[ಮಧ್ನಾಹ್ನದ ಸಮಯ. ರಾಜಬೀದಿಯಲ್ಲಿ ಒಂದು ಹೆಮ್ಮರದ ನೆಳಲಿನಲ್ಲಿ  ಇಬ್ಬರು ಮೂವರು ಮಾತಾಡುತ್ತಿರುವರು. ಬರುತ್ತ ಬರುತ್ತ ಗುಂಪು ಹೆಚ್ಚುವುದು. ಕೆಲರು ಸಭ್ಯ ವೇಷದವರು: ಕೆಲವರು ಕೆಲಸಗಾರರು; ಕೆಲರು ವ್ಯಾಪಾರಿಗಳು. ಮೂಟೆ ಹೊತ್ತುಕೊಂಡು ಹೋಗುವ ಹುಡುಗನೊಬ್ಬನು ಹಾಗೆಯೆ ಗುಂಪು ಸೇರುವನು. ಕಟ್ಟಿಗೆ ಹೊರೆಯವನೊಬ್ಬನು ಅಲ್ಲಿಯೆ ನಿಂತು ಆಲೈಸತೊಡಗುವನು. ಲಿಂಗಧಾರಿಯಾದ ವೀರಶೈವನೊಬ್ಬನು ಕರಡಿಗೆಯನ್ನುಜ್ಜುತ್ತ ಗುಂಪುಸೇರಿ ನಿಲ್ಲುವನು. ಹೀಗೆ ಗುಂಪು ಸೇರುವುದು.]

ಒಂದನೆ – ನಿಜವಾಗಿಯೂ ಸೋಜಿಗವೇ ಕಾಣಯ್ಯ. ಆ ಕಾವಲುಗಾರ ಸಿಂಗಣ್ಣ ಮೈಮರೆತು ಸತ್ತಂತೆ ಬಿದ್ದದ್ದನಂತೆ. ಬೀಗಗಳೆಲ್ಲ ಕಳಚಿಕೊಂಡಿದ್ದುವಂತೆ. ಬಾಗಿಲುಗಳೆಲ್ಲ ತೆರೆದಿದ್ದುವಂತೆ. ಅರಸುಮಕ್ಕಳೂ ಇಲ್ಲ; ಮಂತ್ರಿಗಳೂ ಇಲ್ಲ; ಅರಸುಮಕ್ಕಳನ್ನು ಇಟ್ಟಿದ್ದ ಕೋಣೆಯಲಿ ಒಂದು ಕಠಾರಿ ಬೇರೆ ಬಿದ್ದಿತ್ತಂತೆ!

ಎರಡನೆ – ಏನಾದರಾಗಲಿ ಆ ಪುಣ್ಯಾತ್ಮರನ್ನು ದೇವರೇ ಕಾಪಾಡಿದಂತಾಯಿತು.

ಮೂರನೆ(ದೀರ್ಘವಾಗಿ) ದೇವರಲ್ಲವಂತಯ್ಯಾ!

ಎರಡನೆ – ಮತ್ತೇನು ಮನುಷ್ಯರೆ?

ಮೂರನೆ – ಮನುಷ್ಯರೂ ಅಲ್ಲವಂತೆ!

ಒಂದನೆ – ಹಾಗಾದರೆ?

ಮೂರನೆ – ತೀರಿದೋದ ಬಸಪ್ಪನಾಯಕರಂತೆ!

ಒಂದನೆ – ನಿಜವಾಗಿಯೂ?

ಮೂರನೆ – ನಿಮ್ಮ ಹತ್ತಿರ ನಾನು ಸುಳ್ಳು ಹೇಳಬೇಕೆ?

ಎರಡನೆ – ಅದು ಹೇಗೆ ಗೊತ್ತು ನಿನಗೆ?

ಮೂರನೆ – ಹೇಗೆಯೇ? ಹೇಳುತ್ತೇನೆ. ಕೇಳಿ! ಸತ್ತುಹೋದ ದೊರೆಗಳು ರಾತ್ರಿ ತಿರುಗುತ್ತಿದ್ದುದು ನಿಮಗೆ ಗೊತ್ತಿಲ್ಲವೆ?

ಒಂದನೆ – ಓಹೋ ಆದೇನು? ಊರಿಗೆಲ್ಲ ಗೊತ್ತು! ಕೆಂಚಣ್ಣ , ಹೊನ್ನಯ್ಯ ಕಂಡಿದ್ದೂ ಬಸವಯ್ಯನವರು ಮಾತಾಡಿದ್ದೂ ಎಲ್ಲ ಹಬ್ಬಿ ಹೋಗಿದೆ ಸುದ್ದಿ.

ಮೂರನೆ – ಬಾಗಿಲೂ ತೆರೆದಿಲ್ಲವಂತೆ, ಬೀಗವೂ ಕಳಚಿಲ್ಲವಂತೆ. ಎಲ್ಲ ಇದ್ದಂತೆಯೇ ಇತ್ತಂತೆ. ಬಸಪ್ಪನಾಯಕರೇ ಭೂತವಾಗಿ ಬಂದು ಅವರಿಬ್ಬರನ್ನೂ ಎತ್ತಿಕೊಂಡು ಹೋದರಂತೆ!

ಒಂದನೆ – ಇದೇನೋ ಹೊಸ ಸುದ್ಧಿ; ಬಹಳ ಚೆನ್ನಾಗಿದೆ! ನಿನಗಾರಯ್ಯಾ ಇದನ್ನು ಹೇಳಿದವರು?

ಮೂರನೆ – ಸಿಂಗಣ್ಣನೇ ಹೇಳಿದಂತೆ! ರಾತ್ರಿ ಕಣ್ಣು ಮುಚ್ಚದೆ ಕಾವಲು ಕಾಯುತ್ತಿದ್ದನಂತೆ. ಹಾಲು ಹೊಯ್ದಂತೆ ಬೆಳ್ದಿಂಗಳಿತ್ತಂತೆ. ಇದ್ದಕ್ಕಿದ್ದ ಹಾಗೆ ಆಕಾಶ ಇಬ್ಬಾಗವಾಯಿತಂತೆ! ನಕ್ಷತ್ರಗಳ ಪುಷ್ಪ ವೃಷ್ಟಿಯ ನಡುವೆ ಬಸಪ್ಪನಾಯಕರು ಕಾಣಿಸಿಕೊಂಡರಂತೆ. ಅವರ ಹಿಂದೆಯೂ ಮುಂದೆಯೂ ಬೇಕಾದಷ್ಟು ಪರಿವಾರವಿತ್ತಂತೆ ಅವನ ತಂದೆ, ತಾತ, ಮುತ್ತಾತ ಮತ್ತೂ ಮುತ್ತಾತ ಎಲ್ಲರನ್ನೂ ಕಂಡಂತೆ ಆ ಸಿಂಗಣ್ಣ, ದೊರೆಗಳ ಪರಿವಾರದಲ್ಲಿ! ಕಂಡು ಕಂಗಾಲಾಗಿ, ಬಿಟ್ಟ ಕಣ್ಣು ಮುಚ್ಚದೆ, ನೋಡುತ್ತಿದ್ದನಂತೆ! ಅಷ್ಟು ಹೊತ್ತಿಗೆ ದೊಡ್ಡದೊಂದು ಬಿರುಗಾಳಿ ಎದ್ದಿತಂತೆ! ಭೂಮಿಯೆಲ್ಲ ಧೂಳಾಗಿ ಮೇಲೆದ್ದು ಬಿಟ್ಟಿತಂತೆ. ಕೂಡಲೆ ಕತ್ತಲೂ ಕವಿಯಿತಂತೆ. ಸಿಡಿಲು ಮಿಂಚು ಜೋರಾಯಿತಂತೆ. ಅದರ ರಭಸಕ್ಕೇ ಸಿಂಗಣ್ಣ ಮೂರ್ಛೆ ಹೋಗಿದ್ದನಂತೆ!

ಎರಡನೆ – ಹಾಗಾಗಬೇಕು! ಅನ್ಯಾಯವಾದರೂ ಎಷ್ಟು ದಿನವೆಂದು ನಡೆಯುತ್ತದೆ? ಸಜ್ಜನರಿಗೆ ಮನುಷ್ಯರಿಲ್ಲದಿದ್ದರೆ ದೇವರೆ ಸಹಾಯಮಾಡುತ್ತಾನೆ.

ಒಂದನೆ – ಏನಾದರಾಗಲಿ, ಈ ಮಾರಿಗಳ ಕೈಯಿಂದ ತಪ್ಪಿಸಿಕೊಂಡು ಹೋದರಲ್ಲಾ ಅಷ್ಟೆ ಸಾಕು!

ನಾಲ್ಕನೆ – ಸ್ವಲ್ಪ ಮೆಲ್ಲಗೆ ಮಾತಾಡಯ್ಯ. ನಗರದಲ್ಲಿ ಎಲ್ಲಿ ನೋಡಿದರೂ ಸೈನಿಕರಾಗಿದ್ದಾರೆ. ಯಾರನ್ನು ಬೆದಕಿದರೂ ಗೂಢಚಾರರೆ! ನಿನ್ನ ಮಾತೆಲ್ಲಿಯಾದರೂ ಅವರಿಗೆ ಕೇಳಿಸಿದರೆ ನಿನ್ನನ್ನೂ ತೆಗೆದುಕೊಂಡು ಹೋಗಿ ಗಿಡ್ಡಂಗಿಗೇರಿಸುತ್ತಾರೆ.

ಒಂದನೆ – ಹೋದರೆ ಹೋಗಲಿ ಬಿಡಯ್ಯ, ಈ ಹಾಳು ಜೀವ! ಈ ಅರಗೆಟ್ಟ, ಕುಲಗೆಟ್ಟ, ಬಾಳ್ಗೆಟ್ಟ ಊರಿನಲ್ಲಿ ಬಾಳುವುದಕ್ಕಿಂತ ನರಕದಲ್ಲಿ ನಾಯಿಯಾಗಿರುವುದು ಮೇಲು! ಎಷ್ಟುದಿನ ಅಂತಾ ನಾವು ಸಹಿಸುವುದು ಈ ಚಂಡಾಲರನ್ನು!

ಐದನೆ – ಇನ್ನು ಹಚ್ಚುದಿನ ಬೇಕಿಲ್ಲವಯ್ಯ!

ನಾಲ್ಕನೆ – ಅದೇನು?

ಐದನೆ – ಲಿಂಗಣ್ಣ ಮಂತ್ರಿಗಳು ತಪ್ಪಿಸಿಕೊಂಡು ಹೋದಮೇಲೆ ಇವರನ್ನೆಲ್ಲ ಸುಮ್ಮನೆ ಬಿಟ್ಟುಬಿಡುತ್ತಾರೆಯೆ?

ಮೂರನೆ – ತಪ್ಪಿಸಿಕೊಂಡು ಹೋಗಿದ್ದೆಲ್ಲಿಗಯ್ಯಾ? ಈ ಹಾಳು ಪ್ರಪಂಚ ಬಿಟ್ಟು ಸ್ವರ್ಗಕ್ಕೆ ಹೋದರು, ಅಷ್ಟೇ!

ಐದನೆ – ಸ್ವರ್ಗಕ್ಕೂ ಇಲ್ಲ, ಗಿರ್ಗಕ್ಕೂ ಇಲ್ಲ.

ಮೂರನೆ – ಹೌದಯ್ಯಾ, ಬಸಪ್ಪನಾಯಕರೇ ಬಂದು ಎತ್ತಿಕೊಂಡು ಹೋದರಂತೆ.
(ಐದನೆಯವನು ನಗುವನು,)

ಎರಡನೆ – ಹೌದಂತಯ್ಯಾ, ನಗುವುದೇಕೆ?

ಐದನೆ – ಅವನು ಹೇಳಿದ ಗರುಡಪುರಾಣ ನಂಬುತ್ತೀರಲ್ಲಾ ಎಂದು.

ಮೂರನೆ – ಏನಯ್ಯಾ, ಗರುಡಪುರಾಣ, ಗಿರುಡಪುರಾಣ ಎಂದು ಹಾಸ್ಯಮಾಡುತ್ತೀಯೆ!

ಐದನೆ – ನೀನು ಹೇಳಿದ್ದು ಮತ್ತೇನು? ವೇದವೆಂದು ತಿಳಿದುಕೊಂಡಿದ್ದೀಯೇನೊ!

ಮೂರನೆ(ಸಿಟ್ಟೆದ್ದು) ನಿನಗೆ ತಲೆಗಿಲೆ ಕೆಟ್ಟಿದೆಯೋ?

ಐದನೆ(ಶಾಂತಿವಾಗಿ ಹಾಸ್ಯದಿಂದ)  ನಿನಗೆ?

ಮೂರನೆ – ನಿನಗೆ ಗ್ರಹಚಾರ ನೆಟ್ಟಗಿಲ್ಲ, ಶನಿ ವಕ್ರಿಸಿದೆ.

ಐದನೆ(ನಗುತ್ತ)  ನನಗೋ? ನಿನಗೋ?

ಮೂರನೆ – ಏನು ಹೆಚ್ಚು ಕಡಿಮೆ ಮಾತಾಡುತ್ತೀಯಾ?

ಐದನೆ – ನೀನೇನು ತಕ್ಕಡಿಯಲ್ಲಿ ತೂಗಿ ಮಾತಾಡಿದ್ದೇನೆಂದು –

ಮೂರನೆ – ಹಲ್ಲು ಉದುರಿಸಿಬಿಟ್ಟೇನು! ಮಾತಾಡಬೇಡ!
(ಮುಂದೆ ನುಗ್ಗುವನು. ಜನರು ತಡೆಯುವರು.)

ಐದನೆ – ಅಲ್ಲಯ್ಯಾ, ನನ್ನ ಹಲ್ಲು ಉದುರಿದ ಮಾತ್ರಕ್ಕೆ ನೀನು ಬಿಟ್ಟ ಬುರುಡೆ ಸತ್ಯವಾಗುತ್ತದೆಯೇ?

ನಾಲ್ಕನೆ – ಹೋಗಲಿ ಬಿಡಯ್ಯಾ. ಸತ್ಯ ಏನು ಹೇಳಿಬಿಡು.

ಐದನೆ – ನಿನ್ನೆ ರಾತ್ರಿ ಅವರಿಬ್ಬರೂ ಕೊಲೆಯಾಗಬೇಕಿತ್ತಂತೆ. ಕೊಲೆಗಾರರೂ ಹೋದರಂತೆ. ಕಾವಲುಗಾರ ಬಿದ್ದಿದ್ದನಂತೆ – ಪ್ರಜ್ಞೆತಪ್ಪಿ. ಸೆರೆಮನೆಯ ಬೀಗ ಬಾಗಿಲು ಎಲ್ಲ ತೆರೆದಿದ್ದುವಂತೆ. ಬಸವಯ್ಯ ಲಿಂಗಣ್ಣ ಮಂತ್ರಿಗಳು ಇರಲಿಲ್ಲವಂತೆ.               ಅರಸುಕುಮಾರನನ್ನು ಸೆರೆಯಿಟ್ಟಿದ್ದ ಕೋಣೆಯಲ್ಲಿ ಒಂದು ಕಠಾರಿ ಬಿದ್ದಿತ್ತಂತೆ. ಅದರಿಂದ ಸ್ವಲ್ಪ ಸತ್ಯ ಬಹಿರಂಗವಾಗಿದೆ.

ಎರಡನೆ – ಏನದು?

ಐದನೆ – ಆ ಕಠಾರಿಯ ಮೇಲೆ ಶಿವಯ್ಯನ ಹೆಸರು ಕೆತ್ತಿದೆಯಂತೆ.

ಒಂದನೆ – ನಿಜವೇ?

ಐದನೆ – ನೀವು ನಿಜವೆಂದರೆ ನಿಜ; ಸುಳ್ಳೆಂದರೆ ಸುಳ್ಳು.

ನಾಲ್ಕನೆ – ಹೋಗಲಿ, ಆಮೇಲೆ?

ಐದನೆ – ಸೇನಾಪತಿ ನಿಂಬಯ್ಯನವರೂ ರಾಣಿಯವರೂ ಬಹಳ ಕೋಪಗೊಂಡು ಕಾವಲುಗಾರನನ್ನು ಸೆರೆಯಲ್ಲಿಡಿಸಿ, ಶಿವಯ್ಯನನ್ನು ಹುಡುಕಿಸಿದರಂತೆ. ಊರಿನಲ್ಲಿ ಎಲ್ಲಿಯೂ ಅವನ ನೆಲೆ ಸಿಕ್ಕಲಿಲ್ಲವಂತೆ. ಆಮೇಲೆ ರಾಜಕುಮಾರರ ಮಿತ್ರ ಹೊನ್ನಯ್ಯನೂ ಇಲ್ಲವೆಂದು ಸುದ್ದಿ ಇದೆ.

ಒಂದನೆ – ಏನೋ ಎಲ್ಲವೂ ಬಹಳ ವಿಚಿತ್ರವಾಗಿದೆ! ಅದಕ್ಕಾಗಿಯೇ ಈ ರೀತಿ ಸೈನಿಕರು ತಿರುಗುವುದೆಂದು ತೋರುತ್ತದೆ.

ಐದನೆ – ಅಷ್ಟೇ ಅಲ್ಲ, ಇನ್ನೂ ಇದೆ!

ಎರಡನೆ
ನಾಲ್ಕನೆ } – ಏನು? ಏನು? ಏನು?
ಆರನೆ
ಏಳನೆ

ಐದನೆ – ರುದ್ರಾಂಬೆಯನ್ನು ಹಿಡಿದರೆ ರಾಜಪುತ್ರನೂ ಲಿಂಗಣ್ಣ ಮಂತ್ರಿಗಳೂ ತಮ್ಮಷ್ಟಕ್ಕೆ ತಾವೇ ಕೈಗೆ ಬೀಳುವರೆಂದು ಆಕೆಯನ್ನು ಬಂಧಿಸಿ ತರಲು ಭಟರು ಹೋದರಂತೆ.

ಮೂರನೆ – ಯಾರು ಆಕೆ?

ಎರಡನೆ – ಅಯ್ಯೋ ಅದೂ ಗೊತ್ತಿಲ್ಲವೇ ನಿನಗೆ? ಮಂತ್ರಿಗಳ ಕುಮಾರ್ತೆ!

ಒಂದನೆ – ಸಾಕ್ಷಾತ್ ಪಾರ್ವತಿಯಂತಿದ್ದಾಳೆ.

ನಾಲ್ಕನೆ – ಅಯ್ಯೋ ಪಾಪ! ಆಕೆಗೇನು ಬಂತು ಕಷ್ಟ!

ಐದನೆ – ಆಕೆಯೂ ಪತ್ತೆ ಇಲ್ಲವಂತೆ!

ನಾಲ್ಕನೆ – ಸಾಕಪ್ಪಾ ಸಾಕು! ಹಾಲು ಕುಡಿದಂತಾಯ್ತು!

ಐದನೆ(ಕೈಯೆತ್ತಿ ಗುಂಪನ್ನು ಸಂಭೋದಿಸಿ) ಸದ್ದೂ! ಸದ್ದೂ!

ಆರನೆ – ಸದ್ದೂ! ಸದ್ದೂ!

ಮೂರನೆ – ಸದ್ದೂ! ಸದ್ದೂ! (ಮತ್ತೆ ಸುಮ್ಮನಾಗುವರು.)

ಐದನೆ – ಈಗ ಅವರೆಲ್ಲರನ್ನೂ ಹುಡುಕುವುದಕ್ಕೆ ನಾನಾ ದಿಕ್ಕಿಗೆ ಭಟರನ್ನು ಅಟ್ಟಿದ್ದಾರೆ. ನಗರದಲ್ಲಿ ಎಲ್ಲಿಯಾದರೂ ಆಡಗಿಕೊಂಡಿದ್ದಾರೆಯೋ ಎಂದು ಸೈನಿಕರು ಮನೆಮನೆಗೂ ನುಗ್ಗಿ ನೋಡುತ್ತಿದ್ದಾರೆ.

ಎರಡನೆ – ಈ ಗಲಭೆಯಲ್ಲಿ ಯಾರು ಯಾರು ಶೂಲಕ್ಕೇರುತ್ತಾರೆಯೋ ಏನೋ?

ಮೂರನೆ – ನೀನೆನಾದರೂ ಸೇರಿದ್ದೀಯೋ ಈ ಪಿತೂರಿಗೆ?

ಎರಡನೆ(ಕೂಗಿ ರೇಗಿ) ನಿನಗೇನಾದರೂ ಪಿತ್ತವೇರಿದೆಯಾ? ನೀನೆ ಸೇರಿರಬಹುದು ಪಿತೂರಿಗೆ, ಹೀಗೆಲ್ಲ ಹೇಳಿದರೆ ಹಲ್ಲು ಹೊಟ್ಟೆಗೆ ಹೋದಾವು! ಯಾರನ್ನಾದರೂ ಸಿಕ್ಕಿದ ಬಡಪಾಯಿಗಳನ್ನು ಶೂಲಕ್ಕೇರಿಸಿ ನೋಟ ನೋಡುವ ಜನಗಳು ನೀವು!

ಮೂರನೆ – ನಾನು ಹೋಗಿ ಹೇಳಿಯೇಬಿಡುತ್ತೇನೆ, ನೀನು ಸಂಚಿಗೆ ಸೇರಿದವನೆಂದು.

ಎರಡನೆ – ನಾನೂ ಹೇಳಿ ನಿನ್ನ ತಲೆಗೆ ತರುತ್ತೇನೆ. (ಇಬ್ಬರೂ ಹೋಗಲೆಳಸುವರು: ಐದನೆಯವನು ಇಬ್ಬರನ್ನೂ ತಡೆದು)

ಐದನೆ – ನಿಮಗೇನು ಭೂಮಿ ಬೇಜಾರಾಗಿದೆಯೆ? ಇಬ್ಬರ ತಲೆಯೂ ಹಾರಿ ಹೋಗುತ್ತದೆ! ನಿಮಗೆ ಹೆಂಡಿರು ಮಕ್ಕಳಿಲ್ಲವೆ?

ಮೂರನೆ – ನನಗಿದ್ದಾರೆ; ನಾನು ಹೋಗುವುದಿಲ್ಲ!

ಎರಡನೆ – ನನಗೂ ಇದ್ದಾರೆ! ಅವನ ಹುಮ್ಮಸ್ಸು ನೋಡಿ ರೇಗಿತಷ್ಟೇ!

ಐದನೆ – ಸಹೋದರರೇ, ನಿಮ್ಮೊಡನೆ ನಾನಾಡಬೇಕಾಗಿರುವ ಗುಟ್ಟೊಂದಿದೆ.

ಎಲ್ಲರೂ – ಏನು? ಏನು? ಹೇಳು! ಕೇಳುತ್ತೇವೆ!

ಐದನೆ – ಆದರೆ ನಿಮ್ಮಲ್ಲಿ ಗೂಢಚರರಾರೂ ಇಲ್ಲ ಎಂದು ಶಿವನ ಮೇಲೆ ಆಣೆ ಇಡಬೇಕು.

ಎಲ್ಲರೂ – ಶಿವನಾಣೆಗೂ ನಾನಲ್ಲ! ಶಿವನಾಣೆಗೂ ನಾನಲ್ಲ!!

ಐದನೆ – ಹಾಗಾದರೆ ಕೇಳಿ. ಸಹೋದರರೇ, ನಮ್ಮ ನಾಡಿನ ಕೀರ್ತಿ ಮುಸುಳುವ ಕಾಲ ಬಂದಿದೆ. ನಮ್ಮ ನಾಡು ಸುಡುಗಾಡಾಗುವ ಸಮಯವೊದಗಿದೆ. ರಮಣೀಯವೂ ಪರಮ ಪವಿತ್ರವೂ ಆಗಿರುವ ಈ ನಮ್ಮ ಹಿರಿಯರ ಹೆಮ್ಮೆಯ ಬೀಡು ನಮ್ಮೆಲ್ಲರ ಕಣ್ಣೆದುರಿಗೇ ಪಾಳುಬಿದ್ದು ಗೂಬೆಗಳ ಗೂಡಾಗಿ, ಪಿಶಾಚಿಗಳ ನಾಟ್ಯರಂಗವಾಗುವ ವಿಷಮಕಾಲವೈತಂದಿದೆ. ನಾವೀಗ ತಟಸ್ಥರಾಗಿರುವುದು ನಮ್ಮ ಹೇಡಿತನಕ್ಕೆ ಹೆಗ್ಗುರುತು. ನಿಮ್ಮಲ್ಲಿ ಪೌರುಷವಿದೆಯೇ? ಕೆಚ್ಚಿದೆಯೇ? ದೇಶಭಕ್ತಿಯಿದೆಯೇ?

ಎಲ್ಲರೂ – ಇದೆ! ಇದೆ! ಬಿದನೂರಿಗೆ ಜಯವಾಗಲಿ!

ಐದನೆ – ಬರಿಯ ಕೂಗಿನಿಂದ ಕಾರ್ಯಸಾಧನೆಯಾಗದು. ಜಯಕಾರ ಮಾಡಿದ ಮಾತ್ರದಿಂದ ಜಯಲಾಭವಾಗದು. ಬರಿಯ ಬಾಯ್ಗಲಿಗಳಾದರೆ ಸಾಲದು. ಕಯ್ಗಲಿಗಳಾಗಬೇಕು! ಮೈಗಲಿಗಳಾಗಬೇಕು!

ಎಲ್ಲರೂ – ಆಗುತ್ತೇವೆ! ಆಗಿದ್ದೇವೆ!

ಐದನೆ – ನಮ್ಮ ನಾಡಿನ ಈಗಿನ ವಿಷಮಾವಸ್ಥೆಯ ಪರಿಚಯವಾಗಿದೆಯೇ ನಿಮಗೆ?

ಎಲ್ಲರೂ – ಆಗಿದೆ! ಆಗಿದೆ!

ಐದನೆ – ಇಲ್ಲ; ನಿಮಗಿನ್ನೂ ಅದು ಸರಿಯಾಗಿ ತಿಳಿದಿಲ್ಲ. ನಾನು ತಿಳಿಸುತ್ತೇನೆ. ಕಣ್ದೆರೆಯುವಂತೆ ಮಾಡುತ್ತೇನೆ. ಇದು ರಾಜಬೀದಿ. ಇಲ್ಲಿ ಅದನ್ನೆಲ್ಲ ಹೇಳುವುದು ಈಗ ಸರಿಯಲ್ಲ. ಏಕೆಂದರೆ, ನಮ್ಮ ರಾಜಭಕ್ತಿಯೇ ಈಗ ರಾಜದ್ರೋಹವೆಂದು ಪರಿಗಣಿತವಾಗುವುದು. ಆದ್ದರಿಂದ ನೀವೆಲ್ಲರೂ ಕೆರೆಯ ಬಳಿಯಿರುವ ಬಯಲಿನಲ್ಲಿ ಇಂದಿನ ರಾತ್ರಿಯೇ ಸದ್ದಿಲ್ಲದೆ ಸೇರಬೇಕು. ಇತರರನ್ನೂ ಕರೆತರಬೇಕು.

ಎಲ್ಲರೂ – ಆಗಲಿ! ಆಗಲಿ!

ಐದನೆ – ಅಲ್ಲಿ ನಿಮಗೆಲ್ಲವನೂ ವಿಶದವಾಗಿ ಹೇಳುತ್ತೇನೆ. ಈಗ ಹೋಗಬಹುದು.
(ಜನರು ಗದ್ದಲ ಮಾಡುತ್ತ ಹೋಗುವರು. ನಾಲ್ಕೈದು ಜನರು ಉಳಿಯುವರು. ಒಳಗಡೆ  ‘ಹುಚ್ಚೀ! ಹುಚ್ಚೀ!’ ಎಂಬ ಕೂಗು ಕೇಳಿಬರುತ್ತದೆ.)

ಒಂದನೆ – ಅದೇನದು ಕೂಗು?

ನಾಲ್ಕನೆ – ಯಾರೋ ಹುಚ್ಚಿ!

ಮೂರನೆ – ಅಯ್ಯೋ ಎಷ್ಟು ವಿಕಾರವಾಗಿದ್ದಾಳೆ!
(ರುದ್ರಾಂಬೆ ಹುಚ್ಚಿಯಂತೆ ವಿಕಾರವಾದ ಛದ್ಮವೇಷವನ್ನು ಧರಿಸಿ ಬರುವಳು. ಜನರೆಲ್ಲ ಹೆದರಿ ದೂರ ನಿಲ್ಲುತ್ತಾರೆ.)

ರುದ್ರಾಂಬೆ – ನರಕ! ನರಕ!! ಅಯ್ಯೋ ನರಕ!!!
ನನ್ನೂರು ನರಕ! ನನ್ನೂರು ನರಕ!!
ನಾನು ಯಮನಿಗೆ ಸಾಕ್ಷಿ!
ನಾನು ರಕ್ತಾಕ್ಷಿ!! (ಕಿಲಕಿಲ ನಕ್ಕು ಮತ್ತೆ ಅಳುವಳು.)
ಬೇಡ, ಬೇಡಲೆ ಹಾಳು ಯಮದೂತ: ಅಯ್ಯೋ
ನನ್ನನಗ್ನಿಗೆ ತಳ್ಳುವರು! (ಒದೆಯುವಳು. ನಗುವಳು.)
ಹಾಗೆ ಬೀಳಲ್ಲಿ! ಸಾಯಿ! ಸಾಯಿ!! (ಕೂಗುತ್ತ)
ಬನ್ನಿ! ಬನ್ನಿ! ಎಲ್ಲರೂ ಬನ್ನಿ!
ನರಕದಲಿ ವಿಪ್ಲವ! ನರಕದಲಿ ದಂಗೆ!
ಓ ಪಾಪಿಗಳೆ ಏಳಿ, ಎದ್ದೇಳಿ!
ಯಮದೂತರನು ಸೀಳಿ!
ಬನ್ನಿ! ಬನ್ನಿ! (ಕುಣಿದು ಹಾರುವಳು.)
ಸಿಕ್ಕಿದನು ಯಮ! ಸಿಕ್ಕಿದನು ಯಮ!
ಶೂಲಕೇರಿಸಲು ಬನ್ನಿ! ಬನ್ನಿ! ಬೇಗ ಬನ್ನೀ!!
(ನಕ್ಕು ಮೌನವಾಗಿ ಸುತ್ತ ದುರುದುರು ನೋಡಿ)
ಏನು ಊರಿದು ಯಮನ ತವರೂರು! –
ಯಾರಲ್ಲಿ? ಆ ಬೆಂಕಿಯ ನಡುವೆ – (ಕೈ ತೋರಿ)
ಬಾ ತಂಗಿ, ಬಾ! – (ಕೈಚಾಚಿ ಹಿಂಜರಿದು)
ಅಯ್ಯೋ ಬಾಲವಿಧವೆ? (ಅಳುತ್ತ)
ಯಾರ ಪಾಪಕೆ ನಿನ್ನನಿಲ್ಲಿಗೆಳೆದರಮ್ಮ? –
ನಾನಾರು ಎಂದೆಯಾ? –
ನರಕದ ದ್ವಾರಪಾಲಕಿ!! (ಹೋ ಎಂದು ಕೂಗಿ ಸುಮ್ಮನಾಗಿ)
ಮತ್ತಿದಾರಿದು ಬಾಗಿಲನು ತಟ್ಟುವರು?
(ಬಾಗಿಲು ತೆಗೆಯುವಂತೆ ಅಭಿನಯಿಸಿ)
ಅಯ್ಯೋ ನೀನೂ ಬಂದೆಯಾ? –
ಬಾ, ಮಗೂ ಬಾ, ಹೆದರಬೇಡ! –
(ಕೈನೀಡಿ ಮಗು ಬಂದಂತೆ ಅಭಿನಯಿಸಿ)
ಈಗತಾನೆ ಬಂದೆಯಾ ಭೂಮಿಯಿಂದ? (ಮುತ್ತಿಟ್ಟು)
ಅದೇಕೆ? ಇಷ್ಟು ಬೇಗ ಬಂದೆ?(ಅಲಿಸಿ ತಲೆದೂಗಿ)
ಹೆತ್ತವಳು ಕತ್ತುಹಿಸುಕಿ ಹೊಳೆಗೆಸೆದಲೆ?
(ನಿಟ್ಟುಸಿರು ಬಿಟ್ಟು ಅಳುವಳು.)
ಅಯ್ಯೋ ಪಾಪ ! – ಹೆದರದಿರು ಕಂದಾ!
(ಯಾರನ್ನೋ ತಡೆಯುವಂತೆ ನಟಿಸಿ)
ಇಲ್ಲ; ನಾನು ಬಿಟ್ಟುಕೊಡುವುದಿಲ್ಲ!
ನನ್ನದು ಈ ಮಗು! (ಉಗುಳುವಳು.)
ಥೂ! ನಿಮ್ಮ ಹಾಳಾಗ ! ಹತ್ತಿರ ಬರಬೇಡಿ!
(ಪುನಃ ಮಗುವನ್ನು ಸಂತೈಸುವಳು.)
ಅಳಬೇಡ ಕಂದಾ! ನಾನಿದ್ದೇನೆ! (ಕಿಟ್ಟನೆ ಚೀರಿ)
ಅಯ್ಯೋ! ನನ್ನ ಕಂದನ್ನನ್ನು ಕಸಿದರು!
ಪಾಪಿ! ಪಾಪೀ! ಪಾಪೀ!! ಈ ಈ ಈ!!
(ಬಿದ್ದು ರೋದಿಸಿ ಹೊರಳಿ ಎದ್ದು ರೌದ್ರದಿಂದ)
ನಾನು ರಕ್ತಾಕ್ಷಿ! ನಾನು ರಕ್ತಾಕ್ಷಿ!
ಮಗೂ ಹೆದರಬೇಡ! ಬಂದೇ! ಬಂದೇ! (ಓಡುವಳು.)

ಒಂದನೆ – ಇದೇನು ಹುಚ್ಚಿದು?

ಮೂರನೆ – ನನಗೆ ಜ್ವರ ಬಂದಿದೆ!

ನಾಲ್ಕನೆ – ಏನೋ ಪಿಶಾಚಿ ಹಿಡಿದಿರಬೇಕು.

ಐದನೆ – ಎನೋ ರಕ್ತಾಕ್ಷಿಯಂತೆ ಅದರ ಹೆಸರು. ನರಕದ ಪಿಶಾಚಿಯಿರಬೇಕು.

ಎರಡನೆ – ಅಂತೂ ಎಲ್ಲಿ ಯಾರನೂ ಒದ್ದೂ ಓಡಿಸಿದರೂ ಎಲ್ಲರೂ ಈ ಭೂಮಿಗೆ ನುಗ್ಗಿ ಬಂದುಬಿಡುತ್ತಾರೆ. ಇದೇನು ಉಗ್ರಾಣವೋ ಅಥವಾ ಕಸದ ಬುಟ್ಟಿಯೋ ನನಗೆ ಬೇರೆ ತಿಳಿಯುವುದಿಲ್ಲ!

ಐದನೆ – ಅಲ್ಲಿ ನೋಡಿ, ಕಾವಲುಗಾರ ಸಿಂಗಣ್ಣನನು ಒದ್ದು ಒದ್ದು ತರುತ್ತಿದ್ದಾರೆ ರಾಜಭಟರು. ನಾವಿಲ್ಲಿರುವುದು ಚೆನ್ನಾಗಿಲ್ಲ.

ಮೂರನೆ – ಹೌದು; ಕಳ್ಳರ ಕಣ್ಣಿಗೆ ಕಾಣಿಸಿಕೊಳ್ಳುವುದು ತಪ್ಪು.  ಆಮೇಲೆ ನಮ್ಮನ್ನೂ ತಪ್ಪಿಗೆಳೆದು ಬಿಟ್ಟರೆ ಕಷ್ಟ.
(ಜನರೆಲ್ಲ ಹೋಗುವರು. ಇಬ್ಬರು ರಾಜಭಟರು ಸಿಂಗಣ್ಣನನ್ನು ಎಳೆದುಕೊಂಡು ಬರುವರು.)

ಒಂದನೆ – ಇವನಿಗೇನು ಮಾಡಬೇಕಾಯ್ತು? ಬಾಯಿ ಬಿಡುವುದೇ ಇಲ್ಲವಲ್ಲ.
(ರಪ್ ರಪ್ ಹೊಡೆಯುವನು.)

ಸಿಂಗಣ್ಣ – ಅಯ್ಯೋ ಸಾಕಪ್ಪಾ ಕೈಲಾಸ! (ಕೂಗುವನು.)

ಎರಡನೆ – ಹಾಳು ಮುಂಡೆಯದು, ಕೈಲಾಸ, ಶಿವ ಎನ್ನುತ್ತಿದೆಯೇ ಹೊರತು ಬೇರೆ ಮಾತೇ ಇಲ್ಲ! ಹೇಳೋ! ನಿನ್ನ ತಲೆಗೆ ಒರಲೆ ಹಿಡಿಯಾ! (ಗುದ್ದುವನು.)

ಸಿಂಗಣ್ಣ – ಅಯ್ಯೋ ಸಾಕಾಪ್ಪಾ ಸಮಾಧಿ, ಸಾಕಪ್ಪಾ! (ಒರಲುವನು.)

ಒಂದನೆ – ಇವನನ್ನು ಜೀವಸಹಿತ ಕುತ್ತಿಗೆವರೆಗೆ ಹೂಳಿ, ತಲೆಯ ಮೇಲೆ ಒಂದು ದೊಡ್ಡ ಬೋಗುಣಿ ಮಗುಚಿಹಾಕಿ, ಅದರೊಳಗೆ  ಮೆಣಸಿನ ಕಾಯಿ ಹೊಗೆ ಹಾಕಿದರೆ ಆಗ ಸರಿಯಾಗಿ ಮಾತಾಡುತ್ತಾನೆ! ಬಾ! ಬಾ!
(ಕೆನ್ನೆಗೆ ಹೊಡೆಯುವನು.)

ಸಿಂಗಣ್ಣ – ಅಯ್ಯೋ ನನಗೆ ಇಷ್ಟೇ ವರಗಳು ಸಾಕಪ್ಪಾ!

ಎರಡನೆ – ನಡೆ, ನಿಮ್ಮಪ್ಪನ ಮನೆಗೆ ಕೈಲಾಸಕ್ಕೇ ಹೋಗುವೆಯಂತೆ!
(ಹೊಡೆದು ಗುದ್ದುತ್ತ ತಬ್ಬಿಕೊಂಡು ಹೋಗುವರು.)

[ಪರದೆ ಬೀಳುವುದು]