[ಬಿದನೂರಿನಲ್ಲಿ ಹೈದರಾಲಿಯ ಪಾಳೆಯದಲ್ಲಿರುವ ಒಂದು ಸೆರೆಬೀಡು. ಬೈಗುಗಪ್ಪು ಹಬ್ಬಿ ಮಸುಗುಮಸುಗಾಗಿದೆ. ಭಯಂಕರವಾದ ಮೌನ ಪ್ರಮಾದಸೂಚಕವಾಗಿದೆ. ಪಹರಿಗಳಿಬ್ಬರು ನಿಂತು ಬೆಪ್ಪು ಹಿಡಿದವರಂತೆ ಮಿಳ್ಮಿಳನೆ ನೋಡುತ್ತಿದ್ದಾರೆ. ಒಂದೆಡೆ ನೆತ್ತರುಗೆಸರಿನಲ್ಲಿ ನಾದು ಶಿವಯ್ಯ ಸತ್ತುಬಿದ್ದಿದ್ದಾನೆ. ಆತನ ಕೈಕಾಲುಗಳಲ್ಲಿ ಕಬ್ಬಿಣದ ಸಂಕೋಲೆಗಳಿವೆ. ಶಿವಯ್ಯನಿಗೆ ತುಸುದೂರದಲ್ಲಿ ರುದ್ರಾಂಬೆ ನರಳುತ್ತಾ ಬಿದ್ದಿದ್ದಾಳೆ. ಆಕೆಯ ಮುಡಿ ಕೆದರಿಹೋಗಿ ರಕ್ತಸಿಕ್ತವಾಗಿ ವಿಕಾರವಾಗಿದ್ದಾಳೆ. ಮೊಗಮೈಯೆಲ್ಲ ನೆತ್ತರು. ಎದೆಗೆ ಚುಚ್ಚಿದ ಕಠಾರಿಯ ಹಿಡಿಯನ್ನು ಬಲಗೈಯಲ್ಲಿ ಮೆಲ್ಲಗೆ ಹಿಡಿದುಕೊಂಡು ಎಡಗೈಮೇಲೆ ಅರೆ ಎದ್ದು ತಂದೆಯ ಬರುವಿಕೆಯನ್ನೆ ಹಾರುತ್ತಿದ್ದಾಳೆ. ಆಕೆಯ ಕಣ್ಣು ಕೆಂಡವಾಗಿವೆ. ಲಿಂಗಣ್ಣ ಮಂತ್ರಿ ಸನ್ಯಾಸಿಯ ಕೈಹಿಡಿದುಕೊಂಡು ಅವರ್ಣನೀಯವಾದ ನಿವಿಣ್ಣ ಭಾವದಿಂದ ಹತಾಶನಾಗಿ ಜೀವಶವದಂತೆ ಮೆಲ್ಲಗೆ ಪ್ರವೇಶಿಸುತ್ತಾನೆ. ಸ್ವಲ್ಪ ದೂರದಲ್ಲಿ ಬಿದ್ದಿರುವ ತನ್ನ ಮುದ್ದುಮಗಳ ರುದ್ರಸ್ಥಿತಿಯನ್ನು ನೋಡಿದೊಡನೆ ಝಗ್ಗನೆ ನಿಂತು ಹುಚ್ಚಾಗುತ್ತಾನೆ; ಸನ್ಯಾಸಿಯ ಕೈಕೊಡಹಿ ಬಿಡಿಸಿಕೊಂಡು ಎರಡು ಕೈಗಳಿಂದಲೂ ತಲೆಗೂದಲು ಕಿತ್ತುಕೊಂಡು ತಲೆಯುಡುಗೆ ಅಸ್ತವ್ಯಸ್ತವಾಗಿ ಹೋರಾಡುತ್ತಿರೆ ಮಗಳನ್ನೆ ನೋಡುತ್ತ ಅತಿಶೋಚನೀಯವಾದ ದೀರ್ಘ ಸ್ವರದಿಂದಅಯ್ಯೋ!” ಎಂದು ಕರುಳು ಬೇಯುವಂತೆ ಚೀರಿ ತತ್ತರಿಸುತ್ತ ಮುಂದೆ ನುಗ್ಗಿ ಮಗಳ   ಮೇಲೆ ಕವಿದು ಬೀಳುತ್ತಾನೆ. ರುದ್ರಾಂಬೆ ತಂದೆ ಬೀಡಿಗೆ ಬಂದ ಕೂಡಲೆ ಎದ್ದು ಕೂರಲೆಳಸಿ ಆಗದೆಬಂದೆಯಾ ತಂದೆ!” ಎಂದು ಕೂಗಿ ಬೀಳುತ್ತಾಳೆ. ಪಹರಿಗಳು ಕರ್ತವ್ಯತಾಮೂಢರಾಗಿ ನಿಲ್ಲುತ್ತಾರೆ. ಸನ್ಯಾಸಿ ತಂದೆ ಮಕ್ಕಳ ಬಳಿಗೆ ಓಡುತ್ತಾನೆ. ಅಷ್ಡರಲ್ಲಿ ಹೈದರಾಲಿ ಮಹಮ್ಮದಾಲಿಗಳೂ ಪ್ರವೇಶಿಸಿ ಕರಾಳ ದೃಶ್ಯವನ್ನು ನೋಡಿ ಮಂತ್ರ ಮುಗ್ಧರಾದವರಂತೆ ಎವೆಯಿಕ್ಕದೆ ನಿಲ್ಲುತ್ತಾರೆ. ಬಾಗಿ ನಿಂತ ಸನ್ಯಾಸಿ ಹತಾಶನಾಗಿ ನಿಡುಸುಯ್ದು ಮೇಲೇಳುತ್ತಾನೆ. ಎಲ್ಲರೂ ಮಂಕು ಹಿಡಿದವರಂತೆ ಒಬ್ಬರ ಮೊಗವನ್ನೊಬ್ಬರು ನೋಡುತ್ತಾರೆ.]

[ಪರದೆ ಬೀಳುವುದು]