾಗೊ ಮಹಿಷಾ ತೋರುವೆವು ಸಾಹಸ.

ಪದತ್ರಿವುಡೆ

ಎಂದು ಬಾಣವ ಹೂಡಿ ಹೊಡೆಯುತ
ನೋಡಿ ಸುರಬಲ ಓಡಿ ಹೋಗುತ
ನೋಡಿ ಮಹಿಷನು ರಥವನೋಡಿಸಿದ ದೇವಿಯ ಬಳಿಗೆ ॥

ಮಹಿಷಾಸುರ: ಭಲಾ ಭಲಾ ಅಧಮ ದೇವತೆಗಳಿರ ನಿಮ್ಮ ಸಾಹಸವು ತಿಳಿಯಲಾಯ್ತು. ನನ್ನ ಬಾಣದ ಆರ್ಭಟ ತಡೆಯಲಾರದೆ ಓಡಿ ಹೋಗುತ್ತಿರುವಿರ. ಮಹಿಷಾಸುರನ ಭಯವು ನಿಮ್ಮ ದೇಹಕ್ಕೆ  ಈಗ ಅಂಟಿತೆ. ಆಹಾ ಓಡಿ ಹೋದವರ ಸುದ್ದಿಯೇನು. ಎಲಾ ರಥವನ್ನು ಹೊಡೆಯುವ ಚಾರನೆ ನಮ್ಮ ಕಡೆ ವೀರಾಧಿವೀರರಾದ ಚಂಡ ಮುಂಡಾಸುರರನ್ನು ಕೊಂದ ಭಂಡೆಯಾದ  ಸುಂದರಿಯಿರುವ ಸ್ಥಳಕ್ಕೆ ರಥವನ್ನು ಹೊಡೆಯುವಂಥವನಾಗು.

ಪದಜಂಪೆ

ಯಾರೆಲೇ ಸುಂದರಿ  ವನದೊಳಗಿರುವಳು
ಚಂಡಮುಂಡ ರಮಣ ಎಂಬುದ ಕಾಂಣ

ಮಹಿಷಾಸುರ: ಯಲೈ ಚಾರನೆ ನಮ್ಮ ವುದ್ಯಾನವನದಲ್ಲಿ ಈ ಸುಂದರಿಯರು ಇರಲು ಕಾರಣವೇನು. ಯಲೈ ಸುಂದರಿಯೆ ನೀವೀರ್ವರು ನಮ್ಮ ವುದ್ಯಾನವನದಲ್ಲಿ ಇರುವುದಕ್ಕೆ ಕಾರಣವೇನು. ಯಿದೂ ಅಲ್ಲದೆ ಯಮ್ಮ ಸೈನ್ಯಾಧಿಪರಾದ ಚಂಡಮುಂಡಾಸುರ ಮೊದಲಾದವರೆಲ್ಲ ಈ ವುದ್ಯಾನವನದಲ್ಲಿ ಮರಣವೊಂದಲು ಕಾರಣವೇನು. ಶೂರನಾದ ಮಹಿಷಾಸುರನು ಬಂದಿರುವನೆಂದು ಬೆಚ್ಚಿ ಬೆದರಿ ಕುಂತಿರುವೆ. ಯಲಾ ಸುಂದರಿ ನನ್ನ ಸಂಗಡ ಯಿದ್ದ ಸಂಗತಿಯನ್ನು ತಿಳಿಸಿದರೆ ಸರಿಯಾಯಿತು ಯಿಲ್ಲವಾದರೆ ಈಗಲೇ ಸೆರೆಯಿಡಿಸಿ ಎಳೆಸಿಕೊಂಡು ಹೋಗುತ್ತೇನೆ.

ರಾಗರೂಪಕ

ಬ್ಯಾಡ ಬ್ಯಾಡ ಬೇಡಿಕೊಂಬೆ ಸೆರೆಯೊಳಿಡುವುದಾ
ನಿನ್ನ ಸವಿಯ ನುಡಿಯ ನಾನು ಮೀರಲಾರೆನು
ನನ್ನ ಬಲವೆಲ್ಲ ನಿನಗೆ ಹೆದರಿ ಓಡಿ ಪೋದರೊ ॥

ದೇವಿ: ಆಹಾ ದುರುಳ ರಕ್ಕಸನೆ ನಿನ್ನ ಅದ್ಭುತವಾದ ಅಬ್ಬರಕ್ಕೆ ಹೌಹೌರಿ ಕುಳಿತಿರುತ್ತೇನೆ. ಹೇ ಮಹಿಷನೆ ನನ್ನನ್ನು ಸೆರೆಯೊಳಗೆ ಯಿಡಿಸಿದರೆ ತಡೆಯಲಾರೆನು ಮುಂದಲ ವಿಚಾರವನ್ನು ಹೇಳು.

ಪದ

ನೀನ್ಯಾರೆ ಸುಗುಣ ವದನೆ  ಮಮ
ನೀನ್ಯಾರೆ ಸುಗುಣೆ ಸರಸಿಜನೇತ್ರಿಯೆ

ಮಹಿಷ: ನಾರಿಯರೊಳಗೆ ಸರೋಜಮುಖಿಯೆ ನನ್ನ ಮಾತನ್ನು ಚೆನ್ನಾಗಿ ಆಲೋಚಿಸಿ ಕೇಳು ಹೇಳುತ್ತೇನೆ. ನೀನು ಯಾರು ನಿನ್ನ ವಿಚಾರವೇನು ಯಿದನ್ನು ತಿಳಿಸು. ಅಲ್ಲದೆ ಶೂರನಾದ ಮಹಿಷಾಸುರನು ಬಂದಿರುವನೆಂದು ಘನವಾದ ಮನಸ್ಸು ಮಾಡಿ ಯನ್ನನ್ನು ಕೂಡುವ ಪ್ರಯತ್ನ ಮಾಡು. ಯಿಲ್ಲದ ಪಕ್ಷದಲ್ಲಿ ನನ್ನ ಮನಸ್ಸು ನಿಲ್ಲುವದಿಲ್ಲ. ಜಾಗ್ರತೆ ನನ್ನೊಡನಾಡೆ ನಾರಿ ಮದನ ವೈಯಾರಿ.

ಪದಅಷ್ಠತಾಳ

ಕೂಡಮ್ಮ ಯಿವನಾ ಮದನ ಆತುರವಿತ್ತು  ಕೂಡಮ್ಮ ಯಿವನಾ
ಗಾಡನಿಂ ದನುಜಾನು ಭ್ರಮೆಗೊಂಡು ಬೇಡುವನು ಕೂಡಮ್ಮ ಯಿವನಾ
ನಿನ್ನ ಮದನ ತಾಪಕೆ  ಸರಿಯಾದ ಪುರುಷಾನಾ ॥

ಸಖಿ: ಅಮ್ಮಯ್ಯ ಮೋಹಿನಿಯಂಥ ಸುಂದರವಾದ ನೀನು, ಪುರುಷನು ಬಂದಿರುವ ಸಮಯದಲ್ಲಿ ಸುಮ್ಮನಿರುವುದು ನ್ಯಾಯವೆ. ಮೊದಲೇ ಭ್ರಮೆಗೊಂಡು ಕೇಳುತ್ತಾ ಇದ್ದೆ ಯೀಗ ಹಣ್ಣಿರುವ ಮರಕ್ಕೆ ಗಿಳಿಗಳು ಬಂದಂತಾಯಿತು ನೋಡಮ್ಮಾ ನೋಡು.

ಪದಅಷ್ಟತಾಳ

ಮೌನಿಮನವ್ಯಾಕೆ ನೀರೆ  ಮಾತಾಡೆ ಚದುರೆ
ನಾರಿ ವೈಯಾರಿ  ಮದನಕಠಾರಿ ॥

ಮಹಿಸಾಸುರ: ಆಹಾ ಹೇ ನಾರಿ ಮದನ ಕಠಾರಿ ನನ್ನ ಸ್ವಾಧೀನವಾಗಿ ಮನಸ್ಸು ಹಿತಪಡಿಸಿದರೆ ಮದನ ರೂಪವಾದ ಮಡದಿಯ ಸರಿಸಮಾನವಾಗಿ ನಿನ್ನನ್ನು ಮಡಗುತ್ತೇನೆ. ನಿನ್ನ ಮೃದುಕುಚವನ್ನು ತೋರಿ ಯನ್ನ ಮದನತಾಪವನ್ನು ನಿಲ್ಲಿಸುವಂಥವಳಾಗು. ಯಿಲ್ಲದೆ ಹೋದರೆ ಯೀಗಲೆ ಭೋರ್ಗರಿಸಿ ಸೆರೆಯೊಳಗೆ ಇಡಿಸುತ್ತೇನೆ ಬೇಗನೆ ಬಾ.

ಪದ

ಏನಿದು ನೋಡಿ ಸೈರಿಸಲಾರೆನೇ ಮಡದಿಯರೊಂದಿಗೆ
ಕೂಡಿ ಮಡಗುವಾ ದನುಜನಾ ನೋಡಿ
ಸೈರಿಸಲಾರೆನೆ ಸಖೀಮಣಿ ನಾನು ॥

ದೇವಿ: ಎಲಾ ಮೋಹರಕ್ಕಸನೆ ಯನ್ನಲ್ಲಿ ಮಾರಾಂತು ಮಲೆತು ಬರುವ ರಕ್ಕಸರು ಈ ಧರಿತ್ರಿ ಮೇಲೆ ಯಿನ್ಯಾರು ಇಲ್ಲವಾಗಿ ಕಾಣುತ್ತೆ. ಯೀ ಕ್ಷಣವೆ ವಡಗೂಡಿದರೆ ಕೂಡಬಹುದು. ಯಿಲ್ಲವಾದರೆ ಸೆರೆಯಿಡಿಸಿ ಎಳೆಸುತ್ತೀಯೊ ಕಷ್ಟವಿದೆ ಜಾಗ್ರತೆ ಕೂಡುತ್ತೇನೆ.

(ದೇವಿ ವಿಶ್ವರೂಪ ತೋರುವುದು)

ಕಂದ

ಯನಲು ರಕ್ಕಸನು ಕೇಳಲಂಬಿಕೆ  ದೇವಿ ಕೋಪವಂ ತಾಳುತ್ತಾ
ಬಾರೊ ನೀನೆಂದು ಕರೆದು ತಾಳಿದಳು ವಿಶ್ವರೂಪವನು ॥

ಪದ

ಕೂಡುವೆ ಬಾರೆಲೊ ರಕ್ಕಸ ನಿನ್ನಾ
ವಕ್ಷವ ಬಗಿಯುವೆ ಮೆಟ್ಟುತ ನಿನ್ನಾ
ಕರುಳನು ತೆಗೆಯುವೆ ಕೊರಳಿಗೆ ಹಾಕುವೆ
ಸರಸ ಮಾತುಗಳನ್ನು ಆಡಿದೆಯಲೊ ॥

ಮಹಿಷಾಸುರನ ಮರಣ

ಭಾಮಿನಿ

ಧುರದೋಳ್ ಅಂಬಿಕಾದೇವಿ ವಿಶ್ವರೂಪನು ತಾಳಿ
ಖೂಳ ರಾಕ್ಷಸ ಮಹಿಷಾಸುರನಾ ಮರ್ದಿಸಲೂ
ಚಾರಕನು ಶಿವಶಿವಾಯಿ  ಪರಿಯಲಿ ನಾನಿರಬಹುದೆ
ಯನುತಾ  ಓಡಿ ಹೋದನು ರಕ್ತಬೀಜಾಸುರನಲ್ಲಿಗೆ ॥

ಚಾರ: ಅಯ್ಯೋ ಶಿವನೆ ಹೋಗು ಅಲ್ಲಪ್ಪ ಸುಂದರ ಚಿಂತಾಮಣಿ ಹಾಗೆ ಕುಂತಿದ್ದ ಹೆಣ್ಣು ನೋಡಿದ ಮಾತ್ರಕ್ಕೆ ಪುನಃ ನಾನು ನಿಲ್ಲಲೆ ಯಿಲ್ವಲ ಯಿನ್ನಾ ಯಿನ್ನಾ ನಾನೋಗೋದಿಲ್ಲ. ಅಯ್ಯೋ ನಾನ್ ಹೆಂಗ್ ಹೋಗ್ಲಿ ರಾಮ ಮೈಸಾಸುರ ಹೋಗಿಬಿಟ್ಟನಲ್ಲ ಅಯ್ಯೋ ರಕ್ತಬೀಜಾಸುರನಿಗೆ ನಾನೇನು ಹೇಳಲಿ ನಿಮ್ಮ ಸಂಗತಿಯನ್ನು.

ರಕ್ತಬೀಜಾಸುರ: ಯೇನು ಯೇನು ನಮ್ಮ ಮಹಿಷಾಸುರ ಮಾವನವರು ದೈವಾಧೀನರಾದರೆ ಹರಹರಾ ಯೇನು ಮಾಡಲಿ.

ಭಾಮಿನಿ

ಚರನ ವಾಕ್ಯವಂ ಕೇಳಿದಾಕ್ಷಣವೆ  ಮನಸು ದಿಗ್‌ಭ್ರಮೆಯಾಯ್ತು ಹರಿಯೆ ॥
ವನದ ಸ್ತ್ರೀಯರ ದೆಶೆಯಿಂದ
ಯಮಗೆ ಯಿಂಥ ಕಷ್ಟ ವದಗಬಹುದೆ ಈ ಧರೆಯೊಳ್ ॥

ರಕ್ತಬಿಜಾಸುರ: ಆಹಾ ಮಂತ್ರಿಯೆ ಏನು ಹೇಳಲಿ. ಯಿವತ್ತಿನ ದಿವಸ ನಮ್ಮ ವುದ್ಯಾನವನದಲ್ಲಿ ಇರುವ ಆ ಸುಂದರ ನಾರಿಯರಿಂದ ವನಪಾಲರು ಬಲಾಸುರ ಚಂಡಮುಂಡಾಸುರರು ಸೈನ್ಯವೆಲ್ಲ ಹೋಯ್ತು. ನಮ್ಮ ದಳಪತಿಗೆ ಅಧಿಪತಿಯಾದ ನಮ್ಮ ಮಾವನಾದ ಮಹಿಷಾಸುರರು ಮಡಿದು ಹೋದರಂತಲೈ ಮಂತ್ರಿ ಕಾರ‌್ಯತಂತ್ರಿ.

ಪದ್ಯಅಷ್ಟತಾಳ

ಬರಿದೆ ಭ್ರಮಿಸುವರೆ ರಾಜಾ
ವಿಧಿ ಬರೆದಂಥ ಬರಹವು ತಪ್ಪೀತೆ ಯಮಗೆ
ಹಿಂದೆ ಮಾಡಿದ ಪಾಪದಿಂದ
ಬಂದು ಘಟಿಸಿತು ಎಮಗೆ ಅದರಿಂದಾ ॥

ಮಂತ್ರಿ: ಈ ಧರೆಯೋಳ್ ಬಲಶಾಲಿ ಯಂದು ಮೆರೆಸಿಕೊಂಡಿರುವ ಅರಸರೆ ಕೇಳಿ, ಪೂರ್ವ ಜನ್ಮದಲ್ಲಿ ನಾವು ಮಾಡಿದಂಥ ಪಾಪಶೇಷದಿಂದ ಈಗಿನ ಜನ್ಮದಲ್ಲಿ ಮಾಡಿದ ದುಷ್ಟ ಕೃತ್ಯದಿಂದ, ಯಿಂಥ ಕಷ್ಟವನ್ನು ಅನುಭವಿಸಬೇಕೆಂದು ನೇಮಕ ಇರುವಂತೆ, ಈ ನಾರೀಮಣಿಯರಿಂದ ನಮ್ಮ ಅಸುರರು ಮಡಿದು ಹೋಗಬೇಕಾದರೆ ಯಿವಳಿಂದ ವದಗಲೆಂದು ಬ್ರಹ್ಮ ನೇಮಕ ಇರಬಹುದು. ಯಿದಕ್ಕೆ ನಾವು ಯೋಚನೆ ಮಾಡಿದರೆ ತೀರಬಲ್ಲುದೇ ರಾಜ.

ಪದ

ಹಿಂದೆ ನಳರಾಜರೆಲ್ಲ ಹರಿಶ್ಚಂದ್ರನು ಮೊದಲಾಗಿ ಯಲ್ಲಾ
ಸಪ್ತರುಷಿಗಳೊಳಗೆ ಶ್ರೇಷ್ಠರಾದ ವಿಶ್ವಮಿತ್ರರು ಅವರೀಗೆ ಹೋದ ॥

ಮಂತ್ರಿ: ಅಯ್ಯ ರಾಜನೆ ಹಿಂದೆ ನಳಮಹಾರಾಜನು, ಹರಿಶ್ಚಂದ್ರರು ಪಟ್ಟಿರುವ ಶ್ರಮವು ಅವರದೆ ಗ್ರಹಗಳೋಳ್ ಶ್ರೇಷ್ಠರಾದ ಶನಿಮಹರಾಯರಿಂದ ನಳ ಮಹರಾಯನು ಕಷ್ಟಪಟ್ಟನು ಮತ್ತು ಹರಿಶ್ಚಂದ್ರನು ಸಪ್ತರುಷಿಗಳೋಳ್ ಶ್ರೇಷ್ಠರಾದ ವಿಶ್ವಾಮಿತ್ರರಿಂದ ಸತಿಸುತರನ್ನು ಕಳೆದುಕೊಂಡು ತಾನು ಚಾಂಡಾಲನ ಮನೆಯಲ್ಲಿ ಆಳಾಗಿದ್ದನು ಅದರಂತೆ ನಮಗು ಯಿರಬಹುದು ಇದಕ್ಕೆ ಯೋಚನೆ ಮಾಡಿದರೆ ತೀರುವುದೆ ರಾಜನೆ ಹೇಳುತ್ತೇನೆ.

ಭಾಮಿನಿ

ತೆತ್ತೀಶ ಕೋಟಿ ದೇವರ್ಕಳೆಲ್ಲರು
ವಿಧಿಯ ತೊತ್ತಾಗಿ ನಿಂತಿಹರು ರಾಜಾ ॥

ಭಾಮಿನಿ

ಬತ್ತೀಸಾಯುಧ ಬಿಟ್ಟು ಇಟ್ಟಿರುವ ಪಂಥವನು
ಹರನ ಕೈಲಾಸವನು ಬಿಟ್ಟು ಹೊರಡಿಸುವೆ
ಹರಿಯ ವೈಕುಂಠವನು ಬಿಡಿಸುವೆ
ಸೂರೆಯನು ಮಾಡುವೆ ಸತ್ಯ ಲೋಕವನೂ

ರಕ್ತ ಬೀಜಾಸುರ: ಅಯ್ಯ ಮಂತ್ರಿ ವರ‌್ಯನೆ ನೀನು ಹೇಳುವ ಮಾತು ನಿಜವೆ ಸರಿ. ಲೋಕದಲ್ಲಿ ಹೆಂಗಸಿನಿಂದ ಮಡಿದರೆಂದು ಅಪಮಾನ ಮಾಡುವರು. ಆ ಹೆಂಗಸು ಎಷ್ಟರ ಮಟ್ಟಗೆ ಯಿರಬಹುದು. ನಾನೇ ಹೊರಡುತ್ತೇನೆ ನಮ್ಮ ಸೈನ್ಯವನ್ನು ಹೊರಡಿಸುವಂಥವನಾಗು.

ಪದ ಆದಿತಾಳ

ಪೊಡವಿಪಾಲನೆ ಕೇಳು  ಪಟುಭಟರೊಡಗೂಡಿ
ದೃಢದಿಂದ ರಣಕೆ ನಾನು ಪೋಗಿ ಜೈಸುವೆ ॥

ಮಂತ್ರಿ: ಹೇ ಪೊಡವಿಯನ್ನಾಳ್ವ ರಕ್ತ ಬೀಜಾಸುರನೆ ಈ ವಸುಮತಿಯ ಭಾರವನ್ನು ಇಳುವುದಕ್ಕೆ ಬಂದಿರುವ ಆ ಸುಂದರಿಯಳನ್ನು, ಇಂದ್ರಾದಿ ದೇವತೆಗಳನ್ನು ಸಂಹಾರ ಮಾಡಲು ಶಂಬಾಸುರ ನಿಶಂಬ ಮಂದರ ಮಾಯಾವಿ ಸಹಿತ ಸೈನ್ಯವನ್ನೆಲ್ಲ ಕರೆದುಕೊಂಡು ಹೋಗಿ ಸಂಹರಿಸಿ ಬರುತ್ತೇವೆ. ತಾವು ಅರಮನೆಯಲ್ಲೇ ಇದ್ದು ನಮಗೆ ಅಪ್ಪಣೆಯನ್ನು ಕೊಡುವಂಥವರಾಗಿ ಮಹಾರಾಜರೆ.

ರಕ್ತಬೀಜಾಸುರ: ಹೇ ಮಂತ್ರಿಯೆ. ವಳ್ಳೆಯದು. ನೀನೇ ಸೈನ್ಯವನ್ನು ಕಟ್ಟಿಕೊಂಡು ಹೋಗಿ ಆ ದೇವರ್ಕಳನ್ನು ಸಂಹಾರ ಮಾಡಿಯಾದ ನಂತರ ಆ ಸುಂದರಿಯಾದ ಹೆಣ್ಣನ್ನು ನನ್ನಲ್ಲಿಗೆ ಕರೆದುಕೊಂಡು ಬರುವಂಥವರಾಗಿರಿ ನಡೆಯಿರಿ.

ಶುಂಬಾಸುರ: ಎಲೈ ಭಟನೆ ಪಟುಭಟರ ಶಿರವಂ ಕಡಿದು ಮೆರೆಯುತ್ತಿರುವ ನನ್ನನ್ನು ಕಂಡೊಡನೆ ನಡುಗದೆ ಧೈರ‌್ಯದಿಂದ ನಿಂದು ಕೇಳುತ್ತೀಯ ಭಟಾಗ್ರಣಿ, ಮಹಾಪ್ರಳಯದಲ್ಲಿ ಮಹಾ ವಿಷ್ಣುವಿನ ಕರ್ಣದಿಂದುದ್ಭವಿಸಿದ ಮಧು ಕೈಟಭರೆಂಬ ರಾಕ್ಷಸರ ಪುತ್ರರು ಸುಂದೋಪಸುಂದರ ಧರ್ಮಪತ್ನಿಯಾದ ಮಾಯೆ ಎಂಬುವಳ ಗರ್ಭದಿಂದುದ್ಭವಿಸಿದ ದಯಾರಸಭರಿತನಾದ ಪರಮೇಷ್ಟಿಯನ್ನು ಮೆಚ್ಚಿಸಿ ವರವನ್ನು ಪಡೆದು ಸುರನರ ಗರುಡ ಗಾಂಧರ್ವರಿಗೆ ವೈರತ್ವವನ್ನು ಬೆಳೆಸಿಕೊಂಡಿರುವಂಥ ನಿಕಶಾದೇವಿಯ ಸುಕುಮಾರನಾದ ರಕ್ತಬೀಜಾಸುರನ ಸಂಮುಖದೊಳು ಮೆರೆಯುವಂಥ ಶುಂಭಾಸುರನೆಂದು ತಿಳಿಯುವಂಥವನಾಗೊ ದೂತ ಸೂತಜನ ಸಂಪ್ರೀತ. ಎಲೈ ದೂತ ಈ ಸಭೆಗೆ ಬಂದ ಕಾರಣವೇನೆಂದರೆ ನಮ್ಮ ಮಂತ್ರಿಯಾದ ವಿತರಣ ಶ್ರೇಷ್ಠರು ಕರೆಸಿದ ಕಾರಣ ಬಾಹೋಣವಾಯ್ತು ಧಾವಲ್ಲಿರುತ್ತಾರೆ ತೋರಿಸುವಂಥವನಾಗೊ ದೂತ ಕೇಳೆನ್ನ ಮಾತ.

ಶುಂಭಾಸುರ: ನಮೋ ನಮೋ ಮಂತ್ರಿವರ‌್ಯರೆ.

ಮಂತ್ರಿ: ನಿನಗೆ ಮಂಗಳವಾಗಲಿ ಮೇಲಕ್ಕೇಳು ಶುಂಭಾಸುರನೆ.

ಶುಂಭಾಸುರ: ಆಹಾ ಮಂತ್ರಿವರ‌್ಯರೆ ಇಷ್ಟು ವಿನೋದವಾಗಿ ಕರೆಸಿಕೊಂಡ ಅಭಿಪ್ರಾಯವೇನು ಹೇಳುವಂಥವರಾಗಿರಿ.

ಮಂತ್ರಿ: ಅಯ್ಯ ಶುಂಭಾಸುರನೆ, ಈವತ್ತಿನ ದಿವಸ ನಿನ್ನನ್ನು ಕರೆಸಿಕೊಂಡ ಕಾರ‌್ಯವೇನೆಂದೊಡೆ ಸುರನರಗರುಡ ಗಾಂಧರ್ವ ಮೊದಲಾದ ದೇವರ್ಕಳೆಲ್ಲ ನಮ್ಮ ವುದ್ಯಾನವನದಲ್ಲಿ ಒಬ್ಬಳು ಸುಂದರ ಸ್ತ್ರೀಗೆ ಬೆಂಬಲವಾಗಿ ನಿಂತು ಅವಳ ಸಹಾಯದಿಂದ ನಮ್ಮ ಕಡೆ ಸೈನ್ಯವನ್ನೆಲ್ಲ ಹತ ಮಾಡಿಸಿರುತ್ತಾರೆ. ಆದ್ದರಿಂದ ಆಕೆಯನ್ನು ಕೊಲ್ಲಲು ನೀನು ಬಹಳ ಶೂರನಾದ ಕಾರಣ ನಿನ್ನನ್ನು ಕರೆಸಿರುತ್ತೇನೆ ಏನು ಹೇಳುವೆ.

ಪದದಿಗಣ

ಪೋಗಿ ಬರುವೆ ಮಂತ್ರಿವರ‌್ಯ  ಈಗ ಅಮರರ
ನಾಗವೇಣಿಯನ್ನು ತಂದು  ಸೊಗಸ ತೋರುವೆ

ಶಂಭಾಸುರ: ಅಯ್ಯ ಮಂತ್ರಿವರ‌್ಯನೆ ನಮಗೆ ವೈರಿಗಳಾದ ಅಧಮ ದೇವತೆಗಳನ್ನು ನನ್ನ ಭುಜಭಲ ಪರಾಕ್ರಮದಿಂದ ದಿಕ್ಕು ದಿಕ್ಕಿಗೆ ಓಡಿಸಿ ಆ ಸುಂದರಿಯನ್ನು ಕರೆತಂದು ನಿಮಗೆ ಕಾಣಿಕೆಯಾಗಿ ಒಪ್ಪಿಸುತ್ತೇನೆ. ಎಲೈ ಸಾರಥಿ ನನ್ನ ತಮ್ಮನಾದ ನಿಶುಂಭಾಸುರನನ್ನು ಆಸ್ಥಾನಕ್ಕೆ ಬರಮಾಡುವಂಥವನಾಗು.

ನಿಶುಂಭಾಸುರ: ನಮೋ ನಮೋ ಅಗ್ರಜಾ ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿರುತ್ತೇನೆ.

ಶುಂಭ: ದೀರ್ಘಾಯುಮಸ್ತು ಬಾರೈ ತಮ್ಮಾ.

ನಿಶುಂಭ: ಅಣ್ಣಾ ಶುಂಭಾಸುರನೆ, ಎನ್ನನ್ನು ಇಷ್ಟು ತ್ವರಿತವಾಗಿ ಕರೆಸಿಕೊಂಡ ಅಭಿಪ್ರಾಯವೇನು ಹೇಳುವಂಥವನಾಗೊ ಅಗ್ರಜಾ.

ಶುಂಭ: ಭಲೈ ತಮ್ಮ, ನಿನ್ನನ್ನು ಕರೆಸಿದ ಕಾರಣವೇನೆಂದರೆ ದೇವತೆಗಳ ಮೇಲೆ ಯುದ್ಧಕ್ಕೆ ಹೋಗುವ ನಿಮಿತ್ಯವಾಗಿ ಕರೆಸಿರುತ್ತೇನೆ ಜಾಗ್ರತೆ ಹೊರಡುವಂಥವನಾಗು.

ನಿಶುಂಭ: ಅಣ್ಣಾ ಶುಂಭಾಸುರನೆ, ಅಧಮರಾದ ದೇವತೆಗಳ ಮೇಲೆ ರಣಾಗ್ರಕ್ಕೆ ಹೊರಡಲು ಹಿಂದೆಗೆಯುವೆನೆ. ನಾನು ಹೊರಟ ಮೇಲೆ ರಣಹೇಡಿಗಳಾದ ದೇವತೆಗಳು ನನ್ನ ಯದುರಿಗೆ ನಿಲ್ಲುವರೆ. ಭಲೈ ಸಾರಥಿ ಜಾಗ್ರತೆ ರಥವನ್ನು ದೇವತೆಗಳ ಬಳಿಗೆ ಹೊಡೆಯುವಂಥವನಾಗು.

ಪದಆದಿತಾಳ

ಯಾರೆಲೊ ಶೂರರು  ರಣದೊಳು ಬಾರದೆ ಮರಳಿ
ಪೋಗಬ್ಯಾಡ  ಬಾರೆಯ ಜೊತೆಯೊಳು
ಮೀರದೆ ನೀವಿರೆ  ಸೈರಣೆಪಡಲಾರೆ ॥

ಶುಂಭಾ: ಯಲಾ ಅಧಮರಾದ ದೇವರ್ಕಳೆ, ಶೂರನಾದ ನಾನು ಬಾಣವನ್ನು ಬೀರುತ್ತಾ ರಣಕ್ಕೆ ಬರುವ ಸಾಹಸವನ್ನೂ ತಡೆಯಲಾರದೆ ಆ ನಾರೀಮಣಿಯ ಹಿಂದಕ್ಕೆ ಹೋಗಿ ಬಿದ್ದಿರುತ್ತೀರ. ಯಲೈ ಅಧಮರೆ ಯನ್ನೊಡನೆ ಯದುರು ತಾಕಿ ಯುದ್ಧವನ್ನು ಮಾಡಿ ಜೈಸುವಂಥವರಾಗಿರಿ.

ಪದ

ಅಸುರ ರಾಜನೆ ಕೇಳು ನೀಂ  ವಸುಮತಿ  ಭಾರವನು
ಹಸನಾಗಿ ಇಳುಹುವಾ  ನಾರಿಯಳ
ದೆಸೆಯಿಂದ ಹಾರಿ ಪೋದುದು ಶಿರವೂ ॥

ಯಮ: ಯಲಾ ಭಂಡ ರಕ್ಕಸನೆ, ರಾಕ್ಷಸರ ವಧಿಸಲು ನಮ್ಮ ಯತ್ನವಲ್ಲ. ನಮ್ಮ ಮಹಾದೇವಿ ಯತ್ನವಾದ ಕಾರಣ ರಣರಂಗದ ಸುದ್ದಿಯನ್ನು ಬಿಟ್ಟು ವಳ್ಳೆಯ ಮಾತಿನಿಂದ ಹಿಂದಕ್ಕೆ ಹೊರಟು ಹೋಗುವಂಥವನಾಗು.

ಪದ ಜಂಪೆ

ಹಿಂದೆ ಅಮರಾವತಿಯೋಳ್ ಸೆರೆಯಾಗಿ ಬಿದ್ದಿರ್ದ ನೀವ್ ವದರಾಟ ತೋರುವಿರಿ ॥

ಶುಂಭಾ: ಯಲಾ ಯಮನಂದನ, ಹಿಂದೆ ಅಮರಾವತಿಯನ್ನು ಬಿಟ್ಟು ಸೆರೆಮನೆಯೊಳಗೆ ಬಿದ್ದಾಗೈ ಸಾಹಸ ಯೆಲ್ಲಿ ಹೋಗಿತ್ತು. ಯಿವತ್ತಿನ ದಿವಸ ಪೌರುಷವನ್ನು ತೋರುತ್ತೀಯ. ಯೀಗ ಯುದ್ಧಕ್ಕೆ ನಿಲ್ಲು.

(ಯಮನ ಮೂರ್ಛೆ)

ಪದಜಂಪೆ

ಶುಂಭಾ: ಯಲೈ ಚಟುತರವುಳ್ಳ ಹರಿಹರ ಇಂದ್ರಾದಿ ದೇವರ್ಕಳೆ, ಈ ರಣರಂಗದಲ್ಲಿ ಯನ್ನ ಸಾಹಸದಿಂದ ಬಂದಂಥ ಯಮನು ಯೇನು ಗತಿ ಹೊಂದಿರುತ್ತಾನೆ ನೋಡಿದಿರೊ ನೀವುಗಳು ಕಾದಲಾರದೆ ಆ ಸುಂದರಿಯ ಮೊರೆ ಹೋಗಿ ಬಿದ್ದಿರುತ್ತೀರ ಅಧಮರೆ. ಆಹಾ ಈ ಸುಂದರಿಯನ್ನು ನೋಡಿದ ಮಾತ್ರವೆ ನನ್ನ ಪರಾಕ್ರಮವು ಮಧ್ಯಮವಾಯಿತು. ಯಿವಳನ್ನು ಮಾತಾಡಿಸಿ ನನ್ನ ವಶಪಡಿಸಿಕೊಳ್ಳುತ್ತೇನೆ. ಸಾರಥಿ ನೀನು ರಥವನ್ನು ಇಲ್ಲೇ ನಿಲ್ಲಿಸಿಕೊಂಡಿರು ನಾನು ಹೋಗಿ ಮಾತಾಡಿಸುತ್ತೇನೆ.

ಪದಆದಿತಾಳ

ಬಾರೇ ಸುಂದರಿ ॥ನಿನ್ನಾ ಮಾಳ್ವೆ ಕಂಜರಿ ವಾರೆ ನೋಟ
ಕೂಡುವೆನ್ನಾ ಗಾರು ಮಾಡಿ ಹೃದಯ ಮುನ್ನಾ
ಜಾಕಿಯನ್ನಾ ಕೂಡುತೆನ್ನಾ ಚೋರನಿಲ್ಲಿಗೆ ॥

ಶುಂಭಾ: ಎಲೈ ಮಾರನರಗಿಳಿಯಂತೆ ನಾರಿಯರ ಮಂದಿರದೋಳ್ ಮಾರ ಚಂದ್ರನ ಕಳೆಯಂತೆ ಹೊಳೆಯುತ್ತಿರುವ ಮುದ್ದು ಸುಂದರಿಯೆ, ನಿನ್ನ ವಿಚಾರವನ್ನು ಯನ್ನಲ್ಲಿ ಮರೆಮಾಜದೆ ಪೇಳಿದ್ದೇ ಸಹಜವಾದರೆ. ಈ ಶೂರನು ಮೀರದೆ ಮಾರನಾಟಕ್ಕೆ ಗುರಿಯಾಗಿ ಸವಿಗೊಳಿಸುವೆನು. ರುಚಿಕರವಾದ ನಿನ್ನ ಹೃದಯದಲ್ಲಿ ಯಿರುವ ಒಂದು ಮಾತನ್ನಾಡಿದರೆ ನನ್ನ ಮನಸ್ಸು ಹಾಲಿಗೆ ಸಕ್ಕರೆ ಬೆರೆಸಿದಂತೆ ಆಗುವುದು ಒಂದು ಮಾತನ್ನು ನುಡಿಸುವಂಥವಳಾಗೆ ಸುಂದರಿ.

ಪದ

ನೀನು ಬಂದ ಪರಿಯ ಪೇಳೆ  ಮೌನ ಸುಂದರಿ
ಕುಳಿತುಯಿರುವ ಮೂಗಳಂತೆ ಯಿದು ಸರಿಯೆ॥

ಶಂಭಾ: ಹೇ ನಾರಿ ಮದನಕಠಾರಿ ಮನವಿಟ್ಟು ಮಾತನಾಡೆಂದರೆ ಮೂಗಳಂತೆ ಮೌನದಿಂದ ಕುಳಿತಿರುವೆಯಲ್ಲಾ. ಇದು ನನಗೆ ನ್ಯಾಯವಾಗಿ ತೋರುವುದಿಲ್ಲ. ನಾನು ಶೂರ ರಣದಲ್ಲಿ ಧೀರ ಪರಾಕ್ರಮಿ ಯನ್ನುವರು. ಆದ್ದರಿಂದ ನನ್ನೊಡನೆ ನಿನ್ನ ಸಂಗತಿಯನ್ನು ಮಾತನಾಡಿ ನನ್ನ ಭ್ರಮೆಯನ್ನು ನಿಲ್ಲಿಸುವಂಥವಳಾಗು.

ಪದಆದಿತಾಳ

ಯಿವನ್ಯಾರೆ ಸುಗುಣೆ  ವದನೆ  ಸರಸಿಜ ನೇತ್ರೆ
ಯಿವನ ಚರಿತ್ರೆ  ಅರಿಯದೆ ಕೇಳುವ ಈ ರಾತ್ರೆ ॥

ದೇವಿ: ಹೇ ಮಂತ್ರದೇವಿಯಾದ ಸಖೀಮಣಿಯೆ, ಸುಂದರಿಯಾದ ನನ್ನ ಆಗಮನವನ್ನು ತಿಳಿಯದೆ ಮನ ಬಂದಂತೆ ಮಾತನಾಡುವನಲ್ಲ. ಈ ಸುಂದರನು ಯಾರು ಏನು ವಿಚಾರವಮ್ಮಾ ಸಖೀಮಣಿ.

ಸಖಿ: ಅಮ್ಮಯ್ಯ ನಿಮ್ಮ ರೂಪುಲಾವಣ್ಯ ಚಂದ್ರಕಾಂತಿಯಂತಿರುವ ಸುಂದರತ್ವವನ್ನು ನೋಡಿ ಅವರಿಗೆ ಮನ ಹೀಗಾಗುವದು. ಅಂದರೆ ಅಂತರಿಕ್ಷದಲ್ಲಿ ಆಡುತ್ತಿದ್ದ ಪಕ್ಷಿಯು ಆಡುವುದಕ್ಕೆ ಯಾತರ ಬಲ ರೆಕ್ಕೆ ಬಲ ನೀರಿಗಿಂತ ಮೀರಿ ಹೋಗುವ ಸರ್ಪನಿಗೆ ಏತರ ಬಲವು ನೀರಿನ ಬಲ. ಗೋವಿಗೆ ಯಾತರ ಆಸೆ ಹಸಿ ಚಿಗುರು ಹುಲ್ಲು ಕಂಡರೆ ಆಸೆ. ಆ ಹಸು ಕರುವನ್ನು ಹೀದರೆ ಆ ಕರುವಿಗೆ ಯಾತರ ಆಸೆ. ತಾಯಿಯನ್ನು ಕಂಡರೆ ಎಷ್ಟು ಇರುತ್ತದೆಯೊ ಅದರಂತೆ ಪುರುಷರಿಗೆ ಒಳ್ಳೆ ಸುಂದರಿಯಾದ ಸ್ತ್ರೀಯರನ್ನು ಕಂಡರೆ ಆಸೆ. ಆದ್ದರಿಂದ ನಿನ್ನ ಚಂದ್ರಕಾಂತಿಯಂತಿರುವ ರೂಪನ್ನು ನೋಡಿ ಮರುಳಾಗುವರಮ್ಮಾ ಮೌನಿ ದೇವಿ.

ದೇವಿ: ಆಹಾ ಸಖಿ ನನ್ನ ಮಾತಿಗೆ ಸರಿಯಾದ ವುತ್ತರವನ್ನು ಹೇಳಿದೆ. ನಾನು ನಿನ್ನ ಮೆಚ್ಚಿದೆನು. ನಿನ್ನ ಮಾತಿನಂತೆ ಆ ಪುರುಷನಲ್ಲಿ ಮಾತನಾಡುತ್ತೇನೆ.

ದೇವಿ: ಹೇ ಪೋರನೆ, ಯಿಂಥ ಮಾತಿನಿಂದ ನಿನಗೆ ಮುಂದೆ ಅನುಕೂಲಕ್ಕೆ ಬರುವುದ್ಯಾವದು. ನನ್ನಲ್ಲಿ ಸರಸವಾದ ಮಾತನಾಡುವೆಯಲ್ಲ. ಈ ಸರಸವಾದ ಮಾತಿನಲ್ಲಿ ಆಯುಷ್ಯ ಏನಾದರೂ ಹೆಚ್ಚುವುದೆ. ವಳ್ಳೇದು ನಿನ್ನ ಮಾತಿನಂತಲೆ ಆಗಲಿ. ನಿನ್ನ ರಾಜನಾದ ರಕ್ತ ಬೀಜಾಸುರನನ್ನು ನನ್ನಲ್ಲಿಗೆ ಕರೆದುಕೊಂಡು ಬಂದರೆ ನನ್ನ ಮನೋಗತವನ್ನು ಅನಂತರ ಹೇಳುತ್ತೇನೆ ಕರೆದುಕೊಂಡು ಬಾ.

ಭಾಮಿನಿ

ಧರೆಯೋಳ್ ಮೆರೆಯುವ ನನಗಿಂತಾ ಶೂರನೆ ರಾಜ
ಅವನ ವಲುಮೆಯಂ ಬಿಟ್ಟು ಯನ್ನನ್ನೊಲಿಸಿದರೆ
ಸರಿಯಾಯ್ತು ಯಿಲ್ಲ ಬಾ ನಡೆ
ಈಗಲೆ ಸೆರೆಯಿಡಿದು ಎಳೆಯುವೆ ॥

ಪದ

ದುರುಳನ ಹರಣವ ಕಳೆಯುವೆ ನಾನೀಗ
ಚಂಡಿಯ ರೂಪನು ತಾಳುವೆಯೀಗ
ಶುಂಭನ ಕರುಳನು ತೆಗೆಯುವೆ ಬೇಗ
ಶೂಲಕೆ ಹಾಕುವೆ ಶಿರವನು ಯೀಗ ॥

(ಶುಂಭಾಸುರನ ಮರಣ)