[ರಾತ್ರಿಯ ಸಮಯ. ತಿಂಗಳಬೆಳಕು ನಸುಮಬ್ಬಾಗಿದೆ. ಬಿದನೂರಿನ ಹೊರ ಬೀದಿಯೊಂದರಲ್ಲಿ ಚಿಂದಿಬಟ್ಟೆಗಳನ್ನುಟ್ಟು ತಲೆಕೂದಲು ಕೆದರಿಕೊಂಡು ವಿಕಾರವೇಷದಿಂದ ರುದ್ರಾಂಬೆ ಬರುತ್ತಾಳೆ. ಆಕೆಯ ಕ್ರೋಧ ವಿಸ್ಪಾರಿತ ನೇತ್ರಗಳು ರಕ್ತಾಕ್ತವಾಗಿ ರಕ್ತ ತೃಷ್ಣಾಪೂರ್ಣನಾಗಿ ಭೀಷಣವಾಗಿವೆ. ಆಕೆಯ ಹೃದಯದಲ್ಲಿ ಕ್ರೋಧ ದುಃಖಗಳ ಖಡ್ಗಾಖಡ್ಗಿಯಾಗುತ್ತಿದೆ. ನಡುನಡುವೆ ನೀಳವಾಗಿ ಬಿಳಲುಬಿದ್ದ ರೂಕ್ಷ ಕೇಶಪಾಶಗಳನ್ನು ಎರಡು ಕೈಗಳಿಂದಲೂ ಹರಿದುಕೊಳ್ಳುತ್ತಾಳೆ. ಒಮ್ಮೆಯೊಮ್ಮೆ ತಲೆಬಡಿದುಕೊಳ್ಳುತಾಳೆ. ಕೆಲವು ಸಾರಿ ತಲೆ ಮೈಗಳ ಮೇಲೆ ದೂಳು ಹಾಕಿಕೊಳ್ಳುತ್ತಾಳೆ.]

ರುದ್ರಾಂಬೆ(ಅನಿಮಿಷನಯನೆಯಾಗಿ ಗಗನದೆಡೆಗೆ ನೋಡುತ್ತ ಬದ್ಧ ಭ್ರುಕುಟಿಯಾಗಿ ದೀರ್ಘಶ್ವಾಸಗಳನ್ನು ಬಿಡುತ್ತ)
ಇನ್ನೂ ಮಿಣುಕುತಿವೆ! ಇನ್ನೂ ಮಿಣುಕುತಿವೆ
ಈ ಹಾಳು ನಿಷ್ಕರುಣ ತಾರೆಗಳು! ಹಾಳಾಗಲಿ!
ನಿಮ್ಮ ಕಾಂತಿಯ ಕಣ್ಣು ಸಿಡಿದೊಡೆದು ಹೋಗಲಿ,
ನನ್ನ ಬಾಳಿನ ನೆಚ್ಚು ಹುಟ್ಟಿಳಿದುಹೋದಂತೆ!
(ತಲೆಕೂದಲು ಹರಿದುಕೊಳ್ಳುವಳು.)
ಗಗನ ಶ್ಮಶಾನದಲಿ ಪ್ರಜ್ವಲಿಪ ಚಿತೆಯೇ,
ಓ ಚಂದ್ರ,
ನಿನ್ನ ಪ್ರೇತಜ್ಯೋತಿಯನ್ನೇಕೆ ಬೀರುತಿಹೆ?
ಸಾಕು, ಸಾಕೀ ನಿನ್ನ  ರುದ್ರ ಪರಿಹಾಸಂ! (ಔಡುಗಚ್ಚಿ)
ಅಯ್ಯೋ ನಿನ್ನನ್ನು ಕೊಲೆಗೈಯಲಾರಿಲ್ಲವೇ
ಅಲ್ಲಿ, ಆ ಬಾನಿನ ಸತ್ತ ಸುಡುಗಾಡಿನಲ್ಲಿ?
ಓ ತಾರೆಯೇ, ನುಗ್ಗು, ನಡೆ, ಹೋಗು;
ಚಂದ್ರನಿಗೆ ತಾಗು;
ನೀವಿಬರೂ ಒಡೆದು ಚೂರಾಗಿ ಬೀಳುವಿರಿ!
ಅದ ನೋಡಿ ತಣಿಯುವೆನು!
ಓ ಶೂನ್ಯವೇ,
ನನ್ನೆದೆಯನಾವರಿಸಿದಂತೆ ವಿಶ್ವವನೇಕೆ
ನುಂಗಿ ನುಣ್ಣನೆ ನೊಣೆದು ತೇಗದಿಹೆ?
(ತಲೆಯ ಮೇಲೆ ಮಣ್ಣೆರಚಿಕೊಂಡು ಎದೆಬಡಿದು ತಲೆಹೊಡೆದುಕೊಳ್ಳುತ್ತಾಳೆ.

ಓ ಪರ್ವತಾರಣ್ಯಗಳೇ ಬನ್ನಿ,
ಓ ಗಗನ ಸಾಗರಗಳೇ ಬನ್ನಿ,
ಓ ಸೂರ್ಯ ಚಂದ್ರ ತಾರೆಗಳೇ ಬನ್ನಿ!
ಓ ಬ್ರಹ್ಮಾಂಡವೇ ಬಾ,
ಓ ಕಾಲ ದೇಶಗಳೇ ಬನ್ನಿ
ನನ್ನೆದೆಯ ಶೂನ್ಯವನು ತುಂಬಿ, ಬನ್ನಿ!
ಇಲ್ಲ, ಆ ಶೂನ್ಯವನು ತುಂಬಲಾರಿರಿ ನೀವು!
ಆ ಶ್ಯೂನ್ಯದಲಿ ವಿಲಯವಿದೆ!
ನೀವಲ್ಲಿ ಜೀರ್ಣವಾಗುವಿರಿ!
ನೀವೆಲ್ಲ ಇಲ್ಲವಾಗುವಿರಿ!
(ಸಂಪೂರ್ಣ ಹತಾಶಳಾಗಿ ಕೆಳಗುರುಳಿ ಮತ್ತೆ ಮೊಳಕಾಲೂರಿ ಮೇಲೆ ನೋಡಿ)
ಹೇ ಜಗದೀಶ್ವರನೇ, ಹೇ  ಜಗದೀಶ್ವರನೇ,
ಶೂನ್ಯವನು ಪೂರ್ಣಗೈಯುವ ಶೂನ್ಯತಮ ಶೂನ್ಯವೇ,
ನೀನೆನಗೆ ಸಾಕ್ಷಿ! ನೀನೆನಗೆ ಸಾಕ್ಷಿ!
ಹೊನ್ನಯ್ಯನಿನಿಯನನು ಕೊಲೆಗೈದುದಕೆ – ಅಯ್ಯೋ
ನೀನೆನಗೆ ಸಾಕ್ಷಿ!
ಓ ರಾತ್ರಿ! ಓ ಕಾಳರಾತ್ರಿ!
ನೀನೂ ನನಗೆ ಸಾಕ್ಷಿ!
ನಾನು ಅನಾಥೆ! ನಾನು ದುಃಖಿತೆ!
ಓ ಆಕಾಶ! ಓ ನಕ್ಷತ್ರ!
ನೀವೆಲ್ಲರೂ ನನಗೆ ಸಾಕ್ಷಿ! (ದುಃಖಭರದಿಂದ)
ಅಯ್ಯೋ (ರೋದಿಸಿ ಗೋಳಾಡಿ)
ನನ್ನೆದೆಯನಿರಿದುದಕೆ ನೀವೆಲ್ಲರೂ ಸಾಕ್ಷಿ!
(ಮುಖ ಭಯಂಕರವಾಗಿ ಫಕ್ಕನೆ ಮೇಲೆದ್ದು ಹಲ್ಲು ಕಚ್ಚುತ್ತ)
ಎಲವೋ ಪಾಪಿ! (ಪ್ಲುತಸ್ವರದಿಂದ)
ಪಿಚಾಚಿ! ಘಾತುಕಾ! ಪಾತಕಿ! ನೀಚ!
ಹೊನ್ನಯ್ಯ! (ಚೀರುವಳು.)
ನಿನಗೆ ಕೈಬಂದುದೇ, ನಿನಗೆ ಮನಬಂದುದೇ
ನನ್ನ ಕಣ್ಣಾಗಿದ್ದ ನನ್ನಿನಿಯನನ್ನಿರಿಯೆ?
ಅದಕಿದೋ – ಅದಕಿದೋ!
(ಸೊಂಟದಿಂದ ಕಠಾರಿಯನ್ನು ಹೊರಗೆಳೆದು)
ಅದಕಿದೇ ನಿನಗೆ ಸಾಕ್ಷಿ! (ವಿಕಟವಾಗಿ ನಕ್ಕು)
(
ಇದ್ದಕ್ಕಿದ್ದಂತೆ ಶರೀರದ ಕಾಠಿನ್ಯ ಕೋಮಲವಾಗಿ ಹೃದಯವಿದ್ರಾವಕವಾದ ವಾಣಿಯಿಂದ ಹೇಳುತ್ತ ತತ್ತರಿಸಿ ನೆಲದಮೇಲೆ ಕೂತು ರೋದಿಸುತ್ತಾಳೆ.)
ಓ ಇನಿಯ, – ಓ ದೊರೆಯೇ,
ಓ ನನ್ನ ಬಸವಯ್ಯ,
ನಿನ್ನ ಗತಿಯಿಂತಾಯ್ತೆ?
ಅಯ್ಯೊ ನನ್ನನೊಲಿದುದಕೆ! (ಕಡಿದುಬಿದ್ದು ರೋದಿಸಿ)
(
ಮತ್ತೆ ಮೇಲೆದ್ದು ದೃಢತೆಯಿಂದ)
ಮೃತ್ಯೂ! ಓ ಮೃತ್ಯೂ! (ಎದೆಯನ್ನು ಮುಟ್ಟುತ್ತ)
ಈ ಶೂನ್ಯವನು ತುಂಬಲಾರೆಯಾ ನೀನು?
ಹಾಗಾದರಿದೋ! ಬಾ! ತುಂಬು!
(ಕಠಾರಿಯನೆತ್ತಿ ಯಾರನ್ನೋ ತಿವಿಯುವಂತೆ ಅಭಿನಯಿಸಿ)
ತಂದೆಯೇ, ನನ್ನಿನಿಯನನ್ನಗಲಿ ನೀನೂ
ಓಡಿದೆಯಾ? (ಅಳುವಳು.) – ಓ ಶಿವಯ್ಯ,
ಹೆಂಬೇಡಿಯೇ, ಮಿತ್ರದ್ರೋಹಿ,
ಹೊನ್ನಯ್ಯನನು ತಿವಿದು ಕೆಡಹಿ ಕೊಲಲಾರದೇ
ತಲೆಮರಸಿಕೊಂಡು ಓಡಿದೆಯಾ?
ಇರಲಿ! ಇರಲಿ!
ಅದನಿಂದು ಪೂರೈಸುವೆನು ನಾನು!
ನಾನು!
ರುದ್ರಾಂಬೆಯಲ್ಲದಿಹ ರಕ್ತಾಕ್ಷಿ ನಾನು!
ಹೊನ್ನಯ್ಯ, ಕೊಂದು, ಹೆಣವನು ತಂದು, ಮಸಣದಲಿ
ಸಂಸ್ಕಾರವೆಸಗುವಂತೆ ಅಭಿನಯಿಸುತಿಹೆಯಾ?
ಆ ಮಸಣದಿಂದ ನೀ ಮರಳಲಾರೆ!
ನಾನು ರಕ್ತಾಕ್ಷಿ ಅಹುದಾದರೆ
ನೀ ಮರಳಲಾರೆ!
ನಿನ್ನ ರಕ್ತವ ಚೆಲ್ಲಿ
ತಣಿಸುವೆನು ನನ್ನಿನಿಯನಾತ್ಮವನು!
ಓ ಕಾಳರಾತ್ರಿ,
ಬಾ ನನ್ನೊಡನೆ!
ಮಿತ್ರದ್ರೋಹಿಯ ಕೊಲೆಗೆ
ಹೊನ್ನಯ್ಯನ ಕೊಲೆಗೆ
ನರಬಲಿಗೆ! – ಶ್ಮಶಾನ ಬಲಿಗೆ!
(ಮೆಲ್ಲಗೆ ಕಠಾರಿಯನ್ನು ನೋಡುತ್ತ ತತ್ತರಿಸುತ್ತ ಹೋಗುತ್ತಾಳೆ.)

[ಪರದೆ ಬೀಳುವುದು]