[ಲಿಂಗಣ್ಣ ಮಂತ್ರಿಯ ಮನೆಯ ಒಂದುಬಾಗ. ಲಿಂಗಣ್ಣ, ಬಸವಯ್ಯ, ರುದ್ರಾಂಬೆ ಬರುವರು. ರುದ್ರಾಂಬೆ ಸುಮಾರು ಹದಿನಾರು ವರ್ಷ ವಯಸ್ಸಿನ ತರುಣಿ. ಚೆಲುವೆಯಾದರೂ ಆಕೆಯ ಅಂಗವಿನ್ಯಾಸದಲ್ಲಿ ದುರ್ಬಲತೆಯ ಚಿಹ್ನೆಯಿಲ್ಲ. ಕೋಮಲೆಯಾದರೂ ಸಬಲೆಯಂತೆ ತೋರುತ್ತಾಳೆ. ಸ್ತ್ರೀಸಹಜವಾದ ಆಕೆಯ ಸೌಂದರ್ಯದ ಅಂತರಾಳದಲ್ಲಿ ಸಮಯ ಬಂದರೆ ಹೊರಹೊಮ್ಮಲು ಅನುವಾಗಿರುವ ಪೌರುಷಯುಕ್ತವಾಗಿರುವ ರೌದ್ರವಿರುವಂತೆ ತೋರುತ್ತದೆ. ಬಹು ದೂರದ ಮಿಂಚಿನಂತೆ ಮನೋಹರವಾಗಿದ್ದಾಳೆ. ಆಕೆಯ ಸುಕೋಮಲ ಮಧುರವಾಣಿಯಲ್ಲಿ ದಿಟ್ಟತನದ ಕುರುಹು ತೋರುವುದು.]

ಲಿಂಗಣ್ಣ – ಕುಳಿತುಕೋ, ಬಸವಯ್ಯ,(ರುದ್ರಾಂಬೆಗೆ)  ರುದ್ರಾ, ನಿನ್ನಿನಿಯನಿಗೆ ಮನಸು ತಲ್ಲಣಗೊಂಡಿದೆ. ನೀನಾತನನು ಸಂತವಿಸಬಲ್ಲೆ ಎಂದು ಇಲ್ಲಿಗೆ ಕರೆತಂದಿದ್ದೇನೆ. ನಿನ್ನ ಪ್ರೇಮಮಯ ಸುಂದರ ಸಾನ್ನಿಧ್ಯದಲ್ಲಿ ಆತನಿಗೆ ಶಾಂತಿ ಲಭಿಸಬಹುದು. (ಕುಳಿತುಕೊಂಡಿರುವ ಬಸವಯ್ಯನಿಗೆ) ರಾಜಕುಮಾರ, ನಾನೀಗಲೆ ಬರುತ್ತೇನೆ. ರುದ್ರಾ ನಿನ್ನೊಡನೆ ಮಾತಾಡುತಿರಲಿ.(ಲಿಂಗಣ್ಣ ಹೋಗುವನು)

ರುದ್ರಾಂಬೆ – ರಾಜಕುಮಾರ,
ದುಃಖಭಾರದೊಳೆನ್ನ ಮರೆತಂತೆ ತೋರುತಿದೆ.
ನಿನ್ನಳಲಿನೊಳು ನಾನೂ ಭಾಗಿಯಾಗಲು ನನಗೆ
ಪುಣ್ಯವಿಲ್ಲವೊ ಏನೊ? ತಂದೆಗಳ ಮರಣದಲಿ
ನೀನು ಹಗಲೂ ಇರುಳೂ ಖಿನ್ನನಾಗಿಹೆ ಎಂದು
ಕೇಳಿ ಮರುಗುತ್ತಿದ್ದೆ. ಇಂದು ನಿನ್ನನು ನೋಡ
ಬೇಕೆಂಬ ಆಕಾಂಕ್ಷೆ ಸಿದ್ಧಿಸಿತು. ಧನ್ಯಳಾದೆ!
ನಿನ್ನ ದುಗುಡದೊಳಿನಿತನಾದರೂ ನಾಂ ಪೊತ್ತು
ಧನ್ಯಳಾಗುವ ತೆರೆದೆ ಕೃಪೆಮಾಡು.

ಬಸವಯ್ಯ – ರುದ್ರಾಂಬೆ,
ನನ್ನ ದುಗುಡದ ಹೊರೆಯ ನಿನ್ನ ಮೇಲೆಯೂ ಹೇರಿ
ಶರದದ ಮುಗಿಲಿನಂತೆ ಶುಭ್ರವೂ ಹಗುರವೂ
ಆಗಿ ಆಕಾಶದಲಿ ನಲ್ಮೆಯಿಂ ತೇಲುತಿಹ
ನಿನ್ನೆದೆಯನೇತಕ್ಕೆ ಕಾರಮುಗಿಲನ್ನಾಗಿ
ಮಾಡಲಿ?

ರುದ್ರಾಂಬೆ – ಹಾಗೆನ್ನದಿರು, ಇನಿಯ. ಸುಖದಲ್ಲಿ
ಅರೆಪಾಲನೆಳಸುತಿಹ ನಾನು ನಿನ್ನಳಲಿನಲಿ
ಅರೆಪಾಲನಾಂದದಿಂದದೇ ಬಯಸುತಿಹೆನು.
ಲೋಕದಲಿ ಪ್ರೇಮವಾದರೂ ಇರುವುದೇತಕ್ಕೆ?
ನೊಂದೆದೆಯ ಸಂತೈಸಲಲ್ಲವೇ? ಜೀವನದ
ಕೋಟಲೆಯ ಭಾರವನು ಪರಿಹರಿಸಲಲ್ಲವೇ?

ಬಸವಯ್ಯ – ನೀನಾ ಕಾರ್ಯವನು ಮಾಡುತ್ತಲೇ ಇರುವೆ.
ನಿನ್ನ ಸೌಂದರ್ಯವೂ ನಿನ್ನ ಮಾಧುರ್ಯವೂ
ನಿನ್ನ ನಲ್ಮೆಯ ನೆನಪೂ ನನ್ನನಿದುವರೆಗಿಂತು
ಪೊರೆದಿಹವು. ನನಗೆ ನೀನೊಬ್ಬಳೇ ಶಾಶ್ವತ
ಧ್ರುವತಾರೆ! ತಿಮಿರ ಪರಿವೃತವಾದ, ಸರ್ವದಾ
ಸಮ್ಮಥಿತವಾದ ಈ ಸಂಸಾರಶರಧಿಯಲಿ
ಮೊರೆಮೊರೆದು ನೊರೆಗರೆವ ಪೆರ್ದೆರೆಗಳಗ್ರದಲಿ
ಬಿದ್ದೆದ್ದು ತೇಲುತಿಹ ಬಾಳ ಕಿರುದೋಣಿಯಲಿ
ಕುಳಿತು ಕಾತರನಾದ ನನಗೆ ನೀನೇ ಒಂದು
ಶಾಶ್ವತ ಧುವತಾರೆ! ನೀನೆನ್ನ ಬಳಿಯಿರಲು
ಬಾಳೆಲ್ಲ ಹಗುರವಾದಂತಾಗಿ ಶಾಂತಿ
ಮೂಡುವುದು ಮನದಲ್ಲಿ. – ನಿಂತಿರುವೆಯೇಕೆ?
ಬಾ, ಇಲ್ಲಿ ಕುಳಿತುಕೊ! (ಪಕ್ಕಕ್ಕೆ ಕೈತೋರುವನು)

ರುದ್ರಾಂಬೆ (ಮೆಲ್ಲಗೆ ಬಳಿ ಬಂದು ನಿಂತು) ಹಾಗಾದರಾನಿಂದು
ಧನ್ಯಳೆಂದೇ ತಿಳಿದೆ! – ಪ್ರಿಯನೇ, ಇನ್ನೆನಿತು
ದಿನ ಇಂತು ಕೊರಗುವುದು ತಂದೆಗಳ ನಿಧನಕ್ಕೆ?

ಬಸವಯ್ಯ (ಸುಯ್ದು) ಪಿತನ ನಿಧನಕ್ಕಾಗಿ ನಾನಿಂತು ಕೊರಗುತಿಲ್ಲ.

ರುದ್ರಾಂಬೆ – ಮತ್ತೇನು?

ಬಸವಯ್ಯ (ವ್ಯಸನದಿಂದ) ಏನೆಂದು ಹೇಳಲಿ, ರುದ್ರಾಂಬೆ?
ನಿಂತುಕೊಂಡಿಹುದೇಕೆ? ಬಾ, ಕುಳಿತುಕೊ.
(ಆಕೆಯ ಕೈಹಿಡಿದು ಪಕ್ಕದಲ್ಲಿ ಕೂತುಕೊಳ್ಳುವಂತೆ ಮಾಡಿ)
ಏನೆಂದು ಹೇಳಲಿ? ಹೇಳೆ ನಂಬುವರಾರು?

ರುದ್ರಾಂಬೆ – ಇನಿಯ, ನಾಂ ಬಲ್ಲೆ. ನನ್ನ ಪಿತನರುಹಿದನು.
ಆದರಾ ಸಂಶಯಕೆ ಕಾಲಿಲ್ಲವೆಂದೆನ್ನ
ಭಾವನೆ.

ಬಸವಯ್ಯ – ಚೇಳಿಗೆ ಕಾಲೇಕೆ, ರುದ್ರಾ?
ಕೊಂಡಿಯೊಂದೇ ಸಾಕು!

ರುದ್ರಾಂಬೆ – ಕ್ಷಮಿಸು, ರಾಜಪುತ್ರಾ;
ಚೆಲುವಾಂಬೆಯೆದೆಯಲ್ಲಿ ಚೇಳುಗಳಿಗೆಡೆಯಿಲ್ಲ.

ಬಸವಯ್ಯ – ಓ ನಲ್ಲೆ, ನೀನೇನು ಬಲ್ಲೆ? ಚೇಳ್ಗಳಿರವು
ಕಡಿಸಿಕೊಂಡವಗಲ್ಲದೆ ಇತರರಿಗೆ ತಿಳಿಯುವುದೆ?
ತಂದೆಯಳಿದಿನ್ನೂ ವಾರಗಳೂ ಕಳೆದಿಲ್ಲ;
ನಿಂಬಯ್ಯನೊಡನೆ ಸರಸವಾಡುತ್ತಿಹಳು!

ರುದ್ರಾಂಬೆ – ಆಕೆ ಆತ್ತುದನು ನಾನೆ ಕಂಡಿಹೆನು!

ಬಸವಯ್ಯ – ಶಿವಾ ಶಿವಾ!
ಎಲ್ಲ ಹುಸಿಗಂಬನಿಗಳಲ್ತೆ? ರುದ್ರಾಂಬೆ,
ಕಣ್ಣೀರ್ಗಳಾಳದಲಿ ನಾಕವಿರಬಹುದು,
ನರಕವಿರಬಹುದು; ಹುರುಷವಿರಬಹುದು,
ಶೋಕವಿರಬಹುದು. ಕೈತವಕೆ ಕಂಬನಿಯೆ
ಮುಸುಗಾಗಬಹುದು. ಚೆಲುವಾಂಬೆಯಶ್ರುಗಳ
ಹೃದಯದಲಿ ಮೊಸಳೆಗಳ ಮಡುವಿಹುದ ನಾಂ ಬಲ್ಲೆ.

ರುದ್ರಾಂಬೆ – ಕಾರಣವನರಿಯದೆಯೆ ದೋಷವನು ಹೇಳುವುದೆ?

ಬಸವಯ್ಯ –  ಇಂದಿನಿರುಳೆಲ್ಲವನು ಮನಗಾಣುವೆನು!

ರುದ್ರಾಂಬೆ – ಅದೆಂತು?

ಬಸವಯ್ಯ –  ತಂದೆಯನು ಕಂಡು ಮಾತಾಡುವೆನು!

ರುದ್ರಾಂಬೆ (ಬೆಕ್ಕಸದಿಂದ) ಏನು ಏನು?

ಬಸವಯ್ಯ –  ತಂದೆಯನು ಕಂಡು ಮಾತಾಡುವೆನು! ಬೆಚ್ಚದಿರು.
ಮೊನ್ನೆ ಕಾವಲುಗಾರ ಕೆಂಚಣ್ಣನಿರುಳಲ್ಲಿ
ನನ್ನ ತಂದೆಯ ರೂಪವನು ಕಂಡಂತೆ!
ನಿನ್ನೆ ಹೊನ್ನಯ್ಯನೂ ಅವನ ಜೊತೆಯೊಳೆ ಹೋಗಿ
ಕಂಡೆನೆಂದುಸುರಿದನು. ಮಾತಾಡಲಿಲ್ಲಂತೆ.
ಇಂದು ನಾನೂ ಅವರೊಡಗೊಂಡು ನಡೆದು
ತಂದೆಯಂತೆಯೆ ಕಂಡುಬಂದರದು ನುಡಿಸುವೆನು.

ರುದ್ರಾಂಬೆ – ಇದು ದಿಟವೆ?

ಬಸವಯ್ಯ –  ಹೊನ್ನಯ್ಯನೇನು ಸುಳ್ಳಾಡುವನೆ?

ರುದ್ರಾಂಬೆ – ಇನಿಯ, ನಿನ್ನೂಹೆ ದಿಟಮಪ್ಪ ಪಕ್ಷದಲಿ
ನಿನ್ನ ಸಾಹಸವೆಲ್ಲವೂ ನನ್ನದಾಗುವುದು!

ಬಸವಯ್ಯ – ಇದನು ಯಾರೊಡನೆಯೂ ಹೇಳದಿರು. – ಎಲ್ಲಿ?
ಲಿಂಗಣ್ಣ ಮಂತ್ರಿಗಳು?

ರುದ್ರಾಂಬೆ – ನೋಡಿ ಬರುತ್ತೇನೆ.(ಹೋಗುವಳು.)

ಬಸವಯ್ಯ – ಓ ಚೆಲುವೆ, ನೀನೆನ್ನ ಬಳಿಗೆ ಬರೆ ನನಗೆನಿತು
ಸೊಗವಹುದು! ಬಿದಿಯ ಬಯಕೆಯ ಮೊದಲ ಕಿಡಿ ನೀನು!
ಬಿರಿಯುವಲರಂತೆ, ಸುಳಿಸುಳಿವ ತೆಂಬೆಲರಂತೆ,
ಮಿರುಪ ಹೊಂಬಿಸಿಲಲ್ಲಿ ನಲಿವ ಕೆಂದಳಿರಂತೆ,
ಬಿರಿಮುಗುಳ ಮುಡಿದಿರುವ ಮಲ್ಲಿಗೆಯ ಹೊದರಂತೆ,
ಹೊಸ ಮುಗಿಲಿನಲಿ ನಲಿವ ಕಾಮನ ಬಿಲ್ಲಿನಂತೆ,
ನೊರೆಯ ಸೇಸೆಯ ಚೆಲ್ಲಿ ಬಿಂಕಂದಿಂ ಪರಿಯುತಿಹ
ತೊರೆಯಂತೆ, ಮುಂಬೆಳಗಿನೈಸಿರಿಯ ಮುಗುಳ್ನಗೆಯಂತೆ
ಮೆರೆಯುತಿಹೆ, ಓ ನಲ್ಲೆ ಚೈತ್ರದಾಗಮನದಲಿ
ನಳನಳಿಸಿ ನಲಿವ ಬನಮಾಲೆಯಂತೆ!
ನೀನೆನಗೆ ಚೈತನ್ಯದಾತೆ! ನೀನೆನಗೆ
ಜೀವರಸವಾಹಿನಿ! ಬಾಳ ಮರುಭೂಮಿಯಲಿ
ನೀನೆನಗೆ ಮರುವನ! ರುದ್ರಾಂಬೆ! ರುದ್ರಾಂಬೆ!

(ರುದ್ರಾಂಬೆ ಹೋದೆಡೆಗೇ ನೋಡುತ್ತಾ ಕಣ್ಣೊರಸಿಕೊಳ್ಳತ್ತಾನೆ.)

[ಪರದೆ ಬೀಳುವುದು]