[ನಿಂಬಯ್ಯನ ಮನೆಯಲ್ಲಿ ಒಂದು ಕೊಟಡಿ. ಸೋಮಯ್ಯ, ಶಿವಯ್ಯ ಮಾತಾಡುತ್ತಿರುವರು. ಶಿವಯ್ಯ ಸೋಮಯ್ಯನಿಗಿಂತಲೂ ಸ್ವಲ್ಪ ಹಿರಿಯವನು. ತೆಳ್ಳಗೆ ಬಲವಾಗಿರುವ ವ್ಯಕ್ತಿ. ಬಾಹ್ಯದಿಂದ ಆತನ ಆಂತರ್ಯವನ್ನು ನಿಷ್ಕರ್ಷಿಸಲಾಗುವಂತಿಲ್ಲ.]
ಶಿವಯ್ಯ – ನಿನ್ನಿಂದ ನನಗೊಂದು ಮಹದುಪಕಾರಗಬೇಕಾಗಿದೆ.
ಸೋಮಯ್ಯ – ಅದೇನು ನನ್ನಿಂದಾಗುವ ಉಪಾಕಾರ?
ಶಿವಯ್ಯ – ನೀನು ನೆರವಾಗಲೊಪ್ಪಿದರೆ ಹೇಳುತ್ತೇನೆ.
ಸೋಮಯ್ಯ – ನಿನಗಲ್ಲದೆ ಮತ್ತಾರಿಗೆ ನಾನು ನೆರವಾಗುವುದು?
ಶಿವಯ್ಯ – ಈಗೊದಗಿರುವ ಪರಿಸ್ಥಿಯನು ಪರ್ಯಾಲೋಚಿಸಿದರೆ ಅದರಿಂದ ನಿನಗೂ ಮಹದುಪಕಾರವಾಗಬಹುದು.
ಸೋಮಯ್ಯ – ಏನದು?
ಶಿವಯ್ಯ – ರಾಜ್ಯಲಾಭ!
ಸೋಮಯ್ಯ – ರಾಜ್ಯ ಲಾಭ! (ಆಲೋಚಿಸಿ) ಹೌದು, ಅರ್ಥವಾಯಿತು. ಆದರೆ ಬಸವಯ್ಯನಿದ್ದಾನಲ್ಲವೆ?
ಶಿವಯ್ಯ – ಅದನ್ನೇ ನಾನೂ ಹೇಳುತ್ತಿರುವುದು! ನಿನಗೂ ನಿನ್ನ ಶ್ರೇಯಸ್ಸಿಗೂ ನಡುವೆಯಿರುವ ಅರಣ್ಯವೇ ನನಗೂ ನನ್ನ ಪ್ರೇಯಸಿಗೂ ನಡುವೆ ಬಂದಿದೆ. ಅದನು ದಹಿಸದೆ ನಾವು ಕೃತಾರ್ಥರಾಗಲಾರೆವು.
ಸೋಮಯ್ಯ – ಏನದು, ಬಿಡಿಸಿ ಹೇಳಬಾರದೆ?
ಶಿವಯ್ಯ – ನಾನು ರುದ್ರಾಂಬೆಯನು ಮೋಹಿಸಿದ್ದೇನೆ.
ಸೋಮಯ್ಯ – ಹೌದು, ನನಗೆ ಗೊತ್ತಿದೆ.
ಶಿವಯ್ಯ – ಆದರೆ ಆಕೆ ನನ್ನನು ಕಣ್ಣೆತ್ತಿ ಕೂಡ ನೋಡುತ್ತಿಲ್ಲ.
ಸೋಮಯ್ಯ – ಅದೇಕೆ? ನಿನಗೇನು ರೂಪವಿಲ್ಲವೆ? ವಿದ್ಯೆಯಿಲ್ಲವೆ? ಸಂಪತ್ತಿಲ್ಲವೆ?
ಶಿವಯ್ಯ – ಬಸವಯ್ಯನಿರುವವರೆಗೆ ಆಕೆ ಶಿವಯ್ಯನಿಗೆ ಲಭಿಸುವಂತಿಲ್ಲ. – ನಿನಗೆ ರಾಜ್ಯ ಲಭಿಸುವಂತಿಲ್ಲ.
ಸೋಮಯ್ಯ – ಹೌದು, ಮಾಡುವುದೇನು?
ಶಿವಯ್ಯ – ಏನಿದು? ಸೇನಾಪತಿಯ ಪ್ರತ್ರನಾಗಿ “ಮಾಡುವುದೇನು?” ಎನ್ನುತ್ತಿಯಲ್ಲಾ! ರಾಣಿಗೆ ನಿನ್ನ ತಂದೆಯಲ್ಲಿ ಎಷ್ಟು ಸ್ನೇಹ ! ಎಷ್ಟು ಸಲಿಗೆ! ಎಷ್ಟು ಪ್ರೇಮ!
ಸೋಮಯ್ಯ – ಶಿವಯ್ಯ, ಅದರಿಂದ ಲಾಭವೇನೇ ಇರಲಿ, ನನಗೇನೋ ಅದು ಹಿತವಾಗಿಲ್ಲ.
ಶಿವಯ್ಯ – ಈ ಸ್ವಪ್ನಾದರ್ಶಗಳನ್ನೆಲ್ಲಾ ಮೂಲೆಗಿಡು. ಅವುಗಳೆಲ್ಲ ಕಾವ್ಯಕ್ಕೆ; ವಾದಕ್ಕೆ! ವ್ಯವಹಾರಕ್ಕಲ್ಲ! ನೀನೂ ಬಸವಯ್ಯನಂತೆಯೇ ಅದೆಯೋ ಹೇಗೆ? ಅವನೂ ಕೂಡ ಈಗೀಗ ಕನಸಿನಿಂದ ಇಳಿದು ಬರುತ್ತಿದ್ದಾನೆ. ನೀನೇಕೋ ಸ್ವಪ್ನಜೀವಿಯಾಗುವಂತಿದೆ!
ಸೋಮಯ್ಯ – ಶಿವಯ್ಯ, ಅವಳು ಮಹಾಪಾಪಿಷ್ಟೆ!
ಶಿವಯ್ಯ – (ಹುಸಿನಗೆಯಿಂದ) ಅಯ್ಯೋ ಪಾಪ ಪುಣ್ಯಗಳನ್ನು ಕಟ್ಟಿಕೊಂಡು ನಮಗೇನು? ಪಾಪವೋ ಪುಣ್ಯವೋ ಪ್ರಯೋಜನವಾದರೆ ಸಾಕು. ನಿನಗೆ ರಾಜತ್ವ ಬೇಡವೇ?
ಸೋಮಯ್ಯ – ಯಾರಾದರೂ ಬೇಡವೆನ್ನುವರೇ?
ಶಿವಯ್ಯ – ಹಾಗಾದರೆ ಪಾಪ ಪುಣ್ಯಗಳನ್ನೆಲ್ಲಾ ಮೂಲೆಗಿಟ್ಟು ಕೆಲಸಕ್ಕೆ ಅನುವಾಗು. ಅವಳು ಯಾರಾದರೇನಂತೆ? ನಿನ್ನ ತಂದೆಗೆ ಬೇಕಾದವಳಾಗಿದ್ದಾಳೆ. ನೀನು ಸ್ವಲ್ಪ ಪ್ರಯತ್ನಪಟ್ಟರೆ ಬಿದನೂರು ಸಿಂಹಾಸನ ನಿನ್ನ ಕೈಸೇರುವುದು. ನೀನು ಒಂದಡಿ ಮುಂದಿಟ್ಟರೆ ರಾಜ್ಯಲಕ್ಷ್ಮಿ ಹತ್ತಡಿ ಮುಂದಿಟ್ಟು ನಿನ್ನೆಡೆಗೆ ಹಾರಿಬರುವಳು.
ಸೋಮಯ್ಯ – ಈಗೇನು ಮಾಡಬೇಕೆನ್ನುವೆ?
ಶಿವಯ್ಯ – ನಾನು ನಿನಗೆ ನೆರವಾಗುತ್ತೇನೆ. ನಿನ್ನಿಂದ ನನಗೂ ಉಪಕಾರವಾಗುವುದು. ನಿನಗೆ ರಾಜ್ಯ ದೊರಕುವುದು. ನನಗೆ ರುದ್ರಾಂಬೆ ಲಭಿಸುವಳು. ನಿನ್ನಲ್ಲಿ ಪೌರುಷವಿದ್ದರೆ ಮುಂದುವರಿ!
ಸೋಮಯ್ಯ – ಏನೆಂದು ತಿಳಿದಿರುವೆ? ಎದ್ದುನಿಂತರೆ ನಾನು ಹುಲಿ!
ಶಿವಯ್ಯ – ಬಸವಯ್ಯನ ಕೊಲೆ!
ಸೋಮಯ್ಯ – (ಬೆಚ್ಚಿದವನಂತೆ) ಏನು? ಏನು!
ಶಿವಯ್ಯ – (ದೃಢವಾಣಿಯಿಂದ) ಬಸವಯ್ಯನ ಕೊಲೆ!
ಸೋಮಯ್ಯ – ಶಿವಯ್ಯ, ಬಿದನೂರು ದೊರೆತನಕೆ ಕೊಲೆ ಹೆಚ್ಚು ಬೆಲೆ! ಅದರಲ್ಲಿಯೂ ಗೆಳೆಯನ ಕೊಲೆ!
ಶಿವಯ್ಯ – (ವಿಕಟವಾಗಿ ನಕ್ಕು) ನಿನ್ನ ಕೆಚ್ಚಿಗೆ ಕಿಚ್ಚಿಡಲಿ! ಸೇನಾಪತಿಯ ಮಗನಾದುದಕೆ ಸಾರ್ಥಕವಾಯಿತು! ಹೋಗಲಿ, ನೀನು ಕೊಲೆ ಮಾಡ ಬೇಡವಯ್ಯ; ಮಾಡುವವರು ಮಾಡುವರು! (ಬಾಗಿಲಲ್ಲಿ ಸದ್ದು) ಯಾರಲ್ಲಿ? (ಸೋಮಯ್ಯ ಬಾಗಿಲು ತೆರೆಯೆ ತಿಮ್ಮಜಟ್ಟಿ ಬರುತ್ತಾನೆ) ಏನು ಜಟ್ಟಿ, ನೀನು ಹೋಗಿದ್ದ ಕಾರ್ಯವೇನಾಯಿತು?
ಸೋಮಯ್ಯ – ಏನು ಕಾರ್ಯ?
ತಿಮ್ಮಜಟ್ಟಿ – ಏನೂ ಇಲ್ಲ, ಸ್ವಾಮಿ. ಸನ್ಯಾಸಿಗಳಿಂದ ತಾಯಿತಿ ತರಲು ಹೇಳಿದ್ದರು. (ತಾಯಿತಿಯನ್ನು ಶಿವಯ್ಯನಿಗೆ ಕೊಡಲು)
ಸೋಮಯ್ಯ – ಅದೇನದು, ಶಿವಯ್ಯ?
ಶಿವಯ್ಯ – ಸ್ತ್ರೀವಶೀಕರಣ ಯಂತ್ರ!
ಸೋಮಯ್ಯ – ರುದ್ರಾಂಬೆಗಾಗಿಯೇ? (ಶಿವಯ್ಯ ಮುಗುಳ್ನಗುವನು.)
ತಿಮ್ಮಜಟ್ಟಿ – ಇನ್ನೊಂದು ಹೊಸ ಸುದ್ದಿ, ಸ್ವಾಮಿ! ಏನೋ ಕೇಡುಗಾಲ!
ಶಿವಯ್ಯ – ಏನದು?
ತಿಮ್ಮಜಟ್ಟಿ – ಸನ್ಯಾಸಿಗಳಿಂದ ಗೊತ್ತಾಯಿತು.
ಶಿವಯ್ಯ – ಏನದು?
ತಿಮ್ಮಜಟ್ಟಿ – ಕೆಂಚಣ್ಣ ಹೇಳಿದನಂತೆ!
ಶಿವಯ್ಯ – (ಗಟ್ಟಿಯಾಗಿ) ಅದೇನು ಹೆಳಬಾರದೆ! (ಜಟ್ಟಿ ಬೆದರಲು)
ಸೋಮಯ್ಯ – ಇದೇಕೆ ಹೀಗೆ ಬೆಚ್ಚುತ್ತಿದ್ದೀಯೆ?
ತಿಮ್ಮಜಟ್ಟಿ – ತೀರಿಹೋದವರು ಭೂತವಾಗಿ ಕಾಣಿಸಿಕೊಂಡರಂತೆ!
ಶಿವಯ್ಯ
ಸೋಮಯ್ಯ } – ಯಾರು? ಯಾರು?
ತಿಮ್ಮಜಟ್ಟಿ – ದೊರೆಗಳು!
ಶಿವಯ್ಯ
ಸೋಮಯ್ಯ } – ಏನು! ಏನು!
ತಿಮ್ಮಜಟ್ಟಿ – ಆಚೆಮೊನ್ನೆ ರಾತ್ರಿ ಕೆಂಚಣ್ಣ ಕಾವಲಿದ್ದಾಗ ಕಂಡನಂತೆ. ಮೊನ್ನೆ ರಾತ್ರಿ ಹೊನ್ನಯ್ಯನವರೂ ಹೋಗಿ ಕಂಡರಂತೆ. ನಿನ್ನೆ ರಾತ್ರಿ ಬಸವಯ್ಯನವರೂ ಕಾಣಲು ಹೋಗಿದ್ದರಂತೆ
ಸೋಮಯ್ಯ – ಇದೇನೋ ಕೌತುಕದ ಸುದ್ದಿ.
ಶಿವಯ್ಯ – ರಾಣಿಯವರಿಗೆ ಗೊತ್ತಿದೆಯೇ ಇದು?
ತಿಮ್ಮಜಟ್ಟಿ – ಇಲ್ಲ.
ಶಿವಯ್ಯ – ಹೋಗಿ ತಿಳಿಸು, ಬೇಗ ನಡೆ. (ಜಟ್ಟಿ ತೆರಳುವನು.) ನೋಡಿದೆಯಾ? ನೀನೀಗ ಹಿಂಜರಿದರೆ ನಿನಗೂ ಕೇಡು, ನಿನ್ನ ತಂದೆಯವರಿಗೂ ಕೇಡು! ಮುಂಬರಿದರೆ ಇಬ್ಬರಿಗೂ ಲಾಭ!
ಸೋಮಯ್ಯ – ಭೂತ ಮಾತಾಡಿದ್ದರೆ, ಅನಾಹುತ!
ಶಿವಯ್ಯ – ಬಸವಯ್ಯನು ಲಿಂಗಣ್ಣ ಮಂತ್ರಿಗಳೊಡನೆ ಸೇರಿ ನಿನ್ನಯ್ಯನ ಮೇಲೆ ಕತ್ತಿ ಕಟ್ಟುವನು. ನಿನಗೂ ಶುಭವಾಗುವಂತೆ ತೋರುವುದಿಲ್ಲ.
ಸೋಮಯ್ಯ – ಈಗೇನು ಮಾಡಬೇಕಾಯಿತು?
ಶಿವಯ್ಯ – ಬೇಗ ಹೋಗಿ ನಿನ್ನ ತಂದೆಗೂ ರಾಣಿಗೂ ಈ ಸುದ್ದಿಯನೊರೆದು, ಅವರಿಬ್ಬರನೂ ಹಿಡಿದು ಮೊದಲು ಸೆರೆಯೊಳಿಡಬೇಕು. ಆಮೇಲೆ – ನೋಡೋಣ. ನಿನ್ನ ಸಹಾಯಕ್ಕೆ ನಾನಿದ್ದೇನೆ, ಹೆದರಬೇಡ. ನಿನಗೆ ರಾಜ್ಯ; ನನಗೆ ರುದ್ರಾಂಬೆ!
ಸೋಮಯ್ಯ – ಹಾಗಾದರೆ ಈಗಲೇ ಹೋಗಬೇಕು. ತಡಮಾಡಿದರೆ ತಪ್ಪಾಗಬಹುದು.(ಏಳುವನು.)
ಶಿವಯ್ಯ – (ಏಳುತ್ತ) ನೀನು ಅರಮನೆಗೆ ಓಡು. ನಾನು ವಿಶೇಷ ವರ್ತಮಾನಗಳನ್ನು ತಿಳಿದುಕೊಂಡು ಅಲ್ಲಿಗೆ ಬರುತ್ತೇನೆ. ಬೇಗ!
(ಇಬ್ಬರೂಹೋಗುವರು.)
[ಪರದೆ ಬೀಳುವುದು]
Leave A Comment