[ಅರಮನೆಯ ಇನ್ನೊಂದು ಭಾಗ. ಚೆಲುವಾಂಬೆ ನಿಂಬಯ್ಯರು ಕೈ ಕೈ ಹಿಡಿದುಕೊಂಡು ಬರುತ್ತಾರೆ.]

ಚೆಲುವಾಂಬೆ – ಪ್ರಿಯತಮ, ನಮ್ಮ ವ್ಯೂಹಗಳೆಲ್ಲ ಇದುವರೆಗೆ
ಎಡರರಿಯದಾಗಿಹವು. ಇನ್ನುಳಿದೆಡರುಗಳೂ
ನೇಸರೇಳ್ಗೆಯ ಮುಂದೆ ಪೊಳ್ತರೆಯ ಹಿಮದಂತೆ
ಕರಗುವುವು. ಹಿಡಿದ ಕಚ್ಚವನೊಮ್ಮೆ ಅರೆಮುಗಿಸಿ
ಬಿಡುವುದುಚಿತಮಲ್ತು; ಕೊನೆಗಾಣಿಸಲೆ ಬೇಕು;

ನಿಂಬಯ್ಯ – ದೇವಿ,
ನಿನ್ನಾಣತಿಯ ನೆರವಿರಲು ನನಗೆ, ನಿನ್ನೊಲ್ಮೆ
ಉತ್ಸಾಹವೀಯುತಿರೆ ನೀನೆಳಸಿದೆಸಕವನು
ನಿರ್ಭೀತಿಯಿಂದೆ ಮಾಡಿಯೆ ಮಾಡುವೆನು. ಬೆಸಸು.

ಚೆಲುವಾಂಬೆ – ಈ ಗುಟ್ಟು ಬಯಲಾಗದಂದದಲಿ ಎಚ್ಚರಿಕೆ
ಯಿಂದಿರುವುದೆಮ್ಮ ಕರ್ತವ್ಯ.

ನಿಂಬಯ್ಯ – ಅದಕಾನು ಹೊಣೆ.
ತಿಮ್ಮಜಟ್ಟಿಯ ಹೊರತು ಉಳಿದಾರಿಗೂ ಗುಟ್ಟು
ಗೊತ್ತಿಲ್ಲ. ‘ಎಲ್ಲಿಯಾದರೂ ಗುಟ್ಟು ಬಯಲಾಗೆ
ನಿನಗೆ ಮರಣವೆ ಸಿದ್ಧ’ ಎಂದಾನು ಹೆದರಿಸಿಹೆ.

ಚೆಲುವಾಂಬೆ – ಆ ವೈದ್ಯ?

ನಿಂಬಯ್ಯ – ಪ್ರೇಯಸಿ, ಆ ವೈದ್ಯನಾರೆಂದೆ?
ತಿಮ್ಮಜಟ್ಟಿಯೆ ಛದ್ಮವೇಷದಲಿ ಐತಂದು
ಮದ್ದಿನಲಿ ವಿಷವನಡಗಿಸಿಕೊಟ್ಟ ವೈದ್ಯ.
(ಇಬ್ಬರೂ ಕುಳಿತುಕೊಳ್ಳುವರು.)

ಚೆಲುವಾಂಬೆ – ನಮ್ಮ ಸುಖಕಿನ್ನೆನಿತು ಬಲಿ ಬೇಕೊ ನಾನರಿಯೆ.

ನಿಂಬಯ್ಯ – ಅದಕ್ಕೇನು? ನಾನಿಹೆನು! ತಿಮ್ಮಜಟ್ಟಿಯಿರುವನು! ಅಗೋ ತಿಮ್ಮಜಟ್ಟಿ!

[ತಿಮ್ಮಜಟ್ಟಿ ಬರುವನು]

ತಿಮ್ಮಜಟ್ಟಿ – ರಾಣಿಯವರ ಪಾದಕ್ಕೆ ಬಿದ್ದೆ! ರಾಜರಿಗೆ ಕೈಮುಗಿದೆ!

ನಿಂಬಯ್ಯ – ಜಟ್ಟಿ, ಏನು ಸಮಾಚಾರ ಊರಿನಲ್ಲಿ?

ತಿಮ್ಮಜಟ್ಟಿ – ದೊರೆಗಳ ಆಕಸ್ಮಿಕ ಮರಣದ ವಿಚಾರವಾಗಿ ಜನರಲ್ಲಿ ವಾದ ವಿವಾದ ನಡಯುತ್ತಿವೆ. ಮತ್ತೆ ಕೆಲವರು ರಾಜಕುಮಾರ ಬಸವಯ್ಯನವರ ಪಟ್ಟಾಭಿಷೇಕ ಮಹೋತ್ಸವವನ್ನೆ ಎದುರುನೋಡುತ್ತಿದ್ದಾರೆ.

ಚೆಲುವಾಂಬೆ – ಅದಿರಲಿ! ನಮ್ಮ ಮೇಲೇನಾದರೂ ದೂರು ಹುಟ್ಟಿದೆಯೊ?

ತಿಮ್ಮಜಟ್ಟಿ – ಏನೊ ತಾಯಿ? ನನ್ನ ಕಿವಿಗಿನ್ನೂ ಬಿದ್ದಿಲ್ಲ.

ಚೆಲುವಾಂಬೆ – ನಿಜವಾಗಿ ಹೇಳು!

ತಿಮ್ಮಜಟ್ಟಿ – ಇಲ್ಲ, ಮಹತಾಯಿ. ತಮ್ಮೊಡನೆ ಸುಳ್ಳಾಡುವುದೆ?

ಚೆಲುವಾಂಬೆ – ರಹಸ್ಯವನು ಯಾರೊಡನೆಯೂ ಹೇಳಕೂಡದು.

ತಿಮ್ಮಜಟ್ಟಿ – ಎಲ್ಲಾದರೂ ಉಂಟೆ, ತಾಯಿ?

ಚೆಲುವಾಂಬೆ – ನಿನಗೆ ಅಧಿಕಾರ, ಐಶ್ವರ್ಯ ಎಲ್ಲ ದೊರಕುವುದು.

ತಿಮ್ಮಜಟ್ಟಿ – ತಮ್ಮ ಅನುಗ್ರಹ.

ನಿಂಬಯ್ಯ – ನೀನು ಮಾಡಬೇಕಾಗಿರುವ ಕೆಲಸ ಇನ್ನೂ ಇದೆ.

ತಿಮ್ಮಜಟ್ಟಿ – ಸಿದ್ಧನಾಗಿದ್ದೇನೆ.

ನಿಂಬಯ್ಯ – ನಮ್ಮ ಮೇಲೆ ಯಾರಾದರೂ ಸಂದೇಹದ ಮಾತನಾಡಿದರೆ ಕೂಡಲೆ ಬಂದು ತಿಳಿಹಬೇಕು.

ತಿಮ್ಮಜಟ್ಟಿ – ಅಪ್ಪಣೆ!

ನಿಂಬಯ್ಯ – ಸಮಯ ಬಂದರೆ ಅವರನ್ನೂ. . . ತಿಳಿಯಿತೆ?

ತಿಮ್ಮಜಟ್ಟಿ – ತಿಳಿಯಿತು, ಮಹಾಸ್ವಾಮಿ.

ನಿಂಬಯ್ಯ – ಬಸವಯ್ಯ, ಲಿಂಗಣ್ಣ ಮಂತ್ರಿ ಮತ್ತು ಇವರ ಆಪ್ತಾನುಚರ ಮಾತುಕತೆಗಳನು ಚಿನ್ನಾಗಿ ಪರಿಶೀಲಿಸುತ್ತಿರಬೇಕು.

ತಿಮ್ಮಜಟ್ಟಿ – ನಾನದೇ ಕೆಲಸದಲ್ಲಿದ್ದೇನೆ, ದೇವರೂ.

ಚೆಲುವಾಂಬೆ – ಈಗ ನಡೆ; ಬಂದು ಕಾಣುತಿರು – ದಿನಕ್ಕೊಂದು ಬಾರಿ.

(ತಿಮಜಟ್ಟಿ ನಮಸ್ಕಾರಮಾಡಿ ಹೋಗುವನು.)

ನಿಂಬಯ್ಯ – ಪ್ರಿಯೆ,
ಲಿಂಗಣ್ಣ ಮಂತ್ರಿಯಲಿ ನನಗೆ ಸಂಶಯವಿಲ್ಲ;
ಮುದುಕನಾಗಿಹನವನು. ಆದರಾ ಬಸವಯ್ಯ!
ಅವನ ರೀತಿಯೊಳೇನೊ ಪ್ರಮಾದವೇ ತೋರುತಿದೆ.
ಅವನ ಶೋಕದೊಳೇನೊ ರೋಷವಿರುವಂತಿದೆ.
ಅವನಾ ಮಾತುಗಳೂ ವ್ಯಂಗ್ಯಪೂರ್ಣವಾಗಿವೆ.
ಮೇಲೆ ಮೇಲವನಾಡುವುದಕಿಂತಲೂ ಅವನಿಗೆ
ಮಿಗಿಲಾಗಿ ತಿಳಿದಿಹುದು.

[ದ್ವಾರಪಾಲಕ ಬರುತ್ತಾನೆ.]

ದ್ವಾರಪಾಲಕ – ಲಿಂಗಣ್ಣ ಮಂತ್ರಿಗಳು ದಯಾಮಾಡಿಸಿದ್ದಾರೆ.

ಚೆಲುವಾಂಬೆ – ಬರಹೇಳು. (ದ್ವಾರಪಾಲಕನು ಹೋದಮೇಲೆ ನಿಂಬಯ್ಯನಿಗೆ) ನೀನಾ ಕೊಟಡಿಯಲಿ ಅಡಗಿರು. ನೀನಿದ್ದರವನು ಎದೆ ಮುಚ್ಚಿ ಮಾತಾಡುವನು. (ನಿಂಬಯ್ಯ ಅಡಗುವನು.)

[ಲಿಂಗಣ್ಣ ಮಂತ್ರಿ ಬರುತ್ತಾನೆ. ರಾಣಿ ಜಗ್ಗನೆದ್ದು]

ಚೆಲುವಾಂಬೆ – ಬನ್ನಿ, ಮಂತ್ರಿಗಳೆ. (ಪೀಠವನ್ನು ತೋರಿಸುವಳು. ಇಬ್ಬರೂ ಕುಳಿತುಕೊಳ್ಳುವರು.)

ಲಿಂಗಣ್ಣ – ದೇವಿ, ನಿನ್ನೊಡನೊಂದು ವಿಶೇಷವನು ಕುರಿತು ಮಾತನಾಡಲು ಬಂದೆ.(ಸುತ್ತ ನೋಡುವನು.)

ಚೆಲುವಾಂಬೆ – ಇಲ್ಲಿ ಇನ್ನಾರೂ ಇಲ್ಲ. ತಾವು ಧೈರ್ಯುವಾಗಿ ಮಾತಾಡಬಹುದು.

ಲಿಂಗಣ್ಣ – ಮಹಾರಾಜರ ಮರಣದಿಂದ ಬಿದನೂರು ರಾಜ್ಯವೆ ಅಲ್ಲೋಲ ಕಲ್ಲೋಲವಾದಂತಿದೆ. ನಾವೀಗ ಪ್ರಜಾಮತಕ್ಕೆ ವಿರೋಧವಾಗದಂತೆ  ಎಚ್ಚರಿಕೆಯಿಂದ ನಡೆಯಬೇಕು.

ಚೆಲುವಾಂಬೆ – ತಮ್ಮಂತಹ ಮಂತ್ರಿವರ್ಯರ ನೆರವಿರಲು ಅದಾವ ಮಹಾ ಕಾರ್ಯ ನನಗೆ?

ಲಿಂಗಣ್ಣ – ಆಳುವವರ ಬಲವೂ ಒಲವೂ ಇದ್ದರಲ್ಲವೆ ಮಂತ್ರಿ ಕೆಲಸ ಮಾಡಬಲ್ಲನು?

ಚೆಲುವಾಂಬೆ – ನಿಮಗೀಗ ಕಡಿಮೆಯಾದುದೇನು? ನಾನು ತಮ್ಮ ಪುತ್ರಿಯಂತಿರುವೆನಷ್ಟೆ?

ಲಿಂಗಣ್ಣ – ನೀನೇನೊ ಇದ್ದೀಯೆ. ಆದರೆ ಬಸವಯ್ಯ. . .

ಚೆಲುವಾಂಬೆ – ಆತನೂ ನಿಮ್ಮಲ್ಲಿ ಗುರುಭಾವವನಿಟ್ಟುಕೊಂಡಿರುವನಲ್ಲವೆ?

ಲಿಂಗಣ್ಣ – ಅದೇನೊ ದಿಟವೆ. ಆದರೆ ಆತನಿನ್ನೂ ತರುಣ. ತಂದೆ ತೀರಿಹೋದ ಶೋಕಭಾರದಿಂದ ಬೇರೆ ಮನಸ್ಸು ಕದಡಿಹೋದಂತಿದೆ. ಮೊದಲೇ ಸ್ವಭಾವತಃ ಸ್ವಪ್ನಜೀವಿ. ಒಬ್ಬನೆ ಕುಳಿತುಕೊಂಡು ಏನೇನೊ ಭಾವಗಳನು ಕಲ್ಪಿಸಿಕೊಂಡು ಸುಮ್ಮನೆ ಕೊರಗುತ್ತಾನೆ.

ಚೆಲುವಾಂಬೆ – ನೀವೇ ಹೇಳಿ, ನಾನೇನು ಮಾಡಲಿ? ನಾನೂ ಎಷ್ಟೆಷ್ಟೋ ಸಮಾಧಾನ ಹೇಳಿಯಾಯಿತು.

ಲಿಂಗಣ್ಣ – ನಿನ್ನಿಂದಲೆ ಪರಿಹಾರವಾಗಬೇಕು ಅವನ ಸಂದೇಹ.

ಚೆಲುವಾಂಬೆ(ಬೆಚ್ಚಿ)  ಸಂದೇಹ?

ಲಿಂಗಣ್ಣ – ನಾನು ಮೊದಲೇ ಹೇಳಲಿಲ್ಲವೆ, ಹುಡುಗ ಎಂದು? ನಿರಾಧಾರವಾದ ಸಂಶಯ ಕೀಟವೊಂದು ಆತನ ಮೆದುಳನು ಕೊರೆಯುತ್ತಿದೆ, ಎಂದು ಊಹಿಸುತ್ತೇನೆ. ನನ್ನ ಊಹನೆಯಷ್ಟೆ?

ಚೆಲುವಾಂಬೆ – ಅದೇನದು?

ಲಿಂಗಣ್ಣ – ಅದೇನಾದರಾಗಲಿ! ನಿಂಬಯ್ಯನೊಡನೆ ನೀನು ಹೆಚ್ಚು ಸಲಿಗೆಯಿಂದಿರುವುದು ಆತನಿಗೆ ಸರಿಬಿದ್ದಂತೆ ತೋರುವುದಿಲ್ಲ. ತಿರುಳಿಲ್ಲದ ಮಾತು! ಆದರೂ ರಾಜಕೀಯ ದೃಷ್ಟಿಯಿಂದ ಸ್ವಲ್ಪ ಎಚ್ಚರಿಕೆಯಿಂದಿರುವುದೆ ಮೇಲು.

ಚೆಲುವಾಂಬೆ – ರಾಜಕೀಯ ದೃಷ್ಟಿಯಿಂದಲೇ ಅಲ್ಲವೆ ನಾನು ನಿಂಬಯ್ಯನವರೊಡನೆ ಸಲಿಗೆಯಿಂದಿರುವುದು. ನಿಮ್ಮೊಡನೆ ಸಲಿಗೆಯಿಂದಿಲ್ಲವೆ?

ಲಿಂಗಣ್ಣ – ಹೌದು, ನಾನಾತನಿಗೆ ಇದೆಲ್ಲವನೂ ಹೇಳಿದ್ದೇನೆ.

ಚೆಲುವಾಂಬೆ – ಆಗಲಿ, ರಾಜಕುಮಾರನಿಚ್ಛೆ! – ನಿಮ್ಮ ಮಗಳು ರುದ್ರಾಂಬೆಯನು ಇಲ್ಲಿಗೆ ಕಳುಹಿಸುವಿರಾ? ಆಕೆ ಜೊತೆಯಲ್ಲಿದ್ದರೆ ನನಗೆಷ್ಟೋ ಶಾಂತಿ, ಸಂತೋಷ.

ಲಿಂಗಣ್ಣ – ಅವಳೂ, ನಿನ್ನಲ್ಲಿಗೆ ಬರಲು ಕಾತರಳಾಗಿದ್ದಳು.

ಚೆಲುವಾಂಬೆ – ಕಳುಹಿಸಿಕೊಡಿ.

ಲಿಂಗಣ್ಣ – ಅಗತ್ಯವಾಗಿ. – ನಾನೀಗ ಬರುತ್ತೇನೆ. (ಏಳುತ್ತಾನೆ. ರಾಣಿಯೂ ಏಳುತ್ತಾಳೆ.) ನಾನು ಹೇಳಿದುದು ಅನ್ಯಥಾ ಭಾವಿಸಬಾರದು.

ಚೆಲುವಾಂಬೆ – ಹೇಳಿದರೇನು? ನಮ್ಮ ಆಭ್ಯುದಯಕ್ಕಾಗಿಯೆ ಅಲ್ಲವೆ?

[ಲಿಂಗಣ್ಣ ಮಂತ್ರಿ ಹೋಗುತ್ತಾನೆ. ನಿಂಬಯ್ಯ ಬಂದು.]

ನಿಂಬಯ್ಯ – ನಾನು ಹೇಳಿದುದೇನು! ಬಸವಯ್ಯನೆದೆಯಲ್ಲಿ
ಕಾಣುವುದಕಿಂತಲೂ ಹೆಚ್ಚಾಗಿ ಹುದುಗಿಹುದು.
ಸ್ವಪ್ನಸ್ಥರಂತಿರುವ ಯುವಕನು ನಾವೆಂದೂ
ನಂಬಬಾರದು; ನಂಬಿದರೆ ಕೇಡು. ಅಂತಹರು
ಹಾವಿರುವ ಹುತ್ತಗಳು. ಅವರ ನಾಡಿಗಳೆಲ್ಲ
ಹೆಡೆಯೆತ್ತಿರುವ ಮಾರುವೇಷದ ಸರ್ಪಗಳು.
ಅವರ ಒಂದೊಂದು ಕನಸಿನ ನಡುವೆ ಹುದುಗಿಹವು
ನೂರಾರು ವಿಲಯಕಾಲದ ಸಿಡಿಲು ಮಿಂಚುಗಳು.
ನಾವಿನ್ನು ಬಹಳ ಎಚ್ಚರಿಕೆಯಿಂದಿರದಿದ್ದರೆ
ಗುಟ್ಟೆಲ್ಲ ರಟ್ಟಾಗಿ ನಮಗಶುಭವಾಗಬಹುದು.

ಚೆಲುವಾಂಬೆ – ಮುಂದೇನು ಮಾಡುವುದು!

ನಿಂಬಯ್ಯ – ಮುಂದೇನು ಮಾಡುವುದು?
ಮಾಡಬೇಕಾದುದನು ಮಾಡುವುದು!

ಚೆಲುವಾಂಬೆ – ಹಾಗೆಂದರೆ?

ನಿಂಬಯ್ಯ – ಬಸವಯ್ಯನನು ಹಿಡಿದು ಸಂಹರಿಸಿ, ಲಿಂಗಣ್ಣ
ಮಂತ್ರಿಯನು ಸೆರೆಯಿಟ್ಟು ದರ್ಪದಿಂದಾಳುವುದು!

ಚೆಲುವಾಂಬೆ – ನಿಂಬಯ್ಯ, ನಾನಿದಕೆ ಸಮ್ಮತಿಸಲೊಲ್ಲೆ.
ನಿನ್ನ ಸಂಗವ ಪಡೆಯಲೆಂದು ಮಾತ್ರವೆ ನಾನು
ದೊರೆಯ ಕೊಲ್ಲಲು ಮನಸುಮಾಡಿದೆನೆ ಹೊರತು
ರಾಜ್ಯಾಭಿಲಾಷೆಯಿಂದಲ್ಲ.

ನಿಂಬಯ್ಯ – ಪ್ರಿಯೆ, ಎನಿತು ದಿನ
ಗುಟ್ಟಾಗಿ ಜೀವಿಪೆವು? ಒಂದಲ್ಲವೊಂದುದಿನ
ಬಯಲಾಗದಿರದು ನಮ್ಮೀರ್ವರೊಲ್ಮೆವೇಟಂ!
ಆಗೆಮ್ಮ ಗತಿಯೇನು? ಒಂದಲ್ಲವೊಂದುದಿನ
ದೊರೆಯ ಸಾವಿಗೆ ನಿಜದ ಕಾರಣ ಬಯಲಿಗೆ
ಬೀಳುವುದು! ಆಗೆಮ್ಮ ಗತಿಯೇನು? ರಾಜ್ಯವಿರೆ,
ಕೈಯಲ್ಲಿ ದರ್ಪವಿರೆ ಆರನೂ ಲೆಕ್ಕಿಸದೆ
ಸುಖದಿಂದೆ ಬಾಳಬಹುದು. ಇಲ್ಲದಿರೆ ನಾವೆಲ್ಲಿ?
ಪಾಪಿಗಳು ಇವರೆಂದು ತಳ್ಳುವರು ಸೆರೆಮನೆಗೆ!
ಇಲ್ಲದಿರೆ ಮರಣದಂಡನೆ ವಿಧಿಸಿ ಕೊಲ್ಲುವರು!
ನಮ ಪ್ರೇಮೋದ್ಯಾನವೇ ಮಸಣವಾದಪುದೆಮಗೆ!
ನಮ್ಮ ಅಧರಾಮೃತವೆ ಗರಳವಾಗುವುದೆಮಗೆ!
ಅದರಿಂದೆ ನಮ್ಮ ಮೊದಲಿನ ಬಯಕೆ ಬಸವಯ್ಯ
ಲಿಂಗಣ್ಣ ಮಂತ್ರಿಗಳ ಸಾವಲ್ಲದಿದ್ದರೂ
ಅದರಿಂದಲೇ ಈಗ ನಮ್ಮ ಮೊದಲಿನ ಬಯಕೆ
ಸಿದ್ಧಿಪುದು; ಶಾಶ್ವತದಿ ಬಾಳುವುದು! ಓ ಪ್ರಿಯೆ,
ಇಟ್ಟ ಹಜ್ಜೆಯ ಮರಳಿ ಹಿಂತೆಗೆವುದೇಕೆ?
ಹನಿಯಾದರೇನಂತೆ? ಹೊಳೆಯಾದರೇನಂತೆ?
ರಕ್ತವೆಂದೂ ರಕ್ತ! ನಾನಿಹೆನು; ಹೆದರದಿರು!

ಚೆಲುವಾಂಬೆ(ಸುಯ್ದು)  ಇಂತಾಗುವುದು ಎಂದು ನಾನು ಬಗೆದಿರಲಿಲ್ಲ.
ಬಸವಯ್ಯನನು ಕೊಂದು ಮುಂದೆ ಯಾರಿಗೆ ಪಟ್ಟ?

ನಿಂಬಯ್ಯ – ಬಸವಯ್ಯನೇನು ನಿನ್ನಯ ಮಗನೆ? ಮಲತಾಯಿ
ಎಂದವನು ನಿನ್ನನೆದೆಮುಟ್ಟಿ ಹಳಿಯುತ್ತಿಹುದ
ನಾ ಬಲ್ಲೆ. ನಮ್ಮ ಸೋಮಯ್ಯನನು ದತ್ತಾಗಿ
ತೆಗೆದುಕೊಂಡರೆ ಕೆಲಸವಾಗುವುದು.

ಚೆಲುವಾಂಬೆ – ಪ್ರಿಯನೆ,
ನೀನೆಳಸಿದಂತಕ್ಕೆ. ದೋಣಿಯಲಿ ಕುಳಿತಾಯ್ತು.
ದೋಣಿ ತೇಲುತ್ತಿಹುದು.ಅದು ಮುಳುಗದಂದದಲಿ
ನೋಡಿಕೊಳ್ಳುವುದೆಮ್ಮ ಕರ್ತವ್ಯ.

ನಿಂಬಯ್ಯ – ಲಿಂಗಣ್ಣ
ಮಂತ್ರಿಯೇಂ ನಿಃಸ್ವಾರ್ಥಪರನೆಂದು ತಿಳಿದೆಯಾ?

ಚೆಲುವಾಂಬೆ – ಅಹುದು. ಸಂಶಯವೇನು?

ನಿಂಬಯ್ಯ – ನೀನರಿಯೆ! ನೀನರಿಯೆ!
ರುದ್ರಾಂಬೆಯನು ರಾಜಪುತ್ರನಿಗೆ ಕೊಟ್ಟು
ರಾಣಿಯನ್ನಾಗಿ ಮಾಡಲೆಳಸುತ್ತಿಹನು.
ಬಸವಯ್ಯನೂ ಕೂಡ ಅವಳನೊಲಿದಿರುವಂತೆ
ಸುದ್ದಿಬಂದಿದೆ ನನಗೆ. ನಮ್ಮ ಸಂಚುಗಳಂತೆ
ನೂರಾರು ಸಂಚುಗಳು ಸಂಚರಿಸುತಿಹವಿಲ್ಲಿ.
ತಪ್ಪಿದರೆ ನಮ್ಮೊಸಗೆಮಂಚವೆ ನಮಗೆ ಸೂಡಹುದು!

[ಪರದೆ ಬೀಳುವುದು