[ತುಂಗಾ ತೀರದಲ್ಲಿ ಹೈದರಾಲಿಯ ಸ್ವಂತ ಬೀಡು. ಶಿವಯ್ಯ ಕುಳಿತಿದ್ದಾನೆ. ಹೈದರಾಲಿಯೂ ಆತನ ಸೇನಾಪತಿ ಮಹಮ್ಮದಾಲಿಯೂ ಕುಳಿತು ಶಿವಯ್ಯನೊಡನೆ ಮಾತಾಡುತ್ತಿದ್ದಾರೆ. ಕರಣಿಕನೊಬ್ಬನು ಹೈದರನ ಪಕ್ಕದಲ್ಲಿ ಕಾಗದ ಪತ್ರಗಳನ್ನು ಕೈಲಿ ಹಿಡಿದು ನಮ್ರತೆಯಿಂದ ನಿಂತಿದ್ದಾನೆ.]

ಹೈದರಾಲಿ – ಇರಲಿ; ಆ ವಿಷಯಗಳೆಲ್ಲ ಈ ಹಿಂದೆಯೆ ನಮಗೆ ತಿಳಿದುಬಂದಿದೆ. ಮುಂದಾದುದೇನು?

ಶಿವಯ್ಯ – ಸೇನಾಪತಿ ನಿಂಬಯ್ಯನೂ ರಾಣಿ ಚೆಲುವಾಂಬೆಯೂ ಸೇರಿ ಮೋತ್ರಿಯಾದ ಲಿಂಗಣ್ಣನೊಡನೆ ಒಳಸಂಚು ನಡೆಸಿ ನನ್ನನ್ನು ಸೆರಮನೆಗೊಯ್ದರು. ಶಿವಯ್ಯನೆಂಬ ನನ್ನ ಗೆಳೆಯನೊಬ್ಬನು ಬಹಳ ಸಾಹಸ ಮಾಡಿ ಉಪಾಯದಿಂದ ರಾತ್ರಿ ಕಾರಾಗೃಹಕ್ಕೆ ನುಗ್ಗಿ ನನ್ನನ್ನು ಬಿಡಿಸಿದನು. ತಮ್ಮ ಗೂಢಚರರೆಂದು ತಾವು ಹೇಳಿದ ಆ ಸನ್ಯಾಸಿಯ ಬುದ್ಧಿವಾದದಂತೆ ನಾನೂ ಶಿವಯ್ಯನೂ ತಮ್ಮಲ್ಲಿಗೆ ಬರುತ್ತಿರಲು ದಾರಿಯಲ್ಲಿ ಲಿಂಗಣ್ಣ ಮಂತ್ರಿ ಪರಿವಾರದೊಡನೆ ಬಂದು ನಮ್ಮನ್ನು ಅಡ್ಡಗಟ್ಟಿ ಆಕ್ರಮಿಸಿದನು. ನಡೆದ ಹೋರಾಟದಲ್ಲಿ ನನ್ನ ಮಿತ್ರ ಶಿವಯ್ಯ ಗಾಯಗೊಂಡು ಕೆಳಗುರುಳಿದನು. ನಾನು ಅದೃಷ್ಟವಶದಿಂದ ತಪ್ಪಿಸಿಕೊಂಡು ತಮ್ಮನ್ನಾಶ್ರಯಿಸಲು ಬಂದೆ. ನನ್ನನ್ನು ಕಾಪಾಡಬೇಕು. ನನ್ನ ತಂದೆಯ ರಾಜ್ಯ ಅನ್ಯಾಕ್ರಾಂತವಾಗದಂತೆ ಕೃಪೆಮಾಡಬೇಕು.
(ಕೈಮುಗಿಯುವನು.)

ಮಹಮ್ಮದಾಲಿ – ಬಸವಯ್ಯನವರೆ, ನಿಮ್ಮ ಪಕ್ಷವಾಗಿ ಯಾರಿದ್ದಾರೆ ಬಿದನೂರಿನಲ್ಲಿ?

ಶಿವಯ್ಯ – ಪ್ರಜೆಗಳೆಲ್ಲರೂ ನನ್ನ ಪಕ್ಷವಾಗಿಯೆ ಇದ್ದಾರೆ. ಆದರೆ ರಾಣಿ ನಿಂಬಯ್ಯ ಲಿಂಗಣ್ಣ ಇವರ ಭಯದಿಂದ ಅಂಜಿದ್ದಾರೆ. ತಮ್ಮ ಸಹಾಯ ದೊರೆತರೆ ಎಲ್ಲವೂ ನೇರವಾಗುವುದು.

ಹೈದರಾಲಿ – ನಾವು ಸಹಾಯಮಾಡಿದರೆ ನಮ್ಮ ಅಧೀನದಲ್ಲಿರಲು ಒಪ್ಪುವಿರೊ?

ಶಿವಯ್ಯ – ಹೆಮ್ಮೆಯಿಂದ.

ಹೈದರಾಲಿ – ಈ ದಾಳಿಯ ವೆಚ್ಚವನ್ನೆಲ್ಲ ನೀವೆ ವಹಿಸಬೇಕು.

ಶಿವಯ್ಯ – ಸಂತೋಷದಿಂದ.

ಹೈದರಾಲಿ – ಪ್ರತಿವರ್ಷವೂ ಕಪ್ಪ ಸಲ್ಲಿಸಬೇಕು.

ಶಿವಯ್ಯ – ಅಪ್ಪಣೆ.

ಹೈದರಾಲಿ – ಮಹಮ್ಮದಾಲಿಯವರೆ, ಬಸವಯ್ಯನವರಿಂದ ಈ ರಾತ್ರಿಯೆ ಕರಾರು ಬರೆಯಿಸಿ.

ಮಹಮ್ಮದಾಲಿ – ಆಜ್ಞೆ! (ಶಿವಯ್ಯನಿಗೆ) ರಾಜಕುಮಾರರೆ, ನಿಮ್ಮಿಂದ ನಡೆಯಬಹುದಾದ ಸಹಾಯಗಳನ್ನೆಲ್ಲ ಮಾಡುವಿರಷ್ಟೆ?

ಶಿವಯ್ಯ – ಉತ್ಸಾಹದಿಂದ.

ಹೈದರಾಲಿ – ನಿಮ್ಮ ಕೋಟೆ ಬಹಳ ದುರ್ಗಮವಾದುದೇ?

ಶಿವಯ್ಯ – ಹೌದು, ಸಾರ್ವಭೌಮರೆ; ಆದರೆ ಗುಪ್ತದ್ವಾರಗಳಿವೆ. ಅವುಗಳೆಲ್ಲ ನನಗೆ ಗೊತ್ತು.

ಮಹಮ್ಮದಾಲಿ – ನಿಮ್ಮ ಸೈನ್ಯದ ಸಂಖ್ಯೆ?

ಶಿವಯ್ಯ – ಎಂಟು ಸಾವಿರ. ಆದರೆ ಅವರಲ್ಲಿ ಅನೇಕರು ನನ್ನ ಕಡೆಗಿದ್ದಾರೆ. ನಾವು ಕೋಟೆಯನ್ನು ಮುತ್ತಿದರೆ ನಮಗೇ ಸಹಾಯವಾಗುವರು.

ಹೈದರಾಲಿ(ಮಹಮ್ಮದಾಲಿಗೆ) ಇಲ್ಲಿಂದ ನಾವೆಂದು ಹೊರಡಬಹುದು?

ಮಹಮ್ಮದಾಲಿ – ನಾಳೆಯೇ ಹೊರಡಬೇಕು, ಮಹಾಸ್ವಾಮಿ.

ಶಿವಯ್ಯ – ಹೌದು, ತಡಮಾಡಿದರೆ ಶತ್ರು ಬಲಗೊಳ್ಳುತ್ತಾನೆ.
(ಪಹರಿ ಕಾಗದದೊಡನೆ ಬಂದು ಸಲಾಂ ಮಾಡುವನು.)

ಮಹಮ್ಮದಾಲಿ – ಏನು ಸಮಾಚಾರ, ಸಯ್ಯದ್?

ಪಹರಿ – ಮಹಾಸ್ವಾಮಿ, ರಾಹುತನೊಬ್ಬನು ಬಿದನೂರಿಂದ ಬಂದಿದ್ದಾನೆ. ದೊರೆಗಳನ್ನು ನೋಡಬೇಕೆಂದು ಹೇಳಿದನು. ಏಕಾಂತದಲ್ಲಿದ್ದಾರೆ ಎನಲು ಈ ಕಾಗದವನ್ನು ತಮಗೆ ನಿವೇದಿಸುವಂತೆ ಹೇಳಿ ಕೊಟ್ಟನು.
(ಪತ್ರವನ್ನು ಕೊಡುತ್ತಾನೆ. ಮಹಮ್ಮದಾಲಿ ಅದನ್ನು ತೆಗೆದುಕೊಂಡು ಹೈದರಾಲಿಗೆ ಕೊಡುತ್ತಾನೆ. ಕರಣಿಕನು ಅದನ್ನು ಹೈದರನ ಕಿವಿಯಲ್ಲಿ ಓದುತ್ತಿರಲು ಮೊದಲಿಂದಲೂ ಬೆಚ್ಚಿ ಎಲ್ಲವನ್ನೂ ಉದ್ವಿಗ್ನನಾಗಿ ನೋಡುತ್ತಿದ್ದ ಶಿವಯ್ಯ ಮಾತಾಡುತ್ತಾನೆ.)

ಶಿವಯ್ಯ – ಸಾರ್ವಭೌಮರೆ, ಮತ್ತೆ ಇದೇನೋ ಪಿತೂರಿ ಇರಬೇಕು!

ಮಹಮ್ಮದಾಲಿ – ಇರಲಿ, ರಾಜಕುಮಾರರೆ, ನೀವು ಭಯಪಡಬೇಡಿ. ಇಂತಹ ನೂರಾರು ತಳ ತಂತ್ರಗಳನ್ನು ಬಲ್ಲವರು ನಮ್ಮ ದೊರೆ.

ಹೈದರಾಲಿ(ಪತ್ರವನ್ನು ಕರಣಿಕನಿಂದ ತೆಗೆದುಕೊಂಡು ಮಹಮ್ಮದಾಲಿಗೆ) ಇದೇನೊ ವಿಚಿತ್ರವಾಗಿದೆ!

ಮಹಮ್ಮದಾಲಿ – ಪತ್ರ ಯಾರಿಂದ ಬಂದುದು?

ಹೈದರಾಲಿ – ನಮ್ಮ ರಾಮರಾಯರಿಂದ. ನೀವೂ ನೋಡಿಕೊಳ್ಳಿ. (ಕೊಡುತ್ತಾನೆ. ಮಹಮ್ಮದಾಲಿ ಓದುತ್ತಿರೆ) ಬಸವಯ್ಯನವರೆ, ಆ ಸನ್ಯಾಸಿ ನಿಮ್ಮ ಕೈಗೇನಾದರೂ ಪತ್ರ ಬರೆದು ಕೊಟ್ಟಿದ್ದರೇ?

ಶಿವಯ್ಯ(ಬೆದರಿದಂತೆ)  ಹೌದು, ಪ್ರಭೂ. ಅದು ನನ್ನ ಸ್ನೇಹಿತ ಶಿವಯ್ಯನ ಕೈಲಿತ್ತು. ಆತನನ್ನು ಲಿಂಗಣ್ಣ ಮಂತ್ರಿ ಹಿಡಿದಾಗ ನಾನು ತ್ವರೆಯಿಂದ ತಲೆ ತಪ್ಪಿಸಿಕೊಂಡು ಬಂದೆ. ಪತ್ರ ಶತ್ರುಗಳ ಕೈಗೆ ಬಿದ್ದಿರಬೇಕು.

ಮಹಮ್ಮದಾಲಿ – ಪ್ರಭೂ, ಬಸವಯ್ಯನವರು ಚೆನ್ನಾಗಿ ಊಹಿಸಿದ್ದಾರೆ. ಶತ್ರು ಈ ಪತ್ರದ ಸಹಾಯದಿಂದ ಪಿತೂರಿ ನಡೆಸಲು ಹೊರಟಿದ್ದಾನೆ. ಇದನ್ನು ತಂದವನಿಗೆ ಮರಣ ದಂಡನೆಯನ್ನೇ ವಿಧಿಸಬೇಕು.

ಹೈದರಾಲಿ – ಇರಲಿ; ವಿಚಾರಿಸಿ ನೋಡೋಣ. ಆ ರಾಹುತನನ್ನು ಬರಹೇಳಿ.

ಮಹಮ್ಮದಾಲಿ (ಪಹರಿಗೆ) ಹೋಗು, ಆ ಸವಾರನನ್ನು ಕರೆದುಕೊಂಡು ಬಾ.
(ಪಹರಿ ಹೋಗುತ್ತಾನೆ.)

ಶಿವಯ್ಯ – ಚಕ್ರವರ್ತಿಗಳೆ, ಏನು ಭಯಂಕರವಾದ ಪಿತೂರಿ ಹೂಡುವರೊ ನಾನರಿಯೆ. ರಾಜತಂತ್ರ ವಿಶಾರದರು ತಾವು. ನನ್ನನ್ನು ಪೊರೆಯಬೇಕು. ಬೇಟೆನಾಯಿಗಳಟ್ಟಿದ ಮೊಲದ ಮರಿಯಂತೆ ತಮ್ಮಲ್ಲಿಗೆ ಬಂದಿದ್ದೇನೆ. ತಾವು ಕಾಪಾಡಬೇಕು,ನನ್ನ ಭಾಗದ ದೇವರಾಗಿ.

ಹೈದರಾಲಿ – ಇರಲಿ; ರಾಜಕುಮಾರರೆ, ಭಯಪಡಬೇಡಿ. ನಾವು ಸತ್ಯ ಪಕ್ಷಪಾತಿಗಳು.ಸತ್ಯಕ್ಕೆ ಸೋಲಿಲ್ಲ.
(ಪಹರಿಯೊಡನೆ ಲಿಂಗಣ್ಣಮಂತ್ರಿ ಗಂಭೀರವಾಗಿ ಪ್ರವೇಶಿಸುತ್ತಾನೆ. ಶಿವಯ್ಯ ದಿಗಿಲು ಬೀಳುತ್ತಾನೆ.ಲಿಂಗಣ್ಣಮಂತ್ರಿ ಹೈದರಾಲಿ ಮಹಮ್ಮದಾಲಿಗಳಿಗೆ ಕೈ ಮುಗಿಯುತ್ತಾನೆ. ಹೈದರಾಲಿ ಗೌರವದಿಂದ ಪ್ರತಿಮಸ್ಕಾರ ಮಾಡುತ್ತಾನೆ. ಮಹಮ್ಮದಾಲಿ ಆಗಂತುಕನನ್ನೇ ಸ್ವಲ್ಪ ಕ್ರೋಧಮಿಶ್ರವಾದ ತಿರಸ್ಕಾರ ದೃಷ್ಟಿಯಿಂದ ನೋಡುತ್ತಿರುತಾನೆ. ಲಿಂಗಣ್ಣನು ಶಿವಯ್ಯನ ಕಡೆ ದುರುದುರುನೆ ಎವೆಯಿಕ್ಕದೆ ನೋಡುತ್ತಾನೆ. ಅದುವರೆಗೂ ಲಿಂಗಣ್ಣನನ್ನೇ ಬೆಚ್ಚುಗಣ್ಣಿನಿಂದ ನೋಡುತ್ತಿದ್ದ ಶಿವಯ್ಯ ಆಗ ತಲೆ ಬಾಗುತ್ತಾನೆ. ಹೈದರಾಲಿ ಇದೆಲ್ಲವನ್ನೂ ಅವಲೋಕಿಸಿ)

ಹೈದರಾಲಿ – ನೀವು ಬಿದನೂರಿನಿಂದ ಬಂದವರೋ?

ಲಿಂಗಣ್ಣ(ಧೀರವಾಣಿಯಿಂದ) ಹೌದು, ಸರ್ವಾಧಿಕಾರಿಗಳೆ!

ಹೈದರಾಲಿ – ಬನ್ನಿ, ಕುಳಿತುಕೊಳ್ಳಿ.

ಲಿಂಗಣ್ಣ – ಅಪ್ಪಣೆ. (ವಂದನೆಯನ್ನು ತಲೆಬಾಗಿ ಸೂಚಿಸಿ ಕೂರುತ್ತಾನೆ.)

ಹೈದರಾಲಿ – ಬಸವಯ್ಯನವರೆ, ಇವರಾರು? (ಲಿಂಗಣ್ಣ ವಿಸ್ಮಿತನಾಗುತ್ತಾನೆ.)

ಶಿವಯ್ಯ – ಇವರೇ ಆ ಲಿಂಗಣ್ಣ ಮಂತ್ರಿಗಳು.

ಮಹಮ್ಮದಾಲಿ – ಓಹೋ, ಪಿತೂರಿ ನಡೆಸಲು ತಲೆಯೇ ಮುಂದೆ ನುಗ್ಗಿದೆ!

ಲಿಂಗಣ್ಣ – ಮಹಾಸ್ವಾಮಿ, ಇವನು ಬಸವಯ್ಯನಲ್ಲ. ರಾಜಕುಮಾರ ಬಸವಯ್ಯನನು ನಡುದಾರಿಯಲ್ಲಿ ಮೋಸದಿಂದ ಕೊಲೆಮಾಡಿ ಬಂದಿರುವ ಶಿವಯ್ಯನಿವನು!

ಶಿವಯ್ಯ (ನಗುವನ್ನು ನಟಿಸಿ) ಸೇನಾಪತಿಗಳೆ, ನೋಡಿ; ನಾನು ಹೇಳಿದ್ದು ನಿಜವಾಗುತ್ತಿದೆ. (ಲಿಂಗಣ್ಣನಿಗೆ ) ಏನು, ಮಂತ್ರಿಗಳೆ, ಅಂತೂ ಸೆರೆ ಸಿಕ್ಕಿದ ಶಿವಯ್ಯನನ್ನು ಕೊಲೆಮಾಡಿಬಿಟ್ಟಿರೇನು? ಅಯ್ಯೋ, ಶಿವಯ್ಯ, ನನಗಾಗಿ ನೀನು ಮಡಿದೆಯಾ? (ಶೋಕಿಸುತ್ತಾನೆ.)

ಹೈದರಾಲಿ – ಮಂತ್ರಿಗಳೆ, ನಿಮಗೆ ಈ ಪತ್ರವೆಲ್ಲಿ ಸಿಕ್ಕಿತು?

ಲಿಂಗಣ್ಣ – ಧರ್ಮಾವತಾರ, ನನ್ನ ಬಿನ್ನಹವನ್ನು ಲಾಲಿಸಬೇಕು. ನಾನು ಬಿದನೂರು ಸಂಸ್ಥಾನದ ಮಂತ್ರಿ. ಶಿವೈಕ್ಯರಾದ ಬಸವನಾಯಕರಿಗೂ ಅವರ ಪುತ್ರನಾದ ರಾಜಕುಮಾರ ಬಸವಯ್ಯನಿಗೂ ಆಪ್ತ.

ಶಿವಯ್ಯ – ಇಲ್ಲ, ಮಹಾಸ್ವಾಮಿ. ನಮ್ಮ ತಂದೆಗೆ ಇವರು ಆಪ್ತರಾಗಿರಲಿಲ್ಲ. ಅವರನ್ನು ಕೊಲೆ ಮಾಡಿದವರಲ್ಲಿ ಇವರೂ ಒಬ್ಬರು. ನನಗೂ ಇವರು ಆಪ್ತರಲ್ಲ. ಏನೋ ಕಪಟ ಹೇಳುತ್ತಿದ್ದಾರೆ.

ಲಿಂಗಣ್ಣ(ದೃಢವಾಣಿಯಿಂದಶಿವಯ್ಯ, ನಿನ್ನನ್ನು ನಂಬಿ ಒಡನೆಬಂದ ರಾಜಕುಮಾರನನ್ನು ಹಾದಿಯಲ್ಲಿ ಕೊಂದು ಈಗ  ನಾನೇ ರಾಜಕುಮಾರನೆಂದು ಹೇಳಿಕೊಳ್ಳುತ್ತಿದ್ದೀಯಾ?

ಮಹಮ್ಮದಾಲಿ(ಶಿವಯ್ಯಗೆ) ಬಸವಯ್ಯನವರೆ, ಸ್ವಲ್ಪ ಸುಮ್ಮನಿರಿ.

ಹೈದರಾಲಿ – ಹೇಳಿ ಮಂತ್ರಿಗಳೆ.

ಲಿಂಗಣ್ಣ – ಸ್ವಾಮಿ, ಚೆಲುವಾಂಬೆ ನಿಂಬಯ್ಯರು ನನ್ನನ್ನೂ ರಾಜಕುಮಾರ ಬಸವಯ್ಯನನೂ ಹಿಡಿದು ಸೆರೆಯಲ್ಲಿಡಿಸಿದರು. ಈ ಶಿವಯ್ಯನೂ ಹೊನ್ನಯ್ಯನೆಂಬೊಬ್ಬ ರಾಜಪುತ್ರನ ಮಿತ್ರನೂ ಸೇರಿ ನಮ್ಮಿಬ್ಬರನ್ನೂ ರಾತ್ರಿ ಸೆರೆಯಿಂದ ಬಿಡಿಸಿದರು. ನಾನಿದ್ದ ಸೆರೆಗೆ ಹೊನ್ನಯ್ಯನು ಬಂದು ನನ್ನನ್ನು ಕರೆದುಕೊಂಡು ಹೊರಗೆ ಬಂದನು. ಹೊರಗೆ ಬಂದು ನೋಡುವಲ್ಲಿ ತೃಣಾನಂದ ಪರಮಹಂಸರೆಂಬ ಸನ್ಯಾಸಿಗಳು ತೇಜಿಗಳನ್ನು ಸಿದ್ಧಪಡಿಸಿ ನಮಗಾಗಿ ಕಾಯುತ್ತಿದ್ದರು. ಅಲ್ಲಿ ಶಿವಯ್ಯ ಬಸವಯ್ಯರಿಗಾಗಿ ಬಹಳ ಹೊತ್ತು ಕಾದೆವು. ಅವರು ತೋರದಿರಲು ಸನ್ಯಾಸಿಗಳ ಸಲಹೆಯಂತೆ ನಾನೂ ಹೊನ್ನಯ್ಯನೂ ಕುದುರುಗಳನ್ನೇರಿ ಮುಂದೆ ಹೊರಟೆವು. ಸ್ವಲ್ಪಹೊತ್ತು ಕಾಡಿನ ಕತ್ತಲಲ್ಲಿ ದಾರಿಗಾಣದೆ ವಕ್ರಪಥದಲ್ಲಿ ತೊಳಲಿದೆವು. ಆಗ ನಮ್ಮ ಹಿಂದಿನಿಂದ ಬಂದ ಈ ಶಿವಯ್ಯನೂ ಅವನಿಂದ ಕೊಲೆಯಾದ ಬಸವಯ್ಯನೂ ನಮ್ಮನ್ನು ಮುಂಚಿ ಮುಂದೆ ನಡೆದರು. ಸ್ವಲ್ಪಹೊತ್ತು ಬನಗತ್ತಲೆಯಲ್ಲಿ ತೊಳಲಿದ ಮೇಲೆ ನಮಗೆ ಸರಿದಾರಿ ಸಿಕ್ಕಿತು. ನಾನೂ ಹೊನ್ನಯ್ಯನೂ ಬರುತ್ತಿರಲು ಕುಂಸಿಯ ಬಳಿ ಒಂದು ಕಾಡಿನಲ್ಲಿ ಮಾನವ ರೋದನ ಕೇಳಿಸಿತು. ಬೇಗಬೇಗನೆ ತೇಜಿಗಳನ್ನು ಚಪ್ಪರಿಸಿ ದೌಡಾಯಿಸಿ ಬಂದೆವು. ಅಲ್ಲಿ ಒಂದೆಡೆ ಎರಡು ಕುದುರೆಗಳು ನಿಂತಿದ್ದುದನ್ನು ಕಂಡು ಗಾಬರಿಯಿಂದ ಕೆಳಗಿಳಿದೆವು. ಪಕ್ಕದಲ್ಲಿದ್ದ ಒಂದು ಮಹಾಪ್ರಪಾತದಿಂದ ರೋದನ ಕೇಳಿ ಬರುತ್ತಿತ್ತು. ಬಂಡೆಯನ್ನೇರಿ ಪ್ರಪಾತವನ್ನು ನೋಡುತ್ತಿದ್ದಾಗ ಬಸವಯ್ಯನ ತಲೆಯುಡೆ ಆ ಅರೆಯ ಮೇಲಿದ್ದುದ್ದನ್ನು ಕಂಡು ಏನೋ ಪ್ರಮಾದ ನಡೆದಿರಬೇಕೆಂದು ತಿಳಿದ ಇಬ್ಬರೂ ಪ್ರಪಾತದೊಳಗೆ ಇಳಿದೆವು. ಅಯ್ಯೋ, ಏನು ನೋಡುವುದರಲ್ಲಿ! ಬಸವಯ್ಯನು ಜಜ್ಜರಿತ ದೇಹವಾಗಿ ಬಿದ್ದು ಗೋಳಿಡುತ್ತಿದ್ದನು. ಅವನಿಂದ ಎಲ್ಲಾ ಗೊತ್ತಾಯಿತು. ಈ ಶಿವಯ್ಯ ಅವನನ್ನು ಕೆಳಗೆ ತಳ್ಳಿ. ನಾವು ಅಲ್ಲಿಗೆ ಬರಲು ಎಲ್ಲಿಯೋ ಅವಿತು ಕೊಂಡಿದ್ದು, ನಾವು ಕಂದರದೊಳಗಿಳಿಯಲು ಅಲ್ಲಿದ್ದ ಕುದುರೆಯೊಂದನ್ನೇರಿ ಇಲ್ಲಿಗೆ ಬಂದಿದ್ದಾನೆ. ಏಕೆಂದರೆ, ಪುನಃ ನಾವು ಅಲ್ಲಿಗೆ ಬಂದು ನೋಡಿದಾಗ ಅಲ್ಲಿ ಒಂದೇ ಕುದುರೆಯಿತ್ತು. ಬಸವಯ್ಯನು ಸಾಯುವಾಗ ನನಗೆ ಈ ಪತ್ರವನ್ನು ಕೊಟ್ಟು ತಮ್ಮೆಡೆಗೆ ಹೋಗುವಂತೆ ಹೇಳಿದನು. ರಾಜಕುಮಾರನ ಮೃತದೇಹವನ್ನು ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದಾಗಲೇ ಖುರಪುಟಧ್ವನಿ ಕೇಳಿಸಿತು. ನಮ್ಮನ್ನು ಹಿಡಿಯಲು ನಿಂಬಯ್ಯನು ಅಟ್ಟಿದ ಆಳುಗಳೆಂದು ಊಹಿಸಿದೆವು.ಮಿತ್ರನಾದ ರಾಜಕುಮಾರನ ದೇಹಸಂಸ್ಕಾರದಲ್ಲಿ ಮನಸಿಟ್ಟು, ನನ್ನನ್ನು ಮಾತ್ರ ತಮ್ಮಲ್ಲಿಗೆ ಓಡುವಂತೆ ಹೇಳಿ, ಹೊನ್ನಯ್ಯನು ಏನೋ ಉಪಾಯ ಮಾಡುವೆನು ಎಂದು ಅಲ್ಲಿಯೆ ನಿಂತನು. ಅವನ ಗತಿ ಏನಾಯಿತೊ ನಾನರಿಯೆ! ನೀವು ಈ ಶಿವಯ್ಯನನ್ನು ‘ಬಸವಯ್ಯ’ ‘ರಾಜಕುಮಾರ’ ಎಂದು ಸಂಬೋಧಿಸುವುದನ್ನು ನೋಡಿದರೆ ಇವನು ನಿಮ್ಮೆಲ್ಲರನ್ನೂ ಮೋಸಗೋಳಿಸಿ ತಾನೇ ಬಸವಯ್ಯನೆಂದು ಹೇಳಿಕೊಂಡಿರಬೇಕೆಂದು ತೋರುತ್ತದೆ. ಸರ್ವಾಧಿಕಾರಿಗಳೆ, ಈಶ್ವರ ಸಾಕ್ಷಿಯಾಗಿ ನಾನು ಸತ್ಯವನ್ನೆಲ್ಲ ತಮ್ಮೆದುರು ಬಿಚ್ಚಿಟ್ಟಿದ್ದೇನೆ, ಪರಾಮರ್ಶಿಸಬೇಕು.

ಹೈದರಾಲಿ – ಮಹಮ್ಮದಾಲಿಯವರೆ, ಕಥೆಯೇನೊ ಬಹಳ ಸ್ವಾರಸ್ಯವಾಗಿದೆ. ಬಸವಯ್ಯನವರೆ, ಇದಕ್ಕೆ ನೀವೇನು ಹೇಳುತ್ತೀರಿ?

ಶಿವಯ್ಯ – ಮಹಾಪ್ರಭೂ, ಇವರು ಹೇಳಿದುದೆಲ್ಲ ಸುಳ್ಳು. ಕೈಸೆರೆ ಸಿಕ್ಕಿದ ಶಿವಯ್ಯನನ್ನು ಕೊಂದೇ ಈ ಕಾಗದ ತಂದಿದ್ದಾರೆ, ಪಿತೂರಿ ನಡೆಸಲೆಂದು! ನಿಜವೆಲ್ಲವನ್ನೂ ನಾನು ತಮ್ಮಲ್ಲಾಗಲೆ ಅರುಹಿದ್ದೇನೆ. ಇವರ ಒಳಸಂಚಿಗೆ ಸಿಕ್ಕಿ ತೀರಿಹೋದ ಬಸವನಾಯಕರ ಏಕಮಾತ್ರ ಪುತ್ರನಾದ ಬಸವಯ್ಯ ನಾನೆ! ನನ್ನ ಮೇಲೆ ಕೃಪೆದೋರಬೇಕು.

ಲಿಂಗಣ್ಣ – ಎಲವೋ ಶಿವಯ್ಯ, ಇದಕ್ಕಾಗಿಯೆ ನಮ್ಮನ್ನು ಸೆರೆಯಿಂದ ಬಿಡಿಸಿದೆಯಾ?

ಶಿವಯ್ಯ – ಸುಳ್ಳಾಡಬೇಡಿ. (ಹೈದರನಿಗೆ) ಮಹಾಪ್ರಭೂ, ಇವರು ಸೆರೆಯಲ್ಲಿದ್ದುದೆ ಸುಳ್ಳು!

ಮಹಮ್ಮದಾಲಿ – ಲಿಂಗಣ್ಣ ಮಂತ್ರಿಗಳೆ, ಇಷ್ಟು ವಯಸ್ಸಾಗಿಯೂ ನೀವಿಂತಹ ಘೋರಕೃತ್ಯ ಈಗ ಪಿತೂರಿಗೆ ಹೊರಟಿದ್ದೀರಾ? ನಿಮಗೆ ಮರಣದಂಡನೆಯೆ ತಕ್ಕ ಪ್ರಾಯಶ್ವಿತ್ತವಾಗಬೇಕು.

ಲಿಂಗಣ್ಣ – ಸೇನಾಪತಿಗಳೆ, ವೀರರು ಸಾಯಲಂಜುವುದಿಲ್ಲ. ಸತ್ಯಕ್ಕಾಗಿ ಸಾಯುವುದೆ ನನಗೆ ಶ್ರೇಯಸ್ಕರ. – ಇವನು ಬಸವಯ್ಯನಲ್ಲ! ಆತನ ಕೊಲೆಗಾರನಾದ ಶಿವಯ್ಯನಿವನು! ನಾನು ನಿಮ್ಮಲ್ಲಿಗೇ ಬಂದಿದ್ದೇನೆ. ವಿಚಾರ ಮಾಡಿ ನನ್ನದು ಸುಳ್ಳಾಗಿದ್ದರೆ ಮರಣದಂಡನೆಯನ್ನೇ ವಿಧಿಸಿ.

ಮಹಮ್ಮದಾಲಿ(ಶಿವಯ್ಯನನ್ನು ತೋರಿಸಿ) ನಿಮ್ಮ ಸುಳ್ಳಿಗೆ ಇವರೇ ಸಾಕ್ಷಿ!

ಹೈದರಾಲಿ – ಇರಲಿ, ನಾನೀಗ ಸತ್ಯವನ್ನು ಗೊತ್ತುಮಾಡುತ್ತೇನೆ. ರಂಗದಾಸನನ್ನು ಬರಮಾಡಿ.

ಮಹಮ್ಮದಾಲಿ(ಪಹರೆಗೆ) ಹೋಗು, ರಂಗದಾಸರನ್ನು ಕೆರೆದುತಾ.
(ಶಿವಯ್ಯನು ಬೆಚ್ಚಿ ನಡುಗುತ್ತಾನೆ.)

ಹೈದರಾಲಿ – ಬೆದರಬೇಡಿ, ಬಸವಯ್ಯನವರೆ. ಮಂತ್ರಿಗಳ ಮಿಥ್ಯೆ ಈಗಲೆ ಹೊರಬೀಳುತ್ತದೆ.
(ಪಹರಿ ಬ್ರಹ್ಮಚಾರಿವೇಷದ ರಂಗದಾಸನೊಡನೆ ಬರುತ್ತಾನೆ. ರಂಗದಾಸನು ಹೈದರಾಲಿಗೂ ಮಹಮ್ಮದಾಲಿಗೂ ನಮಿಸಿ ಲಿಂಗಣ್ಣ ಮಂತ್ರಿಗಳ ಕಡೆ ತಿರುಗಿ)

ಬ್ರಹ್ಮಚಾರಿ – ಲಿಂಗಣ್ಣ ಮಂತ್ರಿಗಳಿಗೆ ನಮಸ್ಕಾರ!

ಲಿಂಗಣ್ಣ –  ನಮಸ್ಕಾರ.

ಬ್ರಹ್ಮಚಾರಿ(ಶಿವಯ್ಯನಿಗೆಶಿವಯ್ಯನವರೆ, ನಮಸ್ಕಾರ!

ಶಿವಯ್ಯ(ಬೆಚ್ಚಿಬಿದ್ದು) ನೀವು ನನ್ನನ್ನು ಮರೆತಂತಿದೆ. ನಾನು ಶಿವಯ್ಯನಲ್ಲ; ಬಸವಯ್ಯ.

ಬ್ರಹ್ಮಚಾರಿ(ಹಸಿತವದನನಾಗಿ) ಎಂದಿನಿಂದ, ಸ್ವಾಮಿ?

ಹೈದರಾಲಿ – ರಂಗದಾಸರೆ, ನಿಮಗೆ ಇವರಿಬ್ಬರ ಪರಿಚಯವಿದೆಯೆ?

ಬ್ರಹ್ಮಚಾರಿ – ಚೆನ್ನಾಗಿದೆ, ಮಹಾಪ್ರಭೂ! (ಲಿಂಗಣ್ಣನನು ತೋರಿಸಿ) ಇವರೇ ಮಹಾನುಭಾವರಾದ ಲಿಂಗಣ್ಣ ಮಂತ್ರಿಗಳು! (ಶಿವಯ್ಯನನ್ನು ನಿರ್ದೇಶಿಸಿ) ಇವರ ಹೆಸರು ಶಿವಯ್ಯ!

ಶಿವಯ್ಯ – ಸ್ವಾಮಿ, ಇವರಿಗೆ ನನ್ನ ಪರಿಚಯ  ಮರೆತುಹೋಗಿರಬೇಕು. ಇಲ್ಲದಿದ್ದರೆ ಇವರೂ ಪಿತೂರಿಗೆ ಸೇರಿರಬೇಕು. ಕಾಪಾಡಬೇಕು, ಮಹಾಪ್ರಭೂ!

ಮಹಮ್ಮದಾಲಿ – ಲಿಂಗಣ್ಣ ಮಂತ್ರಿಗಳೆ, ಈ ರಂಗದಾಸರ ಪರಿಚಯವಿದೆಯೆ ನಿಮಗೆ?

ಲಿಂಗಣ್ಣ – ಇವರು ರಂಗದಾಸರೆಂದು ನನಗೆ ತಿಳಿಯದು. ತೃಣಾನಂದ ಪರಮಹಂಸರ ಶಿಷ್ಯರೆಂದು ಮಾತ್ರ ಬಲ್ಲೆ.

ಹೈದರಾಲಿ(ಕೋಪದಿಂದ ಶಿವಯ್ಯನನ್ನು ನೋಡಿ) ನಮ್ಮ ಕಣ್ಣಿಗೂ ಮಣ್ಣೆರಚಲೆಂದು ಬಗೆದೆಯೋ? (ರಂಗದಾಸಗೆ) ಇವನು ಶಿವಯ್ಯನೆಂದು ಚೆನ್ನಾಗಿ ಗೊತ್ತೆ?

ಬ್ರಹ್ಮಚಾರಿ – ಹೌದು, ಮಹಾಸ್ವಾಮಿ, ನಾನು ಚೆನ್ನಾಗಿ ಬಲ್ಲೆ!

ಹೈದರಾಲಿ – ಸೇನಾಪತಿಗಳೆ, ಇನ್ನು ವಿಚಾರಣೆ ಸಾಕು. ಇವನನ್ನು ಸೆರೆಯಲ್ಲಿಡಿಸಿ. ಈ ರಾತ್ರಿಯೆ ಶೂಲಕ್ಕೇರಿಸಬೇಕು.

ಮಹಮ್ಮದಾಲಿ – ಸೈಯದ್, ಈ ಶಿವಯ್ಯನನ್ನು ಬಂಧಿಸು. (ಪಹರಿ ಶಿವಯ್ಯನಿಗೆ ಕೋಳ ಹಾಕುತ್ತಾನೆ.)

ಶಿವಯ್ಯ(ಮೊಳಕಾಲೂರಿ ದೈನ್ಯದಿಂದ) ಮಹಾಪ್ರಭೂ, ಮರೆಹೊಕ್ಕಿದ್ದೇನೆ. ತಪ್ಪಾಯ್ತು; ಕಾಪಾಡಬೇಕು! – ಲಿಂಗಣ್ಣ ಮಂತ್ರಿಗಳೆ, ರಕ್ಷಿಸಿ!

ಹೈದರಾಲಿ – ಕೊಲೆಪಾತಕಾ, ನಿನಗೆ ಮರಣವೆ ಶರಣು! . . . . ಎಳೆದುಕೊಂಡು ಹೋಗು, ಸಯ್ಯದ್.
(ಪಹರಿ ಶಿವಯ್ಯನನ್ನು ಎಳೆದುಕೊಂಡುಹೋಗುತ್ತಾನೆ.)

ಲಿಂಗಣ್ಣ – ಮಹಾಸ್ವಾಮಿ, ಅವನನ್ನು ಇಂದೇ ಶೂಲಕ್ಕೇರಿಸುವುದು ಬೇಡ. ಬಿದನೂರಿನ ಅಪರಾಧಿಗಳೆಲ್ಲ ಅವನಿಂದ ಬಯಲಿಗೆ ಬೀಳುವರು.

ಹೈದರಾಲಿ – ಆಗಲಿ, ನಿಮ್ಮ ಮಾತಿನಂತೆಯೆ ನಡೆಸುತ್ತೇನೆ. (ರಂಗದಾಸಗೆ) ರಂಗದಾಸರೆ, ಈ ವಿಚಾರವನ್ನು ಸೆರೆಗಾಹಿಗಳಿಗೆ ತಿಳಿಸಿ.
(ರಂಗದಾಸರು ಕೈಮುಗಿದು ಹೋಗುವನು.)

ಮಹಮ್ಮದಾಲಿ – ಲಿಂಗಣ್ಣ ಮಂತ್ರಿಗಳೆ, ನಾನು ತಿಳಿಯದೆ ಆಡಿದ ಕಠಿನ ವಾಕ್ಯಗಳನ್ನು ಮನ್ನಿಸಬೇಕೆಂದು ಬೇಡುತ್ತೇನೆ. ಇನ್ನುಮೇಲೆ ನೀವು ನಮ್ಮಾಪ್ತರು.

ಲಿಂಗಣ್ಣ – ತಾವು ಹಾಗೆ ಬೇಡುವುದುಂಟೆ? ಇಂತಹ ಸಮಯದಲಿ ಎಂತಹರೂ ತಪ್ಪುವರು! ತಿಳಿದವರು ಅದನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ.

ಹೈದರಾಲಿ(ಮುಗುಳ್ನಗುತ್ತ) ಮಂತ್ರಿಗಳೆ, ತಮ್ಮ ಕಾರ್ಯದಕ್ಷತೆಯ ವಿಚಾರವಾಗಿ ನಾನು ಈ ಮೊದಲೇ ಕೇಳಿದ್ದೇನೆ. ಆದ್ದರಿಂದಲೆ ನಾನು ದುಡುಕಲಿಲ್ಲ. (ಮಹಮ್ಮದಾಲಿ ನಾಚಿ ತಲೆಬಾಗುವನು.) ಅದುದಾಯಿತು. ನಾವು ನಾಳೆಯೆ ಬಿದನೂರಿಗೆ ಹೊರಡುವೆವು.

ಲಿಂಗಣ್ಣ(ದುಃಖದಿಂದ)  ಬಸವಯ್ಯನ ಸಾವಿನಿಂದ ನನ್ನ ಕೈ ಮುರಿದು ಹೋದಂತಿದೆ. ಏನಾದರೇನು? ನಮ್ಮ ರಾಜವಂಶ ಹಾಳಾಯಿತು.

ಹೈದರಾಲಿ – ದುಷ್ಟರನ್ನು ಶಿಕ್ಷಿಸುವುದಾದರೂ ಬೇಡವೆ?

ಲಿಂಗಣ್ಣ – ಅದೊಂದೇ ಇನ್ನು ನನಗುಳಿದಿರುವ ಆಕಾಂಕ್ಷೆ.

[ಪರದೆ ಬೀಳುವುದು]