[ಅರಮನೆಯ ಹೆಬ್ಬಾಗಿಲ ಬಳಿ, ನಡುರಾತ್ರಿ – ಕೆಂಚಣ್ಣ, ಹೊನ್ನಯ್ಯ, ಬಸವಯ್ಯ ಪ್ರವೇಶಿಸುವರು.]
ಬಸವಯ್ಯ – ಏನು ಮೌನ, ಏನು ಶಾಂತಿ, ಈ ಪ್ರಕೃತಿರಂಗದಲಿ!
ಹೊನ್ನಯ್ಯ – ಆದರೂ ಭಯಂಕರ.
ಬಸವಯ್ಯ – ಹೌದು, ಮಹತ್ತಾದುದೆಲ್ಲ ಭವ್ಯವಾಗಿರುತ್ತದೆ. ಭಯವೆಂಬುದು ನಮ್ಮ ಸ್ವಾರ್ಥತೆಯ ದೃಷ್ಟಿಗೆ ಮಾತ್ರ. ನೋಡು, ಹೊನ್ನಯ್ಯ, ಈ ಬೆಳ್ದಿಂಗಳ ಮಾಯೆ ಎಷ್ಟು ಮನೋಹರವಾಗಿದೆ. ಈ ಸೌಂದರ್ಯ ಪೂರದಲ್ಲಿ ನನ್ನೆದೆಯ ಕೋಟಿಲೆಯೆಲ್ಲ ಹಗುರವಾದಂತಾಗಿ ತೇಲುತಿದೆ. ನಾವೈತಂದ ಕಜ್ಜವೇ ವಿಸ್ಮೃತಿಯನೈದುತಿದೆ. – ಈಗ ಹೊತ್ತು ಎಷ್ಟಿರಬಹುದು?
ಕೆಂಚಣ್ಣ – ನಡುರಾತ್ರಿ, ಕಳೆದಿದೆ, ಸ್ವಾಮಿ. ಇನ್ನೇನು ಅದು ಬರುವ ಸಮಯ.
ಬಸವಯ್ಯ – ಹೊನ್ನಯ್ಯ, ನಾನೊಬ್ಬ ಸಾಮಾನ್ಯ ಮಾನವನಾಗಿ ಹುಟ್ಟಬಾರದಾಗಿತ್ತೆ?
ಹೊನ್ನಯ್ಯ – ಸಾಮಾನ್ಯರು ಈ ರೀತಿ ಆಲೋಚಿಸುವುದಿಲ್ಲ. ನಿನಗೀಗ ಕೊರತೆಯೇನು?
ಬಸವಯ್ಯ – ನೋಡಿದೋ, ಎಂತಹ ಶಾಂತಿ ಕಡಲಾಡುತಿದೆ!
ಎಂತಹ ಸೊಬಗು ಸೂರೆಯಾಗಿಹುದು ಈ ನಮ್ಮ
ತಿರೆಯಲ್ಲಿ! ಈ ಪ್ರಕೃತಿ ಸೌಂದರ್ಯವೆಮ್ಮನು
ಕೈಬೀಸಿ ಕರೆಯುತಿದೆ ಉತ್ತಮ ಪ್ರಪಂಚಕ್ಕೆ.
ಈ ಸೊಬಗನೀಕ್ಷಿಸಲು, ಈ ಶಾಂತಿಯನು ಸವಿಯೆ,
ಈ ಪ್ರಕೃತಿಯಮರವಾಣಿಯ ಕರೆಯನಾಲಿಸಲು,
ದೊರೆತನದ ದೂಳ್ಮುಸುಕಿದಕ್ಷಿಯಿಂದಾಗದು;
ಹೆಮ್ಮೆಯಿಂ ರುಚಿಗೆಟ್ಟ ಎದೆಗೆ ಶಾಂತಿಯು ಸಿಗದು;
ಸಿರಿಬೊಬ್ಬೆ ತುಂಬಿರುವ ಕರ್ಣಗಳಿಗಾ ವಾಣಿ
ಕೇಳಿಸದು! – ಹೊತ್ತಿಲ್ಲ; ನಮಗೆ ಪುರಸತ್ತಿಲ್ಲ!
ಒಳಸಂಚುಗಳ ಹೂಡಲೆಮಗಿಹುದು ಹೊತ್ತು;
ಪರರ ಛಿದ್ರವನರಸಲೆಮಗಿಹುದು ಬೇಕಾದ
ಪುರಸತ್ತು! ಸೊಬಗನಾಸ್ವಾದಿಸಲು ಹೊತ್ತಿಲ್ಲ!
ಗಗನದ ಅನಂತತೆಯನೀಕ್ಷಿಸುತೆ ಮೈಮರೆಯೆ
ಹೊತ್ತಿಲ್ಲ! ಬನದ ಹೂವನು ನೋಡಿ ಬಣ್ಣಿಸಲು
ನಮಗೆ ತೆರಪಿಲ್ಲ! ಹಕ್ಕಿ ಹಾಡಲು ನಿಂತು
ಆಲಿಸಲು ಹೊತ್ತಿಲ್ಲ! – ಮರ್ತ್ಯದಲ್ಲಿಹ ಮಧುರ
ಸ್ವರ್ಗ ಬಿಂದುಗಳಲ್ತೆ ಸೌಂದರ್ಯ ಸ್ಥಾನಗಳು?
ಸತ್ತಮೇಲೆಮಗೆ ಸಿಗಬಹುದು ಪುರಸತ್ತು;
ಆದರೀ ಚೆಲ್ವು ಸಿಗುವುದೆ? ಯಾವನಿಗೆ ಗೊತ್ತು?
ಕೆಂಚಣ್ಣ – ಅಲ್ಲಿ ನೀಡಿ! ಬರುತ್ತಿದೆ! ಶಿವ! ಶಿವ! ಶಿವ!…
ಹೊನ್ನಯ್ಯ – ನೋಡಲ್ಲಿ, ಬಸವಯ್ಯ, ನೋಡಲಿ!
ಬಸವಯ್ಯ – ನನ್ನ ತಂದೆಯೆ ಹೌದು! ಶಿವಶಿವಾ!
[ಭೂತ ದೂರದಲ್ಲಿ ಪ್ರವೇಶಿಸುತ್ತದೆ]
ಹೊನ್ನಯ್ಯ – ಮಾತಾಡಿಸು! ಮಾತಾಡಿಸು!
ಬಸವಯ್ಯ – ಶಿವಶಿವಾ ಕಾಪಾಡು!
ದೆವ್ವವೋ? ದೇವತೆಯೊ? ಯಾರಾದರಾಗಿರು!
ಶುಭವು ನಿನ್ನುದ್ದೇಶವೋ? ಆಶುಭವುದ್ದೇಶವೊ?
ನಾನರಿಯೆ! ಆಕಾರದಲಿ ನೀನು ನನ್ನ ಆ
ತಂದೆಯನೆ ಹೋಲುತಿಹೆ. ಅದರಿಂದೆ ನುಡಿಸುವೆ:
ಬಸವೇಂದ್ರ ಭೂಮಿಪನೆ, ಓ ತಂದೆ, ಓ ದೊರೆಯೆ,
ಬಿದನೂರನಾಳಿದ ಮಹಾಸ್ವಾಮಿ, ಬೇಡುವೆನು;
ಪಡಿನುಡಿಯನಿತ್ತೆನ್ನ ಮನದ ಸಂದೇಹವನು
ಪರಿಹರಿಸು. ಪುಣ್ಯಾತ್ಮನಾದ ನೀನಿಂತೇಕೆ
ದಿಕ್ಕಿರದೆ ಮಡಿದವನ ಆತ್ಮದಂದದಲಿ
ಪ್ರೇತರೂಪದಿ ರಾತ್ರಿಯನು ಸುತ್ತುತಿರುವೆ?
ಇದರರ್ಥವೇನರುಹು! ದುಃಖದಿಂದೆನ್ನೆದೆ
ಸಿಡಿಯುತಿದೆ. ಈ ನನ್ನ ತಂದೆ, ಮಾತಾಡು!
ನೀನೆನ್ನ ತಂದೆಯೇ ದಿಟವಾದರೆನಗೆ ನುಡಿ!
ಏಕಿಂತು ತೊಳಲುತಿಹೆ? ಬಯಕೆಯೇನಿಹುದಿಲ್ಲಿ?
ನಿನಗಾವ ರೀತಿಯಲಿ ನಾನು ನೆರವಾಗಬಲ್ಲೇ?
ಹೇಳು! ನುಡಿ! ಮಾತಾಡು!…
[ಭೂತ ಸನ್ನೆಮಾಡುವುದು]
ಕೆಂಚಣ್ಣ – ಅಯ್ಯೊ, ಕೈ ಬೀಸಿ ಕರೆಯುತ್ತಿದೆ!
ಹೊನ್ನಯ್ಯ – ಆವ ಗುಟ್ಟನೊ ನಿನಗೊಬ್ಬನಿಗೆ ಹೇಳುವಂತೆ!
ಕೆಂಚಣ್ಣ – ಅಯ್ಯೋ, ಹೋಗಬೇಡಿ, ಸ್ವಾಮಿ!
ಹೊನ್ನಯ್ಯ – ಹೋಗುವುದೆಂದರೇನು? ಹುಡುಗಾಟವೆ!
ಬಸವಯ್ಯ – ಇಲ್ಲಿ ಮಾತಾಡಲದಕೆ ಸಂಕೋಚವೆಂದು ತೋರುತಿದೆ. ಅದರೊಡನೆ ಹೋಗುವೆನು.
ಹೊನ್ನಯ್ಯ – ಅದಾಗದು, ಬಸವಯ್ಯ! ನಿನಗೇನು ಮರುಳಾಟವೇ?
ಕೆಂಚಣ್ಣ – ದಮ್ಮಯ್ಯ! ಖಂಡಿತ ಹೋಗುವುದು ಬೇಡ!
ಬಸವಯ್ಯ – ಭಯವೇಕೆ, ಹೊನ್ನಯ್ಯ? ನನ್ನ ಜೀವನವೊ
ನನಗೆ ತೃಣಕಿಂತ ಕಡೆ! ನನ್ನಾತ್ಮ? ಅದನೇನು
ಮಾಡಬಲ್ಲದು? ಅಮರವಾದುದದು! ನೋಡದೋ,
ಮರಳಿ ಕೈ ಬೀಸುತಿದೆ! ಹೋಗಿಯೇ ಹೋಗುವೆನು!
ಕೆಂಚಣ್ಣ – ಸ್ವಾಮಿ, ನಿಮ್ಮನೆಲ್ಲಿಯಾದರೂ ಕೆರೆಗೋ ಬಾವಿಗೋ ಹಾರಿಸಿ ಬಿಡುತ್ತದೆ! ಹೋಗ ಬೇಡಿ! ನಿಮ್ಮ ದಮ್ಮಯ್ಯ!
ಹೊನ್ನಯ್ಯ – (ಬಸವಯ್ಯನ ಕೈ ಹಿಡಿದು)
ಸತ್ಯವೋ ಕಪಟವೋ ನೀನರಿಯೆ, ಬಸವಯ್ಯ.
ಎಲ್ಲಿಯಾದರೂ ನಿನ್ನನೆಳದೊಯ್ದು ಕಿಬ್ಬಿಯಲಿ
ತಳ್ಳಿದರೆ! ಅಥವಾ ರುದ್ರಾಕೃತಿಯನಾಂತು
ನಿನ್ನ ಮೆದುಳನೆ ಕದಡಿ ಹುಚ್ಚು ಹಿಡಿಸಿದರೆ!
ಬಸವಯ್ಯ – ಕರೆಯುತಿದೆ! ಕೈ ಬಿಡು!
ಹೊನ್ನಯ್ಯ – ನಾನು ಬಿಡೆ! ನೀನು ಹೋಗಕೂಡದು!
ಕೆಂಚಣ್ಣ – ಅಯ್ಯೋ, ನಿಮ್ಮ ದಮ್ಮಯ್ಯ!
ಬಸವಯ್ಯ – (ಅಧಿಕಾರಯುಕ್ತ ವಾಣಿಯಿಂದ) ಬಿಡು ಕೈಯ, ಹೊನಯ್ಯ!
(ಕೊಡಹುವನು)
ಹೊನ್ನಯ್ಯ – ಇಲ್ಲ; ನಮ್ಮ ಸ್ನೇಹದಾಣೆ! ನೀನು ಹೋಗಲಾರೆ!
ಬಸವಯ್ಯ – ಅಯ್ಯೋ, ನನ್ನ ನೆತ್ತರು ಕೇಸರಿಯಂತೆ ಕೆರಳಿದೆ! – ಆ! ಇನ್ನೂ ಸನ್ನೆಮಾಡಿ ಕರೆಯುತ್ತಲೇ ಇದೆ! – ಕೈಬಿಡು, ಹೊನ್ನಯ್ಯ! (ಹೋರಾಡಿ ಬಿಡಿಸಿಕೊಂಡು) ತಡೆದರೆನ್ನನು ನಿಮಗೂ ಅದುವೆ ಗತಿಯಾದೀತು.(ಭೂತಕ್ಕೆ) ನಡೆ, ಬರುತೇನೆ! (ಭೂತದೊಡನೆ ಹೋಗುವನು)
ಹೊನ್ನಯ್ಯ – ಅವನಿಗೇನೋ ಹುಚ್ಚು ಕೆರಳಿದೆ!
ಕೆಂಚಣ್ಣ – ನಾವೂ ಹೋಗೋಣ ಅವರ ಹಿಂದೆಯೆ. ಈಗ ಅವರ ಮಾತು ಕೇಳಬಾರದು.
ಹೊನ್ನಯ್ಯ – ಆಗಲಿ, ಬಾ. ಏನಾಗುವುದೋ ನಾನು ಬೇರೆ ಕಾಣೆ!
ಕೆಂಚಣ್ಣ – ನಮ್ಮ ನಾಡಿಗೇನೋ ಕೇಡುಗಾಲ ಬಂದಿದೆ, ಸ್ವಾಮಿ.
ಹೊನ್ನಯ್ಯ – ಶಿವಾ, ಅಮಂಗಳವಾಗದಿರಲಿ!
ಕೆಂಚಣ್ಣ – ಬನ್ನಿ! ಹೊತ್ತಾಯ್ತು! (ಹೋಗುವರು)
[ಪರದೆ ಬೀಳುವುದು]
Leave A Comment