[ಶಿವಮೊಗ್ಗೆಯಲ್ಲಿ ತುಂಗೆಯ ತೀರದಲ್ಲಿ ಹೈದರನ ಸೇನೆಯ ಶಿಬಿರ. ಪಹರಿಗಳಿಬ್ಬರೂ ಮಾತಾಡುತ್ತಿರುವರು. ಅವರಲ್ಲಿ ಒಬ್ಬನು ಮುಸಲ್ಮಾನ. ಅವನು ಹೊಗೆಬತ್ತಿ ಸೇದುತ್ತರುವನು.]
ಒಂದನೆ – ಸಾಹೇಬರೆ, ಈ ನಾಡು ಎಷ್ಟು ಚೆಲುವಾಗಿದೆ, ನೋಡಿ, ಮಾಲೆ ಮಾಲೆಗಳಾಗಿ ಹಬ್ಬಿರುವ ಆ ಹಸುರು ಮಲೆಗಳ ಹಿಂದೆ ಸೂರ್ಯ ಬಿಂಬವು ಹೇಗೆ ತಳತಳಿಸಿ ಮುಳುಗುತ್ತಿದೆ! ಅದರ ಪ್ರತಿಬಿಂಬದ ಹೊಂಬೆಳಕಿನಿಂದ ಹೊಳೆಯ ನೀರಿಗೇ ಬೆಂಕಿ ಬಿದ್ದಂತಿದೆ!
ಎರಡನೆ – (ಹೊಗೆ ಬತ್ತಿ ಸೇದಿ) ಹೌದು, ರಾಯರೆ, ನಾಡೇನೊ ಚೆಲುವಾದುದೆ! ಆದರೆ ಈ ಬೆಟ್ಟ ಗುಡ್ಡಗಳಲ್ಲಿ ಪಾಳೆಯಗಾರರನ್ನು ಗೆಲ್ಲುವುದೂ ಬಹು ಕಷ್ಟ. ನೋಡಿ, ಮೊನ್ನೆ ಆ ಚಿಕ್ಕ ಪಾಳೆಯಗಾರನನ್ನು ಹಿಡಿಯುವುದು ಕೂಡ ನಮ್ಮಿಂದಾಗದೆ ಹೋಯಿತು. ನಾಳೆ ಬಿದನೂರನ್ನು ಹಿಡಿಯುವುದು ಎಷ್ಟು ಪ್ರಯಾಸವೋ ಏನೋ? (ಹೊಗೆ ಬತ್ತಿ ಸೇದುವನು.)
ಒಂದನೆ – ಬಿದನೂರನ್ನು ಸುಲಭವಾಗಿ ಹಿಡಿಯಬಹುದು.
ಎರಡನೆ – ಅದೂ ಮಲೆನಾಡಲ್ಲವೇ?
ಒಂದನೆ – ಆದರೇನು? ಅಲ್ಲಿ ಎರಡು ಪಂಗಡಗಳಾಗಿವೆ. ಮಂತ್ರಿಗಳು ರಾಜಕುಮಾರರು ಎಲ್ಲರೂ ನಮಗೆ ಸಹಾಯಮಾಡುವರು ಜನಗಳಿಗೂ ರಾಣಿಯನ್ನು ಕಂಡರಾಗುವುದಿಲ್ಲವಂತೆ. ಅಲ್ಲಿ ನಮ್ಮ ಕಡೆಯ ಗೂಢಚಾರರಾಗಿರುವ ರಾಮರಾಯರಿಲ್ಲವೇ? ರಂಗದಾಸರನ್ನು ಕಳುಹಿಸಿದವರೂ ಅವರೇ, ಆ ಕಾಗದವನ್ನೂ ನೋಡಿಕೊಂಡೇ ನಮ್ಮ ದೊರೆಗಳು ತಮ್ಮ ಜೈತ್ರಯಾತ್ರೆಯ ಮುಖವನ್ನು ಇತ್ತಕಡೆಗೆ ತಿರುಗಿಸಿದ್ದು.
ಎರಡನೆ – ಇಲ್ಲಿ ಬೀಡು ಬಿಟ್ಟಾಗಲೇ ಎರಡು ದಿನಗಳಾದುವು. ಇನ್ನು ಎಷ್ಟುದಿನ ಹೀಗೆಯೇ ಕುಳಿತಿರುವುದು?
ಒಂದನೆ – ಆ ಚಿಂತೆ ಬೇಡ. ನಾಳೆಯೇ ಹೊರಡಬಹುದು. ಇವತ್ತು ಬಿದನೂರಿನ ರಾಜಪುತ್ರರೇ ಬಂದಿದ್ದಾರಂತೆ ಇಲ್ಲಿಗೆ.
ಎರಡನೆ – ಯಾವಾಗ ಬಂದರು?
ಒಂದನೆ – ಆಗಲೇ ಬಂದರಂತೆ. ನಮ್ಮ ದೊರೆಗಳೊಡನೆ ಶಿಬಿರದಲ್ಲಿ ಮಾತಾಡುತ್ತಿದ್ದಾರೆ. ನಮ್ಮ ಸೇನಾಪತಿಗಳೂ ಅಲ್ಲಿಯೇ ಇದ್ದಾರೆ.
ಎರಡನೆ – ರಾಯರೇ, ಹಾಗಾದರೆ ನಮಗೆ ಬಿದನೂರಿನಲ್ಲಿ ಬೇಕಾದಷ್ಟು ಬೇಟೆ ಸಿಕ್ಕಬಹುದು! ಅಲ್ಲವೇ?
ಒಂದನೆ – ಅದಕ್ಕೆ ಅವಕಾಶವಿಲ್ಲ.
ಎರಡನೆ – ಹಾಗೆಂದರೇನು? ನಾವು ಗೆಲ್ಲಲಾರೆವೇ?
ಒಂದನೆ – ಗೆಲ್ಲುತ್ತೇವೆ! ಆದರೆ ರಾಜಕುಮಾರರಿಗಾಗಿ ನಾವು ರಾಜ್ಯಗೆಲ್ಲುವುದರಿಂದ ಲೂಟಿಗೀಟಿಗವಕಾಶವಿಲ್ಲ.
ಎರಡನೆ – ಹಾಗಾದರೆ ಪ್ರಯೋಜನ?
ಒಂದನೆ – ಒಳ್ಳೆಯ ಹೆಸರು ಬರುತ್ತದೆ.
ಎರಡನೆ – ಇದೊಳ್ಳೆಯ ಮಾತು! ಹೆಸರಿಂದೇನು ಹೊಟ್ಟೆ ತುಂಬುತ್ತದೆಯೇ?
ಒಂದನೆ – ಹೈದರಾಲಿಯವರಿಗೆ ಕಪ್ಪ ಸಿಕ್ಕುವುದಿಲ್ಲವೇ?
ಎರಡನೆ – ನಮಗೆ?
ಒಂದನೆ – ನಮಗೂ ಬಹುಮಾನಗಳು ದೊರಕಬಹುದು.
ಎರಡನೆ – (ಬೆಚ್ಚಿ ) ಅದೇನು ಸದ್ದು?
ಒಂದನೆ – (ಆಲಿಸಿ) ಗೊರಸಿನ ಸದ್ದು! ಇತ್ತ ಕಡೆಗೆ ಬರುತ್ತಿದೆ!
ಎರಡನೆ – (ಹೊಗೆಬತ್ತಿ ಬಿಸುಟು) ಸಿದ್ಧರಾಗಿ ನಿಲ್ಲಿ!
(ಇಬ್ಬರೂ ಕತ್ತಿಗಳನ್ನೂ ಹಿರಿದು ಸಿದ್ಧರಾಗಿ ನಿಲ್ಲುತ್ತಾರೆ.)
ಒಂದನೆ – (ನೋಡಿ) ಒಬ್ಬನೆ ಸವಾರ! ಎಷ್ಟು ಜೋರಾಗಿ ಬರುತ್ತಿದ್ದಾನೆ!
ಎರಡನೆ – (ಹಣೆಯ ಮೇಲೆ ಕೈಯಿಟ್ಟು ನೋಡಿ) ಮುದುಕನಲ್ಲವೇ?
ಒಂದನೆ – ಹೌದು, ಯಾರೋ ಬಿದನೂರು ಸಂಸ್ಥಾನದ ದೊಡ್ದ ಅಧಿಕಾರಿಯಿರಬೇಕು.
(ಇಬ್ಬರೂ ಕತ್ತಿಗಳನ್ನು ಎತ್ತಿಹಿಡಿದು)
ಒಂದನೆ
ಎರಡನೆ} – ನಿಲ್! ನಿಲ್!
(ಲಿಂಗಣ್ಣನ ಪ್ರವೇಶ)
ಲಿಂಗಣ್ಣ – ಹೈದರಾಲಿಯವರಿಗೆ ಜಯವಾಗಲಿ!
(ಪಹರೆಗಳು ಕತ್ತಿ ಇಳಿಸಿ)
ಒಂದನೆ – ಯಾರು ನೀವು?
ಎರಡನೆ – ಒಳಗೆ ಹೋಗಲು ಅಪ್ಪಣೆಯಿಲ್ಲ.
ಲಿಂಗಣ್ಣ – ನಾವು ಬಿದನೂರು ಸಂಸ್ಥಾನದ ಮಂತ್ರಿಗಳು. ಹೈದರಾಲಿಯವರಿಗೆ ಕೊಡುವ ಪತ್ರವೊಂದಿದೆ. ತಡಮಾಡಿದರೆ ಪ್ರಮಾದವಾಗಬಹುದು. ನಾನು ಮಹಾರಾಜರನ್ನೀಗಲೆ ನೋಡಬೇಕು!
ಒಂದನೆ – ಸ್ವಾಮಿ, ನಿಮ್ಮ ರಾಜಕುಮಾರರು ನಮ್ಮ ದೊರೆಗಳೊಡನೆ ಏಕಾಂತದಲ್ಲಿದ್ದಾರೆ. ಈಗ ನೋಡಲು ಅವಕಾಶವಿಲ್ಲ.
ಲಿಂಗಣ್ಣ – ಏನು? ನಮ್ಮ ರಾಜಕುಮಾರರೆ?
ಒಂದನೆ – ಹೌದು, ನಿಮ್ಮ ರಾಜಕುಮಾರ ಬಸವಯ್ಯನವರು!
ಲಿಂಗಣ್ಣ – ಇದೇನೋ ವಿಚಿತ್ರವಾಗಿದೆ! ದಯಮಾಡಿ ಒಳಗೆ ಬಿಡಿ; ಹಿರಿಯ ಕಾರ್ಯವೊಂದಿದೆ.
ಎರಡನೆ – ಯಾರನ್ನೂ ಒಳಗೆ ಬಿಡಬಾರದೆಂದು ಅಪ್ಪಣೆಯಾಗಿದೆ.
ಲಿಂಗಣ್ಣ – ಹಾಗಾದರೆ ಈ ಪತ್ರವನ್ನಾದರೂ ಅವರಿಗೆ ಕೊಟ್ಟು ಏನು ಹೇಳುವರೊ ನೋಡಿ. ನಿಮ್ಮಿಂದ ಮಹದುಪಕಾರವಾಗುತ್ತದೆ. ನಿಮಗೆ ಬಹುಮಾನ ದೊರೆಯುತ್ತದೆ!
ಒಂದನೆ
ಎರಡನೆ} – ಇತ್ತ ಕೊಡಿ! ಇತ್ತ ಕೊಡಿ!
(ಇಬ್ಬರೂ ಕೈನೀಡುವರು. ಮುಸಲ್ಮಾನ್ ಪಹರಿ ಕಾಗದವನ್ನು ತೆಗೆದುಕೊಂಡು ಹೋಗುತ್ತಾನೆ.)
ಲಿಂಗಣ್ಣ – ನಮ್ಮ ರಾಜಕುಮಾರ ಬಸವಯ್ಯನವರು ಬಂದಿದ್ದಾರೆಯೆ?
ಒಂದನೆ – ಹೌದು ಸ್ವಾಮಿ, ದೊರೆಗಳೊಡನೆ ಮಾತಾಡುತ್ತಿದ್ದಾರೆ.
ಲಿಂಗಣ್ಣ – (ಸ್ವಗತ) ಅಯ್ಯೋ ಪಾಪಿ ಶಿವಯ್ಯ! ಇದಕ್ಕಾಗಿಯೆ ಘೋರ ಕೃತ್ಯವನೆಸಗಿದೆಯಾ? ಇರಲಿ! ಲಿಂಗಣ್ಣನಿಂದ ಪಾರಾಗಬಲ್ಲೆಯಾ!
ಒಂದನೆ – ಉತ್ತರ ಬರುವ ತನಕ ವಿಶ್ರಮಿಸಿಕೊಳ್ಳಿ, ಸ್ವಾಮಿ, ಬಹಳ ದಣಿದಿರುವಂತಿದೆ.
(ಲಿಂಗಣ್ಣನು ಚಿಂತಾಮಗ್ನನಾಗಿ ಬೆನ್ನಿನ ಮೇಲೆ ಕೈ ಕಟ್ಟಿಕೊಂಡು ನಿಡುಸುಯ್ಯುತ್ತ ತಿರುಗಾಡುವನು. ಪಹರಿಯು ವಿಸ್ಮಯದಿಂದಲೂ ಗೌರವದಿಂದಲೂ ಅವನನ್ನು ನೋಡುತ್ತಿರುವನು.)
[ಪರದೆ ಬೀಳುವುದು]
Leave A Comment