[ನಡುರಾತ್ರಿ ಮೀರಿದೆ. ಬಿದನೂರಿನ ಹೊರಬಯಲು ಮಸಣದಲ್ಲಿ ಬಸವಯ್ಯನ ಸಮಾಧಿ. ಕೆಂಚಣ್ಣ ಪಂಜು ಹಿಡಿದುಕೊಂಡು ನಿಂತಿದ್ದಾನೆ. ತಿಮ್ಮಜಟ್ಟಿ ಗುದ್ದಲಿಯಿಂದ ಸಮಾಧಿಗೆ ಮಣ್ಣು ತುಂಬುತ್ತಿದ್ದಾನೆ. ಹೊನ್ನಯ್ಯನು ಬಳಿಯಲ್ಲಿಯೆ ಕುಳಿತು ತಲೆಯ ಮೇಲೆ ಕೈಯಿಟ್ಟು ಶೋಕ ಪಡುತ್ತಿದ್ದಾನೆ.]

ಹೊನ್ನಯ್ಯ –  ಓ ಸ್ವರ್ಣಸ್ವಪ್ನವೇ, ಸಿಡಿದೊಡೆದು ಹೋದೆಯಾ?
ಮೂಡಣದ ಬಾನ ಕರೆಯಲಿ ಉಷೆಯ ತಣ್ಬೆಳಕು
ಮುಗುಳು ನಗೆಯನು ಬೀರಿಬಹ ಮೊದಲೆ, ಬನಗಳಲಿ
ಉದಯಕಾಲದ ಮೌನವಾರಿಧಿ ವಿಹಂಗಗಳ
ಮಧುರ ಕೂಜನ ತರಂಗಾಳಿಯಿಂದಲ್ಲೋಲ
ಕಲ್ಲೋಲವಾಗಿ ಎಚ್ಚರುವ ಮುನ್ನವೆ, ನಟ್ಟ
ನಡುರಾತ್ರಿಯೊಳೆ ಬಟ್ಟಬಯಲಾಗಿ ಹೋದೆಯಾ?
ಓ ರತ್ನಹಾರವೇ, ಸುಂದರಿಯ ಕಂಠದಲಿ
ನಲಿದಾಡಲೆಂದು ಬಂದಾ ನೀನು ಕಾಡಿನಲಿ
ಸೂಕರನ ಪದಹತಿಗೆ ಸಿಕ್ಕಿ ಚೂರಾದೆಯಾ?
ಅರಮನೆಯ ಉದ್ಯಾನದಲಿ ಬೆಳೆದ ಶ್ರೀತರುವೆ,
ಚೈತ್ರದಾಗಮನದೊಳೆ ಬಿರುಗಾಳಿಗಿಳೆಗುರುಳಿ
ಹಾಳೊರಲೆಗುಣಿಸಾಗಿ ಕಣ್ಮರೆಯಾದೆಯಾ?
ಓ ಮಿತ್ರ, ಓ ನನ್ನ ಬಸವಯ್ಯ, ರಾಜನಿಗೆ
ಮಗನಾಗಿ ಜನಿಸಿ ಪರದೇಶಿಯಂದದಲಿ
ಮಣ್ಣಾದುದೇ ನಿನ್ನ ಸಿರಿಬಾಳು! – ಎಲೆ ಬದುಕೆ,
ತುತ್ತತುದಿಯಲಿ ನೀನು ಬರಿದೊಂದು ಹಿಡಿಮಣ್ಣು!
ನಿನ್ನನುಳುಹಲು ನಾನು ಕೈಗೊಂಡ ಸಾಹಸವೆ
ನಿನಗೆ ಮಸಣದ ಮಾರ್ಗವಾದುದೈ, ಬಸವಯ್ಯ!
ಅಯ್ಯೊ ಇನ್ನಾರೊಡನೆ ನನ್ನೆದೆಯ ವೇಧೆಯನು
ಹೇಳುವೆನು? ಆರೊಡನೆ ಕಲೆಯ ಸಾಮ್ರಜ್ಯದಲಿ,
ತತ್ತ್ವದುದ್ಯಾನದಲಿ, ಚರಿಸಿ ಭಾವಮಂಜರಿಯ
ತಿರಿದು ನಲಿಯುವೆನು? ಮತ್ತಾರೊಡನೆ ರವಿಯುದಯ
ಶಶಿಯುದಯಗಳನು ಮೈಗುಡಿಗಟ್ಟಿ ಬಣ್ಣಿಸಲಿ?
ಸೋದರನೆ, ನೀನೆನಗೆ ಎದೆಯ ಕಣ್ಣಾಗಿದ್ದೆ;
ಬಾಳಿನುಸಿರಾಗಿದ್ದೆ! ನಿನ್ನನುಳಿದೆನಗಿಂದು
ಕಣ್ಣಿಲ್ಲ; ಎದೆಯಿಲ್ಲ; ಉಸಿರಿಲ್ಲ! ನಾನಿಂದು
ಹುಟ್ಟುಗುರುಡನು; ಬಾಳು ನನಗಿನ್ನು ಕಗ್ಗತ್ತಲೆ!
ನಿನ್ನನೊಳಕೊಂಡಿರುವ ಮರಣಾಂಧಕಾರವೇ
ನನಗೆ ಜ್ಯೋತಿಯ ಪುಂಜವಾಗಿಹುದಿಂದು!
ನಿಷ್ಕರುಣ ಲೋಕವೇ,
ನಿನಗೆ ದಯೆ ದಾಕ್ಷಿಣ್ಯವೊಂದಿಲ್ಲ!
ಆರಳಿದರೇನಂತೆ ನೀನುರುಳುತಿರುವೆ!
ನಾನಳಿದರೇನಂತೆ? ನೀನಳಿದರೇನಂತೆ?
ಇರುಳು ಕಳೆವುದು! ನೇಸರೆಂದಿನಂತೆಯೆ ಮೂಡಿ
ಹೊನ್ನೀರಿನಿಂದಿಳೆಯ ಮೀಯಿಸುತೆ ಬೆಳಗುವನು!
ಗಾಳಿ ಬೀಸುವುದೆಂದಿನಂತೆ! ಹರಿಯುವುದು ಹೊಳೆ
ಹಿಂದೆ ಹರಿದಂದದೊಳೆ! ಮಾಯೆಯಿಕ್ಕುವ ಕರದ
ತಾಳಲಯಕೆಂದಿನಂತೆಯೆ ಕಾಲದೇಶಗಳು
ನರ್ತಿಸುತೆ ಸಾಗುವುವು! – ಅಯ್ಯೋ, ಮಾನವನ
ಎದೆಯೊಲ್ಮೆಯಿಂದುದಿಪ ಬಗೆಯ ನೆನಹಿಲ್ಲದಿರೆ
ತೀರಿದವರೆಲ್ಲರೂ ಶೂನ್ಯಕಾಪೋಶನಂ! (ಚಿಂತಿಸುವನು)
ಹಿಂದೆಲ್ಲ ಬಾಳುತಿಹುದಿಂದಿನ ನೆನಹಿನಲ್ಲಿ;
ಮುಂದೆಲ್ಲ ಬದುಕಿರುವುದಿಂದಿನಾಕಾಂಕ್ಷೆಯಲಿ!
(ಅಷ್ಟರಲ್ಲಿ ತಿಮ್ಮಜಟ್ಟಿ ಕೆಂಚಣ್ಣರು ಕೆಲಸವನ್ನೆಲ್ಲ ಪೂರೈಸಿ ನಿಂತು)

ಕೆಂಚಣ್ಣ – ಸ್ವಾಮಿ, ನಡುರಾತ್ರಿ ಮೀರಿಹೋಯಿತು.

ತಿಮ್ಮಜಟ್ಟಿ – ನಾವಿನ್ನು ತಡಮಾಡಿದರೆ ಕೇಡಾಗಬಹುದು. ನಿಂಬಯ್ಯ ಸಂಶಯದ ಪಿಶಾಚಿ!

ಹೊನ್ನಯ್ಯ (ಅನ್ಯಮನಸ್ಕನಾಗಿ) ರುದ್ರಾಂಬೆ!
ರುದ್ರಾಂಬೆ, ನೀನೆಲ್ಲಿ ಮರೆಯಾದೆಯೇ, ತಂಗಿ?
ಕೆಂಚಣ್ಣ, ರುದ್ರಾಂಬೆಯಿಹ ನೆಲೆ ನಿನಗೆ ಗೊತ್ತೆ?

ಕೆಂಚಣ್ಣ – ನಾನರಿಯೆ, ಸ್ವಾಮಿ. ತಾಯಿಗಿದು ತಿಳಿಯದಿರುವುದೆ ಲೇಸು.

ತಿಮ್ಮಜಟ್ಟಿ – ನೀವೂ ಶಿವಯ್ಯನೂ ರಾತ್ರಿ ಸೆರೆಮನೆಯಿಂದ ಅವರನ್ನು ಬಿಡಿಸಿಕೊಂಡು ಹೋದ ಮರುದಿನವೆ ತಾಯಿ  ವೇಷ ಮರಸಿಕೊಂಡು ಅದೃಶ್ಯವಾದರಂತೆ. ಹಾಗೆ ಮಾಡದಿದ್ದರೆ ಅವರಿಗೆ ಏನುಗತಿಯಾಗುತ್ತಿತ್ತೊ ತಿಳಿಯದು. ನಿಂಬಯ್ಯ ಕೋಪದಿಂದುರಿಯುತಿದ್ದನಂತೆ.

ಹೊನ್ನಯ್ಯ – ಜಟ್ಟಿ, ನಾನೀಗ ಹುಟ್ಟಿಸಿರುವೀ ಸುದ್ದಿ
ರುದ್ರಾಂಬೆಗೆಲ್ಲಿಯಾದರೂ ಮುಟ್ಟಿದರೆ, ನಾನೆ
ಬಸವಯ್ಯನನು ಕೊಂದನೆಂಬ ಹುಸಿಯನು ನಂಬಿ
ಆತ್ಮಹತ್ಯವ ಮಾಡಿಕೊಂಬಳೊ ಏನೊ?
ನನಗೆ ಭಯವಾಗುತಿದೆ ಹೇಗಾದರೂ ಮಾಡಿ
ಆಕೆಯನು ಹುಡುಕಿ ದಿಟವನು ತಿಳಿಸಬೇಕು.

ಕೆಂಚಣ್ಣ – ಎಲ್ಲಿಯಾದರೂ ಉಂಟೆ? ಬಸವಯ್ಯನನು ಕೊಂದೆನು ಎಂದು ನೀವೇ ಹೇಳಿದರೂ ಅವರೆಂದಿಗೂ ನಂಬರು. ಕಿವಿಮೂಗಿಲ್ಲದ ಸುದ್ದಿಯನು ಕೇಳಿ ನಂಬುತ್ತಾರೆಯೆ?

ತಿಮ್ಮಜಟ್ಟಿ – ನಿನ್ನೆ ನೀವು ಹೇಳಿದ ಮೊದಲ್ಗೊಂಡು ನಾನೇ ನಿಮ್ಮ ಮಾತನ್ನು ನಂಬಲಿಲ್ಲ. ಯಾರೋ ಹೇಳುವ ಸುದ್ದಿಯನ್ನು ಕೇಳಿ ನಿಮ್ಮನ್ನು ಕೊಲೆಗಾರನೆನ್ನುವರೇ?

ಹೊನ್ನಯ್ಯ – ನೀವರಿಯಲಾರಿರಿ! ಕಷ್ಟದಲ್ಲಿರುವಾಗ
ಎಂಥದವರಿಗಾದರೂ ಬಗೆ ಕದಡುವುದು ಸಹಜ.
ಗಾಯಗೊಂಡ ಜೀವಿಗೆ ಕಣ್ಣೆ ಕಾಲಲ್ಲವೇ?

ಕೆಂಚಣ್ಣ(ಬೆಚ್ಚಿ) ಅಲ್ಲಿ ನೋಡಿ! ಅಲ್ಲಿ ನೋಡಿ!

ತಿಮ್ಮಜಟ್ಟಿ(ನೋಡಿ ಅಂಜಿ) ಅಯ್ಯೊ ಮಸಣದ ಮಾರಿ!

ಕೆಂಚಣ್ಣ – ಏಳಿ! ಹೊನ್ನಯ್ಯ, ಏಳಿ! ಓಡಿಬನ್ನಿ! ಬನ್ನಿ!
(ಪಂಜಿನೊಡನೆ ಓಡುತ್ತಾನೆ.)

ತಿಮ್ಮಜಟ್ಟಿ – ಶಿವ! ಶಿವ! ಶಿವ! – ಬನ್ನಿ! ಬನ್ನಿ! ಬನ್ನಿ!
(ಗುದ್ದಲಿಯನು ಬಿಸುಟು ಓಡುತ್ತಾನೆ)

ಹೊನ್ನಯ್ಯ(ನಿಧಾನವಾಗಿ ಎದ್ದು ನೋಡಿ) ಏನದು ವಿಕಾರಾಕೃತಿ! (ಕಣ್ಣರಳಸಿ ಭಯ ವಿಸ್ಮಯದಿಂದ ನೋಡುತ್ತಾನೆ. ರುದ್ರಾಂಬೆ ಭರದಿಂದ ಪ್ರವೇಶಿಸುತ್ತಾಳೆ.) ನೀನಾರು ಇಲ್ಲಿಗೇತಕೆ ಬಂದೆ? (ರುದ್ರಾಂಬೆ ವಿಕಟ ಕರ್ಕಶವಾಗಿ ನಗುತ್ತಾಳೆ.) ನಗುವೆ ಏಕಿಂತು? (ಎರಡು ಹೆಜ್ಜೆ ಹಿಂಜರಿಯೆ)

ರುದ್ರಾಂಬೆ(ತಾರಸ್ವರದಿಂದ) ನಿಲ್ಲು! ಹಿಂಜರಿದು ಓಡದಿರು! ಓ ಹೇಡಿ! – ನಾನಾರು ಎಂಬೆಯೋ? – ನಾನು ರಕ್ತಾಕ್ಷಿ! ಇಲ್ಲಿಗೇತಕೆ ಬಂದೆ ಎಂಬೆಯೋ? – ಇದಕೆ! –
(ಸೊಂಟದಿಂದ ತೆಕ್ಕನೆ ಕಠಾರಿಯನ್ನೆಳೆದು ಹಾರಿಹೋಗಿ ಇರಿಯುತ್ತಾಳೆ. ಹೊನ್ನಯ್ಯಹಾಎಂದು ಮೂರ್ಛೆ ಬೀಳುತ್ತಾನೆ.)
ಪಾಪೀ, ನಿನಗಿದೇ ತಕ್ಕ ಪ್ರಾಯಶ್ಚಿತ್ತ! –
ತಣಿ, ತಣಿ ಓ ಎನ್ನಿನಿಯ!
ನಿನ್ನನಿರಿದವನ ಬಿಸುನೆತ್ತರಲಿ ನಾದಿಹೆನು
ನಿನ್ನೀ ಸಮಾಧಿಯನು!
(ಹೊನ್ನಯ್ಯನನು ನೋಡುತ್ತ ನಿಲ್ಲುವಳು. ಅವನು ಮೂರ್ಛೆ ತಿಳಿದು ನರಳಿ ಕನಸಿನಲ್ಲೆಂಬಂತೆ ಹೇಳುತ್ತಾನೆ.)

ಹೊನ್ನಯ್ಯ – ಬಸವಯ್ಯ! ಬಸವಯ್ಯ! ಅಯ್ಯೋ,
ನೀನು ಸಾಯುವ ವೇಳೆ ನನಗಿತ್ತ ಆಜ್ಞೆಯನು
ಕೈಗೂಡಿಸದೆ ಸಾಯುವಂತಾಯ್ತೆ? – ಆ ಪಾಪಿ
ನಿನ್ನನನ್ಯಾಯದಿಂದಳಿಪಿದಾ ಪಾಪಿ
ಶಿವಯ್ಯನನು ಕೊಲ್ಲದೆಯೆ ಸಾಯುವಂತಾಯ್ತೆ? –
ಅಯ್ಯೊ ರುದ್ರಾಂಬೆ, (ರುದ್ರಾಂಬೆ ಬೆಚ್ಚಿ ನಿಲ್ಲುತ್ತಾಳೆ.)

ನಿನಗೆ ನನ್ನಿಯನೊರೆವ
ಮುನ್ನಮೆಯೆ – ಕಂಡು ನಿನ್ನನು ನುಡಿವ ಮುನ್ನಮೇ, –
ನಿನ್ನಿನಿಯನಾಡಿದಾ ಸಂದೇಶವನು ಒರೆವ
ಮುನ್ನವೇ, – ನಿಂಬಯ್ಯ ಚೆಲುವಾಂಬೆಯರ ಕುಹಕ
ಅಟ್ಟಿರುವ ಕೊಲೆಗಾರನಿಂದಳಿಯುವಂತಾಯ್ತೆ?
ನಿಂಬಯ್ಯ! ಚೆಲುವಾಂಬೆ! ಓ ಪಾಪಿಗಳಿರಾ – (ನರಳುತ್ತಾನೆ.)

ರುದ್ರಾಂಬೆ(ಮೆಲ್ಲಗೆ) ಏನಿದು? ಈ ಮಾತುಗಳೆದೆಯಿರಿಯುವಂತಿವೆ! – (ಗಟ್ಟಿಯಾಗಿ) ನೀನು ಬಸವಯ್ಯನನು ಕೊಲಲಿಲ್ಲವೆ?

ಹೊನ್ನಯ್ಯ – ಕೆಲಸಾರು, ಕೊಲೆಗಾರ ಹೊಲೆಯ! – (ತನ್ನಲ್ಲಿ ಗಟ್ಟಿಯಾಗಿ) ಓ ತಂಗಿ,
ರುದ್ರಾಂಬೆ,
ನಿನಗಾದರೂ ದಿಟವನರುಹಿ ಸಾಯುತ್ತಿದ್ದೆ!
ನೀನು ಕಣ್ಮರೆಯಾದೆಯಾ? –

ರುದ್ರಾಂಬೆ(ಉದ್ವೇಗದಿಂದ) ಹೇಳು ನನ್ನೊಡನೆ!
ನಾನು ರುದ್ರಾಂಬೆಗೊರೆಯುವೆನು!

ಹೊನ್ನಯ್ಯ(ಮೈತಿಳಿದು) ಇದಾರ ವಾಣಿ? (ನೋಡಿ)
ನೀನು ಕೊಲೆಗೈದರೂ ನನಗೆ ಹಿತನಂತಿರುವೆ?
ರುದ್ರಾಂಬೆ ಎಲ್ಲಿಹಳು? –
ಹೇಳು; ಕೊಂದರೂ ಬದುಕಿಸುವೆ ನೀನೆನ್ನ?

ರುದ್ರಾಂಬೆ – ಇಲ್ಲಿಯೇ ಇಹಳು!

ಹೊನ್ನಯ್ಯ – ಅಯ್ಯೋ ಬೇಗ!
ನಾನಳಿವ ಮುನ್ನವೇ ಕರೆದು ತಾ ತಂಗಿಯನು.

ರುದ್ರಾಂಬೆ – ನಾನು ರಕ್ತಾಕ್ಷಿಯಲ್ಲ! ನಾನೆ ರುದ್ರಾಂಬೆ!

ಹೊನ್ನಯ್ಯ(ಚೀರಿ) ಓ ತಂಗಿ, ಓ ತಂಗಿ,
ಏನನೆಸಗಿದೆ? ಏನನೆಸಗಿದೆ! ನಾನಲ್ಲ;
ಬಸವಯ್ಯನನು ಕೊಂದವನು ಶಿವಯ್ಯ! –
ಬಿಟ್ಟೋಡಿದರೆ ಪ್ರಾಣಸ್ನೇಹಿತನ ಶವಕೆ
ಸಂಸ್ಕಾರವಾಗಿಸರು ಎಂದರಿತು –
ಹಗೆ ಹೊಲಬುಗೆಡುವಂತೆ ಹುಸಿಯ ಹುಟ್ಟಿಸಿದೆ!
ನಿನ್ನರಸಿದರೆ ನೀ ದೊರಕಲಿಲ್ಲ;
ಅದರಿಂದ ನಾನೆ ಹೆಣವನು ತಂದು ಹೂಳಿದೆನು!

ರುದ್ರಾಂಬೆ(ಹೊನ್ನಯ್ಯನ ಮೇಲೆ ಕವಿದುಬಿದ್ದು)
ಅಯ್ಯೋ ತಪ್ಪಿದೆನು! ತಪ್ಪಿದೆನು!
ಅಣ್ಣಾ, ಮೋಸವಾಯಿತು! ಮೋಸವಾಯಿತು!
ವಿಧಿಯೇ, ನಿನ್ನಣಕವಿದು ಸಾಕು! ಸಾಕು!
ನಾನು ಬರುತ್ತೇನೆ! ನನ್ನನೂ ಕರೆದುಕೋ!
(ತಲೆ ಬಡಿದುಕೊಳ್ಳುತ್ತಾಳೆ.)

ಹೊನ್ನಯ್ಯ – ಬೇಡ! ಬೇಡ! ಈಗಳೆಯೆ ಬೇಡ!
ನನ್ನ ಹೊರೆ ನಿನ್ನ ಬೆನ್ನಿನ ಬೇಲೆ ಬಿದ್ದಿದೆ; –
ಮುಯ್ಯಿ ತೀರಿಸದೆ ನೀನಳಿಯಲಾಗದು.
ಬಸವಯ್ಯನಭಿಲಾಷೆ, ಅದನು ಮಾಡಲೆ ಬೇಕು!
ಲಿಂಗಣ್ಣ ಮಂತ್ರಿಗಳು ಹೈದರಾಲಿಯ ಕೂಡಿ
ಈ ನಗರವನು ಮುತ್ತುವರು ನಾಳೆ. ನಿಂಬಯ್ಯ
ಚೆಲುವಾಂಬೆಯರು ತಪ್ಪಿಹೋಗದವೊಲೆಸಗು.
ನಿನ್ನಿನಿಯನನು ಕೊಂದಾ ಶಿವಯ್ಯನನು ಸಂಹರಿಸು!
ಬಸವಯ್ಯನಾಜ್ಞೆಯದು! ಮಾಡಿ ಮಡಿ!

ರುದ್ರಾಂಬೆ – ಅಣ್ಣಾ, ನಾನೆಂತಹ ಘೋರಕ್ಕೆ ಕೈಯಿಟ್ಟೆ!
(ಬಾಯಿ ಬಡಿದುಕೊಂಡು ತಲೆ ಹರಿದುಕೊಳ್ಳುತ್ತಾಳೆ.)

ಹೊನ್ನಯ್ಯ – ದುಃಖಪಡದಿರು, ತಂಗಿ. ನಾನು ಸಂತೋಷದಲಿ
ಸಾಯುವೆನು. ನಿನ್ನ ಕಾಣದೆ ಮಡಿವೆನಲ್ಲಾ
ಎಂದು ಶೋಕಿಸುತಿದ್ದೆ! – ತುದಿಗೆಲ್ಲ ಸೊಗವಹುದು!
ತುದಿಗೆಲ್ಲ ಸೊಗವಹುದು! ನನ್ನ ನುಡಿಯನು ನಂಬು!
ನೂರು ಜನ್ಮದ ಬೇವು ನೂರು ಜನ್ಮಕೆ ಬೆಲ್ಲ!
ನೂರು ನಿಟ್ಟುಸಿರುಗಳು ಸೇರಿದರೆ ಒಂದು ನಗೆ
ಹೊಮ್ಮುವುದು! – ನೆಚ್ಚಿರಲಿ! – ನೆಚ್ಚಿರಲಿ! – ನೆಚ್ಚಿರಲಿ! –
(ಸಾಯುವನು)

ರುದ್ರಾಂಬೆ(ಎದ್ದು ಮೊಳಕಾಲೂರಿ)
ಕಾಳಕೂಟವ ಕುಡಿದ ಶಿವನೇ,
ಬಾ ನನ್ನೆದೆಯ ಹಾಲಹಲವನೀಂಟು!
ಮನ್ಮಥನ ಸುಟ್ಟ ಮುಕ್ಕಣ್ಣನೇ,
ಬಾ ನನ್ನೆದೆಯ ಕೋಮಲತೆಯನು ದಹಿಸು!
ಕಾಲದಂತ್ಯದಲಿ ಪ್ರಲಯಗೈವ ಮಹಾಭೈರವನೇ,
ಬಾ ನನ್ನೆದೆಯೊಳಿಂದು ಆವಿರ್ಭವಿಸು!
ಈ ಹೂವಿನೆದೆಯಲ್ಲಿ ಕಾರಮಿಂಚನು ಹೊಯ್ದು
ಬರಸಿಡಿಲನೂಡು! (ಎದ್ದು ನಿಂತು)
ನನ್ನಿನಿಯನಾಸೆಯನು ಕೈಗೂಡಿಸಲು ನನಗೆ
ಬಲ್ಮೆಯನು ನೀಡು! ಕೃಪೆಮಾಡು! –
ಜನ್ಮ ಜನ್ಮಾಂತರದಿ ಬಸವಯ್ಯನೇ ನನಗೆ
ಇನಿಯನಾಗುವ ನಿನ್ನ ಸಿರಿಹರಕೆಯಿರಲಿ!
ಹೊನ್ನಯ್ಯನಣ್ಣನಾಗೈತರುವ ಹರಕೆಯಿರಲಿ!
ನನ್ನೊಡಲು ಸುಟ್ಟರೂ, ನಾನು ಕೆಟ್ಟರೂ
ನಿನ್ನ ಕೃಪೆಯಲಿ ನನಗೆ ನೆಚ್ಚುಗೆಡದಿರಲಿ!
(ಹಾಗೆ ಕಂಬನಿಸೂಸಿ ನಿಂತು ನಿಡುಸುಯ್ದು ತೆಕ್ಕನೆ ಏನನೊ ನಿರ್ಣಯಿಸಿದವಳಂತೆ ಕೆಳಗೆ ಬಿದ್ದ ಗುದ್ದಲಿಯನು ತುಡುಕಿ ಮುಚ್ಚಿದ್ದ ಸಮಾಧಿಯ ಮಣ್ಣನ್ನು ಅಗೆದು ತೆಗೆಯತೊಡಗುವಳು.)

[ಪರದೆ ಬೀಳುವುದು]