[ಅರಮನೆಯ ಒಂದು ಭಾಗ. ಬಸವಯ್ಯನು ಚಿಂತಾಮಗ್ನನಾಗಿ ಶತಪಥ ತಿರುಗುತ್ತಿದ್ದಾನೆ. ಆತನು ತರುಣ. ಸುಂದರನಾದರೂ  ಗಾಂಭೀರ್ಯ ಎದ್ದು ಕಾಣುತ್ತದೆ. ಎತ್ತರವಾಗಿ ನಸು ತೆಳ್ಳಗಿದ್ದಾನೆ.]

ಬಸವಯ್ಯ – ಎಷ್ಟು ತೊಡಕಾದುದೀ ಬುವಿಯ ಬಾಳು!
ಇಂತಹ ತಾರುಣ್ಯದಲ್ಲಿಯೇ ಕಷ್ಟದಶೆ.
ಬಾಳೆಂಬುದೇ ಹಾಳು. ಹುಟ್ಟದಿರುವುದೆ ಲೇಸು.
ಹುಟ್ಟಿದರೆ ಹಾಳು ಕರ್ಮದ ಬುತ್ತಿ ನಮ್ಮ
ಹಿಂದುಗಡೆ ಬಂದೆ ಬರುವುದು ನೆಳಲಿನಂತೆ! –
ನಾನೊ
ಸ್ವಪ್ನ ಮುದ್ರಿತ ಜೀವಿ! ಅದನರಿತೆ ಎಲ್ಲರೂ
ನನ್ನನುಪೇಕ್ಷಿಸುತೆ ನಡೆದಪರು. ಓ ತಂದೆ,
ನನ್ನೊಬ್ಬನನೆ ಬಿಟ್ಟು ಹೋದಿರೆಲ್ಲಿಗೆ ನೀವು?
ನಿಮ್ಮನುಳಿದೆನಗಿಂದು ಲೋಕವೆ ಬೆಂಡಾಗಿ
ಹೋಗಿಹುದು. ಏನೊಂದೂ ಬೇಡವಾಗಿದೆ ನನಗೆ
ನನ್ನ ಮಲತಾಯಿ, ಆ ರಾಕ್ಷಸಿ, ಆ ಶನಿ
ಸೇನಾಧಿಪತಿಯೊಡನೆ ಸರಸಕಾರಂಭಿಸಿಹಳು!
ಓ ಪಿತನೆ, ವಂಶಕೆ ಕಳಂಕವನು ತರುತಿಹಳು!
ಬೇಡವೆಂದರೂ ಕೇಳದೆಯೆ ಆ ರಾಕ್ಷಸಿ
ಚೆಲುವಾಂಬೆಯನ್ನೇಕೆ ಮದುವೆಯಾದಿರಿ ಮರಳಿ?
ನೀವು ತೀರಿಕೊಂಡಿನ್ನೂ ವಾರಗಳು ಕೂಡ
ಕಳೆದಿಲ್ಲ. ನಿಮ್ಮ ಮಸಣದ ಮೇಲೆ ಹೊಸಹಸುರು
ಕೂಡ ಹಬ್ಬಲಾರದಿದೆ; ಅತ್ತವರ ಕೆನ್ನೆಯಲಿ
ಕಣ್ಣೀರು ಬತ್ತಿಲ್ಲ. ಆಗಲೇ ಚಕ್ಕಂದ-
ದಿಂದಿಹಳು ಆ ದುರುಳ ನಿಂಬಯ್ಯನೊಡಗೂಡಿ.
ಓ ಚಂಚಲತೆ, ನಿನ್ನ ಹೆಸರೇ ಸ್ತ್ರೀಯಲ್ತೆ?
ಹೇ ಜಗದೀಶ್ವರಾ,
ನಿನಗೆ ಕಣ್ಣಿಲ್ಲವೇ? ನಿನಗೆ ದಯೆಯಿಲ್ಲವೇ?
ನೀನು ಧರ್ಮದ ಮೂರ್ತಿ ಎನಿಸಿಕೊಂಡಿಹೆಯೇಕೆ?
ಅಥವಾ ನೀನಿರುವೆಯೋ ಇಲ್ಲವೋ? ಓ ವಿಧಿ,
ನೀನಿರೆ ಅಧರ್ಮವಿಂತೇಕೆ ಚಲ್ಲಾಟದಲಿ
ಮುಳುಗಿಹುದು? ಪಾಪವರಿಯದ ಗಿರಿಯ ಶಿಖರಗಳ
ಮೇಲೆ ಎರಗುವ ಸಿಡಿಲೇ, ಬಡಿಯಬಾರದೆ ಬಂದು
ಪಾಪಿಗಳ ಪಾಳೆದೆಗೆ! ಯಾರಿಗೊರೆಯಲಿ ಇದನು?
ಯಾರೊಬ್ಬರೂ ನನ್ನ ಮಾತುಗಳ ನಂಬರು!
ಲಿಂಗಣ್ಣ ಮಂತ್ರಿಗಳು ಕೂಡ ಆ ಮಾರಿಯಲಿ
ಮೋಸವನು ಕಾಣಲಾರದೆ ಇರುವರಿನ್ನೂ! (ಚಿಂತಿಸುವನು)
[
ಲಿಂಗಣ್ಣಮಂತ್ರಿ ಮೆಲ್ಲಗೆ ಗಾಂಭೀರ್ಯದಿಂದ ಪ್ರವೇಶಿಸುವನು ಅತನು ಮುದುಕ. ಅದರೂ ಮುಖದಲ್ಲಿ ಕಾರ್ಯದಕ್ಷತೆಯ ಕಳೆ ಇದೆ. ಅಂಗಾಂಗಳು ಶೀರ್ಣವಾಗಿದ್ದರೂ ಅವುಗಳಲ್ಲಿ ಚಿತ್ತಾದಾರ್ಢ್ಯದ ವಜ್ರಬಲವಿರುವಂತೆ ತೋರುತ್ತದೆ.]

ಲಿಂಗಣ್ಣ – ರಾಜಕುಮಾರ!

ಬಸವಯ್ಯ(ತಿರುಗಿನೋಡಿ) ಬನ್ನಿ, ಲಿಂಗಣ್ಣ ಮಂತ್ರಿಗಳೆ, ಕುಳಿತುಕೊಳ್ಳಿ.

ಲಿಂಗಣ್ಣ – ನೀನಿನ್ನೂ ಚಿಂತೆಯನು ಬಿಟ್ಟಿಲ್ಲ.

ಬಸವಯ್ಯ – ಹೇಗೆ ಬಿಡಲಿ, ಮಂತ್ರಿಗಳೇ? ಬೆಂಕಿಯಾರಿದ ಹೊರತೂ ಬಿಸಿ ಹೋಗುವುದೆ? ನಿಂತಿರುವಿರೇಕೆ? ಕುಳಿತುಕೊಳ್ಳಿ.(ಇಬ್ಬರೂ ಕುಳಿತುಕೊಳ್ಳುತ್ತಾರೆ.)

ಲಿಂಗಣ್ಣ – ನನಗಿನ್ನೂ ನಿನ್ನ ಚಿಂತೆಯ ಅರ್ಥ ಹೊಳೆದಿಲ್ಲ.

ಬಸವಯ್ಯ – ಹೇಳಿದರೂ ನಂಬದಿದ್ದರೆ ಹೊಳೆಯುವುದು ಹೇಗೆ?

ಲಿಂಗಣ್ಣ – ನಿನ್ನದು ಆಧಾರವಿಲ್ಲದ ಸಂಶಯ, ಬಸವಯ್ಯ.

ಬಸವಯ್ಯ – ಮಂತ್ರಿಗಳೆ, ನೀವೇನೊ ನನಗೆ ಪೂಜ್ಯರು; ನಮ್ಮ ತಂದೆಗೆ ಆಪ್ತರಾದವರು; ಆದರೆ ಈ ವಿಷಯದಲ್ಲಿ ನನ್ನ ತಿಳಿವೇ ದಿಟವೆಂದು ತೋರುತ್ತದೆ.

ಲಿಂಗಣ್ಣ – ಆಧಾರವಿಲ್ಲದೇ ಸಿದ್ಧಾಂತಮಾಡಬಾರದು, ಮಗೂ.

ಬಸವಯ್ಯ(ಸ್ವಲ್ಪ ರಭಸದಿಂದ) ಇನ್ನೇನು ಆಧಾರ ಬೇಕು ನಿಮಗೆ? ತಾಯಿ – ಅಯ್ಯೋ ಎಷ್ಟು ಕರ್ಕಶವಾಗಿದೆ ಆ ಕೋಮಲ ಶಬ್ದ! ನನ್ನ ಮಲತಾಯಿ, ಚೆಲುವಾಂಬೆ, ಆ ಸೇನಾಧಿಪತಿ ನಿಂಬಯ್ಯನೊಡನೆ ಹಗಲೂ ಇರುಳೂ ನಲಿಯುತ್ತಿರುವಳು. ಅದಕ್ಕಿಂತಲೂ ಇನ್ನೇನು ಬೇಕು ಆಧಾರ ನಿಮಗೆ?

ಲಿಂಗಣ್ಣ – ಕ್ಷಮಿಸು, ರಾಜಕುಮಾರ, ನಿನಗಿನ್ನೂ ಅನುಭವ ಸಾಲದು. ಆ ಅಪರಾಧವನು ನನ್ನ ಮೇಲೆಯೂ ಹೊರಿಸಬಹುದಷ್ಟೆ? ನಾನೂ ರಾಣಿ ಚೆಲುವಾಂಬೆಯೆಡೆಗೆ ಎಷ್ಟೋ ಸಾರಿ ಮಂತ್ರಾಲೋಚನೆಗೆ ಹೋಗುತ್ತಿದ್ದೇನೆ.

ಬಸವಯ್ಯ – ಬಿಡಿ, ಬಿಡಿ, ಮಂತ್ರಿಗಳೆ. ಏನು ಮಾತು ನೀವು ಹೇಳುವುದು? ನಿಮ್ಮ ನಿರ್ಮಲ ಹೃದಯಕ್ಕೆ ಕಾಪಟ್ಯಪರಿಚಯ ಬಹುದೂರ! ಸುದ್ದಿ ಜನಜನಿತವಾಗಿ ಹಬ್ಬುತ್ತಿದೆ.

ಲಿಂಗಣ್ಣ – ಜನರ ಮಾತು ನಂಬಿದರೆ ಉಳಿವುಂಟೆ, ರಾಜಕುಮಾರ? ನಿನ್ನ ಸಂಶಯವನು ಕಿತ್ತು ಬಿಸುಡು. ರಾಜರಳಿದ ಕಾಲ. ಪರರಾಜರು ಹೊಂಚು ನೋಡುವ ಸಮಯ. ರಾಣಿಯೊಡನೆ ಎಷ್ಟೋ ರಹಸ್ಯಗಳನು ಹೇಳುವ ಪ್ರಸಂಗ ಒದಗುವುದು ಸೇನಾಪತಿಗೆ ಸಹಜವಲ್ಲವೆ? ನಿನ್ನ ಪಟ್ಟಾಭಿಷೇಕವಾಗುವವರೆಗೆ ಚೆಲುವಾಂಬೆಯೊಡನೆ ರಾಜಕಾರ್ಯ. ಆಮೇಲೆ ನಿನ್ನೆಡೆಗೇ ಬರುತ್ತಾನೆ. ತೆಗೆ ತೆಗೆ, ದೊಡ್ಡವರಿಗೆ ಸಣ್ಣ ಮನಸ್ಸಿರಬಾರದು. ಇದೆಲ್ಲಿಯಾದರೂ ಅವರಿಗೆ ತಿಳಿದರೆ ಏನೆಂದಾರು!

ಬಸವಯ್ಯ – ನಾನು ಇನ್ನಾರೊಡನೆಯೂ ಹೇಳಿಲ್ಲ, ಮಂತ್ರಿಗಳೆ. ನನ್ನ ನಾನೆ ತಿಂದುಕೊಳ್ಳುತ್ತಿದ್ದೇನೆ. – ನಿನ್ನೆ ರಾತ್ರಿ ನನಗೊಂದು ಕನಸುಬಿತ್ತು.

ಲಿಂಗಣ್ಣ – ಏನು ಕನಸು?

ಬಸವಯ್ಯ – ಕನಸಿನಲಿ ನಮ್ಮಯ್ಯ ತೋರಿದನು. ಮಂತ್ರಿಗಳೆ,
ನಾನಾ ಮುಖದ ನೋಡಿ ನಿಟ್ಟುಸಿರುಬಿಟ್ಟೆ.
ತಂದೆ ಅಳುತ್ತಿದ್ದನಯ್ಯೋ ಎಂದು!
ಕಣ್ಣೀರು ಬಳಬಳನೆ ಸುರಿಯುತಿತ್ತು.
ನನ್ನೊಡನೆ ಏನೊಂದು ಮಾತನೂ ಆಡಲಿಲ್ಲ.

ಲಿಂಗಣ್ಣ – ಬಸವಯ್ಯ, ನೀನೂ ಶಾಸ್ತ್ರಜ್ಞ, ತಿಳಿದವನು.
ನಮ್ಮ ಭಯಭ್ರಾಂತಿಗಳೆ ಕನಸಿನಲಿ ಬಹವೆಂದು
ತಿಳಿಯೆಯಾ? ಸ್ವಪ್ನಗಳು ಸುಪ್ತಚಿತ್ತದ ವಾಣಿ.
ಅದಕೆಲ್ಲ ಬಗೆ ಕೊರಗಬಾರದು, ಮಗೂ. –
ನೋಡಿಲ್ಲಿ ಚೆಲುವಾಂಬೆ –

ಬಸವಯ್ಯ(ನೋಡುತ್ತ) ನಿಂಬಯ್ಯನೂ!

ಲಿಂಗಣ್ಣ – ನಿಂಬಯ್ಯನೊಬ್ಬನೆಯೆ? ಸೋಮಯ್ಯನೂ ಇಹನಲ್ತೆ?
ಸಂಶಯದ ಕಣ್ಣಿಗೆ ಬಹಳ ಕರುಬು.
[ಚೆಲುವಾಂಬೆ, ನಿಂಬಯ್ಯ, ಸೋಮಯ್ಯ ಬರುವರು. ಚೆಲುವಾಂಬೆ ರೂಪವತಿ. ನಿಂಬಯ್ಯನಲ್ಲಿಯೂ ರೂಪವಿದೆ. ಆದರೆ ಆತನ ಮುಖ ಅಂತರಂಗದ ಅಶುದ್ಧಿಯಿಂದ ಮಲಿನವೂ ಕ್ರೂರವೂ ಆಗಿದೆ. ಸೋಮಯ್ಯ ತರುಣ. ಬಹಳ ಸಾಧಾರಣ ವ್ಯಕ್ತಿ.ಲಿಂಗಣ್ಣ ಬಸವಯ್ಯ ಎದ್ದು ನಿಲ್ಲುತ್ತಾರೆ. ಆದರೆ ಬಸವಯ್ಯ ಮನಸ್ಸಿಲ್ಲದ ಮನಸ್ಸಿನಿಂದ ಹಾಗೆ ಮಾಡುತ್ತಾನೆ.]

ಚೆಲುವಾಂಬೆ – ಮಂತ್ರಿಗಳೆ, ನಮ್ಮ ಕುಮಾರನ ಕೊರಗು ಹೇಗಿಹುದು?

ಲಿಂಗಣ್ಣ – ದೇವಿ, ತಂದೆಯವರನು ನೆನೆದು ಮರಗುವುದು ಮಕ್ಕಳಿಗೆ ಸಹಜವಲ್ಲವೆ?

ಚೆಲುವಾಂಬೆ – ರಾಜಕುಮಾರ,
ನೀನಿಂತು ಮರುಗುತ್ತೆ ಕುಳಿತರೆಮಗೇನು ಗತಿ?
ನನ್ನನಾದರು ಕಂಡು ಶಾಂತನಾಗಬಾರದೆ?
ಅವರಳಿವು ನಿನಗಿಂತಲೆನಗೇನು ಕಡಿಮೆಯೇ?
ಆದರೆದೆನೋವನಿತನೂ ತಡೆದು, ನಿನಗಾಗಿ,
ನಿನ್ನಭ್ಯುದಯಕಾಗಿ, ಬಿದನೂರು ಸಾಮ್ರಾಜ್ಯ
ಶ್ರೇಯಸ್ಸಿಗಾಗಿ ಮಂತ್ರಿ ಸೇನಾಪತಿಗಳೊಡನೆ
ರಾಜಕಾರ್ಯದಲಿ ತೊಡಗಿಹೆನು. ಹೆಂಗುಸಹ
ನಾನಿಂತು ಧೈರ್ಯದಿಂದಿರೆ, ನೀನು ಮರುಗುವುದು
ತರವಲ್ಲ

ಬಸವಯ್ಯ(ದುಃಖದಿಂದ) ತರವಲ್ಲ! ತರವಲ್ಲ, ಓ ತಾಯಿ!
ಬಲ್ಲೆನದನಾದರೂ ಈ ನನ್ನ ಹೇಡಿಯೆದೆ
ಹಿಂಜರಿಯುತಿಹುದು.

ಚೆಲುವಾಂಬೆ(ಕಣ್ಣೀರುಮಿಡಿಯುತ್ತ) ನಿಂಬಯ್ಯ, ನೀವಾದರೂ
ಸಂತೈಸಬಾರದೆ?

ನಿಂಬಯ್ಯ(ಕಣ್ಣೀರು ಮಿಡಿದು) ದೇವಿ, ಏನು ಹೇಳಲಿ ನಾನು?
ಎಲ್ಲ ತಿಳಿದವರವರು. ಅಲ್ಲದೆಯೆ ನಾಯಕರ
ನೆನೆದೆನೆಂದರೆ ನನಗೇ ಎದೆಯೊಡೆದು ಹೋಗುವುದು.
ಅಂತಹ ಮಹಾಪುರುಷನನು ಕಳೆದುಕೊಂಡದ್ದು
ನಮ್ಮ ದೌರ್ಭಾಗ್ಯವೇ ಸರಿ. ನಾನೆ ಅಳಲುತಿರೆ
ಇನ್ನಾರ ಸಂತೈಸಲಿ?

ಲಿಂಗಣ್ಣ – ನಿಂಬಯ್ಯ,
ಸೇನೆಯಧಿಪತಿ ನೀನೆ ಸಂತವಿಪುದನು ಉಳಿದು
ಇಂತು ಗೋಳಾಡಿದರೆ ಅರಸುಕುವರನಿಗಾರು
ಸಂತೈಕೆ ಹೇಳುವವರು?

ಚೆಲುವಾಂಬೆ – ಮಂತ್ರಿಗಳೆ,
ಅಳುವವರ ಬಳಿ ಅಳಲುತಿರೆ ಹೆಚ್ಚುವುದು ಶೋಕ.
ಬನ್ನಿ ನಾವಿಲ್ಲಿಂದೆ ತೆರಳುವಂ –
ಸೋಮಯ್ಯನಿಲ್ಲಿರಲಿ. – ಸೋಮಯ್ಯ,
ಬಸವಯ್ಯನವರೊಡನೆ ಮಾತುಕತೆಯಾಡುತ್ತೆ
ಅವರ ದುಃಖವ ನೀಗು.

ಸೋಮಯ್ಯ – ಆಜ್ಞೆ!
(ಲಿಂಗಣ್ಣ, ಚೆಲುವಾಂಬೆ, ನಿಂಬಯ್ಯ ಹೋಗುತ್ತಾರೆ.)

ಬಸವಯ್ಯ – ಕುಳಿತುಕೊ, ಸೋಮಯ್ಯ.

ಸೋಮಯ್ಯ – ನೀನೂ ಕುಳಿತುಕೊ. (ಇಬ್ಬರೂ ಕುಳಿತುಕೊಳ್ಳುತ್ತಾರೆ.)

ಬಸವಯ್ಯ – ಸೋಮಯ್ಯ, ನಮ್ಮಯ್ಯ ಮಡಿವ ವೇಳೆ ನೀನು ಬಳಿಯಿದ್ದೆಯೇನು?

ಸೋಮಯ್ಯ – ಹೌದು, ಅದು ನನ್ನ ಪುಣ್ಯ.

ಬಸವಯ್ಯ – ಉತ್ಕ್ರಮಣಕಾಲದಲಿ ಬಹಳ ಯಾತನೆಯಾಯ್ತೆ?

ಸೋಮಯ್ಯ – ಇಲ್ಲ, ಒಂದಿನಿತೂ ಯಾತನೆಪಡಲಿಲ್ಲ. ಬಹಳ ಶಾಂತಿಯಿಂದಲೇ ಶಿವೈಕ್ಯರಾದರು. ಅದನು ನೋಡಿದ ನನಗೆ ಮರಣದಲ್ಲಿದ್ದ ಭೀತಿ ಕೂಡ ತೊಲಗಿಬಿಟ್ಟಿದೆ.

ಬಸವಯ್ಯ – ನನಗೇನಾದರೂ ಹೇಳಿದರೆ?

ಸೋಮಯ್ಯ – “ವ್ಯಸನಪಡುವುದು ಬೇಡ. ಧೀರನಾಗಿ ರಾಜ್ಯಭಾರ ಮಾಡಲಿ” ಎಂದರು. ಅಳುತಿದ್ದ ಲಿಂಗಣ್ಣ ಮಂತ್ರಿಗಳನು ಕುರಿತು, “ಲಿಂಗಣ್ಣನವರೆ, ನೀವೂ ನಿಂಬಯ್ಯನೂ ಸೇರಿ ರಾಜ್ಯ ಪರಹಸ್ತಗತವಾಗದಂತೆ ನೋಡಿಕೊಳ್ಳುತ್ತ ನನ್ನ ಮಗನನ್ನು ಕಾಪಾಡಿಕೊಂಡುಬನ್ನಿ” ಎಂದರು.

ಬಸವಯ್ಯ – ಅಯ್ಯೋ ನನ್ನಾ ಪಾಳು ಬೇಂಟೆಗೆ ಬೆಂಕಿ ಹಾಕಲಿ! ಆ ದಿನವೆ ನಿಂಬಯ್ಯನವರ ನುಡಿಗೇಳಿ ಬೇಂಟೆಗೈದಿ ಎಂತಹ ಮಹಾಪರಾಧ ಮಾಡಿದೆ? – ನಮ್ಮ ಮಲತಾಯಿ ಚೆಲುವಾಂಬೆ ಇದ್ದರೇ ಅಲ್ಲಿ?

ಸೋಮಯ್ಯ – ಇಲ್ಲ, ಅವರು ಬರುವನಿತರೊಳೆ ಹರಣ ಹೋಗಿತ್ತು.

ಬಸವಯ್ಯ(ಆಕಾಶದ ಕಡೆ ನೋಡಿ) ಹಾಳು ಬೇಂಟೆ!

ಸೋಮಯ್ಯ – ಎಷ್ಟು ದಿನವೆಂದು ನೀನಿಂತು ದುಃಖಿಸುವುದು, ಬಸವಯ್ಯ? ನೀನು ಹೊನ್ನಯ್ಯ, ಶಿವಯ್ಯ, ನಾನು ಎಲ್ಲರೂ ಗುರುಗಳ ಬಳಿ ವೇದಾಂತ ಓದುತ್ತಿದ್ದಾಗ ಅವರು ಉಪದೇಶ ಮಾಡಲಿಲ್ಲವೆ “ಹುಟ್ಟು ಸಾವುಗಳೆಲ್ಲ ಮಾಯೆ. ಧೀರರು ಮರುಗಬಾರದು” ಎಂದು?

ಬಸವಯ್ಯ – ಅಹುದು, ಸೋಮಯ್ಯ, ಅದೆಲ್ಲವೂ ನಿಜವೇ ಅಹುದು. ಅದರೆ ಆಗ ತಂದೆಯಳಿದಿರಲಿಲ್ಲ; ಕಷ್ಟ ಬಂದಿರಲಿಲ್ಲ. ಸುಖವಿರಲು ಎಲ್ಲ ಮಾಯೆ ಎಂದು ಸುಖಪಡಬಹುದು. ದುಃಖಬರಲು ಎಲ್ಲ ಮಾಯೆ ಎಂದು  ದುಃಖ ಪಡುವುದು ಕಷ್ಟ! ಸೋಮಯ್ಯ, ನಿನ್ನನೊಂದು ಮಾತು ಕೇಳುತ್ತೇನೆ. ನೀನು ನನ್ನ ಸಹಪಾಠಿ – ಇದರಲ್ಲಿ ಏನೋ ಮೋಸ ನಡೆದಿಲ್ಲವೆ? ನನ್ನಾಣೆ, ಹೇಳು!

ಸೋಮಯ್ಯ – ಯಾವುದರಲ್ಲಿ? (ಬಸವಯ್ಯ ಸುಮ್ಮನಿರುವನು.) ನೀನು ಹೇಳುವುದು ನನಗೆ ಸ್ವಲ್ಪವೂ ಅರ್ಥವಾಗುವುದಿಲ್ಲ.

ಬಸವಯ್ಯ – ಹೋಗಲಿ ಬಿಡು, ಸೋಮಯ್ಯ! – ನನಗೀಗ ಒಂಟಿಯಾಗಿರಬೇಕೆಂಬುವಾಸೆ. ನೀನು. . .

ಸೋಮಯ್ಯ – ಆಗಲಿ, ಹೊರಡುತ್ತೇನೆ. (ಎದ್ದು ನಿಲ್ಲುವನು.)

ಬಸವಯ್ಯ – ಬೇಸರಪಡದಿರು. ನಾಳೆ ಬಾ.

ಸೋಮಯ್ಯ – ಬೇಸರವೇಕೆ? ಬರುತ್ತೇನೆ.
(ಸೋಮಯ್ಯನು ಹೋಗುತ್ತಾನೆ. ಬಸವಯ್ಯನು ಅವನನೇ ಎವೆಯಿಕ್ಕದೆ ನೋಡುತ್ತ ನಿಟ್ಟುಸಿರು ಬಿಟ್ಟು)

ಬಸವಯ್ಯ – ಇವರೆಲ್ಲರೂ ಮೋಸಗಾರರೋ? ಅಥವಾ
ನನ್ನೊಳಿಹ ಮೋಸವೇ ಇತರರಲಿ ಮೋಸವನು
ತೋರುತಿಹುದೋ? ಇರಲಿ, ಕಾದು ನೀರ್ಣಯಿಸುವೆನು.
ಬಣ್ಣ ಬಣ್ಣದ ಸ್ವಪ್ನಗೋಲದೊಳ್‌ ಮುಚ್ಚಿರುವ
ಈ ಬರ್ದುಕು ಕವಿಯುವುದು ಸತ್ಯಧವಳತೆಯನ್ನೆ
ಬಣ್ಣ ಬಣ್ಣದಿ ಬಿಚ್ಚಿ. ಹುಚ್ಚು ಹುಚ್ಚಿಗೆ ಮೆಚ್ಚು;
ಇಲ್ಲದಿರೆ ಪೆಚ್ಚು. ಬಹು ಸಂಖ್ಯೆ ಹುಚ್ಚರಿರೆ
ಹುಚ್ಚನಲ್ಲದ ನರನೆ ಹುಚ್ಚಾಗಿ ತೋರುವುನು. –
ಆದರೂ ಅಂತರಾತ್ಮವು ಗೊಣಗುತಿದೆ, ಏನೊ
ಮೋಸ ನಡೆದಿದೆ ಎಂದು –
ಯಾರಲ್ಲಿ? ಹೊನ್ನಯ್ಯ!
[ಹೊನ್ನಯ್ಯ ಬರುವನು.]
ಬಂದೆಯಾ? ಕುಳಿತುಕೊ! (ಹೊನ್ನಯ್ಯ ಕುಳಿತುಕೊಳ್ಳುವನು)

ಹೊನ್ನಯ್ಯ(ಸ್ವಲ್ಪ ಅವಸರವಾಗಿ ಮಾತಾಡುವನು.) ವಿಶೇಷವೊಂದಿದೆ. ನಿನಗೆ ಹೇಳಲು ಬಂದೆ.

ಬಸವಯ್ಯ – ಇದೇನು? ಬೆಚ್ಚಿದಂತಿವೆ ನಿನ್ನ ಕಣ್ಣು!

ಹೊನ್ನಯ್ಯ – ಬಹಳ ಸೋಜಿಗದ ಸಂಗತಿ. ನಿಮ್ಮ ತೀರಿಹೋದ ತಂದೆ. . .

ಬಸವಯ್ಯ – ಏನು!

ಹೊನ್ನಯ್ಯ – ನಾನು ಕಂಡೆ!

ಬಸವಯ್ಯ – ಏನೇನು! ಹೇಳು!

ಹೊನ್ನಯ್ಯ – ಉಮ್ಮಳಿಸದಿರು. ಶಾಂತಿಯಿಂದ ಕೇಳು. ಸ್ವರ್ಗಸ್ಥರಾದ ನಮ್ಮ ಮಹಾರಾಜರು ಬಸಪ್ಪನಾಯಕರನು ಕಂಡೆ.

ಬಸವಯ್ಯ – ಆಮ್! ಯಾವಾಗ?

ಹೊನ್ನಯ್ಯ – ಕಳೆದಿರುಳಿನಲ್ಲಿ!

ಬಸವಯ್ಯ – ನಾನೂ ಕಂಡಿದ್ದೆ, ಕನಸಿನಲ್ಲಿ.

ಹೊನ್ನಯ್ಯ – ನಾನು ಕಂಡಿದ್ದು ಕನಸಿನಲ್ಲಲ್ಲ. ಅರಮನೆಯ ಹೆಬ್ಬಾಗಿಲ ಬಳಿಯಲ್ಲಿ; ಚೆನ್ನಾಗಿ ಎಚ್ಚತ್ತ ವೇಳೆ; ಕಾವಲುಗಾರ ಕೆಂಚಣ್ಣನ ಜೊತೆಯಲ್ಲಿ!

ಬಸವಯ್ಯ – ಅಯ್ಯೋ ಶಿವನೇ, ಸರಿಯಾಗಿ ತಿಳುಹಯ್ಯ.

ಹೊನ್ನಯ್ಯ – ಮೊನ್ನೆಯಿರುಳು ಕೆಂಚಣ್ಣ ಕಾವಲಿದ್ದಾಗ ಬೆಳಗಿನ ಜಾವದ ಹೊತ್ತು ಕಾಣಿಸಿಕೊಂಡಿತಂತೆ. ಅವನು ಬಂದು ನನಗೆ ಹೇಳಲು ನಾನು ಸುಳ್ಳೆಂದೇ ತಿಳಿದು ಪರೀಕ್ಷಿಸಲು ಹೋದೆ ನಿನ್ನೆಯಿರುಳು.

ಬಸವಯ್ಯ – ಆಮೇಲೆ?

ಹೊನ್ನಯ್ಯ – ನಿನ್ನೆಯಿರುಳೂ ಮರಳಿ ಕಾಣಿಸಿತು. ನೋಡಿದರೆ
ಗತಿಸಿದಾ ಬಸವನಾಯಕರಂತೆ ವೇಷವನು
ತಳೆದಿತ್ತು, ಕೈತವವೊ? ಸತ್ಯವೋ? ನಾನರಿಯೆ.
ಬೆಳ್ದಿಂಗಳಾ ಮಬ್ಬು ಮಾಯೆಯಲಿ ಹಿರಿದಾಗಿ
ತೋರಿತು. ಕೆಂಚಣ್ಣ ಭಯದಿಂದೆ ನಡುನಡುಗಿ
ಸೆಡೆತು ಗೇಣುದ್ದವಾದನು! ನನ್ನೆದೆಯೂ
ನಡುಗದಿರಲಿಲ್ಲ.

ಬಸವಯ್ಯ – ನುಡಿಸಿದೆಯಾ?

ಹೊನ್ನಯ್ಯ – ಹೌದು
ಆದರೇಂ? ಕೋಪದಲಿ ನೋಡುತ್ತೆ ನೋಡುತ್ತೆ
ಮುಗಿಲಿನೊಳು ತೇಲುತ್ತೆ ಮಾಯವಾಯಿತು ಕಡೆಗೆ.

ಬಸವಯ್ಯ – ಆಶ್ಚರ್ಯ! ಮೊಗದೊಳಾವ ಕಳೆ ಮೆರೆದಿತ್ತು?

ಹೊನ್ನಯ್ಯ – ದುಗುಡವೆಂದೇ ಹೇಳಲಹುದು.

ಬಸವಯ್ಯ – ಏನುಡುಗೆ?

ಹೊನ್ನಯ್ಯ – ಉಡುಗೆಯೇ? ಬಸವನಾಯಕರರಸುವೇಷ!
ಆ ನಡಿಗೆ, ಆ ನೋಟ, ಆ ಹಿರಿಯ ಗಾಂಭೀರ್ಯ
ಎಲ್ಲವೂ ನಿಮ್ಮ ತಂದೆಯನೆ ಹೋಲಿತ್ತು.
ನಿನ್ನೊಡನೆ ಅದು ನುಡಿಯಬಹುದೆಂದು, ನಿನಗೆ
ಹೇಳುವುದುಚಿತವೆಂದು ತಿಳಿಸಿದೆನು.

ಬಸವಯ್ಯ – ಒಳ್ಳಿತಾಯ್ತು.
ಇಂದು ಕಾಯುವಿರೇನು?

ಹೊನ್ನಯ್ಯ – ನೀ ಬರುವುದಾದರೆ.

ಬಸವಯ್ಯ – ಇದರೊಳೇನೊ ರಹಸ್ಯವಿರಬೇಕು. ಬರುತ್ತೇನೆ.
ಇನ್ನಾರಿಗೂ ಹೇಳಲಿಲ್ಲವಷ್ಟೆ?

ಹೊನ್ನಯ್ಯ – ಇಲ್ಲ, ಇಲ್ಲ.
ನೀನೆ ಮೊದಲನೆಯವನು.

ಬಸವಯ್ಯ – ಯಾರಿಗಿದನರುಹದಿರಿ.

ಹೊನ್ನಯ್ಯ – ನಾನು ತೆರಳುತ್ತೇನೆ. ಯಾವಾಗ ಬರುವೆ?

ಬಸವಯ್ಯ – ನಡುರಾತ್ರಿ! (ಹೊನ್ನಯ್ಯ ತೆರಳುವನು.)
ನನ್ನ ತಂದೆಯ ಪ್ರೇತ! ಎಲ್ಲ ಶುಭವಾಗಿಲ್ಲ!
ಒಂದಲ್ಲ ಒಂದು ದಿನ ಪಾಪ ಬಯಲಹುದು!
(ಎದ್ದು ಹಿಂದೆ ಮುಂದೆ ತಿರುಗಾಡಲಾರಂಭಿಸುತ್ತಾನೆ.)

[ಪರದೆ ಬೀಳುವುದು