[ಬಿದನೂರಿನ ಅರಮನೆಯಲ್ಲಿ ನಿಂಬಯ್ಯ, ಚೆಲುವಾಂಬೆ, ಸೋಮಯ್ಯ ಮಾತಾಡುತ್ತಿರುವರು.]

ಚೆಲುವಾಂಬೆ –  ಸೋಮಯ್ಯ, ನೀನು ಹೇಳುವುದು ಬಹಳ ವಿಚಿತ್ರವಾಗಿದೆ. ಬಸವಯ್ಯನನು ಹೊನ್ನಯ್ಯನೇ ಸಂಹರಿಸಿದನೆ?

ನಿಂಬಯ್ಯ– ನನಗೇನೋ ಸಂದೇಹವೇ. ಅವರಿಬ್ಬರೂ ಪ್ರಾಣಸ್ನೇಹಿತರಾಗಿದ್ದರು. ಇದರೊಳೇನೋ ರಹಸ್ಯವಿರಬೇಕು.

ಸೋಮಯ್ಯ – ನಾನೇ ಕಣ್ಣಾರೆ ಕಂಡಿದ್ದೇನೆ; ಹೊನ್ನಯ್ಯನು ಬಸವಯ್ಯನನು ತಿವಿದುಕೊಂಡು ರಕ್ತಮಯವಾದ ಖಡ್ಗವನ್ನು ಕೈಯಲ್ಲಿ ಹಿಡಿದುಕೊಂಡು ಭಯಾನಕವಾಗಿ ನಿಂತಿದ್ದನು. ಆ ದೃಶ್ಯವನು ನೆನೆದನೆಂದರೆ ನನಗಿನ್ನೂ ಮೈನವಿರೆದ್ದು ನಿಲ್ಲುವುದು. ಅದುವರೆಗೂ ಹೊನ್ನಯ್ಯನು ಅಂತಹ ಕಾರ್ಯದಲ್ಲಿ ಕೈಹಾಕಬಲ್ಲನೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.

ಚೆಲುವಾಂಬೆ – ಹಾಗಾದರೆ ಹೊನ್ನಯ್ಯ ಅವರೊಡನೆ ಓಡಿಹೋದವನಲ್ಲ?

ಸೋಮಯ್ಯ – ಇಲ್ಲ, ಎಂದಿಗೂ ಇಲ್ಲ. ಶಿವಯ್ಯನೇ ಕಾರಣ ಅವರಿಬ್ಬರನೂ ಸೆರೆಮನೆಯಿಂದ ಕದ್ದೊಯ್ಯಲು. ಹೊನ್ನಯ್ಯ ಸಂಪೂರ್ಣವಾಗಿ ನಿರ್ದೋಷಿ. ಮನಸಿಲ್ಲದ ಮನಸ್ಸಿನಿಂದ, ಬಿದನೂರು ಅನ್ಯಾಯವಾಗಿ ಪರರಾಜರ ಕೈವಶವಾಗುವುದಲ್ಲಾ ಎಂದು, ಆ ಕೆಲಸ ಮಾಡಿದ್ದಾನೆ. ಆತನ ದೇಶಭಕ್ತಿ ನಿರುಪಮ. ದೇಶಕ್ಕಾಗಿ ಬಾಲ್ಯ ಸ್ನೇಹಿತನನ್ನೇ ಬಲಿದಾನಮಾಡಿದ್ದಾನೆ.

ನಿಂಬಯ್ಯ – ಲಿಂಗಣ್ಣ ಶಿವಯ್ಯರೆಲ್ಲಿಗೆ ಓಡಿದರು?

ಸೋಮಯ್ಯ – ಏನೋ? ಅದು ತಿಳಿಯದಿದೆ.

ಚೆಲುವಾಂಬೆ – ಹೊನ್ನಯ್ಯನೆಲ್ಲಿ?

ಸೋಮಯ್ಯ – ರುದ್ರಯ್ಯನು ಅವನನ್ನು ಕರೆದುಕೊಂಡು ಬರುತ್ತಿದ್ದಾನೆ. ಮಿತ್ರಹತ್ಯೆ ಆತನನ್ನು ದುಃಖಸಾಗರದಲ್ಲಿ ಮುಳುಗಿಸಿಬಿಟ್ಟಿದೆ.

ಚೆಲುವಾಂಬೆ – ನಿಂಬಯ್ಯ, ಮುಂದೇನು ಕೇಡಹುದೊ ನಾನರಿಯೆ. ಲಿಂಗಣ್ಣ ಮಂತ್ರಿಗಳು ಸುಮ್ಮನೆಯೆ ಬಿಡುವರೇ? ಯಾವ ದೊರೆಯನು ಕೂಡಿ ದಂಡೆತ್ತಿ ಬರಲೆಂದು ಹೋಗಿರುವರೋ? ಆತನ ದ್ವೇಷ ಕೃಷ್ಣ ಸರ್ಪದ ದ್ವೇಷದಂತೆ ಮುಯ್ಯಿ ತೀರಿಸಿಕೊಳ್ಳದೆ ಬಿಡದು.

ನಿಂಬಯ್ಯ – ಅಹುದು; ಮುದುಕನೊಂದು ಜ್ವಾಲಾಮುಖಿ. ಆದರೂ ನಿನಗೆ ಬೆದರಿಕೆ ಬೇಡ. ಅಸುವಿರುವವರೆಗೆ ನಿನಗಾಗಿ ಹೋರಾಡುವೆನು.

ಸೋಮಯ್ಯ – ಹೊರಗಿನ ರಾಜರು ದಂಡೆತ್ತಿಬರುವ ಮಾತು ಹಾಗಿರಲಿ. ನಮ್ಮ ಜನರೇ ದಂಗೆಯೇಳುವ ಸಂದರ್ಭವಿದೆ. ಹೊನ್ನಯ್ಯನು ರಾಜಪುತ್ರನನು ಕೊಂದನೆಂಬ ಸುದ್ದಿ ಕಾಡುಕಿಚ್ಚಿನಂತೆ ಊರೊಳಗೆಲ್ಲ ಹಬ್ಬಿದೆ. ಜನರು ಉದ್ರೇಕಗೊಂಡಿದ್ದಾರೆ. ನಗರದಲ್ಲಿ ಎಲ್ಲೆಡೆಯೂ ಕೋಲಾಹಲ ಮೊಳೆದೋರುತಿದೆ. ನಾವು ಉದಾಸೀನಮಾಡಿದರೆ ಸನ್ನಿವೇಶ ದುರ್ದಮ್ಯವಾಗಬಹುದು.

ನಿಂಬಯ್ಯ – ಜನರ ಭಯವಂತಿರಲಿ, ಸೋಮಯ್ಯ; ಹೊನ್ನಯ್ಯನ ಸಮಸ್ಯೆ ನನಗೆ ದುರ್ಭೇದ್ಯವಾಗಿದೆ! ಆತನ ಮೇಲೆ ಗುಪ್ತವಾಗಿ ಕಾವಲಿಡಬೇಕು. ಅಂತಹ ಆದರ್ಶವಾದಿಗಳ ಸೌಮ್ಯತೆ ಸಿಡಿಲನಡಗಿಸಿಕೊಂಡಿರುವ ಕಾರ್ಮುಗಿಲಿನ ಗಾಂಭೀರ್ಯದಂತೆ ಅಪಾಯಕರ.

ಸೋಮಯ್ಯ – ಅವರೇ ಬರುತಿದ್ದಾರೆ.
(ರುದ್ರಯ್ಯನು ಪ್ರವೇಶಿಸುವನು. ಅವನ ಹಿಂದೆ ಹೊನ್ನಯ್ಯನು ದುಃಖಭಾರದಿಂದ ಮೆಲ್ಲಗೆ ಬರುತ್ತಾನೆ. ಹಿಂದಗಡೆ ತಿಮ್ಮಜಟ್ಟಿ ಇರುವನು.)

ಚೆಲುವಾಂಬೆ – ಬಾ ಹೊನ್ನಯ್ಯ. ನಿನ್ನಿಂದ ಮಹದುಪಕಾರವಾಗಿದೆ.

ಹೊನ್ನಯ್ಯ(ದುಃಖದಿಂದದೇವಿ, ರಾಜ್ಯದ ಶ್ರೇಯಸ್ಸಿಗಾಗಿ ಗೆಳೆಯನನು ಕೊಂದೆ. ಬಹುಜನರ ಹಿತಕ್ಕಾಗಿ ನನ್ನೆದೆಗೆ ನಾನೆ ಇರಿದುಕೊಂಡೆ. ಆದರೆ ಮಿತ್ರಹತ್ಯಾಯಾತನೆ ಪೀಡಿಸುತ್ತಿದೆ. ನಾನೆಸಗಿದುದು ಬಹು ಘೋರಕರ್ಮ.

ನಿಂಬಯ್ಯ – ಹೊನ್ನಯ್ಯ, ನೀನು ಮಾಡಿದ ಕಾರ್ಯ ಅಧರ್ಮವಲ್ಲ. ಜನ್ಮಭೂಮಿಯ ಮೇಲ್ಮೆಗಾಗಿ ಮಾಡಿದ ಕರ್ಮವಾವುದೂ ದುಷ್ಕೃತವೆಂದು ಪರಿಗಣಿತವಾಗದು. ನಿನಗಾವ ಪದವಿ ಬೇಕಾದರೂ ಅದನಿತ್ತು ಸನ್ಮಾನ ಮಾಡುವೆವು.

ರುದ್ರಯ್ಯ – ಹೊನ್ನಯ್ಯನವರ ಪರವಾಗಿ ನನ್ನದೊಂದು ಬಿನ್ನಹವಿದೆ. ಅವರು ನಾಡಿನ ಮೇಲ್ಮೆಗಾಗಿ ಗೆಳೆಯನನ್ನೇನೊ ಸಂಹರಿಸಿದರು. ಆದರೆ ಬಸವಯ್ಯನವರು ಸಾಯುವಾಗ ತಮ್ಮ ದೇಹಕ್ಕೆ ಸಂಸ್ಕಾರವೆಸಗಬೇಕೆಂದು ಬೇಡಿದರಂತೆ. ಆದ್ದರಿಂದ ರಾಜಕುಮಾರರ ಮೃತ ದೇಹವನ್ನು ಅವರಿಗೊಪ್ಪಿಸಬೇಕೆಂದು ಪ್ರಾರ್ಥನೆ.

ಚೆಲುವಾಂಬೆ – ಹೊನ್ನಯ್ಯ, ನಿನ್ನಿಷ್ಟದಂತೆ ನಡೆಯಬಹುದು.

ನಿಂಬಯ್ಯ – ಆದರೆ ಕಳೇಬರಕ್ಕೆ ಬಹಿರಂಗ ಸಂಸ್ಕಾರ ನಡೆಯಲಾಗದು. ಜನರು ಉದ್ರೇಕಗೊಳ್ಳುತ್ತಾರೆ.

ಹೊನ್ನಯ್ಯ– ಹಾಗೆಯೆ ಆಗಲಿ.

ನಿಂಬಯ್ಯ – ತಿಮ್ಮಜಟ್ಟಿ, ನೀನೂ ನೆರವಾಗು ಹೊನ್ನಯ್ಯನಿಗೆ.

ತಿಮ್ಮಜಟ್ಟಿ – ಅಪ್ಪಣೆ.

ಹೊನ್ನಯ್ಯ–  ದೇವಿ, ನಾನೀಗ ಹೊರಡುವೆನು. ನನ್ನ ಬಗೆ ಕದಡಿಹೋಗಿದೆ. ನಾಳೆ ಬಂದು ಕಾಣುತ್ತೇನೆ.

ಚೆಲುವಾಂಬೆ – ಹಾಗೆಯೆ ಮಾಡು. ನಿನಗಾರ ಭಯವೂ ಬೇಡ. ನಿನ್ನನು ಪೊರೆಯುವ ಭಾರ ನಮ್ಮದು.(ಹೊನ್ನಯ್ಯ ಹೋಗುವನು)

ರುದ್ರಯ್ಯ – ಏನಿದು ಗೂಢಚರರಿಬ್ಬರೂ ಓಡಿಬರುತ್ತಿರುವರು!
(ಗೂಢಚರರಿಬ್ಬರೂ ಬರುವರು. ನಿಂಬಯ್ಯನು ಗಾಬರಿಯಿಂದ)

ನಿಂಬಯ್ಯ – ಏನು ಬಂದಿರಿ? ಏನು ಸುದ್ದಿ?

ಒಂದನೆ – ಸ್ವಾಮಿ, ಹೈದರಾಲಿಯವರ ಸೇನೆ ಶಿವಮೊಗ್ಗೆಗೆ ಬಂದಿಳಿದಿದೆ. ನಾಳೆಯೆ ಬಿದನೂರಿಗೆ ದಾಳಿಯಿಡುವರಂತೆ. ಲಿಂಗಣ್ಣ ಮಂತ್ರಿಗಳೂ ರಾಜಕುಮಾರ ಬಸವಯ್ಯನವರೂ ಅವರೊಡನೆ ಇದ್ದಾರಂತೆ.

ನಿಂಬಯ್ಯ – ಏನೈ ನೀನಾಡುವುದು? ಬಸವಯ್ಯ ಮೃತನಾಗಿದ್ದಾನೆ.

ಎರಡನೆ – ಸ್ವಾಮಿ, ನಾನರಿಯೆವು. ಹೈದರಾಲಿಯವರ ಪಾಳೆಯದಲ್ಲೆಲ್ಲ ಆ ಸುದ್ದಿ ಹಬ್ಬಿತ್ತು.

ರುದ್ರಯ್ಯ – ಆತನೇ ಶಿವಯ್ಯನಿರಬೇಕು.

ಚೆಲುವಾಂಬೆ – ನಾನಾಡಿದುದು ನಿಜವಾಯಿತು. ನಾವಿನ್ನು ಸಿದ್ಧರಾಗಬೇಕು.

ನಿಂಬಯ್ಯ – ರುದ್ರಯ್ಯ, ಸೇನೆಗಳನು ಸಿದ್ಧಪಡಿಸು. ಸೈನಿಕರೆಲ್ಲರಿಗೂ ವಿಶೇಷ ಬಹುಮಾನಗಳನು ಹಂಚಿ ಹುರಿದುಂಬಿಸು. ಪಟ್ಟಣದಲ್ಲ್ಲಿ ಬೀದಿಬೀದಿಯಲ್ಲಿಯೂ ಸುಸಜ್ಜಿತ ಭಟರನು ನಿಲ್ಲಿಸಿ ಜನರು ದಂಗೆಯೇಳದಂತೆ ನೋಡಿಕೊಳ್ಳಬೇಕು. (ರುದ್ರಯ್ಯ ನಮಿಸಿ ತೆರಳುವನು) ಗೂಢಚರರೆ, ನೀವೂ ನಡೆಯಿರಿ. ವಿಶೇಷ ವರ್ತಮಾನಗಳೇನಿದ್ದರೂ ಜಾಗರೂಕತೆಯಿಂದ ನಮಗೆ ಮುಟ್ಟಿಸಬೇಕು.

ಒಂದನೆ
ಎರಡನೆ} – ಅಪ್ಪಣೆ (ಬಾಗಿ ಕೈಮುಗಿದು ಹೋಗುವರು.)

ನಿಂಬಯ್ಯ (ಸೋಮಯ್ಯನಿಗೆ) ನೀನೂ ನಡೆ. ಸೈನ್ಯಕಾರ್ಯದಲಿ ರುದ್ರಯ್ಯನಿಗೆ ನೆರವಾಗು. ನಾನು ನಿನ್ನ ಹಿಂದೆಯೆ ಬರುತ್ತೇನೆ ಎಂದು ಅವರಿಗೆಲ್ಲ ತಿಳಿಸು. (ಸೋಮಯ್ಯ ಹೊರಡುವನು.) ತಿಮ್ಮಜಟ್ಟಿ!

ತಿಮ್ಮಜಟ್ಟಿ – ಮಹಾಸ್ವಾಮಿ!

ನಿಂಬಯ್ಯ – ನಿನ್ನ ಅಜಾಗರೂಕತೆಯಿಂದ ಎಷ್ಟು ಅನಾಹುತವಾಗಿದೆ ಎಂದು ನಿನಗೆ ತಿಳಿದಿದೆಯೋ?

ತಿಮ್ಮಜಟ್ಟಿ – ಮಹಾಸ್ವಾಮಿ, ನಾವು ಸೆರೆಮನೆಗೆ ಹೋಗುವ ಮೊದಲೇ ಅವರು ತಪ್ಪಿಸಿಕೊಂಡು ಹೋಗಿದ್ದರು.

ನಿಂಬಯ್ಯ – ಇರಲಿ, ವಿಚಾರಣೆಗೆ ಈಗ ಸಮಯವಿಲ್ಲ. ಶವಸಂಸ್ಕಾರದಲ್ಲಿ ಸಹಾಯವಾಗುವ ನೆವದಿಂದ ನೀನು ಹೊನ್ನಯ್ಯನ ಮೇಲೆ ಕಾವಲಿದ್ದು ರಹಸ್ಯಗಳೇನಾದರೂ ಹೊರಬಿದ್ದರೆ ಕೂಡಲೆ ಬಂದು ತಿಳುಹಬೇಕು. ತಿಳಿಯಿತೇ?

ತಿಮ್ಮಜಟ್ಟಿ – ಅಪ್ಪಣೆ, ಮಹಾಸ್ವಾಮಿ!

ನಿಂಬಯ್ಯ – ನೀನೀಗ ಹೊರಡಬಹುದು. (ಜಟ್ಟಿ ಹೋಗುವನು.)

ಚೆಲುವಾಂಬೆ – ಪ್ರಿಯತಮ, ಹೈದರಾಲಿಯಂತಹ ಬಲಶಾಲಿಯನು ನಾವು ಗೆಲ್ಲುವೆವೆ?

ನಿಂಬಯ್ಯ – ಹೋರಾಡಿ ಗೆಲುವುದಾಗದಿದ್ದರೆ ಹಣದಿಂದ ಗೆದ್ದರಾಯಿತು.

ಚೆಲುವಾಂಬೆ – ಹೇಗಾದರೂ ಮಾಡಿ ಹಣದಿಂದ ಗೆಲ್ಲುವ ಆಲೋಚನೆಯನ್ನೆ ಮಾಡಬೇಕು. ಅದಕ್ಕಾಗಿ ನಾಲ್ಕು ಲಕ್ಷ ವರಹಗಳನ್ನು ಕೊಡಲು ನಾನು ಸಿದ್ಧಳಾಗಿದ್ದೇನೆ.

ನಿಂಬಯ್ಯ – ಆಗಲಿ, ಪ್ರಿಯೆ, ಚೆನ್ನಾಗಿ ಆಲೋಚಿಸಿ ನಾಳೆಯೆ ದೂತನನ್ನು ಅಟ್ಟುತ್ತೇನೆ. – ನಿನಗಾ ಚಿಂತೆ ಬೇಡ; ಅಂತಃಪುರಕ್ಕೆ ಹೋಗಿ ವಿಶ್ರಾಂತಿ ತೆಗೆದುಕೊ. ನಾನೀಗ ಹೋಗಿ ಸೈನಿಕರನ್ನು ಕಾಣುತ್ತೇನೆ. (ನಿಂಬಯ್ಯನು ಚಿಂತಾಮಗ್ನನಾಗುವನು. ರಾಣಿ ಅವನನ್ನು ನೋಡುತ್ತ ನೋಡುತ್ತ ತೆರಳುವಳು.) ಸಮಸ್ಯೆಯ ಮೇಲೆ ಸಮಸ್ಯೆ! ಎಲ್ಲ    ವಿಚಿತ್ರವಾಗಿದೆ! ಬಸವಯ್ಯನನು ಹೊನ್ನಯ್ಯ ಕೊಂದನಂತೆ! ಹೈದರನು ಶಿವಮೊಗ್ಗೆಯಲ್ಲಿ ಬೀಡುಬಿಟ್ಟಿರುವನಂತೆ! ಶಿವಯ್ಯ ಲಿಂಗಣ್ಣರು ಅವನೊಡನೆ ಸೇರಿ ಬಿದನೂರಿಗೆ ದಾಳಿಯಿಡುವರಂತೆ! ರುದ್ರಾಂಬೆ ಮಂಗಳ ಮಾಯವಾದಳಂತೆ! ಸಮಸ್ಯೆಯ ಮೇಲೆ ಸಮಸ್ಯೆ! ಇರಲಿ, ಚೆಲುವಾಂಬೆ ಚೆಲ್ವಿಯಾಗಿ ಬಿದನೂರೆಲ್ಲವೂ ನಾಶವಾದರೂ ನಾಶವಾಗಲಿ! ನನ್ನ ಜೀವವಾದರೂ ಬಲಿಯಾಗಲಿ! ತುದಿಯವರೆಗೆ ಧರ್ಮವೋ ಅಧರ್ಮವೋ ಸರ್ವಪ್ರಯತ್ನಗಳನ್ನೂ ಮಾಡುವೆನು! ನನ್ನ ಪ್ರೇಮದ ಅಗಾಧತೆಗೆ ನನ್ನ ಸಾಹಸವೇ ಸಾಕ್ಷಿಯಾಗುವಂತೆ ಪ್ರಯತ್ನಮಾಡುವೆನು! ಮುಂದೆ ಏನಾದರಾಗಲಿ, ವಿಧಿಲಿಖಿತವಿದ್ದಂತೆ! . . . .

[ಪರದೆ ಬೀಳುವುದು]