[ಬಿದನೂರಿನ ಅರಮನೆಯಲ್ಲಿ ಚೆಲುವಾಂಬೆ, ನಿಂಬಯ್ಯ, ಸೋಮಯ್ಯರು ಮಾತಾಡುತ್ತಿರುವರು.]

ಚೆಲುವಾಂಬೆ – ಸೋಮಯ್ಯ, ಖಿನ್ನನಾಗಿಹೆ ಏಕೆ? ಬೇಗ ನುಡಿ.
ಒಪ್ಪಲಿಲ್ಲವೆ ಹೈದರಾಲಿ?

ಸೋಮಯ್ಯ – ಇಲ್ಲವಂತೆ.
ನಾವಟ್ಟಿದಾ ದೂತನನೆ ಸೆರೆ ಹಿಡಿದರಂತೆ!

ನಿಂಬಯ್ಯ – ನಾಲ್ಕು ಲಕ್ಷಗಳಾತನಿಗೆ ಸಾಲದೆಯೆ ಹೋಯ್ತೆ?

ಸೋಮಯ್ಯ – ಎಲ್ಲ ಲಿಂಗಣ್ಣ ಮಂತ್ರಿಯ ಕಾರ್ಯ, ಬಿದನೂರು
ಸಂಸ್ಥಾನವನು ಹಾಳುಮಾಡಲೆಂದೇ ಅವನು
ಹುಟ್ಟಿದನು.

ನಿಂಬಯ್ಯ – ಇರಲಿ, ನೀನು ನಡೆ. ಸೇನೆಯನು
ಸಿದ್ಧಗೊಳಿಸಲು ಹೇಳು ರುದ್ರಯ್ಯಗೆ.
ಹಗೆಯು ಕೋಟೆಗೆ ನುಗ್ಗಿದೊಡನೆಯೇ ಅರಮನೆಗೆ
ಬೆಂಕಿಯಿಡುವಂತಾಳುಗಳಿಗಾಣತಿಯ ನೀಡು.
ರಾಣಿಯನು ನಾನೀಗಳೇ ಗುಪ್ತಮಾರ್ಗದಲಿ
ಹೊರಗೆ ಕೊಂಡೊಯ್ಯುವೆನು. ಈ ಪುರದೊಲೆಮ್ಮರಿಗೆ
ಬೂದಿಯೊಂದಲ್ಲದಿನ್ನೇನೂ ದೊರೆಯಬಾರದು!
(ಸೈನಿಕನೊಬ್ಬನು ವೇಗದಿಂದ ಬರುವನು.)

ಚೆಲುವಾಂಬೆ – ಏನು ಬಂದೆ? ಏನಾಯ್ತು!

ಸೈನಿಕ – ಶತ್ರುಗಳು ನಗರವನು ಮುತ್ತಿದರು! ನಗರದವರನೇಕರು ಲಿಂಗಣ್ಣ ಮತ್ರಿಗಳಿಗಾಗಲೆ ನೆರವಾಗುತ್ತಿದ್ದಾರೆ!

ನಿಂಬಯ್ಯ – ಇರಲಿ ನಡೆ; ನಾವೀಗಲೆ ಬರುತ್ತೇವೆ (ಸೈನಿಕ ಹೋಗುವನು.) ಸೋಮಯ್ಯ, ನೀನೂ ಹೋಗು! (ಸೋಮಯ್ಯ ತೆರಳುವನು.) ಪ್ರಿಯೆ, ನಿನಗೆ ಭಯವಾಗಿದೆಯೆ?

ಚೆಲುವಾಂಬೆ(ಸುಯ್ದು) ಹೌದು, ನನಗೆ ಭಯವಾಗಿದೆ, ನಿಂಬಯ್ಯ!

ನಿಂಬಯ್ಯ – ಭಯವೇಕೆ? ಹೈದರನಿಗೆದುರಾಗಿ ಮಾರಾಂತು
ನಮ್ಮವರು ಗೆಲಲರಿಯರೆಂದೇ?

ಚೆಲುವಾಂಬೆ – ಅದಕಲ್ಲ! (ಚಿಂತಿಸುವಳು.)

ನಿಂಬಯ್ಯ – ಹೆದರದಿರು, ನಾನಿಹೆನು. ನಿನ್ನನೆಂತಾದರೂ
ದುರ್ಗದಿಂದಾಚೆಗೆ ಸುರಕ್ಷಿತವಾಗೊಯ್ದು
ಶತ್ರುಗಳ ಕೈಗೆ ಬೀಳದ ತೆರದೊಳಿಟ್ಟು
ಮರುಳುವೆನು ನಾ ರಣಾಂಗಣಕೆ. – ನಾವೀಗ
ಇಲ್ಲಿಂದ ಬೇಗ ತೆರಳಲೆ ಬೇಕು. ಇಲ್ಲದಿರೆ
ನಮ್ಮಾಳುಗಳು ಕೋಟೆಗಿಡುವ ಬೆಂಕಿಗೆ ನಾವೆ
ಆಹುತಿಗಳಾಗುವೆವು. (ಗಂಡುಗಳ ಸದ್ದು ಕೇಳಿಸುವುದು.)

ಚೆಲುವಾಂಬೆ(ಬೆಚ್ಚಿ) ಗುಂಡುಗಳ ಸದ್ದು!

ನಿಂಬಯ್ಯ – ತಳುವಿದರೆ ತಪ್ಪಾಗುವುದು. ಬೇಗ ಹೊರಡೋಣ.
ನಿನ್ನ ವೇಷವ ಮರೆಸಿಕೋ. ಇಲ್ಲದಿರೆ ನಮಗೆ
ನಮ್ಮವರೆ ವಿಷವಾಗಿಬಿಡಬಹುದು. ನಾನೂ
ವೇಷ ಬದಲಾಯಿಸುವೆ. (ವೇಷ ಬದಲಾಯಿಸಿ)

ಚೆಲುವಾಂಬೆ – ಇದೇನಿದು ಗದ್ದಲ!

ನಿಂಬಯ್ಯ – ಶತ್ರುಗಳು ಲಗ್ಗೆ ಹತ್ತಿದರೆಂದು ತೋರುತ್ತದೆ! ಬಾ, ಬೇಗ ಬಾ, (ಬಾಗಿಲಿಗೆ ಹೋಗಿ ತೆರೆಯಲೆಳಸಿ ಆಗದೆ) ಇದೇನು? ಬಾಗಿಲಿಗೆ ತಾಳ ಹಾಕಿದಂತಿದೆ!

ಚೆಲುವಾಂಬೆ – ಬಲವಾಗಿ ಎಳೆದುನೋಡು!

ನಿಂಬಯ್ಯ(ಏಳೆಯುತ್ತ) ಬೀಗ ಹಾಕಿದ್ದಾರೆ!

ಚೆಲುವಾಂಬೆ – ಯಾರಲ್ಲಿ? ಹೊರಗೆ ನಗುತ್ತಾರೆ!

ನಿಂಬಯ್ಯ(ನೋಡಿ) ಆ ಹುಚ್ಚಿ! ನಗುತ್ತಿದ್ದಾಳೆ!!
(ರುದ್ರಾಂಬೆ ಗವಾಕ್ಷಿದಲ್ಲಿ ಕಾಣಿಸಿಕೊಳ್ಳುವಳು.)

ಚೆಲುವಾಂಬೆ – ಹುಚ್ಚೀ, ಬಾಗಿಲ ತೆರೆ!

ರುದ್ರಾಂಬೆ(ಕಠೋರ ಶಾಂತಿಯಿಂದ) ನಾನು ಹುಚ್ಚಿಯಲ್ಲ; ರಕ್ತಾಕ್ಷಿ!

ನಿಂಬಯ್ಯ – ರಕ್ತಾಕ್ಷಿ, ಬಾಗಿಲು ತೆರೆ. ಕೋಟೆಗೆ ಬೆಂಕಿ ಬೀಳುವುದು!

ರುದ್ರಾಂಬೆ – ಬೀಳಲಿ! ಸಂತೋಷ!!

ನಿಂಬಯ್ಯ – ನಾವೆಲ್ಲ ಸಾಯುವೆವು!

ರುದ್ರಾಂಬೆ(ದೀರ್ಘ ವಾಣಿಯಿಂದ) ಸಾಯಲಿ! ಸಂತೋಷ!

ಚೆಲುವಾಂಬೆ – ಪಿಶಾಚಿ, ಬಾಗಿಲು ತೆರೆಯುತ್ತೀಯೊ ಇಲ್ಲವೊ?

ರುದ್ರಾಂಬೆ – ಓ ಪರಮ ಪತಿವ್ರತೆ, ನಿನಗಿಂದು ಅಗ್ನಿಪರೀಕ್ಷೆ. (ನಿಂಬಯ್ಯ ಬಾಗಿಲಿಗೆ ಒದೆಯುವನು) ನಿಂಬಯ್ಯ, ನೀನೆಷ್ಟು ಒದೆದರೂ ಪ್ರಯೋಜನವಿಲ್ಲ. ನಿನಗಿಂತಲೂ ಈ ಬಾಗಿಲು ಬಲವಾಗಿದೆ! (ಹಲ್ಲು ಕಡಿದು ಮೇಘಗಂಭೀರ ವಾಣಿಯಿಂದ) ಪುಣ್ಯಬಲವಿಲ್ಲದಿದ್ದರೂ ಪಾಪ ದೌರ್ಬಲ್ಯವಿಲ್ಲದ ಈ ಬಾಗಿಲು ನಿನಗಿಂತಲೂ ಬಲವಾಗಿಯೇ ಇದೆ.

ಚೆಲುವಾಂಬೆ – ಇದೇನಿದು? ವ್ಯಂಗ್ಯಪರಿಹಾಸ್ಯ! ನಿಂಬಯ್ಯ, ನನ್ನೆದೆ ನಡುಗುತ್ತಿದೆ! – ಓ ರಕ್ತಾಕ್ಷಿ, ನಿನಗೆ ಬೇಕಾದುದನು ಕೊಡುತ್ತೇವೆ. ಬಾಗಿಲು ತೆರೆ.

ರುದ್ರಾಂಬೆ(ಧೀರವಾಗಿ) ನನಗೆ ಬೇಕಾದುದು ನಿಂಬಯ್ಯ ಚೆಲುವಾಂಬೆಯರ ಸಾವು!

ನಿಂಬಯ್ಯ – ಪಾಪೀ ನಿನಗೇನು ಲಾಭ ನಮ್ಮನು ಕೊಂದು?

ರುದ್ರಾಂಬೆ – ನೀನಾವ ಲಾಭವ ನೊಡಿ ದೊರೆ ಬಸವನಾಯಕರ ಕೊಂದೆ? ಯಾವ ಲಾಭಕ್ಕಾಗಿ ಬಸವಯ್ಯ ಲಿಂಗಣ್ಣರನು ಸೆರೆಹಿಡಿದು ಕೊಲ್ಲಬೇಕೆಂದಿದ್ದೆ?

ಚೆಲುವಾಂಬೆ – ನಿಂಬಯ್ಯ, ಇವಳು ನಿಜವಾದ ಹುಚ್ಚಿಯಲ್ಲ!

ರುದ್ರಾಂಬೆ(ವಿಕಟ ಹಾಸದಿಂದ) ನಾನು ಹುಸಿ ಹುಚ್ಚಿಯಲ್ಲ! ಹಸಿ ಹುಚ್ಚಿ, ರಕ್ತಾಕ್ಷಿ! – ನಾನು ಲಿಂಗಣ್ಣ ಮಂತ್ರಿಗಳ ಪುತ್ರಿ ರುದ್ರಾಂಬೆ! ನಿಮ್ಮ ದೆಸೆಯಿಂದ ಹತನಾದ ಬಸವಯ್ಯನ ಪ್ರೇಯಸಿ! – ಹೋದಿರುಳಿನಲಿ ಮಸಣದಲಿ ಹೊನ್ನಯ್ಯನನು ತಪ್ಪು ತಿಳುವಳಿಕೆಯಿಂದ ತಿವಿದು ಸಂಹರಿಸಿದ ಡಾಕಿನಿ! – ನಿಮ್ಮಿಬ್ಬರನೂ ಇಂದು ಈ ಅರಮನೆಯ ಬೆಂಕಿಯಲಿ ಬೇಳಲೈತಂದಿರುವ ಯಜ್ಞದೀಕ್ಷಿತೆ! – ಏಕಿಂತು ಬೆರಗಾಗಿ ಸುಮ್ಮನೆ ನಿಂತಿರುವಿರಿ? ಮುಂದುವರಿಯಲಿ ಪ್ರಣಯಕಾರ್ಯ! – ಇನ್ನು ತುಸು ಹೊತ್ತಿನಲ್ಲಿಯೆ – ಅದೋ, ಅಲ್ಲಿ ನೋಡಿ – ನಿಮ್ಮ ಪ್ರೇಮವಿಲಯಾಗ್ನಿ ತನ್ನ ಜ್ವಾಲಾಜಿಹ್ಮೆಗಳಿಂದ ಅರಮನೆಯನು ನುಣ್ಣಗೆ ನುಂಗಿ ನೊಣೆಯುತ್ತಿದೆ! ನಾನು ಹೊರಡಲೆ?

ಚೆಲುವಾಂಬೆ(ಅಳುತ್ತಾ) ರುದ್ರಾಂಬೆ! ಓ ರುದ್ರಾಂಬೆ! ನಿಲ್ಲು! ನಿಲ್ಲು!

ರುದ್ರಾಂಬೆ – ನಿಲ್ಲಲು ಸಮಯವಿಲ್ಲ. – ಬಹಳ ಕೆಲಸವಿದೆ ನನಗಿನ್ನೂ. ಶಿವಯ್ಯನೊಬ್ಬನಿದ್ದಾನೆ!
(ಹೋಗುವಳು.)

ನಿಂಬಯ್ಯ – ಹೊರಟೇ ಹೋದಳು!

ಚೆಲುವಾಂಬೆ – ಅಯ್ಯೋ ಇನ್ನೇನು ಗತಿ! (ಎವಯಿಕ್ಕದೆ ನೋಡಲಾರಂಭಿಸುವಳು.)

ನಿಂಬಯ್ಯ(ಹೊರಗೆ ನೋಡಿ) ನಮಗಿನ್ನು ಸಾವೆ ಶರಣು! – ಏನಿದು ಚೆಲುವಾಂಬೆ? ಏನು ನೋಡುತ್ತಿರುವೆ? ಏಕೆ ಕಣ್ಣರಳಿ ನಿಂತಿರುವೆ? ಮಾತಾಡು! ಮಾತಾಡು! ಅದನಾದರೂ ಕೇಳುವೆನು!

ಚೆಲುವಾಂಬೆ(ಎಲ್ಲಿಯೋ ನೋಡುತ್ತ) ಅಯ್ಯೋ ಮನ್ನಿಸಿ! ಮನ್ನಿಸಿ! ನಾನು ಮಹಾಪಾಪಿ! (ಮತ್ತೆ ಯಾರನ್ನೋ ನೋಡಿ) ಕಂದಾ, ಬಸವಯ್ಯ, ನನ್ನನ್ನು ಕಾಪಾಡುವಂತೆ ಮಾಡು! – ಇನ್ನಾರನ್ನೋ ನೋಡಿದಂತೆ) ಹೊನ್ನಯ್ಯ, ಹೊನ್ನಯ್ಯ, ನಿನ್ನ ಕಾಲಿಗೆ ಬಿದ್ದೆ! ನನ್ನನ್ನು ಬಿಡಿಸು! ಬಿಡಿಸು! – (ಏಟು ಬಿದ್ದವಳಂತೆ ಕಡಿದುಕೊಂಡು ಬೀಳುತ್ತ)  – ಅಯ್ಯೋ!!

ನಿಂಬಯ್ಯ(ಬಾಗಿ) ಚೆಲುವಾಂಬೆ! ಚೆಲುವಾಂಬೆ! – (ಓಡಿ ಬಾಗಿಲು ಒದೆದು ಹತಾಶನಾಗಿ ನಿಂತು)
ಶತ್ರುಗಳೊಡನೆ ಹೊಡೆದಾಡಿ ಮಡಿವೆನು ಎಂದು
ಹಾರೈಸಿಕೊಂಡಿದ್ದೆ! ಆ ಬಯಕೆ ಬಯಲಾಯ್ತು! –
ಆದರೆ ಇದೂ ಲೇಸೆ! – (ಚೆಲುವಾಂಬೆಯನು ನೋಡಿ)
ಓ ಪ್ರಿಯೆ, ನಿನ್ನೊಡನೆ ನನಗೆ ಸಹಗಮನವಿದು.
ಎಳೆಯತನದಲಿ ನಿನ್ನನಾನೊಲಿದು ಬಯಸಿದ್ದೆ;
ನೀನೆನ್ನನೊಲಿದಿದ್ದೆ. ಆದರರಸನ ಕರುಬು
ನಮ್ಮನಗಲಿಸಿತು. – ನಮ್ಮೊಲ್ಮೆಯನ್ನಾದರೋ
ಕಾಲನೂ ಬೇರ್ಪಡಿಸಲಾರನ್! (ಹೊರಗೆ ನೋಡಿ)
ಬನ್ನಿ, ಬನ್ನಿ, ಓ ರುದ್ರ ಜ್ವಾಲೆಗಳೆ,
ನೀವಲ್ತೆ ನಮ್ಮ ಪ್ರೇಮಪ್ರತೀಕಗಳ್!
(ಮರಳಿ ಬಂದು ಚೆಲುವಾಂಬೆಯ ಬಳಿ ನಿಂತು ಯೋಚಿಸಿ ತನ್ನ ಖಡ್ಗವನ್ನು ಮೆಲ್ಲಗೆ ಹೊರಗೆಳೆಯುತ್ತಿರುವನು.)

[ಪರದೆ ಬೀಳುವುದು]