[ಒಂದು ದಟ್ಟಡವಿಯ ನಡುವಣ ಹಾದಿ. ಬಸವಯ್ಯ ಶಿವಯ್ಯ ಬರುವರು.]

ಬಸವಯ್ಯ – ಶಿವಯ್ಯ,
ಕರುಬರಿದ್ದೂರಿಂದೆ ಕಾಡೊಳ್ಳಿತೆಂಬಂತೆ
ಬಿದನೂರಿಗಿಂತಲೂ ಭವ್ಯ ಭಯಂಕರವಾದ
ಈ ರಮ್ಯ ಪರ್ವತಾರಣ್ಯಗಳೆ ಲೇಸಲ್ತೆ?
ನೋಡು, ಈ ತೊರೆಯೆಂತು ಕಲ್ಗಳೊಡನೆ ಗಳಪುತೆ,
ನೊರೆಗರೆದು, ಸುಳಿಸುತ್ತಿ, ಹಾರುತ್ತೆ, ಜಾರುತ್ತೆ
ಹರಿಯುತಿದೆ! ಈ ಮಹಾವೃಕ್ಷಂಗಳಾದರೋ
ಧೀರ ಸೌಂದರ್ಯವನು ತೋರುತ್ತೆ, ನೆಲದೆಡೆಗೆ
ಬಿಸಿಲು ಬೀಳದ ತೆರದೆ ತಮ್ಮಯ ತಳಿರ್ಗೊಡೆಯ
ನೆಳಲಿನಿಂದೀ ಬನಕೆ ಕತ್ತಲೆಯ ಮೆತ್ತಿಹವು!
ಈ ಪರ್ವತಗಳಲ್ಲಿ, ಈ ಅರಣ್ಯಗಳಲ್ಲಿ
ಪವಡಿಸಿಹ ಶಾಂತಿ ನಮ್ಮೆದೆಗಳಿಗೆ ಬರಬಾರದೆ?
ಬಾ, ತೊರೆಯ ಬಳಿಯಿಹ ಬಂಡೆಗಳ ಮೇಲೆ ಕುಳಿತು
ಮಾರ್ಗದಾಯಾಸವನು ಪರಿಹರಿಸಿಕೊಳ್ಳುವಂ.
ಕುದುರೆಗಳು ಆ ನೆಳಲಿನಲಿ ನಿಂತು ಮೇಯಲಿ.
ನೀನೇನನೋ ಕುರಿತು ಚಿಂತೆಗೈವಂತಿದೆ!

ಶಿವಯ್ಯ – ಏನಾದರೇನಂತೆ? ನನ್ನ ಚಿಂತೆ. . . ನಿನಗೆ
ಹಿತವಲ್ಲ: ಹೇಳುವೆನೆ. . . ನಿನಗೆ ರುಚಿಕರವಲ್ಲ.

ಬಸವಯ್ಯ – ಏನದು? ನನ್ನಲ್ಲಿ ಮುಚ್ಚುಮರೆಯೇಕೆ?

ಶಿವಯ್ಯ – ನಿನ್ನಂತೆ ಕಷ್ಟದಲ್ಲಿಯು ಕೂಡ ಕಾಡುಗಳ
ಕಂಡೊಡನೆ, ಎಲ್ಲವನು ಮರೆತು, ಸೌಂದರ್ಯವನು
ಇಂತು ಬಣ್ಣಿಸಲೆನಗೆ ಹೃಚ್ಛಕ್ತಿಯಿಲ್ಲ.
ಹೊನ್ನಯ್ಯ ಲಿಂಗಣ್ಣ ಮಂತ್ರಿಗಳು ನಮಗೇಕೆ
ದಾರಿಯಲಿ ಸಿಕ್ಕಲಿಲ್ಲೆಂದು ಚಿಂತಿಸುತಿದ್ದೆ.

ಬಸವಯ್ಯ – ಮುಂದೆ ಹೋಗಿರಬಹುದು.

ಶಿವಯ್ಯ – ಇಲ್ಲ, ಹೋದಂತಿಲ್ಲ.
ಈ ತೊರೆಯ ಕೆಸರಿನಲಿ ಹೆಜ್ಜೆಗಳ ಗುರುತಿಲ್ಲ;
ಕಾಲುಹಾದಿಯ ಇಕ್ಕೆಲದ ಗಿಡಗಳುರುಳಿಲ್ಲ;
ಇನ್ನಾವುದೂ ಸ್ಥೂಲಚಿಹ್ನೆ ತೋರುವುದಿಲ್ಲ.(ಸುಯ್ಯಲು)

ಬಸವಯ್ಯ – ಏಕಿಂತು ಸುಯ್ಯುತಿಹೆ? ನಿನ್ನ ದನಿ ಏನನೋ
ಮುಚ್ಚು ಮರೆಮಾಡುತಿದೆ! ನಿನ್ನೆದೆಯೊಳಾವುದೋ
ಕಿಚ್ಚಿದ್ದ ರಾಗವೊಂದುಣ್ಮುವಂತಿಹುದು!

ಶಿವಯ್ಯ – ಅವರೇಕೆ ನಮಗೆ ದಾರಿಯಲಿ ಸಿಗಲಿಲ್ಲ!

ಬಸವಯ್ಯ – ಮುಂದೆ ಹೋಗಿರಬಹುದು! ನಮಗಿಂತ ಮುನ್ನವೇ
ಬಂದರಲ್ಲವೆ ಅವರು?

ಶಿವಯ್ಯ – ಇಲ್ಲ, ಈ ಹಾದಿಯಲಿ
ಮುಂದವರು ತೆರಳಿಲ್ಲ.

ಬಸವಯ್ಯ – ಹಿಂದೆ ಬರುತಿರಬಹುದು.

ಶಿವಯ್ಯ – ಹಿಂದೇಕೆ ಬರುತಿಹರು, ನಮಗಿಂತಲೂ ಮುಂದೆ
ಹೊರಟವರು?

ಬಸವಯ್ಯ – ಬೇರೆ ಬಟ್ಟೆಯ ಹಿಡಿದು ಹೋದರೋ
ಏನೋ?

ಶಿವಯ್ಯ – ನನಗದೇ ಸಂದೇಹ! ಬಸವಯ್ಯ!
ಬೇರೆ ಬಟ್ಟೆಯ ಹಿಡಿದರೆಂಬುದೇ ಸಂದೇಹ!

ಬಸವಯ್ಯ – ಹಿಡಿದರೇನಾಯ್ತು? ಶಿವಮೊಗ್ಗೆಯಲ್ಲವರ
ಕಾಣುವೆವು.

ಶಿವಯ್ಯ – ನನಗದೂ ಸಂದೇಹ.

ಬಸವಯ್ಯ – ಏಕೆ?

ಶಿವಯ್ಯ – ಸನ್ಯಾಸಿ ಎಂದುದನು ನೀನು ಕೇಳಿರುವೆ.
ಹಾದಿ ತಪ್ಪಲು ಅವರಿಗವಕಾಶವೆಲ್ಲಿಹದು?
ಬೇರೆ ಹಾದಿಯ ಹಿಡಿದರವರು, ಶಿವಮೊಗ್ಗೆಗೆ
ಬರಲ್ಕಲ್ಲ.

ಬಸವಯ್ಯ – ಮತ್ತೆತ್ತ ಹೋಗುವರು, ಶಿವಯ್ಯ?

ಶಿವಯ್ಯ – ನನಗೇತಕಾ ವಿಷಯ?

ಬಸವಯ್ಯ – ಹೇಳು, ಶಿವಯ್ಯ!

ಶಿವಯ್ಯ – ನೀನು ನಂಬುವುದಿಲ್ಲ.

ಬಸವಯ್ಯ – ನೀನು ಹೇಳಲೆಬೇಕು.

ಶಿವಯ್ಯ – ಸುದ್ದಿ ಇಂಪಾಗಿಲ್ಲ.

ಬಸವಯ್ಯ – ಆದರೂ ಹೇಳಿಬಿಡು.
ಸಂಶಯಕ್ಕಿಂತಲೂ ಕಹಿಸುದ್ದಿ ಮೇಲು!

ಶಿವಯ್ಯ – ನೀನೆ ಊಹಿಸಲಾರೆಯಾ? ಹೇಳು?

ಬಸವಯ್ಯ – ಅಯ್ಯೋ
ಬರಿದೆ ಪೀಡಿಸುತಿರುವೆ. ನನ್ನ ಬಗೆ ಏನೇನೊ
ಭೀಕರವ ನೆನೆಯುತಿದೆ.

ಶಿವಯ್ಯ – ಹಾಗಾದರದೆ ಸ್ವರ್ಗ!
ನಾನೀಗಳೊರೆಯುವುದಕಿಂತಲೂ ಮಿಗಿಲಾದ
ಭೀಕರವ ನೀನೆಂದಿಗೂ ನೆನೆಯಾಲಾರೆ!
ಆಗಲಿ, ನಿನ್ನ ಹಿತಕಾಗೆಲ್ಲವನು ಹೇಳಿ
ಹಗುರಗೈವೆನು ನನ್ನ ಎದೆಹೊರೆಯನಿಳಿಸಿ.
ಬಾ, ಇಲ್ಲಿ ಕುಳಿತುಕೊ (ಇಬ್ಬರೂ ಬಂಡೆಯ ಮೇಲೇರುವರು.)
ತಾಳ್ಮೆಯಿಂದಾಲಿಸು:
ಯಾರನೂ ನಂಬದಿರು. ಗೆಳೆಯನಾದರು ಸರಿಯೆ,
ಓಪಳಾದರು ಸರಿಯೆ, ಯಾರನೂ ನಂಬದಿರು.
ಈ ಭೂಮಿ ಸ್ವಾರ್ಥತೆಯ ಬೀಡೆಂದು ತಿಳಿ. ಬರಿದೆ
ಗಂಧರ್ವಲೋಕದಲಿ ತೊಳಲಿದರೆ ನೀನೆಂದೂ
ಈ ಪಾಪಮಯ ಲೋಕದಲಿ ಬಾಳಲಾರೆ.                                                                                ನನಗಿಂತಲೂ ನೀನು ತಿಳಿದವನು; ಮೇಧಾವಿ;
ಭಾವುಕ. ಆದರೆ ನಿನ್ನ ಸರಳತೆ ನಿನಗೆ
ಕುರುಡಿನಂತಿದೆ. ಎಲ್ಲರಿನಿವಾತನೂ ನಂಬಿ
ಮೋಸಹೋಗಿರುವೆ – ಇಂತೇಕೆ ನಾನು
ನೀತಿಬೋಧೆಯ ಮಾಡುತಿಹೆನೆಂದು ಸೋಜಿಗವೆ?
ನಿನಗೆ ನಚ್ಚಿನ ಗೆಳೆಯನಾಗಿದ್ದ ಹೊನ್ನಯ್ಯ
ನಿನಗೇನನೆಸಗಿಹನೊ ಬಲ್ಲೆಯೇನದನು?

ಬಸವಯ್ಯ – ನೀನೆ ಹೇಳಿದೆಯಲ್ಲವೇ, ಅವನ ಸಾಹಸವೆ
ನಮ್ಮ ಬಿಡುಗಡೆಗೆ ಕಾರಣವೆಂದು. ನಾನೆಂದೂ
ಆತನಿಗೆ ಚಿರಋಣಿ. ಆತನಿಂದೇ ನನಗೆ
ನಿಜದ ನೆಲೆ ತೋರಿಹುದು.

ಶಿವಯ್ಯ (ವ್ಯಂಗ್ಯವಾಗಿ ನಕ್ಕು) ರುದ್ರಾಂಬೆ ಇಲ್ಲದಿರೆ
ಅವನೆನಗೆ ಕಾರ್ಯದಲಿ ನೆರವಾಗುತಿದ್ದನೇ?

ಬಸವಯ್ಯ – ಓ ಚೆಲುವೆ, ನಿನಗೆ ನಾನಾವಗಂ ಚಿರಋಣಿ.
ನಿನ್ನೊಲ್ಮೆಯೇ ನನಗೆ ಈ ವಿಷಮ ಸಮಯದಲಿ
ಜೀವಾತುವಾಗಿಹುದು!

ಶಿವಯ್ಯ (ನಕ್ಕು) ಅಯ್ಯೋ ಮರುಳ್ತನವೆ!
ಓ ಮಾನವಾ, ನೀನು ಸ್ತ್ರೀಯರಿಂದೆಂತೆಂತು
ಮೋಸಹೋಗುತ್ತಿರುವೆ? ಓ ಪ್ರೇಮವೇ, ನಿನ್ನ
ಲೀಲೆಯೇ ಲೀಲೆ! ಮಾಟಗಾರನ ಮುಂದೆ
ಕುಣಿವ ಮಾಯೆಯ ಗೊಂಬೆಗಳ ತೆರದಿ ಮಾನವರು
ನಿನ್ನ ಕಾಪಟ್ಯದಲಿ ಕುರುಡಾಗಿ ಕುಣಿಯುವರು!
ಬಸವಯ್ಯ, ನಿನ್ನ ಸವಿಗನಸದನು ನಾನೇಕೆ
ಒಡೆಯಲಿ?

ಬಸವಯ್ಯ – ಶಿವಯ್ಯ, ನೀನೆನ್ನನಣಕಿಸುತಿರುವೆ.

ಶಿವಯ್ಯ – ನಾನಲ್ಲ! ರುದ್ರಾಂಬೆ ಹೊನ್ನಯ್ಯರೆಂಬುವರೆ
ನಿನ್ನನಣಕಿಸುತಿಹರು.

ಬಸವಯ್ಯ (ಮುನಿದು)  ಏನದು? ಒದರಿಬಿಡು!

ಶಿವಯ್ಯ – ನನ್ನ ಮೇಲೇಕಯ್ಯ ಕೋಪಗೊಳ್ಳುತ್ತಿರುವೆ?
ರುದ್ರಾಂಬೆ ಹೊನ್ನಯ್ಯನನು ಇನಿಯನೆಂದೊಲಿದು
ಲಿಂಗಣ್ಣ ಮಂತ್ರಿಯನು ಬಿಡಿಸಿದಳು! ನಾನು
ಸ್ನೇಹಿತನು ಎಂದು ನಿನ್ನನು ಬಿಡಿಸಿದುದೆ ತಪ್ಪೆ?

ಬಸವಯ್ಯ (ರಭಸದಿಂದ) ಏನು? ಏನು?

ಶಿವಯ್ಯ – ಬಸವಯ್ಯ, ನೀನು ಕಲಿತವನು;
ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ.
ಪ್ರೇಮದೀ ಚಂಚಲತೆಯನು ಕಾವ್ಯಗಳಲೋದಿ
ತಿಳಿದವನು. ಸ್ತ್ರೀ ಸಹಜವಾದುದನೆ ರುದ್ರಾಂಬೆ
ಮಾಡಿದಳು; ಹೊನ್ನಯ್ಯನೂ ಅಂತೆ ಎಂದರಿ.
ರಾಜ್ಯಸಂಸ್ಥಾಪನೆಯ ಕಾರ್ಯದಲಿ ತೊಡಗಿರುವ
ನೀನಿಂತು ಒಬ್ಬ ಹೆಣ್ಣಿನ ಕಪಟಕಳಲೇಕೆ?
ರುದ್ರಾಂಬೆ ಎಂಬೊಬ್ಬಳಿದ್ದುದನೆ ಮರೆತುಬಿಡು!

ಬಸವಯ್ಯ – ಮರೆಯುವುದೆ? ಎಂದಿಗೂ ಇಲ್ಲ, ಶಿವಯ್ಯ.
ರುದ್ರಾಂಬೆ ನನಗಿಂತು ದ್ರೋಹಗೈದುದನು
ನಾನವಳ ಬಾಯಿಂದೆ ಕೇಳಿದಲ್ಲದೆ ನಂಬೆ.
ಹೊನ್ನಯ್ಯನಾವುದೊ ಬಲಾತ್ಕಾರದಿಂದಲೇ
ರುದ್ರಾಂಬೆಯನ್ನೊಪ್ಪುವಂತೆ ಮಾಡಿರಬೇಕು.
ಹೈದರಾಲಿಯ ಸಹಾಯವನು ಪಡೆದಾನು
ಚೆಲುವಾಂಬೆ ನಿಂಬಯ್ಯರನು ಹಿಡಿದು ಶಿಕ್ಷಿಸಿ,
ತರುವಾಯ ಹೊನ್ನಯ್ಯನನು ವಿಚಾರಿಸಿ ತಿಳಿದು,
ಶಿಕ್ಷಿಸುವೆ. – ಹೊನ್ನಯ್ಯನೂ ಕೂಡ ನನಗಿಂತು
ದ್ರೋಹಮಾಡುವನೆಂದು ನಾ ನಂಬಲಾರೆ. –
ಏನೋ ಅಚಾತುರ್ಯವಿರಬೇಕು ಇದರಲ್ಲಿ!
ದುಡುಕಿದರೆ ದುಗುಡಪಡಬೇಕಾಗುವುದು ಕಡೆಗೆ. –
ಎಷ್ಟು ತೊಡಕಿರುವುದೀ ಲೋಕದಲಿ, ಶಿವಯ್ಯ!
(ಚಿಂತಾಮಗ್ನನಾಗುವನು.)

ಶಿವಯ್ಯ(ಸ್ವಗತ) ಓಹೊ, ಈ ಕಪಟವಿವನಲ್ಲಿ ಸಾಗಲಾರದು.
ಎಂತಾದರೂ ಇವನು ರುದ್ರಾಂಬೆಯನು ಬಿಡನು. –
ಇರಲಿ; ಇವನನು ಕೊಂದೆ ಕೆಲಸ ಕೈಗೂಡಿಸುವೆ!

ಬಸವಯ್ಯ (ಹಿಂದಿರುಗಿ ಕೆಳಗೆ ನೋಡಿ) ಶಿವಯ್ಯ, ಈ ಪ್ರಪಾತದಾಳಕ್ಕಿಂತಲೂ ಗಭೀರತರ ಜೀವನದಾಳ! ಅಲ್ಲವೇ?

ಶಿವಯ್ಯ (ನೋಡಿ)  ಹೌದು; ಎಷ್ಟು ಭಯಂಕರವಾಗಿದೆ! ಅಲ್ಲಿರುವ ಮಹಾ ವೃಕ್ಷಗಳೂ ಕೂಡ ಈ ಎತ್ತರೆಕ್ಕೆ ಸಣ್ಣ ಗಿಡಗಳಂತೆ ತೋರುತ್ತಿವೆ. ನೋಡು, ಆ ದೊಡ್ಡ ಬಂಡೆಗಳು!

ಬಸವಯ್ಯ – ಎಷ್ಟು ಗುಂಡಾಗಿವೆ! ಸಣ್ಣ ಹರಳುಗಳಂತೆ ಕಾಣುತ್ತಿವೆ. ದೂರದಾ ಕಂದರವೊ ಚಿತ್ರಾರ್ಪಿತ ದೃಶ್ಯದಂತೆ ರಮಣೀಯ.

ಶಿವಯ್ಯ – ಆದರೂ ರುದ್ರ!

ಬಸವಯ್ಯ – ಪಾಪ, ಅರಿಯದ ಪ್ರಾಣಿಗಳು ಇಲ್ಲಿಂದ ಕೆಳಗೆ ಬಿದ್ದರೆ ಎಲುಬೆಲ್ಲ ನುಚ್ಚುನೂರೆ!

ಶಿವಯ್ಯ(ಕೆಳಗೆ ನೋಡುತ್ತಓಹೊ ಒಂದು ಜಿಂಕೆ! (ಬಾಗಿ ನೋಡುವನು.)

ಬಸವಯ್ಯ – ಎಲ್ಲಿ?

ಶಿವಯ್ಯ – ಚೆನ್ನಾಗಿ ಬಾಗಿ ನೋಡು. ಆ ಹೆಮ್ಮಾವಿನ ಮರದ ಪಕ್ಕದ ಕಿರು ಬಯಲಿನಲ್ಲಿ!

ಬಸವಯ್ಯ(ತಲೆಯುಡೆಯನ್ನು ಕೆಳಗಿಟ್ಟು ಬಾಗಿ ನೋಡುತ್ತ) ಎಲ್ಲಿ? ನನಗೆ ಕಾಣುವುದಿಲ್ಲ! –
(ಶಿವಯ್ಯನು ಬಸವಯ್ಯನನ್ನು ಫಕ್ಕನೆ ಪ್ರಪಾತಕ್ಕೆ ತಳ್ಳುತ್ತಾನೆ.)
ಅಯ್ಯೋ –

ಶಿವಯ್ಯ – ನಿನಗಿದೇ ಮೋಕ್ಷ. ನಾನಿನ್ನು ಶಿವಮೊಗ್ಗೆಗೆ, ಮುಂದಿನ ಕಾರ್ಯ ಸಾಧನೆಗೆ. (ರೋದನ ಕೇಳಿಸುವುದು.) ಇನ್ನೂ ಜೀವದಿಂದಿದ್ದಾನೆಯೆ? ಆಶ್ಚರ್ಯ! (ಬಾಗಿ ನೋಡುವನು.)  ಇನ್ನೇನು ಸಾಯುವನು! (ಪಕ್ಕದ ಕಲ್ಲು ಗುಂಡೊಂದನ್ನು ನೋಡಿ) ಇದನ್ನು ಎತ್ತಿಹಾಕಿದರಾಯ್ತು! (ಎತ್ತುತ್ತಿರುವನು. ಖುರಪುಟ ಧ್ವನಿ ಕೇಳಿಸುವುದು. ಅದನ್ನು ಅಲ್ಲಿಯೆ ಬಿಟ್ಟು ಎದ್ದು ಆಲಿಸುವನು.)
ಇದೇನಿದು ಖುರಪುಟ ಧ್ವನಿ? ಯಾರೋ ರಾಹುತರು! ಇರಲಿ, ಸದ್ಯಕ್ಕೆ ಇಲ್ಲಿ. . . .
(ಒಂದು ಪೊದೆಯಲ್ಲಿ ಅವಿತುಕೊಳ್ಳುವನು. ಹೊನ್ನಯ್ಯ ಲಿಂಗಣ್ಣ ಮಂತ್ರಿಗಳು ಪ್ರವೇಶಿಸುವರು.)

ಹೊನ್ನಯ್ಯ – ನನಗೆ ಕೇಳಿಸಿತು, ಚೆನ್ನಾಗಿ. ‘ಅಯ್ಯೋ’ ಎಂದು ಒರಲಿದಂತಾಯ್ತು.

ಲಿಂಗಣ್ಣ – ನನ್ನ ಕಿವಿಯೂ ಮಂದ. ಜೊತೆಗೆ ಈ ಜೀರ್ದುಂಬಿಗಳ ಕೀರುಲಿ ಬೇರೆ!
(ರೋದನ ಧ್ವನಿ)

ಹೊನ್ನಯ್ಯ – ಅದೋ! ಪುನಃ! ಅದೇ ಕೂಗು!

ಲಿಂಗಣ್ಣ – ಎತ್ತಣಿಂದ!

ಹೊನ್ನಯ್ಯ – ಇತ್ತಕಡೆಯಿಂದ. (ಹೋಗಿ ಪ್ರಪಾತವನ್ನು ನೋಡಿ) ಏನು ಭಯಾನಕವಾಗಿದೆ ಈ ಪ್ರಪಾತ!

ಲಿಂಗಣ್ಣ(ನೋಡಿ ಹಿಂದಕ್ಕೆ ಬಂದು) ಅಯ್ಯೋ ನನ್ನ ಮುದಿತಲೆ ತಿರುಗುತ್ತಿದೆ! ನಾ ನೋಡಲಾರೆ!

ಹೊನ್ನಯ್ಯ(ಆಲಿಸಿ) ಪುನಃ! ಅಯ್ಯೊ ಪುನಃ ಅದೇ ಕೂಗು, ಮಂತ್ರಿಗಳೆ! ಯಾರೋ ಬಿದ್ದಿರಬೇಕು ಇಲ್ಲಿ!

ಲಿಂಗಣ್ಣ – ಅಲ್ಲಿ ನೋಡು, ಎರಡು ಕುದುರೆ!

ಹೊನ್ನಯ್ಯ – ಶಿವಯ್ಯ ಬಸವಯ್ಯರು ಏರಿಬಂದವು!

ಲಿಂಗಣ್ಣ  – ಹಾಗಾದರೆ ಏನೋ ಪ್ರಮಾದ ನಡೆದಿದೆ!

ಹೊನ್ನಯ್ಯ – ನನ್ನೆದೆಯೇಕೋ ತಲ್ಲಣಿಸುತ್ತಿದೆ! (ನೋಡಿ) ಅಯ್ಯೊ ಬಸವಯ್ಯನ ತಲೆಯುಡುಗೆಯಿದು!

ಲಿಂಗಣ್ಣ(ನೋಡಿ ತೆಗೆದುಕೊಂಡು) ಹೌದು! ಶಿವ ಶಿವಾ! ಕಾಪಾಡು!

ಹೊನ್ನಯ್ಯ(ಅಲಿಸಿ) ಪುನಃ ಅದೇ ಧ್ವನಿ! ಬನ್ನಿ, ಹೋಗಿ ನೋಡೋಣ.

ಲಿಂಗಣ್ಣ – ಅಲ್ಲಿಗೆ ಇಳಿಯುವುದಾದರೂ ಹೇಗೆ!

ಹೊನ್ನಯ್ಯ – ಆ ಕಡೆ ಇಳಿಯಬಹುದು ಬನ್ನಿ; ಬನ್ನಿ!
(ಇಬ್ಬರೂ ಬೇಗನೆ ಹೋಗುವರು. ಶಿವಯ್ಯ ಹೊರಗೆ ಬರುವನು.)

ಶಿವಯ್ಯ – ನಾನಿನ್ನು ತಳುವಿದರೆ ಕೆಲಸ ಕೆಡುವುದು! – ಇವರು ಹೋದರೇನಂತೆ! ಅಷ್ಟರಲ್ಲಿಯೆ ಬಸವಯ್ಯನ ಮಾತೂ ನಿಂತಿರುತ್ತದೆ. (ಬೇಗನೆ ಹೋಗುವನು.)
(
ಹೊನ್ನಯ್ಯ ಲಿಂಗಣ್ಣರು ಬಸವಯ್ಯನನ್ನು ಹೊತ್ತು ತರುವರು.)

ಬಸವಯ್ಯ(ಮಲಗಿ ನರಳುತ್ತ)
ನಾನುಳಿಯುವಂತಿಲ್ಲ, ಹೊನ್ನಯ್ಯ. ಲಿಂಗಣ್ಣ
ಮಂತ್ರಿಗಳೇ, ನನ್ನ ರಾಜ್ಯದ ಕ್ಷೇಮವೆಲ್ಲವೂ
ನಿಮ್ಮ ಮೇಲಿನ ಭಾರವಾಗಿದೆ.

ಹೊನ್ನಯ್ಯ(ಶೋಕದಿಂದ)
ಬಸವಯ್ಯ,
ನನ್ನೊಬ್ಬನನೆ ಬಿಟ್ಟು ನೀನು ಹೋಗುವೆಯೆಲ್ಲಿ?

ಬಸವಯ್ಯ – ಮರುಗದಿರು, ಮಿತ್ರನೇ; ಈ ಕಷ್ಟಕಾಲದಲಿ
ಧೈರ್ಯಗೆಡಬೇಡ. ಮೋಸಗಾರರು ನೀವು
ಎಂದಿಬ್ಬರನೂ ಹಳಿದು, ನನ್ನನೀ ಗತಿಗೆಳೆದ
ಆ ಪಾಪಿ ಚಂಡಾಲನಿಗೆ ತಕ್ಕುದನೆ ಮಾಡು!
ನಿನಗಿದೇ ನಾನೀವ ಕಟ್ಟಕಡೆ ಸಂದೇಶ.

ಹೊನ್ನಯ್ಯ – ಅಯ್ಯೋ ಪಾಪಿ! ಶಿವಯ್ಯ!

ಬಸವಯ್ಯ – ಲಿಂಗಣ್ಣ ಮಂತ್ರಿಗಳೆ, ಸನ್ಯಾಸಿಯಿತ್ತುದಿದು;
ಈ ಪತ್ರವನು ತೆಗೆದುಕೊಂಡು ಹೈದರನೆಡೆಗೆ
ಹೋಗಿ, ನಿಂಬಯ್ಯ ಚೆಲುವಾಂಬೆಯರ ಪಾಳ್ಗೈಗೆ
ಬಿದನೂರು ಸಂಸ್ಥಾನವೆಂದಿಗೂ ದೊರೆಯದಂತೆ
ಮಾಡುವಿರಾ! ನನ್ನ ತಂದೆಯ ಕೊಂದ ಪಾಪಿಗಳಿಗೆ
ತಗುವ ಪ್ರಾಯಶ್ಚಿತ್ತವನೆ ಮಾಡುವಿರಾ? ಹೇಳಿ!
ಮಾತುಕೊಡಿ (ಕಾಗದವನ್ನು ನೀಡುವನು)

ಲಿಂಗಣ್ಣ(ಅದನ್ನು ತೆಗೆದುಕೊಂಡು ಉಕ್ಕಿ ಬರುವ ದುಃಖದಿಂದ)
ಬಸವಯ್ಯ, ನಾನು ಇನ್ನಾರ್ಗೆಂದು
ಈ ಕಾರ್ಯವನು ಮಾಡಿ ಕೃತಕೃತ್ಯನಾಗಲಿ?

ಬಸವಯ್ಯ – ನನಗಾಗಿ! ನನಗಾಗಿ ಸಾಹಸವ ಮಾಡಿ!
ನನ್ನ ತಂದೆಯ ನೆನೆದು ಸಾಹಸವ ಮಾಡಿ!
ನನ್ನೆದೆ ತಣಿಯಲೆಂದು ಸಾಹಸವ ಮಾಡಿ!
ಹೊನ್ನಯ್ಯ ಲಿಂಗಣ್ಣ ಮಂತ್ರಿಗಳೆ, ಬಿಡಬೇಡಿ.
ಮಾತುಕೊಟ್ಟರೆ ನೀವು, ನಿಶ್ಚಿಂತನಾಗಿ
ಮಡಿಯುವೆನು.

ಹೊನ್ನಯ್ಯ – ಬಸವಯ್ಯ, ಇದೊ ನನ್ನ ಪೂಣ್ಕೆಯಿದು:
ಬಾಳನೇ ಬಲಿದೆತ್ತು ನಿನ್ನ ಬಯಕೆಯ ಸಲಿಸಿ
ವಿಶ್ರಾಂತಿ ಹೊಂದುವೆನು!

ಬಸವಯ್ಯ(ನರಳುತ್ತಅಯ್ಯೋ ನೋವು!
(ಲಿಂಗಣ್ಣ ಉಪಚರಿಸಿ ಗಾಳಿ ಬೀಸುವನು.)

ಹೊನ್ನಯ್ಯ – ಅಯ್ಯೋ, ಆ ತಂಗಿ ರುದ್ರಾಂಬೆಗೇನೆಂದು
ಹೇಳಲಿ! ಈ ಸುದ್ದಿಯನು ಕೇಳಿ ಅವಳೆಂತು
ಜೀವದಿಂದಿರುವಳು? ಓ ತಂಗಿ ರುದ್ರಾಂಬೆ,
(ಲಿಂಗಣ್ಣ ಕಣ್ಣೊರಸಿಕೊಳ್ಳುತ್ತಾನೆ.)
ನಿನ್ನಿನಿಯನನು ಸೆರೆಯ ಮನೆಯಿಂದ ಬಿಡಿಸಿ
ಕಾಡಿನಲಿ ಕೊಲಲೆಂದೆ ನನ್ನನಟ್ಟಿದೆಯಾ?

ಬಸವಯ್ಯ (ಕನವರಿಸಿ)
ಯಾರದು? ತಂದೆಯೇ? ಬಾ, ತಂದೆ, ಬಾ.
ನಿನ್ನಾಜ್ಞೆಯನು ನಾನು ನಡೆಸಲಾರದೆ ಹೋದೆ.
ಮುನಿಯದಿರು. ಅದಕೆ ಇವರಿಬ್ಬರನು ನೇಮಿಸಿಹೆ.
ಅದಾರದು? ತಾಯಿಯೇ? ಬಾರಮ್ಮಾ, ಬಾ.
(ಮಗುವಿನಂತೆ ತೊದಲಾಡುತ್ತ ಕೈ ನೀಡುತ್ತ)
ನನ್ನನೆತ್ತಿಕೊಳ್ಳಮ್ಮಾ! ನನಗೆ ಹಸಿವಾಗಿದೆ! –
ಅಮ್ಮಾ, ಆ ಕೆರೆಯ ಬಳಿಯಲಿ ಚಿಟ್ಟೆಗಳ ಹಿಡಿದು
ರುದ್ರಾಂಬೆಗಿತ್ತೆನಮ್ಮಾ. ಏನು ಚೆಲುವೆ ಆ ಹುಡುಗಿ!
– ನನ್ನ ಬಣ್ಣದ ಚಿಟ್ಟೆಯಿದು, ಶಿವಯ್ಯಾ!
ಮುಟ್ಟದಿರು! – ರುದ್ರಾಂಬೆ, ನೀನವನ ಬಳಿಗೇಕೆ
ಹೋಗುವುದು? ಇತ್ತ ಬಾ. ನೋಡಿಲ್ಲಿ! ನೋಡಿಲ್ಲಿ,
ರುದ್ರಾಂಬೆ, ಎಷ್ಟು ಚೆಲುವಾದ ಹೂವುಗಳು!
(ಹುಡುಗರಂತೆ ಕೇಕೆ ಹಾಕಿ ನಡುಗುವನು.)

ಲಿಂಗಣ್ಣ – ಹೊನ್ನಯ್ಯ, ಉತ್ರ್ಕಮಣ ಚಿಹ್ನೆಯಿದು. ಕಾಲವೇ
ಹಿಂದಕ್ಕೆ ಸರಿಯುವುದು ಮರಣವೈತರುವಾಗ.
ಅವನೀಗ ಬಾಲ್ಯದುದ್ಯಾನದಲಿ ತಿರುಗುತಿಹನು!

ಹೊನ್ನಯ್ಯ(ಕರೆಯುವನು) ಬಸವಯ್ಯ! ಬಸವಯ್ಯ!

ಬಸವಯ್ಯ(ಮೊದಲಿನಂತೆ) ಬಂದೇ! ಬಂದೇ! ಹೊನ್ನಯ್ಯ, ನಿಲ್ಲು!
ನೋಡಲ್ಲಿ, ಹಸರು ಬಯಲಿನ ಮೇಲೆ ಬಿಸಿಲೆನಿತು
ಮುದ್ದಾಗಿ ಮಲಗಿಹುದು! – ಅಯ್ಯೋ, ರುದ್ರಾಂಬೆ
ಬಿದ್ದುಬಿಟ್ಟಳು ಅಲ್ಲಿ! ಬೇಗೆತ್ತು, ಹೊನ್ನಯ್ಯ!

ಲಿಂಗಣ್ಣ(ಗಾಳಿ ಬೀಸುತ್ತ) ಬಸವಯ್ಯ! ಬಸವಯ್ಯ!

ಬಸವಯ್ಯ – ರುದ್ರಾಂಬೆ, ನೀನೆನ್ನನೇ ಮದುವೆಯಾಗುವೆಯಾ?
ಕೇಳಲ್ಲಿ, ಕೂಗುತಿದೆ ಕೋಗಿಲೆ ‘ಕುಹೂ’ ಎಂದು!

ಹೊನ್ನಯ್ಯ(ಗದ್ಗದ ಕಂಠದಿಂದ)
ಬಸವಯ್ಯ, ಬಸವಯ್ಯ, ರುದ್ರಾಂಬೆಗಾಗಿ-
ಯಾದರೂ ಬದುಕಲಾರೆಯಾ?

ಬಸವಯ್ಯ(ರೇಗಿದಂತೆ)  ಓ ರುದ್ರಾಂಬೆ,
ಮುಡಿಗೆದರಿ ನಿಂತಿರುವೆ ಏಕಿಂತು? ಏನಿದು?
ಹುಚ್ಚಿಯಂತಿಹೆಯಲ್ಲಾ! ರಕ್ತಾಕ್ಷಿಯಾಗಿರುವೆ?
ಹಾಗಾದರಿನ್ನು ನೀ ರುದ್ರಾಂಬೆಯಲ್ಲವೇ?
ಮಾತಾಡು! ಮಾತಾಡು, ಓ ರಕ್ತಾಕ್ಷಿ! –
ಓ ರಕ್ತಾಕ್ಷಿ, ಮುಯ್ಯಿ ತೀರಿಸಿಕೋ! – (ಚೀರಿ)
ಅವನಲ್ಲ! ಅವನಲ್ಲ! ಅವನು ಹೊನ್ನಯ್ಯ!
ಅಯ್ಯೋ ಅವನನೇತಕೆ ತಿವಿದು ಕೊಂದೆ? (ಅಳುತ್ತಾನೆ)

ಹೊನ್ನಯ್ಯ – ಏನಿದು ಮಂತ್ರಿಗಳೆ?

ಲಿಂಗಣ್ಣ(ಸುಯ್ದು) ಏನಿಲ್ಲ! ಎಲ್ಲ ಶಾಂತವಾಗುತ್ತದೆ!

ಬಸವಯ್ಯ – ಆಹಾ! – ಏನಿದು ಶಾಂತಿ! – ಯಾರಿವನು! –
ನಿಲ್ಲಿ! ನಿಲ್ಲಿ! ನಾನೂ ಬರುತ್ತೇನೆ! –
ಕವಿವರ್ಯರಿಹರಲ್ಲಿ! ಇನಿತು ದಿನ ನಿಮ್ಮನೇ
ನಾನರಸುತಿದ್ದೆ! ಜ್ಯೋ – ತಿ ಜ್ಯೋ – !
(ಸಾಯುತ್ತಾನೆ.)

ಲಿಂಗಣ್ಣ – ಎಲ್ಲ ಮುಗಿದುದು, ಹೊನ್ನಯ್ಯ. ಮುಂದೇನು ಗತಿ?

ಹೊನ್ನಯ್ಯ(ದೂರ ನೋಡಿ) ಎರಡು ಕುದುರೆಗಳಿರಲಿಲ್ಲವೇ ಅಲ್ಲಿ, ನಾವಾಗ ನೋಡಿದಾಗ?
ಈಗ ಒಂದೇ ಕಾಣುತ್ತಿದೆ!

ಲಿಂಗಣ್ಣ – ಹೌದು; ಆ ಪಾಪಿ ಇಲ್ಲಿಯೇ ಅಡಗಿದ್ದನೆಂದು ತೋರುತ್ತದೆ ನಾವು ಬಂದಾಗ. ನಾವು ಕೆಳಗಿಳಿದ ವೇಳೆ ಕುದುರೆಯನ್ನೇರಿ ಹೋಗಿರಬೇಕು.

ಹೊನ್ನಯ್ಯ(ಬೆಚ್ಚಿ ಆಲಿಸಿ) ಅದೇನು? ಖುರಪುಟ ಧ್ವನಿ!

ಲಿಂಗಣ್ಣ(ಆಲಿಸಿಬಿದನೂರ ಕಡೆಯಿಂದ!

ಹೊನ್ನಯ್ಯ(ಉದ್ವೇಗದಿಂದಹೌದು!

ಲಿಂಗಣ್ಣ – ನಮ್ಮನಾಕ್ರಮಿಸಲು ಬರುವರೆಂದು ತೋರುತ್ತದೆ. ಈಗೇನು ಮಾಡುವುದು? ಕಳೇಬರವನ್ನು ಇಲ್ಲಿಯೇ ಬಿಟ್ಟರೆ ಸಂಸ್ಕಾರ ನಡೆಯದು!

ಹೊನ್ನಯ್ಯ – ಚಿಂತೆ ಬೇಡ, ನಾನೊಂದುಪಾಯ ಹೂಡುತ್ತೇನೆ. ನೀವು ಶಿವಮೊಗ್ಗೆಗೆ ಬೇಗ ಹೋಗಿ ಮುಂದಿನ ರಾಜಕಾರ್ಯವನ್ನಾಲೋಚಿಸಿ. ತಡಮಾಡಿದರೆ ಶಿವಯ್ಯನಿಂದ ಏನಾಗುವದೋ ನಾನರಿಯೆ! ಅವನು ನಿಂಬಯ್ಯನ ಗೂಢಚರನಿದ್ದರೂ ಇರಬಹುದು! ಬೇಗ! ಕುದುರೆಯನ್ನೇರಿ!

ಲಿಂಗಣ್ಣ – ನಿನ್ನನ್ನು ಕೊಲ್ಲದೆ ಬಿಡುವರೇ?

ಹೊನ್ನಯ್ಯ – ನಾನೇ ಬಸವಯ್ಯನನು ಹಿಡಿದು ಕೊಂದೆನೆಂದು ಹೇಳಿ ಹೇಗಾದರೂ ಮಾಡಿ ಆತನ ದೇಹವನು ಬಿದನೂರಿಗೆ ಸಾಗಿಸಿ ಅದಕ್ಕೆ ಸಂಸ್ಕಾರ ನಡೆಸುತ್ತೇನೆ. ಅವರು ಹತ್ತಿರ ಬಂದರು! ನೀವೂ ಇಲ್ಲಿದ್ದರೆ ಉಪಾಯ ಸಾಗುವುದಿಲ್ಲ. ಕೆಲಸ ಕೆಡುವುದು. – ನಡೆಯಿರಿ! ಬೇಗ ನಡೆಯಿರಿ!

ಲಿಂಗಣ್ಣ – ಹೊನ್ನಯ್ಯ, ಎಚ್ಚರಿಕೆ! (ಹೋಗುವನು.)

ಹೊನ್ನಯ್ಯ(ದೂರ ನೋಡುತ್ತಬಿದನೂರಿನಿಂದ ಐತರುವ ರಾಜಭಟರಿರಬೇಕು! ಬರಲಿ! ನಾನೆಯೆ ಬಸವಯ್ಯ ಲಿಂಗಣ್ಣ ಶಿವಯ್ಯರನು ಬೆನ್ನಟ್ಟಿ ಬಂದೆನೆಂದೂ ಅವರನಾಕ್ರಮಿಸಲು ಸಾಧ್ಯವಿಲ್ಲದೆ ಬಸವಯ್ಯನನು ತಿವಿಯಬೇಕಾಯಿತೆಂದೂ, ಲಿಂಗಣ್ಣ ಶಿವಯ್ಯರು ಖುರ ಪುಟ ಧ್ವನಿಗಳನು ಕೇಳಿ ಪ್ರಾಣಭಯದಿಂದ ಮುಂದೆ ದೌಡಾಯಿಸಿದರೆಂದೂ ಹೇಳುವೆನು. ನಂಬಿದರೆ ಒಳಿತಾಯ್ತು. ಹೇಗಾದರೂ ಮಾಡಿ ಕೆಳೆಯನಿಗೆ ಚರಮ ಸಂಸ್ಕಾರಗಳನಾದರೂ ನಡೆಸುವನು. – ನಂಬದಿರೆ, – ನಂಬದಿರೆ ಈಶ್ವರೇಚ್ಛೆ! –  ವೀರನಂದದಿ ಅರಿಗಳನಿರಿದು (ಕೆಳಗೆ ನೋಡಿ) ಓ ಮಿತ್ರಾ, ನಿನ್ನೆಡೆಯೆ ಶವವಾಗಿ ಬೀಳುವೆನು. (ತನ್ನ ಕತ್ತಿಯನು ಹೊರಗೆಳೆದು)  ಬಸವಯ್ಯ, ಶಿವಯ್ಯನಿಗೆ ಮುಂದೆ ಮಾಡುವ ಈ ಕೆಲಸವನು ನಿನಗಿಂದು ಮಾಡುತ್ತೇನೆ! (ಬಸವಯ್ಯನೆಡೆಗೆ ತಿವಿಯುತ್ತಾನೆ. ಕೆಂಪಾದ ಖಡ್ಗವನ್ನು ನೋಡುತ್ತಾ) ಸಾಕು, ಇದರಿಂದ ಅವರು ಮೋಸಹೋಗುತ್ತಾರೆ.
(ನಿರೀಕ್ಷಿಸುತ್ತ ನಿಲ್ಲುತ್ತಾನೆ. ಕಣ್ಣೀರನ್ನೆಲ್ಲ ಬೇಗ ಬೇಗನೆ ಒರಸಿಕೊಳ್ಳುತ್ತಾನೆ.)

[ಪರದೆ ಬೀಳುವುದು]