[ಬಿದನೂರಿನ ಅನ್ನಸತ್ರದಲ್ಲಿ. ಸನ್ಯಾಸಿ ಮೃಗಚರ್ಮದ ಮೇಲೆ ಕುಳಿತಿದ್ದಾನೆ. ಶಿವಯ್ಯನು ಬೀಳ್ಕೊಳ್ಳುತ್ತಿದ್ದಾನೆ.]

ಶಿವಯ್ಯ – ಹಾಗಾದರೆ ನಾನೀಗ ಹೋಗುತ್ತೇನೆ. ನಿಮ್ಮ ಸಂಕೇತವನು?

ಸನ್ಯಾಸಿ – ನೀವು ದೂರದಲ್ಲಿ ಶಸ್ತ್ರಸಜ್ಜಿತರಾಗಿ ಅಡಗಿಕೊಂಡಿರಿ. ನಾನು ಸಿಳ್ಳು ಹಾಕುತ್ತೇನೆ.

ಶಿವಯ್ಯ – ತಮ್ಮಿಂದ ಬಹಳ ಉಪಕಾರವಾಗಿದೆ. ನಮಸ್ಕಾರ.
(ಶಿವಯ್ಯ ನಮಸ್ಕಾರಮಾಡಲು ಸನ್ಯಾಸಿಶಿವ! ಶಿವ!’ ಎಂದು ಹರಸುವನು. ತರುವಾಯ ಶಿವಯ್ಯ ಹೋಗುವನು. ಸನ್ಯಾಸಿ ಚಿಂತಾಮಗ್ನನಾಗಿ ದಿಗಂತವನ್ನೇ ನೋಡುತ್ತ ಬಿಸುಸುಯ್ಯುವನು.)

ಸನ್ಯಾಸಿ – ಏನು ಸೌಂದರ್ಯವನು ಸೂಸಿ ಮುಳುಗುತ್ತಿಹನು
ದಿನಮಣಿಯು ಪಶ್ಚಿಮ ದಿಗಂತದಲಿ! ಬನಗಳೀ
ಹಸುರಿನಲಿ ಬೈಗುಗೆಂಪಿನ ಹೊನ್ನು ಹರಿಯುತಿದೆ!
ಆಹಾ, ಈ ಪ್ರಕೃತಿಯೌದಾರ್ಯದೆದುರಿನಲಿ
ಮಾನವನ ನೀಚ ಕೃಪಣತೆ ಎನಿತು ಹೀನವಾಗಿ
ತೋರುವುದು! ಬೇಹಿನವನಾದರೂ ನಾನು, ಈ
ವೇಷದ ಮಹಿಮೆಯಿಂದಲೇ ಇದರ ಆವೇಶವೂ
ನನ್ನಲ್ಲಿ ಮೂಡುತಿದೆ; ಸಾಧುಗಳಲುದಯಿಸುವ
ಶಾಂತಿ ಎನ್ನೆದೆಯಲ್ಲಿ ತಲೆದೋರುತಿದೆ. ಆಹಾ!
ಮಹಿಮೆಯನು ನಟಿಸಿದರೂ ಸಾಕಲ್ಲವೇ ನಮ್ಮ
ಹೃದಯದಲಿ ಮೈಮೆ ಮೈದೋರಿಯೇ ತೋರುವುದು.
(ಧ್ಯಾನಮಗ್ನನಾಗಿ ಕೂರುವನು. ಒಬ್ಬಿಬ್ಬರು ಬಂದು ನಮಸ್ಕಾರಮಾಡಿ ಪಿಸು ಮಾತಾಡುತ್ತಾ ಹೋಗುವರು.)

ಒಂದನೆ – ಏನು ಯೋಗವಿದು?

ಎರಡನೆ – ಮಹಾತಪಸ್ವಿಗಳು! ಸಮಾಧಿಯಲ್ಲಿದ್ದಾರೆ!

ಒಂದನೆ – ನಾವೇ ಧನ್ಯರು! ಸಾಕ್ಷಾತ್ ಪರಮೇಶ್ವರನಿಗೆ ನಮಸ್ಕಾರ ಮಾಡಿದಂತಾಯ್ತು!

ಎರಡನೆ – ಬಾ ಹೋಗೋಣ. ಅವರ ಧ್ಯಾನಕ್ಕೆ ಭಂಗವಾದೀತು. ಅರ್ದಧ್ಯಾನದಲ್ಲಿ ಕಣ್ಣು ತೆರದರೆ ಲೋಕವೆ ಭಸ್ಮವಾದೀತು!

(ಒಬ್ಬನು ಒಬ್ಬನನ್ನು ಎಳೆದುಕೊಂಡು ಹೋಗುವನು. ತಿಮ್ಮಜಟ್ಟಿ ಅರೆಮರಳು ಹಿಡಿದವನಂತೆ ಬರುವನು. ನಮಸ್ಕಾರಮಾಡಿ ಕೂತುಕೊಳ್ಳುವನು.)  

ತಿಮ್ಮಜಟ್ಟಿ (ಸ್ವಗತ) ಕೆಟ್ಟ ಕೆಲಸಕ್ಕೆ ಕಾಲಿಟ್ಟರಾಯಿತು, ಕೆಸರಿನಲ್ಲಿ ಕಾಲಿಟ್ಟಂತೆ! ಮೊದಲು ಕಾಲು ಹೂತುಕೊಳ್ಳುವುದು. ಒದ್ದಾಡಿದರೆ ಸೊಂಟದವರೆಗೂ ಮುಳುಗುವುದು. ಕಡೆಗೆ ಎದೆಯವರೆಗೆ! ಕಡೆಗೆ ಕುತ್ತಿಗೆ; – ನನಗೀಗ ಕುತ್ತಿಗೆಯವರೆಗೆ ಬಂದಿದೆ. ಶಿವನೇ, ನನ್ನನು ಹೇಗಾದರೂ ಹೊರಗೆಳೆಯಲಾರೆಯಾ? – ಆಳಿದ ಮಹಾಸ್ವಾಮಿಯವರಿಗೆ ವಿಷಹಾಕಿ ಕೊಂದೆ! ಇನ್ನು – ಅವರ ಮಕ್ಕಳನ್ನೂ ಮಂತ್ರಿಗಳನ್ನು ಕತ್ತು ಮುರಿಯಬೇಕಂತೆ! ಇಲ್ಲದಿದ್ದರೆ ನನ್ನ ಕುತ್ತಿಗೆಯೇ ಹಾರುವುದಂತೆ! ವಿಷಕೊಟ್ಟು ಕೊಂದೇ ನನಗೆ ಜೀವನವೇ ರೇಜಿಗೆಯಾಗಿದೆ! ಮೈಗೆ ಶನಿ ಬಿದ್ದಂತಿದೆ! ಇನ್ನು ಕತ್ತು ಮುರಿದು ಕೊಂದರೆ ನನ್ನ ಗತಿಯೇನು? – ಅಯ್ಯೋ ಇದಕಾಗಿಯೇ ಪಡೆದೆನೇ ಈ ಹಾಳು ಅನೆಯಂತಹ ದೇಹವನ್ನು? ಹಣದಾಸೆಗೆ ಯಾರಾಗಲಿ ಎಷ್ಟೆಂದು ತಾನೆ ಅನ್ಯಾಯ ಮಾಡಿಯಾರು? ಅದು ಹೋಗಲಿ; ಅನ್ಯಾಯಕ್ಕೆ ಮೇರೆಯಿಲ್ಲವೆ? – ಹಣದಾಸೆ ತೋರಿದರೆ ಪ್ರಯೋಜನವಿಲ್ಲವೆಂದು ಪ್ರಾಣಭಯವನ್ನು ಬೇರೆ ತಂದೊಡ್ಡಿದ್ದಾರೆ! ನಾನೇನು ಸಾಯಲಿ!
(ಜಟ್ಟಿ ಏನನ್ನೋ ಎವೆಯಿಕ್ಕದೆ ನೋಡುತ್ತಾ ಕುಳಿತಿರುವನು. ಸನ್ಯಾಸಿ ಕಣ್ಣು ತರೆದು ಕರೆಯುವನು.)

ಸನ್ಯಾಸಿ – ತಿಮ್ಮಜಟ್ಟಿ!

ತಿಮ್ಮಜಟ್ಟಿ (ಬೆಚ್ಚಿಬಿದ್ದುಅಯ್ಯೋ (ಎಂದು ಚೀರುವನು)

ಸನ್ಯಾಸಿ – ಏನಿದು, ಜಟ್ಟಿ?

ತಿಮ್ಮಜಟ್ಟಿ – ಸ್ವಾಮಿ, ನಾನು ಸಾಯುತ್ತಿದ್ದೇನೆ!

ಸನ್ಯಾಸಿ – ಏನು ನೀನು ಹೇಳುವುದು! ಅದೇಕೆ ಬೆಚ್ಚಿಬಿದು ಕೂಗಿಕೊಂಡೆ?

ತಿಮ್ಮಜಟ್ಟಿ – ಗುರುವೇ, ನನಗೆ ಕೇಡುಗಾಲ ಬಂದಿದೆ. ಹೇಗಾದರೂ ಮಾಡಿ ನನ್ನನ್ನುಳಿಸಿ.

ಸನ್ಯಾಸಿ – ಏನಾಗೆದೆಯೋ ನಿನಗೆ?

ತಿಮ್ಮಜಟ್ಟಿ – ನಾನೇನು ಹೇಳಲಿ? ಏನಾಗಿಲ್ಲ ನನಗೆ? ಆಗಬೇಕಾದ್ದೆಲ್ಲ ಆಗಿದೆ, ಒಂದುಳಿದಿದೆ!

ಸನ್ಯಾಸಿ – ಹಾಗೆಂದರೆ?

ತಿಮ್ಮಜಟ್ಟಿ – ಹುಟ್ಟಿದ್ದಾಗಿದೆ! ಬೆಳೆದದ್ದಾಗಿದೆ! ಮದುವೆಯಾಗಿದೆ! ಮಕ್ಕಳೂ ಆಗಿದೆ! ಕೊಲೆಯನ್ನೂ ಮಾಡಿಯಾಗಿದೆ! ಮರಳೂ ಹಿಡಿದಾಗಿದೆ! ಇನ್ನು ಮಣ್ಣಾಗುವುದೊಂದು ಉಳಿದಿದೆ! (ಅಡ್ಡಬಿದ್ದು) ಹೇಗಾದರೂ ನನ್ನನ್ನು ಕಾಪಾಡಬೇಕು!

ಸನ್ಯಾಸಿ (ಕರುಣೆಯಿಂದ) ಜಟ್ಟಿ, ಹೆದರಬೇಡ; ಏಳು. ಮಾಡಿದ ಪಾಪವನು ಮುಂದೆ ಮಾಡುವ ಪುಣ್ಯದಿಂದ ಪರಿಹರಿಸಿಕೊಳ್ಳಬಹುದು.

ತಿಮ್ಮಜಟ್ಟಿ – ಅಯ್ಯೋ ಸ್ವಾಮೀ, ಕೊಲೆಗೆ ಯಾವ ಪ್ರಾಯಶ್ಚಿತ್ತವಿದೆ? ಕೊಲೆಯಾಗುವುದೊಂದೇ!

ಸನ್ಯಾಸಿ – ಅಲ್ಲ; ಕೊಲೆಯಾಗುವವರನು ಕಾಪಾಡುವುದು.

ತಿಮ್ಮಜಟ್ಟಿ – ಕಾಪಾಡುವುದೆಲ್ಲಿ ಬಂತು, ಸ್ವಾಮಿ? ಮತ್ತಿಬ್ಬರನೂ ಕೊಲೆ ಮಾಡಬೇಕೆಂತೆ!

ಸನ್ಯಾಸಿ – ಏನು? ಯಾರನ್ನು?

ತಿಮ್ಮಜಟ್ಟಿ – ತಾವು ಕೇಳಬಾರದು!

ಸನ್ಯಾಸಿ – ಚಿಂತೆಯಿಲ್ಲ, ಹೇಳು.

ತಿಮ್ಮಜಟ್ಟಿ – ಅರಸು ಮಕ್ಕಳನ್ನೂ ಲಿಂಗಣ್ಣ ಮಂತ್ರಿಗಳನ್ನೂ! ಮಗುವಿನಂತಹ ಮನಸ್ಸು ಬಸವಯ್ಯನವರದ್ದು! ಹಸುವಿನಂತಹ ಮನುಷ್ಯರು ಲಿಂಗಣ್ಣ ಮಂತ್ರಿಗಳು! ಅವರನ್ನು! ನಾನು ಹೇಗೆ ಕೊಲೆಮಾಡಲಿ? – ಶಿವಾ ಶಿವಾ! ಗುರುಗಳೇ, ನಾನೇನೋ ಬದುಕುವುದಿಲ್ಲ!

ಸನ್ಯಾಸಿ – ಇಲ್ಲ; ನೀನು ಬದುಕಬಹುದು!

ತಿಮ್ಮಜಟ್ಟಿ – ಏನೋ ಆ ಶಿವನೇ ಬಲ್ಲ!

ಸನ್ಯಾಸಿ – ಯಾವತ್ತು ಕೊಲ್ಲಬೇಕಂತೆ?

ತಿಮ್ಮಜಟ್ಟಿ – ಇವತ್ತು ರಾತ್ರಿಯೇ, ಯಾರಿಗೂ ತಿಳಿಯದಂತೆ!

ಸನ್ಯಾಸಿ – ನೀನೊಂದುಪಕಾರಮಾಡಿದರೆ ನೀನೂ ಬದುಕುವೆ!

ತಿಮ್ಮಜಟ್ಟಿ – ಹೇಳಿ. ಏನು ಬೇಕಾದರೂ ಮಾಡುತ್ತೇನೆ!

ಸನ್ಯಾಸಿ – ಇವತ್ತು ರಾತ್ರಿ ಏನಾದರೂ ಮಾಡಿ ಕೊಲೆಯಾಗುವುದನು ತಡೆಯಬಲ್ಲೆಯಾ?

ತಿಮ್ಮಜಟ್ಟಿ – ನಾನು ಅಲ್ಲಿಗೆ ಹೋಗುವುದೇ ಇಲ್ಲ.

ಸನ್ಯಾಸಿ – ಇನ್ನಾರಾದರೂ ಹೋಗುವರೇನು?

ತಿಮ್ಮಜಟ್ಟಿ – ಹೌದು, ಒಂದು ಗುಂಪೇ ಸಿದ್ಧವಾಗಿದೆ!

ಸನ್ಯಾಸಿ – ಹಾಗದರೆ ನೀನು ತಪ್ಪಿಸಿಕೊಂಡರೆ ನಿನಗೂ ಕೇಡು; ಬಸವಯ್ಯ ಲಿಂಗಣ್ಣರಿಗೂ ಕೇಡು!

ತಿಮ್ಮಜಟ್ಟಿ – ಮತ್ತೇನು ಮಾಡಲಿ ನಾನು? ನೀವೇ ಹೇಳಿ! ಅಯ್ಯೋ ಈ ಜಗತ್ತಿನಲ್ಲಾಗುವ ಅನ್ಯಾಯಕ್ಕೆಲ್ಲ ನಾನೊಬ್ಬನೇ ಹೊಣೆಯಾಗುವಂತೆ ತೋರುತ್ತಿದೆ!

ಸನ್ಯಾಸಿ – ಕೊಲೆಗಾರರನು ತಡಮಾಡಿ ಕರೆದುಕೊಂಡು ಬರಬೇಕು.

ತಿಮ್ಮಜಟ್ಟಿ – ಆಗಲಿ, ಪ್ರಯತ್ನ ಮಾಡುತ್ತೇನೆ! – ಅವರೆಲ್ಲ ಹೊಸಬರು, ಸ್ವಾಮೀ. ಅವರಿಗಿನ್ನೂ ರಕ್ತದ ರುಚಿ ಗೊತ್ತಿಲ್ಲ!

ಸನ್ಯಾಸಿ – ಪ್ರಯತ್ನ ಮಾಡುತ್ತೇನೆ ಎಂದರಾಗದು. ನೀನು ತಪ್ಪಿದರೆ ಸರ್ವನಾಶವಾಗುತ್ತೆದೆ. ಇಲ್ಲದಿರೆ ನೀನೂ ಬದುಕುವೆ; ಅವರಿಗೂ ಕ್ಷೇಮವಾಗುವುದು.

ತಿಮ್ಮಜಟ್ಟಿ – ಆಗಲಿ, ಹೇಗಾದರೂ ಮಾಡುತ್ತೇನೆ.

ಸನ್ಯಾಸಿ – ಸೆರೆಮನೆಗೆ ಬರುವಾಗ ನೀನು ಗಟ್ಟಿಯಾಗಿ ಕೆಮ್ಮುತ್ತ ಬರಬೇಕು. ಇಗೋ, ನಿನ್ನ ಜೊತೆಯವರಿಗೆಲ್ಲ ಇದನು ಎಲೆಯಡಕೆಗೆ ಹಚ್ಚಿ ಕೊಟ್ಟರೆ ನಿನ್ನ ಕಾರ್ಯ ಸುಲಭವಾಗಿ ಕೈಗೂಡುವುದು.(ಮದ್ದನ್ನು ಕೊಡುವನು) ನಾಳೆ ನನ್ನನ್ನು ಬಂದು ಕಾಣು. ಮುಂದಿನ ದಾರಿ ಹೇಳಿಕೊಡುವೆ.

ತಿಮ್ಮಜಟ್ಟಿ – ಅಪ್ಪಣೆ! ಹೋಗಿಬರುತ್ತೇನೆ, ಆಶೀರ್ವಾದ ಮಾಡಬೇಕು! (ನಮಸ್ಕಾರ ಮಾಡುವನು). ಸನ್ಯಾಸಿ ಆಶೀರ್ವಾದಿಸುವನು.) ಮಹಾಸ್ವಾಮಿ, ನನಗೀಗಾಲೇ ಹೃದಯ ಹಗುರವಾಗುತ್ತಿದೆ! (ಹೋಗುವನು.)

ಸನ್ಯಾಸಿ – ಹಾಗಲ್ಲದಿನ್ನೇನು? ಸತ್ಪಥದ ಮಹಿಮೆಯದು!
ಪಾಪಪಥವನು ತ್ಯಜಿಸೆ ಪುಣ್ಯವೆ ದೊರಕಿದಂತೆ
ಸಂತೋಷ ಜನಿಸುವುದು. ಧರ್ಮಪಥಗಮನದಲಿ
ಆಹ್ಲಾದದೇವತಕೋ ಅದನರಿಯೆ ತತ್ತ್ವಗಳು
ಹೆಣಗುತಿವೆ. ಆದರೂ ತನ್ನ ಅನುಭವದಿಂದೆ
ಮಾನವನ ಹೃದಯವಾ ತತ್ತ್ವವನು ಸವಿದಿಹುದು.
ದಿವ್ಯ ಧರ್ಮಕ್ಕಾಗಿ ಎನಿತು ಜನ ಮಾನವರು
ಮುಗುಳುನಗೆಯನು ಬೀರಿ ಬೆಂಕಿಯಲಿ ಮುಳುಗಿದರು!
ಮೇಣೆನಿಬರೋ ಶೂಲಕೇರಿದರು! ಧರ್ಮವೇ
ದೇವರೋ? ಧರ್ಮವೆಂಬುದು ಅವನ ನಿಯಮಮಯ
ಚಿತ್ತಸ್ವರೂಪವೋ? ಏನಾದರಾಗಲಿ,
ಧರ್ಮಸುಖವೆಂಬುದೇ ಪರಮೇಶನಿಗೆ ಸಾಕ್ಷಿ!
(ಒಂದು ತಾಳೆಯಲೊಲೆಯ ಗ್ರಂಥವನ್ನು ತೆಗೆದುಕೊಂಡು ಮನದಲಿಯೇ ಓದಲು ತೊಡಗುವನು)

[ಪರದೆ ಬೀಳುವುದು]