[ಬಿದನೂರಿನಲ್ಲಿ ಒಂದು ಅನ್ನಸತ್ರದ ಮೂಲೆಯ ಕೋಣೆ. ಅದರ ಹೊರಭಾಗದಲ್ಲಿ ರೈತನೊಬ್ಬನು ಕುಳಿತಿರುವನು. ಅಲ್ಲಿಗೆ ಕೆಂಚಣ್ಣ ಬರುವನು.]

ಕೆಂಚಣ್ಣ – ಓ ಹೋ ಹೋ ಏನಯ್ಯಾ, ರಂಗಣ್ಣ? ಬಹಳ ಅಪರೂಪ ದರ್ಶನ!

ರೈತ – ಬನ್ನಿ ಕೆಂಚಣ್ಣನವರೆ, ಕೂತುಕೊಳ್ಳಿ. ( ಕೆಂಚಣ್ಣನು ಕೂತುಕೊಳ್ಳುತ್ತಾನೆ.) ನಾನೋ ಅಪರೂಪ? ನೀವೋ?

ಕೆಂಚಣ್ಣ – ನಿನಗೆ ನಾನು; ನನಗೆ ನೀನು.

ರೈತ – ನೀವು ರಾಜಾಸ್ಥಾನದಲ್ಲಿ ನೌಕರರಾಗಿಬಿಟ್ಟಿರಿ. ನಮ್ಮಂಥವರು ನಿಮ್ಮ ಕಣ್ಣಿಗೆ ಬೀಳುತ್ತೇವೆಯೆ?

ಕೆಂಚಣ್ಣ – ಒಳ್ಳೆಯ ನೌಕರಿಯಪ್ಪಾ! ಇರುಳೆಲ್ಲ ನಿದ್ದೆಯಿಲ್ಲದೆ ಕಾವಲು ಕಾಯುವುದು! ಅದೂ ಒಂದು ನೌಕರಿಯೆ! ಗ್ರಹಚಾರ!

ರೈತ – ಹಾಗೆಂದರೇನು ಸ್ವಾಮಿ? ಅರಮನೆ ಬಾಗಿಲು ಕಾವಲು ಅದೃಷ್ಟವಿಲ್ಲದೆ ಸಿಕ್ಕುತ್ತದೆಯೆ?

ಕೆಂಚಣ್ಣ – ಏನದೃಷ್ಟವೊ ಶಿವನೇ ಬಲ್ಲ!

ರೈತ – ಯಾಕೆ?

ಕೆಂಚಣ್ಣ – ಯಾಕೆಂದು ಹೇಳಲಿ ಹೇಳು, ರಂಗಣ್ಣ! ನನ್ನ ಗ್ರಹಚಾರ! ಹೇಳಬಾರದು; ಹೇಳದಿರುವುದಕ್ಕೆ ಅಗುವುದಿಲ್ಲ . ಉಭಯ ಸಂಕಟ.

ರೈತ – ನಿಮಗೇನು ಸಂಕಟ, ಸ್ವಾಮಿ? ನಮ್ಮಂತೆ ಗೆಯ್ಯಬೇಕೆ? ಉಳಬೇಕೆ? ಬಿತ್ತಬೇಕೆ? ತಲುಬು ಬರುತ್ತೆ; ಸಾಮಾನು ಸಿಗುತ್ತೆ! ನಮ್ಮಂತೆಯೋ ನಿಮ್ಮ ಜಲ್ಮ? ಮೂರು ಹೊತ್ತೂ ಕೊರತೆ! ಈಗ ನೋಡಿ, ನಮ್ಮ ಮನೆಯಲ್ಲಿ ಅವಳಿಗೆ ಮೈಮೇಲೆ ಬರುತ್ತೆ. ಹುಡುಗರಿಗೆಲ್ಲ ಏನೋ ರೇಜಿಗೆ. ನನಗೂ ಸುಖವೇ ಇಲ್ಲ.

ಕೆಂಚಣ್ಣ – ಚೆನ್ನಾಗಿದ್ದೀಯಲ್ಲವಯ್ಯಾ!

ರೈತ – ಮೇಲೆ ಮೇಲೆ ನೋಡಲು ಹಾಗೆ ಕಾಣುತ್ತೇನೆ. ಏನೋ ಕಾಟ ನನಗೆ ಒಳಗೊಳಗೇ! ನಮ್ಮದೊಂದು ಪಂಜ್ರೊಳ್ಳಿದೆವ್ವದಿಂದ ನನಗಂತೂ ಉಳಿಗಾಲವಿಲ್ಲ. ನಮ್ಮ ಮನೆ ದನಕರುಗಳಿಗೆ ಕಾಟ ಕೊಡುತ್ತೆ. ಅದಕ್ಕೆ ಏನಾದರೂ ವಿಭೂತಿ ತಂದು ಕಟ್ಟಿದರೆ ಅವಳಿಗೆ ಹಿಡಿಯುತ್ತೆ. ಅವಳನ್ನು ಬಿಟ್ಟಿತು, ಸರಿ, ಮಕ್ಕಳಿಗೆ ! ಬಿಟ್ಟಿತು, ನನಗೆ! ಅಂತೂ ಸುಖವಿಲ್ಲ. ಅದಕ್ಕೆ ಈ ಸನ್ನೇಸಿಗಳ ಹತ್ತಿರ ಏನಾದರೂ ಇಭೂತಿ ಇಸಕೊಂಡು ಹೋಗೋಣ ಅಂತ ಬಂದೆ. ಬಹಳ ದೊಡ್ಡ ಮಹಾತ್ಮರಂತೆ! ಅವರ ಹೆಸರೇನು?

ಕೆಂಚಣ್ಣ – ತೃಣಾನಂದ ಪರಮಹಂಸರು!

ರೈತ – ಹೌದು, ಹೌದು, ಮರೆತಿದ್ದೆ. ಅಂಥಾ ದೊಡ್ಡ ಹೆಸರು ನನ್ನ ಈ ಹಾಳು ಮೆದುಳಿಗೆ ಹಿಡಿಯುವುದೇ ಇಲ್ಲ. – ಅವರು ದಿನಕ್ಕೆ ಒಂದೇ ಒಂದು ಹುಲ್ಲು ತಿನ್ನುತ್ತಾರಂತೆ, ಹೌದೇ?

ಕೆಂಚಣ್ಣ – ಕೆಲವು ದಿನ ಅದನ್ನೂ ತಿನ್ನುವುದಿಲ್ಲವಂತೆ. ಆದರೂ ನೋಡು ಹೇಗಿದ್ದಾರೆ, ಜಟ್ಟಿಗಳಂತೆ!

ರೈತ – ಅದು ಹೇಗೆ ಸ್ವಾಮಿ? ನಾವಿಷ್ಟು ತಿಂದರೂ ನಮ್ಮದು ಹಂಚಿಕಡ್ಡಿಯ ಬಾಳು!

ಕೆಂಚಣ್ಣ – ಅದೆಲ್ಲ ಯೋಗಶಕ್ತಿ ಕಾಣಯ್ಯ! ಅರಮನೆಯವರು ಕೂಡ ಇಲ್ಲಿಗೆ ಬರುತ್ತಾರೆ! ದೊಡ್ಡ ಸನ್ಯಾಸಿಗಳು!

ರೈತ – ಈಗ ನೀವೇಕೆ ಬಂದಿದ್ದು, ಇಲ್ಲಿಗೆ?

ಕೆಂಚಣ್ಣ – ನಾನು ಹೇಳಲಿಲ್ಲವೆ ಮೊದಲೇ, ಹೇಳಬಾರದು ಎಂದು?

ರೈತ – ಅಷ್ಟೇನು ಗುಟ್ಟು, ಸ್ವಾಮಿ?

ಕೆಂಚಣ್ಣ – ಬಹಳ ದೊಡ್ಡ ಗುಟ್ಟು! ಹೇಳಿದರೆ ನನ್ನ ತಲೆ ಹಾರಿಹೋಗುತ್ತದೆ!

ರೈತ – ಅಯ್ಯೊ, ಹಾಗಾದರೆ ನಮಗೇಕಪ್ಪಾ ಅದು? – ಹೋಗಲಿ ಎಲೆಯಡಿಕೆ ಹಾಕಿಕೊಳ್ಳಿ
(ಎಲೆಯಡಿಕೆಚೀಲ ಕೊಡುವನು. ಕೆಂಚಣ್ಣ ಹಾಕಿಕೊಳ್ಳುತ್ತಾ)

ಕೆಂಚಣ್ಣ – ಏನೋ ಕೇಳಿದೆಯಲ್ಲಾ ಹೇಳುತ್ತೇನೆ. ಯಾರಿಗೂ ಹೇಳಬೇಡ.

ರೈತ – ತಲೆ ಹೋಗುವ ಕೆಲಸವಾದರೆ ಬೇಡಪ್ಪಾ!

ಕೆಂಚಣ್ಣ – ಚಿಂತೆಯಿಲ್ಲ, ಹೇಳುತ್ತೇನೆ! ಆದರೆ ಗುಟ್ಟಾಗಿಟ್ಟಿರಬೇಕು. – ನಮ್ಮ ಮಹಾಸ್ವಾಮಿ ತೀರಿಕೊಂಡರಷ್ಟೇ?

ರೈತ – ಅಯ್ಯೋ ಎಂಥಾ ಮಹಾನುಭಾವರು! ಅವರು ದೊರೆತನದಲ್ಲಿ ಕ್ಷಾಮ ಕೂಡ ಕಾಲಿಟ್ಟಿರಲಿಲ್ಲ! ನಾವೆಲ್ಲ ಅವರು ಸಾಯುವುದೇ ಇಲ್ಲ ಎಂದು ಗೊತ್ತುಮಾಡಿದೆವು! ಅದು ಹೇಗೆ ಸತ್ತರು, ಸ್ವಾಮಿ? ಸಿಡಿಲು ಬಡಿದ ಹಾಗೆ!

ಕೆಂಚಣ್ಣ – ಸಾವಿಗೇನಪ್ಪಾ! ಹೇಳಿ ಕೇಳಿ ಬರುತ್ತದೇನು?

ರೈತ – ಹಾಗಲ್ಲ ಸ್ವಾಮಿ. ಅಷ್ಟು ಗಟ್ಟಿಮುಟ್ಟಾಗಿದ್ದವರು ಹಾಗೆ ಸಾಯುವದುದಂದರೇನು?

ಕೆಂಚಣ್ಣ – ನಮಗೆಲ್ಲ ಅದೇ ಸೋಜಿಗ! ಹೋಗಲಿ ನನ್ನ ಕತೆ ಬೇಡವೇನು, ನಿನಗೆ?

ರೈತ – ಹೇಳಿ ಸ್ವಾಮಿ. ಸನ್ನೇಸಿಗಳು ಬರುವುದು ಇನ್ನೆಷ್ಟು ಹೊತ್ತೋ?

ಕೆಂಚಣ್ಣ – ಯಾರಿಗೂ ಹೇಳಬೇಡ. ಬಹಳ ದೊಡ್ಡ ಗುಟ್ಟು.

ರೈತ – ಹೇಳಿ, ಸ್ವಾಮಿ. ನಾನು ಯಾರಿಗೆ ಯಾತಕ್ಕೆ ಹೇಳಲಿ? ಅದರಲ್ಲಿಯೂ ನನ್ನ ತಲೆಯಲ್ಲಿ ಇದಕ್ಕೆಲ್ಲ ಹೆಚ್ಚಾಗಿ ಜಾಗವೇ ಇಲ್ಲ. ಮನೆಗೆ ಹೋಗುವುದೊರಳಗೆ ಎಲ್ಲಾ ಮರೆತೇ ಹೋಗಿರುತ್ತದೆ.

ಕೆಂಚಣ್ಣ – ನಾನು ಮೊನ್ನೆ ಕಾವಲು ಕಾಯುತ್ತಿದ್ದಾಗ, ರಾತ್ರಿ ನಮ್ಮ ಬಾಳದೇಹೋದ ಮಹಾ ಸ್ವಾಮಿಯವರನ್ನು ಕಂಡೆ?

ರೈತ(ಹೆದರಿ) ಏನೇನು?

ಕೆಂಚಣ್ಣ – ಗಾಬರಿ ಬೇಡ. ನಿಜವಾಗಿಯೂ ಕಂಡೆ. ಅದಕ್ಕೇ ಇಲ್ಲಿಗೆ ಬಂದಿದ್ದು ನಾನು, ಏನಾದರೂ ವಿಭೂತಿ ತೆಗೆದುಕೊಂಡು ಹೋಗೋಣ ಎಂದು.

ರೈತ – ಓಹೋ ಸನ್ನೇಸಿಗಳು ಬಂದರ!

[ಸನ್ನಾಸಿ ಬರುವನು. ದಾಂಡಿಗ ದೇಹ. ನೋಡಿದರೆ ಹುಲ್ಲು ತಿಂದು ಜೀವಿಸುವಂತೆ ಕಾಣುವುದಿಲ್ಲ. ಕೆಂಚಣ್ಣನೂ ರೈತನೂ ಎದ್ದು ದಂಡಪ್ರಣಾಮಮಾಡುವರು. ಸನ್ಯಾಸಿ ಶಿವ! ಶಿವ! ಎಂದು ಆಶೀರ್ವದಿಸಿ, ಕುಶಾಸನದ ಮೇಲೆ ಕೂರುತ್ತಾನೆ.]

ಸನ್ಯಾಸಿ(ರೈತನನ್ನು ನೋಡಿ) ಶಿವ, ನಿನಗೇನು ಬೇಕು?

ರೈತ – ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಸ್ವಸ್ಥವಿಲ್ಲ. ನನಗೂ ಏನೋ ರೇಜಿಗೆ, ದೇವರೂ!

ಸನ್ಯಾಸಿ – ಎಲ್ಲಾ ತಿಳಿಯಿತು. (ಕರೆಯುವನು) ಬ್ರಹ್ಮಚಾರಿ! ಬ್ರಹ್ಮಚಾರಿ! (ಬ್ರಹ್ಮಚಾರಿ ಬರುತ್ತಾನೆ.) ಮಂತ್ರದರ್ಪಣ! (ಬ್ರಹ್ಮಚಾರಿ ಹೋಗುತ್ತಾನೆ.) ಶಿವ! ಶಿವ! ಶಿವ! ಶಿವ! . . . . (ಬ್ರಹ್ಮಚಾರಿ ದರ್ಪಣವನ್ನು ತಂದುಕೊಟ್ಟು ಹೋಗುವನು.) ಶಿವ, ಇಲ್ಲಿ ಬಾ. (ರೈತನು ಭಯದಿಂದ ಹತ್ತಿರ ಬರುವನು) ತೆಗೆದುಕೋ. (ರೈತನು ಹಿಂದೆ ಮುಂದೆ ನೋಡಲು) ತೆಗೆದುಕೋ? (ಕನ್ನಡಿಯನ್ನು ನೀಡುವನು.)

ಕೆಂಚಣ್ಣ – ಹೆದರಬೇಡ! ತೆಗೆದುಕೋ, ರಂಗಣ್ಣ! (ರೈತ ತೆಗೆದುಕೊಳ್ಳುವನು.)

ಸನ್ಯಾಸಿ – ನೋಡು, ಆ ಕನ್ನಡಿಯಲ್ಲಿ! (ರೈತ ನೋಡುವನು.) ದೈತ್ಯನ ಮುಖ ಕಾಣುವುದಿಲ್ಲವೇ?

ರೈತ – ಇಲ್ಲ, ದೇವರೂ, ನನ್ನ ಮುಖ ಮಾತ್ರ ಕಾಣುತ್ತಿದೆ.

ಸನ್ಯಾಸಿ – ಅದೇ ದೈತ್ಯನ ಮುಖ ಕಾಣಯ್ಯಾ!

ರೈತ(ಹೆದರಿ) ಆಮ್! ಆಮ್! ಆಮ್! (ಎಂದು ಮುಖವೆತ್ತುವನು.)

ಸನ್ಯಾಸಿ – ದೈತ್ಯನಿಗೆ ನಿನ್ನ ಮುಖದಂತೆ ಕಾಣಿಸಿಕೊಳ್ಳುವುದೊಂದು ಕಷ್ಟವೇ?

ಕೆಂಚಣ್ಣ – ಏನೂ ಕಷ್ಟವಿಲ್ಲ, ದೇವರೂ.

ಸನ್ಯಾಸಿ – ಇತ್ತಕೊಡು ಕನ್ನಡಿಯನ್ನು. (ರೈತನು ಕೊಡುವನು) ಆಗಲಿ, ಇವತ್ತು ಹೋಗು. ನಾಳೆ ಒಂದು ಖಂಡುಗ ಬತ್ತ, ದಕ್ಷಿಣೆ ತೆಗೆದುಕೊಂಡು ಬಾ.

ರೈತ(ಸ್ವಗತ) ಹುಲ್ಲು ತಿಂದು ಜೀವಿಸುವವರಿಗೆ ಖಂಡಗ ಬತ್ತವೇಕಪ್ಪಾ? (ಬಹಿರಂಗವಾಗಿ) ಆಗಲಿ, ದೇವರೂ. ಅಪ್ಪಣೆಕೊಟ್ಟರೆ ಹೋಗುತ್ತೇನೆ. (ಸನ್ಯಾಸಿ ತಲೆಯಲ್ಲಾಡಿಸಿ ಸಮ್ಮತಿಸಲು ಕೆಂಚಣ್ಣನಿಗೆ) ಕೆಂಚಣ್ಣ, ಬರುತ್ತೇನೆ.

ಕೆಂಚಣ್ಣ – ಒಳ್ಳೆಯದಯ್ಯ, ಹೋಗಿ ಬಾ. (ರೈತ ಹೋಗುತ್ತಾನೆ.)

ಸನ್ಯಾಸಿ – ನಿನ್ನದೇನು, ಕೆಂಚಣ್ಣ?

ಕೆಂಚಣ್ಣ – ಸ್ವಲ್ಪ ವಿಭೂತಿ ಬೇಕಿತ್ತು.

ಸನ್ಯಾಸಿ – ಏತಕ್ಕೆ?

ಕೆಂಚಣ್ಣ – ಗುಟ್ಟಿನ ವಿಷಯ, ದೇವರೂ. ಅದರಲ್ಲಿಯೂ ಅರಮನೆಯ ಸಹವಾಸ, ಕೆಟ್ಟದ್ದು. ನಿಮ್ಮ ದಿವ್ಯದೃಷ್ಟಿಗೆ ಗೊತ್ತಾಗದೆ?

ಸನ್ಯಾಸಿ – ಗೊತ್ತಾಗಿದೆ? ನೀನು ಕಂಡಿದ್ದು ನಿಜವಾಗಿಯೂ ಮಹಾರಾಜರ ಪ್ರೇತವೆ?

ಕೆಂಚಣ್ಣ – ಅಯ್ಯೋ, ಸ್ವಾಮಿ, ಗುಟ್ಟಾಗಿಟ್ಟಿರಬೇಕು.

ಸನ್ಯಾಸಿ – ಅದನ್ನೆಲ್ಲ ಕಟ್ಟಿಕೊಂಡು ನಮಗೆ ಆಗಬೇಕಾದುದೇನಯ್ಯಾ, ಸನ್ಯಾಸಿಗಳಿಗೆ? ಆದ ಅದರಲ್ಲಿಯೂ ಇಲ್ಲಿ ಇನ್ನಾರೂ ಇಲ್ಲ. ನಾನು, ನೀನು, ಬ್ರಹ್ಮಚಾರಿ.

ಕೆಂಚಣ್ಣ (ಮೆಲ್ಲಗೆಹೌದು, ಶಿವ! ಸಾಕ್ಷಾತ್ ಮಹಾರಾಜರೆ ಕಾಣಿಸಿಕೊಂಡರು. ಮೊದಲೆನೆಯ ದಿನ ನಾನೊಬ್ಬನೆ ಇದ್ದೆ. ನಿನ್ನೆ ನಾನೂ ಹೊನ್ನಯ್ಯನವರೂ ಇಬ್ಬರೂ ಇದ್ದೆವು. ನಮ್ಮ ಹತ್ತಿರ ಮಾತಾಡಲೇ ಇಲ್ಲ. ಇವತ್ತು ರಾಜಕುಮಾರರೂ ಬರುತ್ತಾರೆ. ಆದರೆ ಗುಟ್ಟಾಗಿದೆ. ಯಾರಿಗೂ ಗೊತ್ತಿಲ್ಲ, ಈ ಸುದ್ದಿ .(ಸನ್ಯಾಸಿ ಮುಗುಳ್ನಗುವನು.) ಅದಕ್ಕೇ ನನಗೆ ಸ್ವಲ್ಪ ವಿಭೂತಿ ಬೇಕು, ಸ್ವಾಮಿ.

ಸನ್ಯಾಸಿ(ಕೂಗಿ) ಬ್ರಹ್ಮಚಾರಿ! ಬ್ರಹ್ಮಚಾರಿ!

ಬ್ರಹ್ಮಚಾರಿ(ಒಳಗಿನಿಂದಅಜ್ಞೆ!

ಸನ್ಯಾಸಿ – ಸ್ವಲ್ಪ ವಿಭೂತಿ ತೆಗೆದುಕೊಂಡು ಬಾ.

ಬ್ರಹ್ಮಚಾರಿ – ಬಂದೇ! (ಎಂದು ತಂದುಕೊಟ್ಟು ಹೋಗುವನು.)

ಸನ್ಯಾಸಿ – ಭಯಬೇಡ, ಕೆಂಚಣ್ಣ. ಇದನ್ನು ತೆಗೆದುಕೋ, (ವಿಭೂತಿ ಕೊಡುವನು.) ನಿನಗೆ ಯಾವ ಕಾಟವೂ ಮುಟ್ಟುವುದಿಲ್ಲ.

ಕೆಂಚಣ್ಣ – ದಯೆಯಿರಲಿ, ದೇವರೂ, ಬರುತ್ತೇನೆ.(ಸಾಷ್ಟಾಂಗ ನಮಸ್ಕಾರ ಮಾಡಿ ವಿಭೂತಿ ಕಣ್ಣಿಗೆ ಒತ್ತಿಕೊಳ್ಳುವನು.)

ಸನ್ಯಾಸಿ – ಶಿವ! ಶಿವ! (ಆಶೀರ್ವದಿಸುವನು. ಕೆಂಚಣ್ಣ ನಿಷ್ಕ್ರಮಿಸುವನು.) ರಂಗದಾಸ! ರಂಗದಾಸ್! (ಬ್ರಹ್ಮಚಾರಿ ಬರುವನು) ನೀನು ಇಂದೇ ಶ್ರೀರಂಗಪಟ್ಟಣಕ್ಕೆ ಹೊರಡಬೇಕು. ಸಿದ್ಧನಾಗು.ಒಂದು ರಾಜಕಾರ್ಯ ಒದಗಿದೆ. ಹೈದರಾಲಿಯವರು ಇಲ್ಲಿಗೆ ದಂಡೆತ್ತಿ ಬರಲು ಸುಸಮಯ ದೊರಕಿದೆ. ನಾನೊಂದು ಪತ್ರ ಬರೆದುಕೊಡುತ್ತೇನೆ. ನಿನ್ನ ಕುದುರೆಯೆಲ್ಲಿ?

ಬ್ರಹ್ಮಚಾರಿ – ಆ ಸೆಟ್ಟಿಯ ಮನೆಯಲ್ಲಿದೆ.

ಸನ್ಯಾಸಿ – ಹೋಗಿ ಅದನ್ನು ಪ್ರಯಾಣಕ್ಕೆ ಸಜ್ಜುಗೊಳಿಸಿ ಬಾ ಈ ರಾತ್ರಿಯೆ ಹೊರಡಬೇಕು. ಬಹುಶಃ ನೀನು ಶ್ರೀರಂಗಪಟ್ಟಣಕ್ಕೆ ಹೋಗುವ ಸಂದರ್ಭ ದೊರಕಲಾರದು. ಹೈದರಾಲಿಯವರು ಜೈತ್ರಯಾತ್ರೆಯಲ್ಲಿದ್ದರೆ, ದಾರಿಯಲ್ಲಿಯೇ ಎಲ್ಲಿಯಾದರೂ ಸಿಕ್ಕಬಹುದು.

ಬ್ರಹ್ಮಚಾರಿ – ರಾಮರಾಯರೆ, ದೊರೆ ಕೊಲೆಯಾಗಿರುವನೇ?

ಸನ್ಯಾಸಿ – ಹಾಗಲ್ಲದೆ ಮತ್ತೇನು? ನೀನು ನಡೆ. – ತಿಮ್ಮಜಟ್ಟಿ ಬರುತ್ತಿದ್ದಾನೆ.
[ತಿಮ್ಮಜಟ್ಟಿ ಪ್ರವೇಶಿಸಿ ಸಾಷ್ಟಾಂಗ ಪ್ರಣಾಮಾಡಿ ಸನ್ಯಾಸಿಯ ಸನ್ನೆಯಂತೆ ಕೂತುಕೊಳ್ಳುವನು.]

ತಿಮ್ಮಜಟ್ಟಿ – ಗುರುಗಳೆ, ನಿನ್ನೆ ಚೆನ್ನಾಗಿ ನಿದ್ದೆಹತ್ತಿತು.

ಸನ್ಯಾಸಿ – ನಾನು ಹೇಳಿದ್ದೆನಲ್ಲವೆ?

ತಿಮ್ಮಜಟ್ಟಿ – ಆದರೆ ನಡುವೆ ಯಾರೋ ಬಂದು ಎದೆಯಮೇಲೆ ಕೂತುಕೊಂಡು ಕತ್ತು ಹಿಸುಗಿದಂತಾಯ್ತು! ನನಗೇಕೋ ಭಯವಾಗುತ್ತಿದೆ. ಪ್ರತಿ ರಾತ್ರಿಯೂ ಹೀಗೆಯೇ ಏನಾದರೊಂದು ನಡೆಯುತ್ತಲೇ ಇದೆ. ತಾವು ಏನಾದರೂ ಒಂದು ಮಂತ್ರಕವಚ ಕೊಟ್ಟರೆ ಬದುಕಿಕೊಳ್ಳುತ್ತೇನೆ, ತಮ್ಮ ಹೆಸರು ಹೇಳಿಕೊಂಡು.

ಸನ್ಯಾಸಿ – ಅದಕ್ಕೇನು? ಕೊಡುತ್ತೇನಯ್ಯ. ನಾವಿರುವುದೇಕೆ? ಪರೋಪಾಕಾರ ಮಾಡಲಲ್ಲವೆ? ಆದರೆ ರೋಗದ ಗುಟ್ಟು ತಿಳಿಯದೆ ಮದ್ದು ಕೊಡುವುದು ತಪ್ಪು. ನಾಳೆ ಬಾ. ನಾನು ಕೇಳುವ ಪ್ರಶ್ನೆಗಳಿಗೆ ಮುಚ್ಚು ಮರೆಯಿಲ್ಲದೆ ಉತ್ತರ ಹೇಳಬೇಕು. ಏನೂ ಸಂಕೋಚ ಬೇಡ ನಿನಗೆ. ಸನ್ಯಾಸಿಯ ಹತ್ತಿರ ಗುಟ್ಟೇನು? ವೈದ್ಯನೊಡನೆಯೂ ಗುರುವಿನೊಡನೆಯೂ ಗುಟ್ಟು ಮಾಡಿದರೆ ಕ್ಷೇಮಕರವಲ್ಲ.

ತಿಮ್ಮಜಟ್ಟಿ – ಆಗಲಿ, ದೇವರೂ. ನೀವು ನನಗೆ ವೈದ್ಯರೂ ಹೌದು, ಗುರುಗಳೂ ಹೌದು. ನಿಮ್ಮೊಡನೆ ನಾನು ಗುಟ್ಟು ಮಾಡುವುದಂದರೇನು? ಅಂತೂ ಹೇಗಾದರೂ ಮಾಡಿ ನನಗೆ ಹಿಡಿದಿರುವ ಶನಿ ಬಿಡಿಸಿದರೆ ಅಷ್ಟೇ ಸಾಕು.

ಸನ್ಯಾಸಿ – ನಿನಗೊಬ್ಬನಿಗೇ ಅಲ್ಲ; ಎಲ್ಲರಿಗೂ ಶನಿ ಹಿಡಿದಿದೆ ಈ ಊರಿನಲ್ಲಿ. ಈಗತಾನೆ ಆ ಕೆಂಚಣ್ಣನೂ ಬಂದಿದ್ದ. ವಿಭೂತಿ ಕೊಟ್ಟು ಕಳಿಸಿದೆ.

ತಿಮ್ಮಜಟ್ಟಿ – ಅವನಿಗೆ ಏನಾಗಿದೆಯಂತೆ?

ಸನ್ಯಾಸಿ – ಅವನಿಗೂ ಶನಿಯ ಕಾಟ. ನಿನ್ನೆ ರಾತ್ರಿ ತೀರಿಹೋದ ಮಹಾರಾಜರು ಕಾಣಿಸಿಕೊಂಡರಂತೆ.

ತಿಮ್ಮಜಟ್ಟಿ (ಬೆಚ್ಚಿಬಿದ್ದು) ಅ! ಎಲ್ಲಿ? ಏನು? ಅಯ್ಯೋ –

ಸನ್ಯಾಸಿ – ನನಗದೆಲ್ಲ ತಿಳಿಯದು. ಇವತ್ತು ರಾತ್ರಿ ರಾಜಕುಮಾರನೂ ಕೂಡ ಹೋಗುತ್ತಾನಂತೆ ಅದನ್ನು ಪರೀಕ್ಷೀಸಲು.

ತಿಮ್ಮಜಟ್ಟಿ (ಕೈಮುಗಿದುಕೊಂಡು) ನಾನು ಕೆಟ್ಟೆ, ಮಹಾಸ್ವಾಮಿ. ನನ್ನನ್ನು ಕಾಪಾಡಬೇಕು!

ಸನ್ಯಾಸಿ – ಶಿವನಿದ್ದಾನೆ!

ತಿಮ್ಮಜಟ್ಟಿ – ನನಗೆ ನೀವೇ ಶಿವ! ಕಾಪಾಡಬೇಕು!

ಸನ್ಯಾಸಿ – ಮನೆಗೆ ಹೋಗಿ ಶಿವಪೂಜೆ ಮಾಡು. ಇವತ್ತು ಎಲ್ಲಿಗೂ
ಹೋಗಬೇಡ. ನಾಳೆ ಇಲ್ಲಿಗೆ ಬಾ.

ತಿಮ್ಮಜಟ್ಟಿ – ಒಪ್ಪಣೆ! (ದಂಡಪ್ರಣಾಮ ಮಾಡಿ ಹೋಗುವನು.)

ಸನ್ಯಾಸಿ – ಇದೀಗ ಸುಸಮಯ ಹೈದರಾಲಿಯವರಿಗೆ! ಈಗಳೆ ಬರೆಯುತ್ತೇನೆ.

(ಹೋಗುವನು)

[ಪರದೆ ಬೀಳುವುದು