[ಬಿದನೂರಿನಲ್ಲಿ ಹೈದರನ ಬೀಡು. ಹೈದರಾಲಿ, ಲಿಂಗಣ್ಣ, ಮಹಮ್ಮದಾಲಿ, ಸನ್ಯಾಸಿ ಕುಳಿತಿದ್ದಾರೆ. ಲಿಂಗಣ್ಣನು ಖಿನ್ನ ಮುಖಮುದ್ರೆಯಿಂದ ಸಜಲನಯನನಾಗಿದ್ದಾನೆ.]

ಹೈದರಾಲಿ(ಸನ್ಯಾಸಿಗೆ) ರಾಮರಾಯರೆ, ನಿಮ್ಮಿಂದ ಮಹದುಪಕಾರವಾಗಿದೆ. ಅಂತೂ ದುಷ್ಟ ಶಿಕ್ಷಣೆಯೇನೋ ಕೈಗೂಡಿದಂತಾಯಿತು. ಆದರೆ ದುರ್ದೈವದಿಂದ ಶಿಷ್ಟ ರಕ್ಷಣೆಯಾಗಲಿಲ್ಲ. ಬಸವಯ್ಯನವರು ಕಾಲವಾದರು. ಅವರ ಮಿತ್ರನಾದ ಹೊನ್ನಯ್ಯನವರೂ ಶತ್ರುಗಳ ಕೃತ್ರಿಮಕ್ಕೆ ಸಿಕ್ಕಿ ಕೊಲೆಯಾದರಂತೆ! ಲಿಂಗಣ್ಣ ಮಂತ್ರಿಗಳೂ ಖಿನ್ನರಾಗಿದ್ದಾರೆ. ಅವರ ಕುಮಾರ್ತೆ ಎಲ್ಲಿದ್ದಾರೆ ಎಂಬುದೇನಾದರೂ ನಿಮಗೆ ತಿಳಿದು ಬಂದಿದೆಯೆ?

ಸನ್ಯಾಸಿ – ಮಹಾಸ್ವಾಮಿ, ನನಗದು ನಿಳಿಯದು. ಲಿಂಗಣ್ಣನವರೂ ರಾಜಕುಮಾರ ಬಸವಯ್ಯನವರೂ ಸೆರೆಯಿಂದ ತಪ್ಪಿಸಿಕೊಂಡು ಹೋದ ಮರುಹಗಲೆ ಅವರು ವೇಷಮರೆಸಿಕೊಂಡು ಕಣ್ಮರೆಯಾದರೆಂದು ವಂದಂತಿಯಿತ್ತು.

ಮಹಮ್ಮದಾಲಿ(ಲಿಂಗಣ್ಣನಿಗೆ) ಮಂತ್ರಿಗಳೆ, ಚಿಂತಿಸಬೇಡಿ. ತಮ್ಮ ಕುಮಾರ್ತೆ ಬದುಕಿದ್ದರೆ ಎಲ್ಲಿದ್ದರೂ ನಾನು ಹುಡುಕಿಸುತ್ತೇನೆ. – ಮೊದಲು ಸೆರೆ ಸಿಕ್ಕಿರುವ ಸೋಮಯ್ಯ, ಶಿವಯ್ಯ ಮೊದಲಾದವರಿಗೆ ಶಿಕ್ಷೆ ವಿಧಿಸುವಕಾರ್ಯವಾಗಲಿ.

ಹೈದರಾಲಿ – ಲಿಂಗಣ್ಣನವರೆ, ನಮ್ಮ ಬೇಹಿನವರಾದ ರಾಮರಾಯರು ಹೇಳಿದುದೆಲ್ಲವನ್ನೂ ಆಲಿಸಿರುವಿರಿ. ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಕಾರ್ಯಭಾಗ ನಿಮ್ಮದಾಗಿದೆ. ಅವರನ್ನೆಲ್ಲ ಕರೆಯಿಸಲೆ?

ಲಿಂಗಣ್ಣ(ದುಃಖದಿಂದ) ನನಗಾವುದೂ ಬೇಡವಾಗಿದೆ. ನನಗೆ ಮಂಕು ಕವಿದಂತಿದೆ. ಕಡೆಗೂ ನನ್ನ ಸಂಕಲ್ಪವೆಲ್ಲವೂ ನಿಷ್ಫಲವಾಯಿತು. ನಿಮ್ಮಿಷ್ಟ ಬಂದಂತೆ ಮಾಡಬಹುದು. (ಬಿಕ್ಕಿಬಿಕ್ಕಿ) ಬಸವಯ್ಯನನು ಬಿದನೂರು ಗದ್ದುಗೆಗೇರಿಸಿ ಆ ವೈಭವವನು ನೋಡಬೇಕಿಂದಿದ್ದೆ. ಆ ಹೊಂಗನಸು ಹುಡಿಯಾಯ್ತು. ಅದರೊಡನೆ ನನ್ನೊಬ್ಬಳೇ ಮುದ್ದುಗುವರಿಯ ಸಕಲ ಸೌಭಾಗ್ಯವೂ ಮಳೆಬಿಲ್ಲಿನಂತೆ ಕರಗಿ ಕಣ್ಮರೆಯಾಯ್ತು! (ದುಃಖಾತಿಶಯದಿಂದ) ನನಗೆ ಯಾರನೂ ಶಿಕ್ಷಿಸುವ ಚಲವಿಲ್ಲ. ಯಾರ ಮೇಲೆಯೂ ನನಗೆ ದ್ವೇಷವಿಲ್ಲ. ಎಲ್ಲರೂ ಸುಖವಾಗಿರಲಿ! – ಅಯ್ಯೋ ನನ್ನ ರುದ್ರಾಂಬೆ! ನನ್ನ ಮುದ್ದುಗುವರಿ ರುದ್ರಾಂಬೆ! ನನ್ನ ಮಗಳನೊಂದು ಬಾರಿ ನೋಡುವ ಭಾಗ್ಯವೊದಗಿದರೆ ಸಾಕು! ಸಾಕು, ಈ ಬಾಳಿನಂಡಲೆ ಸಾಕು! ತಣ್ಣಗೆ ಕಣ್ಮುಚ್ಚಿ ನನ್ನ ಹಗೆಗಳೆಲ್ಲರಿಗೂ ಸೊಗವಿರಲಿ ಎಂದು ಎದೆಮುಟ್ಟಿ ಹರಕೆಗೈದು ಇಲ್ಲಿಂದ ಜಾರುವನು! ನಾನಿನ್ನು ಆಶೀರ್ವದಿಸಬಲ್ಲೆನೇ ಹೊರತು ಶಪಿಸಲರಿಯೆ! ಶಪಿಸಲರಿಯೆ!
(ಹೊರಗಡೆ ಬೊಬ್ಬೆಯಾಗುವುದು)

ಸನ್ಯಾಸಿ – ಏನು ಬೊಬ್ಬೆಯದು! (ಸೈನಿಕನೊಬ್ಬನು ನುಗ್ಗುವನು.)

ಮಹಮ್ಮದಾಲಿ – ಏನದು ಗಲಭೆ!

ಸೈನಿಕ(ಉದ್ವೇಗದಿಂದ) ಮಹಾಸ್ವಾಮಿ, ಶಿವಯ್ಯನನ್ನು ಸೆರೆಯಿಟ್ಟ ಬೀಡಿಗೆ ಯಾರೋ ಹುಚ್ಚಿಯೊಬ್ಬಳು ನುಗ್ಗಿ ಅವನನ್ನು, ಅವನನ್ನು, ಕೊಲೆ, ಕೊಲೆ ಮಾಡಿ –

ಲಿಂಗಣ್ಣ – ಏನು! ಏನು!

ಸೈನಿಕ – ಅವನನ್ನು ಕೊಲೆಮಾಡಿ ತನ್ನನು ತಾನೆ ಕಠಾರಿಯಿಂದ ತಿವಿದುಕೊಂಡಳು! (ಲಿಂಗಣ್ಣ ಮರವಟ್ಟು ನಿಲ್ಲುವನು.)

ಸನ್ಯಾಸಿ(ಎದ್ದು) ಇನ್ನೂ ಬದುಕಿದ್ದಾಳೆಯೆ?

ಸೈನಿಕ – ಹೌದು; ಏನೇನೊ ಹಲವರಿಯುತಿದ್ದಾಳೆ!

ಲಿಂಗಣ್ಣ(ಹತಾಶವಾಣಿಯಿಂದ) ಬದುಕಿದ್ದಾಳೆಯೆ?

ಸೈನಿಕ – ಲಿಂಗಣ್ಣ ಮಂತ್ರಿಗಳನ್ನು ಕರೆಯುವಂತೆ ಹೇಳಿದಳು.

ಲಿಂಗಣ್ಣ – ಅಯ್ಯೋ! (ತತ್ತರಿಸುವನು. ಹೈದರಾಲಿಯೂ ಮಹಮ್ಮದಾಲಿಯೂ ಎದ್ದು ನಿಲ್ಲುವರು.)

ಸನ್ಯಾಸಿ(ಓಡಿಹೋಗಿ ಲಿಂಗಣ್ಣನನ್ನು ಹಿಡಿದುಕೊಂಡು) ತಾಳ್ಮೆ! ತಾಳ್ಮೆ!

ಸೈನಿಕ – ಆಕೆಯ ಹೆಸರು ರುದ್ರಾಂಬೆಯಂತೆ!

ಲಿಂಗಣ್ಣ(ಅತಿದಾರುಣ ವಾಣಿಯಿಂದ) ಅಯ್ಯೋ! ಅಯ್ಯೋ!! ಮಗಳೇ, ಕಡೆಗೂ ಏನಾಗಿಹೋದೆ! (ಸೈನಿಕನಿಗೆ) ಅಣ್ಣಾ, ಬಾ ಬೇಗ, ಎಲ್ಲಿದ್ದಾಳೆ ತೋರಿಸು. (ಸನ್ಯಾಸಿಯ ಸಹಾಯದಿಂದ ಸೈನಿಕನೊಡನೆ ತತ್ತರಿಸುತ್ತ ಹೋಗುತ್ತಾನೆ. ಹೈದರಾಲಿ ಸಕರುಣ ಮುಖ ಭಂಗಿಯಿಂದ ಲಿಂಗಣ್ಣನನ್ನು ನೋಡುತ್ತ ಹಿಂಬಾಲಿಸುತ್ತಾನೆ.)

ಮಹಮ್ಮದಾಲಿ(ಅನುಸರಿಸುತ್ತ) ಮುಪ್ಪು ಈ ಪೆಟ್ಟನೆಂತು ಸಹಿಸುವುದೋ ನಾ ಕಾಣೆ!(ಹೋಗುತ್ತಾನೆ.)

[ಪರದೆ ಬೀಳುವುದು]