[ಲಿಂಗಣ್ಣ ಮಂತ್ರಿಯ ಮನೆಯಲ್ಲಿ ಲಿಂಗಣ್ಣ, ರುದ್ರಾಂಬೆ, ಬಸವಯ್ಯ, ಹೊನ್ನಯ್ಯ ಎಲ್ಲರೂ ಮಾತಾಡುತ್ತಿರುವರು.]

ಬಸವಯ್ಯ – ಮಂತ್ರಿಗಳೆ,
ನನ್ನೂಹೆ ತಪ್ಪೆಂದು ನೀವು ತಿಳಿದುದೆ ತಪ್ಪು!
ಹೊನ್ನಯ್ಯನಿಹನಿಲ್ಲಿ ಅದಕೆ ಸಾಕ್ಷಿ.

ಹೊನ್ನಯ್ಯ – ಬಸವಯ್ಯನಾಡುವುದು ದಿಟ; ನಾನೆ ಕಣ್ಣಾರೆ
ಕಂಡಿಹೆನು. ಬಸವಯ್ಯನದರೊಡನೆ ತೆರಳಲ್ಕೆ
ಯತ್ನಿಸಲು ನಾನೆನಿತು ತಡೆದೆನೆಂಬುದ ಕೇಳಿ.

ಬಸವಯ್ಯ – ಚಂದ್ರಿಕೆಯ ಮಾಯೆಯಲಿ ರಾಜಗಾಂಭೀರ್ಯದಲಿ
ಐತಂದುದಾ ರೂಪು. ನೋಡಿದರೆ ತಂದೆಯನೆ
ಹೋಲಿತ್ತು. ಅದೆ ಉಡುಗೆ! ಅದೆ ತೊಡುಗೆ! ಅದೆ ನಡಿಗೆ!
ಆಮೇಲೆ ಅದು ನುಡಿಯೆ ನನ್ನಯ್ಯನದೆ ವಾಣಿ!
ಮಾತನಾಡಿಸಲು ಕೈಬೀಸಿ ಕರೆದುದೆನ್ನನು.
ಕೈಹಿಡಿದು ನಿಲಿಸುತ್ತಲಿದ್ದ ಹೊನ್ನಯ್ಯನನು
ಕೊಡಹಿ ಕೈಬಿಡಿಸಿಕೊಂಡು ಅದರೊಡನೆ ಹೋದೆ.

ರುದ್ರಾಂಬೆ – ಅಯ್ಯೊ, ಆಮೇಲೆ?

ಬಸವಯ್ಯ – ಹೇಳುತ್ತ ಅದು ಕಂಬನಿಯ ಸೂಸುತಿತ್ತು?
ಅಯ್ಯೊ ಆ ನೋವನೇನೆಂದು ಬಣ್ಣಿಸಲಿ?

ರುದ್ರಾಂಬೆ – ಏನೆಂದಿತು?

ಬಸವಯ್ಯ – “ನಾ ನಿನ್ನ ಪಿತನ ಪ್ರೇತಾತ್ಮ;
ಅಕಾಲಮರಣದಿನಿಂತು ಪ್ರೇತವಾಗಿಹೆನು.
ಪ್ರೇತಭೂಮಿಯೆಳೆನ್ನ ಕರ್ಮ ಸಮೆವನ್ನೆವರಂ
ನನಗೆ ತೊಳಲಿಕೆ ತಪ್ಪದೈ, ಮಗುವೆ. ಬೆದರದಿರು,
ಸತ್ತವರು ಕಾಣಿಸುವುದಪರೂಪವಾದರು
ಬೆದರದಿರೆನಗೆ, ಮಗುವೆ! ನನ್ನ ಲೋಕದ ಕಥೆಯ
ನಿನಗಿನಿತನೊರೆದರೂ ನಿನ್ನ ನೆತ್ತರು ತಣ್ತು
ಹೆಪ್ಪುಗಟ್ಟೀತು! ಕುದಿದಾವಿಯಾದೀತು!
ಕಣೆಗಳಂದದಿ ನಿನ್ನ ಮೈನವಿರು ನಿಮಿರ್ನಿಂತು
ನಿನ್ನ ಬುದ್ಧಿಯ ಸಮತೆ ಕೆಟ್ಟೀತು! ಅಲ್ಲದೆಯೆ,
ನನ್ನ ಗುಟ್ಟನು ನಿನಗೆ ಹೇಳಲಾಣತಿಯಿಲ್ಲ;
ಮರ್ತ್ಯರಾದವರಿಗೆ ಅದನರಿಯೆ ಹಕ್ಕಿಲ್ಲ!”

ರುದ್ರಾಂಬೆ – ಮುಂದಾದುದೇನು? ನನ್ನೆದೆ ಕುದಿಯುತಿದೆ!

ಬಸವಯ್ಯ – “ಚೆಲುವಾಂಬೆ ನಿಂಬಯ್ಯರಿಬ್ಬರೂ ಸೇರಿ
ಔಷಧಿಯ ನೆವದಿಂದೆ ನನಗೆ ವಿಷವನು ಕುಡಿಸಿ
ಕೊಂದರು” ಎಂದಿತು. ಕೊನೆಗೆ ಹೇಳುತ್ತ ಹೇಳುತ್ತ
“ಲಿಂಗಣ್ಣ ಮಂತ್ರಿಯದು ಸರಳಹೃದಯವು, ಮಗೂ,
ಆತನರಿಯನು ನಿಜವ” ಎಂದು ರೋದಿಸಿತು!
ಲಿಂಗಣ್ಣ ಮಂತ್ರಿಗಳೆ, ಓ ರುದ್ರಾಂಬೆ,
ನೀವು ಕಲ್ಲಾಗಿದ್ದರೂ ಕರಗುತಿದ್ದಿರಿ ಅಲ್ಲಿ.
ಪಾದರಿ ಎಂದು ಚಲುವಾಂಬೆಯನು ನಿಂದಿಸುತೆ, ದ್ರೋಹಿ
ಎಂದು ನಿಂಬಯ್ಯನನು ಶಪಿಸುತೆ ಇಂತೆಂದಿತು:
“ನೋಡೀಗಳಾ ಪಾದರಿ ತನ್ನ ವಿಟನೊಡನೆ
ಸರಸ ಸಲ್ಲಾಪದಲಿ ಸಂತೋಷದಲಿ ಕಾಲ
ಕಳೆಯುತ್ತಲಿಹಳು. ಬಸವಯ್ಯ, ವಂಶವ ಕೆಡಿಸಿದಾ
ಕುಲಗೇಡಿಯನು ಅವಳ ನಿಂಬಯ್ಯನೊಡಗೂಡಿ
ಜೀವದಿಂ ಸುಡಿಸಲಾರೆಯಾ ಬೆಂಕಿಯಲಿ ಅದ್ದಿ?
ಆಗಳೀಗೆನ್ನೆದೆಯು ತಣಿಯುವುದು, ಮುಗುವೆ!
ಕಥೆ ಮುಗಿದುದೆಂದರಿಯಬೇಡ. ನಿನ್ನನು ಕೊಂದು
ರಾಜ್ಯವನ್ನಪಹರಿಸಲೂ ಯತ್ನಗೈಯುವನು
ಆ ಪಾಪಿ ನಿಂಬಯ್ಯ! ಎಚ್ಚರಿಕೆಯಿಂದಿರು!
ಲಿಂಗಣ್ಣನಿಗೆ ನಿಜವನೊರೆ! ಬೇಗ! ಇಲ್ಲದಿರೆ,
ತಳುವಿದರೆ ಅಳುಕಿದರೆ ಸರ್ವನಾಶ!
ಬಸವಯ್ಯ, ಬಿದನೂರು ಸಂಸ್ಥಾನವನು, ಬದುಕಿ
ಪಾಳ್ಗೆಯ್ಯದಿರು; ಸತ್ತು ನಿಂಬಯ್ಯಗೀಯದಿರು!”
ಇಂತೊರೆಯುತಿರೆ ಮೂಡುದೆಸೆ ಕೆಂಪಡರ್ದುದನು
ಕಂಡು ಬೇಗನೆ ನನ್ನ ಬೀಳ್ಕೊಂಡಿತು!
ನಿಮಗಿನ್ನೂ ಸಂದೇಹವೇ?

ರುದ್ರಾಂಬೆ – ಅಯ್ಯೊ ಪಾಪಿಷ್ಠೆ!
ನರಕವಿಂತುಟು ನಾಕವೇಷದಲಿ ಬಹುದೆಂದು
ನಾನರಿದುದಿಲ್ಲ, – (ಚಿಂತಿಸುತ್ತಿರುವ ಲಿಂಗಣ್ಣನನ್ನು ನೋಡಿ)
ತಂದೆಯೇ, ನಿಮಗಿನ್ನು ಸಂದೇಹವೇಕೆ?

ಲಿಂಗಣ್ಣ(ಕಂಬನಿದುಂಬಿ ಎದುರಿಗೆ ಯಾರನ್ನೊ ನೋಡಿದವನಂತೆ)
ಅಯ್ಯೊ ಮಹಾರಾಜನೆ,
ನಿನ್ನ ಬಳಿ ನಾನಿದ್ದರೂ ಇಲ್ಲದಂತಾಯ್ತೆ?
ನೀನು ಮದ್ದನು ಒಲ್ಲೆನೆಂದರೂ ನಾನೆಯೆ
ಬಲವಂತದಿಂದೆ ಕುಡಿಸಿದೆನಲ್ಲಾ! ಶಿವ ಶಿವಾ!
ಅವರಲ್ಲ, ಅವರಲ್ಲ! ನಾನೆ ಕೊಲೆಪಾತಕನು!
ಇದಕೆ ಮುಯ್ ತೀರಿಸಿಯೆ ತೀರುವೆನು!
ಲಿಂಗಣ್ಣನೆದೆಯಲ್ಲಿ ಜೀವವಿರುವನ್ನೆವರಂ,
ಧಮನಿಯಲಿ ನೆತ್ತರಿರುವನ್ನೆವರಂ
ದುಷ್ಟ ಶಿಕ್ಷೆಗೆ ಸಾಹಸವ ಮಾಡಿ
ಋಣಮುಕ್ತನಾಗುವೆನು! (ಬಸವಯ್ಯನಿಗೆ)
ರಾಜಕುಮಾರ, ಕ್ಷಮಿಸೆನ್ನ!
ನೀನು ನನಗಿಂತಲೂ ಜಾಣ್ಮೆಯಳ್ಳವನು.
ನನ್ನೀ ಮುದಿ ಮೆದಳ್ಗೆ ಕಪಟವರಿಯುವ ಶಕ್ತಿ
ತೊಲಗಿಹುದು. ಆದುದಾಯಿತು; ಇನ್ನು –

ರುದ್ರಾಂಬೆ – ಇನ್ನು ಪ್ರಾಯಶ್ಚಿತ್ತ!

ಹೊನ್ನಯ್ಯ – ನಾವೆಚ್ಚರುವ ಮುನ್ನ
ಅವರೆ ಎಚ್ಚರಗೊಂಡು ಕೆಲಸ ಕೆಡಬಹುದು.
ಹಾವು ಮೊಟ್ಟೆಯನೊಡೆದು ಹೊರಗೆ ಬಹ ಮುನ್ನವೇ
ಮೊಟ್ಟೆಯನು ಸುಟ್ಟು ಬೂದಿಮಾಡಲೇಬೇಕು.

ಲಿಂಗಣ್ಣ – ಹೊನ್ನಯ್ಯ, ನೀನು ನಡೆ. ರದ್ರಯ್ಯನೇ
ಮೊದಲಾದ ದಳದಳದ ನಾಯಕರಿಗಿದನೊರೆದು
ನಿಂಬಯ್ಯ ಚೆಲುವಾಂಬೆಯರ ಕುಹಕಕಿಳಿಯದಂತೆ
ಮಾಡು. ನಾವೀಗಳೊಡನೆಯೆ ಬಂದು ಕಾಣುವೆವು.
(ಹೊನ್ನಯ್ಯ ಹೋಗುವನು.)
ಬಸವಯ್ಯ, ನಾವೀಗ ಸೇನೆಯನ್ನೂ
ಪುರಜನರನೂ ಕಂಡು ದಿಟವರುಹಿ, ಚೆಲುವಾಂಬೆ
ನಿಂಬಯ್ಯರನು ಹಿಡಿದು ಸೆರೆಗೊಯ್ಯಲೇ ಬೇಕು.
ಕೈಮಿಂಚಿದರೆ ನಮಗೇ ಅವರ ಗತಿಯಾದೀತು!
(ತೆರೆಯ ಹಿಂದೆ ಗದ್ದಲ)

ಬಸವಯ್ಯ – ಗದ್ದಲವೇನದು ಹೊರಗೆ?

ರುದ್ರಾಂಬೆ – ನೋಡಿ ಬರುತ್ತೇನೆ. (ಹೋಗುವಳು.)

ಬಸವಯ್ಯ – ಮಂತ್ರಿಗಳೆ, ನನಗೇನೋ ಸಂದೇಹವಾಗುತಿದೆ.
ನಾವು ತಡಮಾಡಿದೆವು!
(ರುದ್ರಾಂಬೆ ಓಡಿಬರುವಳು.)

ಲಿಂಗಣ್ಣ – ಏನದು?

ರುದ್ರಾಂಬೆ – ಸೋಮಯ್ಯ ರುದ್ರಯ್ಯ ಕೆಲವು ಜನ ಸೈನಿಕರೊಡನೆ ಬಂದಿದ್ದಾರೆ.

ಲಿಂಗಣ್ಣ – ಏಕೆ?

ರುದ್ರಾಂಬೆ – ನೋಡಿದೋ ಬಂದರು!
(ಸೋಮಯ್ಯ, ರುದ್ರಯ್ಯರು ಸೈನಿಕರೊಡನೆ ಬರುವರು.)

ಸೋಮಯ್ಯ – ಲಿಂಗಣ್ಣ ಮಂತ್ರಿಗಳೆ, ನೀವೂ ಬಸವಯ್ಯನೂ ರಾಜಕೈದಿಗಳು.
(ಎಲ್ಲರೂ ಬೆರಗಾಗುವರು)

ಲಿಂಗಣ್ಣ – ಏನದು, ರುದ್ರಯ್ಯ?

ಸೋಮಯ್ಯ(ಕೈಯಿಂದ ಎದುರಿರುವವರನ್ನು ನಿರ್ದೇಶಿಸಿ) ಏನಿದು, ಮಂತ್ರಿಗಳೆ?

ರುದ್ರಯ್ಯ – ರಾಣಿಯವರ ಆಜ್ಞೆಯಾಗಿದೆ. ನಿಮ್ಮನ್ನೂ ಬಸವಯ್ಯನವರನ್ನೂ ಹಿಡಿದುತರುವಂತೆ.

ಬಸವಯ್ಯ(ಧೀರವಾಣಿಯಿಂದ) ಗತಿಸಿದ ಬಿದನೂರರಸರ ಪುತ್ರನಾದ ನಾನು ಆಜ್ಞೆಮಾಡುತ್ತೇನೆ, ರುದ್ರಯ್ಯ, ನೀನು ಹಿಂತಿರುಗುವುದೆಂದು! ಹಿಂತಿರುಗಿ, ಸೈನಿಕರೇ! (ಸೈನಿಕರು ಹಿಂದೆ ಮುಂದೆ ನೋಡುವರು.)

ಸೋಮಯ್ಯ – ರುದ್ರಯ್ಯಾದಿ ಸೈನಿಕರೇ, ನಿಮ್ಮ ಮುಂದಿನ ಶ್ರೇಯಸ್ಸನ್ನು ನೆನೆಯಿರಿ! ರಾಣಿ ಚೆಲುವಾಂಬೆ ನಿಮಗಿತ್ತ ಭಾಷೆಯನ್ನು ಮರೆಯದಿರಿ! ತಡಮಾಡದೆ ರಾಜದ್ರೋಹಿಗಳನ್ನು ಮೊದಲು ಹಿಡಿಯಿರಿ!

ಬಸವಯ್ಯ – ಎಲವೊ ಕಪಟಿಯ ಮಗನೆ! ಪಾಪಿಗಳ ಸಹಕಾರಿಯೆ!
(ಮುಂದೆ ನುಗ್ಗುವನು. ಲಿಂಗಣ್ಣ ಮಂತ್ರಿ ತಡೆದು ನಿಲ್ಲಿಸಿ)

ಲಿಂಗಣ್ಣ – ಬಸವಯ್ಯ, ದುಡುಕದಿರು. ಸತ್ಯಕ್ಕೆ ಜಯವಿದೆ. – ರುದ್ರಯ್ಯ, ನೀವೆಲ್ಲರೂ ಹಿಂತಿರುಗಿ ಹೋಗುವುದು. ನಾನೆ ಬಂದು ರಾಣಿಯವರನು ಕಾಣುತ್ತೇನೆ.

ಸೋಮಯ್ಯ – ಸೈನಿಕರೇ, ಏನು ನೋಡುವಿರಿ?
(ಸೈನಿಕರು ರುದ್ರಯ್ಯನನ್ನೇ ನೋಡುವರು)

ರುದ್ರಯ್ಯ – ಮಂತ್ರಿಗಳೆ ರಾಣಿಯ ಆಜ್ಞೆಯನು ನಾವು ಮೀರಲಾರೆವು. ನಿಮ್ಮನು ಸೆರೆಹಿಡಿದೇ ತರಬೇಕೆಂದು ನನಗೆ ಕಟ್ಟಪ್ಪಣೆಯಿದೆ, (ಬಸವಯ್ಯನ ಕಡೆ ತಿರುಗಿ) ಪ್ರತಿಭಟಿಸಿದರೆ ಬಲಪ್ರಯೋಗಮಾಡಲೂ ಅಪ್ಪಣೆಯಿದೆ!

ಲಿಂಗಣ್ಣ – ಹಾಗೆಯೇ ಆಗಲಿ; ಬರುತ್ತೇನೆ ನಡೆಯಿರಿ. (ಬಸವಯ್ಯನಿಗೆ ಮೆಲ್ಲಗೆ) ನಾವೀಗ ಪ್ರತಿಭಟಿಸಿದರೆ ನಮಗೆ ಕೇಡಾಗುವುದು. ಯುಕ್ತಿಯಿಂದ ಮುಂದುವರಿಯಬೇಕು. ಈಗ ಸುಮ್ಮನೆ ನನ್ನೊಡನೆ ಬಾ. (ರುದ್ರಾಂಬೆಗೆ) ಧೈರ್ಯವಾಗಿರು, ತಾಯಿ; ಹಿಂತಿರುಗಿ ಬರುತ್ತೇವೆ.

(ಸೈನಿಕರ ಪಹರೆಯಲ್ಲಿ ಲಿಂಗಣ್ಣ ಬಸವಯ್ಯರನ್ನು ಕರೆದುಕೊಂಡು ಎಲ್ಲರೂ ಹೋಗುವರು. ತಂದೆಯನ್ನೂ ಇನಿಯನ್ನೂ ಬಿಡುಗಣ್ಣಾಗಿ ನೋಡುತ್ತ ರುದ್ರಾಂಬೆ ಕಂಬನಿದುಂಬಿ ನಿಲ್ಲುತ್ತಾಳೆ.)

[ಪರದೆ ಬೀಳುವುದು]