[ಅರಮನೆಯ ಹೆಬ್ಬಾಗಿಲ ಬಳಿ ಕೆಂಚಣ್ಣನು ಕಾವಲು ತಿರುಗುತ್ತಿದ್ದಾನೆ. ರಾತ್ರಿಯ ಬೆಳ್ದಿಂಗಳು ಹಾಲು ಚೆಲ್ಲಿದಂತಿದೆ. ಕೆಂಚಣ್ಣನು ಭಯಗೊಂಡವನಂತೆ , ಅತ್ತ ಇತ್ತ ಯಾರನ್ನೊ ನೋಡುವವನಂತೆ ಚರಿಸುತ್ತಿದ್ದಾನೆ.]

ಕೆಂಚಣ್ಣ – ಏನು ಸದ್ದು! ಅವರೇಕೆ ಇನ್ನೂ ಬರಲಿಲ್ಲವೋ ನಾನು ಬೇರೆ ಕಾಣೆ. ಎಲ್ಲ ವೇದಾಂತಿಗಳು! ನಾನು ಹೇಳಿದರೆ ನಂಬುವುದಿಲ್ಲ; ಬಂದು ನೋಡಿ ಎಂದರೆ ಬರುವುದಿಲ್ಲ. (ಬೆಚ್ಚಿನೋಡಿ) ಅದೇನದು? (ನಡುಗುವನು) ಇವತ್ತು ನಾನೇನೋ ಉಳಿಯುವುದಿಲ್ಲ! ಅಯ್ಯೋ ದೇವರೇ, ತಿಂಗಳು ಬೆಳಕಿನಲ್ಲಿ ಹೇಗೆ ಬೆಳ್ಳಗೆ ಕಾಣುತ್ತಿದೆ! ನಿನ್ನೆಯ ರೂಪವಲ್ಲ? – ಅಯ್ಯೋ ಆ ಸನ್ನ್ಯಾಸಿಯ ಹತ್ತಿರ ಹೋಗಿ ವಿಭೂತಿ ತರುವುದನ್ನೂ ಮರೆತುಬಿಟ್ಟೆನಲ್ಲಾ! ಶಿವನೇ, ಇವತ್ತು ಹೇಗಾದರೂ ಕಾಪಾಡು! ನಾಳೆ ವಿಭೂತಿ ತರುತ್ತೇನೆ; ತಂದೇ ತರುತ್ತೇನೆ! – ಅಯ್ಯೋ ಇದೇನು, ನೆಟ್ಟಗೆ ನನ್ನ ಕಡೆಗೇ ಬರುತ್ತಿದೆ! (ಕೈಮುಗಿದುಕೊಂಡು) ಸ್ವಾಮಿ, ಭೂತರಾಯ, ನನ್ನ ತಪ್ಪು ಏನಿದ್ದರೂ ಕ್ಷಮಿಸಿಬಿಡು. ನಿನಗೆ ಏನು ಬೇಕಾದರೂ ಕಾಣಿಕೆ ಕೋಡುತ್ತೇನೆ.
(ಕಣ್ಮುಚ್ಚಿ ಮೊಣಕಾಲೂರುವನು)
[
ಹೊನ್ನಯ್ಯ ಪ್ರವೇಶಿಸಿ ನಸುನಕ್ಕು ಮಾತಾಡುತ್ತಾನೆ. ಆತನು ತರುಣ.]

ಹೊನ್ನಯ್ಯ – ಇದೇನೊ ಇದು, ಕೆಂಚಣ್ಣ?

ಕೆಂಚಣ್ಣ(ಕಣ್ತೆರೆದು) ಅಯ್ಯೋ ನೀವೇನು? (ಎದ್ದು ನಿಂತು) ನಾನು ಅದೇ ಬಂತೆಂದು ಸತ್ತೇಹೋಗಿದ್ದೆ.

ಹೊನ್ನಯ್ಯ – ಅಯ್ಯೋ ಮಂಕೂ, ನೀನು ನಿನ್ನೆ ಕಂಡಿದ್ದೂ ನನ್ನಂತ ಭೂತವೆಂದೇ ತೋರುತ್ತದೆ. – ಸರಿಯಾಗಿ ವಿಮರ್ಶೆಮಾಡುವುದಿಲ್ಲ ಏನೂ ಇಲ್ಲ. ಸುಮ್ಮಸುಮ್ಮನೆ ಹೆದರಿಕೊಂಡು ಸಾಯುವುದು! ಥೂ! ನಿನ್ನ ಗಂಡಸುತನಕ್ಕೆ ಬೆಂಕಿಹಾಕಲಿ!

ಕೆಂಚಣ್ಣ – ಹೊನ್ನಯ್ಯಾ, ನೀವು ಸರಿಯಾಗಿ ನೋಡದೆ ಹೀಗೆಲ್ಲ ಹೇಳುವುದು ಚೆನ್ನಾಗಿಲ್ಲ. ನನಗೇನು ಕುರುಡೇ? ಮಂಕೇ? ನಿನ್ನೆ ಸರಿಯಾಗಿ ನೋಡಿದ್ದೇನೆ.

ಹೊನ್ನಯ್ಯ – ನೋಡಿದ ಕೂಡಲೆ ಕಣ್ಣು ಮುಚ್ಚಿದೆಯಷ್ಟೇ?

ಕೆಂಚಣ್ಣ – ಇವತ್ತು ಕಣ್ಣು ಮುಚ್ಚಿದೆ ಎಂದರೆ ನಿನ್ನೆಯೂ ಕಣ್ಣು ಮುಚ್ಚಲು ನಾನೇನು ಹೆಂಗಸೆ?

ಹೊನ್ನಯ್ಯ – ನಿಮ್ಮಂತಹ ಗಂಡಸರಿಗಿಂತಲೂ ಎಷ್ಟೋ ಜನ ಹೆಂಗಸರೇ ಲೇಸಯ್ಯ.

ಕೆಂಚಣ್ಣ – ಸುಮ್ಮನೆ ನೀವೇ ಉಪನ್ಯಾಸ ಮಾಡಿದರೆ? ನಾನು ಹೇಳುವುದನ್ನೂ ಸ್ವಲ್ವ ಕಿವಿಗೆ  ಹಾಕಿಕೊಳ್ಳಿ. ನಿನ್ನೆ, ನೋಡಿ, ಓ ಆ ದಿಕ್ಕಿನಿಂದ ಬಂತು. ನಾನು ಯಾರೋ ಮನಿಷ್ಯರೆಂದೇ ಭಾವಿಸಿ ಪದ್ಧತಿಯಂತೆ “ಯಾರಲ್ಲಿ?” ಎಂದು ಕರೆದೆ. ಮಾತಾಡಲಿಲ್ಲ. ಮತ್ತೆ ಕರೆದೆ. ಮಾತಾಡದೆ ಸರ ಸರ ಸರ ಬಂದೇ ಬಂತು. ಏನು ಸ್ವಾಮಿ! ಬೆಳ್ದಿಂಗಳಲ್ಲಿ ಎತ್ತರವಾಗಿತ್ತು; ಬೆಳ್ಳಗಿತು! ಮತ್ತೆ ಯಾರೋ ದೊಡ್ಡಮನುಷ್ಯರಿರಬೇಕೆಂದು ಯೋಚಿಸಿ “ಯಾರು ಸ್ವಾಮಿ ಅದು?” ಎಂದು ಕೂಗಿದೆ. ಒಂದು ಸಾರಿ ನನ್ನ ಕಡೆ ಕಣ್ಣು ಹೊರಳಿಸಿ ನೋಡಿತು. ನನಗೆ ಎಲ್ಲ ಬರುವ ಹಾಗಾಯಿತು. ಆದರೂ ನನಗೆ ಭೂತ ಎಂದು ಗೊತ್ತಾಗಲೇ ಇಲ್ಲ. ಕಡೆಗೆ ನೋಡುತ್ತೇನೆ, ಏನು ನೋಡುವುದು! ಸಾಕ್ಷಾತ್ ನಮ್ಮ ತೀರಿಕೊಂಡ ಮಹಾರಾಜರು! ನನ್ನ ಮೈಮೇಲೆ ತಕಪಕ ತಕಪಕ ಕುದಿಯುವ ಬಿಸಿನೀರು ಚಲ್ಲಿದಂತಾಯ್ತು. ಕಣ್ಣು ಕತ್ತಲೆಗಟ್ಟಿಕೊಂಡು ಬಂತು. ಹಾಗೆ ಕೈ ಕಾಲು ಕಡಿದುಕೊಂಡು ಬಿದ್ದುಬಿಟ್ಟೆ!

ಹೊನ್ನಯ್ಯ – ಕೆಂಚಣ್ಣ, ನಿನಗೆ ಕಳ್ಳುಗಿಳ್ಳು ಕುಡಿಯುವ ಅಭ್ಯಾಸವಿಲ್ಲವೇನು? ನಿಜವಾಗಿ ಹೇಳು.

ಕೆಂಚಣ್ಣ(ಹೊನ್ನಯ್ಯನನ್ನು ದುರುದುರು ನೋಡಿ) ಏನು ಸ್ವಾಮಿ! ನೀವೇನೋ ದೊಡ್ಡ ಮನುಷ್ಯರು. ಆದರೆ ಈ ಮಾತು ಹೇಳುವುದು ಮರ್ಯಾದೆಯಲ್ಲ. ಕಳ್ಳು ಕುಡಿಯುವುದು ಬಿಟ್ಟು ಎಷ್ಟೋ ಜನ ಆಪ್ತ ಸ್ನೇಹಿತರನ್ನೇ ಕಳೆದುಕೊಂಡಿದ್ದೇನೆ!

ಹೊನ್ನಯ್ಯ – ಹೋಗಲಿ ಬಿಡು; ಇವತ್ತೇನಾದರೂ ಬಂತೇನು ಹೇಳು?

ಕೆಂಚಣ್ಣ – ಇಲ್ಲ; ಇನ್ನೂ ಬರಲಿಲ್ಲ.

ಹೊನ್ನಯ್ಯ – ಅದೇನು ನಾನು ಬರುತ್ತೇನೆಂದು ಬರಲಿಲ್ಲವೆ?

ಕೆಂಚಣ್ಣ(ಮುನಿಸಿನಿಂದ)  ಏನೋ ಸ್ವಾಮಿ! ಇರಬಹುದು!

ಹೊನ್ನಯ್ಯ – ಮುನಿದುಕೊಳ್ಳಬೇಡ, ಕೆಂಚಣ್ಣ. ಒಂದೊಂದು ಸಾರಿ ನಮ್ಮ ಭಯ, ನಮ್ಮ ಭ್ರಾಂತಿ ಇವುಗಳಿಂದ ಹೀಗೆಲ್ಲ ಅದ್ಭುತರೂಪಗಳು ಕಾಣುವುದುಂಟು. . .

ಕೆಂಚಣ್ಣ – ಅಯ್ಯೋ, ಅದು ಕಾಣಿಸಿಕೊಳ್ಳವುದಕ್ಕೆ ಮೊದಲು ನನಗೆ ನೀವು ಹೇಳಿದ್ದು ಯಾವುದೂ ಇರಲಿಲ್ಲ ಎಂದು ಆಣೆ ಇಟ್ಟು ಬೇಕಾದರೂ ಹೇಳುತ್ತೇನೆ.

ಹೊನ್ನಯ್ಯ – ನಿನಗೆ ಮಾತ್ರವೇ ಅಲ್ಲ. ಎಂಥೆಂಥವರಿಗೂ ಕಾಣುವುದುಂಟು. ವೇದಾಂತ ಓದಿದರೆ ನಿನಗೂ ತಿಳಿಯುವುದು ಇದೆಲ್ಲ.

ಕೆಂಚಣ್ಣ – ಏನೋ ಸ್ವಾಮಿ, ನಿಮ್ಮ ವೇದಾಂತದ ಕಣ್ಣಿಗೆ ನುಣುಚಿಕೊಂಡು ಇನ್ನೆಷ್ಟು ವೇದಾಂತಗಳಿವೆಯೋ ನಾನೇನು ಬಲ್ಲೆ! ಅಂತೂ ನೀವೇನು ಬೇಕಾದರೂ ಹೇಳಿ, ನಾನೇನೊ ಕಂಡಿದ್ದು ನಿಜ. ಇವತ್ತು ಇಲ್ಲಿ ನಿಮ್ಮನ್ನು ನೋಡುತ್ತಿರುವುದು ಭ್ರಾಂತಿಯಾಗಿರುವ ಪಕ್ಷದಲ್ಲೆ ನಿನ್ನೆ ಅದನ್ನು ಕಂಡಿದ್ದೂ ಭ್ರಾಂತಿಯೇ ಇರಬಹುದು.

ಹೊನ್ನಯ್ಯ – ಹಾಗಾದರಿವತ್ತೆಲ್ಲಿ ನಿನ್ನ ಭೂತ?

ಕೆಂಚಣ್ಣ – ಸ್ವಲ್ವ ತಾಳಿ, ಸ್ವಾಮಿ. ಕಾದು ನೋಡೋಣ. ಇನ್ನೇನು ಬರುವ ಹೊತ್ತಾಯಿತೆಂದು ತೋರುತ್ತದೆ. ನಿನ್ನೆಯೂ ಅದು ಕಾಣಿಸಿಕೊಂಡಾಗ ನೋಡಿ, ಓ ಆ ನಕ್ಷತ್ರ ಅಲ್ಲಿಯೇ ಇತ್ತು. ಇನ್ನೇನು ಬೆಳಗಾಗುವ ಹೊತ್ತೆಂದು ನಾನು. . .  ಅಲ್ಲಿ ನೋಡಿ! ಅಲ್ಲಿ ನೋಡಿ! ಅದೇ ಬರುತ್ತಿದೆ! ಅದೇ! ಅದೇ!

ಹೊನ್ನಯ್ಯ(ಚೆನ್ನಾಗಿ ಈಕ್ಷಿಸಿ)  ಕೆಂಚಣ್ಣ, ಶಿವಮಂತ್ರ ಜಪಿಸು. ಶಿವ! ಶಿವ!

ಕೆಂಚಣ್ಣ – ಶಿವ! ಶಿವ! ಶಿವ! ಶಿವ! ಶಿವ! . . .

ಹೊನ್ನಯ್ಯ – ಇತ್ತಕಡೆಗೇ ಬರುತ್ತಿದೆ!

ಕೆಂಚಣ್ಣ – ಹೌದು ಸ್ವಾಮಿ, ನಿನ್ನೆಯೂ ಹೀಗೆಯೇ ಮಾಡಿತ್ತು. ಶಿವ! ಶಿವ! ಶಿವ! . . .

ಹೊನ್ನಯ್ಯ – ಏನು ಭಯಂಕರವಾಗಿದೆ! – ಹೌದು, ಶಿವೈಕ್ಯರಾದ ನಮ್ಮ ದೊರೆ ಬಸಪ್ಪನಾಯಕರಂತೆಯೇ ಇದೆ. ನನಗೂ ಕೂಡ –

ಕೆಂಚಣ್ಣ – ನೋಡಿ, ಹತ್ತಿರ ಬಂತು! ಮಾತಾಡಿಸಿ, ಸ್ವಾಮಿ, ಮಾತಾಡಿಸಿ!  ಶಿವ! ಶಿವ! ಶಿವ! ಶಿವ! . . .
[ಭೂತ ದೂರದಲ್ಲಿ ಪ್ರವೇಶಿಸುತ್ತದೆ]

ಹೊನ್ನಯ್ಯ – ಓ ನಿಶಾ ಸಂಚಾರಿ,
ನೀನಾರೆ ಆಗಲಿ, ನನ್ನೊಡನೆ ಮಾತಾಡು.
ತೀರಿಹೋಗಿಹ ನಮ್ಮ ದೊರೆ ಬಸವನಾಯಕರ
ವೇಷವನು ತಲೆದಿಂತು ನಿರ್ಜನ ರಜನಿಯಲಿ
ಅನಾಥ ಪ್ರೇತದ ತೆರದಿ ಸಂಚರಿಸುತಿಹೆಯೇಕೆ?
ಬಯಕೆ ಏನಿದ್ದರೂ ಹೇಳು. ನಡೆಯಿಸುವೆ.
ಓ ನಿಂತು ಮಾತಾಡು.

ಕೆಂಚಣ್ಣ – ಕೋಪಗೊಂಡಂತಿದೆ!
ಶಿವ! ಶಿವ! . . .

ಹೊನ್ನಯ್ಯ – ಹೋಗದಿರು, ಹೋಗದಿರು, ನಿಲ್ಲು, ಮಾತಾಡು.
ನಿನ್ನಾಸೆಯೇನುಸುರು. ಬಿದನೂರಿಗೇಂ ಕೇಡು
ಸೂಚಿಸುತ ಇಂತು ನೀ ತೊಳಲುತಿಹೆ? ಶಿವನಾಣೆ!
ನಿನಗೆ ನುಡಿಯುವ ಬಲ್ಮೆ ಇರುವುದಾದರೆ, ನುಡಿ!
ಶಿವನಾಣೆ! ನಿಲ್ಲು! ನಿಂತು ಮಾತಾಡು!
[ಭೂತ ಮಾಯವಾಗುತ್ತದೆ]

ಕೆಂಚಣ್ಣ(ಶಿವ ಶಿವ ಎಂದು ನಿಲ್ಲಿಸಿ ನಿಡುಸುಯ್ದು)  ಹೊನ್ನಯ್ಯ, ದೊರೆಗಳಿಗೆ ನೀವು ಹೀಗೆ ಹೇಳುವುದು ಅಪರಾಧ. ಭೂತವಾದರೆ ಏನಂತೆ? ನಮ್ಮ ದೊರೆಯಲ್ಲವೆ? ಅದೇನು ರೂಪ! ಅದೇನು ಗಾಂಭೀರ್ಯ!

ಹೊನ್ನಯ್ಯ(ಮೂಕನಾಗಿ ಭೂತವು ಹೋದ ಮಾರ್ಗವನ್ನೇ ನೋಡುತ್ತಾ ನಿಂತು)  ಅಂತೂ ಹೋಗಿಯೆ ಬಿಟ್ಟಿತು! ಮಾತು ಕೂಡ ಆಡಲಿಲ್ಲ. ಇದೇನೊ ಅದ್ಭುತವಾಗಿದೆಯಪ್ಪಾ! ನಮ್ಮ ನಾಡಿಗೆ ಏನು ಕೇಡುಗಾಲ ಬಂದಿದೆಯೊ ನಾನರಿಯೆ!

ಕೆಂಚಣ್ಣ – ನಾನು ಹೇಳಿದರೆ ಸುಳ್ಳು, ಭ್ರಾಂತಿ, ಮಂಕು, ಹುಚ್ಚು, ಕಳ್ಳು! ಈಗ ನೀವೇ ಕಣ್ಣಾರ ಕಂಡಿರಲ್ಲ. ಈಗ ಹೇಳಿ; ಇದೇನು ಸಟೆಯೋ ದಿಟವೋ?

ಹೊನ್ನಯ್ಯ – ಕಾಣದೆಯೆ ಸುಳ್ಳೆಂದು ಹಳಿಯುವರು ನಾವೆಂಥ
ತಿಳಿಗೇಡಿಗಳು! ಇದನು ಸಟೆಯೆಂಬುವನೆ ಮಂಕು.
ಅರ್ಥಗರ್ಭಿತವಾಗಿ ತೋರುತಿದೆ. ಇದರಲ್ಲಿ
ಗೂಢಾರ್ಥವಿರಬೇಕು. ಸತ್ಪುರುಷನಾದ ದೊರೆ
ಸತ್ತಿಂತು ದೆವ್ವವಾಗುವುದೆಂದರೇನು?
ಸತ್ಕ್ರಿಯೆಗಳೆಲ್ಲವನು ಮಗನೆ ಮಾಡಿರುವನು.
ಜಂಗಮರನೇಕರಿಗೆ ದಾನ ದಕ್ಷಿಣೆಯಾಗಿದೆ –
ಆದರೂ ಇದರೊಳೇನೊ ಪ್ರಮಾದ ನಡೆದಿಹುದು.
ಕೆಂಚಣ್ಣ, ನೀನು ಇದನಾರಿಗೂ ಹೇಳದಿರು.
ನಾಳೆ ನಮ್ಮರಸುಕುವರ ಬಸವಯ್ಯನನೆ
ಕರೆತರುವೆ. ನಮ್ಮೊಡನೆ ನುಡಿಯದೀ ಭೂತ,
ದೊರೆ ಬಸವನಾಯಕರೆ ದಿಟವಾದ ಪಕ್ಷದಲಿ
ತಮ್ಮಣುಗ ಬಸವಯ್ಯನೊಡನೆ ನುಡಿಯದಿರದು, –
ನೋಡದೋ, ನೇಸರಾಗಲೆ ಮೂಡುವೆಟ್ಟಿನಲಿ
ಕೆಂಪು ಮುಂಬೆಳಕನೆರಚುತ್ತಿಹನು. ಬಾ, ಇದನು
ಯಾರೊಡನೆಯೂ ಹೇಳದಿರು! ಗೊತ್ತಾಯಿತೆ?

ಕೆಂಚಣ್ಣ – ಅಪ್ಪಣೆ, ಸ್ವಾಮಿ.
(ಹೋಗುವರು)

[ಪರದೆ ಬೀಳುವುದು]