[ಬಿದನೂರಿನ ಅರಮನೆಯಲ್ಲಿ ಚೆಲುವಾಂಬೆ ನಿಂಬಯ್ಯ ಮಾತಾಡುತ್ತಿರುತ್ತಾರೆ.]

ನಿಂಬಯ್ಯ – ದೇವಿ,
ತಿಮ್ಮಜಟ್ಟಿಯ ಕಥೆ ದಿಟವೊ ಸಟೆಯೋ ನನಗೆ
ಸಂದೇಹ.

ಚೆಲುವಾಂಬೆ – ಸಂದೇಹವೇತಕ್ಕೆ? ನಮ್ಮೊಡನೆ
ಸುಳ್ಳಾಡುವನೆ ಜಟ್ಟಿ?

ನಿಂಬಯ್ಯ – ಎಲ್ಲಿಯಾದರೂ ಉಂಟೆ?
ಸತ್ತವರು ಮರಳಿ ಭೂಮಿಗೆ ಮರಳುವುದು ನಿಜವೆ?

ಚೆಲುವಾಂಬೆ – ತರ್ಕಕ್ಕೆ ತಾವಲ್ಲವೀ ಭೂಮಿ! ಇಲ್ಲಿ
ಏನು ಬೇಕಾದರೂ ನಡೆಯಬಹುದು!

ನಿಂಬಯ್ಯ(ನಸುನಕ್ಕು)  ಹೆಂಗಸರ ನಂಬುಗೆಗೆ
ಕಣ್ಣಿಲ್ಲ, ಕಾಲಿಲ್ಲ! ಬಾಯಿ ಬೇಕಾದಷ್ಟು!
ಮನ್ನಿಸೆನ್ನನು, ದೇವಿ. ನನಗೇನೊ ಸಂದೇಹ.

ಚೆಲುವಾಂಬೆ – ಹಾಗಾದರಾ ಕಥೆಗೆ ನಿನ್ನ ವಿವರಣೆ ಏನು?

ನಿಂಬಯ್ಯ – ವಿವರಣೆಯೆ? ನೀನು ಊಹಿಸಲಾರೆಯಾ, ಹೇಳು!

ಚೆಲುವಾಂಬೆ – ನನ್ನ ಬಗೆ ಕದಡಿಹುದು. ನಾನು ಊಹಿಸಲರಿಯೆ.

ನಿಂಬಯ್ಯ – ಬಸವಯ್ಯನೂಹೆಯಾತ್ಮಕೆ ದೇಹವನು ನೀಡೆ
ಯಾರೊ ಸೃಜಿಸಿದ ಸಂಚು! ನಮ್ಮನೆಂತಾದರೂ
ಅಪರಾಧಿಗಳು ಎಂದು ಮೂಲೆಗೊತ್ತಲು ನೆಯ್ದ
ಜಾಲವಿದು. ಬಲೆಯು ನಮ್ಮನು ಸುತ್ತಿ ಬೀಳಿಸುವ
ಮುನ್ನವೇ ನಾವದನು ತುಂಡುಗೈಯಲೆ ಬೇಕು. –
ಏನನಾಲೋಚಿಸುವೆ? ನಿನಗೆ ಭಯವಾಗಿದೆಯೆ?

ಚೆಲುವಾಂಬೆ – ಭಯವಲ್ಲ. ಮುಂದಿನ ಉಪಾಯವನು ನೆನೆಯುತಿಹೆ.
ಏನನೆಸಗುವುದೊ ನಾನರಿಯೆ.

ನಿಂಬಯ್ಯ – ನಾನರಿವೆ!
ನಿನ್ನ ಬೆಂಬಲವಿರಲು ನಾನೆಲ್ಲ ಮಾಡುವೆನು.

ಚೆಲುವಾಂಬೆ – ಅದು ಏನು?

ನಿಂಬಯ್ಯ – ಹಿಂದುಮುಂದನು ನೋಡದೆಯೆ ಈಗ
ಬಸವಯ್ಯ ಲಿಂಗಣ್ಣರನು ಹಿಡಿದು ಸೆರೆಮನಯೊ
ಳಿಡಬೇಕು.

ಚೆಲುವಾಂಬೆ – ಪ್ರಮಾದವಾಗುವುದು!

ನಿಂಬಯ್ಯ – ಏಕೆ?

ಚೆಲುವಾಂಬೆ – ಜನರು ನಮ್ಮದೆ ತಪ್ಪು ಎಂದು ನಿರ್ಧರಿಸಿ
ದಂಗೆಯೇಳದೆ ಬಿಡರು . ಬಸವಯ್ಯ ಲಿಂಗಣ್ಣ
ಇಬ್ಬರೂ ಜನರ ಪ್ರೀತಿಗೆ ಪಾತ್ರರಾದವರು.
ನಮ್ಮ ಸೈನ್ಯವು ಕೂಡ ನಮಗೆದುರುಬೀಳುವುದೊ
ಏನೊ ನಾ ಕಣೆ!

ನಿಂಬಯ್ಯ – ಪೊಳ್ಳು ಭಯವಿದು, ದೇವಿ.
ಜನರು? ಜನರು ಕುರಿಗಳು! ನನ್ನ ಮುಂದವರು
ನಿಲ್ಲುವರೆ? ಸೈನ್ಯದ ವಿಧೇಯತೆಯೊ? ನನಗಿರಲಿ! –
ಬಾ ಸೋಮಯ್ಯ – (ಸೋಮಯ್ಯನು ಬರುತ್ತಾನೆ.)

ಚೆಲುವಾಂಬೆ – ಏನು ಸುದ್ದಿ, ಸೋಮಯ್ಯ? ತಿಮ್ಮಜಟ್ಟಿ ಹೇಳಿದುದೆಲ್ಲ ನಿಜವೇ?

ಸೋಮಯ್ಯ – ನಿಜವೋ? ಸುಳ್ಳೋ? ನನಗೆ ತಿಳಿಯದು. ಸುದ್ದಿ ಊರೊಳಗೆಲ್ಲ ಹಬ್ಬಿಹೋಗಿದೆ. ಪುರಜನರು ಗುಂಪು ಗುಂಪಾಗಿ ಸೇರಿ ಮಾತಾಡಿಕೊಳ್ಳುತ್ತಿದ್ದಾರೆ.

ನಿಂಬಯ್ಯ – ಬಸವಯ್ಯನೆಲ್ಲಿ, ನಿನಗೆ ಗೊತ್ತಿದೆಯೆ?

ಸೋಮಯ್ಯ – ಬಸವಯ್ಯನು ಲಿಂಗಣ್ಣ ಮಂತ್ರಿಗಳ ನಿಲಯದಲಿ ಯಾವುದೋ ರಾಜಕಾರ್ಯದಲಿ ತೊಡಗಿದ್ದಾನೆ ಎಂದು ವಾರ್ತೆ. ನಿಜವನರಿಯಲು ಶಿವಯ್ಯ ಹೋಗಿದ್ದಾನೆ.

ನಿಂಬಯ್ಯ – ದೇವಿ, ಇನ್ನು ಕಾಲವಿಳಂಬಮಾಡಿದರೆ ನಮಗೆ ಶುಭವಲ್ಲ.

ಚೆಲುವಾಂಬೆ – ಸೋಮಯ್ಯ, ನೀನಿನ್ನು ಮುಂದೆ ನನ್ನ ದತ್ತುಕುವರ. ನಿನ್ನ ತಂದೆಯವರಂತೆಯೆ ನೀನೂ ನಮಗೆ ಈ ವಿಷಮ ಸಮಯದಲಿ ಸಹಾಯವಾಗಿರಬೇಕು.

ಸೋಮಯ್ಯ – ಹಾಗೆಯೆ ಆಗಲಿ, ತಾಯಿ,

ನಿಂಬಯ್ಯ – ಶಿವಯ್ಯನೇಕೆ ಇತ್ತಕಡೆಗೇ ಓಡಿಬರುತ್ತಿದ್ದಾನೆ?

ಸೋಮಯ್ಯ – ಏನೋ ಅವಸರದ ಸುದ್ದಿಯಿರಬೇಕು! (ಶಿವಯ್ಯ ಬರುವನು.)

ಚೆಲುವಾಂಬೆ – ಏನಾಯ್ತು, ಶಿವಯ್ಯ?

ಶಿವಯ್ಯ – ಬಸವಯ್ಯನು ಲಿಂಗಣ್ಣ ಮಂತ್ರಿಗಳೊಡನೆ ಪಿತೂರಿ ನಡೆಯಿಸುತ್ತಿದ್ದಾನೆ. ಊರಿನಲ್ಲೆಲ್ಲ ಹಾಹಾಕಾರ ಹಬ್ಬುತ್ತಿದೆ. ನಿಮಗೆ ಕ್ಷೇಮಕರವಾಗಿಲ್ಲ. ತಡಮಾಡಿದರೆ ಅಮಂಗಳವಾಗಬಹುದೆಂದು ಓಡಿಬಂದೆ.

ನಿಂಬಯ್ಯ – ಸೋಮಯ್ಯ, ಶಿವಯ್ಯನೊಡನೆ ಹೋಗಿ ಸೇನೆ ಸಿದ್ಧವಾಗಿರುವಂತೆ ರುದ್ರಯ್ಯನಿಗೆ ತಿಳಿಸು. ಬೇಗ ನಡೆ. ನಾನು ಹಿಂದೆಯೆ ಬರುತ್ತೇನೆ.
(ಸೋಮಯ್ಯ ಶಿವಯ್ಯ ಹೋಗುವರು)

ಚೆಲುವಾಂಬೆ – ಪ್ರಿಯನೇ, ಎಚ್ಚರಿಕೆಯಿಂದ ಮುಂಬರಯಬೇಕು.

ನಿಂಬಯ್ಯ – ಎಚ್ಚರಿಕೆಗಿಂತಲೂ ಕೆಚ್ಚು ಇರಬೇಕೀಗ.
ದೇವಿ, ನಿನಗೆ ಭಯಬೇಡ, ನಾನೆಲ್ಲವನು
ಮಾಡುವೆನು. ನಿನ್ನೊಲ್ಮೆಯೊಂದಿರಲಿ, ಸಾಕದೇ
ನನಗೆ ಬಲ್ಮೆ! ಅವರಿಬ್ಬರೆಮಗೆರಡು
ಕತ್ತರಿಗಳಾಗಿಹರು. ದುಃಖದಾಧಾರಗಳನು
ಮೊದಲು ಪರಿಹರಿಸುವುದೆ ಸುಖಕೆ ಆಧಾರ!
ನನ್ನೊಡನೆ ನೀನೂ ಬಾ. ನಿನ್ನ ಸಾನ್ನಿಧ್ಯವೇ
ಭಕ್ತಿಯನ್ನುದ್ರೇಕಗೊಳಿಸುವುದು ಸೈನಿಕರಲಿ!

[ಪರದೆ ಬೀಳುವುದು]